FIFA World Cup 2026: ಫಿಫಾ ಫೈನಲ್ ಹಿನ್ನೆಲೆಯಲ್ಲಿ ಜು. 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಕೇರಳ ಸರ್ಕಾರ! – Kannada News | Kerala Declares Holiday for FIFA World Cup 2026 Final: Schools and Colleges Off

ಕೇರಳಿಗರಲ್ಲಿ ಫುಟ್‌ಬಾಲ್ ಆಟದ ಮೇಲಿರುವ ಜಾಗತಿಕ ಮಟ್ಟದ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ. ಇಂದು ಮಧ್ಯರಾತ್ರಿ ನಡೆಯಲಿರುವ ಫಿಫಾ ವಿಶ್ವಕಪ್ 2026ರ (FIFA World Cup 2026) ಮಹಾ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಜುಲೈ 20 ರ ಸೋಮವಾರದಂದು ರಾಜ್ಯದ ಎಲ್ಲಾ ಶಾಲೆಗಳು ಹಾಗೂ ಕಾಲೇಜುಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಅಧಿಕೃತ ರಜೆ ಘೋಷಿಸಿದೆ. ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಈ ಹೈ-ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ವಿಶಿಷ್ಟ ನಿರ್ಧಾರ ಕೈಗೊಳ್ಳಲಾಗಿದೆ.

ಮಕ್ಕಳ ನಿದ್ದೆಗೆಡಿಸಲಿರುವ ‘ಮೆಸ್ಸಿ ವರ್ಸಸ್ ಸ್ಪೇನ್’ ಕದನ:

ಹಾಲಿ ಚಾಂಪಿಯನ್ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಹಾಗೂ ಯುರೋಪ್ ಚಾಂಪಿಯನ್ ಸ್ಪೇನ್ ನಡುವಿನ ಪ್ರಶಸ್ತಿ ಸಮರವು ಭಾರತೀಯ ಕಾಲಮಾನ (IST) ಭಾನುವಾರ ಮಧ್ಯರಾತ್ರಿ 12:30 ಕ್ಕೆ ಆರಂಭವಾಗಲಿದೆ. ಈ ರೋಮಾಂಚಕ ಪಂದ್ಯ ಮುಕ್ತಾಯಗೊಳ್ಳಲು ಮುಂಜಾನೆವರೆಗೂ ಸಮಯ ಹಿಡಿಯಲಿದ್ದು, ಆ ಬಳಿಕ ವಿಜೇತ ತಂಡದ ಅಭಿಮಾನಿಗಳು ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಲಿದ್ದಾರೆ. ಪಂದ್ಯದ ಪ್ರಸಾರದ ಸಮಯದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಡರಾತ್ರಿಯವರೆಗೆ ಎಚ್ಚರವಿರಬೇಕಾಗುತ್ತದೆ. ಇದರಿಂದ ಸೋಮವಾರದ ದಿನಚರಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡು ಈ ರಜೆ ನೀಡಲಾಗಿದೆ.

“ಖುಷಿನಾ ಮಕ್ಕಳೇ?” – ಸೋಷಿಯಲ್ ಮೀಡಿಯಾದಲ್ಲಿ ಸಚಿವರ ಪೋಸ್ಟ್:

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಚಿವ ಎನ್. ಶಂಶುದ್ದೀನ್ ಅವರು ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, “ಈಗ ಖುಷಿನಾ ಮಕ್ಕಳೇ?” ಎಂದು ಪ್ರೀತಿಯಿಂದ ಪ್ರಶ್ನಿಸಿದ್ದಾರೆ. ಫುಟ್‌ಬಾಲ್ ಪ್ರೇಮಿಗಳಾದ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಸಂಘಟನೆಗಳಿಂದ ಬಂದ ವ್ಯಾಪಕ ಮನವಿಗಳನ್ನು ಪುರಸ್ಕರಿಸಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ಕಚೇರಿಯು ಈ ಆದೇಶ ಹೊರಡಿಸಿದೆ. ಮಾಜಿ ಶಿಕ್ಷಣ ಸಚಿವರಾದ ವಿ. ಶಿವನ್‌ಕುಟ್ಟಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ತಡರಾತ್ರಿಯ ಪಂದ್ಯದ ನಂತರ ಮಕ್ಕಳಿಗೆ ತರಗತಿಗಳಿಗೆ ಹಾಜರಾಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರಜೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್​ನ 21 ರೋಚಕ ಸಂಗತಿಗಳು ನಿಮಗೆ ಗೊತ್ತೇ?

ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ:

ಸರ್ಕಾರವು ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರೂ, ಸೋಮವಾರ (ಜುಲೈ 20) ಮೊದಲೇ ನಿಗದಿಯಾಗಿರುವ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ (CMO) ಸ್ಪಷ್ಟಪಡಿಸಿದೆ. ಪರೀಕ್ಷೆಗಳು ಎಂದಿನಂತೆ ಜರುಗಲಿವೆ. ರಜೆಯಿಂದಾಗಿ ನಷ್ಟವಾಗುವ ಶೈಕ್ಷಣಿಕ ದಿನವನ್ನು ಸರಿದೂಗಿಸಲು ಮುಂದಿನ ಯಾವುದಾದರೊಂದು ಶನಿವಾರವನ್ನು ಕೆಲಸದ ದಿನವನ್ನಾಗಿ ಪರಿವರ್ತಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಕೇರಳದಾದ್ಯಂತ ಹಬ್ಬದ ವಾತಾವರಣ:

ಕೇರಳದಲ್ಲಿ ಫುಟ್‌ಬಾಲ್ ಜ್ವರ ನೆತ್ತಿಗೇರಿದ್ದು, ಇಡೀ ರಾಜ್ಯದಲ್ಲಿ ಹಬ್ಬದ ಸಡಗರ ಮನೆಮಾಡಿದೆ. ವಿವಿಧ ಸ್ಪೋರ್ಟ್ಸ್ ಕ್ಲಬ್‌ಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸಾರ್ವಜನಿಕ ಮೈದಾನಗಳು ಹಾಗೂ ಪಾರ್ಕ್‌ಗಳಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಣೆಗಾಗಿ ಬೃಹತ್ ಗಾತ್ರದ ಎಲ್‌ಇಡಿ (LED) ಪರದೆಗಳನ್ನು ಅಳವಡಿಸಿವೆ. ತಿರುವನಂತಪುರಂ ಹಾಗೂ ಕೊಚ್ಚಿಯಂತಹ ನಗರಗಳಲ್ಲಿ ಅಭಿಮಾನಿಗಳ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳ ಸಾಗರವೇ ಹರಿದುಬರುವ ನಿರೀಕ್ಷೆ ಇರುವುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಕೇರಳ ಪೊಲೀಸರು ಕಟ್ಟುನಿಟ್ಟಿನ ಕಣ್ಗಾವಲು ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:50 pm, Sun, 19 July 26

Source link

ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳನ್ನು ಎಲ್ಲಿ ವೀಕ್ಷಿಸಬಹುದು? – Kannada News | Where to watch 72 national award winning movies on OTT

ನಿನ್ನೆಯಷ್ಟೆ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಕನ್ನಡದ ‘ಮಿಥ್ಯ’ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿವೆ. ಕೆಲವು ಬಹಳ ಜನಪ್ರಿಯ, ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಚಿತ್ರಮಂದಿರಗಳಲ್ಲಿ ಹೆಚ್ಚು ಗಮನ ಸೆಳೆದ ಆದರೆ ಒಳ್ಳೆಯ ಸಿನಿಮಾಗಳು ಎನಿಸಿಕೊಂಡಿರುವ ಸಿನಿಮಾಗಳಿಗೂ ಸಹ ಪ್ರಶಸ್ತಿ ಸಿಕ್ಕಿವೆ. ಇಂಥಹಾ ಸಿನಿಮಾಗಳನ್ನೆಲ್ಲ ಎಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ….

ಮಿಥ್ಯ

ಕನ್ನಡದ ಸಿನಿಮಾ ‘ಮಿಥ್ಯ’ಗೆ ಒಟ್ಟು ಮೂರು ಪ್ರಶಸ್ತಿಗಳು ದೊರಕಿದ್ದು, ಅವುಗಳಲ್ಲಿ ಒಂದು ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಧಕ್ಕಿದೆ. ಅದಾದ ಬಳಿಕ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ರೂಪಾ ಅವರಿಗೆ ಹಾಗೂ ಅತ್ಯುತ್ತಮ ಬಾಲನಟ ಪ್ರಶಸ್ತಿ ಅತೀಶ್ ಶೆಟ್ಟಿಗೆ ಲಭಿಸಿದೆ. ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಿದೆ.

ಪ್ರಶಸ್ತಿ ಪಡೆದ ಸಿನಿಮಾಗಳು ಮತ್ತು ಅವರು ಲಭ್ಯವಿರುವ ಒಟಿಟಿ

ತೀರ್ಪುಗಾರರ ವಿಶೇಷ ಆಯ್ಕೆ-ಮೇಯಳಗನ್- ನಟ್​​ಫ್ಲಿಕ್ಸ್

ಅತ್ಯುತ್ತಮ ನಟ ತೀರ್ಪುಗಾರರ ಆಯ್ಕೆ- ಕ್ಯಾಪ್ಟನ್ ಮಿಲ್ಲರ್ (ಧನುಶ್)

ಅತ್ಯುತ್ತಮ ಆಕ್ಷನ್ -ಮಹಾರಾಜ- ನೆಟ್​​ಫ್ಲಿಕ್ಸ್

ಅತ್ಯುತ್ತಮ ಕೊರಿಯೋಗ್ರಫಿ- ಸ್ತ್ರೀ 2- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ಸಂಗೀತ- ಅಮರನ್ (ತಮಿಳು)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಹಾಡು- ಆರ್ಟಿಕಲ್ 370 (ಹಿಂದಿ)- ನೆಟ್​​ಫ್ಲಿಕ್ಸ್​​ ಮತ್ತು ಜಿ5

ಅತ್ಯುತ್ತಮ ಪ್ರಸಾಧನ- ಕಮಿಟಿ ಕುರ್ರೋಳ್ಳು – ಇಟಿವಿ ವಿನ್

ಅತ್ಯುತ್ತಮ ವಸ್ತ್ರವಿನ್ಯಾಸ- ಪುಷ್ಪ 2- ನೆಟ್​​ಫ್ಲಿಕ್ಸ್​

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಕಲ್ಕಿ 2898 ಎಡಿ ( ತೆಲುಗು)- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ಸಂಕಲನ- ಅಮರನ್ (ತಮಿಳು)- ನೆಟ್​​ಫ್ಲಿಕ್ಸ್

ಅತ್ಯುತ್ತಮ ಧ್ವನಿ ವಿನ್ಯಾಸ- ಭೂಲ ಭುಲಯ್ಯ (ಹಿಂದಿ)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಸಂಭಾಷಣೆ- ಲಕ್ಕಿ ಭಾಸ್ಕರ್ (ತೆಲುಗು)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಅಡಾಪ್ಟೆಡ್ ಚಿತ್ರಕತೆ -ಸ್ವರಗಂಧರ್ವ (ಮರಾಠಿ)- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ಚಿತ್ರಕತೆ-ಪುಷ್ಪ 2 (ಸುಕುಮಾರ್)- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ಸಿನಿಮಾಟೊಗ್ರಫಿ- ಬ್ರಮಯುಗಂ (ಮಲಯಾಳಂ)- ಸೋನಿ ಲಿವ್

ಅತ್ಯುತ್ತಮ ಗಾಯಕಿ- ಎಆರ್ಎಂ (ವೈಕೋಂ ವಿಜಯಲಕ್ಷ್ಮಿ)- ಜಿಯೋ ಹಾಟ್​​ಸ್ಟಾರ್​​

ಪೋಷಕ ನಟ- ಭಕ್ಷಕ್-ಸಂಜಯ್ ಮಿಶ್ರಾ- ನೆಟ್​​ಫ್ಲಿಕ್ಸ್​​

ಅತ್ಯುತ್ತಮ ನಟಿ- ಆರ್ಟಿಕಲ್ 370-ಯಾಮಿ ಗೌತಮ್- ನೆಟ್​​ಫ್ಲಿಕ್ಸ್​ ಮತ್ತು ಜೀ6

ಅತ್ಯುತ್ತಮ ನಟ- ಚಂದು ಚಾಂಪಿಯನ್ (ಕಾರ್ತಿಕ್ ಆರ್ಯನ್)- ಅಮೆಜಾನ್ ಪ್ರೈಂ ವಿಡಿಯೋ

ಅತ್ಯುತ್ತಮ ನಿರ್ದೇಶಕ- ಅಮರನ್ (ರಾಜಕುಮಾರ ಪೆರ್ರಿಸ್ವಾಮಿ)- ನೆಟ್​​ಫ್ಲಿಕ್ಸ್

ಅತ್ಯುತ್ತಮ ಮಕ್ಕಳ ಸಿನಿಮಾ- 35 ಚಿನ್ನ ಕದು ಕಾದು-ಅಮೆಜಾನ್ ಪ್ರೈಂ ಮತ್ತು ಆಹಾ

ಅತ್ಯುತ್ತಮ ಸಾಮಾಜಿಕ ಮೌಲ್ಯ ಸಿನಿಮಾ- ಕ್ಯಾಪ್ಟನ್ ಮಿಲ್ಲರ್- ಅಮೆಜಾನ್ ಪ್ರೈಂ

ಅತ್ಯುತ್ತಮ ಮನೊರಂಜನಾ ಸಿನಿಮಾ- ಕಲ್ಕಿ 2898 ಎಡಿ- ಪ್ರೈಂ ವಿಡಿಯೋ

ಅತ್ಯುತ್ತಮ ಡೆಬ್ಯೂ ಸಿನಿಮಾ- ಸ್ವಾತಂತ್ರ್ಯ ವೀರ ಸಾವರ್ಕರ್- ಜೀ5 ಮತ್ತು ಜಿಯೋ ಟಿವಿ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:53 pm, Sun, 19 July 26

Source link

ಮೊಬೈಲ್ ವಾಪಸ್ ನೀಡಿಲ್ಲವೆಂದು ದೇವಸ್ಥಾನದಲ್ಲೇ ಗೆಳೆಯನ ಕೊಲೆ! ಆರೋಪಿ ಅರೆಸ್ಟ್ – Kannada News | Belagavi Crime News: Man unalived by Friend in Temple Over Mobile Phone Dispute

ಬೆಳಗಾವಿ, ಜುಲೈ 19: ಇತ್ತೀಚೆಗೆ ಸಮಾಜದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಸುಲಿಗೆಗಳಂತಹ ಹೇಯ ಕೃತ್ಯಗಳೇ ನಡೆದು ಹೋಗುತ್ತವೆ. ಅಂತದ್ದೇ ಒಂದು ಅಮಾನವೀಯ ಕೃತ್ಯ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಕೇವಲ ಒಂದು ಮೊಬೈಲ್ ಫೋನ್‌ಗಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳವೊಂದು ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಮೊಬೈಲ್ ಮರಳಿ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಆವರಣದಲ್ಲೇ ಮಲಗಿದ್ದ ವ್ಯಕ್ತಿಯೊಬ್ಬರ ಜೀವ ತೆಗೆದಿರುವ ಘಟನೆ ಸವದತ್ತಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಹಿನ್ನೆಲೆ

ಗ್ರಾಮದ ನಿವಾಸಿಯಾದ ಫಕ್ಕೀರಪ್ಪ ಪಿಡ್ಡೆನ್ನವರ್ (40) ಎಂಬುವವರೇ ಈ ದುರಂತದಲ್ಲಿ ಜೀವ ಕಳೆದುಕೊಂಡ ದುರ್ದೈವಿ. ಇವರ ಸ್ನೇಹಿತ ಮಲ್ಲಿಕಾರ್ಜುನ ಪೂಜೇರಿ ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಮೂಲಗಳ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಮಲ್ಲಿಕಾರ್ಜುನನ ಮೊಬೈಲ್ ಫೋನ್ ಅನ್ನು ಫಕ್ಕೀರಪ್ಪ ಪಡೆದುಕೊಂಡಿದ್ದರು. ಆದರೆ, ಕೆಲಸ ಮುಗಿದ ನಂತರವೂ ಅದನ್ನು ಮರಳಿ ನೀಡದೆ ಎರಡು ದಿನಗಳಿಂದ ಸತಾಯಿಸುತ್ತಿದ್ದರು ಎನ್ನಲಾಗಿದೆ.

ತನ್ನ ಫೋನ್ ಪಡೆಯಲು ಮಲ್ಲಿಕಾರ್ಜುನ ಹಲವು ಬಾರಿ ಕೇಳಿದ್ದರೂ ಫಕ್ಕೀರಪ್ಪ ನಿರ್ಲಕ್ಷ್ಯ ವಹಿಸಿದ್ದ. ಕೊನೆಗೆ ಬೇಸತ್ತ ಮಲ್ಲಿಕಾರ್ಜುನ, ಫಕ್ಕೀರಪ್ಪನ ಮನೆವರೆಗೂ ಹೋಗಿ ಮೊಬೈಲ್ ನೀಡುವಂತೆ ಒತ್ತಾಯ ಮಾಡಿದ್ದ. ಈ ವೇಳೆ ಫಕ್ಕೀರಪ್ಪ, ಸಂಜೆ ವೇಳೆಗೆ ನಿನ್ನ ಮೊಬೈಲ್ ಮರಳಿ ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಕಳುಹಿಸಿದ್ದ.

ದೇವಸ್ಥಾನದಲ್ಲಿ ನಡೆದ ಘೋರ ಕೃತ್ಯ

ಶನಿವಾರ ಸಂಜೆ ಫಕ್ಕೀರಪ್ಪ ಗ್ರಾಮದ ಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ. ಇದನ್ನು ಗಮನಿಸಿದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದು ಮತ್ತೊಮ್ಮೆ ತನ್ನ ಮೊಬೈಲ್ ನೀಡುವಂತೆ ಕೇಳಿದ್ದ. ಆದರೆ, ಫಕ್ಕೀರಪ್ಪ ಈ ಬಾರಿಯೂ ತಕ್ಷಣಕ್ಕೆ ಮೊಬೈಲ್ ನೀಡದೆ, ರಾತ್ರಿ ಕೊಡುತ್ತೇನೆ ಎಂದು ಮತ್ತೆ ಸಬೂಬು ಹೇಳಿದ್ದ. ಇದರಿಂದ ವಿಪರೀತ ಕೋಪಗೊಂಡ ಮಲ್ಲಿಕಾರ್ಜುನ, ದೇವಸ್ಥಾನದ ಆವರಣದಲ್ಲೇ ಇದ್ದ ಭಸ್ಮ (ವಿಭೂತಿ) ಅರೆಯುವ ದೊಡ್ಡ ಕಲ್ಲನ್ನು ಎತ್ತಿ, ಮಲಗಿದ್ದ ಫಕ್ಕೀರಪ್ಪನ ತಲೆಯ ಮೇಲೆ ಜೋರಾಗಿ ಹಾಕಿದ್ದಾನೆ. ಕಲ್ಲಿನ ಭಾರಿ ಏಟಿಗೆ ಫಕ್ಕೀರಪ್ಪ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ತಕ್ಷಣ ಆರೋಪಿ ಮಲ್ಲಿಕಾರ್ಜುನ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆರೋಪಿ ಬಂಧನ

ದೇವಸ್ಥಾನದಲ್ಲಿ ರಕ್ತದ ಮಡುವಿನಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮುರಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮುರಗೋಡ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಮುರಗೋಡ ಪೊಲೀಸರು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chennamma Passed Away: ಸಾವಿಗೂ ಮುನ್ನ ಚೆನ್ನಮ್ಮರ ಕೊನೆ ಕ್ಷಣಗಳ ವೀಡಿಯೋ ನೋಡಿ! – Kannada News | Last moments of Chennamma with Her husband HD Deve Gowda

ಬೆಂಗಳೂರು, ಜುಲೈ 19: ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರು ತಮ್ಮ ಪತಿ ದೇವೇಗೌಡ ಅವರೊಂದಿಗೆ ಕಳೆದ ಕೊನೆ ಕ್ಷಣಗಳ ವೀಡಿಯೋ ಇಲ್ಲಿದೆ. ಜೀವನದ ಕೊನೆ ಕ್ಷಣಗಳನ್ನು ಪತಿಯೊಂದಿಗೆ ಕಳೆದ ಚೆನ್ನಮ್ಮ, ಸಾವಿಗೂ ಮುನ್ನ ಗೌಡರ ಆಶೀರ್ವಾದವನ್ನು ಪಡೆದಿದ್ದಾರೆ. 72 ವರ್ಷಗಳ ಕಾಲ ಬೆನ್ನೆಲುಬಾಗಿದ್ದ ಪತ್ನಿಯನ್ನು ಕಳೆದುಕೊಂಡು ಹೆಚ್​ಡಿಡಿ ಇದೀಗ ದುಃಖದಲ್ಲಿ ಮುಳುಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರ ನಿರ್ವಹಣೆ ಕುರಿತಂತೆ ಸಿಎಂ ಡಿಕೆಶಿ, ಡಿಸಿಎಂ ವಿಡಿಯೋ ಕಾನ್ಫರೆನ್ಸ್: ಅಧಿಕಾರಿಗಳಿಗೆ ಏನೆಲ್ಲ ಸೂಚನೆ? – Kannada News | Karnataka Drought Review: CM Shivakumar and DyCM Parameshwar Instruct Officials to Prioritize Fieldwork and Protect Drinking Water

ಬರ ನಿರ್ವಹಣೆ ಕುರಿತಂತೆ ಮಹತ್ವದ ಸಭೆImage Credit source: DK Shivakumar X Account

ಬೆಂಗಳೂರು, ಜುಲೈ 19: ಬರ ನಿರ್ವಹಣೆ ಕುರಿತಂತೆ ಸಿಎಂ ಡಿಕೆ ಶಿವಕುಮಾರ್​​ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ್​​ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿ, ಸಿಇಒಗಳ ಜತೆ ಸಭೆ ನಡೆಸಿದ್ದಾರೆ. ಬರ ಪರಿಹಾರ ಕಾರ್ಯಗಳು, ಜನ, ಜಾನುವಾರುಗಳಿಗೆ ಕುಡಿಯುವ ನೀರು ,ಕೃಷಿ ಚಟುವಟಿಕೆ, ರಸಗೊಬ್ಬರ, ಜನರು ಗುಳೆ ಹೋಗುತ್ತಿರುವುದು ಸೇರಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವರಾದ ಯತೀಂದ್ರ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಸಿಎಸ್ ಶಾಲಿನಿ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಅಧಿಕಾರಿಗಳಿಗೆ ಖಡಕ್​​ ಸೂಚನೆ ಕೊಟ್ಟ ಸಿಎಂ ಡಿಕೆಶಿ

ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು.ಕೇವಲ ಪೇಪರ್​ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್​ ರಿಪೋರ್ಟ್​ ಮುಖ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್​ ಸಭೆಯಲ್ಲಿ ಖಡಕ್​​ ಸೂಚನೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆ ತೋರಿಸಿ, ಆಡಳಿತಾತ್ಮಕವಾಗಿ ಟೀಮ್‌ ವರ್ಕ್‌ ಮಾಡಿ. ಈಗಾಗಲೇ ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದಲ್ಲಿ ಸಭೆ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ನಾನು ಕೊಟ್ಟಿರುವ ಸೂಚನೆಗಳು ಕಾಲ ಮಿತಿಯಲ್ಲಿ ಜಾರಿಯಾಗುತ್ತಿವೆ. ಟೀಮ್​ ಕರ್ನಾಟಕ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ
ಕಾರ್ಯಕ್ಷಮತೆ ತೋರಿಸುತ್ತಿರುವ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ? ಮುಂದಿನ ವಾರ ದೆಹಲಿಯಲ್ಲಿ ನಿರ್ಣಾಯಕ ಸಭೆ ಸಾಧ್ಯತೆ

ಪ್ರಮುಖ 2 ಸೂಚನೆ ನೀಡಿರುವ ಡಿಸಿಎಂ ಪರಮೇಶ್ವರ್​​

ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್​​ ಪ್ರಮುಖವಾಗಿ 2 ಸೂಚನೆಗಳನ್ನು ನೀಡಿದ್ದಾರೆ. 2023ರ ಬರದ ವೇಳೆ ಬೆಳೆಯೇನೊ ಬೆಳೆದಿತ್ತು ಆದರೆ ಸಕಾಲದಲ್ಲಿ ಮಳೆ ಕಾಣದೆ ರೈತನಿಗೇನೂ ಸಿಗಲಿಲ್ಲ. ಕೋವಿಡ್ ನಂತರದ ಅವಧಿಯಲ್ಲಿ ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಪ್ರಮಾಣ ಹೆಚ್ಚಾಗಿದೆ. ಅಡಿಕೆಯಂತಹ ಬೆಳೆಗಳು ತೋಟಗಾರಿಕಾ ಬೆಳೆಗಳಲ್ಲಿ ಮೊನೊಪೋಲಿ ಸಾಧಿಸುತ್ತಿವೆ. ಅಡಿಕೆಗೆ 15-20 ದಿನ ನೀರಿಲ್ಲದಿದ್ದರೆ ತೋಟಗಳು ಒಣಗಿ ಹೋಗುತ್ತವೆ. ರಾಜ್ಯದ ಬೆಳೆಗಳ ಚಿತ್ರಣವನ್ನ ಗಮನಿಸಿದರೆ, ಕಬ್ಬು, ಭತ್ತ, ಅಡಿಕೆ ಮತ್ತು ಮುಸುಕಿನ ಜೋಳಗಳು ಒಟ್ಟಾರೆ ಶೇ.50 ರಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಈ 4 ಬೆಳೆಗಳು ಅತಿ ಹೆಚ್ಚಿನ ನೀರನ್ನು ಬೇಡುತ್ತವೆ. ಈ ಕುರಿತು ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಎಚ್ಚರ ವಹಿಸಬೇಕು. ಡ್ಯಾಂಗಳಿOದ ನೀರು ಹರಿಸಿ ಎಂದು ಒತ್ತಾಯಗಳು ಬರುತ್ತವೆ. ಆದರೆ ಮುಂದಿನ ಜೂನ್‌ವರೆಗೆ ಕುಡಿಯುವ ನೀರನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ನಿಮ್ಮ ಮೇಲಿರುತ್ತದೆ ಎಂಬುದನ್ನು ಮರೆಯಬಾರದು ಎಂದವರು ಎಚ್ಚರಿಸಿದ್ದಾರೆ.

ಜನ ಗುಳೇ ಹೋಗುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ವಲಸೆಯನ್ನು ತಪ್ಪಿಸಬಹುದಾಗಿದೆ. ಸಾವಿರಾರು ಮಕ್ಕಳು ಶಾಲೆಗೆ ಹೋಗದೆ ವಲಸೆ ಹೋಗುತ್ತಿದ್ದಾರೆಂದು ಪತ್ರಿಕೆಗಳು ವರದಿ ಮಾಡುತ್ತಿವೆ, ಈ ಕುರಿತು ನಿಗಾವಹಿಸಿ. ಬರಗಾಲದ ಸಂದರ್ಭಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಅವುಗಳ ಬಗ್ಗೆ ಗಮನವಿರಲಿ. ಎಲ್ಲಿಯೂ ಸಹ ಬೀಜ, ಗೊಬ್ಬರಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಮಾಧ್ಯಮಗಳು ತಪ್ಪು ವರದಿ ಮಾಡಿದರೆ ಸತ್ಯಾಂಶವೇನೆಂದು ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದವರು ತಿಳಿಸಿದ್ದಾರೆ.

ಸಭೆಯಲ್ಲಿ ಪೋನ್ ಬಳಕೆ: ಸಿಎಂ ಅಸಮಾಧಾನ

ಬರ ಪರಿಸ್ಥಿತಿ ಬಗ್ಗೆ ಡಿಸಿಎಂ ಪರಮೇಶ್ವರ್ ಸೂಚನೆ ನೀಡುತ್ತಿದ್ದ ವೇಳೆ ಕೆಲ ಅಧಿಕಾರಿಗಳು ಮೊಬೈಲ್​​ ಫೋನ್​​ ಬಳಕೆ ಮಾಡುತ್ತಿದ್ದ ಕಾರಣ ಸಿಎಂ ಡಿಕೆಶಿ ಗರಂ ಆದ ಪ್ರಸಂಗ ನಡೆದಿದೆ. ಸರ್ಕಾರದ ಆಲೋಚನೆ ತಿಳಿಸುವಾಗ ಗೌರವ ನೀಡುವುದು ನಿಮ್ಮ ಜವಬ್ದಾರಿ. ನಿಮಗೆ ಏನಾದರೂ ಅರ್ಜೆಂಟ್ ಇದ್ರೆ ಹೊರಗೆ ಹೋಗಿ‌ ಮಾತಾಡಿ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ: ಈರಣ್ಣಾ ಬಸವ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:21 pm, Sun, 19 July 26

Source link

ಸಲ್ಮಾನ್ ಖಾನ್ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ: ಸಲ್ಲುಗೆ ಕಾಡುತ್ತಿದೆಯೇ ಅನಾರೋಗ್ಯ? – Kannada News | Salman Khan latest Video Mumbai Appearance fans worried about weight loss health issues

ಬಾಲಿವುಡ್‌ನ ‘ಸುಲ್ತಾನ್’ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಲೇಟೆಸ್ಟ್ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಭಾರಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಟನ ದೈಹಿಕ ಬದಲಾವಣೆ ಮತ್ತು ವಿಪರೀತ ತೂಕ ಇಳಿಕೆ ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಮುಂಬೈನ ಸ್ಲಮ್ ಪುನರ್ವಸತಿ ಪ್ರಾಧಿಕಾರ (SRA) ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಅತ್ಯಾಧುನಿಕ ಡೇಟಾ ಕಲೆಕ್ಷನ್ ಮತ್ತು ವೆರಿಫಿಕೇಶನ್ ಸಪೋರ್ಟ್ ಸೆಂಟರ್ (ಐಟಿ ಸರ್ವರ್ ರೂಮ್) ಉದ್ಘಾಟಿಸಿದರು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಮನೆಯ ಕೀಲಿಗಳನ್ನು ಹಸ್ತಾಂತರಿಸಿದರು. ಆದರೆ, ಈ ಕಾರ್ಯಕ್ರಮದ ವಿಡಿಯೋಗಳು ಹೊರಬೀಳುತ್ತಿದ್ದಂತೆ ಎಲ್ಲರ ಗಮನ ಸಲ್ಲು ಅವರ ಆರೋಗ್ಯದ ಕಡೆ ನೆಟ್ಟಿದೆ.

ಸಲ್ಮಾನ್ ಕಂಡ ಕಂಗಾಲಾದ ಫ್ಯಾನ್ಸ್:

ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, ‘ಅವರನ್ನು ನೋಡಿದರೆ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದೆ, ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ಮೊದಲ ನೋಟಕ್ಕೆ ಇವರು ಸಲ್ಮಾನ್ ಖಾನ್ ಎಂದು ನಂಬಲು ಸಾಧ್ಯವಾಗಲಿಲ್ಲ. ಪಕ್ಕದಲ್ಲಿ ಬಾಡಿಗಾರ್ಡ್ ಶೇರಾ ಇದ್ದಿದ್ದರಿಂದ ಗುರುತಿಸಿದೆ. ಇವರಿಗೆ ಏನಾಗಿದೆ?’ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು, ‘ಸಿನಿಮಾದಲ್ಲಿ ಒಬ್ಬಂಟಿಯಾಗಿ 50 ಜನರನ್ನು ಬಡಿಯುವ ನಮ್ಮ ಭಾಯ್ ಕಣ್ಣುಗಳಲ್ಲಿ ಇಂದು ಸುಸ್ತು ಎದ್ದು ಕಾಣುತ್ತಿದೆ. ಅವರ ಹವಾ ಕಮ್ಮಿಯಾದಂತೆ ಭಾಸವಾಗುತ್ತಿದೆ’ ಎಂದು ಭಾವುಕರಾಗಿದ್ದಾರೆ.

ಬೆಂಬಲಕ್ಕೆ ನಿಂತ ನೆಟ್ಟಿಗರು:

ಒಂದೆಡೆ ಸಲ್ಮಾನ್ ಖಾನ್ ಅವರ ಆರೋಗ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹಲವು ನೆಟ್ಟಿಗರು ಸಲ್ಲು ಅವರ ಪರವಾಗಿ ಮಾತನಾಡಿದ್ದಾರೆ. ‘ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಒಬ್ಬರು ಕ್ಯಾಮೆರಾ ಮುಂದೆ ತಮಗೆ ವಯಸ್ಸಾಗುತ್ತಿರುವುದನ್ನು ಒಪ್ಪಿಕೊಂಡು ಯಾವುದೇ ಮೇಕಪ್ ಇಲ್ಲದೆ ಬರುವುದು ಸಾಮಾನ್ಯದ ಮಾತಲ್ಲ. ಈ ಹಿಂದೆ ರಜನಿಕಾಂತ್ ಇದನ್ನು ಮಾಡಿದ್ದರು. ಈಗ ಸಲ್ಮಾನ್ ಖಾನ್ ಅವರು 60 ವರ್ಷ ಪ್ರಾಯದ ಲುಕ್ ಅನ್ನು ಗೌರವಯುತವಾಗಿ ಒಪ್ಪಿಕೊಂಡಿದ್ದಾರೆ. ಅವರಿಗೆ ಗೌರವ ನೀಡಬೇಕು’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್‌ ‘ಮಾತೃಭೂಮಿ’ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ? ಬಿಡುಗಡೆ ಬಗ್ಗೆ ಹೆಚ್ಚಿದ ಆತಂಕ

ಇನ್ನು ಕೆಲವರು, ಬಾಲಿವುಡ್ ತಾರೆಯರು ತಮ್ಮ ವಯಸ್ಸನ್ನು ಮುಚ್ಚಿಡಲು ಏನೆಲ್ಲಾ ಕಸರತ್ತು ಮಾಡುತ್ತಾರೆ, ಆದರೆ ಸಲ್ಮಾನ್ ಪಿಆರ್ ತಂಡದ ಮಾತನ್ನೂ ಕೇಳದೆ ಹೀಗೆ ನೈಜವಾಗಿ ಬಂದಿರುವುದು ಅವರ ಸರಳತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಸದ್ಯಕ್ಕೆ ಸಲ್ಮಾನ್ ಖಾನ್ ಅವರ ಈ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು, ಅವರ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ. ಸದ್ಯದಲ್ಲೇ ಅವರು ‘ಮಾತೃಭೂಮಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು – Kannada News | BPCL Launches Lite Zip LPG cylinder for faster booking and deliveries

ಮುಂಬೈ, ಜುಲೈ 19: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನಿಗಮ ಸಂಸ್ಥೆ ಸಹಯೋಗದಲ್ಲಿ ಮನೆಬಾಗಿಲಿಗೆ ಕಿರು ಎಲ್​ಪಿಜಿ ಸಿಲಿಂಡರ್ ಒದಗಿಸುವ ಸೇವೆ ಆರಂಭಿಸಿದ ಬೆನ್ನಲ್ಲೇ ಇದೀಗ ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯೂ ರೇಸ್​ಗೆ ಸೇರಿದೆ. ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ (BPCL), ಅತ್ಯಾಧುನಿಕ ಹಾಗೂ ಹಗುರವಾದ ಎಲ್‌ಪಿಜಿ ಸಿಲಿಂಡರ್ ಸಿಸ್ಟಂ ಆದ’ಭಾರತ್‌ಗ್ಯಾಸ್ ಲೈಟ್ ಜಿಪ್’ (Bharatgas Lite ZIP) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸೇವೆಯಡಿ ಗ್ರಾಹಕರು ತಕ್ಷಣವೇ ಹೊಸ ಗ್ಯಾಸ್ ಕನೆಕ್ಷನ್ ಪಡೆಯಬಹುದು ಹಾಗೂ ಅತಿ ವೇಗದ (Express) ಡೆಲಿವರಿ ಸೌಲಭ್ಯವನ್ನು ಹೊಂದಲಿದ್ದಾರೆ.

ಭಾರತ್ ಗ್ಯಾಸ್ ಲೈಟ್ ಝಿಪ್ ಗ್ಯಾಸ್ ಸಿಲಿಂಡರ್ ವಿಶೇಷತೆಗಳು

ಭಾರತ್​ಗ್ಯಾಸ್ ಲೈಟ್ ಝಿಪ್ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಭಿನ್ನವಾಗಿದೆ. ಇವುಗಳು ಹಗುರವಾಗಿದ್ದು, ಸುಲಭವಾಗಿ ಎತ್ತಿಕೊಂಡು ಹೋಗಬಹುದು. ಇದು ತುಕ್ಕು ಹಿಡಿಯದ (Corrosion-free) ಬಾಡಿಯನ್ನು ಹೊಂದಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಾಕಿ ಇದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದಾದ ಇಂಡಿಕೇಟರ್ (Gas-level indicator) ಇಲ್ಲಿದೆ. ಇದು ಆಧುನಿಕ ವಿನ್ಯಾಸ ಹಾಗೂ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಸ್ತುತ ಈ ಸೇವೆಯನ್ನು ಮುಂಬೈನಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾಗಿದೆ. ಮುಂಬರುವ ಆಗಸ್ಟ್ 15 ರ ವೇಳೆಗೆ ದೇಶದ 24 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲು BPCL ಯೋಜಿಸಿದೆ.

ಹೆಚ್​ಪಿಸಿಎಲ್​ನಿಂದ ಮೊದಲ್ಗೊಂಡಿತ್ತು ಈ ಸೇವೆ

ಇತ್ತೀಚೆಗಷ್ಟೇ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಯು ‘ಸ್ವಿಗ್ಗಿ ಇನ್‌ಸ್ಟಾಮಾರ್ಟ್’ (Swiggy Instamart) ಜೊತೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನಲ್ಲಿ 10 ಕೆಜಿಯ ಹಗುರವಾದ ‘ಎಚ್‌ಪಿ ನವ್ಯಾ’ (HP Navya) ಸಿಲಿಂಡರ್‌ಗಳ ಆನ್-ಡಿಮ್ಯಾಂಡ್ ಡೆಲಿವರಿ ಆರಂಭಿಸಿತ್ತು. ಇದಕ್ಕೆ ಪೈಪೋಟಿ ನೀಡಲು ಈಗ BPCL ಕೂಡ ತನ್ನ ಪ್ರೀಮಿಯಂ ಹಗುರ ಸಿಲಿಂಡರ್ ಸೇವೆಯನ್ನು ವೇಗವಾಗಿ ವಿಸ್ತರಿಸುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಹಸಿರು ಇಂಧನ ಕ್ರಾಂತಿ; ಆರು ತಿಂಗಳಲ್ಲಿ ದಾಖಲೆಯ ಶೇ.25ರಷ್ಟು ಪ್ರಗತಿ- ಮಾಹಿತಿ ಬಿಚ್ಚಿಟ್ಟ ಸಚಿವ ಪ್ರಲ್ಹಾದ್ ಜೋಶಿ

ಇಂದಿನ ವೇಗದ ಜೀವನಶೈಲಿಗೆ, ಅದರಲ್ಲೂ ವಿಶೇಷವಾಗಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಣ್ಣ ಕುಟುಂಬಗಳಿಗೆ ಸೂಕ್ತವಾಗುವಂತೆ ಈ ಸುಲಭ ಹಾಗೂ ಸುರಕ್ಷಿತ ಸಿಲಿಂಡರ್‌ಗಳನ್ನು ತೈಲ ಕಂಪನಿಗಳು ಮಾರುಕಟ್ಟೆಗೆ ತರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ – Kannada News | Cloudburst news 11 people dead after flash floods and landslides hit Jammu Kashmir

ಪೂಂಚ್, ಜುಲೈ 19: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir Flood) ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಕೂಡ ಮುಂದುವರಿದಿದ್ದು, ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಈ ನೈಸರ್ಗಿಕ ವಿಕೋಪಕ್ಕೆ ಒಟ್ಟು 11 ಜನರು ಬಲಿಯಾಗಿದ್ದು, ಹಲವು ಜನರು ನಾಪತ್ತೆಯಾಗಿದ್ದಾರೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ನಾಪತ್ತೆಯಾದವರ ಹುಡುಕಾಟ ಮತ್ತು ಸಿಲುಕಿರುವ ನಿವಾಸಿಗಳ ರಕ್ಷಣೆಗಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದೆ.

ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಮತ್ತು ಮನೆಗಳು ಕುಸಿದು ಬಿದ್ದಿದೆ. ಪೂಂಚ್‌ನ ಸುರನ್‌ಕೋಟ್ ತಹಸಿಲ್ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಇಲ್ಲಿಯೇ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಲ್ಲಿ ಮುಳುಗಿದ ರಜೌರಿ:

ರಜೌರಿ ಜಿಲ್ಲೆಯಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನೀರು ವಸತಿ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಗೆ ನುಗ್ಗಿದ್ದರಿಂದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರಿಂದ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರಜೌರಿ ಪಟ್ಟಣದ ನದಿಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರವನ್ನು ಪಾಕ್ ಭಾಗವೆಂದು ತೋರಿಸಿದ ಬಾಂಗ್ಲಾ; ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ಆಕ್ಷೇಪ

ದೆಹಲಿ ಪ್ರವಾಸ ಮೊಟಕುಗೊಳಿಸಿದ ಸಿಎಂ ಒಮರ್ ಅಬ್ದುಲ್ಲಾ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ದೆಹಲಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೂ ಸಹ ರಕ್ಷಣಾ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದು, ಪರಿಹಾರ ಕಾರ್ಯವನ್ನು ಚುರುಕುಗೊಳಿಸಲು ಆದೇಶಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸಿಎಂ ಒಮರ್ ಅಬ್ದುಲ್ಲಾ ಅವರೊಂದಿಗೆ ಫೋನ್​ನಲ್ಲಿ ಮಾತನಾಡಿ, ಪ್ರವಾಹದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ರಾಯಗಢ ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!

ಜುಲೈ 23ರವರೆಗೆ ಭಾರಿ ಮಳೆಯ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆ (IMD) ಜುಲೈ 23ರವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ವಿಪತ್ತು ನಿರ್ವಹಣಾ ಪಡೆಗಳನ್ನು (SDRF, NDRF) ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಿಫಾ ವಿಶ್ವಕಪ್ ಫೈನಲ್​ನ ರೋಚಕ 20 ಸಂಗತಿಗಳು ನಿಮಗೆ ಗೊತ್ತೇ? – Kannada News | Did You Know These Epic 2026 FIFA World Cup Final Facts?

FIFA World Cup 2026: ಇಡೀ ಜಗತ್ತಿನ ಕಣ್ಣು ಈಗ ಅಮೆರಿಕದ ನ್ಯೂಜೆರ್ಸಿಯತ್ತ ನೆಟ್ಟಿದೆ. ಇತಿಹಾಸ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಇಂದು (ಜುಲೈ 19) ರಾತ್ರಿ ಫಿಫಾ ವಿಶ್ವಕಪ್ 2026ರ ಮಹಾ ಫೈನಲ್ ಜರುಗಲಿದ್ದು, ಈ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ಸ್ ಸ್ಪೇನ್ ಹಾಗೂ ಹಾಲಿ ವಿಶ್ವ ಚಾಂಪಿಯನ್ಸ್ ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಕುರಿತಾದ ಕುತೂಹಲಕಾರಿ ವಿಷಯಗಳ ಮಾಹಿತಿ ಇಲ್ಲಿದೆ…

    1. ಅತಿ ದೊಡ್ಡ ಟೂರ್ನಿ: ಇದೇ ಮೊದಲ ಬಾರಿಗೆ 48 ತಂಡಗಳು ಭಾಗವಹಿಸಿದ್ದು, ಈ ಫೈನಲ್ ಪಂದ್ಯವು ಇಡೀ ಟೂರ್ನಿಯ 104ನೇ ಪಂದ್ಯವಾಗಿದೆ.
    2. ಹಾಫ್-ಟೈಮ್ ಮ್ಯೂಸಿಕ್ ಶೋ: ಸೂಪರ್ ಬೌಲ್ ಮಾದರಿಯಲ್ಲಿ, ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯದ ಮಧ್ಯಂತರದಲ್ಲಿ (ಹಾಫ್ ಟೈಮ್​ನಲ್ಲಿ) ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
    3. ಆರನೇ ಬದಲಾವಣೆ: ಪಂದ್ಯವು ಹೆಚ್ಚುವರಿ ಸಮಯಕ್ಕೆ ತಲುಪಿದರೆ, ನಿಯಮಗಳ ಪ್ರಕಾರ ಉಭಯ ತಂಡಗಳಿಗೆ 6ನೇ ಆಟಗಾರನನ್ನು ಬದಲಾಯಿಸುವ ವಿಶೇಷ ಅವಕಾಶ ಸಿಗಲಿದೆ. ಸಾಮಾನ್ಯವಾಗಿ 5 ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
    4. ಚಾಂಪಿಯನ್‌ಶಿಪ್ ಉಂಗುರಗಳು: ವಿಜೇತ ತಂಡದ ಆಟಗಾರರಿಗೆ ಚಿನ್ನದ ಪದಕಗಳ ಜೊತೆಗೆ, ಅಮೆರಿಕನ್ ಕ್ರೀಡಾ ಸಂಸ್ಕೃತಿಯಂತೆ ವಿಶೇಷ ಚಾಂಪಿಯನ್‌ಶಿಪ್ ಉಂಗುರಗಳನ್ನು ನೀಡಲಾಗುತ್ತದೆ.
    5. 20 ವರ್ಷಗಳ ವಯಸ್ಸಿನ ವ್ಯತ್ಯಾಸ: ಅರ್ಜೆಂಟೀನಾದ 39 ವರ್ಷದ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ 19 ವರ್ಷದ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಪೈಪೋಟಿ ಈ ಫೈನಲ್‌ನ ಪ್ರಮುಖ ಆಕರ್ಷಣೆ.
    6. ಮೆಸ್ಸಿ ಹೊಸ ಇತಿಹಾಸ: ವಿಶ್ವಕಪ್ ಇತಿಹಾಸದಲ್ಲೇ ಮೂರು ಬಾರಿ ಫೈನಲ್ ಪಂದ್ಯವನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಲಿಯೋನೆಲ್ ಮೆಸ್ಸಿ ಪಾತ್ರರಾಗಲಿದ್ದಾರೆ.
    7. ಬ್ಯಾಕ್-ಟು-ಬ್ಯಾಕ್ ಕಪ್: ಅರ್ಜೆಂಟೀನಾ ಈ ಪಂದ್ಯ ಗೆದ್ದರೆ, ಇಟಲಿ (1934, 1938 ) ಮತ್ತು ಬ್ರೆಜಿಲ್ (1958, 1962) ನಂತರ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಮೂರನೇ ದೇಶವಾಗಲಿದೆ.
    8. ಸ್ಪೇನ್ ತಂಡದ ಅಜೇಯ ಓಟ: ಸ್ಪೇನ್ ತಂಡವು ಕಳೆದ 37 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದನ್ನೂ ಸೋಲದೆ ಅಜೇಯವಾಗಿ ಈ ಫೈನಲ್ ತಲುಪಿದೆ.
    9. ಹಸಿರು ಹುಲ್ಲಿನ ಸವಾಲು: ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಸಾಮಾನ್ಯವಾಗಿ ಕೃತಕ ಹುಲ್ಲು (Artificial Turf) ಇರುತ್ತದೆ. ಆದರೆ ಫಿಫಾ ನಿಯಮಗಳಿಗಾಗಿ, ಈ ಫೈನಲ್ ಪಂದ್ಯಕ್ಕೆಂದೇ ವಿಶೇಷವಾಗಿ ನೈಸರ್ಗಿಕ ಹಸಿರು ಹುಲ್ಲನ್ನು ಬೆಳೆಸಿ ಸಿದ್ಧಪಡಿಸಲಾಗಿದೆ.
    10. ಸ್ಮಾರ್ಟ್ ಬಾಲ್ ತಂತ್ರಜ್ಞಾನ: ಫೈನಲ್ ಪಂದ್ಯದಲ್ಲಿ ಬಳಸುವ ಫುಟ್‌ಬಾಲ್ ಒಳಗೆ ಹೈ-ಸ್ಪೀಡ್ ಮೋಷನ್ ಸೆನ್ಸಾರ್ ಇರಲಿದ್ದು, ಆಫ್‌ಸೈಡ್ ಮತ್ತು ಗೋಲ್ ನಿರ್ಧಾರಗಳನ್ನು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ನಿಖರವಾಗಿ ತೀರ್ಪುಗಾರರಿಗೆ ತಲುಪಿಸುತ್ತದೆ.
    11. ಮೊದಲ ಮುಖಾಮುಖಿ: ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಪರಸ್ಪರ ಅತ್ಯಂತ ಬಲಿಷ್ಠವಾಗಿದ್ದರೂ, ಇವೆರಡೂ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ.
    12. ಖಂಡಗಳ ನಡುವಿನ ಪೈಪೋಟಿ: ಇದು ಕೇವಲ ಎರಡು ದೇಶಗಳ ನಡುವಿನ ಪಂದ್ಯವಲ್ಲ. ಯುರೋಪ್ ಮತ್ತು ಸೌತ್ ಅಮೆರಿಕ ಫುಟ್‌ಬಾಲ್ ಸಾಮ್ರಾಜ್ಯಗಳ ನಡುವಿನ ಪ್ರತಿಷ್ಠೆಯ ಕದನವಾಗಿದೆ.
    13. ಗೋಲ್ಡನ್ ಬೂಟ್ ರೇಸ್: ಈ ಪಂದ್ಯವು ಟೂರ್ನಿಯ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರನಿಗೆ ನೀಡುವ ‘ಗೋಲ್ಡನ್ ಬೂಟ್’ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ನಿರ್ಧರಿಸಲಿದೆ. ಸದ್ಯ ಈ ಪಟ್ಟಿಯಲ್ಲಿ ಕಿಲಿಯನ್ ಎಂಬಾಪೆ (10) ಅಗ್ರಸ್ಥಾನದಲ್ಲಿದ್ದು, ಮೆಸ್ಸಿ (8) ದ್ವಿತೀಯ ಸ್ಥಾನದಲ್ಲಿದ್ದಾರೆ.
    14. ಬೃಹತ್ ಪ್ರೇಕ್ಷಕರ ಸಾಗರ: ಈ ಫೈನಲ್ ಪಂದ್ಯ ನಡೆಯುತ್ತಿರುವ ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂ ಬರೋಬ್ಬರಿ 82,500 ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ಪಂದ್ಯಗಳಲ್ಲಿ ಇದು ಒಂದಾಗಲಿದೆ.
    15. ರೆಫ್ರಿಗಳಿಗೆ ಕ್ಯಾಮೆರಾ ತಂತ್ರಜ್ಞಾನ: ಫೈನಲ್‌ನಲ್ಲಿ ರೆಫ್ರಿಗಳು ತಮ್ಮ ಜೆರ್ಸಿಯ ಮೇಲೆ ವಿಶೇಷ ‘ರೆಫ್ರಿ-ಕ್ಯಾಮ್’  ಧರಿಸಲಿದ್ದಾರೆ. ಇದರಿಂದಾಗಿ ಮೈದಾನದಲ್ಲಿ ರೆಫ್ರಿ ನೋಡುವ ದೃಶ್ಯಗಳು ಟಿವಿ ವೀಕ್ಷಕರಿಗೂ ಲೈವ್ ಆಗಿ ಕಾಣಿಸಲಿವೆ.
    16. ಲಿಯೋನೆಲ್ ಸ್ಕಲೋನಿ ಸಾಧನೆ: ಅರ್ಜೆಂಟೀನಾದ ತರಬೇತುದಾರ ಲಿಯೋನೆಲ್ ಸ್ಕಲೋನಿ ಅವರು ಈ ಪಂದ್ಯವನ್ನು ಗೆದ್ದರೆ, ಇತಿಹಾಸದಲ್ಲೇ ಸತತ ಎರಡು ವಿಶ್ವಕಪ್‌ಗಳನ್ನು ಗೆದ್ದ ಅತ್ಯಂತ ಕಿರಿಯ ಕೋಚ್ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
    17. ಲೂಯಿಸ್ ಡಿ ಲಾ ಫ್ಯುಯೆಂಟೆ ದಾಖಲೆ: ಸ್ಪೇನ್ ತಂಡದ ಕೋಚ್ ಲೂಯಿಸ್ ಅವರು ಜೂನಿಯರ್ ಹಂತದಿಂದಲೇ (U-19, U-21) ಸ್ಪೇನ್ ತಂಡವನ್ನು ಮುನ್ನಡೆಸಿ, ಈಗ ಸೀನಿಯರ್ ತಂಡವನ್ನೂ ವಿಶ್ವಕಪ್ ಫೈನಲ್‌ಗೆ ತಂದ ವಿಶೇಷ ದಾಖಲೆ ಬರೆಯಲಿದ್ದಾರೆ.
    18. ಕೋಟಿ ಕೋಟಿ ಬಹುಮಾನ: ಈ ಪಂದ್ಯದಲ್ಲಿ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಳ್ಳುವ ತಂಡಕ್ಕೆ ಬರೋಬ್ಬರಿ 44 ಮಿಲಿಯನ್ ಡಾಲರ್ (ಸುಮಾರು 368 ಕೋಟಿ ರೂಪಾಯಿ) ನಗದು ಬಹುಮಾನ ಸಿಗಲಿದೆ.
    19. ಪರಿಸರ ಸ್ನೇಹಿ ಜೆರ್ಸಿಗಳು: ಸ್ಪೇನ್ ಮತ್ತು ಅರ್ಜೆಂಟೀನಾ ಎರಡೂ ತಂಡಗಳ ಆಟಗಾರರು ಧರಿಸುವ ಜೆರ್ಸಿಗಳನ್ನು ಸಮುದ್ರದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಅತ್ಯಾಧುನಿಕ ತಂತ್ರಜ್ಞಾನದಿಂದ ಸಿದ್ಧಪಡಿಸಲಾಗಿದೆ.
    20. ಟ್ರಿಪಲ್ ಕ್ರೌನ್ ಕನಸು: ಅರ್ಜೆಂಟೀನಾ ಈ ಪಂದ್ಯವನ್ನು ಗೆದ್ದರೆ, ಕೋಪಾ ಅಮೆರಿಕ (2024), ವಿಶ್ವಕಪ್ (2022) ಮತ್ತು ಪ್ರಸಕ್ತ ವಿಶ್ವಕಪ್ (2026) ಮೂರನ್ನೂ ಸತತವಾಗಿ ಗೆದ್ದು ‘ಅಂತರರಾಷ್ಟ್ರೀಯ ಟ್ರಿಪಲ್ ಕ್ರೌನ್’ ಸಾಧಿಸಿದ ವಿಶ್ವದ ಮೊದಲ ತಂಡವಾಗಲಿದೆ.

ಒಟ್ಟಿನಲ್ಲಿ, ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಕೇವಲ ಒಂದು ಪಂದ್ಯವಲ್ಲ. ಅದು ಕ್ರೀಡಾ ಇತಿಹಾಸದ ಸಾರ್ವಕಾಲಿಕ ಮಹಾಕದನ! ಒಂದೆಡೆ ಅನುಭವಿ ಲಿಯೋನೆಲ್ ಮೆಸ್ಸಿ ಇದ್ದರೆ, ಇನ್ನೊಂದೆಡೆ ಯುವ ಆಟಗಾರ ಲಾಮಿನ್ ಯಮಾಲ್ ಇದ್ದಾರೆ. ಹೀಗಾಗಿ ಅರ್ಜೆಂಟೀನಾ vs ಸ್ಪೇನ್ ನಡುವಣ ಕದನದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Source link

ಐಸಿಯುನಲ್ಲಿ ಚೆನ್ನಮ್ಮರ ಕೊನೆಕ್ಷಣಗಳು ಹೇಗಿತ್ತು? ಪುತ್ರಿ ಅನುಸೂಯ ಭಾವುಕ ಮಾತು – Kannada News | Deve Gowda’s Daughter Anusuya Shares Emotional Memories of Chennamma’s Final Moments in the ICU

ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತಿಮ ದರ್ಶನಕ್ಕೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅವರ ಪುತ್ರಿ ಅನುಸೂಯಾ ಅವರು ತಮ್ಮ ತಾಯಿಯ ಅಂತಿಮ ಕ್ಷಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ನಮ್ಮ ತಾಯಿ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಶಕ್ತಿ ನಮ್ಮೆಲ್ಲರಲ್ಲೂ ಜೀವಂತವಾಗಿದೆ. ಯಾವುದೇ ಹೆಣ್ಣುಮಗಳು ಮುತ್ತೈದೆಯಾಗಿ ಸಾಯಬೇಕು ಎಂದು ಬಯಸುತ್ತಾರೆ. ನನ್ನ ತಾಯಿಗೆ ಆ ಭಾಗ್ಯ ಸಿಕ್ಕಿದೆ. ನಮ್ಮ ತಂದೆಯವರು ಬೆಳಗ್ಗೆ ಶಿವನಿಗೆ ರುದ್ರಾಭಿಷೇಕ ಮಾಡಿದ ತೀರ್ಥ, ಗಂಧ ಮತ್ತು ದೇವರ ಮಲ್ಲಿಗೆ ಹೂವನ್ನು ಕೈಯಾರೆ ತಾಯಿಗೆ ನೀಡಿದ್ದಾರೆ. ಅದೇ ಕ್ಷಣ ಅವರ ಜೀವ ಹೋಗಿದೆ. ಇಂತಹ ಸಾವು ಯಾರಿಗೂ ಸಿಗುವುದಿಲ್ಲ ಎಂದು ಹೇಳುತ್ತಲೇ ಅವರು ಕಣ್ಣೀರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version