ಆರ್​ಎಸ್​​ಎಸ್ ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ: ಪ್ರಿಯಾಂಕ್ ಖರ್ಗೆಗೆ ಬಿ.ಎಲ್. ಸಂತೋಷ್ ತಿರುಗೇಟು – Kannada News | RSS Not for Registration: BL Santosh Slams Priyank Kharge at Bengaluru Event

ಬಿ.ಎಲ್. ಸಂತೋಷ್, ಪ್ರಿಯಾಂಕ್ ಖರ್ಗೆ

ಬೆಂಗಳೂರು ಆ.15: 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. ನಡುವೆ ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್ ಕೊಡುಗೆಗಳ ಕುರಿತು ಪ್ರಸ್ತಾಪಿಸಿದರು.

“ಆರ್‌ಎಸ್‌ಎಸ್ ರಿಜಿಸ್ಟ್ರೇಷನ್ (ನೋಂದಣಿ) ಆಗಿರಲಿಲ್ಲ, ಮುಂದೆಯೂ ಆಗಲ್ಲ. ಪ್ರಿಯಾಂಕ್ ಖರ್ಗೆ ಅವರೇ, ಪ್ರತಿಯೊಂದಕ್ಕೂ ನೋಂದಣಿಯೇ ಮಾನದಂಡವಲ್ಲ. ನಿಮ್ಮ ಕುಟುಂಬ ಕಲ್ಬುರ್ಗಿಗೆ ಓಡಿ ಬಂದಾಗ, ರಜಾಕಾರರ ವಿರುದ್ಧ ನಿಂತಿದ್ದು ಇದೇ ಆರ್‌ಎಸ್‌ಎಸ್‌ನ ಹುಡುಗರು” ಎಂದು ತಿರುಗೇಟು ನೀಡಿದರು.

“ನಮಗೆ ಉಪ್ಪು ತಯಾರಿಕೆ ಮತ್ತು ಚರಕದಿಂದ ಮಾತ್ರವೇ ಸ್ವಾತಂತ್ರ್ಯ ಬಂತು ಎಂದು ತಪ್ಪಾಗಿ ಹೇಳಿಕೊಡಲಾಗಿದೆ. ಆದರೆ 35 ಲಕ್ಷಕ್ಕೂ ಹೆಚ್ಚು ಹಿಂದೂಗಳ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. 1200 ವರ್ಷಗಳ ಕಾಲ ಖಿಲ್ಜಿ, ಕುಶಾನರು, ಅರಬರು, ಯುರೋಪಿಯನ್ನರು ಹಾಗೂ ಬ್ರಿಟಿಷರ ನಿರಂತರ ದಾಳಿಯನ್ನು ಎದುರಿಸಿ ಸಮಾಜವನ್ನು ರಕ್ಷಿಸಲಾಗಿದೆ” ಎಂದರು.ಸಂಘವು ಸಮಾಜದ ರಕ್ಷಣೆ ಮತ್ತು ಸೇವೆಗೆ ಬದ್ಧವಾಗಿದ್ದು, ಅದನ್ನು ನೋಂದಣಿಯ ಶರತ್ತುಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಗಾಂಧಿ ಸರ್​​ನೇಮ್ ಹೆಸರಿಟ್ಟುಕೊಂಡು ಇಷ್ಟು ಕೀಳು ಹೇಳಿಕೆ ನೀಡೋದಾ?; ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಜ್ಞ ಹಾಗೂ ಪ್ಯಾರಿಸ್ ಬ್ರಿಕ್ಸ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಡಾ. ಕೆ.ಜೆ. ಪುರುಷೋತ್ತಮ್ ವಹಿಸಿದ್ದರು. ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಹೆಚ್.ಕೆ. ನಾಗರಾಜ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ನಾಯಕರಾದ ಜಯನಗರ ರಾಮಮೂರ್ತಿ, ಚಿ.ನಾ.ರಾಮು ಹಾಗೂ ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನಭವಿಷ್ಯ: ಇಂದು ಈ ರಾಶಿಯವರು ವಸೂಲಾತಿ ಕೆಲಸದಲ್ಲಿ ಪ್ರವೃತ್ತರಾಗುವರು… – Kannada News | Daily Horoscope for August 15, 2026: Dakshinayana Greeshma season, Shravana Masa shukla Paksha Satursday astrology

ಮೇಷ ರಾಶಿ:

ಮನೆಯವರು ನಿಮ್ಮ‌ ಮಾತಿನಿಂದ ಕಟ್ಟಿಹಾಕಬಹುದು. ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ. ಕಲ್ಪಿಸಿಕೊಂಡ ವಿಚಾರವು ಹಾಗೆಯೇ ಆಗಲಿದ್ದು ನಿಮಗೆ ಆಶ್ಚರ್ಯ ಆಗಬಹುದು. ಕೈಲಾದ ಸಹಾಯವನ್ನು ಮಾತ್ರ ಒಪ್ಪಿಕೊಳ್ಳಿ. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ನೀವು ಕೊಡಲಿದ್ದೀರಿ. ಈ ದಿನ ಚೆನ್ನಾಗಿ ಇರಲಿ ಎಂದು ಪ್ರಾರ್ಥನೆ ಮಾಡುವುದೊಂದೇ ನಿಮ್ಮ ಕಡೆಯಿಂದ ಇಂದು ಆಗಬಹುದಾದ ದೊಡ್ಡ ಕೆಲಸ.

ವೃಷಭ ರಾಶಿ:

ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಬಂಧುಗಳ ಭೇಟಿಗಾಗಿ ನೀವು ದೂರಪ್ರಯಾಣ ಮಾಡುವಿರಿ. ನಿಮ್ಮ ಭವಿಷ್ಯದ ಕಲ್ಪನೆಗಳು ವಾಸ್ತವದಿಂದ ದೂರವಾಗುವುದು. ನಿಮ್ಮಲ್ಲಿ ಏನನ್ನೋ ಸಾಧಿಸಿದ ತೃಪ್ತಿ ಇರಲಿದೆ. ನೀವು ಮುಂಗಡವಾಗಿ ಕೊಟ್ಟ ಹಣವು ಬಾರದೇ ಪಶ್ಚಾತ್ತಾಪ ಆಗುವುದು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸಹೋದರರ ನಡುವೆ ರಹಸ್ಯ ಸಮಾಲೋಚನೆ ನಡೆಯಬಹುದು. ಯಾರ ಮೇಲೂ ಹಗುರಾದ ಮನೋಭಾವ ಬೇಡ.

ಮಿಥುನ ರಾಶಿ:

ಬೇಸರಪಡದೇ ಅದನ್ನು ಸರಿಮಾಡಿಕೊಳ್ಳುವ ವಿಧಾನವನ್ನು ಹುಡುಕಿ. ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಸಂಸ್ಥೆಯ ಮುಖ್ಯಸ್ಥರ ಜೊತೆ ಆತ್ಮಸ್ಥೈರ್ಯದಿಂದ ಮಾತನಾಡುವಿರಿ. ಸಮಾಧಾನ ಚಿತ್ತದಿಂದ ನೀವು ನಿಮ್ಮ ಅವಲೋಕನವನ್ನು ಮಾಡುವಿರಿ. ಅಸಭ್ಯ ಮಾತುಗಳಿಂದ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು.

ಕರ್ಕಾಟಕ ರಾಶಿ:

ಇಂದು ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ನಿಮ್ಮ ಸ್ಥಾನವನ್ನು ಬಿಟ್ಟುಕೊಡಲು ನೀವು ಒಪ್ಪುವುದಿಲ್ಲ. ದ್ವೇಷವು ನಿಮ್ಮ ಮನಸ್ಸನ್ನು‌ ಹಾಳು ಮಾಡುವುದು. ನಿಮ್ಮನ್ನು ಅಪ್ರಾಮಾಣಿಕರೆಂದು ಹೀಗಳೆಯಬಹುದು.‌ ಪ್ರೇಮವು ಕಾಮವಾಗಿ ಪರಿವರ್ತನೆ ಆಗಬಹುದು. ಇಂದಿನ‌ ನಿಮ್ಮ ಕಾರ್ಯದಿಂದ ಪ್ರೀತಿಯನ್ನು ಗಳಿಸುವಿರಿ. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು.

ಸಿಂಹ ರಾಶಿ:

ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಕಷ್ಟವಾಗುವುದು. ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಶೀಘ್ರವಾಗಿ ಬಂದ ಲಾಭದಿಂದ ಅಪಾಯವಿರಲಿದೆ. ಕಛೇರಿಯಲ್ಲಿ ಒತ್ತಡದ ವಾತಾವರಣವಿರಲಿದೆ. ಒಳ್ಳೆಯ ಸುದ್ದಿಗಳು ನಿಮಗೆ ಸಂತೋಷವನ್ನು ನೀಡಬಹುದು. ದುರಭ್ಯಾಸಗಳಿಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ನಕಾರಾತ್ಮಕ ಸುದ್ದಿಗಳು ಗಮನ ಸೆಳೆಯುವುದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ.

ಕನ್ಯಾ ರಾಶಿ:

ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಹೊಸ ಕಛೇರಿಯಲ್ಲಿ ಬಹಳ ಉತ್ಸಾಹದಿಂದ ಕೆಲಸ ಮಾಡುವಿರಿ. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಓಡಾಡಬೇಕಾಗಬಹುದು. ಮಕ್ಕಳಿಗೆ ಉತ್ತೇಜನ ನೀಡುವ ಅವಶ್ಯಕತೆ ಇದೆ. ಪರಿಚಿತ ವ್ಯಕ್ತಿಗಳಿಂದಲೇ ನಿಮಗೆ ಮೋಸವಾಗಬಹುದು. ಆದಾಯದ ಮೂಲವನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು.

ತುಲಾ ರಾಶಿ:

ನಿಮ್ಮ ಇಂದಿನ ಕೆಲವು ನಡೆಗಳು ವ್ಯವಹಾರದ ಪ್ರಗತಿಗೆ ಮಾರಕವಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆವಿರಲಿದೆ. ನೀವು ಕೊಟ್ಟ ಹಣವು ವಾಪಾಸು ಬರುವುದು ಕಷ್ಟ. ಹಿರಿಯರ ಮಧ್ಯಸ್ತಿಕೆಯಿಂದ ಸಮಸ್ಯೆಗಳು ಪರಿಹಾರವಾಗಬಹುದು. ಸಣ್ಣ ನೋವು ಇಂದು ದೊಡ್ಡದಾಗಿ ಅದನ್ನು ತಡೆಯಲು ಕಷ್ಟವಾದೀತು. ದೀರ್ಘಕಾಲದ ವೈರವು ಮುಕ್ತಾಯವಾಗುವುದು. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ.

ವೃಶ್ಚಿಕ ರಾಶಿ:

ಸಮಯಕ್ಕೆ ಗೌರವ ಕೊಡುವುದನ್ನು ನೀವು ಕಲಿಯಬೇಕಾದೀತು. ಏನಾದರೂ ಹೊಸತನವನ್ನು ಹುಟ್ಟಿಸಿಕೊಳ್ಳಬಹುದು. ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಾನೂನನಲ್ಲಿ ನಿಮಗೆ ಮುನ್ನಡೆಯಿಂದ ಸಂತೃಪ್ತಿ ಇರುವುದು. ಅಧಿಕಾರಿ ವರ್ಗದಿಂದ ನಿಮಗೆ ಕಿರಿಕಿರಿ ಉಂಟಾಗಬಹುದು‌. ತಾಳ್ಮೆಯಿಂದ ಇದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಕೆಲಸದ ಸಮಯವನ್ನು ಅದಕ್ಕಾಗಿ ಮಾತ್ರ ಮೀಸಲಿಡಿ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು.

ಧನು ರಾಶಿ:

ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ಸಾಮಾಜಿಕ ಕಾರ್ಯವು ನಿಮ್ಮ‌ ಯಶಸ್ಸನ್ನು ತಂದುಕೊಡಬಹುದು. ಹೊರಗಿನ ಆಹಾರ ವಸ್ತುವಿನಿಂದ ಆರೋಗ್ಯ ಕೆಡುವುದು. ಆ ವಿಷಯದ ಸರಿಯಾದ ಆಯ್ಕೆ ಮಾಡಲು ನಿಮಗೆ ಕಷ್ಟವಾದೀತು.‌ ಹಿಂಬಾಲಕರು ಸ್ವತಂತ್ರರಾದರೆ ಅಪಾಯ ಕಟ್ಟಿಟ್ಟಿದ್ದೇ. ಯಾರ ವಿರೋಧವನ್ನೂ ಕಟ್ಟಿಕೊಳ್ಳುವುದು ಬೇಡ. ಅಲ್ಪಾವಧಿಯಲ್ಲಿ ಲಾಭವನ್ನು ಗಳಿಸಲು ಹೋಗಿ ಮುಗ್ಗರಿಸುವಿರಿ. ಸಣ್ಣ ಅಪಮಾನವೂ ನಿಮಗೆ ದೊಡ್ಡದಾಗಿ ತೋರುವುದು.

ಮಕರ ರಾಶಿ:

ನಿಮ್ಮ ನಕಾರಾತ್ಮಕ ಆಲೋಚನೆಗಳು ಅನ್ಯರ ಇಷ್ಟವಾಗದು. ಇಂದು ಮನೆಯ ಅನೇಕ ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಹೆಚ್ಚು ಒತ್ತಡ ಇರಲಿದೆ. ಸಹೋದ್ಯೋಗಿಗಳ ಸಹಾಯವನ್ನೂ ನೀವು ಪಡೆಯಬಹುದಾಗಿದೆ. ವೈವಾಹಿಕ ಜೀವನವು ನಿಮ್ಮ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ತೊಡಕು ಕೊಡುವುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ.

ಕುಂಭ ರಾಶಿ:

ನೀವು ಅಗತ್ಯದ ಖರ್ಚುಗಳನ್ನೂ ನಿಯಂತ್ರಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಸ್ಚಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಎಲ್ಲ ಸಮಯದಲ್ಲಿಯೂ ನಿಮಗೆ ನಿಮ್ಮವರು ಬೇಕು ಎನಿಸಬಹುದು. ಹೂಡಿಕೆಯನ್ನು ಕೇವಲ ಅಂದಾಜಿಗೆ ಮಾಡಿ, ಹಣವನ್ನು ಕಳೆದುಕೊಳ್ಳುವಿರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ಮೀನ ರಾಶಿ:

ಯಾರಾದರೂ ಸಾಲವನ್ನು ಕೇಳಿ ಬರಬಹುದು. ನಿಮ್ಮದಾದ ಕೆಲವು ನಿಲುವುಗಳಿಗೆ ನೀವು ಬದ್ಧರಾಗಿರಿ. ಲೆಕ್ಕಾಚಾರದ ವಿಚಾರದಲ್ಲಿ ನಿಮಗೆ ಅಪಮಾನದ ರೀತಿ ಎನಿಸಬಹುದು. ನಿಮಗೆ ಸಿಗುವ ಬಿಡುವಿನ ಸಮಯದಲ್ಲಿಯೇ ಧಾರ್ಮಿಕ ಶ್ರದ್ಧೆಯನ್ನು ತೋರುವಿರಿ. ನೆಮ್ಮದಿಯನ್ನು ನೀವು ಪಡೆಯಲು ಪ್ರಯತ್ನಿಸುವಿರಿ. ಇಂದು ಒಂದೇ ಕಡೆ ಸುಮ್ಮನೆ ಕುಳಿತಿರುವುದು ಕಷ್ಟದ ಸಂಗತಿಯಾಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:50, ಯಮಗಂಡ ಕಾಲ 13:58 – 15:32, ಗುಳಿಕ ಕಾಲ 06:09 – 07:42

-ಲೋಹಿತ್ ಹೆಬ್ಬಾರ್ -8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:27 am, Sat, 15 August 26

Source link

ಸ್ವಾತಂತ್ರ್ಯ ದಿನಾಚರಣೆ ಮುನ್ನವೇ ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ, ಸ್ಪೋಟಕ ವಿಚಾರ ಬೆಳಕಿಗೆ – Kannada News | Suspected terrorist Arrested In Bengaluru During independence day Celebrating

ಬೆಂಗಳೂರು, (ಆಗಸ್ಟ್ 14): ಕಲಬುರಗಿ ಬೆನ್ನಲ್ಲೇ ಬೆಂಗಳೂರಿನಲ್ಲೂ (Bengaluru) ಇಂದು (ಆಗಸ್ಟ್ 14) ಓರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಆಸ್ಫುಲಾ ಮಲ್ಲಿಕ್(25) ಎನ್ನುವಾತನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆಸ್ಫುಲಾ ಮಲ್ಲಿಕ್ ಜಿಗಣಿಯಲ್ಲಿ ವಾಸ ಇದ್ದ. ಇನ್ನು ಈತ TTP(ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ) ಸಂಘಟನೆಯ ಶಂಕಿತ ಉಗ್ರ ಎನ್ನಲಾಗಿದ್ದು, ಉಗ್ರ ಸಂಘಟನೆ ಜೊತೆ ದಾಳಿಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಪಾಕಿಸ್ತಾನ, ಭಾರತ ಸೇರಿದಂತೆ ಕೆಲ ದೇಶಗಳೇ ಈತನ ಟಾರ್ಗೆಟ್ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಸಿಕ್ಕಿಬಿದ್ದಿದ್ಹೇಗೆ?

ಸೋಷಿಯಲ್ ಮಿಡಿಯಾ ಮಾನಿಟರಿಂಗ್ ಮಾಡುವಾಗ ಪತ್ತೆಯಾಗಿರುವ ಶಂಕಿತ ಉಗ್ರನ ಜಾಡು ಸಿಕ್ಕಿದ್ದು, ಹೆಬ್ಬಗೋಡಿ ಇನ್ಸ್ ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಒಂದು ತಿಂಗಳಿನಿಂದ ಫಾಲೋಅಪ್ ಮಾಡಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ವಿಚಾರ ಬೆಳಕಿಗೆ ಬಂದಿವೆ.

ಇದನ್ನೂ ಓದಿ: ಕಲಬುರಗಿಯಲ್ಲಿ ದೇಶವಿರೋಧಿ ಕೃತ್ಯ ಎಸಗುತ್ತಿದ್ದ ಮಹಮ್ಮದ್ ಸಮೀರ್ ಬಂಧನ: ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸ್ ಅಧಿಕಾರಿಗಳು

ಮುಸ್ಲಿಂರ ಮೇಲೆ ದೌರ್ಜನ್ಯ ಎಸಗುವ ಕಡೆಗಳಲ್ಲಿ ದಾಳಿಗೆ ಸಂಚು

ಬೆಂಗಳೂರಿನಲ್ಲೇ ಇದ್ದುಕೊಂಡು ಪಾಕಿಸ್ತಾನಿ ಸೇನೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ.  ಪಾಕಿಸ್ತಾನದಲ್ಲಿ ಮಸೀದಿಗಳ ಮೇಲೆ ಮತ್ತು ಅಲ್ಲಿನ ಜನರ ಮೇಲೆ ಪಾಕಿಸ್ತಾನ ಸೇನೆಯಿಂದ ನಡೆಯುವ ದೌರ್ಜನ್ಯ, ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವಿನ ವಿವಾದದಲ್ಲಿ, ಇಸ್ರೇಲ್ ಪರವಾಗಿ ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ. ಪ್ಯಾಲಿಸ್ಪೇನ್ ಮುಸಲ್ಮಾರಿಗೆ ಸಹಾಯ ಮಾಡುತ್ತಿಲ್ಲವೆಂಬ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದ. TTP ಸಂಘಟನೆಯ ಸದಸ್ಯ ಅಫಾಘನಿಸ್ತಾನ ದೇಶದ ಇಮ್ರಾನ್ ಅಹಿಂದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ ಅಸಾಪೂಲ್ ಮಲ್ಲಿಕ್, ಸಂಘಟನೆಯೊಂದಿಗೆ ಸೇರಿ ಪಾಕಿಸ್ತಾನ ಸೇನೆ ಮೇಲೆ ಮತ್ತು ಇಲ್ಲಿಯೂ ಪ್ರತಿಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ.

ಪಾಕ್ ಸೇನೆ ಮೇಲೆ ಪ್ರತಿಕಾರ ತಿರಿಸಿಕೊಳ್ಳುವ ಆಡಿಯೋ ಪತ್ತೆ

ಅಷ್ಟೇ ಅಲ್ಲದೇ ಇಮ್ರಾನ್ ಅಹಿಂದರ್ ಎಂಬುವನ ಸಹಾಯ ಪಡೆದುಕೊಂಡು ಆಪಘಾನಿಸ್ತಾನಕ್ಕೆ ಹೋಗಲು ಪಾಸ್‌ಪೋರ್ಟ್ ಮಾಡಿಸಿಕೊಂಡು ವೀಸಾಗೆ ಅರ್ಜಿ ಸಲ್ಲಿದ್ದ. ಆದ್ರೆ, ಕಾರಣಾಂತರಗಳಿಂದ ಅಪಘಾನಿಸ್ತಾನಕ್ಕೆ ಹೋಗಿರುವುದಿಲ್ಲ. ಪಾಕಿಸ್ತಾನ ಸೇನೆ ಮೇಲೆ ಪ್ರತಿಕಾರ ತಿರಿಸಿಕೊಳ್ಳುವ ಬಗ್ಗೆ ಆತನ ಮೊಬೈಲ್ ನಲ್ಲಿ ಮೆಸೇಜ್ ಆಡಿಯೋಗಳು ಸಿಕ್ಕಿವೆ. ಸಂಘಟನೆಯ ವಿಚಾರಧಾರೆಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಾಕುತ್ತಿದ್ದ. ಅಪಘಾನಿಸ್ತಾನಕ್ಕೆ ಹೋಗಿದ್ರೆ ಟ್ರೈನಿಂಗ್ ಆಗಿ ಮತ್ತೆ ಭಾರತಕ್ಕೆ ಬರುತ್ತಿದ್ದ. ಇಲ್ಲಿಗೆ ಬಂದು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇತ್ತು.

ಈತ ಎರಡನೇ ಬಾರಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಶಂಕಿತ ಉಗ್ರನ ಜೊತೆಗೆ ರೂಮಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ. ಆತನೂ ಕೂಡ ವೆಸ್ಟ್ ಬೆಂಗಾಲ್ ಮೂಲದವನಾಗಿದ್ದು, ಸದ್ಯ ಎಸ್ಕೇಪ್ ಆಗಿದ್ದಾನೆ. ಕೆಲ ಸಂಘಟನೆಗಳಿಗೆ ಶಂಕಿತ ಉಗ್ರ ಅಸಾಪೂಲ್ ಮಲ್ಲಿಕ್ ಹಣವನ್ನ ಕೂಡ ಹಾಕಿದ್ದ.

ಸದ್ಯ ಪೊಲೀಸರು ಶಂಕಿತ ಉಗ್ರನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಇನ್ನೂ ಯಾವೆಲ್ಲಾ ಅಂಶಗಳು ಬಯಲಿಗೆ ಬರುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:36 pm, Fri, 14 August 26

Source link

ಸ್ವಾತಂತ್ರ್ಯ ದಿನಾಚರಣೆಯ ಶೌರ್ಯ ಪ್ರಶಸ್ತಿ ಪ್ರಕಟ; 9 ಯೋಧರಿಗೆ ಕೀರ್ತಿ ಚಕ್ರ ಘೋಷಣೆ – Kannada News | Independence Day 2026: President Droupadi Murmu approves 78 gallantry awards including 9 Kirti Chakra

ನವದೆಹಲಿ, ಆಗಸ್ಟ್ 14: 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಿಬ್ಬಂದಿಗೆ 13 ಮರಣೋತ್ತರ ಪ್ರಶಸ್ತಿಗಳು ಸೇರಿದಂತೆ ಒಟ್ಟು 78 ಶೌರ್ಯ ಪ್ರಶಸ್ತಿಗಳನ್ನು ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದನೆ ನೀಡಿದ್ದಾರೆ. ಈ ಪ್ರಶಸ್ತಿಗಳಲ್ಲಿ 7 ಮರಣೋತ್ತರ ಸೇರಿದಂತೆ 9 ಕೀರ್ತಿ ಚಕ್ರಗಳು ಸೇರಿವೆ. ಇವುಗಳ ಜೊತೆಗೆ 1 ‘ಬಾರ್ ಟು ಶೌರ್ಯ ಚಕ್ರ’, 1 ಮರಣೋತ್ತರ ಸೇರಿದಂತೆ 19 ಶೌರ್ಯ ಚಕ್ರಗಳು, 5 ‘ಬಾರ್ ಟು ಸೇನಾ ಪದಕಗಳು’ (ಶೌರ್ಯ), 5 ಮರಣೋತ್ತರ ಸೇರಿದಂತೆ 36 ಸೇನಾ ಪದಕಗಳು, 3 ನೌಕಾ ಸೇನಾ ಪದಕಗಳು ಮತ್ತು 5 ವಾಯು ಸೇನಾ ಪದಕಗಳು ಸೇರಿವೆ.

ಈ ವರ್ಷದ ಪಟ್ಟಿಯಲ್ಲಿ ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ಅಶೋಕ ಚಕ್ರ’ ಯಾರಿಗೂ ಲಭಿಸಿಲ್ಲ. ಭಾರತೀಯ ಸೇನೆಗೆ ಸಂದಿರುವ ಮೂರೂ ಕೀರ್ತಿ ಚಕ್ರಗಳು ‘ಪ್ಯಾರಾಶೂಟ್ ರೆಜಿಮೆಂಟ್‌ನ ಸ್ಪೆಷಲ್ ಫೋರ್ಸಸ್‌’ಗೆ (ವಿಶೇಷ ಪಡೆ) ದೊರೆತಿವೆ. ಈಗಾಗಲೇ ಶೌರ್ಯ ಚಕ್ರ ಹೊಂದಿರುವ 21 ಪ್ಯಾರಾ (ಸ್ಪೆಷಲ್ ಫೋರ್ಸಸ್) ನ ಲೆಫ್ಟಿನೆಂಟ್ ಕರ್ನಲ್ ಮನೆವೋ ಫ್ರಾನ್ಸಿಸ್ ಪಿಎಫ್ ಮತ್ತು 2 ಪ್ಯಾರಾ (ಸ್ಪೆಷಲ್ ಫೋರ್ಸಸ್) ನ ಮೇಜರ್ ಜಿತೇಂದ್ರ ರಾಠಿ ಅವರಿಗೆ ಈ ಗೌರವ ಲಭಿಸಿದೆ. ಹಾಗೆಯೇ 2 ಪ್ಯಾರಾ (ಸ್ಪೆಷಲ್ ಫೋರ್ಸಸ್) ನ ಹವಿಲ್ದಾರ್ ಗಜೇಂದ್ರ ಸಿಂಗ್ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: ವೀರ ಯೋಧರಿಗೆ ರಾಷ್ಟ್ರಪತಿಯಿಂದ ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ

ಉಳಿದ 6 ಕೀರ್ತಿ ಚಕ್ರಗಳು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ (CAPF) ಸಿಬ್ಬಂದಿಗೆ ಲಭಿಸಿದ್ದು, ಇವೆಲ್ಲವೂ ಮರಣೋತ್ತರ ಪುರಸ್ಕಾರಗಳಾಗಿವೆ. ಹೆಡ್ ಕಾನ್‌ಸ್ಟೇಬಲ್‌ಗಳಾದ ಜಗಬೀರ್ ಸಿಂಗ್ ಮತ್ತು ಬಶೀರ್ ಅಹಮದ್, ಎಸ್‌ಜಿ ಕಾನ್‌ಸ್ಟೇಬಲ್‌ಗಳಾದ ಜಸ್ವಂತ್ ಸಿಂಗ್, ಬಲ್ವಿಂದರ್ ಸಿಂಗ್ ಮತ್ತು ತಾರಿಕ್ ಹುಸೇನ್, ಹಾಗೂ ಎಸ್‌ಟಿಎಫ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಈ ಪ್ರಶಸ್ತಿಗೆ ಭಾಜನರಾದವರು.

5 ಮರಣೋತ್ತರ ಸೇನಾ ಪದಕಗಳಲ್ಲಿ 4 ಪದಕಗಳು ’19 ರಾಷ್ಟ್ರೀಯ ರೈಫಲ್ಸ್ (RR)’ ಎಂಬ ಒಂದೇ ಯುನಿಟ್‌ನ ಯೋಧರಿಗೆ ಸಿಕ್ಕಿವೆ. ಪ್ಯಾರಾಶೂಟ್ ರೆಜಿಮೆಂಟ್‌ನ ಲ್ಯಾನ್ಸ್ ಹವಿಲ್ದಾರ್ ಪಲಾಶ್ ಘೋಷ್ ಮತ್ತು ಲ್ಯಾನ್ಸ್ ನಾಯಕ್ ಸುಜಯ್ ಘೋಷ್ ಹಾಗೂ ಸಿಖ್ ಲೈಟ್ ಇನ್‌ಫಾಂಟ್ರಿಯ ಲ್ಯಾನ್ಸ್ ನಾಯಕ್ ಪ್ರಿತ್‌ಪಾಲ್ ಸಿಂಗ್ ಮತ್ತು ಸಿಪಾಯಿ ಹರ್ಮೀಂದರ್ ಸಿಂಗ್ ಈ ಯೋಧರಾಗಿದ್ದಾರೆ.

ಇದನ್ನೂ ಓದಿ: Kirti Chakra Award: ಅನಂತನಾಗ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಸೇರಿ ನಾಲ್ವರಿ​ಗೆ ಕೀರ್ತಿ ಚಕ್ರ ಪ್ರಶಸ್ತಿ

ಐದನೇ ಮರಣೋತ್ತರ ಸೇನಾ ಪದಕವು 9 ರಾಷ್ಟ್ರೀಯ ರೈಫಲ್ಸ್‌ನ ಸುಬೇದಾರ್ ಪರ್ಭಾತ್ ಗೌರ್ ಅವರಿಗೆ ಸಂದಿದೆ. ಇದೇ ಯುನಿಟ್‌ನ ಲ್ಯಾನ್ಸ್ ನಾಯಕ್ ನರೇಂದರ್ ಸಿಂಧು ಅವರು ಮರಣೋತ್ತರವಾಗಿ ಶೌರ್ಯ ಚಕ್ರ ಪಡೆದ ಏಕೈಕ ಯೋಧರಾಗಿದ್ದಾರೆ.

44 ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ರಜಪೂತಾನಾ ರೈಫಲ್ಸ್‌ನ ಮೇಜರ್ ಆದಿತ್ಯ ಪ್ರತಾಪ್ ಸಿಂಗ್ ಅವರಿಗೆ ‘ಬಾರ್ ಟು ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಈಗಾಗಲೇ ಶೌರ್ಯ ಚಕ್ರ ಮತ್ತು ಸೇನಾ ಪದಕಗಳನ್ನು ಪಡೆದಿದ್ದಾರೆ.

ಭಾರತೀಯ ನೌಕಾಪಡೆಯ ಪ್ರಶಸ್ತಿಗಳಲ್ಲಿ ಲೆಫ್ಟಿನೆಂಟ್ ಕಮಾಂಡರ್ ಶಿವಂ ಕುಮಾರ್ ಅವರಿಗೆ ‘ಶೌರ್ಯ ಚಕ್ರ’ ಹಾಗೂ ಕಮಾಂಡರ್‌ಗಳಾದ ವಿನೀತ್ ಶರ್ಮಾ, ಯುವರಾಜ್ ಕುಮಾರ್ ಮತ್ತು ಪೆಟ್ಟಿ ಆಫೀಸರ್ ಸಿ ಅವಿನಾಶ್ ಅಣ್ಣಾಸೊ ಅವರಿಗೆ ‘ನೌಕಾ ಸೇನಾ ಪದಕಗಳು’ ಲಭಿಸಿವೆ.

ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಸುಧೀರ್ ಕುಮಾರ್ ಅವರು ‘ಶೌರ್ಯ ಚಕ್ರ’ ಪಡೆದ ಏಕೈಕ ವಾಯುಪಡೆ ಅಧಿಕಾರಿಯಾಗಿದ್ದಾರೆ. ‘ವಾಯು ಸೇನಾ ಪದಕ’ ಪಡೆದ ಐವರಲ್ಲಿ ಗ್ರೂಪ್ ಕ್ಯಾಪ್ಟನ್‌ಗಳಾದ ರಾಹುಲ್ ಜಗೋಟ್ಟಾ ಮತ್ತು ರಾಹುಲ್ ರಾವತ್ ಸೇರಿದ್ದಾರೆ. ಇದಲ್ಲದೆ, 75 ಸೇನೆ, 10 ವಾಯುಪಡೆ ಮತ್ತು 4 ನೌಕಾಪಡೆಯ ಸಿಬ್ಬಂದಿ ಸೇರಿದಂತೆ 89 ‘ಮೆನ್ಷನ್-ಇನ್-ಡಿಸ್ಪ್ಯಾಚಸ್’ (ಉಲ್ಲೇಖಿತ ಪ್ರಶಸ್ತಿ) ಗಳಿಗೂ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಸೇನೆಯ ಹೆಚ್ಚಿನ ಪ್ರಶಸ್ತಿ ಉಲ್ಲೇಖಗಳು ಜಮ್ಮು ಮತ್ತು ಕಾಶ್ಮೀರದ ‘ಆಪರೇಷನ್ ರಕ್ಷಕ್’ ಮತ್ತು ಈಶಾನ್ಯ ಭಾರತದ ‘ಆಪರೇಷನ್ ಹಿಫಾಜತ್’ ಹಾಗೂ ‘ಆಪರೇಷನ್ ಆರ್ಕಿಡ್’ ಕಾರ್ಯಾಚರಣೆಗಳಿಗೆ ಸಂಬಂಧಿಸಿವೆ. ಉಳಿದಂತೆ ಪೂರ್ವ ಲಡಾಖ್‌ನ ‘ಆಪರೇಷನ್ ಸ್ನೋ ಲೆಪರ್ಡ್’ ಮತ್ತು ಸಿಯಾಚಿನ್ ಗ್ಲೇಸಿಯರ್‌ನ ‘ಆಪರೇಷನ್ ಮೇಘದೂತ್’ ಕಾರ್ಯಾಚರಣೆಗಳಿಗೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಯಲ್ಲಿ ದಾಖಲೆ ಬರೆದ ಕನ್ನಡ ಸಿನಿಮಾ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ – Kannada News | Kannada Movie Second Case Of Seetharam trending on Amazon Prime Video OTT ft Vijay Raghavendra

ಕನ್ನಡದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಟಿಟಿಯಲ್ಲಿ ಕೂಡ ಕನ್ನಡದ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕರ ವರ್ಗ ಸೃಷ್ಟಿ ಆಗಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharam) ಸಿನಿಮಾ. ಒಟಿಟಿ ಅಂಗಳದಲ್ಲಿ ಈ ಸಿನಿಮಾ ಅಭೂತಪೂರ್ವ ಯಶಸ್ಸು ಪಡೆದಿದೆ. ‘ಅಮೆಜಾನ್ ಪ್ರೈಮ್ ವಿಡಿಯೋ’ ಮೂಲಕ ವೀಕ್ಷಣೆಗೆ ಲಭ್ಯವಾಗಿರುವ ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ನಟನೆಯ ಈ ಸಿನಿಮಾ ಸದ್ಯಕ್ಕೆ ಒಟಿಟಿಯಲ್ಲಿ ಟ್ರೆಂಡಿಂಗ್​ನಲ್ಲಿದೆ.

‘ಅಮೇಜಾನ್ ಪ್ರೈಮ್ ವಿಡಿಯೋ’ ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವ ಭಾರತದ ‘ಟಾಪ್ 10’ ಸಿನಿಮಾಗಳ ಪಟ್ಟಿಯಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾ ಕೂಡ ಇದೆ. ಸತತ 15 ವಾರಗಳಿಂದ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಬರೋಬ್ಬರಿ 250 ಮಿಲಿಯನ್‌ಗಿಂತಲೂ ಹೆಚ್ಚು (25 ಕೋಟಿಗೂ ಅಧಿಕ) ಸ್ಟ್ರೀಮಿಂಗ್ ನಿಮಿಷಗಳನ್ನು ಪೂರೈಸಿ ಒಟಿಟಿಯಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿದೆ.

ಕನ್ನಡ ಚಿತ್ರರಂಗದ ಹೆಮ್ಮೆ:

ಇಂದಿನ ಪೈಪೋಟಿ ಯುಗದಲ್ಲಿ ಒಟಿಟಿ ವೇದಿಕೆಯಲ್ಲಿ 250 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ದಾಟುವುದು ಎಂದರೆ ಸುಲಭವಲ್ಲ. ಭಾರತದ ಟಾಪ್ 10 ಪಟ್ಟಿಯಲ್ಲಿ ಸತತ 15 ವಾರಗಳ ಕಾಲ ಮುಂದುವರಿಯುವುದು ಕೂಡ ಸಾಮಾನ್ಯ ವಿಷಯವಲ್ಲ. ಈ ಸಾಧನೆಯು ಭಾರತೀಯ ಚಿತ್ರರಂಗದ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಗುಣಮಟ್ಟಕ್ಕೆ ಹಿಡಿದ ಕನ್ನಡಿ ಆಗಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಪ್ರೇಕ್ಷಕರಿಗೆ ಇಷ್ಟವಾಯ್ತು ಕಥೆ, ಅಭಿನಯ:

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಸಾಗರ್ ಪುರಾಣಿಕ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ತಮ್ಮ ನೈಜ ಅಭಿನಯದ ಮೂಲಕ ಈ ಕಲಾವಿದರು ಎಲ್ಲರ ಗಮನ ಸೆಳೆದಿದ್ದಾರೆ. ಉತ್ತಮವಾದ ಚಿತ್ರಕಥೆ ಹಾಗೂ ಅದಕ್ಕೆ ಪೂರಕವಾದ ಈ ಪಾತ್ರವರ್ಗದ ಅತ್ಯುತ್ತಮ ನಟನೆಯಿಂದಾಗಿ ಈ ಚಿತ್ರವು ವಾರದಿಂದ ವಾರಕ್ಕೆ ಒಟಿಟಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ.

ಇದನ್ನೂ ಓದಿ: ಸೆಕೆಂಡ್ ಕೇಸ್ ಆಫ್ ಸೀತಾರಾಮ್ ವಿಮರ್ಶೆ: ಕುತೂಹಲದ ಕಥೆ, ಕೊನೆವರೆಗೂ ರೋಚಕತೆ

ಈ ಸಿನಿಮಾಗೆ ದೇವಿಪ್ರಸಾದ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಸಸ್ಪೆನ್ಸ್, ಎಮೋಷನ್ ಮತ್ತು ನೈಜತೆ ತುಂಬಿರುವ ಕಥೆಯನ್ನು ಅವರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ವರ್ಷ ಒಟಿಟಿಯಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ ಪ್ರಮುಖ ಕನ್ನಡ ಸಿನಿಮಾಗಳಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಕೂಡ ಒಂದಾಗಿದೆ. ಪವನ್ ಒಡೆಯರ್ ಅವರು ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ. ದೇವಿಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾಂಧಿ ಸರ್​​ನೇಮ್ ಹೆಸರಿಟ್ಟುಕೊಂಡು ಇಷ್ಟು ಕೀಳು ಹೇಳಿಕೆ ನೀಡೋದಾ?; ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ – Kannada News | Cannot even imagine someone with Gandhi surname can make such a shameful remark Minister Rajnath Singh on Rahul Gandhi

ನವದೆಹಲಿ, ಆಗಸ್ಟ್ 14: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಿದೇಶಾಂಗ ನೀತಿಯ ಬಗ್ಗೆ ಲೇವಡಿ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. “ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ನೀತಿಯ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಕೆಳಮಟ್ಟದ್ದು ಹಾಗೂ ಖಂಡನೀಯವಾಗಿವೆ. ಇದು ವೈಯಕ್ತಿಕವಾಗಿ ನನಗೂ ತೀವ್ರ ನೋವುಂಟು ಮಾಡಿದೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ, ಯಾವುದೇ ವಿರೋಧ ಪಕ್ಷದ ನಾಯಕನಿಂದ ಇಂತಹ ಅಸಭ್ಯ ಮತ್ತು ಊಹಿಸಲೂ ಸಾಧ್ಯವಾಗದ ನಡವಳಿಕೆಯನ್ನು ನಾನು ಎಂದಿಗೂ ನೋಡಿರಲಿಲ್ಲ. ಇಂತಹ ನಡವಳಿಕೆಯು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬೆದರಿಕೆಯ ಗಂಭೀರ ಸಂಕೇತವಾಗಿದೆ. ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ಪ್ರಧಾನಿಯವರ ವಿರುದ್ಧ ಹತಾಶೆ ಇರಬಹುದು, ಆದರೆ ಇಂತಹ ಅಸಭ್ಯ ಹೇಳಿಕೆಗಳನ್ನು ಒಪ್ಪಿಕೊಳ್ಳಲಾಗದು. ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅಪಾರ ಗೌರವ ತಂದುಕೊಟ್ಟ ಹಾಗೂ ವಿಕಸಿತ ಭಾರತಕ್ಕೆ ಹಾದಿ ಸೃಷ್ಟಿಸಿದ ಪ್ರಧಾನಿಯಾಗಿದ್ದಾರೆ. 12 ವರ್ಷಗಳಲ್ಲಿ, ಸಂಪೂರ್ಣ ನಿಷ್ಠೆಯಿಂದ ಕೆಲಸ ಮಾಡುತ್ತಾ ಅವರು ಯಾವುದೇ ರಜೆ ತಗೆದುಕೊಂಡಿಲ್ಲ. ಅಂತಹ ಪ್ರಧಾನಿಯವರ ವಿರುದ್ಧದ ಇಂತಹ ಅಸಭ್ಯ ಹೇಳಿಕೆಗಳು ಪ್ರತಿಯೊಬ್ಬ ಭಾರತೀಯನಿಗೂ ನೋವುಂಟು ಮಾಡುತ್ತವೆ. ಈ ನಡವಳಿಕೆಯಿಂದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತ್ರವಲ್ಲದೆ ಭಾರತದ ಅಂತಾರಾಷ್ಟ್ರೀಯ ಪ್ರತಿಷ್ಠೆಯನ್ನೂ ಅವಮಾನಿಸಿದ್ದಾರೆ. ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಧೂಳೀಪಟ ಮಾಡಿದ್ದಾರೆ. ಗಾಂಧಿ ಎಂಬ ಮನೆತನದ ಹೆಸರನ್ನು ಹೊಂದಿರುವ ಯಾರಾದರೂ ಇಂತಹ ನಾಚಿಕೆಗೇಡಿನ ಹೇಳಿಕೆ ನೀಡಬಹುದು ಎಂಬುದನ್ನು ನನಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TNPL 2026: ಕೇವಲ 90 ಎಸೆತಗಳಲ್ಲಿ ಬರೋಬ್ಬರಿ 239 ರನ್‌ ದಾಖಲು..! – Kannada News | TNPL 2026: Dindigul Dragons Crush Salem Spartans by 81 Runs; Indrajith’s Heroics

ದಿಂಡಿಗಲ್‌ನಲ್ಲಿ ನಡೆಯುತ್ತಿರುವ ಟಿಎನ್‌ಪಿಎಲ್ 2026 (TNPL 2026) ಸೀಸನ್​ನ 18ನೇ ಪಂದ್ಯದಲ್ಲಿ ಇಂದು ದಿಂಡಿಗಲ್ ಡ್ರಾಗನ್ಸ್ ಹಾಗೂ ಸೇಲಂ ಸ್ಪಾರ್ಟನ್ಸ್ ( Dindigul vs Salem Spartans) ತಂಡಗಳು ಮುಖಾಮುಖಿಯಾಗಿದ್ದವು. ಮಳೆ ಪೀಡಿತ ಈ ಪಂದ್ಯವನ್ನು ತಲಾ 15 ಓವರ್​ಗಳಿಗೆ ನಿಗದಿಪಡಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡ ಮೈದಾನದಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದು ಕೇವಲ 90 ಎಸೆತಗಳಲ್ಲಿ ಬರೋಬ್ಬರಿ 239 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡ 158 ರನ್ ಕಲೆಹಾಕಲಷ್ಟೇ ಶಕ್ತವಾಗಿ 81 ರನ್​ಗಳಿಂದ ಸೋಲೊಪ್ಪಿಕೊಂಡಿತು.

4.4 ಓವರ್‌ಗಳಲ್ಲಿ 70 ರನ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡಕ್ಕೆ ಆರಂಭಿಕ ಆಟಗಾರರು ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಶಿವಂ ಸಿಂಗ್ (38) ಹಾಗೂ ವಿನೀತ್ (45) ಕೇವಲ 4.4 ಓವರ್‌ಗಳಲ್ಲಿ ತಂಡವನ್ನು 70 ರನ್​ಗಳಿಗೆ ಕೊಂಡೊಯ್ದರು. ಆದರೆ ಇದ್ದಕ್ಕಿದ್ದಂತೆ 89 ರನ್‌ಗಳಿಗೆ ಮೂರು ವಿಕೆಟ್‌ಗಳು ಬಿದ್ದವು. ನಂತರ ನಾಯಕ ಬಾಬಾ ಇಂದ್ರಜಿತ್ ಸೇಲಂ ಸ್ಪಾರ್ಟನ್ಸ್ ಬೌಲರ್‌ಗಳನ್ನು ಸರಿಯಾಗಿ ಬೆಂಡೆತ್ತಿ ಸಿಕ್ಸರ್‌ಗಳ ಮಳೆ ಸುರಿಸಿದರು.

25 ಎಸೆತಗಳಲ್ಲಿ ಅಜೇಯ 73 ರನ್

ಪರಿಣಾಮವಾಗಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 25 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿದರು. ಇಂದ್ರಜಿತ್ ತಮ್ಮ ಇನ್ನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ, ದಿಂಡಿಗಲ್ ತಂಡವು 15 ಓವರ್‌ಗಳಲ್ಲಿ 239 ರನ್‌ ಕಲೆಹಾಕಿತು. ಇದು ಲೀಗ್‌ನಲ್ಲಿ ಎರಡನೇ ಅತ್ಯಧಿಕ ಮೊತ್ತವೆಂಬ ದಾಖಲೆಯನ್ನು ಬರೆಯಿತು. ಒಂದು ವೇಳೆ ಈ ಪಂದ್ಯವನ್ನು ಪೂರ್ಣ 20 ಓವರ್‌ಗಳಿಗೆ ಆಡಿದ್ದರೆ, ತಂಡವು 300 ರನ್‌ಗಳನ್ನು ಗಳಿಸುವ ಅವಕಾಶವನ್ನು ಹೊಂದಿತ್ತು.

81 ರನ್‌ಗಳ ಸೋಲು

ಈ ಬೆಟ್ಟದಂತಹ ಗುರಿ ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ನಾಯಕ ಎಸ್. ಅಭಿಷೇಕ್ 18 ಎಸೆತಗಳಲ್ಲಿ 38 ರನ್ ಗಳಿಸುವ ಮೂಲಕ ಗೆಲುವಿಗೆ ಪ್ರಯತ್ನಿಸಿದರಾದರೂ ಇತರ ಬ್ಯಾಟ್ಸ್‌ಮನ್‌ಗಳಿಂದ ಅವರಿಗೆ ಬೆಂಬಲ ಸಿಗಲಿಲ್ಲ. 15 ಓವರ್‌ಗಳಲ್ಲಿ 240 ರನ್ ಗಳಿಸುವ ಒತ್ತಡದಲ್ಲಿದ್ದ ಬ್ಯಾಟರ್​ಗಳು ಬೇಗನೇ ಪೆವಿಲಿಯನ್ ಸೇರಿಕೊಂಡರು. ನಾಯಕನನ್ನು ಹೊರತುಪಡಿಸಿ ಉಳಿದ ಯಾವ ಆಟಗಾರನೂ 20 ರನ್​ಗಳ ಗಡಿ ದಾಟಲಿಲ್ಲ. ಪರಿಣಾಮವಾಗಿ ಸ್ಪಾರ್ಟನ್ಸ್ ತಂಡವು 15 ಓವರ್‌ಗಳಲ್ಲಿ ಕೇವಲ 158 ರನ್‌ಗಳನ್ನು ಗಳಿಸಿ ಪಂದ್ಯವನ್ನು 81 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?

ಚಿತ್ರದುರ್ಗ, ಆಗಸ್ಟ್​​ 14: ಕರ್ನಾಟಕದ ‘ಸ್ಪೈಡರ್‌ಮ್ಯಾನ್’ ಎಂದೇ ಜನಪ್ರಿಯರಾಗಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರ ವಿವಾಹ ಮುಹೂರ್ತ ನಿಶ್ಚಯವಾಗಿದ್ದು, ಚಿತ್ರದುರ್ಗ ಸಮೀಪದ ಚಳ್ಳಕೆರೆಯ ದೊಡ್ಡಉಳ್ಳಾರ್ತಿ ಗ್ರಾಮದ ನಿವೇದಿತಾ ಎಂಬುವವರೊಂದಿಗೆ ಆಗಸ್ಟ್ 22 ಮತ್ತು 23ರಂದು ವೈಭವ ಗಾರ್ಡನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿಂದೆ 2018-19ರಲ್ಲಿ ಜೋಗ್‌ಫಾಲ್ಸ್‌ನಲ್ಲಿ ಬಿದ್ದು ಗಾಯಗೊಂಡಿದ್ದ ಸಂದರ್ಭದಲ್ಲಿ ನಿಶ್ಚಯವಾಗಿದ್ದ ಮದುವೆ ರದ್ದಾಗಿತ್ತು. ಇದೀಗ ಬಾಲ್ಯದಿಂದಲೂ ಪರಿಚಿತವಿರುವ ನಿವೇದಿತಾರನ್ನು ಇಷ್ಟಪಟ್ಟು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಅರೇಂಜ್ಡ್-ಕಮ್-ಲವ್ ಮ್ಯಾರೇಜ್ ಆಗುತ್ತಿರುವುದಾಗಿ ಜ್ಯೋತಿರಾಜ್ ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಸ್ನೇಹಿತರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳ ಪ್ರೀತಿ-ಬೆಂಬಲದಿಂದ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ’; ಕಾಕ್ರೋಚ್ ವಿವಾದಕ್ಕೆ ಸಿಜೆಐ ಸೂರ್ಯಕಾಂತ್ ಬೇಸರ – Kannada News | My statements Misused With Malicious Intent Chief Justice Surya Kant On Cockroach Row

ನವದೆಹಲಿ:, ಆಗಸ್ಟ್ 14: “ದೇಶದ ಯುವಜನರನ್ನು ಹಾದಿತಪ್ಪಿಸುವ ದುರುದ್ದೇಶದಿಂದ ನನ್ನ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಮತ್ತು ದುರ್ಬಳಕೆ ಮಾಡಿಕೊಳ್ಳಲಾಗಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (CJI Surya Kant) ಹೇಳಿದ್ದಾರೆ. ಮೇ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸುವಾಗ ಸಿಜೆಐ, ನಕಲಿ ಪದವಿಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳನ್ನು ಜಿರಳೆಗಳಿಗೆ ಹೋಲಿಸಿದ್ದರು. ಅಂತಹ ವ್ಯಕ್ತಿಗಳು ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಲು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಆರ್‌ಟಿಐ (RTI) ಕಾರ್ಯಕರ್ತರಾಗಿ ಹೊರಹೊಮ್ಮುತ್ತಾರೆ ಎಂದು ಅವರು ಹೇಳಿದ್ದರು.

ಸಿಜೆಐ ಅವರ ಈ ಹೇಳಿಕೆಯು ಯುವಜನರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಇದು “ಕಾಕ್ರೋಚ್ ಜನತಾ ಪಾರ್ಟಿ” (CJP) ಎಂಬ ವ್ಯಂಗ್ಯಾತ್ಮಕ ಆನ್‌ಲೈನ್ ಚಳವಳಿಗೂ ಕಾರಣವಾಗಿತ್ತು. ಬಳಿಕ ಕಾಕ್ರೋಚ್ ಜನತಾ ಪಾರ್ಟಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ: ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಿಸಬೇಡಿ ಎಂದಿದ್ದ ನಲ್ಸಾರ್ ವಿದ್ಯಾರ್ಥಿಗಳ ಈ ವರ್ಷದ ನೋಂದಣಿ ತಡೆಹಿಡಿದ ಬಾರ್ ಕೌನ್ಸಿಲ್!

ಡಿಡಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಜೆಐ ಸೂರ್ಯಕಾಂತ್, ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಕಲಾಪಗಳ ವೀಡಿಯೊ ತುಣುಕುಗಳನ್ನು ಯಾವುದೇ ಸರಿಯಾದ ಹಿನ್ನೆಲೆಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ ಎಂದಿದ್ದಾರೆ. ನಡೆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದ ಸಿಜೆಐ ಸೂರ್ಯ ಕಾಂತ್, ಸಂಬಂಧಪಟ್ಟ ಜನರ ಬಗ್ಗೆ ಇಂತಹ ವಿಷಯಗಳನ್ನು ತಾವು ಎಂದಿಗೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

“ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಮತ್ತು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಹೇಳದೇ ಇರುವುದನ್ನು ಹೇಳಿದಂತೆ ಪ್ರಸ್ತುತಪಡಿಸಲಾಗಿದೆ. ಇದು ಅತ್ಯಂತ ದುರದೃಷ್ಟಕರ. ವಿಶೇಷವಾಗಿ, ದೇಶದ ಯುವಕರನ್ನು ಹಾದಿತಪ್ಪಿಸುವ ಬೃಹತ್ ದುರುದ್ದೇಶಪೂರಿತ ಯತ್ನ ಇದಾಗಿದೆ” ಎಂದು ಸಿಜೆಐ ಹೇಳಿದರು.

ಇದನ್ನೂ ಓದಿ: ಕೆಲವೊಮ್ಮೆ ಮಕ್ಕಳು ತಪ್ಪು ಮಾಡುತ್ತಾರೆ; ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರ ಪೇಪರ್ ಎಸೆದ ಘಟನೆಗೆ ಸಿಜೆಐ ಪ್ರತಿಕ್ರಿಯೆ

ನ್ಯಾಯಾಂಗ ಕಲಾಪಗಳ ಬಗ್ಗೆ ವರದಿ ಮಾಡುವಾಗ ಮಾಧ್ಯಮಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕೋರಿದ ಸಿಜೆಐ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಎಚ್ಚರಿಕೆ ನೀಡಿ ಎಸಿಪಿ, ಇನ್ಸ್​​​​​ಪೆಕ್ಟರ್ ವಿರುದ್ಧದ​​​​​​ ತನಿಖೆ ಕ್ಲೋಸ್ – Kannada News | Bengaluru Chinnaswamy Stadium Stampede Case: department enquiry Stopped Agaunst ACP And inspector

ಬೆಂಗಳೂರು, (ಆಗಸ್ಟ್ 14): ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರ ವಿರುದ್ಧ ಜಂಟಿ ಇಲಾಖಾ ವಿಚಾರಣೆ ಪೂರ್ಣಗೊಂಡಿದ್ದು, ಎಚ್ಚರಿಕೆ ನೀಡಿ ಜಂಟಿ ಇಲಾಖೆ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ಎಸಿಪಿ ಬಾಲಕೃಷ್ಣ, ಇನ್ಸ್ಪೆಕ್ಟರ್ ಗಿರೀಶ್ ವಿರುದ್ಧದ ಇಲಾಖೆ ವಿಚಾರಣೆ ಅಂತ್ಯವಾಗಿದ್ದು, ಇಬ್ಬರು ಪೊಲೀಸರ ಲಿಖಿತ ಸಮಜಾಯಿಷಿಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸಮಜಾಯಿಷಿ ಒಪ್ಪಿ ಎಚ್ಚರಿಕೆ ನೀಡಿ ವಿಚಾರಣೆ ಮುಕ್ತಾಯಗೊಳಿಸಲಾಗಿದೆ.

ಸೇವಾವಧಿಯಲ್ಲಿ ಮತ್ತೆ ಇಂತ ಘಟನೆ ಮರುಕಳಿಸದಂತೆ ಎಚ್ಚರಿಕೆ ಜೊತೆಗೆ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಖುನ್ಹಾ ಮತ್ತು ಬೆಂಗಳೂರು ಡಿಸಿ ಮ್ಯಾಜಿಸ್ಟೇರಿಯಲ್ ತನಿಖೆ ವರದಿ ಹಾಗೂ ಡಿಜಿ & ಐಜಿಪಿ ಅಭಿಪ್ರಾಯ ಆಧರಿಸಿ ವಿಚಾರಣೆ ಮುಕ್ತಾಯ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version