ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ‘ಧುರಂಧರ್ 2’: ಅನ್‌ಕಟ್ ಜಾಗತಿಕ ವರ್ಷನ್‌ನಲ್ಲಿ ಏನೆಲ್ಲಾ ಇರಲಿದೆ? – Kannada News | Ranveer Singh Dhurandhar 2 Uncut International Version OTT Release on Netflix India

ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿರುವ ರಣವೀರ್ ಸಿಂಗ್ (Ranveer Singh) ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ ಸೂಪರ್ ಹಿಟ್ ಆ್ಯಕ್ಷನ್ ಸ್ಲೈ ಥ್ರಿಲ್ಲರ್ ‘ಧುರಂಧರ್: ದಿ ರಿವೆಂಜ್’ (Dhurandhar 2) ಇದೀಗ ಒಟಿಟಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಸಜ್ಜಾಗಿದೆ. ಜೂನ್ 19ರಿಂದ ಈ ಚಿತ್ರದ ಬಹುನಿರೀಕ್ಷಿತ ‘ಅನ್‌ಕಟ್ ಇಂಟರ್ನ್ಯಾಷನಲ್ ವರ್ಷನ್’ (Uncut International Version) ನೆಟ್‌ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಆಗಲಿದೆ.

ಕೆಲವೇ ವಾರಗಳ ಹಿಂದೆಯಷ್ಟೇ (ಜೂನ್ 4) ಈ ಸಿನಿಮಾ ‘ಜಿಯೋಹಾಟ್‌ಸ್ಟಾರ್’ ಮೂಲಕ ಡಿಜಿಟಲ್ ಪ್ರೀಮಿಯರ್ ಆಗಿತ್ತು. ಆದರೆ ಆ ಸಮಯದಲ್ಲಿ ಲೈವ್ ಬ್ರಾಡ್‌ಕಾಸ್ಟ್ ಫಾರ್ಮ್ಯಾಟ್ ಮತ್ತು ಕಳಪೆ ವಿಡಿಯೋ-ಆಡಿಯೋ ಕ್ವಾಲಿಟಿಯಿಂದಾಗಿ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದರು. ಆದರೆ ಈಗ ನೆಟ್‌ಫ್ಲಿಕ್ಸ್ ಮೂಲಕ ಯಾವುದೇ ಕಟ್‌ಗಳಿಲ್ಲದ, ಸಂಪೂರ್ಣ ಅನ್‌ಸೆನ್ಸಾರ್ಡ್ ವರ್ಷನ್ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗುತ್ತಿದೆ.

ಒಟಿಟಿಯಲ್ಲಿ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರಲಿದೆ. ಚಿತ್ರಮಂದಿರಗಳಲ್ಲಿ ಹಾಗೂ ಜಿಯೋಹಾಟ್‌ಸ್ಟಾರ್‌ನ ‘ರಾ ಆ್ಯಂಡ್ ಅನ್​ದೇಖಾ’ ವರ್ಷನ್‌ನಲ್ಲಿ ಸೆನ್ಸಾರ್ ಆಗಿದ್ದ ಹಲವು ರೋಚಕ ಸನ್ನಿವೇಶಗಳು ಈಗ ನೆಟ್‌ಫ್ಲಿಕ್ಸ್ ಇಂಟರ್ನ್ಯಾಷನಲ್ ಕಟ್‌ನಲ್ಲಿ ಮರಳಿ ಬರಲಿವೆ. ಆದ್ದರಿಂದ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರಮಂದಿರಗಳಲ್ಲಿ ಮ್ಯೂಟ್ ಮಾಡಲಾಗಿದ್ದ ಪದಗಳನ್ನು ಈ ವರ್ಷನ್‌ನಲ್ಲಿ ಯಾವುದೇ ಸೆನ್ಸಾರ್ ಇಲ್ಲದೆ ಹಾಗೇ ಉಳಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವರ್ಷನ್‌ನಲ್ಲಿ ಆ್ಯಕ್ಷನ್ ಸೀನ್‌ಗಳು ಹೆಚ್ಚು ಕ್ರೂರವಾಗಿರಲಿವೆ. ಸುತ್ತಿಗೆ ಫೈಟ್ ಹಾಗೂ ಕ್ಲೈಮ್ಯಾಕ್ಸ್‌ನ ಸಿಮೆಂಟ್ ಬ್ಲಾಕ್ ಫೈಟ್ ಸೀನ್‌ಗಳು ಥಿಯೇಟರ್‌ಗಿಂತಲೂ ಹೆಚ್ಚು ದೀರ್ಘವಾಗಿರಲಿವೆ. ಈ ರೀತಿಯ ಹಲವು ಅಚ್ಚರಿಗಳು ಪ್ರೇಕ್ಷಕರಿಗೆ ಸಿಗಲಿವೆ.

ಇದನ್ನೂ ಓದಿ: ‘ಪ್ರಧಾನಿ ಕಚೇರಿಯವರು ಹೀಗೆಲ್ಲ ಬರೆಯಲು ಸಾಧ್ಯವೇ’; ‘ಧುರಂಧರ್ 2’ ನಟನ ನೇರ ಪ್ರಶ್ನೆ

ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ 1,000 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗೇಶ್ವರ್ ಧಾಮ್​ಗೆ ತೆರಳಿದ್ದ ಭಕ್ತನಿಗೆ ಹೃದಯಾಘಾತ; ಕೊನೆಯಾಸೆ ಈಡೇರಿತೆಂದು ಕಣ್ಣೀರಿಟ್ಟ ಮಗಳು – Kannada News | 63 Year Old Mumbai Devotee Dies Of Heart Attack in Bageshwar Dham national news in kannada

ಮುಂಬೈ, ಜೂನ್ 18: ಮಧ್ಯಪ್ರದೇಶದ ಛತ್ತರ್‌ಪುರದ ಬಾಗೇಶ್ವರ್ ಧಾಮ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದಾಗ ತೀವ್ರ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ. ಸದಾ ಬಾಗೇಶ್ವರ್ ಧಾಮ್‌ನಲ್ಲೇ ಇರಲು ಬಯಸುತ್ತಿದ್ದ ಅವರ ಭಕ್ತಿಯನ್ನು ಗೌರವಿಸಿ, ಮುಂಬೈನಿಂದ ಬಂದ ಕುಟುಂಬಸ್ಥರು ಛತ್ತರ್‌ಪುರದಲ್ಲೇ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮೃತರನ್ನು ಮುಂಬೈನ ಐರೋಲಿ ನಿವಾಸಿ 63 ವರ್ಷದ ಸತೀಶ್ ಕಾಮದ್ ಎಂದು ಗುರುತಿಸಲಾಗಿದೆ. ಬಾಗೇಶ್ವರ್ ಧಾಮ್‌ನ ಪರಮ ಭಕ್ತರಾಗಿದ್ದ ಸತೀಶ್ ಜೂನ್ 1ರಂದು ಧಾಮ್‌ಗೆ ಆಗಮಿಸಿ, ದೇವಾಲಯದ ಸಮೀಪವಿರುವ ಲಾಡ್ಜ್‌ವೊಂದರಲ್ಲಿ ತಂಗಿದ್ದರು. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಜೂನ್ 15ರ ಸಂಜೆ ಸತೀಶ್ ಅವರು ದೇವಾಲಯದ ಆವರಣದಲ್ಲಿರುವ ‘ರಾಮ್ ದರ್ಬಾರ್’ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂದು ರಾತ್ರಿ ಅವರು ಉಳಿದುಕೊಂಡಿದ್ದ ಲಾಡ್ಜ್‌ಗೆ ಹಿಂತಿರುಗಿದಾಗ ಪಕ್ಕದ ರೂಂನಲ್ಲಿದ್ದ ಕೆಲವು ಯುವತಿಯರು ಅವರು ಕಾಣೆಯಾಗಿರುವ ಬಗ್ಗೆ ಮುಂಬೈನಲ್ಲಿದ್ದ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಸತೀಶ್ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ಪೊಲೀಸರು ಅದೇ ನಂಬರ್ ಬಳಸಿ ಕುಟುಂಬವನ್ನು ಸಂಪರ್ಕಿಸಿ ಸತೀಶ್ ಅವರ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ಈ ಸುದ್ದಿ ತಿಳಿಯುತ್ತಿದ್ದಂತೆ ಸತೀಶ್ ಅವರ ಪತ್ನಿ ಸ್ನೇಹಾ ಕಾಮದ್, ಮಗಳು ಕೃತಿಕಾ ಕಾಮದ್ ಮತ್ತು ಸಹೋದರ ದಿನೇಶ್ ಕಾಮದ್ ಮುಂಬೈನಿಂದ ವಿಮಾನದ ಮೂಲಕ ಛತ್ತರ್‌ಪುರಕ್ಕೆ ಧಾವಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಬುಧವಾರ ಛತ್ತರ್‌ಪುರದ ಭೈನ್ಸಾಸುರ್ ಮುಕ್ತಿ ಧಾಮ್‌ನಲ್ಲಿ ಸತೀಶ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಹೋದರ ದಿನೇಶ್ ಕಾಮದ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಅಂತ್ಯಸಂಸ್ಕಾರದ ನಂತರ ಮಾತನಾಡಿದ ಮಗಳು ಕೃತಿಕಾ, “ನನ್ನ ತಂದೆ ಬಾಗೇಶ್ವರ್ ಧಾಮ್‌ನ ಪರಮ ಭಕ್ತರಾಗಿದ್ದರು. ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಇಲ್ಲೇ ಕಳೆಯಬೇಕೆಂದು ಅವರು ಯಾವಾಗಲೂ ಬಯಸುತ್ತಿದ್ದರು. ಅವರ ಆಸೆಯಂತೆ ಅವರ ಸಂಸ್ಕಾರವನ್ನು ಇಲ್ಲೇ ನೆರವೇರಿಸಿದ್ದೇವೆ” ಎಂದು ಕಣ್ಣೀರಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್‌ ಚುನಾವಣೆಯಲ್ಲಿ ಭರ್ಜರಿ ಗೆಲುವು ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ತಿಪ್ಪಣ್ಣಪ್ಪ ಕಮಕನೂರು ಭಾವುಕ – Kannada News | Congress Candidate Thippanappa Kamakanur Turns Emotional After MLC Election Victory

ಬೆಂಗಳೂರು, ಜೂನ್​​ 18: ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ದಿಗ್ವಿಜಯ ಸಾಧಿಸಿದ್ದಾರೆ. ಈ ಪೈಕಿ ತಿಪ್ಪಣ್ಣಪ್ಪ ಕಮಕನೂರು ಕೂಡ ಒಬ್ಬರು. ಭರ್ಜರಿ ಗೆಲುವು ಸಾಧಿಸುವ ತಿಪ್ಪಣ್ಣಪ್ಪ ಕಮಕನೂರು ಮೂರನೇ ಬಾರಿಗೆ ವಿಧಾನ ಪರಿಷತ್​ಗೆ ಆಯ್ಕೆ ಆಗಿದ್ದಾರೆ. ಫಲಿತಾಂಶ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನಿರೀಕ್ಷೆಗೂ ಮೀರಿ ಮತಗಳು ಲಭಿಸಿರುವುದಕ್ಕೆ ಭಾವುಕರಾದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಕಟ್ಟಕಡೆಯ ಮನುಷ್ಯರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿಧಾನಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು. ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿರುವುದಾಗಿ ಹೇಳಿದ ಅವರು, 2028ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸುವುದಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಂಪೂರ್ಣ ತಲೆಕೆಳಗಾದ ಲೆಕ್ಕಾಚಾರ: ದಳಪತಿಗಳಿಗೆ ಭರ್ಜರಿ ಶಾಕ್​​ ಕೊಟ್ಟ ಪರಿಷತ್​​ ಚುನಾವಣೆ ಫಲಿತಾಂಶ – Kannada News | JDS Stunned in Karnataka MLC Polls as Internal Cross Voting and Failed Strategies Lead to Shock Defeat

ದಳಪತಿಗಳಿಗೆ ಭರ್ಜರಿ ಶಾಕ್​​ ಕೊಟ್ಟ ಪರಿಷತ್​​ ಚುನಾವಣೆ ಫಲಿತಾಂಶImage Credit source: PTI

ಬೆಂಗಳೂರು, ಜೂನ್​​ 18: ಅಖಾಡಕ್ಕೆ ಇಳಿಸಿದ್ದ ತನ್ನ ಏಕೈಕ ಅಭ್ಯರ್ಥಿಯನ್ನು ಶತಾಯ ಗತಾಯ ಗೆಲ್ಲಿಸಿಕೊಳ್ಳುವ ಪ್ರಯತ್ನದ ಹೊರತಾಗಿಯೂ ವಿಧಾನ ಪರಿಷತ್​​ ಚುನಾವಣೆಯಲ್ಲಿ ಜೆಡಿಎಸ್​​ ಪರಾಭವಗೊಂಡಿದೆ. ಜಾತ್ಯಾತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದ ಗೋವಿಂದರಾಜು ಅವರಿಗೆ ಕೇವಲ 14 ಮತಗಳು ಬಿದ್ದಿದ್ದು, ಫಲಿತಾಂಶ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಜೆಡಿಎಸ್​​ನ ಹದಿನೆಂಟು ಮತಗಳು ಗೋವಿಂದರಾಜುಗೆ ಬರುವ ನಿರೀಕ್ಷೆಯಲ್ಲಿ ಜೆಡಿಎಸ್ ನಾಯಕರಿದ್ದರು. ಹೀಗಿದ್ದರೂ ಒಂದರಿಂದ ಎರಡು ಅಡ್ಡ ಮತದಾನ ಆಗುವ ಶಂಕೆ ಹಿನ್ನೆಲೆ ಆ ಬಗ್ಗೆಯೂ ಲೆಕ್ಕಾಚಾರವನ್ನು ನಾಯಕರು ಹಾಕಿಕೊಂಡಿದ್ದರು. ಆದರೀಗ ನಿರೀಕ್ಷೆಗೂ ಮೀರಿ ಕ್ರಾಸ್​​ ವೋಟಿಂಗ್​​ ನಡೆದಿರೋದು ಪಕ್ಷದಲ್ಲಿಯೇ ಈಗ ಚರ್ಚೆ ಹುಟ್ಟುಹಾಕಿದೆ.

ಪರಿಣಾಮ ಬೀರಿದ ಬಿಜೆಪಿ ನಡೆ

62 ಶಾಸಕರ ಬಲ ಹೊಂದಿರುವ ಬಿಜೆಪಿಯಿಂದ ಕಣದಲ್ಲಿರುವ 2 ಅಭ್ಯರ್ಥಿಗಳಿಗೆ ತಲಾ 28ರಂತೆ 56 ಮತಗಳು ಅಗತ್ಯವಿತ್ತು. ಹೀಗಾಗಿ ಹೆಚ್ಚುವರಿಯಾಗಿ ಉಳಿಯಲಿರುವ 6 ಮತಗಳ ಮೇಲೆ ಜೆಡಿಎಸ್​​ ಕಣ್ಣಿಟ್ಟಿತ್ತು. ಪಕ್ಷದ ಅಭ್ಯರ್ಥಿಗೆ ತಮ್ಮ 18 ಮತಗಳು, ಬಿಜೆಪಿಯ 6 ಹೆಚ್ಚುವರಿ ಮತ, ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್​​ ಯತ್ನಾಳ್ ಬೆಂಬಲ ಸೇರಿ 26ರ ಗಡಿ ತಲುಪಬಹುದೆಂಬ ಲೆಕ್ಕಾಚಾರವನ್ನು ದಳಪತಿಗಳು ಹಾಕಿಕೊಂಡಿದ್ದರು. ಆದರೆ ಸ್ವಪಕ್ಷೀಯರ ಅಡ್ಡಮತದಾನದ ಜೊತೆ ತನ್ನ ಒಂದೊಂದು ಅಭ್ಯರ್ಥಿಗೆ 30 ಮತಗಳ ಚಲಾವಣೆ ಬಗ್ಗೆ ಕೊನೇ ಕ್ಷಣದಲ್ಲಿ ಬಿಜೆಪಿ ನಿರ್ಧರಿಸಿದ್ದು ಕೂಡ ಜೆಡಿಎಸ್​​ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ: ಪರಿಷತ್​​ ಚುನಾವಣೆ; ಕೊನೇ ಕ್ಷಣದಲ್ಲಿ ಕೈ ಹಿಡಿದ BJP ರಾಜ್ಯ ನಾಯಕರ ಕಾರ್ಯತಂತ್ರ, ತಪ್ಪಿದ ಭಾರೀ ಮುಖಭಂಗ

ಹೀಗಿದ್ದೂ ತನ್ನ ಹೆಚ್ಚುವರಿ ಮತಗಳನ್ನು ಬಿಜೆಪಿ ಜೆಡಿಎಸ್​​ಗೆ ಹಾಕಿಸಿತ್ತು. ಪಕ್ಷದ ಸೂಚನೆಯಂತೆ ಶಾಸಕ ದುರ್ಯೋಧನ ಐಹೊಳೆ, ಶಾಸಕ ಕೃಷ್ಣ ನಾಯ್ಕ್, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್​​ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಆದರೂ ಅಂತಿಮವಾಗಿ ಜೆಡಿಎಸ್​​ ಅಭ್ಯರ್ಥಿ ಗೋವಿಂದರಾಜು ಪರಾಭವಗೊಳ್ಳಬೇಕಾಯಿತು. ಜೆಡಿಎಸ್​​ ಮತ್ತು ಬಿಜೆಪಿ ಎರಡು ಪಕ್ಷಗಳಿಂದಲೂ ಕ್ರಾಸ್​​ ವೋಟಿಂಗ್​​ ಆಗಿರೋದು ಮೈತ್ರಿ ಪಕ್ಷಗಳಿಗೆ ಹೊಸ ಟೆನ್ಷನ್​​ ತಂದಿಟ್ಟಿದೆ. ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ನಾಯಕರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಿಡ್ನಿ ವೈಫಲ್ಯಕ್ಕೂ ಮುನ್ನ ದೇಹ ನೀಡುವ ಈ 5 ಪ್ರಮುಖ ಎಚ್ಚರಿಕೆ ಸಂಕೇತಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ! – Kannada News | Kidney Health Alert: Signs Your Kidneys May Be Failing

ಮೂತ್ರಪಿಂಡಗಳು (Kidneys) ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಿ, ವಿಷಕಾರಿ ಅಂಶಗಳು ಹಾಗೂ ಹೆಚ್ಚುವರಿ ದ್ರವವನ್ನು ಮೂತ್ರದ ಮೂಲಕ ಹೊರಹಾಕುವ ಪ್ರಮುಖ ಅಂಗಗಳಾಗಿವೆ. ಕಿಡ್ನಿಗಳ ಕಾರ್ಯಕ್ಷಮತೆ ಕುಂಠಿತವಾಗಲು ಆರಂಭವಾದಾಗ ಅದರ ಪರಿಣಾಮ ಇಡೀ ದೇಹದ ಮೇಲೆ ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಕೆಲವು ಲಕ್ಷಣಗಳನ್ನು ಗುರುತಿಸಿದರೆ ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ ಕಿಡ್ನಿ ವೈಫಲ್ಯಕ್ಕೂ ಮುನ್ನ ದೇಹ ನೀಡುವ ಎಚ್ಚರಿಕೆಯ ಸೂಚನೆಗಳು ಹೇಗಿರುತ್ತವೆ, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿರಂತರ ಆಯಾಸ ಮತ್ತು ದುರ್ಬಲತೆ

ಯಾವುದೇ ಹೆಚ್ಚಿನ ಶ್ರಮವಿಲ್ಲದೆ ದಿನವಿಡೀ ಆಯಾಸ, ಶಕ್ತಿ ಕುಂದುವುದು ಅಥವಾ ದೇಹ ಬಲಹೀನವಾಗಿರುವುದು ಕಿಡ್ನಿ ಸಮಸ್ಯೆಯ ಆರಂಭಿಕ ಸೂಚನೆಯಾಗಿರಬಹುದು. ಕಿಡ್ನಿಗಳು ರಕ್ತವನ್ನು ಸರಿಯಾಗಿ ಶುದ್ಧೀಕರಿಸದಿದ್ದರೆ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುತ್ತವೆ.

ಕೈ, ಕಾಲು ಮತ್ತು ಮುಖದಲ್ಲಿ ಊತ

ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಹೊರಹಾಕಲು ವಿಫಲವಾದಾಗ ದೇಹದಲ್ಲಿ ದ್ರವ ಸಂಗ್ರಹವಾಗುತ್ತದೆ. ಇದರಿಂದ ಪಾದಗಳು, ಕಾಲುಗಂಟುಗಳು, ಕೈಗಳು ಹಾಗೂ ಕಣ್ಣಿನ ಸುತ್ತಲಿನ ಭಾಗದಲ್ಲಿ ಊತ ಕಾಣಿಸಬಹುದು. ಬೆಳಿಗ್ಗೆ ಎದ್ದಾಗ ಕಣ್ಣುಗಳ ಸುತ್ತ ಊತ ಕಂಡುಬಂದರೆ ನಿರ್ಲಕ್ಷಿಸಬೇಡಿ.

ಮೂತ್ರವಿಸರ್ಜನೆಯಲ್ಲಿ ಬದಲಾವಣೆ

ಮೂತ್ರದ ಪ್ರಮಾಣ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ರಾತ್ರಿ ವೇಳೆ ಪದೇಪದೇ ಮೂತ್ರಕ್ಕೆ ಹೋಗಬೇಕಾಗುವುದು, ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳುವುದು ಅಥವಾ ಬಣ್ಣದಲ್ಲಿ ಬದಲಾವಣೆ ಉಂಟಾಗುವುದು ಕಿಡ್ನಿ ಸಮಸ್ಯೆಯ ಸೂಚನೆಗಳಾಗಿರಬಹುದು.

ಚರ್ಮ ಒಣಗುವುದು ಮತ್ತು ತುರಿಕೆ

ಕಿಡ್ನಿಗಳು ರಕ್ತದಲ್ಲಿನ ತ್ಯಾಜ್ಯಗಳನ್ನು ಸರಿಯಾಗಿ ಹೊರಹಾಕದಿದ್ದಾಗ ಚರ್ಮದ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ. ಚರ್ಮ ಒಣಗುವುದು, ತುರಿಕೆ ಅಥವಾ ಅಸಹಜ ಕಿರಿಕಿರಿ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಹಸಿವು ಕಡಿಮೆಯಾಗುವುದು ಮತ್ತು ವಾಕರಿಕೆ

ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಾಗ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀಳುತ್ತದೆ. ಇದರಿಂದ ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ ಅಥವಾ ಬಾಯಿಯಲ್ಲಿ ಕಹಿ ರುಚಿ ಕಾಣಿಸಬಹುದು.

ಯಾರಿಗೆ ಹೆಚ್ಚು ಅಪಾಯ?

ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ ಹಾಗೂ ಕುಟುಂಬದಲ್ಲಿ ಕಿಡ್ನಿ ರೋಗದ ಇತಿಹಾಸ ಇರುವವರಿಗೆ ಅಪಾಯ ಹೆಚ್ಚು. ಇಂತಹವರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಗಮನಿಸಿ: ಮೇಲಿನ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಪತ್ತೆಹಚ್ಚುವುದು ಕಿಡ್ನಿಗಳ ಆರೋಗ್ಯ ಕಾಪಾಡಲು ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ – Kannada News | Vaibhav Sooryavanshi: Srikkanth Hails 15 Year Old Prodigy as ‘God’s Son’, Warns Comparisons

ಭಾರತೀಯ ಕ್ರಿಕೆಟ್‌ನಲ್ಲಿ ಈಗ ಚರ್ಚೆಯಲ್ಲಿರುವ ಹೆಸರೆಂದರೆ ಅದು 15 ವರ್ಷದ ವೈಭವ್ ಸೂರ್ಯವಂಶಿ. ತನ್ನ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಅವರನ್ನು ಗುಣಗಾನ ಮಾಡದವರಿಲ್ಲ. ಇದೀಗ ಅಂತಹವರ ಸಾಲಿಗೆ ಭಾರತದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಸೇರಿದ್ದಾರೆ. ವೈಭವ್ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಶ್ರೀಕಾಂತ್, ‘ವಿಭಿನ್ನ ಯುಗಗಳ ಆಟಗಾರರನ್ನು ಹೋಲಿಸುವುದು ಸರಿಯಲ್ಲ. ದಯವಿಟ್ಟು ಸಚಿನ್ ಅವರನ್ನು ವೈಭವ್ ಜೊತೆ ಹೋಲಿಸಬೇಡಿ. ಸಚಿನ್ ಕ್ರಿಕೆಟ್ ದೇವರು. ಆ ದೇವರಿಗೆ ಯಾರನ್ನು ಹೋಲಿಸಲು ಸಾಧ್ಯವಿಲ್ಲ. ಆದರೆ ನಾನು ಈ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಯನ್ನು ನೋಡಿದಾಗ, ಅವನು ಆ ದೇವರ ಮಗನಂತೆ ಕಾಣುತ್ತಾನೆ.

ಐಪಿಎಲ್ ಮತ್ತು 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ದಾಖಲೆಗಳು ಅಸಾಧಾರಣವಾಗಿವೆ. ಈ ಎಡಗೈ ಬ್ಯಾಟ್ಸ್‌ಮನ್ ಮೈದಾನದಲ್ಲಿ ಶಾಟ್‌ಗಳನ್ನು ಆಡುವ ರೀತಿ ಅದ್ಭುತವಾಗಿದೆ. ವೈಭವ್ ಅವರ ಮಣಿಕಟ್ಟಿನ ವೇಗ, ಬ್ಯಾಟ್ ವೇಗ ಮತ್ತು ಬ್ಯಾಟ್ ಸ್ವಿಂಗ್ ಅದ್ಭುತವಾಗಿದೆ. ವೈಭವ್ ಅವರ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅವರು ಎಷ್ಟೇ ಭಯಾನಕ ಬೌಲರ್ ಬಂದರೂ ಕ್ರೀಸ್‌ನಲ್ಲಿ ತುಂಬಾ ಶಾಂತ ಮನಸ್ಥಿತಿಯೊಂದಿಗೆ ನಿಲ್ಲುತ್ತಾರೆ.

ಇನ್ನು ಇದೇ ವೇಳೆ ಐಪಿಎಲ್ 2026 ರ ಅರ್ಹತಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಅವರ ಇನ್ನಿಂಗ್ಸ್ ಅನ್ನು ಶೇಷವಾಗಿ ನೆನಪಿಸಿಕೊಂಡ ಶ್ರೀಕಾಂತ್, ‘ಆ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಒತ್ತಡದಲ್ಲಿದ್ದರೂ, 15 ವರ್ಷದ ವೈಭವ್ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಸಾಮಾನ್ಯವಾಗಿ ಇನ್ನಿಂಗ್ಸ್‌ನ ಮೊದಲ ಎಸೆತದಿಂದಲೇ ಔಟ್ ಆಗುವ ಅಭ್ಯಾಸ ಹೊಂದಿರುವ ವೈಭವ್, ಆ ಪಂದ್ಯದಲ್ಲಿ ತಂಡದ ಅಗತ್ಯಗಳಿಗಾಗಿ ಬಹಳ ತಾಳ್ಮೆಯಿಂದ ಆಡಿದರು.

ವೈಭವ್ ಸೂರ್ಯವಂಶಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವಿದೆ ಎಂದಿರುವ ಶ್ರೀಕಾಂತ್, ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಅವರ ಮೇಲೆ ಅನಗತ್ಯ ನಿರೀಕ್ಷೆಗಳನ್ನು ಹಾಕಬೇಡಿ ಮತ್ತು ಅವರನ್ನು ಇತರ ಆಟಗಾರರೊಂದಿಗೆ ಹೋಲಿಸುವ ಮೂಲಕ ಒತ್ತಡವನ್ನು ಹೆಚ್ಚಿಸಬೇಡಿ ಎಂದು ಸಲಹೆ ನೀಡಿದರು. ‘ವೈಭವ್ ಅವರನ್ನು ಯಾರೊಂದಿಗೂ ಹೋಲಿಸಬೇಡಿ. ಅವರು ಯಾವುದೇ ಒತ್ತಡವಿಲ್ಲದೆ ಸ್ವಾಭಾವಿಕವಾಗಿ ಬೆಳೆಯಲು ಮತ್ತು ಅವರು ಇಷ್ಟಪಡುವ ರೀತಿಯಲ್ಲಿ ಮುಕ್ತವಾಗಿ ಆಡಲು ನಾವು ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ಈ ಮಗು ದೇಶಕ್ಕೆ ಅನೇಕ ಯಶಸ್ಸನ್ನು ತರುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಬ್ಸೆಷನ್’ ಎಫೆಕ್ಟ್: ಹಾರರ್ ಸಿನಿಮಾ ಒಪ್ಪಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್ – Kannada News | Jacqueline Fernandez signs her first full fledged Horror Movie updates

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಿಗೆ ಹಾರರ್ ಮತ್ತು ಸಸ್ಪೆನ್ಸ್ ಸಿನಿಮಾಗಳ ಕ್ರೇಜ್ ಜೋರಾಗಿದೆ. ಹಾಲಿವುಡ್‌ನ ‘ಅಬ್ಸೆಷನ್’ (Obsession), ‘ಬ್ಯಾಕ್ರೂಮ್ಸ್’ ಚಿತ್ರಗಳಿಂದ ಹಿಡಿದು ಭಾರತದ ‘ಶೈತಾನ್’, ‘ಭ್ರಮಯುಗಂ’ ಮತ್ತು ಇತ್ತೀಚೆಗೆ ಬಿಡುಗಡೆಯಾದ ‘ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್’ ತನಕ ಹಾರರ್ ಚಿತ್ರಗಳು (Horror Movie) ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿವೆ. ಈ ಟ್ರೆಂಡ್ ನೋಡಿ ಈಗ ಸ್ಟಾರ್ ನಟ-ನಟಿಯರು ಕೂಡ ಹಾರರ್ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೂಡ ಮೊದಲ ಬಾರಿಗೆ ಪಕ್ಕಾ ಹಾರರ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ.

ಈ ಹಿಂದೆ ಜಾಕ್ವೆಲಿನ್ ಅವರು ‘ಭೂತ್ ಪೊಲೀಸ್’ ಚಿತ್ರದಲ್ಲಿ ನಟಿಸಿದ್ದರಾದರೂ, ಅದು ಹಾರರ್-ಕಾಮಿಡಿ ಕಥಾಹಂದರದ ಚಿತ್ರವಾಗಿತ್ತು. ಆದರೆ ಈಗ ಅವರು ಒಪ್ಪಿಕೊಂಡಿರುವುದು ಅವರ ವೃತ್ತಿಜೀವನದ ಮೊದಲ ಸಂಪೂರ್ಣ ಹಾರರ್ ಚಿತ್ರವಾಗಿದೆ. ಬಹಳ ದಿನಗಳಿಂದ ಒಳ್ಳೆಯ ಹಾರರ್ ಕಥೆಗಾಗಿ ಹುಡುಕುತ್ತಿದ್ದ ಜಾಕ್ವೆಲಿನ್‌ಗೆ ಕೊನೆಗೂ ಕಥೆಯೊಂದು ಇಷ್ಟವಾಗಿದೆ. ಈ ಚಿತ್ರದಲ್ಲಿ ಕೇವಲ ಹಾರರ್ ಮಾತ್ರವಲ್ಲದೆ, ಭಾವನಾತ್ಮಕ ಸನ್ನಿವೇಶಗಳು ಮತ್ತು ಅದ್ಭುತವಾದ ಸಂಗೀತವೂ ಇರಲಿದ್ದು, ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ.

ಖ್ಯಾತಿ ಮದಾನ್ ಅವರ ‘ನಾಟ್ ಔಟ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಜಾಕ್ವೆಲಿನ್ ಮುಖ್ಯ ಪಾತ್ರದಲ್ಲಿದ್ದರೆ, ಅವರಿಗೆ ಜೋಡಿಯಾಗಿ ಇಬ್ಬರು ನಾಯಕ ನಟರು ಫೈನಲ್ ಆಗಿದ್ದಾರೆ. ಆದರೆ ಚಿತ್ರದ ಶೀರ್ಷಿಕೆ, ನಿರ್ದೇಶಕರು ಮತ್ತು ಇತರ ನಟರ ವಿವರಗಳನ್ನು ಸದ್ಯಕ್ಕೆ ಗುಟ್ಟಾಗಿಡಲಾಗಿದೆ.

ಮೂಲಗಳ ಪ್ರಕಾರ, ಈ ಚಿತ್ರದ ಪ್ರಮೋಷನಲ್ ಸಾಂಗ್ ಮತ್ತು ಟೀಸರ್ ಶೂಟಿಂಗ್ ಈಗಾಗಲೇ ಮುಗಿದಿದೆ. ಪ್ರಸ್ತುತ ಚಿತ್ರದ ನಟರು ವರ್ಕ್‌ಶಾಪ್‌ಗಳಲ್ಲಿ ಬ್ಯುಸಿಯಾಗಿದ್ದು, ಜೂನ್ ತಿಂಗಳ ಕೊನೆಯ ವಾರದಲ್ಲಿ ಸಿನಿಮಾದ ಚಿತ್ರೀಕರಣ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತ ಅನೌನ್ಸ್‌ಮೆಂಟ್ ಹೊರಬೀಳಲಿದೆ.

ಇದನ್ನೂ ಓದಿ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಅಪ್ರೂವರ್ ಆಗುವ ಮನವಿಗೆ ಇಡಿ ತೀವ್ರ ವಿರೋಧ

ಸದ್ಯಕ್ಕಂತೂ ಜಾಕ್ವೆಲಿನ್ ಫರ್ನಾಂಡಿಸ್ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ‘ಹೌಸ್‌ಫುಲ್ 5’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸದ್ಯ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ಮಲ್ಟಿಸ್ಟಾರರ್ ಕಾಮಿಡಿ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಜೂನ್ 26ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುಲಭವಾಗಿ ಗೆಲ್ಲಬೇಕಿದ್ದ ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ – Kannada News | Karnataka MLC Election: Why Has Victory Become Difficult for BJP Candidates; Here’s What Raghu Kautilya Says

ಬೆಂಗಳೂರು, ಜೂನ್​​ 18: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಜಯಗಳಿಸಿದ್ದು, ಈ ಗೆಲುವನ್ನು ಭಾರತೀಯ ಜನತಾ ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರಿಗೆ ಸಮರ್ಪಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ ಬೆನ್ನಲ್ಲೆ ಟಿವಿ9 ಜೊತೆಗೆ ಮಾತನಾಡಿದ ಅವರು, ತಮ್ಮ ಗೆಲುವಿಗೆ ಪಕ್ಷದ ಹಿರಿಯ ನಾಯಕರಾದ ವಿಜಯೇಂದ್ರ, ಯಡಿಯೂರಪ್ಪ, ನಿತಿನ್ ರಬ್ಬೇನ್, ಸಂತೋಷ್ ಜಿ, ರಾಧಾಮೋಹನ್ ಮತ್ತು ಕೋರ್ ಕಮಿಟಿ ಸದಸ್ಯರು ಹಾಗೂ ತಮ್ಮನ್ನು ಬೆಂಬಲಿಸಿದ ಎಲ್ಲ ಶಾಸಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು. ಸುಲಭವಾಗಿ ಗೆಲ್ಲಬೇಕಿದ್ದ ಬಿಜೆಪಿ ಅಭ್ಯರ್ಥಿಗಳು ಎಲಿಮಿನೇಷನ್ ರೌಂಡ್‌ನಲ್ಲಿ ಗೆಲ್ಲುವ ಪರಿಸ್ಥಿತಿ ಬಂದಿದ್ದ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಆದರೆ ಅದನ್ನೆಲ್ಲಾ ಈಗ ವರಿಷ್ಠರು ನೋಡುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Source link

ಭಯೋತ್ಪಾದನೆ, ಸೈಬರ್ ಅಪರಾಧಕ್ಕೆ ಟೆಲಿಗ್ರಾಮ್ ಆ್ಯಪ್ ಬಳಕೆ; ದೆಹಲಿ ಹೈಕೋರ್ಟ್ ಮುಂದೆ ಕೇಂದ್ರ ಸರ್ಕಾರ ಆರೋಪ – Kannada News | Indian Government Says Telegram Exploited For Terrorism, Cybercrime Delhi High Court Reserves Order

ನವದೆಹಲಿ, ಜೂನ್ 18: ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಟೆಲಿಗ್ರಾಮ್ (Telegram) ಅನ್ನು ಭಯೋತ್ಪಾದನೆ, ಸೈಬರ್ ಅಪರಾಧ, ಮಾದಕ ದ್ರವ್ಯ ಕಳ್ಳಸಾಗಣೆ, ಮಕ್ಕಳ ಶೋಷಣೆ ಮತ್ತು ಆರ್ಥಿಕ ವಂಚನೆ ಸೇರಿದಂತೆ ವ್ಯಾಪಕ ಶ್ರೇಣಿಯ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಇಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಟೆಲಿಗ್ರಾಮ್‌ ಆ್ಯಪ್​ನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ವೇಳೆ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ವಿವರವಾದ ಆಕ್ಷೇಪಣೆ ಸಲ್ಲಿಸಿತು.

ಟೆಲಿಗ್ರಾಮ್‌ನ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಶನ್ ಮತ್ತು ಅನಾಮಧೇಯತೆ ವೈಶಿಷ್ಟ್ಯಗಳನ್ನು ಬಳಸಿಕೊಂಡು ಉಗ್ರಗಾಮಿ ಸಂಘಟನೆಗಳು ಯುವಕರನ್ನು ನೇಮಕಾತಿ ಮಾಡಿಕೊಳ್ಳಲು, ಪ್ರಚಾರ ಮಾಡಲು ಮತ್ತು ಸಂಚು ರೂಪಿಸಲು ಮುಕ್ತವಾಗಿ ಬಳಸುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮತ್ತು ದೇಶೀಯ ಸೈಬರ್ ವಂಚನೆಗಳು, ಹ್ಯಾಕಿಂಗ್ ಪರಿಕರಗಳ ಮಾರಾಟ, ಸೋರಿಕೆಯಾದ ವೈಯಕ್ತಿಕ ಡೇಟಾ ಮಾರಾಟ ಹಾಗೂ ನಕಲಿ ಹೂಡಿಕೆ ದಂಧೆಗಳು ಟೆಲಿಗ್ರಾಮ್ ಚಾನಲ್‌ಗಳ ಮೂಲಕವೇ ರಾಜಾರೋಷವಾಗಿ ನಡೆಯುತ್ತಿವೆ ಎಂದು ಹೇಳಿದೆ.

ಇದನ್ನೂ ಓದಿ: Telegram Ban: ಭಾರತದಲ್ಲಿ ಟೆಲಿಗ್ರಾಮ್​ಗೆ ತಾತ್ಕಾಲಿಕ ನಿಷೇಧ: ನೀಟ್ ಮರು ಪರೀಕ್ಷೆಗೂ ಮುನ್ನ ಕೇಂದ್ರದ ಕ್ರಮ

ದೇಶದ ಕಾನೂನು ಜಾರಿ ಸಂಸ್ಥೆಗಳು ಅಥವಾ ಪೊಲೀಸರು ಅಪರಾಧ ಪ್ರಕರಣಗಳ ತನಿಖೆಗಾಗಿ ಮಾಹಿತಿ ಕೇಳಿದಾಗ, ಟೆಲಿಗ್ರಾಮ್ ಸಂಸ್ಥೆಯು ಬಳಕೆದಾರರ ಗೌಪ್ಯತೆಯ ನೆಪ ಒಡ್ಡಿ ಸೂಕ್ತ ವಿವರಗಳನ್ನು ನೀಡದೆ ತನಿಖೆಗೆ ಅಸಹಕಾರ ತೋರುತ್ತಿದೆ ಎಂದು ಸರ್ಕಾರ ಆರೋಪಿಸಿದೆ. ಕೇಂದ್ರ ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ಟೆಲಿಗ್ರಾಮ್ ಅನ್ನು ಇಂಟರ್ನೆಟ್‌ನ ಅತ್ಯಂತ ಕರಾಳ ಜಗತ್ತಾದ ‘ಡಾರ್ಕ್ ವೆಬ್’ಗೆ ಹೋಲಿಸಿದೆ. ಡಾರ್ಕ್ ವೆಬ್‌ನಲ್ಲಿ ನಡೆಯುವ ಮಾದಕ ದ್ರವ್ಯಗಳ ಮಾರಾಟ, ಅಶ್ಲೀಲ ವಿಡಿಯೋಗಳ ದಂಧೆ ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಂತಹ ಕೃತ್ಯಗಳು ಈಗ ಅತ್ಯಂತ ಸುಲಭವಾಗಿ ಟೆಲಿಗ್ರಾಮ್‌ನ ಸೀಕ್ರೆಟ್ ಚಾಟ್‌ಗಳು ಮತ್ತು ಚಾನಲ್‌ಗಳ ಮೂಲಕ ಸಾಮಾನ್ಯ ಜನರಿಗೂ ಲಭ್ಯವಾಗುತ್ತಿವೆ. ಇದು ದೇಶದ ಸಾರ್ವಭೌಮತ್ವ ಮತ್ತು ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

“ಟೆಲಿಗ್ರಾಮ್ ಅಪರಾಧಿಗಳನ್ನು ಪರಸ್ಪರ ಜೋಡಿಸುವ ಹೊಸ ಡಾರ್ಕ್ ವೆಬ್ ಆಗಿ ಮಾರ್ಪಟ್ಟಿದೆ. ಅಪರಾಧಿಗಳು ತಮ್ಮ ಚಾನೆಲ್‌ಗಳಲ್ಲಿ ಡೀಪ್ ವೆಬ್ ಲಿಂಕ್‌ಗಳ ಮೂಲಕ ಡಾರ್ಕ್ ವೆಬ್ ಫೋರಮ್‌ಗಳಿಗೆ ಸಂಪರ್ಕಿಸುವ ಲಿಂಕ್‌ಗಳನ್ನು ಪೋಸ್ಟ್ ಮಾಡಲು ಟೆಲಿಗ್ರಾಮ್ ಅನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ, ಇದರಿಂದಾಗಿ ಅಧಿಕಾರಿಗಳಿಗೆ ಅಪರಾಧಿಗಳನ್ನು ಪತ್ತೆಹಚ್ಚುವುದು ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: ಟೆಲಿಗ್ರಾಮ್ ತಾತ್ಕಾಲಿಕ ನಿಷೇಧ: ಕೇಂದ್ರದ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಂಸ್ಥೆ

ಕೇಂದ್ರ ಸರ್ಕಾರದ ಪರ ವಾದ ಮತ್ತು ಅರ್ಜಿದಾರರ ಆಹವಾಲುಗಳನ್ನು ಆಲಿಸಿದ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಟೆಲಿಗ್ರಾಮ್‌ನಂತಹ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಲು ಭಾರತದಲ್ಲಿ ಪ್ರಸ್ತುತ ಇರುವ ಐಟಿ ಕಾಯ್ದೆಗಳು ಮತ್ತು ಮುಂಬರುವ ಹೊಸ ನಿಯಮಾವಳಿಗಳ ವ್ಯಾಪ್ತಿಯನ್ನು ಪರಿಶೀಲಿಸಿದ ನ್ಯಾಯಾಲಯವು, ಈ ವಿಷಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿದೆ.

ಕೇಂದ್ರ ಸರ್ಕಾರದ ಈ ಕಠಿಣ ನಿಲುವಿನಿಂದಾಗಿ ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್‌ನ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಒಂದು ವೇಳೆ ಹೈಕೋರ್ಟ್ ಸರ್ಕಾರದ ವಾದವನ್ನು ಪುರಸ್ಕರಿಸಿ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆದೇಶಿಸಿದರೆ, ಟೆಲಿಗ್ರಾಮ್ ಭಾರತದಲ್ಲಿ ತನ್ನ ಕಾರ್ಯನಿರ್ವಹಣಾ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಅಥವಾ ತೀವ್ರ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಐಟಿ ತಜ್ಞರು ವಿಶ್ಲೇಷಿಸಿದ್ದಾರೆ.

ಜೂನ್ 21ರಂದು ನಡೆಯಲಿರುವ ನೀಟ್-ಯುಜಿ 2026 (NEET-UG 2026) ಮರು-ಪರೀಕ್ಷೆಯ ಮುನ್ನ ಭಾರತದಲ್ಲಿ ಟೆಲಿಗ್ರಾಮ್‌ನ ಕಾರ್ಯನಿರ್ವಹಣೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಸರ್ಕಾರ ಕೈಗೊಂಡಿದ್ದ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಯುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಈ ಕಳವಳವನ್ನು ವ್ಯಕ್ತಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್​​ ಚುನಾವಣೆ: ಕೊನೇ ಕ್ಷಣದಲ್ಲಿ ಕೈ ಹಿಡಿದ BJP ರಾಜ್ಯ ನಾಯಕರ ಕಾರ್ಯತಂತ್ರ; ತಪ್ಪಿದ ಭಾರೀ ಮುಖಭಂಗ – Kannada News | Karnataka MLC Polls: Sharp Last Minute Strategy Saves BJP from Major Embarrassment; Wins Both Seats

ವಿಪಕ್ಷ ನಾಯಕ ಆರ್​​. ಅಶೋಕ್​​Image Credit source: Tv9 Kannada

ಬೆಂಗಳೂರು, ಜೂನ್​​ 18: ವಿಧಾನ ಪರಿಷತ್​​ನ 7 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ 5 ​​ಮತ್ತು 2 ಸ್ಥಾನಗಳಲ್ಲಿ ವಿಪಕ್ಷ ಬಿಜೆಪಿ ಗೆಲುವು ದಾಖಲಿಸಿದೆ. ಜೆಡಿಎಸ್​​ ಅಭ್ಯರ್ಥಿಗೆ ಸೋಲಾಗಿದೆ. ಭಾರಿ ಕ್ರಾಸ್​​ ವೋಟಿಂಗ್​​ಗೆ ಎಲೆಕ್ಷನ್​​ ಸಾಕ್ಷಿಯಾಗಿದ್ದು 11 ಮತಗಳನ್ನು ಕಾಂಗ್ರೆಸ್​​ ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಆ ಮೂಲಕ ವಿಪಕ್ಷಗಳಿಗೆ ಭರ್ಜರಿ ಚೆಕ್​​ಮೇಟ್​​ ಕೊಟ್ಟಿದೆ.

ಬಿಜೆಪಿ ಕೈ ಹಿಡಿದ ರಾಜ್ಯ ನಾಯಕರ ಕಾರ್ಯತಂತ್ರ

ಹೌದು, ಚುನಾವಣಾ ಅಖಾಡದಲ್ಲಿದ್ದ ಬಿಜೆಪಿ ಅಭ್ಯರ್ಥಿ ಆರ್.ರಘುಗೆ 29 ಮತಗಳು ಸಿಕ್ಕಿದ್ದರೆ, ಲಿಂಗರಾಜು ಪಾಟೀಲ್​ಗೆ 27 ಮತಗಳು ಬಿದ್ದಿವೆ. ಈ ಪೈಕಿ ಆರ್.ರಘುಗೆ ಚಲಾವಣೆಯಾಗಿದ್ದ ಒಂದು ಮತ ಅಸಿಂಧುಗೊಂಡಿದೆ. ಪ್ರತಿ ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ ಲಿಂಗರಾಜ ಪಾಟೀಲ್​ಗೆ ಕೇವಲ 27 ಮತಗಳು ಸಿಕ್ಕಿದ್ದವು. ಆದರೆ ಜೆಡಿಎಸ್​ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆ ಎಲಿಮಿನೇಷನ್ ರೌಂಡ್​ನಲ್ಲಿ ಲಿಂಗರಾಜ್ ಪಾಟೀಲ್​ಗೆ ಜಯ ಸಿಕ್ಕಿದೆ. ಇಬ್ಬರೂ ಅಭ್ಯರ್ಥಿಗಳ ಗೆಲುವಿಗೆ ಕೊನೆಯ ಕ್ಷಣದಲ್ಲಿ ಬಿಜೆಪಿ ರಾಜ್ಯ ನಾಯಕರ ಕಾರ್ಯತಂತ್ರ ಕೈ ಹಿಡಿದಿದೆ ಎನ್ನಲಾಗಿದೆ.

ಇದನ್ನೂ ಓದಿ: ಪರಿಷತ್​​ ಚುನಾವಣೆ ಫಲಿತಾಂಶ; ಕಾಂಗ್ರೆಸ್​​ನ​​ ಐವರು, ಬಿಜೆಪಿಯ ಇಬ್ಬರ ಗೆಲುವು, ಸೋಲುಂಡ ಜೆಡಿಎಸ್​​ನ ಗೋವಿಂದರಾಜು

ಬಿಜೆಪಿ ಅಭ್ಯರ್ಥಿಗಳಿಗೆ ತಲಾ 28 ಮತಗಳನ್ನು ಹಾಕಿಸುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಇಂದು ಬೆಳಗ್ಗೆ 30 ಮತಗಳನ್ನು ಹಾಕಿಸಲೇಬೇಕು ಎಂದು ವಿಪಕ್ಷ ನಾಯಕ ಅಶೋಕ್ ಪಟ್ಟುಹಿಡಿದಿದ್ದರು. ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯಗೆ ತಲಾ 2 ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲಾಗಿದ್ದು, ಹೀಗಾಗಿ ಕೊನೆಯ ಕ್ಷಣದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ ತಪ್ಪಿದೆ.

‘ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ’

ಇನ್ನು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​​. ಅಶೋಕ್​​, ನಮ್ಮ ಮೂರು ಮತಗಳು ಕ್ರಾಸ್​ ಆಗಿದೆ ಅಂತಾ ಮಾಹಿತಿ ಬಂದಿದೆ. ಯಾವ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ. ಮುಂದೆ ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಆರ್​.ರಘು ಅವರಿಗೆ ಕೊಟ್ಟಿದ್ದ ಒಂದು ಮತ ಅಸಿಂಧು ಆಗಿದೆ. ಲಿಂಗರಾಜ್​ ಪಾಟೀಲ್​ಗೆ ನಿಗದಿ ಮಾಡಿದ 3 ಮತಗಳು ಮಿಸ್ ಆಗಿದೆ. ನಾಲ್ಕು ಮತಗಳನ್ನು ಜೆಡಿಎಸ್​ಗೆ ಕೊಟ್ಟಿದ್ದೆವು. ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:02 pm, Thu, 18 June 26

Source link

Exit mobile version