ಕೆಆರ್​ಎಸ್ ಡ್ಯಾಂನಲ್ಲಿ ಅನುಮತಿಯಿಲ್ಲದೆ ಖಾಸಗಿ ಕಂಪನಿಯಿಂದ ಮಣ್ಣು ಪರೀಕ್ಷೆ: ರೈತರ ತೀವ್ರ ವಿರೋಧ – Kannada News | KRS Dam Soil Testing Row: Farmers Oppose Private Company’s Unauthorized Survey Inside Reservoir Premises

ಮಂಡ್ಯ, ಜುಲೈ 14: ಕೆಆರ್​ಎಸ್ ಜಲಾಶಯದ ಆವರಣದಲ್ಲಿ ಖಾಸಗಿ ಕಂಪನಿಯೊಂದು ಅನುಮತಿ ಪಡೆಯದೆ ಮಣ್ಣು ಪರೀಕ್ಷೆ ನಡೆಸುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾವೇರಿ ನೀರಾವರಿ ನಿಗಮದ ಅನುಮತಿ ಇಲ್ಲದೆ, ಡ್ಯಾಂ ಒಳಗೆ ಯಂತ್ರಗಳ ಮೂಲಕ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಯಿಂದ ಆರನೇ ಹಂತದ ಯೋಜನೆ ಕಾಮಗಾರಿಗೆ ಟೆಂಡರ್ ಪಡೆದಿರುವ ಕಂಪನಿ ಈ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಯೋಜನೆಯ ಭಾಗವಾಗಿ ಕೆಆರ್​ಎಸ್ ಡ್ಯಾಂನಿಂದ ನೀರು ಪೂರೈಕೆ ಮಾಡುವ ಪ್ರಸ್ತಾವನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಅಧಿಕೃತ ಅನುಮತಿಯಿಲ್ಲದೆ ಮಣ್ಣು ಪರೀಕ್ಷೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ರೈತರು ಮತ್ತು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿಗೆ ಸಿದ್ಧತೆ ನಡೆಸಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯಲ್ಲಿ ಟೋಲ್​ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು? – Kannada News | Hormuz Strait USA Iran toll war, how India and other countries affected

ನವದೆಹಲಿ, ಜುಲೈ 14: ಹಾರ್ಮುಜ್ ಜಲಸಂಧಿಯು (Strait of Hormuz) ಅಮೆರಿಕದ ನೌಕಾಪಡೆಯ ರಕ್ಷಣೆಯಲ್ಲಿದೆ ಎಂದು ಪುನರುಚ್ಚರಿಸಿರುವ ಟ್ರಂಪ್, ಈ ಜಲ ಮಾರ್ಗದ ಮೂಲಕ ಸಾಗುವ ಸರಕುಗಳ ಮೇಲೆ ಶೇ. 20ರಷ್ಟು ಶುಲ್ಕ (Toll on oil tankers) ವಿಧಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಇರಾನ್‌ನ ಬಂದರುಗಳಿಗೆ ನೌಕಾ ದಿಗ್ಬಂಧನವನ್ನು ಮರುಸ್ಥಾಪಿಸುವುದಾಗಿಯೂ ತಿಳಿಸಿದ್ದಾರೆ. ಜಲಮಾರ್ಗದಲ್ಲಿ ನೌಕೆಗಳ ಮೇಲೆ ಅಮೆರಿಕ ಟೋಲ್ ವಿಧಿಸಲು ಆರಂಭಿಸಿದರೆ ಅದು ಭಾರತದ ಮೇಲೆ ಪರಿಣಾಮ ಬೀರುವುದು ಹೌದು. ಹೀಗಾಗಿ, ಭಾರತ ಈ ಬೆಳವಣಿಗೆಯನ್ನು ಹೆಚ್ಚಿನ ಜಾಗ್ರತೆಯಿಂದ ಗಮನಿಸುತ್ತಿದೆ.

ಇನ್ನೊಂದೆಡೆ, ಇರಾನ್ ದೇಶವು ಅಮೆರಿಕದ ಈ ನಡೆಯನ್ನು ವ್ಯಂಗ್ಯ ಮಾಡಿದೆ. ಜಲಸಂಧಿಯ ನಿಯಂತ್ರಣ ತನ್ನ ಕೈಯಲ್ಲಿದೆ. ಅದರ ಭದ್ರತೆಗೆ ತೆರಿಗೆ ವಿಧಿಸುವುದು ಸರಿ. ಆದರೆ, ಟ್ರಂಪ್ ಅವರ ಶೇ. 20 ಟೋಲ್ ಜಾಸ್ತಿಯಾಯಿತು. ತಾವು ಅಷ್ಟು ದೊಡ್ಡ ಟೋಲ್ ವಸೂಲಿ ಪಡೆಯುವುದಿಲ್ಲ ಎಂದು ಇರಾನ್ ಹೇಳಿದೆ. ಆದರೆ, ಇಬ್ಬರಲ್ಲಿ ಒಬ್ಬರು ಟೋಲ್ ವಸೂಲಿ ಮಾಡಲು ಹೊರಟಿರುವುದು ಹೌದು. ಇವರಲ್ಲದಿದ್ದರೆ ಅವರು, ಅವರಲ್ಲದಿದ್ದರೆ ಇವರು ಎನ್ನುವಂತಾಗಿದೆ.

ಭಾರತದ ಮೇಲೆ ಏನು ಪರಿಣಾಮ?

ಭಾರತವು ತನ್ನ ತೈಲ ಮತ್ತು ಅನಿಲದ (LNG) ಬಹುಭಾಗವನ್ನು ಈ ಹಾರ್ಮುಜ್ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ಈ ಶೇ. 20ರಷ್ಟು ಶುಲ್ಕ ಜಾರಿಯಾದರೆ, ತೈಲ ಕಂಪನಿಗಳ ಸಾಗಾಟ ವೆಚ್ಚ ಹೆಚ್ಚಾಗುತ್ತದೆ. ಇದು ಅಂತಿಮವಾಗಿ ಭಾರತದಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್‌ ‘ಕೌಶಲ್ಯ ಯೋಜನೆ’: 23,000ಕ್ಕೂ ಹೆಚ್ಚು ಯುವಕರಿಗೆ ತರಬೇತಿ, 5,000ಕ್ಕೂ ಅಧಿಕ ಮಂದಿಗೆ ಉದ್ಯೋಗ ಭಾಗ್ಯ

ವಿಶ್ವದ ಶೇ. 20ರಷ್ಟು ತೈಲ ಪೂರೈಕೆಯು ಇದೇ ಜಲಮಾರ್ಗದ ಮೂಲಕ ಸಾಗುತ್ತದೆ. ಇದರಲ್ಲಿ ಹೆಚ್ಚಿನ ಸರಬರಾಜು ಭಾರತ ಹಾಗೂ ಏಷ್ಯನ್ ದೇಶಗಳಿಗೆ ಆಗುತ್ತದೆ. ಹೀಗಾಗಿ, ಏಷ್ಯಾದ ಹಲವು ದೇಶಗಳು ಹಾರ್ಮುಜ್ ಜಲಸಂಧಿಯಲ್ಲಿ ಆಗುವ ಯಾವುದೇ ಬಿಕ್ಕಟ್ಟಿನ ಪರಿಣಾಮ ಎದುರಿಸುತ್ತವೆ.

ಟ್ಯಾಂಕರ್ ದಾಳಿ ಮತ್ತು ಭದ್ರತಾ ಕಾಳಜಿ: ಈ ಘೋಷಣೆಗೆ ಕೆಲವೇ ಗಂಟೆಗಳ ಮೊದಲು, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಕ್ಷಿಪಣಿಗಳು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿದ್ದವು. ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ (ಅವರಲ್ಲಿ ಆರು ಮಂದಿ ಭಾರತೀಯರು). ಇದು ಸಮುದ್ರ ಮಾರ್ಗದ ಭದ್ರತೆಯ ಬಗ್ಗೆ ಭಾರತಕ್ಕೆ ತೀವ್ರ ಆತಂಕವನ್ನುಂಟುಮಾಡಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ತರಾತುರಿ ತೋರದ ಭಾರತ; ಕೆಟ್ಟ ಒಪ್ಪಂದಕ್ಕಿಂತ, ಒಪ್ಪಂದವಿಲ್ಲದಿರುವುದೇ ಲೇಸು – ಸರ್ಕಾರ ನಿಲುವು

ಅಂತರರಾಷ್ಟ್ರೀಯ ನಿಯಮಗಳು: ಅಂತರರಾಷ್ಟ್ರೀಯ ಜಲಸಂಧಿಗಳ ಮೂಲಕ ಸಾಗುವ ಹಡಗುಗಳ ಮೇಲೆ ಕಡ್ಡಾಯ ತೆರಿಗೆ ವಿಧಿಸಲು ಯಾವುದೇ ಕಾನೂನು ಆಧಾರವಿಲ್ಲ ಎಂದು ಇಂಟರ್ನ್ಯಾಷನಲ್ ಮಾರಿಟೈಮ್ ಆರ್ಗನೈಸೇಶನ್ (IMO) ತಿಳಿಸಿದೆ.

ಈ ವಿದ್ಯಮಾನಗಳು ತೈಲ ಪೂರೈಕೆ ಸರಪಳಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಅನಿಶ್ಚಿತತೆಯನ್ನು ಮೂಡಿಸಿದ್ದು, ಭಾರತೀಯ ತೈಲ ಕಂಪನಿಗಳು ಮತ್ತು ನೌಕಾ ಸಿಬ್ಬಂದಿಗಳಿಗೆ ಸವಾಲಾಗಿ ಪರಿಣಮಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆದಾಯ ತೆರಿಗೆ ನಿಯಮಗಳ ಪ್ರಕಾರ ಎನ್​ಆರ್​ಐ ಯಾರು? ಇವರಿಗೆ ಇನ್ಕಮ್ ಟ್ಯಾಕ್ಸ್ ಎಷ್ಟಿದೆ? – Kannada News | Income Tax rules define who are Indian residents and who are NRIs, details here

ಭಾರತೀಯ ಪಾಸ್​ಪೋರ್ಟ್Image Credit source: Getty Images

ವಿದೇಶದಲ್ಲಿ ವಾಸಿಸುತ್ತಿರುವ ಕಾರಣಕ್ಕೆ ಮಾತ್ರ ಅನಿವಾಸಿ ಭಾರತೀಯರಿಗೆ (NRI) ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವುದರಿಂದ ಸ್ವಯಂಚಾಲಿತವಾಗಿ ವಿನಾಯಿತಿ ಸಿಗುವುದಿಲ್ಲ. ಭಾರತದಲ್ಲಿ ಗಳಿಸುವ ಆದಾಯ ಮತ್ತು ಅವರ ವಾಸಸ್ಥಳದ ಸ್ಥಿತಿಯ (Residential Status) ಆಧಾರದ ಮೇಲೆ ಅವರು ತೆರಿಗೆ ಸಲ್ಲಿಸಬೇಕಾಗುತ್ತದೆಯೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 6ರ ಅಡಿಯಲ್ಲಿ ‘ನಿವಾಸಿ ಭಾರತೀಯ’ (Resident) ಆಗಲು ಇರುವ ನಿಯಮಗಳನ್ನು ಪೂರೈಸದವರನ್ನು ಅನಿವಾಸಿ ಭಾರತೀಯ (NRI) ಎಂದು ಪರಿಗಣಿಸಲಾಗುತ್ತದೆ.

ಒಬ್ಬ ವ್ಯಕ್ತಿಯು ಭಾರತದ ನಿವಾಸಿಯಾಗಲು ಈ ಕೆಳಗಿನ ಯಾವುದಾದರೊಂದು ಷರತ್ತನ್ನು ಪೂರೈಸಬೇಕು:

  1. ಪ್ರಸ್ತುತ ಹಣಕಾಸು ವರ್ಷದಲ್ಲಿ ಕನಿಷ್ಠ 182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ದಿನ ಭಾರತದಲ್ಲಿ ನೆಲೆಸಿರಬೇಕು.
  2. ಅಥವಾ, ಪ್ರಸ್ತುತ ವರ್ಷದಲ್ಲಿ ಕನಿಷ್ಠ 60 ದಿನಗಳು ಮತ್ತು ಅದರ ಹಿಂದಿನ 4 ವರ್ಷಗಳಲ್ಲಿ ಒಟ್ಟು 365 ದಿನಗಳು ಭಾರತದಲ್ಲಿ ನೆಲೆಸಿರಬೇಕು.

ಅನಿವಾಸಿ ಭಾರತೀಯರಿಗೆ ಏನಿವೆ ವಿಶೇಷ ವಿನಾಯಿತಿಗಳು?

ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯ ನಾಗರಿಕರು ಅಥವಾ ಭಾರತಕ್ಕೆ ಭೇಟಿ ನೀಡುವ ಭಾರತೀಯ ಮೂಲದ ವ್ಯಕ್ತಿಗಳಿಗೆ (PIOs) ಮೇಲಿನ 60 ದಿನಗಳ ಮಿತಿಯನ್ನು 182 ದಿನಗಳಿಗೆ ಹೆಚ್ಚಿಸಲಾಗಿದೆ.

ಒಂದು ವೇಳೆ ಭಾರತಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕ ಅಥವಾ PIO ನ ಭಾರತೀಯ ಮೂಲದ ಒಟ್ಟು ಆದಾಯ ₹15 ಲಕ್ಷಕ್ಕಿಂತ ಹೆಚ್ಚಿದ್ದರೆ, ಅವರಿಗೆ 60 ದಿನಗಳ ಮಿತಿ 120 ದಿನಗಳಾಗಿ ಬದಲಾಗುತ್ತದೆ.

ಡೀಮ್ಡ್ ರೆಸಿಡೆನ್ಸಿ (Deemed Residency): ಯಾವುದೇ ದೇಶದಲ್ಲಿ ತೆರಿಗೆ ಪಾವತಿಸಲು ಹೊಣೆಗಾರರಲ್ಲದ ಮತ್ತು ಭಾರತದಲ್ಲಿ ₹15 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಭಾರತೀಯ ನಾಗರಿಕರನ್ನು ಭಾರತದ ನಿವಾಸಿ ಎಂದೇ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್​ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು?

NRIಗಳು ಭಾರತದಲ್ಲಿ ಯಾವಾಗ ITR ಸಲ್ಲಿಸಬೇಕು?

ಕೆಳಗಿನ ಸಂದರ್ಭಗಳಲ್ಲಿ NRIಗಳು ಭಾರತದಲ್ಲಿ ಕಡ್ಡಾಯವಾಗಿ ಐಟಿಆರ್ ಸಲ್ಲಿಸಬೇಕಾಗುತ್ತದೆ:

  • ಮೂಲ ವಿನಾಯಿತಿ ಮಿತಿಗಿಂತ ಹೆಚ್ಚು ಆದಾಯವಿದ್ದರೆ: ಹೊಸ ತೆರಿಗೆ ಪದ್ಧತಿಯಡಿ ಭಾರತದಲ್ಲಿನ ಒಟ್ಟು ತೆರಿಗೆಗೆ ಒಳಪಡುವ ಆದಾಯ ₹4 ಲಕ್ಷ ಹಾಗೂ ಹಳೆಯ ತೆರಿಗೆ ಪದ್ಧತಿಯಡಿ ₹2.5 ಲಕ್ಷ ದಾಟಿದರೆ ಐಟಿಆರ್ ಸಲ್ಲಿಸುವುದು ಕಡ್ಡಾಯ.
  • ಭಾರತದಲ್ಲಿ ಗಳಿಸಿದ ಸಂಬಳ: ನೀವು ವಿದೇಶದಲ್ಲಿದ್ದರೂ, ಭಾರತದಲ್ಲಿ ಒದಗಿಸಿದ ಸೇವೆಗೆ ಸಂಬಳ ಪಡೆದರೆ ಅಥವಾ ಭಾರತದ ಬ್ಯಾಂಕ್ ಖಾತೆಗೆ ನೇರವಾಗಿ ಸಂಬಳ ಜಮೆಯಾದರೆ ಅದಕ್ಕೆ ತೆರಿಗೆ ಅನ್ವಯಿಸುತ್ತದೆ.
  • ಮನೆಯ ಬಾಡಿಗೆ ಆದಾಯ: ಭಾರತದಲ್ಲಿರುವ ನಿಮ್ಮ ಮನೆಯಿಂದ ಬರುವ ಬಾಡಿಗೆ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ (ಇದರಲ್ಲಿ ಶೇ. 30 ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಕಡಿತ ಪಡೆಯಬಹುದು).
  • ಷೇರು ಅಥವಾ ಆಸ್ತಿ ಮಾರಾಟದ ಲಾಭ (Capital Gains): ಭಾರತದ ಷೇರುಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ಸ್ಥಿರಾಸ್ತಿಯನ್ನು ಮಾರಾಟ ಮಾಡಿ ಗಳಿಸಿದ ಲಾಭಕ್ಕೆ ತೆರಿಗೆ ಅನ್ವಯಿಸುತ್ತದೆ. ಒಂದು ವೇಳೆ ಟಿಡಿಎಸ್ (TDS) ಹೆಚ್ಚಿಗೆ ಕಡಿತವಾಗಿದ್ದರೆ, ಅದನ್ನು ಮರುಪಾವತಿ (Refund) ಪಡೆಯಲು ಐಟಿಆರ್ ಸಲ್ಲಿಸಬೇಕು.
  • ಬಡ್ಡಿ ಮತ್ತು ಡಿವಿಡೆಂಡ್ ಆದಾಯ: NRO ಖಾತೆಯಲ್ಲಿರುವ ಠೇವಣಿಗಳ ಮೇಲಿನ ಬಡ್ಡಿ ಮತ್ತು ಭಾರತೀಯ ಕಂಪನಿಗಳಿಂದ ಬರುವ ಡಿವಿಡೆಂಡ್ (ಲಾಭಾಂಶ) ಆದಾಯಕ್ಕೆ ತೆರಿಗೆ ಇರುತ್ತದೆ.
  • ನಷ್ಟ ಕ್ಯಾರಿ ಫಾರ್ವರ್ಡ್ ಮಾಡಲು: ಭಾರತದಲ್ಲಿನ ಹೂಡಿಕೆ ಅಥವಾ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರೆ, ಅದನ್ನು ಮುಂದಿನ ವರ್ಷಗಳ ಲಾಭದೊಂದಿಗೆ ಸರಿದೂಗಿಸಲು (Offset) ಐಟಿಆರ್ ಫೈಲಿಂಗ್ ಮಾಡುವುದು ಮುಖ್ಯ.
  • DTAA ಪ್ರಯೋಜನ ಪಡೆಯಲು: ಒಂದೇ ಆದಾಯಕ್ಕೆ ಭಾರತ ಮತ್ತು ತಾವು ವಾಸಿಸುವ ದೇಶ ಎರಡರಲ್ಲೂ ತೆರಿಗೆ ವಿಧಿಸುವುದನ್ನು ತಪ್ಪಿಸಲು ದ್ವಿಪಕ್ಷೀಯ ತೆರಿಗೆ ತಡೆ ಒಪ್ಪಂದದ (DTAA) ಅಡಿಯಲ್ಲಿ ವಿನಾಯಿತಿ ಪಡೆಯಲು ITR ಸಲ್ಲಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಂಭೀರ್ vs ಅಗರ್ಕರ್ ನಡುವೆ ಶೀತಲ ಸಮರ: ಆಟಗಾರರಲ್ಲಿ ಆತಂಕ! – Kannada News | Gambhir vs Agarkar: Cold War in Team India

ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನಡುವಿನ ವೈಚಾರಿಕ ಭಿನ್ನಾಭಿಪ್ರಾಯಗಳು ಆಟಗಾರರಲ್ಲಿ ಅಭದ್ರತೆಯನ್ನು ಮೂಡಿಸುತ್ತಿವೆ ಎಂದು ದಿನೇಶ್ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಭಿನ್ನಾಭಿಪ್ರಾಯಕ್ಕೆ ಮುಖ್ಯ ಕಾರಣವೇನು?

ದಿನೇಶ್ ಕಾರ್ತಿಕ್ ಅವರ ಪ್ರಕಾರ, ಈ ಇಬ್ಬರು ದಿಗ್ಗಜರ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣ ‘ದೀರ್ಘಾವಧಿ ಯೋಜನೆ vs ತತ್‌ಕ್ಷಣದ ಗೆಲುವು’.

  • ಅಜಿತ್ ಅಗರ್ಕರ್ ಅವರ ನಿಲುವು: ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರು ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಮತ್ತು ಸರಣಿಗಳಲ್ಲಿ ಆಟಗಾರರನ್ನು ರೊಟೇಷನ್ ಮಾಡಲು ಬಯಸುತ್ತಿದ್ದಾರೆ.
  • ಗೌತಮ್ ಗಂಭೀರ್ ಅವರ ನಿಲುವು: ಹೆಡ್ ಕೋಚ್ ಹುದ್ದೆಯಲ್ಲಿರುವ ಗಂಭೀರ್ ಮೇಲೆ ಪ್ರತಿ ಪಂದ್ಯವನ್ನೂ ಗೆಲ್ಲಲೇಬೇಕಾದ ತೀವ್ರ ಒತ್ತಡವಿದೆ. ಹೀಗಾಗಿ ಅವರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದೆ, ತಕ್ಷಣದ ಯಶಸ್ಸಿಗಾಗಿ ಹಠ ಹಿಡಿಯುತ್ತಿದ್ದಾರೆ.

ಅಂದರೆ ಅಗರ್ಕರ್ ‘ದೀರ್ಘಾವಧಿ ಯೋಜನೆಗೆ ಒತ್ತು ನೀಡುತ್ತಿದ್ದರೆ, ಗಂಭೀರ್  ತತ್‌ಕ್ಷಣದ ಗೆಲುವಿಗಾಗಿ ತಂಡ ಕಟ್ಟುವ ಇರಾದೆಯಲ್ಲಿದ್ದಾರೆ. ಇದುವೇ ಇಬ್ಬರ ನಡುವಣ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಆಟಗಾರರಲ್ಲಿ ಆತಂಕ!

ಈ ಇಬ್ಬರ ನಡುವಿನ ಹೊಂದಾಣಿಕೆಯ ಕೊರತೆಯು ಇತ್ತೀಚಿನ ಸರಣಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದರೂ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಲಿಷ್ಠ ಆಟಗಾರರನ್ನೇ ಕಣಕ್ಕಿಳಿಸಲಾಯಿತು.

ನಂತರ ಇಂಗ್ಲೆಂಡ್ ಸರಣಿಯಲ್ಲಿ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿ, ಕೇವಲ ಒಂದೆರಡು ಪಂದ್ಯಗಳಲ್ಲೇ ಕೈಬಿಡಲಾಯಿತು. ಈ ರೀತಿಯ ಅಸ್ಥಿರ ನಿರ್ಧಾರಗಳಿಂದಾಗಿ ಸದ್ಯ ತಂಡದಲ್ಲಿರುವ ಆಟಗಾರರು ತಮ್ಮ ಸ್ಥಾನದ ಬಗ್ಗೆ ತೀವ್ರ ಆತಂಕ ಎದುರಿಸುತ್ತಿದ್ದಾರೆ.

ಲೈವ್ ಕಾಮೆಂಟರಿಯಲ್ಲೇ ಡಿಕೆ ಕಿಡಿ!

ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಆಲ್ ರೌಂಡರ್ ಶಿವಂ ದುಬೆ ಅವರಿಗಿಂತ ಮುಂಚಿತವಾಗಿ ಬೌಲರ್ ಹರ್ಷಿತ್ ರಾಣಾ ಅವರನ್ನು ಪವರ್‌ಪ್ಲೇನಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ ಗಂಭೀರ್ ಅವರ ವಿಚಿತ್ರ ತಂತ್ರವನ್ನು ಕಾರ್ತಿಕ್ ಕಠಿಣವಾಗಿ ಟೀಕಿಸಿದ್ದಾರೆ.

“ಹರ್ಷಿತ್ ರಾಣಾ ದೇಶಿ ಕ್ರಿಕೆಟ್‌ನಲ್ಲೇ ಎಂದೂ ಪವರ್‌ಪ್ಲೇನಲ್ಲಿ ಬ್ಯಾಟ್ ಮಾಡಿಲ್ಲ, ಅಂತಹದರಲ್ಲಿ ದುಬೆಗಿಂತ ಮುಂಚೆ ಅವರನ್ನು ಕಳುಹಿಸುವುದು ಶುದ್ಧ ಹುಚ್ಚುತನ” ಎಂದು ಕಾರ್ತಿಕ್ ಲೈವ್ ಕಾಮೆಂಟರಿಯಲ್ಲೇ ಆಕ್ರೋಶ ಹೊರಹಾಕಿದ್ದರು.

ಇದೀಗ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ನಡುವೆ ಶೀತಲ ಸಮರ ಏರ್ಪಟ್ಟಿರುವ ವಿಚಾರವನ್ನು ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್​ vs ಸ್ಪೇನ್ ಅಲ್ಲ, ರಿಯಲ್ ಮ್ಯಾಡ್ರಿಡ್ vs ಬಾರ್ಸಿಲೋನಾ!

ಈ ಶೀತಲ ಸಮರವು ಕೇವಲ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯವಾಗಿ ಉಳಿದಿಲ್ಲ. ಬದಲಾಗಿ ಇದು ಇಡೀ ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ಅನಿಶ್ಚಿತತೆಯತ್ತ ತಳ್ಳುತ್ತಿದೆ ಎಂಬುದಕ್ಕೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲುಗಳೇ ಸಾಕ್ಷಿ.

Published On – 2:04 pm, Tue, 14 July 26

Source link

ಬೈಂದೂರು ಅರೆಗುಂಡಿ ಜನರ ಗೋಳು ಕೇಳೋರಿಲ್ಲ: 20 ವರ್ಷಗಳಿಂದ ಜೀವದ ಹಂಗು ತೊರೆದು ಮುರಿದ ಕಾಲುಸಂಕ ದಾಟುವ ಗ್ರಾಮಸ್ಥರು – Kannada News | Kappadi Aregundi Broken Footbridge: Villagers Risk Lives Crossing Dilapidated Bridge for 20 Years in Udupi’s Byndoor

ಉಡುಪಿ, ಜುಲೈ 14: ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಗ್ರಾಮಕ್ಕೆ ಬರುತ್ತಾರೆ. ಭರವಸೆಗಳ ಸುರಿಮಳೆ ಸುರಿಸುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಗ್ರಾಮದ ಸಮಸ್ಯೆಗಳನ್ನು ಮರೆತು ಬಿಡುತ್ತಾರೆ ಎಂಬ ಆಕ್ರೋಶ ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪಾಡಿ ಅರೆಗುಂಡಿ ನಿವಾಸಿಗಳದ್ದು. ಕಳೆದ 15ರಿಂದ 20 ವರ್ಷಗಳಿಂದ ಮುರಿದು ಶಿಥಿಲಗೊಂಡಿರುವ ಕಾಲುಸಂಕವನ್ನೇ ನೂರಾರು ಗ್ರಾಮಸ್ಥರು ಜೀವದ ಹಂಗು ತೊರೆದು ಸಂಪರ್ಕ ಮಾರ್ಗವಾಗಿ ಬಳಸುತ್ತಿದ್ದು, ಶಾಶ್ವತ ಸೇತುವೆ ನಿರ್ಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ಅಪಾಯಕಾರಿ ಸಂಚಾರ

ಗ್ರಾಮದಲ್ಲಿ ಕಾಲ ಬದಲಾದರೂ, ಸರ್ಕಾರಗಳು ಬದಲಾದರೂ, ಜನಪ್ರತಿನಿಧಿಗಳು ಬದಲಾದರೂ ಜನರ ಸಂಕಷ್ಟ ಮಾತ್ರ ಬದಲಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಕಾಲುಸಂಕದ ಮೇಲೆ ನೀರಿನ ಹರಿವು ಹೆಚ್ಚಾಗುವುದರಿಂದ ಪ್ರತಿದಿನ ಸಂಚಾರವೇ ಅಪಾಯಕಾರಿಯಾಗುತ್ತದೆ.

ಪ್ರಾಣ ಭಯದಲ್ಲೇ ಶಾಲೆಗೆ ಹೋಗುವ ಪುಟ್ಟ ಮಕ್ಕಳು

ಶಾಲೆಗೆ ಹೋಗುವ ಪುಟ್ಟ ಮಕ್ಕಳು ಪುಸ್ತಕದ ಚೀಲ ಹೊತ್ತು ಇದೇ ಕಾಲುಸಂಕ ದಾಟಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಒಂದು ಕಡೆ ವೇಗವಾಗಿ ಹರಿಯುವ ನೀರು, ಮತ್ತೊಂದು ಕಡೆ ಮುರಿದು ಹಾಳಾಗಿರುವ ಸಂಕ. ಕಾಲು ಜಾರಿದರೆ ಜೀವಕ್ಕೆ ಅಪಾಯ ಎಂಬ ಆತಂಕದಲ್ಲೇ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಆಂಬುಲೆನ್ಸ್ ಬರೋದಕ್ಕೂ ದಾರಿಯಿಲ್ಲ!

ವಯೋವೃದ್ಧರು, ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ತೆರಳಬೇಕಾದರೂ ಇದೇ ದಾರಿಯನ್ನು ಅವಲಂಬಿಸಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಕೂಡ ಈ ಭಾಗಕ್ಕೆ ತಲುಪಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಕದಿಂದ ಬಿದ್ದು ನೀರುಪಾಲಾಗಿದ್ದ ಮಹಿಳೆಯರು

ಕೆಲವು ವರ್ಷಗಳ ಹಿಂದೆ ಇದೇ ಕಾಲುಸಂಕ ದಾಟುವ ವೇಳೆ ಇಬ್ಬರು ಮಹಿಳೆಯರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರು. ಗ್ರಾಮಸ್ಥರು ಸಮಯೋಚಿತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಅವರ ಜೀವ ಉಳಿದಿತ್ತು. ಆ ಘಟನೆ ಬಳಿಕವಾದರೂ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ವರ್ಷಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ.

ಕಾಲು ಸಂಕ ಸಮಸ್ಯೆ, ಅಪಾಯಗಳ ಬಗ್ಗೆ ‘ಟಿವಿ9’ ವಿಡಿಯೋ

ಈ ದಾರಿಯನ್ನು ಬಿಟ್ಟು ಪರ್ಯಾಯ ಮಾರ್ಗ ಬಳಸಬೇಕಾದರೆ ಸುಮಾರು ಐದು ಕಿಲೋಮೀಟರ್ ಸುತ್ತುವರಿದು ಹೋಗಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಪ್ರತಿದಿನ ಹೆಚ್ಚುವರಿ ಸಮಯ, ಹಣ ಮತ್ತು ಶ್ರಮ ವ್ಯಯಿಸಬೇಕಾಗಿದೆ.

ಪ್ರತಿ ಚುನಾವಣೆಯಲ್ಲೂ ಶಾಶ್ವತ ಕಾಲುಸಂಕ ನಿರ್ಮಾಣದ ಭರವಸೆ ನೀಡಲಾಗುತ್ತದೆ. ಆದರೆ ಚುನಾವಣೆ ಮುಗಿದ ಬಳಿಕ ಆ ಭರವಸೆಗಳು ಕಡತಗಳಲ್ಲೇ ಉಳಿಯುತ್ತವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವು ಬಾರಿ ಅಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಅವರ ಅಳಲು.

ಇದನ್ನೂ ಓದಿ: ಉಡುಪಿ ಶ್ರೀಕೃಷ್ಣದಲ್ಲಿ ಆದಿ ಶಂಕರಾಚಾರ್ಯರ ನಿಂದನೆ ವಿವಾದ: ಕ್ಷಮೆ ಯಾಚಿಸಿದ ಹರಿಕಥೆ ಕಲಾವಿದೆ, ಶಿರೂರು ಮಠದಿಂದಲೂ ಸ್ಪಷ್ಟನೆ

‘ನಮ್ಮ ಹಿಂದಿನ ತಲೆಮಾರೂ ಇದೇ ಸಂಕಷ್ಟ ಅನುಭವಿಸಿತು. ಈಗ ನಮ್ಮ ಮಕ್ಕಳೂ ಅದೇ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಮಗೆ ದೊಡ್ಡ ಅಭಿವೃದ್ಧಿ ಬೇಡ. ಜೀವ ಉಳಿಸುವ ಒಂದು ಶಾಶ್ವತ ಕಾಲುಸಂಕ ನಿರ್ಮಿಸಿ ಕೊಡಿ’ಎಂದು ಗ್ರಾಮಸ್ಥರು ಭಾವುಕರಾಗಿ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಬೇಡಿಕೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಯಾವಾಗ ಸ್ಪಂದಿಸುತ್ತದೆ? ಮತ್ತೊಂದು ಅನಾಹುತ ಸಂಭವಿಸುವ ಮುನ್ನ ಶಾಶ್ವತ ಸೇತುವೆ ನಿರ್ಮಾಣವಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾವನ್ನೂ ಮೀರಿಸುವ ವಂಚನೆ: ಸತ್ತವರ ಹೆಸರು ಬಳಸಿ ಆದಿಚುಂಚನಗಿರಿ ಮಠದ 120 ಕೋಟಿ ರೂ. ಆಸ್ತಿ ಎಗರಿಸಿದ ಖದೀಮರು! – Kannada News | Adichunchanagiri Mutt Land Scam: 11 Arrested, Including 6 Govt Officials for Rs 120 Crore Fraud

ಬೆಂಗಳೂರು, ಜುಲೈ 14: ನಗರದ ಆದಿಚುಂಚನಗಿರಿ ಮಠಕ್ಕೆ ಸೇರಿದ ಬರೋಬ್ಬರಿ 120 ಕೋಟಿ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ (Fake Documents) ಸೃಷ್ಟಿಸಿ ವಂಚಿಸಿದ್ದ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಈ ಹೈಟೆಕ್ ಮತ್ತು ರೋಚಕ ವಂಚನೆ ಪ್ರಕರಣದಲ್ಲಿ ತೊಡಗಿದ್ದ 6 ಜನ ಸರ್ಕಾರಿ ಅಧಿಕಾರಿಗಳು ಹಾಗೂ ರೌಡಿ ಶೀಟರ್ ಸೇರಿದಂತೆ ಒಟ್ಟು 11 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

30 ವರ್ಷದ ಹಿಂದಿನ ಮಠದ ಜಾಗಕ್ಕೆ ಸ್ಕೆಚ್

ಸುಮಾರು 30 ವರ್ಷಗಳ ಹಿಂದೆ ಭಕ್ತರು ಆದಿಚುಂಚನಗಿರಿ ಮಠಕ್ಕೆ ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೇ ನಂಬರ್ 43 ರಲ್ಲಿ ಒಟ್ಟು 45 ಎಕರೆ ಜಮೀನನ್ನು ಕಾಣಿಕೆಯಾಗಿ ನೀಡಿದ್ದರು. ಈ ಪೈಕಿ 6 ಎಕರೆ ಬೆಲೆಬಾಳುವ ಜಮೀನನ್ನು ಕಬಳಿಸಲು ನೆಲಮಂಗಲ ಮೂಲದ ಮಾಸ್ಟರ್ ಮೈಂಡ್ ನರೇಶ್ ಗೌಡ ಮತ್ತು ಬ್ರೋಕರ್ ಆರೋಗ್ಯಸ್ವಾಮಿ ಸ್ಕೆಚ್ ಹಾಕಿದ್ದ.

ಸತ್ತವರ ಸಮಾಧಿ ಹುಡುಕಿ ನಕಲಿ ವಂಶವೃಕ್ಷ ಸೃಷ್ಟಿ

ಆರೋಪಿಗಳು ವಂಚನೆಗೆ ಬಳಸಿದ ದಾರಿ ಯಾವುದೇ ಸಿನಿಮಾಕ್ಕೂ ಕಡಿಮೆ ಇಲ್ಲ.ಮಠದ ಜಮೀನಿನ ಮೂಲ ಮಾಲೀಕರ ಹೆಸರೇ ಇರುವ ಸತ್ತ ವ್ಯಕ್ತಿಯೊಬ್ಬ ಇವರಿಗೆ ಬೇಕಾಗಿತ್ತು. ಇದಕ್ಕಾಗಿ ಸ್ಮಶಾನಗಳಿಗೆ ಅಲೆದಾಡಿದ ಖದೀಮರು, ಕೊನೆಗೆ ಮೂಲ ಮಾಲೀಕನ ಹೆಸರೇ ಇದ್ದ ವ್ಯಕ್ತಿಯ ಸಮಾಧಿಯೊಂದನ್ನು ಪತ್ತೆ ಮಾಡಿದ್ದರು. ಆ ಸಮಾಧಿಯ ಮೇಲಿದ್ದ ಹೆಸರಿನ ಆಧಾರದ ಮೇಲೆ ಅವರ ಕುಟುಂಬವನ್ನು ಸಂಪರ್ಕಿಸಿದ್ದರು.

ಅಲ್ಲೇ ಇವರಿಗೆ ಬೇಗೂರು ಪೊಲೀಸ್ ಠಾಣೆಯ ರೌಡಿ ಶೀಟರ್ ಫ್ರಾನ್ಸಿಸ್ ಸಿಕ್ಕಿದ್ದ. ಫ್ರಾನ್ಸಿಸ್ ತಂದೆಯ ಹೆಸರು ಹಾಗೂ ಮಠದ ಜಮೀನಿನ ಮೂಲ ಮಾಲೀಕನ ಹೆಸರು, ವಯಸ್ಸು ಮ್ಯಾಚ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ನರೇಶ್ ಗೌಡನ ಟೀಮ್, ಫ್ರಾನ್ಸಿಸ್ ಹಾಗೂ ಜೋಸ್ವಾನ್ ಇಬ್ಬರೂ ಅಣ್ಣ-ತಂಗಿ ಎಂದು ಸುಳ್ಳು ವಂಶವೃಕ್ಷ ಸೃಷ್ಟಿಸಿದ್ದರು.

ಲಂಚ ಪಡೆದು ಸಾಥ್ ನೀಡಿದ ಸರ್ಕಾರಿ ಅಧಿಕಾರಿಗಳು

ಈ ನಕಲಿ ದಾಖಲೆಗಳಿಗೆ ಲಕ್ಷಾಂತರ ರೂಪಾಯಿ ಹಣ ಪಡೆದು ಬೇಗೂರು ವಿಲೇಜ್ ಅಕೌಂಟೆಂಟ್ ಶಿವಪ್ರಸಾದ್, ರೆವಿನ್ಯೂ ಇನ್ಸ್ಪೆಕ್ಟರ್ ಕಿರಣ್ ಮತ್ತು ಡೆಪ್ಯೂಟಿ ತಹಶೀಲ್ದಾರ್ ದೀಪಕ್ ನಕಲಿ ದಾಖಲೆ ಪತ್ರ ಮಾಡಿಕೊಟ್ಟಿದ್ದರು. ಇದನ್ನು ಪಡೆದ ಕೆಂಗೇರಿಯ ವಿಲೇಜ್ ಅಕೌಂಟೆಂಟ್ ಸತೀಶ್ ಕುಮಾರ್, ರೆವಿನ್ಯೂ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹಾಗೂ ಡೆಪ್ಯೂಟಿ ತಹಶೀಲ್ದಾರ್, ಅದು ನಕಲಿ ಎಂದು ಗೊತ್ತಿದ್ದರೂ ಖಾತೆ ಮಾಡಿಕೊಟ್ಟಿದ್ದರು. ಆಸ್ತಿ ಕೈ ಸೇರಿದ ತಕ್ಷಣ ಆರೋಪಿಗಳು ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದರು.

ಮಠದಿಂದ ದೂರು: ಬಯಲಾಯ್ತು ವಂಚನೆ

ಕೊನೆಗೆ ಜಮೀನು ಹಸ್ತಾಂತರವಾಗಿರುವ ವಿಚಾರ ತಿಳಿದು ಆದಿಚುಂಚನಗಿರಿ ಮಠದ ವತಿಯಿಂದ ಕೆಂಗೇರಿ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ವಂಚನೆ ಬಯಲಾಗಿದೆ. ಸದ್ಯ 6 ಅಧಿಕಾರಿಗಳು ಸೇರಿದಂತೆ 11 ಜನರನ್ನು ಜೈಲಿಗಟ್ಟಲಾಗಿದ್ದು, ತಲೆಮರೆಸಿಕೊಂಡಿರುವ ಮಾಸ್ಟರ್ ಮೈಂಡ್ ನರೇಶ್ ಗೌಡನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಶ್ರೀ ರಾಮ ಭೂಮಿ’ಯಲ್ಲಿ ಅನುಪಮ್ ಖೇರ್, ಅಶೋಕ್ ಸಿಂಘಾಲ್ ಪಾತ್ರದಲ್ಲಿ ನಟನೆ – Kannada News | Anupam Kher acting in Shri Ram Bhoomi movie

ಬಾಲಿವುಡ್​​ನ ಖ್ಯಾತ ನಟ ಅನುಪಮ್ ಖೇರ್ (Anupam Kher), ಹಲವು ಅದ್ಭುತ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ರಾಜಕೀಯವಾಗಿಯೂ ಸಕ್ರಿಯವಾಗಿರುವ ಅನುಪಮ್ ಖೇರ್, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಅನುಪಮ್ ಖೇರ್ ಅವರು ಬಿಜೆಪಿ ಪರವಾದ ಪ್ರಾಪಗಾಂಡಾ ಸಿನಿಮಾಗಳಲ್ಲಿ ನಟಿಸುತ್ತಾರೆ, ಅವುಗಳ ಪ್ರಚಾರ ಮಾಡುತ್ತಾರೆ ಎಂಬ ಆರೋಪವೂ ಇದೆ. ‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ಎಮರ್ಜೆನ್ಸಿ’, ‘ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಅಂಥಹಾ ಸಿನಿಮಾಗಳಲ್ಲಿ ಅವರು ಈಗಾಗಲೇ ನಟಿಸಿದ್ದು, ಇದೀಗ ‘ಶ್ರೀ ರಾಮ ಭೂಮಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

‘ಶ್ರೀ ರಾಮ್ ಭೂಮಿ’ ಚಿತ್ರದಲ್ಲಿ ಅವರು ಅಶೋಕ್ ಸಿಂಘಾಲ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅನುಪಮ್ ಖೇರ್ ಅವರ ಲುಕ್​​ನ ಕೆಲ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ. ಇದರ ನಡುವೆ ಖುದ್ದು ಅನುಪಮ್ ಖೇರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತಾವು ಅಶೋಕ್ ಸಿಂಘ್ವಾಲ್ ಅವರ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಖಾತ್ರಿ ಪಟಿಸಿದ್ದಾರೆ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ನಟ ‘ನಾನು ನಿರ್ವಹಿಸುತ್ತಿರುವ ಪಾತ್ರದ ಕೆಲವು ಚಿತ್ರಗಳು ಮಾಧ್ಯಮಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದರಿಂದ, ನಾನು ಯಾವ ಪಾತ್ರವನ್ನು ಮಾಡುತ್ತಿದ್ದೇನೆ ಎಂದು ನೀವೇ ತಿಳಿಸುವುದು ಸೂಕ್ತ ಎಂದು ಭಾವಿಸಿದೆ. ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ನಾನು ಅಶೋಕ್ ಸಿಂಘಾಲ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಂಪೂರ್ಣ ಸಮರ್ಪಣೆ, ದೃಢನಿಶ್ಚಯ ಮತ್ತು ಬದ್ಧತೆಯಿಂದ ಶ್ರೀ ರಾಮ್ ಜನ್ಮಭೂಮಿ ಚಳುವಳಿಗೆ ಮಾರ್ಗದರ್ಶನ ನೀಡಿದ ವ್ಯಕ್ತಿ ಅವರು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ವಯಸ್ಸು 71 ಆಗಿದ್ರೂ ಅನುಪಮ್ ಖೇರ್ ಉತ್ಸಾಹ ನೋಡಿ

‘ಅವರು ಕೇವಲ ನಾಯಕರಾಗಿರಲಿಲ್ಲ, ಬದಲಾಗಿ ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು. ಅವರ ನಂಬಿಕೆ, ಸೂಕ್ಷ್ಮತೆ ಮತ್ತು ಅಚಲವಾದ ನಂಬಿಕೆಯು ಚಳುವಳಿಗೆ ಹೊಸ ಶಕ್ತಿಯನ್ನು ನೀಡಿತು. ಇಂತಹ ಐತಿಹಾಸಿಕ ವ್ಯಕ್ತಿಯೊಬ್ಬರ ಜೀವನವನ್ನು ತೆರೆಯ ಮೇಲೆ ಪ್ರಾಮಾಣಿಕವಾಗಿ ಮತ್ತು ಸೂಕ್ಷ್ಮವಾಗಿ ತರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ಆರಂಭಿಸುವ ಮುನ್ನ ಅನುಪಮ್ ಖೇರ್ ಅವರು ರಾಮ ಮಂದಿರ ಮತ್ತು ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಅಶೋಕ್ ಸಿಂಘ್ವಾಲ್ ಅವರು ‘ಅಯೋಧ್ಯೆ ರಾಮಜನ್ಮ ಭೂಮಿ’ ಚಳವಳಿಯ ನೇತೃತ್ವ ವಹಿಸಿದ್ದರು. ದಶಕಗಳ ಕಾಲ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದರು. ವಾಜಪೇಯಿ ಸಮಯದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಉಪವಾಸವನ್ನೂ ಸಹ ಮಾಡಿದ್ದರು. ರಾಮ ಮಂದಿರ ನಿರ್ಮಾಣದ ಹಿಂದೆ ಅವರ ಶ್ರಮ ಸಾಕಷ್ಟಿದೆ. ಇದೀಗ ಅನುಪಮ್ ಖೇರ್ ಅವರು ಅಶೋಕ್ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಚಿನ್ನದ ಬೆಲೆ ಮಂಗಳವಾರವೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 14th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 14: ಚಿನ್ನದ ಬೆಲೆ (Gold Rates) ಮತ್ತೆ ಇಳಿದಿದೆ. ನಿನ್ನೆ 130 ರೂನಷ್ಟು ಕಡಿಮೆಗೊಂಡಿದ್ದ ಅದರ ಬೆಲೆ 10 ರೂ ಇಳಿದಿದೆ. ವಿದೇಶಗಳಲ್ಲಿ ಬಂಗಾರದ ಬೆಲೆ ಅಲ್ಪ ಸ್ವಲ್ಪ ಏರಿಳಿತ ಕಂಡಿದೆ. ಬೆಳ್ಳಿ ಬೆಲೆ ಇವತ್ತು ಮಂಗಳವಾರ ಬದಲಾವಣೆಯಾಗದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,090 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,710 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,090 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,090 ರೂ
  • ಚೆನ್ನೈ: 13,150 ರೂ
  • ಮುಂಬೈ: 13,090 ರೂ
  • ದೆಹಲಿ: 13,105 ರೂ
  • ಕೋಲ್ಕತಾ: 13,090 ರೂ
  • ಕೇರಳ: 13,090 ರೂ
  • ಅಹ್ಮದಾಬಾದ್: 13,095 ರೂ
  • ಜೈಪುರ್: 13,105 ರೂ
  • ಲಕ್ನೋ: 13,105 ರೂ
  • ಭುವನೇಶ್ವರ್: 13,090 ರೂ

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 538 ರಿಂಗಿಟ್ (12,678 ರುಪಾಯಿ)
  • ದುಬೈ: 483.50 ಡಿರಾಮ್ (12,661 ರುಪಾಯಿ)
  • ಅಮೆರಿಕ: 132.50 ಡಾಲರ್ (12,741 ರುಪಾಯಿ)
  • ಸಿಂಗಾಪುರ: 177.30 ಸಿಂಗಾಪುರ್ ಡಾಲರ್ (13,181 ರುಪಾಯಿ)
  • ಕತಾರ್: 485 ಕತಾರಿ ರಿಯಾಲ್ (12,795 ರೂ)
  • ಸೌದಿ ಅರೇಬಿಯಾ: 498 ಸೌದಿ ರಿಯಾಲ್ (12,751 ರುಪಾಯಿ)
  • ಓಮನ್: 51.25 ಒಮಾನಿ ರಿಯಾಲ್ (12,800 ರುಪಾಯಿ)
  • ಕುವೇತ್: 40.40 ಕುವೇತಿ ದಿನಾರ್ (12,627 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:34 pm, Tue, 14 July 26

Source link

Samudrika Shastra: ನಿಮ್ಮ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರಾಕೃತಿ ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Half moon marks on nails unlocking your future with samudrika shastra and luck

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈ ರೇಖೆಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಸಾಮುದ್ರಿಕ ಶಾಸ್ತ್ರದಲ್ಲಿ ಉಗುರುಗಳ ಮೇಲಿನ ಗುರುತುಗಳಿಗೂ ಇದೆ. ಸಾಮಾನ್ಯವಾಗಿ ಜನರು ತಮ್ಮ ಉಗುರುಗಳ ಬುಡದಲ್ಲಿರುವ ಬಿಳಿ ಅರ್ಧಚಂದ್ರಾಕಾರದ (Half-Moon Shape) ಮಾದರಿಯನ್ನು ನಿರ್ಲಕ್ಷಿಸುತ್ತಾರೆ. ಆದರೆ, ಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಆಕಾರವು ವ್ಯಕ್ತಿಯ ಭವಿಷ್ಯ, ಯಶಸ್ಸು ಮತ್ತು ಅದೃಷ್ಟದ ಬಗ್ಗೆ ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸುತ್ತದೆ.

ನಿಮ್ಮ ಉಗುರುಗಳ ಮೇಲೆ ಈ ಬಿಳಿ ಅರ್ಧಚಂದ್ರ ಸ್ಪಷ್ಟವಾಗಿ ಗೋಚರಿಸಿದರೆ ನೀವು ತುಂಬಾ ಅದೃಷ್ಟವಂತರು ಎಂದರ್ಥ. ಇದು ಅಪಾರ ಶಕ್ತಿ ಮತ್ತು ಬಲವಾದ ಯಶಸ್ಸಿನ ಸಂಕೇತವಾಗಿದೆ. ಪ್ರತಿಯೊಂದು ಬೆರಳಿನ ಉಗುರಿನ ಮೇಲಿನ ಅರ್ಧಚಂದ್ರನು ವಿಭಿನ್ನ ಅರ್ಥವನ್ನು ಹೊಂದಿರುತ್ತಾನೆ. ಆ ವಿವರ ಇಲ್ಲಿದೆ:

ಪ್ರತಿಯೊಂದು ಬೆರಳಿನ ಉಗುರಿನ ಮೇಲಿನ ಅರ್ಧಚಂದ್ರನ ಅರ್ಥ:

ಹೆಬ್ಬೆರಳು ಸಮೃದ್ಧಿಯ ಸಂಕೇತ:

ಹೆಬ್ಬೆರಳಿನ ಉಗುರಿನ ಮೇಲೆ ಅರ್ಧಚಂದ್ರನ ಗುರುತು ಇರುವುದು ಅತ್ಯಂತ ಶುಭ ಲಕ್ಷಣ. ಅಂತಹ ವ್ಯಕ್ತಿಗಳು ತಾವು ಕೈಕೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಇವರ ಜೀವನದಲ್ಲಿ ಸುಖ-ಸಮೃದ್ಧಿಗೆ ಯಾವುದೇ ಕೊರತೆ ಇರುವುದಿಲ್ಲ.

ತೋರುಬೆರಳು ನಾಯಕತ್ವ ಮತ್ತು ಸರ್ಕಾರಿ ಉದ್ಯೋಗ:

ತೋರುಬೆರಳಿನ ಉಗುರಿನ ಮೇಲಿನ ಬಿಳಿ ಗುರುತು ಪ್ರಗತಿಯ ಸಂಕೇತವಾಗಿದೆ. ಇಂತಹ ವ್ಯಕ್ತಿಗಳು ಹಠಾತ್ ಆರ್ಥಿಕ ಲಾಭ ಅಥವಾ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಈ ಬೆರಳಿನಲ್ಲಿ ಗುರುತಿದ್ದರೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚು ಮತ್ತು ಇವರಲ್ಲಿ ಅತ್ಯುತ್ತಮ ನಾಯಕತ್ವ ಕೌಶಲ್ಯವಿರುತ್ತದೆ.

ಮಧ್ಯದ ಬೆರಳು ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸು:

ಮಧ್ಯದ ಬೆರಳಿನ ಉಗುರಿನಲ್ಲಿ ಅರ್ಧಚಂದ್ರಾಕಾರದ ಗುರುತು ಕಂಡುಬಂದರೆ, ಆ ವ್ಯಕ್ತಿಯು ತಾಂತ್ರಿಕ (Technical Field) ಅಥವಾ ಯಾಂತ್ರಿಕ ರಂಗದಲ್ಲಿ ಅಪಾರ ಯಶಸ್ಸು ಮತ್ತು ಕೀರ್ತಿಯನ್ನು ಸಾಧಿಸುತ್ತಾನೆ ಎಂಬುದನ್ನು ಇದು ಸೂಚಿಸುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಉಂಗುರ ಬೆರಳು ಗೌರವ ಮತ್ತು ಪ್ರತಿಷ್ಠೆ:

ನಿಮ್ಮ ಉಂಗುರದ ಬೆರಳಿನ ಉಗುರಿನಲ್ಲಿ ಅರ್ಧಚಂದ್ರನಿದ್ದರೆ, ನೀವು ಸರ್ಕಾರಿ ಉದ್ಯೋಗಗಳಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರೊಂದಿಗೆ ಸಮಾಜದಲ್ಲಿ ಸಕ್ಕತ್ ಗೌರವ, ಹೆಸರು ಮತ್ತು ಪ್ರತಿಷ್ಠೆಯನ್ನು ಗಳಿಸುತ್ತೀರಿ.

ಕಿರುಬೆರಳು ವ್ಯಾಪಾರ ಮತ್ತು ಸಂವಹನ ಕೌಶಲ್ಯ:

ಕಿರುಬೆರಳಿನ ಉಗುರಿನ ಮೇಲೆ ಈ ಗುರುತು ಇದ್ದರೆ, ಆ ವ್ಯಕ್ತಿಯು ವ್ಯಾಪಾರ-ವ್ಯವಹಾರದಲ್ಲಿ (Business) ಅಸಾಧಾರಣ ಯಶಸ್ಸನ್ನು ಕಾಣುತ್ತಾನೆ. ಇವರ ಸಂವಹನ ಕೌಶಲ್ಯ (Communication Skills) ಅದ್ಭುತವಾಗಿದ್ದು, ಮಾತಿನಿಂದಲೇ ಜನರನ್ನು ಆಕರ್ಷಿಸುತ್ತಾರೆ.

ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೋತ್ತರಗಳು (FAQs)

ಪ್ರಶ್ನೆ 1: ಉಗುರುಗಳ ಮೇಲಿನ ಬಿಳಿ ಅರ್ಧಚಂದ್ರ ಏನನ್ನು ಸೂಚಿಸುತ್ತದೆ?

ಉತ್ತರ: ಇದು ವ್ಯಕ್ತಿಯ ಜೀವನದಲ್ಲಿ ಬರಲಿರುವ ಬಲವಾದ ಅದೃಷ್ಟ, ಶಕ್ತಿ ಮತ್ತು ಯಶಸ್ಸನ್ನು ಸೂಚಿಸುವ ಶುಭ ಸಂಕೇತವಾಗಿದೆ.

ಪ್ರಶ್ನೆ 2: ಎಲ್ಲಾ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರ ಸ್ಪಷ್ಟವಾಗಿ ಕಂಡರೆ ಏನರ್ಥ?

ಉತ್ತರ: ನಿಮ್ಮ ಎಲ್ಲಾ ಉಗುರುಗಳ ಮೇಲೆ ಈ ಆಕಾರವು ಸ್ಪಷ್ಟವಾಗಿ ಗೋಚರಿಸಿದರೆ, ನಿಮ್ಮ ಯಶಸ್ಸಿನ ಹಾದಿಗೆ ಯಾವುದೇ ಅಡೆತಡೆಗಳಿರುವುದಿಲ್ಲ ಎಂದು ಅರ್ಥ.

ಪ್ರಶ್ನೆ 3: ಯಾವ ಬೆರಳಿನ ಮೇಲೆ ಅರ್ಧಚಂದ್ರನಿದ್ದರೆ ಸರ್ಕಾರಿ ಉದ್ಯೋಗದ ಯೋಗವಿರುತ್ತದೆ?

ಉತ್ತರ: ಸಾಮುದ್ರಿಕ ಶಾಸ್ತ್ರದ ಪ್ರಕಾರ, ತೋರುಬೆರಳು ಮತ್ತು ಉಂಗುರ ಬೆರಳಿನ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರನಿದ್ದರೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

Source link

ಪಹಲ್ಗಾಮ್ ದಾಳಿ: ಉಗ್ರ ಹಫೀಜ್ ಸಯೀದ್‌ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ – Kannada News | Hafiz Saeed: NIA Issues Non Bailable Warrant for Pahalgam Attack, Trial In Absentia Under BNSS

ಶ್ರೀನಗರ, ಜುಲೈ 14:ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌(Pahalgam)ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅತ್ಯಂತ ಆಕ್ರಮಣಕಾರಿ ಹೆಜ್ಜೆಯನ್ನಿಟ್ಟಿದೆ. ಈ ದಾಳಿಯ ಮುಖ್ಯ ಸೂತ್ರಧಾರಿ, ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಜಾಗತಿಕ ಉಗ್ರ ಹಫೀಜ್ ಸಯೀದ್ ವಿರುದ್ಧ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಮುಕ್ತ ದಿನಾಂಕದ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಈ ಉಗ್ರನನ್ನು ಭಾರತಕ್ಕೆ ಕರೆತರಲು ಇರುವ ಎಲ್ಲಾ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮಾರ್ಗಗಳು ವಾಸ್ತವಿಕವಾಗಿ ಖಾಲಿಯಾಗಿವೆ ಎಂದು ಎನ್‌ಐಎ ಕೋರ್ಟ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಆತ ಭಾರತಕ್ಕೆ ಬರದಿದ್ದರೂ ಸಹ ಆತನ ಅನುಪಸ್ಥಿತಿಯಲ್ಲೇ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡಿದೆ.

ಏಪ್ರಿಲ್ 22, 2025 ರಂದು ಕಾಶ್ಮೀರದ ಸೌಂದರ್ಯವನ್ನು ಸವಿಯಲು ಭಾರತದ ವಿವಿಧ ಮೂಲೆಗಳಿಂದ ಬಂದಿದ್ದ ಅಮಾಯಕ ಪ್ರವಾಸಿಗರ ಮೇಲೆ ಲಷ್ಕರ್ ಉಗ್ರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಅಮಾನುಷ ದಾಳಿ ಇದಾಗಿದ್ದು, 26 ಜನ ಪ್ರವಾಸಿಗರನ್ನು ಹತ್ಯೆ ಮಾಡಲಾಗಿತ್ತು.

ಖುಷಿಯಿಂದ ಪ್ರವಾಸಕ್ಕೆ ಹೋಗಿದ್ದ ಇಡೀ ಕುಟುಂಬಗಳು ಹೆಣವಾಗಿ ಮರಳಿದಾಗ ಇಡೀ ದೇಶವೇ ಕಣ್ಣೀರು ಹಾಕಿತ್ತು. ಜುಲೈ 6 ರಂದು ಎನ್‌ಐಎ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ, ಈ ಇಡೀ ಭೀಕರ ರಕ್ತಪಾತದ ಸ್ಕೆಚ್ ಸಿದ್ಧವಾಗಿದ್ದು ಪಾಕಿಸ್ತಾನದ ನೆಲದಲ್ಲಿ ಮತ್ತು ಇದಕ್ಕೆ ಹಣ ಹಾಗೂ ತರಬೇತಿಯ ಕೃಪಾಪೋಷಿತ ನೆರವು ನೀಡಿದ್ದು ಇದೇ ಹಫೀಜ್ ಸಯೀದ್ ಎಂದು ಸಾಕ್ಷ್ಯ ಸಮೇತ ಸಾಬೀತುಪಡಿಸಿದೆ.

ಮತ್ತಷ್ಟು ಓದಿ: ಪಹಲ್ಗಾಮ್ ಕರಾಳ ನೆನಪಿಗೆ 1 ವರ್ಷ: ದಾಳಿಯಲ್ಲಿ ಪ್ರಾಣಬಿಟ್ಟ ಬೆಂಗಳೂರಿನ ಭರತ್ ತಂದೆಯ ನೋವಿನ ಮಾತು

ಏನಿದು ಹೊಸ ಕಾನೂನಿನ ಅಸ್ತ್ರ?
ಹಫೀಜ್ ಸಯೀದ್ ಪಾಕಿಸ್ತಾನದ ರಕ್ಷಣೆಯಲ್ಲಿದ್ದುಕೊಂಡು ಭಾರತೀಯ ಕೋರ್ಟ್‌ಗಳ ಮುಂದೆ ಹಾಜರಾಗದೆ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾನೆ. ಆದರೆ ಭಾರತದ ಹೊಸ ಕಾನೂನಾದ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ (BNSS) ಅಡಿಯಲ್ಲಿ ಇದಕ್ಕೆ ಬಲವಾದ ಅಸ್ತ್ರ ಸಿಕ್ಕಿದೆ.

ಗೈರುಹಾಜರಿಯಲ್ಲಿ ವಿಚಾರಣೆ: ಹೊಸ ಕಾನೂನಿನ ಪ್ರಕಾರ, ಒಬ್ಬ ಆರೋಪಿಯು ಭಾರತದ ಹೊರಗಿದ್ದು, ಕೋರ್ಟ್ ಸಮನ್ಸ್ ಮತ್ತು ವಾರಂಟ್‌ಗಳಿಗೆ ಬೆಲೆ ನೀಡದೆ ತಪ್ಪಿಸಿಕೊಳ್ಳುತ್ತಿದ್ದರೆ, ಆತನ ಭೌತಿಕ ಉಪಸ್ಥಿತಿಯಿಲ್ಲದೆಯೇ ನ್ಯಾಯಾಲಯವು ಆತನನ್ನು ‘ಘೋಷಿತ ಅಪರಾಧಿ’ ಎಂದು ಘೋಷಿಸಿ ತನಿಖೆ ಮತ್ತು ವಿಚಾರಣೆಯನ್ನು ಮುಂದುವರೆಸಬಹುದು.

ಆಸ್ತಿ ಜಪ್ತಿ ಮತ್ತು ಕಠಿಣ ಶಿಕ್ಷೆ: ಈ ವಿಚಾರಣೆಯ ಅಂತ್ಯದಲ್ಲಿ ಹಫೀಜ್ ಸಯೀದ್ ತಪ್ಪಿತಸ್ಥ ಎಂದು ಸಾಬೀತಾದರೆ , ಆತನಿಗೆ ಗರಿಷ್ಠ ಶಿಕ್ಷೆ ಪ್ರಕಟಿಸಿ, ಭಾರತದಲ್ಲಿರಬಹುದಾದ ಆತನ ಯಾವುದೇ ಬೆಂಬಲಿಗರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಭಾರತಕ್ಕೆ ಸಂಪೂರ್ಣ ಕಾನೂನು ಬಲ ಸಿಗಲಿದೆ.

ಉಳಿದ ಉಗ್ರರಿಗೂ ಸಿದ್ಧವಾಗಿದೆ ಮೃತ್ಯುಕೂಪ
ಎನ್‌ಐಎ ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನ್ನ ಮೊದಲ ಆರೋಪಪಟ್ಟಿಯಲ್ಲಿ ಪಾಕಿಸ್ತಾನಿ ಉಗ್ರರಾದ ಸುಲೇಮಾನ್, ಜಿಬ್ರಾನ್, ಹಮ್ಜಾ ಅಫ್ಘಾನಿ, ಸಾಜಿದ್ ಸೈಫುಲ್ಲಾ ಜಾಟ್ ಮತ್ತು ಅವರಿಗೆ ಸ್ಥಳೀಯವಾಗಿ ಆಶ್ರಯ ನೀಡಿದ್ದ ಪಹಲ್ಗಾಮ್ ನಿವಾಸಿಗಳಾದ ಬಶೀರ್ ಹೈ ಅಹ್ಮದ್ ಮತ್ತು ಪರ್ವೇಜ್ ಅಹ್ಮದ್‌ನನ್ನು ಗುರುತಿಸಿದೆ.

ಗಡಿಯಾಚೆಗಿನ ಭಯೋತ್ಪಾದನೆಯ ಇಡೀ ನೆಟ್‌ವರ್ಕ್ ಅನ್ನು ಬೇರುಸಹಿತ ಕಿತ್ತೊಗೆಯಲು ಭಾರತೀಯ ಸೇನೆ ಮತ್ತು ಎನ್‌ಐಎ ಜಂಟಿ ಕಾರ್ಯಾಚರಣೆ ಮುಂದುವರೆಸಿವೆ. ಪಾಕಿಸ್ತಾನದ ಐಎಸ್‌ಐ (ISI) ನೆರಳಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿರುವ ಹಫೀಜ್ ಸಯೀದ್‌ನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನಾತ್ಮಕವಾಗಿ ಮೂಲೆಗುಂಪು ಮಾಡಲು ಭಾರತ ಈ ಹೊಸ ಕಾನೂನಿನ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version