‘ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು? – Kannada News | Jodi No 1 Season 3: Kote Prabhakar and Malathi Crowned as Winners

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ 1 ಸೀಸನ್ 3’ ರ ರೋಮಾಂಚಕ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದ್ದು, ಕೋಟೆ ಪ್ರಭಾಕರ್ ಮತ್ತು ಮಾಲತಿ ದಂಪತಿ ವಿನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. ವೇದಿಕೆಯ ಮೇಲಿದ್ದ ಪ್ರಬಲ ಎಂಟು ಜೋಡಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವರು ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ ಇಡೀ ವೇದಿಕೆಯಲ್ಲಿ ಸಂಭ್ರಮ ಮನೆಮಾಡಿತು. ವಿಜೇತ ಜೋಡಿಗೆ ಜೀ ಕನ್ನಡ ವಾಹಿನಿಯ ವತಿಯಿಂದ ಆಕರ್ಷಕ ವಿನ್ನರ್ಸ್ ಟ್ರೋಫಿ ಹಾಗೂ 5 ಲಕ್ಷ ರೂಪಾಯಿಗಳ ನಗದು ಬಹುಮಾನದ ಚೆಕ್ ನೀಡಿ ಗೌರವಿಸಲಾಯಿತು.

ಈ ಮಹೋನ್ನತ ಗೆಲುವಿನ ನಂತರ ವೇದಿಕೆಯ ಮೇಲೆ ಮಾತನಾಡಿದ ನಟ ಕೋಟೆ ಪ್ರಭಾಕರ್ ಅತ್ಯಂತ ಭಾವುಕರಾದರು. ‘ಸಾಮಾನ್ಯವಾಗಿ ಎಲ್ಲರೂ ಬೆಳ್ಳಿತೆರೆಯಿಂದ ಕಿರುತೆರೆಗೆ ಬರುತ್ತಾರೆ, ಆದರೆ ನಾನು ಕಿರುತೆರೆಯ ಈ ವೇದಿಕೆಯ ಮೂಲಕ ನನ್ನ ಪತ್ನಿಗಾಗಿ ಹೊಸ ಇತಿಹಾಸ ಸೃಷ್ಟಿಸಿದ್ದೇನೆ. ನನ್ನ ಹೆಂಡತಿಗಾಗಿ ಈ ವೇದಿಕೆಗೆ ಬಂದಿದ್ದು ಸಾರ್ಥಕವಾಯಿತು’ ಎಂದು ಕಣ್ಣೀರು ಹಾಕಿದರು. ಅವರ ಪತ್ನಿ ಮಾಲತಿ ಮಾತನಾಡಿ, ‘ನಮ್ಮ ಮಗಳು ನೀಡಿದ ಪ್ರೋತ್ಸಾಹದಿಂದಲೇ ನಾವು ಈ ಸ್ಪರ್ಧೆಗೆ ಬರಲು ಸಾಧ್ಯವಾಯಿತು, ಇಲ್ಲದಿದ್ದರೆ ನಾನು ಬರುತ್ತಲೇ ಇರಲಿಲ್ಲ’ ಎಂದು ನೆನೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್ – Kannada News | Kalaburagi Jail Escape: Three Convicted Prisoners Flee Central Prison by Scaling Compound Wall

ಕಲಬುರಗಿ ಜೈಲಿನಿಂದ ಪರಾರಿಯಾಗಿರುವ ಸಜಾ ಕೈದಿಗಳುImage Credit source: tv9

ಕಲಬುರಗಿ, ಜುಲೈ 14: ಕಲಬುರಗಿ (Kalaburagi) ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿದ್ದು, ಈ ಘಟನೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮಂಗಳವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಜೈಲಿನ ಸುಮಾರು 15 ರಿಂದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾದ ಕೈದಿಗಳನ್ನು ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂದು ಗುರುತಿಸಲಾಗಿದೆ. ಇವರು ಬೀದರ್ ಜಿಲ್ಲೆಯ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಘಟನೆ ಸಂಬಂಧ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕೈದಿಗಳ ಕರೆದೊಯ್ಯಲು ಮೊದಲೇ ಸಿದ್ಧವಾಗಿತ್ತೇ ಕಾರು?

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಬ್ಯಾರಕ್‌ನ ಕಬ್ಬಿಣದ ಕಂಬಿಗಳನ್ನು ಕತ್ತರಿಸಿ, ಟವೆಲ್ ಹಾಗೂ ಹಾಸಿಗೆಯನ್ನು ಬಳಸಿಕೊಂಡು ಕಾಂಪೌಂಡ್ ಗೋಡೆ ದಾಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜೈಲಿನ ಹೊರಭಾಗದಲ್ಲಿ ಕಾರೊಂದು ಮೊದಲೇ ಸಿದ್ಧವಾಗಿದ್ದು, ಅದರಲ್ಲಿ ಪರಾರಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ.

ಜೈಲು ಭದ್ರತೆ ಬಗ್ಗೆ ಅನುಮಾನ

ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೈದಿಗಳು ಹಲವು ದಿನಗಳಿಂದಲೇ ಯೋಜನೆ ರೂಪಿಸಿ ಪರಾರಿಯಾಗಿದ್ದಾರೆಯೇ? ಜೈಲಿನೊಳಗೆ ಇಷ್ಟೊಂದು ಸಿದ್ಧತೆ ನಡೆದರೂ ಸಿಬ್ಬಂದಿಗೆ ಮಾಹಿತಿ ಇರಲಿಲ್ಲವೇ? ಅಥವಾ ಭದ್ರತಾ ಲೋಪ ಸಂಭವಿಸಿದ್ದೇ? ಎಂಬ ಅನುಮಾನಗಳು ಮೂಡಿವೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಜೈಲಿಗೆ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ನೇತೃತ್ವದ ತಂಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜೈಲಿನ ವಿವಿಧ ಬ್ಯಾರಕ್‌ಗಳು, ಕಾಂಪೌಂಡ್ ಗೋಡೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಪರಾರಿಯಾದ ಕೈದಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.

ಪ್ರಿಯಾಂಕ್ ಖರ್ಗೆ ಇರಾನ್-ಅಮೆರಿಕ ಯುದ್ಧದಲ್ಲಿ ಬ್ಯುಸಿ: ವಿಜಯೇಂದ್ರ ವ್ಯಂಗ್ಯ

ಈ ಘಟನೆ ಸದ್ಯ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಕಲಬುರಗಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸದ್ಯ ಇರಾನ್-ಅಮೆರಿಕ ಯುದ್ಧದಲ್ಲಿ ವ್ಯಸ್ತರಾಗಿದ್ದಾರೆ. ಅದನ್ನು ಮುಗಿಸಿ ಇಲ್ಲಿಗೆ ಬರುತ್ತಾರೆ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!

ಗಮನಾರ್ಹ ಸಂಗತಿಯೆಂದರೆ, ಇತ್ತೀಚೆಗಷ್ಟೇ ಜುಲೈ 3ರಂದು ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಕೈಕೋಳವನ್ನು ಬಿಚ್ಚಿಕೊಂಡು ಪರಾರಿಯಾಗಿದ್ದ ಘಟನೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಕೇಂದ್ರ ಕಾರಾಗೃಹದಿಂದಲೇ ಮೂವರು ಶಿಕ್ಷಿತ ಕೈದಿಗಳು ತಪ್ಪಿಸಿಕೊಂಡಿರುವುದು ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸದ್ಯ ಪರಾರಿಯಾದ ಕೈದಿಗಳ ಬಂಧನಕ್ಕೆ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಕ್ ತ್ರಿಷಾ ಹೆಸರಲ್ಲಿ ಇದೆ ಹಳ್ಳಿ; ಫೋಟೋ ವೈರಲ್ – Kannada News | Trisha Krishnan: Ladakh Village Named Trisha Fans Thrilled

ನಟಿ ತ್ರಿಶಾ ಕೃಷ್ಣನ್ ಹೆಸರನ್ನು ಹಳ್ಳಿಗೆ ಇಡಲಾಗಿದೆ ಎಂದರೆ ನೀವು ನಂಬಲೇಬೇಕು. ಹೌದು, ನಟಿ ತ್ರಿಶಾ ಕಳೆದ ಎರಡು ದಶಕಗಳಿಂದ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹಿರೋಯಿನ್ ಆಗಿ ಮಿಂಚುತ್ತಿದ್ದಾರೆ. ಪ್ರಸ್ತುತ 40 ವರ್ಷ ವಯಸ್ಸು ದಾಟಿದ್ದರೂ ಸಹ, ಅವರು ಇಂದಿನ ಯುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಅವರು ಈಗ ಪ್ರತಿ ಸಿನಿಮಾಗೆ ಬರೋಬ್ಬರಿ 12 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುವ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಬೇಡಿಕೆಯ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಟಿ ತ್ರಿಶಾ ಅವರ ಅಭಿಮಾನಿಗಳು ಅತ್ಯಂತ ರೋಚಕ ವಿಷಯವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪತ್ತೆ ಹಚ್ಚಿದ್ದಾರೆ. ಭಾರತದ ಉತ್ತರದ ತುದಿಯಲ್ಲಿರುವ ಲಡಾಖ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ನುಬ್ರಾ ಕಣಿವೆಯಿಂದ ವಿಶ್ವದ ಅತಿ ಎತ್ತರದ ಮಿಲಿಟರಿ ಬೇಸ್ ಕ್ಯಾಂಪ್ ಎನಿಸಿಕೊಂಡಿರುವ ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಹೋಗುವ ದಾರಿಯಲ್ಲಿ ಒಂದು ಸುಂದರವಾದ ಗ್ರಾಮವಿದೆ. ಈ ಗ್ರಾಮಕ್ಕೆ ನಟಿಯ ಹೆಸರನ್ನೇ ಇಡಲಾಗಿದ್ದು, ಆ ಹಳ್ಳಿಯ ಹೆಸರು ‘ವಿಜಯಕ್ ತ್ರಿಶಾ’ (Vijayank Trisha) ಎಂದಾಗಿದೆ. ಇತ್ತೀಚೆಗೆ ಈ ಹಳ್ಳಿಯ ದಾರಿಯಾಗಿ ಪ್ರಯಾಣಿಸುತ್ತಿದ್ದ ಅಭಿಮಾನಿಯೊಬ್ಬರು, ಅಲ್ಲಿನ ಗ್ರಾಮದ ಹೆಸರಿನ ಬೋರ್ಡ್ ಮುಂದೆ ನಿಂತು ಒಂದು ವಿಶೇಷವಾದ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ: ಎಸ್. ಜಾನಕಿ ನಿಧನ: ಶಿವಣ್ಣ, ಜಗ್ಗೇಶ್, ತ್ರಿಶಾ ಸೇರಿ ಹಲವು ಸೆಲೆಬ್ರಿಟಿಗಳ ಸಂತಾಪ

ಅಭಿಮಾನಿ ಚಿತ್ರೀಕರಿಸಿದ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ತಕ್ಷಣವೇ ಅದು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ದಕ್ಷಿಣ ಭಾರತದ ನಟಿಯೊಬ್ಬರ ಹೆಸರು ಲಡಾಖ್‌ನ ಗಡಿ ಭಾಗದಲ್ಲಿರುವ ಹಳ್ಳಿಯೊಂದಕ್ಕೆ ಇಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ತ್ರಿಶಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ವೀಡಿಯೊಗೆ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಸಿನಿಮಾ ಪ್ರೇಕ್ಷಕರು ಲೈಕ್ಸ್ ಒತ್ತುತ್ತಿದ್ದು, ಕಮೆಂಟ್‌ಗಳ ಮೂಲಕ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ನಟಿ ತ್ರಿಶಾ ಅವರ ಜನಪ್ರಿಯತೆ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ದೇಶದ ಗಡಿ ಭಾಗದವರೆಗೂ ಹಬ್ಬಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಸದ್ಯ ನಟಿ ತ್ರಿಶಾ ತಮಿಳು ಮತ್ತು ತೆಲುಗಿನ ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಶೂಟಿಂಗ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಇಳಯದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಅವರಂತಹ ಸ್ಟಾರ್ ನಟರ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಬ್ಯುಸಿ ಶೆಡ್ಯೂಲ್ ನಡುವೆಯೂ ಅವರ ಹೆಸರಿನ ಹಳ್ಳಿ ಇರುವ ಸುದ್ದಿ ಹೊರಬಿದ್ದಿರುವುದು ಚಿತ್ರರಂಗದಲ್ಲಿ ಮತ್ತೊಮ್ಮೆ ಅವರ ಸ್ಟಾರ್ ಗಿರಿಯನ್ನು ಎತ್ತಿ ತೋರಿಸಿದೆ. ಲಡಾಖ್‌ನ ಆ ಗಡಿಯ ಹಳ್ಳಿಗೆ ನಿಜಕ್ಕೂ ನಟಿ ತ್ರಿಶಾ ಅವರ ಹೆಸರನ್ನೇ ಇಡಲಾಗಿದೆಯೇ ಅಥವಾ ಅದರ ಹಿಂದೆ ಬೇರೆ ಏನಾದರೂ ಮಿಲಿಟರಿ ಇತಿಹಾಸವಿದೆಯೇ ಎಂಬ ಕುರಿತು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. ಪ್ರಭಾಸ್ ಅವರ ಹೆಸರು ಕೂಡ ಹಳ್ಳಿಗೆ ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:05 am, Tue, 14 July 26

Source link

ಸಮಂತಾರನ್ನು ಹಿಂದಿಕ್ಕಿ ‘ತುಂಬಾಡ್’ ಪ್ರಪಂಚ ಪ್ರವೇಶಿಸಿದ ಆಲಿಯಾ ಭಟ್ – Kannada News | Alia Bhatt officially joined Tumbbad 2 movie

‘ತುಂಬಾಡ್’ (Tumbbad) ಭಾರತೀಯ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ. ನಾನಾ ಅಡೆತಡೆಗಳು, ಸಮಸ್ಯೆಗಳ ಬಳಿಕ 2018 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಆದರೆ ಕಾಲ ಸರಿದಂತೆ ಸಿನಿಮಾ ತಮ್ಮ ನಿಜವಾದ ಪ್ರೇಕ್ಷಕರನ್ನು ಹುಡುಕಿಕೊಂಡಿತು. ಒಟಿಟಿಗಳಲ್ಲಿ, ಪೈರಸಿ ಸೈಟ್​​ಗಳ ಮೂಲಕ ಹೆಚ್ಚು-ಹೆಚ್ಚು ಜನರಿಗೆ ತಲುಪಿ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇತ್ತೀಚೆಗಷ್ಟೆ ಸಿನಿಮಾ ಮರು ಬಿಡುಗಡೆ ಆಗಿ, ದಾಖಲೆ ಮೊತ್ತದ ಗಳಿಕೆ ಮಾಡಿತು. ಇದೀಗ ಸಿನಿಮಾದ ಸೀಕ್ವೆಲ್ ನಿರ್ಮಾಣ ಆಗುತ್ತಿದ್ದು, ನಟಿ ಆಲಿಯಾ ಭಟ್ ಮುಖ್ಯ ಪಾತ್ರಕ್ಕೆ ಆಯ್ಕೆ ಆಗಿರುವುದು ವಿಶೇಷ.

‘ತುಂಬಾಡ್ 2’ ನಿರ್ಮಾಣ ಆಗಲಿರುವ ಸುದ್ದಿ ಹಳತೇ ಆಗಿದೆ. ಆದರೆ ಸಿನಿಮಾನಲ್ಲಿ ನಟಿಸಲಿರುವ ನಟಿ ಯಾರೆಂಬುದರ ಬಗ್ಗೆ ಸಾಕಷ್ಟು ಗೊಂದಲುಗಳು ಸೃಷ್ಟಿ ಆಗಿದ್ದವು. ಸಮಂತಾ ಋತ್ ಪ್ರಭು ಹೆಸರು ಮುಖ್ಯವಾಗಿ ಕೇಳಿ ಬಂದಿತ್ತು. ಸಮಂತಾರ ಪತಿಯೇ ‘ತುಂಬಾಡ್ 2’ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಯೂ ಗಟ್ಟಿಯಾಗಿ ಹರಿದಾಡಿತ್ತು. ಈ ನಡುವೆ ನಟಿ ಜಾನ್ಹವಿ ಕಪೂರ್ ಹೆಸರು ಸಹ ಕೇಳಿ ಬಂದಿತ್ತು. ಆದರೆ ಇದೀಗ ಆಲಿಯಾ ಭಟ್ ಅವರು ಅಧಿಕೃತವಾಗಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಜನಪ್ರಿಯ ಹಾರರ್ ಚಿತ್ರ ‘ತುಂಬಾಡ್’ನ ಬಹುನಿರೀಕ್ಷಿತ ಮುಂದುವರಿದ ಭಾಗದಲ್ಲಿ ಆಲಿಯಾ ನಟಿಸುತ್ತಿರುವುದನ್ನು ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ಸೋಹಮ್ ಶಾ ಖಚಿತಪಡಿಸಿದ್ದಾರೆ. ಸೋಹಮ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಲಿಯಾ ಅವರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಈ ಚಿತ್ರಕ್ಕೆ ಸ್ವಾಗತಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೋಹಮ್ ಶಾ, ‘ಒಂದು ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ‘ತುಂಬಾಡ್ 2’ಗೆ ಸ್ವಾಗತ ಆಲಿಯಾ ಭಟ್ ‘ಪ್ರಳಯ ಬರುತ್ತದೆ’. ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ಆಲ್ಫಾ’ ಸಿನಿಮಾ ಶೂಟಿಂಗ್ ವಿಡಿಯೋ ಹಂಚಿಕೊಂಡ ಆಲಿಯಾ ಭಟ್

‘ತುಂಬಾಡ್ 2’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಕಾರಣವನ್ನು ವಿವರಿಸಿದ ಆಲಿಯಾ ಭಟ್, ತಾವು ಮೊದಲ ಭಾಗದ ಸಿನಿಮಾವನ್ನು ನೋಡಿ ಬಹಳ ಪ್ರಭಾವಿತರಾಗಿದ್ದಾಗಿ ತಿಳಿಸಿದ್ದಾರೆ. ‘ನಾನು ‘ತುಂಬಾಡ್’ ನೋಡಿದಾಗಿನಿಂದಲೂ ಅದು ನನ್ನ ಮನಸ್ಸಿನಲ್ಲೇ ಉಳಿದುಕೊಂಡಿದೆ. ಇಷ್ಟು ಅದ್ಭುತ ಪ್ರಪಂಚವನ್ನು ಸೃಷ್ಟಿಸುವ ಚಲನಚಿತ್ರಗಳು ತುಂಬಾ ಕಡಿಮೆ, ಸಿನಿಮಾ ಬಿಡುಗಡೆಯಾದ ವರ್ಷಗಳ ಬಳಿಕವೂ ಜನರ ಸ್ಮೃತಿಯಲ್ಲಿ ಉಳಿದುಕೊಂಡಿದೆ ಆ ಸಿನಿಮಾ. ಅದೇ ಕಾರಣಕ್ಕೆ ಈ ಅವಕಾಶ ನನಗೆ ತುಂಬಾ ರೋಚಕವಾಗಿ ಕಂಡಿತು, ಹಾಗಾಗಿ ಒಪ್ಪಿಕೊಂಡೆ’ ಎಂದು ಅವರು ಹೇಳಿದ್ದಾರೆ.

ಆದೇಶ್ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಸೋಹಮ್ ಶಾ ಮತ್ತು ನವಾಜುದ್ದೀನ್ ಸಿದ್ದಿಕಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಹಮ್ ಶಾ ಫಿಲ್ಮ್ಸ್ ಮತ್ತು ಪೆನ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಚಿತ್ರವು ಡಿಸೆಂಬರ್ 3, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ‘ತುಂಬಾಡ್’ ನಿರ್ದೇಶಿಸಿದ್ದ ರಾಹಿ ಅನಿಲ್ ಈ ಸಿನಿಮಾದಿಂದ ಹೊರಗೆ ಉಳಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Shani Retrograde 2026: ಶನಿ ವಕ್ರ ಚಲನೆ ಆರಂಭ; ಜುಲೈ 27 ರಿಂದ ಈ 2 ರಾಶಿಗೆ ಶುರುವಾಗಲಿದೆ ಕಷ್ಟದ ಕಾಲ! – Kannada News | Shani Retrograde 2026: Major Impact on Zodiac Signs for 138 Days

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ‘ಕರ್ಮಫಲ ದಾತ’ ಮತ್ತು ‘ನ್ಯಾಯಾಧೀಶ’ ಎಂದು ಕರೆಯಲಾಗುತ್ತದೆ. ಅಂದರೆ, ವ್ಯಕ್ತಿಯು ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಶನಿಯು ಫಲವನ್ನು ನೀಡುತ್ತಾನೆ. ಇದೀಗ 2026 ರ ಜುಲೈ ತಿಂಗಳಿನಲ್ಲಿ ಶನಿ ಗ್ರಹದ ಚಲನೆಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಇದು ಕೆಲವು ರಾಶಿಗಳ ಮೇಲೆ ತೀವ್ರ ಪ್ರಭಾವ ಬೀರಲಿದೆ.

138 ದಿನಗಳ ಕಾಲ ಶನಿಯ ವಕ್ರ ನಡೆ:

ವಿದ್ವಾಂಸರ ಪ್ರಕಾರ, ಜುಲೈ 27 ರಿಂದ ಡಿಸೆಂಬರ್ ರವರೆಗೆ ಶನಿಯು ವಕ್ರ ಮಾರ್ಗದಲ್ಲಿ (ಹಿಮ್ಮುಖ ಚಲನೆ) ಪ್ರಯಾಣಿಸಲಿದ್ದಾನೆ. ಒಟ್ಟು 138 ದಿನಗಳ ಕಾಲ ಮುಂದುವರಿಯುವ ಶನಿಯ ಈ ವಕ್ರ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ವಿಶೇಷವಾಗಿ ಎರಡು ರಾಶಿಯವರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಸಾಡೇ ಸಾತಿ (ಶನಿ ದೆಸೆ) ಪ್ರಭಾವದಲ್ಲಿರುವವರು ಹೆಚ್ಚು ಜಾಗರೂಕರಾಗಿರಬೇಕು.

ಈ ಅವಧಿಯಲ್ಲಿ ಯಶಸ್ಸು ಸಿಗಬೇಕಾದರೆ ಜನರು ತಮ್ಮ ಸೋಮಾರಿತನವನ್ನು ಬಿಟ್ಟು ಶಿಸ್ತುಬದ್ಧವಾಗಿ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಆ ಎರಡು ರಾಶಿಗಳು ಯಾವುವು ಮತ್ತು ಅವುಗಳ ಮೇಲಾಗುವ ಪ್ರಭಾವಗಳೇನು ಎಂಬ ವಿವರ ಇಲ್ಲಿದೆ:

ಕುಂಭ ರಾಶಿ:

ಶನಿಯ ಹಿಮ್ಮುಖ ಚಲನೆಯು ಕುಂಭ ರಾಶಿಯವರ ತಾಳ್ಮೆಯನ್ನು ಪರೀಕ್ಷಿಸಲಿದೆ. ಈ 138 ದಿನಗಳ ಕಾಲ ನೀವು ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡಬೇಕಾಗುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳೊಂದಿಗೆ ಜಾಗರೂಕರಾಗಿ ನಡೆದುಕೊಳ್ಳಿ. ಅನಗತ್ಯ ವಾದವಿವಾದಗಳಿಂದ ದೂರವಿರುವುದು ಬಹಳ ಮುಖ್ಯ. ಕೋಪದ ಭರದಲ್ಲಿ ಆಡುವ ಮಾತುಗಳು ನಿಮಗೆ ದೊಡ್ಡ ಸಂಕಷ್ಟ ತರಬಹುದು. ನಿಮ್ಮ ಅನಗತ್ಯ ಖರ್ಚುಗಳಿಗೆ ತಡೆ ಹಾಕುವುದು ಒಳ್ಳೆಯದು. ಆದರೆ, ಈ ಅವಧಿಯಲ್ಲಿ ಮಾಡುವ ಸರಿಯಾದ ಹೂಡಿಕೆಗಳು ನಿಮಗೆ ಭವಿಷ್ಯದಲ್ಲಿ ಲಾಭ ತಂದುಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಮೀನ ರಾಶಿ:

ಮೀನ ರಾಶಿಯವರಿಗೆ ಈ ಸಮಯವು ಅತ್ಯಂತ ಸವಾಲಿನಿಂದ ಕೂಡಿರಲಿದ್ದು, ಹೆಚ್ಚಿನ ಜಾಗರೂಕತೆಯ ಅಗತ್ಯವಿದೆ. ಉದ್ಯೋಗಸ್ಥರಿಗೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ಈ ಅವಧಿಯಲ್ಲಿ ಆದಾಯವು ತೀವ್ರವಾಗಿ ಕಡಿಮೆಯಾಗಿ, ವೆಚ್ಚಗಳು ದುಪ್ಪಟ್ಟಾಗಲಿವೆ. ಇದರಿಂದಾಗಿ ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಣದ ವ್ಯವಹಾರದಲ್ಲಿ ಎಚ್ಚರವಿರಲಿ. ಮಾನಸಿಕ ಒತ್ತಡದ ಜೊತೆಗೆ ದೈಹಿಕ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಬೇಡ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:36 am, Tue, 14 July 26

Source link

ಅತ್ತೆ ಮಾತು ಕೇಳಿ ಅಮ್ಮನಿಗೆ ವಿಷವುಣಿಸಿದ ಮಗ, ಏನಿದು ಘಟನೆ? – Kannada News | Agra Son Poisons Mother for Wife UP Domestic Violence and Legal Action

ಆಗ್ರಾ, ಜುಲೈ 14: ಸಂಸಾರದ ಒಳಗಿನ ಜಗಳಗಳಿಂದಾಗಿ, ಮನೆ ಬಿಟ್ಟು ಹೋಗಿದ್ದ ಹೆಂಡತಿ(Wife) ವಾಪಸ್ ಬರಬೇಕಾದರೆ “ಹೆತ್ತ ತಾಯಿಯನ್ನೇ ಕೊಲ್ಲಬೇಕು” ಎಂಬ ಅತ್ತೆಯ ಮಾತನ್ನು ಕೇಳಿ ಮಗನೊಬ್ಬ ತನ್ನ ತಾಯಿಗೆ ವಿಷವುಣಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ತಾಯಿಗೆ ವಿಷವಿಕ್ಕಿ ಕೊಲ್ಲಲು ಯತ್ನಿಸಿರುವ ಅತ್ಯಂತ ಅಮಾನವೀಯ ಘಟನೆ ಆಗ್ರಾದ ಬಾರ್ಪುರ ಗ್ರಾಮದಲ್ಲಿ ನಡೆದಿದೆ. ಮಹಿಳೆ ಈಗ ರಾಮಮೂರ್ತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ
ಆರೋಪಿ ರವೀಂದ್ರ ತನ್ನ ಸಹೋದರ ಮುಖೇಶ್ ಜೊತೆ ಭೂಮಿ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಈ ಕೌಟುಂಬಿಕ ಕಲಹದಿಂದ ಬೇಸತ್ತು ಆತನ ಪತ್ನಿ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದಳು. ಜುಲೈ 9 ರಂದು ರವೀಂದ್ರ ತನ್ನ ಹೆಂಡತಿಯನ್ನು ವಾಪಸ್ ಕರೆಯಲು ಅತ್ತೆಯ ಮನೆಗೆ ಹೋದಾಗ, ಅತ್ತೆ ಫೂಲ್ವತಿ ನಿನ್ನ ಹೆಂಡತಿ ನಿನಗೆ ಬೇಕಾದರೆ, ಮೊದಲು ನಿನ್ನ ತಾಯಿಯನ್ನು ಕೊಲೆ ಮಾಡು ಎಂದು ಷರತ್ತು ವಿಧಿಸಿದ್ದಳು.

ಹೆಂಡತಿಯ ವ್ಯಾಮೋಹಕ್ಕೆ ಕಟ್ಟುಬಿದ್ದು ರವೀಂದ್ರ, ಮನೆಗೆ ಬಂದು ತಾಯಿ ತಿನ್ನುವ ಊಟಕ್ಕೆ ವಿಷ ಬೆರೆಸಿದ್ದಾನೆ. ಸದ್ಯ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದು, ಪ್ರಚೋದನೆ ನೀಡಿದ ಅತ್ತೆ ಫೂಲ್ವತಿ ಪರಾರಿಯಾಗಿದ್ದಾಳೆ.

ಮತ್ತೊಂದು ಘೋರ ಕೃತ್ಯ: ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಗಂಡ
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, 26 ವರ್ಷದ ಸತ್ಯವತಿ ಯಾದವ್ ಎಂಬ ಮಹಿಳೆಯನ್ನು ಆಕೆಯ ಪತಿ ಮತ್ತು ಸಂಬಂಧಿಕರು ಸೇರಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮತ್ತಷ್ಟು ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್

ಜೂನ್ 1-2ರ ರಾತ್ರಿ ಕೊಲೆ ಮಾಡಿದ ನಂತರ, ಸಿಕ್ಕಿಬೀಳಬಾರದೆಂದು ಪತಿಯೇ ಪೊಲೀಸ್ ಠಾಣೆಗೆ ಹೋಗಿ “ನನ್ನ ಹೆಂಡತಿ ಕಾಣೆಯಾಗಿದ್ದಾಳೆ” ಎಂದು ದೂರು ನೀಡಿ ನಾಟಕವಾಡಿದ್ದ. ಆರೋಪಿಗಳು ಮಹಿಳೆಯ ಶವವನ್ನು ಹಲವು ದಿನಗಳ ಕಾಲ ನೀರಿನ ತೊಟ್ಟಿಯಲ್ಲಿ ಅಡಗಿಸಿಟ್ಟಿದ್ದ. ನಂತರ ಯಾರಿಗೂ ತಿಳಿಯದಂತೆ ಸ್ಮಶಾನದಲ್ಲಿ ಸುಟ್ಟು, ಅರ್ಧ ಬೆಂದ ಅಸ್ಥಿಪಂಜರ ಹಾಗೂ ಬೂದಿಯನ್ನು ಸೋಟ್ ನದಿಗೆ ಎಸೆದಿದ್ದರು. ಸದ್ಯ ತನಿಖೆ ನಡೆಸಿದ ಪೊಲೀಸರು ಪತಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೌಟುಂಬಿಕ ಹಿಂಸಾಚಾರಕ್ಕೆ ಕಾನೂನು ಏನ ಹೇಳುತ್ತದೆ?
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಕೇವಲ ಜಗಳಕ್ಕೆ ಸೀಮಿತವಾಗದೆ ಇಂತಹ ಭೀಕರ ಕೊಲೆಗಳಲ್ಲಿ ಅಂತ್ಯವಾಗುತ್ತಿರುವುದು ಸಮಾಜದ ಕ್ರೂರ ಮುಖವನ್ನು ಪರಿಚಯಿಸುತ್ತಿದೆ.

ಕಠಿಣ ಸೆಕ್ಷನ್‌ಗಳ ಅಡಿ ಕೇಸ್: ಹೆತ್ತ ತಾಯಿಗೆ ವಿಷ ನೀಡಿದ ರವೇಂದ್ರ ಹಾಗೂ ಪ್ರಚೋದನೆ ನೀಡಿದ ಅತ್ತೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿ ಕೊಲೆ ಯತ್ನ ಹಾಗೂ ಅಪರಾಧ ಸಂಚಿನ ಗಂಭೀರ ಪ್ರಕರಣ ದಾಖಲಾಗಿದೆ.

ಬದೌನ್ ಪ್ರಕರಣದಲ್ಲಿ ಶವವನ್ನು ಬಚ್ಚಿಟ್ಟು, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಪತಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆಯಿದೆ. ಕೌಟುಂಬಿಕ ಸಮಸ್ಯೆಗಳಿದ್ದಾಗ ಕೋಪ ಅಥವಾ ಪ್ರಚೋದನೆಗೆ ಒಳಗಾಗುವ ಬದಲು ಕಾನೂನಾತ್ಮಕ ಕೌನ್ಸಿಲಿಂಗ್ ಪಡೆದುಕೊಳ್ಳುವುದು ಇಂತಹ ಹತ್ತಾರು ಜೀವಗಳು ಬಲಿಯಾಗುವುದನ್ನು ತಪ್ಪಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೈ ಜೋಡಿಸಿ: ECB ಬಿಗ್ ಆಫರ್ – Kannada News | New England Coach Can Job Share With IPL, Confirms ECB

ಬ್ರೆಂಡನ್ ಮೆಕಲಮ್ ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB), ಇದೀಗ ಹೊಸ ಮುಖ್ಯ ತರಬೇತುದಾರರ ಹುಡುಕಾಟ ಆರಂಭಿಸಿದೆ. ಈ ಹುಡುಕಾಟದ ಬೆನ್ನಲ್ಲೇ ಇಸಿಬಿ, ಹೊಸ ಕೋಚ್ ಆಗಲಿರುವವರಿಗೆ ಬಿಗ್ ಆಫರ್ ಒಂದನ್ನು ಮುಂದಿಟ್ಟಿದೆ. ಆ ಆಫರ್ ಏನೆಂದರೆ ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೆಲಸ ಮಾಡಿ ಎಂಬುದು.

ಇಸಿಬಿ ಬಿಗ್ ಆಫರ್:

ಇಂಗ್ಲೆಂಡ್ ಟೆಸ್ಟ್​ ತಂಡದ ಹೊಸ ಕೋಚ್ ಆಗುವವರು, ಐಪಿಎಲ್‌ನಲ್ಲೂ ಮುಕ್ತವಾಗಿ ಕಾರ್ಯನಿರ್ವಹಿಸಬಹುದು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಈ ಐತಿಹಾಸಿಕ ನಿಯಮ ಬದಲಾವಣೆಯು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಗಿರುವ ಆ್ಯಂಡಿ ಫ್ಲವರ್ ಅವರು ಮತ್ತೆ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಮರಳಲು ಹೆಬ್ಬಾಗಿಲು ತೆರೆದಿದೆ.

ಬಾಝ್ ​ಬಾಲ್ ಯುಗಾಂತ್ಯ:

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಕ್ರಮಣಕಾರಿ ಆಟದ ಶೈಲಿ ಪರಿಚಯಿಸಿದ್ದ ಬ್ರೆಂಡನ್ ಮೆಕಲಮ್ ಅವರನ್ನು ಇಸಿಬಿ ಕೋಚ್ ಹುದ್ದೆಯಿಂದ ವಜಾಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ತಂಡವು ಆಡಿದ ಕೊನೆಯ 12 ಟೆಸ್ಟ್‌ಗಳಲ್ಲಿ 8 ಪಂದ್ಯಗಳನ್ನು ಸೋತು ತೀವ್ರ ಮುಖಭಂಗ ಅನುಭವಿಸಿತ್ತು.

ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯಲ್ಲಿ 4-1 ಅಂತರದ ಹೀನಾಯ ಸೋಲು ಮತ್ತು ನ್ಯೂಝಿಲೆಂಡ್ ವಿರುದ್ಧ ತವರಿನಲ್ಲೇ ಎದುರಿಸಿದ 2-1 ಸರಣಿ ಸೋಲು ಮೆಕಲಮ್ ಅವರ ಹುದ್ದೆಗೆ ಕುತ್ತು ತಂದಿದೆ. ಆದಾಗ್ಯೂ, ಅವರು ಇಂಗ್ಲೆಂಡ್‌ನ ಸೀಮಿತ ಓವರ್‌ಗಳ (ಏಕದಿನ ಮತ್ತು ಟಿ20) ಕೋಚ್ ಆಗಿ ಮುಂದುವರಿಯಲಿದ್ದಾರೆ.

ಐಪಿಎಲ್​ ಕೋಚ್​ಗಳಿಗೆ ಗ್ರೀನ್ ಸಿಗ್ನಲ್:

ಸಾಮಾನ್ಯವಾಗಿ ಇಂಗ್ಲೆಂಡ್ ತಂಡದ ಮುಖ್ಯ ಕೋಚ್‌ಗಳಿಗೆ ಯಾವುದೇ ಖಾಸಗಿ ಟಿ20 ಲೀಗ್‌ಗಳಲ್ಲಿ ಕೆಲಸ ಮಾಡಲು ಇಸಿಬಿ ಅನುಮತಿ ನೀಡುತ್ತಿರಲಿಲ್ಲ. ಆದರೆ ಈಗಿನ ಆಧುನಿಕ ಕ್ರಿಕೆಟ್​ನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಹೊಸ ಟೆಸ್ಟ್ ಕೋಚ್ ಇಂಗ್ಲೆಂಡ್ ತಂಡದ ಜವಾಬ್ದಾರಿಯ ಜೊತೆಜೊತೆಗೇ ಐಪಿಎಲ್ ಫ್ರಾಂಚೈಸಿಯೊಂದಿಗೂ ಕಾರ್ಯನಿರ್ವಹಿಸಲು ಇಸಿಬಿ ಒಪ್ಪಿಗೆ ಸೂಚಿಸಿದೆ.

ಫ್ಲವರ್​ ಮೇಲೆ ಇಂಗ್ಲೆಂಡ್ ಕಣ್ಣು:

ಇಸಿಬಿಯ ಈ ನಿಯಮ ಸಡಿಲಿಕೆಗೆ ಮುಖ್ಯ ಕಾರಣ ಆ್ಯಂಡಿ ಫ್ಲವರ್​ ಎನ್ನಲಾಗುತ್ತಿದೆ. ಝಿಂಬಾಬ್ವೆಯ ಮಾಜಿ ನಾಯಕರಾಗಿರುವ ಆ್ಯಂಡಿ ಫ್ಲವರ್, ಈ ಹಿಂದೆ 2009 ರಿಂದ 2014 ರವರೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಅದ್ಭುತ ಯಶಸ್ಸು ತಂದುಕೊಟ್ಟಿದ್ದರು. ಅವರ ಮಾರ್ಗದರ್ಶನದಲ್ಲೇ ಇಂಗ್ಲೆಂಡ್ ತಂಡವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿತ್ತು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಹಾಗೂ ಭಾರತದ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿತ್ತು.

ಪ್ರಸ್ತುತ ಫ್ರಾಂಚೈಸಿ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕೋಚ್ ಆಗಿರುವ ಆ್ಯಂಡಿ ಫ್ಲವರ್, ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಕ್-ಟು-ಬ್ಯಾಕ್ ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟು ಇತಿಹಾಸ ಸೃಷ್ಟಿಸಿದ್ದಾರೆ.

ಆ್ಯಂಡಿ ಫ್ಲವರ್ ಅವರು ಆರ್‌ಸಿಬಿ ತಂಡವನ್ನು ತೊರೆಯಲು ಇಷ್ಟಪಡದ ಕಾರಣ, ಅವರನ್ನು ಇಂಗ್ಲೆಂಡ್ ತಂಡಕ್ಕೆ ಕರೆತರಲು ಇಸಿಬಿ ಈ ‘ದ್ವಿಮುಖ ಕೋಚಿಂಗ್’ ಆಫರ್ ನೀಡಿದೆ ಎನ್ನಲಾಗುತ್ತಿದೆ.

ರೇಸ್​ನಲ್ಲಿ ರಾಹುಲ್ ದ್ರಾವಿಡ್:

ಇಸಿಬಿ ಮುಖ್ಯಸ್ಥರ ಪ್ರಕಾರ ಹೊಸ ಕೋಚ್ ಹುದ್ದೆಗಾಗಿ 6 ರಿಂದ 10 ಹೆಸರುಗಳ ಶಾರ್ಟ್‌ಲಿಸ್ಟ್ ಸಿದ್ಧಪಡಿಸಲಾಗಿದೆ.  ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಅಂದರೆ ಆ್ಯಂಡಿ ಫ್ಲವರ್​ ಹಾಗೂ ದ್ರಾವಿಡ್ ನಡುವೆ ನೇರ ಪೈಪೋಟಿ ಇದ್ದು, ಇಬ್ಬರಲ್ಲಿ ಒಬ್ಬರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹೆಚ್ಚಿನ ಆಸಕ್ತಿ ಹೊಂದಿದೆ. ಹಾಗೆಯೇ ಈ ಪಟ್ಟಿಯಲ್ಲಿರುವ ಇತರ ಪ್ರಮುಖರೆಂದರೆ

  • ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್)
  • ಜಸ್ಟಿನ್ ಲ್ಯಾಂಗರ್ (ಆಸ್ಟ್ರೇಲಿಯಾದ ಮಾಜಿ ಕೋಚ್)
  • ಸ್ಟೀಫನ್ ಫ್ಲೆಮಿಂಗ್ (ಸಿಎಸ್‌ಕೆ ಕೋಚ್)
  • ಆ್ಯಂಡಿ ಫ್ಲವರ್ (ಇಂಗ್ಲೆಂಡ್ ಮಾಜಿ ಕೋಚ್)
  • ರಾಹುಲ್ ದ್ರಾವಿಡ್ (ಭಾರತದ ಮಾಜಿ ಕೋಚ್)

ಇದನ್ನೂ ಓದಿ: ಫ್ರಾನ್ಸ್​ vs ಸ್ಪೇನ್ ಅಲ್ಲ, ರಿಯಲ್ ಮ್ಯಾಡ್ರಿಡ್ vs ಬಾರ್ಸಿಲೋನಾ!

2027ರ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಂಡವನ್ನು ಮರುಸಂಘಟಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ  ಈಗಿನಿಂದಲೇ ಹೊಸ ಕೋಚ್ ಹುಡುಕಾಟವನ್ನು ಚುರುಕುಗೊಳಿಸಿದೆ. ಈ ಮಹತ್ವದ ರೇಸ್‌ನಲ್ಲಿ ಸದ್ಯ ಐವರು ಮಾಜಿ ದಿಗ್ಗಜ ಆಟಗಾರರ ಹೆಸರುಗಳು ಮುಂಚೂಣಿಯಲ್ಲಿದ್ದು, ಇವರಲ್ಲಿ ಯಾರು ಇಂಗ್ಲೆಂಡ್ ಟೆಸ್ಟ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

Source link

ದೀಪಿಕಾ ನನಗೆ ಪ್ರಪೋಸ್ ಮಾಡಿದ್ರು ಎಂದು ಹೇಳಿ ಈಗ ಉಲ್ಟಾ ಹೊಡೆದ ನಟ – Kannada News | Deepika Padukone Controversy: Muzammil Ibrahim Clarifies Viral Proposal Video

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ರಿಲೇಶನ್​​ಶಿಪ್​ ವಿಷಯಕ್ಕೆ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ರಣವೀರ್​ ಸಿಂಗ್ ಪ್ರೀತಿಸುವುದಕ್ಕೂ ಮೊದಲು ಕೆಲವರ ಜೊತೆ ಡೇಟ್ ಮಾಡಿದ್ದರು ಎಂಬ ಆರೋಪ ಇದೆ. ಇದಕ್ಕೆ ಪೂರಕವಾಗಿ ನಟ ಮುಜಮ್ಮಿಲ್ ಇಬ್ರಾಹಿಂ ಹೇಳಿಕೆ ನೀಡಿದ್ದರು. ವರ್ಷದ ಬಳಿಕ ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

2025ರಲ್ಲಿ ಸಿದ್ಧಾರ್ಥ್ ಕಣ್ಣನ್ ಜೊತೆ ಅವರು ನಡೆಸಿದ್ದ ಸಂದರ್ಶನದ ತುಣುಕುಗಳು ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗಿದ್ದವು. ಆ ಸಂದರ್ಶನದಲ್ಲಿ ಮುಜಮ್ಮಿಲ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ತಮಗೆ ಪ್ರಪೋಸ್ ಮಾಡಿದ್ದರು ಎಂದು ಅವರು ಹೇಳಿಕೊಂಡಿದ್ದರು. ಆದರೆ ಆ ಸಮಯದಲ್ಲಿ ದೀಪಿಕಾ ಕೇವಲ ಮಾಡೆಲ್ ಆಗಿದ್ದರು ಮತ್ತು ತಾವು ಉದಯೋನ್ಮುಖ ತಾರೆಯಾಗಿದ್ದರಿಂದ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಅವರು ತಿಳಿಸಿದ್ದರು. ದೀಪಿಕಾ ಸದ್ಯ ಬಾಲಿವುಡ್‌ನ ಅತಿ ದೊಡ್ಡ ತಾರೆಯಾಗಿ ಬೆಳೆದಿರುವ ಹಿನ್ನೆಲೆಯಲ್ಲಿ, ಮುಜಮ್ಮಿಲ್ ಅವರ ಈ ಹಳೇ ಹೇಳಿಕೆಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದರು.

ತಮ್ಮ ವಿರುದ್ಧ ಕೇಳಿಬರುತ್ತಿರುವ ಭಾರಿ ಟೀಕೆಗಳ ನಡುವೆ ಮುಜಮ್ಮಿಲ್ ಇಬ್ರಾಹಿಂ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಸ್ಪಷ್ಟನೆ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವೀಡಿಯೊ ತುಣುಕುಗಳು ತಮ್ಮ ಸಂಪೂರ್ಣ ಸಂಭಾಷಣೆಯನ್ನು ಹಾಕಿಲ್ಲ ಮತ್ತು ತಮ್ಮ ಹೇಳಿಕೆಯನ್ನು ಸಂದರ್ಭಕ್ಕೆ ಹೊರತಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ಮುಜಮ್ಮಿಲ್, ‘ಇದು ಹಳೆಯ ಸಂದರ್ಶನ. ಈಗ ಪ್ರಸಾರವಾಗುತ್ತಿರುವ ವೀಡಿಯೊಗಳು ಕೇವಲ ಸುದೀರ್ಘ ಸಂಭಾಷಣೆಯ ಕೆಲವು ಸಣ್ಣ ತುಣುಕುಗಳಷ್ಟೇ. ಆ ಸಂದರ್ಶನದಲ್ಲಿ ನಾನು ಮಾತನಾಡಿದ ಸಂದರ್ಭ, ನನ್ನಲ್ಲಿದ್ದ ಹಿಂಜರಿಕೆ ಮತ್ತು ವ್ಯಕ್ತಪಡಿಸಿದ ಗೌರವದ ಭಾವನೆಗಳು ಎಡಿಟಿಂಗ್ ಪ್ರಕ್ರಿಯೆಯಲ್ಲಿ ಕಳೆದುಹೋಗಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನನ್ನ ಹಳೆಯ ದಿನಗಳಲ್ಲಿ ನನ್ನ ಜೊತೆ ಇದ್ದ ವ್ಯಕ್ತಿಗಳ ಬಗ್ಗೆ ಯಾವಾಗಲೂ ಗೌರವದಿಂದ ಮಾತನಾಡಲು ಪ್ರಯತ್ನಿಸಿದ್ದೇನೆ ಮತ್ತು ಅದು ಈಗಲೂ ಬದಲಾಗಿಲ್ಲ. ಇತರರಂತೆ ನಾನು ಕೂಡ ವರ್ಷಗಳಿಂದ ನನ್ನ ಕೆಲಸ ಮತ್ತು ನನ್ನ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಗಮನ ಹರಿಸುತ್ತಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ಯಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಆಲಿಯಾ?

ನಟಿ ದೀಪಿಕಾ ಪಡುಕೋಣೆ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ 2018 ರ ನವೆಂಬರ್‌ನಲ್ಲಿ ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ದುವಾ ಎಂಬ ಮಗಳಿದ್ದು, ಪ್ರಸ್ತುತ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಲಕರೇ ಗಮನಿಸಿ: ಮಕ್ಕಳಲ್ಲಿ ಹೆಚ್ಚುತ್ತಿದೆ ‘ಕೈ, ಕಾಲು, ಬಾಯಿ’ ಸೋಂಕು! – Kannada News | Hand, Foot, and Mouth Disease Spreads Among Children in Hubballi Dharwad; Doctors Issue Advisory

ಮಕ್ಕಳಲ್ಲಿ ಹೆಚ್ಚಾದ ಕೈ, ಕಾಲು, ಬಾಯಿ ರೋಗ

ಹುಬ್ಬಳ್ಳಿ, ಜುಲೈ 14: ರಾಜ್ಯದಲ್ಲಿ ಹವಾಮಾನ ವೈಪರೀತ್ಯಕ್ಕೆ ಇತ್ತೀಚೆಗೆ ಹಲವು ರೋಗಗಳು ಬರುತ್ತಿವೆ. ಮಲೆನಾಡು, ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟವಿದ್ದರೆ, ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳು ಮಳೆ-ಬೆಳೆ ಇಲ್ಲದೆ ತತ್ತರಿಸುತ್ತಿವೆ. ಇದರ ಪರಿಣಾಮವಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಪ್ರಮುಖವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರವಾಗಿ ಹರಡುತ್ತಿರುವಕೈ, ಕಾಲು ಮತ್ತು ಬಾಯಿ ರೋಗ (HFMD) ಈಗ ಪಾಲಕರಲ್ಲಿ ಭೀತಿ ಮೂಡಿಸಿದೆ.

ಚಿಕನ್ ಪಾಕ್ಸ್ ಅಲ್ಲ, ಇದು HFMD!

ಸಾಮಾನ್ಯವಾಗಿ ಈ ಹಿಂದೆ ಮಕ್ಕಳಲ್ಲಿ ಮೈ ತುಂಬಾ ಗುಳ್ಳೆಗಳು ಏಳುವ ಚಿಕನ್ ಪಾಕ್ಸ್ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಈ ಹೊಸ ಸೋಂಕಿನಲ್ಲಿ ಮಕ್ಕಳ ಕೈ, ಕಾಲು ಹಾಗೂ ಬಾಯಿಯ ಸುತ್ತ ನೋವು ಭರಿತ ಗುಳ್ಳೆಗಳು ಏಳುತ್ತಿದೆ ಮತ್ತು ಜ್ವರ ಕಾಣಿಸಿಕೊಳ್ಳುತ್ತಿದೆ. ಆರಂಭದಲ್ಲಿ ಈ ರೋಗವನ್ನು ಪಾಲಕರು ಚಿಕನ್ ಪಾಕ್ಸ್ ಎಂದೇ ಭಾವಿಸುತ್ತಿದ್ದರು. ಆದರೆ ವೈದ್ಯರ ಹೇಳುವಂತೆ ಇದು ಅಪಾಯಕಾರಿಯಲ್ಲದ ಆದರೆ ವೇಗವಾಗಿ ಹರಡುವ ಚರ್ಮದ ವೈರಲ್ ಸೋಂಕಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಿದ ಕೇಸ್

ಅವಳಿ ನಗರ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಸೋಂಕು ತೀವ್ರವಾಗಿ ಹರಡುತ್ತಿದ್ದು, ಪ್ರತಿನಿತ್ಯ ನೂರಾರು ಮಕ್ಕಳು ಇದರಿಂದ ನರಳುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆ ಸೇರಿದಂತೆ ಪ್ರಮುಖ ಮಕ್ಕಳ ಕ್ಲಿನಿಕ್‌ಗಳಿಗೆ ಪಾಲಕರು ಚಿಕಿತ್ಸೆಗಾಗಿ ಧಾವಿಸುತ್ತಿದ್ದಾರೆ. ಜ್ವರದ ತೀವ್ರತೆ ಹೆಚ್ಚಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಹುಬ್ಬಳ್ಳಿ ಕಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿನೋದ್ ರಟ್ಟಿಗೇರಿ, ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಲ್ಯಾಬ್ ಟೆಸ್ಟ್ ಅಥವಾ ಪ್ರತ್ಯೇಕ ಚಿಕಿತ್ಸೆ ಇಲ್ಲ. ಮಕ್ಕಳ ಲಕ್ಷಣಗಳನ್ನು ನೋಡಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದ ಐದು ದಿನ ತೀವ್ರ ನೋವಿರುತ್ತದೆಯಾದರೂ, ಇದು ಪ್ರಾಣಾಪಾಯ ತರುವ ವೈರಸ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ ವೈರಲ್ ಫೀವರ್ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಕಾಲು ಬಾಯಿ ರೋಗ!

ಸೋಂಕು ತಡೆಗಟ್ಟಲು ವೈದ್ಯರ ಸಲಹೆಗಳು

ಈ ವೈರಸ್ ಸಾಂಕ್ರಾಮಿಕವಾಗಿರುವುದರಿಂದ ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳ ಮೂಲಕ ಅತ್ಯಂತ ವೇಗವಾಗಿ ಹರಡುತ್ತದೆ. ಇದನ್ನು ನಿಯಂತ್ರಿಸಲು ವೈದ್ಯರು ಕೆಲವು ಮುನ್ನೆಚ್ಚರಿಕೆಗಳನ್ನು ಸೂಚಿಸಿದ್ದಾರೆ:

  • ಕೋವಿಡ್ ಸಮಯದಲ್ಲಿ ಪಾಲಿಸುತ್ತಿದ್ದ ಸ್ವಚ್ಛತಾ ನಿಯಮಗಳನ್ನು ಮರಳಿ ಜಾರಿಗೆ ತರಬೇಕು.
  • ಮಕ್ಕಳ ಕೈಗಳನ್ನು ಮೇಲಿಂದ ಮೇಲೆ ತೊಳೆಸಬೇಕು.
  • ಸೋಂಕಿತ ಮಕ್ಕಳನ್ನು ಇತರ ಮಕ್ಕಳೊಂದಿಗೆ ಬೆರೆಯಲು ಬಿಡದೆ ಮನೆಯಲ್ಲೇ ವಿಶ್ರಾಂತಿ ಪಡೆಯಲು ಬಿಡಬೇಕು.
  • ಸೋಂಕಿತ ಮಕ್ಕಳಲ್ಲಿ ನೀರಿನ ಅಂಶ ಕಡಿಮೆಯಾದರೆ ನೋವು ಹೆಚ್ಚಾಗುತ್ತದೆ. ಆದ್ದರಿಂದ ದೇಹವು ಡಿಹೈಡ್ರೇಟ್ (ನಿರ್ಜಲೀಕರಣ) ಆಗದಂತೆ ದ್ರವಾಹಾರ ಹಾಗೂ ನೀರನ್ನು ಯಥೇಚ್ಛವಾಗಿ ನೀಡಬೇಕು.

ಸೋಂಕು ವೇಗವಾಗಿ ಹರಡುತ್ತಿದ್ದರೂ ಪಾಲಕರು ಗಾಬರಿಪಡುವ ಅಗತ್ಯವಿಲ್ಲ. ಸೂಕ್ತ ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳ ಮೂಲಕ ಮಕ್ಕಳನ್ನು ಸುಲಭವಾಗಿ ಈ ಸೋಂಕಿನಿಂದ ರಕ್ಷಿಸಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ರಾನ್ಸ್​ vs ಸ್ಪೇನ್ ಅಲ್ಲ, ರಿಯಲ್ ಮ್ಯಾಡ್ರಿಡ್ vs ಬಾರ್ಸಿಲೋನಾ! – Kannada News | FIFA World Cup 2026: Forget France vs Spain, This is Real Madrid vs Barcelona

FIFA World Cup 2026: ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವುಅಂತಾರಾಷ್ಟ್ರೀಯ ಮಟ್ಟದ ‘ಎಲ್ ಕ್ಲಾಸಿಕೊ’  ಕದನವಾಗಿ  ಬಿಂಬಿತವಾಗಿದೆ. ಇದಕ್ಕೆ ಮುಖ್ಯ ಕಾರಣ ರಿಯಲ್ ಮ್ಯಾಡ್ರಿಡ್​ನ ಕಿಲಿಯನ್ ಎಂಬಾಪೆ ಹಾಗೂ ಬಾರ್ಸಿಲೋನಾ ತಂಡದ ಲಾಮಿನ್ ಯಮಾಲ್ ಮುಖಾಮುಖಿಯಾಗುತ್ತಿರುವುದು.

ರಿಯಲ್ ಮ್ಯಾಡ್ರಿಡ್ vs ಬಾರ್ಸಿಲೋನಾ:

ಲಾ ಲಿಗಾ ಅಂಗಳದ ಬದ್ದ ವೈರಿಗಳಾದ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ತಂಡಗಳು ವಿಭಿನ್ನ ಶೈಲಿಯ ಆಟಕ್ಕೆ ಹೆಸರುವಾಸಿ. ಈ ಆಟದ ಶೈಲಿಯಲ್ಲೇ ಇದೀಘ ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳು ಕಣಕ್ಕಿಳಿಯಲಿವೆ.

  • ಸ್ಪೇನ್ (ಬಾರ್ಸಿಲೋನಾ ಶೈಲಿ): ಸ್ಪೇನ್ ತಂಡದ ಬೆನ್ನೆಲುಬು ಬಾರ್ಸಿಲೋನಾದ ಪ್ರಸಿದ್ಧ ‘ಲಾ ಮಾಸಿಯಾ’ ಅಕಾಡೆಮಿ. ಸಣ್ಣ ಪಾಸ್‌ಗಳು, ಚೆಂಡಿನ ಮೇಲಿನ ಸಂಪೂರ್ಣ ನಿಯಂತ್ರಣ ಮತ್ತು ಸಂಘಟಿತ ಆಟಕ್ಕೆ ಸ್ಪೇನ್ ಹೆಸರುವಾಸಿ. ಇದು ಬಾರ್ಸಿಲೋನಾ ಕ್ಲಬ್‌ನ ಸಾಂಪ್ರದಾಯಿಕ ಶೈಲಿಯಾಗಿದೆ.
  • ಫ್ರಾನ್ಸ್ (ರಿಯಲ್ ಮ್ಯಾಡ್ರಿಡ್ ಶೈಲಿ): ಫ್ರಾನ್ಸ್ ತಂಡವು ರಿಯಲ್ ಮ್ಯಾಡ್ರಿಡ್‌ನಂತೆ ವೈಯಕ್ತಿಕ ಪ್ರತಿಭೆ, ವೇಗ ಮತ್ತು ಮಾರಕ ಕೌಂಟರ್-ಅಟ್ಯಾಕ್ ನಂಬಿ ಮೈದಾನಕ್ಕಿಳಿಯುತ್ತದೆ. ಜಗತ್ತಿನ ಅತ್ಯಂತ ದುಬಾರಿ ಮತ್ತು ಪ್ರಭಾವಿ ಆಟಗಾರರನ್ನು ಹೊಂದಿರುವ ಫ್ರಾನ್ಸ್, ಮ್ಯಾಡ್ರಿಡ್‌ನ ‘ಗ್ಯಾಲಕ್ಟಿಕೋಸ್’ ಸಂಸ್ಕೃತಿಯನ್ನು ನೆನಪಿಸುತ್ತದೆ.

ಎಂಬಾಪೆ vs ಲಾಮಿನ್ ಯಮಾಲ್:

ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಯುಗದ ನಂತರ, ಫುಟ್‌ಬಾಲ್ ಜಗತ್ತು ಹೊಸ ಸೂಪರ್‌ಸ್ಟಾರ್‌ಗಳ ಪೈಪೋಟಿಗೆ ಕಾಯುತ್ತಿತ್ತು. ಅದು ಈಗ ಈ ಎರಡು ತಂಡಗಳ ಮೂಲಕ ಸಿಕ್ಕಿದೆ.

  • ಕಿಲಿಯನ್ ಎಂಬಾಪೆ (ಫ್ರಾನ್ಸ್ / ರಿಯಲ್ ಮ್ಯಾಡ್ರಿಡ್): ವಿಶ್ವದ ಅತ್ಯಂತ ವೇಗದ ಫಾರ್ವರ್ಡ್ ಆಟಗಾರ, ರಿಯಲ್ ಮ್ಯಾಡ್ರಿಡ್‌ನ ಮುಖ್ಯ ಆಕರ್ಷಣೆಯಾಗಿರುವ ಎಂಬಾಪೆ ಫ್ರಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
  • ಲಾಮಿನ್ ಯಮಾಲ್ (ಸ್ಪೇನ್ / ಬಾರ್ಸಿಲೋನಾ): ಕೇವಲ ಹದಿಹರೆಯದಲ್ಲೇ ಫುಟ್‌ಬಾಲ್ ಜಗತ್ತನ್ನು ಮಂತ್ರಮುಗ್ಧಗೊಳಿಸಿರುವ ಯಮಾಲ್, ಬಾರ್ಸಿಲೋನಾದ ಭವಿಷ್ಯದ ಆಶಾಕಿರಣ ಹಾಗೂ  ಸ್ಪೇನ್ ತಂಡದ ಬೆನ್ನೆಲುಬು.

ಫ್ರಾನ್ಸ್ (ರಿಯಲ್ ಮ್ಯಾಡ್ರಿಡ್) vs ಸ್ಪೇನ್ (ಬಾರ್ಸಿಲೋನಾ)

ಮೈದಾನದಲ್ಲಿ ಆಡುವ ಆಟಗಾರರ ಪಟ್ಟಿಯನ್ನು ನೋಡಿದರೆ, ಇದು ಫ್ರಾನ್ಸ್-ಸ್ಪೇನ್ ಪಂದ್ಯ ಎನ್ನುವುದಕ್ಕಿಂತ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಡುವಿನ ಪಂದ್ಯದಂತೆ ಕಾಣುತ್ತದೆ. ಇದಕ್ಕೆ ಕಾರಣ ಎರಡು ತಂಡಗಳಲ್ಲಿರುವ ಆಟಗಾರರು.

  • ಸ್ಪೇನ್ ಪಡೆ: ಲಾಮಿನ್ ಯಮಾಲ್, ಪೆಡ್ರೆ, ಗವಿ, ಪಾವ್ ಕುಬಾರ್ಸಿ ಮತ್ತು ಫೆರಾನ್ ಟೊರೆಸ್ ಅವರಂತಹ ಬಾರ್ಸಿಲೋನಾ ಆಟಗಾರರ ದಂಡೇ ಸ್ಪೇನ್ ಪಡೆಯಲ್ಲಿದೆ.
  • ಫ್ರಾನ್ಸ್ ಪಡೆ: ಕಿಲಿಯನ್ ಎಂಬಾಪೆ ಜೊತೆಗೆ ಔರೇಲಿಯನ್ ಚೌವಾಮೆನಿ, ಫೆರ್ಲ್ಯಾಂಡ್ ಮೆಂಡಿ ಮತ್ತು ಎಡ್ವರ್ಡೊ ಕಮಾವಿಂಗಾ ಅವರಂತಹ ರಿಯಲ್ ಮ್ಯಾಡ್ರಿಡ್‌ನ ಪ್ರಮುಖ ಆಟಗಾರರು ಫ್ರಾನ್ಸ್ ತಂಡದಲ್ಲಿದ್ದಾರೆ.

ಈ ಎರಡು ತಂಡಗಳ ಮೂಲಕ ಸಾಂಪ್ರದಾಯಿಕ ಎದುರಾಳಿಗಳು ಕಣಕ್ಕಿಳಿಯುತ್ತಿರುವುದರಿಂದ ರಿಯಲ್ ಮ್ಯಾಡ್ರಿಡ್ ಅಭಿಮಾನಿಗಳು ಫ್ರಾನ್ಸ್ ತಂಡವನ್ನು ಮತ್ತು ಬಾರ್ಸಿಲೋನಾ ಅಭಿಮಾನಿಗಳು ಸ್ಪೇನ್ ತಂಡವನ್ನು ಬೆಂಬಲಿಸುತ್ತಿದ್ದಾರೆ.

ಫ್ರಾನ್ಸ್ ವಿರುದ್ಧ ಸ್ಪೇನ್ ಮೇಲುಗೈ:

ಯೂರೋಪ್ ಮತ್ತು ಜಾಗತಿಕ ಫುಟ್‌ಬಾಲ್‌ನಲ್ಲಿ ಈ ಎರಡು ತಂಡಗಳ ಇತ್ತೀಚಿನ ಮುಖಾಮುಖಿಗಳು ಕ್ಲಾಸಿಕ್ ಪಂದ್ಯಗಳಾಗಿ ಇತಿಹಾಸ ಸೇರಿವೆ.

  • ಯೂರೋ ಕಪ್ 2024 ಸೆಮಿಫೈನಲ್: ಯುವ ಶಕ್ತಿಯ ಬಲದಿಂದ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ, ಫ್ರೆಂಚ್ ಸಾಮ್ರಾಜ್ಯದ ಹೆಮ್ಮೆಯನ್ನು ಸ್ಪೇನ್ ಮುರಿದಿತ್ತು.
  • ನೇಷನ್ಸ್ ಲೀಗ್ 2025 ಸೆಮಿಫೈನಲ್: 9 ಗೋಲುಗಳು ಮೂಡಿಬಂದ ಈ ಐತಿಹಾಸಿಕ ಪಂದ್ಯದಲ್ಲಿ ಸ್ಪೇನ್ 5-4 ಅಂತರದಲ್ಲಿ ಜಯಗಳಿಸಿತು. ಈ ಪಂದ್ಯವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ರೋಚಕ ಮತ್ತು ನಾಟಕೀಯ ಪಂದ್ಯವಾಗಿ ದಾಖಲಾಯಿತು.

ಈ ಎರಡು ಸೋಲುಗಳಿಂದ ಕಂಗಾಲಾಗಿರುವ ಫ್ರಾನ್ಸ್, ಸ್ಪೇನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದರೆ, ಸ್ಪೇನ್ ತನ್ನ ಜಾಗತಿಕ ಆಧಿಪತ್ಯವನ್ನು ಕಾಯ್ದುಕೊಳ್ಳಲು ಪ್ಲ್ಯಾನ್ ರೂಪಿಸುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯವು ಕೇವಲ ಎರಡು ಬಲಿಷ್ಠ ದೇಶಗಳ ನಡುವಿನ ಸಾಂಪ್ರದಾಯಿಕ ಹೋರಾಟವಾಗಿ ಉಳಿದಿಲ್ಲ. ಇದು ಆಧುನಿಕ ಫುಟ್‌ಬಾಲ್‌ನ ಇಬ್ಬರು ಧ್ರುವತಾರೆಗಳಾದ ಕಿಲಿಯನ್ ಎಂಬಾಪೆ ಮತ್ತು ಲಾಮಿನ್ ಯಮಾಲ್ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಕದನವೂ ಹೌದು.

ಇದನ್ನೂ ಓದಿ: ನಾವು ಹೆದರಲ್ಲ… ಕೊಹ್ಲಿ, ರೋಹಿತ್​​ಗೆ ಡಕೆಟ್ ಸವಾಲು!

ಹಾಗೆಯೇ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಕ್ಲಬ್‌ ಅಭಿಮಾನಿಗಳ ನಡುವಿನ ದಶಕಗಳ ಹಳೆಯ ವೈಷಮ್ಯ ಮತ್ತು ಭಾವನಾತ್ಮಕ ಪೈಪೋಟಿಗೆ ಈ ಪಂದ್ಯವು ಹೊಸದೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಹೀಗಾಗಿ ಫ್ರಾನ್ಸ್ ಮತ್ತು ಸ್ಪೇನ್ ನಡುವಣ ಸೆಮಿಫೈನಲ್ ಪಂದ್ಯವು ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಅಭಿಮಾನಿಗಳ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.

Source link

Exit mobile version