Sunday Worship: ಭಾನುವಾರ ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವಾಗ ಈ ತಪ್ಪು ಮಾಡಲೇಬೇಡಿ; ಇಲ್ಲಿದೆ ಸರಿಯಾದ ನಿಯಮ! – Kannada News | How to Offer Water to Surya Dev on Sunday: Correct Arghya Ritual for Blessings

ಸನಾತನ ಧರ್ಮದಲ್ಲಿ ಭಾನುವಾರವನ್ನು ಭಗವಾನ್ ಸೂರ್ಯನಿಗೆ ಮೀಸಲಾಗಿರುವ ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಆರೋಗ್ಯ, ಶಕ್ತಿ, ಕೀರ್ತಿ ಮತ್ತು ಸಂಪತ್ತಿನ ಅಧಿಪತಿ ಎಂದು ಶಾಸ್ತ್ರಗಳು ವಿವರಿಸುತ್ತವೆ. ಅದಕ್ಕಾಗಿಯೇ ಭಾನುವಾರದಂದು ಸೂರ್ಯ ದೇವನನ್ನು ವಿಶೇಷವಾಗಿ ಆರಾಧಿಸುವುದು, ಉಪವಾಸ ವ್ರತ ಮಾಡುವುದು ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಅಪಾರ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆಯಿದೆ.

ವಿಶೇಷವಾಗಿ ಈ ದಿನ ‘ಆದಿತ್ಯ ಹೃದಯ ಸ್ತೋತ್ರ’ ಪಠಿಸುವುದರಿಂದ ಧೈರ್ಯ, ಆತ್ಮವಿಶ್ವಾಸ ಮತ್ತು ಮಾಡುವ ಕೆಲಸಗಳಲ್ಲಿ ಅಭೂತಪೂರ್ವ ಯಶಸ್ಸು ಸಿಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಶಾಸ್ತ್ರಗಳ ಪ್ರಕಾರ, ಸೂರ್ಯ ದೇವರಿಗೆ ನೀರನ್ನು (ಅರ್ಘ್ಯ) ಅರ್ಪಿಸಲು ಕೆಲವು ವಿಶೇಷ ವಿಧಿವಿಧಾನಗಳಿವೆ. ಈ ಪೂಜೆಯನ್ನು ಸರಿಯಾದ ನಿಯಮಗಳೊಂದಿಗೆ ಮಾಡಿದರೆ ಧನಾತ್ಮಕ ಫಲಿತಾಂಶಗಳು ಸಿಗುತ್ತವೆ. ಆದರೆ ಗೊತ್ತಿಲ್ಲದೆ ಮಾಡುವ ಸಣ್ಣ ತಪ್ಪುಗಳು ಪೂಜೆಯ ಫಲವನ್ನು ಕಡಿಮೆ ಮಾಡಬಹುದು. ಹಾಗಾದರೆ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವ ಸರಿಯಾದ ಮಾರ್ಗ ಯಾವುದು? ಯಾವ ತಪ್ಪುಗಳನ್ನು ಮಾಡಬಾರದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವ ಸರಿಯಾದ ವಿಧಾನ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯ ದೇವರಿಗೆ ನೀರನ್ನು ಅರ್ಪಿಸಲು ತಾಮ್ರದ ಪಾತ್ರೆಯನ್ನು ಬಳಸುವುದು ಅತ್ಯಂತ ಶುಭ ಮತ್ತು ಶ್ರೇಷ್ಠ. ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು, ಅದಕ್ಕೆ ಕೆಂಪು ಚಂದನ, ಕೆಂಪು ಹೂವು, ಸ್ವಲ್ಪ ಕುಂಕುಮ ಮತ್ತು ಅಕ್ಕಿ (ಅಕ್ಷತೆ) ಯನ್ನು ಸೇರಿಸಬೇಕು. ಪೂಜೆ ಮಾಡುವಾಗ ಸೂರ್ಯ ಉದಯಿಸುವ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು. ನಂತರ ಪಾತ್ರೆಯನ್ನು ಎರಡೂ ಕೈಗಳಿಂದ ಹಿಡಿದು, ನಿಮ್ಮ ಹಣೆಯ ಎತ್ತರಕ್ಕೆ ತಂದು ನಿಧಾನವಾಗಿ ನೀರನ್ನು ಕೆಳಗೆ ಬಿಡಬೇಕು.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಮಂತ್ರ ಪಠಣೆ:

ಪಾತ್ರೆಯಿಂದ ಬೀಳುವ ನೀರಿನ ಧಾರೆಗಳ ಮೂಲಕ ಸೂರ್ಯ ದೇವನನ್ನು ನೋಡುತ್ತಾ ಭಕ್ತಿಯಿಂದ “ಓಂ ಘೃಣಿ ಸೂರ್ಯಾಯ ನಮಃ” ಅಥವಾ “ಓಂ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ಅರ್ಘ್ಯ ನೀಡಿದ ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದರೆ ಹೆಚ್ಚಿನ ಪುಣ್ಯ ಲಭಿಸುತ್ತದೆ.

ಸೂರ್ಯ ಪೂಜೆಯಲ್ಲಿ ಈ ತಪ್ಪುಗಳನ್ನು ಮರೆತೂ ಮಾಡಬೇಡಿ:

ಶಾಸ್ತ್ರಗಳ ಪ್ರಕಾರ ಸೂರ್ಯ ದೇವರಿಗೆ ಅರ್ಘ್ಯ ನೀಡುವಾಗ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

  • ಸೂರ್ಯ ದೇವರಿಗೆ ಅರ್ಪಿಸುವ ಪವಿತ್ರ ನೀರು ಯಾವುದೇ ಕಾರಣಕ್ಕೂ ನಿಮ್ಮ ಪಾದಗಳ ಮೇಲೆ ಅಥವಾ ನೆಲದ ಮೇಲೆ ಎಲ್ಲೆಂದರಲ್ಲಿ ಬೀಳದಂತೆ ಎಚ್ಚರ ವಹಿಸಬೇಕು. (ಇದಕ್ಕಾಗಿ ಕೆಳಗೆ ಒಂದು ಕುಂಡ ಅಥವಾ ಪ್ರತ್ಯೇಕ ಪಾತ್ರೆಯನ್ನು ಇಟ್ಟುಕೊಳ್ಳಬಹುದು).
  • ಪೂಜೆಗೆ ಉಕ್ಕು (ಸ್ಟೀಲ್), ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳನ್ನು ಮರೆತೂ ಬಳಸಬಾರದು. ಕೇವಲ ತಾಮ್ರದ ಪಾತ್ರೆಯನ್ನು ಮಾತ್ರ ಬಳಸುವುದು ಶಾಸ್ತ್ರಸಮ್ಮತ.
  • ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಬಾರದು. ಸೂರ್ಯೋದಯದ ತಕ್ಷಣ, ಅಂದರೆ ಮುಂಜಾನೆಯ ಅವಧಿಯಲ್ಲಿ ಅರ್ಘ್ಯ ನೀಡುವುದು ಅತ್ಯಂತ ಸೂಕ್ತ.
  • ಸ್ನಾನ ಮಾಡದೆ ಅಥವಾ ಕೊಳಕು ಬಟ್ಟೆಗಳನ್ನು ಧರಿಸಿ ಸೂರ್ಯನನ್ನು ಪೂಜಿಸಬಾರದು. ಮೊದಲು ಸ್ನಾನ ಮಾಡಿ, ಶುದ್ಧವಾದ ಉಡುಪನ್ನು ಧರಿಸಿ ಪೂಜೆಗೆ ಸಿದ್ಧರಾಗಬೇಕು.
  • ನೀರನ್ನು ಅರ್ಪಿಸುವಾಗ ಕಡ್ಡಾಯವಾಗಿ ಪೂರ್ವ ದಿಕ್ಕಿಗೇ ಮುಖ ಮಾಡಿರಬೇಕು.
  • ಯಾವುದೇ ಪೂಜೆಯನ್ನಾಗಲಿ ಆತುರದಿಂದ ಮಾಡದೆ, ಶಾಂತ ಮನಸ್ಸು, ಪರಿಶುದ್ಧ ಭಕ್ತಿ ಮತ್ತು ಏಕಾಗ್ರತೆಯಿಂದ ಮಾಡುವುದರಿಂದ ಸೂರ್ಯ ನಾರಾಯಣನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಅಮ್ಮನ ಅಗಲುವಿಕೆ ನೆನೆದು ಹೆಚ್​.ಡಿ. ಕುಮಾರಸ್ವಾಮಿ ಭಾವುಕ – Kannada News | Union Minister HD Kumaraswamy Emotional Over Mother Chennamma’s Demise, Recalls Her Life Lessons

ಬೆಂಗಳೂರು, ಜುಲೈ 19: ತಾಯಿ ಚೆನ್ನಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಿದ್ದಾರೆಯಾದರೂ ನಾನೆಂದರೆ ಅವರಿಗೆ ತುಸು ಜಾಸ್ತಿ ಪ್ರೀತಿ ಇತ್ತು. ಅದೆಷ್ಟೋ ಬಾರಿ ಹೇಗೆ ಬದುಕಬೇಕೆಂದು ಅವರು ನನಗೆ ಹಿತವಚನ ನೀಡಿದ್ದ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಭಾವುಕರಾದ ಪ್ರಸಂಗ ನಡೆದಿದೆ. ಹಲವು ಪಕ್ಷಗಳಲ್ಲಿ ಇರುವ ನಾಯಕರೆಲ್ಲ ನಮ್ಮಮನ ಹಾರೈಕೆಯಲ್ಲಿ ಬೆಳೆದವರೆ. ಹೀಗಾಗಿ ಅವರ ಬಗ್ಗೆ ಗೌರವ ಇಟ್ಟುಕೊಂಡು ಎಲ್ಲರೀ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇವತ್ತಿನ ಸಮಾಜಕ್ಕೆ ನಮ್ಮ ತಂದೆ ತಾಯಿಯ ದಾಂಪತ್ಯ ಮಾದರಿಯಾಗಿದೆ. ಗಂಡ ಪ್ರಧಾನಿ, ಮುಖ್ಯಮಂತ್ರಿಯಾದಗಲೂ ಅವರು ಮನೆಯಿಂದ ಹೊರ ಬಂದವರಲ್ಲ. ಅವರಾಯಿತು ಅವರ ದೇವರ ಮನೆಯಾಯಿತು ಎಂದು ಇದ್ದಂತವರು ಎಂದು ಕುಮಾರಸ್ವಾಮಿ ಈ ವೇಳೆ ನೆನಪಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಲ್ಲಾ ವದಂತಿಗಳಿಗೆ ಬ್ರೇಕ್: ಲಾರ್ಡ್ಸ್​ನಲ್ಲಿ ರೋಹಿತ್-ಗಂಭೀರ್ ನಗುವೋ ನಗು! – Kannada News | Rohit Sharma Gautam Gambhir Lord’s Video Ends Rift Rumours

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ, ಹಿರಿಯ ಆಟಗಾರರು ಮತ್ತು ಕೋಚ್ ನಡುವೆ ಕೋಲ್ಡ್ ವಾರ್ ನಡೀತಿದೆ ಎನ್ನುತ್ತಿದ್ದ ವದಂತಿಗಳಿಗೆ ಲಾರ್ಡ್ಸ್ ಮೈದಾನದ ಬಾಲ್ಕನಿಯಿಂದ ಬ್ರೇಕ್ ಬಿದ್ದಿದೆ. ಅನುಭವಿ ದಾಂಡಿಗ ರೋಹಿತ್ ಶರ್ಮಾ ಹಾಗೂ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮುಕ್ತವಾಗಿ ನಗುತ್ತಾ, ಹರಟೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಸುದ್ದಿಗೆ ಸಂಪೂರ್ಣ ತೆರೆ ಎಳೆದಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಕ್ಕೂ ಮುನ್ನ ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಬ್ಯಾಟಿಂಗ್ ತರಬೇತುದಾರ ಸಿತಾಂಶು ಕೋಟಕ್ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಗುತ್ತಾ ಹರಟೆ ಹೊಡೆಯುತ್ತಿರುವ ದೃಶ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಸೆರೆ ಹಿಡಿದಿದೆ. ಇದರೊಂದಿಗೆ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.

ಗಂಭೀರ್ ಬೆಂಬಲ:

ರೋಹಿತ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಲು ಪರದಾಡುತ್ತಿದ್ದರೂ, ಗೌತಮ್ ಗಂಭೀರ್ ಅವರು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡುವಂತೆ ನಾಯಕನಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನು ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂಬ ಮಾಧ್ಯಮಗಳ ಊಹಾಪೋಹಗಳು ಕೇವಲ ವದಂತಿ ಎಂಬುದನ್ನು ಈ ದೃಶ್ಯ ಸಾಬೀತುಪಡಿಸಿದೆ.

ನಿವೃತ್ತಿ ಸುದ್ದಿಗೆ ಬಿಸಿಸಿಐ ಸ್ಪಷ್ಟನೆ:

ಲಾರ್ಡ್ಸ್​ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯವೇ 39 ವರ್ಷದ ರೋಹಿತ್ ಶರ್ಮಾ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಮತ್ತು 2027ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಮಣೆ ಹಾಕಲು ಆಯ್ಕೆಗಾರರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅವರು ತಂಡದ ಅವಿಭಾಜ್ಯ ಅಂಗವಾಗಿದ್ದು, ಏಕದಿನ ಮಾದರಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ!

ಒಟ್ಟಾರೆ, ಲಾರ್ಡ್ಸ್ ಬಾಲ್ಕನಿಯ ಈ ಒಂದೇ ಒಂದು ದೃಶ್ಯ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ನೆಮ್ಮದಿ ತಂದಿದೆ. ನಾಯಕ ಮತ್ತು ಕೋಚ್ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂಬುದು ಸಾಬೀತಾಗಿದ್ದು, ಇವರಿಬ್ಬರ ಜುಗಲ್‌ಬಂದಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲಿ ಎಂಬುದೇ ಸದ್ಯದ ನಿರೀಕ್ಷೆ.

Source link

ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ – Kannada News | Vijay Jana Nayagan movie changes after leak producer KVN Productions reaction

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ (CM Vijay) ನಟನೆಯ ಕೊನೆಯ ಹಾಗೂ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ (Jana Nayagan) ಜುಲೈ 23ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಸೆನ್ಸಾರ್ ಮಂಡಳಿ (CBFC) ಜೊತೆಗಿನ ಸುದೀರ್ಘ ಹೋರಾಟ ಮತ್ತು ಕಳೆದ ಏಪ್ರಿಲ್‌ನಲ್ಲಿ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆದ ಬೆನ್ನಲ್ಲೇ ಚಿತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.

ಕನ್ನಡಿಗ ಕೆ. ವೆಂಕಟ್ ನಾರಾಯಣ್ ಅವರು ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ‘ಜನ ನಾಯಗನ್’ ಚಿತ್ರವನ್ನು ನಿರ್ಮಿಸಿದ್ದು, ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕರು ಚಿತ್ರದ ಸೆನ್ಸಾರ್ ವಿವಾದ ಮತ್ತು ಲೀಕ್ ಆದ ಬಳಿಕ ಆಗಿರುವ ಬದಲಾವಣೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಸಿಗಲಿದೆ ಹೊಸ ಸಿನಿಮಾ:

ಚಿತ್ರದ ಲೀಕ್ ಮತ್ತು ಸೆನ್ಸಾರ್ ಕಟ್‌ಗಳ ಬಗ್ಗೆ ಮಾತನಾಡಿದ ನಿರ್ಮಾಪಕ ವೆಂಕಟ್ ನಾರಾಯಣ್, ‘ಈಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಸಂಪೂರ್ಣವಾಗಿ ಒಂದು ಹೊಸ ಸಿನಿಮಾವನ್ನು ನೋಡಲಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಹೊಸ ಸೇರ್ಪಡೆಗಳನ್ನು ಮಾಡಲಾಗಿದೆ. ಕೆಲವು ಹೊಸ ಹಾಡುಗಳು ಮತ್ತು ಹೊಸ ದೃಶ್ಯಗಳನ್ನು ಜೋಡಿಸಲಾಗಿದೆ. ಹಾಗಾಗಿ ಪ್ರೇಕ್ಷಕರಿಗೆ ಇದು ವಿಭಿನ್ನ ಅನುಭವ ನೀಡಲಿದೆ. ಈ ವರ್ಷದ ಆರಂಭದಿಂದಲೇ ಸಿನಿಮಾ ಬಿಡುಗಡೆಗೆ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ ಚಿತ್ರದ ಯಾವುದೇ ಸಸ್ಪೆನ್ಸ್ ಅನ್ನು ನಾನಿಲ್ಲಿ ಬಿಟ್ಟುಕೊಡುವುದಿಲ್ಲ’ ಎಂದಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ:

ಚಿತ್ರದಲ್ಲಿ ವಿಜಯ್ ಅವರ ರಾಜಕೀಯ ಪಕ್ಷವಾದ ಟಿವಿಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಉಲ್ಲೇಖವಿರುವ ಸಂಭಾಷಣೆಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ಕಾನೂನು ಮತ್ತು ಸೆನ್ಸಾರ್ ಮಂಡಳಿಯ ನಿಯಮಗಳಿಗೆ ನಾವು ಗೌರವ ನೀಡುತ್ತೇವೆ. ಅವರು ಸೂಚಿಸಿದ ಜಾಗದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾರು 7 ತಿಂಗಳ ಸುದೀರ್ಘ ವಿಳಂಬದ ನಂತರ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಹಲವು ಕಟ್‌ಗಳೊಂದಿಗೆ ‘ಎ’ (Adults Only) ಪ್ರಮಾಣಪತ್ರ ನೀಡಿದೆ.

ಸಾಮಾಜಿಕ ಕಳಕಳಿಯ ಕಥಾಹಂದರ:

ವಿಜಯ್ ಅವರ ಹಿಂದಿನ ಚಿತ್ರಗಳಂತೆಯೇ ‘ಜನ ನಾಯಗನ್’ ಕೂಡ ಒಂದು ಬಲವಾದ ಸಾಮಾಜಿಕ ಸಮಸ್ಯೆಯ ಸುತ್ತ ಸಾಗುತ್ತದೆ. ಇದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವಂತಹ ಶಕ್ತಿಯುತ ಮತ್ತು ರೋಮಾಂಚಕಾರಿ ಕಥೆಯನ್ನು ಹೊಂದಿದೆ ಎಂದು ನಿರ್ಮಾಪಕರು ಭರವಸೆ ನೀಡಿದ್ದಾರೆ. ಈ ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ವಿವಾದದಿಂದಾಗಿ ಮುಂದೂಡಲ್ಪಟ್ಟಿತ್ತು. ವಿಜಯ್ ರಾಜಕೀಯ ಜೀವನ ಆರಂಭಿಸಿದ್ದು, ಇದು ಅವರ ಕೊನೆಯ ಸಿನಿಮಾ ಆಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ಸೂಪರ್ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ಚಿತ್ರದ ಅಧಿಕೃತ ರಿಮೇಕ್ ಇದಾಗಿದೆ. ಚಿತ್ರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆಗೆ ಮಮಿತಾ ಬೈಜು, ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ! – Kannada News | Kylian mbappe breaks lionel messi’s World record

ಫ್ರಾನ್ಸ್‌ನ ಯುವ ತಾರೆ ಕಿಲಿಯನ್ ಎಂಬಾಪೆ (Kylian Mbappé) ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. (PC: Getty Images)

ಜುಲೈ 18ರ ಶನಿವಾರದಂದು ಮಿಯಾಮಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಫ್ರಾನ್ಸ್ ಪರ ಎರಡು ಅದ್ಭುತ ಗೋಲುಗಳನ್ನು ಬಾರಿಸಿದ್ದರು. ಈ ಗೋಲುಗಳ ಮೂಲಕ ಎಂಬಾಪೆ  ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರ ದಾಖಲೆಯನ್ನು ಎಂಬಾಪೆ ಮುರಿದರು. (PC: Getty Images)

ಇದಕ್ಕೂ ಮುನ್ನ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿತ್ತು. ಮೆಸ್ಸಿ 33 ಪಂದ್ಯಗಳ ಮೂಲಕ ಒಟ್ಟು 21 ಗೋಲು ಬಾರಿಸಿ ಈ ವರ್ಲ್ಡ್​ ರೆಕಾರ್ಡ್​ ನಿರ್ಮಿಸಿದ್ದರು. ಮೆಸ್ಸಿಗೂ ಮುನ್ನ ಈ ದಾಖಲೆ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ (16 ಗೋಲು) ಹೆಸರಿನಲ್ಲಿತ್ತು. (PC: Getty Images)

ಇದೀಗ 22 ಪಂದ್ಯಗಳ ಮೂಲಕ ಕಿಲಿಯನ್ ಎಂಬಾಪೆ, ಮೆಸ್ಸಿಯ ವಿಶ್ವ ದಾಖಲೆ ಮುರಿದಿದ್ದಾರೆ. ಅದು ಸಹ ಕೊನೆಯ ಪಂದ್ಯದಲ್ಲಿ 2 ಗೋಲು ಬಾರಿಸಿ ಎಂಬುದು ವಿಶೇಷ. ಈ ಗೋಲುಗಳೊಂದಿಗೆ ವಿಶ್ವಕಪ್​ ಅಂಗಳದಲ್ಲಿ ಕಿಲಿಯನ್ ಎಂಬಾಪೆ ಅವರ ಒಟ್ಟಾರೆ ಗೋಲುಗಳ ಸಂಖ್ಯೆ 22 ಕ್ಕೇರಿದೆ. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. (PC: Getty Images)

ಇದಾಗ್ಯೂ ಈ ವಿಶ್ವ ದಾಖಲೆ ಮುರಿಯಲು ಲಿಯೋನೆಲ್ ಮೆಸ್ಸಿಗೆ ಉತ್ತಮ ಅವಕಾಶವಿದೆ. ಭಾನುವಾರ ಸ್ಪೇನ್ ವಿರುದ್ಧ ನಡೆಯುವ ಫೈನಲ್ ಪಂದ್ಯದಲ್ಲಿ ಮೆಸ್ಸಿ 2 ಗೋಲು ದಾಖಲಿಸಿದರೆ ಮತ್ತೆ ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಅಂತಿಮ ಪಂದ್ಯದತ್ತ ನೆಟ್ಟಿದೆ. (PC: Getty Images)

Published On – 8:47 am, Sun, 19 July 26

Source link

Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ! – Kannada News | Manduk Mandir Oel: India’s Unique Frog Temple and Color Changing Shiva Lingam

ಭಾರತದ ಏಕೈಕ ‘ಕಪ್ಪೆ ದೇವಾಲಯImage Credit source: bhartiyadharohar.com

ಹಿಂದೂ ಧರ್ಮ ಮತ್ತು ಪುರಾಣಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಗೋವು, ನಾಗರಹಾವು, ಆನೆ ಅಥವಾ ಸಿಂಹಗಳನ್ನು ದೈವಿಕ ರೂಪದಲ್ಲಿ ಪೂಜಿಸುವುದನ್ನು ನಾವು ಭಾರತದಾದ್ಯಂತ ಕಾಣಬಹುದು. ಆದರೆ, ಮಳೆ ಮತ್ತು ಸಮೃದ್ಧಿಯ ಸಂಕೇತವಾಗಿರುವ ಕಪ್ಪೆಯನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಲಾದ ದೇವಾಲಯದ ಬಗ್ಗೆ ನೀವು ಕೇಳಿದ್ದೀರಾ? ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ‘ಓಯೆಲ್’ (Oel Town) ಎಂಬ ಸಣ್ಣ ಪಟ್ಟಣದಲ್ಲಿ ಇಂತಹದ್ದೊಂದು ಅಪರೂಪದ ಶಿವ ದೇವಾಲಯವಿದೆ. ಇಡೀ ದೇಶದಲ್ಲೇ ಇರುವ ಏಕೈಕ ಕಪ್ಪೆ ದೇವಾಲಯ (Manduk Mandir) ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಮಂಡೂಕ ತಂತ್ರಾಧಾರಿತ ಅದ್ಭುತ ವಾಸ್ತುಶಿಲ್ಪ:

ಈ ದೇವಾಲಯದ ಪ್ರಮುಖ ಆಕರ್ಷಣೆಯೇ ಇದರ ವಿಶಿಷ್ಟ ರಚನೆ. ಮೇಲ್ನೋಟಕ್ಕೆ ಈ ಇಡೀ ಮಂದಿರವು ಒಂದು ಬೃಹತ್ ಕಪ್ಪೆಯ ಆಕಾರದಲ್ಲಿ ಕಂಗೊಳಿಸುತ್ತದೆ. ವಾಸ್ತುಶಿಲ್ಪದ ಪ್ರಕಾರ, ಈ ದೇವಾಲಯವನ್ನು ಒಂದು ದೊಡ್ಡ ಕಪ್ಪೆಯ ಬೆನ್ನಿನ ಮೇಲೆ ನಿರ್ಮಿಸಲಾಗಿದ್ದು, ಆ ಕಪ್ಪೆಯು ಒಂದು ಬೃಹತ್ ಮೊಸಳೆಯ ಬೆನ್ನಿನ ಮೇಲೆ ಕುಳಿತಿರುವಂತೆ ವಿನ್ಯಾಸಗೊಳಿಸಲಾಗಿದೆ. ಮೇಘಾಲಯದ ಪ್ರಸಿದ್ಧ ತಾಂತ್ರಿಕ ಕಪಿಲ್ ಎಂಬುವವರ ಮಾರ್ಗದರ್ಶನದಲ್ಲಿ, ತಾಂತ್ರಿಕ ‘ಮಂಡೂಕ ಯಂತ್ರ’ವನ್ನು ಆಧರಿಸಿ ಇದನ್ನು ರಾಜಸ್ಥಾನಿ ಶೈಲಿಯಲ್ಲಿ ಕಟ್ಟಲಾಗಿದೆ. ಭಕ್ತರು ಪೂರ್ವದ್ವಾರದ ಮೂಲಕ ಪ್ರವೇಶಿಸಿದರೆ, ಕಪ್ಪೆಯ ಮುಖದ ಭಾಗದಿಂದ ನೇರವಾಗಿ ಗರ್ಭಗುಡಿಯನ್ನು ತಲುಪಬಹುದು. ದೇವಾಲಯದ ಹೊರಗೋಡೆಗಳ ಮೇಲಿರುವ ತಾಂತ್ರಿಕ ಶೈಲಿಯ ಕೆತ್ತನೆಗಳು ಇದರ ಐತಿಹಾಸಿಕ ರಹಸ್ಯವನ್ನು ಸಾರುತ್ತವೆ.

ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಶಿವಲಿಂಗ ಮತ್ತು ನಿಂತಿರುವ ನಂದಿ!

ಈ ಮಂದಿರದಲ್ಲಿರುವ ನರ್ಮದೇಶ್ವರ ಮಹಾದೇವನ ಶಿವಲಿಂಗವು ಅತ್ಯಂತ ಸುಂದರವಾದ ಅಮೃತಶಿಲೆಯ ಎತ್ತರದ ಬಂಡೆಯ ಮೇಲಿದೆ. ನರ್ಮದಾ ನದಿಯಿಂದ ತರಲಾದ ಈ ಅಪರೂಪದ ಶಿವಲಿಂಗವು ಹಗಲಿನ ಬೇರೆ ಬೇರೆ ಅವಧಿಗಳಲ್ಲಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂಬುದು ಇಲ್ಲಿನ ದೊಡ್ಡ ಪವಾಡ! ಅಷ್ಟೇ ಅಲ್ಲ, ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಶಿವ ದೇವಾಲಯಗಳಲ್ಲೂ ನಂದಿ ಕುಳಿತಿರುವ ಭಂಗಿಯಲ್ಲಿರುತ್ತಾನೆ. ಆದರೆ, ಇಲ್ಲಿ ಮಾತ್ರ ನಂದಿಯ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ಇಂತಹ ಅಪರೂಪದ ದೃಶ್ಯ ಭಾರತದಲ್ಲಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಹಿಂದೆ ಸೂರ್ಯನ ಬೆಳಕಿಗೆ ತಕ್ಕಂತೆ ಸ್ವಯಂಚಾಲಿತವಾಗಿ ತಿರುಗುತ್ತಿದ್ದ ದೇವಾಲಯದ ಮೇಲಿನ ಛತ್ರಿ ಈಗ ಕಾಲಗರ್ಭದಲ್ಲಿ ಹಾಳಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಾಜನ ಭವಿಷ್ಯ ಬದಲಿಸಿದ ಕಪ್ಪೆ:

200 ವರ್ಷಗಳ ಇತಿಹಾಸಈ ವಿಶಿಷ್ಟ ತಾಂತ್ರಿಕ ದೇವಾಲಯಕ್ಕೆ ಸುಮಾರು 200 ವರ್ಷಗಳ ಸುದೀರ್ಘ ಇತಿಹಾಸವಿದೆ. 11 ನೇ ಶತಮಾನದಿಂದ 19 ನೇ ಶತಮಾನದವರೆಗೆ ಈ ಪ್ರದೇಶವನ್ನು ಚೌಹಾಣ್ ವಂಶದ ರಾಜರು ಆಳುತ್ತಿದ್ದರು. ಸ್ಥಳೀಯ ನಂಬಿಕೆಗಳ ಪ್ರಕಾರ, ಒಮ್ಮೆ ಈ ಭಾಗದಲ್ಲಿ ಭೀಕರ ಬರಗಾಲ ಉಂಟಾದಾಗ  ಸಂಸ್ಥಾನದ ರಾಜ ಬಖತ್ ಸಿಂಗ್ ಅವರಿಗೆ ದೈವಿಕ ಕಪ್ಪೆಯೊಂದು ಆಶೀರ್ವಾದ ನೀಡಿತು. ಅದಾದ ಬಳಿಕ ರಾಜನ ಭವಿಷ್ಯವೇ ಬದಲಾಗಿ, ಇಡೀ ರಾಜ್ಯದಲ್ಲಿ ಸಮೃದ್ಧಿ ನೆಲೆಸಿತು. ತಂತ್ರ ಶಾಸ್ತ್ರದಲ್ಲಿ ಕಪ್ಪೆಯನ್ನು ಅದೃಷ್ಟ, ಸಂತಾನೋತ್ಪತ್ತಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸುವುದರಿಂದ, ಆ ದೈವಿಕ ಕಪ್ಪೆಯ ಗೌರವಾರ್ಥವಾಗಿ ರಾಜನು ಈ ಮಂದಿರವನ್ನು ನಿರ್ಮಿಸಿದನು.

ಶಿವರಾತ್ರಿ ಮತ್ತು ದೀಪಾವಳಿಯಂದು ವಿಶೇಷ ಪೂಜೆ:

ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ಈ ದೇವಾಲಯದಲ್ಲಿ ಮಹಾ ಶಿವರಾತ್ರಿಯಂದು ಭಾರಿ ಉತ್ಸವ ನಡೆಯುತ್ತದೆ. ಇದರೊಂದಿಗೆ, ದೀಪಾವಳಿಯ ಹಬ್ಬದ ದಿನದಂದು ಇಲ್ಲಿ ವಿಶೇಷ ತಾಂತ್ರಿಕ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಕಪ್ಪೆಯ ಬೆನ್ನಿನ ಮೇಲಿರುವ ಶಿವನ ದರ್ಶನ ಪಡೆದರೆ ಜೀವನದ ಎಲ್ಲಾ ಕಷ್ಟಗಳು ದೂರವಾಗಿ, ಸಂಪತ್ತು ಮತ್ತು ಸಂತಾನ ಭಾಗ್ಯ ಸಿದ್ಧಿಸುತ್ತದೆ ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಕಾಫಿ ಪ್ರಿಯರೇ ಎಚ್ಚರ! ಅತಿಯಾದ ಕೆಫಿನ್ ತರುತ್ತಿದೆ ನಿಮ್ಮ ಆರೋಗ್ಯಕ್ಕೆ ಕಂಟಕ – Kannada News | Bengaluru Coffee Lovers: Hidden Health Risks and Safe Caffeine Consumption Limits

ಬೆಂಗಳೂರು, ಜುಲೈ 19: ನಗರದಲ್ಲಿ ಕಾಫಿ ಪ್ರಿಯರಿಗೇನು (Coffee Lovers) ಕಡಿಮೆಯಿಲ್ಲ. ಪ್ರತಿ ಗಲ್ಲಿ-ಗಲ್ಲಿಯಲ್ಲಿಯೂ ತರಹೇವಾರಿ ಕಾಫಿ ಶಾಪ್‌ಗಳು ತಲೆ ಎತ್ತುತ್ತಿದ್ದು, ಯುವ ಪೀಳಿಗೆ ಹಾಗೂ ಐಟಿ ಉದ್ಯೋಗಿಗಳಿಗೆ ಇದು ನೆಚ್ಚಿನ ತಾಣವಾಗಿದೆ. ಆದರೆ ಇದೇ ಕಾಫಿ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ ಎಂಬ ಕಹಿ ಸತ್ಯ ಬಯಲಾಗಿದ್ದು, ಕಾಫಿ ಪ್ರಿಯರಲ್ಲಿ ಭಾರೀ ಆತಂಕ ಮೂಡಿಸಿದೆ. ನಗರದ ಆಸ್ಪತ್ರೆಗಳಲ್ಲಿ ಓಪಿಡಿಗೆ ಬರುವ 15-20 ರೋಗಿಗಳು ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುವವರೇ ಆಗಿದ್ದಾರೆ ಎಂದು ವರದಿ ತಿಳಿಸಿದೆ.

ಬಣ್ಣ ಬಣ್ಣದ ಕಾಫಿ ಕಪ್‌ಗಳ ಹಿಂದೆ ಅಡಗಿದೆ ‘ಸಕ್ಕರೆ’ ಮತ್ತು ‘ಕ್ಯಾಲೋರಿ’!

ನಾವೆಲ್ಲರೂ ಸಾಂಪ್ರದಾಯಿಕ ಫಿಲ್ಟರ್ ಕಾಫಿಗೆ ಒಗ್ಗಿಕೊಂಡವರು. ಆದರೆ ಇಂದಿನ ಮಾಡರ್ನ್ ಕೆಫೆಗಳಲ್ಲಿ ಸಿಗುವ ಲ್ಯಾಟೆ (Latte), ಕ್ಯುಪುಚಿನೋ (Cappuccino) ಅಥವಾ ಕೋಲ್ಡ್ ಕಾಫಿಗಳಲ್ಲಿ ಬಳಸುವ ಪದಾರ್ಥಗಳು ದೇಹಕ್ಕೆ ಅತ್ಯಂತ ಹಾನಿಕಾರಕವಾಗಿವೆ. ಕಾಫಿಯ ರುಚಿ ಹೆಚ್ಚಿಸಲು ಬಳಸುವ ಕ್ಯಾರಮೆಲ್, ವೆನಿಲ್ಲಾ ಹಾಗೂ ಚಾಕೊಲೇಟ್ ಸಿರಪ್‌ಗಳಲ್ಲಿ ಕೃತಕ ಸಕ್ಕರೆಯ ಪ್ರಮಾಣ ಅತಿಯಾಗಿರುತ್ತದೆ. ಹೀಗಾಗಿ ಒಂದು ಕಪ್ ಕಾಫಿ ಕುಡಿದರೆ, ಅದು ಒಂದು ಹೊತ್ತಿನ ಊಟಕ್ಕೆ ಸಮನಾದ ಕ್ಯಾಲೋರಿಗಳನ್ನು ದೇಹಕ್ಕೆ ಸೇರಿಸುತ್ತದೆ. ನಿರಂತರವಾಗಿ ಇಂತಹ ಕಾಫಿ ಸೇವನೆಯಿಂದಾಗಿ ಯುವಕರಲ್ಲಿ ತೂಕ ಹೆಚ್ಚಳ (Obesity) ಮತ್ತು ಅತಿ ಸಣ್ಣ ವಯಸ್ಸಿನಲ್ಲೇ ಟೈಪ್-2 ಮಧುಮೇಹ (Diabetes) ಕಾಣಿಸಿಕೊಳ್ಳುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೆಫಿನ್ ಹೇಗೆ ಕೆಲಸ ಮಾಡುತ್ತದೆ?

ನಮ್ಮ ಮೆದುಳಿನಲ್ಲಿ ಆಯಾಸ ಮತ್ತು ಸುಸ್ತನ್ನು ಉಂಟುಮಾಡುವ ‘ಅಡೆನೊಸಿನ್’ (Adenosine) ಎಂಬ ರಾಸಾಯನಿಕ ರಿಸೆಪ್ಟರ್‌ಗಳನ್ನು ಬ್ಲಾಕ್ ಮಾಡುವ ಮೂಲಕ ಕೆಫಿನ್ ಕೆಲಸ ಮಾಡುತ್ತದೆ. ಇದು ನಮಗೆ ಚುರುಕುತನ ನೀಡುವುದರ ಜೊತೆಗೆ ‘ಅಡ್ರಿನಾಲಿನ್’ ನಂತಹ ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವರನ್ನು ಜಾಗರೂಕರಾಗಿಟ್ಟರೆ, ಇನ್ನು ಕೆಲವರಲ್ಲಿ ಅತಿಯಾದ ಆತಂಕ ಮತ್ತು ಅತಿ-ಉತ್ತೇಜನಕ್ಕೆ ಕಾರಣವಾಗುತ್ತದೆ.

ಫಿಲ್ಟರ್ ಕಾಫಿ vs ಎಸ್ಪ್ರೆಸೊ: ಯಾವುದು ಹೆಚ್ಚು ಹಾನಿಕರ?

ನಮ್ಮಲ್ಲಿ ಬಹುತೇಕರು ಕುಡಿಯುವ ದಕ್ಷಿಣ ಭಾರತದ ಸಾಂಪ್ರದಾಯಿಕ ಫಿಲ್ಟರ್ ಕಾಫಿಯು, ಎಸ್ಪ್ರೆಸೊ ಆಧಾರಿತ ಅಮೆರಿಕಾನೊಗಿಂತ ಹೆಚ್ಚು ಕೆಫಿನ್ ಹೊಂದಿರುತ್ತದೆ. ಇದಕ್ಕೆ ಬಳಸುವ ಚಿಕೋರಿ ಪುಡಿಯು ತೀವ್ರತೆಯನ್ನು ಸ್ವಲ್ಪ ಕಡಿಮೆ ಮಾಡಿದರೂ, ದೀರ್ಘಕಾಲದ ಬ್ರೂಯಿಂಗ್ ಪ್ರಕ್ರಿಯೆಯಿಂದಾಗಿ ಇದು ಪ್ರಬಲವಾದ ಕೆಫಿನ್ ಸಾಂದ್ರತೆಯನ್ನು ಹೊಂದಿರುತ್ತದೆ. ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 400mg ಗಿಂತ ಕಡಿಮೆ ಕೆಫಿನ್ ಸೇವಿಸಬೇಕು.

ಅಲ್ಲದೆ ಫಿಲ್ಟರ್ ಕಾಫಿಯು ಹಾಲಿನ ಅಂಶದಿಂದಾಗಿ ದೀರ್ಘಕಾಲದ ಆಸಿಡ್ ರಿಫ್ಲಕ್ಸ್ (ಆಮ್ಲೀಯತೆ) ಉಂಟುಮಾಡಬಹುದು. ಆದರೆ ತೀವ್ರವಾದ ಎಸ್ಪ್ರೆಸೊ ಶಾಟ್‌ಗಳು ನಮ್ಮ ನರಮಂಡಲ ಮತ್ತು ರಕ್ತಪರಿಚಲನಾ ವ್ಯವಸ್ಥೆಯಲ್ಲಿ ತಕ್ಷಣದ ತಲ್ಲಣವನ್ನು ಸೃಷ್ಟಿಸುತ್ತವೆ ಎಂದು ಡಾ. ರಾವ್ ತಿಳಿಸಿದ್ದಾರೆ.

ಆರೋಗ್ಯ ಹದಗೆಡದಂತೆ ಕಾಫಿ ಆನಂದಿಸುವುದು ಹೇಗೆ?

ಮಧ್ಯಾಹ್ನ 2 ಗಂಟೆಯ ನಂತರ ಕಾಫಿ ಕುಡಿಯದಿರುವುದು
ದಿನದ ಒಟ್ಟು ಕೆಫಿನ್ ಸೇವನೆ 400mg ಗಿಂತ ಕಡಿಮೆ ಇರಲಿ
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬೇಡಿ
ಹೆಚ್ಚು ನೀರು ಕುಡಿಯಿರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳೆ ಜೈಲಲ್ಲೇ ಕಣ್ಣೀರಿಟ್ಟ ಪ್ರಜ್ವಲ್​​ ರೇವಣ್ಣ: ಅಂತ್ಯಕ್ರಿಯೆಯಲ್ಲಿ ಭಾಗಿಗೆ ಅವಕಾಶ ಕೋರಿ ಪೆರೋಲ್ ಅರ್ಜಿ ಸಲ್ಲಿಕೆ – Kannada News | Prajwal Revanna Cries in Jail Over Grandmother Chennamma’s Death, Files Parole Application to Attend Funeral

ಅಜ್ಜಿ ಚೆನ್ನಮ್ಮ ನಿಧನದ ಸುದ್ದಿ ಕೇಳೆ ಜೈಲಲ್ಲೇ ಕಣ್ಣೀರಿಟ್ಟ ಪ್ರಜ್ವಲ್​​ ರೇವಣ್ಣImage Credit source: PTI

ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧದ ಹಿನ್ನೆಲೆ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಈ ನಡುವೆ ಅಜ್ಜಿ ಮೃತಪಟ್ಟಿರುವ ಸುದ್ದಿ ಕೇಳಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕೂಡ ಕಣ್ಣೀರು ಹಾಕಿದ್ದಾರೆ. ಅಜ್ಜಿ ಚೆನ್ನಮ್ಮರ ಪ್ರೀತಿಯ ಮೊಮ್ಮಗನಾಗಿದ್ದರೂ ಆಕೆಯ ಕೊನೆ ಕಾಲದಲ್ಲಿ ಕನಿಷ್ಠ ಅವರ ಮುಖವನ್ನು ನೋಡಲೂ ಸಾಧ್ಯವಾಗದ ಕಾರಣ ಮಾಜಿ ಸಂಸದ ಭಾವುಕರಾಗಿದ್ದಾರೆ. ಅಜ್ಜಿಯನ್ನು ನೆನೆದು ಪ್ರಜ್ವಲ್​​ ಬಿಕ್ಕಿ ಬಿಕ್ಕಿ ಅತ್ತಿದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್ ರೇವಣ್ಣಗೆ ಪೆರೋಲ್ ಕೋರಿ ಅರ್ಜಿ

ಈ ನಡುವೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಪೆರೋಲ್ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಪ್ರಜ್ವಲ್​ ರೇವಣ್ಣ ಅಜ್ಜಿ ಚೆನ್ನಮ್ಮ ವಿಧಿವಶ ಹಿನ್ನೆಲೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಕೋರಿ ವಕೀಲರು ನಿನ್ನೆಯೇ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪ್ರಜ್ವಲ್ ಎದುರುನೋಡುತ್ತಿದ್ದು, ಇದೇ ಕಾರಣಕ್ಕೆ ಸೋಮವಾರ ಚೆನ್ನಮ್ಮನವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಕೂಡ ಹೇಳಲಾಗ್ತಿದೆ.

ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಚೆನ್ನಮ್ಮ ಅಂತ್ಯಕ್ರಿಯೆ; ಮಾವಿನ‌ಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತಿಮ ವಿಧಿ ವಿಧಾನ

ಚೆನ್ನಮ್ಮನವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಸಮೀಪದ ಕ್ಯಾತನಹಳ್ಳಿ ಬಳಿ ಇರುವ ದೇವೇಗೌಡರ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನದ ವೇಳೆಗೆ ನಡೆಯಲಿದೆ. ಅಂತಿಮ ವಿಧಿ ವಿಧಾನ ನೆಯಲಿರುವ ಜಾಗದಲ್ಲಿ ನೆಲ ಸಮತಟ್ಟು ಮಾಡುವ ಜೊತೆಗೆ ಶಾಮಿಯಾನ ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ 4 ಸಾವಿರ ಕುರ್ಚಿಗಳನ್ನು ತರಿಸಿ ಸ್ಥಳದಲ್ಲಿ ಹಾಕಲು ವ್ಯವಸ್ಥೆ ನಡೆಯುತ್ತಿದೆ. ಅಂತ್ಯಕ್ರಿಯೆಯಲ್ಲಿ ರಾಜ್ಯದ ವಿವಿಧ ಭಾಗದ ಜನಪ್ರತಿನಿಧಿಗಳು ಭಾಗಿ ಸಾಧ್ಯತೆ ಹಿನ್ನೆಲೆ ಅಗತ್ಯ ತಯಾರಿ ಶುರುವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:13 am, Sun, 19 July 26

Source link

ರೋಹಿತ್​ ಬಗ್ಗೆ ಕಳವಳವಿಲ್ಲ, ವಿಶೇಷ ರಣರಂತ್ರ: ಮೋರ್ಕೆಲ್ ಹೇಳಿದ್ದೇನು? – Kannada News | Morkel Backs Rohit as India Faces Lord’s Slope Challenge

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯ ಕೊನೆಯ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಮೈದಾನ ಸಜ್ಜಾಗಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಮಾಧ್ಯಮಗಳೊಂದಿಗೆ ಮಾತನಾಡಿ, ತಂಡದ ಪ್ರಸ್ತುತ ಸ್ಥಿತಿ ಮತ್ತು ತಂತ್ರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ. ವಿಶೇಷವಾಗಿ, ಇತ್ತೀಚಿನ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿರುವ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ಕುರಿತು ಕೇಳಲಾದ ಪ್ರಶ್ನೆಗೆ ಮೋರ್ಕೆಲ್ ಅತ್ಯಂತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ರೋಹಿತ್ ಶರ್ಮಾಗೆ ಬೆಂಬಲ:

ಕಳೆದ ಕೆಲ ಪಂದ್ಯಗಳಲ್ಲಿ ವಿಫಲರಾಗಿರುವ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಲಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ ಕೋಚ್ ಮೋರ್ಕೆಲ್ ಈ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ನಮಗೆ ಯಾವುದೇ ಕಳವಳವಿಲ್ಲ. ಸರಣಿಯ ಆರಂಭಿಕ ಪಂದ್ಯಗಳಲ್ಲಿ ಹೊಸ ಚೆಂಡಿನ ಅದ್ಭುತ ಮೂವ್‌ಮೆಂಟ್‌ನಿಂದಾಗಿ ಆರಂಭಿಕ ಬ್ಯಾಟರ್‌ಗಳಿಗೆ ಕ್ರೀಸ್‌ನಲ್ಲಿ ನಿಲ್ಲುವುದು ತುಂಬಾ ಕಷ್ಟಕರವಾಗಿತ್ತು. ರೋಹಿತ್ ಅವರ ಬಳಿ ಅಪಾರ ಅಂತರರಾಷ್ಟ್ರೀಯ ಅನುಭವವಿದೆ. ಅವರ ಶಾಂತ ಸ್ವಭಾವ ಮತ್ತು ಮುಂದಾಳತ್ವ ಇಡೀ ಬ್ಯಾಟಿಂಗ್ ಲೈನ್-ಅಪ್‌ಗೆ ದೊಡ್ಡ ಬಲ ನೀಡುತ್ತದೆ. ಅವರು ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂಬ ನಂಬಿಕೆ ನಮಗಿದೆ,” ಎಂದು ಮೋರ್ಕೆಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬ್ಯಾಟರ್‌ಗಳಿಗೆ ಸವಾಲು:

ಕ್ರಿಕೆಟ್‌ನ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನವು ತನ್ನ ವಿಶಿಷ್ಟವಾದ ಇಳಿಜಾರಿನಿಂದ ಹೆಸರುವಾಸಿಯಾಗಿದೆ. ಇಲ್ಲಿನ ಪಿಚ್ ಮತ್ತು ಮೈದಾನದ ವಿನ್ಯಾಸವು ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಈ ಸವಾಲನ್ನು ಎದುರಿಸಲು ಮೋರ್ಕೆಲ್ ಭಾರತೀಯ ಬ್ಯಾಟರ್‌ಗಳಿಗೆ ವಿಶೇಷ ಸಲಹೆ ನೀಡಿದ್ದಾರೆ.

ಲಾರ್ಡ್ಸ್ ಮೈದಾನದ ಇಳಿಜಾರಿನಿಂದಾಗಿ ಚೆಂಡು ಬರುವ ಹಾದಿ ಮತ್ತು ವೇಗದಲ್ಲಿ ವ್ಯತ್ಯಾಸವಿರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಬ್ಯಾಟರ್‌ಗಳು ಕ್ರೀಸ್‌ಗೆ ಬಂದ ತಕ್ಷಣ ಆತುರಪಡಬಾರದು. ಕ್ರೀಸ್‌ನಲ್ಲಿ ಕನಿಷ್ಠ 5 ರಿಂದ 10 ಎಸೆತಗಳನ್ನು ಎದುರಿಸಿ, ಪಿಚ್‌ನ ವರ್ತನೆಯನ್ನು ಅರ್ಥಮಾಡಿಕೊಂಡ ನಂತರವಷ್ಟೇ ಬ್ಯಾಟರ್‌ಗಳು ದೊಡ್ಡ ಶಾಟ್‌ಗಳಿಗೆ ಕೈಹಾಕಬೇಕು ಎಂದು ಮೋರ್ಕೆಲ್ ತಿಳಿಸಿದ್ದಾರೆ.

ವಿಶೇಷ ರಣತಂತ್ರ:

ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸುಸ್ಥಿತಿಯಲ್ಲಿದ್ದರೂ (178/3), ದಿಢೀರ್ ಕುಸಿತ ಕಂಡು 233 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಲೋಪದೋಷವನ್ನು ಒಪ್ಪಿಕೊಂಡ ಕೋಚ್, ಮಧ್ಯಮ ಕ್ರಮಾಂಕದಲ್ಲಿ ಸುದೀರ್ಘ ಹಾಗೂ ಯೋಜನಾಬದ್ಧ ಜೊತೆಯಾಟಗಳು ಮೂಡಿಬರಬೇಕಾದ್ದು ಪಂದ್ಯ ಗೆಲ್ಲಲು ಅತಿ ಮುಖ್ಯ ಎಂದಿದ್ದಾರೆ.

ಅದೇ ರೀತಿ, ಪಂದ್ಯವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕಾದರೆ ಬೌಲರ್‌ಗಳು ಕೇವಲ ಆರಂಭದಲ್ಲಿ ಮಾತ್ರವಲ್ಲದೆ, ಮಧ್ಯದ ಓವರ್‌ಗಳಲ್ಲಿ ನಿಯಮಿತವಾಗಿ ಇಂಗ್ಲೆಂಡ್ ತಂಡದ ವಿಕೆಟ್‌ಗಳನ್ನು ಪಡೆಯಬೇಕು. ಇದಕ್ಕಾಗಿ ಬೌಲಿಂಗ್ ವಿಭಾಗವು ವಿಶೇಷ ರಣತಂತ್ರ ರೂಪಿಸಿದೆ ಎಂದು ಮೋರ್ಕೆಲ್ ವಿವರಿಸಿದರು.

2027ರ ವಿಶ್ವಕಪ್‌ಗೆ ಪ್ಲ್ಯಾನ್ ರೆಡಿ:

ಸರಣಿಯು ಕೇವಲ ಪ್ರಸ್ತುತ ಟ್ರೋಫಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಭವಿಷ್ಯದ ದೊಡ್ಡ ಗುರಿಯನ್ನೂ ಹೊಂದಿದೆ. 2027ರ ಐಸಿಸಿ 50-ಓವರ್‌ಗಳ ವಿಶ್ವಕಪ್ ಸೌತ್ ಆಫ್ರಿಕಾದಲ್ಲಿ ನಡೆಯಲಿದ್ದು, ಅಲ್ಲಿನ ಪಿಚ್‌ಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಸೌತ್ ಆಫ್ರಿಕಾದವರೇ ಆದ ಮೋರ್ನೆ ಮೋರ್ಕೆಲ್ ಅವರಿಗೆ ಅಪಾರ ಅನುಭವವಿದೆ. ಆ ಸ್ಥಳೀಯ ಅನುಭವ ಮತ್ತು ಜ್ಞಾನವನ್ನು ಈಗಿನಿಂದಲೇ ಭಾರತ ತಂಡದ ಮ್ಯಾನೇಜ್‌ಮೆಂಟ್‌ನೊಂದಿಗೆ ಹಂಚಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ vs ಫ್ರಾನ್ಸ್: ಒಂದೇ ಪಂದ್ಯದಲ್ಲಿ 10 ಗೋಲು ದಾಖಲು!

ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಡ್ಸ್ ಮೈದಾನದ ವಿಶಿಷ್ಟ ಇಳಿಜಾರಿನ ಸವಾಲು ಮತ್ತು ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಫಾರ್ಮ್ ಕುರಿತಾದ ಚರ್ಚೆಗಳ ನಡುವೆಯೇ ಭಾರತ ತಂಡ ಸರಣಿ ನಿರ್ಣಯಿಸುವ ಅಂತಿಮ ಏಕದಿನ ಪಂದ್ಯಕ್ಕೆ ಬಲಿಷ್ಠ ರಣತಂತ್ರ ರೂಪಿಸಿದೆ. ಕೋಚ್ ಮೋರ್ನೆ ಮೋರ್ಕೆಲ್ ಅವರ ಮಾರ್ಗದರ್ಶನ ಹಾಗೂ 2027ರ ವಿಶ್ವಕಪ್‌ನ ದೀರ್ಘಾವಧಿ ಯೋಜನೆಯೊಂದಿಗೆ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಕೊನೆಯ ಪಂದ್ಯದಲ್ಲಿ ಗೆದ್ದು ಇಂಗ್ಲೆಂಡ್ ವಿರುದ್ಧ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.

Source link

Bengaluru Air Quality: ವರುಣನ ಕೃಪೆಯಿಂದ ಬೆಂಗಳೂರಿಗರಿಗೆ ಸಿಕ್ತು ಬಿಗ್ ರಿಲೀಫ್: ರಾಜ್ಯದ ಪ್ರಮುಖ ನಗರಗಳ ಇಂದಿನ AQI ಹೇಗಿದೆ ಗೊತ್ತಾ? – Kannada News | Bengaluru AQI Update: Air Quality Improves in Karnataka Cities due to Rains

ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಇದರ ಸಕಾರಾತ್ಮಕ ಪರಿಣಾಮ ರಾಜ್ಯದ ವಾಯುಗುಣಮಟ್ಟದ ಮೇಲೂ ಬೀರಿದೆ. ಜುಲೈ 19 ರ ಇಂದಿನ ವರದಿಗಳ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಉತ್ತಮ ಹಾಗೂ ತೃಪ್ತಿಕರ ಮಟ್ಟದಲ್ಲಿದೆ. ಮಳೆ ಮತ್ತು ಬಲವಾದ ಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ನಿಯಂತ್ರಣಕ್ಕೆ ಬಂದಿದ್ದು, ಕರಾವಳಿ ಹಾಗೂ ಒಳನಾಡಿನ ಜನತೆ ಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ‘ಉತ್ತಮ’ ಗಾಳಿ ಗುಣಮಟ್ಟ

ಐಟಿ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಮಗಾರಿಗಳಿಂದಾಗಿ ವಾಯು ಮಾಲಿನ್ಯ ಕೊಂಚ ಏರಿಕೆಯಾಗಿತ್ತು. ಆದರೆ ಇಂದಿನ (ಜುಲೈ 19) ಅಧಿಕೃತ ಹವಾಮಾನ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳ ಪ್ರಕಾರ, ಬೆಂಗಳೂರಿನ ಸರಾಸರಿ AQI ಕೇವಲ 50 ರ ಆಸುಪಾಸಿನಲ್ಲಿದೆ. ಇದು ‘ಅತ್ಯಂತ ಉತ್ತಮ’ (Good) ವಲಯಕ್ಕೆ ಸೇರುತ್ತದೆ.

ಮೆಜೆಸ್ಟಿಕ್ ಮತ್ತು ಕಾರ್ಪೊರೇಷನ್ ಸುತ್ತಮುತ್ತ ವಾಯುಗುಣಮಟ್ಟ ಸೂಚ್ಯಂಕ 48 ರಿಂದ 52ರವೆಗಿದ್ದು, ತೃಪ್ತಿಕರ ಮಟ್ಟದಲ್ಲಿದೆ. ಜಯನಗರ ಮತ್ತು ಬಸವನಗುಡಿಯಲ್ಲಿ 45 AQI ಇದ್ದು, ಉತ್ತಮ ವಾತಾವರಣವಿದೆ. ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಏಕ್ಯೂಐ 55 ಇದ್ದು, ಸಾಧಾರಣ ಮಟ್ಟದಲ್ಲಿದೆ.

ಮುಖ್ಯವಾಗಿ ವಾತಾವರಣದಲ್ಲಿ ಹಾನಿಕಾರಕ ಸೂಕ್ಷ್ಮ ಕಣಗಳಾದ PM 2.5 ಮತ್ತು PM 10 ಮಟ್ಟವು ತೀರಾ ಕಡಿಮೆ ದಾಖಲಾಗಿದ್ದು, ಶ್ವಾಸಕೋಶದ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರು ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯದ ಇತರ ನಗರಗಳ ಇಂದಿನ AQI ಸ್ಥಿತಿಗತಿ ಹೇಗಿದೆ?

ರಾಜಧಾನಿ ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಮುಂಗಾರು ಮಳೆಯ ಸಿಂಚನದಿಂದಾಗಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದೆ. ಕರಾವಳಿ ಮತ್ತು ಮಲೆನಾಡು ಭಾಗದ ನಗರಗಳು ಅತ್ಯಂತ ಸ್ವಚ್ಛ ಗಾಳಿಯನ್ನು ಹೊಂದಿವೆ.

  • ಚಿಕ್ಕಮಗಳೂರು ಮತ್ತು ಮಡಿಕೇರಿ: 35 – 38 AQI (ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಗಾಳಿ)
  • ಮಂಗಳೂರು ಮತ್ತು ಉಡುಪಿ: 42 – 47 AQI (ಉತ್ತಮ ವಲಯ)
  • ಮೈಸೂರು: 46 AQI
  • ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ: 45 – 50 AQI
  • ಕಲಬುರಗಿ ಮತ್ತು ಬಳ್ಳಾರಿ: 58 – 65 AQI (ಸಾಧಾರಣ ಮಟ್ಟ)

ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ದಿನ ಇಡೀ ಕರ್ನಾಟಕದ ಜನತೆಗೆ ವಾಯು ಮಾಲಿನ್ಯದ ದೃಷ್ಟಿಯಿಂದ ಅತ್ಯಂತ ಆರೋಗ್ಯಕರ ದಿನವಾಗಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿರುವುದರಿಂದ ಗಾಳಿಯ ಗುಣಮಟ್ಟ ಇದೇ ರೀತಿ ಉತ್ತಮವಾಗಿರಲಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version