ಇವರಿಬ್ಬರು ತಂಡದಿಂದ ಹೊರಬಿದ್ದರೆ ಟೀಂ ಇಂಡಿಯಾ ಸರ್ವನಾಶ; ಗಂಗೂಲಿ ಆಕ್ರೋಶ – Kannada News | Sourav Ganguly Slams India’s Youngsters: Stop Relying on Rohit Kohli, Take Responsibility!

ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 27 ರನ್‌ಗಳಿಂದ ಸೋತಿತು. ಈ ಸೋಲಿನೊಂದಿಗೆ ತಂಡ ಸರಣಿ ಕೂಡ ಕಳೆದುಕೊಂಡಿತು. ಇಂಗ್ಲೆಂಡ್‌ ನೀಡಿದ 388 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ಶುಭ್​ಮನ್ ಗಿಲ್ ಹಾಗೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಗೆಲುವಿಗಾಗಿ ಹೋರಾಟ ನೀಡಿದರೂ, ಯುವ ಆಟಗಾರರ ಕಳಪೆ ಬ್ಯಾಟಿಂಗ್​ನಿಂದಾಗಿ ತಂಡ ಸೋಲಿಗೆ ಕೊರಳೊಡ್ಡಬೇಕಾಯಿತು. ಇದೀಗ ತಂಡದ ಯುವ ಆಟಗಾರರ ಬೇಜವಾಬ್ದಾರಿಯುತ ಬ್ಯಾಟಿಂಗ್​ಗೆ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದ ಗತಿ ಏನಾಗಬಹುದು?

ತಂಡದ ಸೋಲಿಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯುವ ಆಟಗಾರರು ಯಾವಾಗಲೂ ಹಿರಿಯರ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರತಿ ಬಾರಿಯೂ ಪಂದ್ಯಗಳನ್ನು ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ಸರಿಯಲ್ಲ. ಈ ಇಬ್ಬರು ನಾಳೆ ತಂಡದಿಂದ ಹೊರಬಿದ್ದರೆ ಟೀಂ ಇಂಡಿಯಾದ ಗತಿ ಏನಾಗಬಹುದು? ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಬೇಜವಾಬ್ದಾರಿಯಿಂದ ಆಡುತ್ತಿರುವುದು ನಿರಾಶಾದಾಯಕವಾಗಿದೆ. ನಮ್ಮ ಹುಡುಗರಲ್ಲಿ ಒಬ್ಬರು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರಂತೆ ಮಿಂಚಿನ ಇನ್ನಿಂಗ್ಸ್ ಆಡಿದ್ದರೆ, ಗೆಲುವು ನಮ್ಮದಾಗುತ್ತಿತ್ತು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಯುವ ಆಟಗಾರರು ಜವಾಬ್ದಾರಿಯುತವಾಗಿ ಆಡಲು ಕಲಿಯಬೇಕು’ ಎಂದು ಗಂಗೂಲಿ ಹೇಳಿದ್ದಾರೆ.

ಕೊನೆಯ 2 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ

ಸೌರವ್ ಗಂಗೂಲಿ ನೀಡಿದ ಹೇಳಿಕೆ ಅಕ್ಷರಶಃ ಸತ್ಯವಾಗಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಕ್ರೀಸ್​ನಲ್ಲಿ ಇರುವವರೆಗೂ ಟೀಂ ಇಂಡಿಯಾ ದೊಡ್ಡ ಮೊತ್ತವನ್ನು ಕಲೆಹಾಕುವಂತೆ ತೋರುತ್ತಿತ್ತು. ಆದರೆ ಕೊಹ್ಲಿ ವಿಕೆಟ್ ಪತನದೊಂದಿಗೆ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಹೀಗಾಗಿ ಒಂದು ಹಂತದಲ್ಲಿ 300 ರನ್​ಗಳನ್ನು ಕಲೆಹಾಕುವ ಸೂಚನೆ ನೀಡಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ಕೇವಲ 233 ರನ್​​ಗಳಿಗೆ ಅಂತ್ಯವಾಯಿತು.

ರೋಹಿತ್- ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಇಲ್ಲಿದೆ ಏಕದಿನ ಸರಣಿಗಳ ವೇಳಾಪಟ್ಟಿ

ಮೂರನೇ ಏಕದಿನ ಪಂದ್ಯದಲ್ಲೂ ರೋಹಿತ್, ಕೊಹ್ಲಿ ಆಡುತ್ತಿರುವಾಗ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ರೋಹಿತ್ ವಿಕೆಟ್ ಪತನದ ಬಳಿಕ ಕೊಹ್ಲಿಗೆ ಯಾರು ಸಾಥ್ ನೀಡಲಿಲ್ಲ. ಇತ್ತ ಕೊಹ್ಲಿ ಏಕಾಂಗಿ ಹೋರಾಟ ನೀಡಲು ಹೋಗಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪತನದ ಬಳಿಕ ಇಂಗ್ಲೆಂಡ್‌ ಗೆಲುವು ಖಚಿತವಾಯಿತು. ಹೀಗಾಗಿ ಗಂಗೂಲಿ ಹೇಳಿಕೆಯಂತೆ ತಂಡದ ಇತರ ಬ್ಯಾಟರ್​ಗಳು ಅದರಲ್ಲೂ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬರುವವರು ಹೋರಾಟದ ಮನೋಭಾವದೊಂದಿಗೆ ಕಣಕ್ಕಿಳಿಯಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೂ ಲಗ್ಗೆ ಇಟ್ಟ ಚಿರತೆ: ಬೀದಿ ನಾಯಿ ಮೇಲೆ ಅಟ್ಯಾಕ್, ಬೆಚ್ಚಿಬಿದ್ದ ಸ್ಥಳೀಯರು – Kannada News | Leopard enters in Bengaluru, 4 Time spotted around Yashwanthpur Assembly constituency, scares People

ಬೆಂಗಳೂರು, (ಜುಲೈ 20): ಯಶವಂತಪುರ (Yashwanthpur) ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿಯ ಒಂಟಿ ಚಿರತೆ (Leopard) ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯಲು ಮುಂದಾಗ್ತಿಲ್ಲ ಅನ್ಸುತ್ತೆ. ಕಳೆದ ವಾರ ಮೂರು ಬಾರಿ ಚಿರತೆ ಕಾಣಿಸಿಕೊಂಡಿತ್ತು, ನಂತರ ಗಿಡಮರಗಳನ್ನೆಲ್ಲ ತೆರವು ಮಾಡಿದ್ರು, ನಿವಾಸಿಗಳು ಇನ್ಮುಂದೆ ಚಿರತೆ ಬರೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ರು. ಆದರೆ ಇದೀಗ ಮತ್ತೆ ಪಕ್ಕದ ರೋಡ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.

ಜುಲೈ 9ರಿಂದ ಈತನಕ 4 ಸಲ ಚಿರತೆ ಪ್ರತ್ಯಕ್ಷ

ಹೌದು.. ಜುಲೈ 9ರಿಂದ ಈತನಕ 4 ಸಲ ಭಾರತ್​​ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆ ಇಟ್ಟಿರುವ ಬೋನ್​​ಗೆ ಬಿದ್ದಿಲ್ಲ. ನಿನ್ನೆ ಬೆಳಗ್ಗೆ ಮತ್ತೆ 13ನೇ ಮಖ್ಯರಸ್ತೆಯಲ್ಲಿ ಶ್ವಾನದ ಮೇಲೆ ಚಿರತೆ ದಾಳಿ ಮಾಡಲು ಯತ್ನಿಸಿ ಪರಾರಿ ಆಗಿದೆ. ಅಟ್ಯಾಕ್ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಚಿರತೆಯನ್ನ ಸೆರೆ ಹಿಡಿಯದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇನ್ನೂ ಮೂರು ಬಾರಿ ಚಿರತೆ ಕಾಣಿಸಿಕೊಂಡಿದ್ದ ಖಾಲಿ ಸೈಟ್ ಬಳಿ ಅರಣ್ಯ ಇಲಾಖೆ ಒಂದು ಬೋನ್ ಇಟ್ಟು,ಅದರಲ್ಲಿ ಬಾಯ್ಲರ್ ಕೋಳಿಯನ್ನು ಇಡಲಾಗಿದೆ. ಆದರೆ ಆ ಕಿಲಾಡಿ ಚಿರತೆ ಕೋಳಿ ವಾಸನೆಗೆ ಬೋನ್ ಬಳಿ ಬರುತ್ತಿದೆ. ಆದರೆ, ಚಿರತೆ ಬೋನ್ ಒಳಗೆ ಮಾತ್ರ ಹೋಗ್ತಿಲ್ಲ. ಇತ್ತ ಭಾರತ ನಗರದ 13ನೇ ಮುಖ್ಯ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದ್ದ ಖಾಲಿ ಸೈಟ್ ಬಳಿ,ಇಂದು ಭಾರತ ನಗರದ ನೂರಾರು ನಿವಾಸಿಗಳು ಜಮಾಯಿಸಿದ್ದರು, ನಂತರ ಸ್ಥಳಕ್ಕೆ ಬಂದ ಜೆಸಿಬಿ ಎಲ್ಲಾ ಗಿಡಗಂಟಿಗಳನ್ನು ಕ್ಲೀನ್ ಮಾಡಿದರು.

ಇನ್ನು ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿಗಳು, ಈ ಚಿರತೆಯಿಂದ ನಮಗೆ ತುಂಬಾ ಭಯ ಆಗ್ತಿದೆ. ಮನೆಯಿಂದ ಹೊರಗೆ ಬರಲು ಆಗ್ತಿಲ್ಲ, ಇಲ್ಲಿನ ನಿವಾಸಿಗಳು ವಾಕಿಂಗ್ ಮಾಡುವುದನ್ನೇ ಬಿಟ್ಟಿದ್ದೇವೆ. ಮಕ್ಕಳನ್ನು ಹೊರಗೆ ಆಟವಾಡಲು ಕಳಿಸಲು ಆಗ್ತಿಲ್ಲ, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕೈದು ಬೋನ್ ಇಟ್ಟು ಅದನ್ನು ಸೆರೆ ಹಿಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಟ್ನಲ್ಲಿ ಭಾರತ್ ನಗರದಲ್ಲಿ ಕಳೆದ ಎರಡು ವಾರದಲ್ಲಿ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡಿದೆ, ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಒಂದು ಬೋನ್ ಇಟ್ಟು ಕೈ ತೊಳೆದುಕೊಂಡಿದ್ದಾರೆ. ಯಾರನ್ನಾದರೂ ಚಿರತೆ ಬಲಿ ಪಡೆಯುವ ಮುನ್ನ ಸೆರೆ ಹಿಡಿದು ಕಾಡಿಗೆ ಬಿಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ? – Kannada News | Hyderabad Mother and child trapped inside lift how police rescued them

ಹೈದರಾಬಾದ್, ಜುಲೈ 20: ತೆಲಂಗಾಣದ (Telangana) ಮೇಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯ ಕುಕತ್‌ಪಲ್ಲಿ ಪ್ರದೇಶದ ಕೆಪಿಎಚ್‌ಬಿ ಕಾಲೋನಿಯಲ್ಲಿ ತಾಯಿ ಮತ್ತು ಮಗು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಕೆಪಿಎಚ್‌ಬಿ ಹಂತ 9ರಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಕಟ್ಟಡದ ಲಿಫ್ಟ್‌ನೊಳಗೆ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಹೋದಾಗ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಮಧ್ಯದಲ್ಲಿ ನಿಂತುಹೋಯಿತು. ಇದರಿಂದಾಗಿ ತಾಯಿ ಮತ್ತು ಮಗು ಸ್ವಲ್ಪ ಸಮಯದವರೆಗೆ ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ಅವರ ಕಿರುಚಾಟ ಕೇಳಿ ಸ್ಥಳೀಯರು ಭಯಭೀತರಾದರು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಕೆಪಿಎಚ್‌ಬಿ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ, ಕಟ್ಟಡ ಸಿಬ್ಬಂದಿಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪೊಲೀಸರು ಜಾಗರೂಕರಾಗಿ ಲಿಫ್ಟ್ ಬಾಗಿಲುಗಳನ್ನು ತೆರೆದು ತಾಯಿ ಮತ್ತು ಮಗುವನ್ನು ಯಾವುದೇ ಸುರಕ್ಷಿತವಾಗಿ ಹೊರಗೆ ಕರೆತಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ಶೆಟ್ಟಿ ನಟನೆಯ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ‘ಗೇಮ್ ಆಫ್ ಥ್ರೋನ್ಸ್’ ಸಾಹಸ ನಿರ್ದೇಶಕ – Kannada News | Rishab Shetty Chhatrapati Shivaji Maharaj Game of Thrones Action Director Mark Henson

‘ಕಾಂತಾರ’ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ (Rishab Shetty) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬೃಹತ್ ಬಜೆಟ್‌ನ ಐತಿಹಾಸಿಕ ಸಿನಿಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ (The Pride of Bharat: Chhatrapati Shivaji Maharaj) ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಚಿತ್ರದ ಯುದ್ಧ ಮತ್ತು ಆ್ಯಕ್ಷನ್ ದೃಶ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಲು ಹಾಲಿವುಡ್‌ನ ಘಟಾನುಘಟಿ ಆ್ಯಕ್ಷನ್ ಡೈರೆಕ್ಟರ್‌ಗಳ ತಂಡ ಭಾರತಕ್ಕೆ ಆಗಮಿಸಿದೆ.

ಖ್ಯಾತ ಚಲನಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ನಿರ್ದೇಶನದ ಮಹತ್ವಾಕಾಂಕ್ಷಿ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕಾಗಿ ಜಗತ್ತಿನ ಅತಿ ದೊಡ್ಡ ವೆಬ್ ಸರಣಿ ಹಾಗೂ ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರನ್ನು ಕರೆತರಲಾಗಿದೆ. ಹಾಲಿವುಡ್‌ ಸಾಹಸ ನಿರ್ದೇಶಕರ ದಂಡು ಈ ಚಿತ್ರಕ್ಕಾಗಿ ಕೆಲಸ ಮಾಡಲಿದೆ. ಚಿತ್ರದ ಆ್ಯಕ್ಷನ್ ವಿಭಾಗವನ್ನು ಜಗತ್ತಿನ ಹೆಸರಾಂತ ಆ್ಯಕ್ಷನ್ ಡೈರೆಕ್ಟರ್‌ಗಳು ಮುನ್ನಡೆಸಲಿದ್ದಾರೆ.

ಘಟಾನುಘಟಿ ಸಾಹಸ ನಿರ್ದೇಶಕರು:

ಜಗತ್ಪ್ರಸಿದ್ಧ ವೆಬ್ ಸರಣಿಗಳಾದ ‘ಗೇಮ್ ಆಫ್ ಥ್ರೋನ್ಸ್’, ‘ವೈಕಿಂಗ್ಸ್’, ‘ದಿ ವಿಚರ್’ ಹಾಗೂ ಆಸ್ಕರ್ ವಿಜೇತ ‘ಗ್ರಾವಿಟಿ’ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ ಮಾರ್ಕ್ ಹೆನ್ಸನ್ ಈ ತಂಡದ ನೇತೃತ್ವ ವಹಿಸಿದ್ದಾರೆ. ‘ದಿ ಫೇಟ್ ಆಫ್ ದಿ ಫ್ಯೂರಿಯಸ್’, ‘ಬ್ಲಡ್‌ಶಾಟ್’ ಮತ್ತು ‘ಲೂಸಿಫರ್’ ಖ್ಯಾತಿಯ ವ್ಲಾಡ್ ರಿಂಬರ್ಗ್ ಕೂಡ ತಂಡದಲ್ಲಿದ್ದಾರೆ. ‘ಟ್ರಾಯ್: ಫಾಲ್ ಆಫ್ ಎ ಸಿಟಿ’ ಚಿತ್ರಕ್ಕೆ ಕೆಲಸ ಮಾಡಿದ ಕ್ರೇಗ್ ಮ್ಯಾಕ್ರೇ ಕೂಡ ರಿಷಬ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ.

500 ಕೋಟಿ ಬಜೆಟ್, ಎರಡು ಭಾಗಗಳಲ್ಲಿ ಸಿನಿಮಾ:

ಬರೋಬ್ಬರಿ 500 ಕೋಟಿ ರೂಪಾಯಿ ಭಾರಿ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಇದನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಬಾಲಿವುಡ್ ನಟರಾದ ಅರ್ಜುನ್ ರಾಂಪಾಲ್, ವಿವೇಕ್ ಒಬೆರಾಯ್ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜ್: ರಿಷಬ್ ಶೆಟ್ಟಿ ನಟನೆಯ 2 ಪಾರ್ಟ್ ಸಿನಿಮಾಗೆ 500 ಕೋಟಿ ಬಜೆಟ್

ಜಾಗತಿಕ ಮಟ್ಟದಲ್ಲಿ ರಿಲೀಸ್:

17ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ಇಂದಿಗೂ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ. 1923ರ ಮೂಕಿ ಚಿತ್ರ ‘ಸಿಂಹಗಡ’ದಿಂದ ಹಿಡಿದು ಇಂದಿನವರೆಗೆ ಅವರ ಜೀವನದ ಆಧಾರಿತ ಸುಮಾರು 60ಕ್ಕೂ ಹೆಚ್ಚು ಚಲನಚಿತ್ರ ಮತ್ತು ಧಾರಾವಾಹಿಗಳು ಬಂದಿವೆ. ಆದರೆ, ‘ದಿ ಪ್ರೈಡ್ ಆಫ್ ಭಾರತ್’ ಸಂಪೂರ್ಣ ಹೊಸ ದೃಷ್ಟಿಕೋನದಲ್ಲಿ ಜಾಗತಿಕ ವೀಕ್ಷಕರನ್ನು ಸೆಳೆಯಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಚಾರ್ ಧಾಮ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ – Kannada News | Char Dham Yatra Suspended Temporarily amid Heavy Rainfall and Landslides In Uttarakhand

ಡೆಹ್ರಾಡೂನ್, ಜುಲೈ 20: ಉತ್ತರಾಖಂಡ (Uttarakhand Rains) ರಾಜ್ಯಾದ್ಯಂತ ಮುಂದುವರಿದಿರುವ ನಿರಂತರ ಮಳೆ, ಭೀಕರ ಭೂಕುಸಿತ ಮತ್ತು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದಿನಿಂದ (ಸೋಮವಾರ) ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ‘ಚಾರ್ ಧಾಮ್ ಯಾತ್ರೆ’ಯನ್ನು(Char Dham Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಹಲವು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ, ಯಾತ್ರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಉತ್ತರಾಖಂಡ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಪ್ರಯಾಣ ಬೆಳೆಸಿರುವ ಯಾತ್ರಿಕರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಹಾನಿಗೊಳಗಾದ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ, ಅವು ಸಂಚಾರಕ್ಕೆ ಸುರಕ್ಷಿತ ಎಂದು ಪ್ರಮಾಣೀಕರಿಸುವವರೆಗೆ ಭಕ್ತರನ್ನು ಮುಂದೆ ಸಾಗಲು ಬಿಡಬಾರದು ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಟ್ರೆಕಿಂಗ್ ಹೋಗಿದ್ದ ಎಂಬಿಎ ವಿದ್ಯಾರ್ಥಿನಿ ನಾಪತ್ತೆ; ಆಗಿದ್ದೇನು?

ಚಾರ್ ಧಾಮ ಯಾತ್ರಾ ಮಾರ್ಗಗಳಲ್ಲಿ ಸರಣಿ ಭೂಕುಸಿತ ಸಂಭವಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಆಡಳಿತ ತಿಳಿಸಿದೆ. ಪರಿಸ್ಥಿತಿ ಮತ್ತು ರಸ್ತೆಗಳು ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿದೆ ಎಂದು ಅಧಿಕಾರಿಗಳು ಖಚಿತಪಡಿಸಿಕೊಂಡ ನಂತರವಷ್ಟೇ ಚಾರ್ ಧಾಮ್ ಯಾತ್ರೆಯನ್ನು ಪುನರಾರಂಭಿಸಲಾಗುವುದು.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಲಕನಂದಾ, ಮಂದಾಕಿನಿ:

ರುದ್ರಪ್ರಯಾಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ನೀರಿನ ಮಟ್ಟ ಅಪಾಯದ ಮುನ್ಸೂಚನೆಯ ಮಟ್ಟಕ್ಕೆ ಬಂದು ತಲುಪಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನಮಾಮಿ ಗಂಗೆ ಯೋಜನೆಯಡಿ ನಿರ್ಮಿಸಲಾಗಿದ್ದ ಪ್ರಸಿದ್ಧ ನದಿ ತೀರದ ಘಾಟ್‌ಗಳು ನೀರಿನಲ್ಲಿ ಮುಳುಗಿವೆ. ಪ್ರಸ್ತುತ ಅಲಕನಂದಾ ನದಿಯು 625 ಮೀಟರ್ ಮತ್ತು ಮಂದಾಕಿನಿ ನದಿಯು 624 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಗಂಗಾನಗರ ಮತ್ತು ಗೌರಿಕುಂಡ್ ಭಾಗಗಳಲ್ಲೂ ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೀಳ್ಯದೆಲೆಯ ಆರೋಗ್ಯ ರಹಸ್ಯ: ತಲೆನೋವು, ಗ್ಯಾಸ್, ಬಾಯಿ ದುರ್ವಾಸನೆಗೆ ನೈಸರ್ಗಿಕ ಪರಿಹಾರ – Kannada News | Betel Leaves for Headache Relief: Natural Home Remedy Explained

ಭಾರತೀಯ ಸಂಪ್ರದಾಯದಲ್ಲಿ ತಾಂಬೂಲ ಎಲೆ (Betel Leaf) ಕೇವಲ ಪೂಜೆ ಅಥವಾ ಆತಿಥ್ಯಕ್ಕೆ ಮಾತ್ರ ಸೀಮಿತವಲ್ಲ. ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಔಷಧೀಯ ಸಸ್ಯವಾಗಿ ಬಳಕೆಯಲ್ಲಿರುವ ತಂಬೂಲ ಎಲೆ ಜೀರ್ಣಕ್ರಿಯೆ ಸುಧಾರಿಸುವುದು, ಬಾಯಿಯ ಆರೋಗ್ಯ ಕಾಪಾಡುವುದು, ತಲೆನೋವಿಗೆ ತಾತ್ಕಾಲಿಕ ನೆಮ್ಮದಿ ನೀಡುವುದು ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇದೇ ಎಲೆಯನ್ನು ತಂಬಾಕು, ಜರ್ದಾ, ಸುಣ್ಣದ ಅಧಿಕ ಬಳಕೆಯೊಂದಿಗೆ ಸೇವಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ವೈದ್ಯರು ನೀಡುತ್ತಾರೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ ತಂಬೂಲ ಎಲೆಯಲ್ಲಿ ಚಾವಿಕೋಲ್ (Chavicol), ಯೂಜಿನಾಲ್ (Eugenol), ಪಾಲಿಫಿನಾಲ್ಸ್ ಹಾಗೂ ಆಂಟಿಆಕ್ಸಿಡೆಂಟ್ ಸಂಯುಕ್ತಗಳು ಇದ್ದು, ಇವು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಇದನ್ನು ಔಷಧಿಯ ಪರ್ಯಾಯವೆಂದು ಪರಿಗಣಿಸಬಾರದು.

ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ: ಊಟದ ನಂತರ ಎಲೆ ಜಗಿದು ತಿನ್ನುವ ಪದ್ಧತಿಯ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ತಂಬೂಲ ಎಲೆ ಜಗಿದಾಗ ಲಾಲಾರಸದ ಉತ್ಪಾದನೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕೆಲವರಿಗೆ ಕಡಿಮೆಯಾಗಬಹುದು.

ತಲೆನೋವಿಗೆ ತಾತ್ಕಾಲಿಕ ನೆಮ್ಮದಿ: ಕೆಲವು ಸಂಶೋಧನೆಗಳು ವೀಳ್ಯದೆಲೆಯಲ್ಲಿರುವ ನೈಸರ್ಗಿಕ ಉರಿಯೂತ ನಿವಾರಕ ಅಂಶಗಳು ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ಸೂಚಿಸುತ್ತವೆ. ತಾಜಾ ಎಲೆಯನ್ನು ಸ್ವಲ್ಪ ನುರಿದು ಹಣೆಯ ಮೇಲೆ ಇಡುವುದು ಅಥವಾ ಅದರ ರಸವನ್ನು ಹೊರಗೆ ಲೇಪಿಸುವುದು ಕೆಲವು ಮಂದಿಗೆ ತಾತ್ಕಾಲಿಕ ತಂಪಿನ ಅನುಭವ ನೀಡಬಹುದು. ಆದರೆ ತೀವ್ರ ಮೈಗ್ರೇನ್ ಅಥವಾ ನಿರಂತರ ತಲೆನೋವಿಗೆ ಇದು ಚಿಕಿತ್ಸೆ ಅಲ್ಲ.

ಬಾಯಿಯ ಆರೋಗ್ಯ ಕಾಪಾಡುತ್ತದೆ: ವೀಳ್ಯದೆಲೆಯಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗಲು ಸಹಾಯವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ ಇದು ಬಾಯಿಯಲ್ಲಿರುವ ಕೆಲವು ಹಾನಿಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಕಾರಿ. ಆದರೆ ತಂಬಾಕು ಅಥವಾ ಜರ್ದಾ ಸೇರಿಸಿ ಸೇವಿಸುವುದು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಕೆಮ್ಮು ಮತ್ತು ಗಂಟಲು ನೋವನ್ನು ನಿವಾರಿಸುತ್ತದೆ: ಆಯುರ್ವೇದದಲ್ಲಿ ವೀಳ್ಯದೆಲೆಗಳನ್ನು ಬಿಸಿ ಮಾಡಿ ಎದೆ ಮೇಲೆ ಇಡುವ ಪದ್ಧತಿ ಇದೆ. ಇದರಿಂದ ಶೀತದ ಸಮಯದಲ್ಲಿ ಎದೆ ಭಾರವಾದ ಅನುಭವ ಕಡಿಮೆಯಾಗಬಹುದು ಎಂದು ನಂಬಲಾಗಿದೆ. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದು ಗಂಟಲು ಕಿರಿಕಿರಿ ಕಡಿಮೆ ಮಾಡಲು ಸಹಾಯಕವಾಗಬಹುದು. ಆದರೆ ಮಕ್ಕಳಿಗೆ ಒಂದು ವರ್ಷದೊಳಗೆ ಜೇನುತುಪ್ಪವನ್ನು ಕೊಡಬಾರದು.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ: ವೀಳ್ಯದೆಲೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಕೋಶಗಳನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡಬಹುದು. ಇದರಿಂದ ದೇಹದ ರೋಗನಿರೋಧಕ ವ್ಯವಸ್ಥೆಗೆ ಬೆಂಬಲ ಸಿಗಬಹುದು.

ಮಾನಸಿಕ ಒತ್ತಡ ಕಡಿಮೆ ಮಾಡಲು ನೆರವಾಗಬಹುದೇ?

ವೀಳ್ಯದೆಲೆ ಸುವಾಸನೆ ಮತ್ತು ಅದರಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ಮನಸ್ಸಿಗೆ ವಿಶ್ರಾಂತಿ ನೀಡುವ ಅನುಭವವನ್ನು ಉಂಟುಮಾಡಬಹುದು. ಕೆಲವು ಸಣ್ಣ ಅಧ್ಯಯನಗಳು ಇದರ ಆರೋಮ್ಯಾಟಿಕ್ ಅಂಶಗಳು ಒತ್ತಡವನ್ನು ಕಡಿಮೆ ಮಾಡಲು ನೆರವಾಗಬಹುದು ಎಂದು ಸೂಚಿಸಿವೆ. ಆದರೆ ಆತಂಕ ಅಥವಾ ಖಿನ್ನತೆಗೆ ಇದು ವೈದ್ಯಕೀಯ ಚಿಕಿತ್ಸೆ ಅಲ್ಲ.

ಇದನ್ನೂ ಓದಿ: ಬಿರಿಯಾನಿ ಎಲೆ ನೇರವಾಗಿ ತಿನ್ನುವುದು ಸುರಕ್ಷಿತವೇ? ಈ ಸಣ್ಣ ತಪ್ಪು ಗಂಟಲು, ಜೀರ್ಣಾಂಗಕ್ಕೆ ಅಪಾಯ ತರಬಹುದು ಎಚ್ಚರ

ತಂಬೂಲ ಎಲೆ ಬಳಸುವ ಸರಿಯಾದ ವಿಧಾನ

  • ಊಟದ ಬಳಿಕ 1 ತಾಜಾ ವೀಳ್ಯದೆಲೆಯನ್ನು ಮಾತ್ರ ಜಗಿಯಬಹುದು.
  • ತಂಬಾಕು, ಜರ್ದಾ ಅಥವಾ ಗುಟ್ಕಾ ಸೇರಿಸಿ ಸೇವಿಸಬೇಡಿ.
  • ಬೇಕಿದ್ದರೆ ಸೋಂಪು ಅಥವಾ ಏಲಕ್ಕಿಯೊಂದಿಗೆ ಸೇವಿಸಬಹುದು.
  • ತಂಬೂಲ ಎಲೆಯನ್ನು ಚೆನ್ನಾಗಿ ತೊಳೆದು ಬಳಸುವುದು ಉತ್ತಮ.

ಯಾರು ಹೆಚ್ಚಿನ ಎಚ್ಚರಿಕೆ ವಹಿಸಬೇಕು?

ಈ ಕೆಳಗಿನವರು ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸುವುದು ಒಳಿತು:

  • ಬಾಯಿಯಲ್ಲಿ ಪದೇಪದೇ ಗಾಯವಾಗುವವರು
  • ಬಾಯಿಯ ಕ್ಯಾನ್ಸರ್ ಅಥವಾ ಪೂರ್ವ ಕ್ಯಾನ್ಸರ್ ಸಮಸ್ಯೆ ಇರುವವರು
  • ಗರ್ಭಿಣಿಯರು
  • ಹೊಟ್ಟೆ ಹುಣ್ಣು ಇರುವವರು
  • ಅಲರ್ಜಿ ಇರುವವರು

ತಜ್ಞರ ಪ್ರಕಾರ, ಸಾಮಾನ್ಯ ವೀಳ್ಯದೆಲೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ತಂಬಾಕು, ಜರ್ದಾ, ಸುಣ್ಣದ ಅಧಿಕ ಬಳಕೆಯೊಂದಿಗೆ ಸೇವಿಸುವ ಅಭ್ಯಾಸವೇ ದೊಡ್ಡ ಅಪಾಯ. ಆರೋಗ್ಯಕ್ಕಾಗಿ ವೀಳ್ಯದೆಲೆ ಬಳಸಬೇಕಾದರೆ ನೈಸರ್ಗಿಕ ರೂಪದಲ್ಲೇ, ಮಿತ ಪ್ರಮಾಣದಲ್ಲಿ ಬಳಸುವುದು ಉತ್ತಮ.

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ತಂಬೂಲ ಎಲೆಯನ್ನು ಯಾವುದೇ ರೋಗಕ್ಕೆ ಚಿಕಿತ್ಸೆಯಾಗಿ ಪರಿಗಣಿಸಬಾರದು. ನಿರಂತರ ತಲೆನೋವು, ಜೀರ್ಣ ಸಮಸ್ಯೆ, ಕೆಮ್ಮು ಅಥವಾ ಇತರ ಆರೋಗ್ಯ ತೊಂದರೆಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೆ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವ್ಯವಸ್ಥೆ ಶುದ್ಧೀಕರಿಸದಿದ್ದರೆ ಅರ್ಹತೆಯಿರುವ ಯುವಜನತೆ ನರಳುತ್ತಾರೆ’: KPSC ಅಧ್ಯಕ್ಷಗೆ ಶಾಕ್ ಕೊಟ್ಟ ಕೋರ್ಟ್ – Kannada News | KPSC Chairman Case: High Court Issues Notice on CBI Probe Against Shivashankarappa Sahukar

ಬೆಂಗಳೂರು, ಜುಲೈ 20: ಸುಳ್ಳು ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸಿ ಪುತ್ರಿಯರಿಗೆ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (High Court), ಇಂದು ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿದ್ಯಾರ್ಥಿಗಳ ಸಂಘಟನೆಯಿಂದ ಸಲ್ಲಿಸಲಾಗಿದ್ದ, ಜಂಟಿ ರಿಟ್ ಅರ್ಜಿ ಸಂಬಂಧಿಸಿದಂತೆ ಇಂದು ವಿಚಾರಣೆ ಮಾಡಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣದ ಕುರಿತು ಅತ್ಯಂತ ಗಂಭೀರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ತನಿಖೆಯು ಕೇವಲ ಕಣ್ಣೊರೆಸುವ ತಂತ್ರವಾಗಿದೆ: ವಕೀಲ ವೆಂಕಟೇಶ ದಳವಾಯಿ

ಈ ಕುರಿತು ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ ದಳವಾಯಿ, “ಸದ್ಯ ನಡೆಯುತ್ತಿರುವ ತನಿಖೆಯು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಹೀಗಾಗಿ ಹೈಕೋರ್ಟ್ ನೇರ ಉಸ್ತುವಾರಿಯಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು” ಎಂದು ಹಕ್ಕೊತ್ತಾಯ ಮಂಡಿಸಿದರು.

ಇದನ್ನೂ ಓದಿ: ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ

ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕೇಳಿಬಂದಿರುವ ಆರೋಪಗಳು ಅತ್ಯಂತ ಆಘಾತಕಾರಿ ಎಂದು ತೀವ್ರ ಕಳವಳ ವ್ಯಕ್ತಪಡಿಸಿತು. ಇಂತಹ ಗಂಭೀರ ಪ್ರಕರಣದಲ್ಲಿ ಈಗ ರಾಜ್ಯ ಸರ್ಕಾರದ ಅಧೀನದ ಎಸ್‌ಐಟಿ ರಚಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಕುರಿತು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.

ವ್ಯವಸ್ಥೆ ಶುದ್ಧೀಕರಿಸದಿದ್ದರೆ ಅರ್ಹತೆಯಿರುವ ಯುವಜನತೆ ನರಳುತ್ತಾರೆ: ನ್ಯಾ.ಎಂ.ನಾಗಪ್ರಸನ್ನ

ಇನ್ನು ಈ ವೇಳೆ ಇಡೀ ವ್ಯವಸ್ಥೆಯ ಕುರಿತು ಮಾರ್ಮಿಕವಾಗಿ ನುಡಿದ ನ್ಯಾಯಮೂರ್ತಿಗಳು, “ಈ ಹಗರಣದ ಹಿಂದೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ಆಳವಾದ ತನಿಖೆ ನಡೆಯುವ ಅಗತ್ಯವಿದೆ. ಇಂತಹ ಸಂಸ್ಥೆಗಳ ವ್ಯವಸ್ಥೆಯನ್ನು ನಾವೀಗ ಶುದ್ಧೀಕರಿಸದಿದ್ದರೆ, ಕಷ್ಟಪಟ್ಟು ಓದುವ ಅರ್ಹತೆಯಿರುವ ಬಡ ಯುವಜನತೆ ಮತ್ತು ಉದ್ಯೋಗಾಕಾಂಕ್ಷಿಗಳು ನಿರಂತರವಾಗಿ ನರಳಬೇಕಾಗುತ್ತದೆ” ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಪ್ರಕರಣ ಹಿನ್ನಲೆ

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪಡೆಯಲು ಪುತ್ರಿ ಸುಮಾ ಎಸ್. ಸಾಹುಕಾರ್ ಅವರಿಗೆ ಸುಳ್ಳು ಆದಾಯ ಪ್ರಮಾಣ ಪತ್ರ ಪಡೆಯಲು ನೇರವಾಗಿರುವ ಆರೋಪದ ಹಿನ್ನೆಲೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ರಾಜೀನಾಮೆಗೆ ಜೂನ್ 19 ರಂದು ನಡೆದಿದ್ದ ಕೆಪಿಎಸ್ ಸಿ ಸಭೆಯಲ್ಲಿ ಸದಸ್ಯರು ನಿರ್ಣಯ ತೆಗೆದುಕೊಂಡಿದ್ದರು. ಆಯೋಗದ ನಿರ್ಣಯ ಪ್ರಶ್ನಿಸಿ ಸಾಹುಕಾರ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಜುಲೈ 10 ರಂದು ಹೈಕೋರ್ಟ್ ತಡೆ ನೀಡಿತ್ತು. ಇದರ ಬೆನ್ನಲ್ಲೇ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂದು ಕೆಪಿಎಸ್ ಸಿ ಕಾರ್ಯದರ್ಶಿ ಜ್ಯೋತಿ ಸಲ್ಲಿಸಿದ್ದ ಪೊಲೀಸ್ ದೂರಿನ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:20 pm, Mon, 20 July 26

Source link

ಪ್ರಜ್ವಲ್ ರೇವಣ್ಣ ಮನವಿಗೆ ಸ್ಪಂದಿಸಿದ ಕೋರ್ಟ್, ಮಾಜಿ ಎಂಪಿ ಬೇಡಿಕೆ ಈಡೇರಿಕೆ – Kannada News | Special Court Accepts Prajwal revanna Requests, Give Permission to Meet Friends And Relations In Jail

ಬೆಂಗಳೂರು, (ಜುಲೈ 20): ಜೈಲಿನಲ್ಲಿ ಸ್ನೇಹಿತರು, ಸಂಬಂಧಿಗಳ ಭೇಟಿಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಮಾಡಿದ್ದ ಮನವಿಗೆ ಕೋರ್ಟ್​ ಪುರಸ್ಕರಿಸಿದೆ. ಹೌದು…ಸ್ನೇಹಿತರು, ಸಂಬಂಧಿಗಳ ಭೇಟಿಗೆ ಅನುಮತಿ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಪುರಸ್ಕರಿಸಿದ್ದು, ಜೈಲು ಕೈಪಿಡಿಗನುಗುಣವಾಗಿ ಅನುಮತಿ ನೀಡುವಂತೆ ಆದೇಶ ಹೊರಡಿಸಿದೆ. ಈ ಬಗ್ಗೆ ಜೈಲಿನ‌ ಮುಖ್ಯ ಅಧೀಕ್ಷಕರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದ್ದು, ಒಂದು ವೇಳೆ ಅನುಮತಿ ನಿರಾಕರಿಸಿದರೆ ಅದರ ಮಾಹಿತಿ ಪ್ರಜ್ವಲ್‌ಗೆ ನೀಡಲು ಸೂಚಿಸಿದೆ.

ಜೈಲಿನಲ್ಲಿ ಸ್ನೇಹಿತರು ಹಾಗೂ ಸಂಬಂಧಿಗಳ ಭೇಟಿಗೆ ಅನುಮತಿ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಜುಲೈ 20) ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಭಾಗಶಃ ಪುರಸ್ಕರಿಸಿದೆ. ಜೈಲು ಕೈಪಿಡಿಗನುಗುಣವಾಗಿ ಅನುಮತಿ ನೀಡಲು ಆದೇಶಿಸಿ ಜೈಲಿನ‌ ಮುಖ್ಯ ಅಧೀಕ್ಷಕರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳಿ ಜೈಲಲ್ಲೇ ಕಣ್ಣೀರಿಟ್ಟ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್

ಕೆ.ಆರ್ ನಗರದಲ್ಲಿ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, ಕಳೆದ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನು ಶಿಕ್ಷೆ ಪ್ರಮಾಣ ಹಾಗೂ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ ಸಹ ಯಾವುದೇ ರಿಲೀಫ್ ಸಿಕ್ಕಿಲ್ಲ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ (HD Devegowda) ಪತ್ನಿ ಚೆನ್ನಮ್ಮ (Chennamma) ವಿಧಿವಶ ಹಿನ್ನೆಲೆ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ , ಅಜ್ಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಜ್ಜಿ ಅಂತ್ಯಕ್ರಿಯೆಯನ್ನು ವಿಸಿ ಮೂಲಕ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ; ಏನದು? – Kannada News | Duniya Vijay talks about Kandamma song ft Vinay Rajkumar Monisha Vijaykumar City Lights movie

‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ಈ ಸಿನಿಮಾಗೆ ದುನಿಯಾ ವಿಜಯ್ (Duniya Vijay) ಅವರು ನಿರ್ದೇಶನ ಮಾಡಿದ್ದಾರೆ. ವಿನಯ್ ರಾಜ್​ಕುಮಾರ್, ಮೋನಿಷಾ ವಿಜಯ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಕಂದಮ್ಮ’ ಹಾಡಿಗೆ ಚರಣ್ ರಾಜ್ ಸಂಗೀತ, ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ. ಹಾಡಿನ ಬಿಡುಗಡೆ ವೇಳೆ ದುನಿಯಾ ವಿಜಯ್ ಅವರು ಮಾತನಾಡಿದರು. ‘ಈ ಹಾಡಿನ ವಿಷಯವಾಗಿ ನನಗೂ ಮತ್ತು ನನ್ನ ಮಗಳಿಗೂ ಒಂದು ಗಲಾಟೆ ಆಯಿತು’ ಎಂದು ಅವರು ಹೇಳಿದರು. ಯಾಕೆ ಎಂಬುದನ್ನು ಅವರು ವೇದಿಕೆಯ ಮೇಲೆ ವಿವರಿಸಿದರು. ಈ ಹಾಡಿನ ಹಿಂದೆ ಶ್ರಮಿಸಿದ ಚರಣ್ ರಾಜ್ ಮತ್ತು ನಾಗಾರ್ಜುನ ಶರ್ಮಾ ಅವರಿಗೆ ದುನಿಯಾ ವಿಜಯ್ ಅವರು ಧನ್ಯವಾದ ಅರ್ಪಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

3 ವರ್ಷಗಳಿಂದ ಅವಕಾಶಗಳಿಲ್ಲ; ವಿದೇಶಿ ತಂಡದ ಪರ ಅದೃಷ್ಟ ಪರೀಕ್ಷೆಗಿಳಿದ ಚಾಹಲ್ – Kannada News | Yuzvendra Chahal’s County Cricket Comeback: Targeting India Team Return with Northamptonshire

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ತಂಡದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಒಂದು ಸಮಯದಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ನರ್ ಎನಿಸಿಕೊಂಡಿದ್ದ ಚಾಹಲ್​ರನ್ನು ನಿರ್ಲಕ್ಷಿಸಲಾಗುತ್ತಿದೆ. ಚಾಹಲ್ ಕೊನೆಯ ಬಾರಿಗೆ 2023 ರಲ್ಲಿ ಭಾರತೀಯ ಜೆರ್ಸಿಯಲ್ಲಿ ಆಡಿದ್ದರು. 2024 ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರೂ, ಇಡೀ ಪಂದ್ಯಾವಳಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೂ ಸೋಲೊಪ್ಪಿಕ್ಕೊಳ್ಳದ ಚಾಹಲ್ ಮತ್ತೆ ಪುಟಿದೇಳಲು ನಿರ್ಧರಿಸಿ ವಿದೇಶಿ ಮೈದಾನದಲ್ಲಿ ತನ್ನ ಪರಾಕ್ರಮ ತೊರಲು ಸಜ್ಜಾಗಿದ್ದಾರೆ.

ಮತ್ತೆ ಕೌಂಟಿ ಕ್ರಿಕೆಟ್​ನತ್ತ ಚಾಹಲ್

ಯುಜ್ವೇಂದ್ರ ಚಾಹಲ್ ಈಗ ಇಂಗ್ಲೆಂಡ್‌ನಲ್ಲಿ 2026 ರ ಕೌಂಟಿ ಕ್ರಿಕೆಟ್ ಆವೃತ್ತಿಯ ದ್ವಿತೀಯಾರ್ಧಕ್ಕಾಗಿ ನಾರ್ಥಾಂಪ್ಟನ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ ಸೇರಿದ್ದಾರೆ. ಈ ಕ್ಲಬ್ ಪರಿಸರವು ಚಾಹಲ್‌ಗೆ ಹೊಸದೇನಲ್ಲ. ಅವರು ಈ ಹಿಂದೆ 2024 ಮತ್ತು 2025 ರ ದೇಶೀಯ ಆವೃತ್ತಿಗಳಲ್ಲಿ ಸ್ವಲ್ಪ ಸಮಯದವರೆಗೆ ನಾರ್ಥಾಂಪ್ಟನ್‌ಶೈರ್ ಪರ ಆಡಿದ್ದರು. ಈಗ, 2026 ರಲ್ಲಿ, ಅವರು ಮತ್ತೊಮ್ಮೆ ತಂಡದ ಪರ ಆಡುವುದನ್ನು ಕಾಣಬಹುದು. ಈ ಬಾರಿ, ಕೌಂಟಿ ಚಾಂಪಿಯನ್‌ಶಿಪ್ ಮತ್ತು ಏಕದಿನ ಕಪ್ ಎರಡರಲ್ಲೂ ಚಾಹಲ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಜುಲೈ 21 ರಂದು ಏಕದಿನ ಕಪ್ ಆರಂಭವಾಗಲಿದೆ.

ವೇಗದ ಬೌಲರ್‌ಗಳು ಸಾಮಾನ್ಯವಾಗಿ ಪ್ರಾಬಲ್ಯ ಹೊಂದಿರುವ ಇಂಗ್ಲಿಷ್ ಪಿಚ್‌ಗಳಲ್ಲಿ, ಯುಜ್ವೇಂದ್ರ ಚಾಹಲ್ ತಮ್ಮ ಸ್ಪಿನ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದಾರೆ. ನಾರ್ಥಾಂಪ್ಟನ್‌ಶೈರ್‌ ಪರ ಆಡುತ್ತಿರುವ ಚಾಹಲ್, ತನ್ನ ಕೊನೆಯ ಎರಡು ಕೌಂಟಿ ಚಾಂಪಿಯನ್‌ಶಿಪ್ ಪ್ರವಾಸಗಳಲ್ಲಿ ಕೌಂಟಿ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ, ಒಟ್ಟು 31 ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2026: ವಿಮಾನದಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿದ ಯುಜ್ವೇಂದ್ರ ಚಾಹಲ್; ವಿಡಿಯೋ ವೈರಲ್

ಚಾಹಲ್ ಅನುಭವ ತಂಡಕ್ಕೆ ಪ್ರಯೋಜನಕಾರಿ

35 ವರ್ಷದ ಯುಜ್ವೇಂದ್ರ ಚಾಹಲ್ ದೀರ್ಘ ಮತ್ತು ಅತ್ಯಂತ ಯಶಸ್ವಿ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದಾರೆ. ಸುಮಾರು ಏಳು ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಅವರು ಭಾರತದ ಪರ ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ಒಟ್ಟು 217 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಾಹಲ್ ಅವರ ಅನುಭವ ಮತ್ತು ಪ್ರದರ್ಶನಗಳು 2026 ರ ಆವೃತ್ತಿಯಲ್ಲಿ ನಾರ್ಥಾಂಪ್ಟನ್‌ಶೈರ್‌ ತಂಡದ ಇತರ ಬೌಲರ್‌ಗಳು ಮತ್ತು ಯುವ ಆಟಗಾರರಿಗೆ ಹೆಚ್ಚಿನ ಸಹಾಯ ಮಾಡಬಹುದು. ಮುಂಬರುವ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಆಯ್ಕೆದಾರರ ಗಮನ ಸೆಳೆಯುವುದು ಚಾಹಲ್ ಅವರ ಗುರಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version