Video: ದೈಹಿಕ ನ್ಯೂನತೆಯಿದ್ರೂ ಜೀವನಕ್ಕಾಗಿ ಗುಂಡಿ ಅಗೆಯುವ ಕೆಲಸ ನೆಚ್ಚಿಕೊಂಡ ಕೂಲಿ ಕಾರ್ಮಿಕ – Kannada News | A daily wage laborer who works hard, overcoming physical disability.

ದುಡಿದು ತಿನ್ನುವ ಛಲವಿದ್ದರೆ ದೈಹಿಕ ನ್ಯೂನತೆ ಲೆಕ್ಕಕ್ಕೆ ಬರಲ್ಲ. ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಯೊಬ್ಬ ಇಂದಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾನೆ. ವೈರಲ್ ವಿಡಿಯೋದಲ್ಲಿ ದೈಹಿಕ ನ್ಯೂನತೆ (physical disability) ಮೀರಿ ಶ್ರಮ ವಹಿಸಿ ದುಡಿಯುತ್ತಿದ್ದಾನೆ. ಈ ದೃಶ್ಯವು ಗುಂಡಿಯನ್ನು ಅಗೆಯುತ್ತಿರುವ ಈ ಕೂಲಿ ಕಾರ್ಮಿಕನ ಶ್ರಮವನ್ನು ಎತ್ತಿ ತೋರಿಸಿದೆ. ಈ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

ಇಂಡಿಯಾ ಬ್ಲಾಕ್ ಬಸ್ಟರ್ (India Blockbuster) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿಕಲಚೇತನ ವ್ಯಕ್ತಿಯೊಬ್ಬ ಆಳವಾದ ಗುಂಡಿಗಳನ್ನು ಅಗೆಯುತ್ತಿರುವುದನ್ನು ಕಾಣಬಹುದು. ಮೂರೊತ್ತಿನ ತುತ್ತಿಗಾಗಿ ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿಯ ಶ್ರಮದ ಕೆಲಸವನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೇವರೇ ಈ ವ್ಯಕ್ತಿ ಆರೋಗ್ಯ ಹಾಗೂ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇನ್ನೊಬ್ಬರು, ನಿಮಗೊಂದು ಸಲಾಂ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆದು ಮಾಡಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ಮಾಡುವ ಬದಲು ಈ ವ್ಯಕ್ತಿಗೆ ಸಹಾಯ ಮಾಡಬಾರದೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳ್ಳಿಯ ಹೆಣ್ಣುಮಗಳ ಸಾಧನೆ: ಲಾರ್ಡ್ಸ್​ ಗೌರವ ಫಲಕದಲ್ಲಿ ಕ್ರಾಂತಿ ಗೌಡ್ ಹೆಸರು! – Kannada News | Kranti Gaud’s fast rise: From small village to Lord’s honours board

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದ ಗೌರವ ಫಲಕದ ಮೇಲೆ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ವೇಗಿಯೊಬ್ಬರ ಹೆಸರು ಚಿನ್ನದ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಕೇವಲ 22 ವರ್ಷದ ಕ್ರಾಂತಿ ಗೌಡ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 37 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬರಿಗಾಲಿನಲ್ಲಿ, ಮರದ ಕೊಂಬೆಯನ್ನೇ ಬ್ಯಾಟ್ ಮಾಡಿಕೊಂಡು ಆಡುತ್ತಿದ್ದ ಹಳ್ಳಿಯ ಹುಡುಗಿ, ಇಂದು ಕ್ರಿಕೆಟ್ ಜಗತ್ತಿನ ಮುಕುಟಪ್ರಾಯ ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೋಮಾಂಚಕ ಕಥೆ ಇಲ್ಲಿದೆ.

ಕ್ರಾಂತಿ ಸೃಷ್ಟಿಸಿದ ಇತಿಹಾಸ:

  • ಮೊದಲ ಮಹಿಳೆ: 142 ವರ್ಷಗಳ ಇತಿಹಾಸವಿರುವ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಐದು ವಿಕೆಟ್ ಸಾಧನೆ ಮಾಡಿ ಗೌರವ ಫಲಕ ಸೇರಿದ ಮೊದಲ ಮಹಿಳಾ ಕ್ರಿಕೆಟರ್ ಕ್ರಾಂತಿ.
  • ಭರ್ಜರಿ ಬೌಲಿಂಗ್: ಕೇವಲ 37 ರನ್ ನೀಡಿ 5 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದು ಕ್ರಾಂತಿ ಗೌಡ್ ಇತಿಹಾಸ ಬರೆದರು.
  • ಹೊಸ ದಾಖಲೆ: ಅತಿ ಕಿರಿಯ ವಯಸ್ಸಿನಲ್ಲಿ (22 ವರ್ಷ) ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದ ಭಾರತದ ಮೊದಲ ಮಹಿಳಾ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
  • ಪಂದ್ಯ ಶ್ರೇಷ್ಠ ಗೌರವ:  ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದು, ಭಾರತಕ್ಕೆ 270 ರನ್‌ಗಳ ಬೃಹತ್ ಗೆಲುವು ತಂದುಕೊಟ್ಟು ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸಣ್ಣ ಹಳ್ಳಿಯಿಂದ ಲಂಡನ್ ಅಂಗಳಕ್ಕೆ!

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ‘ಘುವಾರಾ’ ಎಂಬ ಪುಟ್ಟ ಬುಡಕಟ್ಟು ಹಳ್ಳಿಯಲ್ಲಿ ಕ್ರಾಂತಿ ಜನಿಸಿದರು. 2012ರಲ್ಲಿ ತಂದೆ ಪೊಲೀಸ್ ಕಾನ್‌ಸ್ಟೆಬಲ್ ಕೆಲಸ ಕಳೆದುಕೊಂಡಾಗ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಕ್ರಿಕೆಟ್ ಕಿಟ್ ಕೊಳ್ಳಲು ಹಣವಿಲ್ಲದಿದ್ದಾಗ, ಮಗಳ ಕನಸಿಗಾಗಿ ತಾಯಿ ತನ್ನ ಮೈ ಮೇಲಿದ್ದ ಚಿನ್ನದ ಒಡವೆ ಹಾಗೂ ಬಳೆಗಳನ್ನು ಮಾರಿ ಕ್ರಿಕೆಟ್ ಕಿಟ್ ಕೊಡಿಸಿದರು.

ಆರಂಭದಲ್ಲಿ ಕ್ರಿಕೆಟ್ ಆಡಲು ಬ್ಯಾಟ್ ಇಲ್ಲದೆ, ಮರದ ಕೊಂಬೆಯನ್ನೇ ಬ್ಯಾಟ್ ಮಾಡಿಕೊಂಡು ಹುಡುಗರ ಜೊತೆ ಬರಿಗಾಲಿನಲ್ಲಿ ಕ್ರಾಂತಿ ಕ್ರಿಕೆಟ್ ಆಡುತ್ತಿದ್ದರು.

ಸ್ಥಳೀಯ ಪಂದ್ಯವೊಂದರಲ್ಲಿ ಮೂವರು ಹಿರಿಯ ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡಿದ ಕ್ರಾಂತಿಯ ವೇಗವನ್ನು ಕಂಡು, ಕೋಚ್ ರಾಜೀವ್ ಬಿಲ್ಥಾರೆ ಅವರು ಉಚಿತವಾಗಿ ತರಬೇತಿ ನೀಡಿದರು. ಈ ತರಬೇತಿಯ ಫಲವಾಗಿ ಕ್ರಾಂತಿ ಗೌಡ್​ಗೆ ರಾಜ್ಯ ತಂಡದಲ್ಲಿ ಸ್ಥಾನ ಲಭಿಸಿತು. ಅಲ್ಲಿಂದ ಹಿಂತಿರುಗಿ ನೋಡಿಯೇ ಇಲ್ಲ ಎನ್ನಬಹುದು.

ಟೀಮ್ ಇಂಡಿಯಾಗೆ ಎಂಟ್ರಿ:

ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿನ ದಾಳಿ ಸಂಘಟಿಸಿ ಮಿಂಚಿದ್ದ ಕ್ರಾಂತಿ ಗೌಡ್ ಅವರ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದರು. ಅದರಂತೆ ಟೀಮ್ ಇಂಡಿಯಾಗೂ ಆಯ್ಕೆಯಾದರು.

ಮೇ 2025 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕ್ರಾಂತಿ, ಕೆಲವೇ ತಿಂಗಳುಗಳಲ್ಲಿ ಭಾರತದ ಪ್ರಮುಖ ವೇಗಿಯಾಗಿ ಬೆಳೆದರು.

2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಮೊದಲ ಬಾರಿಗೆ ಜಾಗತಿಕ ಗಮನ ಸೆಳೆದಿದ್ದರು. ಇದಾದ ಬಳಿಕ ಭಾರತ ಟೆಸ್ಟ್ ತಂಡದಲ್ಲೂ ಸ್ಥಾನ ಲಭಿಸಿತು.

ಹಳ್ಳಿಯ ಗಲ್ಲಿ ಕ್ರಿಕೆಟ್‌ನಿಂದ ಆರಂಭವಾದ ಇವರ ಜರ್ನಿ, ಇಂದು ಕ್ರಿಕೆಟ್‌ನ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವಂತೆ ಮಾಡಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಒಟ್ಟಾರೆಯಾಗಿ ಹೇಳುವುದಾದರೆ ಕ್ರಾಂತಿ ಗೌಡ್ ಅವರ ಈ ಅದ್ಭುತ ಯಶೋಗಾಥೆ ಕೇವಲ ಕ್ರಿಕೆಟ್ ಲೋಕದ ಸಾಧನೆಯಲ್ಲ. ಇದು ಬಡತನ, ಕಷ್ಟಗಳನ್ನು ಮೆಟ್ಟಿ ನಿಂತು ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ.

Source link

‘ರಿಚರ್ಡ್ ಆ್ಯಂಟನಿ ನ್ಯೂಕ್ಲಿಯರ್ ಬಾಂಬ್ ತರ ಬರುತ್ತೆ’; ಬಿಗ್ ಅಪ್​​ಡೇಟ್ ಕೊಟ್ಟ ಅಜನೀಶ್ ಲೋಕನಾಥ್ – Kannada News | Richard Antony Will Blast Like a Nuclear Bomb: Ajaneesh Loknath Big Update on Rakshit Shetty Movie

ಸ್ಯಾಂಡಲ್‌ವುಡ್‌ನ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಿಗ್ ಬಜೆಟ್ ಸಿನಿಮಾ ‘ರಿಚರ್ಡ್​ ಆ್ಯಂಟನಿ’ ಮೇಲೆ ಇಡೀ ಕರುನಾಡಿಗೆ ಭಾರಿ ನಿರೀಕ್ಷೆಯಿದೆ. ಚಿತ್ರ ಘೋಷಣೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ಯಾವುದೇ ಪ್ರಮುಖ ಅಪ್​​ಡೇಟ್ ಸಿಗದೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಚಿತ್ರದ ಸಂಗೀತ ನಿರ್ದೇಶಕರಾದ ಬಿ. ಅಜನೀಶ್ ಲೋಕನಾಥ್ (Ajaneesh Lokanath) ‘ರಿಚರ್ಡ್ ಆ್ಯಂಟನಿ’ ಬಗ್ಗೆ ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ.

ಎಲ್ಲರೂ ರೆಡಿ ಇದ್ದೀವಿ, ಶೂಟಿಂಗ್ ಆರಂಭವಾಗಬೇಕಿದೆ

ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಮೇಲೆ ಮಾತನಾಡಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಚಿತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಅತ್ಯಂತ ಉತ್ಸಾಹದಿಂದ ಉತ್ತರಿಸಿದ ಅವರು ಚಿತ್ರದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡರು. ‘ರಿಚರ್ಡ್ ಆ್ಯಂಟನಿ ಚಿತ್ರಕ್ಕೆ ನಾನು ರೆಡಿಯಾಗಿದ್ದೀನಿ, ರಕ್ಷಿತ್ ಶೆಟ್ಟಿ ಅವರು ಕೂಡ ರೆಡಿಯಾಗಿದ್ದಾರೆ. ಅಭಿಮಾನಿಗಳೂ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರೂ ಸಜ್ಜಾಗಿದ್ದಾರೆ. ಈಗ ಕೇವಲ ಶೂಟಿಂಗ್ ಆರಂಭವಾಗುವುದು ಒಂದೇ ಬಾಕಿ ಉಳಿದಿದೆ’ ಎಂದು ಅಜನೀಶ್ ಲೋಕನಾಥ್ ತಿಳಿಸಿದರು.

ಇದನ್ನೂ ಓದಿ: ‘ಕಾಂತಾರ’ ಹಾಡಿನ ಟ್ಯೂನ್ ಕದ್ದಿದ್ದು ಎಂದವರಿಗೆ ಉತ್ತರ ಕೊಟ್ಟ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್

‘ನ್ಯೂಕ್ಲಿಯರ್ ಬಾಂಬ್’ ನಂತೆ ಬರಲಿದ್ದಾನೆ ರಿಚ್ಚಿ

ಚಿತ್ರದ ಔಟ್‌ಪುಟ್ ಹಾಗೂ ಕಥೆಯ ಮೇಲಿರುವ ಭರವಸೆಯ ಬಗ್ಗೆ ಮಾತನಾಡುತ್ತಾ, ‘ನನಗೆ ಒಂದು ವಿಷಯದಲ್ಲಿ ಭಾರಿ ನಂಬಿಕೆಯಿದೆ. ರಿಚರ್ಡ್ ಆ್ಯಂಟನಿ ಸಿನಿಮಾ ತೆರೆಗೆ ಬಂದಾಗ ಅದು ಕೇವಲ ಸಿನಿಮಾವಾಗಿರದೆ ಒಂದು ನ್ಯೂಕ್ಲಿಯರ್ ಬಾಂಬ್ ತರಹ ಧೂಳೆಬ್ಬಿಸಲಿದೆ. ಅಂತಹ ಒಂದು ದೊಡ್ಡ ಬ್ಯಾಂಗ್ ಹಾಗೂ ಅದ್ಭುತ ಕಲ್ಪನೆಯೊಂದಿಗೆ ರಕ್ಷಿತ್ ಶೆಟ್ಟಿ ಅವರು ಬರಲಿದ್ದಾರೆ’ ಎಂದು ಅಜನೀಶ್ ಹೇಳಿದರು.

ಚಿತ್ರದ ಪ್ರತಿಯೊಬ್ಬ ತಂತ್ರಜ್ಞರು ‘ರಿಚರ್ಡ್​ ಆ್ಯಂಟನಿ’ ಸಿನಿಮಾಗಾಗಿ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದು, ಆ ಕ್ಷಣಕ್ಕಾಗಿ ತಾವು ಕೂಡ ಕೌಂಟ್‌ಡೌನ್ ಆರಂಭಿಸಿರುವುದಾಗಿ ಅವರು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಅತ್ಯಂತ ಯಶಸ್ವಿ ಚಿತ್ರ ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರಿದ ಭಾಗವಾಗಿ ಈ ‘ರಿಚರ್ಡ್ ಆ್ಯಂಟನಿ’ ಮೂಡಿಬರಲಿದೆ.’ರಿಚ್ಚಿ’ ಎಂಬ ಐಕಾನಿಕ್ ಪಾತ್ರದ ಮೇಲೆ ಕಥೆ ಸಾಗಲಿದೆ. ಅಜನೀಶ್ ಅವರ ಈ ಮಾತುಗಳು ಸದ್ಯ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Abbi Falls: ನೀರಿಗಿಳಿಯದಂತೆ ಸೂಚನಾ ಫಲಕ ಇದ್ದರೂ ಡೋಂಟ್ ಕೇರ್, ಅಬ್ಬಿ ಫಾಲ್ಸ್​ನಲ್ಲಿ ಪ್ರವಾಸಿಗರ ಹುಚ್ಚಾಟ – Kannada News | Reels Craze at Abbi Falls: Tourists Risk Lives in Sakleshpur Despite Official Ban

ಹಾಸನ, ಜುಲೈ 14: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಅಬ್ಬಿ ಜಲಪಾತ ತುಂಬಿ ಹರಿಯುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯ ಆತಂಕಕ್ಕೆ ಕಾರಣವಾಗಿದೆ. ಸಕಲೇಶಪುರ ತಾಲ್ಲೂಕಿನ ಹಾನ್‌ಬಾಳ್‌ ಬಳಿಯ ಅಬ್ಬಿ ಜಲಪಾತದಲ್ಲಿ ನೀರಿಗಿಳಿಯದಂತೆ ಸೂಚನಾ ಫಲಕಗಳಿದ್ದರೂ, ಪ್ರವಾಸಿಗರು ಅವುಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ.

ಜಲಪಾತದ ನೀರಿಗೆ ಇಳಿದು ಆಟವಾಡುವುದು, ಈಜುವುದು ಸಾಮಾನ್ಯವಾಗಿದೆ. ಯುವಕರು, ಕುಟುಂಬ ಸಮೇತ ಜಲಪಾತದ ಮಧ್ಯದಲ್ಲಿ ನಿಂತು ರೀಲ್ಸ್ ಹಾಗೂ ಫೋಟೋ ತೆಗೆಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಆದರೆ, ಈ ರೀತಿಯ ಹುಚ್ಚಾಟ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೇವಲ ಒಂದು ವಾರದ ಹಿಂದೆ ಕೊಡಗು ಜಿಲ್ಲೆಯ ಮಲ್ಲಳ್ಳಿ ಫಾಲ್ಸ್‌ನಲ್ಲಿ ನೀರಿನ ರಭಸ ಹೆಚ್ಚಾಗಿ ಇಬ್ಬರು ಯುವಕರು ಸಿಲುಕಿಕೊಂಡ ಘಟನೆ ನಡೆದಿದೆ. ಇಂತಹ ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ನೀರಿನ ಹರಿವು ಹೆಚ್ಚಾಗಬಹುದು, ಇದು ಅನಾಹುತಕ್ಕೆ ಕಾರಣವಾಗಬಹುದು.ತಾಲ್ಲೂಕು ಆಡಳಿತ ಮುಂದಿನ ಆದೇಶದವರೆಗೆ ನಿರ್ಬಂಧ ವಿಧಿಸಿದ್ದರೂ, ಪ್ರವಾಸಿಗರು ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಸ್ಥಳೀಯರು ಇಂತಹ ಅಪಾಯಕಾರಿ ವರ್ತನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇವು ಹಗರಣದಲ್ಲಿ ಲಾಲು ಯಾದವ್‌ಗೆ ರಿಲೀಫ್: ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ – Kannada News | Lalu Yadav Fodder Scam Bail Relief: SC Rejects CBI Plea to Cancel

ನವದೆಹಲಿ, ಜುಲೈ 14: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರಿಗೆ ಸಿಕ್ಕಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಈ ಹಿಂದೆ ಲಾಲು ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದ ಆದೇಶದ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. 2019 ರಿಂದ ಜಾರಿಯಲ್ಲಿರುವ ಹೈಕೋರ್ಟ್‌ನ ಜಾಮೀನು ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು, ಈ ಮೇಲ್ಮನವಿಯು 2018ರದ್ದಾಗಿದೆ. ಹೀಗಾಗಿ ಪ್ರಕರಣವನ್ನು ಇನ್ನು ಎಳೆಯುವ ಬದಲು ಮುಂದಿನ 6 ತಿಂಗಳ ಒಳಗಾಗಿ ಈ ಹಗರಣದ ಮುಖ್ಯ ಮೇಲ್ಮನವಿಗಳ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಜಾರ್ಖಂಡ್ ಹೈಕೋರ್ಟ್‌ಗೆ ಗಡುವು ವಿಧಿಸಿದೆ.

ಕೋರ್ಟ್‌ನಲ್ಲಿ ನಡೆದ ಬಿರುಸಿನ ‘ಕಾನೂನು ಸಮರ’
ವಿಚಾರಣೆಯ ವೇಳೆ ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್.ವಿ. ರಾಜು ಅವರು ಲಾಲು ಅವರ ಜಾಮೀನನ್ನು ತೀವ್ರವಾಗಿ ವಿರೋಧಿಸಿದರು.ಲಾಲು ಯಾದವ್ ಅವರು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ದಾಖಲೆಗಳ ಮೂಲಕ ದಿಯೋಗಢ ಖಜಾನೆಯಿಂದ ಹಣ ಲೂಟಿ ಮಾಡಿದ ಪ್ರಮುಖ ಸಂಚುಕೋರ. ಅವರು ಜೈಲು ಶಿಕ್ಷೆಯ ಶೇ. 50 ರಷ್ಟು ಭಾಗವನ್ನು ಪೂರ್ಣಗೊಳಿಸಿದ್ದಾರೆ ಎಂಬ ತಪ್ಪು ಲೆಕ್ಕಾಚಾರದ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ ಎಂದಿದ್ದಾರೆ.

ಮತ್ತಷ್ಟು ಓದಿ: Lalu Prasad Yadav: ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಏಮ್ಸ್​ ಆಸ್ಪತ್ರೆಗೆ ಶಿಫ್ಟ್​

ಇದಕ್ಕೆ ತೀಕ್ಷ್ಣವಾಗಿ ಕೌಂಟರ್ ನೀಡಿದ ಲಾಲು ಯಾದವ್ ಪರ ಹಿರಿಯ ವಕೀಲ ಕಪಿಲ್ ಸಿಬಲ್, “ಸಿಬಿಐ ಮಂಡಿಸುತ್ತಿರುವ ಈ ವಾದವೇ ಸಂಪೂರ್ಣವಾಗಿ ತಪ್ಪು. ಹೈಕೋರ್ಟ್ ನ್ಯಾಯಾಧೀಶರು ಕಾನೂನಿನ ಚೌಕಟ್ಟಿನಲ್ಲೇ ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ ಏಕರೂಪದ ಮಾನದಂಡದ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ” ಎಂದು ಪ್ರತಿಪಾದಿಸಿದರು. ಇವರ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು.

ಏನಿದು ದಿಯೋಗಢ ಖಜಾನೆ ಮೇವು ಹಗರಣ?
ಈ ಇಡೀ ವಿವಾದವು 1991 ಮತ್ತು 1994 ರ ನಡುವೆ ನಡೆದ ಹಳೆಯ ಹಗರಣವಾಗಿದೆ.

89 ಲಕ್ಷ ರೂ. ವಂಚನೆ: ಲಾಲು ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಿಯೋಗಢ ಜಿಲ್ಲಾ ಖಜಾನೆಯಿಂದ ನಕಲಿ ಹಂಚಿಕೆ ಪತ್ರಗಳನ್ನು ಸೃಷ್ಟಿಸಿ ಕಾನೂನುಬಾಹಿರವಾಗಿ 89 ಲಕ್ಷ ರೂಪಾಯಿ ಸರ್ಕಾರಿ ಹಣವನ್ನು ಲೂಟಿ ಮಾಡಲಾಗಿತ್ತು.

7 ವರ್ಷಗಳ ಜೈಲು ಶಿಕ್ಷೆ: ಡಿಸೆಂಬರ್ 2017 ರಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ವಂಚನೆ (IPC 420, 120B) ಆರೋಪದಡಿ ಲಾಲು ಯಾದವ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಒಟ್ಟು 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.

ಆರೋಗ್ಯದ ಹಿನ್ನೆಲೆ: 78 ವರ್ಷದ ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ ಕಳೆದ ಕೆಲವು ವರ್ಷಗಳಿಂದ ತೀವ್ರ ಕಿಡ್ನಿ ವೈಫಲ್ಯ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಅವರು ಸಿಂಗಾಪುರದಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದರು. ಒಂದು ವೇಳೆ ಇಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ್ದರೆ ಅವರು ಮತ್ತೆ ರಾಂಚಿಯ ಬಿರ್ಸಾ ಮುಂಡಾ ಜೈಲು ಸೇರಬೇಕಾಗುತ್ತಿತ್ತು, ಇದು ಅವರ ಜೀವಕ್ಕೆ ಅಪಾಯ ತರುತ್ತಿತ್ತು ಎಂದು ಆರ್‌ಜೆಡಿ ಕಾರ್ಯಕರ್ತರು ಆತಂಕಗೊಂಡಿದ್ದರು.

ಬಿಹಾರ ಉಪಚುನಾವಣೆಗೆ ಬೂಸ್ಟರ್ ಡೋಸ್: ಪ್ರಸ್ತುತ ಬಿಹಾರದ ಬಂಕಿಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಉಪಚುನಾವಣೆಯ ಕಣ ರಂಗೇರಿದೆ. ಪ್ರಶಾಂತ್ ಕಿಶೋರ್ ಅವರ ‘ಜನ ಸುರಾಜ್’ ಮತ್ತು ಬಿಜೆಪಿಯ ಮೈತ್ರಿಕೂಟದ ಭಾರಿ ಸವಾಲಿನ ನಡುವೆ ಆರ್‌ಜೆಡಿ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಪಕ್ಷದ ಸುಪ್ರೀಂ ಲೀಡರ್ ಜೈಲು ಪಾಲಾಗುವುದರಿಂದ ಪಾರಾಗಿ ಹೊರಗಿರುವುದು ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಮುಂಚೂಣಿಗೆ ಆನೆಬಲ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪವನ್ ಕಲ್ಯಾಣ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಪತ್ನಿ – Kannada News | Pawan Kalyan’s wife shares his health update

ನಟ ಮತ್ತು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳು ಉಂಟಾಗಿದ್ದವು. ವೈದ್ಯರು ಅವರ ಬಲ ಭುಜಕ್ಕೆ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಕಳೆದ ವರ್ಷ ಈ ಬಗ್ಗೆ ಮಾತನಾಡಿದ್ದ ಪವನ್ ಕಲ್ಯಾಣ್, ‘ಇದು ಅಭಿಮಾನಿಗಳು ಪ್ರೀತಿಯೊಂದ ಕೊಟ್ಟ ಗಾಯ’ ಎಂದು ತಮಾಷೆಯಾಗಿ ಹೇಳಿದ್ದರು. ಇದೀಗ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪತ್ನಿ ಅನ್ನಾ ಲೆಜ್ನೇವಾ ಮಾಹಿತಿ ಹಂಚಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿರುವ ಪವನ್ ಕಲ್ಯಾಣ್ ಅವರನ್ನು ಸಿಎಂ ಚಂದ್ರಬಾಬು ನಾಯ್ಡು ಭೇಟಿ ಆಗಿದ್ದರು. ಈ ವೇಳೆ ಪತ್ನಿ ಅನ್ನಾ ಸಹ ಜೊತೆಯಲ್ಲಿದ್ದರು. ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಮಾತನಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನ್ನಾ, ‘ಪವನ್ ಅವರು ತಮ್ಮ ನೋವನ್ನು ಎಂದಿಗೂ ತೋರಿಕೊಳ್ಳುವವರಲ್ಲ ಅಥವಾ ಅನುಕಂಪ ಬಯಸುವವರಲ್ಲ. ಅವರ ಬದುಕಿನ ಹೊರೆ ಯಾವಾಗಲೂ ಅವರ ದೈಹಿಕ ನೋವಿಗಿಂತ ಹೆಚ್ಚಾಗಿಯೇ ಇರುತ್ತದೆ. ಅವರು ಬಹಳ ಅಪರೂಪಕ್ಕೆ ದೂರು ಹೇಳುತ್ತಾರೆ. ನೋವು ತೀರಾ ಮಿತಿ ಮೀರಿದಾಗ ಮಾತ್ರ ಅದನ್ನು ಹೊರಹಾಕುತ್ತಾರೆ’ ಎಂದು ಅನ್ನಾ ತಿಳಿಸಿದ್ದಾರೆ.

‘ಸದ್ಯಕ್ಕೆ, ನಾನು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಅವರು ಸುರಕ್ಷಿತ ಕೈಗಳಲ್ಲಿದ್ದಾರೆ ಎಂದು ಅವರಿಗೆ ಅರಿವಾಗುವಂತೆ ಮಾಡುವುದು ನನ್ನ ಕೆಲಸ. ದಿನದಿಂದ ದಿನಕ್ಕೆ ಅವರು ಸುಧಾರಿಸುತ್ತಿದ್ದಾರೆ, ನಾವು ಖಂಡಿತಾ ಈ ಪರಿಸ್ಥಿತಿಯಿಂದ ಹೊರಬರುತ್ತೇವೆ’ ಎಂದು ಅನ್ನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಮೆಚ್ಚಿನ ಬಾಲ ಅಭಿಮಾನಿ ನಿರಂಜನ್ ನಿಧನ

ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಟ್ವೀಟ್ ಮಾಡಿದ್ದು, ‘ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜನಸೇನಾ ಪಕ್ಷದ ಹೇಳಿಕೆಯ ಪ್ರಕಾರ, ವೈದ್ಯರು ಮೊದಲೇ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದರೂ, ಪವನ್ ಕಲ್ಯಾಣ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ಮುಂದುವರಿಸಲು ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಚೇತರಿಕೆಯ ದೃಷ್ಟಿಯಿಂದ ಈ ಬಾರಿ ಬಲ ಭುಜಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಡ ಭುಜದ ಶಸ್ತ್ರಚಿಕಿತ್ಸೆಯನ್ನು ಸುಮಾರು ಎರಡು ತಿಂಗಳ ನಂತರ ನಡೆಸಲಾಗುವುದು ಎಂದಿದ್ದಾರೆ.

ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಪವನ್ ಅವರ ಬಲ ಭುಜದಲ್ಲಿ ಅನ್ವಲ್ಶನ್ ಫ್ರಾಕ್ಚರ್ (avulsion fracture) ಇರುವುದು ಪತ್ತೆಯಾಗಿದೆ, ಇದು ಮೊದಲೇ ತಿಳಿದಿರಲಿಲ್ಲ. ಇದರಿಂದ ಶಸ್ತ್ರಚಿಕಿತ್ಸೆ ನಿರೀಕ್ಷಿತ ಸಮಯಕ್ಕಿಂತ ಹೆಚ್ಚು ಸಮಯ ಹಿಡಿದಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಪವನ್ ಕಲ್ಯಾಣ್ ಅವರು ಪ್ರಸ್ತುತ ವೈದ್ಯರ ನಿಗಾದಲ್ಲಿದ್ದಾರೆ ಎಂದು ಜನಸೇನಾ ಪಕ್ಷದ ಪ್ರಮುಖರು ಮಾಧ್ಯಗಳಿಗೆ ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫ್ಲಾಟ್ ಇಲ್ಲ, ಕಾರಿಲ್ಲ, 25 ಸಾವಿರ ರೂ. ಸಂಬಳ ನನ್ನ ಮದುವೆಯಾಗ್ತೀರೇನು? ರಸ್ತೆ ಬದಿಯಲ್ಲಿ ಫ್ಲೆಕ್ಸ್​ ಹಾಕಿದ ವ್ಯಕ್ತಿ – Kannada News | Pune Man’s Viral Banner: “No Flat, No Car, Rs 25000 Salary Will You Marry Me, Honest Proposal

ಪುಣೆ, ಜುಲೈ 14: ಇಂದಿನ ದಿನಗಳಲ್ಲಿ ಮದುವೆ(Marriage)ಯಾಗಬೇಕಾದರೆ ಹುಡುಗನಿಗೆ ಸ್ವಂತ ಮನೆ ಇರಬೇಕು, ಕಾರು ಇರಬೇಕು, ಕೈತುಂಬಾ ಸಂಬಳವಿರಬೇಕು ಎಂಬ ಹತ್ತಾರು ಷರತ್ತುಗಳನ್ನು ಹುಡುಗಿಯರ ಕಡೆಯವರು ವಿಧಿಸುವುದು ಸಾಮಾನ್ಯ. ಹಾಗಾಗಿ ಯುವಕರು ತಮ್ಮ ಬಳಿ ಇಲ್ಲದಿರುವುದನ್ನೂ ಇದೆ ಎನ್ನುವ ಈ ಕಾಲದಲ್ಲಿ, ಮಹಾರಾಷ್ಟ್ರದ ಪುಣೆಯ 30 ವರ್ಷದ ಯುವಕನೊಬ್ಬ ತನ್ನಲ್ಲಿ ಇದಾವುದೂ ಇಲ್ಲ ಎಂಬುದನ್ನು ಮುಚ್ಚಿಡದೆ, ಇಡೀ ಜಗತ್ತಿಗೆ ತಿಳಿಯುವಂತೆ ನಗರದ ಪ್ರಮುಖ ರಸ್ತೆ ಜಂಕ್ಷನ್‌ನಲ್ಲೇ ಬೃಹತ್ ಫ್ಲೆಕ್ಸ್​ ಹಾಕುವ ಮೂಲಕ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದ್ದಾನೆ.

ಪಿಂಪ್ರಿ-ಚಿಂಚ್‌ವಾಡ್‌ನ ಪಿಂಪಲ್ ಸೌದಾಗರ್ ಜಂಕ್ಷನ್ ಹಾಗೂ ಕೇಟ್ ಪಾಟೀಲ್ ಚೌಕ್ ಬಳಿ ಈ ವಿಚಿತ್ರ ಫ್ಲೆಕ್ಸ್​ ಹಾಕಲಾಗಿದೆ. ದಾರಿಯಲ್ಲಿ ಹೋಗುವವರೆಲ್ಲರೂ ಗಾಡಿ ನಿಲ್ಲಿಸಿ ಈ ಬ್ಯಾನರ್ ಅನ್ನು ಕುತೂಹಲದಿಂದ ನೋಡುತ್ತಿದ್ದು, ಇದರ ವಿಡಿಯೋ ಸದ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬ್ಯಾನರ್‌ನಲ್ಲೇ ಬಯೋಡೇಟಾ: ಏನಿದೆ ಆ ಪೋಸ್ಟರ್‌ನಲ್ಲಿ?
ಈ ಬೃಹತ್ ಬ್ಯಾನರ್ ಯಾವುದೇ ಮದುವೆ ಸಂಸ್ಥೆಯ ಜಾಹೀರಾತಲ್ಲ, ಬದಲಾಗಿ ರಾಘವ್ ವಿಶ್ವಾಸರಾವ್ ಶಿಂಧೆ ಎಂಬ ಸಾಮಾನ್ಯ ಯುವಕನ ಮುಚ್ಚುಮರೆಯಿಲ್ಲದ ವಿವಾಹ ಪ್ರಸ್ತಾಪ. ಆ ಬ್ಯಾನರ್‌ನಲ್ಲಿ ಯುವಕ ತನ್ನ ಇಡೀ ಸತ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾರೆ.

ವಯಸ್ಸು: 30 ವರ್ಷ

ಮಾಸಿಕ ಆದಾಯ: ಕೇವಲ 25,000 ರೂ. ಸಂಬಳ

ಆಸ್ತಿ ವಿವರ: ಸ್ವಂತ ಫ್ಲಾಟ್ ಇಲ್ಲ, ಓಡಾಡಲು ಕಾರು ಇಲ್ಲ, ಇನ್ನು ಹಳ್ಳಿಯಲ್ಲಿ ಕೃಷಿ ಭೂಮಿಯೂ ಇಲ್ಲ

ಮನವಿ: ಈ ವಿವರಗಳಿಗೆ ಒಪ್ಪುವಂತಹ ಸೂಕ್ತ ವಧು ಯಾರಾದರೂ ನಿಮ್ಮ ಪರಿಚಯದಲ್ಲಿದ್ದರೆ ದಯವಿಟ್ಟು ಸೂಚಿಸಿ ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: Video: ಮದುವೆ ಮಂಟಪದಿಂದ ಓಡಿಹೋದ ವರ, ವಾಟ್ಸಾಪ್‌ಗೆ ಬಂದ ಆ ಒಂದು ಫೋಟೋ ತಂದ ಭಾರಿ ಫಜೀತಿ

ಈ ವಿಶಿಷ್ಟ ಪ್ರಯತ್ನವನ್ನು ಕಂಡು ಸಾರ್ವಜನಿಕರು ಹಾಗೂ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಅಣ್ಣಾ, ಎಲ್ಲವನ್ನೂ ಬರೆದೆ, ಆದರೆ ನಿನ್ನ ಫೋನ್ ನಂಬರ್ ಹಾಕೋದನ್ನೇ ಮರೆತುಬಿಟ್ಟೆಯಲ್ಲಪ್ಪಾ ಎಂದು ಕಾಲೆಳೆದಿದ್ದಾನೆ.

ಮತ್ತೊಬ್ಬ ನೆಟ್ಟಿಗ,ನಿನ್ನ 25,000 ರೂ. ಸಂಬಳದಲ್ಲಿ ಅರ್ಧದಷ್ಟು ದುಡ್ಡು ಈ ದೊಡ್ಡ ಬ್ಯಾನರ್ ಬಾಡಿಗೆ ಕಟ್ಟೋದಕ್ಕೇ ಖಾಲಿಯಾಗಿರಬೇಕಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ತಮಗೂ ಇಂತಹದ್ದೇ ಒಂದು ಬ್ಯಾನರ್ ಹಾಕಿಸಿಕೊಡಿ ಎಂದು ತಮ್ಮ ಅವಿವಾಹಿತ ಸ್ನೇಹಿತರನ್ನು ಟ್ಯಾಗ್ ಮಾಡುತ್ತಿದ್ದಾರೆ.

ಪೋಸ್ಟ್​

ಇದರ ಹಿಂದಿರಬಹುದೇ ಪ್ರಚಾರ?
ಈ ಹಿಂದೆಯೂ ಪುಣೆಯಲ್ಲಿ ಪ್ರೇಮಿಯೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಕ್ಷಮೆ ಕೇಳಲು ಇಡೀ ಏರಿಯಾದಾದ್ಯಂತ 300ಕ್ಕೂ ಹೆಚ್ಚು ಬ್ಯಾನರ್ ಹಾಕಿ ಸುದ್ದಿಯಾಗಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಮರಾಠಿ ಸಿನಿಮಾಗಳು ಅಥವಾ ಟಿವಿ ಧಾರಾವಾಹಿಗಳ ಪ್ರಚಾರಕ್ಕಾಗಿ ಇಂತಹ ವಿಚಿತ್ರ ಕಥೆಗಳನ್ನು ಸೃಷ್ಟಿಸಿ ಪೋಸ್ಟರ್ ಹಾಕುವುದು ಫ್ಯಾಷನ್ ಆಗಿದೆ.

ಇದು ರಾಘವ್ ಎಂಬ ಯುವಕನ ನಿಜವಾದ ವಧು ಅನ್ವೇಷಣೆಯೋ ಅಥವಾ ಯಾವುದೋ ಕಂಪನಿಯ ಪ್ರಚಾರದ ಗಿಮಿಕ್ಕೋ ಎಂಬುದು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ. ಆದರೆ, ಯುವಕನ ಈ ಪ್ರಾಮಾಣಿಕ ಮತ್ತು ಧೈರ್ಯಶಾಲಿ ಪ್ರಯತ್ನ ಮಾತ್ರ ಸದ್ಯ ಪುಣೆ ನಿವಾಸಿಗಳ ಪಾಲಿಗೆ ಸಖತ್ ಮನರಂಜನೆ ನೀಡುತ್ತಿರುವುದಂತೂ ಸುಳ್ಳಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಾಲಾ ಮಕ್ಕಳ ನೆಚ್ಚಿನ ಜಂಕ್ ಫುಡ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು: ನೂರಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್! – Kannada News | Junk Food Crackdown: Food Safety Department Raids Outlets Near Bengaluru Schools

ಬೆಂಗಳೂರು, ಜುಲೈ 14: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸ್ಥೂಲಕಾಯ (Obesity) ಮತ್ತು ಫ್ಯಾಟಿ ಲಿವರ್​ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಶಾಲಾ-ಕಾಲೇಜು ಮಕ್ಕಳ ಫೇವರೆಟ್ ಕುರುಕಲು ತಿಂಡಿಗಳಾದ ಚಿಪ್ಸ್, ಬಜ್ಜಿ, ಬೋಂಡಾ, ಬೋಟಿ ಸೇರಿದಂತೆ ವಿವಿಧ ಜಂಕ್ ಫುಡ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ.

ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಸುತ್ತಮುತ್ತ ಮೆಗಾ ಡ್ರೈವ್!

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಚ್ಚೆತ್ತಿರುವ ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ವಿಶೇಷ ಡ್ರೈವ್ ಆರಂಭಿಸಿದೆ. ಶಾಲಾ-ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಅಂಗಡಿ, ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಅವಧಿ ಮೀರಿದ, ಹೆಚ್ಚು ಕರಿದ ಎಣ್ಣೆ ತಿಂಡಿಗಳ ಪರೀಕ್ಷೆ

ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಅವಧಿ ಮುಗಿದ ಆಹಾರ ಪದಾರ್ಥಗಳು ಹಾಗೂ ಪದೇ ಪದೆ ಕರಿದ ಎಣ್ಣೆಯಲ್ಲಿ ತಯಾರಿಸಿದ ಬಜ್ಜಿ-ಬೋಂಡಾಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ. ಈ ತಿನಿಸುಗಳಲ್ಲಿ ಬಳಸಿರುವ ಬಣ್ಣ ಹಾಗೂ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಲ್ಯಾಬ್‌ನಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಲಾಗುತ್ತದೆ.

ಹಾನಿಕಾರಕ ಅಂಶಗಳು ಕಂಡುಬಂದರೆ ಕೂಡಲೆ ಲೈಸನ್ಸ್ ರದ್ದು

ಸಂಗ್ರಹಿಸಲಾದ ಆಹಾರದ ಮಾದರಿಗಳ ಪರೀಕ್ಷಾ ವರದಿಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಅಥವಾ ‘ಅನ್ ಸೇಫ್’ (Unsafe) ಎಂದು ಸಾಬೀತಾದರೆ, ಅಂತಹ ಮಳಿಗೆ ಹಾಗೂ ತಯಾರಕರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯು ಪೋಷಕರಲ್ಲಿ ಕೊಂಚ ನಿರಾಳತೆ ತಂದಿದೆ.

ಇದನ್ನೂ ಓದಿ ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ಈ ಹಿಂದೆ ಬೆಂಗಳೂರಿನ ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸುವುದನ್ನು ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣವಾಗಿ ನಿಷೇಧಿಸಿದ್ದರು. ಜೊತೆಗೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣವನ್ನು ಬಳಸುವುದನ್ನೂ ನಿಷೇಧಿಸಲಾಗಿತ್ತು. ಇದೀಗ ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಂಕ್ ಫುಡ್​ಗಳನ್ನು ಮಾರುವ ಬೇಕರಿ, ಹೋಟೆಲ್​ಗಳಲ್ಲಿಯೂ ದಾಳಿ ನಡೆಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ: ದಾಖಲೆ ಬರೆದ ದರ – Kannada News | Chicken Price Hits Rs 360 Per Kg, Egg Price Touches Rs 9 in Bengaluru; Prices Reach Record High

ಬೆಂಗಳೂರು, ಜುಲೈ 14: ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ದರ ಇದೀಗ ದಾಖಲೆಯ ಮಟ್ಟ ತಲುಪಿದ್ದು, ಬೆಂಗಳೂರಿನಲ್ಲಿ (Bengaluru) ಒಂದು ಕೆಜಿ ಬಾಯ್ಲರ್ ಚಿಕನ್ ಬೆಲೆ 360 ರೂಪಾಯಿಗೆ ಹಾಗೂ ಒಂದು ಮೊಟ್ಟೆಯ ಚಿಲ್ಲರೆ ದರ 9 ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿನ ಮಾಹಿತಿ ಪ್ರಕಾರ, ಚರ್ಮವಿಲ್ಲದ (Without Skin Chicken) ಬ್ರಾಯ್ಲರ್ ಚಿಕನ್ ಪ್ರತಿ ಕೆಜಿಗೆ 360 ರೂಪಾಯಿ ಹಾಗೂ ಚರ್ಮ ಸಮೇತ (With Skin Chicken) ಚಿಕನ್ ಪ್ರತಿ ಕೆಜಿಗೆ 340 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ 300 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಈಗ 350ರಿಂದ 360 ರೂಪಾಯಿವರೆಗೆ ಏರಿಕೆಯಾಗಿದೆ.

ಮೊಟ್ಟೆ ದರವೂ ಇದೇ ರೀತಿ ಏರಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 8 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 8.30 ರಿಂದ 9 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಮೂರು ದಿನಗಳ ಹಿಂದಷ್ಟೇ 7ರಿಂದ 7.50 ರೂಪಾಯಿ ಇದ್ದ ಮೊಟ್ಟೆ ಬೆಲೆ ಈಗ 9 ರೂಪಾಯಿಗೆ ತಲುಪಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ.

ಚಿಕನ್, ಮೊಟ್ಟೆ ದರ ಏರಿಕೆ ಬಗ್ಗೆ ವ್ಯಾಪಾರಿಗಳು ಹೇಳೋದೇನು?

ವ್ಯಾಪಾರಿಗಳ ಪ್ರಕಾರ, ಈ ಬಾರಿ ಕೋಳಿಗಳ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಹಾಗೂ ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೋಳಿ ಪೂರೈಕೆಯಾಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿದೆ. ಇದರಿಂದ ಚಿಕನ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಬೆಲೆ ಏರಿಕೆ ಬಗ್ಗೆ ವ್ಯಾಪಾರಿಗಳ ಮಾತು


ಚಿಕನ್, ಮೊಟ್ಟೆ ಖರೀದಿ ಇಳಿಕೆ

ಬೆಲೆ ಏರಿಕೆಯ ಪರಿಣಾಮ ಗ್ರಾಹಕರ ಖರೀದಿ ಪ್ರಮಾಣದಲ್ಲೂ ಬದಲಾವಣೆ ಕಂಡುಬಂದಿದೆ. ಈ ಹಿಂದೆ ಒಂದು ಕೆಜಿ ಚಿಕನ್ ಖರೀದಿಸುತ್ತಿದ್ದವರು ಈಗ 500 ಅಥವಾ 750 ಗ್ರಾಂ ಮಾತ್ರ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೆಚ್ಚಿದ ದರದ ಕಾರಣ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನಲಾಗಿದೆ.

ಚಿಕನ್ ಬಿರಿಯಾನಿ, ಮೊಟ್ಟೆ ಕರಿ ದರ ಏರಿಕೆ ಸಾಧ್ಯತೆ

ಚಿಕನ್ ಮತ್ತು ಮೊಟ್ಟೆ ದರ ಏರಿಕೆಯಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೂ ಹೊರೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಚಿಕನ್ ಬಿರಿಯಾನಿ, ಮೊಟ್ಟೆ ಕರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮ್ಮಂದಿರಿಗೆ ಸುವರ್ಣಾವಕಾಶ; ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ – Kannada News | Zee Kannada Dance Karnataka Dance Super Mom: Auditions Begin July 24

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್

ಮನೆಯ ಜವಾಬ್ದಾರಿಗಳು, ಸಂಸಾರದ ಒತ್ತಡಗಳ ಮಧ್ಯೆ ತಮ್ಮ ನೃತ್ಯದ ಕನಸುಗಳನ್ನು ಬದಿಗಿಟ್ಟಿದ್ದ ಕರುನಾಡಿನ ಅಮ್ಮಂದಿರಿಗಾಗಿ ಜೀ ಕನ್ನಡ ವಾಹಿನಿಯು ಮತ್ತೊಮ್ಮೆ ಒಂದು ಅದ್ಭುತ ವೇದಿಕೆಯನ್ನು ಸಿದ್ಧಪಡಿಸಿದೆ. ಹೌದು, ಕರುನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ಇದೀಗ ಅಮ್ಮಂದಿರಿಗಾಗಿ ‘ಸೂಪರ್ ಮಾಮ್’ ಆವೃತ್ತಿಯೊಂದಿಗೆ ಧೂಳೆಬ್ಬಿಸಲು ಸಜ್ಜಾಗಿದೆ. ಇಷ್ಟು ದಿನ ಸಣ್ಣ ಮಕ್ಕಳಿಗೆ ಹಾಗೂ ಮಧ್ಯ ವಯಸ್ಸಿನವರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಆದರೆ, ಈಗ ಅಮ್ಮಂದಿರಿಗೂ ಅವಕಾಶ ನೀಡಲಾಗುತ್ತಿದೆ.

ಕೇವಲ ಕರ್ನಾಟಕದ ಅಮ್ಮಂದಿರಿಗಾಗಿ ಮೀಸಲಾದ ವಿಶೇಷ ಡ್ಯಾನ್ಸ್ ಶೋ ಇದಾಗಿದೆ. ಜುಲೈ 24ರಿಂದ ದೇಶಾದ್ಯಂತ ಆಡಿಷನ್‌ಗಳು ಅಧಿಕೃತವಾಗಿ ಪ್ರಾರಂಭವಾಗಲಿವೆ. ಈ ಶೋ ಜೀ ಕನ್ನಡ ವಾಹಿನಿ ಹಾಗೂ ಜೀ5ನಲ್ಲಿ ಪ್ರಸಾರವಾಗಲಿದೆ.

ನಿಮ್ಮ ಮಮ್ಮಿಗೆ ಡ್ಯಾನ್ಸ್ ಬರುತ್ತಾ?

‘ಮಕ್ಕಳೇ, ನಿಮ್ಮ ತಾಯಿಗೆ ಡ್ಯಾನ್ಸ್ ಬರುತ್ತಾ? ಮಮ್ಮೀಸ್ ಆ್ಯಂಡ್ ಮಮ್ಮೀಸ್ ನಿಮ್ಮ ತಾಯಿಗೆ ಡ್ಯಾನ್ಸ್ ಬರುತ್ತಾ’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ. ಮನೆಗೆಲಸ, ಮಕ್ಕಳ ಜವಾಬ್ದಾರಿ ಅಂತಲೇ ಕಾಲ ಕಳೆದು, ವೇದಿಕೆಯಿಂದ ದೂರವುಳಿದಿದ್ದ ಅಮ್ಮಂದಿರಿಗೆ ತೆರೆಮೇಲೆ ಮಿಂಚುವಂತೆ ಮಾಡಲು ಜೀ ಕನ್ನಡ ಈ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫಿನಾಲೆಗೆ ವೇದಿಕೆ ರೆಡಿ; ಯಾರಾಗ್ತಾರೆ ಚಾಂಪಿಯನ್?

ಸೀರೆ ಉಟ್ಟು, ಕಾಲಿಗೆ ಸ್ಟೈಲಿಶ್ ಶೂ ಧರಿಸಿ, ಕಣ್ಣಿಗೆ ಕೂಲ್ ಆಗಿರೋ ಸನ್ ಗ್ಲಾಸ್ ಹಾಕಿ ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕರ್ನಾಟಕದ ಅಮ್ಮಂದಿರು ವೇದಿಕೆಯ ಮೇಲೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕಲಿದ್ದಾರೆ. ನೃತ್ಯದ ಮೇಲೆ ಒಲವಿರುವ ಕರುನಾಡಿನ ಪ್ರತಿಯೊಬ್ಬ ಅಮ್ಮಂದಿರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನಿಮ್ಮ ಹತ್ತಿರದ ಆಡಿಷನ್ ಸ್ಥಳಗಳ ಮಾಹಿತಿಗಾಗಿ ಜೀ ಕನ್ನಡದ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳನ್ನು ಗಮನಿಸಬೇಕಿದೆ.

ನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version