ಶಾಲಾ ಮಕ್ಕಳ ನೆಚ್ಚಿನ ಜಂಕ್ ಫುಡ್ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣು: ನೂರಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್! – Kannada News | Junk Food Crackdown: Food Safety Department Raids Outlets Near Bengaluru Schools

ಬೆಂಗಳೂರು, ಜುಲೈ 14: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸ್ಥೂಲಕಾಯ (Obesity) ಮತ್ತು ಫ್ಯಾಟಿ ಲಿವರ್​ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಅನಾರೋಗ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಶಾಲಾ-ಕಾಲೇಜು ಮಕ್ಕಳ ಫೇವರೆಟ್ ಕುರುಕಲು ತಿಂಡಿಗಳಾದ ಚಿಪ್ಸ್, ಬಜ್ಜಿ, ಬೋಂಡಾ, ಬೋಟಿ ಸೇರಿದಂತೆ ವಿವಿಧ ಜಂಕ್ ಫುಡ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ.

ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಸುತ್ತಮುತ್ತ ಮೆಗಾ ಡ್ರೈವ್!

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಚ್ಚೆತ್ತಿರುವ ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ವಿಶೇಷ ಡ್ರೈವ್ ಆರಂಭಿಸಿದೆ. ಶಾಲಾ-ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಅಂಗಡಿ, ಬೇಕರಿ ಹಾಗೂ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ಅವಧಿ ಮೀರಿದ, ಹೆಚ್ಚು ಕರಿದ ಎಣ್ಣೆ ತಿಂಡಿಗಳ ಪರೀಕ್ಷೆ

ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಅವಧಿ ಮುಗಿದ ಆಹಾರ ಪದಾರ್ಥಗಳು ಹಾಗೂ ಪದೇ ಪದೆ ಕರಿದ ಎಣ್ಣೆಯಲ್ಲಿ ತಯಾರಿಸಿದ ಬಜ್ಜಿ-ಬೋಂಡಾಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ. ಈ ತಿನಿಸುಗಳಲ್ಲಿ ಬಳಸಿರುವ ಬಣ್ಣ ಹಾಗೂ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಲ್ಯಾಬ್‌ನಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಲಾಗುತ್ತದೆ.

ಹಾನಿಕಾರಕ ಅಂಶಗಳು ಕಂಡುಬಂದರೆ ಕೂಡಲೆ ಲೈಸನ್ಸ್ ರದ್ದು

ಸಂಗ್ರಹಿಸಲಾದ ಆಹಾರದ ಮಾದರಿಗಳ ಪರೀಕ್ಷಾ ವರದಿಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಅಥವಾ ‘ಅನ್ ಸೇಫ್’ (Unsafe) ಎಂದು ಸಾಬೀತಾದರೆ, ಅಂತಹ ಮಳಿಗೆ ಹಾಗೂ ತಯಾರಕರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯಾಚರಣೆಯು ಪೋಷಕರಲ್ಲಿ ಕೊಂಚ ನಿರಾಳತೆ ತಂದಿದೆ.

ಇದನ್ನೂ ಓದಿ ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ

ಈ ಹಿಂದೆ ಬೆಂಗಳೂರಿನ ಹೋಟೆಲ್‌ಗಳು ಹಾಗೂ ಆಹಾರ ಮಳಿಗೆಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸುವುದನ್ನು ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣವಾಗಿ ನಿಷೇಧಿಸಿದ್ದರು. ಜೊತೆಗೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣವನ್ನು ಬಳಸುವುದನ್ನೂ ನಿಷೇಧಿಸಲಾಗಿತ್ತು. ಇದೀಗ ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಂಕ್ ಫುಡ್​ಗಳನ್ನು ಮಾರುವ ಬೇಕರಿ, ಹೋಟೆಲ್​ಗಳಲ್ಲಿಯೂ ದಾಳಿ ನಡೆಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಹಕರಿಗೆ ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆ ಬಿಸಿ: ದಾಖಲೆ ಬರೆದ ದರ – Kannada News | Chicken Price Hits Rs 360 Per Kg, Egg Price Touches Rs 9 in Bengaluru; Prices Reach Record High

ಬೆಂಗಳೂರು, ಜುಲೈ 14: ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ದರ ಇದೀಗ ದಾಖಲೆಯ ಮಟ್ಟ ತಲುಪಿದ್ದು, ಬೆಂಗಳೂರಿನಲ್ಲಿ (Bengaluru) ಒಂದು ಕೆಜಿ ಬಾಯ್ಲರ್ ಚಿಕನ್ ಬೆಲೆ 360 ರೂಪಾಯಿಗೆ ಹಾಗೂ ಒಂದು ಮೊಟ್ಟೆಯ ಚಿಲ್ಲರೆ ದರ 9 ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿನ ಮಾಹಿತಿ ಪ್ರಕಾರ, ಚರ್ಮವಿಲ್ಲದ (Without Skin Chicken) ಬ್ರಾಯ್ಲರ್ ಚಿಕನ್ ಪ್ರತಿ ಕೆಜಿಗೆ 360 ರೂಪಾಯಿ ಹಾಗೂ ಚರ್ಮ ಸಮೇತ (With Skin Chicken) ಚಿಕನ್ ಪ್ರತಿ ಕೆಜಿಗೆ 340 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ 300 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಈಗ 350ರಿಂದ 360 ರೂಪಾಯಿವರೆಗೆ ಏರಿಕೆಯಾಗಿದೆ.

ಮೊಟ್ಟೆ ದರವೂ ಇದೇ ರೀತಿ ಏರಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 8 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 8.30 ರಿಂದ 9 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಮೂರು ದಿನಗಳ ಹಿಂದಷ್ಟೇ 7ರಿಂದ 7.50 ರೂಪಾಯಿ ಇದ್ದ ಮೊಟ್ಟೆ ಬೆಲೆ ಈಗ 9 ರೂಪಾಯಿಗೆ ತಲುಪಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ.

ಚಿಕನ್, ಮೊಟ್ಟೆ ದರ ಏರಿಕೆ ಬಗ್ಗೆ ವ್ಯಾಪಾರಿಗಳು ಹೇಳೋದೇನು?

ವ್ಯಾಪಾರಿಗಳ ಪ್ರಕಾರ, ಈ ಬಾರಿ ಕೋಳಿಗಳ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಹಾಗೂ ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೋಳಿ ಪೂರೈಕೆಯಾಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿದೆ. ಇದರಿಂದ ಚಿಕನ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಬೆಲೆ ಏರಿಕೆ ಬಗ್ಗೆ ವ್ಯಾಪಾರಿಗಳ ಮಾತು


ಚಿಕನ್, ಮೊಟ್ಟೆ ಖರೀದಿ ಇಳಿಕೆ

ಬೆಲೆ ಏರಿಕೆಯ ಪರಿಣಾಮ ಗ್ರಾಹಕರ ಖರೀದಿ ಪ್ರಮಾಣದಲ್ಲೂ ಬದಲಾವಣೆ ಕಂಡುಬಂದಿದೆ. ಈ ಹಿಂದೆ ಒಂದು ಕೆಜಿ ಚಿಕನ್ ಖರೀದಿಸುತ್ತಿದ್ದವರು ಈಗ 500 ಅಥವಾ 750 ಗ್ರಾಂ ಮಾತ್ರ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೆಚ್ಚಿದ ದರದ ಕಾರಣ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನಲಾಗಿದೆ.

ಚಿಕನ್ ಬಿರಿಯಾನಿ, ಮೊಟ್ಟೆ ಕರಿ ದರ ಏರಿಕೆ ಸಾಧ್ಯತೆ

ಚಿಕನ್ ಮತ್ತು ಮೊಟ್ಟೆ ದರ ಏರಿಕೆಯಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೂ ಹೊರೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಚಿಕನ್ ಬಿರಿಯಾನಿ, ಮೊಟ್ಟೆ ಕರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮ್ಮಂದಿರಿಗೆ ಸುವರ್ಣಾವಕಾಶ; ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ – Kannada News | Zee Kannada Dance Karnataka Dance Super Mom: Auditions Begin July 24

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್

ಮನೆಯ ಜವಾಬ್ದಾರಿಗಳು, ಸಂಸಾರದ ಒತ್ತಡಗಳ ಮಧ್ಯೆ ತಮ್ಮ ನೃತ್ಯದ ಕನಸುಗಳನ್ನು ಬದಿಗಿಟ್ಟಿದ್ದ ಕರುನಾಡಿನ ಅಮ್ಮಂದಿರಿಗಾಗಿ ಜೀ ಕನ್ನಡ ವಾಹಿನಿಯು ಮತ್ತೊಮ್ಮೆ ಒಂದು ಅದ್ಭುತ ವೇದಿಕೆಯನ್ನು ಸಿದ್ಧಪಡಿಸಿದೆ. ಹೌದು, ಕರುನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ಇದೀಗ ಅಮ್ಮಂದಿರಿಗಾಗಿ ‘ಸೂಪರ್ ಮಾಮ್’ ಆವೃತ್ತಿಯೊಂದಿಗೆ ಧೂಳೆಬ್ಬಿಸಲು ಸಜ್ಜಾಗಿದೆ. ಇಷ್ಟು ದಿನ ಸಣ್ಣ ಮಕ್ಕಳಿಗೆ ಹಾಗೂ ಮಧ್ಯ ವಯಸ್ಸಿನವರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಆದರೆ, ಈಗ ಅಮ್ಮಂದಿರಿಗೂ ಅವಕಾಶ ನೀಡಲಾಗುತ್ತಿದೆ.

ಕೇವಲ ಕರ್ನಾಟಕದ ಅಮ್ಮಂದಿರಿಗಾಗಿ ಮೀಸಲಾದ ವಿಶೇಷ ಡ್ಯಾನ್ಸ್ ಶೋ ಇದಾಗಿದೆ. ಜುಲೈ 24ರಿಂದ ದೇಶಾದ್ಯಂತ ಆಡಿಷನ್‌ಗಳು ಅಧಿಕೃತವಾಗಿ ಪ್ರಾರಂಭವಾಗಲಿವೆ. ಈ ಶೋ ಜೀ ಕನ್ನಡ ವಾಹಿನಿ ಹಾಗೂ ಜೀ5ನಲ್ಲಿ ಪ್ರಸಾರವಾಗಲಿದೆ.

ನಿಮ್ಮ ಮಮ್ಮಿಗೆ ಡ್ಯಾನ್ಸ್ ಬರುತ್ತಾ?

‘ಮಕ್ಕಳೇ, ನಿಮ್ಮ ತಾಯಿಗೆ ಡ್ಯಾನ್ಸ್ ಬರುತ್ತಾ? ಮಮ್ಮೀಸ್ ಆ್ಯಂಡ್ ಮಮ್ಮೀಸ್ ನಿಮ್ಮ ತಾಯಿಗೆ ಡ್ಯಾನ್ಸ್ ಬರುತ್ತಾ’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ. ಮನೆಗೆಲಸ, ಮಕ್ಕಳ ಜವಾಬ್ದಾರಿ ಅಂತಲೇ ಕಾಲ ಕಳೆದು, ವೇದಿಕೆಯಿಂದ ದೂರವುಳಿದಿದ್ದ ಅಮ್ಮಂದಿರಿಗೆ ತೆರೆಮೇಲೆ ಮಿಂಚುವಂತೆ ಮಾಡಲು ಜೀ ಕನ್ನಡ ಈ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫಿನಾಲೆಗೆ ವೇದಿಕೆ ರೆಡಿ; ಯಾರಾಗ್ತಾರೆ ಚಾಂಪಿಯನ್?

ಸೀರೆ ಉಟ್ಟು, ಕಾಲಿಗೆ ಸ್ಟೈಲಿಶ್ ಶೂ ಧರಿಸಿ, ಕಣ್ಣಿಗೆ ಕೂಲ್ ಆಗಿರೋ ಸನ್ ಗ್ಲಾಸ್ ಹಾಕಿ ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕರ್ನಾಟಕದ ಅಮ್ಮಂದಿರು ವೇದಿಕೆಯ ಮೇಲೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕಲಿದ್ದಾರೆ. ನೃತ್ಯದ ಮೇಲೆ ಒಲವಿರುವ ಕರುನಾಡಿನ ಪ್ರತಿಯೊಬ್ಬ ಅಮ್ಮಂದಿರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ನಿಮ್ಮ ಹತ್ತಿರದ ಆಡಿಷನ್ ಸ್ಥಳಗಳ ಮಾಹಿತಿಗಾಗಿ ಜೀ ಕನ್ನಡದ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳನ್ನು ಗಮನಿಸಬೇಕಿದೆ.

ನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..! – Kannada News | Virat Kohli Rules Team India’s 2027 World Cup Blueprint

ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್ ಗಿಲ್, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗೆಗಿನ ಎಲ್ಲಾ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಯೋಜನೆಯಲ್ಲಿ ಕೊಹ್ಲಿ ಮತ್ತು ರೋಹಿತ್ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿಯೇ ಕಿಂಗ್:

ಈ ಸರಣಿಯ ಆರಂಭಕ್ಕೆ ಮುನ್ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದರು. ಈ ಬಗ್ಗೆ ಮಾತನಾಡಿದ ಗಿಲ್, “ಕಳೆದ ಎರಡು ದಿನಗಳ ಹಿಂದೆಯಷ್ಟೇ ನಾನು ಮತ್ತು ವಿರಾಟ್ ಭಾಯ್ 2027ರ ವಿಶ್ವಕಪ್ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ತಂಡದ ಸಂಯೋಜನೆಗಳು ಹೇಗೆ ಇರಬೇಕು, ಸದ್ಯ ತಂಡದಲ್ಲಿಲ್ಲದಿದ್ದರೂ ಭವಿಷ್ಯದಲ್ಲಿ ಯಾರು ಪ್ರಮುಖ ಪಾತ್ರ ವಹಿಸಬಹುದು ಮತ್ತು ಪ್ರತಿ ಆಟಗಾರನಿಗೆ ಯಾವ ಸ್ಥಾನ ಸೂಕ್ತ ಎಂಬುದರ ಕುರಿತು ನಾವು ಗಂಭೀರವಾಗಿ ಚರ್ಚಿಸಿದ್ದೇವೆ” ಎಂದು ಬಹಿರಂಗಪಡಿಸಿದ್ದಾರೆ.

ಶುಭ್‌ಮನ್ ಗಿಲ್ ಅವರ ಈ ಹೇಳಿಕೆ ಮತ್ತು ನಡೆ ಟೀಮ್ ಇಂಡಿಯಾದಲ್ಲಿ ಇಂದಿಗೂ ವಿರಾಟ್ ಕೊಹ್ಲಿಯೇ ‘ಕಿಂಗ್’ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.

ಏಕದಿನ ವಿಶ್ವಕಪ್​ಗಾಗಿ ಭಾರತ ತಂಡ ಸಜ್ಜಾಗುತ್ತಿದ್ದು, ಶುಭ್‌ಮನ್ ಗಿಲ್ ಭವಿಷ್ಯದ ನಾಯಕನಾಗಿ ರೂಪುಗೊಳ್ಳುತ್ತಿದ್ದಾರೆ. ಇಂತಹ ಮಹತ್ವದ ಪರಿವರ್ತನೆಯ ಹಂತದಲ್ಲಿ, ಗಿಲ್ ತಮಗಿಂತ ಅನುಭವದಲ್ಲಿ ಹಿರಿಯರಾದ ವಿರಾಟ್ ಕೊಹ್ಲಿ ಅವರ ಬಳಿ ಹೋಗಿ ಭವಿಷ್ಯದ ರೋಡ್‌ಮ್ಯಾಪ್ ಚರ್ಚಿಸಿರುವುದು ಕೊಹ್ಲಿಯ ಸ್ಥಾನ ಮತ್ತು ಗೌರವ ಎಷ್ಟು ದೊಡ್ಡದು ಎಂಬುದನ್ನು ತೋರಿಸುತ್ತದೆ.

ಏಕದಿನ ವಿಶ್ವಕಪ್​ಗೆ ಮಾಸ್ಟರ್ ಪ್ಲ್ಯಾನ್:

ಏಕದಿನ ತಂಡದಲ್ಲಿ ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಆಡಬೇಕು, ಸದ್ಯಕ್ಕೆ ತಂಡದಲ್ಲಿಲ್ಲದ ಯುವ ಆಟಗಾರರನ್ನು ಮುಂದಿನ ದಿನಗಳಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬ ‘ದೊಡ್ಡ ಮಟ್ಟದ ಕಾರ್ಯತಂತ್ರಗಳನ್ನು’ ನಾಯಕನು ಕೊಹ್ಲಿ ಜೊತೆಗೂಡಿ ನಿರ್ಧರಿಸುತ್ತಿದ್ದಾರೆ. ಇದು ಕೊಹ್ಲಿ ಕೇವಲ ಒಬ್ಬ ಬ್ಯಾಟರ್ ಆಗಿ ಮಾತ್ರವಲ್ಲದೆ, ಇಡೀ ತಂಡದ ಥಿಂಕ್ ಟ್ಯಾಂಕ್ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.

ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ತಂಡದಲ್ಲಿ ತಮಗೆ ಬೇಕಾದ ಬದಲಾವಣೆಗಳನ್ನು ತರಲು ಮತ್ತು ವಿರಾಟ್ ಕೊಹ್ಲಿ ಅವರ ಪ್ರಭಾವವನ್ನು ಕೊಂಚ ಸೈಡ್‌ಲೈನ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿರುವುದು ಸುಳ್ಳಲ್ಲ. ಆದರೆ, ಭವಿಷ್ಯದ ನಾಯಕ ಶುಭ್‌ಮನ್ ಗಿಲ್ ಮಾತ್ರ ಕೊಹ್ಲಿಯ ಆಟ ಹಾಗೂ ಅನುಭವದ ಅನಿವಾರ್ಯತೆಯನ್ನು ಚೆನ್ನಾಗಿ ಅರಿತಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೈ ಜೋಡಿಸಿ: ECB ಬಿಗ್ ಆಫರ್

ಗಂಭೀರ್ ಅವರ ಹೊಸ ಆಲೋಚನೆಗಳ ನಡುವೆಯೂ, ಶುಭ್​ಮನ್ ಗಿಲ್ ನೇರವಾಗಿ ‘ಕಿಂಗ್’ ಕೊಹ್ಲಿ ಬಳಿಯೇ ತೆರಳಿ 2027ರ ಭವಿಷ್ಯದ ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿರುವುದು ತಂಡದಲ್ಲಿ ಕೊಹ್ಲಿ ಸ್ಥಾನ ಅಲುಗಾಡದಂತೆ ಮಾಡಿದೆ. ಕೋಚ್ ಗಂಭೀರ್ ಅವರ ರಣತಂತ್ರ ಏನೇ ಇರಲಿ, ಮೈದಾನದ ಒಳಗೆ ಮತ್ತು ಕಾರ್ಯತಂತ್ರದ ರೂಪುರೇಷೆಯಲ್ಲಿ ವಿರಾಟ್ ಕೊಹ್ಲಿ ಇಂದಿಗೂ ಟೀಮ್ ಇಂಡಿಯಾದ ಅಪ್ರತಿಮ ಮಾರ್ಗದರ್ಶಕ ಹಾಗೂ ‘ಅಧಿಪತಿ’ ಎಂಬುದನ್ನು ಗಿಲ್ ಅವರ ಈ ಮಾಸ್ಟರ್ ಪ್ಲಾನ್ ಸ್ಪಷ್ಟಪಡಿಸಿದೆ.

Source link

Sundarakanda: ಮಂಗಳವಾರ ಸುಂದರಕಾಂಡ ಪಠಿಸಬೇಕು ಯಾಕೆ ಗೊತ್ತಾ? ಮಹತ್ವ ಮತ್ತು ಪಠಣದ ವಿಶೇಷತೆ ಇಲ್ಲಿ ತಿಳಿಯಿರಿ – Kannada News | Sundarakanda Path: Tuesday’s Hanuman Pooja Benefits and Recitation Guide for Peace and Success

ಮಂಗಳವಾರವನ್ನು ಶ್ರೀರಾಮನ ಪರಮಭಕ್ತನಾದ ಹನುಮಂತನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತರು ಹನುಮಂತನಿಗೆ ವಿಶೇಷ ಪೂಜೆ, ಉಪವಾಸ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಂಗಳವಾರದಂದು ಭಕ್ತಿಯಿಂದ ಹನುಮಂತನ ಆರಾಧನೆ ಮಾಡಿದರೆ ಬಜರಂಗಬಲಿ ಶೀಘ್ರ ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಹೀಗಾಗಿ ಈ ದಿನ ಸುಂದರಕಾಂಡ ಪಠಣಕ್ಕೂ ವಿಶೇಷ ಮಹತ್ವವಿದೆ.

ಸುಂದರಕಾಂಡ ಪಠಣದ ವಿಶೇಷತೆ:

ರಾಮಚರಿತಮಾನಸದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಅಧ್ಯಾಯಗಳಲ್ಲಿ ಸುಂದರಕಾಂಡವೂ ಒಂದು. ಇದರಲ್ಲಿ ಹನುಮಂತನ ಅಪಾರ ಭಕ್ತಿ, ಶೌರ್ಯ, ಧೈರ್ಯ ಹಾಗೂ ಶ್ರೀರಾಮನ ಮೇಲಿನ ಅಚಲ ನಿಷ್ಠೆಯನ್ನು ವಿವರಿಸಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಸುಂದರಕಾಂಡವನ್ನು ನಿಯಮಿತವಾಗಿ ಪಠಿಸುವುದರಿಂದ ಜೀವನದಲ್ಲಿನ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಜೊತೆಗೆ ಜಾತಕದಲ್ಲಿರುವ ಹಲವು ಗ್ರಹದೋಷಗಳು ಶಮನಗೊಂಡು ಮಂಗಳ ಗ್ರಹದ ಅನುಗ್ರಹವೂ ದೊರೆಯುತ್ತದೆ ಎಂದು ನಂಬಲಾಗಿದೆ.

ಸುಂದರಕಾಂಡವನ್ನು ಪಠಿಸುವ ಸರಿಯಾದ ವಿಧಾನ:

ಸುಂದರಕಾಂಡ ಪಠಣ ಆರಂಭಿಸುವ ಮೊದಲು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ನಂತರ ಮನೆಯ ಪೂಜಾ ಸ್ಥಳವನ್ನು ಶುಚಿಗೊಳಿಸಿ ಈಶಾನ್ಯ ದಿಕ್ಕಿನಲ್ಲಿ ಶ್ರೀರಾಮನ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಬೇಕು. ಬೆಳಿಗ್ಗೆ ಅಥವಾ ಸಂಜೆ ಎರಡೂ ಸಮಯದಲ್ಲಿ ಸುಂದರಕಾಂಡವನ್ನು ಪಠಿಸಬಹುದು. ಸಂಜೆ ಪಠಿಸುವವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವುದು ಶುಭಕರವೆಂದು ಹೇಳಲಾಗುತ್ತದೆ. ಬಳಿಕ ಮಲ್ಲಿಗೆ ಎಣ್ಣೆಯ ದೀಪ ಹಚ್ಚಿ ಧೂಪ, ಹೂವು, ಹಣ್ಣು ಹಾಗೂ ಪ್ರಸಾದವನ್ನು ಅರ್ಪಿಸಬೇಕು.

ಅನಂತರ ಗಣೇಶ ವಂದನೆ ಮತ್ತು ಗುರು ವಂದನೆ ಸಲ್ಲಿಸಿ ಶ್ರೀರಾಮ ಹಾಗೂ ಹನುಮಂತನ ಧ್ಯಾನ ಮಾಡಬೇಕು. ಹನುಮಂತನ ಪಾದಗಳಿಗೆ ಏಳು ಅರಳಿ ಎಲೆಗಳನ್ನು ಅರ್ಪಿಸಿ, ಭಕ್ತಿ ಮತ್ತು ಏಕಾಗ್ರತೆಯಿಂದ ಸುಂದರಕಾಂಡ ಪಠಣ ಆರಂಭಿಸಬೇಕು. ಪಠಣ ಪೂರ್ಣಗೊಂಡ ನಂತರ ಹನುಮಾನ್ ಚಾಲೀಸಾ ಪಠಿಸಿ ಆರತಿ ಮಾಡಬೇಕು. ಕೊನೆಯಲ್ಲಿ ಬೂಂದಿ ಅಥವಾ ಬೆಲ್ಲ-ಕಡಲೆಕಾಳಿನ ಪ್ರಸಾದವನ್ನು ಭಕ್ತರಿಗೆ ಹಂಚುವುದು ಶುಭಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸುಂದರಕಾಂಡದ ಧಾರ್ಮಿಕ ಮಹತ್ವ:

ಸುಂದರಕಾಂಡ ಪಠಣದಿಂದ ಹನುಮಂತನ ವಿಶೇಷ ಕೃಪೆ ಲಭಿಸುತ್ತದೆ ಎಂದು ಧಾರ್ಮಿಕ ಗ್ರಂಥಗಳು ತಿಳಿಸುತ್ತವೆ. ಇದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಧೈರ್ಯ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ಹೆಚ್ಚುತ್ತದೆ. ನಿಯಮಿತವಾಗಿ ಸುಂದರಕಾಂಡ ಪಠಣ ನಡೆಯುವ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಸುವುದಿಲ್ಲ ಎಂಬ ನಂಬಿಕೆಯೂ ಇದೆ. ಇದರಿಂದ ಕುಟುಂಬದಲ್ಲಿ ಸದಾ ನೆಮ್ಮದಿ, ಸೌಹಾರ್ದತೆ ಹಾಗೂ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.

ಸುಂದರಕಾಂಡ ಪಠಣದಿಂದಾಗುವ ಪ್ರಮುಖ ಪ್ರಯೋಜನಗಳು:

  • ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ.
  • ಭಯ, ಆತಂಕ ಹಾಗೂ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ.
  • ಉದ್ಯೋಗ, ವ್ಯವಹಾರ ಹಾಗೂ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
  • ಆತ್ಮವಿಶ್ವಾಸ ಮತ್ತು ಮನೋಬಲ ಹೆಚ್ಚುತ್ತದೆ.
  • ಕುಟುಂಬದಲ್ಲಿ ಪ್ರೀತಿ, ಐಕ್ಯತೆ, ಸಂತೋಷ ಹಾಗೂ ಶಾಂತಿ ವೃದ್ಧಿಯಾಗುತ್ತದೆ.
  • ಉತ್ತಮ ಆರೋಗ್ಯ ಮತ್ತು ಯಶಸ್ಸಿನ ಆಶೀರ್ವಾದ ದೊರೆಯುತ್ತದೆ.
  • ಹನುಮಂತನ ಕೃಪೆಯಿಂದ ಜೀವನದಲ್ಲಿ ಶುಭ ಫಲಗಳು ಹೆಚ್ಚಾಗುತ್ತವೆ.

ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಗಳು ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವ ಮಾಹಿತಿಯನ್ನು ಆಧರಿಸಿದೆ. ಇದರ ಫಲಿತಾಂಶಗಳು ವ್ಯಕ್ತಿಯ ನಂಬಿಕೆ ಮತ್ತು ಆಚರಣೆಯ ಮೇಲೆ ಅವಲಂಬಿತವಾಗಿರುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:02 pm, Tue, 14 July 26

Source link

ಹೈದರಾಬಾದ್​ನಲ್ಲಿ ಜುಲೈ 14ರಿಂದ ಮೂರು ದಿನಗಳ ಕಾಲ ‘ಬ್ರಿಕ್ಸ್ ಟ್ರೇಡ್ ಯೂನಿಯನ್ ಶೃಂಗಸಭೆ 2026’ – Kannada News | Brics Trade Union Forum Summit 2026 from July 14 16 begins at Hyderabad

ಬ್ರಿಕ್ಸ್ ಟ್ರೇಡ್ ಯೂನಿಯನ್ ಫೋರಂ ಶೃಂಗಸಭೆImage Credit source: Youtube

ಹೈದರಾಬಾದ್, ಜುಲೈ 14: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ ಭಾಗವಾಗಿ ಅತ್ಯಂತ ಪ್ರತಿಷ್ಠಿತ ‘ಬ್ರಿಕ್ಸ್ ಟ್ರೇಡ್ ಯೂನಿಯನ್ ಫೋರಮ್ (BTUF) ಶೃಂಗಸಭೆ 2026’ ಇವತ್ತು (ಜುಲೈ 14) ಆರಂಭಗೊಂಡಿದೆ. ಹೈದರಾಬಾದ್​ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಜುಲೈ 16ರವರೆಗೆ ಮೂರು ದಿನಗಳವರೆಗೆ ಇದೆ. ಭಾರತೀಯ ಮಜ್ದೂರ್ ಸಂಘ (BMS) ಈ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಭವಿಷ್ಯದ ಉದ್ಯೋಗಗಳು, ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ಭದ್ರತೆಯ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ.

ಬ್ರಿಕ್ಸ್ ಟ್ರೇಡ್ ಯೂನಿಯನ್​ಗಳ ಫೋರಂ ಸಭೆ ಹೈದರಾಬಾದ್‌ನ ಟ್ಯಾಂಕ್ ಬಂಡ್ ಬಳಿಯಿರುವ ‘ಹೋಟೆಲ್ ಮ್ಯಾರಿಯಟ್’ (VAYU ಕೋರ್ಟ್‌ಯಾರ್ಡ್ ಮೀಟಿಂಗ್ ಹಾಲ್) ನಲ್ಲಿ ನಡೆಯುತ್ತಿದೆ. ಬ್ರೆಜಿಲ್, ರಷ್ಯಾ, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಒಟ್ಟು 14 ದೇಶಗಳ ಸುಮಾರು 50 ಅಂತರರಾಷ್ಟ್ರೀಯ ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ಕಾರ್ಮಿಕ ಸಂಘಟನೆಗಳ 70ಕ್ಕೂ ಹೆಚ್ಚು ರಾಷ್ಟ್ರೀಯ ಮುಖಂಡರು ಮತ್ತು ಕಾರ್ಮಿಕ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹೊಸ ಮನೆ ಖರೀದಿಸುವಾಗ ಈ ದಾಖಲೆಗಳು ನಿಮ್ಮ ಕೈ ಸೇರಿದ್ಯಾ ಒಮ್ಮೆ ನೋಡ್ಕೊಳ್ಳಿ

ಕಾರ್ಯಕ್ರಮದ ಲೈವ್ ದೃಶ್ಯಗಳು
https://www.youtube.com/watch?v=LvXxcL3dVdQ

ಬಿಟಿಯುಎಫ್​ನ ಪ್ರಮುಖ ಚರ್ಚಾ ವಿಷಯಗಳು

ಈ ಬಾರಿಯ ಶೃಂಗಸಭೆಯಲ್ಲಿ ಜಾಗತಿಕ ಕಾರ್ಮಿಕ ವಲಯ ಎದುರಿಸುತ್ತಿರುವ ಹೊಸ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಆಳವಾದ ಚರ್ಚೆಗಳು ನಡೆಯಲಿವೆ. ಮುಖ್ಯವಾಗಿ ಈ ಕೆಳಗಿನ ವಿಷಯಗಳ ಮೇಲೆ ಗಮನ ಹರಿಸಲಾಗುತ್ತದೆ:

  • ಸಾರ್ವತ್ರಿಕ ಸಾಮಾಜಿಕ ಭದ್ರತೆ: ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳ ಸಾರ್ವತ್ರಿಕೀಕರಣ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ಅನ್ವಯಿಸುವಿಕೆ.
  • ಮಹಿಳೆಯರು ಮತ್ತು ಭವಿಷ್ಯದ ಉದ್ಯೋಗ: ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರ ಪಾತ್ರ ಮತ್ತು ಭವಿಷ್ಯದ ಸವಾಲುಗಳು.
  • ಕೌಶಲ್ಯಾಭಿವೃದ್ಧಿ: ಬದಲಾಗುತ್ತಿರುವ ಕೈಗಾರಿಕಾ ಜಗತ್ತಿಗೆ ತಕ್ಕಂತೆ ಕೌಶಲ್ಯಗಳನ್ನು ರೂಪಿಸುವಲ್ಲಿ ಕಾರ್ಮಿಕ ಸಂಘಟನೆಗಳ ಪಾತ್ರ.
  • ಮಾನವ ಕೇಂದ್ರಿತ ತಂತ್ರಜ್ಞಾನ ಮತ್ತು ಎಐ (AI): ಕೆಲಸದ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆಯ (Artificial Intelligence) ಜವಾಬ್ದಾರಿಯುತ ಬಳಕೆ ಹಾಗೂ ಮಾನವ ಕೇಂದ್ರಿತ ತಂತ್ರಜ್ಞಾನದ ಅಳವಡಿಕೆ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಜುಲೈ 14, ಸಂಜೆ ಕಾರ್ಮಿಕರ ಮಹಾ ಸಂಗಮ

ಶೃಂಗಸಭೆಯ ಮೊದಲ ದಿನವಾದ ಜುಲೈ 14 ರಂದು ಸಂಜೆ 5:45 ಕ್ಕೆ ವಿ.ಎಸ್.ಟಿ ಜಂಕ್ಷನ್ ಬಳಿಯ ಆರ್.ಟಿ.ಸಿ ಕಲ್ಯಾಣ ಮಂಟಪದಲ್ಲಿ “From Shopfloor to Summit – The Workforce Leads the Way”** (ಕೆಲಸದ ಸ್ಥಳದಿಂದ ಶೃಂಗಸಭೆಯವರೆಗೆ – ಕಾರ್ಮಿಕ ಶಕ್ತಿಯೇ ಮುನ್ನಡೆ) ಎಂಬ ವಿಷಯದ ಅಡಿಯಲ್ಲಿ ಬೃಹತ್ ಕಾರ್ಮಿಕರ ಸಂಗಮ ಕಾರ್ಯಕ್ರಮವನ್ನು (Workers’ Confluence) ಆಯೋಜಿಸಲಾಗಿದೆ.

ಈ ಮೂರು ದಿನಗಳ ಸುದೀರ್ಘ ಚರ್ಚೆಗಳ ನಂತರ, ಬ್ರಿಕ್ಸ್ ರಾಷ್ಟ್ರಗಳ ಕಾರ್ಮಿಕ ವಲಯದಲ್ಲಿ ಸುಸ್ಥಿರ, ಅಂತರ್ಗತ ಹಾಗೂ ಜನಸ್ನೇಹಿ ಉದ್ಯೋಗಾವಕಾಶಗಳನ್ನು ನಿರ್ಮಿಸಲು ಮತ್ತು ಹಕ್ಕುಗಳ ರಕ್ಷಣೆಗೆ ಪೂರಕವಾದ ಪ್ರಮುಖ ಶಿಫಾರಸುಗಳನ್ನು ಸಿದ್ಧಪಡಿಸಿ ಬಿಡುಗಡೆಗೊಳಿಸಲಾಗುತ್ತದೆ.

ಯೂನಿಯನ್ ಫೋರಮ್ ಸೆಕ್ರೆಟರಿಯಟ್ ಕಚೇರಿ ಉದ್ಘಾಟನೆ: ಸಮ್ಮೇಳನದ ಪೂರ್ವಸಿದ್ಧತೆಯ ಭಾಗವಾಗಿ ಹೈದರಾಬಾದ್‌ನ ಆರ್.ಟಿ.ಸಿ ಕ್ರಾಸ್‌ರೋಡ್ಸ್‌ನಲ್ಲಿ ಮಾಜಿ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಅವರು ಶೃಂಗಸಭೆಯ ಸಚಿವಾಲಯವನ್ನು (Secretariat) ಉದ್ಘಾಟಿಸಿ ಚಾಲನೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಪಾರ್ಟ್​ಮೆಂಟ್ ನಿರ್ವಹಣೆಗೆ ಬರಲಿದೆ ಹೊಸ ಕಾನೂನು: ನಿವಾಸಿಗಳ ಜತೆ ಸಮಾಲೋಚನೆ ನಡೆಸಲಿರುವ ಸಿಎಂ ಡಿಕೆ ಶಿವಕುಮಾರ್ – Kannada News | Karnataka New Apartment Law: CM DK Shivakumar to Hold Consultation with Apartment Owners and Residents on July 17

ಬೆಂಗಳೂರು, ಜುಲೈ 14: ಅಪಾರ್ಟ್​ಮೆಂಟ್ ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೊಸ, ಸುಧಾರಿತ ಕಾನೂನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನ ಅಪಾರ್ಟ್​ಮೆಂಟ್ ಮಾಲೀಕರು ಹಲವು ವರ್ಷಗಳಿಂದ ಈ ಕುರಿತು ಒತ್ತಾಯಿಸುತ್ತಿದ್ದರು. ಅವರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಹೊಸ ಕಾನೂನನ್ನು ರೂಪಿಸುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಈ ಹೊಸ ಕಾನೂನನ್ನು ವಿಧಾನ ಮಂಡಲದಲ್ಲಿ ಮಂಡಿಸುವ ಮೊದಲು, ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯಂತೆ ರೂಪಿಸಲಾದ ಈ ಕಾನೂನಿನ ಬಗ್ಗೆ ಚರ್ಚಿಸಲು, ಜುಲೈ 17ರ ಬುಧವಾರ ಬೆಳಗ್ಗೆ 11:00 ಗಂಟೆಗೆ ಬೆಂಗಳೂರಿನ ಜವಾಹರ ಲಾಲ್ ನೆಹರು ತಾರಾಲಯದ ಸಭಾಭವನದಲ್ಲಿ ಸಭೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅಪಾರ್ಟ್​ಮೆಂಟ್ ನಿವಾಸಿಗಳು, ಮಾಲೀಕರು ಮತ್ತು ಸಂಬಂಧಿತ ಪಾಲುದಾರರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ರಾಮಚಂದ್ರ ಗೌಡ ನಿಧನ: ಬಿ.ಎಸ್. ಯಡಿಯೂರಪ್ಪ ಸಂತಾಪ – Kannada News | Senior BJP Leader and Former Karnataka Minister Ramachandra Gowda Passes Away at 88

ಬೆಂಗಳೂರು, ಜುಲೈ 14: ಬಿಜೆಪಿಯ ಹಿರಿಯ ನಾಯಕ ಹಾಗೂ ಕರ್ನಾಟಕದ ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ರಾಮಚಂದ್ರ ಗೌಡ ಅವರು ಜನಸಂಘದ ಕಾಲದಿಂದಲೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು.

ಜನಸಂಘದ ಕಾಲದ ಧೀಮಂತ ನಾಯಕ

ರಾಮಚಂದ್ರ ಗೌಡ ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಇಂದಿನ ಬಲಿಷ್ಠ ಸ್ಥಿತಿಗೆ ತಲುಪುವಲ್ಲಿ ಇವರ ಕೊಡುಗೆ ಅಪಾರ. ಮುಂಚಿನ ಜನಸಂಘದ ಅವಧಿಯಿಂದಲೇ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ್ದ ಅವರು, ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದ ಗೌಡರು, ತಮ್ಮ ಆಡಳಿತ ಚಾತುರ್ಯ ಮತ್ತು ದಕ್ಷತೆಯಿಂದ ಗುರುತಿಸಿಕೊಂಡಿದ್ದರು. ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದುದು.

ಭಾವನಾತ್ಮಕವಾಗಿ ಸ್ಮರಿಸಿದ ಬಿಎಸ್ ವೈ

ರಾಮಚಂದ್ರ ಗೌಡ ಅವರ ಅಗಲಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ತಮ್ಮ ಒಡನಾಟವನ್ನು ನೆನೆದು ಕಂಬನಿ ಮಿಡಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ದಶಕಗಳ ಕಾಲದ ಆತ್ಮೀಯ ಒಡನಾಡಿ, ಹಿರಿಯ ನಾಯಕ ರಾಮಚಂದ್ರ ಗೌಡರ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ನಾನು ನನ್ನ ಮತ್ತೊಬ್ಬ ಸಹೋದರನನ್ನು ಕಳೆದುಕೊಂಡಂತಾಗಿದೆ. ಜನಸಂಘದ ದಿನಗಳಿಂದ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ದಿನಗಳು, ಹಗಲಿರುಳು ಶ್ರಮಿಸಿ ರಾಜ್ಯಾದ್ಯಂತ ಪಕ್ಷ ಕಟ್ಟಿದ ನೆನಪುಗಳು ಕಣ್ಣಮುಂದೆ ಸುಳಿಯುತ್ತಿವೆ. ನನ್ನ ಸಂಪುಟದ ಸಹೋದ್ಯೋಗಿಯಾಗಿ ಅವರ ಆಡಳಿತ ಚಾತುರ್ಯ ಹಾಗೂ ಬದ್ಧತೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ರಾಮಚಂದ್ರ ಗೌಡರ ನಿಧನವು ರಾಜ್ಯ ರಾಜಕಾರಣಕ್ಕೆ ಹಾಗೂ ವಿಶೇಷವಾಗಿ ಬಿಜೆಪಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರು ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ನಾಯಕರು ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

POCSO ಪ್ರಕರಣಗಳಿಗೆ ಬ್ರೇಕ್: ದೇಶದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಲೈಂಗಿಕ ಶಿಕ್ಷಣ’ ಕಡ್ಡಾಯ, ಕೇಂದ್ರದ ಪ್ಲ್ಯಾನ್ – Kannada News | Centre Tells Supreme Court Age Appropriate Health Education Will Be Integrated Into Curriculum

ನವದೆಹಲಿ, ಜುಲೈ 14: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ‘ಸಮಗ್ರ ದೈಹಿಕ ಹಾಗೂ ಲೈಂಗಿಕ ಶಿಕ್ಷಣ’ವನ್ನು ಅಧಿಕೃತ ವಿಷಯವಾಗಿ ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು, ರಾಷ್ಟ್ರೀಯ ತಜ್ಞರ ಸಮಿತಿ ನೀಡಿರುವ ಈ ಕ್ರಾಂತಿಕಾರಿ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡಿದ್ದು, ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ತಕ್ಷಣವೇ ದೇಶಾದ್ಯಂತ ಇದನ್ನು ಜಾರಿಗೆ ತರಲು ಸಿದ್ಧವಾಗಿದೆ ಎಂದು  ತಿಳಿಸಿದ್ದಾರೆ.

ಪಠ್ಯಕ್ರಮದಲ್ಲಿ ಏನಿರಲಿದೆ? ವಾರಕ್ಕೆ 2 ಕ್ಲಾಸ್ ಕಡ್ಡಾಯ

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ರ ಉದ್ದೇಶಗಳಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ (NCERT) ಈ ಹೊಸ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಿದೆ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳ ವಯಸ್ಸಿಗೆ ತಕ್ಕಂತೆ ಈ ಕೆಳಗಿನ ಪ್ರಮುಖ ವಿಷಯಗಳನ್ನು ಬೋಧಿಸಲಾಗುತ್ತದೆ.

ಮತ್ತಷ್ಟು ಓದಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಉತ್ತೇಜಿಸುವ ಇನ್​ಸ್ಟಾ ಜಾಹೀರಾತುಗಳು; ಮೆಟಾಗೆ ನೋಟೀಸ್

ಗುಡ್ ಟಚ್ ಮತ್ತು ಬ್ಯಾಡ್ ಟಚ್: ಮಕ್ಕಳಿಗೆ ಯಾವುದು ಸುರಕ್ಷಿತ ಸ್ಪರ್ಶ ಮತ್ತು ಯಾವುದು ಅಸುರಕ್ಷಿತ ಸ್ಪರ್ಶ ಎಂಬುದನ್ನು ಸರಳವಾಗಿ ಕಲಿಸುವುದು.

ದೌರ್ಜನ್ಯದ ವಿರುದ್ಧ ಜಾಗೃತಿ: ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಯಾರಿಗೆ ದೂರು ನೀಡಬೇಕು ಎಂಬ ಅರಿವು ಮೂಡಿಸುವುದು.

ದೇಹದ ತಿಳಿವಳಿಕೆ ಮತ್ತು ನೈರ್ಮಲ್ಯ: ವೈಯಕ್ತಿಕ ನೈರ್ಮಲ್ಯ ಹಾಗೂ ಮಾನವ ದೇಹದ ಭಾಗಗಳ ಮೂಲಭೂತ ಮತ್ತು ವೈಜ್ಞಾನಿಕ ಜ್ಞಾನವನ್ನು ನೀಡುವುದು.

ವಿಶೇಷ ತರಬೇತಿ ಪಡೆದ ಶಿಕ್ಷಕರು: ಈ ವಿಷಯವನ್ನು ಬೋಧಿಸಲು ಪ್ರಾಥಮಿಕ ಹಂತದಿಂದಲೇ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಲಾಗುತ್ತದೆ. ಪ್ರತಿ ವಾರಕ್ಕೆ ಕನಿಷ್ಠ ಎರಡು ಬಾರಿ 15 ರಿಂದ 20 ನಿಮಿಷಗಳ ಕಾಲ ಈ ಜಾಗೃತಿ ತರಗತಿಗಳನ್ನು ನಡೆಸುವುದು ಕಡ್ಡಾಯವಾಗಲಿದೆ.

ಈ ಸಮಿತಿಯನ್ನು ರಚಿಸಿದ್ದು ಏಕೆ?

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹದಿಹರೆಯದ ಯುವಕ-ಯುವತಿಯರು ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದರೂ ಸಹ, ಭಾರತೀಯ ಕಾನೂನಿನ ಪ್ರಕಾರ 18 ವರ್ಷ ತುಂಬದ ಕಾರಣ ಅವರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಕಠಿಣ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಇದು ಯುವಜನರ ಇಡೀ ಭವಿಷ್ಯವನ್ನೇ ಹಾಳುಮಾಡುತ್ತಿದೆ.

ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಹಾಗೂ ಇಂತಹ ಪ್ರಕರಣಗಳನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯನ್ನು ರಚಿಸಿತ್ತು. ಇದರಲ್ಲಿ ಪ್ರಸಿದ್ಧ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS), ಮಕ್ಕಳ ಮನಶ್ಶಾಸ್ತ್ರಜ್ಞರು ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ತಜ್ಞರು ಪಾಲ್ಗೊಂಡು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಪೋಷಕರಿಗೂ ಇರಲಿದೆ ವಿಶೇಷ ತರಗತಿ

ಪೋಷಕರು-ಶಿಕ್ಷಕರ ಸಭೆ: ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಪೋಷಕರು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ತಂದೆ-ತಾಯಂದಿರಿಗೂ ವಿಶೇಷ ಸಭೆಗಳ ಮೂಲಕ ಕೌನ್ಸಿಲಿಂಗ್ ನೀಡಲು ಸಮಿತಿ ಶಿಫಾರಸು ಮಾಡಿದೆ.

ಹಿರಿಯ ವಕೀಲರಾದ ಮಾಧವಿ ದಿವಾನ್ ಅವರು ಈ ವರದಿಯನ್ನು ಸ್ವಾಗತಿಸಿದ್ದಾರಾದರೂ, ಭಾರತೀಯ ಸಮಾಜ ಮತ್ತು ಸಂಸ್ಕೃತಿಗೆ ತಕ್ಕಂತೆ ‘ಸಮಗ್ರ ಲೈಂಗಿಕ ಶಿಕ್ಷಣ’ ಎಂಬ ಪದವನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸೂಕ್ಷ್ಮವಾಗಿ ಪಠ್ಯದಲ್ಲಿ ವ್ಯಾಖ್ಯಾನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಇಡೀ ವರದಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿದ ನಂತರ ತನ್ನ ಅಂತಿಮ ಆದೇಶವನ್ನು ಪ್ರಕಟಿಸಲಿದೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗುವ ಮುನ್ಸೂಚನೆ ಸಿಕ್ಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ – Kannada News | A dog showed affection to a young man grieving the loss of his father

ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ (Dog). ಈ ಶ್ವಾನಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಈ ಮೂಕಪ್ರಾಣಿಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಮನೆ ಮಾಲೀಕ ದುಃಖದಲ್ಲಿದ್ದರೆ ತನ್ನದೇ ರೀತಿ ಕಾಳಜಿ ವಹಿಸುತ್ತದೆ, ಸಮಾಧಾನ ಮಾಡುತ್ತದೆ. ಇದೀಗ ಇಂತಹದ್ದೇ ಕ್ಷಣದ ವಿಡಿಯೋ ವೈರಲ್ ಆಗಿದೆ. ಶ್ವಾನವೊಂದು ಯುವಕನಿಗೆ ಸಮಾಧಾನ ಮಾಡಿದೆ. ತಂದೆಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಯುವಕನಿಗೆ ಧೈರ್ಯ ತುಂಬಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ಲಕ್ಕಿ (Lucky) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾನೆ. ಮಲಗಿರುವ ಯುವಕನ ಪಕ್ಕದಲ್ಲಿ ಕುಳಿತುಕೊಂಡಿರುವ ಶ್ವಾನವು ಆತನ ಮುಖವನ್ನು ನೆಕ್ಕುತ್ತ ಪ್ರೀತಿ ತೋರಿಸಿದೆ. ಈ ದೃಶ್ಯವು ಯುವಕನಿಗೆ ಸಾಂತ್ವನ ನೀಡುವಂತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ಕ್ಲಿಪಿಂಗ್ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಪ್ರಾಮಾಣಿಕ ಪ್ರೀತಿ ಎಂದರೆ, ಮತ್ತೊಬ್ಬರು, ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Tue, 14 July 26

Source link

Exit mobile version