‘ಮದರ್ ಪ್ರಾಮಿಸ್’ ಸಿನಿಮಾ ನೋಡಿದ ಶಿವಣ್ಣ, ಹೇಳಿದ್ದೇನು? – Kannada News | Shiva Rajkumar watched and praised Mother Promise movie

ಡಾಲಿ ಧನಂಜಯ್ (Daali Dhananjaya) ನಿರ್ಮಿಸಿ, ನಟನೆ ಸಹ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರು ಸಹ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ಆಗಿರುವ ‘ಮದರ್ ಪ್ರಾಮಿಸ್’ ಅನ್ನು ಕುಟುಂಬಗಳು ಒಟ್ಟಿಗೆ ಹೋಗಿ ವೀಕ್ಷಿಸುತ್ತಿವೆ. ಆದರೆ ಕೆಲವರು ಸಿನಿಮಾಕ್ಕೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವ ಯತ್ನಗಳನ್ನು ಮಾಡುತ್ತಿದ್ದಾರೆಂದು ಚಿತ್ರತಂಡ ಆರೋಪಿಸಿದೆ. ಇದರ ನಡುವೆ ಸಿನಿಮಾಕ್ಕೆ ಶಿವರಾಜ್ ಕುಮಾರ್ ಅವರ ಬೆಂಬಲ ದೊರೆತಿದೆ. ‘ಮದರ್ ಪ್ರಾಮಿಸ್’ ನೋಡಿರುವ ಶಿವರಾಜ್ ಕುಮಾರ್, ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಅವರು ‘ಮದರ್ ಪ್ರಾಮಿಸ್’ ವೀಕ್ಷಿಸಿದ್ದು ಸಿನಿಮಾದ ಬಗ್ಗೆ ಟ್ವಿಟ್ಟರ್​​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮದರ್ ಪ್ರಾಮಿಸ್’ ತುಂಬ ಒಳ್ಳೆಯ ಚಿತ್ರ. ತುಂಬಾ ಜನರ ಮೆಚ್ಚುಗೆ ಪಡೆದ ಚಿತ್ರ. ಎಷ್ಟೇ ಒಳ್ಳೆಯ ಚಿತ್ರಗಳು ಬಂದರೂ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಬೆಂಬಲಿಸಿದರೆ ಮಾತ್ರ ಚಿತ್ರಗಳು ಉಳಿಯುವುದಕ್ಕೆ ಸಾಧ್ಯ. ಧನಂಜಯ, ಅವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತ ಬಂದಿದ್ದಾರೆ. ಡಾಲಿ ಪಿಚ್ಚರ್ಸ್‌ನಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬುದು ನನ್ನ ಆಶಯ’ ಎಂದಿದ್ದಾರೆ.

ಡಾಲಿ ಧನಂಜಯ್ ಅವರ ಪ್ರಯತ್ನಗಳಿಗೆ ಮೊದಲಿನಿಂದಲೂ ಶಿವರಾಜ್ ಕುಮಾರ್ ಅವರು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಧನಂಜಯ್ ಸಹ ಶಿವರಾಜ್ ಕುಮಾರ್ ಅವರನ್ನು ಹಿರಿಯ ಸಹೋದರನಂತೆ ಕಾಣುತ್ತಾರೆ. ಇಬ್ಬರ ನಡುವೆ ಪರಸ್ಪರ ಪ್ರೀತಿ, ಗೌರವಗಳಿವೆ. ಈಗ ಧನಂಜಯ್ ಸಿನಿಮಾಕ್ಕೆ ಕೆಲವರು ಸಮಸ್ಯೆ ಮಾಡುತ್ತಿದ್ದಾರೆ ಎನ್ನುವ ಸಮಯದಲ್ಲಿ ಶಿವರಾಜ್ ಕುಮಾರ್ ಅವರು ಸಿನಿಮಾದ ಪರವಾಗಿ ನಿಂತಿದ್ದಾರೆ. ಖುದ್ದು ಸಿನಿಮಾ ವೀಕ್ಷಿಸಿ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಸ್ಟೈಲ್​ ನೋಡಿ, ಊಟಕ್ಕೆ ಹೋದಾಗಲೂ ತಮಾಷೆ ಬಿಡರು

ಮುಖ್ಯವಾಗಿ, ಇತ್ತೀಚೆಗೆ ಡಾಲಿ ಧನಂಜಯ್ ನಡೆಸಿದ ಸುದ್ದಿಗೋಷ್ಠಿಯಲ್ಲಿ, ‘ಇದು ನಿರ್ಮಾಪಕನಾಗಿ ನನ್ನ ಕೊನೆಯ ಸಿನಿಮಾ’ ಎಂದು ಬೇಸರದಿಂದ ನುಡಿದಿದ್ದರು. ಒಳ್ಳೆಯ ಸಿನಿಮಾ ಅನ್ನು ಕೊಲ್ಲಲು ನಡೆಸಲಾಗುತ್ತಿರುವ ಪ್ರಯತ್ನದ ಬಗ್ಗೆ ತಮಗೆ ಸಬೇಸರವಾಗಿದ್ದು, ಇದೇ ಕಾರಣಕ್ಕೆ ತಾವು ಸಿನಿಮಾ ನಿರ್ಮಾಣವನ್ನೇ ನಿಲ್ಲಿಸುವ ಯೋಚನೆ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ಸಿನಿಮಾ ನೋಡಿದ ಬಳಿಕ ‘ಡಾಲಿ ಪಿಚ್ಚರ್ಸ್‌ನಿಂದ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು ಎಂಬುದು ನನ್ನ ಆಶಯ’ ಎಂದಿದ್ದಾರೆ. ಆ ಮೂಲಕ ಧನಂಜಯ್ ಅವರು ಸಿನಿಮಾ ನಿರ್ಮಾಣ ನಿಲ್ಲಿಸಬಾರದು’ ಎಂದಿದ್ದಾರೆ.

‘ಮದರ್ ಪ್ರಾಮಿಸ್’ ಸಿನಿಮಾ ಅನ್ನು ಮೈಸೂರು ಪೂರ್ಣ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಡಾಲಿ ಧನಂಜಯ್, ಮೈಸೂರು ಪೂರ್ಣ, ನಾಗಭೂಷಣ್, ವಿನಯಾ ಪ್ರಸಾದ್, ಗೀತಾ, ಚಿ ಗುರುದತ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಷ್ಣೋದೇವಿ ದೇವಾಲಯದಲ್ಲಿ 500 ಕೋಟಿ ರೂ. ದೇಣಿಗೆ ಹಗರಣ, 70 ಕೆಜಿಯಲ್ಲಿ ಕೇವಲ 3 ಕೆಜಿ ಮಾತ್ರ ನಿಜವಾದ ಬೆಳ್ಳಿ – Kannada News | Vaishno Devi Temple: Rs500 Crore Silver Donation Scam Exposed, 70kg Yields Only 3kg Real

ಮ್ಮು, ಜುಲೈ 18: ಜಮ್ಮುವಿನಲ್ಲಿರುವ ಅತ್ಯಂತ ಶ್ರೀಮಂತ ಮತ್ತು ಕೋಟ್ಯಂತರ ಭಕ್ತರು ಭೇಟಿ ನೀಡುವ ವೈಷ್ಣೋದೇವಿ ಮಂದಿರದಲ್ಲಿ ರಾಮ ಮಂದಿರದಂತೆಯೇ ದೇಣಿಗೆ ಹಗರಣ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ’ (SMVDSB) ಈಗ ಭಾರಿ ವಿವಾದದ ಕೇಂದ್ರಬಿಂದುವಾಗಿದೆ. ಭಕ್ತರು ವರ್ಷಗಳಿಂದ ದೇವಿಗೆ ಅರ್ಪಿಸಿದ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿಯು ನಾಪತ್ತೆಯಾಗಿದೆ ಅಥವಾ ಕಳಪೆ ಲೋಹಕ್ಕೆ ಬದಲಾಯಿಸಲ್ಪಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮಹಾ ವಂಚನೆ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ದೇವಾಲಯದ ಆಡಳಿತ ಮಂಡಳಿಯಲ್ಲಿ ತಲ್ಲಣ ಸೃಷ್ಟಿಸಿದೆ.

20 ಟನ್ ಬೆಳ್ಳಿಯ ತಪಾಸಣೆ ವೇಳೆ ಬಯಲಾಯ್ತು ಮಹಾ ಮೋಸ
ಕಳೆದ 5-6 ವರ್ಷಗಳಲ್ಲಿ ಭಕ್ತರು ದೇವಿಗೆ ಅರ್ಪಿಸಿದ್ದ ಸುಮಾರು 20 ಟನ್ ಬೆಳ್ಳಿಯ ಆಭರಣಗಳು, ನಾಣ್ಯಗಳು ಮತ್ತು ಛತ್ರಿಗಳನ್ನು (ಛಾತ್ರ್) ಕರಗಿಸಿ, ಶುದ್ಧೀಕರಿಸಲು ಜಮ್ಮು ಮತ್ತು ಕಾಶ್ಮೀರದ ಹೊರಗಿನ ಸರ್ಕಾರಿ ಟಂಕಸಾಲೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಲೋಹದ ಶುದ್ಧತೆಯನ್ನು ಪರೀಕ್ಷಿಸಿದಾಗ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಕೇವಲ ಶೇ.5 ಮಾತ್ರ ನಿಜವಾದ ಬೆಳ್ಳಿ: ಕರಗಿಸಿದ ಒಟ್ಟು ಲೋಹದಲ್ಲಿ ಕೇವಲ ಶೇಕಡಾ 5 ರಿಂದ 6 ರಷ್ಟು ಮಾತ್ರ ನಿಜವಾದ ಬೆಳ್ಳಿ ಇರುವುದು ಪತ್ತೆಯಾಗಿದೆ. ಇನ್ನುಳಿದ ಭಾಗದಲ್ಲಿ ಕಬ್ಬಿಣ, ಕ್ಯಾಡ್ಮಿಯಮ್ ಮತ್ತು ಇತರೆ ಅಗ್ಗದ ಲೋಹಗಳನ್ನು ಮಿಶ್ರಣ ಮಾಡಲಾಗಿತ್ತು.

70 ಕೆಜಿಯಲ್ಲಿ ಕೇವಲ 3 ಕೆಜಿ ಅಸಲಿ: ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೇವಾಲಯದ ದಾಖಲೆಗಳಲ್ಲಿದ್ದ 70 ಕೆಜಿ ತೂಕದ ಬೆಳ್ಳಿಯ ವಸ್ತುವೊಂದನ್ನು ಕರಗಿಸಿದಾಗ ಅದರಲ್ಲಿ ಸಿಕ್ಕಿದ್ದು ಕೇವಲ 3 ಕೆಜಿ ನಿಜವಾದ ಬೆಳ್ಳಿ ಮಾತ್ರ.

550 ಕೋಟಿ ರೂ. ನಷ್ಟ: ಒಂದು ವೇಳೆ ಭಕ್ತರು ನೀಡಿದ ಆ 20 ಟನ್ ಲೋಹವು ಶುದ್ಧ ಬೆಳ್ಳಿಯಾಗಿದ್ದಿದ್ದರೆ ಇಂದಿನ ಮಾರುಕಟ್ಟೆ ದರದಲ್ಲಿ ಅದರ ಮೌಲ್ಯ 550 ಕೋಟಿ ರೂ.ಗೂ ಅಧಿಕವಾಗಿರುತ್ತಿತ್ತು. ಆದರೆ ಈಗ ಸಿಕ್ಕಿರುವುದು ಕೇವಲ ಅದರ ಒಂದು ಸಣ್ಣ ಭಾಗ ಮಾತ್ರ.

ಮತ್ತಷ್ಟು ಓದಿ: ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ

ಭಕ್ತರಿಗೆ ವಂಚನೆಯೋ ಅಥವಾ ಒಳಗಿನವರ ಕೈವಾಡವೋ? ತನಿಖೆಗೆ ಆದೇಶ
ಮೇ 9, 2026 ರಂದು ವಕೀಲ ದೀಪಕ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಪರಾಧ ಶಾಖೆಗೆ ದೂರು ಸಲ್ಲಿಸಿದ ನಂತರ ಈ ಹಗರಣ ಅಧಿಕೃತವಾಗಿ ಬಯಲಿಗೆ ಬಂತು. ಈ ವಂಚನೆಯ ಹಿಂದೆ ಎರಡು ಮುಖ್ಯ ಶಂಕೆಗಳಿವೆ:

ಭಕ್ತರು ದೇವಾಲಯಕ್ಕೆ ಬರುವ ಮುನ್ನ ಕತ್ರಾ ಬೇಸ್ ಕ್ಯಾಂಪ್‌ನ ಸ್ಥಳೀಯ ವ್ಯಾಪಾರಿಗಳು ಮತ್ತು ಚಿನ್ನದ ಆಭರಣಗಾರರು ಭಕ್ತರಿಗೆ ಮೋಸ ಮಾಡಿ ನಕಲಿ ಅಥವಾ ಕಲಬೆರಕೆ ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡಿದ್ದಾರೆಯೇ? ಅಥವಾ, ಭಕ್ತರು ಅಸಲಿ ಬೆಳ್ಳಿಯನ್ನೇ ನೀಡಿದ್ದರೂ, ದೇವಾಲಯದ ಭದ್ರತಾ ಕೊಠಡಿಯಲ್ಲಿ ಅದನ್ನು ಸ್ವೀಕರಿಸಿದ ನಂತರ ಒಳಗಿನ ಸಿಬ್ಬಂದಿಯೇ ಅದನ್ನು ಕದ್ದು, ನಕಲಿ ಲೋಹಕ್ಕೆ ಬದಲಾಯಿಸಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.

ಈ ಗಂಭೀರ ದೂರಿಗೆ ಸಂಬಂಧಿಸಿದಂತೆ ಜಮ್ಮು ನ್ಯಾಯಾಲಯವು ತನಿಖಾ ಅಧಿಕಾರಿಗೆ ಎಲ್ಲಾ ಅಸಲಿ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಮುಂದಿನ ಪ್ರಮುಖ ವಿಚಾರಣೆಯನ್ನು ಜುಲೈ 29, 2026 ಕ್ಕೆ ನಿಗದಿಪಡಿಸಿದೆ.

ಕ್ಯಾನ್ಸರ್ ಕಾರಕ ಲೋಹ: ನಕಲಿ ಬೆಳ್ಳಿಯಲ್ಲಿ ಪತ್ತೆಯಾಗಿರುವ ಪ್ರಮುಖ ಮಿಶ್ರಣ ಲೋಹವಾದ ‘ಕ್ಯಾಡ್ಮಿಯಮ್’ ಅತ್ಯಂತ ವಿಷಕಾರಿಯಾಗಿದೆ. ಇದನ್ನು ಜಾಗತಿಕವಾಗಿ ಕ್ಯಾನ್ಸರ್ ಕಾರಕ ಲೋಹ ಎಂದು ವರ್ಗೀಕರಿಸಲಾಗಿದೆ. ದೇವಾಲಯದ ಕೊಠಡಿಗಳಲ್ಲಿ ಇವುಗಳನ್ನು ನಿರ್ವಹಿಸುವ ಕಾರ್ಮಿಕರು ಮತ್ತು ಟಂಕಸಾಲೆಯಲ್ಲಿ ಇವುಗಳನ್ನು ಕರಗಿಸುವ ಸಿಬ್ಬಂದಿಯ ಆರೋಗ್ಯದ ಮೇಲೆ ಇದು ತೀವ್ರ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (LG) ಮನೋಜ್ ಸಿನ್ಹಾ ಅವರು ದೇವಾಲಯ ಮಂಡಳಿಯ ತುರ್ತು ಸಮೀಕ್ಷಾ ಸಭೆ ನಡೆಸಿದ್ದಾರೆ. ಇನ್ಮುಂದೆ ದೇವಾಲಯಕ್ಕೆ ಬರುವ ಪ್ರತಿಯೊಂದು ಕೊಡುಗೆಯನ್ನು ಆರ್‌ಬಿಐ (RBI) ಮಾರ್ಗಸೂಚಿಗಳು ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಹಾಗೂ ದೇಣಿಗೆ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ! – Kannada News | Rare Vijayanagara Era Jain Inscription Discovered in Ballari Sandur

ಬಳ್ಳಾರಿ, ಜುಲೈ 18: ಜಿಲ್ಲೆಯ ಸಂಡೂರು ತಾಲ್ಲೂಕಿನ ಡಿ. ಅಂತಾಪುರ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ಜೈನ ಧರ್ಮದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವ ಅತ್ಯಂತ ಅಪರೂಪದ ಜೈನ ದಾನಶಾಸನವೊಂದು ಪತ್ತೆಯಾಗಿದೆ. ‘ವಿಜಯನಗರ ತಿರುಗಾಟ’ ಸಂಶೋಧನಾ ತಂಡವು ಈ ಮಹತ್ವದ ಐತಿಹಾಸಿಕ ಸಾಕ್ಷ್ಯವನ್ನು ಶೋಧಿಸಿದೆ.

ಪ್ರೊ. ಎಚ್. ತಿಪ್ಪೇಸ್ವಾಮಿ ನೇತೃತ್ವದ ಸಂಶೋಧನಾ ತಂಡವು ಡಿ. ಅಂತಾಪುರ ಗ್ರಾಮದ ನಿವಾಸಿ ಗ್ಯಾನಪ್ಪ ಎಂಬುವವರ ಹೊಲದಲ್ಲಿ ಈ ಗ್ರಾನೈಟ್ (ಕಣಶಿಲೆ) ಶಾಸನವನ್ನು ಪತ್ತೆಹಚ್ಚಿದೆ. ಈ ಶಾಸನವು ಕ್ರಿ.ಶ. 1395ರ ವಿಜಯನಗರದ ಪ್ರಸಿದ್ಧ ದೊರೆ ಎರಡನೇ ಹರಿಹರರಾಯರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಜೈನ ಧರ್ಮದ 17ನೇ ತೀರ್ಥಂಕರರಾದ ಕುಂಥುನಾಥರಿಗೆ ಭೂಮಿಯನ್ನು ಸಂಪೂರ್ಣ ತೆರಿಗೆ ವಿನಾಯಿತಿಯೊಂದಿಗೆ (ಸರ್ವಮಾನ್ಯವಾಗಿ) ದಾನವಾಗಿ ನೀಡಿದ ಅಮೂಲ್ಯ ವಿಚಾರವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ವಿಶೇಷವೆಂದರೆ, ಈ ಶಿಲೆಯಲ್ಲಿ ಸೂರ್ಯ, ಚಂದ್ರ ಹಾಗೂ ಜಿನಮೂರ್ತಿಯ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ.

ಇದೇ ಜಾಗದಲ್ಲಿ ಕುಂಥುನಾಥರಿಗೆ ಸಂಬಂಧಿಸಿದ ಇನ್ನೂ ಎರಡು ಶಾಸನಗಳನ್ನು ಸಂಶೋಧಕರು ಗುರುತಿಸಿದ್ದಾರೆ. ವಾತಾವರಣದ ಏರುಪೇರುಗಳಿಂದ ಹಾಳಾಗುತ್ತಿರುವ ಈ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ತಕ್ಷಣವೇ ಸಂರಕ್ಷಿಸಬೇಕು ಎಂದು ಸಂಶೋಧನಾ ತಂಡವು ಸಂಬಂಧಪಟ್ಟ ಪುರಾತತ್ವ ಇಲಾಖೆಗೆ ಮನವಿ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಡಿಮೆ ವೆಚ್ಚದಲ್ಲಿ ವಿಶ್ವಪ್ರಸಿದ್ಧ ಜೋಗ ಜಲಪಾತ ಕಣ್ತುಂಬಿಕೊಳ್ಳಿ: ಪ್ರವಾಸಿಗರಿಗಾಗಿ KSTDC ಬಿಡುಗಡೆ ಮಾಡಿದೆ ಅತ್ಯಾಕರ್ಷಕ ಟೂರ್ ಪ್ಯಾಕೇಜ್ – Kannada News | Karnataka KSTDC Package: Explore Jog Falls and Sigandur Temple with LTC Option

ಬೆಂಗಳೂರು, ಜು.18: ವೀಕೆಂಡ್‌ನಲ್ಲಿ ಎಲ್ಲಾದರೂ ಸುಂದರ ಪ್ರಕೃತಿಯ ಮಡಿಲಿಗೆ ಸಾಗಬೇಕು, ಜೊತೆಗೆ ದೇವರ ದರ್ಶನ ಪಡೆಯಬೇಕು ಎಂದು ಯೋಜಿಸುತ್ತಿರುವ ಪ್ರವಾಸಿಗರಿಗೆ ಸುವರ್ಣಾವಕಾಶವೊಂದು ಇಲ್ಲಿದೆ ನೋಡಿ. ಭಾರತದ ಎರಡನೇ ಅತಿ ಎತ್ತರದ ಜಲಪಾತವಾದ ವಿಶ್ವಪ್ರಸಿದ್ಧ ಜೋಗ ಜಲಪಾತ (Jog Falls) ಹಾಗೂ ಶರಾವತಿಯ ಹಿನ್ನೀರಿನ ನಡುವೆ ಕಂಗೊಳಿಸುವ ಸಿಗಂದೂರು (Siganduru) ಕ್ಷೇತ್ರಕ್ಕೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್​​ನ್ನು kstdc ಘೋಷಣೆ ಮಾಡಿದೆ.

ಭೇಟಿ ನೀಡುವ ಪ್ರಮುಖ ಪ್ರವಾಸಿ ತಾಣಗಳು:

ಜೋಗ ಜಲಪಾತ: ಶರಾವತಿ ನದಿಯು ಬರೋಬ್ಬರಿ 830 ಅಡಿ ಎತ್ತರದಿಂದ ಧುಮುಕುವ ಮೂಲಕ ಸೃಷ್ಟಿಯಾಗಿರುವ ಜೋಗ ಜಲಪಾತವು ದೇಶದ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ‘ಗೇರುಸೊಪ್ಪೆ ಜಲಪಾತ’ ಹಾಗೂ ‘ಜೋಗದ ಗುಂಡಿ’ ಎಂದೂ ಕರೆಯಲಾಗುತ್ತದೆ.

ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ, ಸಿಗಂದೂರು: ಶರಾವತಿ ನದಿಗೆ ನಿರ್ಮಿಸಲಾದ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಮೂರು ಕಡೆ ಆವೃತವಾಗಿರುವ ಸಿಗಂದೂರು ಗ್ರಾಮವು ಅತ್ಯಂತ ಸುಂದರ ಪ್ರಕೃತಿಯನ್ನು ಹೊಂದಿದೆ. ಇಲ್ಲಿನ ಪ್ರಸಿದ್ಧ ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ನಿತ್ಯ ಸಹಸ್ರಾರು ಭಕ್ತರು ಆಗಮಿಸುತ್ತಾರೆ.

ಪ್ಯಾಕೇಜ್‌ನ ಪ್ರಮುಖ ಸೌಲಭ್ಯಗಳು:

ಸಾರಿಗೆ ವ್ಯವಸ್ಥೆ: ಸುಖಕರ ಪ್ರಯಾಣಕ್ಕಾಗಿ ಅತ್ಯಾಧುನಿಕ ಎಸಿ ಐಷಾರಾಮಿ ಕೋಚ್ (A/c Deluxe Coach) ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ವಸತಿ ಸೌಲಭ್ಯ: ಪ್ರವಾಸಿಗರು ಫ್ರೆಶ್ ಅಪ್ ಆಗಲು ಪ್ರಸಿದ್ಧ ‘ಜೀವನ್ ಲಾಡ್ಜ್’ ನಲ್ಲಿ ವಾಸ್ತವ್ಯದ ವ್ಯವಸ್ಥೆ ಇರಲಿದೆ.

ವೃತ್ತಿಪರ ಗೈಡ್: ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಹಾಗೂ ಇತಿಹಾಸವನ್ನು ತಿಳಿಸಿಕೊಡಲು ಪರಿಣಿತ ಗೈಡ್ ಸೌಲಭ್ಯ ಲಭ್ಯವಿರಲಿದೆ.

LTC ಸೌಲಭ್ಯ: ರಾಜ್ಯ, ಕೇಂದ್ರ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಗೆ ಇಲಾಖಾ ನಿಯಮಾವಳಿಗಳ ಅನ್ವಯ ಎಲ್‌ಟಿಸಿ (LTC) ಸೌಲಭ್ಯ ಒದಗಿಸಲಾಗುವುದು.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ KSTDC 2 ದಿನಗಳ ಪ್ರೀಮಿಯಂ ಪ್ಯಾಕೇಜ್; ಕಡಿಮೆ ದರದಲ್ಲಿ ವಿಐಪಿ ದರ್ಶನ, ರೂಮ್ ಸೌಲಭ್ಯದ ಕಂಪ್ಲೀಟ್ ವಿವರ ಇಲ್ಲಿದೆ

ಪ್ರವಾಸ ಪ್ಯಾಕೇಜ್ ದರ ಪಟ್ಟಿ:

ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ರೂಮ್ ಹಂಚಿಕೆಯ ಆಧಾರದ ಮೇಲೆ ದರವನ್ನು ನಿಗದಿಪಡಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಜೋಗದ ಸಿರಿ ಹಾಗೂ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ಇಚ್ಛಿಸುವ ಸಾರ್ವಜನಿಕರು ಈ ಪ್ರವಾಸ ಪ್ಯಾಕೇಜ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಗಮನಕ್ಕೆ ತರದೆ ಪತಿಗೆ ಯಾವುದೇ ಇಂಜೆಕ್ಷನ್, ಔಷಧಿ ಕೊಡಬೇಡಿ: ಸೋನಮ್ ವಾಂಗ್ಚುಕ್ ಪತ್ನಿ ಎಚ್ಚರಿಕೆ – Kannada News | Sonam Wangchuk’s Wife Warns Hospital: No Meds Without Consent Amidst Ladakh Protest

ನವದೆಹಲಿ, ಜುಲೈ 18: ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್​ನಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ (59)(Sonam Wangchuk) ಅವರನ್ನು ದೆಹಲಿ ಪೊಲೀಸರು ಶನಿವಾರ ಬಲವಂತವಾಗಿ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಆಸ್ಪತ್ರೆ ಆಡಳಿತ ಮಂಡಳಿಗೆ ಸಾರ್ವಜನಿಕವಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವ ಮೂಲಕ ಈ ಹೋರಾಟಕ್ಕೆ ಹೊಸ ತಿರುವು ನೀಡಿದ್ದಾರೆ.

ನನ್ನ ಪತಿ ಚೆನ್ನಾಗಿದ್ದರು, ಅವರನ್ನು ಕರೆತರುವ ಅಗತ್ಯವಿರಲಿಲ್ಲ

ತಮ್ಮ ಪತಿಯ ಆರೋಗ್ಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಗೀತಾಂಜಲಿ, “ನಾನು ಈಗ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲೇ ಇದ್ದೇನೆ. ಕಳೆದ 20 ದಿನಗಳಿಂದ ನನ್ನ ಪತಿಯ ಆರೋಗ್ಯವನ್ನು ನೋಡಿಕೊಳ್ಳುತ್ತಿರುವ ನಮ್ಮ ವೈದ್ಯರು ಮತ್ತು ಕುಟುಂಬದ ಲಿಖಿತ ಒಪ್ಪಿಗೆಯಿಲ್ಲದೆ ಆಸ್ಪತ್ರೆಯವರು ಅವರಿಗೆ ಮಾತ್ರೆ ಅಥವಾ ಡ್ರಿಪ್ಸ್​ ಹಾಕಬಾರದು.

ನನ್ನ ಗಮನಕ್ಕೆ ತರದೆ ಯಾವುದೇ ಔಷಧಿ ಕೊಡುವಂತಿಲ್ಲ, ಸಂವಿಧಾನದ ಆರ್ಟಿಕಲ್ 32 ರ ಅಡಿಯಲ್ಲಿ ನನ್ನ ಪತಿಯ ಆರೋಗ್ಯದ ಹಕ್ಕನ್ನು ರಕ್ಷಿಸಲು ನನಗೆ ಅಧಿಕಾರವಿದೆ ಎಂದು ಬರೆದುಕೊಂಡಿದ್ದಾರೆ.

ನಿನ್ನೆ ರಾತ್ರಿಯವರೆಗೂ ನನ್ನ ಪತಿ ಆರೋಗ್ಯವಾಗಿಯೇ ಇದ್ದರು. ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆತರುವ ಯಾವುದೇ ತುರ್ತು ಅಗತ್ಯವಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೇ. 20 ರಷ್ಟು ತೂಕ ಇಳಿಕೆ: ಹೋರಾಟಗಾರನ ಗಟ್ಟಿ ಮನಸ್ಸು

ಜೂನ್ 28 ರಿಂದ ಲಡಾಖ್‌ಗೆ ವಿಶೇಷ ಸಾಂವಿಧಾನಿಕ ಸ್ಥಾನಮಾನ (6ನೇ ವೇಳಾಪಟ್ಟಿ) ಕೋರಿ ಸೋನಮ್ ವಾಂಗ್‌ಚುಕ್ ಅವರು ಅನ್ನಾಹಾರ ತ್ಯಜಿಸಿ ಕಠಿಣ ಉಪವಾಸ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಸೇರುವ ಮುನ್ನಾ ದಿನ ಮಾತನಾಡಿದ್ದ ವಾಂಗ್ಚುಕ್, “ನಿರಂತರ ಉಪವಾಸದಿಂದಾಗಿ ನನ್ನ ದೇಹದ ತೂಕ ಶೇಕಡಾ 20 ರಷ್ಟು ಕಡಿಮೆಯಾಗಿದೆ. ನನ್ನ ದೇಹ ಕೃಶವಾಗುತ್ತಿದ್ದರೂ, ಲಡಾಖ್‌ನ ಮಣ್ಣು ಮತ್ತು ಪರಿಸರ ರಕ್ಷಣೆಗಾಗಿ ನನ್ನ ಜೀವ ಹೋದರೂ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ” ಎಂದು ದೃಢವಾಗಿ ಹೇಳಿದ್ದರು.

ಕೋರ್ಟ್ ಆದೇಶದಂತೆ ಕ್ರಮ ಎಂದ ಪೊಲೀಸರು

ಇನ್ನೊಂದೆಡೆ ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, “ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳು ಮತ್ತು ಹಿರಿಯ ತಜ್ಞ ವೈದ್ಯರ ತುರ್ತು ಸಲಹೆಯ ಮೇರೆಗೇ ವಾಂಗ್‌ಚುಕ್ ಅವರಿಗೆ ಅಗತ್ಯ ವೈದ್ಯಕೀಯ ಆರೈಕೆ ನೀಡಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಜಂತರ್ ಮಂತರ್‌ನಿಂದ ಅವರನ್ನು ಕರೆದೊಯ್ಯುವಾಗ ಪ್ರತಿಭಟನಾಕಾರರು ತಡೆಯೊಡ್ಡಿ ಗದ್ದಲ ಸೃಷ್ಟಿಸಲು ಯತ್ನಿಸಿದರು. ಆದರೆ ಪೊಲೀಸರು ಸಂಯಮದಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಸೋನಮ್ ವಾಂಗ್ಚುಕ್ ಹೋರಾಟವೇಕೆ?

ಸೋನಮ್ ವಾಂಗ್ಚುಕ್ ಅವರು ಕಳೆದ ಕೆಲವು ವರ್ಷಗಳಿಂದ ಲಡಾಖ್‌ನ ಹಿಮನದಿಗಳು ಕರಗುತ್ತಿರುವುದರ ವಿರುದ್ಧ ಜಾಗತಿಕ ಆಂದೋಲನ ನಡೆಸುತ್ತಿದ್ದಾರೆ. ಲಡಾಖ್‌ನ ಸೂಕ್ಷ್ಮ ಪರಿಸರವನ್ನು ಕಾರ್ಪೊರೇಟ್ ಕಂಪನಿಗಳ ಗಣಿಗಾರಿಕೆಯಿಂದ ಮುಕ್ತಗೊಳಿಸಲು ಮತ್ತು ಅಲ್ಲಿನ ಸ್ಥಳೀಯ ಬುಡಕಟ್ಟು ಜನರಿಗೆ ಸಂವಿಧಾನದ 6ನೇ ವೇಳಾಪಟ್ಟಿಯಡಿ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ ಅವರು ದೆಹಲಿಯ ಚಳಿಯಲ್ಲಿ ಸುದೀರ್ಘ ಪಾದಯಾತ್ರೆ ನಡೆಸಿ ಜಂತರ್ ಮಂತರ್ ತಲುಪಿದ್ದರು. ಸದ್ಯ ಆಸ್ಪತ್ರೆಯ ಕೋಣೆಯಲ್ಲೇ ಈ ಪರಿಸರ ಯೋಧನ ಹೋರಾಟ ಮುಂದುವರೆದಿದೆ.ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧವೂ ಧ್ವನಿ ಎತ್ತಿದ್ದಾರೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂಬುದು ಕೂಡ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

Published On – 10:57 am, Sat, 18 July 26

Source link

Free VPN: ಬಳಕೆದಾರರಿಗೆ ಎಲ್ಲವನ್ನೂ ಉಚಿತವಾಗಿ ನೀಡುವ VPN ಅಪ್ಲಿಕೇಶನ್‌ಗಳು ಹೇಗೆ ಹಣ ಗಳಿಸುತ್ತವೆ ಗೊತ್ತೇ? – Kannada News | Free VPN apps how they make money data privacy paid plans

ಇಂದಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ (Internet) ಸುರಕ್ಷಿತವಾಗಿ ಬ್ರೌಸ್ ಮಾಡಲು ಅನೇಕರು VPN (Virtual Private Network) ಆ್ಯಪ್‌ಗಳನ್ನು ಬಳಸುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ, ಈ ಆ್ಯಪ್‌ಗಳಲ್ಲಿ ಹಲವಾರು ಸಂಪೂರ್ಣ ಉಚಿತವಾಗಿಯೇ ಸೇವೆ ನೀಡುತ್ತವೆ. ಹಾಗಾದರೆ, ಯಾವುದೇ ಶುಲ್ಕ ಪಡೆಯದೆ ಈ ಕಂಪನಿಗಳು ಹೇಗೆ ಆದಾಯ ಗಳಿಸುತ್ತವೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ.

ವಾಸ್ತವವಾಗಿ, ಎಲ್ಲಾ ಉಚಿತ VPNಗಳು ಒಂದೇ ರೀತಿಯಲ್ಲಿ ಹಣ ಸಂಪಾದಿಸುವುದಿಲ್ಲ. ಕೆಲವು ವಿಶ್ವಾಸಾರ್ಹ ಕಂಪನಿಗಳು ತಮ್ಮ ಪೇಯ್ಡ್ (Paid) ಸೇವೆಗಳ ಮೂಲಕ ಗಳಿಸುವ ಆದಾಯದಿಂದ ಉಚಿತ ಆವೃತ್ತಿಯನ್ನು ನಡೆಸುತ್ತವೆ. ಉಚಿತ ಸೇವೆ ಬಳಸಿ ತೃಪ್ತರಾದ ಗ್ರಾಹಕರು ನಂತರ ಪ್ರೀಮಿಯಂ ಪ್ಲಾನ್‌ಗೆ ಅಪ್‌ಗ್ರೇಡ್ ಆಗುತ್ತಾರೆ ಎಂಬ ನಿರೀಕ್ಷೆಯೇ ಅವರ ವ್ಯವಹಾರ ಮಾದರಿ.

ಇದರ ಜೊತೆಗೆ, ಅನೇಕ ಉಚಿತ VPN ಆ್ಯಪ್‌ಗಳು ಜಾಹೀರಾತುಗಳನ್ನು ತೋರಿಸುವ ಮೂಲಕವೂ ಆದಾಯ ಗಳಿಸುತ್ತವೆ. ನೀವು ಆ್ಯಪ್ ಬಳಸುವಾಗ ಅಥವಾ ಅದರ ಒಳಗೆ ಕಾಣಿಸುವ ಜಾಹೀರಾತುಗಳಿಂದ ಕಂಪನಿಗೆ ಹಣ ಬರುತ್ತದೆ. ಕೆಲವು ಸಂದರ್ಭಗಳಲ್ಲಿ ಜಾಹೀರಾತುಗಳನ್ನು ನಿಮ್ಮ ಆಸಕ್ತಿಗೆ ತಕ್ಕಂತೆ ತೋರಿಸಲು ಬಳಕೆದಾರರ ಮಾಹಿತಿಯನ್ನು ವಿಶ್ಲೇಷಿಸುವ ಸಾಧ್ಯತೆಯೂ ಇರುತ್ತದೆ.

ಅಂದರೆ, ಬಳಕೆದಾರರು ಅಪ್ಲಿಕೇಶನ್ ತೆರೆದಾಗ ಅಥವಾ ಸರ್ವರ್‌ಗಳನ್ನು ಬದಲಾಯಿಸಿದಾಗಲೆಲ್ಲಾ, ಅವರು ವಿಡಿಯೋ ಅಥವಾ ಬ್ಯಾನರ್ ಜಾಹೀರಾತುಗಳನ್ನು ನೋಡುತ್ತಾರೆ. ವೀಕ್ಷಿಸಿದ ಅಥವಾ ಕ್ಲಿಕ್ ಮಾಡಿದ ಪ್ರತಿಯೊಂದು ಜಾಹೀರಾತು ಆ್ಯಡ್ ನೆಟ್‌ವರ್ಕ್ ಮೂಲಕ ಕಂಪನಿಯ ಆದಾಯವನ್ನು ಗಳಿಸುತ್ತದೆ. ಇದರರ್ಥ ಹೆಚ್ಚು ಬಳಕೆದಾರರು, ಹೆಚ್ಚು ಆದಾಯ.

Tech Tips: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?

ಹೆಚ್ಚುವರಿಯಾಗಿ, ಕೆಲವು VPN ಅಪ್ಲಿಕೇಶನ್‌ಗಳು ಇತರ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿವೆ. ಅವು ತಮ್ಮ ಅಪ್ಲಿಕೇಶನ್‌ಗಳಲ್ಲಿ ಇತರ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚಾರ ಮಾಡುತ್ತವೆ. ಬಳಕೆದಾರರು ಆ ಲಿಂಕ್ ಮೂಲಕ ಖರೀದಿ ಮಾಡಿದರೆ ಅಥವಾ ಸೇವೆಗೆ ಚಂದಾದಾರರಾದರೆ, VPN ಕಂಪನಿಯು ಕಮಿಷನ್ ಪಡೆಯುತ್ತದೆ. ಇದನ್ನು ಅಂಗಸಂಸ್ಥೆ ಮಾರ್ಕೆಟಿಂಗ್ ಎಂದೂ ಕರೆಯಲಾಗುತ್ತದೆ.

ಆದರೆ ಎಲ್ಲ ಉಚಿತ VPNಗಳು ಸುರಕ್ಷಿತವೆಂದು ಹೇಳಲು ಸಾಧ್ಯವಿಲ್ಲ. ಕೆಲವು ಕಡಿಮೆ ವಿಶ್ವಾಸಾರ್ಹ ಸೇವೆಗಳು ಬಳಕೆದಾರರ ಬ್ರೌಸಿಂಗ್ ಮಾಹಿತಿ, ಐಪಿ ವಿಳಾಸ, ಸ್ಥಳದ ಮಾಹಿತಿ ಅಥವಾ ಇತರೆ ಬಳಕೆ ಡೇಟಾವನ್ನು ಸಂಗ್ರಹಿಸಿ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವ ಆರೋಪಗಳನ್ನು ಎದುರಿಸಿವೆ. ಆದ್ದರಿಂದ ಯಾವುದೇ ಉಚಿತ VPN ಬಳಸುವ ಮೊದಲು ಅದರ ಗೌಪ್ಯತಾ ನೀತಿ (Privacy Policy) ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ.

ಕೆಲವು VPN ಕಂಪನಿಗಳು ತಮ್ಮ ಪ್ರೀಮಿಯಂ ಯೋಜನೆಗಳ ಜೊತೆಗೆ ಹೆಚ್ಚುವರಿ ಭದ್ರತಾ ಸೇವೆಗಳು, ಪಾಸ್‌ವರ್ಡ್ ಮ್ಯಾನೇಜರ್, ಕ್ಲೌಡ್ ಸ್ಟೋರೇಜ್ ಅಥವಾ ವ್ಯವಹಾರಿಕ (Business) VPN ಸೇವೆಗಳ ಮೂಲಕವೂ ಆದಾಯ ಗಳಿಸುತ್ತವೆ. ಇದೇ ಆದಾಯದ ಒಂದು ಭಾಗವನ್ನು ಉಚಿತ ಬಳಕೆದಾರರ ಸೇವೆ ನಿರ್ವಹಿಸಲು ಬಳಸಲಾಗುತ್ತದೆ.

ತಜ್ಞರ ಪ್ರಕಾರ, ನಿಜವಾಗಿಯೂ ಉಚಿತ ಸೇವೆ ನೀಡುವ VPNಗಳ ಉದ್ದೇಶ ಮತ್ತು ವ್ಯವಹಾರ ಮಾದರಿ ಏನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. “ಉಚಿತ” ಎಂಬ ಕಾರಣಕ್ಕೆ ಯಾವುದೇ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವ ಬದಲು, ಅದರ ಕಂಪನಿಯ ವಿಶ್ವಾಸಾರ್ಹತೆ, ಗೌಪ್ಯತಾ ನೀತಿ ಮತ್ತು ಬಳಕೆದಾರರ ವಿಮರ್ಶೆಗಳನ್ನು ಪರಿಶೀಲಿಸಿ ಬಳಸುವುದು ಸುರಕ್ಷಿತ ಆಯ್ಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದೇವೆ, ಟೋಯಿಂಗ್ ಬಳಿಕವೂ ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ – Kannada News | Bengaluru to Auction 2,700 Abandoned Vehicles if Owners Fail to Claim Them: Minister Krishna Byre Gowda

ಬೆಂಗಳೂರು, ಜುಲೈ 18: ಬೆಂಗಳೂರು ನಗರದ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿನ ಅನಾಥ ವಾಹನಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಗೆ ಶನಿವಾರ ಚಾಲನೆ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಮಲ್ಲೇಶ್ವರಂನ ಎಂ.ಡಿ.ಬ್ಲಾಕ್‌ನಲ್ಲಿ ಈ ಕಾರ್ಯಾಚರಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜಿಬಿಎ ಮತ್ತು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ 2700 ಅನಾಥ ವಾಹನಗಳನ್ನು ಪಟ್ಟಿ ಮಾಡಿದ್ದೇವೆ. ಒಂದು ವಾರದ ಮೊದಲು ಇಂತಹ ವಾಹನಗಳಿಗೆ ನೋಟಿಸ್‌ಗಳನ್ನು ಅಂಟಿಸಲಾಗಿತ್ತು. ನೋಟಿಸ್ ನೀಡಿದ ನಂತರವೂ ಮಾಲೀಕರು ಬಂದು ವಾಹನಗಳನ್ನು ಕ್ಲೈಮ್ ಮಾಡದಿದ್ದರೆ, ಅವುಗಳನ್ನು ಟೋಯಿಂಗ್ ಮಾಡಲಾಗುತ್ತದೆ ಎಂದರು.

ಟೋಯಿಂಗ್ ಮಾಡಿದ ವಾಹನಗಳನ್ನು ಜಿಬಿಎ ಜಾಗದಲ್ಲಿ 15 ದಿನಗಳ ಕಾಲ ಇರಿಸಲಾಗುವುದು. ಈ ಅವಧಿಯಲ್ಲಿಯೂ ಮಾಲೀಕರು ಬರದಿದ್ದರೆ, ಕಾನೂನು ಪ್ರಕಾರವಾಗಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಸಾರ್ವಜನಿಕರು ರಸ್ತೆಗಳನ್ನು ಮತ್ತು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡದಂತೆ ಅವರು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Skyroot Vikram-1 Launch: ಬಾಹ್ಯಾಕಾಶ ವಲಯದಲ್ಲಿ ಭಾರತದ ಹೊಸ ಸೂರ್ಯೋದಯ:ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ – Kannada News | India’s Private Space Dawn: Vikram 1 Rocket Launches, Skyroot Leads New Era

ಶ್ರೀಹರಿಕೋಟ, ಜುಲೈ 18: ಭಾರತದ ಬಾಹ್ಯಾಕಾಶ ರಂಗದಲ್ಲಿ ಇಂದು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಘಟನೆಯೊಂದು ಜರುಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಭಾರತದ ಮೊಟ್ಟ ಮೊದಲ ಖಾಸಗಿ ರಾಕೆಟ್ ವಿಕ್ರಮ್-1(Vikram-1) ಶ್ರೀಹರಿಕೋಟಾದ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥವಾಗಿ ಈ ರಾಕೆಟ್​ಗೆ ವಿಕ್ರಮ್ 1 ಎಂದು ಹೆಸರಿಡಲಾಗಿದೆ. ಇದು ಯಶಸ್ವಿಯಾಗಿ ಭೂಮಿಯ ಕಕ್ಷೆ ತಲುಪಿದರೆ, ಬಾಹ್ಯಾಕಾಶಕ್ಕೆ ರಾಕೆಟ್ ಕಳುಹಿಸಿದ ವಿಶ್ವದ ಬೆರಳೆಣಿಕೆಯಷ್ಟು ಗಣ್ಯ ಖಾಸಗಿ ಕಂಪನಿಗಳ ಸಾಲಿಗೆ ಭಾರತದ ಸ್ಕೈರೂಟ್ ಸಂಸ್ಥೆ ಸೇರಲಿದೆ.

ಏನಿದು ‘ವಿಕ್ರಮ್-1’ ರಾಕೆಟ್? ಇದರ ವೈಶಿಷ್ಟ್ಯಗಳೇನು?

ರಚನೆ ಮತ್ತು ಗಾತ್ರ: ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಮೂರು ಹಂತದ (3-Stage) ರಾಕೆಟ್ ಆಗಿದೆ. ಇದರ ಎತ್ತರ ಸುಮಾರು 23 ಮೀಟರ್ ಹಾಗೂ ವ್ಯಾಸ 1.7 ಮೀಟರ್ ಇದೆ.

ಭಾರ ಹೊರುವ ಸಾಮರ್ಥ್ಯ: ಇದು ಸಣ್ಣ ಗಾತ್ರದ ಹಾಗೂ ವಾಣಿಜ್ಯ ಬಳಕೆಯ ಸುಮಾರು 300 ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (LEO – Low Earth Orbit) ಅತ್ಯಂತ ನಿಖರವಾಗಿ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಕಕ್ಷೆ ತಲುಪುವುದು ಏಕೆ ಕಷ್ಟ?: ಬಾಹ್ಯಾಕಾಶ ವಿಜ್ಞಾನದಲ್ಲಿ ಕಕ್ಷೆ ತಲುಪುವುದು ಅತ್ಯಂತ ಕಠಿಣ ಇಂಜಿನಿಯರಿಂಗ್ ಸಾಧನೆ. ರಾಕೆಟ್ ಗಂಟೆಗೆ ಬರೋಬ್ಬರಿ 28,000 ಕಿಲೋಮೀಟರ್ ವೇಗವನ್ನು ಸಾಧಿಸಬೇಕಾಗುತ್ತದೆ. ಜೊತೆಗೆ ನಿಖರವಾದ ಸಂಚರಣೆ ಮತ್ತು ವಿವಿಧ ಹಂತಗಳ ಬೇರ್ಪಡಿಕೆ ಪ್ರಕ್ರಿಯೆಗಳು ಏಕಕಾಲದಲ್ಲಿ ಸೆಕೆಂಡಿನ ನೂರನೇ ಒಂದು ಭಾಗದಷ್ಟು ನಿಖರತೆಯಲ್ಲಿ ನಡೆಯಬೇಕಾಗುತ್ತದೆ.

ಮತ್ತಷ್ಟು ಓದಿ: ಖಾಸಗಿಯಾಗಿ ಅಭಿವೃದ್ಧಿಗೊಂಡ ಭಾರತದ ಮೊದಲ ರಾಕೆಟ್ ‘ವಿಕ್ರಮ್-1’ ಇಂದು ಉಡಾವಣೆ: ಬಾಹ್ಯಾಕಾಶಕ್ಕೆ ಹಾರಲಿವೆ ಪ್ರಧಾನಿ ಮೋದಿ ಪೋಸ್ಟ್‌ಕಾರ್ಡ್‌

ಇಸ್ರೋ ಮಾಜಿ ವಿಜ್ಞಾನಿಗಳ ಅದ್ಭುತ ಸೃಷ್ಟಿ

ಈ ಇಡೀ ಸಾಧನೆಯ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ವಿಜ್ಞಾನಿಗಳ ಪರಿಶ್ರಮವಿದೆ. ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಎಂಬ ಇಬ್ಬರು ಯುವ ವಿಜ್ಞಾನಿಗಳು 2018 ರಲ್ಲಿ ಇಸ್ರೋ ಕೆಲಸ ಬಿಟ್ಟು ‘ಸ್ಕೈರೂಟ್ ಏರೋಸ್ಪೇಸ್’ ಕಂಪನಿಯನ್ನು ಸ್ಥಾಪಿಸಿದರು.

ಇಂದು ಈ ಕಂಪನಿಯ ಒಟ್ಟು ಮೌಲ್ಯ ಸುಮಾರು 1.1 ಬಿಲಿಯನ್ ಡಾಲರ್ (9,000 ಕೋಟಿ ರೂ.ಗೂ ಅಧಿಕ) ದಾಟಿದೆ. ಈ ರಾಕೆಟ್ ಉಡಾವಣೆಗೆ ಇಸ್ರೋ ತನ್ನ ಉಡಾವಣಾ ಕೇಂದ್ರ, ತಾಂತ್ರಿಕ ನೆರವು ಹಾಗೂ ಪರೀಕ್ಷಾ ಮೂಲಸೌಕರ್ಯಗಳನ್ನು ಮುಕ್ತವಾಗಿ ನೀಡುವ ಮೂಲಕ ಖಾಸಗಿ ಸಹಭಾಗಿತ್ವಕ್ಕೆ ದೊಡ್ಡ ಉದಾಹರಣೆಯಾಗಿ ನಿಂತಿದೆ. ಕಂಪನಿಯು ಈಗಾಗಲೇ 2022 ರ ನವೆಂಬರ್‌ನಲ್ಲಿ ‘ವಿಕ್ರಮ್-ಎಸ್’ ಎಂಬ ಸಣ್ಣ ಉಪ-ಕಕ್ಷೆಯ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಹಾರಿಸಿ ಯಶಸ್ವಿಯಾಗಿತ್ತು.

ಜಾಗತಿಕ ಸಣ್ಣ ಉಪಗ್ರಹ ಮಾರುಕಟ್ಟೆಯಲ್ಲಿ ಭಾರತದ ದರ್ಬಾರ್

ವಿಕ್ರಮ್-1 ರ ಇಂದಿನ ಉಡಾವಣೆಯು ಕೇವಲ ಒಂದು ರಾಕೆಟ್ ಹಾರಾಟವಲ್ಲ, ಇದರ ಹಿಂದೆ ಜಾಗತಿಕ ಆರ್ಥಿಕ ತಂತ್ರಗಾರಿಕೆ ಅಡಗಿದೆ.

ಕಡಿಮೆ ವೆಚ್ಚದ ಉಡಾವಣೆ: ಪ್ರಸ್ತುತ ಜಗತ್ತಿನಲ್ಲಿ ಇಂಟರ್ನೆಟ್, ಕೃಷಿ ಮತ್ತು ಹವಾಮಾನ ಮುನ್ಸೂಚನೆಗಾಗಿ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಬೇಡಿಕೆ ವಿಪರೀತವಾಗಿದೆ. ಅಮೆರಿಕದ ಸ್ಪೇಸ್‌ಎಕ್ಸ್ (SpaceX) ದೊಡ್ಡ ರಾಕೆಟ್‌ಗಳನ್ನು ಬಳಸುತ್ತದೆಯಾದರೂ, ಸಣ್ಣ ಉಪಗ್ರಹಗಳಿಗಾಗಿ ಜಗತ್ತು ಈಗ ಭಾರತದತ್ತ ನೋಡುತ್ತಿದೆ. ಭಾರತದ ಖಾಸಗಿ ರಾಕೆಟ್‌ಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಅತಿ ಕಡಿಮೆ ಸಮಯದಲ್ಲಿ ಉಪಗ್ರಹಗಳನ್ನು ಹಾರಿಸಬಲ್ಲವು.

ಮುಂದಿನ ಗುರಿಗಳೇನು? ಇಂದಿನ ಉಡಾವಣೆಯಲ್ಲಿ ಭಾರತ ಮತ್ತು ವಿದೇಶಿ ಗ್ರಾಹಕರ ವಾಣಿಜ್ಯ ಪೇಲೋಡ್‌ಗಳನ್ನು ಕಳುಹಿಸಲಾಗುತ್ತಿದೆ. ಈ ಮಿಷನ್ ಯಶಸ್ವಿಯಾದರೆ ಸ್ಕೈರೂಟ್ ಸಂಸ್ಥೆಯು ಭವಿಷ್ಯದಲ್ಲಿ ಮರುಬಳಕೆ ಮಾಡಬಹುದಾದ ರಾಕೆಟ್‌ಗಳು ಹಾಗೂ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ‘ಹ್ಯೂಮನ್ ಸ್ಪೇಸ್‌ಫ್ಲೈಟ್’ ತಂತ್ರಜ್ಞಾನವನ್ನು ಭಾರತದಲ್ಲೇ ಅಭಿವೃದ್ಧಿಪಡಿಸುವ ದೈತ್ಯ ಗುರಿಯನ್ನು ಹೊಂದಿದೆ. ಇದು ಭಾರತದ ಯುವ ಇಂಜಿನಿಯರ್‌ಗಳಿಗೆ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ : ಭಾರತದ ಮೊದಲ ಖಾಸಗಿ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲು ಕಾರಣವೇನು ಮತ್ತು ಇದನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?

ಉತ್ತರ: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥವಾಗಿ ಈ ರಾಕೆಟ್‌ಗೆ ‘ವಿಕ್ರಮ್-1’ ಎಂದು ಹೆಸರಿಡಲಾಗಿದೆ. ಇದನ್ನು ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ‘ಸ್ಕೈರೂಟ್ ಏರೋಸ್ಪೇಸ್’ ಅಭಿವೃದ್ಧಿಪಡಿಸಿದೆ.

ಪ್ರಶ್ನೆ : ‘ವಿಕ್ರಮ್-1′ ರಾಕೆಟ್‌ನ ರಚನೆ, ಗಾತ್ರ ಮತ್ತು ಇದರ ಭಾರ ಹೊರುವ ಸಾಮರ್ಥ್ಯ ಎಷ್ಟಿದೆ?

ಉತ್ತರ: ವಿಕ್ರಮ್-1 ಅತ್ಯಾಧುನಿಕ ತಂತ್ರಜ್ಞಾನದ 3 ಹಂತದ (3-Stage) ರಾಕೆಟ್ ಆಗಿದ್ದು, ಇದು 23 ಮೀಟರ್ ಎತ್ತರ ಹಾಗೂ 1.7 ಮೀಟರ್ ವ್ಯಾಸವನ್ನು ಹೊಂದಿದೆ. ಇದು ಸಣ್ಣ ಗಾತ್ರದ ಹಾಗೂ ವಾಣಿಜ್ಯ ಬಳಕೆಯ ಸುಮಾರು 300 ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (LEO) ತಲುಪಿಸುವ ಸಾಮರ್ಥ್ಯ ಹೊಂದಿದೆ.

ಪ್ರಶ್ನೆ : ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯನ್ನು ಸ್ಥಾಪಿಸಿದವರು ಯಾರು ಮತ್ತು ಈ ಮೈಲಿಗಲ್ಲಿನಲ್ಲಿ ಇಸ್ರೋದ (ISRO) ಪಾತ್ರವೇನು?

ಉತ್ತರ: ಇಸ್ರೋದ ಮಾಜಿ ವಿಜ್ಞಾನಿಗಳಾದ ಪವನ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಅವರು 2018 ರಲ್ಲಿ ಸ್ಕೈರೂಟ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ರಾಕೆಟ್ ಉಡಾವಣೆಗೆ ಇಸ್ರೋ ತನ್ನ ಉಡಾವಣಾ ಕೇಂದ್ರ, ಅತ್ಯಾಧುನಿಕ ತಂತ್ರಜ್ಞಾನದ ನೆರವು ಹಾಗೂ ಪರೀಕ್ಷಾ ಮೂಲಸೌಕರ್ಯಗಳನ್ನು ಮುಕ್ತವಾಗಿ ನೀಡುವ ಮೂಲಕ ಬೆಂಬಲಿಸಿದೆ.

ಪ್ರಶ್ನೆ : ಜಾಗತಿಕ ಸಣ್ಣ ಉಪಗ್ರಹ ಮಾರುಕಟ್ಟೆಯಲ್ಲಿ ವಿಕ್ರಮ್-1 ಉಡಾವಣೆಯ ಪ್ರಾಮುಖ್ಯತೆ ಏನು ಮತ್ತು ಸ್ಕೈರೂಟ್ ಸಂಸ್ಥೆಯ ಮುಂದಿನ ಗುರಿಗಳೇನು?

ಉತ್ತರ: ಜಗತ್ತಿನಲ್ಲಿ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವ ಬೇಡಿಕೆ ಹೆಚ್ಚಾಗಿದ್ದು, ಭಾರತದ ಈ ಖಾಸಗಿ ರಾಕೆಟ್ ಅತ್ಯಂತ ಕಡಿಮೆ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ಉಪಗ್ರಹ ಹಾರಿಸಬಲ್ಲದು. ಈ ಮಿಷನ್ ಯಶಸ್ವಿಯಾದರೆ, ಭವಿಷ್ಯದಲ್ಲಿ ಮರುಬಳಕೆ ಮಾಡಬಹುದಾದ ರಾಕೆಟ್‌ಗಳು (Reusable Rockets) ಹಾಗೂ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ‘ಹ್ಯೂಮನ್ ಸ್ಪೇಸ್‌ಫ್ಲೈಟ್’ ತಂತ್ರಜ್ಞಾನವನ್ನು ಭಾರತದಲ್ಲೇ ಅಭಿವೃದ್ಧಿಪಡಿಸುವ ದೈತ್ಯ ಗುರಿಯನ್ನು ಸ್ಕೈರೂಟ್ ಹೊಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Government Free Milk Powder Scam: ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ – Kannada News | Raichur Milk Powder Scam: Over 760 KG of Nandini Powder Meant for Children Found in Cattle Shed

ರಾಯಚೂರು, ಜುಲೈ 18: ಮಕ್ಕಳ ಪೌಷ್ಟಿಕತೆಗಾಗಿ ಜಾರಿಗೆ ತಂದ ಕ್ಷೀರಭಾಗ್ಯ ಯೋಜನೆಗೆ ದೊಡ್ಡ ಹಿನ್ನಡೆಯಾಗಿದ್ದು, ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹವಾಗಿರುವುದು ಪತ್ತೆಯಾಗಿದೆ. ದೇವದುರ್ಗ ಮಾರ್ಗದಲ್ಲಿರುವ ಶೆಡ್ ಒಂದರಲ್ಲಿ 38 ಚೀಲಗಳಷ್ಟು ಹಾಲಿನ ಪುಡಿ ಸಿಕ್ಕಿದ್ದು, ಸ್ಥಳೀಯ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಈ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಬೇಕಿತ್ತು. ಆದರೆ, ಅದು ದನದ ಕೊಟ್ಟಿಗೆಯ ಪಕ್ಕದಲ್ಲಿ ಅವ್ಯವಸ್ಥಿತವಾಗಿ ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಅಕ್ಷರ ದಾಸೋಹ ಅಧಿಕಾರಿಗಳು ಪೊಲೀಸರಿಗೆ ಸೂಕ್ತ ಮಾಹಿತಿ ನೀಡದೆ ನುಣುಚಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಕೆಎಂಎಫ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಹಗರಣಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ವಾರ ಕೊಪ್ಪಳದಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಡಿಗೆ ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ – Kannada News | Raipur Family Tragedy: Five Found Dead in Rented Home, Investigation Underway

ರಾಯ್‌ಪುರ,ಜುಲೈ 18:ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಸಂಜಯ್ ನಗರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ಐದು ಜನ ಸದಸ್ಯರು ಬಾಡಿಗೆ ಮನೆಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದು ತಂದೆಯೇ ಇಡೀ ಕುಟುಂಬಕ್ಕೆ ವಿಷ(Poison) ಉಣಿಸಿ ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ.

ಬೀಗ ಹಾಕಲಾಗಿದ್ದ ಮನೆಯಿಂದ ವಿಪರೀತ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಶುಕ್ರವಾರ ತಡರಾತ್ರಿ ಈ ಶವಗಳು ಪತ್ತೆಯಾಗಿವೆ.

ಮೃತರ ಗುರುತು ಮತ್ತು ಸ್ಥಳದಲ್ಲಿದ್ದ ಭೀಕರ ದೃಶ್ಯ
ಮೃತ ದುರ್ದೈವಿಗಳನ್ನು 50 ವರ್ಷದ ಸಾಜಿದ್ ಅಲಿ (ಸಜ್ಜು), ಅವರ ಪತ್ನಿ ರಾಬಿಯಾ ಬಾನೋ (45), ಮಗ ಇರ್ಷಾದ್ ಅಲಿ (20) ಹಾಗೂ ಇಬ್ಬರು ಹೆಣ್ಣುಮಕ್ಕಳಾದ ಶಾಹಿದಾ ಬೇಗಂ (15) ಮತ್ತು ಇರ್ಷಾಬಾ ಪರ್ವೀನ್ (12) ಎಂದು ಗುರುತಿಸಲಾಗಿದೆ.

ಕುಟುಂಬಸ್ಥರು ಪದೇ ಪದೇ ಕರೆ ಮಾಡಿದರೂ ಉತ್ತರಿಸದ ಕಾರಣ ಪೊಲೀಸರು ಬಾಗಿಲನ್ನು ಬಲವಂತವಾಗಿ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಮನೆಯ ಒಳಗೆ ಕುಟುಂಬದ ಮುಖ್ಯಸ್ಥ ಸಾಜಿದ್ ಅಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಅವರ ಪತ್ನಿ ಹಾಗೂ ಮೂವರು ಮಕ್ಕಳ ಶವಗಳು ನೆಲದ ಮೇಲೆ ಬಿದ್ದಿದ್ದವು.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾಜಿದ್ ಅಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ನಿ ಮತ್ತು ಮೂವರು ಮಕ್ಕಳಿಗೆ ರಾತ್ರಿ ಊಟದಲ್ಲಿ ಅಥವಾ ಆಹಾರದಲ್ಲಿ ಭೀಕರ ವಿಷ ಬೆರೆಸಿ ಕೊಟ್ಟಿರಬಹುದು. ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ನಂತರ ತಾನು ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.

ಈ ಕುಟುಂಬವು ಸಂಜಯ್ ನಗರದ ಈ ಬಾಡಿಗೆ ಮನೆಯಲ್ಲಿ ಕಳೆದ ಎಂಟು ತಿಂಗಳುಗಳಿಂದ ವಾಸವಾಗಿತ್ತು. ಸಾಜಿದ್ ಹಳೆಯ ಹಾಗೂ ಬಳಸಿದ ಬ್ಯಾಟರಿಗಳನ್ನು ಖರೀದಿಸಿ, ಮರುಮಾರಾಟ ಮಾಡುವ ಸಣ್ಣ ವ್ಯವಹಾರದ ಮೂಲಕ ಜೀವನ ಸಾಗಿಸುತ್ತಿದ್ದರು. ಗುರುವಾರ ಸಂಜೆ ಈ ಕುಟುಂಬದ ಸದಸ್ಯರು ಕೊನೆಯ ಬಾರಿಗೆ ಹೊರಗೆ ಕಾಣಿಸಿಕೊಂಡಿದ್ದರು.

ಮತ್ತಷ್ಟು ಓದಿ: ಮನೆಯಲ್ಲೇ ಅನಸ್ತೇಶಿಯಾ ತಜ್ಞನ ಭೀಕರ ಕೊಲೆ: ಪತ್ನಿಯಿಂದಲೇ ದುರಂತ ಅಂತ್ಯ ಕಂಡ ವೈದ್ಯ?

ಆರ್ಥಿಕ ಮುಗ್ಗಟ್ಟು ಮತ್ತು ಸಾಲದ ಬಾಧೆ: ಇತ್ತೀಚಿನ ವರ್ಷಗಳಲ್ಲಿ ಸಣ್ಣ ಪ್ರಮಾಣದ ವ್ಯಾಪಾರಿಗಳು ತೀವ್ರ ಆರ್ಥಿಕ ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿ ಇಡೀ ಕುಟುಂಬವನ್ನೇ ಕೊಲ್ಲುವ ಇಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಸಾಜಿದ್ ಕೂಡ ಬ್ಯಾಟರಿ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸಾಲಗಾರರ ಕಾಟ ತಾಳಲಾರದೆ ಈ ಹೆಜ್ಜೆ ಇಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಅವರ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ವಿಧಿವಿಜ್ಞಾನ ತಂಡ ಮತ್ತು ಹಿರಿಯ ಅಧಿಕಾರಿಗಳು ಇಡೀ ಮನೆಯನ್ನು ಸೀಲ್ ಮಾಡಿ ತನಿಖೆ ಕೈಗೊಂಡಿದ್ದಾರೆ. ಶವಗಳು ಸಂಪೂರ್ಣವಾಗಿ ಕೊಳೆತು ಹೋಗಿರುವುದರಿಂದ ಮರಣೋತ್ತರ ಪರೀಕ್ಷೆಯ ವಿಜ್ಞಾನ ವರದಿ ಬಂದ ನಂತರವೇ ಇವರೆಲ್ಲರೂ ಸತ್ತಿದ್ದು ಹೇಗೆ ಮತ್ತು ನಿಖರ ಕಾರಣವೇನು ಎಂಬುದು ಅಧಿಕೃತವಾಗಿ ತಿಳಿಯಲಿದೆ ಎಂದು ರಾಯ್‌ಪುರ ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version