ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ದೊಡ್ಡ ಸೀಕ್ರೆಟ್ ರಿವೀಲ್ – Kannada News | Thalapathy Vijay Jan Nayagan Remake: H. Vinoth Reveals 50 Percent New Story

ದಳಪತಿ ವಿಜಯ್ ನಟನೆಯ ‘‘ಜನ ನಾಯಗನ್’ ಸಿನಿಮಾ (Jana Nayagan) ಈ ವಾರವೇ ಥಿಯೇಟರ್‌ಗೆ ಬರ್ತಿದೆ. ಈ ಸಿನಿಮಾ ತೆಲುಗಿನ ಸೂಪರ್ ಹಿಟ್ ‘ಭಗವಂತ್ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈ ಬಿಗ್ ಬಜೆಟ್ ಸಿನಿಮಾವನ್ನು ಹೆಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ಅವರು ಒರಿಜಿನಲ್ ಸಿನಿಮಾದಿಂದ ಎಷ್ಟು ಭಾಗವನ್ನು ಕಾಪಿ ಮಾಡಲಾಗಿದೆ ಅಂತ ಬಿಚ್ಚಿಟ್ಟಿದ್ದಾರೆ.

‘ಜನ ನಾಯಕನ್’ ಸಿನಿಮಾದಲ್ಲಿ ಒರಿಜಿನಲ್ ಕಥೆಯ ಶೇಕಡಾ 50 ರಷ್ಟು ಭಾಗ ಮಾತ್ರ ಇರಲಿದೆ ಎಂದು ಹೆಚ್. ವಿನೋದ್ ಹೇಳಿದ್ದಾರೆ. ಚಿತ್ರದ ಫಸ್ಟ್ ಹಾಫ್‌ನಲ್ಲಿ ಶೇ. 60 ರಷ್ಟು ಮತ್ತು ಸೆಕೆಂಡ್ ಹಾಫ್‌ನಲ್ಲಿ ಕೇವಲ ಶೇ. 20 ರಷ್ಟು ಮಾತ್ರ ಒರಿಜಿನಲ್ ಕಥೆ ಇರಲಿದೆ. ತಾವು ವಿಜಯ್ ಅವರಿಗೆ ರಿಮೇಕ್ ಯಾಕೆ ಮಾಡಬೇಕು ಎಂದು ಕೇಳಿದ್ದಾಗಿ ವಿನೋದ್ ಹೇಳಿದ್ದಾರೆ. ಅದಕ್ಕೆ ವಿಜಯ್ ಅವರು ಒರಿಜಿನಲ್ ಸಿನಿಮಾದ ಪ್ರತಿಯೊಂದು ಸೀನ್ ವಿವರಿಸಿ ತಮಗೆ ಯಾಕೆ ಇಷ್ಟ ಆಯ್ತು ಅಂತ ಹೇಳಿದ್ರಂತೆ. ವಿಜಯ್ ಅವರಿಗೆ ಮಹಿಳಾ ಸಬಲೀಕರಣದ ಕಥೆಗಳೆಂದರೆ ತುಂಬಾ ಇಷ್ಟ. ಈ ಹಿಂದೆ ಅಜಿತ್ ಕುಮಾರ್ ಜೊತೆ ‘ಪಿಂಕ್’ ರಿಮೇಕ್ ಮಾಡುವಾಗಲೂ ಇದೇ ರೀತಿ ಆಗಿತ್ತು ಎಂದು ವಿನೋದ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು

ಮೊದಲಿಗೆ ತಾವು ವಿಜಯ್ ಅವರ ಕೊನೆಯ ಸಿನಿಮಾಗೆ ಬೇರೆ ಕಥೆ ರೆಡಿ ಮಾಡಿದ್ದಾಗಿ ಡೈರೆಕ್ಟರ್ ಹೇಳಿದ್ದಾರೆ. ಅದು ಇಬ್ಬರು ಬುದ್ಧಿವಂತರ ನಡುವೆ ನಡೆಯುವ ಜಿದ್ದಾಜಿದ್ದಿನ ಕಥೆಯಾಗಿತ್ತು. ಆದರೆ ಆ ಕಥೆ ತುಂಬಾ ಹೆವಿಯಾಗಿದೆ ಎಂದು ವಿಜಯ್ ರಿಜೆಕ್ಟ್ ಮಾಡಿದ್ದರು. ಅದರ ಬದಲು ‘ಭಗವಂತ್ ಕೇಸರಿ’ ಸಿನಿಮಾ ರಿಮೇಕ್ ಮಾಡಲು ಸಜೆಸ್ಟ್ ಮಾಡಿದ್ದರು. ಬಾಲಕೃಷ್ಣ ಅವರ ಸಿನಿಮಾಗಳ ಸ್ಟೈಲೇ ಬೇರೆ ಇರುತ್ತದೆ. ಆದರೆ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಈ ದೊಡ್ಡ ಅವಕಾಶವನ್ನು ಕೈಬಿಡಲು ತಮಗೆ ಇಷ್ಟವಿರಲಿಲ್ಲ ಎಂದು ಹೆಚ್. ವಿನೋದ್ ಮಾಹಿತಿ ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾ ಜುಲೈ 23ರಂದು ತೆರೆಗೆ ಬರಲಿದೆ. ಈ ಸಿನಿಮಾಗೆ ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಓವರ್ ಇಲ್ಲ, ಸೂಪರ್ ಫೈವ್, 2 ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ – Kannada News | The Hundred Men’s Competition 2026: Competition Rules

ಇಂಗ್ಲೆಂಡ್‌ನ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಮೆಂಟ್ ‘ದಿ ಹಂಡ್ರೆಡ್‘ ಇಂದಿನಿಂದ (ಜುಲೈ 21) ಶುರುವಾಗಲಿದೆ. 8 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ (IPL) ಫ್ರಾಂಚೈಸಿಗಳು ಹೂಡಿಕೆ ಮಾಡಿದ್ದು, ಇದರಿಂದ ತಂಡಗಳ ಹೆಸರು ಮತ್ತು ಜೆರ್ಸಿಗಳು ಸಂಪೂರ್ಣ ಬದಲಾಗಿವೆ.

ಇನ್ನು ‘ದಿ ಹಂಡ್ರೆಡ್’ ಕ್ರಿಕೆಟ್ ಲೀಗ್ ಸಾಂಪ್ರದಾಯಿಕ ಟಿ20 ಕ್ರಿಕೆಟ್‌ಗಿಂತ ಸಂಪೂರ್ಣ ಭಿನ್ನವಾಗಿದ್ದು, ಪಂದ್ಯವನ್ನು ಕೇವಲ 2.5 ಗಂಟೆಗಳಲ್ಲಿ ಮುಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲೀಗ್‌ನ ಪ್ರಮುಖ ನಿಯಮಗಳು ಇಲ್ಲಿವೆ.

ಓವರ್‌ಗಳ ಬದಲು ಎಸೆತಗಳ ಲೆಕ್ಕಾಚಾರ:

  • ಇಡೀ ಪಂದ್ಯದಲ್ಲಿ ಒಂದು ಇನ್ನಿಂಗ್ಸ್‌ಗೆ ಕೇವಲ 100 ಎಸೆತಗಳು ಮಾತ್ರ ಇರುತ್ತವೆ.
  • ಕ್ರಿಕೆಟ್‌ನ ಸಾಂಪ್ರದಾಯಿಕ ‘ಓವರ್’ (6 ಎಸೆತಗಳು) ನಿಯಮ ಇಲ್ಲಿಲ್ಲ. ಅದರ ಬದಲಿಗೆ ‘ಫೈವ್ಸ್’ ಇರುತ್ತದೆ. ಅಂದರೆ ಓವರ್​ಗೆ 5 ಎಸೆತಗಳು ಮಾತ್ರ.
  •  ಅಂಪೈರ್ ಪ್ರತಿ 5 ಎಸೆತಗಳಿಗೊಮ್ಮೆ ಬಿಳಿ ಬಣ್ಣದ ಕಾರ್ಡ್ ತೋರಿಸಿ ಸಿಗ್ನಲ್ ನೀಡುತ್ತಾರೆ.

ಬೌಲಿಂಗ್ ನಿಯಮಗಳು:

  • ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಒಟ್ಟಿಗೆ ಬೌಲ್ ಮಾಡಬಹುದು. ಇದನ್ನು ನಾಯಕ ಪರಿಸ್ಥಿತಿಗೆ ತಕ್ಕಂತೆ ನಿರ್ಧರಿಸುತ್ತಾನೆ.
  •  ಒಬ್ಬ ಬೌಲರ್ ಇಡೀ ಪಂದ್ಯದಲ್ಲಿ ಗರಿಷ್ಠ 20 ಎಸೆತಗಳನ್ನು ಮಾತ್ರ ಎಸೆಯಬಹುದು.
  • ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಮಾಡುವ ದಿಕ್ಕನ್ನು ಬದಲಾಯಿಸಲಾಗುತ್ತದೆ. ಅಂದರೆ ಕ್ರೀಸ್​ನ ಇನ್ನೊಂದು ತುದಿಯಿಂದ ಬೌಲಿಂಗ್ ಆರಂಭವಾಗುತ್ತದೆ.

ಪವರ್‌ಪ್ಲೇ ಮತ್ತು ಫೀಲ್ಡಿಂಗ್ ನಿಯಮಗಳು:

  • ಇನ್ನಿಂಗ್ಸ್‌ನ ಮೊದಲ 25 ಎಸೆತಗಳು ಪವರ್‌ಪ್ಲೇ ಆಗಿರುತ್ತವೆ.
  • ಪವರ್‌ಪ್ಲೇ ಸಮಯದಲ್ಲಿ 30-ಯಾರ್ಡ್ ವೃತ್ತದ ಹೊರಗೆ ಕೇವಲ ಇಬ್ಬರು ಫೀಲ್ಡರ್‌ಗಳನ್ನು ಮಾತ್ರ ನಿಲ್ಲಿಸಬಹುದು.
  • ಪವರ್‌ಪ್ಲೇ ಮುಗಿದ ನಂತರ ಗರಿಷ್ಠ 4 ಫೀಲ್ಡರ್‌ಗಳನ್ನು ವೃತ್ತದ ಹೊರಗೆ ನಿಲ್ಲಿಸಲು ಅವಕಾಶವಿರುತ್ತದೆ.

ಟೈಮ್‌ಔಟ್ ಮತ್ತು ಪೆನಾಲ್ಟಿ ನಿಯಮಗಳು:

  •  ಪ್ರತಿ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ 2 ನಿಮಿಷಗಳ ಸ್ಟ್ರಾಟಜಿಕ್ ಟೈಮ್‌ಔಟ್ ತೆಗೆದುಕೊಳ್ಳುವ ಹಕ್ಕಿರುತ್ತದೆ.
  • ಬೌಲಿಂಗ್ ತಂಡವು ನಿಗದಿತ ಸಮಯದೊಳಗೆ 100 ಎಸೆತಗಳನ್ನು ಪೂರ್ಣಗೊಳಿಸದಿದ್ದರೆ ಪೆನಾಲ್ಟಿ ವಿಧಿಸಲಾಗುತ್ತದೆ.
  • ಪಂದ್ಯದ ಕೊನೆಯಲ್ಲಿ ಸಮಯ ಮೀರಿದ ಎಸೆತಗಳಿಗೆ 30-ಯಾರ್ಡ್ ವೃತ್ತದ ಹೊರಗಿರುವ ಒಬ್ಬ ಫೀಲ್ಡರ್‌ನನ್ನು ಒಳಗೆ
  • ತರಬೇಕಾಗುತ್ತದೆ. ಅಂದರೆ ಕೇವಲ 3 ಫೀಲ್ಡರ್‌ಗಳು ಹೊರಗಿರುತ್ತಾರೆ.

ಬ್ಯಾಟಿಂಗ್ ಮತ್ತು ರನ್ ನಿಯಮಗಳು:

  • ಬ್ಯಾಟರ್ ಕ್ಯಾಚ್ ನೀಡಿ ಔಟ್ ಆಗುವಾಗ ಕ್ರಾಸ್ ಆಗಿದ್ದರೂ ಸಹ, ಹೊಸ ಬ್ಯಾಟರ್ ಕ್ರೀಸ್‌ನ ಸ್ಟ್ರೈಕಿಂಗ್ ಎಂಡ್‌ಗೇ ಬರಬೇಕು.
  • ಪಂದ್ಯ ‘ಟೈ’ ಆದಾಗ ಲೀಗ್ ಹಂತದಲ್ಲಿ ತಲಾ 1 ಅಂಕವನ್ನು ಹಂಚಲಾಗುತ್ತದೆ. ಆದರೆ ನಾಕೌಟ್ ಪಂದ್ಯಗಳಲ್ಲಿ (ಎಲಿಮಿನೇಟರ್ ಮತ್ತು ಫೈನಲ್) ಟೈ ಆದಾಗ ವಿಜೇತರನ್ನು ನಿರ್ಧರಿಸಲು ‘ಸೂಪರ್ ಫೈವ್’ (5 ಎಸೆತಗಳ ಓವರ್) ಆಡಿಸಲಾಗುತ್ತದೆ.

ನೋ-ಬಾಲ್ ಮತ್ತು ಫ್ರೀ-ಹಿಟ್ ನಿಯಮ:

  • ಬೌಲರ್ ಯಾವುದೇ ರೀತಿಯ ನೋ-ಬಾಲ್ (ಗೆರೆ ದಾಟುವುದು ಅಥವಾ ಹೈಟ್ ನೋ-ಬಾಲ್) ಎಸೆದರೆ ಬ್ಯಾಟಿಂಗ್ ತಂಡಕ್ಕೆ 2 ರನ್ ಬೋನಸ್ ಸಿಗುತ್ತದೆ.
  • ನೋ-ಬಾಲ್ ಎಸೆತಗಳ ಮುಂದಿನ ಬಾಲ್ ‘ಫ್ರೀ ಹಿಟ್’ ಆಗಿರುತ್ತದೆ.

ಕೌಂಟ್‌ಡೌನ್ ಕ್ಲಾಕ್:

  • ಮೈದಾನದಲ್ಲಿ ದೊಡ್ಡದಾದ ಕೌಂಟ್‌ಡೌನ್ ಗಡಿಯಾರ ಇರುತ್ತದೆ. ಬೌಲರ್ ಒಂದು ಎಸೆತ ಮುಗಿಸಿ, ಮುಂದಿನ ಎಸೆತವನ್ನು ಹಾಕಲು ನಿಗದಿತ ಸೆಕೆಂಡ್‌ಗಳ ಒಳಗೆ ಸಿದ್ಧರಾಗಬೇಕು.
  • ಬ್ಯಾಟರ್ ಕೂಡ ತಡ ಮಾಡುವಂತಿಲ್ಲ. ಇದು ಆಟದ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರೈನ್ ರೂಲ್ಸ್​:

  • ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಸಾಂಪ್ರದಾಯಿಕ ಕ್ರಿಕೆಟ್‌ನಂತೆ DLS ನಿಯಮದ ಆಧಾರದ ಮೇಲೆ ರನ್ ಲೆಕ್ಕ ಹಾಕಲ್ಲ. ಬದಲಿಗೆ ‘ಇಷ್ಟು ಎಸೆತಗಳಲ್ಲಿ ಇಷ್ಟು ರನ್ ಹೊಡೆಯಬೇಕು’ ಎಂಬ ಹೊಸ ಮಾದರಿಯ ನಿಯಮವನ್ನು ಬಳಸಲಾಗುತ್ತದೆ.

ಬದಲಿ ಆಟಗಾರನಿಗೆ ಅವಕಾಶ:

  • ಪಂದ್ಯದ ವೇಳೆ ಯಾವುದೇ ಆಟಗಾರನಿಗೆ ತೀವ್ರ ಗಾಯವಾದರೆ, ಅವರ ಬದಲಿಗೆ ಸಂಪೂರ್ಣವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಲ್ಲ ಮತ್ತೊಬ್ಬ ಬದಲಿ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿದೆ.
  • ಬದಲಿಯಾಗಿ ಬರುವ ಆಟಗಾರನು ಲೈಕ್ ಫರ್ ಲೈಕ್ ರಿಪ್ಲೇಸ್​ಮೆಂಟ್​ ಆಗಿರಬೇಕು. ಅಂದರೆ ಬೌಲರ್​ಗೆ ಬೌಲರ್​. ಬ್ಯಾಟರ್​ಗೆ ಬ್ಯಾಟರ್ ಅಥವಾ ಆಲ್​ರೌಂಡರ್ ಬದಲಿಗೆ ಆಲ್​ರೌಂಡರ್​ನನ್ನು ಕಣಕ್ಕಿಳಿಸಬಹುದು.

ಇದನ್ನೂ ಓದಿ: ಮೂವರು ಹೊಸಬರ ಎಂಟ್ರಿ: ಹೀಗಿದೆ ಟೀಮ್ ಇಂಡಿಯಾ

ಟೂರ್ನಿಯಲ್ಲಿ ಕಣಕ್ಕಿಳಿಯುವ 8 ತಂಡಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್​)
  • ಲಂಡನ್ ಸ್ಪಿರಿಟ್
  • ಸನ್‌ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಟ್ರೆಂಟ್ ರಾಕೆಟ್ಸ್
  • ಬರ್ಮಿಂಗ್‌ಹ್ಯಾಮ್ ಫೀನಿಕ್ಸ್
  • ವೆಲ್ಷ್ ಫೈರ್
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​).

Published On – 8:22 am, Tue, 21 July 26

Source link

ಸಿಕ್ಕಿಂ: ಜಲವಿದ್ಯುತ್ ಯೋಜನೆ ಸುರಂಗದಲ್ಲಿ ಭೂಕುಸಿತ, ಅನಿಲ ಸೋರಿಕೆ, 7 ಶವಗಳು ಪತ್ತೆ, ಹಲವರು ಸಿಲುಕಿರುವ ಶಂಕೆ – Kannada News | Sikkim Tunnel Collapse: Methane Gas Leak Kills 7 Workers, Rescue Efforts Underway

ನಾಮ್ಚಿ, ಜುಲೈ 21: ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಬಳಿ ಇರುವ ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗದಲ್ಲಿ ಭೀಕರ ಭೂಕುಸಿತ(Landslide) ಸಂಭವಿಸಿದೆ. ಇದರ ಬೆನ್ನಲ್ಲೇ ಸುರಂಗದೊಳಗೆ ಅಪಾಯಕಾರಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಸಿಕ್ಕಿಂನ ಸಮರ್ದುಂಗ್‌ನಲ್ಲಿ ಸೋಮವಾರ ಮಧ್ಯಾಹ್ನ 3.09 ರ ಸುಮಾರಿಗೆ ‘ತೀಸ್ತಾ ಹಂತ VI ಜಲವಿದ್ಯುತ್ ಯೋಜನೆ’ಯ ಸುರಂಗ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪಟೇಲ್ ಎಂಜಿನಿಯರಿಂಗ್ ಸಂಸ್ಥೆಯು ಈ ಯೋಜನೆಯ ನಿರ್ಮಾಣ ಹೊಣೆ ಹೊತ್ತುಕೊಂಡಿದೆ.

ಸುರಂಗದೊಳಗೆ ಸ್ಫೋಟದ ಶಬ್ದ: ಮೀಥೇನ್ ಅನಿಲ ಸೋರಿಕೆ
ಸುರಂಗದೊಳಗಿಂದ ತಕ್ಷಣವೇ ಓಡಿಬಂದು ಬಚಾವಾದ ಕಾರ್ಮಿಕರ ಪ್ರಕಾರ, ಕತ್ತಲೆಯಲ್ಲಿದ್ದ ಸುರಂಗದೊಳಗೆ ಇದ್ದಕ್ಕಿದ್ದಂತೆ ಭಾರಿ ಸ್ಫೋಟದಂತಹ ಸದ್ದು ಕೇಳಿಸಿತು. ತಕ್ಷಣವೇ ಬಂಡೆಗಳು ಕುಸಿದು ಬಿದ್ದು ಹೊರಹೋಗುವ ದಾರಿ ಬಂದ್ ಆಯಿತು.

ವಿಷಕಾರಿ ಮೀಥೇನ್ ಭೀತಿ: ಭೂಕುಸಿತದ ಬೆನ್ನಲ್ಲೇ ಸುರಂಗದೊಳಗೆ ಅತ್ಯಂತ ಅಪಾಯಕಾರಿ ‘ಮೀಥೇನ್ ಅನಿಲ’ ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಸಾಧನಗಳಿಲ್ಲದೆ ಸುರಂಗದೊಳಗೆ ಹೋಗಲು ಎರಡು ಬಾರಿ ಯತ್ನಿಸಿದರೂ, ಅನಿಲದ ತೀವ್ರತೆಯಿಂದಾಗಿ ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆ ಅನುಭವಿಸಿ ಹಿಂತಿರುಗಬೇಕಾಯಿತು.

ಮತ್ತಷ್ಟು ಓದಿ: ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!

ಎನ್‌ಡಿಆರ್‌ಎಫ್, ಸುಸಜ್ಜಿತ ರಕ್ಷಣಾ ಕಾರ್ಯಾಚರಣೆ
ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ಪಡೆ (SDRF), ಸಿಕ್ಕಿಂ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಆಮ್ಲಜನಕ ಸಿಲಿಂಡರ್ ಹಾಗೂ ವಿಶೇಷ ಆಕ್ಸಿಜನ್ ಮಾಸ್ಕ್‌ಗಳನ್ನು ಧರಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರಂಭದಲ್ಲಿ ಸುಮಾರು 19 ಕಾರ್ಮಿಕರು ಒಳಗೆ ಸಿಲುಕಿದ್ದರು. ನಂತರ ರಕ್ಷಣೆಗೆ ಹೋದ ಪಟೇಲ್ ಎಂಜಿನಿಯರಿಂಗ್ ಹಾಗೂ ಎನ್​ಎಚ್​ಪಿಸಿ ಸಂಸ್ಥೆಯ ಸಿಬ್ಬಂದಿಯೂ ಸೇರಿದಂತೆ ಒಟ್ಟು 20 ರಿಂದ 27 ಜನರು ಒಳಗೆ ಸಿಲುಕಿರುವ ಶಂಕೆ ಇದೆ.

ವಿಡಿಯೋ

ಎನ್‌ಡಿಆರ್‌ಎಫ್ ಪಡೆಗಳು ಸುರಂಗದ ಕೊನೆಯ ಹಂತವನ್ನು ತಲುಪಿದ ನಂತರವೇ ನೈಜ ಪರಿಸ್ಥಿತಿ ಸ್ಪಷ್ಟವಾಗಲಿದೆ. ಸದ್ಯಕ್ಕೆ ಸುರಂಗದೊಳಗೆ ಸಿಲುಕಿರುವ ಪ್ರತಿಯೊಬ್ಬ ಅಮಾಯಕರನ್ನು ಸುರಕ್ಷಿತವಾಗಿ ಹೊರತರುವುದೇ ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್ ತಂಡದ ಮೊದಲ ಆದ್ಯತೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಯಚೂರು, ಚಿತ್ರದುರ್ಗದಲ್ಲಿ ಮತ್ತೆ ಬೀದಿನಾಯಿಗಳ ದಾಳಿ: 4 ವರ್ಷದ ಬಾಲಕನ ಸ್ಥಿತಿ ಗಂಭೀರ, ನಾಲ್ವರು ಮಕ್ಕಳಿಗೆ ಗಾಯ – Kannada News | Stray Dog Attacks Spark Panic in Karnataka: 4 Year Old Critical in Raichur, Four Children Injured in Chitradurga

ಬೀದಿ ನಾಯಿಗಳು ಹಾಗೂ ಬಲಚಿತ್ರದಲ್ಲಿ ಗಾಯಾಳು ಬಾಲಕ ಗೋಪಾಲ್Image Credit source: tv9

ರಾಯಚೂರು, ಚಿತ್ರದುರ್ಗ, ಜುಲೈ 21: ರಾಯಚೂರು (Raichur) ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ. ಕೆಲ ದಿನ ಹಿಂದಷ್ಟೇ ಬೀದಿನಾಯಿಗಳ ದಾಳಿಯಿಂದ ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿದ್ದ ಬೆನ್ನಲ್ಲೇ, ಇದೀಗ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆದಿದೆ. ರಾಯಚೂರು ಹೊರವಲಯದ ಮಲಿಯಾಬಾರ್ ಪ್ರದೇಶದಲ್ಲಿ ಸೋಮವಾರ ಮನೆ ಸಮೀಪ ಆಟವಾಡುತ್ತಿದ್ದ ಗೋಪಾಲ್ ಎಂಬ ಬಾಲಕನ ಮೇಲೆ ಬೀದಿನಾಯಿಗಳು ಏಕಾಏಕಿ ಎರಗಿವೆ. ದಾಳಿಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ತಲೆಯ ಚರ್ಮಕ್ಕೆ ತೀವ್ರ ಹಾನಿಯಾಗಿದೆ.

ಬೀದಿ ನಾಯಿ ದಾಳಿಗೆ ಬಾಲಕನ ಸ್ಥಿತಿ ಗಂಭೀರ

ಗಾಯಾಳು ಬಾಲಕನಿಗೆ ರಾಯಚೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಬಳಿಕ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿನಾಯಿಗಳನ್ನು ತಕ್ಷಣ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ

ಇತ್ತ ಚಿತ್ರದುರ್ಗ ನಗರದಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ದಿನ ನಾಲ್ವರು ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಚೇಳಗುಡ್ಡ ಹಾಗೂ ನೆಹರುನಗರ ಬಡಾವಣೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಐದರಿಂದ ಆರು ವರ್ಷದೊಳಗಿನ ಮಕ್ಕಳು ಗಾಯಗೊಂಡಿದ್ದಾರೆ. ಆಲೀನಾ, ಆದಿಲ್, ಮನ್ವಿತ್ ಸೇರಿದಂತೆ ನಾಲ್ವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿದ ಬೀದಿ ನಾಯಿಗಳು

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ನಗರಸಭೆ ಮತ್ತು ಜಿಲ್ಲಾಡಳಿತ ಬೀದಿನಾಯಿ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಅಗತ್ಯ ಇಂಜೆಕ್ಷನ್ ಲಭ್ಯವಿರಲಿಲ್ಲ. ಹೊರಗಿನಿಂದ ಖರೀದಿಸಿ ತರಬೇಕಾಯಿತು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಯಿ ಕಡಿತ ನಿರ್ಲಕ್ಷಿಸಲು ಸಾಧ್ಯವಿಲ್ಲ, ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಖಡಕ್ ಆದೇಶ

ರಾಯಚೂರು ಮತ್ತು ಚಿತ್ರದುರ್ಗದ ಈ ಎರಡು ಘಟನೆಗಳು ರಾಜ್ಯದಲ್ಲಿ ಬೀದಿನಾಯಿಗಳ ನಿಯಂತ್ರಣ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮಕ್ಕಳ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಹಾಗೂ ಬಸವರಾಜ ಮುದನೂರ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Namma Metro: ಬನ್ನೇರು​‌ಘಟ್ಟ ಪಿಂಕ್ ಲೈನ್ ಸಂಚಾರ ಆಸ್ಟ್ 15ಕ್ಕೂ ಅನುಮಾನ! – Kannada News | Namma Metro Pink Line: Bannerghatta Route Opening Delayed Past August 15

ಬನ್ನೇರು​‌ಘಟ್ಟ ಪಿಂಕ್ ಲೈನ್ ಸಂಚಾರ ಆಸ್ಟ್ 15ಕ್ಕೂ ಅನುಮಾನ!
Image Credit source: gettyimages.com

ಬೆಂಗಳೂರು, ಜುಲೈ 21: ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಬಿಡುಗಡೆ ನೀಡಬೇಕಿದ್ದ ‘ನಮ್ಮ ಮೆಟ್ರೋ’ ಯೋಜನೆಯ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಪದೆ ಪದೆ ವಿಳಂಬವಾಗುತ್ತಿರುವುದು ರಾಜಧಾನಿಯ ಜನರಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ. ಪ್ರಮುಖವಾಗಿ ಬನ್ನೇರುಘಟ್ಟ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ‘ಪಿಂಕ್ ಲೈನ್’ (Pink Line Metro) ಯೋಜನೆಯ ಮೊದಲ ಹಂತದ ಸಂಚಾರವನ್ನು ಆಗಸ್ಟ್ 15ರ ವೇಳೆಗೆ ಆರಂಭಿಸಲು ಬಿಎಂಆರ್‌ಸಿಎಲ್ (BMRCL) ಯೋಜನೆ ರೂಪಿಸಿತ್ತು. ಆದರೆ, ಪ್ರಸ್ತುತ ಕಾಮಗಾರಿಯ ವೇಗವನ್ನು ನೋಡಿದರೆ ಈ ಗಡುವನ್ನು ಸಹ ಮೆಟ್ರೋ ತಲುಪುವುದು ಅನುಮಾನ ಎನ್ನಲಾಗಿದೆ.

ಆಗಸ್ಟ್ 15ರ ಡೆಡ್‌ಲೈನ್ ಮಿಸ್

ಪಿಂಕ್ ಲೈನ್ ಯೋಜನೆಯ ಅಡಿಯಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್‌ ಮೇಲ್ಸೇತುವೆ (Elevated Section) ಮಾರ್ಗವನ್ನು ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆಯಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ನಿರ್ಧರಿಸಲಾಗಿತ್ತು. ಪ್ರಸ್ತುತ ಸಿವಿಲ್ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದರೂ, ರೈಲು ಸೆಟ್‌ಗಳ (Trainsets) ಪೂರೈಕೆ ಹಾಗೂ ಸಿಗ್ನಲಿಂಗ್ ಮತ್ತು ಸುರಕ್ಷತಾ ಪರೀಕ್ಷೆಗಳು ಇನ್ನೂ ಬಾಕಿ ಇವೆ.

ಕಾಮಗಾರಿ ಸ್ಥಳಗಳಲ್ಲಿ ಅಗತ್ಯಕ್ಕಿಂತ ಶೇ 50ರಷ್ಟು ಕಡಿಮೆ ಕಾರ್ಮಿಕರಿರುವುದು ಮತ್ತು ಮೈಕ್ರೋ-ಲೆವೆಲ್ ಸಿವಿಲ್ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಬನ್ನೇರು​‌ಘಟ್ಟ ರಸ್ತೆಯ ನಿತ್ಯದ ಭಾರಿ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದ ಲಕ್ಷಾಂತರ ಉದ್ಯೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಮತ್ತೊಮ್ಮೆ ಕಾಯುವಿಕೆ ತಪ್ಪಿದ್ದಲ್ಲ.

ಇದನ್ನೂ ಓದಿ ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ

ಅಂಡರ್ ಗ್ರೌಂಡ್ ಮಾರ್ಗದ ಸ್ಥಿತಿ ಏನು?

ಬನ್ನೇರು​‌ಘಟ್ಟ ಮಾರ್ಗ ಮಾತ್ರವಲ್ಲದೆ, ಪಿಂಕ್ ಲೈನ್‌ನ ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ 13.75 ಕಿ.ಮೀ. ಭೂಗತ (Underground Section) ಮಾರ್ಗದ ಕಾಮಗಾರಿಯೂ ನಿಗದಿತ ಸಮಯಕ್ಕಿಂತ ಹಿಂದೆ ಬಿದ್ದಿದೆ. ಪಿಂಕ್ ಲೈನ್ (ಮೇಲ್ಸೇತುವೆ ಮಾರ್ಗ) ಆಗಸ್ಟ್ 15ರ ಬದಲಾಗಿ 2026ರ ಕೊನೆಯ ಹಂತಕ್ಕೆ ಮುಂದೂಡಿಕೆ ಸಾಧ್ಯತೆ ಇದೆ. ಪಿಂಕ್ ಲೈನ್ ಅಂಡರ್ ಗ್ರೌಂಡ್ ಮಾರ್ಗ ಮಾರ್ಚ್ 2027ರ ವೇಳೆಗೆ ಪೂರ್ಣಗೊಳ್ಳುವ ಅಂದಾಜು. ಬ್ಲೂ ಲೈನ್ (ಸಿಲ್ಕ್ ಬೋರ್ಡ್ – ಕೆಐಎಎಲ್ ವಿಮಾನ ನಿಲ್ದಾಣ) ಪ್ರಮುಖ ಇಂಟರ್‌ಚೇಂಜ್ ಸ್ಟೇಷನ್‌ಗಳ ಕಾಮಗಾರಿ ಬಾಕಿ ಇರುವುದರಿಂದ 2027ರ ಮಧ್ಯಭಾಗಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನಲ್ಲಿ ಜಾನ್ ಅಬ್ರಹಾಂ ಹೊಸ ಬಂಗಲೆ; 84 ಕೋಟಿ ರೂ. ಆಸ್ತಿ ಖರೀದಿಸಿದ ಬಾಲಿವುಡ್ ನಟ – Kannada News | John Abraham Buys Rs 84 Cr Bandra Bungalow: Mumbai Luxury Real Estate Booms

ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಮುಂಬೈನಲ್ಲಿ ಭರ್ಜರಿ ಆಸ್ತಿ ಖರೀದಿಸಿದ್ದಾರೆ. ಬಾಂದ್ರಾ ವೆಸ್ಟ್‌ನಲ್ಲಿ ಒಂದು ಐಷಾರಾಮಿ ಬಂಗಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಬೆಲೆ ಬರೋಬ್ಬರಿ 84 ಕೋಟಿ ರೂಪಾಯಿ. ಇತ್ತೀಚೆಗಷ್ಟೇ ಅಂದರೆ ಜುಲೈ 14, 2026 ರಂದು ಈ ಬಂಗಲೆ ರಿಜಿಸ್ಟರ್ ಆಗಿದೆ. ಈ ಒಂದು ಡೀಲ್‌ಗಾಗಿ ಜಾನ್ ಅಬ್ರಹಾಂ 5.04 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಿದ್ದಾರೆ. ಇನ್ನು ಈ ಪ್ರಾಪರ್ಟಿ ಒಟ್ಟು 1,017.60 ಚದರ ಮೀಟರ್ ವಿಸ್ತೀರ್ಣದಲ್ಲಿದೆ. ಇದರಲ್ಲಿ ದೊಡ್ಡ ಬಂಗಲೆ ಜೊತೆಗೆ ಒಂದು ಔಟ್‌ಹೌಸ್ ಕೂಡ ಇದೆ. ನೋಶಿರ್ ಎರುಚ್ ಡಿವಿಟ್ರೆ ಎಂಬುವವರಿಂದ ನಟ ಇದನ್ನು ಕೊಂಡುಕೊಂಡಿದ್ದಾರೆ.

ಜಾನ್ ಅಬ್ರಹಾಂಗೆ ಮುಂಬೈನಲ್ಲಿ ಬಂಗಲೆ ಖರೀದಿಸುತ್ತಿರುವುದು ಇದೇ ಮೊದಲೇನಲ್ಲ. 2023ರ ಡಿಸೆಂಬರ್‌ನಲ್ಲೂ ಅವರು ಖಾರ್ ಏರಿಯಾದಲ್ಲಿ ಒಂದು ಮನೆ ಖರೀದಿಸಿದ್ದರು. ಅದಕ್ಕೆ 70.83 ಕೋಟಿ ರೂಪಾಯಿ ಖರ್ಚು ಮಾಡಿದ್ದರು.

ಮುಂಬೈನಲ್ಲಿ ಬಿರುಸು ಪಡೆದ ಬಂಗಲೆ ಖರೀದಿ ಬೇಟೆ

ಮುಂಬೈನ ಪ್ರಮುಖ ಏರಿಯಾಗಳಾದ ಬಾಂದ್ರಾ, ಜುಹು ಮತ್ತು ಮಲಬಾರ್ ಹಿಲ್ಸ್‌ನಲ್ಲಿ ಜಾಗ ಸಿಗುವುದು ತುಂಬಾ ಅಪರೂಪವಾಗಿದೆ. ಸ್ವತಂತ್ರ ಬಂಗಲೆಗಳಂತೂ ಸಿಗುತ್ತಲೇ ಇಲ್ಲ. ಹೀಗಾಗಿಯೇ ಇವುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ರೇಟ್ ಕೂಡ ಕೋಟಿ ಕೋಟಿ ದಾಟುತ್ತಿದೆ.

ಇದನ್ನೂ ಓದಿ: ‘ಧುರಂಧರ್’ ವಿರುದ್ಧ ಗರಂ ಆದ್ರಾ ಜಾನ್ ಅಬ್ರಹಾಂ ? ವೈರಲ್ ಸುದ್ದಿಯ ಅಸಲಿಯತ್ತು ಇಲ್ಲಿದೆ

ಇತ್ತೀಚೆಗಷ್ಟೇ ಜುಹು ಪ್ರದೇಶದಲ್ಲಿರುವ ‘ವಿಲ್ಲಾ ವಿಲ್ಸನ್’ ಎಂಬ ಬಂಗಲೆ 135 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಕೆಲವು ತಿಂಗಳ ಹಿಂದಷ್ಟೇ ಪ್ರಸಿದ್ಧ ‘ಲೀಲಾ’ ಬಂಗಲೆ 221 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಕಳೆದ ವರ್ಷದ ಫೆಬ್ರವರಿಯಲ್ಲಿ ಐತಿಹಾಸಿಕ ‘ಲಕ್ಷ್ಮಿ ನಿವಾಸ್’ ಬಂಗಲೆ ಕೂಡ ಬರೋಬ್ಬರಿ 276 ಕೋಟಿ ರೂಪಾಯಿಗೆ ಡೀಲ್ ಆಗಿತ್ತು. ಒಟ್ಟಿನಲ್ಲಿ ಮುಂಬೈನಲ್ಲಿ ಕೋಟ್ಯಧಿಪತಿಗಳ ಮನೆ ಖರೀದಿ ಜೋರಾಗಿ ಸಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೂವರು ಹೊಸಬರ ಎಂಟ್ರಿ: ಹೀಗಿದೆ ಟೀಮ್ ಇಂಡಿಯಾ – Kannada News | IND vs ZIM: India T20 Squad For Zimbabwe 2026

ಭಾರತ ಮತ್ತು ಝಿಂಬಾಬ್ವೆ ನಡುವಣ ಮೂರು ಮ್ಯಾಚ್​ಗಳ ಟಿ20 ಸರಣಿಯು ಜುಲೈ 23 ರಿಂದ ಶುರುವಾಗಲಿದೆ. ಈ ಸರಣಿಗಾಗಿ 15 ಸದಸ್ಯರ ಬಲಿಷ್ಠ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ತಿಲಕ್ ವರ್ಮಾ ಅವರಿಗೆ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಿಂದ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್​ ಪ್ರಭ್​ಸಿಮ್ರಾನ್​ ಸಿಂಗ್​ ಅವರನ್ನು ಆಯ್ಕೆ ಮಾಡಲಾಗಿದೆ.

ಮೂವರಿಗೆ ಚೊಚ್ಚಲ ಅವಕಾಶ!

ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಇತ್ತೀಚೆಗಷ್ಟೇ ಅತಿ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಝಿಂಬಾಬ್ವೆ ಪ್ರವಾಸದಲ್ಲೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಮೂವರು ಯುವ ಆಟಗಾರರಿಗೆ ಮೊದಲ ಬಾರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಲಭಿಸಿದೆ.

  • ಪ್ರಭ್‌ಸಿಮ್ರಾನ್ ಸಿಂಗ್: ಪಂಜಾಬ್ ಕಿಂಗ್ಸ್ ಪರ ಅಬ್ಬರಿಸಿದ್ದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಪ್ರಭ್‌ಸಿಮ್ರಾನ್ ಸಿಂಗ್ ಈ ಬಾರಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
  • ಯಶ್ ಠಾಕೂರ್: ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದ ಯುವ ವೇಗಿ ಯಶ್ ಠಾಕೂರ್ ಕೂಡ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
  • ಅಶೋಕ್ ಶರ್ಮಾ: ಗುಜರಾತ್ ಟೈಟಾನ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅಶೋಕ್ ಶರ್ಮಾ ಕೂಡ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮಯಾಂಕ್ ಯಾದವ್ ಕಂಬ್ಯಾಕ್:

ಗಾಯದ ಸಮಸ್ಯೆಯಿಂದಾಗಿ ದೀರ್ಘಕಾಲ ಕ್ರಿಕೆಟ್ ಮೈದಾನದಿಂದ ದೂರವಿದ್ದ, ಗಂಟೆಗೆ 150+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಎಕ್ಸ್‌ಪ್ರೆಸ್ ವೇಗಿ ಮಯಂಕ್ ಯಾದವ್ ಹಾಗೂ ಮತ್ತೊಬ್ಬ ಸ್ಫೋಟಕ ಫಿನಿಶರ್ ರಿಂಕು ಸಿಂಗ್ ತಂಡಕ್ಕೆ ಮರಳಿದ್ದಾರೆ. ಇವರೊಂದಿಗೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಮಿಂಚಿದ್ದ ಆಲ್‌ರೌಂಡರ್ ಹರ್ಷ್ ದುಬೆ ಕೂಡ ತಂಡದಲ್ಲಿದ್ದಾರೆ. ಅದರಂತೆ ಝಿಂಬಾಬ್ವೆ ಸರಣಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

ಭಾರತ ಮತ್ತು ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ:

  1. ಜುಲೈ 23 (ಗುರುವಾರ): ಮೊದಲನೇ ಟಿ20 ಪಂದ್ಯ.
  2. ಜುಲೈ 25 (ಶನಿವಾರ): ಎರಡನೇ ಟಿ20 ಪಂದ್ಯ.
  3. ಜುಲೈ 26 (ಭಾನುವಾರ): ಮೂರನೇ ಟಿ20 ಪಂದ್ಯ.

ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನ

ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ಝಿಂಬಾಬ್ವೆಯ ಐತಿಹಾಸಿಕ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾರತೀಯ ಕಾಲಮಾನ (IST) ಸಂಜೆ 4:30ಕ್ಕೆ ಆರಂಭವಾಗಲಿವೆ.

Source link

ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಎಂಟ್ರಿ; ಇಲ್ಲಿದೆ ‘ರಾಮಾಯಣ’ ಕಲಾವಿದರ ಫುಲ್ ಲಿಸ್ಟ್ – Kannada News | Ramayana Movie 2026: Full Cast Updates Anupam Kher as Jatayu

2026ರ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’ ಕುರಿತು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ದೆಹಲಿಯ ಭಾರತ್ ಮಂಟಪದಲ್ಲಿ ಚಿತ್ರತಂಡ ಇತ್ತೀಚೆಗೆ ‘ಪ್ರಥಮ ಸಂಕಲ್ಪ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಈವೆಂಟ್‌ನಲ್ಲಿ ಸಿನಿಮಾದ 4 ನಿಮಿಷಗಳ ಟ್ರೇಲರ್ ಪ್ರದರ್ಶಿಸಲಾಗಿದೆ. ಇದರ ಜೊತೆಗೆ ಚಿತ್ರದ ಪಾತ್ರಗಳನ್ನು ಪರಿಚಯಿಸುವ ವಿಶೇಷ ಕಾಮಿಕ್ ಬುಕ್ ಕೂಡ ಬಿಡುಗಡೆ ಮಾಡಲಾಗಿದೆ.

ಈ ಕಾಮಿಕ್ ಬುಕ್ ಮೂಲಕ ಸಿನಿಮಾದ ದೊಡ್ಡ ರಹಸ್ಯವೊಂದು ಹೊರಬಿದ್ದಿದೆ. ಈ ಹಿಂದೆ ಜಟಾಯು ಪಾತ್ರಕ್ಕೆ ಅಮಿತಾಭ್ ಬಚ್ಚನ್ ಧ್ವನಿ ನೀಡಲಿದ್ದಾರೆ ಎಂಬ ವದಂತಿ ಇತ್ತು. ಆದರೆ ಈ ಸುದ್ದಿ ಸುಳ್ಳಾಗಿದೆ. ಹಿರಿಯ ನಟ ಅನುಪಮ್ ಖೇರ್ ಜಟಾಯು ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ. ಕಾಮಿಕ್ ಬುಕ್‌ನಲ್ಲಿ ಈ ವಿಷಯ ಅಧಿಕೃತವಾಗಿದೆ. ಜಟಾಯು ಮತ್ತು ರಾವಣನ ನಡುವಿನ ಯುದ್ಧ ಸಿನಿಮಾದಲ್ಲಿ ಅತ್ಯಂತ ರೋಮಾಂಚನಕಾರಿಯಾಗಿ ಮೂಡಿಬಂದಿದೆ ಎಂದು ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದಂಡೇ ಜಮಾಯಿಸಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಸೀತಾ ಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಇನ್ನು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಲಿದ್ದಾರೆ. ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:  ‘ರಾಮಾಯಣ’ ವೇದಿಕೆಯಲ್ಲಿ ಯಶ್ ಹವಾ ಕಂಡು ದಂಗಾದ ಬಾಲಿವುಡ್ ಮಂದಿ

ಉಳಿದಂತೆ ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ಕೌಸಲ್ಯೆಯಾಗಿ ಇಂದಿರಾ ಕೃಷ್ಣನ್ ಮತ್ತು ಕೈಕೇಯಿಯಾಗಿ ಲಾರಾ ದತ್ತಾ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ನಟಿಸುತ್ತಿದ್ದಾರೆ. ಭರತನಾಗಿ ಆದಿನಾಥ್ ಕೊಠಾರೆ ಮತ್ತು ಶತ್ರುಘ್ನನಾಗಿ ನಿತೀಶ್ ಶರ್ಮಾ ಬಣ್ಣ ಹಚ್ಚಿದ್ದಾರೆ. ವಿಭೀಷಣನ ಪಾತ್ರದಲ್ಲಿ ಹರೀಶ್ ಉತ್ತಮನ ಹಾಗೂ ಕುಂಭಕರ್ಣನಾಗಿ ಫೈಸಲ್ ಮಲಿಕ್ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ತಾರಾಗಣ ಹೊಂದಿದ ಹೆಮ್ಮೆಯ ಚಿತ್ರವಾಗಲಿದೆ.

Source link

Video: ಮಹಾರಾಷ್ಟ್ರದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಆಭರಣದಂಗಡಿ ದರೋಡೆ – Kannada News | Palghar Jewelry Robbery: Bulletproof Vest Gang Steals Gold Worth Lakhs

ಮುಂಬೈ, ಜುಲೈ 21: ಮಹಾರಾಷ್ಟ್ರದ ಪಾಲ್ಗರ್​​ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೂವರು ಬಂದೂಕುಧಾರಿಗಳು ಬುಲೆಟ್​ಪ್ರೂಫ್ ಜಾಕೆಟ್ ಧರಿಸಿ ಬಂದು ಆಭರಣದಂಗಡಿ ದರೋಡೆ(Robbery) ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆಭರಣ ಮಳಿಗೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರು ಗುಂಡು ನಿರೋಧಕ ಜಾಕೆಟ್‌ಗಳನ್ನು ಧರಿಸಿಕೊಂಡು, ಸಾರ್ವಜನಿಕರ ಮುಂಭಾಗದಲ್ಲೇ ಬಂದೂಕುಗಳನ್ನು ಝಳಪಿಸುತ್ತಾ ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿದ್ದಾರೆ.

ಬಂದೂಕು ತೋರಿಸಿ ಪ್ಲಾಸ್ಟಿಕ್ ಚೀಲಕ್ಕೆ ಚಿನ್ನ ತುಂಬಿಕೊಂಡ ಕಳ್ಳರು
ಸೋಮವಾರ ಸಂಜೆ 4.30 ರ ಸುಮಾರಿಗೆ ಪಾಲ್ಘರ್​ನಲ್ಲಿರುವ ‘ಲಕ್ಷ್ಮಿ ಜ್ಯುವೆಲ್ಲರ್ಸ್’ ಮಳಿಗೆಯಲ್ಲಿ ಈ ದರೋಡೆ ನಡೆದಿದೆ. ಬೈಕ್‌ನಲ್ಲಿ ಬಂದ ಮೂವರು ಮುಸುಕುಧಾರಿಗಳು, ದೇಶೀಯ ನಿರ್ಮಿತ ಪಿಸ್ತೂಲ್‌ಗಳು ಮತ್ತು ಶಾರ್ಟ್‌ಗನ್‌ಗಳೊಂದಿಗೆ ಅಂಗಡಿಯೊಳಗೆ ನುಗ್ಗಿದ್ದಾರೆ.

ಅಲ್ಲಿದ್ದ ಸಿಬ್ಬಂದಿ ಮತ್ತು ಮಾಲೀಕರಿಗೆ ಗನ್ ತೋರಿಸಿ ಹೆದರಿಸಿದ ದರೋಡೆಕೋರರು, ಕೌಂಟರ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿಕೊಂಡಿದ್ದಾರೆ.

ವಿಡಿಯೋ:

ಗಾಳಿಯಲ್ಲಿ ಫೈರಿಂಗ್: ಸಾರ್ವಜನಿಕರಲ್ಲಿ ಭೀತಿ
ಘಟನೆಯ ವೇಳೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದರೋಡೆಕೋರರು ಲೂಟಿ ಮಾಡಿದ ಚೀಲಗಳೊಂದಿಗೆ ಧೈರ್ಯವಾಗಿ ಹೊರಗೆ ನಡೆದುಕೊಂಡು ಬಂದಿದ್ದಾರೆ. ಯಾರೂ ತಮ್ಮನ್ನು ಬೆನ್ನಟ್ಟಬಾರದು ಮತ್ತು ಮಧ್ಯಪ್ರವೇಶಿಸಬಾರದು ಎಂಬ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿ ಭೀತಿ ಸೃಷ್ಟಿಸಿದ್ದಾರೆ. ನಂತರ ಸಿದ್ಧವಾಗಿಟ್ಟುಕೊಂಡಿದ್ದ ಬೈಕ್ ಏರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮತ್ತಷ್ಟು ಓದಿ:
ಬಸ್​​​ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ: ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಘಟನೆ ನಡೆದ ತಕ್ಷಣ ಪೊಲೀಸರು ದರೋಡೆಕೋರರನ್ನು ಬೆನ್ನಟ್ಟಲು ಯತ್ನಿಸಿದರಾದರೂ, ಅವರು ವೇಗವಾಗಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಸ್ಥಳೀಯ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆಯು ಪಾಲ್ಘರ್ ವರ್ತಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:22 am, Tue, 21 July 26

Source link

‘ತಬಾಹಿ..’ ಬಳಿಕ ಬರ್ತಿದೆ ‘ಮನಮೋಹಕ’ ಸಾಂಗ್; ‘ಟಾಕ್ಸಿಕ್’ ತಂಡದ ಕಡೆಯಿಂದ ಸಿಕ್ತು ಅಪ್​​ಡೇಟ್ – Kannada News | Toxic Movie Manamohaka Song Yash and Tara Sutaria Romantic Track to release Today

‘ಟಾಕ್ಸಿಕ್’ ಚಿತ್ರದ  (Toxic Movie)‘ತಬಾಹಿ..’ ಹಾಡು ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿದೆ. ಕೋಟ್ಯಂತರ ಬಾರಿ ವೀಕ್ಷಣೆ ಕಂಡಿರುವ ಈ ವಿಡಿಯೋ ಸಾಂಗ್ ಸಾಕಷ್ಟು ಬೋಲ್ಡ್ ಆಗಿತ್ತು. ಈಗ ‘ಟಾಕ್ಸಿಕ್’ ಟೀಂ ಕಡೆಯಿಂದ ಎರಡನೇ ಸಾಂಗ್ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿದೆ. ಇಂದು ‘ಮನಮೋಹಕ..’ ಸಾಂಗ್ ರಿಲೀಸ್ ಆಗಲಿದೆ. ಈ ಹಾಡು ಯಾವ ರೀತಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಹಲವು ಹೀರೋಯಿನ್​​ಗಳಿದ್ದಾರೆ. ಯಶ್ ಅವರು ಯಾರ ಜೊತೆ ಫೈಟ್ ಮಾಡುತ್ತಾರೆ, ಯಾರ ಜೊತೆ ರೊಮ್ಯಾನ್ಸ್ ಮಾಡುತ್ತಾರೆ ಎಂಬ ಸ್ಪಷ್ಟನೆ ಸದ್ಯಕ್ಕಂತೂ ಸಿಗುತ್ತಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ತಬಾಹಿ’ ಹಾಡಿನಲ್ಲಿ ಯಶ್ ಅವರು ಕಿಯಾರಾ ಅಡ್ವಾಣಿ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ತಾರಾ ಸುತಾರಿಯಾ ಜೊತೆ ಪ್ರಣಯಗೀತೆ ಹಾಡುವ ಸಮಯ.

ಇಂದು (ಜುಲೈ 21) ಬೆಳಿಗ್ಗೆ 11.33ಕ್ಕೆ ‘ಟಾಕ್ಸಿಕ್’ ಚಿತ್ರದ ಸಾಂಗ್ ರಿಲೀಸ್ ಆಗಲಿದೆ. ಈ ಹಾಡು ಸಾಕಷ್ಟು ರೊಮ್ಯಾಂಟಿಕ್ ಆಗಿ ಇರಲಿದೆ ಎನ್ನಲಾಗಿದೆ. ಹೀಗಾಗಿ, ವಿಡಿಯೋ ಸಾಂಗ್ ಮೂಲಕ ಎಲ್ಲರ ಗಮನ ಸೆಳೆಯಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಾ ಇದೆ.

‘ತಬಾಹಿ’ ಹಾಡಿಗೆ ಯೋಗಾರಜ್ ಭಟ್ ಅವರು ಸಾಹಿತ್ಯ ಬರೆದಿದ್ದರು. ಸಂದರ್ಶನದ ವೇಳೆ ಅವರು, ‘ಇನ್ನೂ ಎರಡು ಹಾಡಿಗೆ ನಾನು ಸಾಹಿತ್ಯ ಬರೆದಿದ್ದೇನೆ’ ಎಂದು ಅವರು ಹೇಳಿದ್ದರು. ಈಗ ರಿಲೀಸ್ ಆಗಲಿರೋ ‘ಮನಮೋಹಕ..’ ಹಾಡಿಗೆ ಯೋಗರಾಜ್ ಭಟ್ ಅವರ ಸಾಹಿತ್ಯ ಇರಬಹುದು ಎಂದು ಪ್ರೇಕ್ಷಕರು ಊಹಿಸುತ್ತಾ ಇದ್ದಾರೆ. ಸಾಂಗ್ ರಿಲೀಸ್ ಆದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್? ಸ್ಥಳ ಎಲ್ಲಿ?

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರಿದ್ದಾರೆ. ಈ ಚಿತ್ರದಲ್ಲಿ ಯಶ್ ಅವರದ್ದು ದ್ವಿಪಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version