ಎಚ್ಚರ! ನೀವು ತಿನ್ನುವ ಕರಿದ ತಿಂಡಿ ಎಣ್ಣೆಯಲ್ಲೇ ಅಪಾಯಕಾರಿ ಟ್ರಾನ್ಸ್ ಫ್ಯಾಟ್, 40ಕ್ಕೂ ಹೆಚ್ಚು ಕಡೆ ಅಸುರಕ್ಷಿತ ಎಣ್ಣೆ ಪತ್ತೆ – Kannada News | Unsafe Cooking Oil Found in Bengaluru Hotels: Food Safety Department Detects High Trans Fat, Issues Notices and Fines

ಬೆಂಗಳೂರು, ಜುಲೈ 23: ಹೋಟೆಲ್‌, ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳು ಹಾಗೂ ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ಬಳಸಲಾಗುತ್ತಿರುವ ಕರಿದ ಅಡುಗೆ ಎಣ್ಣೆಯ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಇಲಾಖೆಯು ಬೆಂಗಳೂರಿನಲ್ಲಿ (Bengaluru) ನಡೆಸಿದ ತಪಾಸಣೆಯಲ್ಲಿ 40ಕ್ಕೂ ಹೆಚ್ಚು ಕಡೆ ಬಳಸುತ್ತಿದ್ದ ಅಡುಗೆ ಎಣ್ಣೆ ಸುರಕ್ಷಿತ ಗುಣಮಟ್ಟ ಹೊಂದಿರಲಿಲ್ಲ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಅಡುಗೆ ಎಣ್ಣೆಯಲ್ಲಿ ಅಪಾಯಕಾರಿ ಟ್ರಾನ್ಸ್ ಫ್ಯಾಟ್ ಪತ್ತೆಯಾಗಿದೆ.

40ಕ್ಕೂ ಹೆಚ್ಚು ಹೋಟೆಲ್ ಮಾಲೀಕರಿಗೆ ನೋಟಿಸ್

ಅಧಿಕಾರಿಗಳ ಮಾಹಿತಿ ಪ್ರಕಾರ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಆಹಾರ ಮಳಿಗೆಗಳಿಂದ ಬಳಸಿದ ಅಡುಗೆ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಹಲವು ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮಟ್ಟದಲ್ಲಿ ಟ್ರಾನ್ಸ್ ಫ್ಯಾಟ್ ಇರುವ ಅಂಶ ಪತ್ತೆಯಾಗಿದೆ. ಇದರ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಒಟ್ಟು 28.91 ಲಕ್ಷ ರೂ. ದಂಡ ವಿಧಿಸಲಾಗಿದೆ.

ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್‌ಗೆ ದಾರಿ

ತಜ್ಞರ ಪ್ರಕಾರ, ಟ್ರಾನ್ಸ್ ಫ್ಯಾಟ್ ಅಧಿಕವಾಗಿರುವ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಫ್ಯಾಟಿ ಲಿವರ್ ಸಮಸ್ಯೆ ಹಾಗೂ ಕೆಲವು ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕರಿದ ಎಣ್ಣೆಯನ್ನು ಪದೇ ಪದೇ ಬಳಸುವುದನ್ನು ನಿಯಂತ್ರಿಸಲು ಇಲಾಖೆ ಕ್ರಮ ಕೈಗೊಂಡಿದೆ.

ಎಣ್ಣೆಯ ಮರುಬಳಕೆ, ಗುಣಮಟ್ಟ ನಿಯಣತ್ರಣಕ್ಕೆ ಹೊಸ ಮಾರ್ಗಸೂಚಿ

ಈ ಹಿನ್ನೆಲೆಯಲ್ಲಿ ಹೋಟೆಲ್‌, ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳಿಗೆ ಬಳಸಿದ ಎಣ್ಣೆಯ ಮರುಬಳಕೆ ಹಾಗೂ ಗುಣಮಟ್ಟ ನಿಯಂತ್ರಣ ಕುರಿತು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಹಾಗೂ ಹೆಚ್ಚಿನ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಇದನ್ನೂ ಓದಿ: ಶಾಲಾ ಮಕ್ಕಳಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ: ಜಂಕ್​​ ಫುಡ್​​​ ವಿರುದ್ಧ ಸಮರ ಸಾರಿದ ಆಹಾರ ಸುರಕ್ಷಿತ ಇಲಾಖೆ

ಸಾರ್ವಜನಿಕರು ರಸ್ತೆ ಬದಿ ಹಾಗೂ ವಿವಿಧ ಆಹಾರ ಮಳಿಗೆಗಳಲ್ಲಿ ಕರಿದ ಆಹಾರ ಸೇವಿಸುವಾಗ ಸ್ವಚ್ಛತೆ ಮತ್ತು ಎಣ್ಣೆಯ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಒಕೆಯ ಪ್ರಧಾನಿಯಾಗುವೆ, ಹೊಸ ಇಚ್ಛೆ ವ್ಯಕ್ತಪಡಿಸಿದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ – Kannada News | Nawaz Sharif’s Reported PoK Leadership Ambition Sparks Political Buzz

ಇಸ್ಲಾಮಾಬಾದ್, ಜುಲೈ 23: ಪಾಕಿಸ್ತಾನ(Pakistan)ದ ಮಾಜಿ ಪ್ರಧಾನಿ ಹಾಗೂ ಆಡಳಿತಾರೂಢ ಪಿಎಂಎಲ್-ಎನ್  ಪಕ್ಷದ ಮುಖ್ಯಸ್ಥ ನವಾಜ್ ಷರೀಫ್(Nawaz Sharif) ಪಾಕ್ ಆಕ್ರಮಿತ ಕಾಶ್ಮೀರದ  ‘ಪ್ರಧಾನಿ’ಯಾಗುವ ಹೊಸ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರದೇಶದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ತಮ್ಮ ಸಹೋದರ, ಪ್ರಸ್ತುತ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬಳಿ ಪಿಒಕೆ ಪ್ರಧಾನಿ ಪಟ್ಟ ಕೊಡುವಂತೆ ಕೇಳಿಕೊಳ್ಳುವುದಾಗಿ ನವಾಜ್ ಷರೀಫ್ ಹೇಳಿದ್ದಾರೆ.

ಪಿಒಕೆಯ ರಾಜಧಾನಿ ಮುಜಫರಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್, “ಪಿಒಕೆ ನನಗೆ ತವರು ಪ್ರಾಂತ್ಯ ಪಂಜಾಬ್‌ನಷ್ಟೇ ಪ್ರಿಯವಾಗಿದೆ. ಇದು ನನ್ನ ಎರಡನೇ ಮನೆ, ಏಕೆಂದರೆ ನನ್ನ ಪೂರ್ವಜರು ಕಾಶ್ಮೀರದಿಂದ ವಲಸೆ ಬಂದವರು. ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದರೆ, ಅಭಿವೃದ್ಧಿಯನ್ನು ಹತ್ತಿರದಿಂದ ನೋಡಿಕೊಳ್ಳಲು ನನ್ನನ್ನೇ ಪಿಒಕೆ ಪ್ರಧಾನಿ ಮಾಡುವಂತೆ ಶೆಹಬಾಜ್‌ಗೆ ಕೋರುತ್ತೇನೆ” ಎಂದಿದ್ದಾರೆ.

ಹಠಾತ್ ಹಣದುಬ್ಬರ, ವಿದ್ಯುತ್ ದರ ಏರಿಕೆ ಮತ್ತು ರಾಜಕಾರಣಿಗಳ ಸವಲತ್ತುಗಳ ವಿರುದ್ಧ ‘ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ’ ನೇತೃತ್ವದಲ್ಲಿ ವ್ಯಾಪಕ ಆಂದೋಲನ ನಡೆಯುತ್ತಿದೆ. ಪ್ರತಿಭಟನಾಕಾರರ ವಿರುದ್ಧ ಪಾಕಿಸ್ತಾನ ಸೇನೆ ಮತ್ತು ಪೊಲೀಸರು ನಡೆಸಿದ ಕಠಿಣ ಲಾಠಿಚಾರ್ಜ್ ಹಾಗೂ ಗುಂಡಿನ ದಾಳಿಯಲ್ಲಿ ಇದುವರೆಗೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಈಗಿರುವ ರೂಪದಲ್ಲಿ ಒಪ್ಪಂದ ಸಾಧ್ಯವೇ ಇಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ಎಚ್ಚರಿಕೆ, ಸಿಂಧೂ ಜಲ ಒಪ್ಪಂದದ ಬಗ್ಗೆ ಮತ್ತೆ ಕಠಿಣ ನಿಲುವು

ಪಾಕ್ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಜುಲೈ 23 ರಿಂದ ಮತ್ತೆ ಬೃಹತ್ ಲಾಂಗ್ ಮಾರ್ಚ್ ಹಾಗೂ ಮುಜಫರಾಬಾದ್ ಕಡೆಗೆ ಧರಣಿ ಪ್ರದರ್ಶನವನ್ನು ಜೆಕೆಜೆಎಎಸಿ ಆರಂಭಿಸಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಶಾಶ್ವತ ಮತ್ತು ಬೇರ್ಪಡಿಸಲಾಗದ ಅವಿಭಾಜ್ಯ ಅಂಗಗಳಾಗಿವೆ ಎಂಬ ನಿಲುವಿಗೆ ಭಾರತ ಬದ್ಧವಾಗಿದೆ.

ಅಕ್ರಮ ಆಕ್ರಮಣ: ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳನ್ನು ಪಾಕಿಸ್ತಾನಿ ಸೇನೆಯು ಅಕ್ರಮ ಹಾಗೂ ಬಲವಂತವಾಗಿ ಆಕ್ರಮಿಸಿಕೊಂಡಿದೆ ಎಂದು ನವದೆಹಲಿ ಜಾಗತಿಕ ವೇದಿಕೆಗಳಲ್ಲಿ ಸ್ಪಷ್ಟಪಡಿಸಿದೆ.

ಚುನಾವಣೆಗೆ ತೀವ್ರ ವಿರೋಧ: ಪಿಒಕೆಯಲ್ಲಿ ಪಾಕಿಸ್ತಾನ ನಡೆಸುವ ಯಾವುದೇ ಚುನಾವಣೆಯಾಗಲಿ ಅಥವಾ ರಚಿಸುವ ‘ಶಾಸಕಾಂಗ ಸಭೆಗಳನ್ನಾಗಲಿ’ ಭಾರತ ಸರ್ಕಾರ ಅಧಿಕೃತವಾಗಿ ಎಂದು ಗುರುತಿಸುವುದಿಲ್ಲ. ಈ ಪ್ರದೇಶದಲ್ಲಿ ಪಾಕಿಸ್ತಾನ ನಡೆಸುವ ಇಂತಹ ಪ್ರಹಸನಗಳ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಕ್ಕೆ ಸರಣಿ ರಾಜತಾಂತ್ರಿಕ ಪ್ರತಿಭಟನೆಗಳನ್ನು ಸಲ್ಲಿಸುತ್ತಲೇ ಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

NEET ಪ್ರತಿಭಟನೆ: ವಿದ್ಯಾರ್ಥಿಗಳ ಪರ ನಿಂತ ಯುವರಾಜ್ ಸಿಂಗ್! – Kannada News | NEET Protests: Yuvraj Singh Pleads For Peace and Dialogue

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಗಳ ಮಧ್ಯೆ, ಟೀಮ್ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ರಾಜಕೀಯ ಹೇಳಿಕೆಗಳಿಗೆ ಆಸ್ಪದ ನೀಡದೆ, ಕೇವಲ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸುರಕ್ಷತೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಯುವಿ ಬೆಂಬಲ:

ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಯುವರಾಜ್ ಸಿಂಗ್, ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಹೀಗೆ ಬರೆದಿದ್ದಾರೆ…

“ಪ್ರತಿಯೊಬ್ಬ ಮಗು, ವಿದ್ಯಾರ್ಥಿ, ಮಹಿಳೆ ಮತ್ತು ಪುರುಷ—ನೀವೆಲ್ಲರೂ ಶಾಂತಿಯುತವಾಗಿ ಕಲಿಯುವ, ಸುರಕ್ಷಿತವಾಗಿ ಬೆಳೆಯುವ ಮತ್ತು ನಿಮ್ಮ ಕನಸುಗಳನ್ನು ಬೆನ್ನಟ್ಟುವ ಅವಕಾಶವನ್ನು ಹೊಂದಲು ಅರ್ಹರು. ನಿಮ್ಮ ಯೋಗಕ್ಷೇಮವೇ ಉಜ್ವಲ ಭಾರತದ ಅಡಿಪಾಯ. ಬನ್ನಿ, ನಾವೆಲ್ಲರೂ ಒಟ್ಟಾಗಿ ಕಾಳಜಿ, ಅವಕಾಶ ಮತ್ತು ಭರವಸೆಯ ಸಮುದಾಯಗಳನ್ನು ನಿರ್ಮಿಸೋಣ. ಭಾರತದ ಭವಿಷ್ಯದ ಹಿತದೃಷ್ಟಿಯಿಂದ, ಸೌಹಾರ್ದಯುತ ಮಾತುಕತೆಯ ಮೂಲಕ ನಾವೊಂದು ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.”

ಈ ಮೂಲಕ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆಯುವುದನ್ನು ತಪ್ಪಿಸಿ, ಸರ್ಕಾರ ಮತ್ತು ವಿದ್ಯಾರ್ಥಿಗಳು ಸೌಹಾರ್ದಯುತ ಮಾತುಕತೆಯ ಮೂಲಕವೇ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಯುವರಾಜ್ ಸಿಂಗ್ ಪ್ರತಿಪಾದಿಸಿದ್ದಾರೆ.

ಏನಿದು ನೀಟ್ ವಿವಾದ:

ನೀಟ್ (NEET-UG) ಎನ್ನುವುದು ಭಾರತದಲ್ಲಿ ವೈದ್ಯಕೀಯ (MBBS/BDS) ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪರೀಕ್ಷೆ. ಈ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ, ಅಂಕಗಳ ಅಕ್ರಮ ಮತ್ತು ವ್ಯವಸ್ಥಿತ ಲೋಪದೋಷಗಳ ದೊಡ್ಡ ಹಗರಣ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಪರೀಕ್ಷೆಗೂ ಮುನ್ನವೇ ಹಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗ್ರೂಪ್‌ಗಳಲ್ಲಿ ಹರಿದಾಡಿದ್ದವು. ಮಧ್ಯವರ್ತಿಗಳು ‘ಗೆಸ್ ಪೇಪರ್’ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗೆ ಇದನ್ನು ಮಾರಾಟ ಮಾಡಿದ್ದರು. ಈ ಬಗ್ಗೆ ಪ್ರಸ್ತುತ ಸಿಬಿಐ ತನಿಖೆ ನಡೆಸುತ್ತಿದ್ದು, ಹಲವರನ್ನು ಬಂಧಿಸಲಾಗಿದೆ.

ಪ್ರತಿಭಟನೆ ಯಾಕೆ?

ಪ್ರಸ್ತುತ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಮುಖ್ಯ ಉದ್ದೇಶ…

  • ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
  • ಭವಿಷ್ಯದಲ್ಲಿ ಇಂತಹ ಪತ್ರಿಕೆ ಸೋರಿಕೆಗಳು ಮರುಕಳಿಸದಂತೆ ಪರೀಕ್ಷಾ ಕ್ರಮದಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: Commonwealth Games 2026: ಇಂದಿನಿಂದ ಪದಕ ಬೇಟೆ ಶುರು: ಇಲ್ಲಿದೆ ವೇಳಾಪಟ್ಟಿ

ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ:

ದೆಹಲಿಯ ಜಂತರ್ ಮಂತರ್ ಮತ್ತು ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗವನ್ನು ಖಂಡಿಸಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿವೆ. ಇದೇ ವಿಚಾರವಾಗಿ ಇದೀಗ ಯುವರಾಜ್ ಸಿಂಗ್ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ, ಸರ್ಕಾರ ಸೌಹಾರ್ದಯುತ ಮಾತುಕತೆಯ ಮೂಲಕ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Source link

Karnataka Dam Water Level: ಇನ್ನೊಂದೇ ವಾರದಲ್ಲಿ ಪೂರ್ಣ ಭರ್ತಿಯಾಗಲಿದೆ ಆಲಮಟ್ಟಿ ಡ್ಯಾಂ! ಜಲಾಶಯಗಳ ನೀರಿನ ಮಟ್ಟದ ವಿವರ – Kannada News | Karnataka Reservoir Water Level Today on July 23: Almatti Reservoir Crosses 100 TMC, KRS Yet to Reach 100 Feet

ಬೆಂಗಳೂರು, ಜುಲೈ 23: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ (Monsoon Rain) ಪರಿಣಾಮ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಬುಧವಾರ ಜಲಾಶಯದಲ್ಲಿನ ನೀರಿನ ಸಂಗ್ರಹ 100 ಟಿಎಂಸಿ ಗಡಿ ದಾಟಿ 101.37 ಟಿಎಂಸಿ ತಲುಪಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ವಾರಾಂತ್ಯದೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಹೆಚ್ಚಿದ ಒಳಹರಿವಿನ ಹಿನ್ನೆಲೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮವು ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಗಾಗಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುತ್ತಿದೆ. ಆಲಮಟ್ಟಿ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ (ಜುಲೈ 23) ನೀರಿನ ಮಟ್ಟದ (Karnataka Dam Water Level) ವಿವರ ಇಲ್ಲಿದೆ.

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 518.41 ಮೀಟರ್
  • ಒಳಹರಿವು: 65,752 ಕ್ಯೂಸೆಕ್
  • ಹೊರಹರಿವು: 38,067 ಕ್ಯೂಸೆಕ್
  • ನೀರಿನ ಸಂಗ್ರಹ: 101.37 ಟಿಎಂಸಿ

ಕೆಆರ್‌ಎಸ್ ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.08 ಅಡಿ
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 17.214 ಟಿಎಂಸಿ
  • ಒಳಹರಿವು: 703 ಕ್ಯೂಸೆಕ್
  • ಹೊರಹರಿವು: 1,800 ಕ್ಯೂಸೆಕ್

ಕಬಿನಿ ಜಲಾಶಯ (ಮೈಸೂರು)

  • ಇಂದಿನ ನೀರಿನ ಮಟ್ಟ: 72.85 ಅಡಿ
  • ಕಳೆದ ವರ್ಷ ಇದೇ ದಿನ: 83.63 ಅಡಿ
  • ಇಂದಿನ ನೀರಿನ ಸಂಗ್ರಹ: 13.12 ಟಿಎಂಸಿ
  • ಕಳೆದ ವರ್ಷ: 19.27 ಟಿಎಂಸಿ
  • ಒಳಹರಿವು: 1,805 ಕ್ಯೂಸೆಕ್
  • ಕಳೆದ ವರ್ಷ: 12,122 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್
  • ಕಳೆದ ವರ್ಷ: 12,000 ಕ್ಯೂಸೆಕ್
  • ಕಳೆದ 24 ಗಂಟೆಗಳ ಮಳೆ: 10 ಮಿ.ಮೀ.

ಹೇಮಾವತಿ ಜಲಾಶಯ (ಹಾಸನ)

  • ಗರಿಷ್ಠ ಮಟ್ಟ: 2922 ಅಡಿ (37 ಟಿಎಂಸಿ)
  • ಇಂದಿನ ಮಟ್ಟ: 2904.57 ಅಡಿ
  • ಇಂದಿನ ಸಂಗ್ರಹ: 22.767 ಟಿಎಂಸಿ
  • ಒಳಹರಿವು: 1,117 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 2921.03 ಅಡಿ (36.165 ಟಿಎಂಸಿ) ಇತ್ತು. ಆಗ 6,862 ಕ್ಯೂಸೆಕ್ ಒಳಹರಿವು ಹಾಗೂ 2,400 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಈ ಬಾರಿ ನೀರಿನ ಸಂಗ್ರಹ ಮತ್ತು ಒಳಹರಿವು ಎರಡೂ ಗಮನಾರ್ಹವಾಗಿ ಕಡಿಮೆಯಾಗಿದೆ.

ತುಂಗಭದ್ರಾ ಜಲಾಶಯ

  • ಗರಿಷ್ಠ ಮಟ್ಟ (FRL): 1633.00 ಅಡಿ
  • ಇಂದಿನ ನೀರಿನ ಮಟ್ಟ: 1604.55 ಅಡಿ
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ಸಂಗ್ರಹ: 28.002 ಟಿಎಂಸಿ
  • ಸರಾಸರಿ ಒಳಹರಿವು (24 ಗಂಟೆ): 21,089 ಕ್ಯೂಸೆಕ್
  • ಪ್ರಸ್ತುತ (Live) ಒಳಹರಿವು: 24,821 ಕ್ಯೂಸೆಕ್
  • ಸರಾಸರಿ ಹೊರಹರಿವು: 3,035 ಕ್ಯೂಸೆಕ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology: ನೀವು ಮೂಲ ಸಂಖ್ಯೆ 2 ರಲ್ಲಿ ಜನಿಸಿದವರೇ? ಮದುವೆಯಾಗುವ ಮುನ್ನ ಈ ವಿಷಯ ತಿಳಿದಿರಲಿ – Kannada News | Root Number 2 Compatibility: Find Your Perfect Numerology Match for a Happy Marriage

ಮೂಲ ಸಂಖ್ಯೆ 2ರಲ್ಲಿ ಜನಿಸಿದ ಜನರುImage Credit source: Getty Images

ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನವು ಜಗಳಗಳಿಂದ ಮುಕ್ತವಾಗಿ, ಆನಂದದಾಯಕವಾಗಿರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಕೇವಲ ಹುಡುಗ-ಹುಡುಗಿಯ ಒಪ್ಪಿಗೆ ಮಾತ್ರವಲ್ಲದೆ, ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹೊಂದಾಣಿಕೆಯೂ ಮುಖ್ಯವಾಗುತ್ತದೆ. ಜಾತಕಗಳ ಮಿಲನದಂತೆಯೇ ಸಂಖ್ಯಾಶಾಸ್ತ್ರದಲ್ಲೂ ಗ್ರಹಗಳ ಸಾಮರಸ್ಯಕ್ಕೆ ಅನುಗುಣವಾಗಿ ಸಂಖ್ಯೆಗಳ ಹೊಂದಾಣಿಕೆಯನ್ನು ನೋಡಲಾಗುತ್ತದೆ. ಉದಾಹರಣೆಗೆ, ಜನ್ಮಸಂಖ್ಯೆ 2 ರಲ್ಲಿ ಜನಿಸಿದವರು ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರನ್ನು ಮದುವೆಯಾಗುವುದನ್ನು ತಪ್ಪಿಸುವುದು ಒಳಿತು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

ಯಾರ ಮೂಲ ಸಂಖ್ಯೆ 2 ಆಗಿರುತ್ತದೆ?

ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದವರ ಮೂಲ ಸಂಖ್ಯೆ 2 ಆಗಿರುತ್ತದೆ. ಈ ಸಂಖ್ಯೆಯನ್ನು ಚಂದ್ರ ಗ್ರಹವು ಆಳುತ್ತದೆ. ಚಂದ್ರನು ಮನಸ್ಸಿನ ಕಾರಕನಾಗಿರುವುದರಿಂದ, ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಸ್ವಭಾವತಃ ಅತ್ಯಂತ ಸೂಕ್ಷ್ಮಮನಸ್ಸಿನವರು, ಸೃಜನಶೀಲರು, ಕಾಲ್ಪನಿಕರು ಮತ್ತು ಶಾಂತಪ್ರಿಯರಾಗಿರುತ್ತಾರೆ. ಯಾವುದೇ ಸಮಸ್ಯೆಯನ್ನಾದರೂ ಕೋಪಿಸಿಕೊಳ್ಳದೆ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಗುಣ ಇವರಲ್ಲಿರುತ್ತದೆ.

ಸಂಖ್ಯೆ 2 ರವರು ಯಾರನ್ನು ಮದುವೆಯಾಗಬಾರದು?

ಸಂಖ್ಯಾಶಾಸ್ತ್ರದ ಪ್ರಕಾರ, ಮೂಲ ಸಂಖ್ಯೆ 2 ಹೊಂದಿರುವವರು ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದವರನ್ನು (ಮೂಲ ಸಂಖ್ಯೆ 9) ಮದುವೆಯಾಗಬಾರದು. 2 ಮತ್ತು 9 ರ ಸಂಯೋಜನೆಯು ವಿವಾಹ ಜೀವನಕ್ಕೆ ಶುಭಕರವಲ್ಲವೆಂದು ಪರಿಗಣಿಸಲಾಗುತ್ತದೆ.

ಇದಕ್ಕೆ ಮುಖ್ಯ ಕಾರಣವೆಂದರೆ, ಸಂಖ್ಯೆ 2 ರವರು ಶಾಂತ ಸ್ವಭಾವದವರಾಗಿದ್ದರೆ, ಸಂಖ್ಯೆ 9 ರವರು ಮಂಗಳ ಗ್ರಹದ ಪ್ರಭಾವಕ್ಕೆ ಒಳಗೊಂಡಿರುತ್ತಾರೆ. ಮಂಗಳನ ಪ್ರಭಾವದಿಂದಾಗಿ ಅವರು ಹೆಚ್ಚು ಧೈರ್ಯಶಾಲಿಗಳು, ನಾಯಕತ್ವದ ಗುಣವುಳ್ಳವರು ಮತ್ತು ಆಕ್ರಮಣಕಾರಿ ಸ್ವಭಾವದವರಾಗಿರುತ್ತಾರೆ. ಅವರು ತಮ್ಮ ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುವುದರಿಂದ ಹಾಗೂ ಅವರ ಕೋಪದ ಸ್ವಭಾವದಿಂದಾಗಿ ಶಾಂತಪ್ರಿಯರಾದ ಸಂಖ್ಯೆ 2 ರವರ ಜೊತೆ ಆಗಾಗ ಭಿನ್ನಾಭಿಪ್ರಾಯಗಳು ಮೂಡುತ್ತವೆ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಸಂಖ್ಯೆ 2 ರವರಿಗೆ ಸೂಕ್ತವಾದ ಜೀವನ ಸಂಗಾತಿ ಯಾರು?

ಸಂಖ್ಯೆ 2 ರವರ ವೈವಾಹಿಕ ಜೀವನ ಸುಖಮಯವಾಗಿರಲು 2, 4 ಮತ್ತು 7 ಮೂಲ ಸಂಖ್ಯೆ ಹೊಂದಿರುವವರು ಅತ್ಯಂತ ಅನುಕೂಲಕರ ಸಂಗಾತಿಗಳಾಗಿದ್ದಾರೆ. ಅಂದರೆ, ಯಾವುದೇ ತಿಂಗಳ 2, 4, 7, 11, 13, 16, 20, 22, 25, 29, 31 ರಂದು ಜನಿಸಿದವರನ್ನು ಮದುವೆಯಾದರೆ ಸಂಬಂಧದಲ್ಲಿ ಸಾಮರಸ್ಯ ಹೆಚ್ಚಿ, ಜಗಳ ಹಾಗೂ ಸಂಘರ್ಷಗಳ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಯಾವುದೇ ಸಂಖ್ಯೆಯೊಂದಿಗಿನ ದಾಂಪತ್ಯ ಯಶಸ್ವಿಯಾಗಲು ಪರಸ್ಪರ ತಿಳುವಳಿಕೆ ಮತ್ತು ಗೌರವವೇ ಮೂಲಾಧಾರ. ಆದಾಗ್ಯೂ, ಸಂಖ್ಯಾಶಾಸ್ತ್ರದ ಈ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ನಿಮ್ಮ ವೈವಾಹಿಕ ಜೀವನಕ್ಕೆ ಮತ್ತಷ್ಟು ಸ್ಥಿರತೆಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರ್ಮಾಪಕ ಕೆವಿಎನ್ ಹೇಳಿದ್ದೇನು? – Kannada News | Producer KVN Venkat talks about Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆಗೆ ದೇಶ-ವಿದೇಶಗಳ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಯಶ್ ಸೇರಿದಂತೆ ಚಿತ್ರತಂಡ ಇನ್ನೂ ಸಕ್ರಿಯವಾಗಿ ಸಿನಿಮಾದ ಪ್ರಚಾರ ಆರಂಭಿಸಿಲ್ಲ. ಸಿನಿಮಾದ ನಟ-ನಟಿಯರು, ತಂತ್ರಜ್ಞರು ಬೇರೆ ಬೇರೆ ಸಿನಿಮಾಗಾಳ ಸಂದರ್ಶನಗಳಲ್ಲಿ ಭಾಗವಹಿಸಿದಾಗ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿದ್ದು, ಉತ್ತರಗಳನ್ನು ನೀಡುತ್ತಿದ್ದಾರೆ. ಇದೀಗ ಸಿನಿಮಾದ ನಿರ್ಮಾಪಕ ವೆಂಕಟ್ ಅವರು ತಮ್ಮದೇ ನಿರ್ಮಾಣದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಸಜ್ಜಾಗಿ ಅದರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಟಾಕ್ಸಿಕ್’ ಬಹಳ ಮಹತ್ವಾಕಾಂಕ್ಷೆಯ ಸಿನಿಮಾ, ಈ ಚಿತ್ರದ ಅದ್ಧೂರಿತನ ಬಲು ಭಿನ್ನ, ಸಿನಿಮಾನಲ್ಲಿ ಕತೆ ಹೇಳಿರುವ ವಿಧಾನವೂ ಭಿನ್ನ, ಸಿನಿಮಾ ಬಿಡುಗಡೆ ಆಗಿ, ಸ್ಕ್ರೀನ್​​ ಮೇಲೆ ಜನ ನೋಡಿದಾಗ ಖಂಡಿತ ಅವರಿಗೆ ಇಷ್ಟವಾಗುತ್ತದೆ. ಅವರು ನಮ್ಮ ಶ್ರಮವನ್ನು ಮೆಚ್ಚಿಕೊಳ್ಳುತ್ತಾರೆ, ಅವರಿಗೆ ಹೊಸ ಅನುಭವ ಸಿಗಲಿದೆ ಎಂಬ ಬಗ್ಗೆ ಸಂಪೂರ್ಣ ನಂಬಿಕೆ ನನಗೆ ಇದೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಕಂಟೆಂಟ್, ಕೇವಲ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಎಕ್ಸೈಟ್​​ಮೆಂಟ್ ಬರಲೆಂದು ಮಾತ್ರ, ಸಿನಿಮಾನಲ್ಲಿ ಸಾಕಷ್ಟು ಭಿನ್ನ ವಿಷಯಗಳು ಇವೆ’ ಎಂದಿದ್ದಾರೆ ಕೆವಿಎನ್ ವೆಂಕಟ್.

‘ಸಿನಿಮಾದ ಬಗ್ಗೆ ನಾವು ಪೋಸ್ಟರ್​ನಲ್ಲೇ ಹೇಳಿಬಿಟ್ಟಿದ್ದೀವಿ, ಇದು ದೊಡ್ಡವರಿಗೆ ಹೇಳುವ ಕತೆ, (ಫೇರಿಟೇಲ್ ಫಾರ್ ಗ್ರೋನ್ ಅಪ್ಸ್) ನಾವೇ ಹೇಳುತ್ತಿದ್ದೀವಿ ಇದು ವಯಸ್ಕರಿಗೆ ಮಾತ್ರ. ಮಕ್ಕಳಿಗೆ ಅಲ್ಲ. ಇದು ದೊಡ್ಡವರಿಗಾಗಿಯೇ ಮಾಡಲಾಗಿರುವ ಸಿನಿಮಾ’ ಎಂದು ವೆಂಕಟ್ ಅವರು ಹೇಳಿದ್ದಾರೆ. ಆ ಮೂಲಕ ‘ಟಾಕ್ಸಿಕ್’ ಸಿನಿಮಾ ಭಾರಿ ಅದ್ಧೂರಿಯಾಗಿರಲಿದೆ ಮತ್ತು ಸಿನಿಮಾದ ನಿರೂಪಣೆ, ಪ್ರೆಸೆಂಟೇಷನ್ ಎಲ್ಲವೂ ಬಲು ಭಿನ್ನವಾಗಿ ಇರಲಿದೆ’ ಎಂದಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ವೇದಿಕೆಯಲ್ಲಿ ಯಶ್ ಹವಾ ಕಂಡು ದಂಗಾದ ಬಾಲಿವುಡ್ ಮಂದಿ

‘ಟಾಕ್ಸಿಕ್’ ಸಿನಿಮಾವನ್ನು ಬಲು ಅದ್ಧೂರಿಯಾಗಿ ಕೆವಿಎನ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಜೊತೆಗೆ ಯಶ್ ಅವರು ಸಹ ನಿರ್ಮಾಪಕ ಆಗಿದ್ದಾರೆ. ಈ ವರೆಗೆ ಕೆವಿಎನ್ ನಿರ್ಮಾಣ ಮಾಡಿರುವ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಬಜೆಟ್​​ನ ಸಿನಿಮಾ ‘ಟಾಕ್ಸಿಕ್’ ಈ ಸಿನಿಮಾಕ್ಕೆ ಸುಮಾರು 500 ಕೋಟಿ ಬಜೆಟ್ ಹೂಡಲಾಗಿದೆಯಂತೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಸಿನಿಮಾಟೊಗ್ರಫಿ ಮಾಡಿರುವ ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನನಗೆ 2 ಸೆಕೆಂಡ್ ಸಾಕು, ಮಸೀದಿಗೆ ಒಂದು ಪತ್ರ ಬರೆದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ – Kannada News | ‘I Can Defeat Congress in Just 2 Seconds’: Former MLA Iqbal Ansari’s Explosive Statement Sparks Political Row

ಕೊಪ್ಪಳ, ಜುಲೈ 23: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಎರಡು ಸೋಲುಗಳಿಗೆ ಕೊಪ್ಪಳ, ಕನಕಗಿರಿ ಮತ್ತು ಯಲಬುರ್ಗಾ ಭಾಗದ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ ಎಂದು ಅನ್ಸಾರಿ ಆರೋಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಂಬಿ ತಾವು ಕಾಂಗ್ರೆಸ್ ಸೇರಿರುವುದಾಗಿ ಸ್ಪಷ್ಟಪಡಿಸಿದ ಅನ್ಸಾರಿ, ಎರಡು ಬಾರಿ ಟಿಕೆಟ್ ನೀಡಿದರೂ, ಸ್ಥಳೀಯ ನಾಯಕರು ತಮ್ಮನ್ನು ಸೋಲಿಸಲು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತಮಗೆ ಅವರನ್ನು ಸೋಲಿಸುವುದು ಕೇವಲ ಎರಡು ಸೆಕೆಂಡ್‌ಗಳ ಕೆಲಸ ಎಂದು ಹೇಳಿರುವ ಇಕ್ಬಾಲ್ ಅನ್ಸಾರಿ, ಶುಕ್ರವಾರದ ವೇಳೆ ಮಸೀದಿಗೆ ಒಂದು ಪತ್ರ ಬರೆದು ಮನವಿ ಮಾಡಿದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಬಹುದು. ಆದರೆ ತಾನು ದೈವ ಭಕ್ತನಾಗಿರುವುದರಿಂದ ಮೋಸ ಮಾಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ಜೆಡಿಎಸ್ ಅಥವಾ ಬಿಜೆಪಿ ಸೇರುವ ವದಂತಿಗಳು ಹರಡುತ್ತಿದ್ದು, ಇದು ಗಾಳಿಸುದ್ದಿ ಎಂದು ಅವರು ತಳ್ಳಿಹಾಕಿದ್ದಾರೆ. ತಾವು ಈಗಲೂ ಕಾಂಗ್ರೆಸ್‌ನಲ್ಲಿಯೇ ಇದ್ದು, ಸತ್ಯಾಸತ್ಯತೆಯನ್ನು ಜನರು ತಿಳಿದುಕೊಳ್ಳಬೇಕು ಎಂದು ಅನ್ಸಾರಿ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Commonwealth Games 2026: ಇಂದಿನಿಂದ ಪದಕ ಬೇಟೆ ಶುರು: ಇಲ್ಲಿದೆ ವೇಳಾಪಟ್ಟಿ – Kannada News | Commonwealth games 2026 india’s Full schedule

ಜಗತ್ತಿನ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಗೇಮ್ಸ್ 2026 ಇಂದಿನಿಂದ (ಜುಲೈ 23) ಶುರುವಾಗಲಿದೆ. ಬಜೆಟ್ ಉಳಿತಾಯದ ಕಾರಣಕ್ಕಾಗಿ ಈ ಬಾರಿ ಕ್ರೀಡಾಕೂಟವನ್ನು ಅತ್ಯಂತ ಸರಳ ಹಾಗೂ ಸುಧಾರಿತ ರೂಪದಲ್ಲಿ ಆಯೋಜಿಸಲಾಗುತ್ತಿದೆ. ಭಾರತದ ಪಾಲಿಗೆ ಪದಕ ತಂದುಕೊಡುತ್ತಿದ್ದ ಪ್ರಮುಖ ಕ್ರೀಡೆಗಳಾದ ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಕ್ರಿಕೆಟ್, ಶೂಟಿಂಗ್ ಮತ್ತು ಟೇಬಲ್ ಟೆನಿಸ್‌ಗಳನ್ನು ಈ ಬಾರಿ ಕೈಬಿಡಲಾಗಿದೆ. ಆದಾಗ್ಯೂ, ಭಾರತದ 126 ಅಥ್ಲೀಟ್‌ಗಳ ಬಲಿಷ್ಠ ತಂಡ ಒಟ್ಟು 13 ವಿಭಾಗಗಳಲ್ಲಿ ಪದಕಕ್ಕಾಗಿ ಸೆಣಸಾಡಲಿದೆ.  ಅದರಂತೆ ಭಾರತೀಯರು ಕಣಕ್ಕಿಳಿಯಲಿರುವ ಕ್ರೀಡೆಗಳ ದಿನಾವಾರು ವೇಳಾಪಟ್ಟಿ ಈ ಕೆಳಗಿನಂತಿದೆ.

  • ಜುಲೈ 23
  • ಮಧ್ಯಾಹ್ನ 4:50 ರಿಂದ ಲಾನ್ ಬೌಲ್ಸ್ (ಮಹಿಳೆಯರ ಡಬಲ್ಸ್) – ಪಿಂಕಿ ಸಿಂಗ್ ಮತ್ತು ರೂಪಾ ರಾಣಿ ತಿರ್ಕಿ ತಂಡ vs ಮಾಲ್ಟಾ.
  • ಸಂಜೆ 6:15 ರಿಂದ ಲಾನ್ ಬೌಲ್ಸ್ (ಪುರುಷರ ಸಿಂಗಲ್ಸ್) – ಪುಟುಲ್ ಸೋನೊವಾಲ್ vs ಕೆನಡಾ.
  • ರಾತ್ರಿ 10:30: ಅದ್ಧೂರಿ ಉದ್ಘಾಟನಾ ಸಮಾರಂಭ (ಭಾರತದ ಧ್ವಜಧಾರಿ: ಮೀರಾಬಾಯಿ ಚಾನು).

__________________________________________________________________________

  • ಜುಲೈ 24
  • ಮಧ್ಯಾಹ್ನ 1:30 ರಿಂದ ಈಜು ಸ್ಪರ್ಧೆಯ ಹೀಟ್ಸ್ (ಶ್ರೀಹರಿ ನಟರಾಜ್‌).
  • ಸಂಜೆ ಪ್ಯಾರಾ ಪವರ್‌ಲಿಫ್ಟಿಂಗ್ ಫೈನಲ್ಸ್ ನಡೆಯಲಿದ್ದು, ಪರಂಜೀತ್ ಕುಮಾರ್ ಮತ್ತು ಸುಮಾ ದೇವಿ ಕಣದಲ್ಲಿದ್ದಾರೆ.

__________________________________________________________________________

  • ಜುಲೈ 25
  • ಮಧ್ಯಾಹ್ನ 3:30 ರಿಂದ ಬಾಕ್ಸಿಂಗ್ ಪ್ರಾಥಮಿಕ ಸುತ್ತುಗಳು ಆರಂಭ (ಪ್ರೀತಿ ಪವಾರ್, ಜೈಸ್ಮಿನ್ ಲಂಬೋರಿಯಾ).
  • ಜಿಮ್ನಾಸ್ಟಿಕ್ಸ್ ತಂಡದ ಫೈನಲ್ಸ್.

__________________________________________________________________________

  • ಜುಲೈ 26
  • ಜಿಮ್ನಾಸ್ಟಿಕ್ಸ್ ವೈಯಕ್ತಿಕ ಫೈನಲ್ಸ್.
  • ಸಂಜೆಯ ಸೆಷನ್‌ನಲ್ಲಿ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಪದಕದ ಪಂದ್ಯ.

__________________________________________________________________________

  • ಜುಲೈ 27
  • ಮಧ್ಯಾಹ್ನ 2:30 ರಿಂದ ಅಥ್ಲೆಟಿಕ್ಸ್ (ಟ್ರಾಕ್ ಅಂಡ್ ಫೀಲ್ಡ್) ಸ್ಪರ್ಧೆಗಳು ಆರಂಭ.
  • 4×400 ಮೀಟರ್ ಮಿಶ್ರ ರಿಲೇ ಹೀಟ್ಸ್.

__________________________________________________________________________

  • ಜುಲೈ 28
  • ಜಿಮ್ನಾಸ್ಟಿಕ್ಸ್ ಅಪಾರಾಟಸ್ ಫೈನಲ್ಸ್
  • ಸಂಜೆ 6:30 ರ ನಂತರ ಪುರುಷರ ಮತ್ತು ಮಹಿಳೆಯರ 100 ಮೀಟರ್ ಓಟದ ಫೈನಲ್ಸ್.

__________________________________________________________________________

  • ಜುಲೈ 29
  • ಮುಂಜಾನೆ 11:30 ರಿಂದ 3×3 ಬಾಸ್ಕೆಟ್‌ಬಾಲ್ ಸೆಮಿಫೈನಲ್ಸ್ ಮತ್ತು ಸಂಜೆ ಪದಕದ ಪಂದ್ಯಗಳು.
  • ಲಾಂಗ್ ಜಂಪ್ ಫೈನಲ್ಸ್‌ನಲ್ಲಿ ಮುರಳಿ ಶ್ರೀಶಂಕರ್ ಕಣಕ್ಕೆ.

__________________________________________________________________________

  • ಜುಲೈ 30
  • ಮಧ್ಯಾಹ್ನ 2:00 ರಿಂದ ವೇಟ್‌ಲಿಫ್ಟಿಂಗ್ ಹೆವಿವೇಟ್ ವಿಭಾಗದ ಪಂದ್ಯಗಳು.
  • ವೆಲೋಡ್ರೋಮ್‌ನಲ್ಲಿ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆಗಳು ಆರಂಭ.

__________________________________________________________________________

  • ಜುಲೈ 31
  • ಮಧ್ಯಾಹ್ನ 2:30 ರಿಂದ ಜೂಡೋ ಪ್ರಾಥಮಿಕ ಸುತ್ತುಗಳು.
  • ರಾತ್ರಿ 7:30 ಕ್ಕೆ ಜೂಡೋ ಪದಕದ ಪಂದ್ಯಗಳು.

__________________________________________________________________________

  • ಆಗಸ್ಟ್ 1
  • ರಾತ್ರಿ 11:00 ಕ್ಕೆ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಒಲಿಂಪಿಕ್ ಹೀರೋ ನೀರಜ್ ಚೋಪ್ರಾ ಕಣಕ್ಕಿಳಿಯಲಿದ್ದಾರೆ.
  • ಇದೇ ದಿನ ಬಾಕ್ಸಿಂಗ್ ಗೋಲ್ಡ್ ಮೆಡಲ್ ಪಂದ್ಯಗಳೂ ನಡೆಯಲಿವೆ.

__________________________________________________________________________

  • ಆಗಸ್ಟ್ 2
  • ಸೈಕ್ಲಿಂಗ್ ಮತ್ತು ಜೂಡೋ ಹೆವಿವೇಟ್ (ತುಲಿಕಾ ಮಾನ್) ಫೈನಲ್ ಪಂದ್ಯಗಳು.
  • ತಡರಾತ್ರಿ ಕ್ರೀಡಾಕೂಟಕ್ಕೆ ತೆರೆ ಎಳೆಯುವ ಸಮಾರೋಪ ಸಮಾರಂಭ.

ಇದನ್ನೂ ಓದಿ: ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಂಡಿದ್ದು ಬಿಸಿಸಿಐ ಮಾಡಿದ ಅತೀ ದೊಡ್ಡ ತಪ್ಪು!

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಡಿ ಸ್ಪೋರ್ಟ್ಸ್ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಸೋನಿ ಲಿವ್ ಆ್ಯಪ್ ಮತ್ತು ವೆಬ್‌ಸೈಟ್​ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

Published On – 9:58 am, Thu, 23 July 26

Source link

FCRA Bill 2026: ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಮಸೂದೆ ಎಂದರೇನು? ಚರ್ಚ್​ಗಳು ಮತ್ತು ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? – Kannada News | FCRA Amendment Bill 2026 Explained: Why NGOs and Churches Oppose Foreign Funding Rules

ನವದೆಹಲಿ, ಜುಲೈ 23: ದೇಶದಲ್ಲಿರುವ ಸರ್ಕಾರೇತರ ಸಂಸ್ಥೆಗಳು , ದತ್ತಿ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಚರ್ಚ್‌ಗಳು ಸ್ವೀಕರಿಸುವ ವಿದೇಶಿ ಕೊಡುಗೆಗಳನ್ನು ನಿಯಂತ್ರಿಸುವ ಎಫ್‌ಸಿಆರ್‌ಎ(FCRA) ತಿದ್ದುಪಡಿ ಮಸೂದೆ 2026′ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಹಾಗೂ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ತಿದ್ದುಪಡಿಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್, ಸಿಪಿಐ(ಎಂ), ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ಹಾಗೂ ವಿವಿಧ ಚರ್ಚ್ ಸಂಸ್ಥೆಗಳು ಇದನ್ನು ಕಠಿಣ ಕಾನೂನು ಎಂದು ಕರೆದು ತೀವ್ರವಾಗಿ ವಿರೋಧಿಸುತ್ತಿವೆ.

FCRA ಮಸೂದೆ 2026 ರಲ್ಲಿ ಏನಿದೆ?

ಆಸ್ತಿ ಮತ್ತು ಸಂಸ್ಥೆಗಳ ಮೇಲ್ವಿಚಾರಣೆ: ಯಾವುದೇ ಒಂದು ಸಂಸ್ಥೆಯ ಎಫ್​ಸಿಆರ್​ಎ ನೋಂದಣಿ ರದ್ದಾದರೆ, ನವೀಕರಣಗೊಳ್ಳದಿದ್ದರೆ ಆ ವಿದೇಶಿ ಹಣದಿಂದ ನಿರ್ಮಿಸಲಾದ ಶಾಲೆಗಳು, ಆಸ್ಪತ್ರೆಗಳು, ಕಟ್ಟಡಗಳು ಹಾಗೂ ಆಸ್ತಿಗಳನ್ನು ನಿರ್ವಹಿಸಲು ಅಥವಾ ವಿಲೇವಾರಿ ಮಾಡಲು ಸರ್ಕಾರವು ‘ವಿಶೇಷ ಅಧಿಕಾರಿ ಅಥವಾ ಪ್ರಾಧಿಕಾರವನ್ನು ನೇಮಿಸುತ್ತದೆ.

ವಿದೇಶಿ ಹಣ ಬಳಕೆಗೆ ತಡೆ: ನೋಂದಣಿ ರದ್ದಾದ ತಕ್ಷಣವೇ ಆ ಸಂಸ್ಥೆಯು ತನ್ನ ಬಳಿಯಿರುವ ವಿದೇಶಿ ದೇಣಿಗೆ ಅಥವಾ ಆ ಹಣದಿಂದ ಸೃಷ್ಟಿಯಾದ ಆಸ್ತಿಪಾಸ್ತಿಗಳನ್ನು ಬಳಸುವಂತಿಲ್ಲ.

ನೇರ ಖಾತೆ ಕಡ್ಡಾಯ: ಎಲ್ಲಾ ವಿದೇಶಿ ದೇಣಿಗೆಗಳು ದೆಹಲಿಯಲ್ಲಿರುವ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮುಖ್ಯ ಶಾಖೆಯ ಎಫ್‌ಸಿಆರ್‌ಎ ಖಾತೆಗೆ ಮಾತ್ರ ಬರಬೇಕು.

ಆಡಳಿತಾತ್ಮಕ ವೆಚ್ಚದ ಮಿತಿ: ವಿದೇಶಿ ದೇಣಿಗೆಯಲ್ಲಿ ಸಂಸ್ಥೆಯ ಆಡಳಿತಾತ್ಮಕ ಅಥವಾ ಅಧಿಕಾರಿಗಳ ವೆಚ್ಚಕ್ಕಾಗಿ ಬಳಸುವ ಮಿತಿಯನ್ನು ಶೇ. 50 ರಿಂದ ಶೇ. 20 ಕ್ಕೆ ಇಳಿಸಲಾಗಿದೆ.

ಮತ್ತಷ್ಟು ಓದಿ: ಎಫ್​ಸಿಆರ್​ಎ ತಿದ್ದುಪಡಿ ಮಸೂದೆ, ಸದ್ಯ ಭಾರತಕ್ಕೆ ಯಾಕೆ ಮುಖ್ಯ ಗೊತ್ತಾ? ಇಲ್ಲಿದೆ ವಿವಿಧ ಕಾರಣಗಳು

ವಿಪಕ್ಷಗಳು ಮತ್ತು ಚರ್ಚ್‌ಗಳು ವಿರೋಧಿಸುತ್ತಿರುವುದೇಕೆ?

ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಈ ಮಸೂದೆಯು ದಶಕಗಳಿಂದ ಬಡವರು ಹಾಗೂ ಅಂಚಿನಲ್ಲಿರುವ ಜನರಿಗೆ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿರುವ ಸಂಸ್ಥೆಗಳನ್ನು ನಶಿಸಿಹೋಗುವಂತೆ ಮಾಡುತ್ತದೆ ಮತ್ತು ಕಾರ್ಯಾಂಗಕ್ಕೆ ಅತಿಯಾದ ಅಧಿಕಾರ ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ: ಭಾರತೀಯ ಸಂವಿಧಾನದ ವಿಧಿ 19 (ಸ್ವಾತಂತ್ರ್ಯದ ಹಕ್ಕು) ಮತ್ತು ವಿಧಿ 26 (ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಹಕ್ಕು) ನೀಡುವ ರಕ್ಷಣೆಯನ್ನು ಈ ಮಸೂದೆ ಕಸಿದುಕೊಳ್ಳುತ್ತದೆ ಎಂದು ಮಿಜೋರಾಂ ಹಾಗೂ ಕೇರಳದ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಚರ್ಚ್ ಸಂಸ್ಥೆಗಳ ಆತಂಕ: ಕೇರಳ ಕ್ಯಾಥೋಲಿಕ್ ಬಿಷಪ್‌ಗಳ ಮಂಡಳಿ (KCBC) ಹಾಗೂ ಮಿಜೋರಾಂ ಚರ್ಚ್ ಒಕ್ಕೂಟಗಳು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದು, “ಈ ಕಠಿಣ ನಿಯಮಗಳಿಂದಾಗಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಉಚಿತ ಆಸ್ಪತ್ರೆಗಳು, ಶಾಲೆಗಳು ಮತ್ತು ಅನಾಥಾಶ್ರಮಗಳನ್ನು ನಡೆಸುವುದು ತೀವ್ರ ಕಷ್ಟಕರವಾಗಲಿದೆ” ಎಂದು ತಿಳಿಸಿವೆ.

ಕೇಂದ್ರ ಸರ್ಕಾರದ ಸಮರ್ಥನೆ ಏನು?

ಹಣದ ದುರುಪಯೋಗ ಮತ್ತು ಪಾರದರ್ಶಕತೆ: ವಿದೇಶಗಳಿಂದ ಬರುವ ಹಣವು ನಿರ್ದಿಷ್ಟವಾದ ಸಾಮಾಜಿಕ ಅಥವಾ ದತ್ತಿ ಕಾರ್ಯಗಳಿಗೇ ಬಳಕೆಯಾಗುತ್ತಿದೆಯೇ ಅಥವಾ ಹಣವನ್ನು ಬೇರೆ ಮಾರ್ಗಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ಈ ಬಿಗಿ ಕ್ರಮ ಅಗತ್ಯ.

ರಾಷ್ಟ್ರೀಯ ಭದ್ರತೆ: ವಿದೇಶಿ ಹಣವನ್ನು ಬಳಸಿಕೊಂಡು ಭಾರತದ ಸಾರ್ವಭೌಮತ್ವ, ರಾಷ್ಟ್ರೀಯ ಭದ್ರತೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಗಳನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಎಫ್​ಸಿಆರ್​ಎ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಸರ್ಕಾರವು ಪ್ರಸಿದ್ಧ ಎನ್‌ಜಿಒಗಳಾದ ‘ಆಕ್ಸ್‌ಫ್ಯಾಮ್ ಇಂಡಿಯಾ’ (Oxfam India), ‘ಅಮ್ನೆಸ್ಟಿ ಇಂಟರ್ನ್ಯಾಷನಲ್’ (Amnesty International) ಹಾಗೂ ‘ಸೆಂಟರ್ ಫಾರ್ ಪಾಲಿಸಿ ರಿಸರ್ಚ್’ (CPR) ನಂತಹ ಸಂಸ್ಥೆಗಳ ಎಫ್‌ಸಿಆರ್‌ಎ ಪರವಾನಗಿಯನ್ನು ರದ್ದುಗೊಳಿಸಿತ್ತು. ಪ್ರಸ್ತುತ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವು ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೆ ಈ ಮಸೂದೆಯನ್ನು ಯಥಾವತ್ತಾಗಿ ಮಂಡಿಸಿ ಅಂಗೀಕರಿಸಲು ನಿರ್ಧರಿಸಿದೆ. ಆದರೆ, ವಿಪಕ್ಷಗಳು ಸರ್ವಪಕ್ಷ ಸಭೆ ಕರೆದು ಸಮಗ್ರ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada News Live: ನೀಟ್ ಅಕ್ರಮಕ್ಕೆ ಪ್ರಧಾನಿ ಮೋದಿ ವಾರ್ನಿಂಗ್, ಶಾಸಕನಿಗೆ ಮೊಟ್ಟೆ ಎಸೆದ ಆರೋಪಿ ಬಂಧನ – Kannada News | TV9 Kannada Live Breaking News 23 July 2026 KPRC, Cabinet Expansion, Parliament Monsoon Session, Weather, Rain Latest Updates Online

LIVE NEWS & UPDATES

  • 23 Jul 2026 09:50 AM (IST)

    ‘ವಿದ್ಯಾರ್ಥಿಗಳ ರಕ್ಷಣೆಯೇ ನಮಗೆ ಮುಖ್ಯ’: ನೀಟ್ ಅಕ್ರಮದ ಕ್ರಿಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಮೋದಿ ಸೂಚನೆ

    ದೇಶದ ಯುವಜನತೆಯ ಭವಿಷ್ಯಕ್ಕಿಂತ ಪ್ರಮುಖವಾದದ್ದು ಯಾವುದೂ ಇಲ್ಲ. ನೀಟ್ ಪರೀಕ್ಷೆ ಅಕ್ರಮ ಎಸಗಿದ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಕ್ರಿಮಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಪ್ರಕರಣದ ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Breaking News Today Live Updates in Kannada: ದೇಶದ ಯುವಜನತೆಯ ಭವಿಷ್ಯಕ್ಕಿಂತ ಪ್ರಮುಖವಾದದ್ದು ಯಾವುದೂ ಇಲ್ಲ. ನೀಟ್ ಪರೀಕ್ಷೆ ಅಕ್ರಮ ಎಸಗಿದ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಕ್ರಿಮಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆ ಮೂಲದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಬಾಕ್ಸ್‌ನಲ್ಲಿ ತಂದಿದ್ದ ಮೊಟ್ಟೆಗಳನ್ನು ಎಸೆದಿದ್ದ ಆರೋಪಿ ಪುಣ್ಯೇಶ್‌ನನ್ನು ಶಿವಾಜಿನಗರ ಪೊಲೀಸರು ತಡರಾತ್ರಿ ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆಯ ಬೆನ್ನಲ್ಲೇ ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿ ಮತ್ತೆ ಸದ್ದು ಮಾಡುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಹಾಗೂ ಎಸ್‌ಟಿ ಸಮುದಾಯದ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಪ್ರಸ್ತಾಪವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ವಿಪಕ್ಷಗಳು ನಡೆಸುತ್ತಿರುವ ಸತತ ಗದ್ದಲ ಹಾಗೂ ಪ್ರತಿಭಟನೆಯನ್ನು ಖಂಡಿಸಿ ಇಂದು ಬೆಳಿಗ್ಗೆ ೧೦:೩೦ಕ್ಕೆ ಸಂಸತ್‌ನ ಮಕರ ದ್ವಾರದ ಬಳಿ ಎನ್‌ಡಿಎ ಸಂಸದರು ಪ್ರತಿಭಟನೆ ನಡೆಸಲಿದ್ದಾರೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಸಂಪೂರ್ಣ ವರದಿ ಇಲ್ಲಿದೆ.

Published On – Jul 23,2026 9:49 AM

Source link

Exit mobile version