‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರವನ್ನು ಮಿಸ್ ಮಾಡಲೇಬೇಡಿ; ಕಾರಣ ಇಲ್ಲಿದೆ – Kannada News | The Sheep Detective Review: Unique Kannada Dubbed Mystery Now on Amazon Prime Video

ವಿಶ್ವಾದ್ಯಂತ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಬೇರೆ ಬೇರೆ ಭಾಷೆಗಳಲ್ಲಿ, ಬೇರೆ ಬೇರೆ ರೀತಿಯ ಆಲೋಚನೆಗಳೊಂದಿಗೆ ಸಿನಿಮಾಗಳು ಮೂಡಿ ಬರುತ್ತವೆ. ಈಗ ಒಟಿಟಿ ಅಂಗೈಯಲ್ಲೇ ಇರುವುದರಿಂದ ಅವುಗಳನ್ನು ಸುಲಭದಲ್ಲಿ ವೀಕ್ಷಿಸಬಹುದು. ಅಮೇಜಾನ್ ಪ್ರೈಮ್ ವಿಡಿಯೋ (Prime Video) ಮೂಲಕ ಪ್ರಸಾರ ಆರಂಭಿಸಿರುವ ‘ದಿ ಶೀಪ್ ಡಿಟೆಕ್ಟಿವ್ಸ್​’ ವೀಕೆಂಡ್ ವಾಚ್​​ಗೆ ಉತ್ತಮ ಆಯ್ಕೆ.

ಒಂದು ಸಾವು ಸಂಭವಿಸುತ್ತದೆ. ಆ ಕೊಲೆಯನ್ನು ಯಾರು ಮಾಡಿದ್ದು ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ಇಳಿಯೋದು ಸಾಮಾನ್ಯ. ಆದರೆ, ‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರದಲ್ಲಿ ಕುರಿಗಳು ತನಿಖೆಗೆ ಇಳಿಯುತ್ತವೆ. ತನ್ನ ಮಾಲೀಕನನ್ನು ಸಾಯಿಸಿದವರು ಯಾರು ಎಂಬುದನ್ನು ಅವೇ ಪತ್ತೆ ಹಚ್ಚುತ್ತವೆ. ಈ ರೀತಿಯ ಭಿನ್ನ ಆಲೋಚನೆಯೊಂದಿಗೆ ಸಿನಿಮಾ ಮೂಡಿ ಬಂದಿದೆ.

ಕುರಿಗಳಿಗೆ ಮಾತನಾಡಲು ಬರೋದಿಲ್ಲ. ಅವನ್ನು ದಡ್ಡ ಪ್ರಾಣಿಗಳು ಎಂದು ಕೂಡ ಪರಿಗಣಿಸಲಾಗುತ್ತದೆ. ಒಂದೊಮ್ಮೆ ಅವರಿಗೆ ಮಾತನಾಡಲು ಬಂದಿದ್ದರೆ ಅವು ಯಾವ ರೀತಿಯಲ್ಲಿ ತಮ್ಮ ಭಾವನೆಯನ್ನು ಹೊರಕ್ಕೆ ಹಾಕುತ್ತಿದ್ದವು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ‘ದಿ ಶೀಪ್ ಡಿಟೆಕ್ಟಿವ್ಸ್​’ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಭಿನ್ನ ಆಲೋಚನೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಕೈಲೆ ಬಾಲ್ದಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹುಗ್ ಜಾಕ್​​ಮ್ಯಾನ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಸ್ಪೆನ್ಸ್ ಜೊತೆಗೆ ಒಂದಷ್ಟು ಫನ್ ಹಾಗೂ ಜೀವನದ ಪಾಠಗಳನ್ನು ಹೇಳಿಕೊಡುವ ಪ್ರಯತ್ನ ನಡೆದಿದೆ ಎಂಬುದು ವಿಶೇಷ. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ: ಸಾಕಷ್ಟು ಹಣ ಕೊಟ್ಟ ಬಳಿಕವೂ ಜಾಹೀರಾತು; ಅಮೆಜಾನ್‌ ಪ್ರೈಮ್ ವಿಡಿಯೋಗೆ ಕಾನೂನು ಸಂಕಷ್ಟ 

ಡಬ್ಬಿಂಗ್ ಎಂಬುದು ಈಗ ತುಂಬಾನೇ ವಿಸ್ತಾರವಾಗಿ ಬೆಳೆದಿದೆ. ಇದು ಹಾಲಿವುಡ್ ಸಿನಿಮಾ ಆದರೂ ಕನ್ನಡದಲ್ಲೂ ಡಬ್ ಆಗಿ. ತುಂಬಾನೇ ಸುಂದರವಾಗಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ-ನ್ಯೂಜಿಲೆಂಡ್ ಹೊಸ ಪಯಣಕ್ಕೆ ಸಿದ್ಧವಾಗಿದೆ; ಆಕ್ಲೆಂಡ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ – Kannada News | PM Narendra Modi addresses Indian Community in Auckland India New Zealand to embark on new voyage together

ಆಕ್ಲೆಂಡ್, ಜುಲೈ 11: ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ 3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ನ್ಯೂಜಿಲೆಂಡ್‌ಗೆ ಆಗಮಿಸಿದ್ದಾರೆ. ಸುಮಾರು 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇಂದು (ಶನಿವಾರ) ಆಕ್ಲೆಂಡ್‌ನ ಸ್ಪಾರ್ಕ್ ಅರೆನಾದಲ್ಲಿ ಭಾರತೀಯ ಸಮುದಾಯದಿಂದ “ಕಿಯಾ ಓರಾ ಮೋದಿ” ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಮೋದಿ ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಸೇರಿದಂತೆ ಭಾರತೀಯ ಮೂಲದ ನ್ಯೂಜಿಲೆಂಡ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯರು “ಮೋದಿ, ಮೋದಿ!” ಎಂದು ಘೋಷಣೆ ಕೂಗುತ್ತಾ ಜೋರಾಗಿ ಜಯಘೋಷ ಹಾಕಿದರು.

ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಮಾವೋರಿ ಸಂಸ್ಕೃತಿಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಶತಮಾನಗಳಿಂದ ಜನರನ್ನು ಒಗ್ಗೂಡಿಸುತ್ತಿರುವ ‘ವಕಾ’ ಎಂಬ ಪದದ ಮಹತ್ವವನ್ನು ವಿವರಿಸಿದರು. “ವಕಾ ಎಂದರೆ ಅದು ಕೇವಲ ಒಂದು ಸಾಂಪ್ರದಾಯಿಕ ದೋಣಿ ಅಥವಾ ಹಡಗಲ್ಲ, ಅದು ನಮ್ಮ ಹಂಚಿಕೆಯ ಪ್ರಯಾಣದ ಸಂಕೇತವಾಗಿದೆ. ಇಂದು ಭಾರತ ಮತ್ತು ನ್ಯೂಜಿಲೆಂಡ್‌ನ ಜಂಟಿ ‘ವಕಾ’ ಒಂದು ಹೊಸ ಐತಿಹಾಸಿಕ ಪ್ರಯಾಣಕ್ಕೆ ಸಿದ್ಧವಾಗಿದೆ. ನಮ್ಮ ಮುಂದೆ ಅಪಾರ ಅವಕಾಶಗಳಿವೆ. ನಮ್ಮ ಈ ಪ್ರಯಾಣಕ್ಕೆ ಪೂರಕವಾದ ಗಾಳಿಯೂ ನಮ್ಮತ್ತ ಬೀಸುತ್ತಿದೆ” ಎಂದು ಬಣ್ಣಿಸಿದರು.

ಇದನ್ನೂ ಓದಿ: 40 ವರ್ಷದ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ವಿಮಾನ ನಿಲ್ದಾಣದಲ್ಲೇ ಮೋದಿಯನ್ನು ಸ್ವಾಗತಿಸಿದ ನ್ಯೂಜಿಲೆಂಡ್ ಪಿಎಂ

ಅನಿವಾಸಿ ಭಾರತೀಯರಿಗೆ ಮೆಚ್ಚುಗೆ:

ಈ ಹೊಸ ಜಂಟಿ ಪ್ರಯಾಣದ ಯಶಸ್ಸಿನ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಈ ಪ್ರಯಾಣದ ಯಶಸ್ಸಿನ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಕಾರಣವೇನೆಂದು ನಿಮಗೆ ಗೊತ್ತೇ? ಮೋದಿ ಇರುವುದರಿಂದಲ್ಲ, ಬದಲಿಗೆ ಈ ಪ್ರಯಾಣದ ನಿಜವಾದ ನಾವಿಕರು ನೀವೆಲ್ಲರೂ ಆಗಿದ್ದೀರಿ. ಆಕ್ಲೆಂಡ್‌ನಿಂದ ವೆಲ್ಲಿಂಗ್ಟನ್‌ವರೆಗೆ, ಕ್ರೈಸ್ಟ್‌ಚರ್ಚ್‌ನಿಂದ ಕ್ವೀನ್ಸ್‌ಟೌನ್‌ವರೆಗೆ ನ್ಯೂಜಿಲೆಂಡ್‌ನ ಪ್ರತಿ ಮೂಲೆಯಲ್ಲೂ ಹರಡಿರುವ ಭಾರತೀಯ ಸಮುದಾಯವೇ ಈ ಸುವರ್ಣ ಶತಮಾನದ ನಾವಿಕರು” ಎಂದು ಹೆಮ್ಮೆಯಿಂದ ಶ್ಲಾಘಿಸಿದ್ದಾರೆ.

ನ್ಯೂಜಿಲೆಂಡ್ ದೇಶವು ಭಾರತೀಯ ಪ್ರತಿಭೆಗಳನ್ನು ಗೌರವಿಸುವ ಮತ್ತು ಮುಕ್ತ ಅವಕಾಶ ನೀಡುವ ಅದ್ಭುತ ತಾಣವಾಗಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ನ್ಯೂಜಿಲೆಂಡ್‌ನ ರಸ್ತೆ ಮತ್ತು ಸ್ಥಳಗಳಿಗೆ ಭಾರತೀಯ ನಗರಗಳ ಹೆಸರಿಟ್ಟು ಗೌರವಿಸಲಾಗಿದೆ. ಇಲ್ಲಿ ಸಿನಿಮಾಗಳಲ್ಲಿ ಬರುವ ರಸಮಯ ತಾಣ ‘ಖಂಡಾಲಾ’ ಇದೆ. ಬಾಂಬೆ ಹಿಲ್ಸ್, ಕೋರಮಂಡಲ್, ಕಲ್ಕತ್ತಾ ಸ್ಟ್ರೀಟ್, ಡೆಲ್ಲಿ ಕ್ರೆಸೆಂಟ್, ಅಮೃತಸರ ಸ್ಟ್ರೀಟ್‌ನಂತಹ ನೂರಾರು ಭಾರತೀಯ ಹೆಸರುಗಳು ಇಲ್ಲಿ ಜೀವಂತವಾಗಿವೆ ಎಂದು ಅವರು ನೆನಪಿಸಿದ್ದಾರೆ.

ಇದನ್ನೂ ಓದಿ: 40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ನರೆಂದ್ರ ಮೋದಿ!

ಈ ಸಮಾವೇಶದಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮತ್ತು ಅವರ ಸರ್ಕಾರದ ಸಚಿವರಷ್ಟೇ ಅಲ್ಲದೆ, ಅಲ್ಲಿನ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ನಾಯಕರೂ ಭಾಗವಹಿಸಿದ್ದರು. ಇದನ್ನು ಮುಕ್ತವಾಗಿ ಶ್ಲಾಘಿಸಿದ ಪ್ರಧಾನಿ ಮೋದಿ, “ಇದು ಭಾರತ ಮತ್ತು ನ್ಯೂಜಿಲೆಂಡ್ ಬಾಂಧವ್ಯಕ್ಕೆ ಅಲ್ಲಿನ ರಾಜಕಾರಣದಲ್ಲಿ ಇರುವ ಒಮ್ಮತದ ಹಾಗೂ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ತೋರಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Sat, 11 July 26

Source link

‘ಕರಾವಳಿ’ ಸಿನಿಮಾ ಹಾಡಿಗೆ ಧ್ವನಿ ಕೊಟ್ಟ ಬಿ ಜಯಶ್ರೀ – Kannada News | B Jayashree sang a song for Prajwal Devaraj’s Karavali movie

ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗಲಾಟೆ ನಡೆಸಿದ ಕಾರಣ ಸಖತ್ ಸುದ್ದಿ ಆಗಿತ್ತು. ಅದೇ ದಿನ ಬಿಡುಗಡೆ ಆದ ಟ್ರೈಲರ್ ಸಹ ಪ್ರೇಕ್ಷಕರ ಗಮನ ಸೆಳೆದಿತ್ತು. ಈಗಾಗಲೇ ಹಲವು ಒಳ್ಳೆಯ ಪ್ರತಿಭಾವಂತರು ಸಿನಿಮಾದ ಜೊತೆಗಿದ್ದಾರೆ. ಇದೀಗ ಆ ತಂಡಕ್ಕೆ ಮತ್ತೊಂದು ದೈತ್ಯ ಪ್ರತಿಭೆ ಸೇರ್ಪಡೆ ಆಗಿದೆ. ಅವರೇ ಬಿ ಜಯಶ್ರೀ. ಖ್ಯಾತ ಗಾಯಕಿ, ರಂಗಭೂಮಿ ಪ್ರವೀಣೆ, ನಟಿ ಜಯಶ್ರೀ ಅವರು ಇದೀಗ ‘ಕರಾವಳಿ’ ಸಿನಿಮಾಕ್ಕಾಗಿ ಹಾಡೊಂದನ್ನು ಹಾಡಿದ್ದಾರೆ.

ಈ ಹಿಂದೆ ಕೆಲವಾರು ಕನ್ನಡ ಸಿನಿಮಾಗಳನ್ನು ಹಾಡಿರುವ ಜಯಶ್ರೀ ಅವರು ಸಿನಿಮಾ ಗೀತೆಯೊಂದನ್ನು ಹಾಡಿ ಬಹಳ ವರ್ಷಗಳೇ ಆಗಿದ್ದವು. ಇದೀಗ ಹಲವು ವರ್ಷಗಳ ಬ್ರೇಕ್ ಬಳಿಕ ಜಯಶ್ರೀ ಅವರು ಮತ್ತೆ ಸಿನಿಮಾ ಹಾಡಿಗೆ ಧ್ವನಿ ನೀಡಿದ್ದಾರೆ ಅದೂ ‘ಕರಾವಳಿ’ ಸಿನಿಮಾ ಮೂಲಕ. ಜಯಶ್ರೀ ಅವರು ಸಿನಿಮಾಕ್ಕಾಗಿ ಹಾಡು ರೆಕಾರ್ಡ್ ಮಾಡುತ್ತಿರುವ ವಿಡಿಯೋ ಒಂದನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆದರೆ ಹಾಡು ಯಾವುದೆಂಬ ಸುಳಿವು ವಿಡಿಯೋನಲ್ಲಿ ಇಲ್ಲ.

ಎಲ್ಲ ರೀತಿಯ ಹಾಡುಗಳನ್ನು ಲೀಲಾಜಾಲವಾಗಿ ಹಾಡಬಲ್ಲ ಜಯಶ್ರೀ ಅವರು ‘ಕರಾವಳಿ’ ಸಿನಿಮಾಕ್ಕೆ ಯಾವ ರೀತಿಯ ಹಾಡು ಹಾಡಿದ್ದಾರೆ ಎಂಬ ಕುತೂಹಲ ಇದೆ. ಸಚಿನ್ ಬಸ್ರೂರು ಸಂಯೋಜನೆ ಮಾಡಿರುವ ಹಾಡನ್ನು ಜಯಶ್ರೀ ಹಾಡಿದ್ದಾರೆ. ಹಾಡು ಈಗಾಗಲೇ ರೆಕಾರ್ಡ್ ಆಗಿದ್ದು, ಜಯಶ್ರೀ ಅವರು ಬಹಳ ಖುಷಿಯಿಂದಲೇ ಹಾಡು ಹಾಡಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ನಿಂತ ಮೇಘನಾ ರಾಜ್

ಕೆಲವು ಅತ್ಯುತ್ತಮ ಹಾಡುಗಳನ್ನು ಜಯಶ್ರೀ ಅವರು ಹಾಡಿದ್ದಾರೆ. ‘ಕಾರ್ ಕಾರ್’, ‘ಬೀಳ್ತಾವ್ ನೋಡೀಗ ಕವ್ವಾತಗಳು’, ‘ಚಕ್ಕೋತ ಬೇಕಿತ್ತ’, ‘ಬೋಂಡಾನ ಡುಮ್ಮಿನ’, ‘ರಂಬೆ ನಾ ವಯ್ಯಾರದ ರಂಬೆ’ ಇನ್ನೂ ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾ ಹಾಡುಗಳಿಗೆ ಜಯಶ್ರೀ ಧ್ವನಿ ನೀಡಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಜಯಶ್ರೀ ಅವರು ಕನ್ನಡ ಸಿನಿಮಾಗಳಿಗೆ ಹಾಡಿರಲಿಲ್ಲ. ರಂಗಗೀತೆಗಳಲ್ಲಿ ಮಾತ್ರವೇ ಅವರ ಧ್ವನಿ ಕೇಳುತ್ತಿತ್ತು. ಇದೀಗ ‘ಕರಾವಳಿ’ ಸಿನಿಮಾ ಮೂಲಕ ಅವರು ಮತ್ತೆ ಕನ್ನಡ ಸಿನಿಮಾ ಹಾಡುಗಳ ಹಾಡಲು ಮರಳಿದಂತಾಗಿದೆ.

ಈಗಾಗಲೇ ‘ಕರಾವಳಿ’ ಸಿನಿಮಾದ ಎರಡು ಹಾಡುಗಳು ಬಿಡುಗಡೆ ಆಗಿದ್ದು, ಎರಡೂ ಸಹ ಗಮನ ಸೆಳೆದಿವೆ. ‘ಕರಾವಳಿ’ ಸಿನಿಮಾಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ಸಂಪದಾ, ಸುಷ್ಮಿತಾ ಬಣ್ಣ ಹಚ್ಚಿದ್ದಾರೆ. ಇನ್ನು ಉಳಿದಂತೆ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ – Kannada News | Police Violate Rules During Removal of Abandoned Vehicles from Roadsides

ಬೆಂಗಳೂರು, ಜುಲೈ 11: ಬೆಂಗಳೂರಿನ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಶಾಶ್ವತವಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಮತ್ತು ಬೆಂಗಳೂರು ಸಂಚಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಈ ನಡುವೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳ ಮುಂಭಾಗದಲ್ಲಿಯೇ ನಿಯಮಬಾಹಿರವಾಗಿ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂದಿದೆ. ಸಾರ್ವಜನಿಕರಿಗೆ ಅಕ್ರಮ ವಾಹನ ನಿಲುಗಡೆಗೆ ನೋಟಿಸ್ ನೀಡಿ, ತೆರವುಗೊಳಿಸಲು ಸೂಚಿಸುವ ಪೊಲೀಸರೇ ತಮ್ಮ ಠಾಣೆಗಳ ಮುಂದೆ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮ ವಾಹನ ನಿಲುಗಡೆಗೆ ನೋಟಿಸ್, ಕ್ಲಾಂಪ್, ಟೋಯಿಂಗ್ ಮತ್ತು ನಂತರ ಹರಾಜು ಪ್ರಕ್ರಿಯೆಗಳ ಬಗ್ಗೆ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಅಚ್ಚರಿಯ ಹೇಳಿಕೆ ನೀಡಿದ ಹುಬ್ಬಳ್ಳಿ ಕಿಮ್ಸ್‌ ವೈದ್ಯರು – Kannada News | Hubballi Minor Childbirth: KIMS Provides Care, Police Launch Investigation

ಹುಬ್ಬಳ್ಳಿ, ಜು.11: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತೀವ್ರ ಆಘಾತ ಮೂಡಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ 14 ವರ್ಷ 3 ತಿಂಗಳ ಪ್ರಾಯದ ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಾಗಿದ್ದಾಳೆ. ಬಾಲಕಿಯ ವಯಸ್ಸು ತೀರಾ ಚಿಕ್ಕದಾಗಿರುವುದರಿಂದ ಆಕೆಗೆ ಸದ್ಯ ಕಿಮ್ಸ್ ಆಸ್ಪತ್ರೆಯ ಅತ್ಯಂತ ಸುರಕ್ಷಿತವಾದ ‘ನಿರ್ಭಯಾ ವಾರ್ಡ್’ನಲ್ಲಿ (Nirbhaya Ward) ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ ಸಹಾಯಕ ವೈದ್ಯಕೀಯ ಅಧೀಕ್ಷಕರಾದ ಡಾ. ರಾಜಶೇಖರ ದ್ಯಾಬೇರಿ ಅವರು ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. “ಜುಲೈ 8ರಂದು ಈ ಅಪ್ರಾಪ್ತ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ. ಬಾಲಕಿಗೆ ಮನೆಯಲ್ಲಿಯೇ ಹೆರಿಗೆಯಾಗಿರುವ ಪ್ರಾಥಮಿಕ ಮಾಹಿತಿ ನಮಗೆ ಲಭ್ಯವಾಗಿದೆ. ಸದ್ಯಕ್ಕೆ ತಾಯಿ (ಅಪ್ರಾಪ್ತೆ) ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ,” ಎಂದು ವೈದ್ಯರು ತಿಳಿಸಿದ್ದಾರೆ. ಆಶ್ಚರ್ಯಕರ ಮತ್ತು ಅನುಮಾನಾಸ್ಪದ ಸಂಗತಿಯೆಂದರೆ, ಬಾಲಕಿ ಗರ್ಭಿಣಿಯಾಗಿದ್ದ ವಿಷಯವಾಗಲಿ ಅಥವಾ ಆಕೆಗೆ ಹೆರಿಗೆಯಾಗಿರುವ ಕುರಿತಾಗಲಿ ಪೋಷಕರು ಆಸ್ಪತ್ರೆಯ ಇಲಾಖೆಗೆ ಮುಂಚಿತವಾಗಿ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಅಷ್ಟೇ ಅಲ್ಲದೆ, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಅಪ್ರಾಪ್ತ ಬಾಲಕಿಯ ಜೊತೆಗೆ ಸದ್ಯಕ್ಕೆ ಆಕೆಯ ಪಾಲಕರು ಯಾರೂ ಇಲ್ಲದಿರುವುದು ಇಡೀ ಪ್ರಕರಣದ ಸುತ್ತ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಬಿಜೆಪಿ ಆರೋಪಗಳಿಗೆ ಪರಮೇಶ್ವರ್ ತಿರುಗೇಟು – Kannada News | Karnataka Deputy CM G. Parameshwara Defends Permanent Residency Certificates Amid BJP Allegations

ಬೆಂಗಳೂರು, ಜುಲೈ 11: ‘‘ಕೇಂದ್ರ ಸರ್ಕಾರ ಎಂದಿಗೂ ಜಾತಿ ಪ್ರಮಾಣಪತ್ರಗಳನ್ನು ನೀಡಿಲ್ಲ. ರಾಜ್ಯ ಸರ್ಕಾರವೇ ಇಲ್ಲಿಯವರೆಗೆ ಅವುಗಳನ್ನು ನೀಡಿದೆ. ಇದೀಗ ವಾಸಸ್ಥಳ ಪ್ರಮಾಣಪತ್ರಗಳನ್ನು ಆಧಾರ್ ಕಾರ್ಡ್‌ನಂತಹ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ತಪ್ಪು ಇಲ್ಲ’’ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ನೀಡುತ್ತಿರುವ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಣೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ‘‘ನಾವಣಾ ಆಯೋಗವು ಎಸ್‌ಐಆರ್‌ಗೆ 13 ಮಾನದಂಡಗಳನ್ನು ನಿಗದಿಪಡಿಸಿದ್ದು, ಅದರಲ್ಲಿ ವಾಸಸ್ಥಳದ ಪ್ರಶ್ನೆ ಕೂಡ ಇದೆ. ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ, ಹಿಂದೆ ಜಾತಿ ಪ್ರಮಾಣಪತ್ರಗಳನ್ನು ನೀಡಿದಂತೆಯೇ ಇದೀಗ ವಾಸಸ್ಥಳ ಪ್ರಮಾಣಪತ್ರವನ್ನು ನೀಡುತ್ತಿದೆ’’ ಎಂದರು. ‘‘ಸುಮಾರು 50-60 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರಗಳಿಲ್ಲದೆ ಸಿಇಟಿಯಂತಹ ಪರೀಕ್ಷೆಗಳಲ್ಲಿ ಸಮಸ್ಯೆಗಳಾಗಿದ್ದವು. ವಾಸಸ್ಥಳ ಪ್ರಮಾಣಪತ್ರದಲ್ಲಿ ಜಾತಿ ಉಲ್ಲೇಖಿಸುವುದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ’’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NEP: ಭಾರತ- ನೇಪಾಳ ನಡುವೆ ಟಿ20 ಸರಣಿ; ವೇಳಾಪಟ್ಟಿ ಪ್ರಕಟ – Kannada News | India A to Tour Nepal for 3 T20s in Dec: Match Schedule and Team News

ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತ ಎ ತಂಡ ನೇಪಾಳ ಪ್ರವಾಸ ಮಾಡಲಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಉಭಯ ತಂಡಗಳ ನಡುವೆ ಈ ಸರಣಿ ನಡೆಯಲಿದ್ದು, ನೇಪಾಳ ಕ್ರಿಕೆಟ್ ಸಂಸ್ಥೆ ಭಾರತ ಎ ತಂಡದ ಪ್ರವಾಸವನ್ನು ಖಚಿತಪಡಿಸಿದೆ. ಎರಡು ತಂಡಗಳ ನಡುವಿನ ಈ ಸರಣಿ ಡಿಸೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ನಡೆಯಲಿದ್ದು, ಈ ಸರಣಿಯ ವೇಳಾಪಟ್ಟಿಯನ್ನು ಸಹ ನೇಪಾಳ ಕ್ರಿಕೆಟ್ ಸಂಸ್ಥೆ ಬಿಡುಗಡೆ ಮಾಡಿದೆ. ನೇಪಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಚತುರ್ ಬಹದ್ದೂರ್ ಚಂದ್, ಕಾರ್ಯದರ್ಶಿ ಪರಾಸ್ ಖಡ್ಕಾ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್ ಸೈಕಿಯಾ ನಡುವಿನ ಸಭೆಯ ನಂತರ ದ್ವಿಪಕ್ಷೀಯ ಸರಣಿಯ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೀರ್ತಿಪುರದ ತ್ರಿಭುವನ್ ವಿಶ್ವವಿದ್ಯಾಲಯದ TU ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳ ನಡುವೆ ಮೂರು ಟಿ20 ಪಂದ್ಯಗಳು ನಡೆಯಲಿವೆ.

ಟಿ20 ಸರಣಿ ವೇಳಾಪಟ್ಟಿ ಇಂತಿದೆ

ಡಿಸೆಂಬರ್ 9 – ಮೊದಲ ಟಿ20

ಡಿಸೆಂಬರ್ 11 – ಎರಡನೇ ಟಿ20

ಡಿಸೆಂಬರ್ 13 – ಮೂರನೇ ಟಿ20

ವೈಭವ್ ಸೇರಿದಂತೆ ಯುವ ಆಟಗಾರರಿಗೆ ಅವಕಾಶ

ಈ ಪ್ರವಾಸಕ್ಕೆ ಬಿಸಿಸಿಐ ಇನ್ನು ತಂಡವನ್ನು ಪ್ರಕಟಿಸಿಲ್ಲ. ಆದರೆ ವರದಿಯ ಪ್ರಕಾರ, ಐಪಿಎಲ್‌ನಲ್ಲಿ ಮಿಂಚಿದ ಆಟಗಾರರು ಮತ್ತು ಟಿ20 ತಂಡದಲ್ಲಿ ಆಡಿದ ಕೆಲವು ಹಿರಿಯ ಆಟಗಾರರನ್ನು ಈ ಪ್ರವಾಸಕ್ಕೆ ಕಳುಹಿಸಬಹುದು. ಅಂದರೆ ನೇಪಾಳ ಪ್ರವಾಸಕ್ಕೆ ಭಾರತ ಎ ತಂಡದಲ್ಲಿ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡುವುದು ಖಚಿತವೆನ್ನಬಹುದು. ವೈಭವ್ ಜೊತೆಗೆ ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್, ಆಯುಷ್ ಮ್ಹಾತ್ರೆ ಸೇರಿದಂತೆ ಇನ್ನು ಹಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ವಿಶ್ವಕಪ್​ನಲ್ಲಿ ಗಮನಾರ್ಹ ಪ್ರದರ್ಶನ

ಭಾರತ ಎ ತಂಡದೊಂದಿಗಿನ ಈ ಸರಣಿ ನೇಪಾಳ ಕ್ರಿಕೆಟ್ ತಂಡದ ಬೆಳವಣಿಗೆಗೆ ದೊಡ್ಡ ಅವಕಾಶ ಕಲ್ಪಿಸಿಕೊಡಲಿದೆ. ನೇಪಾಳ ತಂಡ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ಹಿಂದಿನ ಎರಡೂ ಟಿ20 ವಿಶ್ವಕಪ್‌ಗಳಿಗೆ ನೇಪಾಳ ಅರ್ಹತೆ ಪಡೆದಿತ್ತು. 2024 ರ ವಿಶ್ವಕಪ್‌ನಲ್ಲಿ ನೇಪಾಳ ಒಂದೇ ಒಂದು ಗೆಲುವು ದಾಖಲಿಸಿರಲಿಲ್ಲ. ಆದರೆ 2026 ರ ವಿಶ್ವಕಪ್‌ನಲ್ಲಿ ತನ್ನ ಪ್ರದರ್ಶನವನ್ನು ಸುಧಾರಿಸಿಕೊಂಡಿದ್ದ ನೇಪಾಳ, ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿತ್ತು. ಹಾಗೆಯೇ ಇಂಗ್ಲೆಂಡ್ ತಂಡಕ್ಕೂ ಸೋಲಿನ ಭಯ ಹುಟ್ಟಿಸಿತ್ತು. ಆದರೆ ಕೇವಲ 4 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Charanamrita and Panchamrita: ದೇವರಿಗೆ ಅರ್ಪಿಸುವ ಚರಣಾಮೃತ ಮತ್ತು ಪಂಚಾಮೃತ ನಡುವಿನ ವ್ಯತ್ಯಾಸ ಇಲ್ಲಿ ತಿಳಿಯಿರಿ – Kannada News | Charanamrita vs Panchamrita: Understanding the Divine Difference and Spiritual Significance

ದೇವರಿಗೆ ಹಣ್ಣು, ಹೂವು ಹಾಗೂ ವಿಧವಿಧದ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸುವುದು ನಮ್ಮ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪೂಜೆಯ ವಿಧಿವಿಧಾನಗಳು ಮುಗಿದ ನಂತರ ಭಕ್ತರಿಗೆ ಪ್ರಸಾದದ ರೂಪದಲ್ಲಿ ‘ಚರಣಾಮೃತ’ ಅಥವಾ ‘ಪಂಚಾಮೃತ‘ವನ್ನು ನೀಡುವುದು ವಾಡಿಕೆ. ಆದರೆ, ನಮ್ಮಲ್ಲಿ ಅನೇಕರು ಇವೆರಡೂ ಒಂದೇ ಎಂದು ತಪ್ಪಾಗಿ ಭಾವಿಸುತ್ತಾರೆ ಮತ್ತು ಇವೆರಡರ ಹೆಸರನ್ನು ಒಂದಕ್ಕೊಂದು ಬದಲಾಯಿಸಿ ಬಳಸುತ್ತಾರೆ. ಆದರೆ ಸನಾತನ ಧರ್ಮಗ್ರಂಥಗಳ ಪ್ರಕಾರ, ಇವೆರಡೂ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ತಮ್ಮದೇ ಆದ ವಿಶೇಷ ಮಹತ್ವ ಮತ್ತು ತಯಾರಿಕಾ ವಿಧಾನವನ್ನು ಹೊಂದಿವೆ.

ಚರಣಾಮೃತ ಎಂದರೇನು ಮತ್ತು ಅದರ ಧಾರ್ಮಿಕ ಮಹತ್ವವೇನು?

‘ಚರಣಾಮೃತ’ ಎಂಬ ಪದದಲ್ಲೇ ಅದರ ಅರ್ಥ ಅಡಗಿದೆ. ಚರಣ ಎಂದರೆ ಪಾದ, ಅಮೃತ ಎಂದರೆ ದಿವ್ಯ ಜಲ. ಅಂದರೆ ಭಗವಂತನ ಪಾದಗಳ ಅಮೃತ ಅಥವಾ ಪಾದೋದಕವನ್ನೇ ಚರಣಾಮೃತ ಎಂದು ಕರೆಯಲಾಗುತ್ತದೆ. ದೇವರ ವಿಗ್ರಹಕ್ಕೆ ಅಭಿಷೇಕ ಮಾಡುವಾಗ ಭಗವಂತನ ಪಾದಗಳನ್ನು ಸ್ಪರ್ಶಿಸಿ ಹರಿಯುವ ಪವಿತ್ರ ಜಲವೇ ಇದು. ಇದನ್ನು ತಯಾರಿಸಲು ಪ್ರಮುಖವಾಗಿ ಶುದ್ಧ ನೀರು, ಗಂಗಾಜಲ, ಶ್ರೀಗಂಧ ಮತ್ತು ತುಳಸಿ ದಳಗಳನ್ನು ಬಳಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ ಪಾದದ ಸ್ಪರ್ಶವಾಗಿರುವ ಈ ಪವಿತ್ರ ತೀರ್ಥವನ್ನು ಸೇವಿಸುವುದರಿಂದ ಭಕ್ತರ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ದುಷ್ಟ ಶಕ್ತಿಗಳು ನಾಶವಾಗಿ ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.

ಪಂಚಾಮೃತ ಎಂದರೇನು ಮತ್ತು ಅದರ ತಯಾರಿಕಾ ವಿಧಾನ?

‘ಪಂಚಾಮೃತ’ ಎಂದರೆ ಐದು ಪವಿತ್ರ ಅಮೃತ ಸದೃಶ್ಯ ವಸ್ತುಗಳ ಮಿಶ್ರಣ ಎಂದರ್ಥ. ಇದನ್ನು ದೇವತೆಗಳ ಪೂಜೆ ಮತ್ತು ಶಾಸ್ತ್ರೋಕ್ತ ಅಭಿಷೇಕಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾಗುತ್ತದೆ. ಪಂಚಾಮೃತವನ್ನು ತಯಾರಿಸಲು ಹಸುವಿನ ಹಾಲು, ಮೊಸರು, ಶುದ್ಧ ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ (ಅಥವಾ ಕಲ್ಲುಸಕ್ಕರೆ) ಎಂಬ ಐದು ಮುಖ್ಯ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ಐದು ಪದಾರ್ಥಗಳ ಮಿಶ್ರಣದಿಂದ ದೇವತೆಗಳಿಗೆ ಅಭಿಷೇಕ ಮಾಡಿದ ನಂತರ, ಅದನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ. ಈ ಪ್ರಸಾದವನ್ನು ಸ್ವೀಕರಿಸುವುದರಿಂದ ದೇವತೆಗಳ ದಿವ್ಯ ಆಶೀರ್ವಾದ ಮತ್ತು ಕೃಪೆ ಸದಾ ನಮ್ಮೊಂದಿಗೆ ಇರುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ಉಳಿದ ಚರಣಾಮೃತ ಅಥವಾ ಪಂಚಾಮೃತವನ್ನು ಏನು ಮಾಡಬೇಕು?

ಪೂಜೆ ಮುಗಿದ ನಂತರ ಚರಣಾಮೃತ ಅಥವಾ ಪಂಚಾಮೃತವು ಉಳಿದರೆ, ಅದನ್ನು ಎಂದಿಗೂ ಬೇಡವೆಂದು ಸಿಂಕ್‌ಗೆ ಅಥವಾ ಚರಂಡಿಗೆ ಸುರಿಯಬಾರದು. ಈ ಪವಿತ್ರ ಪ್ರಸಾದವನ್ನು ಹಾಗೆ ಸುರಿಯುವುದು ದೈವ ನಿಂದನೆಯಾಗುತ್ತದೆ ಮತ್ತು ಇದರಿಂದ ಜೀವನದಲ್ಲಿ ಅಶುಭ ಫಲಗಳು ಎದುರಾಗಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪೂಜೆಯ ನಂತರ ಉಳಿಯುವ ಚರಣಾಮೃತ ಅಥವಾ ಪಂಚಾಮೃತವನ್ನು ಅತ್ಯಂತ ಭಕ್ತಿಯಿಂದ ಮನೆಯಲ್ಲಿರುವ ತುಳಸಿ ಗಿಡದ ಬುಡಕ್ಕೆ ಅಥವಾ ಇತರ ಪವಿತ್ರ ಗಿಡಗಳ ಬೇರಿಗೆ ಅರ್ಪಿಸಬೇಕು. ಇದರಿಂದ ಅದರ ಪವಿತ್ರತೆಯನ್ನು ಗೌರವಿಸಿದಂತಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕಾವೇರಿ ನೀರು ಕಲುಷಿತ: ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್

ಬೆಂಗಳೂರು, ಜುಲೈ 11: ಬೆಂಗಳೂರಿನ ಯಲಹಂಕ ಬಳಿಯ ದೊಡ್ಡಬೆಟ್ಟಹಳ್ಳಿಯಲ್ಲಿ ಕಾವೇರಿ ನೀರು ಕಲುಷಿತಗೊಂಡಿದ್ದು, ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಖಾಸಗಿ ಕಂಪನಿ ನಡೆಸುತ್ತಿದ್ದ ಪೈಪ್‌ಲೈನ್ ಕಾಮಗಾರಿಯ ವೇಳೆ ಕಾವೇರಿ ನೀರು ಪೂರೈಕೆ ಪೈಪ್​ಲೈನ್​ಗೆ ಹಾನಿಯಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಪರಿಣಾಮವಾಗಿ, ಹಲವು ಮನೆಗಳಿಗೆ ಮಣ್ಣು ಮಿಶ್ರಿತ ಹಾಗೂ ಕಪ್ಪು ಬಣ್ಣದ ನೀರು ಪೂರೈಕೆಯಾಗಿದ್ದು, ಸಂಪ್ ಮತ್ತು ವಾಟರ್ ಟ್ಯಾಂಕ್‌ಗಳಲ್ಲಿ ಸಂಗ್ರಹಗೊಂಡಿದೆ.

ಸಮಸ್ಯೆಯು ಯಲಹಂಕದ ಅಟ್ಟೂರು ವಾರ್ಡ್, ದೊಡ್ಡಬೆಟ್ಟಹಳ್ಳಿ ಮತ್ತು BHEL ಲೇಔಟ್ ಸುತ್ತಮುತ್ತಲಿನ ಸುಮಾರು 500 ಮನೆಗಳ ಮೇಲೆ ಪರಿಣಾಮ ಬೀರಿದೆ. ಮನೆಗಳಿಗೆ ಕುಡಿಯಲು, ಅಡುಗೆ ಮಾಡಲು ಮತ್ತು ಸ್ನಾನ ಮಾಡಲು ಇದೇ ನೀರನ್ನು ಬಳಸುತ್ತಿದ್ದು, ಈಗ ಶುದ್ಧ ನೀರಿನ ಕೊರತೆ ಎದುರಾಗಿದೆ. ಸದ್ಯ, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ. ಆದರೆ, ನಿವಾಸಿಗಳು ನೀರಿನ ಗುಣಮಟ್ಟದ ಕುರಿತು ಜಲಮಂಡಳಿ ಅಧಿಕಾರಿಗಳಿಂದ ಸ್ಪಷ್ಟನೆ ಮತ್ತು ಪರೀಕ್ಷೆ ನಡೆಸಿ ಭರವಸೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಜಲಕ್ಷಾಮದ ಭೀತಿ ಎದುರಾಗಿರುವ ಸನ್ನಿವೇಶದಲ್ಲಿ ಈ ರೀತಿಯ ಎಡವಟ್ಟುಗಳು ಬೆಂಗಳೂರಿನ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ – Kannada News | Fake Gold Pledge Racket Unearthed in Shivamogga; Five Accused, Kingpin Absconding

ಶಿವಮೊಗ್ಗ, ಜುಲೈ 11: ಶಿವಮೊಗ್ಗ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳಿಗೆ ಬರೋಬ್ಬರಿ 28.87 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಹೋದರರಾದ ರಾಹುಲ್ ಮತ್ತು ಲೋಕೇಶ್‌ ಸೇರಿ ಐವರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ತೀರ್ಥಹಳ್ಳಿಯ ಬಗ್ಗೋಡಿ ನಿವಾಸಿಗಳಾದ ರಾಹುಲ್ ಮತ್ತು ಲೋಕೇಶ್‌, ಮವಲಗೊಪ್ಪದ ಸುಧಾ, ರವಿಶಂಕರ್ ಮತ್ತು ಶರತ್‌ ಈ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸುಮಾರು ಅರ್ಧ ಕೆ.ಜಿ. ನಕಲಿ ಚಿನ್ನವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ನವೀಕರಿಸಲು ಬಾರದೆ ಇದ್ದಾಗ, ಬ್ಯಾಂಕ್ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ. ಕೂಡಲೇ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಲೋಕೇಶ್‌ನನ್ನು ಬಂಧಿಸಿದ್ದಾರೆ. ಆದರೆ, ಕಿಂಗ್‌ಪಿನ್‌ ಎನ್ನಲಾದ ರಾಹುಲ್ ಸೇರಿದಂತೆ ಸುಧಾ, ರವಿಶಂಕರ್ ಮತ್ತು ಶರತ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version