Karnataka Weather Report: ಕಳೆದ 24 ಗಂಟೆಯಲ್ಲಿ ಕರ್ನಾಟಕ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ? – Kannada News | Karnataka Weather Update: Kolthige in Puttur Records Highest Rainfall of 139 mm

ಬೆಂಗಳೂರು, ಜುಲೈ 03: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ನಾಳೆ (ಜುಲೈ 04) ಕೂಡ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹವಾಮಾಮಾನ ಇಲಾಖೆ ಆರೆಂಜ್​ ಅಲರ್ಟ್​​ ಘೋಷಣೆ ಮಾಡಿದೆ. ಈ ನಡುವೆ ಜುಲೈ 2ರ ಬೆಳಿಗ್ಗೆ 8:30ರಿಂದ ಜುಲೈ 3ರ ಬೆಳಿಗ್ಗೆ 7:30ರವರೆಗೆ 50 ಮಿ.ಮೀ.ಗಿಂತ ಹೆಚ್ಚು ಮಳೆ ದಾಖಲಿಸಿದ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳ ವಿವರ ಬಹಿರಂಗಗೊಂಡಿದೆ. ಆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆಯಲ್ಲಿ ಅತಿ ಹೆಚ್ಚು ಅಂದರೆ 139 ಮಿಲಿ ಮೀಟರ್​​ ಮಳೆಯಾಗಿದೆ.

ಅಧಿಕ ಮಳೆಯಾದ ಸ್ಥಳಗಳು

108.5 ಮಿ.ಮೀ ಮಳೆ ದಾಖಲಿಸುವ ಮೂಲಕ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಿರೇಯಂಗಡಿ ಎರಡನೇ ಸ್ಥಾನದಲ್ಲಿದ್ದರೆ, ಇದೇ ತಾಲೂಕಿನ ಜಲವಳ್ಳಿ 104.5 ಮಿ.ಮೀ ಮತ್ತು ನಗರಬಸ್ತಿಕೇರಿ 100.5 ಮಿ.ಮೀ ದಾಖಲಿಸುವ ಮೂಲಕ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಮೇಲಿನ ಇಡಗುಂಜಿ 97.5 ಮಿ.ಮೀ, ಹಡಿನಬಾಳ 93.5 ಮಿ.ಮೀ, ಖರ್ವಾ 91 ಮಿ.ಮೀ, ಕುದ್ರಿಗಿ 91 ಮಿ.ಮೀ ಮತ್ತು ಕೆಳಗಿನೂರಿನಲ್ಲಿ 89.5 ಮಿ.ಮೀ, ಮಳೆಯಾಗಿದೆ.

ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್​​ ಅಲರ್ಟ್​; ಜುಲೈ 5ರ ವರೆಗೂ ಭಾರಿ ವರ್ಷಧಾರೆ

ಹಾಗೆಯೇ ಅಂಕೋಲಾ ತಾಲೂಕಿಮ ಹಿಲ್ಲೂರಿನಲ್ಲಿ 87 ಮಿ.ಮೀ, ಹೊನ್ನಾವರದ ಕಾಸರಕೋಡಿನಲ್ಲಿ 85 ಮಿ.ಮೀ, ಮುಗ್ವಾ 78.5 ಮಿ.ಮೀ, ಬಳ್ಕೂರಿನಲ್ಲಿ 78 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡ್​ನಲ್ಲಿ 77.5ಮಿ.ಮೀ, ಹೊನ್ನಾವರದ ಚಿಕ್ಕನಕೋಡದಲ್ಲಿ 76.5 ಮಿ.ಮೀ ಮತ್ತು ಕೊಡಾಣಿಯಲ್ಲಿ 74.5 ಮಿ.ಮೀ ಮಳೆಯ ಪ್ರಮಾಣ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:37 pm, Fri, 3 July 26

Source link

‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್; ಏಜೆಂಟ್ ಪ್ರಕಾಶ್ ಆಗಿ ಬಂದ ಶಿವಣ್ಣ – Kannada News | 666 Operation Dream Teaser Reveals Shivarajkumar Bond Avatar

ಸ್ಯಾಂಡಲ್‌ವುಡ್‌ನ ಮೋಸ್ಟ್ ಅವೈಟೆಡ್ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಅದ್ದೂರಿ ಟೀಸರ್ ಹೊರಬಿದ್ದಿದೆ. ಈ ಹಿಂದೆ ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದ್ದ ಚಿತ್ರತಂಡ, ಈಗ ಬಿಡುಗಡೆ ಮಾಡಿರುವ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿದೆ. ಸಂಪೂರ್ಣ ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಆಕಾಶದತ್ತ ಕೊಂಡೊಯ್ದಿದೆ. ಈ ಚಿತ್ರದಲ್ಲಿ ಶಿವಣ್ಣ ಬಾಂಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗ ರಿಲೀಸ್ ಆಗಿರುವ ಟೀಸರ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಅವರ ಖಡಕ್ ರೆಟ್ರೋ ಲುಕ್ ಪ್ರಮುಖ ಆಕರ್ಷಣೆಯಾಗಿದೆ. ಈ ಟೀಸರ್ ನೋಡುತ್ತಿದ್ದರೆ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಕಾಲದ ಸೂಪರ್ ಹಿಟ್ ಬಾಂಡ್ ಸಿನಿಮಾಗಳು ನೆನಪಿಗೆ ಬರುತ್ತವೆ. ವಿಶೇಷವೆಂದರೆ, ಟೀಸರ್‌ನ ಒಂದು ಹಂತದಲ್ಲಿ ಶಿವಣ್ಣ ಅವರು ಅಚ್ಚುಕಟ್ಟಾಗಿ ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರಂತೆಯೇ ಕಾಣಿಸಿಕೊಂಡು ಅಭಿಮಾನಿಗಳಿಗೆ ರೋಮಾಂಚನ ಮೂಡಿಸಿದ್ದಾರೆ.

ರೆಟ್ರೋ ಜಗತ್ತನ್ನು ಸೃಷ್ಟಿಸಿದ ತಾಂತ್ರಿಕ ತಂಡ

ಹಳೆಯ ಕಾಲದ ಆ ಭವ್ಯ ಜಗತ್ತನ್ನು ತೆರೆಯ ಮೇಲೆ ಮರುಸೃಷ್ಟಿಸುವಲ್ಲಿ ಚಿತ್ರದ ತಾಂತ್ರಿಕ ತಂಡದ ಶ್ರಮ ಎದ್ದು ಕಾಣುತ್ತಿದೆ. ಹಿರಿಯ ಮೇಕಪ್‌ಮನ್‌ ಎನ್‌.ಕೆ. ಉಮಾ ಮಹೇಶ್ವರ ಮತ್ತು ಕಾಸ್ಟ್ಯೂಮ್‌ ಡಿಸೈನರ್‌ ಇಂಚರಾ ಸುರೇಶ್ ಅವರು ಕಲಾವಿದರಿಗೆ ಪಕ್ಕಾ ರೆಟ್ರೋ ಲುಕ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಜೊತೆಗೆ ಅದ್ವೈತ ಗುರುಮೂರ್ತಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಚರಣ್‌ ರಾಜ್‌ ಅವರ ಖದರ್ ಉಳ್ಳ ಹಿನ್ನೆಲೆ ಸಂಗೀತ ಟೀಸರ್‌ನ ತೂಕವನ್ನು ಹೆಚ್ಚಿಸಿದೆ.

ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ಈ ಬಿಗ್ ಬಜೆಟ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ವಿಭಿನ್ನ ಕಥೆಗಳ ಮೂಲಕ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ಹೇಮಂತ್ ಎಂ. ರಾವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಹಲವು ಹಂತಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದ ಚಿತ್ರತಂಡ, ಈಗ ಟೀಸರ್ ಬಿಟ್ಟು ಪ್ರಮೋಷನ್ ಅಖಾಡಕ್ಕೆ ಧುಮುಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿ-ಧಾರವಾಡದಲ್ಲೂ ಎಸ್​​ಐಆರ್​​​​ನಲ್ಲಿ ಅಕ್ರಮ: ವಿಡಿಯೋ ಸಾಕ್ಷಿ ಕೊಟ್ಟ ಜೋಶಿ – Kannada News | Hubballi Dharwad SIR Controversy: Pralhad Joshi Shares Video Alleged Irregularities

ಎಸ್​​ಐಆರ್​​​​ನಲ್ಲಿ ಅಕ್ರಮ ಆರೋಪImage Credit source: x.com/JoshiPralhad

ಹುಬ್ಬಳ್ಳಿ, ಜುಲೈ 03: ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಅಕ್ರಮದ ಆರೋಪಗಳು ಕೇಳಿ ಬರುತ್ತಿವೆ. ನಿನ್ನೆಯಷ್ಟೇ ರಾಮನಗರದಲ್ಲಿ ಚೌಟ್ರಿಯಲ್ಲಿ SIR ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ಹುಬ್ಬಳ್ಳಿ-ಧಾರವಾಡದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಬೃಹತ್ ಅಕ್ರಮ ಬಯಲಾಗಿದ್ದು, ಈ ಕುರಿತಾಗಿ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ (Pralhad Joshi) ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ, ಹುಬ್ಬಳ್ಳಿ-ಧಾರವಾಡದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಬೃಹತ್ ಅಕ್ರಮ ಬಯಲಿಗೆ! ರಾಮನಗರ, ಶಿಗ್ಗಾಂವಿ-ಸವನೂರ ಬೆನ್ನಲ್ಲೇ ಈಗ ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 63, ಬೂತ್ ನಂ. 16 ರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆಯ ನಿಯಮಬಾಹಿರ ಕೃತ್ಯ ಬಹಿರಂಗಗೊಂಡಿದೆ ಎಂದಿದ್ದಾರೆ.

ಪ್ರಲ್ಹಾದ್​​ ಜೋಶಿ ಟ್ವೀಟ್​

ಇಲ್ಲಿನ ಬಿಎಲ್‌ಒ ಶ್ರೀಮತಿ ಮೇರಿ ರಾಮಚಂದ್ರ ಹರಪನಾಳ ಅವರು ಕೇಂದ್ರ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ, ಮನೆ-ಮನೆಗೆ ಭೇಟಿ ನೀಡದೇ ಒಂದೇ ಸ್ಥಳದಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿದ್ದ ಆಘಾತಕಾರಿ ದೃಶ್ಯ ಸಾರ್ವಜನಿಕವಾಗಿ ಬಹಿರಂಗವಾಗಿದೆ. ನಮ್ಮ ಬಿಎಲ್‌ಎ-2 ನೀಡಿದ ದೂರಿನ ಮೇರೆಗೆ, ಬಿಎಲ್‌ಎ-1 ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಈ ಅಕ್ರಮವನ್ನು ಸಾಕ್ಷ್ಯ ಸಮೇತ ದಾಖಲಿಸಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ: ಮತ್ತೊಂದು ವಿಡಿಯೋ ರಿಲೀಸ್​​ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ

ಚುನಾವಣಾ ಆಯೋಗದ ನಿಯಮಾವಳಿಗಳನ್ನು ಕಡೆಗಣಿಸಿ, ಆಡಳಿತ ಪಕ್ಷದ ಹಿತಾಸಕ್ತಿಗಾಗಿ ಸಾಂವಿಧಾನಿಕ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು ಮತ್ತು ಇದರ ಹಿಂದಿರುವ ಶಕ್ತಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನಮ್ಮ ಪ್ರಜಾಪ್ರಭುತ್ವದ ಆಶಯಗಳಿಗೇ ಬಗೆದ ದ್ರೋಹ ಎಂದ ಜೋಶಿ

ನಿನ್ನೆ ರಾಮನಗರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿದ್ದು, ಇಂದು ನಮ್ಮ ಲೋಕಸಭಾ ಕ್ಷೇತ್ರದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವೆಡೆ ಆರಂಭವಾಗಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿ, ವ್ಯವಸ್ಥಿತವಾಗಿ ಬೃಹತ್ ಅಕ್ರಮ ನಡೆಸಲಾಗುತ್ತಿದೆ. ಇದು ಕೇವಲ ನಿಯಮಗಳ ಉಲ್ಲಂಘನೆಯಲ್ಲ, ನಮ್ಮ ಪ್ರಜಾಪ್ರಭುತ್ವದ ಆಶಯಗಳಿಗೇ ಬಗೆದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಲಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ, ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ತಿರುಗಿಸಲು ಸರ್ಕಾರದ ಉನ್ನತ ಮಟ್ಟದಿಂದಲೇ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಸ್ವತಂತ್ರವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಸ್ಥಳೀಯ ಬಿಎಲ್ಒಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಆಡಳಿತ ಯಂತ್ರದ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ.

ಮಸೀದಿಯಲ್ಲಿ ಕುಳಿತು ಫಾರ್ಮ್‌ಗಳ ಭರ್ತಿ

SIR ನಿಯಮಗಳ ಪ್ರಕಾರ ಮತಗಟ್ಟೆ ಅಧಿಕಾರಿಗಳು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದಂತೆ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಅಲ್ಲಿರುವ ಕುಟುಂಬ ಸದಸ್ಯರನ್ನು ಖುದ್ದಾಗಿ ಗುರುತಿಸಬೇಕು. ಆದರೆ ಆಘಾತಕಾರಿ ವಿಷಯವೆಂದರೆ, ಶಿಗ್ಗಾಂವಿ-ಸವಣೂರು ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಮಸೀದಿಯಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಿಕೊಡಲಾಗುತ್ತಿದೆ. ಇದನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಬಹಿರಂಗವಾಗಿ ಪ್ರಚಾರ ಮಾಡಲಾಗುತ್ತಿದ್ದು, ರಾಜ್ಯದ ಅನೇಕ ಕಡೆಗಳಿಂದ ಇಂತಹದ್ದೇ ಅಕ್ರಮಗಳ ಬಗ್ಗೆ ಕರೆಗಳು ಬರುತ್ತಿವೆ.

ಇದನ್ನೂ ಓದಿ: SIR: ಬಿಎಲ್‌ಒಗಳು ಕಡ್ಡಾಯವಾಗಿ ಮನೆ ಮನೆಗೆ ಹೋಗಿ ಫಾರಂ ನೀಡಬೇಕು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಖಡಕ್ ಸೂಚನೆ

ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಈ ವ್ಯವಸ್ಥಿತ ಪಿತೂರಿಯ ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಲ್ಹಾದ್​​ ಜೋಶಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:22 pm, Fri, 3 July 26

Source link

Karnataka Weather Forecast: ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್​​ ಅಲರ್ಟ್​; ಜುಲೈ 5ರ ವರೆಗೂ ಭಾರಿ ವರ್ಷಧಾರೆ – Kannada News | Karnataka Weather Forecast: Orange Alert Issued for Coastal and South Interior Districts; Heavy Rain Till July 5

ಬೆಂಗಳೂರು, ಜುಲೈ 03: ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಕೆಲ ದಿನಗಳ ಕಾಲ ವರುಣಾರ್ಭಟ ಮುಂದುವರಿಯಲಿದ್ದು ಭಾರಿ ಮಳೆ ನಿರೀಕ್ಷಿಸಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಜುಲೈ 5ರ ವರೆಗೆ ಆರೆಂಜ್​​ ಅಲರ್ಟ್​​ ಘೊಷಿಸಲಾಗಿದ್ದರೆ, ಉತ್ತರ ಒಳನಾಡು ಭಾಗದ ಹಲವೆಡೆ ಜುಲೈ 7ರ ವರೆಗೆ ವರ್ಷಧಾರೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಜೊತೆಗೆ ತೀವ್ರ ಗಾಳಿಯ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.

ನಾಳೆ ಎಲ್ಲೆಲ್ಲಿ ಮಳೆ?

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ಭಾರಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಸನ ಸೇರಿ ಬಳ್ಳಾರಿಯ ಕೆಲವೆಡೆ ಸಾಧಾರಾಣ ಮಳೆ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರಗಳಲ್ಲಿಯೂ ವರುಣನ ಆಗಮನದ ಬಗ್ಗೆ ಇಲಾಖೆ ಅಂದಾಜಿಸಿದೆ. ಉತ್ತರ ಒಳನಾಡಿನ ಹಲವೆಡೆಯೂ ಗಾಳಿ ಮಳೆಯ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ರೈತರಿಗೆ ಬ್ಯಾಡ್ ನ್ಯೂಸ್; ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಕೆ ಸ್ಥಗಿತ

ಬೆಂಗಳೂರಿನಲ್ಲಿ ಹವಾಮಾನ ಹೇಗಿರಲಿದೆ?

ನಾಳೆ ಬೆಂಗಳೂರಿನಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ದಿನವಿಡೀ ಬಲವಾದ ಗಾಳಿ ಬೀಸಲಿದ್ದು, ಕೆಲವೆಡೆ ಗಾಳಿಯ ವೇಗವು ಗಂಟೆಗೆ 56 ಕಿ.ಮೀ.ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. ನಗರದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್​​ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:58 pm, Fri, 3 July 26

Source link

ಭಾರತದ ಬಗ್ಗೆ ನೆಗಟಿವ್ ಆಗಿ ಹೇಳಿದರಾ ಇಂದ್ರಾ ನೂಯಿ; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಪೆಪ್ಸಿಕೋ ಮಾಜಿ ಸಿಇಒ – Kannada News | Former PepsiCo CEO Indra Nooyi trolled for her statements on situations in India

ನವದೆಹಲಿ, ಜುಲೈ 3: ಪೆಪ್ಸಿಕೋದ ಮಾಜಿ ಅಧ್ಯಕ್ಷೆ ಮತ್ತು ಸಿಇಒ ಇಂದ್ರಾ ನೂಯಿ (Indra Nooyi) ಅವರು ಇತ್ತೀಚೆಗೆ ನೀಡಿರುವ ಕೆಲ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಭಾರತ ಅಸ್ತವ್ಯಸ್ತ ದೇಶ ಎಂದು ಅವರು ಹೇಳಿದ್ದು ಮೊನ್ನೆ ಭಾರೀ ಟೀಕೆಗೆ ಕಾರಣವಾಗಿತ್ತು. ಇದೀಗ ಅವರ ಮತ್ತೊಂದು ಹೇಳಿಕೆ ನೆಟ್ಟಿಗರ ಗಮನಕ್ಕೆ ಬಂದಿದೆ. ಅಮೆರಿಕದಂತಹ ದೇಶದಲ್ಲಿ ಮಾತ್ರ ತಾನು ಸಿಇಒ ಆಗಲು ಸಾಧ್ಯವಿತ್ತು, ಭಾರತ ಸೇರಿದಂತೆ ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇದು ಅಸಾಧ್ಯವಾಗಿತ್ತು ಎಂಬ ಅವರ ವಾದಕ್ಕೆ ಹಲವರು ತಗಾದೆ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಅರ್ಹತೆಗೆ ಬೆಲೆ: ಇಂದ್ರಾ ನೂಯಿ

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಹಾಗು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿಯಾದ ಕಾಂಡೋಲಿಜಾ ರೈಸ್ (Condoleeza Rice) ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಾ ಇಂದ್ರಾ ನೂಯಿ ಅವರು ತಮ್ಮ ಸಾಧನೆ ಮೆಟ್ಟಿಲುಗಳನ್ನು ಮೆಲುಕು ಹಾಕಿದರು. ಈ ವೇಳೆ, ಅಮೆರಿಕದ ವ್ಯವಸ್ಥೆಯ ಬಗ್ಗೆ ಬಹಳಷ್ಟು ಪ್ರಶಂಸೆ ವ್ಯಕ್ತಪಡಿಸಿದರು. ಭಾರತದ ಕೆಲ ನೂನ್ಯತೆಗಳನ್ನೂ ಎತ್ತಿತೋರಿಸುವ ಪ್ರಯತ್ನ ಮಾಡಿದ್ದಾರೆ.

“ಅಮೆರಿಕಾದಲ್ಲಿ ಮಾತ್ರ ಅರ್ಹತೆಗೆ (meritocracy) ಹೆಚ್ಚಿನ ಬೆಲೆ ಇದೆ. ಇಲ್ಲಿ ಮೆಂಟರ್‌ಗಳು ನೀವು ಪುರುಷರೇ ಅಥವಾ ಮಹಿಳೆಯರೇ ಎಂದು ನೋಡುವುದಿಲ್ಲ, ಬದಲಾಗಿ ಅತ್ಯುತ್ತಮ ಪ್ರತಿಭೆಗೆ ಮನ್ನಣೆ ನೀಡುತ್ತಾರೆ. ನಾನು ಅಮೆರಿಕಕ್ಕೆ ಬಂದು ಶೂನ್ಯದಿಂದ ಆರಂಭಿಸಿ, ಒಂದು ಪ್ರತಿಷ್ಠಿತ ಕಂಪನಿಯ ಸಿಇಒ ಆಗಲು ಸಾಧ್ಯವಾಯಿತು. ಆದರೆ ಭಾರತ ಸೇರಿದಂತೆ ಪ್ರಪಂಚದ ಬೇರೆ ಯಾವುದೇ ದೇಶದಲ್ಲಿ ಇದು ಸಾಧ್ಯವಿರಲಿಲ್ಲ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?

ಭಾರತ ಒಂದು ಅಸ್ತವ್ಯಸ್ತ ದೇಶ: ನೂಯಿ

ಇದೇ ವೇಳೆ ನೂಯಿ ಭಾರತ ಮತ್ತು ಚೀನಾವನ್ನು ಹೋಲಿಸುತ್ತಾ, ಚೀನಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಆದರೆ ಭಾರತದಲ್ಲಿ ವ್ಯವಸ್ಥೆಯು ಅಸ್ತವ್ಯಸ್ತವಾಗಿದೆ (chaotic) ಎಂದು ಅಭಿಪ್ರಾಯಪಟ್ಟಿದ್ದಾರೆ. “ಚೀನಾ ಒಂದು ರೀತಿಯಲ್ಲಿ ಸಂಘಟಿತವಾಗಿದೆ, ಆದರೆ ಭಾರತವು ಅಸ್ತವ್ಯಸ್ತವಾಗಿದೆ. ಈ ಅಸ್ತವ್ಯಸ್ತತೆಯೇ ಭಾರತದ ಸೌಂದರ್ಯ, ಆದರೆ ಅಚ್ಚುಕಟ್ಟಾದ ಜೀವನ ಇಷ್ಟಪಡುವವರಿಗೆ ಭಾರತದಲ್ಲಿ ಕೆಲಸ ಮಾಡುವುದು ಕಷ್ಟ,” ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿರೋಧದ ಅಲೆ

ಕಾಂಡೊಲೀನಾ ರೈಸ್ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನೂಯಿ ಅವರು ವ್ಯಕ್ತಪಡಿಸಿದ ಕೆಲ ಅಭಿಪ್ರಾಯಗಳನ್ನು ಅನೇಕರು ಒಪ್ಪುತ್ತಿಲ್ಲ. ಭಾರತದಲ್ಲಿ ತಾನು ಸಿಇಒ ಆಗಲು ಸಾಧ್ಯವಿಲ್ಲ ಎನ್ನುವ ಹೇಳಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು ಭಾರತದ ಮಹಿಳಾ ಸಾಧಕರನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ.

ಕಿರಣ್ ಮಜುಂದಾರ್ ಶಾ (ಬಯೋಕಾನ್), ಫಲ್ಗುಣಿ ನಾಯರ್ (ನೈಕಾ), ಚಂದಾ ಕೊಚ್ಚರ್ (ಐಸಿಐಸಿಐ), ವಿಭಾ ಪಾದಲ್ಕರ್ (ಎಚ್‌ಡಿಎಫ್‌ಸಿ ಲೈಫ್ ಇನ್ಷೂರೆನ್ಸ್), ಪ್ರಿಯಾ ನಾಯರ್ (ಹಿಂದೂಸ್ತಾನ್ ಯುನಿಲಿವರ್), ದೀಪಾಲಿ ಗೋಯಂಕಾ (ವೆಲ್​ಸ್ಪನ್ ಇಂಡಿಯಾ), ರಾಧಿಕಾ ಗುಪ್ತಾ (ಎಡೆಲ್​ವೇಸ್ ಮ್ಯೂಚುವಲ್ ಫಂಡ್), ಪ್ರಭಾ ನರಸಿಂಹನ್ (ಕೋಲ್ಗೇಟ್ ಪಾಮೊಲಿವ್ ಇಂಡಿಯಾ) ಮುಂತಾದವರ ಹೆಸರನ್ನು ಒಬ್ಬರು ಎತ್ತಿ ತೋರಿಸುತ್ತಾ, ಭಾರತದಲ್ಲೂ ಮಹಿಳೆಯರಿಗೆ ಉನ್ನತ ಹುದ್ದೆಗೇರಲು ಅವಕಾಶವಿರುವುದನ್ನು ತೋರಿಸಿದ್ದಾರೆ.

ಇದನ್ನೂ ಓದಿ: ಮೆಷೀನ್​ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು

ಅಮೆರಿಕದ ವ್ಯವಸ್ಥೆಯನ್ನು ನೂಯಿ ಹೊಗಳಿದ್ದರೂ, ಭಾರತದ ಇಂದಿನ ಕಾರ್ಪೊರೇಟ್ ವಲಯದಲ್ಲಿ ನಡೆದಿರುವ ಬದಲಾವಣೆಗಳನ್ನು ಮತ್ತು ಮಹಿಳಾ ಸಾಧಕರನ್ನು ಅವರು ಗಮನಿಸಿಲ್ಲ ಎಂಬುದು ನೆಟ್ಟಿಗರ ಮುಖ್ಯ ವಾದವಾಗಿದೆ.

ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳೆಯರಿಗೆ ಮುಕ್ತ ಅವಕಾಶ ಇದೆಯಾ?

ಮಹಿಳಾ ಸ್ವಾತಂತ್ರ್ಯ ವಿಚಾರದಲ್ಲಿ ಅಮೆರಿಕಕ್ಕಿಂತ ಭಾರತವೇ ಎಷ್ಟೋ ವಾಸಿ ಎಂದು ಕೆಲವರು ವಾದಿಸಿದ್ದಾರೆ. ಅಮೆರಿಕ ಸ್ವಾತಂತ್ರ್ಯ ಪಡೆದು ಶತಮಾನಗಳ ಬಳಿಕ ಮಹಿಳೆಯರಿಗೆ ಮತದಾನ ಹಕ್ಕು ಸಿಕ್ಕಿತು. ಭಾರತದಲ್ಲಿ ಸ್ವಾತಂತ್ರ್ಯ ಬರುತ್ತಲೇ ಆ ಹಕ್ಕು ಕೊಡಲಾಗಿತ್ತು. ಅಮೆರಿಕದ ಕಾರ್ಪೊರೇಟ್ ಕಂಪನಿಗಳಲ್ಲಿ ಅತ್ಯುಚ್ಚ ಹುದ್ದೆ ಪಡೆದ ಮಹಿಳೆಯರು ಶೇ. 10ಕ್ಕಿಂತಲೂ ಕಡಿಮೆ ಎನ್ನುವ ಸಂಗತಿಯನ್ನೂ ಕೆಲವರು ಎತ್ತಿತೋರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Love Seasons Review: ಹೊಸ ಕಲಾವಿದರ ‘ಲವ್ ಸೀಸನ್ಸ್’ ಸಿನಿಮಾದಲ್ಲಿ ನಿಜವಾದ ಪ್ರೀತಿಯ ಹುಡುಕಾಟ – Kannada News | Love Seasons Review Mukunda Ramaswami starrer new Kannada movie with 3 love story

ಲವ್ ಸೀಸನ್ಸ್

UA

  • Time – 146 Minutes
  • Released – July 03, 2026
  • Language – Kannada
  • Genre – Drama, Romantic

Cast – ಮುಕುಂದ ರಾಮಸ್ವಾಮಿ, ದಿವ್ಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೋಗ್ಲೂರು, ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಮುಂತಾದವರು.

Director – ಕೃತ್ವಿಕ್ ಶೆಟ್ಟಿ

ಒಂದಷ್ಟು ಹೊಸ ಕಲಾವಿದರು ಸೇರಿಕೊಂಡು ‘ಲವ್ ಸೀಸನ್ಸ್’ (Love Seasons) ಸಿನಿಮಾ ಮಾಡಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರವೀಗ ಬಿಡುಗಡೆ ಆಗಿದೆ. ಮುಕುಂದ ರಾಮಸ್ವಾಮಿ ಅವರು ಹೀರೋ ಆಗಿ ಅಭಿನಯಿಸಿರುವ ಈ ಚಿತ್ರಕ್ಕೆ ಕೃತ್ವಿಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಮಂಜುನಾಥ ನೀಲೇರಿ ಅವರು ಬಂಡವಾಳ ಹೂಡಿದ್ದಾರೆ. ಅಪ್ಪಟ ಪ್ರೇಮಕಥೆ ಇರುವ ‘ಲವ್ ಸೀಸನ್ಸ್’ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ (Love Seasons Movie Review) ಓದಿ..

ಕಥಾನಾಯಕನಿಗೆ ಜೀವನದ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಹುಡುಗಿಯರ ಮೇಲೆ ಲವ್ ಆಗುವ ಕಥೆಗಳು ಪ್ರೇಕ್ಷಕರಿಗೆ ಹೊಸದೇನೂ ಅಲ್ಲ. ‘ಮೈ ಆಟೋಗ್ರಾಫ್’, ‘ಲವ್ ಮಾಕ್ಟೇಲ್’ ಮುಂತಾದ ಸಿನಿಮಾಗಳಲ್ಲಿ ಪ್ರೇಕ್ಷಕರು ಆ ರೀತಿಯ ಕಹಾನಿಗಳನ್ನು ನೋಡಿದ್ದಾರೆ. ‘ಲವ್ ಸೀಸನ್ಸ್’ ಸಿನಿಮಾದಲ್ಲಿ ಕೂಡ ಅಂಥದ್ದೇ ಒಂದು ಕಥೆ ಇದೆ. ಆದರೂ ಕೂಡ ಈ ಸಿನಿಮಾ ಡಿಫರೆಂಟ್ ಆಗಿದೆ.

‘ಲವ್ ಸೀಸನ್ಸ್’ ಕಥಾನಾಯಕ ರಾಮ್ (ಮುಕುಂದ ರಾಮಸ್ವಾಮಿ) ಹೈಸ್ಕೂಲ್ ಓದುವಾಗಲೇ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಡಿಗ್ರಿ ಓದುವಾಗ ಮತ್ತೊಬ್ಬಳ ಜೊತೆ ಪ್ರೀತಿ ಚಿಗುರುತ್ತದೆ. ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡುವ ವೇಳೆ ಆತನ ಜೀವನಕ್ಕೆ ಇನ್ನೊಬ್ಬಳ ಪ್ರವೇಶ ಆಗುತ್ತದೆ. ಈ ಮೂರೂ ಪ್ರೀತಿಯಿಂದ ರಾಮ್ ಬದುಕಿನಲ್ಲಿ ಹಲವು ಬದಲಾವಣೆಗಳು ಆಗುತ್ತವೆ.

ಅಂತಿಮವಾಗಿ ರಾಮ್ ಕೈ ಹಿಡಿಯುವ ಹುಡುಗಿ ಯಾರು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ‘ಲವ್ ಸೀಸನ್ಸ್’ ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಬರುವ ಪ್ರೇಮಕಥೆಗಳು ಚಳಿಗಾಲ, ಮಳೆಗಾಲ, ಬೇಸಿಗೆ ಕಾಲದ ರೀತಿ ಭಿನ್ನವಾಗಿವೆ. ಆ ಎಲ್ಲ ಕಾಲಕ್ಕೂ ರಾಮ್ ಮೈವೊಡ್ಡಿ ನಿಲ್ಲುತ್ತಾನೆ. ನಂಬಿಕೆ, ಮೋಸ, ಕರ್ಮ ಇತ್ಯಾದಿ ಅಂಶಗಳು ಕೂಡ ಈ ಕಥೆಯಲ್ಲಿ ಬೆರೆತಿವೆ.

ಈ ಚಿತ್ರಕ್ಕಾಗಿ ಹೊಸ ನಿರ್ದೇಶಕ ಕೃತ್ವಿಕ್ ಅವರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಹೊಸ ಕಲಾವಿದರು ಇರುವುದರಿಂದ ಒಂದು ಫ್ರೆಶ್​ನೆಸ್ ಕಾಣಿಸಿದೆ. ತಾಂತ್ರಿಕವಾಗಿ ಕೂಡ ಈ ಸಿನಿಮಾ ಉತ್ತಮವಾಗಿದೆ. ವೀರ್ ಸಮರ್ಥ್ ಅವರು ಹಾಡುಗಳ ಮೂಲಕ ಸಿನಿಮಾಗೆ ಮೆರುಗು ಹೆಚ್ಚಿಸಿದ್ದಾರೆ. ಸಿಂಪಲ್ ಆಗಿ ಆರಂಭವಾಗುವ ಈ ಸಿನಿಮಾ ಒಂದು ಭಿನ್ನವಾದ ಫೀಲ್ ನೀಡುವುದರೊಂದಿಗೆ ಮುಕ್ತಾಯ ಆಗುತ್ತದೆ.

ಒಂದಷ್ಟು ಅಂಶಗಳನ್ನು ಇನ್ನಷ್ಟು ಉತ್ತಮಗೊಳಿಸುವ ಕಡೆಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ‘ಲವ್ ಸೀಸನ್ಸ್’ ಸಿನಿಮಾದಲ್ಲಿ ಕಾಮಿಡಿ ದೃಶ್ಯಗಳಿವೆ. ಆದರೆ ಪ್ರೇಕ್ಷಕರನ್ನು ನಗಿಸುವಲ್ಲಿ ಅಷ್ಟೇನೂ ಯಶಸ್ವಿ ಆಗಿಲ್ಲ. ಚೇತನ್ ದುರ್ಗ, ಹುಲಿ ಕಾರ್ತಿಕ್, ಸದಾನಂದ ಮುಂತಾದ ನಟರು ಇದ್ದರೂ ಕೂಡ ಹಾಸ್ಯ ಕ್ಲಿಕ್ ಆಗಿಲ್ಲ. ಹಾಗಾಗಿ ಕಾಮಿಡಿ ದೃಶ್ಯಗಳು ಸಪ್ಪೆ ಎನಿಸಿಕೊಂಡಿವೆ. ಇನ್ನು, ಮೊದಲಾರ್ಧವನ್ನು ಇನ್ನಷ್ಟು ರಂಜನೀಯವಾಗಿ ಕಟ್ಟಿಕೊಡುವ ಅಗತ್ಯವಿತ್ತು ಎನಿಸುತ್ತದೆ. ದ್ವಿತೀಯಾರ್ಧದ ರೀತಿಯೇ ಮೊದಲಾರ್ಧದಲ್ಲಿ ಕೂಡ ಚಿತ್ರಕಥೆ ಬಿಗಿಯಾಗಿ ಇರಬೇಕಿತ್ತು.

ಇದನ್ನೂ ಓದಿ: ಹೊಸಬರ ‘ಲವ್ ಸೀಸನ್ಸ್’ ಸಿನಿಮಾ ತಂಡಕ್ಕೆ ಧೈರ್ಯ ತುಂಬಿದ ಜಯತೀರ್ಥ

ಹೊಸಬರ ಪ್ರಯತ್ನವಾಗಿ ‘ಲವ್ ಸೀಸನ್ಸ್’ ಸಿನಿಮಾ ಗಮನ ಸೆಳೆಯುತ್ತಿದೆ. ಬರೀ ಮನರಂಜನೆ ಮಾತ್ರವಲ್ಲದೇ ಈ ಚಿತ್ರದಲ್ಲಿ ಒಳಿತು-ಕೆಡುಕಿನ ಸಂದೇಶ ಕೂಡ ನೀಡಲಾಗಿದೆ. ನಿಜವಾದ ಪ್ರೀತಿಯ ಅರ್ಥವನ್ನು ಹುಡುಕುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಮುಕುಂದ ರಾಮಸ್ವಾಮಿ, ಚಂದನಾ ಗೌಡ, ದಿವ್ಯಾ ಕೀರ್ತಿ, ಶ್ವೇತಾ ಕೋಗ್ಲೂರು ಮುಂತಾದ ಹೊಸ ಕಲಾವಿದರಿಗೆ ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಅವರಂತಹ ಹಿರಿಯ ಕಲಾವಿದರು ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು – Kannada News | Cow leads owner to the spot where its calf was lying down.

ಮನುಷ್ಯರೇ ಆಗಿರಲಿ, ಪ್ರಾಣಿಗಳೇ ಆಗಿರಲಿ, ತಾಯಿ (mother) ಪ್ರೀತಿ ಯಾವತ್ತೂ ಬದಲಾಗಲ್ಲ. ಮಾತು ಬಾರದ ಪ್ರಾಣಿಗಳು ತನ್ನ ಕಂದಮ್ಮಗಳ ಮೇಲೆ ಇಟ್ಟಿರುವ ಪ್ರೀತಿಯೇ ಹಾಗೆ, ತನ್ನ ಮರಿಗಳನ್ನು ಪ್ರೀತಿಯಿಂದ ಮುದ್ದಿಸುತ್ತವೆ, ಕಾಳಜಿ ವಹಿಸುತ್ತವೆ. ಇದೀಗ ಹಸುವೊಂದು ತನ್ನ ಮಾಲೀಕನಿಗೆ ತನ್ನ ಕರು (calf) ಎಲ್ಲಿ ಮಲಗಿದೆ ಎಂದು ತೋರಿಸಲು ಕರೆದ್ಯೋಯುತ್ತಿರುವ ಮುದ್ದಾದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಮನಸ್ಸು ಗೆದ್ದಿದೆ.

ರವಿ ಚಂದ್ರ (Ravi Chandra) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಹಸುವೊಂದು ತನ್ನ ಕರು ಎಲ್ಲಿ ಮಲಗಿದೆ ಎಂದು ತೋರಿಸಲು ಮಾಲೀಕನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಮನೆಮಾಲೀಕನು ಈ ಹಸು ಕೆಲವು ದಿನಗಳ ಹಿಂದೆಯಷ್ಟೇ ಕರು ಹಾಕಿದೆ. ಮೇಯುತ್ತಾ ಬೇರೆ ಹಸುಗಳ ಜತೆಗೆ ಬಂದು ಬಿಟ್ಟಿದೆ. ಈಗ ನನ್ನನ್ನು ಕರು ಎಲ್ಲಿ ಮಲಗಿದೆ ತೋರಿಸಲು ನನ್ನ ಕರ್ಕೊಂಡು ಹೋಗುತ್ತಿದೆ ಎಂದು ವಿವರಿಸಿರುವುದನ್ನು ಕಾಣಬಹುದು. ಈ ಮಾಲೀಕ ಹಸುವನ್ನೇ ಹಿಂಬಾಲಿಸಿದ್ದು, ಹುಲ್ಲಿನ ದೊಡ್ಡ ಪೊದೆ ಮುಂದೆ ಹೋಗಿ ನಿಂತು ಕೊಂಡಿದೆ. ಹುಲ್ಲಿನ ಪೊದೆಯೊಳಗೆ ಕರು ಮಲಗಿರುವುದನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಹೃದಯಕ್ಕೆ ಹತ್ತಿರವಾಗಿದೆ ಎಂದರೆ, ಮತ್ತೊಬ್ಬರು, ಈ ಮೂಕ ಪ್ರಾಣಿಗಳು ಭಾವನೆಗಳಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತಾಯಿ ಹಸು ತನ್ನ ಕರು ಎಷ್ಟು ಕ್ಷೇಮವಾಗಿದೆ ಎಂದು ತೋರಿಸುತ್ತಿರುವ ದೃಶ್ಯ ನಿಜಕ್ಕೂ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ಸಿಗುವ ಹಣವೆಷ್ಟು? ಭಾರತಕ್ಕೆ ಸಿಕ್ಕಿದ್ದೇಷ್ಟು? – Kannada News | Record Prize Money for 2026 Women’s T20 WC Final: Aus vs Eng Clash at Lord’s

2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಅಂತಿಮ ಹಂತಕ್ಕೆ ಬಂದು ನಿಂತಿದೆ. ಪಂದ್ಯಾವಳಿಯ ಎರಡು ಬಲಿಷ್ಠ ಮತ್ತು ಇಲ್ಲಿಯವರೆಗೆ ಅಜೇಯ ತಂಡಗಳಾಗಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ಟ್ರೋಫಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆದುಕೊಂಡರೆ, ಇತ್ತ ಎರಡನೇ ಸೆಮಿಫೈನಲ್‌ನಲ್ಲಿ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಉಭಯ ತಂಡಗಳ ನಡುವಿನ ಈ ಐತಿಹಾಸಿಕ ಫೈನಲ್ ಪಂದ್ಯವು ಜುಲೈ 5 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಮೇಲೆ ಭಾರಿ ಹಣದ ಮಳೆಯೂ ಹರಿಯಲಿದೆ. ಹಾಗೆ ಸೋತ ತಂಡಕ್ಕೂ ದೊಡ್ಡ ಮೊತ್ತದ ಬಹುಮಾನ ಸಿಗಲಿದೆ.

ಚಾಂಪಿಯನ್ ತಂಡಕ್ಕೆ ಸಿಗುವುದೆಷ್ಟು?

ಮಹಿಳಾ ಕ್ರಿಕೆಟ್ ಅನ್ನು ಮತ್ತಷ್ಟು ಉತ್ತೇಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ವರ್ಷ ಬಹುಮಾನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಒಟ್ಟು ಬಹುಮಾನದ ಹಣವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಯುಎಇಯಲ್ಲಿ ನಡೆದ ಕಳೆದ ಮಹಿಳಾ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 74 ಕೋಟಿ ರೂ.ಗಳಾಗಿತ್ತು. ಇದೀಗ ಈ ಅವೃತ್ತಿಗೆ ಬಹುಮಾನದ ಮೊತ್ತವನ್ನು 82 ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಅದರಂತೆ ಈ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ 12 ತಂಡಗಳು ಕನಿಷ್ಠ 2.06 ಕೋಟಿ ರೂಪಾಯಿಗಳ ಖಚಿತ ಬಹುಮಾನ ಹಣವನ್ನು ಪಡೆಯುತ್ತವೆ. ಉಳಿದಂತೆ ಚಾಂಪಿಯನ್ ಹಾಗೂ ರನ್ನರ್​ಅಪ್ ತಂಡಕ್ಕೆ ಎಷ್ಟು ಸಿಗಲಿದೆ. ಹಾಗೆಯೇ ಲೀಗ್ ಹಂತದಲ್ಲೇ ಹೊರಬಿದ್ದ ಟೀಂ ಇಂಡಿಯಾಕ್ಕೆ ಎಷ್ಟು ಹಣ ಸಿಗಲಿದೆ ಎಂಬುದನ್ನ ನೋಡುವುದಾದರೆ..

  • ವಿಜೇತ ತಂಡಕ್ಕೆ ಸುಮಾರು 22 ಕೋಟಿ ರೂ. ಬಹುಮಾನ ಸಿಗಲಿದೆ.
  • ರನ್ನರ್ ಅಪ್ ತಂಡಕ್ಕೆ ಸುಮಾರು 11 ಕೋಟಿ ರೂ. ಬಹುಮಾನ ಸಿಗಲಿದೆ.
  • ಸೆಮಿಫೈನಲ್ ಆಡಿದ ತಂಡಗಳಿಗೆ ತಲಾ 6.29 ಕೋಟಿ ರೂ. ಬಹುಮಾನ ಸಿಗಲಿದೆ.
  • ಉಳಿದಂತೆ ಗುಂಪು ಹಂತದಲ್ಲಿ ಗೆದ್ದ ಪ್ರತಿ ಪಂದ್ಯಗಳಿಗೆ 29 ಲಕ್ಷ ರೂ.ಬಹುಮಾನ ಸಿಗಲಿದೆ.
  • ಅದರಂತೆ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಗೆದ್ದ ಭಾರತ ತಂಡಕ್ಕೆ ಸುಮಾರು 90 ಲಕ್ಷ ರೂ. ಬಹುಮಾನ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Fri, 3 July 26

Source link

ಎಲ್ಲರೂ ಧರ್ಮದಲ್ಲಿ ಇರಬೇಕು, ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು: ಡಿಕೆಶಿ – Kannada News | I am still preserving my righteousness and doing my work righteously Says DK Shivakumar

ರಾಮನಗರ, (ಜುಲೈ 03): ಎಲ್ಲರೂ ಧರ್ಮದಲ್ಲಿ ಇರಬೇಕು. ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು. ಶಿವಾಲ ಮೂರ್ತಿ ಬೆಟ್ಟದಲ್ಲಿ ನನ್ನ ತಂದೆ-ತಾಯಿ ಹರೆಕೆ ಹೊತ್ತಿದ್ದರು. ಬಳಿಕ ನಾನು ಹುಟ್ಟಿದವನು. ಹೀಗಾಗಿ ನಾನು ನನ್ನ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ ಶ್ರೀ ಶ್ರೀ ಶ್ರೀ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸಿ, ತ್ರಿವಿಧ ದಾಸೋಹಿ ಮಹಾಸ್ವಾಮಿಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ, ನಾನು ಈ ಮಠಕ್ಕೆ ಭಕ್ತನಾಗಿ ಬಂದಿದ್ದೇನೆ. ನಮ್ಮ ಮನೆಯಲ್ಲಿ ಯಾರೇ ಹುಟ್ಟಿದರು ಕೆಂಪೇಗೌಡ ಎಂದು ಹೆಸರಿಡುವ ಪ್ರತೀತಿ. ನಮ್ಮ ತಾಯಿ ಶಿವನಲ್ಲಿ ಬೇಡಿಕೊಂಡಿದ್ದರು. ಅದಕ್ಕಾಗಿ ನನ್ನ ಹೆಸರು ಶಿವಕುಮಾರ್ ಆಗಿದೆ. ನಮ್ಮ ಮನೆಯಲ್ಲಿ ಎಲ್ಲರೂ ದೇಗುಲ ಮಠದ ಭಕ್ತರು. ನಾನು ಈಗಲೂ ಧರ್ಮ ಉಳಿಸಿಕೊಂಡು ಧರ್ಮದಿಂದ ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Indian Railways Jobs 2026: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗವಕಾಶ; 4,098 ಹುದ್ದೆಗಳ ಭರ್ತಿಗೆ ಮಂಡಳಿ ಅಸ್ತು! – Kannada News | Indian Railways Jobs 2026: Apply for 4098 JE, DMS, CMA Vacancies, ALP CBT 2 Dates

ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗವಕಾಶImage Credit source: Getty Images

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ರೈಲ್ವೆ ಮಂಡಳಿಯು ದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಜೂನಿಯರ್ ಇಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಮತ್ತು ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಸೇರಿದಂತೆ ಒಟ್ಟು 4,098 ಹುದ್ದೆಗಳ ಭರ್ತಿಗೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಈ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗುವ ಸಾಧ್ಯತೆಯಿದ್ದು, ರೈಲ್ವೆ ನೇಮಕಾತಿ ಮಂಡಳಿಯು (RRB) ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯನ್ನು (Notification) ಬಿಡುಗಡೆ ಮಾಡಲಿದೆ. ಆ ಬಳಿಕ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಯಾವೆಲ್ಲಾ ಹುದ್ದೆಗಳು ಲಭ್ಯವಿವೆ?

ಈ ನೇಮಕಾತಿಯಲ್ಲಿ ಅತ್ಯಂತ ಹೆಚ್ಚು ಹುದ್ದೆಗಳನ್ನು ಜೂನಿಯರ್ ಇಂಜಿನಿಯರ್ (PWI) ವಿಭಾಗಕ್ಕಾಗಿ ಕಾಯ್ದಿರಿಸಲಾಗಿದೆ. ಇದನ್ನು ಹೊರತುಪಡಿಸಿ ಕೆಳಗಿನ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ:

  • ಜೂನಿಯರ್ ಇಂಜಿನಿಯರ್ (ವರ್ಕ್ಸ್)
  • ಕ್ಯಾರೇಜ್ ಮತ್ತು ವ್ಯಾಗನ್
  • ವರ್ಕ್‌ಶಾಪ್ ಮೆಕ್ಯಾನಿಕಲ್
  • ಟ್ರ್ಯಾಕ್ ಮೆಷಿನ್, ಬ್ರಿಡ್ಜ್
  • ಟಿಆರ್‌ಎಸ್ (TRS) ಮತ್ತು ಟಿಆರ್‌ಡಿ (TRD)
  • ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS)
  • ಕೆಮಿಕಲ್ ಅಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA)

ವೇತನ ಶ್ರೇಣಿ:

ಈ ಎಲ್ಲಾ ಹುದ್ದೆಗಳು ಪೇ ಲೆವೆಲ್-6 (Pay Level-6) ಅಡಿಯಲ್ಲಿ ಬರಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ ಮತ್ತು ಇತರ ಸರ್ಕಾರಿ ಸೌಲಭ್ಯಗಳು ಸಿಗಲಿವೆ.

ಇದನ್ನೂ ಓದಿ: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ಶೈಕ್ಷಣಿಕ ಅರ್ಹತೆ ಮತ್ತು ಇಲಾಖೆಗಳು:

ಈ ಭರ್ತಿಯಲ್ಲಿ ಡಿಪ್ಲೊಮಾ (Diploma) ಮತ್ತು ಬಿ.ಟೆಕ್ (B.Tech) ಪದವಿ ಹೊಂದಿರುವ ಇಬ್ಬರೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಲೆಕ್ಟ್ರಿಕಲ್, ಸಿವಿಲ್, ಮೆಕ್ಯಾನಿಕಲ್ ಮತ್ತು ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಶನ್ (S&T) ನಂತಹ ಪ್ರಮುಖ ತಾಂತ್ರಿಕ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಇದರೊಂದಿಗೆ ಡಿಸೈನ್ ಅಂಡ್ ಡ್ರಾಯಿಂಗ್, ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಹಾಗೂ ಡೀಸೆಲ್ ಶೆಡ್‌ಗಳಲ್ಲೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಪ್ರಮುಖ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿ ಪ್ರಕಟ:

ಖಾಲಿ ಹುದ್ದೆಗಳ ಅನುಮೋದನೆಯ ಜೊತೆಗೆ, ರೈಲ್ವೆ ಮಂಡಳಿಯು ಎಎಲ್‌ಪಿ ಸಿಬಿಟಿ-2 (ALP CBT-2) ಮತ್ತು ಐಸೊಲೇಟೆಡ್ ಕ್ಯಾಟಗರಿ ಪರೀಕ್ಷೆಗಳ ಸಂಭಾವ್ಯ ದಿನಾಂಕಗಳನ್ನು ಸಹ ಬಿಡುಗಡೆ ಮಾಡಿದೆ.

ALP CBT-2 ಪರೀಕ್ಷೆ ಜುಲೈ 28 ರಂದು:

ಅಸಿಸ್ಟೆಂಟ್ ಲೋಕೋ ಪೈಲಟ್ (ALP) ನೇಮಕಾತಿಯ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-2) ಜುಲೈ 28 ರಂದು ನಡೆಯುವ ಸಾಧ್ಯತೆಯಿದೆ. ಪರೀಕ್ಷೆಗೆ 10 ದಿನಗಳ ಮೊದಲು ಅಭ್ಯರ್ಥಿಗಳು ತಮ್ಮ ಪರೀಕ್ಷಾ ನಗರ (Exam City) ಮತ್ತು ದಿನಾಂಕವನ್ನು ಪರಿಶೀಲಿಸಬಹುದು. ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳು ಇದೇ ಅವಧಿಯಲ್ಲಿ ಉಚಿತ ಪ್ರಯಾಣದ ಪಾಸ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರಗಳನ್ನು (E-Call Letter) ಪರೀಕ್ಷೆಗೆ 4 ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತದೆ.

 ಐಸೊಲೇಟೆಡ್ ಕ್ಯಾಟಗರಿ ಪರೀಕ್ಷೆ ಜುಲೈ 14 ಮತ್ತು 15:

ಐಸೊಲೇಟೆಡ್ ಕ್ಯಾಟಗರಿಯ ಹುದ್ದೆಗಳಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಜುಲೈ 14 ಮತ್ತು 15 ರಂದು ನಡೆಸಲು ನಿರ್ಧರಿಸಲಾಗಿದೆ. ಇದರ ಪರೀಕ್ಷಾ ನಗರ ಮತ್ತು ಪ್ರವೇಶ ಪತ್ರಗಳ ಮಾಹಿತಿ ನಿಗದಿತ ಸಮಯಕ್ಕೆ ಲಭ್ಯವಾಗಲಿದೆ.

ಪರೀಕ್ಷಾ ಕೇಂದ್ರಕ್ಕೆ ಬಯೋಮೆಟ್ರಿಕ್ ಕಡ್ಡಾಯ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಿದ್ದ ಮೂಲ ಗುರುತಿನ ಚೀಟಿಯನ್ನು (Original Photo ID) ಕಡ್ಡಾಯವಾಗಿ ತರಬೇಕೆಂದು ಆರ್‌ಆರ್‌ಬಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಆಧಾರ್ ಆಧರಿತ ಬಯೋಮೆಟ್ರಿಕ್ ಪರಿಶೀಲನೆ (Aadhaar Biometric Verification) ಕಡ್ಡಾಯವಾಗಿರುತ್ತದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ.

ಅಭ್ಯರ್ಥಿಗಳು ವಯೋಮಿತಿ, ಪರೀಕ್ಷಾ ಮಾದರಿ ಮತ್ತು ಅರ್ಜಿ ಸಲ್ಲಿಸುವ ದಿನಾಂಕಗಳ ಸಂಪೂರ್ಣ ವಿವರಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ನಿರಂತರವಾಗಿ ಭೇಟಿ ನೀಡುತ್ತಿರಲು ಸೂಚಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version