3 ವರ್ಷಗಳಿಂದ ಅವಕಾಶಗಳಿಲ್ಲ; ವಿದೇಶಿ ತಂಡದ ಪರ ಅದೃಷ್ಟ ಪರೀಕ್ಷೆಗಿಳಿದ ಚಾಹಲ್ – Kannada News | Yuzvendra Chahal’s County Cricket Comeback: Targeting India Team Return with Northamptonshire

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ತಂಡದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಒಂದು ಸಮಯದಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ನರ್ ಎನಿಸಿಕೊಂಡಿದ್ದ ಚಾಹಲ್​ರನ್ನು ನಿರ್ಲಕ್ಷಿಸಲಾಗುತ್ತಿದೆ. ಚಾಹಲ್ ಕೊನೆಯ ಬಾರಿಗೆ 2023 ರಲ್ಲಿ ಭಾರತೀಯ ಜೆರ್ಸಿಯಲ್ಲಿ ಆಡಿದ್ದರು. 2024 ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರೂ, ಇಡೀ ಪಂದ್ಯಾವಳಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೂ ಸೋಲೊಪ್ಪಿಕ್ಕೊಳ್ಳದ ಚಾಹಲ್ ಮತ್ತೆ ಪುಟಿದೇಳಲು ನಿರ್ಧರಿಸಿ ವಿದೇಶಿ ಮೈದಾನದಲ್ಲಿ ತನ್ನ ಪರಾಕ್ರಮ ತೊರಲು ಸಜ್ಜಾಗಿದ್ದಾರೆ.

ಮತ್ತೆ ಕೌಂಟಿ ಕ್ರಿಕೆಟ್​ನತ್ತ ಚಾಹಲ್

ಯುಜ್ವೇಂದ್ರ ಚಾಹಲ್ ಈಗ ಇಂಗ್ಲೆಂಡ್‌ನಲ್ಲಿ 2026 ರ ಕೌಂಟಿ ಕ್ರಿಕೆಟ್ ಆವೃತ್ತಿಯ ದ್ವಿತೀಯಾರ್ಧಕ್ಕಾಗಿ ನಾರ್ಥಾಂಪ್ಟನ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ ಸೇರಿದ್ದಾರೆ. ಈ ಕ್ಲಬ್ ಪರಿಸರವು ಚಾಹಲ್‌ಗೆ ಹೊಸದೇನಲ್ಲ. ಅವರು ಈ ಹಿಂದೆ 2024 ಮತ್ತು 2025 ರ ದೇಶೀಯ ಆವೃತ್ತಿಗಳಲ್ಲಿ ಸ್ವಲ್ಪ ಸಮಯದವರೆಗೆ ನಾರ್ಥಾಂಪ್ಟನ್‌ಶೈರ್ ಪರ ಆಡಿದ್ದರು. ಈಗ, 2026 ರಲ್ಲಿ, ಅವರು ಮತ್ತೊಮ್ಮೆ ತಂಡದ ಪರ ಆಡುವುದನ್ನು ಕಾಣಬಹುದು. ಈ ಬಾರಿ, ಕೌಂಟಿ ಚಾಂಪಿಯನ್‌ಶಿಪ್ ಮತ್ತು ಏಕದಿನ ಕಪ್ ಎರಡರಲ್ಲೂ ಚಾಹಲ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಜುಲೈ 21 ರಂದು ಏಕದಿನ ಕಪ್ ಆರಂಭವಾಗಲಿದೆ.

ವೇಗದ ಬೌಲರ್‌ಗಳು ಸಾಮಾನ್ಯವಾಗಿ ಪ್ರಾಬಲ್ಯ ಹೊಂದಿರುವ ಇಂಗ್ಲಿಷ್ ಪಿಚ್‌ಗಳಲ್ಲಿ, ಯುಜ್ವೇಂದ್ರ ಚಾಹಲ್ ತಮ್ಮ ಸ್ಪಿನ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದಾರೆ. ನಾರ್ಥಾಂಪ್ಟನ್‌ಶೈರ್‌ ಪರ ಆಡುತ್ತಿರುವ ಚಾಹಲ್, ತನ್ನ ಕೊನೆಯ ಎರಡು ಕೌಂಟಿ ಚಾಂಪಿಯನ್‌ಶಿಪ್ ಪ್ರವಾಸಗಳಲ್ಲಿ ಕೌಂಟಿ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ, ಒಟ್ಟು 31 ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2026: ವಿಮಾನದಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿದ ಯುಜ್ವೇಂದ್ರ ಚಾಹಲ್; ವಿಡಿಯೋ ವೈರಲ್

ಚಾಹಲ್ ಅನುಭವ ತಂಡಕ್ಕೆ ಪ್ರಯೋಜನಕಾರಿ

35 ವರ್ಷದ ಯುಜ್ವೇಂದ್ರ ಚಾಹಲ್ ದೀರ್ಘ ಮತ್ತು ಅತ್ಯಂತ ಯಶಸ್ವಿ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದಾರೆ. ಸುಮಾರು ಏಳು ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಅವರು ಭಾರತದ ಪರ ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಒಟ್ಟು 217 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಾಹಲ್ ಅವರ ಅನುಭವ ಮತ್ತು ಪ್ರದರ್ಶನಗಳು 2026 ರ ಆವೃತ್ತಿಯಲ್ಲಿ ನಾರ್ಥಾಂಪ್ಟನ್‌ಶೈರ್‌ ತಂಡದ ಇತರ ಬೌಲರ್‌ಗಳು ಮತ್ತು ಯುವ ಆಟಗಾರರಿಗೆ ಹೆಚ್ಚಿನ ಸಹಾಯ ಮಾಡಬಹುದು. ಮುಂಬರುವ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಆಯ್ಕೆದಾರರ ಗಮನ ಸೆಳೆಯುವುದು ಚಾಹಲ್ ಅವರ ಗುರಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ಭೀಕರ ದಾಳಿ; 4 ಭಾರತೀಯರ ಸಾವು – Kannada News | 4 Indians killed one critically Injured after attack on ship at Odesa port in Ukraine

ಕೈವ್, ಜುಲೈ 20: ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಉಕ್ರೇನ್‌ನ (Russia-Ukraine War) ಒಡೆಸ್ಸಾ ಬಂದರಿನಲ್ಲಿ ಭೀಕರ ದಾಳಿಯೊಂದು ನಡೆದಿದೆ. ಈ ದಾಳಿಯಲ್ಲಿ ಕಮರ್ಷಿಯಲ್ ಸರಕು ಸಾಗಣೆ ಹಡಗಿನಲ್ಲಿದ್ದ 4 ಮಂದಿ ಭಾರತೀಯ ನಾವಿಕರು ಕೂಡ ಸಾವನ್ನಪ್ಪಿದ್ದಾರೆ. ಅದೇ ಹಡಗಿನಲ್ಲಿದ್ದ ಮತ್ತೊಬ್ಬ ಭಾರತೀಯ ನಾವಿಕ ತೀವ್ರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾನುವಾರ ಸಂಜೆ ಒಡೆಸ್ಸಾ ಬಂದರಿನಿಂದ ಹೊರಡುತ್ತಿದ್ದ ವೇಳೆ ಈ ಹಡಗಿನ ಮೇಲೆ ಭೀಕರ ದಾಳಿ ನಡೆದಿದೆ ಎಂದು ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ದಾಳಿಗೊಳಗಾದ ‘ಎಮ್.ವಿ. ಗೋಲ್ಡನ್ ಲಿಯೋ’ ವಾಣಿಜ್ಯ ಹಡಗಿನಲ್ಲಿ ಒಟ್ಟು 17 ಜನ ಸಿಬ್ಬಂದಿ ಇದ್ದರು. ಇವರಲ್ಲಿ 5 ಜನ ಭಾರತೀಯ ಪ್ರಜೆಗಳಾಗಿದ್ದರು. ದಾಳಿಯ ತೀವ್ರತೆಗೆ ನಾಲ್ವರು ಭಾರತೀಯರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಐದನೇ ಭಾರತೀಯ ನಾವಿಕ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೊಳಗಾದ ಹಡಗಿನಲ್ಲಿ ಬೆಂಕಿ ಅವಘಡ; ಸಿಬ್ಬಂದಿ ರಕ್ಷಣೆ

ಭಾರತದ ಅಧಿಕೃತ ಮಾಹಿತಿ:

“ಉಕ್ರೇನ್‌ನಲ್ಲಿರುವ ನಮ್ಮ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಆಡಳಿತಾತ್ಮಕ ಸಹಾಯವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಗಾಯಗೊಂಡಿರುವ ನಾವಿಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.

ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ:

ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಈ ಹಿಂಸಾಚಾರವನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ನಾಗರಿಕ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಅವರ ಜೀವಕ್ಕೆ ಆಪತ್ತು ತರುವುದು ತೀವ್ರ ಖಂಡನೀಯ ಎಂದು ಭಾರತ ಹೇಳಿದೆ. ಮುಕ್ತ ಸಮುದ್ರಯಾನದ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಅಡ್ಡಿಪಡಿಸುವ ಇಂತಹ ಕೃತ್ಯಗಳು ಅತ್ಯಂತ ವಿಷಾದಕರವಾಗಿದ್ದು, ಇಂತಹ ದಾಳಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಪಾತಾಳಕ್ಕೆ ಕುಸಿದ ತಂಡದ ಪ್ರದರ್ಶನ – Kannada News | Shubman Gill Captaincy: Has Team India Lost Winning Edge and No.1 ODI Rank?

ರೋಹಿತ್ ಶರ್ಮಾರನ್ನು (Rohit Sharma) ನಾಯಕತ್ವದಿಂದ ಕೆಳಗಿಳಿಸಿ ಶುಭ್​ಮನ್ ಗಿಲ್​ಗೆ (Shubman Gill) ತಂಡದ ನಾಯಕತ್ವ ಹಸ್ತಾಂತರಿಸಲಾಯಿತು. ರೋಹಿತ್ ನಾಯಕತ್ವದಲ್ಲಿ ಅಪರೂಪಕ್ಕೊಮ್ಮೆ ಸೋಲುತ್ತಿದ್ದ ಟೀಂ ಇಂಡಿಯಾ ಗಿಲ್ ನಾಯಕನಾದ ಮೇಲೆ ಗೆಲ್ಲುವುದನ್ನೇ ಮರೆತಂತೆ ಕಾಣುತ್ತಿದೆ. ಕಳೆದ 9 ತಿಂಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದು ಒಂದೇ ಒಂದು ಏಕದಿನ ಸರಣಿಯನ್ನ. ಗಿಲ್ ಅಕ್ಟೋಬರ್ 2025 ರಲ್ಲಿ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ, ತಂಡವು ಗೆದ್ದಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಸರಣಿಗಳನ್ನು ಕಳೆದುಕೊಂಡಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸೋತ ರೀತಿ ಟೀಂ ಇಂಡಿಯಾದ ನಂ. 1 ಏಕದಿನ ತಂಡ ಸ್ಥಾನಮಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

9 ತಿಂಗಳಲ್ಲಿ ಒಂದು ಏಕದಿನ ಸರಣಿ ಗೆಲುವು

ಶುಭ್​ಮನ್ ಗಿಲ್ ಅವರ ಒಂಬತ್ತು ತಿಂಗಳ ನಾಯಕತ್ವದ ಅವಧಿಯಲ್ಲಿ, ಟೀಂ ಇಂಡಿಯಾ ನಾಲ್ಕು ಏಕದಿನ ಸರಣಿಗಳನ್ನು ಆಡಿದ್ದು, ಕೇವಲ ಒಂದನ್ನು ಮಾತ್ರ ಗೆದ್ದಿದೆ. ಉಳಿದ ಮೂರರಲ್ಲಿ, ಟೀಂ ಇಂಡಿಯಾ ಸೋತಿದೆ. ಗಿಲ್ ನಾಯಕತ್ವದಲ್ಲಿ ಭಾರತ ಗೆದ್ದ ಏಕೈಕ ಏಕದಿನ ಸರಣಿ ಎಂದರೆ ಅದು ಅಫ್ಘಾನಿಸ್ತಾನ ವಿರುದ್ಧ ತವರು ನೆಲದಲ್ಲಿ. ಭಾರತ ಆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು.

ಆಸೀಸ್ ವಿರುದ್ಧ 2-1 ಅಂತರದ ಸೋಲು

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶುಭ್​ಮನ್ ಗಿಲ್ ಭಾರತದ ಏಕದಿನ ನಾಯಕರಾಗಿ ಪಾದಾರ್ಪಣೆ ಮಾಡಿದರು. ಅಕ್ಟೋಬರ್ 2025 ರಲ್ಲಿ ನಡೆದ ಆ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿತು.

ನ್ಯೂಜಿಲೆಂಡ್ ವಿರುದ್ಧ ಸೋಲು

ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಟೀಂ ಇಂಡಿಯಾ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತು. 1988 ರಿಂದ ಭಾರತ ತಂಡವು ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಸೋತಿರಲಿಲ್ಲ. ಆದರೆ, ಶುಭ್​ಮನ್ ಗಿಲ್ ನಾಯಕತ್ವದಲ್ಲಿ, ಆ ದಾಖಲೆಯನ್ನು ಮುರಿಯಲಾಯಿತು. ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವನ್ನು 2-1 ಅಂತರದಿಂದ ಸೋಲಿಸಿ, 37 ವರ್ಷಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿ ಇತಿಹಾಸ ಸೃಷ್ಟಿಸಿತು.

ವಿದೇಶದಲ್ಲೂ ಏಕದಿನ ಸರಣಿ ಸೋಲು

ಶುಭ್​ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ವಿದೇಶಿ ಏಕದಿನ ಸರಣಿಯನ್ನು ಇಂಗ್ಲೆಂಡ್‌ ನೆಲದಲ್ಲಿ ಆಡಿದರು. ಗಿಲ್​ಗೆ ವಿದೇಶದಲ್ಲಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆಲ್ಲುವ ಅವಕಾಶವಿತ್ತು. ಆದರೆ ಇಂಗ್ಲೆಂಡ್ ನೆಲದಲ್ಲೂ ಗಿಲ್​ಗೆ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಸೋತಿತು.

IND vs AFG: ನಾಯಕನಾಗಿ ಚೊಚ್ಚಲ ಏಕದಿನ ಸರಣಿ ಗೆದ್ದ ಶುಭ್​ಮನ್ ಗಿಲ್

4 ಸರಣಿಗಳಲ್ಲಿ ಗೆದ್ದಿದ್ದು 1 ಸರಣಿ ಮಾತ್ರ

ಶುಭ್​ಮನ್ ಗಿಲ್ ತಮ್ಮ ಒಂಬತ್ತು ತಿಂಗಳ ನಾಯಕತ್ವದ ಅವಧಿಯಲ್ಲಿ ನಾಲ್ಕು ಏಕದಿನ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಭಾರತದಲ್ಲಿ ಮೂರು ಮತ್ತು ವಿದೇಶದಲ್ಲಿ ಒಂದು ಸರಣಿ ಸೇರಿದೆ. ವಿದೇಶದಲ್ಲಿ ಆಡಿದ ಏಕೈಕ ಏಕದಿನ ಸರಣಿಯನ್ನು ಸೋತಿದ್ದು ಮಾತ್ರವಲ್ಲದೆ, ಭಾರತದಲ್ಲಿ ಆಡಿದ ಮೂರು ಏಕದಿನ ಸರಣಿಗಳಲ್ಲಿ ಎರಡನ್ನೂ ಸೋತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸ್ವಸ್ಥಗೊಂಡಿದ್ದ ಬಾಲಕಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ: ಬಾಳಿ ಬದುಕಬೇಕಿದ್ದ 8 ವರ್ಷದ ಮಗು ದುರಂತ ಸಾವು – Kannada News | Girl’s Death at Peresandra Government Hospital Sparks Protest Over Lack of Doctors

ಚಿಕ್ಕಬಳ್ಳಾಪುರ, ಜುಲೈ 20: ಸರ್ಕಾರಿ ಆಸ್ಪತ್ರೆಯಲ್ಲಿ (Govt Hospital) ವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯಗಳಿಲ್ಲದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿರುವ (death) ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಮೃತ ಬಾಲಕಿಯ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ.

ಸರ್ಕಾರಿ ಆಸ್ಪತ್ರೆ ಬೇಜವಾಬ್ದಾರಿ ಹಾಗೂ ಕರ್ತವ್ಯಲೋಪ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಸ್ವಗ್ರಾಮ. ಆದರೆ ಅವರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಬೇಜವಾಬ್ದಾರಿ ಹಾಗೂ ಕರ್ತವ್ಯಲೋಪದಿಂದ ಪದೇ ಪದೇ ಸುದ್ದಿಯಾಗುತ್ತಿದೆ.

ನಡೆದಿದ್ದೇನು?

ನಿನ್ನೆ ಸಂಜೆ ಪೆರೇಸಂದ್ರ ಗ್ರಾಮದ ಚಂದ್ರಿಕಾ ಹಾಗೂ ನವೀನ್ ದಂಪತಿಯ 8 ವರ್ಷದ ಮಗಳು ಶಶಿಕಲಾ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಳು. ತಕ್ಷಣ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ವೈದ್ಯಕೀಯ ಸಲಕರಣೆಗಳಿಲ್ಲ. ಕೇವಲ ಒಬ್ಬರು ನರ್ಸ್ ಮಾತ್ರ ಇದ್ದು, ಚಿಕಿತ್ಸೆ ನೀಡಲು ವಿಫಲರಾಗಿದ್ದಾರೆ. ಇದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಮಾಡದೆ ನಿರ್ಲಕ್ಷ್ಯ, ಮಹಿಳೆ ಸಾವು: ಜಯದೇವ ಹೃದ್ರೋಗ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

ಇನ್ನು ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ, ಆಕ್ಸಿಜನ್ ಸೇರಿದಂತೆ ಮೂಲಭೂತ ವೈದ್ಯಕೀಯ ಸೌಲಭ್ಯಗಳಿಲ್ಲ ಎಂಬುದನ್ನು ಅರಿತ ಸ್ಥಳೀಯರು ಆಸ್ಪತ್ರೆ ಎದುರು ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಬಾಲಕಿ ಆಸ್ಪತ್ರೆಗೆ ಬಂದಾಗಲೇ ನಾಡಿ ಮಿಡಿತ ಇರಲಿಲ್ಲ: ಡಾ. ಚೇತನ್

ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅವರು, ‘ಬಾಲಕಿ ಆಸ್ಪತ್ರೆಗೆ ಬಂದಾಗಲೇ ನಾಡಿ ಮಿಡಿತ ಇರಲಿಲ್ಲ. ಉಸಿರಾಟವು ಅತ್ಯಂತ ಕಡಿಮೆ ಇತ್ತು. ಕರ್ತವ್ಯದಲ್ಲಿದ್ದ ಸಿಬ್ಬಂದಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಮೇಲ್ದರ್ಜೆಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದರೆ ಮಾತ್ರ ಸಾವಿನ ನಿಖರ ಕಾರಣ ತಿಳಿಯುತ್ತದೆ. ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅತಿ ಆಸೆ ಗತಿಗೇಡು: ಲೋನ್ ಆಸೆಗೆ ತಾಳಿ ಅಡವಿಟ್ಟು ಮುಂಗಾಡ ಹಣ ಕಟ್ಟಿ ಮೋಸ ಹೋದ ಮಹಿಳೆಯರು

ಒಂದೆಡೆ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರ ಆರೋಪ, ಮತ್ತೊಂದೆಡೆ ಭಾನುವಾರ ಸಂಜೆ ವೈದ್ಯರಿಗೆ ರಜೆ ಇದ್ದರೂ, ಕರ್ತವ್ಯದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ನಿಯಮಾನುಸಾರ ಚಿಕಿತ್ಸೆ ನೀಡಿದ್ದಾರೆ ಎನ್ನುವುದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಆದರೆ ಇಬ್ಬರು ಪ್ರಭಾವಿ ಜನಪ್ರತಿನಿಧಿಗಳ ತವರು ಗ್ರಾಮದಲ್ಲೇ ವೈದ್ಯರು ಇಲ್ಲದಿರುವುದು ಮಾತ್ರ ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ; ಉಪವಾಸ ಸತ್ಯಾಗ್ರಹ ಮುಂದುವರಿಸಲು ಸೋನಮ್ ವಾಂಗ್ಚುಕ್ ನಿರ್ಧಾರ – Kannada News | I Will Continue My Fast Sonam Wangchuk vows to continue hunger strike

ನವದೆಹಲಿ, ಜುಲೈ 20: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದ ಪ್ರತಿಭಟನಾಕಾರರ ಮೇಲಿನ ಪೊಲೀಸರ ಲಾಠಿ ಚಾರ್ಜ್ ಅನ್ನು ಖಂಡಿಸಿರುವ ಸೋನಮ್ ವಾಂಗ್ಚುಕ್ (Sonam Wangchuk), ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ತಾವೀಗ ದಾಖಲಾಗಿರುವ ದೆಹಲಿಯ ಆಸ್ಪತ್ರೆಗೆ ಸಂಸದರು ಬರುವವರೆಗೆ ಅಥವಾ ಸಿಜೆಪಿ ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಅನುಮತಿ ನೀಡುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಮ್ಮ ಸಹಿ ಇರುವ ಕೈಬರಹದ ಪತ್ರವನ್ನು ಹಂಚಿಕೊಂಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಸರ್ಕಾರ ದೌರ್ಜನ್ಯ ಎಸಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದ ಯುವಕರನ್ನು ತಡೆದ ರೀತಿಯ ಬಗ್ಗೆ ಸೋನಮ್ ವಾಂಗ್ಚುಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ಉಪವಾಸ ಸತ್ಯಾಗ್ರಹ ಇನ್ನೂ ಮುಂದುವರಿಯಲಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡಿರುವುದನ್ನು ಕಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಬಿಡಬೇಕು ಅಥವಾ ಆಸ್ಪತ್ರೆಯಲ್ಲಿ ನನ್ನನ್ನು ಭೇಟಿಯಾಗಲು ಅವರಿಗೆ ಅನುಮತಿ ನೀಡಬೇಕು. ಅಲ್ಲಿಯವರೆಗೆ ನನ್ನ ಉಪವಾಸ ಮುಂದುವರಿಯುತ್ತದೆ” ಎಂದು ವಾಂಗ್ಚುಕ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: 20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ‘ಚಲೋ ಸಂಸದ್’ ಬೃಹತ್ ಮೆರವಣಿಗೆ ನಡೆಸಿದರು. ಈ ಹೋರಾಟಕ್ಕೆ ದೇಶಾದ್ಯಂತ ಯುವ ಸಮೂಹ ಮತ್ತು ನಾಗರಿಕ ಸಂಸ್ಥೆಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿರಿಯಾನಿ ಎಲೆ ನೇರವಾಗಿ ತಿನ್ನುವುದು ಸುರಕ್ಷಿತವೇ? ಈ ಸಣ್ಣ ತಪ್ಪು ಗಂಟಲು, ಜೀರ್ಣಾಂಗಕ್ಕೆ ಅಪಾಯ ತರಬಹುದು ಎಚ್ಚರ – Kannada News | Bay Leaves in Cooking: Safe for Flavor, Not for Chewing

ಬಿರಿಯಾನಿ, ಪುಲಾವ್, ಸಾಂಬಾರ್, ವಿವಿಧ ಗ್ರೇವಿ ಹಾಗೂ ಮಸಾಲೆ ಪದಾರ್ಥಗಳಲ್ಲಿ ಪರಿಮಳಕ್ಕಾಗಿ ಬಳಸುವ ಬಿರಿಯಾನಿ ಎಲೆ (Bay Leaf) ಅಡುಗೆಯ ಮಾಡುವಾಗ ಬಳಸುವ ಪ್ರಮುಖ ಮಸಾಲೆಗಳಲ್ಲಿ ಒಂದಾಗಿದೆ. ಅಡುಗೆ ಮುಗಿದ ಬಳಿಕ ಹೆಚ್ಚಿನವರು ಈ ಎಲೆಯನ್ನು ಆಹಾರದಿಂದ ತೆಗೆದು ಬದಿಗಿಡುತ್ತಾರೆ. ಕೆಲವರು ಮಾತ್ರ ಅದನ್ನು ನೇರವಾಗಿ ಜಗಿದು ತಿನ್ನಲು ಪ್ರಯತ್ನಿಸುತ್ತಾರೆ. ಆದರೆ ಬಿರಿಯಾನಿ ಎಲೆಯನ್ನು ನೇರವಾಗಿ ತಿನ್ನುವುದು ಆರೋಗ್ಯಕ್ಕೆ ಸುರಕ್ಷಿತವೇ ಎಂಬುದರ ಬಗ್ಗೆ ಈ ಬಗ್ಗೆ ಪೌಷ್ಟಿಕ ತಜ್ಞರು ಹಾಗೂ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಬಿರಿಯಾನಿ ಎಲೆಯನ್ನು ಅಡುಗೆಯಲ್ಲಿ ಬಳಸುವುದು ಸುರಕ್ಷಿತವಾದರೂ, ಅದನ್ನು ಚಿಕ್ಕ ಚಿಕ್ಕ ತುಂಡಾಗಿ ನುಂಗುವುದು ಅಥವಾ ಜಗಿದು ತಿನ್ನುವುದು ಸೂಕ್ತವಲ್ಲ ಎಂದು ಎಚ್ಚರಿಸುತ್ತಾರೆ.

ಬಿರಿಯಾನಿ ಎಲೆಯನ್ನು ನೇರವಾಗಿ ಏಕೆ ತಿನ್ನಬಾರದು?

ಸಾಮಾನ್ಯವಾಗಿ ಬಿರಿಯಾನಿ ಎಲೆ ಗಟ್ಟಿಯಾದ ನಾರಿನ ರಚನೆಯನ್ನು ಹೊಂದಿರುತ್ತದೆ. ಇದರಲ್ಲಿ ಇರುವ ಫೈಬರ್‌ ಪದಾರ್ಥವನ್ನು ನಮ್ಮ ಜೀರ್ಣಾಂಗದ ಎನ್ಜೈಮ್‌ಗಳು ಸಂಪೂರ್ಣವಾಗಿ ಒಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲೆ ಸುಲಭವಾಗಿ ಜೀರ್ಣವಾಗದೆ ಜೀರ್ಣಾಂಗದಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಒಣಗಿದ ಬಿರಿಯಾನಿ ಎಲೆಗಳ ಅಂಚುಗಳು ತೀಕ್ಷ್ಣವಾಗಿರುವುದರಿಂದ ಅವು ಗಂಟಲಿನಲ್ಲಿ ಸಿಲುಕುವ ಅಪಾಯ, ಅನ್ನನಾಳಕ್ಕೆ ಗಾಯವಾಗುವ ಸಾಧ್ಯತೆ, ಅಪರೂಪದ ಸಂದರ್ಭಗಳಲ್ಲಿ ಜೀರ್ಣಾಂಗದ ಒಳಭಾಗಕ್ಕೆ ಚುಚ್ಚುವ ಅಪಾಯ ಮತ್ತು ಸರಿಯಾಗಿ ಜಗಿಯದೆ ನುಂಗಿದರೆ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು.

ಬಿರಿಯಾನಿ ಎಲೆ ವಿಷಕಾರಿಯೇ?

ಇದು ಅನೇಕರಲ್ಲಿ ಇರುವ ದೊಡ್ಡ ತಪ್ಪು ಕಲ್ಪನೆ. ಬಿರಿಯಾನಿ ಎಲೆ ವಿಷಕಾರಿ ಅಲ್ಲ. ಇದರಲ್ಲಿರುವ ಸಮಸ್ಯೆ ರಾಸಾಯನಿಕ ಅಂಶಗಳಿಂದಲ್ಲ, ಅದರ ಗಟ್ಟಿತನ ಹಾಗೂ ನಾರಿನ ರಚನೆಯಿಂದ. ಅಂದರೆ, ಆಹಾರಕ್ಕೆ ಪರಿಮಳ ನೀಡುವ ಕೆಲಸವನ್ನು ಇದು ಅತ್ಯುತ್ತಮವಾಗಿ ಮಾಡುತ್ತದೆ. ಆದರೆ ಅದನ್ನೇ ಎಲೆ ಸಮೇತ ತಿನ್ನುವುದು ಸುರಕ್ಷಿತವಲ್ಲ.

ಅಡುಗೆಯಲ್ಲಿ ಬಳಸಿದರೆ ಏನು ಲಾಭ?

ಬಿರಿಯಾನಿ ಎಲೆಯಲ್ಲಿರುವ ನೈಸರ್ಗಿಕ ತೈಲಗಳು (Essential Oils) ಬೇಯುವ ಸಮಯದಲ್ಲಿ ಆಹಾರಕ್ಕೆ ಸೇರಿ ಉತ್ತಮ ಪರಿಮಳ ನೀಡುತ್ತವೆ. ಇದರ ಜೊತೆಗೆ ಕೆಲವು ಪೌಷ್ಟಿಕ ಪ್ರಯೋಜನಗಳೂ ದೊರೆಯಬಹುದು.

ಇದನ್ನೂ ಓದಿ: ಬೆಚ್ಚಗಿನ ನೀರಿಗೆ ಕರಿಮೆಣಸು, ಅರಿಶಿನ ಸೇರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ!

ಜೀರ್ಣಕ್ರಿಯೆಗೆ ನೆರವಾಗಬಹುದು: ಬಿರಿಯಾನಿ ಎಲೆಯಲ್ಲಿರುವ ಕೆಲವು ಸಸ್ಯಸಾರಗಳು ಜೀರ್ಣರಸಗಳ ಉತ್ಪಾದನೆಯನ್ನು ಉತ್ತೇಜಿಸಬಹುದು. ಇದರಿಂದ ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಲು ಸಹಾಯವಾಗಬಹುದು.

ಆ್ಯಂಟಿಆಕ್ಸಿಡೆಂಟ್‌ಗಳ ಮೂಲ: ಇದರಲ್ಲಿ ಫ್ಲೇವನಾಯ್ಡ್‌ಗಳು ಹಾಗೂ ಪಾಲಿಫಿನಾಲ್‌ಗಳಂತಹ ಆ್ಯಂಟಿಆಕ್ಸಿಡೆಂಟ್ ಅಂಶಗಳಿದ್ದು, ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗಬಹುದು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ: ಕೆಲವು ಸಣ್ಣ ಅಧ್ಯಯನಗಳ ಪ್ರಕಾರ ಬಿರಿಯಾನಿ ಎಲೆಯಲ್ಲಿರುವ ಸಕ್ರಿಯ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣಕ್ಕೆ ಸಹಾಯ ಮಾಡಬಹುದು. ಆದರೆ ಇದನ್ನು ಮಧುಮೇಹದ ಚಿಕಿತ್ಸೆಯ ಪರ್ಯಾಯವಾಗಿ ಬಳಸಬಾರದು.

ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ: ಇದರಲ್ಲಿ ಇರುವ ಕೆಲವು ಸಸ್ಯರಾಸಾಯನಿಕಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಪ್ರಾಥಮಿಕ ಅಧ್ಯಯನಗಳಿಂದ ತಿಳಿದುಬಂದಿದೆ.

ಬಿರಿಯಾನಿ ಎಲೆಯ ಆರೋಗ್ಯ ಲಾಭ ಪಡೆಯಲು ಸುರಕ್ಷಿತ ವಿಧಾನ ಯಾವುದು?

  • ಅಡುಗೆಯಲ್ಲಿ ಸಂಪೂರ್ಣ ಎಲೆ ಹಾಕಬಹುದು.
  • ಅಡುಗೆ ಸಿದ್ಧವಾದ ನಂತರ ಎಲೆಯನ್ನು ತೆಗೆದುಹಾಕಬೇಕು.
  • ಬೇಕಾದರೆ ಒಣಗಿಸಿ ಪುಡಿ ಮಾಡಿ ಮಸಾಲೆಗಳಲ್ಲಿ ಸೇರಿಸಬಹುದು.
  • ಟೀ ಅಥವಾ ಹರ್ಬಲ್ ಕಷಾಯದಲ್ಲಿ ಬಳಸಬಹುದು.
  • ನೇರವಾಗಿ ಎಲೆಯನ್ನು ಜಗಿದು ನುಂಗಬಾರದು.
  • ಎಲೆಯನ್ನು ಒಣಗಿಸಿ ಸೂಕ್ಷ್ಮ ಪುಡಿಯಾಗಿ ಮಾಡಿ ಗರಂ ಮಸಾಲೆ, ಸೂಪ್, ಗ್ರೇವಿ ಅಥವಾ ಸಾರುಗಳಲ್ಲಿ ಬಳಸಬಹುದು.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆಹಾರ ಪದಾರ್ಥವನ್ನು ಔಷಧಿಯ ಪರ್ಯಾಯವಾಗಿ ಬಳಸಬಾರದು. ಗಂಟಲು, ಜೀರ್ಣಾಂಗ ಅಥವಾ ಆಹಾರ ನುಂಗುವ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದೇಶಿ ನೆಲದಲ್ಲಿ ಅತಿ ಹೆಚ್ಚು ರನ್; ಅಗ್ರಸ್ಥಾನದಲ್ಲಿ ರೋಹಿತ್

Source link

‘ಜನ ನಾಯಗನ್’ ಹೊಸ ಟೀಸರ್ ನೋಡಿ ವಾವ್ ಎಂದ ವಿಜಯ್ ಅಭಿಮಾನಿಗಳು – Kannada News | Thalapathy Vijay Jana Nayagan Release on July 23 KVN Productions New Teaser

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ಜಗತ್ತಿನಾದ್ಯಂತ ಈ ಚಿತ್ರ ಅದ್ಧೂರಿಯಾಗಿ ತೆರೆಕಾಣುತ್ತಿದ್ದು, ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಅನೌನ್ಸ್‌ಮೆಂಟ್ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯು ಸೋಮವಾರ (ಜುಲೈ 20) ಈ ಟೀಸರ್ ಹಂಚಿಕೊಂಡಿದೆ.

18 ಸೆಕೆಂಡುಗಳ ಕಿರು ಟೀಸರ್ ನೋಡಿದ ವಿಜಯ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೀಸರ್‌ನಲ್ಲಿ ವಿಜಯ್ ಅವರು ಖಳರ ವಿರುದ್ಧ ಗನ್ ಹಿಡಿದು ಫೈಟ್ ಮಾಡುವ ಹಾಗೂ ಪೊಲೀಸ್ ಸಮುಸ್ತ್ರದಲ್ಲಿ ಅಬ್ಬರಿಸುವ ಆ್ಯಕ್ಷನ್ ದೃಶ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ವಿಜಯ್ ಅವರು ಜೈಲಿನ ಕೈದಿ ಉಡುಪಿನಿಂದ ನೇರವಾಗಿ ಬಿಳಿ ಶರ್ಟ್ ಮತ್ತು ಕಪ್ಪು ಜಾಕೆಟ್ ಧರಿಸಿದ ಮುಖ್ಯಮಂತ್ರಿಯ ಲುಕ್‌ಗೆ ಬದಲಾಗುವ ದೃಶ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

‘ಒನ್ ಲಾಸ್ಟ್ ಡ್ಯಾನ್ಸ್’ ಎಂದ ಅಭಿಮಾನಿಗಳು:

ವಿಜಯ್ ಅವರನ್ನು ಬೆಳ್ಳಿಪರದೆಯ ಮೇಲೆ ನಟನಾಗಿ ನೋಡಲು ಇದು ಕೊನೆಯ ಅವಕಾಶ ಆಗಿರುವುದರಿಂದ, ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳ ಭಾವನಾತ್ಮಕ ಸಂದೇಶಗಳು ಹರಿದುಬರುತ್ತಿವೆ. ‘ನಟ ವಿಜಯ್‌ನಿಂದ ಹಿಡಿದು ಸಿಎಂ ವಿಜಯ್ ವರೆಗಿನ ಟ್ರಾನ್ಸಿಶನ್ ಅದ್ಭುತವಾಗಿದೆ’, ‘ಕೊನೆಯ ಬಾರಿಗೆ ದಳಪತಿ ಅಬ್ಬರ ನೋಡಲು ಸಜ್ಜಾಗಿದ್ದೇವೆ’ ಹಾಗೂ ‘ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವುದು ಗ್ಯಾರಂಟಿ’ ಎಂದು ನೆಟ್ಟಿಗರು ಬರೆದುಕೊಳ್ಳುತ್ತಿದ್ದಾರೆ.

ಸಾಕಷ್ಟು ಅಡೆತಡೆಗಳ ನಂತರ ರಿಲೀಸ್:

ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರವು ಚಿತ್ರಮಂದಿರ ತಲುಪುವ ಮುನ್ನ ಹತ್ತಾರು ಸವಾಲುಗಳನ್ನು ಎದುರಿಸಿದೆ. ಈ ವರ್ಷದ ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದಾಗಿ ಮುಂದೂಡಲ್ಪಟ್ಟಿತ್ತು. ಕಾನೂನು ಹೋರಾಟದ ಬಳಿಕ ಜುಲೈನಲ್ಲಿ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ದುರದೃಷ್ಟವಶಾತ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಚಿತ್ರದ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು.

ಇದನ್ನೂ ಓದಿ: ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ

ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ:

ಇದು 2023ರ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗಿದೆ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ವಿಜಯ್ ಒಪ್ಪಿಕೊಂಡಿದ್ದ ಕೊನೆಯ ಸಿನಿಮಾ ಇದಾಗಿದ್ದು, ತಮಿಳುನಾಡು ಸಿಎಂ ಆದ ಬಳಿಕ ರಿಲೀಸ್ ಆಗುತ್ತಿರುವ ಅವರ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೈತಿಕ ಶಿಕ್ಷಣಕ್ಕೆ ಹೊಸ ರೂಪ: ಲೈಂಗಿಕ, ಆರೋಗ್ಯ ಶಿಕ್ಷಣ ಸೇರಿ ಹಲವು ವಿಷಯಗಳ ಪರಿಚಯಿಸಲು ನಿರ್ಧಾರ – Kannada News | Karnataka Revamps Moral Education with Life Skills and Cyber Safety Lessons

ಪ್ರಾತಿನಿಧಿಕ ಚಿತ್ರ Image Credit source: Getty images

ಬೆಂಗಳೂರು, ಜುಲೈ 20: ರಾಜ್ಯದ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣಕ್ಕೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ನೈತಿಕ ಪಠ್ಯದಡಿ ಲೈಂಗಿಕ, ಆರೋಗ್ಯ, ಸಂಗೀತ, ಜೀವನ ಕೌಶಲ್ಯ, ಮೌಲ್ಯ ಶಿಕ್ಷಣ ಸೇರಿದಂತೆ ಹಲವು ಹೊಸ ವಿಷಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ವಯೋಮಾನ ಹಾಗೂ ತರಗತಿಗೆ ಅನುಗುಣವಾಗಿ ಡಿಎಸ್‌ಇಆರ್‌ಟಿ (DSERT)  ಪ್ರತ್ಯೇಕ ಪಠ್ಯ ಸಿದ್ಧಪಡಿಸಿದ್ದು, ವಾರಕ್ಕೆ ಎರಡು ತರಗತಿಗಳ ಮೂಲಕ ಬೋಧನೆ ನಡೆಸಲು ಯೋಜನೆ ರೂಪಿಸಲಾಗಿದೆ.

ಇದೇ ವರ್ಷದಿಂದ ನೈತಿಕ ಶಿಕ್ಷಣ ಜಾರಿ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ವಿದ್ಯಾರ್ಥಿಗಳ ವಯೋಮಾನ, ಮಾನಸಿಕ ಬೆಳವಣಿಗೆ ಹಾಗೂ ತರಗತಿಗೆ ಅನುಗುಣವಾಗಿ ಡಿಎಸ್‌ಇಆರ್‌ಟಿ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿದೆ. ಆರಂಭದಲ್ಲಿ 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಲೈಂಗಿಕ ಶಿಕ್ಷಣ ಪರಿಚಯಿಸುವ ಬಗ್ಗೆ ಚಿಂತನೆ ನಡೆದಿದ್ದರೂ, ಈಗ ವಯೋಮಿತಿಗೆ ಅನುಗುಣವಾಗಿ ಹಂತಹಂತವಾಗಿ ನೈತಿಕ ಶಿಕ್ಷಣದ ಭಾಗವಾಗಿ ವಿವಿಧ ವಿಷಯಗಳನ್ನು ಬೋಧಿಸಲು ಮಂದಾಗಿದೆ.

ಯಾವೆಲ್ಲಾ ವಿಷಯಗಳ ಬೋಧನೆ? 

ನೈತಿಕ ಶಿಕ್ಷಣದಡಿ ಲೈಂಗಿಕ, ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಮತ್ತು ಪೌಷ್ಟಿಕತೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು, ಸೈಬರ್ ಸುರಕ್ಷತೆ, ಮಾದಕ ವಸ್ತುಗಳ ದುಷ್ಪರಿಣಾಮ, ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಸಂಗೀತ ಹಾಗೂ ಸಾಮಾಜಿಕ ಜವಾಬ್ದಾರಿಗಳಂತಹ ವಿಷಯಗಳಿಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ವಯಸ್ಸು ಮತ್ತು ತರಗತಿಗೆ ತಕ್ಕಂತೆ ಯಾವ ವಿಷಯಗಳನ್ನು ಯಾವ ಹಂತದಲ್ಲಿ ಬೋಧಿಸಬೇಕು ಎಂಬುದನ್ನು ಡಿಎಸ್‌ಇಆರ್‌ಟಿ ಪ್ರತ್ಯೇಕವಾಗಿ ರೂಪಿಸಿರುವ ಪಠ್ಯದಲ್ಲಿ ವಿವರಿಸಲಾಗಿದೆ.

ವಾರಕ್ಕೆ ಎರಡು ಅವಧಿಗಳಲ್ಲಿ ನೈತಿಕ ಶಿಕ್ಷಣ ಬೋಧನೆ

ಈ ಪಠ್ಯಕ್ರಮದಡಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಲೈಂಗಿಕ ಶಿಕ್ಷಣದ ಕುರಿತು ವೈಜ್ಞಾನಿಕ ಮಾಹಿತಿ ನೀಡುವುದು, ಸೈಬರ್ ಅಪರಾಧಗಳಿಂದ ರಕ್ಷಣೆ ಪಡೆಯುವ ಅರಿವು ಮೂಡಿಸುವುದು ಹಾಗೂ ಮಾದಕ ವ್ಯಸನಗಳಿಂದ ದೂರವಿರುವ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ವಾರಕ್ಕೆ ಎರಡು ಅವಧಿಗಳಲ್ಲಿ ನೈತಿಕ ಶಿಕ್ಷಣ ಬೋಧನೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯ ಮಾರ್ಗಸೂಚಿಗಳನ್ನು ಶಾಲೆಗಳಿಗೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಳ್ಳಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ!

ನೈತಿಕ ಶಿಕ್ಷಣವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ಜವಾಬ್ದಾರಿ, ಸಾಮಾಜಿಕ ಮೌಲ್ಯಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಈ ಪಠ್ಯಕ್ರಮದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತಮ ನಾಗರಿಕ ಗುಣಗಳನ್ನು ಬೆಳೆಸುವ ಗುರಿಯನ್ನು ಇಲಾಖೆ ಹೊಂದಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹುಡುಗಿ ಆಸೆ ತೋರಿಸಿ ಸುಲಿಗೆ: ಆನ್ಲೈನ್ ನಲ್ಲಿ ನೋಡಿದ ಹುಡುಗಿ ಭೇಟಿಗೆ ಹೋಗಿ ತಗ್ಲಾಕೊಂಡ – Kannada News | CCB Arrests 11 Accused Who kidnap And robbing On girl Name In Bengaluru

ಬೆಂಗಳೂರು, (ಜುಲೈ 20): ಹುಡುಗಿ ಆಸೆ ತೋರಿಸಿ ವ್ಯಕ್ತಿಯನ್ನು ಸುಲಿಗೆ ಮಾಡಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚೇತನ್ ಮನು, ಶಾಬು , ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್ ಬಂಧಿತ ಆರೋಪಿಗಳು. ಇವರು ಆ್ಯಪ್ ಒಂದರಲ್ಲಿ ಹುಡುಗಿಯರು ಇದ್ದಾರೆ ಎಂದು ಮೊದಲು ಪೋಸ್ಟ್ ಮಾಡಿದ್ದರು. ಇದನ್ನು ನಂಬಿ ಹುಡುಗಿಯನ್ನು ಭೇಟಿಯಾಗಲು ಹೋಗಿದ್ದ ವ್ಯಕ್ತಿಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು. ಹೌದು…ವ್ಯಕ್ತಿಯೊಬ್ಬರು ವೆಬ್‌ಸೈಟ್‌ನಲ್ಲಿ ನೋಡಿದ ಹುಡುಗಿಯನ್ನ ಭೇಟಿ ಮಾಡಲು ಆಸೆಯಿಂದ ಹೆಚ್.ಆರ್.ಬಿ.ಆರ್ ಲೇಔಟ್‌ಗೆ ಸಿಕ್ಕಿಬಿದ್ದಿದ್ದು, ಯುವತಿಯನ್ನು ಭೇಟಿ ಮಾಡುವ ಮೊದಲೇ ಸಂಚು ಮಾಡಿದ್ದ ಗ್ಯಾಂಗ್, ವ್ಯಕ್ತಿಯನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಹೊಡೆದು ಬಡಿದು ಸುಲಿಗೆ ಮಾಡಿ ಪರಾರಿಯಾಗಿತ್ತು. ಬಳಿಕ ಸಿಸಿಬಿ ಕಾರ್ಯಚರಣೆ ನಡೆಸಿ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಘಟನೆ ವಿವರ

ಬಂಧಿತ ಗ್ಯಾಂಗ್ ವೆಬ್​​​​ಸೈಟ್​​ವೊಂದರಲ್ಲಿ ಹುಡುಗಿ ಫೋಟೋ ವ್ಯಕ್ತಿಯನ್ನು ಮರಳು ಮಾಡಿತ್ತು. ಬಳಿಕ ಹುಡುಗಿ ಭೇಟಿಗೆ ಬಂದವನನ್ನು ಪ್ಲ್ಯಾನ್ ಮಾಡಿಯೇ ರನ್ನು ಚೇತನ್, ಮನು, ಶಾಬು, ಮಂಜುನಾಥ್, ಜಯಕುಮಾರ್ ಸೇರಿದಂತೆ 9 ಮಂದಿ ಆರೋಪಿಗಳು ಸೇರಿ ಕಿಡ್ನಾಪ್ ಮಾಡಿದ್ದರು. ತದನಂತರ ಸಂತ್ರಸ್ತನನ್ನು ನಗರದ ವಿವಿಧ ಭಾಗಗಳಲ್ಲಿ ಆಟೋದಲ್ಲಿ ಸುತ್ತಾಡಿಸಿ, ಜೀವ ಬೆದರಿಕೆ ಹಾಕಿ, ಹಲ್ಲೆ ಮಾಡಿ . ಕೊನೆಗೆ ಆತನ ಬಳಿಯಿದ್ದ ನಗದು, ಚಿನ್ನದ ಚೈನ್ ಹಾಗೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ: ಅತಿ ಆಸೆ ಗತಿಗೇಡು: ಲೋನ್ ಆಸೆಗೆ ತಾಳಿ ಅಡವಿಟ್ಟು ಮುಂಗಾಡ ಹಣ ಕಟ್ಟಿ ಮೋಸ ಹೋದ ಮಹಿಳೆಯರು

ಈ ದರೋಡೆ ಕುರಿತು ಸಿಸಿಬಿಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ, ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ WPW ವಿಭಾಗದ ಅಧಿಕಾರಿಗಳು, ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಆಟೋಗಳು, 4 ದ್ವಿಚಕ್ರ ವಾಹನಗಳು, 13 ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ್ದ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:33 pm, Mon, 20 July 26

Source link

Exit mobile version