ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು; ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ಬಂದ್ – Kannada News | Bengaluru Train Disruptions: Vande Bharat, Kaveri Express Services Affected Till August

ಬೆಂಗಳೂರು, ಜೂ.18: ರೈಲ್ವೆ ಹಳಿಗಳ ಸುಧಾರಣೆ, ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯವು ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ (KSR) ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ 18 ರಿಂದ ಆಗಸ್ಟ್ ತಿಂಗಳವರೆಗೆ ಹಲವು ಪ್ರಮುಖ ರೈಲುಗಳನ್ನು ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ಹೊಳೆನರಸೀಪುರ ಮಾರ್ಗ: ಜೂನ್ 18 ಮತ್ತು 23 ರಂದು ಸಂಪೂರ್ಣ ರದ್ದಾದ ರೈಲುಗಳು:

ರಸ್ತೆ ಕೆಳಸೇತುವೆ ಕಾಮಗಾರಿಯಿಂದಾಗಿ ಕೆಳಗಿನ ರೈಲುಗಳ ಸಂಚಾರ ಇರಲ್ಲ. ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206)

ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (16205)

ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267)

ಭಾಗಶಃ ರದ್ದು ಮತ್ತು ವಿಳಂಬವಾಗುವ ರೈಲುಗಳು:

ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225): ಈ ರೈಲು ಜೂನ್ 18 ಮತ್ತು 23 ರಂದು ಮೈಸೂರಿನಿಂದ ಹೊರಡುವ ಬದಲಾಗಿ ಅರಸೀಕೆರೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಇದರಿಂದ ಮೈಸೂರು, ಕೆ.ಆರ್.ನಗರ ಮತ್ತು ಹಾಸನದ ಪ್ರಯಾಣಿಕರಿಗೆ ಸೇವೆ ಲಭ್ಯವಿರುವುದಿಲ್ಲ.

ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208): ಈ ರೈಲು ಮಾರ್ಗ ಮಧ್ಯೆ ನಿಯಂತ್ರಣಕ್ಕೊಳಗಾಗಲಿದ್ದು, ನಿಗದಿತ ಸಮಯಕ್ಕಿಂತ 30 ರಿಂದ 120 ನಿಮಿಷಗಳಷ್ಟು ತಡವಾಗಿ ಸಂಚರಿಸಲಿದೆ.

ಜುಲೈ-ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ರದ್ದು

ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣವಾದ ಕೆಎಸ್‌ಆರ್ (ಮೆಜೆಸ್ಟಿಕ್) ನಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕೇರಳ ಮತ್ತು ತಮಿಳುನಾಡಿಗೆ ಸಂಚರಿಸುವ ಕೆಳಗಿನ ರೈಲು ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು-ಕೇರಳ ವಂದೇ ಭಾರತ್ ರದ್ದು: ಜುಲೈ 31 ಮತ್ತು ಆಗಸ್ಟ್ 3 ರಂದು ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26652) ರೈಲು ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ಬದಲಾಗಿ ಕೃಷ್ಣರಾಜಪುರಂ (ಕೆ.ಆರ್.ಪುರಂ) ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಲಾಲ್‌ಬಾಗ್ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಜುಲೈ 31 ರಿಂದ ಆಗಸ್ಟ್ 3 ರವರೆಗೆ ಚೆನ್ನೈ-ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲನ್ನು ಬೈಯಪ್ಪನಹಳ್ಳಿಯಿಂದಲೇ ಎಸ್‌ಎಂವಿಟಿ (SMVT) ಬೆಂಗಳೂರು ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.

ಆಗಸ್ಟ್‌ನಲ್ಲಿ ಸಂಪೂರ್ಣ ರದ್ದಾಗಲಿರುವ ಪ್ರಮುಖ ರೈಲುಗಳು:

ಆಗಸ್ಟ್ 1: ಕೆಎಸ್‌ಆರ್ ಬೆಂಗಳೂರು ಟು ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12658) – ರದ್ದು

ಆಗಸ್ಟ್ 2: ಚೆನ್ನೈ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12657) – ರದ್ದು

ಆಗಸ್ಟ್ 2 ಮತ್ತು 3: ಚೆನ್ನೈ-ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲು – ರದ್ದು

ಇದನ್ನೂ ಓದಿ:‘ನೀವು ಯಾರಿಗೆ ಹೇಳ್ತೀರೋ ಅವರಿಗೇ ವೋಟ್ ಹಾಕ್ತೀನಿ’: ಆರ್. ಅಶೋಕ್‌ಗೆ ಶಾಸಕ ಯತ್ನಾಳ್ ಭರವಸೆ

ರೈಲ್ವೆ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸಲು ಈ ಮಹತ್ವದ ಕಾಮಗಾರಿ ಅಗತ್ಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್‌ಲೈನ್ ಅಥವಾ ಆಪ್‌ಗಳ ಮೂಲಕ ರೈಲಿನ ಇಂದಿನ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು? – Kannada News | Sudeep acting along with Prabhas in Spirit movie

ಸುದೀಪ್ (Sudeep), ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿದ್ದವರು. ಅವರ ನಟನಾ ಪ್ರತಿಭೆಗೆ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ದೊಡ್ಡ ಅವಕಾಶಗಳೇ ಬಂದಿದ್ದವು. ಅಮಿತಾ ಬಚ್ಚನ್ ಸೇರಿದಂತೆ ಇನ್ನೂ ಹಲವರೊಟ್ಟಿಗೆ ಸಮನಾದ ಪಾತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರಿಗೆ ಮತ್ತೆ ಪರ ಭಾಷೆಗಳ ಸಿನಿಮಾಗಳಿಂದ ಆಫರ್​​ಗಳು ಬರುತ್ತಿವೆ. ಇದೀಗ ಪ್ರಭಾಸ್ ಅವರ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿವೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ಸುದೀಪ್ ಅವರು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ‘ವಾರಣಾಸಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೀಗ ಸುದೀಪ್ ಅವರು ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುದೀಪ್ ಅವರು ಪ್ರಭಾಸ್ ನಟನೆಯ ಹೊಸ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಭಾಸ್, ಪ್ರಸ್ತುತ ಫೌಜಿ, ಸ್ಪಿರಿಟ್ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮೂರರಲ್ಲಿ ಸುದೀಪ್ ಅವರು ‘ಸ್ಪಿರಿಟ್’ ಸಿನಿಮಾನಲ್ಲಿ ಮುಖ್ಯವಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ‘ಸ್ಪಿರಿಟ್’ ಸಿನಿಮಾನಲ್ಲಿ ಸುದೀಪ್ ಅವರು ಸೈನ್ಯಾಧಿಕಾರಿ ಪಾತ್ರದಲ್ಲಿ ಕಾಣೀಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಸುದೀಪ್ ಅಭಿಮಾನಿಗಳು, ಪ್ರಭಾಸ್ ಹಾಗೂ ಸುದೀಪ್ ಅವರು ಸೈನ್ಯದ ಸಮವಸ್ತ್ರದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ

ಆದರೆ ಸುದೀಪ್ ಕುರಿತಾಗಿ ಇಂಥಹಾ ಸುದ್ದಿಗಳು ಪದೇ ಪದೇ ಹರಿದಾಡುತ್ತಲೇ ಇರುತ್ತವೆ. ಈ ಬಾರಿಯೂ ಸಹ ‘ವಾರಣಾಸಿ’ ಮತ್ತು ‘ಸ್ಪಿರಿಟ್’ ಎರಡೂ ಸಿನಿಮಾಗಳಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಎರಡೂ ಸುದ್ದಿಗಳು ಇನ್ನೂ ಖಾತ್ರಿ ಆಗಿಲ್ಲ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಾದ ಬಳಿಕ ಕೆಆರ್​​ಜಿ ನಿರ್ಮಾಣದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅವರೇ ಹೇಳಿರುವಂತೆ ಅವರು ಒಟ್ಟು ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಒಂದಾದ ಮೇಲೆ ಒಂದನ್ನು ಮುಗಿಸಲಿದ್ದಾರಂತೆ.

ಇನ್ನು ‘ಸ್ಪಿರಿಟ್’ ಸಿನಿಮಾನಲ್ಲಿ ಪ್ರಭಾಸ್ ಸೈನ್ಯಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ತೃಪ್ತಿ ದಿಮ್ರಿ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:45 am, Thu, 18 June 26

Source link

Karnataka MLC Elections: ವಿಧಾನಸೌಧದಲ್ಲಿ ಮತದಾನಕ್ಕೂ ಮುನ್ನ ಜೆಡಿಎಸ್ ಮೀಟಿಂಗ್! – Kannada News | JDS MLAs Meet in Vidhana Soudha Ahead of MLC Elections to Prevent Cross Voting

ಬೆಂಗಳೂರು, ಜೂನ್ 18: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾನಕ್ಕೂ ಮುನ್ನ ಜೆಡಿಎಸ್ ಶಾಸಕರ ಸಭೆಯು ವಿಧಾನಸೌಧದಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಭಾಗಿಯಾಗಿದ್ದರು. ಜೆಡಿಎಸ್ ತನ್ನ ಶಾಸಕರ ಮೇಲೆ ವಿಶೇಷ ನಿಗಾ ವಹಿಸಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲುವುದು ಒಂದು ಭಾಗವಾದರೆ, ಅತಿ ಮುಖ್ಯವಾಗಿ ಅಡ್ಡ ಮತದಾನ ನಡೆಯದಂತೆ ನೋಡಿಕೊಳ್ಳುವುದು ಪಕ್ಷದ ಪ್ರಮುಖ ಉದ್ದೇಶವಾಗಿತ್ತು.

ಜೆಡಿಎಸ್‌ನ ಲೆಕ್ಕಾಚಾರದ ಪ್ರಕಾರ, ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು, ಎಲ್ಲಾ ಜೆಡಿಎಸ್ ಮತಗಳು ತಮ್ಮ ಅಭ್ಯರ್ಥಿಗೆ ಬೀಳುವಂತೆ ಮಾಡುವುದು ಮತ್ತು ಪಕ್ಷದ ಮತಗಳು ಚದುರಿ ಹೋಗದಂತೆ ತಡೆಯುವುದು ಈ ಸಭೆಯ ಹಿಂದಿನ ಮುಖ್ಯ ಕಾರಣ. ಒಟ್ಟು 18 ಶಾಸಕರನ್ನು ಒಟ್ಟುಗೂಡಿಸಿಕೊಂಡು ಮತದಾನಕ್ಕೆ ಸಜ್ಜುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರನ್ನು ಈ ಹಿಂದೆ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು ಮತ್ತು ನಂತರ ಬಸ್‌ನಲ್ಲಿ ವಿಧಾನಸೌಧಕ್ಕೆ ಕರೆತರಲಾಗಿತ್ತು. ಸಭೆಯಲ್ಲಿ ಮತ ಚಲಾವಣೆ ಮಾಡುವ ವಿಧಾನಗಳ ಬಗ್ಗೆಯೂ ಈಗಾಗಲೇ ಶಾಸಕರಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಬಯಲು; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ – Kannada News | PM Kisan scheme 23rd installment to be released in Tarakeshwar, West Bengal on June 20th

ನವದೆಹಲಿ, ಜೂನ್ 18: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 23ನೇ ಕಂತಿನ ಹಣ ಬಿಡುಗಡೆಯಾಗುವ ದಿನಾಂಕ ಬಹಿರಂಗಗೊಂಡಿದೆ. ಜೂನ್ 20, ಶನಿವಾರದಂದು 2,000 ರೂಗಳ ಕಂತು ಬಿಡುಗಡೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್​ನಿಂದ ಇದು ಟ್ವೀಟ್ ಆಗಿದೆ. ಮಾರ್ಚ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಭೇಟಿ ವೇಳೆ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9.32 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟು 18,640 ಕೋಟಿ ರೂ ಹಣ ಜಮೆಯಾಗಿತ್ತು. ಈಗ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್​ನಲ್ಲಿ ಪ್ರಧಾನಿಗಳು 23ನೇ ಕಂತಿನ ಹಣ ಬಿಡುಗಡೆ ಘೋಷಿಸಲಿದ್ದಾರೆ.

ಸರ್ಕಾರ ಜಮೀನು ಹೊಂದಿರುವ ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 6,000 ರೂಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಈವರೆಗೆ 22 ಕಂತುಗಳಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಹಣ 4.25 ಲಕ್ಷ ಕೋಟಿ ರೂ ದಾಟಿದೆ. ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಹಾಕಲಾಗುತ್ತದೆ. ಹೀಗಾಗಿ, ಹಣ ಪೋಲಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಪಿಎಂ ಕಿಸಾನ್ ಸ್ಕೀಮ್​ನ ಎಕ್ಸ್ ಖಾತೆಯಿಂದ ಆದ ಟ್ವೀಟ್

ಇದನ್ನೂ ಓದಿ: ಎನ್​ಎಸ್​ಇ ಮೂಲಕ ಬರಲಿದೆ ಭಾರತದ ಅತಿದೊಡ್ಡ ಐಪಿಒ; ಹಣ ಹೂಡುವ ಮುನ್ನ ಈ ಪ್ರಮುಖ ಸಂಗತಿಗಳನ್ನು ತಿಳಿದಿರಿ

ಪಿಎಂ ಕಿಸಾನ್ ಯೋಜನೆ ಪಡೆಯಲು ಬೇಕಾದ ಅರ್ಹತೆಗಳು

  • ಭಾರತೀಯ ಪ್ರಜೆಯಾಗಿರಬೇಕು
  • ಸ್ವಂತ ಕೃಷಿ ಭೂಮಿ ಇರಬೇಕು

ಯೋಜನೆಗೆ ಅನರ್ಹರಾಗಿರುವವರು

  • ಸಾಂಸ್ಥಿಕ ಭೂಒಡೆಯರು
  • ಆದಾಯ ತೆರಿಗೆ ಪಾವತಿದಾರರು
  • ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರು
  • ಸರ್ಕಾರಿ ನೌಕರರು ಮತ್ತು 10,000 ರೂಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರವವರು
  • ಹಾಲಿ ಮತ್ತು ಮಾಜಿ ಶಾಸಕರು, ಸಂಸದರು

ಯೋಜನೆಗೆ ಅರ್ಹರಾಗಿದ್ದೂ ಹಣ ಬರದಿರಲು ಕಾರಣಗಳಿವು…

ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ನೊಂದಾಯಿಸಿದ್ದರೂ ಕೆಲ ರೈತರಿಗೆ ಹಣ ಸಿಗುತ್ತಿಲ್ಲ. ಇದಕ್ಕೆ ವಿವಿಧ ಕಾರಣಗಳಿವೆ:

  • ಇಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಹಣ ಸಿಗುವುದಿಲ್ಲ.
  • ಯೋಜನೆಗೆ ನೊಂದಾಯಿಸುವಾಗ ಆಧಾರ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್​ಗಳು ಹೊಂದಿಕೆಯಾಗದಿದ್ದರೆ ಹಣ ಬರುವುದಿಲ್ಲ.
  • ಬ್ಯಾಂಕ್ ಅಕೌಂಟ್ ನಂಬರ್ ಸರಿ ಇರಬೇಕು. ಐಎಫ್​ಎಸ್​ಸಿ ಕೋಡ್ ಸರಿಯಾಗಿ ನಮೂದಿಸಬೇಕು. ಇಲ್ಲದಿದ್ದರೆ ಹಣ ಬರೋದಿಲ್ಲ.
  • ಅಪ್ಪ ಅಥವಾ ಅಮ್ಮ ಬದುಕಿರುವಾಗಲೇ ಅವರಿಂದ ಜಮೀನು ವರ್ಗಾವಣೆ ಆಗಿದ್ದರೆ ಆಗಲೂ ಹಣ ಸಿಗೋದಿಲ್ಲ.
  • 2019ರ ನಂತರ ಕೃಷಿ ಜಮೀನು ಖರೀದಿಸಿರುವವರಿಗೂ ಸದ್ಯಕ್ಕೆ ಫಲಾನುಭವಿಯಾಗುವ ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ಫಲಾನುಭವಿಗಳ ಪಟ್ಟಿ ವೀಕ್ಷಿಸಿ…

ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿದ್ದರೆ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇರುತ್ತದೆ. ಇದೆಯಾ ಇಲ್ಲವಾ ಎಂದು ಆನ್​ಲೈನ್​ನಲ್ಲೇ ಪರಿಶೀಲಿಸಬಹುದು:

  • ಪಿಎಂ ಕಿಸಾನ್ ಅಧಿಕೃತ ವೆಬ್​​ಸೈಟ್​ಗೆ ಹೋಗಿ: pmkisan.gov.in/
  • ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಳ್ಳಿ
  • ಗೆಟ್ ರಿಪೋರ್ಟ್ ಟ್ಯಾಬ್ ಕ್ಲಿಕ್ ಮಾಡಿ.

ಇಲ್ಲಿ ನೀವು ಆಯ್ದುಕೊಂಡ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಮ್ಮಿಂಗ್ ಪೂಲ್​ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಪ್ರಾಣ ಉಳಿಸಿದ ಕಸ್ಟಮ್ಸ್​ ಜಾರಿ ಅಧಿಕಾರಿ – Kannada News | Florida Hero: ICE Officer Saves Drowning Child with CPR in Pool

ಸ್ವಿಮ್ಮಿಂಗ್ ಪೂಲ್ -ಸಾಂದರ್ಭಿಕ ಚಿತ್ರImage Credit source: Districts

ಫ್ಲೋರಿಡಾ, ಜೂನ್ 18: ಸ್ವಿಮ್ಮಿಂಗ್​ ಪೂಲ್​(Swimming Pool)ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ಆರು ವರ್ಷದ ಬಾಲಕನನ್ನು ಅಮೆರಿಕದ ಕಸ್ಟಮ್ಸ್​ ಜಾರಿ ಅಧಿಕಾರಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ಪಾಸ್ಕೊ ಕೌಂಟಿಯ ಈಜುಕೊಳದಲ್ಲಿ ಮುಳುಗಿದ್ದ ಬಾಲಕ ಪ್ರಜ್ಞಾಹೀನನಾಗಿ ತೇಲುತ್ತಿದ್ದ. ಅದೇ ಪೂಲ್ ಬಳಿ ಇದ್ದ ಐಸಿಇ ಅಧಿಕಾರಿ ಗ್ರೆಗೊರಿ ಸಿಮಂಡ್ಸ್ ಇದನ್ನು ಗಮನಿಸಿದ್ದಾರೆ, ಬಾಲಕ ಸಂಕಷ್ಟದಲ್ಲಿರುವುದನ್ನು ಕಂಡ ತಕ್ಷಣ ಅವರು ಸೆಕೆಂಡ್ ಕೂಡ ಯೋಚಿಸದೆ, ಧರಿಸಿದ್ದ ಬಟ್ಟೆ ಹಾಗೂ ಶೂಗಳೊಂದಿಗೇ ನೇರವಾಗಿ ನೀರಿಗೆ ಜಿಗಿದಿದ್ದಾರೆ.

ಬಾಲಕನನ್ನು ನೀರಿನಿಂದ ಹೊರತೆಗೆದ ಸಿಮಂಡ್ಸ್, ಅದಕ್ಕೆ ಪ್ರಜ್ಞೆ ಬರುವವರೆಗೂ ನಿರಂತರವಾಗಿ ಸಿಪಿಆರ್ (ಕೃತಕ ಉಸಿರಾಟ) ನೀಡಿದ್ದಾರೆ. ತಕ್ಷಣದ ಈ ಚಿಕಿತ್ಸೆಯಿಂದಾಗಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಈಗ ಸಂಪೂರ್ಣ ಗುಣಮುಖವಾಗಿದ್ದಾನೆ.

ಈ ಧೈರ್ಯದ ಕೆಲಸಕ್ಕೆ ಫೆಡರಲ್ ಮತ್ತು ಸ್ಥಳೀಯ ಅಧಿಕಾರಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಧಿಕಾರಿ ಸಿಮಂಡ್ಸ್ ಅವರ ನಿಸ್ವಾರ್ಥತೆ ಮತ್ತು ಧೈರ್ಯದ ನಿರ್ಧಾರವೇ ಮಗುವಿನ ಜೀವ ಉಳಿಸಿದೆ.

ವಿಡಿಯೋ

ಇತ್ತೀಚಿನ ದಿನಗಳಲ್ಲಿ ಅಮೆರಿಕದ ವಲಸೆ ಬಂಧನ ನೀತಿಗಳಿಗಾಗಿ ಐಸಿಇ ಸಂಸ್ಥೆಯು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಗೃಹ ಭದ್ರತಾ ಇಲಾಖೆಯ ಹಂಗಾಮಿ ಸಹಾಯಕ ಕಾರ್ಯದರ್ಶಿ ಲಾರೆನ್ ಬಿಸ್ ಮಾತನಾಡಿ, ನಮ್ಮ ಅಧಿಕಾರಿಗಳು ಕೆಟ್ಟ ಅಪರಾಧಿಗಳನ್ನು ಹಿಡಿಯಲು ಪ್ರಾಣ ಪಣಕ್ಕಿಡುತ್ತಾರೆ.

ರಾಜಕಾರಣಿಗಳು ಇಂತಹ ಸಂಸ್ಥೆಯನ್ನು ಕೆಟ್ಟದಾಗಿ ನೋಡುವ ಬದಲು, ಇವರ ಸೇವೆಯನ್ನು ಗುರುತಿಸಿ ಧನ್ಯವಾದ ಹೇಳಬೇಕು ಎಂದಿದ್ದಾರೆ. ಅಮೆರಿಕದಲ್ಲಿ ಚಿಕ್ಕ ಮಕ್ಕಳ ಸಾವಿನ ಪ್ರಕರಣಗಳಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಪ್ರಾಣ ಬಿಟ್ಟಿರುವ ಪ್ರಕರಣಗಳೇ ಹೆಚ್ಚಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:47 pm, Thu, 18 June 26

Source link

ಗೂಗಲ್, ಫೇಸ್​​ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ – Kannada News | Preity Zinta to file suit against Google, Meta over deepfake

ನಟಿಯರಿಗೆ ಡೀಫ್​​ಫೇಕ್ ಕಾಟ ಇತ್ತೀಚೆಗೆ ಬಹಳ ಹೆಚ್ಚಾಗಿದೆ. ಹಲವಾರು ನಟಿಯರು ಡೀಪ್​​ಫೇಕ್ ಕಾಟಕ್ಕೆ ಬಲಿಯಾಗಿದ್ದಾರೆ. ರಶ್ಮಿಕಾ, ಈಗ ರುಕ್ಮಿಣಿ ಸೇರಿದಂತೆ ಹಲವಾರು ನಟಿಯರಿಗೆ ಡೀಪ್​​ಫೇಕ್ ವಿಡಿಯೋಗಳು ಕಾಟ ಕೊಟ್ಟಿವೆ. ಕೆಲವು ನಟಿಯರು ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ಆದರೆ ನಟಿ ಪ್ರೀತಿ ಜಿಂಟಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದು, ಗೂಗಲ್ ಮತ್ತು ಫೇಸ್​​ಬುಕ್ (ಮೆಟಾ) ವಿರುದ್ಧವೇ ದೂರು ನೀಡಲು ಸಜ್ಜಾಗಿದ್ದಾರೆ. ಅವರ ಈ ಸಾಹಸಕ್ಕೆ ನ್ಯಾಯಾಲಯದ ಅನುಮತಿಯೂ ಸಹ ದೊರಕಿದೆ.

ನಟಿ ಪ್ರೀತಿ ಜಿಂಟಾ ಅವರು ತಮ್ಮ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಬಳಸಿ ಎಐ ಮೂಲಕ ಡೀಪ್‌ಫೇಕ್ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಗೂಗಲ್, ಫೇಸ್​​ಬುಕ್ (ಮೆಟಾ ಪ್ಲಾಟ್‌ಫಾರ್ಮ್ಸ್) ಸೇರಿದಂತೆ ಹಲವು ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವ್ಯಕ್ತಿತ್ವ ಹಕ್ಕುಗಳು, ಹಕ್ಕುಸ್ವಾಮ್ಯ ಮತ್ತು ಖ್ಯಾತಿಗೆ ಧಕ್ಕೆ ಉಂಟಾಗಿದೆ ಎಂದು ದೂರಿ, ಈ ಕುರಿತು ಸಮಗ್ರ ಸಿವಿಲ್ ಮೊಕದ್ದಮೆ ಹೂಡಲು ನ್ಯಾಯಾಲಯವು ನಟಿಗೆ ಅನುಮತಿ ಕೋರಿದ್ದರು, ಅಂತೆಯೇ ನ್ಯಾಯಾಲಯವು ಅವರಿಗೆ ಅನುಮತಿ ನೀಡಿದೆ.

ನಟಿ ಪ್ರೀತಿ ಜಿಂಟಾ, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, ಅನೇಕ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್‌ಸೈಟ್‌ಗಳು ತಮ್ಮ ಅನುಮತಿಯಿಲ್ಲದೆ, ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋಗಳು, ತಿರುಚಿದ ಚಿತ್ರಗಳು, ಮೀಮ್‌ಗಳು ಮತ್ತು ಚಾಟ್‌ಬಾಟ್ ವ್ಯಕ್ತಿತ್ವಗಳನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರೀತಿ ಜಿಂಟಾ ಆರೋಪಿಸಿದ್ದಾರೆ.

ಇದನ್ನೂ ಓದಿ:ನಟಿ ಪ್ರೀತಿ ಜಿಂಟಾ ಮಾಡಿದರು ಜಗ ಮೆಚ್ಚುವ ಕಾರ್ಯ, ಭೇಷ್ ಎಂದ ಅಭಿಮಾನಿಗಳು

ಜೂನ್ 16 ರಂದು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಏಕಸದಸ್ಯ ಪೀಠದ ಮುಂದೆ ನಟಿಯ ಪರವಾಗಿ ವಾದ ಮಂಡಿಸಿದ ವಕೀಲ ರೋಹನ್ ಕದಮ್, ಪ್ರತಿವಾದಿಗಳು (ಗೂಗಲ್ ಮತ್ತು ಫೇಸ್​​ಬುಕ್) ನಟಿಯ ಡೀಪ್​​ಫೇಕ್ ಚಿತ್ರ, ವಿಡಿಯೋಗಳನ್ನು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು. ಇಂತಹ ವಿಷಯಗಳು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಮತ್ತು ಸಾರ್ವಜನಿಕವಾಗಿ ತಮ್ಮ ಇಮೇಜ್‌ಗೆ ಹಾನಿ ಮಾಡುತ್ತಿವೆ ಎಂದು ನಟಿ ಪರ ವಕೀಲರು ವಾದಿಸಿದ್ದಾರೆ.

ಈ ರೀತಿ ತಿರುಚಿದ, ಸುಳ್ಳು ಚಿತ್ರ, ವಿಡಿಯೋಗಳನ್ನು ಹರಡುತ್ತಿರುವುದರಿಂದ ತಮ್ಮ ಖ್ಯಾತಿ ಮತ್ತು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಈ ಮೊಕದ್ದಮೆಯು ಹಕ್ಕುಸ್ವಾಮ್ಯ ಕಾಯಿದೆಯಡಿ ತಮ್ಮ ನೈತಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸುತ್ತದೆ. ಈ ವಿವಾದಾತ್ಮಕ ವಿಷಯಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜಾಗತಿಕವಾಗಿ ಹರಡಿರುವುದರಿಂದ, ಇದರ ಪರಿಣಾಮವು ತುಂಬಾ ವ್ಯಾಪಕವಾಗಿದೆ ಎಂದು ವಕೀಲ ಕದಮ್ ನ್ಯಾಯಾಲಯಕ್ಕೆ ತಿಳಿಸಿದರು. ಇದೀಗ ನಟಿಯೂ ಗೂಗಲ್ ಮತ್ತು ಫೇಸ್​​ಬುಕ್ ಸೇರಿದಂತೆ ಇನ್ನೂ ಕೆಲವು ವೆಬ್​​ಸೈಟ್​​ಗಳ ವಿರುದ್ಧ ದಾವೆ ಹೂಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:16 pm, Thu, 18 June 26

Source link

‘ಈ ಚಿತ್ರಕ್ಕೆ ಕಾಯಬೇಡಿ’; ‘ಆಲ್ಫಾ’ ಟ್ರೇಲರ್​ಗೆ ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್ – Kannada News | Alpha Trailer Trolled: YRF Spy Universe’s New Film Disappoints Audience and Fans

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಯಶ್ ರಾಜ್​​​ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಮೊದಲ ಚಿತ್ರ ಇದಾಗಿರುವುದರಿಂದ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಟ್ರೇಲರ್ ಕಂಡ ಪ್ರೇಕ್ಷಕರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ತರಹೇವಾರಿ ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಟ್ರೇಲರ್​​ನಲ್ಲಿ ಕಲರ್ ಗ್ರೇಡಿಂಗ್ ಹಾಗೂ ಆ್ಯಕ್ಷನ್ ಸೀನ್‌ಗಳನ್ನು ನೋಡಿದ ನೆಟ್ಟಿಗರು, ‘ಇದು ಸಿನಿಮಾ ಟ್ರೇಲರ್ ರೀತಿ ಕಾಣುತ್ತಿಲ್ಲ, ಬದಲಿಗೆ ಯಾವುದೋ ಎನರ್ಜಿ ಡ್ರಿಂಕ್ಸ್ ಜಾಹೀರಾತಿನಂತೆ ಕಾಣುತ್ತಿದೆ’ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು, ‘ಲೇಡೀಸ್ ಅಂಡ್ ಜೆಂಟಲ್‌ಮನ್, ಈ ಚಿತ್ರವನ್ನು ನೋಡಲು ಯಾರೂ ರೆಡಿಯಾಗುವ ಅಗತ್ಯವಿಲ್ಲ’ ಎಂದು ಲೇವಡಿ ಮಾಡಿದ್ದಾರೆ.

ಚಿತ್ರದಲ್ಲಿ ಹೃತಿಕ್ ರೋಷನ್ ಅವರ ಅತಿಥಿ ಪಾತ್ರ ಇರುವುದನ್ನು ಟ್ರೇಲರ್​​ನಲ್ಲೇ ರಿವೀಲ್ ಮಾಡಲಾಗಿದೆ. ಚಿತ್ರತಂಡ ಎಷ್ಟು ಹೆದರಿದೆ ಎಂದರೆ, ಹೈಪ್ ಕ್ರಿಯೇಟ್ ಮಾಡಲು ಈಗಲೇ ಅತಿಥಿ ಪಾತ್ರವನ್ನು ತೋರಿಸಬೇಕಾಗಿ ಬಂದಿದೆ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ. ಟೀಸರ್‌ನಲ್ಲಿ ಹೃತಿಕ್ ಲುಕ್ ನೋಡಿ, ‘ಹೃತಿಕ್ ರೋಷನ್ ಅವರು ಜಾದೂ (ಕೋಯಿ ಮಿಲ್ ಗಯಾ ಸಿನಿಮಾ ಪಾತ್ರ) ಬಟ್ಟೆಯನ್ನು ಕದ್ದು ಹಾಕಿಕೊಂಡಂತಿದೆ’ ಹಾಗೂ ‘ಹೃತಿಕ್ ಇಲ್ಲಿ ಮೌಂಟೇನ್ ಡ್ಯೂ… ಡರ್ ಕೆ ಆಗೇ ಜೀತ್ ಹೈ ಎಂದು ಹೇಳುವುದೊಂದೇ ಬಾಕಿ ಇತ್ತು’ ಎಂದು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು ಹಾಲಿವುಡ್‌ನ ‘ಬ್ಲ್ಯಾಕ್ ವಿಡೋ’ ಚಿತ್ರದ ಅತ್ಯಂತ ಲೋ-ಬಜೆಟ್ ಆವೃತ್ತಿಯಂತೆ ಆಲಿಯಾ ಮತ್ತು ಶಾರ್ವರಿ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ‘ಈ ಚಿತ್ರವನ್ನು ನೋಡಲು ಬಂಕ್ ಮಾಡಿ ಆರಾಮಾಗಿ ಮನೆಯಲ್ಲಿ ಓದಿಕೊಳ್ಳಬಹುದು’ ಎಂದು ವಿದ್ಯಾರ್ಥಿಗಳು ಜೋಕ್ ಮಾಡುತ್ತಿದ್ದಾರೆ.

ತೂಕ ಕಳೆದುಕೊಳ್ಳುತ್ತಿದೆಯೇ ವೈಆರ್‌ಎಫ್ ಸ್ಪೈ ಯೂನಿವರ್ಸ್?

‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’ ಮತ್ತು ‘ಪಠಾಣ್’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್, ಇತ್ತೀಚಿನ ದಿನಗಳಲ್ಲಿ ತನ್ನ ತೂಕ ಮತ್ತು ಕ್ರೇಜ್ ಅನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಮುಂಚೆ ಬಿಡುಗಡೆಯಾಗಿದ್ದ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ‘ವಾರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ‘ವಾರ್ 2’ ಸೋಲಿನ ಬೆನ್ನಲ್ಲೇ ಈಗ ‘ಆಲ್ಫಾ’ ಚಿತ್ರದ ಮೇಲೂ ನೆಗೆಟಿವ್ ಕಮೆಂಟ್‌ಗಳು ಬರುತ್ತಿರುವುದು ನಿರ್ಮಾಣ ಸಂಸ್ಥೆಗೆ ತಲೆನೋವು ತಂದಿದೆ.

ಇದರ ಜೊತೆಗೆ, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಪ್ರತಿ ಸಿನಿಮಾದಲ್ಲೂ ಭಾರತದ ಮಾಜಿ ‘ರಾ’ ಏಜೆಂಟ್‌ನನ್ನೇ ವಿಲನ್ ಆಗಿ ತೋರಿಸುವ ಹಳೇ ಟ್ರೆಂಡ್ ಅನ್ನೇ ಇಲ್ಲೂ ಮುಂದುವರಿಸಲಾಗಿದೆ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಇಡೀ ಟ್ರೇಲರ್​​ನಲ್ಲಿ ಅತ್ಯಂತ ಧೈರ್ಯದ ಕೆಲಸ ಎಂದರೆ ಯೂಟ್ಯೂಬ್‌ನಲ್ಲಿ ಕಮೆಂಟ್ ಸೆಕ್ಷನ್ ಓಪನ್ ಇಟ್ಟಿರುವುದು’ ಎಂದು ನೆಟ್ಟಿಗರು ಚಿತ್ರತಂಡಕ್ಕೆ ಟಾಂಗ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನೀವು ಯಾರಿಗೆ ಹೇಳ್ತೀರೋ ಅವರಿಗೇ ವೋಟ್ ಹಾಕ್ತೀನಿ’: ಆರ್. ಅಶೋಕ್‌ಗೆ ಶಾಸಕ ಯತ್ನಾಳ್ ಭರವಸೆ

  ವಿಧಾನ ಪರಿಷತ್ ಚುನಾವಣೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಬಿಜೆಪಿಯ ಮತದಾನದ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು. ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಅಗತ್ಯವಿರುವಷ್ಟು ಮತಗಳನ್ನು ಪಕ್ಷ ಪಡೆದುಕೊಂಡಿದ್ದು, ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು. ಜೆಡಿಎಸ್‌ ಗೆಲ್ಲಬೇಕು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಜೆಡಿಎಸ್‌ಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಲಾಗಿದೆ ಎಂದು ಅಶೋಕ್ ಖಚಿತಪಡಿಸಿದರು. ಬಿಜೆಪಿ ಅಭ್ಯರ್ಥಿಯ ಎರಡನೇ ಪ್ರಾಶಸ್ತ್ಯದ ಎಲ್ಲ ಮತಗಳನ್ನೂ ಜೆಡಿಎಸ್‌ಗೆ ನೀಡಲಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಶಾಸಕರ ಮತದಾನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಕಾಂಗ್ರೆಸ್‌ನವರ ಮತದಾನ ಇನ್ನೂ ನಡೆಯುತ್ತಿದೆ ಎಂದು ಅಶೋಕ್ ಮಾಹಿತಿ ನೀಡಿದರು. ಉಚ್ಚಾಟಿತ ಶಾಸಕರ ಬಗ್ಗೆ ಮಾತನಾಡಿದ ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ತಮ್ಮನ್ನು ಎರಡು ಬಾರಿ ಸಂಪರ್ಕಿಸಿ, ಬಿಜೆಪಿಗೆ ಮತ ಹಾಕುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದರು. ಅವರು ಈಗ ಮತದಾನ ಕೇಂದ್ರಕ್ಕೆ ಬರುತ್ತಿದ್ದು, ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಆದರೆ, ಎಸ್‌.ಟಿ. ಸೋಮಶೇಖರ್‌ ಮತ್ತು ಶಿವರಾಮ್ ಹೆಬ್ಬಾರ್ ಕುರಿತು ಪ್ರತಿಕ್ರಿಯಿಸಲು ಆರ್‌. ಅಶೋಕ್ ನಿರಾಕರಿಸಿದರು. “ಅವರು ಕಾಂಗ್ರೆಸ್ ಜೊತೆ ಇರುವುದರಿಂದ, ಅವರ ಬಗ್ಗೆ ನೋ ಕಾಮೆಂಟ್ಸ್” ಎಂದು ಅಶೋಕ್ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ಉಪ್ಪಿ – Kannada News | Upendra to act in Karthik Subbaraj’s new movie

ಉಪೇಂದ್ರ (Upendra) ಅವರಿಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಭರ್ಜರಿ ಬೇಡಿಕೆ ಇದೆ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ. ಅಲ್ಲಿನ ಕೆಲವು ಸ್ಟಾರ್ ನಟ, ನಿರ್ದೇಶಕರುಗಳು ಸಹ ಉಪೇಂದ್ರ ಅವರ ಅಭಿಮಾನಿಗಳು. 2008 ರಲ್ಲಿ ‘ಸತ್ಯ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದ ಉಪೇಂದ್ರ, ಇತ್ತೀಚೆಗಷ್ಟೆ ರಜನೀಕಾಂತ್ ನಟಿಸಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಉಪ್ಪಿಗೆ ತಮಿಳಿನಿಂದ ಬುಲಾವ್ ಬಂದಿದ್ದು, ತಮಿಳಿನ ಮತ್ತೊಬ್ಬ ಜನಪ್ರಿಯ ನಿರ್ದೇಶನ ಸಿನಿಮಾನಲ್ಲಿ ಉಪೇಂದ್ರ ನಟಿಸಲಿದ್ದಾರೆ.

‘ಪಿಜ್ಜಾ’, ‘ಜಿಗರ್​​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಮಹಾನ್’, ‘ರೆಟ್ರೊ’ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜ್ ಅವರ ಹೊಸ ಸಿನಿಮಾನಲ್ಲಿ ಉಪೇಂದ್ರ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಅಥರ್ವ ನಾಯಕನಾಗಿ ನಟಿಸುತ್ತಿದ್ದು, ಈ ಸಿನಿಮಾದ ಬಹಳ ಪ್ರಮುಖ ಪಾತ್ರವೊಂದರಲ್ಲಿ ಉಪೇಂದ್ರ ನಟಿಸಲಿದ್ದಾರೆ. ಈ ಸಿನಿಮಾ ಅನ್ನು ಕಾರ್ತಿಕ್ ಸುಬ್ಬರಾಜು ಅವರು ತಮ್ಮ ಸ್ವಂತ ಬ್ಯಾನರ್ ಆಗಿರುವ ಸ್ಟೋನ್ ಬೆಂಚ್​​ ಮೂಲಕ ಖುದ್ದು ನಿರ್ಮಾಣ ಸಹ ಮಾಡುತ್ತಿದ್ದಾರೆ.

ಇದನ್ನೂ ಓದಿ:ಉಪೇಂದ್ರ ಅಣ್ಣನ ಮಗ ನಿರಂಜನ್ ನಿಶ್ಚಿತಾರ್ಥ; ಹುಡುಗಿ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ತಿಕ್ ಸುಬ್ಬರಾಜು ಪ್ರಸ್ತುತ ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗಾ ನಿರ್ಮಾಣ ಮಾಡುತ್ತಿರುವ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾ ಅಂತಿಮ ಹಂತದಲ್ಲಿದೆ. ಸಿನಿಮಾಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ಕೈಗೆತ್ತಿಕೊಳ್ಳಲಿದ್ದಾರೆ. ಸಿನಿಮಾದ ಘೋಷಣೆ ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಉಪೇಂದ್ರ ಅವರು ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ಅವರ ‘ಬುದ್ಧಿವಂತ 2’ ತಡವಾಗಿದೆ. ‘ಗೊರಿಲ್ಲಾ ವಾರ್’, ‘ಭಾರ್ಗವ’ ಮತ್ತು ಮತ್ತೊಂದು ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ‘ಕಬ್ಜ 2’ ಸಿನಿಮಾ ಸಹ ನಿರ್ಮಾಣ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್​! – Kannada News | IPL 2027 is likely to begin on March 10

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಆರಂಭಕ್ಕೆ ತಾತ್ಕಾಲಿಕ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಐಪಿಎಲ್ 2027 ಮಾರ್ಚ್ 10 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವನ್ನು ಮೇ 15 ರೊಳಗೆ ಮುಗಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಹಾಗೂ ಆಟಗಾರರ ಹಿತದೃಷ್ಟಿಯಿಂದ ಪ್ರಸ್ತುತ ಇರುವ 74 ಪಂದ್ಯಗಳ ಸ್ವರೂಪದಲ್ಲೇ 2027ರ ಐಪಿಎಲ್ ಟೂರ್ನಿ ಮುಂದುವರಿಯಲಿದೆ.  ಇದರೊಂದಿಗೆ, ಭಾರತದ ತೀವ್ರ ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಳೆಯಿಂದ ಪ್ಲೇ-ಆಫ್ ಪಂದ್ಯಗಳನ್ನು ರಕ್ಷಿಸಲು ಇನ್ಮುಂದೆ ಮಾರ್ಚ್ 10 ರಿಂದಲೇ ಐಪಿಎಲ್ ಆರಂಭಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ರೂಪಿಸಲಿದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಮುಂಬರುವ ಐಪಿಎಲ್​ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆ 94ಕ್ಕೆ ಹೆಚ್ಚಾಗಬಹುದು ಎಂಬ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತೆರೆ ಎಳೆದಿದ್ದಾರೆ. ಅಂದರೆ ಐಪಿಎಲ್ 2027 ರಲ್ಲೂ 70 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಮ್ಯಾಚ್​ಗಳೇ ನಡೆಯಲಿದೆ.

 74 ಪಂದ್ಯಗಳಿಗಷ್ಟೇ ಮಿತಿ ಏಕೆ?

ಐಪಿಎಲ್ ಟೂರ್ನಿಯನ್ನು ವಿಸ್ತರಿಸಲು ಕ್ರಿಕೆಟ್ ಮಂಡಳಿ ಹಿಂದೇಟು ಹಾಕಲು ಪ್ರಮುಖ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ. ವಿಶ್ವದ ಇತರ ಕ್ರಿಕೆಟ್ ಮಂಡಳಿಗಳು ತಮ್ಮದೇ ಆದ ದ್ವಿಪಕ್ಷೀಯ ಸರಣಿಗಳನ್ನು ಮೊದಲೇ ನಿಗದಿಪಡಿಸಿವೆ. ಹೀಗಾಗಿ ವಿದೇಶಿ ಆಟಗಾರರು 2 ತಿಂಗಳಿಗಿಂತ ಹೆಚ್ಚು ಕಾಲ ಲಭ್ಯವಿರುವುದು ಕಷ್ಟಸಾಧ್ಯ.

ಹಾಗೆಯೇ ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಆಟಗಾರರ ಮೇಲಿನ ದೈಹಿಕ ಒತ್ತಡ ಹೆಚ್ಚಾಗಲಿದ್ದು, ಇದು ಐಸಿಸಿ ಟೂರ್ನಿಗಳ ಮೇಲೆಯೂ ಪರಿಣಾಮ ಬೀರಬಹುದು.

ಹೊಸ ಐಪಿಎಲ್ ವಿಂಡೋ!

ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ಅಂತ್ಯದವರೆಗೆ ನಡೆಯುತ್ತಿದ್ದ ಐಪಿಎಲ್ ಅನ್ನು ಇನ್ಮುಂದೆ ಮಾರ್ಚ್ 10 ಕ್ಕೆ ಆರಂಭಿಸಿ, ಮೇ 15 ರೊಳಗೆ ಮುಗಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಮಹತ್ವದ ನಿರ್ಧಾರದ ಹಿಂದಿರುವ ಕಾರಣಗಳೆಂದರೆ…

  • ಬಿಸಿಲಿನ ಬೇಗೆಯಿಂದ ಮುಕ್ತಿ: ಮೇ ತಿಂಗಳ ದ್ವಿತೀಯಾರ್ಧದಲ್ಲಿ ಭಾರತದಾದ್ಯಂತ ತಾಪಮಾನ ತೀವ್ರವಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿಯ ಪಂದ್ಯಗಳಲ್ಲಿ ಆಟಗಾರರು ಹಾಗೂ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ತೀವ್ರ ಸೆಕೆಯಿಂದ ಬಳಲುತ್ತಿದ್ದರು. ಮಾರ್ಚ್‌ನಲ್ಲೇ ಟೂರ್ನಿ ಆರಂಭಿಸುವುದರಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ.
  • ಮುಂಗಾರು ಮಳೆಯಿಂದ ರಕ್ಷಣೆ: ಮೇ ತಿಂಗಳ ಕೊನೆಯ ವಾರದಲ್ಲಿ ಭಾರತದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗುತ್ತದೆ. ಇದರಿಂದ ಪ್ಲೇ-ಆಫ್ಸ್ ಮತ್ತು ಫೈನಲ್‌ನಂತಹ ಪ್ರಮುಖ ಪಂದ್ಯಗಳು ರದ್ದಾಗುವ ಭೀತಿ ಇರುತ್ತಿತ್ತು. ಮೇ 15ರ ಒಳಗಾಗಿ ಟೂರ್ನಿ ಮುಗಿಸಿದರೆ ಮಳೆಯ ಅಡ್ಡಿಯಿಲ್ಲದೆ ಸುಸೂತ್ರವಾಗಿ ಫೈನಲ್ ಪಂದ್ಯ ನಡೆಸಬಹುದು.

ದೇಶಿ ಕ್ರಿಕೆಟ್‌ಗೂ ಹೊಸ ರೂಪ:

ಐಪಿಎಲ್ ಅನ್ನು ಮಾರ್ಚ್ 10 ರಂದೇ ಆರಂಭಿಸಬೇಕಿರುವುದರಿಂದ ಭಾರತದ ದೇಶಿ ಕ್ರಿಕೆಟ್ ವೇಳಾಪಟ್ಟಿಯನ್ನೂ ಸಂಪೂರ್ಣವಾಗಿ ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ. ರಣಜಿ ಟ್ರೋಫಿ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ದೇಶಿ ಟೂರ್ನಿಗಳನ್ನು ಮಾರ್ಚ್ ಆರಂಭದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ!

ಒಟ್ಟಾರೆಯಾಗಿ, ವಾಣಿಜ್ಯ ಲಾಭಕ್ಕಿಂತ ಆಟಗಾರರ ಫಿಟ್‌ನೆಸ್, ಹವಾಮಾನದ ಅನುಕೂಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳಿಗೆ ಬಿಸಿಸಿಐ ಹೆಚ್ಚಿನ ಆದ್ಯತೆ ನೀಡಿದೆ ಎಂಬುದು ಈ ನಿರ್ಧಾರದಿಂದ ಸ್ಪಷ್ಟವಾಗಿದೆ.

Source link

Exit mobile version