ಚೆನ್ನೈ, (ಜೂನ್ 05): ಕಡೆಗೂ ಸಿಂಗಂ ಖ್ಯಾತಿಯ ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ನೀಡಿರುವ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹಗ್ಗ-ಜಗ್ಗಾಟ ಅಂತ್ಯಗೊಂಡಿದೆ. ಆದರೆ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಂತೇ, ಬಿಜೆಪಿ ನಾಯಕರು ಭಿನ್ನ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. “ಅಣ್ಣಾಮಲೈ ಹೊರಹೋಗುವುದರಿಂದ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ರಾಜೀನಾಮೆ ಅಂಗೀಕರಿಸುತ್ತಿದ್ದಂತೆಯೇ ದೆಹಲಿಯಿಂದ ಚೆನ್ನೈಗೆ ಆಗಮಿಸಿದ ಅಣ್ಣಾಮಲೈ ಭರ್ಜರಿ ಸ್ವಾಗತ ಸಿಕ್ಕಿದೆ. ಬಿಜೆಪಿಗೆ ರಾಜೀನಾಮೆ ನೀಡಿದ್ದರಿಂದ ಸಂತಸಗೊಂಡಿರುವ ಬೆಂಬಲಿಗರು ಹಾಗೂ ಅಭಿಮಾನಿಗಳು ಅಣ್ಣಾಮಲೈ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಬೆಂಗಳೂರು, ಜೂನ್ 05: ಶಕ್ತಿ ಯೋಜನೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಪಡುತ್ತಿರುವ ಪ್ರಯಾಣಿಕರ ಕಷ್ಟಕ್ಕೆ ಮುಕ್ತಿ ಹಾಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC)ನಮ್ಮ ಮೆಟ್ರೋ ಮಾದರಿಯಲ್ಲೇ ಆನ್‌ಲೈನ್ ಕ್ಯೂಆರ್ (QR) ಟಿಕೆಟ್ ಖರೀದಿಸುವ ಹೊಸ ಪ್ಲ್ಯಾನ್ ಜಾರಿಗೆ ಮುಂದಾಗಿದೆ. ಇದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯಾಂಶಗಳು
ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿಯಲ್ಲೂ ಆನ್‌ಲೈನ್ ಟಿಕೆಟ್ ಖರೀದಿಸಲು ಅವಕಾಶ
ಬಿಎಂಟಿಸಿ ಬಸ್ ಹತ್ತುವ ಮುನ್ನವೇ ಮೊಬೈಲ್ ಮೂಲಕ ಕ್ಯೂಆರ್ ಟಿಕೆಟ್ ಬುಕಿಂಗ್
ಕ್ಯಾಶ್‌ಲೆಸ್ ಹಾಗೂ ಟಿಕೆಟ್‌ಲೆಸ್ ಪ್ರಯಾಣದತ್ತ ಹೆಜ್ಜೆ ಇಟ್ಟ ಬಿಎಂಟಿಸಿ
ಮೆಟ್ರೋ ಮಾದರಿಯಲ್ಲಿ ಆನ್ಲೈನ್ನಲ್ಲಿ ಟಿಕೆಟ್: ಪ್ರಯಾಣಿಕರು ಸಂತಸ
ಬಿಎಂಟಿಸಿಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೆಚ್ಚಿನ ಜನಸಂದಣಿ ಹಿನ್ನೆಲೆ ಟಿಕೆಟ್ ಖರೀದಿ ಮಾಡಲು ತುಂಬಾ ಕಷ್ಟ ಆಗುತ್ತದೆ. ಕೆಲವೊಮ್ಮೆ ಟಿಕೆಟ್ ಖರೀದಿಸಲು ಆಗದೆ ಟಿಕೆಟ್ ಚೆಕ್ಕಿಂಗ್ ವೇಳೆ ಸಿಕ್ಕಿಬಿದ್ದು ದಂಡ ಕಟ್ಟಿರುವ ಉದಾಹರಣೆಗಳಿವೆ. ಮತ್ತೊಂದೆಡೆ ಪ್ರಯಾಣಿಕರು ನೀಡಿದ ಹಣವನ್ನು ಕೆಲ ಕಿಲಾಡಿ ಕಂಡಕ್ಟರ್ಗಳು ತಮ್ಮ ಯುಪಿಐ ಸ್ಕ್ಯಾನರ್ಗಳಿಗೆ ಹಾಕಿಸಿಕೊಂಡಿರುವುದು ಇದೆ. ಇದಕೆಲ್ಲಾ ಬ್ರೇಕ್ ಹಾಕಲು ಇದೀಗ ಬಿಎಂಟಿಸಿ ಮುಂದಾಗಿದ್ದು, ನಮ್ಮ ಮೆಟ್ರೋ ಮಾದರಿಯಲ್ಲಿ ಇನ್ಮುಂದೆ ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಿ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಸಂಪೂರ್ಣ ಕ್ಯಾಶ್ ಲೆಸ್, ಟಿಕೆಟ್ ಲೆಸ್ ಆಗಲು ಬಿಎಂಟಿಸಿ ಮುಂದಾಗಿದ್ದು, ಸದ್ಯದಲ್ಲೇ ಬಿಎಂಟಿಸಿಯಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಈಗಾಗಲೇ ಶೇ 50% ರಷ್ಟು ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡುವ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.
ಸುಮಾರು 20 ಲಕ್ಷದಷ್ಟು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದರೆ, ಉಳಿದ ಪುರುಷ ಪ್ರಯಾಣಿಕರು ಹಣವನ್ನು ಕೊಟ್ಟು ಪ್ರಯಾಣ ಮಾಡುತ್ತಿದ್ದಾರೆ. ಈಗಾಗಲೇ ಇದಕ್ಕಾಗಿ 11 ಸಾವಿರ ಇಟಿಎಂ ಮೆಷಿನ್ಗಳನ್ನು ಖರೀದಿ ಮಾಡಲಾಗಿದೆ. ಇದರ ಜೊತೆಗೆ ಬಿಎಂಟಿಸಿ ಬಸ್ನಲ್ಲಿ ಎನ್ಎಂಸಿ ಕಾರ್ಡ್ ಮೂಲಕ ಪ್ರಯಾಣ ಮಾಡಲು ಅವಕಾಶ ನೀಡಲಾಗ್ತಿದೆ. ಅಂದರೆ ಎನ್ಸಿಎಂಸಿ ಕಾರ್ಡ್ ಮೂಲಕ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಬಸ್ನಲ್ಲೂ ಪ್ರಯಾಣ ಮಾಡುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್ ಔಷಧಿಗಳ ಬಳಕೆ ಬಹಳ ಹೆಚ್ಚಾಗಿದೆ. ಜ್ವರ, ಗಂಟಲು ನೋವು, ಸೋಂಕುಗಳಂತಹ ಸಣ್ಣ ಸಮಸ್ಯೆಗಳಿಗೂ ಕೆಲವರು ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್ (Antibiotics) ತೆಗೆದುಕೊಳ್ಳುತ್ತಾರೆ. ಆದರೆ, ಈ ಔಷಧಿಗಳನ್ನು ಅತಿಯಾಗಿ ಅಥವಾ ಸರಿಯಾದ ರೀತಿಯಲ್ಲಿ ಬಳಸದಿರುವುದು ಕರುಳಿನ ಆರೋಗ್ಯದ (Gut Health) ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಸರಿಯಾದ ರೀತಿಯಲ್ಲಿ ವೈದ್ಯರ ಸಲಹೆಯಂತೆ ಬಳಸಿದರೆ ಅವು ಪರಿಣಾಮಕಾರಿ ಔಷಧಿಗಳಾಗಿವೆ. ಆದರೆ, ಅಗತ್ಯವಿಲ್ಲದೇ ಅಥವಾ ನಿರಂತರವಾಗಿ ಆಂಟಿಬಯೋಟಿಕ್ ಸೇವಿಸುವುದರಿಂದ ದೇಹದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಮೇಲೂ ಪರಿಣಾಮ ಬೀಳಬಹುದು. ಹಾಗಾದರೆ ಆಂಟಿಬಯೋಟಿಕ್‌ಗಳು ಕರುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಈ ರೀತಿ ಸಮಸ್ಯೆಗಳನ್ನು ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನಮ್ಮ ಕರುಳಿನಲ್ಲಿ ಲಕ್ಷಾಂತರ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ಆಹಾರ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ದೇಹದ ಸಾಮಾನ್ಯ ಕಾರ್ಯಗಳಿಗೆ ಸಹಾಯ ಮಾಡುತ್ತವೆ. ಆಂಟಿಬಯೋಟಿಕ್‌ಗಳ ಅತಿಯಾದ ಬಳಕೆ ಈ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಹಾಳುಮಾಡಬಹುದು. ಇದನ್ನು “ಇಂಟೆಸ್ಟೈನಲ್ ಡಿಸ್ಬಯೋಸಿಸ್” ಎಂದು ಕರೆಯಲಾಗುತ್ತದೆ.
ಆಂಟಿಬಯೋಟಿಕ್‌ಗಳು ಕರುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ತಜ್ಞರ ಪ್ರಕಾರ, ಆಂಟಿಬಯೋಟಿಕ್‌ಗಳ ಕೆಲಸ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಇವು ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ಹಾನಿಗೊಳಿಸಬಹುದು. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅತಿಸಾರ, ಮಲಬದ್ಧತೆ ಮತ್ತು ಹೊಟ್ಟೆ ಅಸಹಜತೆ ಕಾಣಿಸಬಹುದು. ಪ್ರತಿ ವ್ಯಕ್ತಿಯ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿಯೇ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್ ಸೇವನೆ ಮಾಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಯಾವ ರೀತಿ ಮುನ್ನೆಚ್ಚರಿಕೆ ಅಗತ್ಯ?
ಆಂಟಿಬಯೋಟಿಕ್ ಔಷಧಿಗಳನ್ನು ವೈದ್ಯರ ಸಲಹೆಯಂತೆ ಮಾತ್ರ ತೆಗೆದುಕೊಳ್ಳಬೇಕು. ಔಷಧಿಯ ಪೂರ್ಣ ಕೋರ್ಸ್ ಅನ್ನು ಮಧ್ಯದಲ್ಲಿ ನಿಲ್ಲಿಸಬಾರದು. ಜೊತೆಗೆ ಸಮತೋಲನ ಆಹಾರ ಸೇವನೆ, ಹೆಚ್ಚು ನೀರು ಕುಡಿಯುವುದು ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗುವ ಆಹಾರಗಳನ್ನು ಸೇವಿಸುವುದು ಉತ್ತಮ. ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.
ನವದೆಹಲಿ, ಜೂನ್ 5: ಈಗಾಗಲೇ ಮಳೆಗಾಲ (Monsoon) ಶುರುವಾಗಿದೆ. ಕರ್ನಾಟಕದಲ್ಲೂ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಡೆ ವಿಶೇಷವಾದ ಗಮನಹರಿಸುವುದು ಅತ್ಯಗತ್ಯ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್‌ಗುನ್ಯಾದಂತಹ ರೋಗಗಳು ಹರಡುವ ಅಪಾಯ ಹೆಚ್ಚು. ಮಳೆಗಾಲದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಮತ್ತು ಅವುಗಳಿಂದ ರಕ್ಷಣೆ ಪಡೆಯಲು ಕೆಲವು ಪ್ರಮುಖ ಹಾಗೂ ಸುಲಭವಾದ ಮಾರ್ಗಗಳು ಇಲ್ಲಿವೆ.
ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ:
ಮಳೆಗಾಲ ಆರಂಭವಾದ ತಕ್ಷಣ, ಸೊಳ್ಳೆಗಳು ಪ್ರತಿ ಮನೆಯಲ್ಲೂ ಗುಂಪುಗೂಡಲು ಪ್ರಾರಂಭಿಸುತ್ತವೆ. ಇದರಿಂದಾಗಿ ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳ ಅಪಾಯವೂ ಇದೆ. ಆದ್ದರಿಂದ, ಮಳೆಗಾಲದಲ್ಲಿ ಸೊಳ್ಳೆಗಳು ಮನೆಗೆ ಪ್ರವೇಶಿಸುವುದನ್ನು ತಡೆಯಲು, ಸಂಜೆ ಬಿದ್ದ ತಕ್ಷಣ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ. ಅಥವಾ ಕಿಟಕಿ ಮತ್ತು ಬಾಗಿಲುಗಳ ಮೇಲೆ ಸೊಳ್ಳೆ ಪರದೆಗಳನ್ನು ಹಾಕಿ.
ಮನೆಯ ಸುತ್ತಮುತ್ತ ಸ್ವಚ್ಛವಾಗಿಡಿ:
ಮಳೆಯಿಂದಾಗಿ ಮನೆಯ ಸುತ್ತಲೂ ನೀರು ನಿಲ್ಲುತ್ತದೆ. ಸೊಳ್ಳೆಗಳು ಅವುಗಳಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ, ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೀರು, ಧೂಳು, ಕೊಳಕು ಮತ್ತು ಹಳೆಯ ವಸ್ತುಗಳ ಕೊಚ್ಚೆ ಗುಂಡಿಗಳಿಲ್ಲದೆ ಸ್ವಚ್ಛವಾಗಿಡಿ. ಇದು ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಪರಿಮಳಯುಕ್ತ ಸಸ್ಯಗಳು:
ಸೊಳ್ಳೆಗಳನ್ನು ದೂರವಿಡಲು, ಮನೆಯ ಒಳಗೆ ಮತ್ತು ಹೊರಗೆ ಗಾಢವಾದ ಪರಿಮಳವನ್ನು ಹೊಂದಿರುವ ಸಸ್ಯಗಳನ್ನು ಬೆಳೆಸಿ. ಉದಾಹರಣೆಗೆ: ತುಳಸಿ, ಪುದೀನ, ಚೆಂಡು ಹೂ. ಸೊಳ್ಳೆಗಳು ಅವುಗಳ ವಾಸನೆಗೆ ಮನೆಯತ್ತ ಸುಳಿಯುವುದಿಲ್ಲ. ಅಲ್ಲದೆ, ಮನೆಯ ಆವರಣದಲ್ಲಿ ನೈಸರ್ಗಿಕ ರೀತಿಯಲ್ಲಿ ತಯಾರಿಸಿದ ಬೆಳ್ಳುಳ್ಳಿ ಸ್ಪ್ರೇ ಅನ್ನು ಸಿಂಪಡಿಸಿ. ಬೆಳ್ಳುಳ್ಳಿಯ ವಾಸನೆಯಿಂದಾಗಿ ಸೊಳ್ಳೆಗಳು ಬರುವುದೇ ಇಲ್ಲ.
ಲಿಂಬೆ – ಲವಂಗ ಇಡಿ:
ಲಿಂಬೆ ಹಣ್ಣನ್ನು ಕತ್ತರಿಸಿ, ಅದರ ಮಧ್ಯದಲ್ಲಿ ಲವಂಗವನ್ನು ಅಂಟಿಸಿ ಮನೆಯ ಒಂದು ಮೂಲೆಯಲ್ಲಿ ಇಡಿ. ಈ ಎರಡರ ಸಂಯೋಜನೆಯ ಕಟುವಾದ ವಾಸನೆಯು ಸೊಳ್ಳೆಗಳನ್ನು ಓಡಿಸುತ್ತದೆ. ಅಲ್ಲದೆ, ಮನೆಯಲ್ಲಿ ಲ್ಯಾವೆಂಡರ್ ಸಸ್ಯವನ್ನು ಬೆಳೆಸಿ. ಸೊಳ್ಳೆಗಳನ್ನು ದೂರವಿಡಲು ಇದು ತುಂಬಾ ಸಹಾಯಕವಾಗಿದೆ.
ಬೇವಿನ ಎಣ್ಣೆ:
ಬೇವಿನ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಈ ಬೇವಿನ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ದೇಹಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ. ನೀರಿನೊಂದಿಗೆ ಬೆರೆಸಿದ ಪುದೀನಾ ಮೌತ್‌ವಾಶ್ ಸಿಂಪಡಿಸುವ ಮೂಲಕವೂ ನೀವು ಸೊಳ್ಳೆಗಳನ್ನು ತಡೆಯಬಹುದು. ಅಥವಾ, ಪುದೀನ ಎಲೆಗಳನ್ನು ಸುಡುವುದರಿಂದ ಬರುವ ಹೊಗೆ ಮತ್ತು ವಾಸನೆಯು ಸೊಳ್ಳೆಗಳನ್ನು ಓಡಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸೂರತ್, ಜೂನ್ 5: ಸೂರತ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಚಾಲನೆ ನೀಡಿದ್ದಾರೆ. ಈ ವೇಳೆ ಕರ್ನಾಟಕದ ರಾಜಕಾರಣವನ್ನು ಕೂಡ ಪ್ರಸ್ತಾಪಿಸಿದ ಅವರು, “ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಲ್ಲಿನ ಜನರಲ್ಲಿ ತೀವ್ರ ಅಸಮಾಧಾನವಿದೆ. ಇದೇ ಕಾರಣಕ್ಕೆ ಆ ಪಕ್ಷಕ್ಕೆ ಅಲ್ಲಿ ತನ್ನ ಮುಖ್ಯಮಂತ್ರಿಯನ್ನೇ ಬದಲಾಯಿಸಬೇಕಾಗಿ ಬಂತು” ಎಂದು ಲೇವಡಿ ಮಾಡಿದ್ದಾರೆ.
ಪ್ರಸ್ತುತ ಜಗತ್ತು ಕೋವಿಡ್ ಮಹಾಮಾರಿ, ವಿವಿಧ ದೇಶಗಳ ನಡುವಿನ ಯುದ್ಧಗಳು ಮತ್ತು ತೀವ್ರ ಇಂಧನ ಬಿಕ್ಕಟ್ಟಿನಿಂದಾಗಿ ತತ್ತರಿಸಿದೆ. ಜಾಗತಿಕವಾಗಿ ಪೆಟ್ರೋಲ್-ಗ್ಯಾಸ್ ಬೆಲೆಗಳು ಏರಿಳಿತ ಕಾಣುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದಾಗಿ ಭಾರತವು ಪ್ರತಿಯೊಂದು ಬಿಕ್ಕಟ್ಟನ್ನು ಧೈರ್ಯದಿಂದ ಎದುರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಜೂನ್ 05): ಗೃಹ ಸಚಿವರಾದ ಬಳಿಕ ಪ್ರಿಯಾಂಕ್ ಖರ್ಗೆ (Priyank Kharge) ಅವರು ಇಂದು (ಜೂನ್ 05) ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ಈ ವೇಳೆ ಬೆಂಗಳೂರು ಟ್ರಾಫಿಕ್ ಸಮಸ್ಯೆ, ಮಹಿಳೆಯರ ಸುರಕ್ಷತೆ ಹಾಗೂ ಡ್ರಗ್ಸ್ ಮಾಫಿಯಾ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಸಭೆ ಬಳಿಕ ಮಾತನಾಡಿದ ಖರ್ಗೆ, ಕಾನೂನು ಎಲ್ಲರಿಗೂ ಒಂದೆ. ಯಾರೇ ಇದ್ರೂ ಕಾನೂನಿನ ಚೌಕಟ್ಟಿನಲ್ಲಿದ್ರೆ ಓಕೆ. ಅದನ್ನ ಮೀರಿ ಮಾಡಿದ್ರೆ ಕ್ರಮ ಕೈಗೊಳ್ಳುವುದು ಖಚಿತ ಎಂದು ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಮುಖ್ಯಾಂಶಗಳು
ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಗೃಹ ಸಚಿವರಾದ ಬಳಿಕ ಮೊಲದ ಇಲಾಖಾ ಸಭೆ ಮಾಡಿದ ಪ್ರಿಯಾಂಕ್
ಕಾನೂನು ಎಲ್ಲರಿಗೂ ಒಂದೇ, ಕಾನೂನು ಮೀರಿದರೆ ಕ್ರಮ ಎಂದ ನೂತನ ಗೃಹ ಸಚಿವ
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದಲ್ಲಿ ನನಗೊಂದು ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ಗೃಹ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ಪರಮೇಶ್ವರ್ ಸಾಹೇಬರ ಕಾರ್ಯಕ್ರಮಗಳ ಬಗ್ಗೆ ಯಾವುದನ್ನು ಮುಂದುವರಿಸಬೇಕೆಂದು ಮಾಹಿತಿ ಪಡೆದಿದ್ದೇನೆ. ಬೆಂಗಳೂರು ಟ್ರಾಫಿಕ್ ಸಮಸ್ಯೆ, ಮಹಿಳೆಯರ ಸುರಕ್ಷತೆ ಮತ್ತು ಡ್ರಗ್ಸ್ ಮಾಫಿಯಾ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಜೊತೆಗೆ ಸಭೆಯಲ್ಲಿ ಕೆಲ ಸಲಹೆ ಸೂಚನೆಗಳನ್ನ ನೀಡಿದ್ದೇನೆ. ಕಾನೂನು ಎಲ್ಲರಿಗೂ ಒಂದೇ, ಕಾನೂನು ಮೀರಿದರೆ ಕ್ರಮ ಎಂದು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ಧಿ ವಿಚಾರದ ಬಗ್ಗೆ ಮಾತನಾಡಿ, ಐಟಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ದ್ವೇಷ ಹುಟ್ಟಿಸುವ ಹಾಗೆ ಭಾಷಣ ಮಾಡಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಸೋಷಿಯಲ್ ಮೀಡಿಯಾ ಬಗ್ಗೆ ಗಮನವಹಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಆಗುತ್ತೆ ಎಂದು ಸ್ಪಷ್ಟಪಡಿಸಿದರು.
ರೌಡಿ ಪಡೆ ರಚನೆ ಮಾಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿರುವ ಬಗ್ಗೆ ಈಗಲೇ ಹೇಳುವುದಕ್ಕೆ ಆಗಲ್ಲ. ಈ ಯೋಜನೆ ಬಗ್ಗೆ ಬ್ಲೂ ಪ್ರಿಂಟ್ ರೆಡಿ ಮಾಡಬೇಕು. ಮುಂದಿನ ದಿನದಲ್ಲಿ ಈ ಬಗ್ಗೆ ಹೇಳುತ್ತೇವೆ ಎಂದು ಹೇಳಿದ ಖರ್ಗೆ,ವಿವಿಐಪಿ ಸಂಚಾರದ ವೇಳೆ ಜನರಿಗೆ ಸಮಸ್ಯೆ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ. ಬೇರೆ ಏನಾದ್ರು ಮಾಡಬಹುದಾ ಗಮನವಹಿಸಲು ಹೇಳಿದ್ದೇನೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ ಎಂದು ತಿಳಿಸಿದರು.
ಸೂರತ್, ಜೂನ್ 5: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಗುಜರಾತ್‌ನ ಸೂರತ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿರುವ ಕೆಲವು ನಿರಾಶಾವಾದಿಗಳು ಸದಾ ‘ಆತ್ಮನಿರ್ಭರ ಭಾರತ’ ಅಭಿಯಾನವನ್ನು ಲೇವಡಿ ಮಾಡುತ್ತಿದ್ದಾರೆ ಮತ್ತು ದೇಶದ ಸಂಕಲ್ಪವನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಪ್ರಧಾನಿ ಕಿಡಿಕಾರಿದರು. ಇತರರ ಮೇಲೆ ಅವಲಂಬಿತವಾಗಿರುವ ದೇಶವು ಎಂದಿಗೂ ತನಗೆ ಅರ್ಹವಾದ ಅಭಿವೃದ್ಧಿಯ ಎತ್ತರವನ್ನು ತಲುಪಲು ಸಾಧ್ಯವಿಲ್ಲ ಎಂಬುದನ್ನು ಇಂತಹ ಜನರು ಮರೆತಿದ್ದಾರೆ ಎಂದು ಮೋದಿ ಟೀಕಿಸಿದರು.
ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆ ಮತ್ತು ಅನಿಶ್ಚಿತತೆಯನ್ನು ಹರಡುವ ಮೂಲಕ ರಾಜಕೀಯ ಅವಕಾಶಗಳನ್ನು ಹುಡುಕುತ್ತಿದೆ. ಆದರೆ, ದೇಶದ ಜನರು ಅವರಿಗೆ ಪದೇ ಪದೇ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
#WATCH | Surat, Gujarat | Prime Minister Narendra Modi says, “There are some pessimists in the country today who constantly mock the ‘Atmanirbhar Bharat’ campaign. They consistently belittle this resolve of the nation. These are the people who have always kept India dependent on… pic.twitter.com/6hextWylXG
“ಗುಜರಾತ್‌ನ ಜನರು ಈಗಾಗಲೇ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳಲ್ಲೂ ಜನತೆ ಅವರ ದುರಾಡಳಿತದಿಂದ ಬೇಸತ್ತಿದ್ದಾರೆ. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಇದಕ್ಕೂ ಮುನ್ನ ಹರಿಯಾಣ ಮತ್ತು ಪಂಜಾಬ್‌ನ ಜನರೂ ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅರಾಜಕತೆಯ ಮೂಲಕ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್‌ನ ರಾಜಕಾರಣ ಇನ್ನು ಮುಂದೆ ನಡೆಯುವುದಿಲ್ಲ” ಎಂದು ಮೋದಿ ವಾಗ್ದಾಳಿ ನಡೆಸಿದರು.
#WATCH | Surat, Gujarat | Prime Minister Narendra Modi says, “…For the past 12 years, the Congress has been seeking opportunities by spreading chaos and uncertainty, but the people of the country have repeatedly given it a fitting reply. The people of Gujarat have pushed the… pic.twitter.com/JxSuKb7MXK
ಸಾರ್ವಜನಿಕ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸೂರತ್‌ನಲ್ಲಿ ಸುಮಾರು 18,800 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ನಿನ್ನೆ (ಜೂನ್ 04) ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಬಹಳ ಒಳ್ಳೆಯ ಸಂದೇಶವಿದೆ. ಹಲವು ಉತ್ತಮ ವಿಷಯಗಳನ್ನು ಸಿನಿಮಾ ಹೇಳುತ್ತಿದೆ. ಕ್ರೀಡೆಯ ಮಹತ್ವ, ಛಲ ಬಿಡದೆ ಹೋರಾಡುವ ಸ್ಪೂರ್ತಿ, ಗ್ರಾಮೀಣ ವಿಕಾಸ, ಮೂಲ ಸೌಕರ್ಯಗಳ ಅಗತ್ಯತೆ, ಅಂಗವೈಕಲ್ಯ ಶಾಪವಲ್ಲ ಎಂಬಿತ್ಯಾದಿ ಉತ್ತಮ ಸಂದೇಶಗಳನ್ನು ಈ ಸಿನಿಮಾ ಒಳಗೊಂಡಿದೆ. ಇಷ್ಟೆಲ್ಲ ಇದ್ದಾಗಿಯೂ ಸಹ ಸಿನಿಮಾನಲ್ಲಿ ನಾಯಕಿಯನ್ನು ತೋರಿಸುವ ವಿಧಾನದಿಂದಾಗಿ ಸಿನಿಮಾದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ನಿರ್ದೇಶಕನ ಒಂದು ಕೆಟ್ಟ ನಿರ್ಧಾರದಿಂದ ಈಗ ಸಿನಿಮಾದ ಒಳ್ಳೆಯ ವಿಷಯಗಳು ಬದಿಗೆ ಸರಿದಿದೆ.
‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಎಂಎಲ್ಎ ಕ್ಯಾಂಡಿಡೇಟ್ ಒಬ್ಬಾತನ ಪುತ್ರಿ ಆಕೆ. ಮೊದಲಾರ್ಧದಲ್ಲಿ ಕೆಲವಾರು ಸೀನ್ಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿರ್ದೇಶಕ ಬುಚ್ಚಿಬಾಬು ಸನಾ, ಜಾನ್ಹವಿಯನ್ನು ನಾಯಕಿಯಾಗಿ ಅಲ್ಲ ಬದಲಾಗಿ ಗ್ಲಾಮರ್ ಗೊಂಬೆಯಾಗಿ ಮಾತ್ರವೇ ಬಳಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಜಾನ್ಹವಿ ಸೀನ್ ಬಂದಾಗಲೆಲ್ಲ ಕ್ಯಾಮೆರಾ, ಜಾನ್ಹವಿಯ ಸೊಂಟ, ಎದೆಯ ಕಡೆಗೆ ಜಾರಿದೆ. ಜಾನ್ಹವಿಯ ಮುಖಕ್ಕಿಂತಲೂ ಹೆಚ್ಚಾಗಿ ಆಕೆಯ ಇತರೆ ಅಂಗಾಂಗಗಳನ್ನೇ ನಿರ್ದೇಶಕರು ತೋರಿಸಿದ್ದಾರೆ.
ಜಾನ್ಹವಿಯ ಪಾತ್ರವನ್ನು ಗ್ಲಾಮರ್ ಹೊರತಾಗಿ ಇನ್ಯಾವ ಕಾರಣಕ್ಕೂ ಬಳಸಿಕೊಳ್ಳಲಾಗಿಲ್ಲ ಎಂಬುದು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ತೆಲುಗು ರಾಜ್ಯಗಳ ಯಾವ ಮೂಲೆಯಲ್ಲೂ ಧರಿಸದ ಗ್ಲಾಮರಸ್ ಉಡುಗೆಯನ್ನು ಧರಿಸಿ ಜಾನ್ಹವಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ನಾಯಕಿಯ ಒಪ್ಪಿಗೆ ಇಲ್ಲದೆ, ಕತ್ತಲಲ್ಲಿ ನಾಯಕ ಮುತ್ತು ಕೊಡುವ ದೃಶ್ಯವೂ ಸಹ ಇದೆ. ನಾಯಕಿಯನ್ನು ಅದೆಷ್ಟು ಸಾಧ್ಯವೋ ಅಷ್ಟು ಆಬ್ಜೆಕ್ಟಿಫೈ ಮಾಡಲಾಗಿದೆ. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಖುದ್ದು ಜಾನ್ಹವಿ ಅವರೇ ಈ ಕುರಿತಾದ ಇನ್ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ಲೈಕ್ ಒತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಕೆಗಳು ಹೆಚ್ಚಾಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಬುಚ್ಚಿಬಾಬು ಸನಾ, ‘ಜಾನ್ಹವಿಯ ದೃಶ್ಯಗಳನ್ನು ಜನ ಇಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಎಣಿಸಿರಲಿಲ್ಲ’ ಎಂದಷ್ಟೆ ಹೇಳಿದ್ದಾರೆ. ಆದರೆ ಈ ವಿಷಯದ ಬಗ್ಗೆ ಬಲು ಗಂಭೀರ ಚರ್ಚೆಗಳಾಗುತ್ತಿದ್ದು, ಕನ್ನಡದ ನಟಿ ರಮ್ಯಾ ಸಹ, ‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿಯನ್ನು ಕೆಟ್ಟದಾಗಿ ತೋರಿಸಿರುವ ರೀತಿಯ ಬಗ್ಗೆ ಹಂಚಿಕೊಳ್ಳಲಾದ ಪೋಸ್ಟ್ ಒಂದನ್ನು ರೀಶೇರ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಜಾನ್ಹವಿ ಕಪೂರ್ ಅವರು ಈ ಹಿಂದೆಯೂ ಸಹ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾನಲ್ಲಿ ತುಸು ಹೆಚ್ಚೇ ಅವರನ್ನು ಆಬ್ಜೆಕ್ಟಿಫೈ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಅವರ ಎದೆ ಭಾಗ ಮತ್ತು ಸೊಂಟಗಳ ಮೇಲೆ ಕೆಟ್ಟದಾಗಿ ಫೋಕಸ್ ಮಾಡಲಾಗಿದೆ. ರಾಮ್ ಚರಣ್ ಅಂಥಹಾ ದೊಡ್ಡ ಸ್ಟಾರ್ ನಟ ಇದ್ದಾಗಿಯೂ ಜನರನ್ನು ಸೆಳೆಯಲು ನಾಯಕಿಯ ನಡು, ಎದೆಭಾಗದ ಮೇಲೆ ನಿರ್ದೇಶಕ ಬುಚ್ಚಿಬಾಬು ಡಿಪೆಂಡ್ ಆಗಿರುವುದು ಅವರ ಕತೆಯ ಬಗ್ಗೆ ಅವರಿಗಿದ್ದಿದ್ದ ನಂಬಿಕೆಯನ್ನು ತೋರಿಸುತ್ತದೆ.
ಗದಗ, ಜೂನ್ 05: ಅಣ್ಣನ ಕಣ್ಣೆದುರೇ ಸಿಡಿಲು (lightning) ಬಡಿದು ತಮ್ಮ ಸಾವನ್ನಪ್ಪಿದ(death) ದಾರುಣ ಘಟನೆಯೊಂದು ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ ಹುಡೇದ(19) ಮೃತ ಯುವಕ. ಜಾನುವಾರು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ತಮ್ಮನ ಶವವನ್ನು ಹೊತ್ತು ಅಣ್ಣ ಊರಿಗೆ ಬಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆ
ಸಿಡಿಲು ಬಡಿದು ಅಣ್ಣನ ಎದುರೇ ತಮ್ಮ ಸಾವು
ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
ನಡೆದಿದ್ದೇನು?
ಗದಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣರಾಯ ಇಂದು ಸಾಯಂಕಾಲ ಗುಡುಗು-ಸಿಡಿಲು ಭಾರಿ ಗಾಳಿ ಸಮೇತ ಆರ್ಭಟಿಸಿದ್ದಾನೆ. ಆದರೆ, ಇದೇ ಮಳೆರಾಯ ಗಜೇಂದ್ರಗಢ ತಾಲೂಕಿನ ರಾಜೂರು ಗ್ರಾಮದ ಕುಟುಂಬವೊಂದಕ್ಕೆ ಕರಾಳ ಶೋಕವನ್ನು ತಂದಿದೆ. ಯಮಸ್ವರೂಪಿ ಸಿಡಿಲಿನ ಹೊಡೆತಕ್ಕೆ ಕೇವಲ 19 ವರ್ಷದ ಪ್ರಶಾಂತ್ ಹುಡೇದ ಎಂಬ ಯುವಕ ಬಲಿಯಾಗಿದ್ದಾನೆ. ಕಣ್ಣು ಮುಚ್ಚಿ ಬಿಡುವುದರೊಳಗೆ ಒಡಹುಟ್ಟಿದ ತಮ್ಮ ಹೆಣವಾಗಿದ್ದು ಕಂಡು ಅಣ್ಣ ಅಕ್ಷರಶಃ ದಿಗ್ಭ್ರಾಂತರಾಗಿದ್ದಾರೆ.
ಸಿಡಿಲು ಬಡಿದು ತಮ್ಮ ಸಾವು: ಅಣ್ಣ ಜಸ್ಟ್ ಮಿಸ್
ಅಷ್ಟಕ್ಕೂ ಜಮೀನಿನಲ್ಲಿ ಎಂದಿನಂತೆ ಜಾನುವಾರುಗಳನ್ನು ಮೇಯಿಸಲು ಸಹೋದರರಿಬ್ಬರು ಹೋಗಿದ್ದರು. ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಪ್ರಶಾಂತ್ ಬಲಿಯಾಗಿದ್ದು, 60 ಮೀಟರ್ ದೂರದಲ್ಲಿದ್ದ ಅಣ್ಣ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅಣ್ಣ ತನ್ನ ತಮ್ಮನ ಶವವನ್ನು ಹೊತ್ತುಕೊಂಡು ಊರಿಗೆ ಬಂದಿದ್ದಾರೆ.
ಹಲಸಿನ ಹಣ್ಣಿನ ಆಸೆಗೆ ಜೀವ ಕಳೆದುಕೊಂಡ ವಿದ್ಯಾರ್ಥಿ
ಹಲಸಿನ ಹಣ್ಣಿನ ಆಸೆಗೆ ವಿದ್ಯಾರ್ಥಿ ಜೀವ ಕಳೆದುಕೊಂಡ ಘಟನೆ ಬೆಂಗಳೂರಿನ ಯಲಹಂಕದ ಜಿಕೆವಿಕೆ ಆವರಣದಲ್ಲಿ ನಡೆದಿದೆ. ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಬಿದ್ದು ಆಕಾಶ್(23) ದುರ್ಮರಣ ಹೊಂದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮೂಲದ ವಿದ್ಯಾರ್ಥಿ ಆಕಾಶ್, ಜಿಕೆವಿಕೆಯಲ್ಲಿ ಸರ್ಕಾರಿ ಸೀಟ್ ಪಡೆದು ಎಂಎಸ್ಸಿ ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ 12ರಿಂದ 1 ಗಂಟೆ ಅವಧಿಯಲ್ಲಿ ಮರದಿಂದ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಆಕಾಶ್ನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು ಆಕಾಶ್ ಎನ್ಎಸ್ಎಸ್ನಲ್ಲಿ ರಾಷ್ಟ್ರಪತಿಯಿಂದ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದಿದ್ದ. 2024ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ.
ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಯುವ ಅನುಭವಿ ಶುಭ್‌ಮನ್ ಗಿಲ್ (Shubman Gill) ನೇತೃತ್ವದ ಭಾರತ ತಂಡ ಬರೋಬ್ಬರಿ 193 ದಿನಗಳ ನಂತರ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಹೀಗಾಗಿ ಈ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಪ್ರಶ್ನೆಯಾಗಿದೆ. ಇದೀಗ ಎಂದಿನಂತೆ ಟೆಸ್ಟ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತಂಡದ ಆಡುವ ಹನ್ನೊಂದರ ಬಳಗಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುದರ್ಶನ್ಗೆ 3 ನೇ ಕ್ರಮಾಂಕ
ಈ ಮೊದಲಿನಂತೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಆದರೆ 3ನೇ ಕ್ರಮಾಂಕ ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೆ ಖಚಿತ ಉತ್ತರ ನೀಡಿರುವ ಗೌತಮ್ ಗಂಭೀರ್, ಸಾಯಿ ಸುದರ್ಶನ್ಗೆ 3ನೇ ಕ್ರಮಾಂಕ ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ಸರಣಿಯಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡದ ಸಾಯಿ ಸುದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದಾಗ್ಯೂ, ಗಂಭೀರ್ ತಮ್ಮ ಪತ್ರಿಕಾಗೋಷ್ಠಿಯ ಮೂಲಕ ಅವೆಲ್ಲಕ್ಕೂ ಉತ್ತರಿಸಿ, ಕೇವಲ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಆಧರಿಸಿ ನೀವು ಆಟಗಾರನನ್ನು ನಿರ್ಣಯಿಸಿದರೆ, ನೀವು ಬಲವಾದ ತಂಡವನ್ನು ನಿರ್ಮಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಸಾಯಿ ಸುದರ್ಶನ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಾಗಿ ಹೇಳಿದರು.
ಟೆಸ್ಟ್ನಲ್ಲಿ ಸುದರ್ಶನ್ ಪ್ರದರ್ಶನ
ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ 24 ವರ್ಷದ ಸಾಯಿ ಸುದರ್ಶನ್ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಸಾಯಿ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ಆ ಸರಣಿಯ ಆಡಿದ 6 ಇನ್ನಿಂಗ್ಸ್‌ಗಳಲ್ಲಿ, ಅವರು 23.33 ರ ಸರಾಸರಿಯಲ್ಲಿ ಕೇವಲ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಇದರಲ್ಲಿ ಎರಡು ಡಕ್ ಮತ್ತು ಕೇವಲ ಒಂದು ಅರ್ಧಶತಕ ಸೇರಿತ್ತು. ಸ್ಥಿರತೆಯ ಕೊರತೆಯಿಂದಾಗಿ ಅವರು ಆ ಸರಣಿಯಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಅದರ ನಂತರ, ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 87 ರನ್ ಕಲೆಹಾಕಿದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ ಸುದರ್ಶನ್ ಆಡಿದ 2 ಇನ್ನಿಂಗ್ಸ್‌ಗಳಲ್ಲಿ ಕೇವಲ 29 ರನ್ ಕಲೆಹಾಕಿದರು. ಈ ಕಳಪೆ ದಾಖಲೆಯ ಹೊರತಾಗಿಯೂ ಗಂಭೀರ್, ಸುದರ್ಶನ್ಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದಾರೆ.
ಸಾಯಿ ಸುದರ್ಶನ್ ಜೊತೆಗೆ, ಸ್ಪಿನ್ ವಿಭಾಗದಲ್ಲಿ ಹೊಸ ಆಟಗಾರನ ಪ್ರವೇಶವನ್ನು ಗಂಭೀರ್ ಖಚಿತ ಪಡಿಸಿದ್ದಾರೆ. ಐಪಿಎಲ್ 2026 ರಲ್ಲಿ ಸ್ಪಿನ್ ಮ್ಯಾಜಿಕ್ ಮೂಲಕ ವಿಮರ್ಶಕರ ಮೆಚ್ಚುಗೆ ಪಡೆದ ಹರ್ಷ್ ದುಬೆ ಅಥವಾ ಮಾನವ್ ಸುತಾರ್ ಅವರಲ್ಲಿ ಒಬ್ಬರು ನಾಳೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದು ಖಚಿತ ಎಂದು ಕೋಚ್ ಹೇಳಿದ್ದಾರೆ. ಇಬ್ಬರೂ ಒಂದೇ ರೀತಿಯ ಕೌಶಲ್ಯಗಳನ್ನು ಹೊಂದಿದ್ದು, ಮುಂಬರುವ ಶ್ರೀಲಂಕಾ ಸರಣಿಗೆ ಸ್ಪಿನ್ನರ್‌ಗಳ ಅಗತ್ಯತೆ ಹೆಚ್ಚಿದೆ. ಹೀಗಾಗಿ ಶ್ರೀಲಂಕಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಈ ಇಬ್ಬರಲ್ಲಿ ಒಬ್ಬರನ್ನು ಇಲ್ಲಿ ಪರೀಕ್ಷಿಸಲು ಬಯಸುತ್ತೇನೆ ಎಂದಿದ್ದಾರೆ.
ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ ಅಥವಾ ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ