ರಾಮ ಮಂದಿರ ದೇಣಿಗೆ ವಿವಾದ: ಕೊನೆಗೂ ಮೌನ ಮುರಿದ ಟ್ರಸ್ಟ್ ಅಧ್ಯಕ್ಷರು, ಪ್ರಧಾನಿ, ಸಿಎಂಗೆ ಭಾವುಕ ಪತ್ರ – Kannada News | Ayodhya Ram Mandir Donation Scam: Trust Chairman Breaks Silence, Demands Action

ಅಯೋಧ್ಯೆ, ಜುಲೈ 06: ಅಯೋಧ್ಯೆ ರಾಮ ಮಂದಿರ(Ram Mandir)ದ ದೇಣಿಗೆ ಕಳ್ಳತನದ ಆರೋಪ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಾಂತ ನೃತ್ಯ ಗೋಪಾಲ್ ದಾಸ್ ಅವರು ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ. ಟ್ರಸ್ಟ್‌ನ ಹೈವೋಲ್ಟೇಜ್ ಸಭೆಗೆ ಕೆಲವೇ ಗಂಟೆಗಳ ಮುನ್ನ ಅವರು ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದಲ್ಲೇನಿದೆ? ಪಾಪ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ
ದೇಣಿಗೆ ದುರುಪಯೋಗದ ಆರೋಪಗಳಿಂದ ತಮಗೆ ತೀವ್ರ ನೋವುಂಟಾಗಿದೆ ಎಂದು ಪತ್ರದಲ್ಲಿ ತಿಳಿಸಿರುವ ಮಹಂತ್ ನೃತ್ಯ ಗೋಪಾಲ್ ದಾಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ರಾಮಲಲ್ಲಾ ಮಂದಿರದ ದೇಣಿಗೆಯಲ್ಲಿ ಕಳ್ಳತನ ನಡೆದಿದೆ ಎಂಬ ಆರೋಪ ಕೇಳಿ ನನಗೆ ತೀವ್ರ ದುಃಖವಾಗಿದೆ. ಇದು ಕೋಟ್ಯಂತರ ಭಕ್ತರ ನಂಬಿಕೆಯ ವಿಷಯ. ಈ ಪಾಪದ ಕೃತ್ಯ ಎಸಗಿದ ಯಾರಿಗಾದರೂ ಕಠಿಣ ಶಿಕ್ಷೆಯಾಗಬೇಕು. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ, ಅವರು ತಪ್ಪಿತಸ್ಥರನ್ನು ಬಿಡುವುದಿಲ್ಲ. ಭಗವಾನ್ ರಾಮನನ್ನು ಯಾರೂ ವೈಯಕ್ತಿಕ ಲಾಭಕ್ಕಾಗಲಿ ಅಥವಾ ರಾಜಕೀಯಕ್ಕಾಗಲಿ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

 ಟ್ರಸ್ಟ್‌ನ ಮಹತ್ವದ ಸಭೆ
ಅಯೋಧ್ಯೆಯ ಮಣಿರಾಮ್ ದಾಸ್ ಛವಾನಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಟ್ರಸ್ಟ್‌ನ ತುರ್ತು ಸಭೆ ಕರೆಯಲಾಗಿದೆ. ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಯ ಮಧ್ಯೆ ನಡೆಯುತ್ತಿರುವ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಸಭೆಯ ಪ್ರಮುಖ ಅಜೆಂಡಾಗಳು

ರಾಜೀನಾಮೆ ಅಂಗೀಕಾರ?: ಜೂನ್ 26 ರಂದು ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು.

ಎಸ್‌ಐಟಿ ವರದಿ: ದೇಣಿಗೆ ಕಳ್ಳತನದ ಕುರಿತು ಎಸ್‌ಐಟಿ ಸಿದ್ಧಪಡಿಸಿರುವ ಮಧ್ಯಂತರ ವರದಿಯ ಪರಿಶೀಲನೆ.

ಹೊಸ ವ್ಯವಸ್ಥೆ: ಇನ್ಮುಂದೆ ದೇಣಿಗೆ ಪೆಟ್ಟಿಗೆಗಳ ಹಣ ಎಣಿಕೆ ಮತ್ತು ಸುರಕ್ಷತೆಗೆ ಕಟ್ಟುನಿಟ್ಟಾದ ಫೂಲ್‌ಪ್ರೂಫ್ ವ್ಯವಸ್ಥೆ ತರುವುದು.

ವಿವಾದದ ಹಿನ್ನೆಲೆ ಏನು?
ರಾಮ ಮಂದಿರದ ಕಾಣಿಕೆಯಲ್ಲಿದ್ದ ಸುಮಾರು 7 ರಿಂದ 7.5 ಕೋಟಿ ರೂ. ಹಣ ನಾಪತ್ತೆಯಾಗಿದೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಮೊದಲು ಆರೋಪಿಸಿದ್ದರು. ಆರಂಭದಲ್ಲಿ ಟ್ರಸ್ಟ್ ಇದನ್ನು ಸುಳ್ಳು ಎಂದಿತ್ತಾದರೂ, ವಿರೋಧ ಪಕ್ಷಗಳ ಒತ್ತಾಯದ ನಂತರ ಯುಪಿ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತು. ತನಿಖೆ ವೇಳೆ ಅಕ್ರಮ ಪತ್ತೆಯಾಗಿದ್ದು, ಪೊಲೀಸರು ಈಗಾಗಲೇ 8 ಜನರನ್ನು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ. ಇದಾದ ಬಳಿಕ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದರು. ಸದ್ಯ ಇಂದಿನ ಸಭೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಖಚಿತ! – Kannada News | India playing xi for 3rd t20 against England

ಭಾರತ ಮತ್ತು ಇಂಗ್ಲೆಂಡ್ ನಡುವಣ 3ನೇ ಟಿ20 ಪಂದ್ಯ ನಾಳೆ (ಜು.7) ನಡೆಯಲಿದೆ. ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದೆ,. ಏಕೆಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸ್ಪಿನ್ನರ್ ರವಿ ಬಿಷ್ಣೋಯ್ ದುಬಾರಿಯಾಗಿದ್ದರು.

ಮ್ಯಾಚೆಂಸ್ಟರ್​ನಲ್ಲಿ ನಡೆದ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಬಿಷ್ಣೋಯ್ ಬರೋಬ್ಬರಿ 60 ರನ್ ನೀಡಿದ್ದರು. ಅದರಲ್ಲೂ ನಿರ್ಣಾಯಕ ಹಂತದಲ್ಲಿ ನೀಡಿದ 29 ರನ್​ಗಳು ಇಡೀ ಪಂದ್ಯದ ಚಿತ್ರಣ ಬದಲಿಸಿತು. ಪರಿಣಾಮ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲನುಭವಿಸಿದ್ದರು.

ಇದೀಗ ಗೆಲುವಿನ ಲಯಕ್ಕೆ ಮರಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ರವಿ ಬಿಷ್ಣೋಯ್ ಅವರನ್ನು ಕೈ ಬಿಟ್ಟು, ಅವರ ಬದಲಿಗೆ ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅದರಂತೆ 3ನೇ ಪಂದ್ಯದಲ್ಲಿ ಪ್ರಿನ್ಸ್ ಯಾದವ್ ಅಥವಾ ಪ್ರಸಿದ್ಧ್ ಕೃಷ್ಣಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ.

ಹೇಗಿರಲಿದೆ ಪ್ಲೇಯಿಂಗ್ 11?

ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿದರೆ, ಐದನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ. ಇನ್ನು ಆಲ್​ರೌಂಡರ್​ಗಳಾಗಿ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ.

ವೇಗಿಗಳಾಗಿ ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಹಾಗೂ ಪ್ರಿನ್ಸ್ ಯಾದವ್ ಕಣಕ್ಕಿಳಿದರೆ, ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ವೈಭವ್ ಸೂರ್ಯವಂಶಿ
  2. ಅಭಿಷೇಕ್ ಶರ್ಮಾ
  3. ಇಶಾನ್ ಕಿಶನ್ (ವಿಕೆಟ್ ಕೀಪರ್)
  4. ಶ್ರೇಯಸ್ ಅಯ್ಯರ್ (ನಾಯಕ)
  5. ತಿಲಕ್ ವರ್ಮಾ
  6. ಶಿವಂ ದುಬೆ
  7. ಹರ್ಷಿತ್ ರಾಣಾ
  8. ಅಕ್ಷರ್ ಪಟೇಲ್
  9. ಅರ್ಷದೀಪ್ ಸಿಂಗ್
  10. ಪ್ರಿನ್ಸ್ ಯಾದವ್
  11. ವರುಣ್ ಚಕ್ರವರ್ತಿ.

ಇದನ್ನೂ ಓದಿ: ಹೊಸ ವಿವಾದ… ಟ್ರಂಪ್ ಫೋನ್ ಕರೆ ಬೆನ್ನಲ್ಲೇ ಅಮೆರಿಕ ಆಟಗಾರನ ನಿಷೇಧ ರದ್ದು!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Source link

Karnataka Weather Report: ಕಳೆದ 24 ಗಂಟೆಯಲ್ಲಿ ಕರ್ನಾಟಕ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ? – Kannada News | Karnataka Weather Update: Mastikatte in Shivamogga Records State’s Highest Rainfall of 176 mm on July 5

ಬೆಂಗಳೂರು, ಜುಲೈ 06: ಕರ್ನಾಟಕದಾದ್ಯಂತ ಜುಲೈ 12ರ ವರೆಗೂ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರ ವರೆಗೆ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಜುಲೈ 10ರ ವರೆಗೆ ಗುಡುಗು-ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಈ ನಡುವೆ ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಸುರಿದ ಪ್ರದೇಶಗಳ ಮಾಹಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಆ ಪ್ರಕಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ 176 ಮಿ.ಮೀ. ಮಳೆಯಾಗಿದೆ.

ಕರ್ನಾಟಕದಲ್ಲಿ ಜುಲೈ 5ರಂದು ಅಧಿಕ ಮಳೆಯಾದ ಸ್ಥಳಗಳು

ಉಳಿದಂತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಜ್ರಿಯಲ್ಲಿ 142.5 ಮಿ.ಮೀ., ಬೆಳಗಾವಿಯ ಮೋಹಿಶೆಟ್​​ನಲ್ಲಿ 120.5 ಮಿ.ಮೀ., ಉತ್ತರ ಕನ್ನಡದ ಶಿರಸಿಯ ಶಿವಳ್ಳಿಯಲ್ಲಿ 114.5 ಮಿ.ಮೀ., ಕೊಡಗಿನ ವಿರಾಜಪೇಟೆಯ ಅರ್ವತೊಕ್ಲುವಿನಲ್ಲಿ 95.5 ಮಿ.ಮೀ., ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ 77 ಮಿ.ಮೀ., ಧಾರವಾಡದ ಕೊಟಬಾಗಿಯಲ್ಲಿ 54.5 ಮಿ.ಮೀ., ಹಾವೇರಿಯ ಹಾನಗಲ್​​ನ ಹೀರೂರಿನಲ್ಲಿ 34.5 ಮಿ.ಮೀ. ಮಳೆ ಸುರಿದಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಮಳೆಯ ಅಬ್ಬರ! 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಚಿಕ್ಕಮಗಳೂರಿನ ಮೂಡಿಗೆರೆಯ ಬೆಟ್ಟಗೆರೆಯಲ್ಲಿ 115.5 ಮಿ.ಮೀ., ಹಾಸನ ಜಿಲ್ಲೆಯ ಸಕಲೇಶಪುರದ ಕ್ಯಾಮಾನಹಳ್ಳಿಯಲ್ಲಿ 73 ಮಿ.ಮೀ., ದಾವಣಗೆರೆ ಚೆನ್ನಗಿರಿಯ ಹೆಬ್ಬಾಳಗೆರೆಯಲ್ಲಿ 23.5 ಮಿ.ಮೀ., ಚಿತ್ರದುರ್ಗದ ಹೊಳಲ್ಕೆರೆಯ ಆದನೂರಲ್ಲಿ 10.5 ಮಿ.ಮೀ., ಚಾಮರಾಜನಗರದ ಯಳಂದೂರಿನ ಹೊನ್ನೂರಿನಲ್ಲಿ 21.5 ಮಿ.ಮೀ. ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:02 pm, Mon, 6 July 26

Source link

ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು – Kannada News | How to charge phone from another another one, here are few ways

ತುರ್ತು ಸಂದರ್ಭಗಳಲ್ಲಿ ಮೊಬೈಲ್ ಬ್ಯಾಟರಿ ಖಾಲಿಯಾದಾಗ ಪವರ್ ಬ್ಯಾಂಕ್ ಅಥವಾ ಚಾರ್ಜರ್ ಇಲ್ಲದಿದ್ದರೆ ಗಾಬರಿಯಾಗುವುದು ಸಹಜ. ಆದರೆ, ನಿಮ್ಮ ಬಳಿ ಮತ್ತೊಂದು ಸ್ಮಾರ್ಟ್‌ಫೋನ್ ಇದ್ದರೆ, ಅದರ ಬ್ಯಾಟರಿಯಿಂದಲೇ ನಿಮ್ಮ ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಇದನ್ನು ಮಾಡಲು ಕೆಲ ಸುಲಭ ವಿಧಾನಗಳಿವೆ. ಆದರೆ, ಚಾರ್ಜಿಂಗ್ ದಾನ ಮಾಡುವ ಫೋನ್, ಅದಕ್ಕೆ ಸಪೋರ್ಟ್ ಮಾಡಬೇಕು. ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜಿಂಗ್ ಮಾಡುವ ಮೂರು ವಿಧಾನಗಳ ಪರಿಚಯ ಇಲ್ಲಿದೆ, ಗಮನಿಸಿ.

1. ವೈರ್‌ಲೆಸ್ ಪವರ್ ಶೇರಿಂಗ್

ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ (ಉದಾಹರಣೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿ, ಗೂಗಲ್ ಪಿಕ್ಸೆಲ್ ಅಥವಾ ಐಫೋನ್) ವೈರ್​ಲೆಸ್ ಪವರ್ ಶೇರಿಂಗ್ (Wireless Power Sharing) ತಂತ್ರಜ್ಞಾನ ಲಭ್ಯವಿದೆ. ಇದಕ್ಕೆ ಯಾವುದೇ ಕೇಬಲ್ ಅಗತ್ಯವಿರುವುದಿಲ್ಲ.

  • ಮೊದಲು ಚಾರ್ಜ್ ನೀಡುವ ಫೋನ್‌ನ ‘Settings’ ಆಪ್‌ಗೆ ಹೋಗಿ.
  • ಅಲ್ಲಿ ‘Battery’ ಅಥವಾ ‘Battery and Device Care’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ‘Wireless Power Sharing’ ಅಥವಾ ‘Battery Share’ ಆಯ್ಕೆಯನ್ನು ಆನ್ ಮಾಡಿ. (ಇದನ್ನು ಕ್ವಿಕ್ ಸೆಟ್ಟಿಂಗ್ಸ್ ಟಾಗಲ್ ಮೂಲಕವೂ ಆನ್ ಮಾಡಬಹುದು).
  • ಈಗ ಚಾರ್ಜ್ ಮಾಡಬೇಕಾದ ಫೋನ್ ಅನ್ನು, ಚಾರ್ಜ್ ನೀಡುವ ಫೋನ್‌ನ ಹಿಂಭಾಗದ ಮಧ್ಯಭಾಗದಲ್ಲಿ (Back-to-Back) ಇರಿಸಿ. ತಕ್ಷಣವೇ ಚಾರ್ಜಿಂಗ್ ಆರಂಭವಾಗುತ್ತದೆ.

ಈ ರೀತಿ ವೈರ್ಲೆಸ್ ಚಾರ್ಜಿಂಗ್ ಸೌಲಭ್ಯ ಸಾಮಾನ್ಯವಾಗಿ ಬಜೆಟ್ ಫೋನ್​ಗಳಲ್ಲಿ ಲಭ್ಯ ಇರುವುದಿಲ್ಲ. ಹೈ ಎಂಡ್ ಸ್ಮಾರ್ಟ್​ಫೋನ್​ಗಳಲ್ಲಿ ಕಾಣಬಹುದು.

ಇದನ್ನೂ ಓದಿ: ಇಪಿಎಫ್ ಪೋರ್ಟಲ್​ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್​ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್​ಡೇಟ್ಸ್

2. ರಿವರ್ಸ್ ವೈರ್ಡ್ ಚಾರ್ಜಿಂಗ್

ನಿಮ್ಮ ಫೋನ್‌ಗಳಲ್ಲಿ ವೈರ್‌ಲೆಸ್ ಸೌಲಭ್ಯವಿಲ್ಲದಿದ್ದರೆ, ಯುಎಸ್‌ಬಿ ಕೇಬಲ್ ಬಳಸಿ ಚಾರ್ಜ್ ಮಾಡಬಹುದು. ಇದಕ್ಕೆ ಎರಡು ಫೋನ್‌ಗಳೂ Type-C ಪೋರ್ಟ್ ಹೊಂದಿರಬೇಕು ಮತ್ತು ಚಾರ್ಜ್ ನೀಡುವ ಫೋನ್ ‘Reverse Charging’ ಫೀಚರ್ ಅನ್ನು ಬೆಂಬಲಿಸಬೇಕು.

ಒಂದು ಉತ್ತಮ ಗುಣಮಟ್ಟದ Type-C to Type-C ಕೇಬಲ್ ತೆಗೆದುಕೊಳ್ಳಿ. ಕೇಬಲ್‌ನ ಒಂದು ತುದಿಯನ್ನು ಚಾರ್ಜ್ ನೀಡುವ ಫೋನ್‌ಗೆ ಮತ್ತು ಮತ್ತೊಂದು ತುದಿಯನ್ನು ಚಾರ್ಜ್ ಆಗಬೇಕಾದ ಫೋನ್‌ಗೆ ಜೋಡಿಸಿ.

ಸಂಪರ್ಕಿಸಿದ ತಕ್ಷಣ ಚಾರ್ಜ್ ವರ್ಗಾವಣೆ ಆರಂಭವಾಗುತ್ತದೆ. ಒಂದು ವೇಳೆ ಚಾರ್ಜಿಂಗ್ ದಿಕ್ಕು ಉಲ್ಟಾವಾದರೆ, ಫೋನ್‌ನ ನೋಟಿಫಿಕೇಶನ್ ಬಾರ್‌ನಲ್ಲಿ ‘USB Settings’ಗೆ ಹೋಗಿ ‘Charge connected device’ ಆಯ್ಕೆಯನ್ನು ಆರಿಸಿಕೊಳ್ಳಿ.

ಈ ಪ್ರಕ್ರಿಯೆಯಲ್ಲಿ ಚಾರ್ಜ್ ನೀಡುವ ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ. ಆದ್ದರಿಂದ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಈ ವಿಧಾನವನ್ನು ಬಳಸುವುದು ಸೂಕ್ತ. ಹಾಗೆಯೇ, ಈ ಸೌಲಭ್ಯ ಎಲ್ಲಾ ಫೋನ್​ಗಳಲ್ಲೂ ಇರುವುದಿಲ್ಲ. ಪವರ್ ಟ್ರಾನ್ಸ್​ಫರ್​ಗೆ ಇಂಡಕ್ಷನ್ ಕಾಯಿಲ್​ಗಳನ್ನು ಹಾಕಬೇಕಾಗುತ್ತದೆ. ಇದಕ್ಕೆ ವೆಚ್ಚವಾಗುವುದರಿಂದ ಬಜೆಟ್ ಫೋನ್​ಗಳಿಗೆ ಈ ಸೌಲಭ್ಯ ಇರುವುದಿಲ್ಲ. ಹೀಗಾಗಿ, ರಿವರ್ಸ್ ಚಾರ್ಜಿಂಗ್ ಮಾಡುವ ಮುನ್ನ ನಿಮ್ಮ ಫೋನ್ ಇದಕ್ಕೆ ಸಪೋರ್ಟ್ ಮಾಡುತ್ತಾ ಎಂದು ಪರಿಶೀಲಿಸಿ.

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

3. ಯುಎಸ್​ಬಿ ಮತ್ತು ಒಟಿಜಿ ಕೇಬಲ್ ಬಳಸಿ ಚಾರ್ಜಿಂಗ್

ನಿಮ್ಮದು ಹಳೆಯ ಫೋನ್ ಆಗಿದ್ದು ಅದರಲ್ಲಿ ಮೈಕ್ರೋ ಯುಎಸ್​ಬಿ ಇದ್ದರೆ ಆಗ ಯುಎಸ್​ಬಿ ಸಿ ಕೇಬಲ್ ಮತ್ತು ಒಟಿಜಿ ಕೇಬಲ್ ಬಳಸಿ ರಿವರ್ಸ್ ಚಾರ್ಜಿಂಗ್ ಮಾಡಬಹುದು. ಚಾರ್ಜಿಂಗ್ ನೀಡುವ ಫೋನ್​ಗೆ ಒಟಿಜಿ ಕೇಬಲ್ ಅಳವಡಿಸಬೇಕು. ನಂತರ ಯುಎಸ್​ಬಿ ಸಿ ಕೇಬಲ್ ಅನ್ನು ಮತ್ತೊಂದು ಫೋನ್​ಗೂ ಮತ್ತು ಒಟಿಜಿ ಪೋರ್ಟ್​ಗೂ ಕನೆಕ್ಟ್ ಮಾಡಬೇಕು. ಆಗ ಚಾರ್ಜಿಂಗ್ ಆಗುತ್ತದೆ. ಇದನ್ನು ಮಾಡಲೂ ಕೂಡ ನಿಮ್ಮ ಫೋನ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಬೇಕು.

ಗಮನಿಸಬೇಕಾದ ಸಂಗತಿ ಎಂದರೆ, ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡಬೇಕಿರುವುದು ದಾನಿ ಫೋನ್ ಮಾತ್ರ. ಅಂದರೆ, ಚಾರ್ಜಿಂಗ್ ನೀಡುವ ಫೋನ್ ಸಪೋರ್ಟ್ ಮಾಡಿದರೆ ಸಾಕು. ಚಾರ್ಜಿಂಗ್ ಪಡೆಯುವ ಫೋನ್ ಯಾವುದಿದ್ದರೂ ಪರವಾಗಿಲ್ಲ. ಯುಎಸ್​ಬಿ ಸಿ ಕೇಬಲ್ ಕನೆಕ್ಟ್ ಮಾಡುವಂತಿರಬೇಕು ಅಷ್ಟೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಪಿನಾಕ’ ಟೀಸರ್; ಪುನರ್ಜನ್ಮದ ಕಥೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ – Kannada News | Golden Star Ganesh Pinaka Teaser: Ganesh in reincarnation Story

ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ವೃತ್ತಿ ಜೀವನದಲ್ಲಿ ಹಲವು ರೀತಿಯ ಕಥೆಗಳನ್ನು ಮಾಡಿದ್ದಾರೆ. ರೊಮ್ಯಾಂಟಿಕ್ ಹೀರೋ, ಎಮೋಷನಲ್ ಬಾಯ್ ಆಗಿ ಅವರು ಮಿಂಚಿದ್ದಾರೆ. ಈಗ ‘ಪಿನಾಕ’ ಸಿನಿಮಾ ಮೂಲಕ ಗಣೇಶ್ ಅವರು ಪುರ್ನಜ್ಮನದ ಕಥೆ ಹೇಳಲು ಹೊರಟಿದ್ದಾರೆ ಎಂಬುದುರ ಸೂಚನೆ ಸಿಕ್ಕಿದೆ. ಇಂದು (ಜುಲೈ 6) ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಗಣೇಶ್​ ಅವರ ಲುಕ್ ಗಮನ ಸೆಳೆದಿದೆ.

ಗಣೇಶ್ ಅವರು ಎರಡು ರೀತಿಯ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಮಾಡರ್ನ್ ಅವತಾರದಲ್ಲಿ ಮಿಂಚದರೆ ಮತ್ತೊಂದು ಗೆಟಪ್​​ನಲ್ಲಿ ರಾಜರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಟೆ, ಫೈಟ್​ ದೃಶ್ಯಗಳು ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿವೆ. ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಎರಡು ಕಾಲಘಟ್ಟದಲ್ಲಿ ಚಿತ್ರದ ಕಥೆ ಸಾಗುತ್ತದೆ ಎಂಬುದು ಟೀಸರ್​​ನಲ್ಲಿ ಸ್ಪಷ್ಟವಾಗಿದೆ. ಇದು ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಮೊದಲು ಈ ರೀತಿಯ ಹಲವು ಪ್ರಯತ್ನಗಳು ಚಿತ್ರರಂಗದಲ್ಲಿ ನಡೆದಿದ್ದು, ಹಲವು ಯಶ್ಸು ಕಂಡಿದೆ. ‘ಪಿನಾಕ’ ಸಿನಿಮಾ ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಗಣೇಶ್ ಜನ್ಮದಿನದ ಪ್ರಯುಕ್​ತ ‘ಪಿನಾಕ’ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಈ ಚಿತ್ರ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇದಕ್ಕೆ ಈಗಿನಿಂದಲೇ ನಿಧಾನವಾಗಿ ಪ್ರಚಾರ ಆರಂಭಿಸಲಾಗಿದೆ. ಅಕ್ಟೋಬರ್ 16ರಂದು ಗಣೇಶ್ ನಟನೆಯ ಮತ್ತೊಂದು ಸಿನಿಮಾ ‘‘ಬೃಂದವಿಹಾರಿ’ ರಿಲೀಸ್ ಆಗಲಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಗಣೇಶ್ ನಟನೆಯ ಎರಡು ಸಿನಿಮಾಗಳು ರಿಲೀಸ್; ಅಭಿಮಾನಿಗಳಿಗೆ ಡಬಲ್ ಹಬ್ಬ

‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ವಿಶ್ವಪ್ರಸಾದ್ ‘ಪಿನಾಕ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನೃತ್ಯ ನಿರ್ದೇಶಕ ಧನಂಜಯ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಗೌರ ಹರಿ ಈ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ – Kannada News | Ayodhya Ram Mandir Donation Row: High Court Rejects PIL for CBI Probe, Cites SC Case

ಲಕ್ನೋ, ಜುಲೈ 06: ಅಯೋಧ್ಯೆಯ ರಾಮ ಮಂದಿರ(Ram Mandir)ಕ್ಕೆ ಭಕ್ತರು ನೀಡಿರುವ ದೇಣಿಗೆ ದುರುಪಯೋಗವಾಗಿದೆ ಎಂಬ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಸ್ವೀಕರಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವುದರಿಂದ, ಹೈಕೋರ್ಟ್ ಈ ನಿರ್ಧಾರ ಕೈಗೊಂಡಿದೆ.

ಅರ್ಜಿಯಲ್ಲೇನಿತ್ತು?
ವಕೀಲ ಮೋಹಿತ್ ಅಶೋಕ್ ಎಂಬುವವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ಈ ಅರ್ಜಿ ಸಲ್ಲಿಸಿದ್ದರು. ರಾಮ ಮಂದಿರದ ದೇಣಿಗೆ ಪೆಟ್ಟಿಗೆಯಲ್ಲಿದ್ದ ಹಣವನ್ನು ಟ್ರಸ್ಟ್‌ನ ಕೆಲವು ನೌಕರರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಕೇಂದ್ರ ತನಿಖಾ ದಳದಿಂದ (ಸಿಬಿಐ) ನಿಷ್ಪಕ್ಷಪಾತ ಹಾಗೂ ಕಾಲಮಿತಿಯ ತನಿಖೆಯಾಗಬೇಕು, ರಾಮ ಮಂದಿರ ಟ್ರಸ್ಟ್‌ನ ಖಾತೆಗಳನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರಿಂದ ವಿಶೇಷ ತನಿಖಾ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಮತ್ತಷ್ಟು ಓದಿ: ರಾಮ ಮಂದಿರ ಟ್ರಸ್ಟ್‌ಗೆ ಬಿಕ್ಕಟ್ಟು: ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ ಕುರಿತು ಇಂದು ಮಹತ್ವದ ಸಭೆ

ಹೈಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿ ರಾಜನ್ ರಾಯ್ ಮತ್ತು ನ್ಯಾಯಮೂರ್ತಿ ಮಂಜಿವೆ ಶುಕ್ಲಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಅವರು ಇದೇ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸ್ವತಂತ್ರ ತನಿಖೆಗೆ ಆಗ್ರಹಿಸಿರುವುದನ್ನು ಕೋರ್ಟ್ ಗಮನಿಸಿತು. ಒಂದೇ ವಿಷಯದ ಬಗ್ಗೆ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಅರ್ಜಿ ಇರುವಾಗ, ಇಲ್ಲಿ ಮತ್ತೊಂದು ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅದನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ ಮತ್ತು ಸದ್ಯದ ಪರಿಸ್ಥಿತಿ
ದೇಣಿಗೆ ದುರುಪಯೋಗದ ಆರೋಪ ಕೇಳಿಬಂದ ತಕ್ಷಣ, ಯುಪಿ ಸರ್ಕಾರವು ಜೂನ್ 13 ರಂದು ಲಕ್ನೋ ಕಮಿಷನರ್ ವಿಜಯ್ ವಿಶ್ವಾಸ್ ಪಂತ್ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಸದ್ಯ ತನಿಖೆ ನಡೆಯುತ್ತಿದೆ.

ಈಗಾಗಲೇ ಟ್ರಸ್ಟ್‌ನ ನಾಲ್ವರು ಶಂಕಿತ ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬ್ಯಾಂಕ್ ಖಾತೆಯಿಂದ 5 ಲಕ್ಷ ರೂ. ಹಾಗೂ ಇತ್ತೀಚಿನ ದಾಳಿಯಲ್ಲಿ ಸುಮಾರು 77 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ರಾಮ ಮಂದಿರ ಟ್ರಸ್ಟ್ ನೀಡಿದ ದೂರಿನ ಮೇರೆಗೆ ರಾಮಶಂಕರ್ ಯಾದವ್, ಮನೀಶ್ ಯಾದವ್ ಸೇರಿದಂತೆ ಒಟ್ಟು 8 ಉದ್ಯೋಗಿಗಳ ವಿರುದ್ಧ ವಂಚನೆ ಮತ್ತು ನಂಬಿಕೆ ದ್ರೋಹದ ಆರೋಪದಡಿ ಅಯೋಧ್ಯೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ನಡುವೆ, ದೇಣಿಗೆ ದುರುಪಯೋಗದ ಆರೋಪಗಳನ್ನು ರಾಮ ಮಂದಿರ ಟ್ರಸ್ಟ್ ಸಂಪೂರ್ಣವಾಗಿ ನಿರಾಕರಿಸಿದೆ. ಭಕ್ತರು ನೀಡುವ ಪ್ರತಿಯೊಂದು ರೂಪಾಯಿ ಮತ್ತು ಆಭರಣಗಳನ್ನು ಕಟ್ಟುನಿಟ್ಟಾದ ನಿಯಮಗಳ ಪ್ರಕಾರ ಎಣಿಕೆ ಮಾಡಿ, ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಜಯಪುರ: ಬರಡಾಗಿದ್ದ ಭೂಮಿಯಲ್ಲಿ ಈಗ ಹಾಲಿನ ಹೊಳೆ! ಬಬಲೇಶ್ವರದಲ್ಲಿ ಕ್ಷೀರಕ್ರಾಂತಿ – Kannada News | White Revolution in Babaleshwar: Minister MB Patil Fuels Dairy Farming Boom in Vijayapura District

ಬಬಲೇಶ್ವರದಲ್ಲಿ ಕ್ಷೀರಕ್ರಾಂತಿ (ಸಾಂದರ್ಭಿಕ ಚಿತ್ರ)Image Credit source: tv9

ವಿಜಯಪುರ, ಜುಲೈ 6: ಒಂದು ಕಾಲದಲ್ಲಿ ತೀವ್ರ ಬರಗಾಲ ಮತ್ತು ಧೂಳಿನಿಂದ ಆವೃತವಾಗಿದ್ದ ವಿಜಯಪುರ (Vijayapura) ಜಿಲ್ಲೆಯ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗುತ್ತಿದೆ. ವಿವಿಧ ನೀರಾವರಿ ಯೋಜನೆಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಯಶಸ್ವಿಯಾದ ಬೆನ್ನಲ್ಲೇ, ಜಿಲ್ಲೆಯು ಈಗ ಹಸಿರೀಕರಣ ಮತ್ತು ಕ್ಷೀರಕ್ರಾಂತಿಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಹಾಗೂ ಸಚಿವ ಎಂಬಿ ಪಾಟೀಲ್ ವಿಶೇಷ ಕಾಳಜಿಯಿಂದಾಗಿ ಕೃಷಿಯ ಜೊತೆ ಜೊತೆಗೆ ಹೈನೋದ್ಯಮ ಕೂಡ ಮುನ್ನೆಲೆಗೆ ಬಂದಿದೆ. ಕ್ಷೇತ್ರದ ಆಯ್ದ ರೈತರು ಹಾಗೂ ರೈತ ಮಹಿಳೆಯರಿಗೆ ಹೈನೋದ್ಯಮದಲ್ಲಿ ವೈಜ್ಞಾನಿಕ ತರಬೇತಿ ಕೊಡಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ.

ಸಂಸ್ಥೆಗಳ ಸಹಯೋಗ, ರೈತರಿಗೆ ಉಚಿತ ತರಬೇತಿ

2013 ರಿಂದ 2018 ರವರೆಗೆ ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಎಂಬಿ ಪಾಟೀಲ್ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿದ್ದರು. ಜೊತೆಗೆ ‘ಕೋಟಿ ವೃಕ್ಷ ಅಭಿಯಾನ’ದ ಮೂಲಕ ಜಿಲ್ಲೆಯಲ್ಲಿ 5 ಕೋಟಿ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಬಲವಾದ ಪಾಯ ಹಾಕಿದ್ದರು. ಇದೀಗ ತಮ್ಮ ಸ್ವಕ್ಷೇತ್ರ ಬಬಲೇಶ್ವರದ ನಿಡೋಣಿ, ನಾಗರಾಳ, ಕುಮಟೆ, ಅರ್ಜುಣಗಿ, ಜಾಲಗೇರಿ, ಯಕ್ಕುಂಡಿ, ಟಕ್ಕಳಕಿ, ಬಾಬಾನಗರ, ಟೋಕಳೆವಾಡಿ, ಹುಬನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರನ್ನು ಗುರುತಿಸಿ ಅಕ್ಷಯಕಲ್ಪ, ಕೃಷಿಕಲ್ಪ ಹಾಗೂ ಬಿಎಲ್‌ಡಿಇ (BLDE) ಸಂಸ್ಥೆಯ ಸಹಯೋಗದಲ್ಲಿ ಉಚಿತವಾಗಿ ಆಧುನಿಕ ಹೈನುಗಾರಿಕೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗಾಗಿ ಬಿಎಲ್‌ಡಿಇ ಸಂಸ್ಥೆಯಿಂದ ವಾರ್ಷಿಕ 50 ಲಕ್ಷ ರೂಪಾಯಿಗಳಂತೆ ಮುಂದಿನ ಐದು ವರ್ಷಗಳವರೆಗೆ ಒಟ್ಟು ಧನಸಹಾಯವನ್ನು ನೀಡಲಾಗುತ್ತಿದೆ ಎಂದು ಸಚಿವ ಎಂಬಿ ಪಾಟೀಲ್ ಪುತ್ರ ಬಸನಗೌಡ ಪಾಟೀಲ್ ತಿಳಿಸಿದ್ದಾರೆ.

ವೈಜ್ಞಾನಿಕ ವಿಧಾನದಿಂದ ದುಪ್ಪಟ್ಟಾದ ಹಾಲು ಇಳುವರಿ

ಹಸುಗಳಿಗೆ ಕೇವಲ ಒಣ ಮೇವು ಹಾಕಿದರೆ ಮಾತ್ರ ಸಾಕು ಎಂಬ ಹಳೆಯ ಪರಿಕಲ್ಪನೆಯಲ್ಲಿದ್ದ ರೈತರಿಗೆ ಕೃಷಿಕಲ್ಪ ಮತ್ತು ಅಕ್ಷಯಕಲ್ಪ ಸಂಸ್ಥೆಗಳು ಹೊಸ ದೃಷ್ಟಿಕೋನ ನೀಡಿವೆ. ಕಡಿಮೆ ಖರ್ಚಿನಲ್ಲಿ, ರಾಸಾಯನಿಕ ಮುಕ್ತ ಆಹಾರ ಬಳಸಿ ಹೇಗೆ ಗುಣಮಟ್ಟದ ಮೇವು ಮತ್ತು ನೀರು ಒದಗಿಸಬೇಕು ಎಂಬುದನ್ನು ತರಬೇತಿಯಲ್ಲಿ ಸಾಬೀತುಪಡಿಸಲಾಗಿದೆ. ಹಸುಗಳಿಗೆ ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ, ಆರೋಗ್ಯ ನಿರ್ವಹಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ಹಾಲಿನ ಉತ್ಪಾದನೆ ದುಪ್ಪಟ್ಟಾಗಿದೆ. ಪರಿಣಾಮವಾಗಿ ಬಬಲೇಶ್ವರ ಕ್ಷೇತ್ರದಲ್ಲಿ ಇಂದು 100ಕ್ಕೂ ಹೆಚ್ಚು ಕುಟುಂಬಗಳು ಹೈನೋದ್ಯಮದಲ್ಲಿ ಯಶಸ್ಸು ಕಂಡಿವೆ. ನಾಗರಾಳ ಗ್ರಾಮದ ಸಾಹೇಬಗೌಡ ಪಾಟೀಲ್ ಎಂಬುವವರು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಮಾಸಿಕ ಗಣನೀಯ ಆದಾಯ ಗಳಿಸುತ್ತಿದ್ದಾರೆ.

ಕೂಲಿ ಮಾಡುತ್ತಿದ್ದ ದಂಪತಿಗಳ ಯಶೋಗಾಥೆ

ಕೇವಲ ಎರಡು ಎಕರೆ ಜಮೀನು ಹೊಂದಿದ್ದ ರಾಜಕುಮಾರ ಮತ್ತು ಮಹಾದೇವಿ ಕೊಣ್ಣೂರ ದಂಪತಿಗಳು ಈ ಹಿಂದೆ ನಿತ್ಯ ಜೀವನ ನಿರ್ವಹಣೆಗಾಗಿ ಮತ್ತೊಬ್ಬರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಹೈನುಗಾರಿಕೆ ತರಬೇತಿ ಪಡೆದ ನಂತರ ಅವರು 15 ಹಸುಗಳನ್ನು ಸಾಕಿ, ಹಾಲು ಕರೆಯುವ ಯಂತ್ರವನ್ನೂ ಖರೀದಿಸಿದ್ದಾರೆ. ಇಂದು ಅವರು ತಿಂಗಳಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿಗಳ ವಹಿವಾಟು ನಡೆಸುತ್ತಾ ಆರ್ಥಿಕವಾಗಿ ಸಬಲರಾಗಿದ್ದಾರೆ. ತರಬೇತಿ ಪಡೆದ ಕಾರಣ ರೈತರು ಹೈನುಗಾರಿಕೆಯನ್ನು ಪೂರ್ಣ ಸಮಯದ ಕೆಲಸವಾಗಿ ಮಾಡಬೇಕಾಗಿಲ್ಲ, ಬದಲಿಗೆ ಪಾರ್ಟ್ ಟೈಂ (ಅರೆಕಾಲಿಕ) ಮಾದರಿಯಲ್ಲೇ ನಿರ್ವಹಿಸುತ್ತಾ ಕೃಷಿಯ ಜೊತೆಗೆ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

ಸಚಿವ ಎಂ.ಬಿ. ಪಾಟೀಲ್ ಅವರ ಕ್ಷೀರಕ್ರಾಂತಿಯ ಕನಸು ನನಸಾಗುತ್ತಿರುವುದಕ್ಕೆ ಕ್ಷೇತ್ರದ ರೈತರು ಹಾಗೂ ರೈತ ಮಹಿಳೆಯರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರಿಗೆ ಈ ತರಬೇತಿ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಕೃಷಿಕಲ್ಪ ಸಂಸ್ಥೆಯ ಮುಖ್ಯಸ್ಥ ಸಿಎಂ ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ: ಜಂಟಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಸಪ್ತ ಪ್ರಶ್ನೆ – Kannada News | Footpath Eviction Drive: Street Vendors Pose 7 Questions to Government, Call for Bengaluru Wide Strike on July 8

ಫುಟ್​​ಪಾತ್​​ ಅತಿಕ್ರಮಣ ತೆರವು ಕಾರ್ಯಾಚರಣೆImage Credit source: Tv9 Kannada

ಬೆಂಗಳೂರು, ಜುಲೈ 06: ನಗರದಲ್ಲಿ ನಡೆಯುತ್ತಿರುವ ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸಿಡಿದೆದ್ದಿರುವ ಬೀದಿ ಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ರಾಜ್ಯ ಸರ್ಕಾರಕ್ಕೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ. ಪಾದಚಾರಿ ಮಾರ್ಗದ ಬಗ್ಗೆ ಹೇಗೆ ಕೋರ್ಟ್ ಆದೇಶ ಮಾಡಿದಿಯೋ, ಅದೇ ರೀತಿ ಬೀದಿ ಬದಿ ವ್ಯಾಪಾರಿಗಳ ಬಗ್ಗೆಯೂ ನ್ಯಾಯಾಲಯದ ಆರ್ಡರ್​​ ಆಗಿದೆ. ನಾವು ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದೆ.

ಅನ್ಯೋನ್ಯವಾಗಿದ್ದ ನಮ್ಮ ಮತ್ತು ಪಾದಚಾರಿಗಳ ನಡುವೆ ಈಗ ಸರ್ಕಾರವೇ ಒಡಕು ಮೂಡಿಸಿದೆ. ನ್ಯಾಯಾಲಯ ಹೇಳಿದೆ ಅಂತ ತೆರವು ಮಾಡ್ತಿದ್ದೀರಿ. ಆದರೆ ಅದೇ ನ್ಯಾಯಾಲಯ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ವೆಂಡಿಂಗ್ ಝೋನ್ ಗುರುತಿಸಬೇಕು ಎಂದು ಹೇಳಿದೆ. ಇದನೆಲ್ಲ ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಎತ್ತಂಗಡಿ ಮಾಡುತ್ತಿದ್ದಾರೆ. ನೋಟಿಸ್​​ ಕೂಡ ನೀಡದೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ ಎಂದು ಆರೋಪಿಸಿರುವ ಸಮಿತಿ, ಬೆಂಗಳೂರು ನಗಾರಭಿವೃದ್ದಿ ಸಚಿವ ಕೃಷ್ಣ ಭೈರೇಗೌಡರಿಗೆ ಸಪ್ತ ಪ್ರಶ್ನೆಗಳನ್ನು ಕೇಳಿದೆ.

ಇದನ್ನೂ ಓದಿ: ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್; ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಬೇಡ

ಜಂಟಿ ಹೋರಾಟ ಸಮಿತಿಯ ಸಪ್ತ ಪ್ರಶ್ನೆಗಳು

  1. ಏಕಾಏಕಿ ಎತ್ತಂಗಡಿಯಿಂದ ಬೀದಿ ವ್ಯಾಪಾರಿಗಳಿಗೆ ಆದ ನಷ್ಟಕ್ಕೆ ನೀವು ಪರಿಹಾರ ಕೊಡ್ತೀರಾ?
  2. ಮುಖ್ಯ ರಸ್ತೆಯಲ್ಲಿ ವ್ಯಾಪಾರ ಮಾಡಬೇಡಿ ಅಂತ ಆದೇಶಿಸದ್ದೀರಲ್ಲ, ಅದೇ ರಸ್ತೆಗಳಲ್ಲಿನ ಉಚಿತ ಕಾರ್ ಪಾರ್ಕಿಂಗ್ ಯಾಕೆ ನಿಷೇಧಿಸಿಲ್ಲ?
  3. ಮುಖ್ಯ ರಸ್ತೆ ಬಿಟ್ಟು ಅಕ್ಕ ಪಕ್ಕದ ರಸ್ತೆಗೆ ಹೋಗಿ ಅಂತೀರ. ಅಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಇನ್ನೂ ಕಿರಿದಾಗಿದೆ, ಅದು ತೊಂದರೆ ಆಗೋದಿಲ್ವಾ? ಅಲ್ಲಿ ಯಾರೋ ಅಭ್ಯಂತರ ಮಾಡಿದರೆ ಆಗ ಏನು ಮಾಡೋದು ?
  4. ತಮಗೆ ಬೀದಿ ವ್ಯಾಪಾರಿಗಳ ಕಾನೂನು ಹಾಗೂ ಸಂಬಂಧ ಪಟ್ಟ ನ್ಯಾಯಾಲಯದ ತೀರ್ಪುಗಳ ಬಗ್ಗೆ ಗೊತ್ತಿಲ್ಲವೋ ಅಥವಾ ಗೊತ್ತಿದ್ದೂ ಉಲ್ಲಂಘನೆ ಮಾಡುತಿದ್ದಿರೋ?
  5. ತಾವು ಅಧಿಕಾರಕ್ಕೆ ಬಂದ ಮೇಲೆ ಒಮ್ಮೆಯೂ ನಾವು ಎದುರಿಸುತ್ತಿರುವ ಕಷ್ಟದ ಬಗ್ಗೆ ವಿಚಾರಿಸಿಲ್ಲ. ಬೀದಿ ವ್ಯಾಪಾರಿಗಳ ಕಾಯ್ದೆ ಅನುಷ್ಠಾನ ಆಗಿದಿಯ ಕೇಳಲಿಲ್ಲ. ಮೊದಲೇ ಹೆಜ್ಜೆಯೇ ಕಾನೂನು ಬಾಹಿರವಾಗಿ ನಮ್ಮನ್ನು ಎತ್ತಂಗಡಿ ಮಾಡಿದ್ದೀರಿ, ಏಕೆ?
  6. ಪಾದಚಾರಿಗಳು ಸಾವಿನಪ್ಪುತ್ತಿರುವುದು ನಿಜ. ಆದರೆ ಅದರಲ್ಲಿ ಒಬ್ಬರಾದರು ಬೀದಿ ವ್ಯಾಪಾರಿಗಳಿಂದ ಸತ್ತಿದ್ದಾರಾ? ರಸ್ತೆ ದಾಟುತ್ತಾ ಬಹಳ ಜನ ಸತ್ತಿದ್ದಾರೆ. ಅದರ ಬಗ್ಗೆ ಏನು ಮಾಡಿಲ್ಲವೇಕೆ?
  7. ಮೂರು ತಿಂಗಳ ಹಿಂದೆ ನಗರದ ಶಾಸಕರ ಸಭೆ ನಂತರ ನಮ್ಮನ್ನು ಎತ್ತಂಗಡಿ ಮಾಡುತ್ತಾರೆಂದು ಘೋಷಿಸಿದ್ದು ನಿಜ. ಆದರೆ ಇಂತಹ ಮೌಖಿಕ ಆದೇಶವನ್ನೇ, ನೋಟಿಸ್ ಎಂದು ಪರಿಗಣಿಸಬೇಕು ಎಂದು ಹೇಳುತ್ತೀರಲ್ಲ, ಇದು ಸರಿಯೇ?

ಜುಲೈ 8ರಂದು ಬೀದಿ ಬದಿ ವ್ಯಾಪಾರ ಬಂದ್

ಇನ್ನು ಸರ್ಕಾರದ ಕ್ರಮ ವಿರೋಧಿಸಿ ಜುಲೈ 8ರಂದು ಬೆಳ್ಳಗ್ಗೆ 6 ಗಂಟೆಯಿಂದಲೇ ಬೀದಿ ಬದಿ ವ್ಯಾಪಾರ ಬಂದ್ ಆಗಲಿದ್ದು, ಅಂದು ಹಣ್ಣು ಮತ್ತು ತರಕಾರಿಗಳು ಸಿಗೋದು ಡೌಟ್​​ ಎನ್ನಲಾಗಿದೆ. ರಸ್ತೆ ಬದಿಯ ಫಾಸ್ಟ್​​ಫುಡ್​​ ಅಂಗಡಿಗಳೂ ಕ್ಲೋಸ್​​ ಆಗಬಹುದು ಎನ್ನಲಾಗಿದ್ದು, ಬೀದಿ ಬದಿ ವ್ಯಾಪಾರ ಬಂದ್ ಮಾಡಲು ವ್ಯಾಪಾರಿಗಳಿಂದಲೂ ಸಮ್ಮತಿ ಸಿಕ್ಕಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:16 pm, Mon, 6 July 26

Source link

ನಂಗೆ ಮೋಸವಾಗಿದೆ… ಹೊಸ ಚರ್ಚೆ ಹುಟ್ಟುಹಾಕಿದ ಪೃಥ್ವಿ ಶಾ ಭಾವಿ ಪತ್ನಿ! – Kannada News | Prithvi Shaw’s Fiancee Akriti Agarwal Shares cryptic Instagram Post

ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಮತ್ತು ಅವರ ಭಾವಿ ಪತ್ನಿ, ನಟಿ ಆಕೃತಿ ಅಗರ್ವಾಲ್ ನಡುವೆ ಎಲ್ಲವೂ ಸರಿಯಿಲ್ಲವಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆಕೃತಿ ಹಂಚಿಕೊಂಡ ಒಂದು ಪೋಸ್ಟ್​. ಮಾರ್ಚ್ 2026 ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಕೇವಲ ನಾಲ್ಕೇ ತಿಂಗಳಲ್ಲಿ ಬೇರ್ಪಡುವ ಹಾದಿ ಹಿಡಿದಿದೆಯೇ ಎಂಬ ಅನುಮಾನಗಳನ್ನು ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಹುಟ್ಟುಹಾಕಿವೆ.

‘ನನಗೆ ಹಲವು ಬಾರಿ ಮೋಸವಾಗಿದೆ!

ನಟಿ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಆಕೃತಿ ಅಗರ್ವಾಲ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ನನಗೆ ತುಂಬಾ ಬಾರಿ ಮೋಸ ಮಾಡಲಾಗಿದೆ, ಆದರೂ ನಾನು ಎಂದಿಗೂ ಒಂದು ಮಾತನ್ನೂ ಆಡಲಿಲ್ಲ. ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಮೇಲೂ ಹೀಗಾಗುತ್ತದೆ ಎಂಬುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಬರೆದುಕೊಂಡಿದ್ದರು.

ಪ್ರತಿಯೊಂದು ವದಂತಿಯೂ ನಿಜ:

ಈ ಪೋಸ್ಟ್​ನ ಮುಂದುವರಿದ ಭಾಗವಾಗಿ, “ಎಲ್ಲವೂ ನಿಜ, ಸೋಶಿಯಲ್ ಮೀಡಿಯಾದಲ್ಲಿ ಆತನ ಬಗ್ಗೆ ನೀವು ಕಾಣುತ್ತಿರುವ ಪ್ರತಿಯೊಂದು ವದಂತಿಯೂ 100% ನಿಜ” ಎಂದು ಆಕೃತಿ ಉಲ್ಲೇಖಿಸಿದ್ದರು. ಈ ಪೋಸ್ಟ್‌ನಲ್ಲಿ ಅವರು ನೇರವಾಗಿ ಪೃಥ್ವಿ ಶಾ ಹೆಸರನ್ನು ಬಳಸದಿದ್ದರೂ, ‘ಆತ’ ಎಂದು ಸಂಬೋಧಿಸಿರುವುದರಿಂದ ನೆಟ್ಟಿಗರು ಇದು ಪೃಥ್ವಿ ಶಾ ಅವರಿಗೇ ಹೇಳಿದ್ದು ಎಂದು ಬಲವಾಗಿ ನಂಬಿದ್ದಾರೆ.

ಪೋಸ್ಟ್ ಡಿಲೀಟ್!

ಈ ಪೋಸ್ಟ್ ಸ್ಕ್ರೀನ್‌ಶಾಟ್‌ಗಳು ‘ಎಕ್ಸ್’ (ಟ್ವಿಟರ್) ಹಾಗೂ ಇತರೆ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆಯೇ ಆಕೃತಿ ಆ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸ್ಟೋರಿ ಹಾಕಿರುವ ಅವರು, “ಅನೇಕರು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ! ಎಂದು ಬರೆದುಕೊಳ್ಳುವ ಮೂಲಕ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಹೊಸ ವಿವಾದ… ಟ್ರಂಪ್ ಫೋನ್ ಕರೆ ಬೆನ್ನಲ್ಲೇ ಅಮೆರಿಕ ಆಟಗಾರನ ನಿಷೇಧ ರದ್ದು!

ಇದೀಗ ಇಬ್ಬರ ನಡುವಣ ಬ್ರೇಕಪ್ ಮತ್ತು ವಂಚನೆಯ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದಾಗ್ಯೂ ಪೃಥ್ವಿ ಶಾ ಆಗಲಿ ಅಥವಾ ಆಕೃತಿ ಅಗರ್ವಾಲ್ ಆಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅಲ್ಲದೆ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ.

Source link

ಗೃಹ ಜ್ಯೋತಿ ಗ್ರಾಹಕರಿಗೆ ಬೆಸ್ಕಾಂ ಬಿಗ್ ರಿಲೀಫ್; ಮನೆ ಬಾಡಿಗೆದಾರರ ಆಧಾರ್ ವೆರಿಫಿಕೇಶನ್‌ನಿಂದ ಉಚಿತ ವಿದ್ಯುತ್ ಕಟ್ ಆಗಲ್ಲ – Kannada News | Gruha Jyothi: No Free Electricity Cut for Tenants, BESCOM Assures Continuity

ಬೆಂಗಳೂರು, ಜು.6: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆಯಾದ ‘ಗೃಹ ಜ್ಯೋತಿ’ (Gruha Jyothi) ಅಡಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಬಾಡಿಗೆದಾರರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ಮಹತ್ವದ ಭರವಸೆಯೊಂದನ್ನು ನೀಡಿದೆ. ಪ್ರಸ್ತುತ ನಡೆಯುತ್ತಿರುವ ಫಲಾನುಭವಿಗಳ ಆಧಾರ್ ವಿವರಗಳ ಪರಿಶೀಲನಾ ಅಭಿಯಾನದಿಂದ ಪ್ರಸಕ್ತ ಗ್ರಾಹಕರ ಗೃಹ ಜ್ಯೋತಿ ಸೌಲಭ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಮನೆಗಳಲ್ಲಿ ಪ್ರಸ್ತುತ ವಾಸವಿರುವ ನೈಜ ಫಲಾನುಭವಿಗಳ ಆಧಾರ್ ವಿವರಗಳನ್ನು ನವೀಕರಿಸುವ ಉದ್ದೇಶದಿಂದ ಜುಲೈ 1 ರಿಂದ ಈ ವಿಶೇಷ ಪರಿಶೀಲನಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಆದರೆ, ಅನೇಕ ಮನೆಗಳಲ್ಲಿ ಹಳೆಯ ಬಾಡಿಗೆದಾರರ ಆಧಾರ್ ಲಿಂಕ್ ಆಗಿರುವುದರಿಂದ, ಈಗ ಹೊಸದಾಗಿ ಪರಿಶೀಲನೆ ನಡೆಸಿದರೆ ತಮಗೆ ಸಿಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ರದ್ದಾಗಬಹುದು ಎಂಬ ಆತಂಕ ಬಾಡಿಗೆದಾರರಲ್ಲಿ ಮೂಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಬೆಸ್ಕಾಂ, ಪ್ರಸ್ತುತ ಮನೆಯಲ್ಲಿ ವಾಸವಿರುವವರ ವಿವರಗಳಿಗೆ ಅನುಗುಣವಾಗಿ ಮಾತ್ರ ಸಿಬ್ಬಂದಿ ದಾಖಲೆಗಳನ್ನು ನವೀಕರಿಸಲಿದ್ದಾರೆ. ಈ ಪ್ರಕ್ರಿಯೆಯಿಂದಾಗಿ ಯೋಜನೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಅಥವಾ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದು ತಿಳಿಸಿದೆ.

ಪರಿಶೀಲನೆಯ ಅವಧಿಯಲ್ಲಿ ಹಾಗೂ ಅದರ ನಂತರವೂ ಯಾವುದೇ ವ್ಯತ್ಯಯವಿಲ್ಲದೆ ಉಚಿತ ವಿದ್ಯುತ್ ಯೋಜನೆ ಎಂದಿನಂತೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಇಲಾಖೆಯ ಪರವಾಗಿ ಆಶ್ವಾಸನೆ ನೀಡಿದ್ದಾರೆ.

ಕಚೇರಿಗೆ ಅಲೆಯುವ ಅಗತ್ಯವಿಲ್ಲ – ಮನೆ ಬಾಗಿಲಿಗೇ ಬರಲಿದ್ದಾರೆ ಸಿಬ್ಬಂದಿ:

ಗೃಹ ಜ್ಯೋತಿ ಫಲಾನುಭವಿಗಳು ಪರಿಶೀಲನೆಗಾಗಿ ಬೆಸ್ಕಾಂ ಕಚೇರಿಗಳಿಗೆ ಭೇಟಿ ನೀಡುವ ಅಥವಾ ಯಾವುದೇ ಹೆಚ್ಚುವರಿ ಕ್ರಮಗಳನ್ನು ಪೂರೈಸಲು ಕಷ್ಟಪಡುವ ಅಗತ್ಯವಿಲ್ಲ. ಬೆಸ್ಕಾಂನ ಮೀಟರ್ ರೀಡರ್‌ಗಳು ಮತ್ತು ಕ್ಷೇತ್ರ ಸಿಬ್ಬಂದಿಯೇ ನೇರವಾಗಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವೇಳೆ ಅವರು ಬಾಡಿಗೆ ಅಥವಾ ಲೀಸ್ (ಗೇಣಿ) ಒಪ್ಪಂದದ ವಿವರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ರೆಕಾರ್ಡ್ಸ್ ಅಪ್ಡೇಟ್ ಮಾಡಲಿದ್ದಾರೆ.

ಫಲಾನುಭವಿಗಳು ತಮ್ಮ ಬಾಡಿಗೆ ಒಪ್ಪಂದ ಪತ್ರ ಹಾಗೂ ಅಗತ್ಯ ಗುರುತಿನ ಚೀಟಿಗಳನ್ನು ಸಿದ್ಧವಾಗಿಟ್ಟುಕೊಂಡು, ಸಮೀಕ್ಷಾ ತಂಡಗಳಿಗೆ ಸೂಕ್ತ ಸಹಕಾರ ನೀಡಬೇಕಾಗಿ ವಿನಂತಿಸಲಾಗಿದೆ. ಇದರೊಂದಿಗೆ ಮನೆ ಮಾಲೀಕರು ಸಹ ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಬೇಕು ಎಂದು ಬೆಸ್ಕಾಂ ಕೋರಿದೆ.

ಇದನ್ನೂ ಓದಿ: ಆಡಳಿತದ ಅವ್ಯವಸ್ಥೆ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಲಾಯಿಸಿದ್ದರ ಬಗ್ಗೆ ಸುರೇಶ್ ಕುಮಾರ್ ಆಕ್ರೋಶ

ಸಹಾಯವಾಣಿ ಸಂಖ್ಯೆಗಳು

ಈ ಆಧಾರ್ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ಸ್ಪಷ್ಟೀಕರಣಗಳಿದ್ದಲ್ಲಿ ಗ್ರಾಹಕರು ಬೆಸ್ಕಾಂನ ಅಧಿಕೃತ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:

ಮುಖ್ಯ ಸಹಾಯವಾಣಿ: 1912

ವಿಶೇಷ ಸಹಾಯವಾಣಿ ಸಂಖ್ಯೆಗಳು: 9480816111, 9480816112, 9480816113 ಮತ್ತು 9480816114

ಸಮಯ: ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಸೇವೆ ಲಭ್ಯವಿರುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:14 pm, Mon, 6 July 26

Source link

Exit mobile version