ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತ್ತೊಂದು ದುರಂತ: ಹೃದಯಾಘಾತದಿಂದ ಬೀದರ್​​ನಲ್ಲಿ BLO ಸಾವು – Kannada News | Another Tragedy During Special Intensive Revision: BLO Dies of Heart Attack in Bidar

ಬೀದರ್​​/ ತುಮಕೂರು, ಜುಲೈ 05: SIR ಕರ್ತವ್ಯಕ್ಕೆ ತೆರಳುವಾಗ ಬೈಕ್​​​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ವಿಎಒ ಭುವನಾ ಮೃತಪಟ್ಟಿರುವ ವಿಚಾರವಾಗಿ ತುಮಕೂರಲ್ಲಿ (Tumakuru) ಪ್ರತಿಭಟನೆ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದ BLO ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಬೀದರ್ ತಾಲೂಕಿನ ಅಮಲಾಪುರದಲ್ಲಿ ನಡೆದಿದೆ. ಮೃತರನ್ನು ಬೀದರ್ ಜಿಲ್ಲೆಯ ಭಾಲ್ಕಿ ಮೂಲದವರಾಗಿರುವ ಸುನೀಲ್​​ ಎಂದು ಗುರುತಿಸಲಾಗಿದೆ.

ಆಗಿದ್ದೇನು?

ಬೀದರ್ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಸರ್ವೇ ನಡೆಸುತ್ತಿದ್ದ ವೇಳೆ ತೀವ್ರ ಎದೆನೋವಿನಿಂದ ಸುಸ್ತಾಗಿ ಸುನೀಲ್​​ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರ ಸಹಾಯದಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್​​ ಅಲ್ಲಿ ಸ್ಟಂಟ್ ಅಳವಡಿಸುವ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಗಾಂಧಿ‌ಗಂಜ್ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಘಟನೆ‌ ನಡೆದಿದೆ.

ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು

ತುಮಕೂರಲ್ಲಿ ಮುಂದುವರಿದ ಪ್ರತಿಭಟನೆ

ಮತ್ತೊಂದೆಡೆ ಇತ್ತ ತುಮಕೂರಿನಲ್ಲಿ ವಿಎಒ ಭುವನಾ ಸಾವು ಖಂಡಿಸಿ ಡಿಸಿ ಕಚೇರಿ ಬಳಿ ಕಂದಾಯ ನೌಕರರ ಪ್ರತಿಭಟನೆ ಮುಂದುವರಿದಿದೆ. ನಿನ್ನೆ ತಿಪಟೂರು ತಾಲೂಕಿನಲ್ಲಿ ಕರ್ತವ್ಯದ ವೇಳೆ ಅಪಘಾತದವಾಗಿ ಗಾಯಗೊಂಡಿದ್ದ ವಿಎಒ ಯಶಸ್ವಿನಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಕಾಲಿಗೆ ಗಂಭೀರ ಗಾಯವಾಗಿದ್ದರೂ, ಹೋರಾಟದಲ್ಲಿ ಭಾಗವಹಿಸುವ ಮೂಲಕ ಭುವನಾ ಸಾವಿಗೆ ನ್ಯಾಯ ಕೊಡುವಂತೆ ಅವರು ಆಗ್ರಹಿಸಿದ್ದಾರೆ. ಈ ನಡುವೆ ಧರಣಿಯಲ್ಲಿ ಭಾಗಿಯಾಗುವಂತೆ ಸಂಘದಿಂದ ಎಲ್ಲಾ ನೌಕರರಿಗೆ ಬುಲಾವ್​​​ ನೀಡಲಾಗಿದ್ದು, ಮೇಲಧಿಕಾರಿಗಳ ಒತ್ತಡವೇ ಭುವನಾ ಸಾವಿಗೆ ಕಾರಣ ಎಂದು ಪ್ರತಿಭಟನಾಕಾರರು ಮೇಲಿಂದ ಮೇಲೆ ಹೇಳುತ್ತಿದ್ದಾರೆ.

ನಿನ್ನೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹೇರಲಾಗಿದ್ದು, ಆರೋಪ ಸಂಬಂಧ ಆಡಿಯೋವನ್ನು ಸಹ ಹೋರಾಟಗಾರರು ಹೊಂದಿದ್ದಾರೆ. ತಹಶೀಲ್ದಾರ್​​ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಇರುವ ಮಾಹಿತಿ ಇದ್ದು, ಆಡಿಯೋದಲ್ಲಿ ಬೆಳಗ್ಗೆ 6.30ಕ್ಕೆ ಕೆಲಸಕ್ಕೆ ಬರುವಂತೆ ಅಧಿಕಾರಿ ಹೇಳಿದ್ದಾರೆ. ಇದು ತಹಶೀಲ್ದಾರ್, ಎಸಿ​​​​​ ನಿರ್ಧಾರವೋ? ಅಥವಾ ಡಿಸಿ ನಿರ್ಧಾರವೋ? ಎಂಬ ಪ್ರಶ್ನೆಯೂ ಉದ್ಭವವಾಗಿದ್ದು, ಈ ರೀತಿ ಸೂಚನೆ ಕೊಟ್ಟು ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:07 pm, Sun, 5 July 26

Source link

ಪಾಕಿಸ್ತಾನ್ ಟೆಸ್ಟ್ ತಂಡ ಪ್ರಕಟ: ಮತ್ತೆ ಬದಲಾದ ನಾಯಕ! – Kannada News | Pakistan Test Squad For West Indies and England Tour

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರುಗಳ ಈ ತಂಡದ ನಾಯಕನಾಗಿ ಆಯ್ಕೆಯಾಗಿರುವುದು ಬಾಬರ್ ಆಝಂ. ಇತ್ತೀಚಿನ ಸರಣಿಗಳಲ್ಲಿನ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಶಾನ್ ಮಸೂದ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಬದಲಿಗೆ ಬಾಬರ್ ಆಝಂ ಅವರಿಗೆ ಮತ್ತೆ ರೆಡ್-ಬಾಲ್ ಕ್ರಿಕೆಟ್‌ನ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

ನಾಯಕತ್ವ ಬದಲಾವಣೆಗೆ ಕಾರಣ!

ಪಾಕಿಸ್ತಾನ್ ತಂಡದ ಮುಖ್ಯ ಆಯ್ಕೆಗಾರ ಆಕಿಬ್ ಜಾವೇದ್ ಭಾನುವಾರ ಲಹೋರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಶಾನ್ ಮಸೂದ್ ನಿರೀಕ್ಷಿತ ಮಟ್ಟದಲ್ಲಿ ತಂಡವನ್ನು ಮುನ್ನಡೆಸಲು ಸಾಧ್ಯವಾಗದ ಕಾರಣ ಬಾಬರ್ ಆಝಂ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ವಿರುದ್ಧ 2-0 ಅಂತರದ ಐತಿಹಾಸಿಕ ಮುಖಭಂಗ ಸೇರಿದಂತೆ ಸತತ ಸೋಲುಗಳನ್ನು ಅನುಭವಿಸಿ ಪ್ರಸ್ತುತ WTC ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ನಾಯಕತ್ವ ಬದಲಾವಣೆ ಅನಿವಾರ್ಯವಾಗಿತ್ತು. ಅದರಂತೆ ಇದೀಗ ಅನುಭವಿ ಆಟಗಾರನಾಗಿರುವ ಬಾಬರ್ ಆಝಂಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ ಎಂದು ಆಕಿಬ್ ಜಾವೇದ್ ತಿಳಿಸಿದ್ದಾರೆ.

ಪ್ರಮುಖ ಆಟಗಾರರಿಗೆ ಗೇಟ್ ಪಾಸ್:

ಎರಡು ಸರಣಿಗಳಿಗಾಗಿ ಆಯ್ಕೆ ಮಾಡಲಾದ ಈ ತಂಡದಲ್ಲಿ ಕೆಲ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ. ಪಾಕ್ ತಂಡದ ಸ್ಟಾರ್ ವೇಗಿಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ಹಸನ್ ಅಲಿ ಅವರನ್ನು ಕಳಪೆ ಫಾರ್ಮ್‌ನಿಂದಾಗಿ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.

ಇದರೊಂದಿಗೆ ಹಿರಿಯ ಸ್ಪಿನ್ನರ್ ನೋಮನ್ ಅಲಿ ಕೂಡ ಸ್ಥಾನ ಕಳೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್ ಅವರನ್ನು ಫಿಟ್ನೆಸ್ ಸಮಸ್ಯೆಯ ಕಾರಣದಿಂದಾಗಿ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗಿಡಲಾಗಿದ್ದು, ಇಂಗ್ಲೆಂಡ್ ಪ್ರವಾಸದ ವೇಳೆಗೆ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ 17ನೇ ಸದಸ್ಯರಾಗಿ ಸೇರ್ಪಡೆಯಾಗಲಿದ್ದಾರೆ.

ಹೊಸ ಮುಖಗಳ ಎಂಟ್ರಿ:

ಹಿರಿಯ ಆಟಗಾರರನ್ನು ಕೈ ಬಿಟ್ಟು ಯುವ ಪ್ರತಿಭೆಗಳಿಗೆ ಮಣೆ ಹಾಕಿರುವ ಪಾಕಿಸ್ತಾನ್ ಕ್ರಿಕೆಟ್​ ಮಂಡಳಿ, ಒಟ್ಟು  ನಾಲ್ವರು ಅನ್‌ಕ್ಯಾಪ್ಡ್ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅವರೆಂದರೆ…

  • ಉಬೈದ್ ಶಾ (ಖ್ಯಾತ ವೇಗಿ ನಸೀಮ್ ಶಾ ಅವರ ಕಿರಿಯ ಸಹೋದರ)
  • ಅಲಿ ಉಸ್ಮಾನ್ (ಪಾಕ್ ದೇಶೀಯ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ನರ್)
  •  ಮುಹಮ್ಮದ್ ಅವೈಸ್ ಝಫರ್ (ಬ್ಯಾಟರ್)
  • ಮುಹಮ್ಮದ್ ಘಾಝಿ ಘೋರಿ (ವಿಕೆಟ್ ಕೀಪರ್ ಬ್ಯಾಟರ್)

ಇದನ್ನೂ ಓದಿ: RCB ಎಡಿಷನ್ ಫೋನ್: ಏನಿದರ ವಿಶೇಷತೆ?

ಪಾಕಿಸ್ತಾನ್ ಟೆಸ್ಟ್ ತಂಡ: ಬಾಬರ್ ಆಝಂ (ನಾಯಕ), ಶಾನ್ ಮಸೂದ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಇಮಾಮ್-ಉಲ್-ಹಕ್, ಅಬ್ದುಲ್ಲಾ ಫಝಲ್, ಅಝಾನ್ ಅವೈಸ್, ಸಲ್ಮಾನ್ ಅಲಿ ಆಘಾ, ಸಾಜಿದ್ ಖಾನ್, ಅಮಿರ್ ಜಮಾಲ್, ಖುರ್ರಮ್ ಶಹಝಾದ್, ಮೊಹಮ್ಮದ್ ಅಬ್ಬಾಸ್, ಅವೈಸ್ ಝಫರ್ ಮೊಹಮ್ಮದ್ ಅಲಿ, ಅಲಿ ಉಸ್ಮಾನ್, ಉಬೈದ್ ಶಾ, ಮುಹಮ್ಮದ್ ಘೋರಿ (ವಿಕೆಟ್ ಕೀಪರ್) ಮತ್ತು ಸೌದ್ ಶಕೀಲ್.

Published On – 2:00 pm, Sun, 5 July 26

Source link

ವಿಜಯ್ ದೇವರಕೊಂಡ ಸಮಾಜ ಸೇವೆ; ಇದು ರಾಜಕೀಯ ಪ್ರವೇಶದ ಮುನ್ಸೂಚನೆಯೇ? – Kannada News | Vijay Deverakonda social service with Harish Rao sparks politics entry rumours

ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಈಗ ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ, ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಸುದ್ದಿಯಲ್ಲಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿಜಯ್ ಅವರ ಇತ್ತೀಚಿನ ನಡೆಗಳು, ಈಗ ರಾಜಕೀಯ (Politics) ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.

ಕೆಲ ದಿನಗಳ ಹಿಂದಷ್ಟೇ ಆರ್ಥಿಕವಾಗಿ ಹಿಂದುಳಿದ, ಓದಿನಲ್ಲಿ ಮುಂದಿರುವ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಹೊಸ ಸಾಮಾಜಿಕ ಕಾರ್ಯಕ್ರಮವನ್ನು ಘೋಷಿಸಿ ವಿಜಯ್ ದೇವರಕೊಂಡ ಎಲ್ಲರ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಅವರ ಮತ್ತೊಂದು ಜನಪರ ಕಾರ್ಯ ಈಗ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಹರೀಶ್ ರಾವ್ ಜೊತೆ ಸಿದ್ದಿಪೇಟೆ ಆಸ್ಪತ್ರೆಗೆ ಭೇಟಿ:

ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ತೆಲಂಗಾಣದ ಸಿದ್ದಿಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಆಸ್ಪತ್ರೆಯು ಮಕ್ಕಳಿಗೆ ಯಶಸ್ವಿಯಾಗಿ 500ಕ್ಕೂ ಹೆಚ್ಚು ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷವೆಂದರೆ, ವಿಜಯ್ ದೇವರಕೊಂಡ ಅವರು ಬಿಆರ್‌ಎಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹರೀಶ್ ರಾವ್ ಅವರೊಂದಿಗೆ ಈ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದ ಮಕ್ಕಳೊಂದಿಗೆ ಸುದೀರ್ಘವಾಗಿ ಸಂವಾದ ನಡೆಸಿದರು.

ರಾಜಕೀಯ ಎಂಟ್ರಿಯ ವದಂತಿ?

ವಿಜಯ್ ದೇವರಕೊಂಡ ಅವರ ಈ ಸಾಮಾಜಿಕ ಜವಾಬ್ದಾರಿಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೇವಲ ಸ್ಟಾರ್ ನಟನಾಗಿ ಉಳಿಯದೇ, ತಮ್ಮೊಳಗಿನ ಮಾನವೀಯ ಗುಣವನ್ನು ಅವರು ಜಗತ್ತಿಗೆ ತೋರಿಸುತ್ತಿದ್ದಾರೆ. ಅವರ ಈ ಸರಣಿ ಸಮಾಜ ಸೇವೆ ಮತ್ತು ರಾಜಕೀಯ ನಾಯಕರೊಂದಿಗಿನ ಒಡನಾಟವನ್ನು ಕಂಡು ಸಾಮಾಜಿಕ ಜಾಲತಾಣಗಳ ಒಂದು ವಲಯದಲ್ಲಿ ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ. ಭವಿಷ್ಯದ ರಾಜಕೀಯ ಪ್ರವೇಶಕ್ಕೆ ಇವೆಲ್ಲವೂ ಮುನ್ನುಡಿಯೇ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಎತ್ತುತ್ತಿದ್ದಾರೆ.

ಇದನ್ನೂ ಓದಿ: ‘ರೌಡಿ ಜನಾರ್ದನ’ ವಿಜಯ್ ದೇವರಕೊಂಡ ಎದೆ ಮೇಲೆ ಕಾಲಿಟ್ಟ ನಟಿ ಕೀರ್ತಿ ಸುರೇಶ್

‘ಮಾನವೀಯ ಪ್ರಯತ್ನಗಳಿಗೆ ಯಾವುದೇ ರಾಜಕೀಯ ಬಣ್ಣ ಬೇಡ’

ಆದರೆ, ಈ ವದಂತಿಗಳನ್ನು ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ತೀವ್ರವಾಗಿ ತಳ್ಳಿಹಾಕಿದ್ದಾರೆ. ‘ವಿಜಯ್ ಅವರಿಗೆ ಮೊದಲಿನಿಂದಲೂ ಸಮಾಜ ಸೇವೆ ಮಾಡುವುದು ಮತ್ತು ಜನರಿಗೆ ಸಹಾಯ ಮಾಡುವುದು ಎಂದರೆ ಇಷ್ಟ. ಅವರ ಮಾನವೀಯ ಪ್ರಯತ್ನಗಳಿಗೆ ಯಾವುದೇ ರಾಜಕೀಯ ಬಣ್ಣ ಬಳಿಯಬೇಡಿ’ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ. ಸದ್ಯಕ್ಕಂತೂ ವಿಜಯ್ ದೇವರಕೊಂಡ ಅವರ ಈ ಜನಸ್ನೇಹಿ ಕಾರ್ಯ ಅವರ ಇಮೇಜ್ ಅನ್ನು ಇನ್ನಷ್ಟು ಹೆಚ್ಚಿಸಿರುವುದಂತೂ ಸುಳ್ಳಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಎಡಿಷನ್ ಫೋನ್: ಏನಿದರ ವಿಶೇಷತೆ? – Kannada News | The Nothing Phone 4b RCB Edition will launch on July 7, 2026

ಬ್ರಿಟನ್ ಮೂಲದ ಟೆಕ್ ಕಂಪೆನಿ ನಥಿಂಗ್ ಟೆಕ್ನಾಲಜಿ ಲಿಮಿಟೆಡ್ ನಥಿಂಗ್ ಫೋನ್​ನ ಹೊಸ ಎಡಿಷನ್ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಈ ಬಾರಿ ಬಿಡುಗಡೆ ಮಾಡುತ್ತಿರುವುದು RCB ಎಡಿಷನ್ ಮೊಬೈಲ್ ಫೋನ್ ಎಂಬುದು ವಿಶೇಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗಾಗಿ ನಥಿಂಗ್ ಟೆಕ್ನಾಲಜಿ ಲಿಮಿಟೆಡ್ ನಥಿಂಗ್ 4b ಆರ್‌ಸಿಬಿ ಎಡಿಷನ್ (Nothing Phone 4b RCB Edition) ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಫೋನ್​ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿದೆ…

ನಥಿಂಗ್ 4b RCB ಎಡಿಷನ್ ಯಾವಾಗ ಬಿಡುಗಡೆ?

ನಥಿಂಗ್​ ಫೋನ್​ 4b RCB ಎಡಿಷನ್ ಜುಲೈ 7 ರಂದು ಬಿಡುಗಡೆಯಾಗಲಿದೆ. ಅಲ್ಲದೆ ಸಂಜೆ 4 ಗಂಟೆಯಿಂದ ಅಧಿಕೃತ ಸ್ಟೋರ್​ಗಳಿಂದ ಖರೀದಿಸಬಹುದು.

ಬೆಂಗಳೂರಿನಲ್ಲಿ ಎಲ್ಲಿ ಸಿಗಲಿದೆ?

ನಥಿಂಗ್​ ಫೋನ್​ 4b RCB ಎಡಿಷನ್ ಅತ್ಯಂತ ಸೀಮಿತ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಕೇವಲ ಬೆಂಗಳೂರಿನ ಇಂದಿರಾನಗರದಲ್ಲಿರುವ ನಥಿಂಗ್ ಸ್ಟೋರ್‌ನಲ್ಲಿ ಮಾತ್ರ ನೇರವಾಗಿ ಖರೀದಿಸಬಹುದಾಗಿದೆ.

ವಿಶೇಷವೆಂದರೆ, ಈ ಫೋನ್ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುವುದಿಲ್ಲ. ಇದು ಕೇವಲ ಒಂದು ದಿನದ ಆಫ್‌ಲೈನ್ ಮಾರಾಟಕ್ಕೆ ಮಾತ್ರ ಲಭ್ಯವಿರಲಿದೆ.

  • ದಿನಾಂಕ: ಜುಲೈ 7, 2026
  •  ಸಮಯ: ಮಧ್ಯಾಹ್ನ 4:00 ಗಂಟೆಯಿಂದ (IST) ಮಾರಾಟ ಆರಂಭ.
  •  ಸ್ಥಳ: ನಥಿಂಗ್ ಫ್ಲ್ಯಾಗ್‌ಶಿಪ್ ಸ್ಟೋರ್, ಇಂದಿರಾನಗರ, ಬೆಂಗಳೂರು.
  •  ನಿಯಮ: ಮೊದಲು ಬಂದವರಿಗೆ ಆದ್ಯತೆ. ಸ್ಟಾಕ್ ಮುಗಿಯುವವರೆಗೆ ಮಾತ್ರ ಲಭ್ಯ.

ಈ ಫೋನ್​ನ ವಿಶೇಷತೆಗಳೇನು?

ಸಾಮಾನ್ಯವಾಗಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಮಾತ್ರ ಲಭ್ಯವಿರುವ ನಥಿಂಗ್ ಫೋನ್‌ಗಳಿಗೆ ಹೋಲಿಸಿದರೆ, ಈ ಆರ್‌ಸಿಬಿ ಎಡಿಷನ್ ಸಂಪೂರ್ಣ ಭಿನ್ನವಾಗಿದೆ:

  • ಮ್ಯಾಟ್ ರೆಡ್ ಫಿನಿಶ್: ಆರ್‌ಸಿಬಿ ಜೆರ್ಸಿಯಿಂದ ಪ್ರೇರಿತವಾದ ಅತ್ಯಾಕರ್ಷಕ ಕೆಂಪು ಬಣ್ಣದ ಬ್ಯಾಕ್ ಪ್ಯಾನೆಲ್.
  • ಆರ್‌ಸಿಬಿ ಲಯನ್ ಲೋಗೋ: ಫೋನಿನ ಹಿಂಭಾಗದ ಗ್ಲಾಸ್ ಮೇಲೆ ಅಧಿಕೃತ ಆರ್‌ಸಿಬಿ ಸಿಂಹದ ಲೋಗೋವನ್ನು ನೀಡಲಾಗಿದೆ.
  • ವಿಶೇಷ ಬಟನ್‌ಗಳು: ಬದಿಗಳಲ್ಲಿ ಕಪ್ಪು ಬಣ್ಣದ ಬಟನ್‌ಗಳು ಮತ್ತು ಕ್ಯಾಮೆರಾ ಮಾಡ್ಯೂಲ್ ಸುತ್ತಲೂ ಸಿಲ್ವರ್ ಡೀಟೇಲಿಂಗ್ ನೀಡಲಾಗಿದೆ.
  •  ಗ್ಲಿಫ್ ಇಂಟರ್‌ಫೇಸ್: ನಥಿಂಗ್‌ನ ಸಾಂಪ್ರದಾಯಿಕ ಟ್ರಾನ್ಸ್‌ಪರೆಂಟ್ ವಿನ್ಯಾಸ ಮತ್ತು ಎಲ್‌ಇಡಿ ಲೈಟಿಂಗ್ ಕೂಡ ಇದರಲ್ಲಿರಲಿದೆ.

ನಥಿಂಗ್​ ಫೋನ್​ 4b RCB ಎಡಿಷನ್ ವೈಶಿಷ್ಟ್ಯಗಳು:

ಆರ್‌ಸಿಬಿ ಎಡಿಷನ್ ವಿನ್ಯಾಸದಲ್ಲಿ ಬದಲಾವಣೆ ಹೊಂದಿದ್ದರೂ, ಇದರ ಒಳಗಿನ ಫೀಚರ್‌ಗಳು ಸ್ಟ್ಯಾಂಡರ್ಡ್ ನಥಿಂಗ್ ಫೋನ್ 4b ನಂತೆಯೇ ಇರಲಿವೆ.

  •  ಪ್ರೊಸೆಸರ್: ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4.
  •  ಡಿಸ್‌ಪ್ಲೇ: 6.7-ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಸ್ಕ್ರೀನ್, 120Hz ರಿಫ್ರೆಶ್ ರೇಟ್.
  •  ಕ್ಯಾಮೆರಾ: 50MP ಪ್ರಮುಖ ಕ್ಯಾಮೆರಾ (OIS ಸಪೋರ್ಟ್) + 8MP ಅಲ್ಟ್ರಾ-ವೈಡ್ ಲೆನ್ಸ್. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ.
  • ಬ್ಯಾಟರಿ: 6,000mAh ದೀರ್ಘಕಾಲಿಕ ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್.
  • ಸಾಫ್ಟ್‌ವೇರ್: ಆಂಡ್ರಾಯ್ಡ್ 16 ಆಧಾರಿತ ನಥಿಂಗ್ ಓಎಸ್ (Nothing OS).

ಇದನ್ನೂ ಓದಿ: ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!

ಬೆಲೆ ಎಷ್ಟು?

ಜುಲೈ 7 ರಂದು ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಜಾಗತಿಕ ಲಾಂಚ್ ಈವೆಂಟ್‌ನಲ್ಲಿ ನಥಿಂಗ್​ ಫೋನ್​ 4b RCB ಎಡಿಷನ್​ನ ಅಧಿಕೃತ ಬೆಲೆ ಪ್ರಕಟವಾಗಲಿದೆ. ಆದರೆ ಟೆಕ್ ವಲಯದ ಲೀಕ್ಸ್‌ಗಳ ಪ್ರಕಾರ, ಈ ಪ್ರೀಮಿಯಂ ಮಿಡ್-ರೇಂಜ್ ಫೋನಿನ ಬೆಲೆ ₹30,000 ಕ್ಕಿಂತ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ.

Source link

ಗುಜರಾತ್​ನಲ್ಲಿ 7,500 ಕೋಟಿ ರೂ ಸಿಜಿ ಸೆಮಿ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ; ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ – Kannada News | PM Narendra Modi inaugurates CG Semi’s OSAT facility at Gujarat, calls that as next phase of semiconductor revolution

ಸಿಜಿ ಸೆಮಿ ಘಟಕದಲ್ಲಿ ಪ್ರಧಾನಿ ಮೋದಿImage Credit source: PTI

ಅಹ್ಮದಾಬಾದ್, ಜುಲೈ 5: ಭಾರತವನ್ನು ಜಾಗತಿಕ ತಂತ್ರಜ್ಞಾನದ ಮಹಾಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಗುಜರಾತ್‌ನ ಸಾನಂದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು CG Semi ಸಂಸ್ಥೆಯ ಅತ್ಯಾಧುನಿಕ OSAT (Outsourced Semiconductor Assembly and Test – ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಪ್ರೊಡಕ್ಷನ್) ಘಟಕವನ್ನು ಉದ್ಘಾಟಿಸಿದ್ದಾರೆ.

ಈ ಉದ್ಘಾಟನೆಯೊಂದಿಗೆ, ಭಾರತವು ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಕೇವಲ ಗ್ರಾಹಕನಾಗಿರದೆ, ಉತ್ಪಾದಕನಾಗಿಯೂ ಅಬ್ಬರದ ಹೆಜ್ಜೆ ಇಟ್ಟಿದೆ. ಟ್ವಿಟರ್ (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಪ್ರಧಾನಿ ಕಾರ್ಯಾಲಯ (PMO), “ಭಾರತವು ಏನನ್ನು ಸಂಕಲ್ಪಿಸುತ್ತದೆಯೋ, ಅದನ್ನು ಸಾಧಿಸಿ ತೋರಿಸುತ್ತದೆ ಎಂಬುದಕ್ಕೆ ಈ ದಿನವೇ ಸಾಕ್ಷಿ” ಎಂದು ಬಣ್ಣಿಸಿದೆ.

ಸಿಜಿ ಸೆಮಿ: ಬುಡಕಟ್ಟು ಸಮುದಾಯದ ಯುವತಿಯರೊಂದಿಗೆ ಪ್ರಧಾನಿ ಸಂವಾದ

ಈ ಸಮಾರಂಭದ ಅತ್ಯಂತ ಆಕರ್ಷಕ ಮತ್ತು ಪ್ರೇರಣಾದಾಯಕ ಕ್ಷಣವೆಂದರೆ, ಪ್ರಧಾನಿ ಮೋದಿ ಅವರು ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಉದ್ಯೋಗಿಗಳೊಂದಿಗೆ ನಡೆಸಿದ ಸಂವಾದ. ವಿಶೇಷವಾಗಿ, ಬುಡಕಟ್ಟು (Tribal) ಸಮುದಾಯಗಳಿಂದ ಬಂದು ಇಂದು ಸೆಮಿಕಂಡಕ್ಟರ್ ಕ್ಷೇತ್ರದ ತಜ್ಞರಾಗಿ ಬೆಳೆದಿರುವ ಯುವತಿಯರೊಂದಿಗೆ ಮೋದಿ ಆಪ್ತವಾಗಿ ಮಾತನಾಡಿದರು.

ಸಾಮಾನ್ಯ ಹಿನ್ನೆಲೆಯಿಂದ ಬಂದು, ಐಟಿಐ (ITI) ಮುಗಿಸಿ, ಮಲೇಷ್ಯಾದಲ್ಲಿ ಅತ್ಯಾಧುನಿಕ ತಾಂತ್ರಿಕ ತರಬೇತಿ ಪಡೆದು ಇಂದು ವಿಶ್ವದ ಅತ್ಯಂತ ಪ್ರಮುಖ ಚಿಪ್ ತಯಾರಿಕಾ ಯಂತ್ರಗಳನ್ನು ಮುನ್ನಡೆಸುತ್ತಿರುವ ಈ ಯುವತಿಯರ ಆತ್ಮವಿಶ್ವಾಸವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ತಂತ್ರಜ್ಞಾನದ ಕ್ರಾಂತಿ ದೇಶದ ಕಟ್ಟಕಡೆಯ ಭಾಗವನ್ನೂ ತಲುಪುತ್ತಿದೆ ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ.

ಇದನ್ನೂ ಓದಿ: ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ?

ಸಂಪೂರ್ಣ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿ (Value Chain): ಭಾರತಕ್ಕೆ ಏನು ಲಾಭ?

ಕಳೆದ ದಶಕದಲ್ಲಿ ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಅಸೆಂಬ್ಲಿಂಗ್‌ನಲ್ಲಿ ಮುಂಚೂಣಿಗೆ ಬಂದಿತ್ತು. ಆದರೆ, ಈಗ ಅದರ ಮುಂದಿನ ಹಂತವಾದ “ಸಂಪೂರ್ಣ ಸೆಮಿಕಂಡಕ್ಟರ್ ಇಕೋಸಿಸ್ಟಮ್” ಅನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದೆ. ಅಂದರೆ ಕೇವಲ ಉತ್ಪನ್ನಗಳಲ್ಲ, ಅವುಗಳ ಒಳಗೆ ಬಳಸುವ ಬಿಡಿಭಾಗಗಳು ಮತ್ತು ಇಡೀ ಜಗತ್ತನ್ನು ನಿಯಂತ್ರಿಸುವ ‘ಚಿಪ್ಸ್’ (Chips) ಕೂಡ ಈಗ ಭಾರತದಲ್ಲೇ ತಯಾರಾಗಲಿವೆ.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉನ್ನತಿ, ಭಾರತಕ್ಕೆಷ್ಟು ಲಾಭ?

  • ಆರ್ಥಿಕ ಸ್ವಾವಲಂಬನೆ: ಪ್ರಸ್ತುತ ಭಾರತವು ಆಟೋಮೊಬೈಲ್, 5G ಫೋನ್‌ಗಳು, ರಕ್ಷಣೆ ಮತ್ತು ಎಐ (AI) ತಂತ್ರಜ್ಞಾನಗಳಿಗಾಗಿ ತೈವಾನ್, ಚೀನಾ ಮತ್ತು ಅಮೆರಿಕದ ಚಿಪ್‌ಗಳ ಮೇಲೆ ಅವಲಂಬಿತವಾಗಿದೆ. ಸ್ವದೇಶಿ ಉತ್ಪಾದನೆಯಿಂದಾಗಿ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
  • ಜಾಗತಿಕ ರಫ್ತು ಹಬ್: ಸಾಣಂದ್‌ನ ಈ CG Semi ಘಟಕವು ವಾರ್ಷಿಕವಾಗಿ 500 ಕೋಟಿ ಚಿಪ್ಸ್ ಉತ್ಪಾದಿಸುವ ಗುರಿ ಹೊಂದಿದೆ. ವಿಶೇಷವೆಂದರೆ, ಇಲ್ಲಿ ತಯಾರಾಗುವ ಚಿಪ್‌ಗಳು ಕೇವಲ ಭಾರತಕ್ಕಷ್ಟೇ ಅಲ್ಲದೆ ಜಪಾನ್, ಅಮೆರಿಕ ಮತ್ತು ಯುರೋಪ್ ದೇಶಗಳಿಗೂ ರಫ್ತಾಗಲಿವೆ.
  • ಉದ್ಯೋಗ ಸೃಷ್ಟಿ: ಮುಂದಿನ 5 ವರ್ಷಗಳಲ್ಲಿ ಈ ಒಂದೇ ಯೋಜನೆಯಿಂದ ಸುಮಾರು 5,000 ಪ್ರತ್ಯಕ್ಷ ಮತ್ತು ಪರೋಕ್ಷ ಹೈ-ಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ.
  • ತಂತ್ರಜ್ಞಾನದ ರಕ್ಷಣೆ: ಜಾಗತಿಕವಾಗಿ ಚಿಪ್‌ಗಳ ಕೊರತೆಯಾದಾಗಲೂ (Chip Shortage) ಭಾರತದ ಕಾರು ತಯಾರಿಕೆ, ಮೊಬೈಲ್ ಮತ್ತು ದೂರಸಂಪರ್ಕ ಉದ್ಯಮಗಳು ಯಾವುದೇ ಅಡೆತಡೆಯಿಲ್ಲದೆ ಸಾಗಲು ಇದು ರಕ್ಷಣಾ ಕವಚವಾಗಲಿದೆ.

ಇದನ್ನೂ ಓದಿ: ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ: ಜುಲೈನಲ್ಲಿ 80ನೇ ಸ್ಥಾನಕ್ಕೆ ಕುಸಿದ ಭಾರತ; 56 ದೇಶಗಳಿಗೆ ವೀಸಾ ರಹಿತ ಪ್ರವೇಶ

ಪೂರ್ಣ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವ ಗುರಿ

“ಭಾರತದ ಸೆಮಿಕಂಡಕ್ಟರ್ ಜರ್ನಿಯು ರಾತ್ರೋರಾತ್ರಿ ಆಗಿದ್ದಲ್ಲ. ಇದು ಕಳೆದ ಹತ್ತು ವರ್ಷಗಳ ಎಲೆಕ್ಟ್ರಾನಿಕ್ಸ್ ಕ್ರಾಂತಿಯ ಮುಂದಿನ ಮೈಲಿಗಲ್ಲು. ಭಾರತದ ಯುವಶಕ್ತಿ ಸೆಮಿಕಂಡಕ್ಟರ್ ಮತ್ತು ಎಐ ಕ್ರಾಂತಿಯ ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಚಿಪ್ ಡಿಸೈನ್​ನಿಂದ ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್​ವರೆಗೆ ಭಾರತದಲ್ಲಿ ಪೂರ್ಣ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವುದು ತಮ್ಮ ಗುರಿ ಎಂದೂ ಪ್ರಧಾನಿಗಳು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾನದಂಡವೇನು? ರವಿ ಬಿಷ್ಣೋಯ್ ಆಯ್ಕೆಯೇ ಅಚ್ಚರಿ! – Kannada News | Ravi Bishnoi’s Selection Sparks Selection Criteria Debate

ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಆದರೆ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಎಷ್ಟು ಬೇಗನೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿನ ಅತ್ಯುತ್ತಮ ಉದಾಹರಣೆ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್.  ಈ ಬಾರಿಯ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ರವಿ ಬಿಷ್ಣೋಯ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿತ್ತು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರಾ? ಎಂಬ ಪ್ರಶ್ನೆಗೆ 4 ಓವರ್​ಗಳಲ್ಲಿ 60 ರನ್ ನೀಡಿ ಉತ್ತರ ಸಿಗುತ್ತದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾಗೆ ರವಿ ಬಿಷ್ಣೋಯ್ ಆಯ್ಕೆಗೆ ಮಾನದಂಡವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ:

ಭಾರತ ಟಿ20 ತಂಡದ ಆಯ್ಕೆ ನಡೆಯುತ್ತಿರುವುದು ಐಪಿಎಲ್​ನಲ್ಲಿನ ಪ್ರದರ್ಶನದ ಮೇಲೆ ಎಂಬ ವಿಚಾರ ಗುಟ್ಟಾಗೇನು ಉಳಿದಿಲ್ಲ. ಆದರೆ ಇಲ್ಲಿ ರವಿ ಬಿಷ್ಣೋಯ್ ಅವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದಾರೆ ಎಂಬುದೇ ಪ್ರಶ್ನೆ.

ಏಕೆಂಧರೆ ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ರವಿ ಬಿಷ್ಣೋಯ್ ಆಡಿರುವುದು 9 ಪಂದ್ಯಗಳನ್ನು ಮಾತ್ರ. ಅಂದರೆ ಆರ್​ಆರ್ ಆಡಿದ 16 ಮ್ಯಾಚ್​ಗಳಲ್ಲಿ ಬಿಷ್ಣೋಯ್ 7 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಇದಕ್ಕೆ ಮುಖ್ಯ ಕಾರಣ ಕಳಪೆ ಪ್ರದರ್ಶನ.

ಇನ್ನು ಆಡಿದ 9 ಪಂದ್ಯಗಳಲ್ಲಿ ಪಡೆದಿದ್ದು ಕೇವಲ 11 ವಿಕೆಟ್​ಗಳನ್ನು ಮಾತ್ರ. ಅದು ಕೂಡ ಪ್ರತಿ ಓವರ್​ಗೆ 9.88 ಎಕಾನಮಿ ರೇಟ್​ನಲ್ಲಿ ರನ್ ನೀಡುವ ಮೂಲಕ. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ರವಿ ಬಿಷ್ಣೋಯ್ ಸಂಪೂರ್ಣವಾಗಿ ವಿಫಲರಾಗಿದ್ದರು ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಅತ್ತ ರನ್ ನಿಯಂತ್ರಿಸಲು ಸಾಧ್ಯವಾಗದ, ಇತ್ತ ವಿಕೆಟ್ ಪಡೆಯದ ಕಾರಣ ರಾಜಸ್ಥಾನ್ ರಾಯಲ್ಸ್ ತಂಡ ರವಿ ಬಿಷ್ಣೋಯ್ ಅವರನ್ನು ಪ್ರಮುಖ ಪಂದ್ಯಗಳಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದಲೂ ಹೊರಗಿಟ್ಟಿತ್ತು. ಇದಾಗ್ಯೂ ಟೀಮ್ ಇಂಡಿಯಾ ಆಯ್ಕೆ ಸಮಿತಿಯುವ ಬಿಷ್ಣೋಯ್ ಅವರನ್ನು ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡಿದ್ದು ಯಾವ ಅರ್ಹತಾ ಮಾನದಂಡದ ಮೇಲೆ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ.

  • ಕಳೆದ ಎರಡು ಐಪಿಎಲ್ ಸೀಸನ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೃನಾಲ್ ಪಾಂಡ್ಯ ಆಯ್ಕೆಯಾಗಿಲ್ಲ.
  • ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಸುಯಶ್ ಶರ್ಮಾರನ್ನು ಕೂಡ ಆಯ್ಕೆಗೆ ಪರಿಗಣಿಸಲಾಗಿಲ್ಲ.

ಅನಪೇಕ್ಷಿತ ದಾಖಲೆ:

ಟೀಮ್ ಇಂಡಿಯಾಗೆ ಆಯ್ಕೆ ಏನೋ ಆದರೂ, ಪ್ಲೇಯಿಂಗ್ ಇಲೆವೆನ್​ನಲ್ಲೂ ಕಾಣಿಸಿಕೊಂಡರು. ಆದರೆ ರವಿ ಬಿಷ್ಣೋಯ್ ನೀಡಿದ ಪ್ರದರ್ಶನದ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ.

ಏಕೆಂದರೆ ಇಂಗ್ಲೆಂಡ್​ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಿಷ್ಣೋಯ್ ಒಂದೇ ಪಂದ್ಯದಲ್ಲಿ 3 ಬ್ಯಾಕ್-ಫುಟ್ ನೋ-ಬಾಲ್‌ಗಳನ್ನು ಎಸೆದಿದ್ದರು.

ಅಂತರರಾಷ್ಟ್ರೀಯ ಟಿ20 ಇತಿಹಾಸದಲ್ಲಿ ಈ ರೀತಿಯ ಶಿಸ್ತುಬದ್ಧವಲ್ಲದ ಬೌಲಿಂಗ್ ಪ್ರದರ್ಶಿಸಿದ ವಿಶ್ವದ ಮೊದಲ ಪೂರ್ಣ ಸದಸ್ಯ ರಾಷ್ಟ್ರದ ಸ್ಪಿನ್ನರ್ ಎಂಬ ಅನಗತ್ಯ ದಾಖಲೆಗೆ ರವಿ ಬಿಷ್ಣೋಯ್ ಪಾಲಾಗಿದೆ.

ಅಲ್ಲದೆ ಸ್ಪಿನ್ ಬೌಲರ್‌ಗಳು ನೋ-ಬಾಲ್ ಎಸೆಯುವುದು ಕ್ರಿಕೆಟ್‌ನಲ್ಲಿ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ರನ್-ಅಪ್ ಚಿಕ್ಕದಾಗಿದ್ದರೂ ಗೆರೆ ದಾಟುವುದು ಅಥವಾ ಬ್ಯಾಕ್ ಫುಟ್ ಲೈನ್ ಮುಟ್ಟುವುದು ಲಯದ ತೀವ್ರ ಕೊರತೆಯನ್ನು ತೋರಿಸುತ್ತದೆ. ಅಂದರೆ ರವಿ ಬಿಷ್ಣೋಯ್ ಬೌಲಿಂಗ್ ಲೈನಪ್​ನಲ್ಲೇ ಲಯ ಹೊಂದಿಲ್ಲ ಎಂಬುದು ಸ್ಪಷ್ಟ.

ದುಬಾರಿ ಓವರ್‌ಗಳು:

ಟಿ20 ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ರನ್ ನಿಯಂತ್ರಿಸುವುದು ಮತ್ತು ಮಧ್ಯದ ಓವರ್‌ಗಳಲ್ಲಿ ವಿಕೆಟ್ ಪಡೆಯುವುದು. ಆದರೆ ರವಿ ಬಿಷ್ಣೋಯ್ ಇತ್ತೀಚೆಗೆ ರನ್ ಮಳೆ ಹರಿಸುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ 4 ಓವರ್‌ಗಳಲ್ಲಿ ವಿಕೆಟ್ ಪಡೆಯದೇ 60 ರನ್ ಬಿಟ್ಟುಕೊಟ್ಟರು. ಅದರಲ್ಲೂ ಪಂದ್ಯದ ಅತ್ಯಂತ ನಿರ್ಣಾಯಕವಾಗಿದ್ದ 17ನೇ ಓವರ್‌ನಲ್ಲಿ ಬರೋಬ್ಬರಿ 29 ರನ್ ನೀಡುವ ಮೂಲಕ ಭಾರತದ ಗೆಲುವಿನ ಆಸೆಗೆ ತಣ್ಣೀರು ಎರೆಚಿದರು.

ಗೂಗ್ಲಿ ಮೇಲಿನ ಅತಿಯಾದ ಅವಲಂಬನೆ:

ರವಿ ಬಿಷ್ಣೋಯ್ ಅವರ ಪ್ರಮುಖ ಅಸ್ತ್ರ ಗೂಗ್ಲಿ. ಆರಂಭದಲ್ಲಿ ಬ್ಯಾಟರ್‌ಗಳಿಗೆ ಇವರ ಗೂಗ್ಲಿ ಎಸೆಯುವುದು ಅರಿಯುವುದು ಕಷ್ಟವಾಗಿತ್ತು. ಆದರೆ ಪ್ರಸ್ತುತ ಆಧುನಿಕ ಕ್ರಿಕೆಟ್‌ನಲ್ಲಿ ತಂತ್ರಜ್ಞಾನದ ನೆರವಿನಿಂದ ಬ್ಯಾಟರ್‌ಗಳು ಗೂಗ್ಲಿ ಶೈಲಿಯನ್ನು ಸುಲಭವಾಗಿ ರೀಡ್ ಮಾಡ್ತಾರೆ.

ಇದಾಗ್ಯೂ ರವಿ ಬಿಷ್ಣೋಯ್ ಸಾಂಪ್ರದಾಯಿಕ ಲೆಗ್-ಸ್ಪಿನ್ ಬದಲಿಗೆ ಕೇವಲ ಗೂಗ್ಲಿ ನಂಬಿ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದೇ ಸತ್ಯ. ಇದಕ್ಕೆ ಸಾಕ್ಷಿ ಕಳೆದ ಐಪಿಎಲ್​ನಲ್ಲಿ 26 ಓವರ್​ಗಳಲ್ಲಿ 257 ರನ್ ಹೊಡೆಸಿಕೊಂಡಿರುವುದು. ಇದೇ ಪ್ರಯೋಗವನ್ನು ಟೀಮ್ ಇಂಡಿಯಾದಲ್ಲೂ ಮುಂದುವರೆಸಿದ್ದಾರೆ. ಪರಿಣಾಮ 4 ಓವರ್​ಗಳಲ್ಲಿ ಇಂಗ್ಲೆಂಡ್ ಬ್ಯಾಟರ್​ಗಳು 60 ರನ್ ಚಚ್ಚಿದ್ದಾರೆ.

ಇದನ್ನೂ ಓದಿ: ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!

ಒಟ್ಟಾರೆಯಾಗಿ ಹೇಳುವುದಾದರೆ, ರವಿ ಬಿಷ್ಣೋಯ್ ಅವರಲ್ಲಿ ಅದ್ಭುತ ಪ್ರತಿಭೆ ಮತ್ತು ಮ್ಯಾಚ್-ವಿನ್ನರ್ ಆಗುವ ಎಲ್ಲಾ ಸಾಮರ್ಥ್ಯಗಳಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಪ್ರತಿಭೆಯಷ್ಟೇ ಸಾಲದು, ಪ್ರಸ್ತುತ ಫಾರ್ಮ್ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಾದರೂ ಆಯ್ಕೆ ಸಮಿತಿ ಫಾರ್ಮ್​ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

Source link

ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ಶಾಕ್: ಇನ್‌ಸ್ಟಾಗ್ರಾಮ್‌ನಿಂದ ಮಕ್ಕಳ ಶೋಷಣೆಗೆ ಸಂಬಂಧಿಸಿದ ಜಾಹೀರಾತು ತೆಗೆಯಲು ಆದೇಶ – Kannada News | India Shocks Meta: Orders Instagram to Remove Child Exploitation Ads Promptly

ನವದೆಹಲಿ, ಜುಲೈ 05: ಸಾಮಾಜಿಕ ಮಾಧ್ಯಮ ದೈತ್ಯ ‘ಮೆಟಾ'(Meta) ಸಂಸ್ಥೆಯ ವಿರುದ್ಧ ಕೇಂದ್ರ ಸರ್ಕಾರ ಭಾರಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪಾವತಿಸಿದ (Paid) ಜಾಹೀರಾತುಗಳು ಪ್ರದರ್ಶನಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮೆಟಾ ಸಂಸ್ಥೆಗೆ ತಕ್ಷಣವೇ ನೋಟಿಸ್ ಜಾರಿ ಮಾಡಿದೆ.

ಮಕ್ಕಳ ಲೈಂಗಿಕ ಶೋಷಣೆಯನ್ನು ಉತ್ತೇಜಿಸುವ ಅಥವಾ ಅದಕ್ಕೆ ದಾರಿ ಮಾಡಿಕೊಡುವ ಇಂತಹ ಎಲ್ಲಾ ಜಾಹೀರಾತುಗಳು ಹಾಗೂ ವಿಷಯಗಳನ್ನು ಇನ್‌ಸ್ಟಾಗ್ರಾಮ್‌ನಿಂದ ತಕ್ಷಣವೇ ತೆಗೆದುಹಾಕುವಂತೆ ಸರ್ಕಾರ ಆದೇಶಿಸಿದೆ. ಅಷ್ಟೇ ಅಲ್ಲದೆ, ಇಂತಹ ಕಾನೂನುಬಾಹಿರ ವಿಷಯಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹೇಗೆ ಕಾಣಿಸಿಕೊಂಡವು ಮತ್ತು ಇದನ್ನು ತಡೆಯಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು 7 ದಿನಗಳ ಒಳಗೆ ವಿವರವಾದ ವರದಿ ಸಲ್ಲಿಸುವಂತೆ ಮೆಟಾ ಸಂಸ್ಥೆಗೆ ಗಡುವು ನೀಡಿದೆ.

ವರದಿಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕೆಲವು ಪಾವತಿಸಿದ ಜಾಹೀರಾತುಗಳು, ಮಕ್ಕಳ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಹೊಂದಿರುವ ಇತರ ವೆಬ್‌ಸೈಟ್‌ಗಳಿಗೆ ಬಳಕೆದಾರರನ್ನು ರಿಡೈರೆಕ್ಟ್​ ಮಾಡುತ್ತಿದ್ದವು . ಇನ್‌ಸ್ಟಾಗ್ರಾಮ್‌ನ ಕಂಪ್ಯೂಟರ್ ಪ್ರೋಗ್ರಾಂ (Algorithm) ಕೂಡ ಇಂತಹ ವಿಷಯಗಳು ಹೆಚ್ಚು ಜನರಿಗೆ ತಲುಪುವಂತೆ ಉತ್ತೇಜಿಸಿರುವ ಸಾಧ್ಯತೆಯಿದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಮತ್ತಷ್ಟು ಓದಿ: ವಾಟ್ಸಾಪ್ ಯೂಸರ್ ನೇಮ್ ಫೀಚರ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ; ಮೆಟಾಗೆ ನೋಟಿಸ್ ಜಾರಿ

ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಅತ್ಯಂತ ಬಲಿಷ್ಠವಾದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸರ್ಕಾರ ಮೆಟಾ ಸಂಸ್ಥೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ತಪ್ಪಿದರೆ ಪೋಕ್ಸೋ (POCSO) ಕಾಯ್ದೆಯಡಿ ಜೈಲು ಶಿಕ್ಷೆ
ಕೇಂದ್ರ ಸರ್ಕಾರ ನೀಡಿರುವ ಈ ನೋಟಿಸ್‌ಗೆ ಮೆಟಾ ಸಂಸ್ಥೆಯು ನಿಗದಿತ ಸಮಯದೊಳಗೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಅಥವಾ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ, ಭಾರತದ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಮೆಟಾ ನೀಡುವ ಪ್ರತಿಕ್ರಿಯೆಯ ಆಧಾರದ ಮೇಲೆ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಎಂಟಿಸಿಯಲ್ಲ ಸಾಕ್ಷಾತ್​​ ಯಮ!: 17 ವರ್ಷಗಳಲ್ಲಿ 1,142 ಜನರ ಬಲಿ ಪಡೆದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​​ಗಳು! – Kannada News | BMTC Buses Turn Deadly: 1,142 Killed in 5,864 Accidents Over 17 Years in Bengaluru

ಬೆಂಗಳೂರು, ಜುಲೈ 05: ನಗರದ ನಿವಾಸಿಗಳ ಪಾಲಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್​​ಗಳು ಯಮ ಸ್ವರೂಪಿಯಾಗಿ ಮಾರ್ಪಟ್ಟಿವೆ. ಕಳೆದ ಹಲವು ವರ್ಷಗಳಲ್ಲಿ ನಡೆದಿರುವ ಬಿಎಂಟಿಸಿ ಬಸ್​​ಗಳ ಅಪಘಾತ ಮತ್ತು ಸಾವು ನೋವುಗಳ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಬಸ್​​ ಅಪಘಾತದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲೇ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿರೋದೇ ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿವೆ.

17 ವರ್ಷದಲ್ಲಿ 5864 ಆ್ಯಕ್ಸಿಡೆಂಟ್

ಕಳೆದ 17 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 5,864 ಬಾರಿ ಬಿಎಂಟಿಸಿ ಬಸ್​​ ಅಪಘಾತಗಳು ನಡೆದಿದ್ದು, ಇವುಗಳಲ್ಲಿ 1,142 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಲೆಕ್ಟ್ರಿಕ್​​ ಬಸ್​​ಗಳ ಆ್ಯಕ್ಸಿಡೆಂಟ್​​ನಿಂದಾಗಿ 40ಕ್ಕೂ ಹೆಚ್ಚು ಮತ್ತು ನಾರ್ಮಲ್​​ ಬಸ್​​ಗಳಿಂದಾಗಿ 100ಕ್ಕೂ ಹೆಚ್ಚು ಜನರ ಜೀವ ಹೋಗಿದೆ. ಕಳೆದ 1 ವರ್ಷದಲ್ಲಿ ನಡೆದಿರುವ ನಾರ್ಮಲ್​​ ಬಿಎಂಟಿಸಿ ಬಸ್​​ಗಳ 104 ಅಪಘಾತಗಳಿಂದಲೇ 31 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಂಕಿ-ಅಂಶ ಟಿವಿ9 ಕನ್ನಡಕ್ಕೆ ದೊರೆತಿದೆ.

ಇದನ್ನೂ ಓದಿ: ಕೆ. ಆರ್ ಸರ್ಕಲ್ ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!

ಅಪಘಾತ ಹೆಚ್ಚಳ ಯಾಕೆ?

ಕಡಿಮೆ ಅವಧಿಯಲ್ಲಿ ಹೆಚ್ಚಿನ ರೂಟ್​​ಳನ್ನು ಕ್ಲಿಯರ್ ಮಾಡಲು ಸಿಬ್ಬಂದಿಗೆ ಟಾರ್ಗೆಟ್​​ ನೀಡಲಾಗುತ್ತೆ. 1991-95ರ ರೂಲ್ಸ್ ಅನ್ನೇ ಇನ್ನೂ ಫಾಲೋ ಮಾಡ್ತಿದ್ದಾರೆ. ಪ್ರತಿದಿನ 250ರಿಂದ 300 ಕಿ.ಮೀ. ಬಸ್ ಓಡಿಸಲು ಹೇಳ್ತಿದ್ದಾರೆ. ಈ ಬಗ್ಗೆ ಬಿಎಂಟಿಸಿಯ ಸಿಟಿಎಂ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ರು ಯಾವುದೇ ಬದಲಾವಣೆ ಆಗಿಲ್ಲ ಎಂದು ಕೆಎಸ್ಆರ್ಟಿಸಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಆರೋಪಿಸಿದ್ದಾರೆ. ಬಿಎಂಟಿಸಿ ಡ್ರೈವರ್, ಕಂಡಕ್ಟರ್​​ಗಳು ಅತ್ಯಂತ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ನೌಕರರಿಗೆ ಆರೋಗ್ಯ ಸರಿಯಿಲ್ಲದೆ ರಜೆ ಬೇಕು ಅಂದರೂ ಡಿಪೋ ಮ್ಯಾನೇಜರ್​​ಗಳಿಗೆ ಒಂದು ರಜೆಗೆ 500 ರೂ. ಲಂಚ ನೀಡಬೇಕಾದ ಕೆಟ್ಟ ಪರಿಸ್ಥಿತಿ ಇದೆ. ಲೈನ್ ಚೆಕ್ಕಿಂಗ್ ಅನ್ನೋ ಹೆಸ್ರಲ್ಲಿ ಸೆಕ್ಯೂರಿಟಿ ಅಧಿಕಾರಿಗಳು ದಂಧೆ ಮಾಡಿಕೊಂಡಿದ್ದಾರೆ. ಬಿಎಂಟಿಸಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಂಡಿ ಯಾರೂ ಡಿಪೋಗಳಿಗೆ ಭೇಟಿ ಮಾಡ್ತಿಲ್ಲ. ಹೀಗಾಗಿ ಡಿಪೋ ಮ್ಯಾನೇಜರ್, ಡಿಸಿಗಳ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:01 pm, Sun, 5 July 26

Source link

ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ! – Kannada News | Western Ghats Heavy Rains: Malaprabha River Swells, Maruti Temple Submerged

ಬೆಳಗಾವಿ, ಜುಲೈ 05: ಪಶ್ಚಿಮ ಘಟ್ಟ ಮತ್ತು ಕನಕುಂಬಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಮಲಪ್ರಭಾ ನದಿಗೆ ಜೀವಕಳೆ ತಂದಿದೆ. ನದಿ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬನಟ್ಟಿ ಗ್ರಾಮದ ಹೊರವಲಯದಲ್ಲಿರುವ ಪುರಾತನ ಮಾರುತಿ ಮಂದಿರ ಭಾಗಶಃ ಜಲಾವೃತಗೊಂಡಿದೆ.

ಮಂದಿರದ ಗರ್ಭಗುಡಿ ಸೇರಿದಂತೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳು ಮತ್ತು ಶಿವನ ಮಂದಿರ ಕೂಡ ಈಗಾಗಲೇ ನೀರಿನಲ್ಲಿ ಮುಳುಗಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ದೇವಾಲಯವು ಮುಳುಗಡೆಯಾಗುವುದು ಸಾಮಾನ್ಯವಾಗಿದ್ದು, ಕೆಲವೊಮ್ಮೆ ನಾಲ್ಕು ತಿಂಗಳ ಕಾಲ ನೀರಿನಲ್ಲೇ ನಿಂತಿರುತ್ತದೆ. ನಿರಂತರ ಮಳೆಯಿಂದಾಗಿ ದೇವಾಲಯ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ.

ಭಕ್ತರು ನೀರಿನಿಂದ ಜಲಾವೃತಗೊಂಡಿರುವ ದೇವರ ದರ್ಶನವನ್ನು ದೇವಾಲಯದ ಹೊರಭಾಗದಲ್ಲೇ ನಿಂತುಕೊಂಡು ಮಾಡುತ್ತಿದ್ದಾರೆ. ಈ ಮಳೆಯಿಂದಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ. ನದಿ ತಟದಲ್ಲಿರುವ ಜಮೀನುಗಳು ಮತ್ತು ಇತರ ದೇವಾಲಯಗಳು ಕೂಡ ಜಲಾವೃತಗೊಳ್ಳುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kids Bedroom Vastu: ಮಕ್ಕಳ ಮಲಗುವ ಕೋಣೆಯಲ್ಲಿ ಈ ವಸ್ತು ಇಡಲೇಬೇಡಿ; ವಾಸ್ತು ಎಚ್ಚರಿಕೆ ಇಲ್ಲಿದೆ – Kannada News | Kids Bedroom Vastu: Avoid These Items for Child’s Well being and Progress

ಮನೆಯಲ್ಲಿ ಮಕ್ಕಳ ಕೋಣೆಯನ್ನು (Kids Bedroom) ವಿನ್ಯಾಸಗೊಳಿಸುವಾಗ, ಅದು ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ವಿಶೇಷ ಗಮನ ಹರಿಸಲಾಗುತ್ತದೆ. ಆದರೆ, ಮಕ್ಕಳ ಕೋಣೆಯನ್ನು ಸಿದ್ಧಪಡಿಸುವ ಮುನ್ನ ವಾಸ್ತು ನಿಯಮಗಳನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮಕ್ಕಳ ಕೋಣೆಯಲ್ಲಿ ಇಡುವ ಕೆಲವು ವಸ್ತುಗಳು ಅವರ ಆರೋಗ್ಯ, ಮಾನಸಿಕ ವಿಕಾಸ ಮತ್ತು ಭವಿಷ್ಯದ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾದರೆ, ಮಕ್ಕಳ ರೂಮಿನಲ್ಲಿ ಯಾವ ವಸ್ತುಗಳನ್ನುಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮುರಿದ ಆಟಿಕೆಗಳು (Broken Toys):

ಮಕ್ಕಳಿಗೆ ಆಟಿಕೆಗಳೆಂದರೆ ಪಂಚಪ್ರಾಣ. ಆಟವಾಡುವಾಗ ಮಕ್ಕಳು ಆಟಿಕೆಗಳನ್ನು ಮುರಿಯುವುದು ಸಾಮಾನ್ಯ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳ ಕೋಣೆಯಲ್ಲಿ ಮುರಿದ ಅಥವಾ ಹಾನಿಗೊಳಗಾದ ಆಟಿಕೆಗಳನ್ನು ಎಂದಿಗೂ ಇಡಬಾರದು. ಇಂತಹ ವಸ್ತುಗಳು ಕೋಣೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಹೆಚ್ಚಿಸುತ್ತವೆ. ಇದು ಮಕ್ಕಳಲ್ಲಿ ಆಲಸ್ಯವನ್ನು ಉಂಟುಮಾಡುವುದಲ್ಲದೆ, ಅವರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಆಟಿಕೆ ಮುರಿದ ತಕ್ಷಣ ಅದನ್ನು ಕೋಣೆಯಿಂದ ಹೊರಹಾಕಿ.

ಮುಳ್ಳಿನ ಗಿಡಗಳು ಮತ್ತು ನೆಗೆಟಿವ್ ಪೇಂಟಿಂಗ್ಸ್:

ಮಕ್ಕಳ ಕೋಣೆಯ ಅಂದ ಹೆಚ್ಚಿಸಲು ಯಾವುದೇ ಕಾರಣಕ್ಕೂ ಮುಳ್ಳಿನಿಂದ ಕೂಡಿದ ಗಿಡಗಳನ್ನು ಇಡಬೇಡಿ. ಇವು ಕೋಣೆಯಲ್ಲಿ ಋಣಾತ್ಮಕ ಶಕ್ತಿಯ ಹರಿವನ್ನು ಉಂಟುಮಾಡುತ್ತವೆ ಮತ್ತು ಮಕ್ಕಳಿಗೆ ಗಾಯವಾಗುವ ಅಪಾಯವೂ ಇರುತ್ತದೆ. ಇದರೊಂದಿಗೆ, ಮುಳ್ಳುಗಳು ಅಥವಾ ಹರಿತವಾದ ಎಲೆಗಳನ್ನು ಹೊಂದಿರುವ ಚಿತ್ರಗಳು ಮತ್ತು ಪೇಂಟಿಂಗ್‌ಗಳನ್ನು ಸಹ ಗೋಡೆಗೆ ಹಾಕಬೇಡಿ.

ಭಾರವಾದ ಪೀಠೋಪಕರಣಗಳು:

ವಾಸ್ತು ಪ್ರಕಾರ, ಮಕ್ಕಳ ಕೋಣೆಯಲ್ಲಿ ಅತಿ ದೊಡ್ಡದಾದ ಅಥವಾ ಭಾರವಾದ ಪೀಠೋಪಕರಣಗಳನ್ನು (ಫರ್ನಿಚರ್) ಇಡಬಾರದು. ಭಾರವಾದ ವಸ್ತುಗಳು ಕೋಣೆಯ ಜಾಗವನ್ನು ಕುಂಠಿತಗೊಳಿಸುವುದಲ್ಲದೆ, ಮಕ್ಕಳು ಮುಕ್ತವಾಗಿ ಆಟವಾಡಲು ತೊಂದರೆ ಉಂಟುಮಾಡುತ್ತವೆ. ಅಲ್ಲದೆ, ಇವುಗಳಿಂದ ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಮಕ್ಕಳ ರೂಮಿಗೆ ಯಾವಾಗಲೂ ಹಗುರವಾದ ಮತ್ತು ಕಡಿಮೆ ಜಾಗವನ್ನು ಆಕ್ರಮಿಸುವ ಪೀಠೋಪಕರಣಗಳನ್ನು ಆಯ್ಕೆ ಮಾಡಿ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ಅಸ್ತವ್ಯಸ್ತವಾಗಿರುವ ಕೋಣೆ:

ಕೋಣೆ ಯಾವಾಗಲೂ ಅಸ್ತವ್ಯಸ್ತವಾಗಿ, ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಅದು ಕೇವಲ ದೊಡ್ಡವರಿಗಷ್ಟೇ ಅಲ್ಲ, ಮಕ್ಕಳಿಗೂ ಒಳ್ಳೆಯದಲ್ಲ. ರೂಮಿನಲ್ಲಿರುವ ಗಲಿಬಿಲಿ ವಾತಾವರಣವು ಮಕ್ಕಳ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ವಾಸ್ತು ಪ್ರಕಾರ ಅಸ್ತವ್ಯಸ್ತವಾಗಿರುವ ಕೋಣೆಯು ಮಕ್ಕಳ ಭವಿಷ್ಯದ ಪ್ರಗತಿಗೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅವರ ಪುಸ್ತಕ, ಬಟ್ಟೆ ಮತ್ತು ಆಟಿಕೆಗಳನ್ನು ನಿಗದಿತ ಜಾಗದಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವ ಅಭ್ಯಾಸ ಮಾಡಿಸಿ.

ಭಯಾನಕ ಅಥವಾ ಯುದ್ಧದ ಚಿತ್ರಗಳು:

ಮಕ್ಕಳ ಕೋಣೆಯನ್ನು ಅಲಂಕರಿಸುವಾಗ ಗೋಡೆಯ ಮೇಲಿನ ಚಿತ್ರಗಳ ಬಗ್ಗೆ ಎಚ್ಚರವಿರಲಿ. ಯಾವುದೇ ಕ್ರೂರ ಪ್ರಾಣಿಗಳ, ಯುದ್ಧದ ಅಥವಾ ವಿನಾಶಕ್ಕೆ ಸಂಬಂಧಿಸಿದ ಭಯಾನಕ ಪೇಂಟಿಂಗ್‌ಗಳನ್ನು ಮಕ್ಕಳ ರೂಮಿನಲ್ಲಿ ಹಾಕಬೇಡಿ. ಇವು ಮಕ್ಕಳ ಮನಸ್ಸು ಮತ್ತು ಮಿದುಳಿನ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತವೆ ಹಾಗೂ ಅವರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ. ಇದರ ಬದಲಾಗಿ, ಮಕ್ಕಳಿಗೆ ಪ್ರೇರಣೆ ನೀಡುವ, ಪ್ರಕೃತಿಯ ಅಥವಾ ಅವರನ್ನು ಸದಾ ಸಂತೋಷವಾಗಿಡುವಂತಹ ಸಕಾರಾತ್ಮಕ ಚಿತ್ರಗಳನ್ನು ಹಾಕಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version