ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ: ಅಡಿಂಜೆಯಲ್ಲಿ ಪ್ರಿಂಟಿಂಗ್ ಮೆಷಿನ್ ಜಪ್ತಿ – Kannada News | Major Counterfeit Currency Operation Unearthed in Dakshina Kannadas Uppinangady

ಉಪ್ಪಿನಂಗಡಿ, ಜು.16: ಸಾರ್ವಜನಿಕ ವಲಯ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ತಲೆನೋವಾಗಿದ್ದ ನಕಲಿ ನೋಟು ತಯಾರಿಸುವ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸುಧಾರಿತ ಮುದ್ರಣ ಯಂತ್ರಗಳನ್ನು ಜಪ್ತಿ ಮಾಡಿದ್ದಾರಲ್ಲದೆ, ಅಂತರರಾಜ್ಯ ಸಂಪರ್ಕ ಹೊಂದಿದ್ದ ಬರೋಬ್ಬರಿ 7 ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡಿಂಜೆ ಎಂಬ ನಿರ್ಜನ ಹಾಗೂ ರಹಸ್ಯ ಪ್ರದೇಶದಲ್ಲಿ ಈ ನಕಲಿ ನೋಟು ತಯಾರಿಕೆಯ ಕಪ್ಪು ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಈ ಅಡ್ಡೆಯ ಕುರಿತು ಉಪ್ಪಿನಂಗಡಿ ಪೊಲೀಸರಿಗೆ ಖಚಿತ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಜಂಟಿಯಾಗಿ ಅಡಿಂಜೆಯ ಅಡ್ಡೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿದೆ.

ದಾಳಿಯ ವೇಳೆ ಸ್ಥಳದಲ್ಲೇ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲು ಬಳಸುತ್ತಿದ್ದ ಹೈಟೆಕ್ ಪ್ರಿಂಟಿಂಗ್ ಮತ್ತು ಮುದ್ರಣ ಯಂತ್ರಗಳು, ಸ್ಕ್ಯಾನರ್‌ಗಳು, ನಕಲಿ ನೋಟು ತಯಾರಿಕೆಗೆ ಬಳಸುವ ವಿಶೇಷ ಕಾಗದಗಳು ಹಾಗೂ ಬಣ್ಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಜಾಲವು ಕೇವಲ ಸ್ಥಳೀಯವಾಗಿ ಮಾತ್ರವಲ್ಲದೆ ಅಂತರರಾಜ್ಯ ಮಟ್ಟದಲ್ಲಿ ಹರಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ದಾಳಿಯ ವೇಳೆ ಪೊಲೀಸರು ಸ್ಥಳದಲ್ಲಿದ್ದ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ನೆರೆಯ ಕೇರಳ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಇವರು ತಾವೇ ಮುದ್ರಿಸುತ್ತಿದ್ದ ನಕಲಿ ನೋಟುಗಳನ್ನು ದಕ್ಷಿಣ ಕನ್ನಡ ಹಾಗೂ ಕೇರಳದ ಗಡಿ ಭಾಗದ ಸಣ್ಣ ಪುಟ್ಟ ವ್ಯಾಪಾರ ಕೇಂದ್ರಗಳು, ಪೆಟ್ರೋಲ್ ಬಂಕ್ ಹಾಗೂ ಸಂತೆಗಳಲ್ಲಿ ಚಲಾವಣೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿ ವ್ಯಕ್ತಿಗಳು ಅಥವಾ ಜಾಗತಿಕ ಜಾಲಗಳು ಭಾಗಿಯಾಗಿವೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ: ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರ – Kannada News | Negligence at Abbey Falls: Rusted View Tower Puts Tourist Lives at Risk

ಕೊಡಗು, ಜುಲೈ 16: ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ಪ್ರಸಿದ್ಧ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರವು ಸಂಪೂರ್ಣ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿದೆ. ಕಬ್ಬಿಣದ ತಡೆಬೇಲಿಗಳು ಕುಸಿದಿದ್ದು, ಕೆಲವೆಡೆ ಹಗ್ಗದಿಂದ ಕಟ್ಟಿರುವುದು ಕಂಡುಬಂದಿವೆ. ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ತಡೆಬೇಲಿಗೆ ಒರಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಬ್ಬಿ ಫಾಲ್ಸ್‌ನಿಂದ ವರ್ಷಕ್ಕೆ 2 ಕೋಟಿಗೂ ಅಧಿಕ ಆದಾಯ ಬರುತ್ತದೆ. ಆದರೂ, ಬರುವ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪಂಚಾಯತಿ ಅಥವಾ ಪ್ರವಾಸೋದ್ಯಮ ಇಲಾಖೆ ಗಮನ ಹರಿಸುತ್ತಿಲ್ಲ. ಜಲಪಾತದ ಬಳಿ ಭದ್ರತಾ ಸಿಬ್ಬಂದಿ ಇಲ್ಲ, ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಿಲ್ಲ. ಈ ನಿರ್ಲಕ್ಷ್ಯದ ಬಗ್ಗೆ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: CET ಕೌನ್ಸೆಲಿಂಗ್ ಅಪ್ಡೇಟ್; ಮೊದಲ ಸುತ್ತಿನ ಫಲಿತಾಂಶ ಮತ್ತು ಪ್ರವೇಶ ಪ್ರಕ್ರಿಯೆ ಬಗ್ಗೆ KEA ಸ್ಪಷ್ಟನೆ! – Kannada News | KEA Executive Director H. Prasanna Provides Crucial CET Counselling Updates

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ರ CET ಕೌನ್ಸೆಲಿಂಗ್‌ನ ಮೊದಲ ಸುತ್ತಿನ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ಅಂತಿಮಗೊಳಿಸಲು ಜುಲೈ 24 ಸಂಜೆ 5:30ರವರೆಗೆ ಸಮಯ ನೀಡಲಾಗಿದೆ. KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ನಾಲ್ಕು ಆಯ್ಕೆಗಳ (Choice 1, Choice 2, Choice 3, Choice 4) ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ತಾವು ಪಡೆದ ಸೀಟಿನ ಕುರಿತು ಸಂಪೂರ್ಣ ತೃಪ್ತರಾಗಿದ್ದರೆ ‘Choice 1’ ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು. ಉತ್ತಮ ಸೀಟಿಗಾಗಿ ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ‘Choice 2’ ಆಯ್ಕೆ ಮಾಡಬಹುದು. ಈ ಆಯ್ಕೆಯಲ್ಲಿ ಈಗ ಸಿಕ್ಕಿರುವ ಸೀಟನ್ನು ಉಳಿಸಿಕೊಂಡು ಉತ್ತಮ ಅವಕಾಶಗಳಿಗಾಗಿ ಕಾಯಬಹುದು. ಹಂಚಿಕೆಯಾದ ಸೀಟು ಇಷ್ಟವಿಲ್ಲದಿದ್ದಲ್ಲಿ ‘Choice 3’ ಆಯ್ಕೆ ಮಾಡಿ, ಆ ಸೀಟನ್ನು ತಿರಸ್ಕರಿಸಿ ಮುಂದಿನ ಸುತ್ತುಗಳಲ್ಲಿ ಭಾಗವಹಿಸಬಹುದು. ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಬರಲು ‘Choice 4’ ಅನ್ನು ಆಯ್ಕೆ ಮಾಡಬಹುದು. ವಿದ್ಯಾರ್ಥಿಗಳು ಅಂತಿಮ ದಿನಾಂಕದೊಳಗೆ ತಮ್ಮ ಆಯ್ಕೆಗಳನ್ನು ಬದಲಾಯಿಸುವ ಅವಕಾಶವನ್ನು KEA ಕಲ್ಪಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Source link

ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ – Kannada News | Karnataka KPSC Fraud: Chairman Sahukar Faces Nepotism Charges, HC Denies Stay

ಬೆಂಗಳೂರು, ಜು.16: ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಅಕ್ರಮ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಕಾರಣಕ್ಕೆ ಕೆಪಿಎಸ್​​​ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ನಡೆಯುತ್ತಿದೆ. ಇದರ ಹೊತ್ತಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್​​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರವಾಗಿ ರಾಜಕೀಯವಾಗಿ ಭಾರೀ ಚರ್ಚೆಯಾಗುತ್ತಿದೆ. ರಾಜ್ಯಪಾಲರ ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಅವರು ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು, ಆದರೆ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯತ್ನಾಳ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​​ ಹಂಚಿಕೊಂಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್​​​ನಲ್ಲಿ ಏನಿದೆ?

ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯ ಮುಖ್ಯಸ್ಥರೇ ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಿಎಸ್‌ಸಿ ಅಧ್ಯಕ್ಷರ ಮಾಸಿಕ ವೇತನ, ಸೌಲಭ್ಯ ಹಾಗೂ ಭತ್ಯೆಗಳು ಸೇರಿ ತಿಂಗಳಿಗೆ ಸುಮಾರು 2.25 ಲಕ್ಷ ರೂ. ಸಂದಾಯವಾಗುತ್ತದೆ. ಅಂದರೆ ಅವರ ವಾರ್ಷಿಕ ವೇತನವೇ ಅಂದಾಜು 27 ಲಕ್ಷ ರೂ. ಆಗುತ್ತದೆ.

ಇಷ್ಟೊಂದು ಭಾರಿ ಪ್ರಮಾಣದ ಆದಾಯ ಪಡೆಯುತ್ತಿದ್ದರೂ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಮಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಸೌಲಭ್ಯ ಸಿಗಲಿ ಎಂಬ ಕಾರಣಕ್ಕಾಗಿ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ಘೋಷಿಸಿ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದು ಸ್ಪಷ್ಟವಾದ ‘ಸ್ವಜನಪಕ್ಷಪಾತ’ ಮತ್ತು ಕಾನೂನು ಬಾಹಿರ ಕೃತ್ಯ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​:

ಸರ್ಕಾರಿ ಉದ್ಯೋಗ ಪಡೆಯಲು ರಾಜ್ಯದ ಲಕ್ಷಾಂತರ ಬಡ ಆಕಾಂಕ್ಷಿಗಳು ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಹಗಲಿನಲ್ಲಿ ತಮಗೊಂದು ಕೆಲಸ ಮಾಡಿಕೊಂಡು, ರಾತ್ರಿಯಿಡೀ ನಿದ್ದೆಗೆಟ್ಟು ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾರೆ. ತಮ್ಮ ಮಕ್ಕಳಿಗೆ ಒಂದು ಗೌರವಾನ್ವಿತ ಸರ್ಕಾರಿ ಹುದ್ದೆ ಸಿಗಲಿ ಎಂದು ಹೆತ್ತ ಪೋಷಕರು ಹಂಬಲಿಸುತ್ತಿರುತ್ತಾರೆ. ಆದರೆ, ನೇಮಕಾತಿ ಮಾಡುವ ಆಯೋಗದ ಮುಖ್ಯಸ್ಥರೇ ಇಂತಹ ಅಕ್ರಮವೆಸಗಿದರೆ, ವರ್ಷಗಟ್ಟಲೆ ಓದಿದ ಪ್ರತಿಭಾವಂತ, ಬುದ್ಧಿವಂತ ಹಾಗೂ ಅರ್ಹ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. ಪತ್ರಿಕೆ ಸೋರಿಕೆ, ಲೋಪ ಹಾಗೂ ಸ್ವಜನಪಕ್ಷಪಾತದಿಂದಾಗಿ ಯೋಗ್ಯ ಆಡಳಿತಗಾರರು ವ್ಯವಸ್ಥೆಗೆ ಬರದಂತಾಗುತ್ತದೆ.

ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ ಸಿಂಧನೂರು ನ್ಯಾಯಾಲಯ

ಪ್ರಕರಣ ಸಿಬಿಐಗೆ ವಹಿಸಿ: ಯತ್ನಾಳ್ ಆಗ್ರಹ

ಶಿವಶಂಕರಪ್ಪ ಅವರ ವಿರುದ್ಧದ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಯಾವುದೇ ಬಾಹ್ಯ ಅಥವಾ ರಾಜಕೀಯ ಒತ್ತಡಗಳಿಗೆ ಮಣಿಯದೆ ಮುಕ್ತವಾಗಿ ತನಿಖೆ ನಡೆಯಬೇಕಿದೆ ಎಂದು ಯತ್ನಾಳ್ ಆಗ್ರಹ
ಮಾಡಿದ್ದಾರೆ. ರಾಜ್ಯದ ಲಕ್ಷಾಂತರ ನಿಷ್ಠಾವಂತ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಈ ಪ್ರಕರಣವನ್ನು ತಕ್ಷಣವೇ ಕೇಂದ್ರ ತನಿಖಾ ದಳಕ್ಕೆ (CBI) ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರವು ಇಂತಹ ಪರೀಕ್ಷಾ ಮತ್ತು ನೇಮಕಾತಿ ಅಕ್ರಮಗಳಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕು. ಅಕ್ರಮವೆಸಗಿದವರನ್ನು ಜೈಲಿಗಟ್ಟುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ರೆಕಾರ್ಡ್​ ಉಡೀಸ್: ವಿಶ್ವ ದಾಖಲೆಯ ಚೇಸಿಂಗ್! – Kannada News | Washington Freedom Creates New World Record in T20 Cricket

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ತಂಡ ಯಾವುದು? ಈ ಪ್ರಶ್ನೆಗೆ ಹೊಸ ಉತ್ತರ ವಾಷಿಂಗ್ಟನ್ ಫ್ರೀಡಂ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಬರೋಬ್ಬರಿ 267 ರನ್​ಗಳನ್ನು ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.

ಒಕ್ಲಾಂಡ್​ನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್​ ಹಾಗೂ ವಾಷಿಂಗ್ಟನ್ ಫ್ರೀಡಂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು.

ಪೂರನ್ ಸಿಡಿಲಬ್ಬರ:

ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ಪರ ನಾಯಕ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನಟ್ಟಿದರು. ಪರಿಣಾಮ ಕೇವಲ 31 ಎಸೆತಗಳಲ್ಲಿ ಶತಕ ಮೂಡಿಬಂತು.

  • 31 ಎಸೆತಗಳಲ್ಲಿ ಶತಕ ಪೂರೈಸಿ ಮೇಜರ್​ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಪೂರನ್ ತಮ್ಮದಾಗಿಸಿಕೊಂಡರು.

ಈ ಪಂದ್ಯದಲ್ಲಿ 33 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ 13 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 106 ರನ್​ ಚಚ್ಚಿದರು. ಈ ಸ್ಫೋಟಕ ಶತಕದ ನೆರವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಕಲೆಹಾಕಿತು.

ವಿಶ್ವ ದಾಖಲೆಯ ಚೇಸಿಂಗ್:

267 ರನ್​ಗಳ ಗುರಿ ಪಡೆದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಮಿತ್ ಆ ಬಳಿಕ ಸಿಡಿಲಬ್ಬರ ಶುರು ಮಾಡಿದ್ದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡ್ರಿಸ್ ಗೌಸ್ ವಿಸ್ಫೋಟಕ ಇನಿಂಗ್ಸ್ ಆಡಿದರು. ಪರಿಣಾಮ 16 ಓವರ್​ಗಳ ಮುಕ್ತಾಯದ ವೇಳೆಗೆ ವಾಷಿಂಗ್ಟನ್ ಫ್ರೀಡಂ ತಂಡದ ಸ್ಕೋರ್ 250ರ ಗಡಿದಾಟಿತು.

  • ಆಂಡ್ರಿಸ್ ಗೌಸ್: ಕೇವಲ 51 ಎಸೆತಗಳನ್ನು ಎದುರಿಸಿದ ಗೌಸ್ 12 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 132 ರನ್ ಚಚ್ಚಿದರು.
  • ಸ್ಟೀವ್ ಸ್ಮಿತ್: ನಾಯಕನ ಆಟವಾಡಿದ ಸ್ಮಿತ್ ಕೇವಲ 48 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 110 ರನ್ ಬಾರಿಸಿದರು.

ಈ ಇಬ್ಬರು ದಾಂಡಿಗರ ಶರವೇಗದ ಶತಕಗಳ ನೆರವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು 18.4 ಓವರ್​ಗಳಲ್ಲಿ 270 ರನ್ ಬಾರಿಸಿ 6 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಐಪಿಎಲ್ ದಾಖಲೆ ಧೂಳೀಪಟ:

ಈ ಭರ್ಜರಿ ಚೇಸಿಂಗ್​ನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ಐಪಿಎಲ್​ನಲ್ಲಿ ನಿರ್ಮಾಣವಾಗಿದ್ದ ವಿಶ್ವ ದಾಖಲೆಯ ಚೇಸಿಂಗ್ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ವಿಶ್ವ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಹೆಸರಿನಲ್ಲಿತ್ತು. ಈ ದಾಖಲೆಯನ್ನು 18.4 ಓವರ್​ಗಳಲ್ಲಿ ವಾಷಿಂಗ್ಟನ್ ಫ್ರೀಡಂ ಪಡೆ ಉಡೀಸ್ ಮಾಡಿದ್ದಾರೆ.

  • ಪಂಜಾಬ್ ಕಿಂಗ್ಸ್: ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 262 ರನ್ ಚೇಸ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ವಿಶ್ವ ದಾಖಲೆ ನಿರ್ಮಿಸಿದ್ದರು.
  • ವಾಷಿಂಗ್ಟನ್ ಫ್ರೀಡಂ: ಎಂಐ ನ್ಯೂಯಾರ್ಕ್ ವಿರುದ್ಧ 267 ರನ್​ಗಳನ್ನು ಚೇಸ್ ವಾಷಿಂಗ್ಟನ್ ಫ್ರೀಡಂ ತಂಡವು ಇದೀಗ ಟಿ20 ಇತಿಹಾಸದಲ್ಲೇ ಅತ್ಯಧಿಕ ಮೊತ್ತವನ್ನು ಬೆನ್ನತ್ತಿ ಗೆದ್ದ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್ ಹೆಸರಿಸಿದ ರಾಬಿನ್ ಉತ್ತಪ್ಪ!

​ ಇನ್ನು ಈ ವಿಶ್ವ ದಾಖಲೆಯ ಗೆಲುವಿನೊಂದಿಗೆ ವಾಷಿಂಗ್ಟನ್ ಫ್ರೀಡಂ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚಾಲೆಂಜರ್ ಸುತ್ತಿಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಸ್ಟೀವ್ ಸ್ಮಿತ್ ಪಡೆ ಫೈನಲ್​ಗೇರಲಿದೆ.

Source link

ಆಷಾಢ ಮಾಸ ಅಶುಭವೆಂದಾದರೆ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ನಡೆಯುವುದೇಕೆ? ಇಲ್ಲಿದೆ ಅಸಲಿ ರಹಸ್ಯ! – Kannada News | Ashada Masa and Rath Yatra: Why Puri Jagannath Yatra Happens in ‘Shunya Masa’?

ಪುರಿ ಜಗನ್ನಾಥ ರಥಯಾತ್ರೆImage Credit source: Getty Images

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸ ವಿವಾಹ, ಗೃಹಪ್ರವೇಶ, ಹೊಸ ಮನೆ ನಿರ್ಮಾಣ, ಉಪನಯನದಂತಹ ಶುಭ ಕಾರ್ಯಗಳಿಗೆ ಸೂಕ್ತವಲ್ಲದಿರುವುದರಿಂದ ಈ ಮಾಸವನ್ನು’ಶೂನ್ಯ ಮಾಸ’ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಲವರ ಮನದಲ್ಲಿ ಒಂದು ಕುತೂಹಲದ ಪ್ರಶ್ನೆ ಮೂಡುವುದು ಸಹಜ—”ಆಷಾಢ ಮಾಸವೇ ಅಶುಭ ಎಂದಾದರೆ, ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ಏಕೆ ವೈಭವದಿಂದ ಜರುಗುತ್ತದೆ?” ಎಂಬುದು. ಈ ದೈವಿಕ ಸಂಭ್ರಮ ಕೇವಲ ಒಡಿಶಾದ ಪುರಿಗೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಬೆಂಗಳೂರಿನ ಅಗರದಲ್ಲಿರುವ (Agara) ಶ್ರೀ ಜಗನ್ನಾಥ ದೇವಾಲಯದಲ್ಲೂ ಸಹ ಪುರಿಯಂತೆಯೇ ಭಕ್ತಿ ಮತ್ತು ಸಡಗರದ ರಥಯಾತ್ರೆಯನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಮೇಲ್ನೋಟಕ್ಕೆ ಶೂನ್ಯ ಮಾಸವಾಗಿ ಕಂಡರೂ, ಆಷಾಢದಲ್ಲಿ ನಡೆಯುವ ಈ ಜಗನ್ನಾಥ ರಥೋತ್ಸವದ ಹಿಂದೆ ಅತ್ಯಂತ ಆಳವಾದ ಧಾರ್ಮಿಕ, ಪೌರಾಣಿಕ, ಆಧ್ಯಾತ್ಮಿಕ ಹಾಗೂ ಪ್ರಕೃತಿಗೆ ಹತ್ತಿರವಾದ ವೈಜ್ಞಾನಿಕ ಹಿನ್ನೆಲೆ ಅಡಗಿದೆ.

ಆಷಾಢ ಮಾಸದಲ್ಲಿ ರಥಯಾತ್ರೆ ನಡೆಯುವುದೇಕೆ?

ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ಜಗನ್ನಾಥ ರಥಯಾತ್ರೆಯನ್ನು ಪ್ರತಿವರ್ಷ ಆಷಾಢ ಶುಕ್ಲ ದ್ವಿತೀಯ ದಿನದಂದು ಅತ್ಯಂತ ಭಕ್ತಿ-ವೈಭವದಿಂದ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯರು ತಮ್ಮ ಭವ್ಯ ರಥಗಳಲ್ಲಿ ರಾಜಬೀದಿಗೆ ಬಂದು ಗುಂಡಿಚಾ ದೇವಸ್ಥಾನಕ್ಕೆ ತೆರಳುತ್ತಾರೆ. ಈ ಆಚರಣೆಯು ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಸ್ಕಂದ ಪುರಾಣ ಸೇರಿದಂತೆ ಹಲವು ಪ್ರಮುಖ ಪುರಾಣಗಳಲ್ಲಿ ಇದರ ಉಲ್ಲೇಖವಿದೆ.

ಹಾಗಾದರೆ ಆಷಾಢ ಮಾಸವನ್ನು ಶುಭವಲ್ಲ ಎನ್ನುವುದೇಕೆ?

ಆಷಾಢ ಮಾಸ ಶುಭವಲ್ಲ ಅಥವಾ ಅಶುಭ ಎನ್ನುವುದು ಸಂಪೂರ್ಣ ಸತ್ಯವಲ್ಲ. ಇದು ಮುಖ್ಯವಾಗಿ ಲೌಕಿಕ ಅಥವಾ ಮಾನವರ ಭೌತಿಕ ಸುಖದ ಕಾರ್ಯಗಳಿಗೆ ಸಂಬಂಧಿಸಿದ ನಂಬಿಕೆಯಾಗಿದೆ. ಈ ತಿಂಗಳಲ್ಲಿ ಬರುವ ದೇವಶಯನಿ ಏಕಾದಶಿಯ ದಿನದಿಂದ ಶ್ರೀಮಹಾವಿಷ್ಣುವು ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಯೋಗನಿದ್ರೆಗೆ ಪ್ರವೇಶಿಸುತ್ತಾನೆ ಎಂದು ನಂಬಲಾಗುತ್ತದೆ. ಸೃಷ್ಟಿಕರ್ತನೇ ನಿದ್ರೆಗೆ ಜಾರುವ ಈ ಅವಧಿಯಲ್ಲಿ ಲೌಕಿಕ ಸಂಭ್ರಮದ ಮದುವೆ, ಗೃಹಪ್ರವೇಶ, ಹೊಸ ವ್ಯಾಪಾರ ಆರಂಭದಂತಹ ಕಾರ್ಯಕ್ರಮಗಳನ್ನು ಕೆಲವು ಸಂಪ್ರದಾಯಗಳಲ್ಲಿ ತಪ್ಪಿಸಲಾಗುತ್ತದೆ.

ಮಾನವರಿಗೆ ಶೂನ್ಯ ಮಾಸ, ದೇವತೆಗಳಿಗೆ ಉತ್ಸವ ಕಾಲ:

ಶಾಸ್ತ್ರಗಳ ಪ್ರಕಾರ, ಆಷಾಢ ಮಾಸವು ಲೌಕಿಕ ಕಾರ್ಯಗಳಿಗೆ ಸೂಕ್ತವಲ್ಲದಿದ್ದರೂ, ಆಧ್ಯಾತ್ಮಿಕ ಸಾಧನೆ, ಜಪ, ತಪ ಮತ್ತು ದೇವತಾರಾಧನೆಗೆ ಅತ್ಯಂತ ಶ್ರೇಷ್ಠವಾದ ತಿಂಗಳಾಗಿದೆ. ಭಗವಾನ್ ವಿಷ್ಣುವು ಯೋಗನಿದ್ರೆಗೆ ಜಾರುವ ಮುನ್ನ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸಲು ರಥದ ಮೇಲೆ ಬರುತ್ತಾನೆ ಎಂಬುದು ಭಕ್ತರ ದೃಢ ನಂಬಿಕೆ. ಆದ್ದರಿಂದಲೇ ಈ ತಿಂಗಳಲ್ಲಿ ದೇವರ ಆರಾಧನೆ, ತೀರ್ಥಯಾತ್ರೆ, ವ್ರತಾಚರಣೆ ಹಾಗೂ ದಾನ-ಧರ್ಮಗಳಿಗೆ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಥಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನೆಲೆ:

ಪುರಾಣಗಳ ಪ್ರಕಾರ, ಆಷಾಢ ಮಾಸದ ಈ ಪವಿತ್ರ ದಿನದಂದೇ ಶ್ರೀಕೃಷ್ಣನು (ಜಗನ್ನಾಥ) ಮಥುರೆಗೆ ಪ್ರಯಾಣ ಬೆಳೆಸಿದನು ಎನ್ನಲಾಗುತ್ತದೆ. ಭಗವಂತನು ತನ್ನ ಸೋದರ ಬಲಭದ್ರ ಮತ್ತು ತಂಗಿ ಸುಭದ್ರೆಯೊಂದಿಗೆ ತನ್ನ ಸೋದರತ್ತೆಯ ಮನೆಯಾದ ‘ಗುಂಡಿಚಾ ದೇವಸ್ಥಾನ’ಕ್ಕೆ ವಾರ್ಷಿಕ ಭೇಟಿ ನೀಡುವ ಸಮಯವಿದು. ಈ ದೈವಿಕ ಮತ್ತು ಪವಿತ್ರ ಯಾನವು ತಲೆಮಾರುಗಳಿಂದ ಆಷಾಢ ಮಾಸದಲ್ಲೇ ಅತ್ಯಂತ ನಿಷ್ಠೆಯಿಂದ ನಡೆದುಕೊಂಡು ಬಂದಿದೆ.

ಪ್ರಕೃತಿ ಮತ್ತು ಕೃಷಿಯ ದೈವಿಕ ಸಂಕೇತ:

ಆಷಾಢ ಮಾಸವು ಮುಂಗಾರು ಮಳೆ ತೀವ್ರಗೊಳ್ಳುವ ಮತ್ತು ಪ್ರಕೃತಿ ಹೊಸ ಚೈತನ್ಯ ಪಡೆಯುವ ಸಮಯವಾಗಿದೆ. ಭಾರತೀಯ ಕೃಷಿ ಸಂಸ್ಕೃತಿಯಲ್ಲಿ ಇದು ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡುವ ಕಾಲ. ಜಗನ್ನಾಥನನ್ನು ಕೇವಲ ಮಂದಿರದ ದೇವರೆಂದಷ್ಟೇ ಅಲ್ಲದೆ, ಭೂಮಿಯ ಒಡೆಯ ಮತ್ತು ಕೃಷಿಯ ದೇವರೆಂದೂ ಆರಾಧಿಸಲಾಗುತ್ತದೆ. ರೈತರು ಉತ್ತಮ ಮಳೆ ಮತ್ತು ಸಮೃದ್ಧ ಇಳುವರಿಗಾಗಿ ಪ್ರಾರ್ಥಿಸುವ ಈ ಅವಧಿಯಲ್ಲಿ ಜಗನ್ನಾಥನ ರಥಯಾತ್ರೆ ನಡೆಯುವುದು ಪ್ರಕೃತಿಯ ಆರಾಧನೆಯೂ ಹೌದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:40 pm, Thu, 16 July 26

Source link

ದೇವರ ದರ್ಶನಕ್ಕೆಂದು ಕರೆದೊಯ್ದು, ಪರ್ಸ್ ಬೀಳಿಸಿ ಗಂಡನನ್ನು ಹಂತಕರಿಗೆ ಒಪ್ಪಿಸಿದ ಪತ್ನಿ, ಮಗುವಿನೆದುರೇ ಭೀಕರ ಹತ್ಯೆ – Kannada News | Chittoor Temple: Family Visit Takes Shocking Turn Near Temple, Investigation Reveals New Details

ಚಿತ್ತೂರು, ಜುಲೈ 16: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮಹಿಳೆ ದೇವಸ್ಥಾನಕ್ಕೆ ಕರೆದೊಯ್ದು, ಪರ್ಸ್ ಬೀಳಿಸುವ ನಾಟಕವಾಡಿ ಹಂತಕರ ಕೈಗೆ ಒಪ್ಪಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಮೇಶ್ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಸೇರಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲ್ಯದ ಗೆಳೆಯನ ಜೊತೆ ಮದುವೆಯ ನಂತರವೂ ಸಂಬಂಧ

ಶಾಂತಿಪುರಂ ಮಂಡಲದ ಬೋಯಿನಪಲ್ಲಿ ನಿವಾಸಿಯಾದ ಹಾಸಿನಿಗೆ ಎರಡು ವರ್ಷಗಳ ಹಿಂದೆ ತಮಿಳುನಾಡಿನ ರಮೇಶ್ ಜೊತೆ ವಿವಾಹವಾಗಿತ್ತು. ರಮೇಶ್ ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ಒಂದು ವರ್ಷದ ಹೆಣ್ಣು ಮಗಳಿದ್ದಾಳೆ. ರಮೇಶ್ ತನ್ನ ಹೆಂಡತಿ ಮತ್ತು ಮಗುವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.

ಆದರೆ, ಹಾಸಿನಿ ಮದುವೆಯ ನಂತರವೂ ತನ್ನ ಬಾಲ್ಯದ ಗೆಳೆಯ ಯುಗಂಧರ್ ಎಂಬ ಯುವಕನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಳು. ಇತ್ತೀಚೆಗೆ ತನ್ನ ತಾಯಿಯ ಮನೆಗೆ ಬಂದಿದ್ದ ಹಾಸಿನಿ, ಗಂಡನ ಅಡಚಣೆಯನ್ನು ಶಾಶ್ವತವಾಗಿ ನಿವಾರಿಸಲು ಪ್ರಿಯಕರನೊಂದಿಗೆ ಸೇರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಳು.

ಯೋಜನೆಯ ಪ್ರಕಾರ, ಹಾಸಿನಿ ತನ್ನ ಪತಿ ರಮೇಶ್‌ನನ್ನು ಮಲ್ಲಪ್ಪ ಬೆಟ್ಟದ ಮೇಲಿರುವ ‘ಮಲ್ಲೇಶ್ವರ ಸ್ವಾಮಿ’ ದರ್ಶನಕ್ಕೆ ಹೋಗೋಣ ಎಂದು ಬೈಕ್‌ನಲ್ಲಿ ಕರೆದೊಯ್ದಿದ್ದಾಳೆ. ಇವರೊಂದಿಗೆ ಒಂದು ವರ್ಷದ ಮಗುವೂ ಇತ್ತು.

ಮತ್ತಷ್ಟು ಓದಿ: ಪ್ರೇಮಿ ಜತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಟ್ಟ ಪತ್ನಿ, ಚಲಿಸುವ ರೈಲಿನಲ್ಲೇ ಗುಂಡು ಹಾರಿಸಿ ಹತ್ಯೆ

ಲೈವ್ ಲೊಕೇಶನ್ ಅಪ್ಡೇಟ್: ಬೈಕ್‌ನಲ್ಲಿ ಹೋಗುವಾಗ ಹಾಸಿನಿ ಕಾಲಕಾಲಕ್ಕೆ ತನ್ನ ಪ್ರಿಯಕರ ಯುಗಂಧರ್‌ನಿಗೆ ಫೋನ್ ಮೂಲಕ ತಾವಿರುವ ಜಾಗದ ಮಾಹಿತಿ ನೀಡುತ್ತಿದ್ದಳು.

ನಾಲ್ವರ ಗ್ಯಾಂಗ್ ದಾಳಿ: ಮಲ್ಲಪ್ಪ ಬೆಟ್ಟವನ್ನು ಹತ್ತುವಾಗ ಮೂರನೇ ತಿರುವಿನಲ್ಲಿ ಹಾಸಿನಿ ತನ್ನ ಕೈಯಲ್ಲಿದ್ದ ಪರ್ಸ್ ಅನ್ನು ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಿದ್ದಾಳೆ. ಪರ್ಸ್ ಬಿದ್ದಿದ್ದನ್ನು ನೋಡಿ ರಮೇಶ್ ಬೈಕ್ ನಿಲ್ಲಿಸಿ ಅದನ್ನು ಎತ್ತಿಕೊಳ್ಳಲು ಹೋಗಿದ್ದಾನೆ. ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಯುಗಂಧರ್ ಮತ್ತು ಆತನ ನಾಲ್ವರು ಸಪ್ಲೈಯರ್ಸ್ ರಮೇಶ್‌ನನ್ನು ಬಲವಂತವಾಗಿ ಹಿಡಿದು ಪಕ್ಕದ ದಟ್ಟ ಅರಣ್ಯ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ.

ಮಗುವಿನೆದುರೇ ಕೊಲೆ: ಒಂದು ವರ್ಷದ ಮಗುವಿನ ಮುಂದೆಯೇ ಆ ಕ್ರೂರಿಗಳು ರಮೇಶ್‌ನನ್ನು ಭೀಕರವಾಗಿ ಹತ್ಯೆ ಮಾಡಿ ಶವವನ್ನು ಕಾಡಿನಲ್ಲೇ ಎಸೆದಿದ್ದಾರೆ. ತದನಂತರ, ಹಾಸಿನಿ ತನ್ನ ಮಗುವಿನೊಂದಿಗೆ ಗಂಡನ ಬೈಕ್‌ನಲ್ಲೇ ಪ್ರಿಯಕರ ಯುಗಂಧರ್ ಜೊತೆ ಕುಳಿತು ರೈಲ್ವೆ ನಿಲ್ದಾಣ ತಲುಪಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಸಿಸಿಟಿವಿ ಮೂಲಕ ಸಿಕ್ಕಿಬಿದ್ದ ಕಿರಾತಕರು

ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಹೋದ ರಮೇಶ್ ಕುಟುಂಬ ಮರಳಿ ಬಾರದಿದ್ದಾಗ, ಹಾಸಿನಿಯ ತಾಯಿ ತನ್ನ ಮಗಳು ಮತ್ತೆ ಮೊಮ್ಮಗಳು ಕಾಣೆಯಾಗಿದ್ದಾರೆ ಎಂದು ರಲ್ಲಾ ಬೂದುಗುರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಬೆಟ್ಟದ ದಾರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ.

ಮೊದಲಿಗೆ ಹಾಸಿನಿ ತನ್ನ ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದು, ನಂತರ ಆಕೆ ತನ್ನ ಗಂಡನನ್ನು ಬಿಟ್ಟು ಬೇರೆ ಇಬ್ಬರು ಯುವಕರೊಂದಿಗೆ ಅದೇ ಬೈಕ್‌ನಲ್ಲಿ ಮಗುವನ್ನು ಹಿಡಿದು ವಾಪಸ್ ಬರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ. ತಕ್ಷಣವೇ ತಾಂತ್ರಿಕ ಪುರಾವೆಗಳ ಮೂಲಕ ತನಿಖೆ ನಡೆಸಿದ ಪೊಲೀಸರು ಕಾಡಿನಲ್ಲಿದ್ದ ರಮೇಶ್ ಶವವನ್ನು ವಶಪಡಿಸಿಕೊಂಡು, ಪಲಾಯನ ಮಾಡಿದ್ದ ಹಂತಕರನ್ನು ಬಂಧಿಸಿದ್ದಾರೆ.

ಡಿಜಿಟಲ್ ಕಣ್ಗಾವಲು, ಇಂತಹ ಅಪರಾಧಗಳನ್ನು ಮಾಡುವವರು ತಾವು ಅತ್ಯಂತ ಚಾಣಾಕ್ಷರು ಎಂದು ಭಾವಿಸುತ್ತಾರೆ. ಆದರೆ, ಇಂದಿನ ತಾಂತ್ರಿಕ ಜಗತ್ತಿನಲ್ಲಿ ಪೊಲೀಸರು ಬಳಸುವ ಮೊಬೈಲ್ ಟವರ್ ಲೊಕೇಶನ್ ಮತ್ತು ಹೆದ್ದಾರಿಗಳ ಸಿಸಿಟಿವಿ ಕ್ಯಾಮೆರಾಗಳು ಅಪರಾಧಿಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚುತ್ತವೆ. ಈ ಕೇಸ್‌ನಲ್ಲೂ ಹಾಸಿನಿ ಪ್ರಿಯಕರನಿಗೆ ನೀಡಿದ ನಿರಂತರ ಕಾಲ್ ಹಿಸ್ಟರಿಯೇ ಆಕೆಗೆ ಮುಳುವಾಗಿದೆ.

ಕುಪ್ಪಂ ಡಿಎಸ್ಪಿ ಪಾರ್ಥಸಾರಥಿ ಅವರ ಮೇಲ್ವಿಚಾರಣೆಯಲ್ಲಿ ರಲ್ಲಾ ಬೂದುಗುರು ಪೊಲೀಸರು ಆರೋಪಿಗಳ ವಿರುದ್ಧ ಕೊಲೆ (IPC 302) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ತನಗಾಗಿ ಜೀವ ಸವೆಯುತ್ತಿದ್ದ ಗಂಡನನ್ನು ಒಂದು ವರ್ಷದ ಮಗುವಿನ ಮುಂದೆಯೇ ಹತ್ಯೆ ಮಾಡಿಸಿದ ಈ ತಾಯಿಯ ಕ್ರೌರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ ಸಿಂಧನೂರು ನ್ಯಾಯಾಲಯ – Kannada News | Illegal Bangladeshi Immigrant Sentenced to 3 Years Prison, Fined by Sindhanooru Court in Raichur

ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡImage Credit source: Tv9 Kannada

ರಾಯಚೂರು, ಜುಲೈ 15: ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್​​ಎಫ್‌ಸಿ ಕೋರ್ಟ್ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಶೋರನಜೀತ್ ಮಂಡಲ್ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾ ಪ್ರಜೆಯಾಗಿದ್ದು, ಸಿಂಧನೂರು ತಾಲೂಕಿನ ಆ‌ರ್.ಹೆಚ್.ಕ್ಯಾಂಪ್ ನಂ-3ರಲ್ಲಿ ಈತ ನೆಲೆಸಿದ್ದ. ಸುಮಾರು 10ರಿಂದ 12 ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಗಡಿದಾಟಿ ಬಂದಿದ್ದ ಶೋರನಜೀತ್, ಬಳಿಕ ಬಾಂಗ್ಲಾ ನಿರಾಶ್ರಿತರ ಕೇಂದ್ರಗಳಿರುವ ಸಿಂಧನೂರು ತಾಲೂಕಿನಲ್ಲಿ ವಾಸವಿದ್ದ.

ಪಾಸ್​​ಪೋರ್ಟ್​​ ಪರಿಶೀಲನೆ ವೇಳೆ ಲಾಕ್​​ ಆಗಿದ್ದ ಶೋರನಜೀತ್

ತಾನು ಭಾರತದ ಪ್ರಜೆ ಎಂದು ಸಾಬೀತು ಪಡಿಸಲು ಶೋರನಜೀತ್ ಚುನಾವಣಾ ಆಯೋಗದಿಂದ ಗುರುತಿನ ಚೀಟಿ, ಆಧಾರ್ ಕಾರ್ಡ, ಪಾನ್​​ ಕಾರ್ಡ್​​ ಜೊತೆಗೆ ಬ್ಯಾಂಕ್​​ ಆಫ್​​ ಬರೋಡದಲ್ಲಿ ಖಾತೆ ಹೊಂದಿದ್ದ. ಈ ದಾಖಲೆಗಳ ಆಧಾರದಲ್ಲಿ 2028ರ ವರೆಗೆ ಪಾಸ್ ಪೋರ್ಟ್ ಕೂಡ ಪಡೆದಿದ್ದ. ಆದರೆ ಜುಲೈ 17 2018ರಲ್ಲಿ ಬಾಂಗ್ಲಾದೇಶಕ್ಕೆ ಹೋಗುವಾಗ ಚೀಫ್ ಇಮಿಗ್ರೇಷನ್ ಸಿಬ್ಬಂದಿ ಪಾಸ್​​ಪೋರ್ಟ್ ಪರಿಶೀಲನೆ ವೇಳೆ ಈತ ಲಾಕ್​​ ಆಗಿದ್ದ. ಆ ಬಳಿಕ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ 2018ರಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕ ರಾಗಲಪರ್ವಿ ಹನುಮೇಶ್ ಈ ಬಗ್ಗೆ ಕೋರ್ಟ್​​ನಲ್ಲಿ ವಾದ ಮಂಡಿಸಿದ್ದು, ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ಶಿಕ್ಷೆ ಪ್ರಕಟಿಸಿದೆ.

ಇದನ್ನೂ ಓದಿ: ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್; ನಂಬರ್ ಪ್ಲೇಟ್, ಚೆಸ್ಸಿ ಅಳಿಸಿ ಮಾರಾಟ ದಂಧೆ

ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ನಾವರು ಅಪ್ರಾಪ್ತರು ಸೇರಿ 11 ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದರು. ವಲಸಿಗರು ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು, ಪಶ್ಚಿಮ ಬಂಗಾಳ ನಿವಾಸಿಗಳೆಂದು ನಕಲಿ ವಿಳಾಸ ಬಳಸಿ ಕೆಲಸಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಪಶ್ಚಿಮ ಬಂಗಾಳ ಮೂಲದ ಏಜೆಂಟ್​​ಗಳ ವಿರುದ್ಧವೂ ಮಂಗಳೂರಿನ ಉರ್ವಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದಕ್ಕೂ ಕೆಲ ದಿನಗಳ ಹಿಂದೆಯಷ್ಟೇ 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಸುರತ್ಕಲ್​ನಲ್ಲಿ ಪೊಲೀಸರು ಬಂಧಿಸಿದ್ದರು ಎನ್ನುವುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉಪಸಭಾಪತಿ ಎಂಕೆ ಪ್ರಾಣೇಶ್ ಪರಿಷತ್ ಸದಸ್ಯತ್ವ ರದ್ದು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾ – Kannada News | Supreme Court Cancels MLC Membership of Karnataka Deputy Chairman MK Pranesh, Dismisses Appeal

ಉಪಸಭಾಪತಿ ಎಂಕೆ ಪ್ರಾಣೇಶ್ ಪರಿಷತ್ ಸದಸ್ಯತ್ವ ರದ್ದು: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾImage Credit source: tv9

ನವದೆಹಲಿ, ಜುಲೈ 16: ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಭಾರೀ ಹಿನ್ನಡೆಯಾಗಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ಈ ಸಂಬಂಧ ಎಂಕೆ ಪ್ರಾಣೇಶ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಪ್ರತಿಸ್ಪರ್ಧಿ ಗಾಯತ್ರಿ ಶಾಂತೇಗೌಡ ಅವರಿಗೆ ಮೇಲುಗೈ ದೊರೆತಂತಾಗಿದೆ.

ಕರ್ನಾಟಕ ಹೈಕೋರ್ಟ್​ ನೀಡಿದ್ದ ತೀರ್ಪು ಏನು?

ಈ ಪ್ರಕರಣದ ಕೇಂದ್ರಬಿಂದುವಾಗಿದ್ದದ್ದು ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕಿನ ಪ್ರಶ್ನೆ. ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೊರೆಹೋಗಿದ್ದ ಪ್ರಾಣೇಶ್

ಈ ತೀರ್ಪನ್ನು ಪ್ರಶ್ನಿಸಿ ಎಂಕೆ ಪ್ರಾಣೇಶ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಇದೀಗ ಸುಪ್ರೀಂಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಇದರೊಂದಿಗೆ ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದಾಗಿದೆ.

ಪ್ರಕರಣದ ಹಿನ್ನೆಲೆ

ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂಕೆ ಪ್ರಾಣೇಶ್ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿರುದ್ಧ ಕೇವಲ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ 12 ಮಂದಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿದ್ದರು. ಈ ಮತಗಳನ್ನು ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪ್ರತ್ಯೇಕಿಸಿ ಮರು ಮತಎಣಿಕೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚಿಸಿತ್ತು.

ನಂತರ ಈ ಆದೇಶವನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ, ಚುನಾವಣಾ ಆಯೋಗದಿಂದ ಮಾಹಿತಿ ಪಡೆದುಕೊಂಡಿದ್ದ ಸುಪ್ರೀಂ ಕೋರ್ಟ್, ಮರು ಮತಎಣಿಕೆ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಇದೀಗ ಅಂತಿಮವಾಗಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ಪ್ರಾಣೇಶ್ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್ ಹೆಸರಿಸಿದ ರಾಬಿನ್ ಉತ್ತಪ್ಪ! – Kannada News | Robin uthappa picks india’s all time odi xi

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ಪಂದ್ಯಗಳ ಯಶಸ್ಸಿನ ಪಯಣ ರೋಚಕವಾದದ್ದು. ಕಪಿಲ್ ದೇವ್ ಸಾರಥ್ಯದ 1983ರ ವರ್ಲ್ಡ್ ಕಪ್ ಗೆಲುವಿನಿಂದ ಹಿಡಿದು, ಧೋನಿ ಯುಗದ 2011ರ ವಿಶ್ವಕಪ್ ವಿಜಯ ಹಾಗೂ ಇತ್ತೀಚಿನ ರನ್ ಮಷಿನ್ ವಿರಾಟ್ ಕೊಹ್ಲಿ ಸಾಮ್ರಾಜ್ಯದವರೆಗೆ ಭಾರತ ಹಲವು ದಿಗ್ಗಜ ಆಟಗಾರರನ್ನು ಕಂಡಿದೆ. ಇಂತಹ ಬಳಗದಿಂದ ಸಾರ್ವಕಾಲಿಕ 11 ಆಟಗಾರರನ್ನು ಆಯ್ಕೆ ಮಾಡುವುದು ಸವಾಲೇ ಸರಿ. ಇದಾಗ್ಯೂ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, ಆಲ್​ ಟೈಮ್ ಒಡಿಐ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಈ ಸಾರ್ವಕಾಲಿಕ ಇಲವೆನ್​ನಲ್ಲಿ ಕಾಣಿಸಿಕೊಂಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಟಾಪ್-3 ಬ್ಯಾಟರ್​ಗಳು:

ಸಚಿನ್ ತೆಂಡೂಲ್ಕರ್: ವಿಶ್ವ ಕ್ರಿಕೆಟ್‌ನ ‘ದೇವರೆಂದೇ’ ಖ್ಯಾತರಾದ ಸಚಿನ್ ಇಲ್ಲದೆ ಯಾವುದೇ ಸಾರ್ವಕಾಲಿಕ ತಂಡ ಅಪೂರ್ಣ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹಾಗೂ ಶತಕ ಸಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರನ್ನು ಉತ್ತಪ್ಪ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.

ಸೌರವ್ ಗಂಗೂಲಿ: ‘ದಾದಾ’ ಖ್ಯಾತಿಯ ಗಂಗೂಲಿ ಮತ್ತು ಸಚಿನ್ ಜೋಡಿ ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿದೆ. ಎಡಗೈ ಆಟಗಾರನಾಗಿ ಗಂಗೂಲಿ ಅವರ ಆಕ್ರಮಣಕಾರಿ ಆಟ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಹೀಗಾಗಿ ಉತ್ತಪ್ಪ ಗಂಗೂಲಿ ಅವರನ್ನು ಓಪನರ್ ಸ್ಥಾನದಲ್ಲಿ ಹೆಸರಿಸಿದ್ದಾರೆ.

ವಿರಾಟ್ ಕೊಹ್ಲಿ: ಮೂರನೇ ಕ್ರಮಾಂಕಕ್ಕೆ ಆಧುನಿಕ ಕ್ರಿಕೆಟ್‌ನ ರನ್ ಮಷಿನ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಗಿಂತ ಸೂಕ್ತ ಆಟಗಾರ ಮತ್ತೊಬ್ಬರಿಲ್ಲ. ಏಕದಿನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಹೊಂದಿರುವ ಕೊಹ್ಲಿಯನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

ಮಧ್ಯಮ ಕ್ರಮಾಂಕ:

ಯುವರಾಜ್ ಸಿಂಗ್: 2011ರ ವಿಶ್ವಕಪ್ ಸರಣಿ ಶ್ರೇಷ್ಠ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ಸಿಕ್ಸರ್‌ಗಳ ಸುರಿಮಳೆಗೈಯುವ ಹಾಗೂ ಬೌಲಿಂಗ್‌ನಲ್ಲೂ ಪ್ರಮುಖ ವಿಕೆಟ್ ಪಡೆಯುವ ಅದ್ಭುತ ಆಲ್‌ರೌಂಡರ್ ಯುವರಾಜ್​ ಸಿಂಗ್ ಅವರನ್ನು ಉತ್ತಪ್ಪ 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ.

ಎಂ.ಎಸ್. ಧೋನಿ (ನಾಯಕ / ವಿಕೆಟ್ ಕೀಪರ್): ಸಾರ್ವಕಾಲಿಕ ತಂಡದ ನಾಯಕತ್ವವನ್ನು ಉತ್ತಪ್ಪ ಅವರು ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಹೆಗಲಿಗೆ ಹೊರಿಸಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಆಗಿಯೂ ಅವರನ್ನೇ ಹೆಸರಿಸಿದ್ದಾರೆ.

ಆಲ್‌ರೌಂಡರ್‌ ಮತ್ತು ಫಿನಿಶರ್ಸ್:

ಸುರೇಶ್ ರೈನಾ: ಏಕದಿನ ಮಾದರಿಯಲ್ಲಿ ನಂಬಿಕಸ್ಥ ಎಡಗೈ ಬ್ಯಾಟರ್. ಲೋವರ್-ಮಿಡಲ್ ಆರ್ಡರ್‌ನಲ್ಲಿ ವೇಗವಾಗಿ ರನ್ ಗಳಿಸುವ, ಅದ್ಭುತ ಫೀಲ್ಡಿಂಗ್ ಹಾಗೂ ಪಾರ್ಟ್-ಟೈಮ್ ಸ್ಪಿನ್ ಮಾಡುವ ಚತುರತೆ ಹೊಂದಿರುವ ಸುರೇಶ್ ರೈನಾ ಅವರನ್ನು ಉತ್ತಪ್ಪ ತಮ್ಮ ಸಾರ್ವಕಾಲಿಕ ಇಲೆವೆನ್​ನಲ್ಲಿ ಹೆಸರಿಸಿದ್ದಾರೆ.

ಕಪಿಲ್ ದೇವ್: 1983ರ ವಿಶ್ವಕಪ್ ಹೀರೊ, ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಕಪಿಲ್ ದೇವ್ ಕೂಡ ರಾಬಿನ್ ಉತ್ತಪ್ಪ ಹೆಸರಿಸಿದ ಸಾರ್ವಕಾಲಿಕ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

ರವೀಂದ್ರ ಜಡೇಜಾ: ಎಂಟನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಲೈನಪ್ ವಿಸ್ತರಿಸಿ ಆಲ್​ಟೈಮ್ ಇಲೆವೆನ್ ಹೆಸರಿಸಿರುವ ಉತ್ತಪ್ಪ, ರವೀಂದ್ರ ಜಡೇಜಾ ಅವರನ್ನು ಕೆಳ ಕ್ರಮಾಂಕದ ಆಲ್​ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ.

ಬೌಲರ್​ಗಳು:

ಅನಿಲ್ ಕುಂಬ್ಳೆ: ಭಾರತದ ಪರ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಈ ತಂಡದ ಮುಖ್ಯ ಸ್ಪಿನ್ನರ್ ಉತ್ತಪ್ಪ ಹೆಸರಿಸಿದ್ದಾರೆ.

ಝಹೀರ್ ಖಾನ್: ಭಾರತದ ಶ್ರೇಷ್ಠ ಎಡಗೈ ವೇಗಿ, ಹೊಸ ಚೆಂಡಿನಲ್ಲಿ ಸ್ವಿಂಗ್ ಹಾಗೂ ಹಳೆಯ ಚೆಂಡಿನಲ್ಲಿ ರಿವರ್ಸ್ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದ ಝಹೀರ್ ಖಾನ್ ಅವರನ್ನು ಕೂಡ ರಾಬಿನ್ ಉತ್ತಪ್ಪ ತಮ್ಮ ಸಾರ್ವಕಾಲಿಕ ಏಕದಿನ ಇಲೆವೆನ್​ಗೆ ಆಯ್ಕೆ ಮಾಡಿದ್ದಾರೆ.

ಜಸ್​ಪ್ರೀತ್ ಬುಮ್ರಾ: ಯಾರ್ಕರ್ ಸ್ಪೆಷಲಿಸ್ಟ್ ಹಾಗೂ ಆಧುನಿಕ ಕ್ರಿಕೆಟ್​ನ ಯಶಸ್ವಿ ಬೌಲರ್​ ಜಸ್​ಪ್ರೀತ್ ಬುಮ್ರಾ ಅವರನ್ನು ಕೂಡ ರಾಬಿನ್ ಉತ್ತಪ್ಪ ಅವರ ಸಾರ್ವಕಾಲಿಕ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದ ಸಾರ್ವಕಾಲಿಕ ಏಕದಿನ ಇಲೆವೆನ್: ಸಚಿನ್ ತೆಂಡೂಲ್ಕರ್ , ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಕಪಿಲ್ ದೇವ್, ರವೀಂದ್ರ ಜಡೇಜಾ, ಅನಿಲ್ ಕುಂಬ್ಳೆ, ಝಹೀರ್ ಖಾನ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: 13 ಸಿಕ್ಸ್​, 5 ಫೋರ್​: ದಾಖಲೆಯ ಸೆಂಚುರಿ ಸಿಡಿಸಿದ ನಿಕೋಲಸ್ ಪೂರನ್

ಒಟ್ಟಾರೆಯಾಗಿ, ರಾಬಿನ್ ಉತ್ತಪ್ಪ ಆರಿಸಿರುವ ಈ ತಂಡವು ಮೈದಾನಕ್ಕಿಳಿದರೆ ವಿಶ್ವದ ಯಾವುದೇ ಬಲಿಷ್ಠ ತಂಡವನ್ನಾದರೂ ಸುಲಭವಾಗಿ ಮಣಿಸುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ!

Published On – 12:16 pm, Thu, 16 July 26

Source link

Exit mobile version