ಆಲಿಯಾ ಮೇಲೆ ಪ್ರೀತಿ, ‘ಆಲ್ಫಾ’ ನೋಡಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಮಯ್ ರೈನಾ – Kannada News | Samay Raina booked theater to watch Alia and Sharvari’s Alpha movie

ಬಾಲಿವುಡ್ ನಟಿಯರಾದ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ವಾಘ್ ನಟಿಸಿರುವ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಆಲ್ಫಾ’ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆಗಳು ಬಂದ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ವಿಶೇಷವಾಗಿ ಆಲಿಯಾ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇದೀಗ ಯೂಟ್ಯೂಬ್ ಸೆನ್ಸೇಷನ್ ಎನಿಸಿಕೊಂಡಿರುವ ಸ್ಟಾಂಡಪ್ ಕಮಿಡಿಯನ್ ಸಮಯ್ ರೈನಾ, ಆಲಿಯಾ ಹಾಗೂ ಶರ್ವರಿ ಮೇಲಿನ ಪ್ರೀತಿಗಾಗಿ ‘ಆಲ್ಫಾ’ ಸಿನಿಮಾ ಪ್ರದರ್ಶಿಸುತ್ತಿರುವ ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದಾರೆ. ಆಲಿಯಾ ಹಾಗೂ ಶರ್ವರಿ ಮೇಲಿನ ಪ್ರೀತಿ, ಗೌರವಕ್ಕಾಗಿ ಹೀಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಶನಿವಾರದಂದು ಸಮಯ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ‘ಭಾನುವಾರ ನಾನು ಮುಂಬೈನಲ್ಲಿ ‘ಆಲ್ಫಾ’ ಚಿತ್ರವನ್ನು ನೋಡಲು ಹೋಗುತ್ತಿದ್ದೇನೆ. ನಾನು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದೇನೆ ನನ್ನ ಜೊತೆಗೆ ಇನ್ನೂ 250 ಮಂದಿ ‘ಆಲ್ಫಾ’ ಸಿನಿಮಾ ನೋಡಬಹುದಾಗಿದ್ದು, ಮುಂಚಿತವಾಗಿ ರಿಜಿಸ್ಟರ್ ಮಾಡಿಕೊಂಡವರಿಗೆ ವಾಟ್ಸ್ ಅಪ್ ಮೂಲಕ ಟಿಕೆಟ್ ಕಳಿಸುತ್ತೇನೆ’ ಎಂದಿದ್ದರು. ಅಂತೆಯೇ ಇಂದು ಎಲ್ಲರಿಗೂ ಸಿನಿಮಾ ತೋರಿಸಿದ್ದಾರಂತೆ ಸಮಯ್ ರೈನಾ.

‘ಆಲಿಯಾ ಮತ್ತು ಶರ್ವರಿ ನನ್ನ ‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2ರ ಮೊದಲ ಸಂಚಿಕೆಗೆ ಅತಿಥಿಗಳಾಗಿ ಬಂದಿದ್ದರು. ಬಹಳ ಪ್ರೀತಿಯಿಂದ ನಮ್ಮೊಂದಿಗೆ ವರ್ತಿಸಿದರು. ಅವರಿಗೆ ಪ್ರೀತಿಯನ್ನು ತೋರಿಸಲು ಇದು ನನ್ನ ಕಡೆಯಿಂದ ಒಂದು ಸಣ್ಣ ಪ್ರಯತ್ನ ಅಷ್ಟೇ. ಅವರಿಬ್ಬರನ್ನೂ ನಾನು ಬಹಳ ಇಷ್ಟಪಡುತ್ತೇನೆ ಮತ್ತು ಅವರ ಚಿತ್ರವನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ. ನಾಳೆ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು.

ಇದನ್ನೂ ಓದಿ:ಮತ್ತೆ ಮತ್ತೆ ಮುಗ್ಗರಿಸಿದರೂ ಬುದ್ಧಿ ಕಲಿಯದ ಆಲಿಯಾ ಭಟ್

ಸಮಯ್ ರೈನಾ ಅವರ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ವಿವಾದಕ್ಕೆ ಕಾರಣವಾಗಿತ್ತು. ಅವರ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಕೊನೆಗೆ ಅವರು ತಮ್ಮ ಶೋನ ಎಲ್ಲ ಎಪಿಸೋಡುಗಳನ್ನು ಯೂಟ್ಯೂಬ್​​ನಿಂದ ಡಿಲೀಟ್ ಮಾಡಬೇಕಾಯ್ತು. ಪೊಲೀಸರ ವಿಚಾರಣೆ ಎದುರಿಸಬೇಕಾಯ್ತು. ಆದರೆ ಇತ್ತೀಚೆಗೆ ಅವರು ಅದೇ ಶೋನ ಎರಡನೇ ಸೀಸನ್ ಪ್ರಾರಂಭ ಮಾಡಿದರು. ಆ ಶೋನ ಮೊದಲ ಎಪಿಸೋಡಿಗೆ ಆಲಿಯಾ ಮತ್ತು ಶರ್ವರಿ ಅವರುಗಳು ಅತಿಥಿಗಳಾಗಿ ಬಂದಿದ್ದರು. ಸಾಕಷ್ಟು ವಿವಾದಗಳಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ತಮ್ಮ ಶೋಗೆ ಬಂದಿದ್ದಕ್ಕೆ ಆಲಿಯಾ ಹಾಗೂ ಶರ್ವರಿ ಅವರಿಗೆ ಕೃತಜ್ಞತೆ ಹೇಳಿರುವ ಸಮಯ್, ಅವರ ಸಿನಿಮಾ ಟಿಕೆಟ್ ಗಳನ್ನು ಬುಕ್ ಮಾಡಿದ್ದರು.

‘ಆಲ್ಫಾ’ ಸಿನಿಮಾವು ಸ್ಪೈ ಆಕ್ಷನ್ ಸಿನಿಮಾ ಆಗಿದೆ. ಸಿನಿಮಾನಲ್ಲಿ ಆಲಿಯಾ, ಗೂಢಚಾರಿಗಳಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಹೃತಿಕ್ ರೋಷನ್ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಶಿವ ರಾವಳ್ಳಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಎರಡು ದಿನಕ್ಕೆ ಸುಮಾರು 30 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೂ ಎನ್​ಟಿಆರ್ ಸಿನಿಮಾ: ಬಿಡುಗಡೆ ತಡೆಯುವುದಾಗಿ ಎಚ್ಚರಿಸಿದ ರಾಜಕಾರಣಿ – Kannada News | Tamil Nadu politicians warns against Jr NTR’s new movie

ಜೂನಿಯರ್ ಎನ್‌ಟಿಆರ್ (Jr NTR) ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದೆ. ಇದರ ನಡುವೆ ಇತ್ತೀಚೆಗಷ್ಟೆ ಜೂ ಎನ್​​ಟಿಆರ್ ನಟನೆಯ ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಲಿರುವ ‘ಗಾಡ್ ವಾಫ್ ವಾರ್’ ಸಿನಿಮಾನಲ್ಲಿ ಜೂ ಎನ್​​ಟಿಆರ್ ನಟಿಸಲಿದ್ದಾರೆ. ಸಾಮಾನ್ಯವಾಗಿ ಜೂ ಎನ್​​ಟಿಆರ್ ಸಿನಿಮಾಗಳು ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳುವುದಿಲ್ಲ. ಆದರೆ ಈ ಸಿನಿಮಾದ ಚಿತ್ರೀಕರಣ ಶುರು ಆಗುವ ಮುಂಚೆಯೇ ಸಿನಿಮಾ ವಿವಾದಕ್ಕೆ ಸಿಲುಕಿದೆ. ವಿಶೇಷವಾಗಿ ತಮಿಳರು ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಸಿನಿಮಾ ದೇವರಾದ ಸುಬ್ರಹ್ಮಣ್ಯ ಅಥವಾ ಮುರುಗನ್ ಕುರಿತಾದ ಕತೆಯನ್ನು ಒಳಗೊಂಡಿದೆ. ಮುರುಗನ್ ದೇವರು ತಮಿಳರ ಆರಾಧ್ಯ ದೈವವಾಗಿದ್ದಾರೆ. ಆದರೆ ಸಿನಿಮಾದ ಪೋಸ್ಟರ್ ಬಿಡುಗಡೆ ವೇಳೆ, ಚಿತ್ರತಂಡವು ಮುರುಗನ್ ಅನ್ನು ‘ಬಾರ್ನ್ ಇನ್ ದ ನಾರ್ತ್. ಫೋರ್ಜ್ಡ್ ಇನ್ ದ ಹಾರ್ಟ್‌ಲ್ಯಾಂಡ್. ವರ್ಶಿಪ್ಡ್ ಇನ್ ದ ಸೌತ್” (ಉತ್ತರ ಭಾರತದಲ್ಲಿ ಜನಿಸಿದವ, ದಕ್ಷಿಣದಲ್ಲಿ ಆರಾಧಿಸುವವ) ಎಂಬ ಅಧಿಕೃತ ಟ್ಯಾಗ್‌ಲೈನ್ ಅನ್ನು ಹಂಚಿಕೊಂಡಿತ್ತು. ಚಿತ್ರತಂಡ ಹಂಚಿಕೊಂಡಿದ್ದ ಈ ವಾಕ್ಯ ತಮಿಳುನಾಡಿನ ಜನರಲ್ಲಿ ಅಸಮಾಧಾನ ಮೂಡಿಸಿದ್ದು, ಇದು ಭಗವಾನ್ ಮುರುಗನ್ ಅವರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬೇರುಗಳನ್ನು ತಪ್ಪಾಗಿ ಬಿಂಬಿಸಿದೆ ಎಂದು ಅವರು ವಾದಿಸಿದ್ದಾರೆ.

ನಾಮ್ ತಮಿಳರ್ ಕಚ್ಚಿ (NTK) ಪಕ್ಷದ ಮುಖ್ಯಸ್ಥ ಸೀಮಾನ್ ಈ ಬಗ್ಗೆ ಮಾತನಾಡಿದ್ದು, ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾಜಿ ಚಲನಚಿತ್ರ ನಿರ್ಮಾಪಕರಾಗಿ ರಾಜಕಾರಣಿಯಾಗಿರುವ ಸೀಮನ್, ‘ಭಗವಾನ್ ಮುರುಗನ್ ಅವರನ್ನು ಉತ್ತರ ಭಾರತೀಯ ಮೂಲದವರು ಎಂದು ಬಿಂಬಿಸುವುದನ್ನು ಮುಂದುವರಿಸಿದರೆ, ತಮಿಳುನಾಡಿನಲ್ಲಿ ‘ಗಾಡ್ ಆಫ್ ವಾರ್’ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಭಗವಾನ್ ಮುರುಗನ್ ತಮಿಳರ ಆರಾಧ್ಯ ದೈವ ನಮ್ಮ ದೇವರು ತಮಿಳುನಾಡಿನವರೇ. ‘ಮುರುಗನ್ ಉತ್ತರ ಭಾರತೀಯರು’ ಎಂಬ ನಿರೂಪಣೆಯನ್ನು ನಿರ್ಮಾಪಕರು ಹಿಂತೆಗೆದುಕೊಳ್ಳದೇ ಇದ್ದರೆ ತಮ್ಮ ಪಕ್ಷದ ವತಿಯಿಂದ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಅಂದು ಬಾಡಿ ಶೇಮಿಂಗ್ ಎದುರಿಸಿದ್ದ ಜೂ. ಎನ್‌ಟಿಆರ್; ಈಗ ಕಟ್ಟುಮಸ್ತಾದ ಫೋಟೋ ವೈರಲ್

ಮುರುಗನ್ ದೇವರು ತಮಿಳುನಾಡಿನ ಆರಾಧ್ಯ ದೈವವಾಗಿದೆ. ಅಂಥಹಾ ಮುರುಗನ್, ಉತ್ತರ ಭಾರತದವರು ಎಂದು ನಿರ್ದೇಶಕರು ಕರೆದಿರುವುದು ತಮಿಳರ ಸಿಟ್ಟಿಗೆ ಕಾರಣವಾಗಿದೆ. ತ್ರಿವಿಕ್ರಮ್ ಶ್ರೀನಿವಾಸ್, ಇದೇ ಮೊದಲ ಬಾರಿಗೆ ಪೌರಾಣಿಕ ಹಿನ್ನೆಲೆ ಇರುವ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ಅವರು ಜೂ ಎನ್​​ಟಿಆರ್ ಜೊತೆಗೆ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾನಲ್ಲಿ ಕೆಲಸ ಮಾಡಿದ್ದಾರೆ. ಅದರ ಹೊರತಾಗಿ, ‘ಅಲಾ ವೈಕುಂಟಪುರಂಲೊ’, ‘ಸನ್ ಆಫ್ ಸತ್ಯಮೂರ್ತಿ’, ‘ಅತಡು’, ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ವೆಂಕಟೇಶ್ ನಾಯಕನಾಗಿ ನಟಿಸಿರುವ ‘ಆದರ್ಶ ಕುಟುಂಬ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅದಾದ ಬಳಿಕ ಜೂ ಎನ್​​ಟಿಆರ್ ನಟನೆಯ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಮ ಸ್ವರೂಪಿಯಾದ ಬಿಎಂಟಿಸಿ ಬಸ್​​​​​ಗಳು: ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ – Kannada News | One More Two BMTC Buses Accident Near Laggere at Bengaluru

ಬೆಂಗಳೂರು, (ಜುಲೈ 05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಂದು ಮತ್ತೊಂದು ಬಿಎಂಟಿಸಿ (BMTC) ಬಸ್ ಅಪಘಾತ ಸಂಭವಿಸಿದೆ. ಲಗ್ಗೆರೆ  (Laggere ) ಸಮೀಪ, ಗೊರಗುಂಟೆಪಾಳ್ಯ ಕಡೆಗೆ ಹೋಗುವ ಮಾರ್ಗದಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಡಿಕ್ಕಿಯಾಗಿದ್ದು, ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಿಎಂಟಿಸಿ ಡೀಸೆಲ್ ಬಸ್ ಮುಂದೆ ಚಲಿಸುತ್ತಿದ್ದ ಕಾರು ಚಾಲಕನೊಬ್ಬ ಹಠಾತ್ತನೆ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಚಾಲಕ ಕೂಡ ತಕ್ಷಣವೇ ಬ್ರೇಕ್ ತುಳಿದಿದ್ದಾನೆ. ಅದೇ ಸಮಯದಲ್ಲಿ ಹಿಂಬದಿಯಿಂದ ಓವರ್‌ಟೇಕ್ ಮಾಡಲು ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಮುಂಭಾಗದಲ್ಲಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ.

16ನೇ ಡಿಪೋ ಎಲೆಕ್ಟ್ರಿಕ್ ಬಸ್ (ದೀಪಾಂಜಲಿ ನಗರ ) 26ನೇ ಡಿಪೋಗೆ ಸೇರಿದ ಡಿಸೇಲ್ (ಯಶವಂತಪುರ) ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಸಹ ಪ್ರಯಾಣಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಗಾಯಾಳುಗಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿಯಲ್ಲ ಸಾಕ್ಷಾತ್​​ ಯಮ!: 17 ವರ್ಷಗಳಲ್ಲಿ 1,142 ಜನರ ಬಲಿ ಪಡೆದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​​ಗಳು!

ಕೆ.ಆರ್ ಸರ್ಕಲ್ ಬಳಿಯೂ ನಡೆದಿತ್ತು ಅಪಘಾತ

ಇನ್ನು ನಿನ್ನೆ (ಜುಲೈ 04) ಅಷ್ಟೇ ಬೆಂಗಳೂರಿನ ಕೆ.ಆರ್ ಸರ್ಕಲ್ (KR Circle) ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬಸ್ ಚಾಲಕನ (Driver) ಸ್ಥಿತಿ ಚಿಂತಾಜನಕವಾಗಿದೆ. 13ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಯುವತಿಯೊಬ್ಬರು ಬಸ್‌ನ ಒಳಗಡೆ ಸಿಲುಕಿಕೊಂಡು ಗೋಳಾಡಿದ್ದಯ, ಗಾಯಗೊಂಡವರನ್ನು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

EV ಬಸ್‌ಗಳಿಂದ ಸಾಲು ಸಾಲು ಅಪಘಾತ

ಇವಿ ಬಸ್ ಚಾಲಕರ ಯಡವಟ್ಟಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇವಿ ಬಸ್ ಅವಾಂತರದ ಬಗ್ಗೆ ದಾಖಲೆ ಸಮೇತ ಕೇಂದ್ರದ ಗಮನಕ್ಕೆ ತಂದಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಸಾರಿಗೆ ಇಲಾಖೆ, ಸದ್ಯಕ್ಕೆ ಹೊಸ ಇವಿ ಬಸ್ ಖರೀದಿ ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಪದೇ ಪದೇ ಮರುಕಳಿಸುತ್ತಿರೋ ಇವಿ ಬಸ್‌ ಅಪಘಾತದ ಬಗ್ಗೆ ಅಧ್ಯಯನಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಸಾರಿಗೆ ಸಚಿವರ ಸೂಚನೆ ಮೇರೆಗೆ ನಗರದ ಇವಿ ಬಸ್ ಕಾರ್ಯಕ್ಷಮತೆ ಅಧ್ಯಯನ ನಡೆಸಲಿದೆ. ಈ ಬಗ್ಗೆ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಸಂಧಾನ ಯಶಸ್ವಿ: ತುಮಕೂರು SIR BLO ಸಾವಿಗೆ ಎಷ್ಟು ಪರಿಹಾರ, ಪರಮೇಶ್ವರ್ ಹೇಳಿದ್ದೇನು? – Kannada News | Bhuvana Death Case: How Much Compensation Will the SIR BLO’s Family Receive; What Did Parameshwara Say

ಭುವನಾ, ಡಿಸಿಎಂ ಡಾ.ಜಿ.ಪರಮೇಶ್ವರ್Image Credit source: tv9 kannada

ತುಮಕೂರು, ಜುಲೈ 05: SIR ಕರ್ತವ್ಯಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತದಲ್ಲಿ ಗಾಯಗೊಂಡ ಬಳಿಕ ಚಿಕಿತ್ಸೆ ಫಲಿಸದೇ ಗ್ರಾಮ ಲೆಕ್ಕಾಧಿಕಾರಿ ಭುವನಾ (VAO Bhuvana) ಮೃತಪಟ್ಟಿದ್ದಾರೆ. ಇದು ನೂರಾರು ಗ್ರಾಮ ಲೆಕ್ಕಾಧಿಕಾರಿಗಳನ್ನ ಕೆರಳುವಂತೆ ಮಾಡಿತ್ತು. ನಿನ್ನೆಯಿಂದ ಕಂದಾಯ ಇಲಾಖೆಯ ನೂರಾರು ಸಿಬ್ಬಂದಿ ಡಿಸಿ ಕಚೇರಿ ಎದುರು ಪ್ರತಿಭಟಿಸಿದ್ದರು. ಈ ಮಧ್ಯೆ ಹೋರಾಟಗಾರರೊಂದಿಗೆ ಡಿಸಿಎಂ ಪರಮೇಶ್ವರ್ ಸಂಧಾನ ಯಶಸ್ವಿ ಆಗಿದೆ.

ಘಟನೆ ಕುರಿತು ಸಿಎಸ್​​​ಗೆ ಪತ್ರ ಬರೆದ ಡಿಸಿ

ಭುವನಾ ಸಾವು ಇದೀಗ ಕಂದಾಯ ಇಲಾಖೆ ಸಿಬ್ಬಂದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ, ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೋರಾಟಗಾರರೊಂದಿಗಿನ ಎರಡನೇ ಸಂಧಾನ ಸಭೆಯೂ ಸಂಪೂರ್ಣ ವಿಫಲವಾಗಿದೆ. ಸಭೆಯ ಬಳಿಕ ಡಿಸಿ ನೀಡಿದ ಪತ್ರದ ಸಮೇತ ಪ್ರತಿಭಟನಾ ಸ್ಥಳಕ್ಕೆ ಬಂದ ಮುಖಂಡರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿಸಿ ಬರೆದಿರುವ ಪತ್ರದ ವಿವರಗಳನ್ನು ಓದಿ ಧರಣಿನಿರತರಿಗೆ ತಿಳಿಸಿದರು.

ಸಿಎಸ್​​​ಗೆ ಡಿಸಿ ಬರೆದ ಪತ್ರದಲ್ಲೇನಿದೆ?

ಮುಖ್ಯ ಕಾರ್ಯದರ್ಶಿಗೆ ಜಿಲ್ಲಾಧಿಕಾರಿಗಳು ಬರೆದಿರುವ ಪತ್ರದಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಮೃತ ಭುವನಾ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಒಂದು ತಿಂಗಳು ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರತಿದಿನದಂತೆ ಬಸ್​ನಲ್ಲಿ ತುಮಕೂರಿಗೆ ಬಂದು, ಅಲ್ಲಿಂದ ಬೈಕ್​ನಲ್ಲಿ ತೆರಳುತಿದ್ದರು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತದಲ್ಲಿ ಅಧಿಕಾರಿ ಸಾವು: ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ!

ಇನ್ನು ಭುವನಾ ಅವರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ಮಂಜೂರು ಮಾಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಹಾಗೂ ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡುವ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಇದರೊಂದಿಗೆ, ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 150 ರಿಂದ 200 ಜನ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿಗೆ ಕೋರಿದ್ದಾರೆ.

ಡಿಸಿ ಬರೆದ ಪತ್ರ ಒಪ್ಪಲ್ಲ ಎಂದ ಪ್ರತಿಭಟನಾಕಾರರು

ಆದರೆ, ಡಿಸಿ ಬರೆದಿರುವ ಪತ್ರದ ಅಂಶಗಳನ್ನು ಒಪ್ಪಲು ಪ್ರತಿಭಟನಾ ನಿರತ ವಿಎಒಗಳು ಹಾಗೂ ಕಂದಾಯ ನೌಕರರು ಜಂಟಿಯಾಗಿ ನಿರಾಕರಿಸಿದ್ದಾರೆ. ಡಿಸಿ ಪತ್ರದಲ್ಲೇನೋ ಅಂಶಗಳನ್ನು ಉಲ್ಲೇಖಿಸಿದ್ದಾರೆ, ಆದರೆ ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಮುಖಂಡರು ಪ್ರಶ್ನಿಸಿದಾಗ, ಧರಣಿನಿರತರು ಯಾವುದೇ ಕಾರಣಕ್ಕೂ ಈ ಪತ್ರ ಒಪ್ಪಲ್ಲ ಎಂದು ಒಕ್ಕೊರಲಿನಿಂದ ಪಟ್ಟು ಹಿಡಿದರು. ಸಬಂಧಪಟ್ಟ ಅಧಿಕಾರಿಗಳ ಅಮಾನತು ಆದೇಶದ ಪತ್ರ ಬಿಡುಗಡೆಯಾಗುವವರೆಗೂ ನಾವು ಧರಣಿ ಸ್ಥಳದಿಂದ ಕದಲುವುದಿಲ್ಲ ಎಂದು ನೌಕರರು ಎಚ್ಚರಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ

ಇನ್ನು ಸ್ಥಳಕ್ಕೆ ಪ್ರತಿಭಟನಾಕಾರರ ಒತ್ತಾಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಖುದ್ದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಮೊದಲಿಗೆ ಭುವನಾ ಫೋಟೊಗೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಡಿಸಿಎಂಗೆ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘ ಮನವಿ ಪತ್ರ ಸಲ್ಲಿಸಿದೆ. ಮೃತ ಭುವನಾ ಕುಟುಂಬಕ್ಕೆ ಎರಡು ಕೋಟಿ ರೂ ಪರಿಹಾರ, ಜೊತೆಗೆ ಈ ಪ್ರಕರಣ ಸಂಬಂಧ ತುಮಕೂರು ತಹಶೀಲ್ದಾರ್ ರಾಜೇಶ್ವರಿ ಅಮಾನತುಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು

ಇನ್ನು ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಹುಣಸೆಘಟ್ಟ ವೃತ್ತದಲ್ಲಿ ನಡೆದ ವಿಎ ಯಶಸ್ವಿನಿಗೆ ಅಪಘಾತ ಪ್ರಕರಣ ಸಂಬಂಧ ನೊಣವಿನಕೆರೆ ಉಪ ತಹಶೀಲ್ದಾರ್ ಮತ್ತು ಪ್ರಭಾರ ಹಕ್ಕು ದಾಖಲೆ ಶಿರಸ್ತೇದಾರ್ ಲೋಕೇಶ್ ಕುಮಾರ್ ಕಾರಣಿಕರ್ತರು. ಇವರನ್ನು ಸಹ ಅಮಾನತು ಮಾಡುವಂತೆ ಸಂಘ ಆಗ್ರಹಿಸಿದೆ.

ಡಿಸಿಎಂ ಮನವಿ ಮೇರೆಗೆ ಪ್ರತಿಭಟನೆ ಹಿಂಪಡೆದ ಪ್ರತಿಭಟನಾಕಾರರು

ಈ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್, ನನ್ನ ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು, ಹಾಗಾಗಿ ಬರಲು ಆಗಿಲ್ಲ. ನಿಮ್ಮನ್ನು ನಿರ್ಲಕ್ಷ್ಯ ಮಾಡಲು ನಾನು ಬಿಡಲ್ಲ. 8 ವರ್ಷದಿಂದ ಆಗದ ಗ್ರೇಡ್ 2 ತಹಶೀಲ್ದಾರ್​ ಬಡ್ತಿ ಆಗಿರಲಿಲ್ಲ. ನಾನು ಬಂದ ಒಂದೇ ವಾರದಲ್ಲಿ ಆ ಪ್ರಕ್ರಿಯೆ ಆರಂಭಿಸಿದ್ದೇನೆ. ನಾನು ನೌಕರರ ಪರವಾಗಿ ಇದ್ದವನು. ಅದು ನನ್ನ ಜವಾಬ್ದಾರಿ. ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಎಸ್​ಐಆರ್​ ಭೂತ ನಮ್ಮ ಮುಂದಿದೆ. ಎರಡು ತಿಂಗಳು ಸಮಯಾವಕಾಶ ಕೊಡಬಹುದಿತ್ತು. ಆದರೆ ಒಂದು ತಿಂಗಳು ನೀಡಿ ಭಯದ ವಾತಾವರಣ ತಂದಿಟ್ಟಿದ್ದಾರೆ. ಮೃತರ ಕುಟುಂಬಕ್ಕೆ 1 ಕೋಟಿ ರೂ ಇನ್ಶೂರೆನ್ಸ್ ಹಣ 15 ದಿನದಲ್ಲಿ ಬರುತ್ತದೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ ಮಂಜೂರು ಮಾಡಲಾಗುವುದು. ಅವರ ಕುಟುಂಬದವರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂದು ಹೇಳಿದರು. ಬಳಿಕ ಪ್ರತಿಭಟನಾಕಾರರ ಪ್ರತಿಭಟನೆ ಹಿಂಪಡೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಉತ್ತೇಜಿಸುವ ಇನ್​ಸ್ಟಾ ಜಾಹೀರಾತುಗಳು; ಮೆಟಾಗೆ ನೋಟೀಸ್ – Kannada News | Govt issues notice to Meta, asks to remove insta ads that promotes child sex abuse

ನವದೆಹಲಿ, ಜುಲೈ 5: ಮಕ್ಕಳ ಸುರಕ್ಷತೆ ಮತ್ತು ಸೋಷಿಯಲ್ ಮೀಡಿಯಾ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ಇನ್‌ಸ್ಟಾಗ್ರಾಮ್ (Instagram) ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ (CSAM – Child Sexual Abuse Material) ವಿಷಯಗಳನ್ನು ಉತ್ತೇಜಿಸುವ ಹಾಗೂ ಪ್ರಚೋದಿಸುವಂತಹ ಜಾಹೀರಾತುಗಳು ಪ್ರಕಟವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆಯಾದ ‘ಮೆಟಾ’ (Meta) ಗೆ ಕಠಿಣ ನೋಟಿಸ್ ಜಾರಿ ಮಾಡಿದೆ.

ಐಟಿ ಕಾಯ್ದೆಯ (IT Act) ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ತಕ್ಷಣವೇ ಇಂತಹ ಎಲ್ಲಾ ಕಾನೂನುಬಾಹಿರ ಜಾಹೀರಾತುಗಳನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಆದೇಶಿಸಲಾಗಿದೆ.

ಕೇಂದ್ರ ಸರ್ಕಾರದ ಕಠಿಣ ಆದೇಶದಲ್ಲಿ ಏನಿದೆ?

ತಕ್ಷಣವೇ ತೆಗೆದುಹಾಕಲು ಸೂಚನೆ: ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್‌ಗಳನ್ನು ಪ್ರಚಾರ ಮಾಡುವ, ಅದಕ್ಕೆ ದಾರಿ ಮಾಡಿಕೊಡುವ ಲಿಂಕ್‌ಗಳು ಅಥವಾ ಹ್ಯಾಶ್‌ಟ್ಯಾಗ್‌ಗಳನ್ನು ಒಳಗೊಂಡ ಎಲ್ಲಾ ಜಾಹೀರಾತುಗಳನ್ನು ಮತ್ತು ಖಾತೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಡಿಲೀಟ್ ಮಾಡಬೇಕು.

ಶೂನ್ಯ ಸಹಿಷ್ಣುತೆ (Zero Tolerance): ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಭಾರತ ಸರ್ಕಾರವು ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಮಕ್ಕಳ ಮೇಲಿನ ಲೈಂಗಿಕ ಶೋಷಣೆಯನ್ನು ಬಿಂಬಿಸುವ ಯಾವುದೇ ಕಂಟೆಂಟ್ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೆ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಕಾನೂನು ಕ್ರಮದ ಎಚ್ಚರಿಕೆ: ಒಂದು ವೇಳೆ ಮೆಟಾ ಸಂಸ್ಥೆಯು ಈ ನೋಟಿಸ್‌ಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಮತ್ತು ಆಕ್ಷೇಪಾರ್ಹ ಜಾಹೀರಾತುಗಳನ್ನು ನಿರ್ಬಂಧಿಸದಿದ್ದರೆ, ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳಿಗೆ ಸಿಗುವ ‘ಸೇಫ್ ಹಾರ್ಬರ್’ (Safe Harbour – ಮಧ್ಯವರ್ತಿಗಳಿಗೆ ಸಿಗುವ ಕಾನೂನು ರಕ್ಷಣೆ) ಸೌಲಭ್ಯವನ್ನು ರದ್ದುಗೊಳಿಸಲಾಗುವುದು. ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸರ್ಕಾರ ಖಡಕ್ ಆಗಿ ಹೇಳಿದೆ.

ಇದನ್ನೂ ಓದಿ: ಎಲ್​ಎನ್​ಜಿ ಪೂರೈಕೆ ಪುನಾರಂಭಗೊಂಡ ಬೆನ್ನಲ್ಲೇ ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಭಾರತ

ತಜ್ಞರ ಕಳವಳ ಮತ್ತು ತನಿಖೆ

ಕೆಲವು ಜಾಗತಿಕ ಸೈಬರ್ ಭದ್ರತಾ ಸಂಶೋಧಕರು ಮತ್ತು ತನಿಖಾ ಸಂಸ್ಥೆಗಳು ಇನ್‌ಸ್ಟಾಗ್ರಾಮ್‌ನ ಅಲ್ಗಾರಿದಮ್‌ಗಳ (Algorithms) ಲೋಪದೋಷಗಳನ್ನು ಪತ್ತೆಹಚ್ಚಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಕೆಲವು ದುಷ್ಟ ಜಾಲಗಳು ಇನ್‌ಸ್ಟಾಗ್ರಾಮ್‌ನ ಆಟೋಮೇಟೆಡ್ ವ್ಯವಸ್ಥೆ ಮತ್ತು ಜಾಹೀರಾತು ಪರಿಕರಗಳನ್ನು ಬಳಸಿಕೊಂಡು, ಕೋಡೆಡ್ ಪದಗಳ (Coded Words) ಮೂಲಕ ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೋ ಮತ್ತು ಫೋಟೋಗಳನ್ನು ವಿನಿಮಯ ಮಾಡಿಕೊಳ್ಳುವ ಗ್ರೂಪ್‌ಗಳನ್ನು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.

ಸಾಮಾಜಿಕ ಜಾಲತಾಣಗಳ ಇಂತಹ ಬೇಜವಾಬ್ದಾರಿತನವು ಮಕ್ಕಳ ಮಾನಸಿಕ ಮತ್ತು ದೈಹಿಕ ಸುರಕ್ಷತೆಗೆ ದೊಡ್ಡ ಕಂಟಕ ತರಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಭಾರತ ಸರ್ಕಾರದ ನಿಲುವು: ಆನ್‌ಲೈನ್ ಜಗತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನ, ಅದರಲ್ಲೂ ವಿಶೇಷವಾಗಿ ಮಕ್ಕಳ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ಇಂಟರ್ನೆಟ್ ಅನ್ನು ಸುರಕ್ಷಿತ ಹಾಗೂ ನಂಬಿಕಸ್ಥ ಜಾಗವನ್ನಾಗಿ ಮಾಡಲು ಸರ್ಕಾರವು ಮೆಟಾ, ಎಕ್ಸ್ (X), ಯೂಟ್ಯೂಬ್ ಸೇರಿದಂತೆ ಎಲ್ಲಾ ಜಾಗತಿಕ ಟೆಕ್ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಐಟಿ ಸಚಿವಾಲಯದ ಮೂಲಗಳು ತಿಳಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅನ್ನ ನೀರಿಲ್ಲದೆ 33 ದಿನ ಬಳಿಕ ಶಿವಯೋಗ ಸಮಾಧಿಯಿಂದ ಹೊರಬಂದು ದರ್ಶನ: ವಿಜ್ಞಾನ-ತಂತ್ರಜ್ಞಾನಕ್ಕೆ ಸವಾಲೊಡ್ಡಿ ಆಧ್ಯಾತ್ಮಿಕ ಶಕ್ತಿ ತೋರಿಸಿದ ಶ್ರೀಗಳು – Kannada News | Rachoteshwara Swamiji Concludes 33 Day Shiva Yoga Samadhi, Drawing Devotees and Widespread Attention

ಗದಗ, ಜುಲೈ 05: ಲೋಕ ಕಲ್ಯಾಣಕ್ಕಾಗಿ ಬೂದೀಶ್ವರ ಮಠದ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಕಠಿಣ ವ್ರತ ಕೈಗೊಂಡಿದ್ದರು. ಬೆಳಕು, ಗಾಳಿ, ನೀರು, ಆಹಾರ ಇಲ್ಲದೆ 33 ದಿನಗಳ‌ ಕಾಲ ಮೌನ ಅನುಷ್ಠಾನ ಹಾಗೂ ಶಿವಯೋಗ ಸಮಾಧಿ (ShivaYoga Samadhi) ಆಗಿದ್ದರು. ಇಂದು ಆ ಕಠಿಣ ವ್ರತ ಅಂತ್ಯವಾಗಿದ್ದು, ಶ್ರೀಗಳು ಗರ್ಭಗುಡಿಯಿಂದ ಹೊರ ಬಂದು ಭಕ್ತರಿಗೆ ದರ್ಶನ ನೀಡಿದರು. ಶ್ರೀಗಳನ್ನ ನೋಡಲು ರಾಜ್ಯದ ನಾನಾ ಭಾಗದಿಂದ ಲಕ್ಷಾಂತರ ಭಕ್ತರ ಸಮೂಹವೇ ಆಗಮಿಸಿತ್ತು. ಶ್ರೀಗಳ ಕೌತುಕದ ಕ್ಷಣವನ್ನ ಕಣ್ತುಂಬಿಕೊಂಡರು.

33 ದಿನಗಳ ಮೌನಾನುಷ್ಠಾನ, ಶಿವಯೋಗ ಸಮಾಧಿ ಅಂತ್ಯ

ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಮಠದ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಬೆಳಕು, ಗಾಳಿ, ನೀರು, ಆಹಾರ ಇಲ್ಲದೆ ಕಲ್ಲಿನಿಂದ ನಿರ್ಮಾಣ ಮಾಡಿದ ಗರ್ಭಗುಡಿಯಲ್ಲಿ 33 ದಿನಗಳ ಶಿವಯೋಗ ಸಮಾಧಿ, ಮೌನ ಅನುಷ್ಠಾನ ಮಾಡಿ ಪವಾಡ ಸೃಷ್ಠಿ ಮಾಡಿದ್ದಾರೆ. ಕಠಿಣವಾದ ಶಿವಯೋಗ ಸಮಾಧಿ ಯೋಗವನ್ನು ಮಾಡಿದ್ದಾರೆ. ಇಂದು ಶ್ರೀಗಳ 33 ದಿನಗಳ ಮೌನಾನುಷ್ಠಾನ, ಶಿವಯೋಗ ಸಮಾಧಿ ಅಂತ್ಯವಾಗಿದೆ.

ವಿಜ್ಞಾನಕ್ಕೆ ಸವಾಲು

ಇಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ವಿವಿಧ ಮಠಾಧೀಶರು, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀಗಳು ಹೊರಬಂದಿದ್ದಾರೆ. ಜೂನ್‌ 3ರಂದು ಮಧ್ಯರಾತ್ರಿ 3 ಗಂಟೆಗೆ ಗರ್ಭಗುಡಿಯನ್ನು ಪ್ರವೇಶ ಮಾಡಿದ್ದರು. ಗರ್ಭಗುಡಿಯಲ್ಲಿನ ಶಿವಲಿಂಗದ ಮುಂದೆ ಕಠಿಣವಾದ ತಪಸ್ಸು ಮಾಡಿದ ಶ್ರೀಗಳು ಇಂದು ಹೊರಬಂದು ಸಹಸ್ರಾರು ಭಕ್ತರಿಗೆ ದರ್ಶನ ನೀಡಿದರು. ಶ್ರೀಗಳ ಮೌನಾನುಷ್ಠಾನ ಮುಗಿಸಿ ಹೊರ ಬರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಗರ್ಭಗುಡಿಯ ಕಗ್ಗತ್ತಲಲ್ಲಿ ಅನ್ನ, ನೀರು ಇಲ್ಲದೇ 33 ದಿನಗಳ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನ ಮಾಡಿ ಪವಾಡ ಸೃಷ್ಠಿ‌ಮಾಡಿದ್ದಾರೆ. ಮೂಲಕ ವಿಜ್ಞಾನಕ್ಕೆ ಸವಾಲು ಹಾಕಿದ್ದಾರೆ.

ಹರಿದು ಬಂದ ಲಕ್ಷಾಂತರ ಭಕ್ತರ ದಂಡು

ಈ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗದಗ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಯಾದಗಿರಿ, ಬಳ್ಳಾರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರ ದಂಡು ಹರಿದು ಬಂದಿತ್ತು. ಇನ್ನು ಕೇವಲ ಬೇವಿನ ರಸ, ಪತ್ರಿ ರಸ‌ ಮಾತ್ರ ಸೇವನೆ ಮಾಡಿ ಅನುಷ್ಠಾನ ಮಾಡಿದ್ದಾರೆ ಅಂತ ಶ್ರೀಗಳು ಹೇಳಿದ್ದಾರೆ.

ಶ್ರೀಗಳಿಗೆ ಪಂಚಾಮೃತ ಅಭಿಷೇಕ

ಇದನ್ನೂ ಓದಿ: ಮಳೆಗಾಗಿ ಕಠಿಣ ನಿರ್ಧಾರ ಕೈಗೊಂಡ ಅನ್ನದಾತ: ಕೃಪೆ ತೋರುವನೇ ವರುಣ ದೇವ?

ರಾಚೋಟೇಶ್ವರ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ಈ ಹಿಂದೆ ಕೂಡ ಶಿವಯೋಗ ಸಮಾಧಿ ವ್ರತ ಮಾಡಿದ್ದರು. ಈ ಭಾರಿ ಕೂಡ ಲೋಕ ಕಲ್ಯಾಣಕ್ಕಾಗಿ ಶಿವಯೋಗ ಸಮಾಧಿ ವೃತ ಮಾಡಿ ಯಶಸ್ವಿಯಾಗಿದ್ದಾರೆ. ಸ್ವಾಮೀಜಿಗಳ ಈ ನಡೆ ಭಕ್ತರಲ್ಲಿ ಭಕ್ತಿ ಮತ್ತು ಭರವಸೆಯನ್ನು ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉಚಿತವಾಗಿ ನೋಡಿ ಪ್ರಭಾಸ್, ಅಕ್ಷಯ್, ಮೋಹನ್​​ಲಾಲ್, ವಿಷ್ಣು ಸಿನಿಮಾ: ಎಲ್ಲಿ? – Kannada News | Kannappa Telugu movie released on YouTube for free viewing

ಸಿನಿಮಾಗಳ (Cinema) ಟಿಕೆಟ್ ದರ ಗಗನಕ್ಕೇರಿ ಕೂತಿವೆ. ಒಟಿಟಿಗಳಲ್ಲಿ ನೋಡೋಣವೆಂದರೆ ಅವುಗಳ ಬೆಲೆಯೂ ಕಡಿಮೆ ಏನಿಲ್ಲ. ಅದು ಸಾಲದಕ್ಕೆ, ಒಟಿಟಿಗೆ ಹಣ ಕೊಟ್ಟಮೇಲೂ ಕೆಲ ಸಿನಿಮಾಗಳನ್ನು ನೋಡಲು ಹೆಚ್ಚುವರಿ ಹಣ ಕೊಡಬೇಕಾಗಿರುವ ಪರಿಸ್ಥಿತಿ ಇದೆ. ಪೈರಸಿ ಅಂತು ಈಗ ಬಹಳ ಕಷ್ಟ ಬಿಡಿ. ಸಿಡಿ-ಡಿವಿಡಿಗಳಂತೂ ನಿಂತೇ ಹೋಗಿವೆ. ಹೀಗಿರುವಾಗ, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​​ಲಾಲ್, ಮಂಚು ವಿಷ್ಣು ಅಂಥಹಾ ಸ್ಟಾರ್ ನಟರು ನಟಿಸಿರುವ ಸಿನಿಮಾ ಉಚಿತವಾಗಿ ನೋಡಲು ಸಿಕ್ಕರೆ? ಖಂಡಿತ ಈ ಅವಕಾಶ ಈಗ ವೀಕ್ಷಕರಿಗೆ ದೊರಕಿದೆ.

ಮಂಚು ವಿಷ್ಣು, ಪ್ರಭಾಸ್, ಮೋಹನ್​​ಲಾಲ್, ಅಕ್ಷಯ್ ಕುಮಾರ್, ಮೋಹನ್​​ಬಾಬು, ದೇವರಾಜ್ ಇನ್ನೂ ಕೆಲವು ಸ್ಟಾರ್ ನಟರು, ನಟಿಯರು ನಟಿಸಿರುವ ಸೂಪರ್ ಹಿಟ್ ಸಿನಿಮಾ ಇದೀಗ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ. ಈ ಸ್ಟಾರ್ ನಟರು ಒಟ್ಟಿಗೆ ನಟಿಸಿರುವ ತೆಲುಗಿನ ‘ಕಣ್ಣಪ್ಪ’ ಸಿನಿಮಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆಯನ್ನೇ ಮಾಡಿತ್ತು. ಸುಮಾರು 200 ಕೋಟಿ ಹಣ ಗಳಿಕೆ ಮಾಡಿದೆ ಎಂದು ಚಿತ್ರತಂಡವೇ ಹೇಳಿಕೊಂಡಿತ್ತು.

ಇದನ್ನೂ ಓದಿ:‘ಆಲ್ಫಾ’ ಬಾಕ್ಸ್ ಆಫೀಸ್ ಕಲೆಕ್ಷನ್; ಎರಡನೇ ದಿನವೂ ಮಂಕಾದ ಅಲಿಯಾ ಭಟ್ ಸಿನಿಮಾ

ಆ ಸಿನಿಮಾ ಇದೀಗ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದೆ. ಯೂಟ್ಯೂಬ್​​ನಲ್ಲಿ ಆಸಕ್ತ ಸಿನಿಮಾ ಪ್ರೇಮಿಗಳು ಸಿನಿಮಾವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಎವಿಎಎ ಎಂಟರ್ಟೈನ್​​ಮೆಂಟ್ ಹೆಸರಿನ ಯೂಟ್ಯೂಬ್ ಚಾನೆಲ್​​ನಲ್ಲಿ ‘ಕಣ್ಣಪ್ಪ’ ಸಿನಿಮಾವನ್ನು ನಿನ್ನೆಯಷ್ಟೆ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ‘ಕಣ್ಣಪ್ಪ’ ಸಿನಿಮಾ ಈ ಯೂಟ್ಯೂಬ್​​ ಚಾನೆಲ್​​ನಲ್ಲಿ ವೀಕ್ಷಣೆಗೆ ಲಭ್ಯವಿದ್ದು, ಕೇವಲ ಒಂದೇ ದಿನಕ್ಕೆ ಲಕ್ಷಾಂತರ ಮಂದಿ ‘ಕಣ್ಣಪ್ಪ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ‘ಕಣ್ಣಪ್ಪ’ ಸಿನಿಮಾದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿಲ್ಲ. ಬಹುಷಃ ಸಿನಿಮಾದ ಹಿಂದಿ ಆವೃತ್ತಿಯನ್ನು ಟಿ-ಸೀರೀಸ್ ಅಥವಾ ಬೇರೆ ಯಾವುದಾದರೂ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಹೆಸರೇ ಹೇಳುತ್ತಿರುವಂತೆ ‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪನ ಕತೆ ಆಧರಿಸಿದ ಸಿನಿಮಾ. ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಬೇಡರ ಕಣ್ಣಪ್ಪನ ಸಿನಿಮಾ ಆಗಿದ್ದರೂ ಸಹ ಸಿನಿಮಾನಲ್ಲಿ ಗ್ಲಾಮರಸ್ ನಾಯಕಿ, ರೊಮ್ಯಾಂಟಿಕ್ ಹಾಡುಗಳು, ಹೀರೋನ ಉದ್ದುದ್ದ ಡೈಲಾಗ್​​ಗಳು, ಅತಿಯಾದ ಫೈಟ್​​ಗಳು, ಯಾವ ಯಾವುದೋ ಪಾತ್ರಗಳೆಲ್ಲ ಇದ್ದವು. ಇದೇ ಕಾರಣಕ್ಕೆ ಈ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿಮರ್ಶೆ, ಟೀಕೆ ಸಹ ವ್ಯಕ್ತವಾಗಿತ್ತು. ಇದೀಗ ಸಿನಿಮಾ ಯೂಟ್ಯೂಬ್​​ಗೆ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಎನ್​ಜಿ ಪೂರೈಕೆ ಪುನಾರಂಭಗೊಂಡ ಬೆನ್ನಲ್ಲೇ ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಭಾರತ – Kannada News | Govt takes back emergency gas supply curbs as LNG shipments returns to normal

ನವದೆಹಲಿ, ಜುಲೈ 5: ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಂಟಾಗಿದ್ದ ಜಾಗತಿಕ ಇಂಧನ ಆತಂಕ ಸದ್ಯಕ್ಕೆ ದೂರವಾಗಿದೆ. ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ದ್ರವೀಕೃತ ನೈಸರ್ಗಿಕ ಅನಿಲ (LNG) ಹಡಗುಗಳ ಸಂಚಾರ ಮತ್ತು ಪೂರೈಕೆ ಯಥಾಸ್ಥಿತಿಗೆ ಮರಳಿದೆ. ಈ ಹಿನ್ನೆಲೆಯಲ್ಲಿ, ದೇಶದಲ್ಲಿ ಹೇರಲಾಗಿದ್ದ ತುರ್ತು ನೈಸರ್ಗಿಕ ಅನಿಲ ಪೂರೈಕೆ ನಿಯಂತ್ರಣದ ನಿಯಮಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ಹಿಂಪಡೆದಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ‘ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ, 2026’ ಕ್ಕೆ ತಿದ್ದುಪಡಿ ತಂದು ಈ ಅಧಿಸೂಚನೆ ಹೊರಡಿಸಿದೆ.

ಬಿಕ್ಕಟ್ಟಿನ ಹಿನ್ನೆಲೆ ಮತ್ತು ತುರ್ತು ಕ್ರಮಗಳು

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿ ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ್ದವು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿತ್ತು. ಈ ಸಂಘರ್ಷದ ಪರಿಣಾಮವಾಗಿ ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಬಹುತೇಕ ಮುಚ್ಚಲ್ಪಟ್ಟಿತ್ತು. ಇದರಿಂದ ಕತಾರ್ ಸೇರಿದಂತೆ ಗಲ್ಫ್ ದೇಶಗಳಿಂದ ಭಾರತಕ್ಕೆ ಬರಬೇಕಿದ್ದ ಎಲ್‌ಎನ್‌ಜಿ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿತ್ತು.

ಗ್ಯಾಸ್ ಪೂರೈಕೆದಾರ ಕಂಪನಿಗಳು ‘ಫೋರ್ಸ್ ಮೆಜರ್’ (Force Majeure – ಅನಿವಾರ್ಯ ಪರಿಸ್ಥಿತಿಯ ನಿಯಮ) ಘೋಷಿಸಿ ಹಡಗುಗಳನ್ನು ಬೇರೆಡೆಗೆ ತಿರುಗಿಸಿದ್ದವು. ಈ ಬಿಕ್ಕಟ್ಟನ್ನು ನಿಭಾಯಿಸಲು ಭಾರತ ಸರ್ಕಾರ ಮಾರ್ಚ್ 9 ರಂದು ದೇಶಾದ್ಯಂತ ತುರ್ತು ಗ್ಯಾಸ್ ನಿಯಂತ್ರಣ ಆದೇಶ ಜಾರಿಗೊಳಿಸಿತ್ತು.

ಇದನ್ನೂ ಓದಿ: ಇಪಿಎಫ್ ಪೋರ್ಟಲ್​ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್​ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್​ಡೇಟ್ಸ್

ಅಂದು ಸರ್ಕಾರ ಕೈಗೊಂಡಿದ್ದ ಪ್ರಮುಖ ಕ್ರಮಗಳು

ಗೃಹಬಳಕೆಯ ಪೈಪ್ಡ್ ಗ್ಯಾಸ್ (PNG), ವಾಹನಗಳ ಆಟೋ ಗ್ಯಾಸ್ (CNG) ಮತ್ತು ಎಲ್‌ಪಿಜಿ (LPG) ಉತ್ಪಾದನೆಗೆ ಯಾವುದೇ ಅಡಚಣೆಯಾಗದಂತೆ 100% ಗ್ಯಾಸ್ ಪೂರೈಕೆಯನ್ನು ಕಾಯ್ದಿರಿಸಲಾಗಿತ್ತು.

ಇದಕ್ಕಾಗಿ ಪೆಟ್ರೋಕೆಮಿಕಲ್ ಪ್ಲಾಂಟ್‌ಗಳು, ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಕೈಗಾರಿಕೆಗಳಿಗೆ ನೀಡಲಾಗುತ್ತಿದ್ದ ಗ್ಯಾಸ್ ಪೂರೈಕೆಯಲ್ಲಿ 20% ರಿಂದ 35% ವರೆಗೆ ಕಡಿತ ಮಾಡಲಾಗಿತ್ತು.

ತೈಲ ಸಂಸ್ಕರಣಾಗಾರಗಳು (Refineries) ತಮ್ಮ ಸರಾಸರಿ ಬಳಕೆಯ ಕೇವಲ 65% ಗ್ಯಾಸ್ ಮಾತ್ರ ಬಳಸುವಂತೆ ಸೂಚಿಸಲಾಗಿತ್ತು.

ತೈಲ ಪರಿಸ್ಥಿತಿಯಲ್ಲಿ ಈಗ ಬದಲಾಗಿರುವುದೇನು?

ಪಶ್ಚಿಮ ಏಷ್ಯಾದಲ್ಲಿ ಸದ್ಯ ಕದನ ವಿರಾಮ (Ceasefire) ಘೋಷಣೆಯಾಗಿದ್ದು, ಶಾಂತಿ ಮಾತುಕತೆಗಳು ಆರಂಭವಾಗಿವೆ. ಅಲ್ಲದೆ, ಹಾರ್ಮುಜ್ ಜಲಸಂಧಿ ಮೂಲಕ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತ ಅವಕಾಶ ನೀಡಲಾಗಿದೆ.

ಭಾರತಕ್ಕೆ ಬರಬೇಕಿದ್ದ ಎಲ್‌ಎನ್‌ಜಿ ಹಡಗುಗಳು ಸುರಕ್ಷಿತವಾಗಿ ಬಂದಿಳಿಯುತ್ತಿರುವುದರಿಂದ ಸಚಿವಾಲಯವು ಎಲ್ಲಾ ತುರ್ತು ನಿರ್ಬಂಧಗಳನ್ನು ತೆಗೆದುಹಾಕಿದೆ. ಇನ್ಮುಂದೆ ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲ ಮತ್ತು ಆಮದು ಮಾಡಿಕೊಳ್ಳುವ ಎಲ್‌ಎನ್‌ಜಿಯನ್ನು ಮೊದಲಿನಂತೆ ಮುಕ್ತವಾಗಿ ವಾಣಿಜ್ಯ ಒಪ್ಪಂದಗಳ ಆಧಾರದ ಮೇಲೆ ಮಾರಾಟ ಮಾಡಬಹುದಾಗಿದೆ. ಕೈಗಾರಿಕೆಗಳು ಮತ್ತು ಪೆಟ್ರೋಕೆಮಿಕಲ್ ವಲಯಕ್ಕೆ ವಿಧಿಸಲಾಗಿದ್ದ ಗ್ಯಾಸ್ ಕಡಿತದ ನಿಯಮವೂ ಇನ್ನು ಇರುವುದಿಲ್ಲ.

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

ಭಾರತದ ಇಂಧನ ಭದ್ರತೆ: ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಶೇ. 88 ರಷ್ಟು ಮತ್ತು ನೈಸರ್ಗಿಕ ಅನಿಲದಲ್ಲಿ (LNG) ಸುಮಾರು ಶೇ. 50 ರಷ್ಟನ್ನು ಆಮದಿನ ಮೇಲೆಯೇ ಅವಲಂಬಿಸಿದೆ. ಅದರಲ್ಲಿಯೂ ಶೇ. 65 ರಷ್ಟು ಎಲ್‌ಎನ್‌ಜಿ ಹಾರ್ಮುಜ್ ಜಲಸಂಧಿ ಮಾರ್ಗವಾಗಿಯೇ ಬರುವುದರಿಂದ ಈ ಜಲಸಂಧಿ ಸದಾ ಸುರಕ್ಷಿತವಾಗಿರುವುದು ಭಾರತದ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

ಸರ್ಕಾರವು ಈಗಾಗಲೇ ಇಂಧನ ಪೂರೈಕೆ ಯಥಾಸ್ಥಿತಿಗೆ ಬಂದಿರುವುದರಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183 ರಷ್ಟು ಇಳಿಕೆ ಮಾಡಿದೆ. ಈ ನಿಯಂತ್ರಣ ಹಿಂಪಡೆದಿರುವುದರಿಂದ ದೇಶದ ಪ್ರಮುಖ ಕೈಗಾರಿಕೆಗಳು ಮತ್ತು ಇಂಧನ ವಲಯ ನಿರಾಳವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:37 pm, Sun, 5 July 26

Source link

Viral: ಲಿಫ್ಟ್‌ನಲ್ಲಿ ಕನ್ನಡಿಗಳು ಇರುವುದು ಏಕೆ? ಇದೇ ನೋಡಿ ಕಾರಣ – Kannada News | What are the reason behind installing mirrors in elevators

ನೀವು ಆಫೀಸ್, ಮಾಲ್, ರೆಸ್ಟೋರೆಂಟ್ ಗೆ ಹೋದಾಗ ಯಾರಪ್ಪ ಮೆಟ್ಟಿಲು ಹತ್ತುತ್ತಾರೆಂದು ಲಿಫ್ಟ್‌ನಲ್ಲಿ (elevators) ಹೋಗಿರುತ್ತೀರಿ. ಲಿಫ್ಟ್ ನಲ್ಲಿರುವ ಕನ್ನಡಿಯಲ್ಲಿ(mirror) ಮುಖ ನೋಡಿರುತ್ತೀರಿ. ಈ ಲಿಫ್ಟ್ ಇರುವುದು ನಮ್ಮ ಅಲಂಕಾರಕ್ಕಾಗಿ, ಮುಖ ನೋಡಿಕೊಳ್ಳಲು ಎಂದೇ ಅನೇಕರು ಅಂದುಕೊಂಡಿದ್ದಾರೆ. ಆದರೆ ಎಷ್ಟೋ ಜನರಿಗೆ ಲಿಫ್ಟ್‌ನಲ್ಲಿ ಕನ್ನಡಿ ಅಳವಡಿಕೆ ಮಾಡಿರುವುದರ ಹಿಂದಿನ ಕಾರಣ ಗೊತ್ತಿಲ್ಲ. ನೀವು ಲಿಫ್ಟ್ ಬಳಕೆ ಮಾಡುವ ಮುನ್ನ ಕನ್ನಡಿಗಳನ್ನು ಅಳವಡಿಕೆ ಮಾಡಿರುವುದರ ಹಿಂದಿನ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳೋದು ಒಳ್ಳೆಯದು.

ಲಿಫ್ಟ್‌ನಲ್ಲಿ ಕನ್ನಡಿ ಜೋಡಿಸುವುದು ಕೇವಲ ಮುಖ ನೋಡಿಕೊಳ್ಳಲು ಮಾತ್ರವಲ್ಲ. ಸುರಕ್ಷತೆಯನ್ನು ಒಳಗೊಂಡಿದೆ. ಇದು ಮಾನಸಿಕ ಆರೋಗ್ಯಕ್ಕೂ ಅನುಕೂಲಕರವಾಗಿದೆ. ಕೆಲವರು ಸಣ್ಣ ಕೊಠಡಿಗಳು ಅಥವಾ ಇಕ್ಕಟಾದ ಸ್ಥಳಗಳಲ್ಲಿರುವಾಗ ಉಸಿರುಗಟ್ಟಿದಂತಾಗುತ್ತದೆ.

ಇನ್ನು ಕೆಲವರು ಆತಂಕದಲ್ಲಿರುತ್ತಾರೆ. ಕ್ಲಾಸ್ಟ್ರೋಫೋಬಿಯಾ ಅಂದರೆ ಗಾಬರಿಯಾಗುತ್ತಾರೆ. ಕನ್ನಡಿ ಅಳವಡಿಕೆ ಮಾಡಿಕೊಳ್ಳುವುದರಿಂದ ಇದು ಲಿಫ್ಟ್ ನ ಸ್ಥಳಾವಕಾಶವನ್ನು ದೊಡ್ಡದಾಗಿ ಬಿಂಬಿಸುತ್ತದೆ. ಜತೆಗೆ ಆತಂಕ ಮತ್ತು ಒತ್ತಡವು ಕಡಿಮೆ ಮಾಡಿ ಸುರಕ್ಷತೆ ಭಾವನೆ ಮೂಡಿಸುತ್ತದೆ.

ಇದನ್ನೂ ಓದಿ: ಚಿನ್ನ ಹಳದಿ ಬಣ್ಣದಲ್ಲಿ ಇರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ

ಲಿಫ್ಟ್ ನಲ್ಲಿ ಕನ್ನಡಿ ಅಳವಡಿಕೆ ವಿಕಲಚೇತನರಿಗೆ ಬಹಳ ಅನುಕೂಲವಾಗಿದೆ. ಹೌದು, ವ್ಹೀಲ್ ಚೇರ್ ಬಳಸುವವರು ಲಿಫ್ಟ್ ನಲ್ಲಿ ತಿರುಗುವಾಗ ಈ ಕನ್ನಡಿ ನೋಡಿ ತಮ್ಮ ಚಲನವಲನಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಲಿಫ್ಟ್‌ನಲ್ಲಿ ಇರುವಾಗ ನಮ್ಮ ಜತೆಗೆ ಅಪರಿಚಿತ ವ್ಯಕ್ತಿಗಳು ಇರುತ್ತಾರೆ. ನಮ್ಮ ಜತೆಗಿರುವ ಜನರ ಚಲನವಲನಗಳನ್ನು ಗಮನಿಸಲು ಕನ್ನಡಿ ಸಹಾಯಕವಾಗಿದೆ. ಸುರಕ್ಷತೆ ದೃಷ್ಟಿಯಿಂದಲೂ ಈ ಕನ್ನಡಿಗಳು ಸಹಾಯಕ್ಕೆ ಬರುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಚುರುಕು, ಮುಂದಿನ 5 ದಿನಗಳ ಕಾಲ ಕರ್ನಾಟಕದಲ್ಲಿ ಭಾರಿ ಮಳೆ – Kannada News | IMD 5 Day Rain Forecast In karnataka: Heavy Rain Likely Till July 10, Coastal Area on High Alert

ಬೆಂಗಳೂರು, (ಜುಲೈ 05): ಜೂನ್​ ತಿಂಗಳಲ್ಲಿ ಕರ್ನಾಟಕದಲ್ಲಿ (Karnataka) ಕೈಕೊಟ್ಟಿದ್ದ ಮುಂಗಾರು ಮಳೆ (Monsoon Rain) ಇದೀಗ ಜುಲೈ ಆರಂಭದಿಂದಲೇ ಚುರುಕುಗೊಂಡಿದ್ದು, ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅದಲ್ಲೂ ಮುಖ್ಯವಾಗಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ

ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಭಾರಿ ಮಳೆ, ದಕ್ಷಿಣ ಒಳನಾಡು ಮತ್ತಯ ಮಲೆನಾಡು ಜಿಲ್ಲೆಗಳಲ್ಲಿ ಜುಲೈ 5 ರಿಂದ 8 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದ್ದು, ಕೆಲ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಹಾಗೂ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಇದನ್ನೂ ನೋಡಿ: ಈ ಬಾರಿ ಮಳೆಗಾಲದಲ್ಲಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ

ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಕವಾದ ಭಾರಿ ಮಳೆಯಾಗಲಿದೆ. ಮುಂಗಾರು ಮಾರುತಗಳು ಚುರುಕಾಗಿರುವುದರಿಂದ ಈ ಭಾಗಗಳಿಗೆ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.

ಬೆಂಗಳೂರು ಹವಾಮಾನ ವರದಿ

ಮುಂದಿನ 3-4 ದಿನಗಳ ಕಾಲ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಜೊತೆಗೆ ನಗರದ ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 27°C ರಿಂದ 29°C ಹಾಗೂ ಕನಿಷ್ಠ ತಾಪಮಾನ 23°C ಆಸುಪಾಸಿನಲ್ಲಿರಲಿದೆ.

ಒಳನಾಡು -ಉತ್ತರ ಒಳನಾಡು

ಇನ್ನು ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಕಲಬುರಗಿ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಭಾರಿ ಗಾಳಿಯೊಂದಿಗೆ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿತ್ರದುರ್ಗ, ಹಾಸನ ಹಾಗೂ ಮೈಸೂರು ಭಾಗಗಳಲ್ಲಿ ಮುಂಗಾರು ಮಳೆ ಸಾಧಾರಣವಾಗಿ ಮುಂದುವರಿಯಲಿದೆ.

ಒಟ್ಟಿನಲ್ಲಿ ಆರಂಭದಲ್ಲಿ ಕೈಕೊಟ್ಟಿರುವ ಮುಂಗಾರು ಮಳೆ ಜುಲೈ ಮೊಲದ ವಾರದಲ್ಲಿ ಚುರುಕು ಪಡೆದುಕೊಂಡಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version