TV9 Kannada News Live: ಎಲ್ಲೆಡೆ ಬರಗಾಲದ ತೀವ್ರತೆ, ಕಂಗಾಲಾದ ಅನ್ನದಾತ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 17 July 2026 CM DK Shivakumar, Karnataka Cabinet Expansion, Weather, Rain, SIR Latest Updates in Kannada

Breaking News Today Live Updates in Kannada: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ರೈತರು ಹಾಗೂ ಕರಾವೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರ್ಕಾರ ಕೇವಲ ಕುಡಿಯುವ ನೀರು ಬಿಡುಗಡೆ ಮಾಡಿದೆ. ಇತ್ತ ಯಾದಗಿರಿಯಲ್ಲಿ ಒಣಗುತ್ತಿರುವ ಬೆಳೆಗಳು, ಚಿತ್ರದುರ್ಗದಲ್ಲಿ ಬತ್ತಿದ ಬೋರ್‌ವೆಲ್‌ಗಳು ಹಾಗೂ ವಿಜಯನಗರದ ಮಳೆ ಅಭಾವ ರೈತರನ್ನು ಕಂಗಾಲುಗೊಳಿಸಿದೆ. ಬರ ಪರಿಹಾರಕ್ಕಾಗಿ ಡಿಸಿಎಂ ಪರಮೇಶ್ವರ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇನ್ನು ಕೊಪ್ಪಳದಲ್ಲಿ ಮಳೆಗಾಗಿ ಹರಕೆ ಹೊತ್ತ ಬೆನ್ನಲ್ಲೇ ಮಳೆರಾಯ ತಂಪೆರೆದಿದ್ದಾನೆ. ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತ ಜಾಗತಿಕವಾಗಿ, ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾಕಿ ಉಗ್ರ ಸಂಘಟನೆ 84 ಕೋಟಿ ರೂ. ಬಹುಮಾನ ಘೋಷಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ಟಿಕೆಟ್ ಬೆಲೆ ನಿರ್ಧರಿಸುವ ಹಕ್ಕು ನಿರ್ಮಾಪಕರಿಗೆ: ತೆಲುಗು ರಾಜ್ಯಗಳಲ್ಲಿ ಹೊಸ ಬೇಡಿಕೆ – Kannada News | Flexible pricing for movie ticket in Andhra and Telangana

ಸಿನಿಮಾ (Cinema) ಟಿಕೆಟ್ ಬೆಲೆ, ಶೋ ಟೈಮಿಂಗ್ಸ್, ಶೋ ಸಂಖ್ಯೆ, ಲಾಭ ಹಂಚಿಕೆ ಇನ್ನಿತರೆಗಳ ಕುರಿತಾಗಿ ಆಂಧ್ರ ಮತ್ತು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ತಿಂಗಳುಗಳಿಂದಲೂ ಚರ್ಚೆ, ವಾಗ್​ವಾದ ನಡೆಯುತ್ತಲೇ ಇದೆ. ಈಗ ಪ್ರತಿ ಬಾರಿ ಸಿನಿಮಾ ಬಿಡುಗಡೆ ಆಗುವಾಗಲೂ ನಿರ್ಮಾಪಕರು, ವಿತರಕರು ಸರ್ಕಾರ ಬಳಿ ಅರ್ಜಿ ಹಾಕಿಕೊಳ್ಳಬೇಕಿದೆ. ಸರ್ಕಾರಗಳು ಆದೇಶದಂತೆ ನಿಗದಿತ ದಿನಗಳ ಮಟ್ಟಿಗೆ ಟಿಕೆಟ್ ಬೆಲೆ ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಈ ಅವಕಾಶ ಎಲ್ಲ ಸಿನಿಮಾಗಳಿಗೂ ಇರುವುದಿಲ್ಲ ಬದಲಿಗೆ ಕೆಲ ದೊಡ್ಡ ಸಿನಿಮಾಗಳಿಗೆ ಮಾತ್ರವೇ ಇದರ ಲಾಭ ದೊರಕುತ್ತಿದೆ. ಆದರೆ ಈಗ ನಿರ್ಮಾಪಕರು ಸ್ವತಂತ್ರ್ಯವಾಗಿ ತಮ್ಮ ಸಿನಿಮಾಗಳಿಗೆ ಟಿಕೆಟ್ ದರ ನಿಗದಿಕೊಳಿಸಿಕೊಳ್ಳುವ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕರು ಒತ್ತಾಯಿಸಿದ್ದಾರೆ.

ಅದರಲ್ಲೂ ಎರಡೂ ರಾಜ್ಯಗಳ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಸಿನಿಮಾದ ನಿರ್ಮಾಪಕರೇ ನಿಗದಿ ಪಡಿಸುವಂತೆ ಆದೇಶವನ್ನು ಹೊರಡಿಸಬೇಕು ಎಂದು ನಿರ್ಮಾಪಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅಸಲಿಗೆ ಸರ್ಕಾರಗಳು ಸಹ ಈ ಬಗ್ಗೆ ಯೋಚನೆ ನಡೆಸುತ್ತಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಒಂದು ಹಂತದ ಚರ್ಚೆ ಸಹ ನಡೆದಿದೆ.

150 ರೂ ನಿಂದ ಹಿಡಿದು 300 ರೂಪಾಯಿ ವರೆಗೆ ಸಿಂಗಲ್ ಸ್ಕ್ರೀನ್​​ ಚಿತ್ರಮಂದಿರದ ಟಿಕೆಟ್ ದರ ನಿಗದಿಪಡಿಸಿಕೊಳ್ಳುವ ಹಕ್ಕನ್ನು ಸರ್ಕಾರಗಳು ನಿರ್ಮಾಪಕರಿಗೆ ನೀಡಲಿದೆ ಎನ್ನಲಾಗುತ್ತಿದೆ. ಯಾವುದೇ ಸಿನಿಮಾಕ್ಕೆ ಕನಿಷ್ಟ 150 ರೂಪಾಯಿಯಿಂದ 300 ರೂಪಾಯಿ ವರೆಗೆ ಟಿಕೆಟ್ ದರವನ್ನು ನಿರ್ಮಾಪಕರು ನಿಗದಿಪಡಿಸಿಕೊಳ್ಳಬಹುದಾಗಿರುತ್ತದೆ. ಇದರಿಂದ ನಿರ್ಮಾಪಕರು, ಚಿತ್ರಮಂದಿರ ಮಾಲೀಕರು ಮತ್ತು ವಿತರಕರು ಮೂವರಿಗೂ ಲಾಭ ಆಗಲಿದೆ.

ಇದನ್ನೂ ಓದಿ:‘ರಾಮಾಯಣ ಸಿನಿಮಾ ನೋಡಬೇಡಿ’; ಆಸ್ಟ್ರೇಲಿಯಾದಲ್ಲಿ 15 ವರ್ಷದೊಳಗಿನ ಮಕ್ಕಳಿಗೆ ಸಲಹೆ; ಕಾರಣ ಏನು?

ಆದರೆ ಈ ಹಿಂದೆ ತೆಲಂಗಾಣದಲ್ಲಿ ಕೆಟಿಆರ್ ಸರ್ಕಾರವಿದ್ದಾಗ ಇದೇ ಮಾದರಿಯ ಅಧಿಕಾರ ನಿರ್ಮಾಪಕರಿಗೆ ಇತ್ತು. ಆದರೆ ಎಲ್ಲ ನಿರ್ಮಾಪಕರು ಸಹ ಗರಿಷ್ಠ ಟಿಕೆಟ್ ದರವನ್ನೇ ತಮ್ಮ ಸಿನಿಮಾಗಳಿಗೆ ನಿಗದಿ ಮಾಡಿದರು. ಸಣ್ಣ ಸಿನಿಮಾಗಳ ನಿರ್ಮಾಪಕರು ಸಹ ಗರಿಷ್ಠ ಟಿಕೆಟ್ ದರವನ್ನೇ ನಿಗದಿ ಮಾಡಿ, ಸಿನಿಮಾಗಳು ಫ್ಲಾಪ್ ಆದವು, ಸಿನಿಮಾ ಪ್ರೇಮಿಗಳಿಂದ ಟೀಕೆ ಎದುರಾಯ್ತು. ಸರ್ಕಾರಕ್ಕೂ ಟೀಕೆ ಎದುರಾಯ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆ ಆದೇಶವನ್ನು ಹಿಂಪಡೆಯಲಾಯ್ತು. ಈಗ ಸರ್ಕಾರದ ಅನುಮತಿ ಪಡೆದು ನಿಗದಿತ ದಿನಗಳ ವರೆಗೆ ಮಾತ್ರವೇ ಟಿಕೆಟ್ ದರವನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಆಂಧ್ರದಲ್ಲಿಯೂ ಬಹುತೇಕ ಇದೇ ಪದ್ಧತಿ ಜಾರಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published On – 8:21 am, Fri, 17 July 26

Source link

ಶಾಲೆಗಳಲ್ಲಿ ದೈಹಿಕ ಶಿಕ್ಷೆಗೆ ಸಂಪೂರ್ಣ ಬ್ರೇಕ್? ಕಟ್ಟುನಿಟ್ಟಿನ ಆದೇಶ ಹೊರಡಿಸಲು ಶಿಕ್ಷಣ ಇಲಾಖೆಗೆ ತಜ್ಞರ ಒತ್ತಾಯ – Kannada News | Ban Corporal Punishment in Karnataka Schools: Experts Urge Education Department to Issue Strict Guidelines

ಬೆಂಗಳೂರು, ಜುಲೈ 17: ಕರ್ನಾಟಕದ (Karnataka) ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ದೈಹಿಕ ಶಿಕ್ಷೆ ಮತ್ತು ಮಾನಸಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ಆರೋಪಗಳು ಕೇಳಿಬಂದಿದ್ದು, ಇದರ ತಡೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಒತ್ತಾಯ ಕೇಳಿಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೊಸುಂಬೆ ಅವರು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು, ಶಾಲೆಗಳಲ್ಲಿ ಯಾವುದೇ ರೀತಿಯ ದೈಹಿಕ ಶಿಕ್ಷೆ, ಅವಮಾನಕಾರಿ ಶಿಕ್ಷೆ ಅಥವಾ ಮಾನಸಿಕ ಕಿರುಕುಳವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸ್ಪಷ್ಟ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಅವಮಾನಕಾರಿ ಶಿಕ್ಷೆ ವಿಧಿಸುವಂಥ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯಲ್ಲೇ ಸ್ಪಷ್ಟ ನಿಷೇಧ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ (Right to Education Act) ಸೆಕ್ಷನ್ 17ರ ಪ್ರಕಾರ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ಹಾಗೂ ಮಾನಸಿಕ ಕಿರುಕುಳ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದಾಗ್ಯೂ, ಕೆಲವು ಶಾಲೆಗಳಲ್ಲಿ ಈ ಕಾನೂನು ಉಲ್ಲಂಘನೆಯಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಮತ್ತೊಮ್ಮೆ ಸ್ಪಷ್ಟ ಮಾರ್ಗಸೂಚಿ ನೀಡುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಶಿಕ್ಷಣ ಇಲಾಖೆಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಪ್ರತಿಕ್ರಿಯಿಸಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಹಾಗೂ ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿನ ಘಟನೆಗಳಿಂದ ಹೆಚ್ಚಿದ ಆತಂಕ

ಇತ್ತೀಚೆಗೆ ಬೆಂಗಳೂರಿನ ಮರಿಯಪ್ಪನಪಾಳ್ಯದ ಸೆಂಟ್ ಫಿಲೋಮಿನಾಸ್ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷೆಯ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಗೂ ಯಲಹಂಕದಲ್ಲಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣ ಸೇರಿದಂತೆ ಹಲವು ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಈ ಘಟನೆಗಳ ಬಳಿಕ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

ತಪ್ಪಿತಸ್ಥ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ರಾಜ್ಯ ಪೋಷಕರ ಸಮನ್ವಯ ಸಮಿತಿಯೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ಅಥವಾ ಮಾನಸಿಕ ಕಿರುಕುಳ ನೀಡುವ ಶಾಲೆಗಳು ಮತ್ತು ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಅಗತ್ಯವಿದ್ದರೆ ಅಂತಹ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸುವ ಕ್ರಮವನ್ನೂ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಯುಸಿ ಉಪನ್ಯಾಸಕರಿಂದ ಪಾಠ: ಸರ್ಕಾರದ ನಿರ್ಧಾರಕ್ಕೆ ವಿಜಯೇಂದ್ರ ವಿರೋಧ

ಶಾಲೆಗಳು ಶಿಕ್ಷಣ ನೀಡುವ ಸ್ಥಳವಾಗಿರಬೇಕೇ ಹೊರತು ಭಯ ಹುಟ್ಟಿಸುವ ಕೇಂದ್ರಗಳಾಗಬಾರದು ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಮಕ್ಕಳ ಸುರಕ್ಷತೆ, ಗೌರವ ಮತ್ತು ಮಾನಸಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಇನ್ನಷ್ಟು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆ ಇದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡೊನಾಲ್ಡ್​ ಟ್ರಂಪ್ ಕೊಂದವರಿಗೆ 84 ಕೋಟಿ ರೂ. ಕೊಡುತ್ತೇವೆ ಎಂದು ಬಹುಮಾನ ಘೋಷಿಸಿದ ಇರಾಕಿ ಉಗ್ರ ಸಂಘಟನೆ – Kannada News | Iraqi Militant Group Offers 10M Dollar Bounty for Donald Trump Assassination Amid US Iran Tensions

ಇರಾಕ್, ಜುಲೈ 17: ಅಮೆರಿಕ ಮತ್ತು ಮಧ್ಯಪ್ರಾಚ್ಯದ ನಡುವಿನ ಯುದ್ಧದ ಜ್ಚಾಲೆಗಳು ಈಗ ಅತ್ಯಂತ ವಿಕೋಪಕ್ಕೆ ತಿರುಗಿದೆ. ಇರಾಕ್(Iraq)​ನಲ್ಲಿ ಸಕ್ರಿಯವಾಗಿರುವ ಇರಾನ್ ಬೆಂಬಲಿತ ಪ್ರಬಲ ಸಶಸ್ತ್ರ ಸಂಘಟನೆ ‘ಇಸ್ಲಾಮಿಕ್ ರೆಸಿಸ್ಟೆನ್ಸ್’ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಂದವರಿಗೆ ಬರೋಬ್ಬರಿ 10 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 84 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ತಮ್ಮ ಸಂಘಟನೆಯ ಅಧಿಕೃತ ಸಾಮಾಜಿಕ ಮಾಧ್ಯಮ ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಬಿಡುಗಡೆ ಮಾಡಿರುವ ಆಘಾತಕಾರಿ ಹೇಳಿಕೆಯಲ್ಲಿ ಇದನ್ನು ಘೋಷಿಸಲಾಗಿದೆ.

ಇಸ್ಲಾಮಿಕ್ ಕಿಸಾಸ್ ನಿಯಮದ ಉಲ್ಲೇಖ

ಈ ಉಗ್ರಗಾಮಿ ಸಂಘಟನೆಯು ತನ್ನ ಅಧಿಕೃತ ಪ್ರಕಟಣೆಯನ್ನು ಪರಮ ದಯಾಳು, ಕರುಣಾಮಯಿ ಅಲ್ಲಾಹನ ಹೆಸರಿನಲ್ಲಿ ಎಂಬ ಇಸ್ಲಾಮಿಕ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದೆ. ಅಲ್ಲದೆ, ಪವಿತ್ರ ಕುರಾನ್‌ನ ವಚನವಾದ ಕಿಸಾಸ್ ಅನ್ನು ಉಲ್ಲೇಖಿಸಿ ಟ್ರಂಪ್ ಹತ್ಯೆಯನ್ನು ಸಮರ್ಥಿಸಿಕೊಂಡಿದೆ.

ಅಮೆರಿಕದ ಅಧ್ಯಕ್ಷ ಟ್ರಂಪ್ ತನ್ನ ದುರಹಂಕಾರದಿಂದ ನಮ್ಮ ಹೆಮ್ಮೆಯ ಹುತಾತ್ಮ ಕಮಾಂಡರ್‌ಗಳಾದ ಹಾಜಿ ಖಾಸಿಮ್ ಸೊಲೈಮಾನಿ ಮತ್ತು ಹಾಜಿ ಅಬು ಮಹ್ದಿ ಅಲ್ ಮುಹಂದಿಸ್ ಅವರ ರಕ್ತ ಹರಿಸಿದ್ದಾನೆ. ಇರಾಕಿನ ರಕ್ತವನ್ನು ಚೆಲ್ಲಿದ, ನಮ್ಮ ನಾಯಕರನ್ನು ಮತ್ತು ಮಕ್ಕಳನ್ನು ಕೊಂದ ಈ ಅಪರಾಧಿ ಟ್ರಂಪ್‌ನನ್ನು ಜಗತ್ತಿನ ಸ್ವತಂತ್ರ ಜನರು ಶಾಂತಿಯಿಂದ ಬದುಕಲು ಬಿಡುವುದಿಲ್ಲ. ಆತನ ತಲೆಗೆ ನಾವು 10 ಮಿಲಿಯನ್ ಡಾಲರ್ ಇನಾಮು ಇಟ್ಟಿದ್ದೇವೆ ಎಂದು ಸಂಘಟನೆ ಗುಡುಗಿದೆ. ದಬ್ಬಾಳಿಕೆಯ ಅಮೆರಿಕದ ಸಿಂಹಾಸನ ಉರುಳುವವರೆಗೂ ಈ ಹಗೆತನ ಮುಂದುವರಿಯಲಿದೆ ಎಂದು ಉಗ್ರರು ಶಪಥ ಮಾಡಿದ್ದಾರೆ.

ಹಗೆತನಕ್ಕೆ ಮೂಲ ಕಾರಣವೇನು?
ಈ ಭೀಕರ ಹತ್ಯೆಯ ಬೆದರಿಕೆಯ ಹಿಂದೆ 6 ವರ್ಷಗಳ ಹಳೆಯ ಸೇಡಿನ ಇತಿಹಾಸವಿದೆ.

ಬಾಗ್ದಾದ್ ಡ್ರೋನ್ ದಾಳಿ: 2020 ರ ಜನವರಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದ ಮೇರೆಗೆ, ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕದ ಸೇನೆ ಭೀಕರ ಡ್ರೋನ್ ದಾಳಿ ನಡೆಸಿತ್ತು.

ಮತ್ತಷ್ಟು ಓದಿ: Iran ಮೇಲೆ ಮತ್ತೊಂದು ಭೀಕರ ದಾಳಿಗೆ ಡೊನಾಲಡ್​ ಟ್ರಂಪ್ ಸಿದ್ಧತೆ: ಸಂಯಮ ಕಾಯ್ದುಕೊಳ್ಳಲು ಭಾರತದ ತುರ್ತು ಕರೆ

ಖಾಸಿಂ ಸುಲೈಮಾನಿ ಅಂತ್ಯ: ಈ ದಾಳಿಯಲ್ಲಿ ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಕಮಾಂಡರ್ ಜನರಲ್ ಖಾಸೆಮ್ ಸೊಲೈಮಾನಿ ಮತ್ತು ಇರಾಕಿನ ಮಿಲಿಟಿಯಾ ನಾಯಕ ಅಬು ಮಹ್ದಿ ಅಲ್ ಮುಹಂದಿಸ್ ಸ್ಥಳದಲ್ಲೇ ಹತರಾಗಿದ್ದರು. ಅಂದಿನಿಂದ ಇರಾನ್ ಮತ್ತು ಇರಾಕ್‌ನ ಸಶಸ್ತ್ರ ಗುಂಪುಗಳು ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರಂತರವಾಗಿ ಹೊಂಚು ಹಾಕುತ್ತಿವೆ.

ಕಮಾಂಡೋ ಕಾವಲಿನಲ್ಲಿ ಡೊನಾಲ್ಡ್ ಟ್ರಂಪ್

ಇರಾಕಿ ಸಂಘಟನೆಯ ಈ ಬಹಿರಂಗ ಸುಪಾರಿ ಪ್ರಕಟಣೆಯು ಅಮೆರಿಕದ ಗುಪ್ತಚರ ವಲಯದಲ್ಲಿ ಭಾರಿ ತಲ್ಲಣ ಮೂಡಿಸಿದೆ.

ಅಮೆರಿಕ ರಕ್ಷಣಾ ಪಡೆಗಳ ಅಲರ್ಟ್: ಶ್ವೇತಭವನವಾಗಲಿ ಅಥವಾ ಯುಎಸ್ ರಕ್ಷಣಾ ಇಲಾಖೆಯಾಗಲಿ ಈ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಮತ್ತು ಎಫ್‌ಬಿಐ ಈ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುತ್ತಲಿನ ಭದ್ರತೆಯನ್ನು ಅಭೂತಪೂರ್ವ ಮಟ್ಟಕ್ಕೆ ಬಿಗಿಗೊಳಿಸಿದೆ.

ಅಮೆರಿಕ ನೆಲದಲ್ಲೇ ಹತ್ಯೆ ಆತಂಕ: ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ಚುನಾವಣೆ ಹಾಗೂ ರ‍್ಯಾಲಿಗಳ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಸರಣಿ ಶೂಟೌಟ್ ಹಾಗೂ ಹತ್ಯೆ ಯತ್ನಗಳ ಹಿಂದೆ ಇರಾನ್ ಪ್ರೇರಿತ ‘ಸ್ಲೀಪರ್ ಸೆಲ್’ ಹಂತಕರ ಕೈವಾಡ ಇರಬಹುದೇ ಎಂಬ ಆತಂಕ ಹೆಚ್ಚಾಗಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳು ಇರಾಕ್ ಮೂಲದ ಉಗ್ರಗಾಮಿ ಶಿಬಿರಗಳ ಮೇಲೆ ಮತ್ತಷ್ಟು ಭೀಕರ ವೈಮಾನಿಕ ದಾಳಿಗಳನ್ನು ನಡೆಸುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಹೀರ್ ಇಕ್ಬಾಲ್ನ ಪ್ರೀತಿಸಿ ಸಲ್ಮಾನ್ ಖಾನ್ ಎದುರು ರೆಡ್​ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಸೋನಾಕ್ಷಿ ಸಿನ್ಹಾ

ಬಾಲಿವುಡ್ ಜೋಡಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಪ್ರೇಮಕಥೆ ಈಗ ಎಲ್ಲರಿಗೂ ಗೊತ್ತು. ಇತ್ತೀಚೆಗೆ ನೇಹಾ ಧೂಪಿಯಾ ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದ ಈ ದಂಪತಿ, ತಮ್ಮ ಪ್ರೀತಿಯ ವಿಷಯವನ್ನು ಸಲ್ಮಾನ್ ಖಾನ್ ಹೇಗೆ ಪತ್ತೆಹಚ್ಚಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ. ಸೋನಾಕ್ಷಿ ಮತ್ತು ಜಹೀರ್ ತಮ್ಮ ನಡುವೆ ಏನೂ ಇಲ್ಲ ಎಂದು ಎಷ್ಟು ಸುಳ್ಳು ಹೇಳಿದರೂ ಸಲ್ಮಾನ್ ಖಾನ್ ನಂಬಿರಲಿಲ್ಲ. ಇಬ್ಬರ ನಡುವಿನ ಒಡನಾಟವನ್ನು ನೋಡಿ ಸಲ್ಮಾನ್ ಮೊದಲೇ ಸತ್ಯ ತಿಳಿದುಕೊಂಡಿದ್ದರು.

ಬ್ರೇಕಪ್ ಬಗ್ಗೆ ಸಲ್ಮಾನ್ ತಮಾಷೆ

ಒಂದು ದಿನ ಸಲ್ಮಾನ್ ಈ ಜೋಡಿಗೆ ಎಚ್ಚರಿಕೆ ನೀಡಿದ್ದರು. ‘ಒಂದು ದಿನ ನೀವಿಬ್ಬರು ಬ್ರೇಕಪ್ ಮಾಡಿಕೊಳ್ಳುತ್ತೀರಾ. ಆಮೇಲೆ ಸೋನಾಕ್ಷಿ ನನ್ನ ಬಳಿ ಬಂದು ಅಳುತ್ತಾಳೆ, ಜಹೀರ್ ಕೂಡ ಅತ್ತ ಕಡೆಯಿಂದ ಅಳುತ್ತಾ ಬರುತ್ತಾನೆ. ನಾನು ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ, ಹಾಗಾಗಿ ಯಾರ ಪರವೂ ಮಾತನಾಡಲು ನನಗೆ ಸಾಧ್ಯವಿಲ್ಲ’ ಎಂದು ಸಲ್ಮಾನ್ ತಮಾಷೆಯಾಗಿ ಹೇಳಿದ್ದರಂತೆ.

ಸತ್ಯ ಬಯಲು ಮಾಡಿದ ಟ್ರೆಕ್ಕಿಂಗ್‌ ಜಗಳ

ಒಮ್ಮೆ ಇವರೆಲ್ಲರೂ ಟ್ರೆಕ್ಕಿಂಗ್‌ಗೆ ಹೋಗಿದ್ದಾಗ ಸೋನಾಕ್ಷಿ ಮತ್ತು ಜಹೀರ್ ಜಗಳ ಮಾಡಿಕೊಂಡು ಮಾತನಾಡುತ್ತಿರಲಿಲ್ಲ. ಇದನ್ನು ಗಮನಿಸಿದ ಸಲ್ಮಾನ್ ಖಾನ್, ಜಹೀರ್ ಬಳಿ ಬಂದು ‘ಜಗಳ ಮಾಡಬೇಡ, ನಾನು ನಿನಗೆ ಮೊದಲೇ ಹೇಳುತ್ತಿದ್ದೇನೆ’ ಎಂದಿದ್ದರು. ಆಗ ಇಬ್ಬರ ಪ್ರೀತಿ ಸಲ್ಮಾನ್‌ಗೆ ಸಂಪೂರ್ಣ ಖಾತ್ರಿಯಾಗಿತ್ತು.

ಪರಿಚಯಿಸಿದ್ದು ಕೂಡ ಸಲ್ಮಾನ್

ಸೋನಾಕ್ಷಿ ಮತ್ತು ಜಹೀರ್ ಮೊದಲ ಬಾರಿಗೆ ಭೇಟಿಯಾಗಿದ್ದು ಸಲ್ಮಾನ್ ಖಾನ್ ನೀಡಿದ ಪಾರ್ಟಿಯಲ್ಲೇ. ಇಬ್ಬರೂ ಸಲ್ಮಾನ್ ಕುಟುಂಬದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೂ, 2017ರವರೆಗೂ ಒಬ್ಬರನ್ನೊಬ್ಬರು ಭೇಟಿಯಾಗಿರಲಿಲ್ಲ. ಸುಮಾರು 7 ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಇವರು ರಹಸ್ಯವಾಗಿಟ್ಟಿದ್ದರು.

ಸಲ್ಮಾನ್ ಜೊತೆಗಿನ ವಿಶೇಷ ಸಂಬಂಧ

ಸೋನಾಕ್ಷಿ ಸಿನ್ಹಾ ಅವರು ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಜಹೀರ್ ಇಕ್ಬಾಲ್ ಅವರನ್ನು ಕೂಡ ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಿಸಿದ ‘ನೋಟ್‌ಬುಕ್’ ಚಿತ್ರದ ಮೂಲಕ ಲಾಂಚ್ ಮಾಡಲಾಗಿತ್ತು.ಇಷ್ಟೂ ವರ್ಷ ರಹಸ್ಯವಾಗಿದ್ದ ಈ ಪ್ರೇಮ ಕಥೆ ಕೊನೆಗೂ ಯಶಸ್ವಿಯಾಗಿದ್ದು, 2024ರ ಜೂನ್ 23ರಂದು ಇವರಿಬ್ಬರು ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಮ್ಮ ಮನೆಯಲ್ಲಿ ದಾಸವಾಳ ಗಿಡ ಇದೆಯೇ? ವಾಸ್ತು ಪ್ರಕಾರ ಈ ದಿಕ್ಕಿನಲ್ಲಿಟ್ಟರೆ ಸಂಪತ್ತು ನಿಮ್ಮದಾಗುತ್ತದೆ! – Kannada News | Hibiscus plant vastu best direction for positive energy and wealth kannada

ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಪರಿಸರಕ್ಕೆ ಮಾತ್ರವಲ್ಲ, ಮನೆಯ ಸೌಂದರ್ಯಕ್ಕೂ ಮನಸ್ಸಿನ ನೆಮ್ಮದಿಗೂ ಸಹಕಾರಿ. ವಾಸ್ತು ಶಾಸ್ತ್ರದಲ್ಲಿಯೂ ಕೆಲವು ಗಿಡಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಅವುಗಳಲ್ಲಿ ದಾಸವಾಳ (Hibiscus) ಪ್ರಮುಖವಾದದ್ದು. ಕೆಂಪು ದಾಸವಾಳದ ಹೂವು ದೇವಿ ದುರ್ಗೆ, ಕಾಳಿ ಹಾಗೂ ಗಣಪತಿಗೆ ಅತ್ಯಂತ ಪ್ರಿಯವೆಂದು ನಂಬಲಾಗುತ್ತದೆ. ಆದ್ದರಿಂದ ಈ ಗಿಡವನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಸಕಾರಾತ್ಮಕ ಶಕ್ತಿ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ವಾಸ್ತು ಶಾಸ್ತ್ರದ ಪ್ರಕಾರ ದಾಸವಾಳ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಶುಭಕರವೆಂದು ಹೇಳಲಾಗುತ್ತದೆ. ಈ ದಿಕ್ಕುಗಳಲ್ಲಿ ಗಿಡವನ್ನು ನೆಟ್ಟರೆ ಉತ್ತಮ ಶಕ್ತಿ ಹರಿದು ಮನೆಗೆ ನೆಮ್ಮದಿ ಮತ್ತು ಅಭಿವೃದ್ಧಿ ದೊರೆಯುತ್ತದೆ ಎನ್ನಲಾಗುತ್ತದೆ. ಕೆಲ ವಾಸ್ತು ತಜ್ಞರು ಪೂರ್ವ ದಿಕ್ಕಿನಲ್ಲಿ ಕೆಂಪು ದಾಸವಾಳ ಗಿಡವನ್ನು ನೆಡುವುದರಿಂದ ಸೂರ್ಯನ ಅನುಕೂಲಕರ ಪ್ರಭಾವ ಹೆಚ್ಚುತ್ತದೆ ಎಂದು ನಂಬುತ್ತಾರೆ.

ದಾಸವಾಳ ಗಿಡಕ್ಕೆ ಪ್ರತಿದಿನ ಸಾಕಷ್ಟು ಸೂರ್ಯನ ಬೆಳಕು ಸಿಗುವಂತೆ ನೋಡಿಕೊಳ್ಳಬೇಕು. ಆದ್ದರಿಂದ ಕಿಟಕಿಯ ಸಮೀಪ ಅಥವಾ ತೆರೆದ ಸ್ಥಳದಲ್ಲಿ ನೆಡುವುದು ಉತ್ತಮ. ಗಿಡವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಕೂಡ ವಾಸ್ತು ದೃಷ್ಟಿಯಿಂದ ಮುಖ್ಯವಾಗಿದೆ. ಒಣಗಿದ, ಹಾಳಾದ ಅಥವಾ ಕೀಟಗಳಿಂದ ಹಾನಿಗೊಳಗಾದ ಗಿಡವನ್ನು ನಿರ್ಲಕ್ಷಿಸುವುದಕ್ಕಿಂತ ಸರಿಯಾಗಿ ಆರೈಕೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ವಿಚಿತ್ರ ಮೂಢನಂಬಿಕೆಗಳು! ಜಗತ್ತಿನ ಈ 6 ನಂಬಿಕೆಗಳ ಬಗ್ಗೆ ಕೇಳಿದರೆ ನಿಮಗೂ ಅಚ್ಚರಿ ಆಗುತ್ತೆ

ವಾಸ್ತು ನಂಬಿಕೆಗಳ ಪ್ರಕಾರ ದಾಸವಾಳದ ಕೆಂಪು ಹೂವನ್ನು ದೇವರಿಗೆ ಅರ್ಪಿಸುವುದರಿಂದ ಮನೆಯಲ್ಲಿ ಶುಭ ವಾತಾವರಣ ನಿರ್ಮಾಣವಾಗುತ್ತದೆ. ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರ ಈ ಹೂವನ್ನು ಪೂಜೆಯಲ್ಲಿ ಬಳಸುವ ಸಂಪ್ರದಾಯ ಅನೇಕ ಮನೆಗಳಲ್ಲಿ ಇದೆ. ಕೆಲವರು ಇದರಿಂದ ಕುಟುಂಬದಲ್ಲಿ ಸಾಮರಸ್ಯ ಹೆಚ್ಚುವುದು, ನಕಾರಾತ್ಮಕ ಶಕ್ತಿ ಕಡಿಮೆಯಾಗುವುದು ಹಾಗೂ ಆರ್ಥಿಕ ಪ್ರಗತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಂಬುತ್ತಾರೆ.

ಆದರೆ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಇವು ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಆಧಾರದ ಮೇಲಿನ ಸಲಹೆಗಳು ಮಾತ್ರ. ದಾಸವಾಳ ಗಿಡವನ್ನು ನಿರ್ದಿಷ್ಟ ದಿಕ್ಕಿನಲ್ಲಿ ನೆಟ್ಟರೆ ಧನಸಂಪತ್ತು ಅಥವಾ ಅದೃಷ್ಟ ಖಚಿತವಾಗಿ ಹೆಚ್ಚುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೂ ಮನೆಗೆ ಹಸಿರು ವಾತಾವರಣ ನೀಡುವುದು, ಗಾಳಿಯ ಗುಣಮಟ್ಟ ಸುಧಾರಿಸುವುದು ಮತ್ತು ಮನಸ್ಸಿಗೆ ನೆಮ್ಮದಿ ನೀಡುವಲ್ಲಿ ಗಿಡಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ದಾಸವಾಳ ಗಿಡವನ್ನು ಸರಿಯಾಗಿ ಬೆಳೆಸಿ ಅದರ ಸೌಂದರ್ಯ ಹಾಗೂ ಧಾರ್ಮಿಕ ಮಹತ್ವವನ್ನು ಆನಂದಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:55 am, Fri, 17 July 26

Source link

ಮೈಸೂರು: ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ – Kannada News | First Ashada Friday: Special Pooja at Chamundi Hills, Mysore

ಮೈಸೂರು, ಜುಲೈ 17: ಮೈಸೂರಿನ ಐತಿಹಾಸಿಕ ಚಾಮುಂಡಿಬೆಟ್ಟದಲ್ಲಿ ಇಂದು ಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರ ಅನುಕೂಲಕ್ಕಾಗಿ ಇಂದು ಬೆಳಗ್ಗೆ 6.30ರಿಂದಲೇ ಲಲಿತ್ ಮಹಲ್ ಹೆಲಿಪ್ಯಾಡ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ವಿಶೇಷ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವ್ಯವಸ್ಥೆಯಿಂದಾಗಿ ಭಕ್ತರಿಗೆ ಯಾವುದೇ ಅನನುಕೂಲವಿಲ್ಲದೆ ದೇವಾಲಯಕ್ಕೆ ತಲುಪಲು ಸಾಧ್ಯವಾಯಿತು. ಭಕ್ತಿಭಾವದಿಂದ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಈ ವರ್ಷ ಜುಲೈ 24, ಜುಲೈ 31 ಮತ್ತು ಆಗಸ್ಟ್ 7ರಂದು ಸಹ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ಆಚರಣೆಗಳು ನಡೆಯಲಿವೆ.

ಇದಲ್ಲದೆ, ಆಗಸ್ಟ್ 4ರಂದು ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ನಡೆಯಲಿದ್ದು, ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರಿಗಾಗಿ ಒಂದು ಲಕ್ಷ ಲಾಡುಗಳನ್ನು ಸಿದ್ಧಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋನಂ ವಾಗ್​​ಚುಕ್ ಹೋರಾಟಕ್ಕೆ ಸೊನಾಕ್ಷಿ-ಸಮಯ್ ಬೆಂಬಲ – Kannada News | Sonakshi Sinha, Comedian Samay Raina express support to Sonam Wangchuk

ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam wangchuk) ಅವರು ಕಳೆದ 19 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಬಾಲಿವುಡ್​​ನ ನಟ-ನಟಿಯರು ವಾಂಗ್ಚುಕ್ ಅವರ ಹೋರಾಟದ ಬಗ್ಗೆ ಮೌನವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ಸಹ ವ್ಯಕ್ತವಾಗಿದೆ. ಆದರೆ ಇತ್ತೀಚೆಗೆ ಕೆಲ ಬಾಲಿವುಡ್ ಮಂದಿ ಸೋನಂ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಟಿ ಸೋನಾಕ್ಷಿ ಸಿನ್ಹ ಅವರು ಸೋನಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಅವರೊಟ್ಟಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸೋನಾಕ್ಷಿ ಮಾತ್ರವೇ ಅಲ್ಲದೆ, ಖ್ಯಾತ ಕಮಿಡಿಯನ್ ಸಮಯ್ ರೈನಾ ಸಹ ಸೋನಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಾಮಾನ್ಯವಾಗಿ ತಾವು ಇಂತಹ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡದಿದ್ದರೂ, ಈಗ ಮೌನವಾಗಿರುವುದು ತಮಗೆ ಕಷ್ಟವಾಗಿದೆ ಎಂದು ಹೇಳಿದ್ದಾರೆ. ‘ಸೋನಮ್ ವಾಂಗ್‌ಚುಕ್ ನಮಗೆಲ್ಲರಿಗೂ ಪರಿಚಿತರು. ನಮ್ಮ ದೇಶಕ್ಕಾಗಿ ಅವರು ಏನು ಮಾಡಿದ್ದಾರೆ, ಅವರ ಸಾಧನೆಗಳೇನು ಮತ್ತು ಅವರು ಎಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದು ಅವರು 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರು ಏನನ್ನೂ ಸೇವಿಸಿಲ್ಲ. ಅವರು ಇದನ್ನು ಏಕೆ ಮಾಡುತ್ತಿದ್ದಾರೆ? ಅವರು ಮಕ್ಕಳ ಭವಿಷ್ಯಕ್ಕಾಗಿ ಅಲ್ಲಿ ಕುಳಿತಿದ್ದಾರೆ, ಆ ಭವಿಷ್ಯವು ವಿನಾಶದತ್ತ ಸಾಗುತ್ತಿದೆ ಎಂದು ಅವರು ನಂಬಿದ್ದಾರೆ. ತಮ್ಮ ಜೀವ ಕಳೆದುಕೊಂಡ ಮಕ್ಕಳಿಗಾಗಿ ಅವರು ಹೋರಾಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದ ವ್ಯವಸ್ಥೆಯ ವಿರುದ್ಧ ಅವರು ನಿಂತಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!

‘ಈ ದೇಶದ ಮಕ್ಕಳ ಭವಿಷ್ಯಕ್ಕಾಗಿ ಕಳೆದ 18 ದಿನಗಳಿಂದ ಅವರು ಏನನ್ನೂ ಸೇವಿಸಿಲ್ಲ, ಆದರೆ ಅನೇಕ ಜನರು ಮೌನವಾಗಿ ನೋಡುತ್ತಿದ್ದಾರೆ. ನನ್ನಿಂದ ಸುಮ್ಮನಿರಲು ಸಾಧ್ಯವಾಗಲಿಲ್ಲ. ಈಗ ಏನಾಗುತ್ತದೋ ಅದು ಆಗಲಿ, ಆದರೆ ನಾನು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ವ್ಯಕ್ತಿ, ಏಕಾಂಗಿಯಾಗಿ, ಸಿಜೆಪಿ (CJP) ಯೊಂದಿಗೆ ಸೇರಿ ಸರಿಯಾದ ಕಾರಣಕ್ಕಾಗಿ ಧ್ವನಿ ಎತ್ತಿದ್ದಾರೆ. ನಾನು ನಮ್ಮ ದೇಶದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಏಕೆ ಯಾರೂ ಕೇಳುತ್ತಿಲ್ಲ? ಯಾರಿಗೂ ಕಾಳಜಿ ಇಲ್ಲ. ಯಾರೂ ಸಂವಾದ ನಡೆಸುತ್ತಿಲ್ಲ, ಯಾರೂ ಮಾತನಾಡುತ್ತಿಲ್ಲ. ಯಾರೂ ಅವರ ಕಡೆಗೆ ತಿರುಗಿ ನೋಡುತ್ತಿಲ್ಲ’ ಎಂದು ಸೊನಾಕ್ಷಿ ಪ್ರಶ್ನೆ ಮಾಡಿದ್ದಾರೆ.

‘ನಾನು ದೇಶದ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಮತ್ತು ತಾನು ದೇಶವಿರೋಧಿಯಲ್ಲದ ಕಾರಣ ಈ ವಿಷಯದ ಬಗ್ಗೆ ಮಾತನಾಡಲು ನಿರ್ಧರಿಸಿದೆ. ನೀವು ನಮಗೆ ಬಹಳ ಮುಖ್ಯ, ನೀವು ಒಂದು ರತ್ನ. ಈ ದೇಶಕ್ಕಾಗಿ ನೀವು ಮಾಡುತ್ತಿರುವ ಕೆಲಸಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ನೀವು ನಿಮ್ಮ ಉಪವಾಸವನ್ನು ಮುರಿಯಿರಿ ಎಂದು ನಾನು ಹೇಳುವುದಿಲ್ಲ. ನಾನು ಕೇವಲ ಕೇಳಲು ಬಯಸುತ್ತೇನೆ, ಇದು ಯಾವಾಗ ಕೊನೆಯಾಗುತ್ತದೆ? ಈ ಮನುಷ್ಯ ಸತ್ತಾಗ ನೀವು ಎಚ್ಚರಗೊಳ್ಳುತ್ತೀರಾ? ಆಗ ಯಾರ ಜವಾಬ್ದಾರಿ ಇರುತ್ತದೆ?” ಎಂದು ಸೋನಾಕ್ಷಿ ಪ್ರಶ್ನಿಸಿದ್ದಾರೆ. ವಿಡಿಯೋದ ಕ್ಯಾಪ್ಷನ್‌ನಲ್ಲಿ, “ಇನ್ನು ನೋಡಲು ಸಾಧ್ಯವಾಗುತ್ತಿಲ್ಲ… ಮನಸ್ಸು ಒಪ್ಪುತ್ತಿಲ್ಲ. ವಾಂಗ್‌ಚುಕ್ ಸರ್, ನಾವು ನಿಮ್ಮನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.

ಕಮಿಡಿಯನ್ ಸಮಯ್ ರೈನಾ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ಫೋಟೋವನ್ನು ಹಂಚಿಕೊಂಡು, ‘ಅವರು ಸುರಕ್ಷಿತವಾಗಿರಲಿ ಮತ್ತು ಈ ವಿಷಯವು ಸಂವಾದದ ಮೂಲಕ ಶೀಘ್ರವೇ ಮುಕ್ತಾಯಗೊಳ್ಳಲಿ ಎಂದು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಅತುಲ್ ಕುಲಕರ್ಣಿ, ಪ್ರಕಾಶ್ ರಾಜ್, ಚಿನ್ಮಯಿ ಶ್ರೀಪಾದ, ಓಮಿ ವೈದ್ಯ, ಜೀನತ್ ಅಮನ್, ಅಭಯ್ ಡಿಯೋಲ್, ಸ್ವರಾ ಭಾಸ್ಕರ್, ಸೋನಿ ರಾಜ್‌ದಾನ್, ನಾಸಿರುದ್ದೀನ್ ಶಾ, ರತ್ನಾ ಪಾಠಕ್ ಶಾ, ಶಬಾನಾ ಅಜ್ಮಿ ಮತ್ತು ಇತರ ಕೆಲವು ಸೆಲೆಬ್ರಿಟಿಗಳು ಸೋನಂ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀ ಟಿವಿಯ ‘ಸರಿಗಮಪ’ ಹೊಸ ಸೀಸನ್ ಆಡಿಷನ್; ಬೆಂಗಳೂರಲ್ಲೂ ನಡೆಯಲಿದೆ ಆಡಿಷನ್ – Kannada News | Zee TV SaReGaMaPa Auditions in Bengaluru Registration Details and Venue Info Inside

ಜೀ ಟಿವಿಯ (ಹಿಂದಿ) ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ತನ್ನ ಹೊಸ ಸೀಸನ್‌ಗಾಗಿ ಆಡಿಷನ್‌ಗಳನ್ನು ಆರಂಭಿಸಿದೆ. ಈಗಾಗಲೇ ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಜೈಪುರ ಮತ್ತು ಮುಂಬೈನಲ್ಲಿ ಆಡಿಷನ್‌ಗಳು ಪೂರ್ಣಗೊಂಡಿದ್ದು, ಮುಂದಿನ ಹಂತವಾಗಿ ಬೆಂಗಳೂರು, ನಾಗ್ಪುರ ಹಾಗೂ ಇಂದೋರ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ. ಈ ಸೀಸನ್‌ನಲ್ಲಿ ಒಟ್ಟು 100ಕ್ಕೂ ಹೆಚ್ಚು ಗಾಯಕರು ಭಾಗವಹಿಸಲಿದ್ದಾರೆ.

ಜೀ ಕನ್ನಡ ವೇದಿಕೆ ಮೂಲಕ ಈಗಾಗಲೇ ಅನೇಕರಿಗೆ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆ ಸಿಕ್ಕಿದೆ. ಅದೇ ರೀತಿ ಬೆಂಗಳೂರಿನಲ್ಲಿ ಇರುವವರಿಗೆ ಜೀ ಟಿವಿ ವೇದಿಕೆ ಏರುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಕೂಡ ಸಿಕ್ಕಿದೆ.

ಆಡಿಷನ್ ನಡೆಯುವ ಸ್ಥಳಗಳ ವಿವರಗಳನ್ನು ನೋಡುವುದಾದರೆ, ನಾಗ್ಪುರದಲ್ಲಿ ಜುಲೈ 18ರಂದು ನ್ಯೂ ರಾಮ್‌ದಸ್‌ಪೇಠ್‌ನ ಎನ್ ಅಂಬಾಜರಿ ರಸ್ತೆಯಲ್ಲಿರುವ ವಿಬ್ಗೈರ್ ವರ್ಲ್ಡ್ ಸ್ಕೂಲ್‌ನಲ್ಲಿ ಆಡಿಷನ್ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಜುಲೈ 19ರಂದು ಸಂಪಂಗಿರಾಮನಗರದ (ಟೌನ್ ಹಾಲ್ ಬಳಿ) ಪಿ. ಕಳಿಂಗ ರಾವ್ ರಸ್ತೆಯಲ್ಲಿರುವ ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜಿನಲ್ಲಿ ಆಡಿಷನ್ ನಡೆಯಲಿದೆ. ಇಂದೋರ್‌ನಲ್ಲಿ ಅದೇ ಜುಲೈ 19ರಂದು ಬಂಗಾಳಿ ಸ್ಕ್ವೇರ್ ಹತ್ತಿರದ ಬಿಚೋಲಿ ರಸ್ತೆಯಲ್ಲಿರುವ ಆದರ್ಶ ಶಿಶು ವಿಹಾರ್ ಹೈಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ.

ಇದನ್ನೂ ಓದಿ: ಅಮ್ಮಂದಿರಿಗೆ ಸುವರ್ಣಾವಕಾಶ; ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್  ಸೂಪರ್ ಮಾಮ್

ಈ ಆಡಿಷನ್‌ಗಳಲ್ಲಿ ಭಾಗವಹಿಸಲು ಆಸಕ್ತಿ ಇರುವ ಗಾಯಕರು ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಆಸಕ್ತರು 9152915218 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಎಸ್‌ಎಂಎಸ್‌ನಲ್ಲಿ ಆಡಿಷನ್ ಲಿಂಕ್ ಪಡೆಯಬಹುದು. ಅಥವಾ 8655780787 ಸಂಖ್ಯೆಗೆ ವಾಟ್ಸಾಪ್ ಮೂಲಕ ತಮ್ಮ ವೈಯಕ್ತಿಕ ವಿವರಗಳು ಹಾಗೂ ತಾವು ಹಾಡಿರುವ ಎರಡು ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳನ್ನು ಕಳುಹಿಸಬಹುದು. ಇದರ ಜೊತೆಗೆ ನೇರವಾಗಿ ಅಧಿಕೃತ ವೆಬ್‌ಸೈಟ್ saregamapaauditions.zee5.com ಗೆ ಭೇಟಿ ನೀಡುವ ಮೂಲಕವೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾರಿಗೆ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಎಫೆಕ್ಟ್: ಪ್ರಯಾಣಿಕರ ಅನುಕೂಲಕ್ಕೆ ‘ಸ್ಮಾರ್ಟ್ ಕಾರ್ಡ್’ ತರಲು ಮುಂದಾದ ಬಿಎಂಟಿಸಿ! – Kannada News | BMTC Smart Card: Minister Byrathi Suresh Reality Check Brings Big Change

ಪ್ರಯಾಣಿಕರ ಅನುಕೂಲಕ್ಕೆ ‘ಸ್ಮಾರ್ಟ್ ಕಾರ್ಡ್’ ತರಲು ಮುಂದಾದ ಬಿಎಂಟಿಸಿ!

ಬೆಂಗಳೂರು, ಜುಲೈ 17: ಇತ್ತೀಚೆಗಷ್ಟೆ ಸಾರಿಗೆ ಸಚಿವ ಭೈರತಿ ಸುರೇಶ್ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್​ನಿಂದ ಕೆಳಗೆ ಇಳಿಸಿದ್ದ ಕಂಡಕ್ಟರ್​​​ನನ್ನು ಅಮಾನತುಗೊಳಿಸಿಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ (BMTC) ಪ್ರಯಾಣಿಕರು ಚಿಲ್ಲರೆ ಹಣದ ಕಿರಿಕಿರಿ ಹಾಗೂ ನೆಟ್‌ವರ್ಕ್ ಸಮಸ್ಯೆಯಿಂದ ಟಿಕೆಟ್ ಸಿಗದೆ ಪರದಾಡುವುದನ್ನು ನಿಲ್ಲಿಸಲು ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿ ಬಸ್‌ಗಳಲ್ಲೂ ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆಯನ್ನು ಜಾರಿಗೆ ತರಲು ನಿಗಮವು ಗಂಭೀರ ಚಿಂತನೆ ನಡೆಸಿದೆ.

ಸಚಿವರ ರಿಯಾಲಿಟಿ ಚೆಕ್ ಬೆನ್ನಲ್ಲೇ ಬಿಎಂಟಿಸಿ ಅಲರ್ಟ್!

ಕಳೆದ ಶನಿವಾರದಂದು ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ಮುಖಕ್ಕೆ ಮಾಸ್ಕ್ ಧರಿಸಿ ಬೆಂಗಳೂರಿನ ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಚಿಲ್ಲರೆ ಹಣದ ಸಮಸ್ಯೆಯಿಂದಾಗಿ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವುದು ಹಾಗೂ ಕಂಡಕ್ಟರ್‌ಗಳ ಬಳಿ ಒಂದೇ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್ (ETM) ಇರುವುದರಿಂದ ಪ್ರತಿಯೊಬ್ಬರಿಗೂ ಟಿಕೆಟ್ ನೀಡಲು ವಿಳಂಬವಾಗುತ್ತಿರುವುದು ಸಚಿವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ, ಬಸ್‌ನಲ್ಲಿ ಒಂದೇ ಇಟಿಎಂ ಮಿಷನ್ ಇರುವುದರಿಂದ ಟಿಕೆಟ್ ವಿತರಣೆ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಚಿಲ್ಲರೆ ಸಮಸ್ಯೆಗೆ ಮುಕ್ತಿ ನೀಡಲು ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಲಿದೆ ‘ಸ್ಮಾರ್ಟ್ ಕಾರ್ಡ್’

ಮೆಟ್ರೋ ಕಾರ್ಡ್ ಮಾದರಿಯಲ್ಲೇ ಈ ಸ್ಮಾರ್ಟ್ ಕಾರ್ಡ್ ಕೆಲಸ ಮಾಡಲಿದ್ದು, ಪ್ರಯಾಣಿಕರು ಮೊದಲಿಗೆ ಇದನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಬಸ್ ಹತ್ತಿದ ಬಳಿಕ ಕಂಡಕ್ಟರ್ ಬಳಿ ಹೋಗಬೇಕಾಗುವ ಮಾರ್ಗವನ್ನು ತಿಳಿಸಿದರೆ, ಕಂಡಕ್ಟರ್ ತಮ್ಮ ಇಟಿಎಂ ಮಿಷನ್‌ನಲ್ಲಿ ಅದನ್ನು ನಮೂದಿಸುತ್ತಾರೆ. ನಂತರ ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಇಟಿಎಂ ಯಂತ್ರದ ಮೇಲೆ ಕೇವಲ ಟ್ಯಾಪ್ ಮಾಡಿದರೆ ಸಾಕು, ತಕ್ಷಣವೇ ಹಣ ಕಡಿತಗೊಂಡು ಟಿಕೆಟ್ ಕೈಸೇರುತ್ತದೆ.

ಇದನ್ನೂ ಓದಿ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್​​​ ಬೆನ್ನಲ್ಲೇ ಚಾಲಕ-ನಿರ್ವಾಹಕರಿಗೆ ಬಿಎಂಟಿಸಿಯಿಂದ ಖಡಕ್​ ಸೂಚನೆ

ಈ ತಂತ್ರಜ್ಞಾನಕ್ಕೆ ಯಾವುದೇ ಇಂಟರ್ನೆಟ್ ಅಥವಾ ನೆಟ್‌ವರ್ಕ್ ಅಗತ್ಯವಿಲ್ಲದ ಕಾರಣ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ಇದು ಸರಾಗವಾಗಿ ಕಾರ್ಯನಿರ್ವಹಿಸಲಿದೆ. ಆನ್‌ಲೈನ್ ಯುಪಿಐ ಪಾವತಿಗೆ ತಗಲುವ ಸಮಯವೂ ಇದರಿಂದ ಉಳಿತಾಯವಾಗಲಿದೆ. ಈ ನೂತನ ಸ್ಮಾರ್ಟ್ ಕಾರ್ಡ್ ಜಾರಿಯ ನಿರ್ಧಾರಕ್ಕೆ ಬಿಎಂಟಿಸಿ ನಿತ್ಯ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ನಿತ್ಯದ ಜಂಜಾಟಕ್ಕೆ ಶೀಘ್ರವೇ ಮುಕ್ತಿ ಸಿಗಲೆಂದು ಆಶಿಸಿದ್ದಾರೆ. ಒಟ್ಟಿನಲ್ಲಿ ಸಚಿವರ ರಿಯಾಲಿಟಿ ಚೆಕ್ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡಿಜಿಟಲ್ ಪಾವತಿಯ ಹೊಸ ಆಯಾಮಕ್ಕೆ ಬಿಎಂಟಿಸಿ ಸಜ್ಜಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version