ಮಗಳಿಗೆ ಮಂತ್ರಿಗಿರಿ ಸಿಗುತ್ತಾ?: ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ​​ ಕೆ.ಹೆಚ್. ಮುನಿಯಪ್ಪ

ಬೆಂಗಳೂರು, ಮೇ.31: ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ಪುತ್ರಿಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು, “ಕೇಂದ್ರದಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ನನಗೆ ಯಾವುದೇ ಡಿಫರೆನ್ಸ್ ಇಲ್ಲ. ಹೈಕಮಾಂಡ್ ಏನು ತೀರ್ಮಾನವನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ” ಎಂದು ಹೇಳಿದ್ದಾರೆ. ಇತ್ತೀಚೆಗೆ, ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಕೇಳಿದಾಗ, ಅವರು ಮತ್ತೊಮ್ಮೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು. ಒಟ್ಟಾರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಉತ್ತಮ ಬದಲಾವಣೆಯಾಗಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ. “ಸನ್ಮಾನ್ಯ ಸಿದ್ದರಾಮಯ್ಯನವರಿಗೆ ನಾವು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಒಬ್ಬ ವ್ಯಕ್ತಿ ತಾನು ಅಧಿಕಾರದಲ್ಲಿದ್ದಾಗ ಇಷ್ಟು ಸಮಾಧಾನವಾಗಿ ಅವರೇ ಪ್ರಪೋಸ್ ಮಾಡಿ ಕೆಲಸ ಮಾಡಿದಕ್ಕೆ ಅವರಿಗೆ ನಾವು ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾರ್ಟಿಯು ಸುಗಮವಾಗಿ ನಡೆಯಲಿದ್ದು, ಅವರ ನೇತೃತ್ವದಲ್ಲಿ 2028ಕ್ಕೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಕೆ.ಹೆಚ್. ಮುನಿಯಪ್ಪ ಹೊಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿದೆ ನೋಡಿ ಡಿ.ಕೆ. ಶಿವಕುಮಾರ್​​ ಅವರ ಕನಕಪುರದ ಭವ್ಯ ಬಂಗಲೆ!

ಬೆಂಗಳೂರು ದಕ್ಷಿಣ, ಮೇ 31: ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಜೂನ್ ಮೂರರಂದು ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಕನಕಪುರದಲ್ಲಿ ವ್ಯಾಪಕ ಸಂತಸ ಮನೆ ಮಾಡಿದೆ. ಕನಕಪುರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸವು ಕ್ಷೇತ್ರದ ರಾಜಕೀಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಕನಕಪುರ ತಾಲೂಕಿನ ದೊಡ್ಡಹಾಲಹಳ್ಳಿ ಅವರ ಹುಟ್ಟೂರಾಗಿದ್ದರೂ, ಶಾಸಕರಾದ ನಂತರ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ ಕನಕಪುರದಲ್ಲಿ ಒಂದು ಭವ್ಯವಾದ ಬಂಗಲೆಯನ್ನು ನಿರ್ಮಿಸಿದ್ದಾರೆ. ಕನಕಪುರಕ್ಕೆ ಭೇಟಿ ನೀಡಿದಾಗ, ಕುಟುಂಬ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಅವರು ಇದೇ ಮನೆಯಲ್ಲಿ ತಂಗುತ್ತಾರೆ. ಕ್ಷೇತ್ರದ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದು ಪ್ರಮುಖ ತಾಣವಾಗಿದೆ. ಡಿಕೆಶಿ ಅವರ ಭವ್ಯ ಬಂಗಲೆ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​

ವಿಜಯಪುರ, ಮೇ 31: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಸಿದ್ದರಾಮಯ್ಯರ ರಾಜಕೀಯ ಶೈಲಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡಿಲ್ಲ. ನನಗೂ ಅವರ ಬಗ್ಗೆ ಒಂದು ರೀತಿ ಗೌರವ ಇದೆ, ಏಕೆಂದರೆ ಅವರು ಹಿರಿಯ ನಾಯಕರು ಮತ್ತು ಹೆಚ್ಚು ಬಾರಿ ಮುಖ್ಯಮಂತ್ರಿಯಾದವರು. ವಿಧಾನಸಭೆಯಲ್ಲಿ ಎಷ್ಟೇ ಟೀಕೆ ಮತ್ತು ಜಗಳ ಮಾಡಿದರು, ಹೊರಗೆ ಬಂದ ಮೇಲೆ ಯಾರಿಗೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡುವಂತಹ ವ್ಯಕ್ತಿ ಸಿದ್ದರಾಮಯ್ಯ ಅಲ್ಲ. ಆದರೆ ಇನ್ಮುಂದೆ ಅದು ನಡೆಯಲಿದೆ. ಈಗ ಬೇರೆಯವರ ಫೈಲ್‌ಗಳು ಓಪನ್ ಆಗುತ್ತವೆ. ಹಾಗಾಗಿ ವಿಜಯೇಂದ್ರ ಮತ್ತು ಆರ್​. ಅಶೋಕ್​​ ಹುಷಾರಾಗಿರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

CUET UG 2026: ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ NTA

ದೇಶಾದ್ಯಂತ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಶನಿವಾರ (ಮೇ 30) ನಡೆದ ಸಿಯುಇಟಿ-ಯುಜಿ (CUET-UG) ಪ್ರವೇಶ ಪರೀಕ್ಷೆಯ ವೇಳೆ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದರಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಅವಕಾಶವನ್ನು ಪ್ರಕಟಿಸಿದೆ.

ಎನ್‌ಟಿಎ (NTA) ಸ್ಪಷ್ಟನೆ:

ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ NTA, “ಇಂದಿನ ತಾಂತ್ರಿಕ ಅಡಚಣೆಯು ಕೆಲವು CUET (UG)ಅಭ್ಯರ್ಥಿಗಳಿಗೆ ತೊಂದರೆ ಉಂಟುಮಾಡಿದೆ. ಶನಿವಾರ (30.05.2026) ಮೊದಲ ಶಿಫ್ಟ್‌ನಲ್ಲಿ (Shift-I) ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ, ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಂಡಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು,” ಎಂದು ತಿಳಿಸಿದೆ.

ಪರೀಕ್ಷಾ ಸಮಯದಲ್ಲಿ ಬದಲಾವಣೆ:

ಟಿಸಿಎಸ್ (TCS) ಸಂಸ್ಥೆಯು ತನ್ನ ಕಡೆಯಿಂದ ಉಂಟಾದ ತಾಂತ್ರಿಕ ದೋಷದಿಂದಾಗಿ ಕೆಲವು ಕೇಂದ್ರಗಳಲ್ಲಿ ಪರೀಕ್ಷೆ ವಿಳಂಬವಾಗಿದೆ ಎಂದು ವರದಿ ಮಾಡಿದೆ. ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲಾಗಿದ್ದು, ಯಾವುದೇ ಅಭ್ಯರ್ಥಿಗೆ ನಷ್ಟವಾಗದಂತೆ ಪೂರ್ಣ ಪರಿಹಾರ ಸಮಯವನ್ನು (Compensatory Time) ನೀಡಲಾಗಿತ್ತು.

ಇದೇ ಕಾರಣಕ್ಕೆ ಮಧ್ಯಾಹ್ನದ ಅವಧಿಯ ಪರೀಕ್ಷೆಯ ಸಮಯವನ್ನು ಪರಿಷ್ಕರಿಸಲಾಗಿತ್ತು. ಮಧ್ಯಾಹ್ನ 3:00 ಗಂಟೆಯ ಬದಲಿಗೆ 4:00 ಗಂಟೆಗೆ ಪರೀಕ್ಷೆ ಆರಂಭಿಸಲಾಗಿತ್ತು ಹಾಗೂ ಅಭ್ಯರ್ಥಿಗಳ ಪ್ರವೇಶದ ಸಮಯವನ್ನು ಮಧ್ಯಾಹ್ನ 2:30 ಕ್ಕೆ ನಿಗದಿಪಡಿಸಲಾಗಿತ್ತು. ಬೆಳಗ್ಗಿನ ಶಿಫ್ಟ್‌ನ ವಿದ್ಯಾರ್ಥಿಗಳಿಗೆ ಪೂರ್ಣ ಸಮಯವನ್ನು ನೀಡಲಾಗಿದ್ದು, ಪರೀಕ್ಷೆ ಮುಗಿದ ನಂತರವಷ್ಟೇ ಹೊರಹೋಗಲು ಅನುಮತಿಸಲಾಗಿತ್ತು.

ಟಿಸಿಎಸ್ (TCS) ವಿಷಾದ:

ಟಿಸಿಎಸ್ ಮುಖ್ಯಸ್ಥ ಕೆ. ಕೃತಿವಾಸನ್ ಅವರು ಮಾತನಾಡಿ, “ಬೆಳಗಿನ ಶಿಫ್ಟ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಪರೀಕ್ಷೆ ವಿಳಂಬವಾಗಿತ್ತು. ನಮ್ಮ ತಾಂತ್ರಿಕ ತಂಡವು ತಕ್ಷಣವೇ ಸಮಸ್ಯೆಯನ್ನು ಗುರುತಿಸಿ ಪರಿಹರಿಸಿದೆ. ಪರೀಕ್ಷೆಯ ಪವಿತ್ರತೆಗೆ ಯಾವುದೇ ಧಕ್ಕೆಯಾಗದಂತೆ ಪರೀಕ್ಷೆಯನ್ನು ಪುನರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಂಟಾದ ಅನನುಕೂಲತೆಗೆ ವಿಷಾದಿಸುತ್ತೇವೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ; ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ

ಪೋಷಕರು ಮತ್ತು ವಿದ್ಯಾರ್ಥಿಗಳ ಆಕ್ರೋಶ:

ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಇಂತಹ ಗಂಭೀರ ಲೋಪಗಳು ನಡೆದಿರುವುದಕ್ಕೆ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀವ್ರವಾದ ಬಿಸಿಲಿನಲ್ಲಿ ಪರೀಕ್ಷಾ ಕೇಂದ್ರಗಳ ಹೊರಗೆ 3-4 ಗಂಟೆಗಳ ಕಾಲ ಕಾಯಬೇಕಾಯಿತು ಮತ್ತು ಕೇಂದ್ರಗಳಲ್ಲಿ ಯಾವುದೇ ಸರಿಯಾದ ಸಂವಹನ ವ್ಯವಸ್ಥೆ ಇರಲಿಲ್ಲ ಎಂದು ‘X’ ನಲ್ಲಿ ದೂರಿದ್ದಾರೆ.

ಸಹಾಯವಾಣಿ:

ವಿದ್ಯಾರ್ಥಿಗಳಿಗೆ ಸಹಾಯ ಮಾಡಲು NTA ವಿಶೇಷ ಸಹಾಯವಾಣಿ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ಒದಗಿಸಿದೆ:

  • ಸಹಾಯವಾಣಿ ಸಂಖ್ಯೆ: +91-11-40759000
  • ಇಮೇಲ್: cuet-ug@nta.ac.in

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BRO Recruitment 2026: ಐಟಿಐ, 10ನೇ ತರಗತಿ ಪಾಸ್ ಆದವರಿಗೆ ರಕ್ಷಣಾ ಇಲಾಖೆಯಲ್ಲಿ ಉದ್ಯೋಗ; 899 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಗಡಿ ರಸ್ತೆಗಳ ಸಂಸ್ಥೆಯು (Border Roads Organisation – BRO) ದೇಶಾದ್ಯಂತ ಅರ್ಹ ಪುರುಷ ಅಭ್ಯರ್ಥಿಗಳಿಂದ ವಿವಿಧ ತಾಂತ್ರಿಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಸಕ್ತ ಸಾಲಿನ ಈ ಬೃಹತ್ ನೇಮಕಾತಿಯ ಅಡಿಯಲ್ಲಿ ಒಟ್ಟು 899 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಭಾರತೀಯ ರಕ್ಷಣಾ ವಲಯದಲ್ಲಿ ಮತ್ತು ದೇಶದ ಗಡಿ ಭಾಗಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುವ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆಸಕ್ತರು ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಕೆಳಗೆ ಗಮನಿಸಬಹುದು.

ಭರ್ತಿ ಮಾಡಲಾಗುವ ಹುದ್ದೆಗಳು ಮತ್ತು ಹಂಚಿಕೆಯ ವಿವರ:

ಈ ಪ್ರಕಟಣೆಯ ಅಡಿಯಲ್ಲಿ ಒಟ್ಟು 899 ಹುದ್ದೆಗಳನ್ನು ದೇಶದ ವಿವಿಧ ಗಡಿ ರಸ್ತೆ ಯೋಜನೆಗಳಿಗಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಎಲೆಕ್ಟ್ರಿಷಿಯನ್ (Electrician), ವೆಹಿಕಲ್ ಮೆಕ್ಯಾನಿಕ್ (Vehicle Mechanic), ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ (Driver Mechanical Transport) ಮತ್ತು ವಿವಿಧ ವಿಭಾಗಗಳ ಮಲ್ಟಿ ಸ್ಕಿಲ್ಡ್ ವರ್ಕರ್ (Multi Skilled Worker) ಹುದ್ದೆಗಳನ್ನು ಒಳಗೊಳ್ಳಲಾಗಿದೆ. ಅಭ್ಯರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯ ಮತ್ತು ಆಸಕ್ತಿಗೆ ಅನುಗುಣವಾಗಿ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳಿಗೆ ಇರಬೇಕಾದ ಅಗತ್ಯ ಶೈಕ್ಷಣಿಕ ಅರ್ಹತೆಗಳು:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಮೂಲಭೂತವಾಗಿ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ (10th/Matriculation) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ, ಎಲೆಕ್ಟ್ರಿಷಿಯನ್ ಮತ್ತು ವೆಹಿಕಲ್ ಮೆಕ್ಯಾನಿಕ್‌ನಂತಹ ತಾಂತ್ರಿಕ ಹುದ್ದೆಗಳಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ (ITI) ಪ್ರಮಾಣಪತ್ರ ಅಥವಾ ಡಿಪ್ಲೊಮಾ ಪದವಿ ಪಡೆದಿರುವುದು ಕಡ್ಡಾಯವಾಗಿದೆ. ಇನ್ನು ಡ್ರೈವರ್ ಹುದ್ದೆಗಳಿಗೆ ಭಾರೀ ವಾಹನ ಚಾಲನಾ ಪರವಾನಗಿ (HMV Driving License) ಇರಬೇಕಾಗುತ್ತದೆ.

ಅಭ್ಯರ್ಥಿಗಳ ವಯೋಮಿತಿ ಮತ್ತು ನಿಯಮಾನುಸಾರ ಸಡಿಲಿಕೆ:

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯನ್ನು ಆಯಾ ಹುದ್ದೆಗಳ ಜವಾಬ್ದಾರಿಗೆ ಅನುಗುಣವಾಗಿ 25 ರಿಂದ 27 ವರ್ಷಗಳ ಒಳಗಾಗಿ ನಿಗದಿಪಡಿಸಲಾಗಿದೆ. ಭಾರತ ಸರ್ಕಾರದ ಮೀಸಲಾತಿ ನಿಯಮಾವಳಿಗಳ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳು ಹಾಗೂ ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 3 ವರ್ಷಗಳ ಕಾಲ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ಅರ್ಹರನ್ನು ಆಯ್ಕೆ ಮಾಡುವ ವಿವಿಧ ಹಂತದ ಪ್ರಕ್ರಿಯೆಗಳು:

ಅರ್ಹ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಒಟ್ಟು ನಾಲ್ಕು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳು ನಿಗದಿಪಡಿಸಿದ ದೈಹಿಕ ಮಾನದಂಡಗಳನ್ನು ಪೂರೈಸಲು ದೈಹಿಕ ದಕ್ಷತೆ ಪರೀಕ್ಷೆಯನ್ನು (PET) ಎದುರಿಸಬೇಕಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರಿಗೆ ಹುದ್ದೆಗೆ ಸಂಬಂಧಿಸಿದ ಪ್ರಾಯೋಗಿಕ ಅಥವಾ ಟ್ರೇಡ್ ಟೆಸ್ಟ್ ನಡೆಸಲಾಗುತ್ತದೆ. ತದನಂತರ ಸಾಮಾನ್ಯ ಜ್ಞಾನ ಮತ್ತು ವಿಷಯ ಆಧಾರಿತ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಅಂತಿಮವಾಗಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಕಡ್ಡಾಯ ಸೇನಾ ವೈದ್ಯಕೀಯ ತಪಾಸಣೆಯನ್ನು (Medical Exam) ನಡೆಸಿ ನೇಮಕಾತಿ ಆದೇಶ ನೀಡಲಾಗುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ:

ಈ ನೇಮಕಾತಿಗೆ ಕೇವಲ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂಬುದನ್ನು ಗಮನಿಸಬೇಕು. ಆಸಕ್ತರು ಮೊದಲು ಬಿಆರ್‌ಓ ಅಧಿಕೃತ ವೆಬ್‌ಸೈಟ್ ಆದ www.bro.gov.in ಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಅರ್ಜಿಯನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ, ನಿಮ್ಮ ಶೈಕ್ಷಣಿಕ ಹಾಗೂ ಅಗತ್ಯ ದಾಖಲೆಗಳ ನಕಲು ಪ್ರತಿಯನ್ನು ಲಗತ್ತಿಸಬೇಕು. ನಂತರ ಆ ಅಪ್ಲಿಕೇಶನ್ ಅಧಿಸೂಚನೆಯಲ್ಲಿ ಸೂಚಿಸಿರುವ ಅಧಿಕೃತ ಅಂಚೆ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ತಲುಪುವಂತೆ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕಾಗುತ್ತದೆ.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಪಾವತಿಸಬೇಕಾದ ಅರ್ಜಿ ಶುಲ್ಕದ ವಿವರ ಮತ್ತು ಅರ್ಜಿಯನ್ನು ತಲುಪಿಸಬೇಕಾದ ನಿಖರವಾದ ವಿಳಾಸದ ಮಾಹಿತಿಗಾಗಿ ಅಭ್ಯರ್ಥಿಗಳು ಬಿಆರ್‌ಓ ಜಾಲತಾಣದಲ್ಲಿ ಲಭ್ಯವಿರುವ ಮೂಲ ಅಧಿಕೃತ ಪ್ರಕಟಣೆಯನ್ನು (Official Notification) ಸಂಪೂರ್ಣವಾಗಿ ಓದಿ ಪರಿಶೀಲಿಸಲು ಕೋರಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಮೋದಿ ಮೈದಾನದಲ್ಲಿ ಕೊಹ್ಲಿ- ಗಿಲ್ ದಾಖಲೆ ಹೇಗಿದೆ?

ಐಪಿಎಲ್ 2026 ರ ಫೈನಲ್ (IPL 2026 Final ) ಪಂದ್ಯ ಮೇ 31 ರಂದು ಅಂದರೆ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ, ಆತಿಥೇಯ ಗುಜರಾತ್ ತಂಡವನ್ನು ಎದುರಿಸಲಿದ್ದು, ಎರಡೂ ತಂಡಗಳು ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಹೊಂದಿವೆ. ಅಂದರೆ ಉಭಯ ತಂಡಗಳು ಈಗಾಗಲೇ ತಲಾ ಒಮ್ಮೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿವೆ. ಇದೀಗ ಈ ಫೈನಲ್ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಲಿದೆ. ಇತ್ತ ಗುಜರಾತ್ ಗೆದ್ದರೆ, 2022 ರ ನಂತರ ಮತ್ತೆ ಪ್ರಶಸ್ತಿಯನ್ನು ಎತ್ತಿಹಿಡಿಯಲಿದೆ.

ಗಿಲ್- ಕೊಹ್ಲಿ ಪ್ರದರ್ಶನ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪೈನಲ್ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಗುಜರಾತ್ ನಾಯಕ ಗಿಲ್ ಮೇಲೆ ಇರುತ್ತವೆ. ಏಕೆಂದರೆ ಇವರಿಬ್ಬರು ಕ್ರೀಸ್​ನಲ್ಲಿ ನೆಲ ಕಚ್ಚಿ ನಿಂತರೆ ತಂಡಗಳಿಗೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಈ ಬಾರಿಯ ಐಪಿಎಲ್‌ನಲ್ಲಿ ಎಷ್ಟೋ ಬಾರಿ ಸಾಭೀತಾಗಿದೆ. ಹೀಗಾಗಿ ಉಭಯ ತಂಡಗಳ ಅಭಿಮಾನಿಗಳು ಇವರಿಬ್ಬರು ಒಂದೊಳ್ಳೆ ಇನ್ನಿಂಗ್ಸ್ ಆಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

1374 ರನ್ ಬಾರಿಸಿರುವ ಗಿಲ್

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಭ್​ಮನ್ ಗಿಲ್ ಅವರ ಐಪಿಎಲ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಗಿಲ್ ಈ ಮೈದಾನದಲ್ಲಿ ಇದುವರೆಗೆ ಆಡಿರುವ 31 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 49.07 ರ ಸರಾಸರಿ ಮತ್ತು 163 ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1374 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಗಿಲ್ 3 ಶತಕಗಳು ಮತ್ತು 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಗಿಲ್ ಈ ಮೈದಾನದಲ್ಲಿ 132 ಬೌಂಡರಿಗಳು ಮತ್ತು 54 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ.

ಕೊಹ್ಲಿ ಪ್ರದರ್ಶನ ಹೇಗಿದೆ?

ಇತ್ತ ಅಹಮದಾಬಾದ್‌ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಈ ಮೈದಾನದಲ್ಲಿ ಇದುವರೆಗೆ ಎಂಟು ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 48.33 ಸರಾಸರಿ ಮತ್ತು ಸುಮಾರು 135 ಸ್ಟ್ರೈಕ್ ರೇಟ್‌ನಲ್ಲಿ 290 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿದ್ದು, ಅವರ ಅತ್ಯಧಿಕ ಸ್ಕೋರ್ ಅಜೇಯ 70 ರನ್ ಆಗಿದೆ. ಕೊಹ್ಲಿ ಇಲ್ಲಿ ಗಿಲ್‌ನಷ್ಟು ಪಂದ್ಯಗಳನ್ನು ಆಡಿಲ್ಲ, ಆದರೆ ಅವರು ಇಲ್ಲಿ ಆಡಿದ ಪಂದ್ಯಗಳು ವಿಶೇಷವಾಗಿವೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ಆಟಗಾರರು ಮಿಂಚುವ ಅವಕಾಶವಿದೆ. ಅಂತಿಮವಾಗಿ ಯಾರು ತಂಡಕ್ಕೆ ಜಯ ತಂದುಕೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ

ಬೆಂಗಳೂರು, ಮೇ,31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಥಳೀಯರು ಹಾಗೂ ಪರಭಾಷಿಕರ ನಡುವಿನ ಭಾಷಾ ಸಂಘರ್ಷ ಮತ್ತು ದರ್ಪದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದೀಗ ಆಟೋ ಪ್ರಯಾಣದ ವೇಳೆ ಹೆಚ್ಚಿನ ಲಗೇಜ್ ತಂದಿದ್ದನ್ನು ಪ್ರಶ್ನಿಸಿದ ಆಟೋ ಡ್ರೈವರ್ ಒಬ್ಬನ ಮೇಲೆ ಮಹಿಳೆ ಸೇರಿದಂತೆ ನಾಲ್ವರು ಹಿಂದಿ ಭಾಷೆಯಲ್ಲಿ ನಿಂದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಲು ಆಟೋ ಬುಕ್ ಮಾಡಿದ್ದರು. ಆದರೆ, ಅವರು ನಿಯಮಕ್ಕಿಂತ ಅತಿ ಹೆಚ್ಚಿನ ಲಗೇಜ್ ಹೊಂದಿದ್ದ ಹಿನ್ನೆಲೆಯಲ್ಲಿ, “ಇಷ್ಟೊಂದು ಲಗೇಜ್ ಮತ್ತು ನಾಲ್ಕು ಜನ ಪ್ರಯಾಣಿಕರು ಆಟೋದಲ್ಲಿ ಹಿಡಿಸುವುದಿಲ್ಲ” ಎಂದು ಆಟೋ ಚಾಲಕ ಅತ್ಯಂತ ವಿನಮ್ರವಾಗಿ ಹೇಳಿದ್ದಾರೆ. ಇದಕ್ಕೆ ಕೆರಳಿದ ಮಹಿಳೆ ಮತ್ತು ಆಕೆಯ ಜೊತೆಗಿದ್ದವರು ರಸ್ತೆಯಲ್ಲೇ ಮನಬಂದಂತೆ ನಿಂದಿಸಲು ಆರಂಭಿಸಿದ್ದಾರೆ. ಮಹಿಳೆ ಆಟೋ ಚಾಲಕನಿಗೆ ತೀವ್ರವಾಗಿ ನಿಂದಿಸುತ್ತಾ, “ಇದೇನು ನಿನ್ನ ಅಪ್ಪನ ರಸ್ತೆಯೇ? ನೀವೆಲ್ಲಾ ನಮ್ಮ ದುಡ್ಡಿನಿಂದಲೇ ಬದುಕುತ್ತಿರೋದು! ನಾನು ಆಟೋ ಬುಕ್ ಮಾಡಿದರೆ ಮಾತ್ರ ನಿನ್ನ ಜೀವನ ನಡೆಯುತ್ತದೆ” ಎಂದು ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಆಕೆ, ಸ್ಥಳೀಯ ಭಾಷೆಯ ಗಂಧ-ಗಾಳಿಯಿಲ್ಲದೆ “ನನ್ನ ಜೊತೆ ಹಿಂದಿಯಲ್ಲೇ ಮಾತನಾಡು” ಎಂದು ಆಟೋ ಚಾಲಕನಿಗೆ ದರ್ಪದಿಂದ ಅವಾಜ್ ಹಾಕಿದ್ದಾರೆ.

ಬಡ ಆಟೋ ಚಾಲಕ ತನಗಾದ ಅನ್ಯಾಯ ಮತ್ತು ನಿಂದನೆಯನ್ನು ಮೊಬೈಲ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೊ ವೀಕ್ಷಿಸಿದ ಕನ್ನಡಿಗರು ಮತ್ತು ನೆಟ್ಟಿಗರು ಪರಭಾಷಿಕರ ಈ ಉದ್ಧಟತನ ಹಾಗೂ ಭಾಷಾ ಅಹಂಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಬೆಂಗಳೂರಿಗೆ ಬಂದು ಇಲ್ಲಿನ ಬಡ ದುಡಿಮೆಗಾರರ ಮೇಲೆ ಇಂತಹ ದರ್ಪ ತೋರುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಕಮೆಂಟ್ ಮಾಡುತ್ತಿದ್ದು, ಪೊಲೀಸರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದರು ಶಿವಣ್ಣ: ಕಾರಣ?

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಭಾರಿ ಬಜೆಟ್​ನ ಸಿನಿಮಾ ಇದಾಗಿದ್ದು, ರಾಮ್ ಚರಣ್ ಸೇರಿದಂತೆ ಇಡೀ ಚಿತ್ರತಂಡ ದೇಶದಾದ್ಯಂತ ಸಂಚರಿಸಿ ಸಿನಿಮಾದ ಪ್ರಚಾರ ಮಾಡುತ್ತಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರ ಮಾಡಿದ್ದಾರೆ. ಶಿವಣ್ಣನ ಪಾತ್ರದ ಬಗ್ಗೆ ಮಾತನಾಡಿದ್ದ ರಾಮ್ ಚರಣ್ ಅದೊಂದು ಅದ್ಭುತವಾದ ಪಾತ್ರ, ಶಿವಣ್ಣ ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಎಂದಿದ್ದರು. ಆದರೆ ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದರಂತೆ. ಕಾರಣವೇನು?

‘ಪೆದ್ದಿ’ ಸಿನಿಮಾದ ಆಫರ್ ಮೊದಲು ಬಂದಾಗ ಶಿವಣ್ಣ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಆದರೆ ಆಫರ್ ಬಂದ ಕೆಲ ದಿನಗಳಲ್ಲಿಯೇ ಶಿವಣ್ಣನಿಗೆ ಅನಾರೋಗ್ಯ ಕಾಡಲು ಶುರುವಾಯ್ತು. ಈ ಬಗ್ಗೆ ಚೆನ್ನೈನಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್, ‘ನನಗೆ ಮೊದಲು ಬುಚ್ಚಿಬಾಬು ಕತೆ ಹೇಳಿದಾಗ ಬಹಳ ಇಷ್ಟವಾಯ್ತು. ಅದೇ ದಿನ ನಾನು ರಾಮ್ ಚರಣ್ ಜೊತೆ ಸಹ ಮಾತನಾಡಿ, ಸಿನಿಮಾನಲ್ಲಿ ನಟಿಸುವೆನೆಂದು ಸಹ ಹೇಳಿದ್ದೆ. ಆದರೆ ಆ ನಂತರ ನನಗೆ ಕ್ಯಾನ್ಸರ್ ಇರುವುದು ಗೊತ್ತಾಯ್ತು. ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಬೇಕಾಯ್ತು’ ಎಂದಿದ್ದಾರೆ ಶಿವರಾಜ್ ಕುಮಾರ್.

‘ಅಮೆರಿಕದಲ್ಲಿ ಚಿಕಿತ್ಸೆ ತಡವಾಗುತ್ತದೆ, ವಿಶ್ರಾಂತಿಗೆಲ್ಲ ಸಮಯ ಬೇಕಾಗುತ್ತದೆ ಎಂದಾದಾಗ ನಾನು ನಿರ್ದೇಶಕ ಬುಚ್ಚಿಬಾಬು ಬಳಿ ಮಾತನಾಡಿದೆ, ಕಷ್ಟವಾಗುತ್ತದೆ ನಾನು ನಟಿಸುವುದಿಲ್ಲ, ನೀವು ಬೇರೆಯವರನ್ನು ನೋಡಿಕೊಳ್ಳಿ ಎಂದೆ. ಆದರೆ ಬುಚ್ಚಿಬಾಬು ಒಪ್ಪಲಿಲ್ಲ, ನಾವು ನಿಮಗಾಗಿ ಕಾಯುತ್ತೇವೆ. ನಮಗೆ ನೀವೇ ಬೇಕು ಎಂದರು. ಮಾತ್ರವಲ್ಲದೆ ನನಗಾಗಿ ಅವರು ಬಹಳ ಸಮಯ ಕಾದರು ಸಹ. ಇದಕ್ಕೆ ನಾನು ಬುಚ್ಚಿಬಾಬು ಸನಾ ಅವರಿಗೆ ಆಭಾರಿ ಆಗಿದ್ದೇನೆ’ ಎಂದಿದ್ದಾರೆ ಶಿವಣ್ಣ. 2024 ರಲ್ಲಿ ಶಿವರಾಜ್ ಕುಮಾರ್ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಯ್ತು, ಅಮೆರಿಕದ ಮಿಯಾಮಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯ್ತು. ಬಳಿಕ ಅವರು ಸಂಪೂರ್ಣವಾಗಿ ಗುಣವಾದರು.

ಇದನ್ನೂ ಓದಿ:ಚೆನ್ನೈನಲ್ಲಿ ‘ಪೆದ್ದಿ’ ಪ್ರಚಾರಕ್ಕೆ ಬಂದ ರಾಮ್ ಚರಣ್: ವಿಡಿಯೋ

ಶಿವರಾಜ್ ಕುಮಾರ್ ಅವರು ಅಮೆರಿಕದಿಂದ ವಾಪಸ್ಸಾಗಿ ಕೆಲ ವಾರಗಳ ಬಳಿಕ ಬುಚ್ಚಿಬಾಬು ಸನಾ ಶಿವಣ್ಣನ ಮನೆಗೆ ಬಂದು ಮೇಕಪ್ ಟೆಸ್ಟ್ ಮಾಡಿದ್ದರು. ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಶಿವಣ್ಣ ಮೊದಲು ಮೇಕಪ್ ಧರಿಸಿದ್ದು ‘ಪೆದ್ದಿ’ ಸಿನಿಮಾಕ್ಕಾಗಿಯೇ. ಅದಾದ ನಂತರ ಶಿವಣ್ಣ ‘ಪೆದ್ದಿ’ ಸಿನಿಮಾದ ಶೂಟಿಂಗ್​​ನಲ್ಲಿ ಭಾಗಿ ಆದರು. ‘ಪೆದ್ದಿ’ ಸಿನಿಮಾನಲ್ಲಿ ಶಿವಣ್ಣ ಗೌಡನಾಯ್ಡು ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ರಾಮ್ ಚರಣ್​​ಗೆ ಕುಸ್ತಿ ಹೇಳಿಕೊಡುವ ಗುರುವಿನ ಪಾತ್ರ ಅವರದ್ದು.

‘ಪೆದ್ದಿ’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಾಯಕಿ. ಬಾಲಿವುಡ್ ನಟ ದಿವ್ಯೇಂದು ವಿಲನ್, ಬಾಲಿವುಡ್ ನಟ ಬೊಮನ್ ಇರಾನಿ, ಜಗಪತಿ ಬಾಬು ಇನ್ನೂ ಹಲವರಿದ್ದಾರೆ. ಶ್ರುತಿ ಹಾಸನ್, ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಹಣ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಂಧಾನಕ್ಕೆ ಮುಂದಾಗಿದ್ದ ರಣ್ವೀರ್ ಸಿಂಗ್, ತಿರಸ್ಕರಿಸಿದ ಫರ್ಹಾನ್ ಅಖ್ತರ್

ರಣ್ವೀರ್ ಸಿಂಗ್ (Ranveer Singh) ವಿರುದ್ಧ ಬಾಲಿವುಡ್​​ನ ನೌಕರರ ಒಕ್ಕೂಟ ನಿಷೇಧ ಹೇರಿದೆ. ರಣ್ವೀರ್ ಸಿಂಗ್, ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದಿದ್ದು ಮಾತ್ರವಲ್ಲದೆ ನಷ್ಟ ಪರಿಹಾರ ನೀಡಲು ನಿರಾಕರಿಸಿದ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ. ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾನಲ್ಲಿ ತಾವು ಕೆಲಸ ಮಾಡುವುದಿಲ್ಲ ಎಂದು ನೌಕರರ ಒಕ್ಕೂಟ ಘೋಷಿಸಿದೆ. ಆದರೆ ಈ ವಿವಾದವನ್ನು ಅಂತ್ಯಗೊಳಿಸಲು ರಣ್ವೀರ್ ಸಿಂಗ್ ಮುಂದಾಗಿದ್ದರಂತೆ, ರಣ್ವೀರ್ ಸಿಂಗ್ ಅವರು ಸಂಧಾನದ ಪ್ರಯತ್ನ ಮಾಡಿದ್ದರಂತೆ. ಆದರೆ ‘ಡಾನ್ 3’ ಸಿನಿಮಾದ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಷ್ ಸಿದ್ವಾನಿ ಅವರು ರಣ್ವೀರ್ ಆಫರ್ ಅನ್ನು ಸ್ಪಷ್ಟವಾಗಿ ತಿರಸ್ಕರಿಸಿದರಂತೆ.

ರಣ್ವೀರ್ ಸಿಂಗ್ ‘ಡಾನ್ 3’ ಸಿನಿಮಾ ನಿರಾಕರಿಸಿದರ ಪ್ರತಿಯಾಗಿ ಬೇರೊಂದು ಸಿನಿಮಾನಲ್ಲಿ ನಟಿಸುವುದಾಗಿ ಹೇಳಿದ್ದರಂತೆ. ಫರ್ಹಾನ್ ಅಖ್ತರ್ ಅಥವಾ ಅವರ ಸಹೋದರಿ ಜೋಯಾ ಅಖ್ತರ್ ಜೊತೆಗೆ ಹೊಸ ಸಿನಿಮಾನಲ್ಲಿ ಕೆಲಸ ಮಾಡುವ ಆಫರ್ ಅನ್ನು ನೀಡಿದ್ದರು ರಣ್ವೀರ್ ಸಿಂಗ್. ಮೂವರು ಒಟ್ಟಿಗೆ ಕೂತು ನಿರ್ಧರಿಸಿದ ಹೊಸ ಸಿನಿಮಾನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದರಂತೆ. ಆದರೆ ಈ ಆಫರ್ ಅನ್ನು ಫರ್ಹಾನ್ ಅಖ್ತರ್ ಮತ್ತು ಅವರ ಪಾರ್ಟನರ್ ರಿತೇಷ್ ಸಿದ್ವಾನಿ ನಿರಾಕರಿಸಿದರಂತೆ.

ಇದನ್ನೂ ಓದಿ:ರಣ್ವೀರ್ ಸಿಂಗ್​​ಗೆ ಮುಂಚೆ ಬಾಲಿವುಡ್​​ನಲ್ಲಿ ನಿಷೇಧಕ್ಕೊಳಗಾಗಿದ್ದ ನಟರಿವರು

ಅದು ಮಾತ್ರವೇ ಅಲ್ಲದೆ, ರಣ್ವೀರ್ ಸಿಂಗ್ ಯಾವುದೇ ಸಂಧಾನದ ಪ್ರಯತ್ನ ಅಥವಾ ಸಭೆಯ ಪ್ರಯತ್ನ ಮಾಡುವುದಾದರೆ ಖುದ್ದು ತಾವಿಬ್ಬರೂ ಹಾಜರಿರಲೇ ಬೇಕು ಎಂದು ಸಹ ಫರ್ಹಾನ್ ಮತ್ತು ರಿತೇಷ್ ಹೇಳಿದ್ದಾರೆ. ಈ ಹಿಂದೆ ಆಮಿರ್ ಖಾನ್ ಮನೆಯಲ್ಲಿ ಸಭೆ ನಡೆದಾಗ, ಫರ್ಹಾನ್ ಮತ್ತು ರಿತೇಷ್ ಹಾಜರಿದ್ದರೆ ತಾವು ಸಭೆಗೆ ಬರುವುದಿಲ್ಲ, ಸಭೆ ಪ್ರತ್ಯೇಕವಾಗಿಯೇ ನಡೆಯಬೇಕು ಎಂದು ಫರ್ಹಾನ್ ಅಖ್ತರ್ ಹೇಳಿದ್ದರಂತೆ. ಆ ಸಭೆಯ ಬಳಿಕ ರಣ್ವೀರ್ 10 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದರಂತೆ. ಆದರೆ ಫರ್ಹಾನ್ ಮತ್ತು ರಿತೇಶ್ ಆ ಆಫರ್ ಅನ್ನು ತಿರಸ್ಕರಿಸಿದ್ದರು.

ರಣ್ವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ಸಹೋದರಿ ಜೋಯಾ ಅಖ್ತರ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು. ಜೋಯಾ ನಿರ್ದೇಶನ ಮಾಡಿರುವ ‘ದಿಲ್ ದಡಕ್ನೇ ದೋ’ ಮತ್ತು ‘ಗಲ್ಲಿ ಬಾಯ್’ ಸಿನಿಮಾಗಳಲ್ಲಿ ರಣ್ವೀರ್ ಸಿಂಗ್ ನಟಿಸಿದ್ದರು. ಆದರೆ ಈಗ ಫರ್ಹಾನ್ ಮತ್ತು ಜೋಯಾ ಇಬ್ಬರೂ ಸಹ ರಣ್ವೀರ್ ಸಿಂಗ್ ಜೊತೆಗೆ ಕೆಲಸ ಮಾಡದೇ ಇರಲು ನಿರ್ಧರಿಸಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!

ಕಾರವಾರ, ಮೇ 31: ಉತ್ತರ ಕನ್ನಡ (uttara-kannada) ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ವೊಂದು ಮುಳುಗಡೆಯಾಗಿದ್ದು (boat sinking), ಅದರಲ್ಲಿದ್ದ ಏಳು ಜನ ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ಎಂಬುವರಿಂದ 7 ಜನರ ರಕ್ಷಣೆ ಮಾಡಲಾಗಿದೆ. ಹೊನ್ನಾವರ ಸಿಎಸ್​ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಸಮುದ್ರದಲ್ಲಿ ಮೀನುಗಾರಿಕೆ ಬೋಟ್​ ಮುಳುಗಡೆ
  • ಸ್ಥಳೀಯ ಮೀನುಗಾರಿಕಾ ಬೋಟ್​ನಿಂದ 7 ಮೀನುಗಾರರ ರಕ್ಷಣೆ
  • ಹೊನ್ನಾವರ ಸಿಎಸ್​ಪಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ

ನಡೆದಿದ್ದೇನು?

ಅಂಕೋಲಾದ ಬೆಳಂಬಾರದಿಂದ ಮೀನುಗಾರಿಕೆಗೆ ತೆರಳಿದ್ದ ಮಂಜುನಾಥ್ ಖಾರ್ವಿ ಅವರಿಗೆ ಸೇರಿದ ‘ಶ್ರೀ ನವರತ್ನ’ ಹೆಸರಿನ ಬೋಟ್, ಚಲಿಸುತ್ತಿದ್ದಾಗ ಬೋಟ್‌ನ ಹೊರಭಾಗಕ್ಕೆ ಹಾನಿಯಾದ ಹಿನ್ನೆಲೆ ಸಮುದ್ರದಲ್ಲಿ ಮುಳುಗಲು ಆರಂಭಿಸಿದೆ. ಈ ವೇಳೆ ಬೋಟ್‌ನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಎಂಬ ಏಳು ಜನ ಮೀನುಗಾರರು ನೀರುಪಾಲಾಗುವ ಭೀತಿಯಲ್ಲಿದ್ದರು.

ಇದನ್ನೂ ಓದಿ: ಧಾರವಾಡದಲ್ಲಿ ಘೋರ ದುರಂತ: ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿ

ಇನ್ನು ಈ ವೇಳೆ ಸ್ಥಳೀಯ ಮೀನುಗಾರರಾದ ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ತಮ್ಮ ಬೋಟ್ ಮೂಲಕ ತಕ್ಷಣವೇ ಸ್ಥಳಕ್ಕೆ ಧಾವಿಸಿ, ನೀರುಪಾಲಾಗುತ್ತಿದ್ದ ಏಳೂ ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಸಿ.ಎಸ್.ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿ ಹೊಂಡದಲ್ಲಿ ಬಿದ್ದು ಅಣ್ಣ ತಮ್ಮ ಸಾವು

ಕೃಷಿ ಹೊಂಡದಲ್ಲಿ ಬಿದ್ದು ಅಣ್ಣ ತಮ್ಮ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ದೇವಕಿರಣ್ (12) ಹಾಗೂ ವಿನುತ್ (9) ಮೃತ ಅಣ್ಣ ತಮ್ಮಂದಿರು. ಶಾಲೆಗೆ ಬೇಸಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತಾತನ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು

ಕೃಷಿ ಹೊಂಡ ಮಾಡುವ ಉದ್ದೇಶದಿಂದ ಬೃಹತ್ ಹೊಂಡ ತೆಗೆಯಲಾಗಿತ್ತು. ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬೇಸಿಗೆ ರಜೆಗೆಂದು ಅಜ್ಜಿ ತಾತನ ಮನೆಗೆ ಬಂದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version