ಗೂಗಲ್, ಫೇಸ್​​ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ – Kannada News | Preity Zinta to file suit against Google, Meta over deepfake

ನಟಿಯರಿಗೆ ಡೀಫ್​​ಫೇಕ್ ಕಾಟ ಇತ್ತೀಚೆಗೆ ಬಹಳ ಹೆಚ್ಚಾಗಿದೆ. ಹಲವಾರು ನಟಿಯರು ಡೀಪ್​​ಫೇಕ್ ಕಾಟಕ್ಕೆ ಬಲಿಯಾಗಿದ್ದಾರೆ. ರಶ್ಮಿಕಾ, ಈಗ ರುಕ್ಮಿಣಿ ಸೇರಿದಂತೆ ಹಲವಾರು ನಟಿಯರಿಗೆ ಡೀಪ್​​ಫೇಕ್ ವಿಡಿಯೋಗಳು ಕಾಟ ಕೊಟ್ಟಿವೆ. ಕೆಲವು ನಟಿಯರು ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ ಸುಮ್ಮನಾಗಿದ್ದಾರೆ. ಆದರೆ ನಟಿ ಪ್ರೀತಿ ಜಿಂಟಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದು, ಗೂಗಲ್ ಮತ್ತು ಫೇಸ್​​ಬುಕ್ (ಮೆಟಾ) ವಿರುದ್ಧವೇ ದೂರು ನೀಡಲು ಸಜ್ಜಾಗಿದ್ದಾರೆ. ಅವರ ಈ ಸಾಹಸಕ್ಕೆ ನ್ಯಾಯಾಲಯದ ಅನುಮತಿಯೂ ಸಹ ದೊರಕಿದೆ.

ನಟಿ ಪ್ರೀತಿ ಜಿಂಟಾ ಅವರು ತಮ್ಮ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಬಳಸಿ ಎಐ ಮೂಲಕ ಡೀಪ್‌ಫೇಕ್ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಗೂಗಲ್, ಫೇಸ್​​ಬುಕ್ (ಮೆಟಾ ಪ್ಲಾಟ್‌ಫಾರ್ಮ್ಸ್) ಸೇರಿದಂತೆ ಹಲವು ವೆಬ್‌ಸೈಟ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವ್ಯಕ್ತಿತ್ವ ಹಕ್ಕುಗಳು, ಹಕ್ಕುಸ್ವಾಮ್ಯ ಮತ್ತು ಖ್ಯಾತಿಗೆ ಧಕ್ಕೆ ಉಂಟಾಗಿದೆ ಎಂದು ದೂರಿ, ಈ ಕುರಿತು ಸಮಗ್ರ ಸಿವಿಲ್ ಮೊಕದ್ದಮೆ ಹೂಡಲು ನ್ಯಾಯಾಲಯವು ನಟಿಗೆ ಅನುಮತಿ ಕೋರಿದ್ದರು, ಅಂತೆಯೇ ನ್ಯಾಯಾಲಯವು ಅವರಿಗೆ ಅನುಮತಿ ನೀಡಿದೆ.

ನಟಿ ಪ್ರೀತಿ ಜಿಂಟಾ, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, ಅನೇಕ ಪ್ಲಾಟ್‌ಫಾರ್ಮ್‌ಗಳು ಮತ್ತು ವೆಬ್‌ಸೈಟ್‌ಗಳು ತಮ್ಮ ಅನುಮತಿಯಿಲ್ಲದೆ, ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋಗಳು, ತಿರುಚಿದ ಚಿತ್ರಗಳು, ಮೀಮ್‌ಗಳು ಮತ್ತು ಚಾಟ್‌ಬಾಟ್ ವ್ಯಕ್ತಿತ್ವಗಳನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರೀತಿ ಜಿಂಟಾ ಆರೋಪಿಸಿದ್ದಾರೆ.

ಇದನ್ನೂ ಓದಿ:ನಟಿ ಪ್ರೀತಿ ಜಿಂಟಾ ಮಾಡಿದರು ಜಗ ಮೆಚ್ಚುವ ಕಾರ್ಯ, ಭೇಷ್ ಎಂದ ಅಭಿಮಾನಿಗಳು

ಜೂನ್ 16 ರಂದು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಏಕಸದಸ್ಯ ಪೀಠದ ಮುಂದೆ ನಟಿಯ ಪರವಾಗಿ ವಾದ ಮಂಡಿಸಿದ ವಕೀಲ ರೋಹನ್ ಕದಮ್, ಪ್ರತಿವಾದಿಗಳು (ಗೂಗಲ್ ಮತ್ತು ಫೇಸ್​​ಬುಕ್) ನಟಿಯ ಡೀಪ್​​ಫೇಕ್ ಚಿತ್ರ, ವಿಡಿಯೋಗಳನ್ನು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು. ಇಂತಹ ವಿಷಯಗಳು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಮತ್ತು ಸಾರ್ವಜನಿಕವಾಗಿ ತಮ್ಮ ಇಮೇಜ್‌ಗೆ ಹಾನಿ ಮಾಡುತ್ತಿವೆ ಎಂದು ನಟಿ ಪರ ವಕೀಲರು ವಾದಿಸಿದ್ದಾರೆ.

ಈ ರೀತಿ ತಿರುಚಿದ, ಸುಳ್ಳು ಚಿತ್ರ, ವಿಡಿಯೋಗಳನ್ನು ಹರಡುತ್ತಿರುವುದರಿಂದ ತಮ್ಮ ಖ್ಯಾತಿ ಮತ್ತು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಈ ಮೊಕದ್ದಮೆಯು ಹಕ್ಕುಸ್ವಾಮ್ಯ ಕಾಯಿದೆಯಡಿ ತಮ್ಮ ನೈತಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸುತ್ತದೆ. ಈ ವಿವಾದಾತ್ಮಕ ವಿಷಯಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜಾಗತಿಕವಾಗಿ ಹರಡಿರುವುದರಿಂದ, ಇದರ ಪರಿಣಾಮವು ತುಂಬಾ ವ್ಯಾಪಕವಾಗಿದೆ ಎಂದು ವಕೀಲ ಕದಮ್ ನ್ಯಾಯಾಲಯಕ್ಕೆ ತಿಳಿಸಿದರು. ಇದೀಗ ನಟಿಯೂ ಗೂಗಲ್ ಮತ್ತು ಫೇಸ್​​ಬುಕ್ ಸೇರಿದಂತೆ ಇನ್ನೂ ಕೆಲವು ವೆಬ್​​ಸೈಟ್​​ಗಳ ವಿರುದ್ಧ ದಾವೆ ಹೂಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:16 pm, Thu, 18 June 26

Source link

‘ಈ ಚಿತ್ರಕ್ಕೆ ಕಾಯಬೇಡಿ’; ‘ಆಲ್ಫಾ’ ಟ್ರೇಲರ್​ಗೆ ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್ – Kannada News | Alpha Trailer Trolled: YRF Spy Universe’s New Film Disappoints Audience and Fans

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, ಆಲಿಯಾ ಭಟ್ ಹಾಗೂ ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಆಲ್ಫಾ’ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಯಶ್ ರಾಜ್​​​ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಮೊದಲ ಚಿತ್ರ ಇದಾಗಿರುವುದರಿಂದ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಟ್ರೇಲರ್ ಕಂಡ ಪ್ರೇಕ್ಷಕರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ತರಹೇವಾರಿ ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಟ್ರೇಲರ್​​ನಲ್ಲಿ ಕಲರ್ ಗ್ರೇಡಿಂಗ್ ಹಾಗೂ ಆ್ಯಕ್ಷನ್ ಸೀನ್‌ಗಳನ್ನು ನೋಡಿದ ನೆಟ್ಟಿಗರು, ‘ಇದು ಸಿನಿಮಾ ಟ್ರೇಲರ್ ರೀತಿ ಕಾಣುತ್ತಿಲ್ಲ, ಬದಲಿಗೆ ಯಾವುದೋ ಎನರ್ಜಿ ಡ್ರಿಂಕ್ಸ್ ಜಾಹೀರಾತಿನಂತೆ ಕಾಣುತ್ತಿದೆ’ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು, ‘ಲೇಡೀಸ್ ಅಂಡ್ ಜೆಂಟಲ್‌ಮನ್, ಈ ಚಿತ್ರವನ್ನು ನೋಡಲು ಯಾರೂ ರೆಡಿಯಾಗುವ ಅಗತ್ಯವಿಲ್ಲ’ ಎಂದು ಲೇವಡಿ ಮಾಡಿದ್ದಾರೆ.

ಚಿತ್ರದಲ್ಲಿ ಹೃತಿಕ್ ರೋಷನ್ ಅವರ ಅತಿಥಿ ಪಾತ್ರ ಇರುವುದನ್ನು ಟ್ರೇಲರ್​​ನಲ್ಲೇ ರಿವೀಲ್ ಮಾಡಲಾಗಿದೆ. ಚಿತ್ರತಂಡ ಎಷ್ಟು ಹೆದರಿದೆ ಎಂದರೆ, ಹೈಪ್ ಕ್ರಿಯೇಟ್ ಮಾಡಲು ಈಗಲೇ ಅತಿಥಿ ಪಾತ್ರವನ್ನು ತೋರಿಸಬೇಕಾಗಿ ಬಂದಿದೆ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ. ಟೀಸರ್‌ನಲ್ಲಿ ಹೃತಿಕ್ ಲುಕ್ ನೋಡಿ, ‘ಹೃತಿಕ್ ರೋಷನ್ ಅವರು ಜಾದೂ (ಕೋಯಿ ಮಿಲ್ ಗಯಾ ಸಿನಿಮಾ ಪಾತ್ರ) ಬಟ್ಟೆಯನ್ನು ಕದ್ದು ಹಾಕಿಕೊಂಡಂತಿದೆ’ ಹಾಗೂ ‘ಹೃತಿಕ್ ಇಲ್ಲಿ ಮೌಂಟೇನ್ ಡ್ಯೂ… ಡರ್ ಕೆ ಆಗೇ ಜೀತ್ ಹೈ ಎಂದು ಹೇಳುವುದೊಂದೇ ಬಾಕಿ ಇತ್ತು’ ಎಂದು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು ಹಾಲಿವುಡ್‌ನ ‘ಬ್ಲ್ಯಾಕ್ ವಿಡೋ’ ಚಿತ್ರದ ಅತ್ಯಂತ ಲೋ-ಬಜೆಟ್ ಆವೃತ್ತಿಯಂತೆ ಆಲಿಯಾ ಮತ್ತು ಶಾರ್ವರಿ ಕಾಣುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ‘ಈ ಚಿತ್ರವನ್ನು ನೋಡಲು ಬಂಕ್ ಮಾಡಿ ಆರಾಮಾಗಿ ಮನೆಯಲ್ಲಿ ಓದಿಕೊಳ್ಳಬಹುದು’ ಎಂದು ವಿದ್ಯಾರ್ಥಿಗಳು ಜೋಕ್ ಮಾಡುತ್ತಿದ್ದಾರೆ.

ತೂಕ ಕಳೆದುಕೊಳ್ಳುತ್ತಿದೆಯೇ ವೈಆರ್‌ಎಫ್ ಸ್ಪೈ ಯೂನಿವರ್ಸ್?

‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’ ಮತ್ತು ‘ಪಠಾಣ್’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್, ಇತ್ತೀಚಿನ ದಿನಗಳಲ್ಲಿ ತನ್ನ ತೂಕ ಮತ್ತು ಕ್ರೇಜ್ ಅನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಮುಂಚೆ ಬಿಡುಗಡೆಯಾಗಿದ್ದ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ‘ವಾರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ‘ವಾರ್ 2’ ಸೋಲಿನ ಬೆನ್ನಲ್ಲೇ ಈಗ ‘ಆಲ್ಫಾ’ ಚಿತ್ರದ ಮೇಲೂ ನೆಗೆಟಿವ್ ಕಮೆಂಟ್‌ಗಳು ಬರುತ್ತಿರುವುದು ನಿರ್ಮಾಣ ಸಂಸ್ಥೆಗೆ ತಲೆನೋವು ತಂದಿದೆ.

ಇದರ ಜೊತೆಗೆ, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಪ್ರತಿ ಸಿನಿಮಾದಲ್ಲೂ ಭಾರತದ ಮಾಜಿ ‘ರಾ’ ಏಜೆಂಟ್‌ನನ್ನೇ ವಿಲನ್ ಆಗಿ ತೋರಿಸುವ ಹಳೇ ಟ್ರೆಂಡ್ ಅನ್ನೇ ಇಲ್ಲೂ ಮುಂದುವರಿಸಲಾಗಿದೆ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಇಡೀ ಟ್ರೇಲರ್​​ನಲ್ಲಿ ಅತ್ಯಂತ ಧೈರ್ಯದ ಕೆಲಸ ಎಂದರೆ ಯೂಟ್ಯೂಬ್‌ನಲ್ಲಿ ಕಮೆಂಟ್ ಸೆಕ್ಷನ್ ಓಪನ್ ಇಟ್ಟಿರುವುದು’ ಎಂದು ನೆಟ್ಟಿಗರು ಚಿತ್ರತಂಡಕ್ಕೆ ಟಾಂಗ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನೀವು ಯಾರಿಗೆ ಹೇಳ್ತೀರೋ ಅವರಿಗೇ ವೋಟ್ ಹಾಕ್ತೀನಿ’: ಆರ್. ಅಶೋಕ್‌ಗೆ ಶಾಸಕ ಯತ್ನಾಳ್ ಭರವಸೆ

  ವಿಧಾನ ಪರಿಷತ್ ಚುನಾವಣೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್ ಬಿಜೆಪಿಯ ಮತದಾನದ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು. ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಅಗತ್ಯವಿರುವಷ್ಟು ಮತಗಳನ್ನು ಪಕ್ಷ ಪಡೆದುಕೊಂಡಿದ್ದು, ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು. ಜೆಡಿಎಸ್‌ ಗೆಲ್ಲಬೇಕು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಜೆಡಿಎಸ್‌ಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಲಾಗಿದೆ ಎಂದು ಅಶೋಕ್ ಖಚಿತಪಡಿಸಿದರು. ಬಿಜೆಪಿ ಅಭ್ಯರ್ಥಿಯ ಎರಡನೇ ಪ್ರಾಶಸ್ತ್ಯದ ಎಲ್ಲ ಮತಗಳನ್ನೂ ಜೆಡಿಎಸ್‌ಗೆ ನೀಡಲಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಶಾಸಕರ ಮತದಾನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಕಾಂಗ್ರೆಸ್‌ನವರ ಮತದಾನ ಇನ್ನೂ ನಡೆಯುತ್ತಿದೆ ಎಂದು ಅಶೋಕ್ ಮಾಹಿತಿ ನೀಡಿದರು. ಉಚ್ಚಾಟಿತ ಶಾಸಕರ ಬಗ್ಗೆ ಮಾತನಾಡಿದ ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ತಮ್ಮನ್ನು ಎರಡು ಬಾರಿ ಸಂಪರ್ಕಿಸಿ, ಬಿಜೆಪಿಗೆ ಮತ ಹಾಕುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದರು. ಅವರು ಈಗ ಮತದಾನ ಕೇಂದ್ರಕ್ಕೆ ಬರುತ್ತಿದ್ದು, ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಆದರೆ, ಎಸ್‌.ಟಿ. ಸೋಮಶೇಖರ್‌ ಮತ್ತು ಶಿವರಾಮ್ ಹೆಬ್ಬಾರ್ ಕುರಿತು ಪ್ರತಿಕ್ರಿಯಿಸಲು ಆರ್‌. ಅಶೋಕ್ ನಿರಾಕರಿಸಿದರು. “ಅವರು ಕಾಂಗ್ರೆಸ್ ಜೊತೆ ಇರುವುದರಿಂದ, ಅವರ ಬಗ್ಗೆ ನೋ ಕಾಮೆಂಟ್ಸ್” ಎಂದು ಅಶೋಕ್ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ಉಪ್ಪಿ – Kannada News | Upendra to act in Karthik Subbaraj’s new movie

ಉಪೇಂದ್ರ (Upendra) ಅವರಿಗೆ ಕನ್ನಡ ಮಾತ್ರವಲ್ಲದೆ ಪರ ಭಾಷೆಗಳಲ್ಲಿಯೂ ಭರ್ಜರಿ ಬೇಡಿಕೆ ಇದೆ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇದೆ. ಅಲ್ಲಿನ ಕೆಲವು ಸ್ಟಾರ್ ನಟ, ನಿರ್ದೇಶಕರುಗಳು ಸಹ ಉಪೇಂದ್ರ ಅವರ ಅಭಿಮಾನಿಗಳು. 2008 ರಲ್ಲಿ ‘ಸತ್ಯ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದ ಉಪೇಂದ್ರ, ಇತ್ತೀಚೆಗಷ್ಟೆ ರಜನೀಕಾಂತ್ ನಟಿಸಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಉಪ್ಪಿಗೆ ತಮಿಳಿನಿಂದ ಬುಲಾವ್ ಬಂದಿದ್ದು, ತಮಿಳಿನ ಮತ್ತೊಬ್ಬ ಜನಪ್ರಿಯ ನಿರ್ದೇಶನ ಸಿನಿಮಾನಲ್ಲಿ ಉಪೇಂದ್ರ ನಟಿಸಲಿದ್ದಾರೆ.

‘ಪಿಜ್ಜಾ’, ‘ಜಿಗರ್​​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಮಹಾನ್’, ‘ರೆಟ್ರೊ’ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜ್ ಅವರ ಹೊಸ ಸಿನಿಮಾನಲ್ಲಿ ಉಪೇಂದ್ರ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಅಥರ್ವ ನಾಯಕನಾಗಿ ನಟಿಸುತ್ತಿದ್ದು, ಈ ಸಿನಿಮಾದ ಬಹಳ ಪ್ರಮುಖ ಪಾತ್ರವೊಂದರಲ್ಲಿ ಉಪೇಂದ್ರ ನಟಿಸಲಿದ್ದಾರೆ. ಈ ಸಿನಿಮಾ ಅನ್ನು ಕಾರ್ತಿಕ್ ಸುಬ್ಬರಾಜು ಅವರು ತಮ್ಮ ಸ್ವಂತ ಬ್ಯಾನರ್ ಆಗಿರುವ ಸ್ಟೋನ್ ಬೆಂಚ್​​ ಮೂಲಕ ಖುದ್ದು ನಿರ್ಮಾಣ ಸಹ ಮಾಡುತ್ತಿದ್ದಾರೆ.

ಇದನ್ನೂ ಓದಿ:ಉಪೇಂದ್ರ ಅಣ್ಣನ ಮಗ ನಿರಂಜನ್ ನಿಶ್ಚಿತಾರ್ಥ; ಹುಡುಗಿ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ತಿಕ್ ಸುಬ್ಬರಾಜು ಪ್ರಸ್ತುತ ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗಾ ನಿರ್ಮಾಣ ಮಾಡುತ್ತಿರುವ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾ ಅಂತಿಮ ಹಂತದಲ್ಲಿದೆ. ಸಿನಿಮಾಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಆ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ಕೈಗೆತ್ತಿಕೊಳ್ಳಲಿದ್ದಾರೆ. ಸಿನಿಮಾದ ಘೋಷಣೆ ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಉಪೇಂದ್ರ ಅವರು ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ಅವರ ‘ಬುದ್ಧಿವಂತ 2’ ತಡವಾಗಿದೆ. ‘ಗೊರಿಲ್ಲಾ ವಾರ್’, ‘ಭಾರ್ಗವ’ ಮತ್ತು ಮತ್ತೊಂದು ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ‘ಕಬ್ಜ 2’ ಸಿನಿಮಾ ಸಹ ನಿರ್ಮಾಣ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್​! – Kannada News | IPL 2027 is likely to begin on March 10

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಆರಂಭಕ್ಕೆ ತಾತ್ಕಾಲಿಕ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಐಪಿಎಲ್ 2027 ಮಾರ್ಚ್ 10 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವನ್ನು ಮೇ 15 ರೊಳಗೆ ಮುಗಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಹಾಗೂ ಆಟಗಾರರ ಹಿತದೃಷ್ಟಿಯಿಂದ ಪ್ರಸ್ತುತ ಇರುವ 74 ಪಂದ್ಯಗಳ ಸ್ವರೂಪದಲ್ಲೇ 2027ರ ಐಪಿಎಲ್ ಟೂರ್ನಿ ಮುಂದುವರಿಯಲಿದೆ.  ಇದರೊಂದಿಗೆ, ಭಾರತದ ತೀವ್ರ ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಳೆಯಿಂದ ಪ್ಲೇ-ಆಫ್ ಪಂದ್ಯಗಳನ್ನು ರಕ್ಷಿಸಲು ಇನ್ಮುಂದೆ ಮಾರ್ಚ್ 10 ರಿಂದಲೇ ಐಪಿಎಲ್ ಆರಂಭಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ರೂಪಿಸಲಿದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಮುಂಬರುವ ಐಪಿಎಲ್​ ಆವೃತ್ತಿಯಲ್ಲಿ ಪಂದ್ಯಗಳ ಸಂಖ್ಯೆ 94ಕ್ಕೆ ಹೆಚ್ಚಾಗಬಹುದು ಎಂಬ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತೆರೆ ಎಳೆದಿದ್ದಾರೆ. ಅಂದರೆ ಐಪಿಎಲ್ 2027 ರಲ್ಲೂ 70 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಮ್ಯಾಚ್​ಗಳೇ ನಡೆಯಲಿದೆ.

 74 ಪಂದ್ಯಗಳಿಗಷ್ಟೇ ಮಿತಿ ಏಕೆ?

ಐಪಿಎಲ್ ಟೂರ್ನಿಯನ್ನು ವಿಸ್ತರಿಸಲು ಕ್ರಿಕೆಟ್ ಮಂಡಳಿ ಹಿಂದೇಟು ಹಾಕಲು ಪ್ರಮುಖ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ. ವಿಶ್ವದ ಇತರ ಕ್ರಿಕೆಟ್ ಮಂಡಳಿಗಳು ತಮ್ಮದೇ ಆದ ದ್ವಿಪಕ್ಷೀಯ ಸರಣಿಗಳನ್ನು ಮೊದಲೇ ನಿಗದಿಪಡಿಸಿವೆ. ಹೀಗಾಗಿ ವಿದೇಶಿ ಆಟಗಾರರು 2 ತಿಂಗಳಿಗಿಂತ ಹೆಚ್ಚು ಕಾಲ ಲಭ್ಯವಿರುವುದು ಕಷ್ಟಸಾಧ್ಯ.

ಹಾಗೆಯೇ ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಆಟಗಾರರ ಮೇಲಿನ ದೈಹಿಕ ಒತ್ತಡ ಹೆಚ್ಚಾಗಲಿದ್ದು, ಇದು ಐಸಿಸಿ ಟೂರ್ನಿಗಳ ಮೇಲೆಯೂ ಪರಿಣಾಮ ಬೀರಬಹುದು.

ಹೊಸ ಐಪಿಎಲ್ ವಿಂಡೋ!

ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗಿ ಮೇ ಅಂತ್ಯದವರೆಗೆ ನಡೆಯುತ್ತಿದ್ದ ಐಪಿಎಲ್ ಅನ್ನು ಇನ್ಮುಂದೆ ಮಾರ್ಚ್ 10 ಕ್ಕೆ ಆರಂಭಿಸಿ, ಮೇ 15 ರೊಳಗೆ ಮುಗಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಮಹತ್ವದ ನಿರ್ಧಾರದ ಹಿಂದಿರುವ ಕಾರಣಗಳೆಂದರೆ…

  • ಬಿಸಿಲಿನ ಬೇಗೆಯಿಂದ ಮುಕ್ತಿ: ಮೇ ತಿಂಗಳ ದ್ವಿತೀಯಾರ್ಧದಲ್ಲಿ ಭಾರತದಾದ್ಯಂತ ತಾಪಮಾನ ತೀವ್ರವಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿಯ ಪಂದ್ಯಗಳಲ್ಲಿ ಆಟಗಾರರು ಹಾಗೂ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳು ತೀವ್ರ ಸೆಕೆಯಿಂದ ಬಳಲುತ್ತಿದ್ದರು. ಮಾರ್ಚ್‌ನಲ್ಲೇ ಟೂರ್ನಿ ಆರಂಭಿಸುವುದರಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ.
  • ಮುಂಗಾರು ಮಳೆಯಿಂದ ರಕ್ಷಣೆ: ಮೇ ತಿಂಗಳ ಕೊನೆಯ ವಾರದಲ್ಲಿ ಭಾರತದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗುತ್ತದೆ. ಇದರಿಂದ ಪ್ಲೇ-ಆಫ್ಸ್ ಮತ್ತು ಫೈನಲ್‌ನಂತಹ ಪ್ರಮುಖ ಪಂದ್ಯಗಳು ರದ್ದಾಗುವ ಭೀತಿ ಇರುತ್ತಿತ್ತು. ಮೇ 15ರ ಒಳಗಾಗಿ ಟೂರ್ನಿ ಮುಗಿಸಿದರೆ ಮಳೆಯ ಅಡ್ಡಿಯಿಲ್ಲದೆ ಸುಸೂತ್ರವಾಗಿ ಫೈನಲ್ ಪಂದ್ಯ ನಡೆಸಬಹುದು.

ದೇಶಿ ಕ್ರಿಕೆಟ್‌ಗೂ ಹೊಸ ರೂಪ:

ಐಪಿಎಲ್ ಅನ್ನು ಮಾರ್ಚ್ 10 ರಂದೇ ಆರಂಭಿಸಬೇಕಿರುವುದರಿಂದ ಭಾರತದ ದೇಶಿ ಕ್ರಿಕೆಟ್ ವೇಳಾಪಟ್ಟಿಯನ್ನೂ ಸಂಪೂರ್ಣವಾಗಿ ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ. ರಣಜಿ ಟ್ರೋಫಿ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ದೇಶಿ ಟೂರ್ನಿಗಳನ್ನು ಮಾರ್ಚ್ ಆರಂಭದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ!

ಒಟ್ಟಾರೆಯಾಗಿ, ವಾಣಿಜ್ಯ ಲಾಭಕ್ಕಿಂತ ಆಟಗಾರರ ಫಿಟ್‌ನೆಸ್, ಹವಾಮಾನದ ಅನುಕೂಲ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳಿಗೆ ಬಿಸಿಸಿಐ ಹೆಚ್ಚಿನ ಆದ್ಯತೆ ನೀಡಿದೆ ಎಂಬುದು ಈ ನಿರ್ಧಾರದಿಂದ ಸ್ಪಷ್ಟವಾಗಿದೆ.

Source link

ಕಾಂಗ್ರೆಸ್‌ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ.ಸೋಮಶೇಖರ್; ಜಿಟಿಡಿ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಹತ್ವದ ಹೇಳಿಕೆ – Kannada News | MLC Election Shocker: S.T. Somashekar Cross Votes Congress; JDS on GTD’s Loyalty

ಬೆಂಗಳೂರು, ಜೂ.18: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 7 ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಮತದಾನದ ವೇಳೆ ನಿರೀಕ್ಷೆಯಂತೆಯೇ ‘ಅಡ್ಡಮತದಾನ’ (Cross-Voting) ಪ್ರಕ್ರಿಯೆ ಆರಂಭವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಅವರು ಮೈತ್ರಿಕೂಟದ ಆಜ್ಞೆಯನ್ನು ಮೀರಿ ಕಾಂಗ್ರೆಸ್ ಪರ ಮತ ಚಲಾಯಿಸಿದರೆ, ಅತ್ತ ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು ಅವರು ಹಿರಿಯ ನಾಯಕ ಜಿ.ಟಿ. ದೇವೇಗೌಡರ ಮತದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಮತದಾನದ ಬಳಿಕ ವಿಧಾನಸೌಧದಲ್ಲಿ ಟಿವಿ9 ಜೊತೆ ಮಾತನಾಡಿದ ಎಸ್.ಟಿ. ಸೋಮಶೇಖರ್, ತಾವೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. “ನಾನು ನನ್ನ ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್‌ಗೆ ಚಲಾಯಿಸಿದ್ದೇನೆ. ನಿನ್ನೆವರೆಗೂ ಮೂರೂ ಪಕ್ಷಗಳ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿರಲಿಲ್ಲ. ಆದರೆ ನಿನ್ನೆ ಸಂಜೆ ಸ್ವತಃ ಮುಖ್ಯಮಂತ್ರಿಗಳು (ಸಿಎಂ) ನನ್ನನ್ನು ಸಂಪರ್ಕಿಸಿ, ರೆಸಾರ್ಟ್‌ಗೆ ಕರೆಸಿಕೊಂಡು ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದ್ದರು.”

“ನನ್ನ ಕ್ಷೇತ್ರದ ಅಭಿವೃದ್ಧಿಗೋಸ್ಕರ ನಾನು ಕಾಂಗ್ರೆಸ್‌ಗೆ ಮತ ನೀಡಿದ್ದೇನೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಈ ಹಿಂದೆ ನಾವು ಬಿಜೆಪಿಗೆ ಹೋಗಿದ್ದಕ್ಕೇ ಅಲ್ಲಿ ಸರ್ಕಾರ ಬಂದಿದ್ದು, ನಮ್ಮಿಂದಲೇ ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದು ಎಂಬುದನ್ನು ಯಾರೂ ಮರೆಯಬಾರದು” ಎಂದು ಸೋಮಶೇಖರ್ ಕಿಡಿಕಾರಿದ್ದಾರೆ. ಇದೇ ವೇಳೆ, ಮತ್ತೊಬ್ಬ ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಂಗ್ರೆಸ್ ಪರವಾಗಿಯೇ ಮತ ಚಲಾಯಿಸಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಯತ್ನಾಳ್ ಖಂಡಿತಾ ನನಗೇ ವೋಟ್ ಹಾಕ್ತಾರೆ!: ಉಚ್ಚಾಟಿತ ಶಾಸಕನ ಪತ್ರದ ಸೀಕ್ರೆಟ್ ಬಿಚ್ಚಿಟ್ಟ ಲಿಂಗರಾಜ್ ಪಾಟೀಲ್

“ಜಿಟಿಡಿ ನನಗೆ ಮೊದಲ ಮತ ಹಾಕಿದ್ದಾರೆ”: ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು

ಅತ್ತ ಜೆಡಿಎಸ್ ಕ್ಯಾಂಪ್‌ನಲ್ಲಿ ಭಿನ್ನಮತದ ಹೊಗೆಯಾಡುತ್ತಿರುವ ಸುದ್ದಿಗಳ ನಡುವೆಯೇ ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು ಅವರು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ (GTD) ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. “ಶಾಸಕ ಜಿ.ಟಿ. ದೇವೇಗೌಡರು ನನ್ನ ಪರವಾಗಿಯೇ ಮತ ಚಲಾಯಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯೇ ಜಿಟಿಡಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಮೊದಲ ಪ್ರಾಶಸ್ತ್ಯದ ಮತ ನಮಗೇ ಸಿಕ್ಕಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ. “ನಾವೆಲ್ಲರೂ ಒಂದು ಕುಟುಂಬದ ತರಹ ಒಟ್ಟಾಗಿದ್ದೇವೆ. ಈ ಚುನಾವಣೆಯನ್ನು ನಾವು ಯಾವುದೇ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ ಇವತ್ತು ಏನೆಲ್ಲಾ ರಾಜಕೀಯ ಸರ್ಕಸ್ ನಡೆಯುತ್ತಿದೆಯೋ, ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ಧೋರಣೆಯೇ ಕಾರಣ” ಎಂದು ಗೋವಿಂದರಾಜು ಟೀಕಿಸಿದ್ದಾರೆ. ಸೋಮಶೇಖರ್ ಮತ್ತು ಹೆಬ್ಬಾರ್ ಅವರ ಅಡ್ಡಮತದಾನದಿಂದ ಕಾಂಗ್ರೆಸ್ ಪಾಳಯದಲ್ಲಿ ಗೆಲುವಿನ ನಗು ಮೂಡಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ಉಂಟಾಗುವ ಲಕ್ಷಣಗಳು ದಟ್ಟವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ’; ದರ್ಶನ್​​ಗೆ ಬಾಸ್ ನಿರ್ದೇಶಕನ ಮನವಿ

‘ಬಾಸ್’ ಸಿನಿಮಾ ರಿಲಿಸ್​​ಗೆ ವಿಜಯಲಕ್ಷ್ಮೀ ದರ್ಶನ್ ಅಡ್ಡಗಾಲು ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಈ ವಿಷಯದಲ್ಲಿ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಆದರೆ, ಸದ್ಯದ ಪರಿಸ್ಥಿತಿ ನೋಡಿ ಹಂಚಿಕೆದಾರರು, ಥಿಯೇಟರ್​ ಮಾಲೀಕರು ಈ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಲವ ಮಾತನಾಡಿದ್ದಾರೆ. ‘ದಯವಿಟ್ಟು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನೀವು ಅನೇಕ ಯುವಕರಿಗೆ ಬೆಂಬಲ ನೀಡಿದ್ದೀರಾ. ಅದೇ ರೀತಿ ನಮಗೂ ಬೆಂಬಲ ಕೊಡಿ’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಎನ್​ಎಸ್​ಇ ಮೂಲಕ ಬರಲಿದೆ ಭಾರತದ ಅತಿದೊಡ್ಡ ಐಪಿಒ; ಹಣ ಹೂಡುವ ಮುನ್ನ ಈ ಪ್ರಮುಖ ಸಂಗತಿಗಳನ್ನು ತಿಳಿದಿರಿ – Kannada News | National Stock Exchange NSE, things to know before investing in India’s biggest IPO

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಫೈಲ್ ಚಿತ್ರImage Credit source: PTI

ನವದೆಹಲಿ, ಜೂನ್ 18: ಭಾರತದ ಷೇರು ಮಾರುಕಟ್ಟೆ (Indian Stock Market) ಇತಿಹಾಸದಲ್ಲೆ ಅತಿದೊಡ್ಡ ಐಪಿಒ ಆಗಮಿಸುತ್ತಿದೆ. ಸುಮಾರು ಒಂದು ದಶಕದ ಸುದೀರ್ಘ ಕಾಯುವಿಕೆ ಮತ್ತು ಕಾನೂನು ಪ್ರಕ್ರಿಯೆಗಳ ನಂತರ, ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ತನ್ನ ಐಪಿಒನತ್ತ ಪ್ರಮುಖ ಹೆಜ್ಜೆ ಹಾಕಿದೆ. ಐಪಿಒಗಾಗಿ (IPO) ಸೆಬಿಗೆ ಪ್ರಾಥಮಿಕ ದಾಖಲೆಗಳನ್ನು (DRHP) ಸಲ್ಲಿಸಿದೆ. ಈ ಮೂಲಕ ಎನ್‌ಎಸ್‌ಇ ಪಬ್ಲಿಕ್ ಲಿಸ್ಟಿಂಗ್ ಆಗುವ ದಾರಿ ಸುಗಮವಾಗಿದೆ. ಹೂಡಿಕೆದಾರರು ಈ ಮೆಗಾ-ಐಪಿಒನಲ್ಲಿ ಹಣ ಹೂಡುವ ಮುನ್ನ ತಿಳಿದುಕೊಂಡಿರಬೇಕಾದ 5 ಪ್ರಮುಖ ವಿಷಯಗಳು ಇಲ್ಲಿವೆ:

ಇದು ಸಂಪೂರ್ಣವಾಗಿ ಒಎಫ್‌ಎಸ್ (OFS) ಆಧಾರಿತ ಐಪಿಒ

ಈ ಐಪಿಒನ ದೊಡ್ಡ ವೈಶಿಷ್ಟ್ಯವೆಂದರೆ ಕಂಪನಿಯು ಯಾವುದೇ ಹೊಸ ಷೇರುಗಳನ್ನು (Fresh Issue) ಬಿಡುಗಡೆ ಮಾಡುತ್ತಿಲ್ಲ. ಇದು ಸಂಪೂರ್ಣವಾಗಿ ಆಫರ್ ಫಾರ್ ಸೇಲ್ (Offer for Sale – OFS) ಆಗಿದೆ. ಅಂದರೆ ಎನ್‌ಎಸ್‌ಇಯ ಪ್ರಸ್ತುತ ಷೇರುದಾರರು ತಮ್ಮ ಬಳಿ ಇರುವ ಸುಮಾರು 14.89 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬರುವ ಸಂಪೂರ್ಣ ಹಣವು ಷೇರು ಮಾರಾಟ ಮಾಡುವ ಹೂಡಿಕೆದಾರರಿಗೆ ಹೋಗುತ್ತದೆಯೇ ವಿನಃ ಎನ್‌ಎಸ್‌ಇ ಕಂಪನಿಗೆ ಯಾವುದೇ ಹೊಸ ಫಂಡ್ ಸಿಗುವುದಿಲ್ಲ.

ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ

ಸರ್ಕಾರಿ ಮತ್ತು ವಿದೇಶಿ ಸಂಸ್ಥೆಗಳಿಂದ ಷೇರು ಮಾರಾಟ

ಒಎಫ್‌ಎಸ್ (OFS) ಮೂಲಕ ದೇಶದ ಪ್ರಮುಖ ಸರ್ಕಾರಿ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ವಿದೇಶಿ ಹೂಡಿಕೆ ಸಂಸ್ಥೆಗಳು ತಮ್ಮ ಪಾಲನ್ನು ಮಾರಾಟ ಮಾಡುತ್ತಿವೆ. ಇದರಲ್ಲಿ ಪ್ರಮುಖವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಹಲವು ದೊಡ್ಡ ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.

ಸುದೀರ್ಘ ಕಾಯುವಿಕೆಗೆ ಸಿಕ್ಕ ಫಲ

ಕಳೆದ 10 ವರ್ಷಗಳಿಂದ ಮಾರುಕಟ್ಟೆಯು ಎನ್‌ಎಸ್‌ಇ ಐಪಿಒಗಾಗಿ ಕಾಯುತ್ತಿತ್ತು. ವಿವಿಧ ತಾಂತ್ರಿಕ ಮತ್ತು ಕಾನೂನು ಅಡಚಣೆಗಳಿಂದಾಗಿ ಇದು ವಿಳಂಬವಾಗಿತ್ತು. ಈಗ ಜೂನ್ 17 ರಂದು ಡಿಆರ್‌ಎಚ್‌ಪಿ (DRHP) ಸಲ್ಲಿಸಿರುವುದು ಭಾರತೀಯ ಮಾರುಕಟ್ಟೆಯ ಇತಿಹಾಸದಲ್ಲೇ ಒಂದು ಪ್ರಮುಖ ಮೈಲಿಗಲ್ಲು ಎನಿಸಿದೆ.

ಸೆಬಿ ಅನುಮೋದನೆ ಬಾಕಿ

ಎನ್‌ಎಸ್‌ಇ ಪ್ರಸ್ತುತ ಪ್ರಾಥಮಿಕ ದಾಖಲೆಗಳನ್ನು ಮಾತ್ರ ಸಲ್ಲಿಸಿದೆ. ಇನ್ನು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ಇದನ್ನು ಪರಿಶೀಲಿಸಿ, ಅನುಮೋದನೆ ನೀಡಬೇಕಾಗಿದೆ. ಸೆಬಿ ಗ್ರೀನ್ ಸಿಗ್ನಲ್ ನೀಡಿದ ನಂತರವಷ್ಟೇ ಐಪಿಒ ಲಾಂಚ್ ಆಗುವ ಅಂತಿಮ ದಿನಾಂಕಗಳು ಮತ್ತು ಪ್ರೈಸ್ ಬ್ಯಾಂಡ್ (Price Band) ಪ್ರಕಟವಾಗಲಿವೆ.

ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ

ಮಾರುಕಟ್ಟೆಯ ಮೇಲಿನ ಪ್ರಭಾವ

ಭಾರತದ ಅತಿ ದೊಡ್ಡ ಎಕ್ಸ್‌ಚೇಂಜ್ ಮಾರುಕಟ್ಟೆಗೆ ಲಿಸ್ಟ್ ಆಗುತ್ತಿರುವುದರಿಂದ, ಇದು ಇಡೀ ಶೇರು ಮಾರುಕಟ್ಟೆಯ ಮೇಲೆ ಮತ್ತು ಹೂಡಿಕೆದಾರರ ವಲಯದಲ್ಲಿ ಭಾರಿ ಸಂಚಲನ ಮೂಡಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ಮತ್ತೊಂದು ಸ್ಟಾಕ್ ಎಕ್ಸ್​ಚೇಂಜ್ ಆಗಿರುವ ಮತ್ತು ಭಾರತದ ಅತ್ಯಂತ ಹಳೆಯ ಸ್ಟಾಕ್ ಎಕ್ಸ್​ಚೇಂಜ್ ಆಗಿರುವ ಬಿಎಸ್​ಇ 2017ರಲ್ಲೇ ಐಪಿಒ ಮುಗಿಸಿ, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಕಳೆದ 9 ವರ್ಷದಲ್ಲಿ ಬಿಎಸ್​ಇ ಷೇರುಬೆಲೆ 300 ಪಟ್ಟು ಹೆಚ್ಚು ಲಾಭ ತಂದಿದೆ. ಎನ್​ಎಸ್​ಇ ಕೂಡ ಹೂಡಿಕೆದಾರರಿಗೆ ಭರ್ಜರಿ ಲಾಭ ತರುವ ನಿರೀಕ್ಷೆಯಂತೂ ಇದೆ.

(ಗಮನಿಸಿ: ಹೂಡಿಕೆ ಮಾಡುವ ಮುನ್ನ ಕಂಪನಿಯ ಸಂಪೂರ್ಣ ಆರ್ಥಿಕ ಸ್ಥಿತಿಗತಿ ಹಾಗೂ ಮಾರುಕಟ್ಟೆಯ ಅಪಾಯಗಳನ್ನು ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ! – Kannada News | How BCCI Hopes to Shield Vaibhav Sooryavanshi From On Field Sledging

ಭಾರತೀಯ ಕ್ರಿಕೆಟ್‌ನ ಹೊಸ ಆಶಾಕಿರಣ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚೆಗೆ ಶ್ರೀಲಂಕಾ ‘ಎ’ ತಂಡದ ವಿರುದ್ಧದ ಪಂದ್ಯದಲ್ಲಿ ದೈಹಿಕ ಜಗಳಕ್ಕೆ ಇಳಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂಪರ್ ಓವರ್‌ನ ರೋಮಾಂಚಕ ಕ್ಷಣಗಳಲ್ಲಿ ಶ್ರೀಲಂಕಾ ಆಟಗಾರರು “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಕೆಣಕಿದಾಗ, ತಾಳ್ಮೆ ಕಳೆದುಕೊಂಡ ವೈಭವ್ ಎದುರಾಳಿ ಆಟಗಾರ ವಿಶೇನ್ ಹಲಂಬಾಗೆ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.

ಬಿಸಿಸಿಐ  ಸದ್ಯಕ್ಕೆ ಈ ಯುವ ಆಟಗಾರನಿಗೆ ಯಾವುದೇ ಕಠಿಣ ಶಿಕ್ಷೆ ವಿಧಿಸದೆ, ಅವರ ಗಮನ ಕ್ರಿಕೆಟ್‌ನಿಂದ ಬೇರೆಡೆಗೆ ಹರಿಯದಂತೆ ನೋಡಿಕೊಳ್ಳಲು ನಿರ್ಧರಿಸಿದೆ. ಆದರೆ, ಸಂಜಯ್ ಮಂಜ್ರೇಕರ್ ಅವರಂತಹ ಹಿರಿಯ ಕ್ರಿಕೆಟಿಗರು ಎಚ್ಚರಿಸಿರುವಂತೆ, ವೈಭವ್ ಅವರ ಈ ಆಕ್ರಮಣಕಾರಿ ಸ್ವಭಾವ ಮುಂದಿನ ದಿನಗಳಲ್ಲಿ ಅವರ ವೃತ್ತಿಜೀವನಕ್ಕೆ ಮುಳ್ಳಾಗಬಹುದು. ಹಾಗಾದರೆ, ಈ ಯುವ ಪ್ರತಿಭೆಯನ್ನು ಸೂಕ್ತ ಹಾದಿಗೆ ತರಲು ಬಿಸಿಸಿಐ ಏನು ಮಾಡಬಹುದು? ಇಲ್ಲಿದೆ ಒಂದು ವಿಶ್ಲೇಷಣೆ.

ಬಿಸಿಸಿಐ ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳು:

ಕ್ರಿಕೆಟ್ ತಜ್ಞರು ಮತ್ತು ಕ್ರೀಡಾ ಮನಶ್ಶಾಸ್ತ್ರಜ್ಞರ ಪ್ರಕಾರ, ವೈಭವ್ ಸೂರ್ಯವಂಶಿ ಅವರಲ್ಲಿ ಕೌಶಲ್ಯದ ಕೊರತೆಯಿಲ್ಲ, ಬದಲಿಗೆ “ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯದ” ಕೊರತೆಯಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ತನ್ನ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು.

ಮಾನಸಿಕ ತರಬೇತಿ ಮತ್ತು ಒತ್ತಡ ನಿರ್ವಹಣೆ: ವೈಭವ್ ಸೂರ್ಯವಂಶಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ. ಇದಕ್ಕಾಗಿ ವಿ.ವಿ.ಎಸ್. ಲಕ್ಷ್ಮಣ್ ನೇತೃತ್ವದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಯುವ ಆಟಗಾರರಿಗಾಗಿ ವಿಶೇಷ ಮಾನಸಿಕ ಪ್ರೊಫೈಲಿಂಗ್ ಶಿಬಿರಗಳನ್ನು ನಡೆಸಬೇಕು. ಈ ಮೂಲಕ ಯುವ ಕ್ರಿಕೆಟಿಗರಿಗೆ ಮಾನಸಿಕ ತರಬೇತಿ ನೀಡಿ, ಒತ್ತಡ ನಿರ್ವಹಿಸುವ ಕಲೆಯನ್ನು ಹೇಳಿಕೊಡಬೇಕಾದ ಅನಿವಾರ್ಯತೆ ಇದೆ.

ಕೃತಕ ಒತ್ತಡದ ಸನ್ನಿವೇಶಗಳ ಸೃಷ್ಟಿ: ಅಭ್ಯಾಸ ಪಂದ್ಯಗಳ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೆಣಕುವ ಅಥವಾ ಸ್ಲೆಡ್ಜಿಂಗ್ ಮಾಡುವ ಸನ್ನಿವೇಶಗಳನ್ನು ಸೃಷ್ಟಿಸಿ, ವೈಭವ್ ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸಬೇಕು.

ಮೈಂಡ್ ರೀಸೆಟ್ ತಂತ್ರಗಳು: ಹಿರಿಯ ಮನಶ್ಶಾಸ್ತ್ರಜ್ಞರ ಪ್ರಕಾರ, ಪಂದ್ಯದ ಅತ್ಯಂತ ಕಠಿಣ ಕ್ಷಣಗಳಲ್ಲಿ ಮನಸ್ಸನ್ನು ಶಾಂತವಾಗಿಡಲು ಆಳವಾದ ಉಸಿರಾಟ ಅಥವಾ ನಿರ್ದಿಷ್ಟ ದೈಹಿಕ ತಂತ್ರಗಳನ್ನು ವೈಭವ್‌ಗೆ ಕಲಿಸಿಕೊಡುವುದು ಅತ್ಯಗತ್ಯ.

ಹಿರಿಯ ಕ್ರಿಕೆಟಿಗರ ಮಾರ್ಗದರ್ಶನ: 1992ರಲ್ಲಿ 19 ವರ್ಷದ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದಲ್ಲಿ ತಮಗೆ ಸ್ಲೆಡ್ಜಿಂಗ್ ಮಾಡಿದ ಬೌಲರ್‌ಗೆ ಕೇವಲ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು. ಇಂತಹ ಹಿರಿಯ ಕ್ರಿಕೆಟಿಗರನ್ನು ವೈಭವ್‌ ಸೂರ್ಯವಂಶಿ ಮೆಂಟರ್‌ಗಳಾಗಿ ಪರಿಗಣಿಸಬೇಕು. ಅಲ್ಲದೆ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವುದು ಕೂಡ ಉತ್ತಮ.

ಹಾಲಿ ಕೋಚ್‌ಗಳ ಬೆಂಬಲ: ಇಂಡಿಯಾ ‘ಎ’ ತಂಡದ ಸ್ಪಿನ್ ಕೋಚ್ ಸಾಯಿರಾಜ್ ಬಹುತುಳೆ ಅವರಂತಹ ಹಿರಿಯರು, ರಾಜಸ್ಥಾನ್ ರಾಯಲ್ಸ್ ದಿನಗಳಿಂದಲೂ ವೈಭವ್ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಅವರು ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ವೈಭವ್‌ಗೆ ಧೈರ್ಯ ತುಂಬುವ ಕೆಲಸ ಮಾಡಬೇಕು.

ನಿಯಮಗಳ ಬಗ್ಗೆ ಕಠಿಣ ಅರಿವು:

ವೈಭವ್ ಸೂರ್ಯವಂಶಿಯ ವಯಸ್ಸು ಕೇವಲ 15 ವರ್ಷ. ತನ್ನ ಬಾಲ್ಯದಲ್ಲಿ ಹೆಚ್ಚಿನ ಸಮಯವನ್ನು ಮೈದಾನದಲ್ಲೇ ಕಳೆದಿದ್ದಾರೆ. ಇದಾಗ್ಯೂ ಅವರಿಗೆ ಐಸಿಸಿ ನಿಯಮಗಳ ಬಗ್ಗೆ ಸಂಪೂರ್ಣ ಅರಿವು ಇರುವ ಸಾಧ್ಯತೆಗಳಿಲ್ಲ. ಹೀಗಾಗಿ ಕೋಚ್ ಹಾಗೂ ಇತರೆ ಸಿಬ್ಬಂದಿಗಳು ಕಠಿಣ ನಿಯಮಗಳ ಬಗ್ಗೆ ವೈಭವ್ ಸೂರ್ಯವಂಶಿಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ.

  • ಐಸಿಸಿ ನಿಯಮಗಳ ಪ್ರಕಾರ ಮೈದಾನದಲ್ಲಿ ದೈಹಿಕ ಸಂಪರ್ಕ ಅಥವಾ ತಳ್ಳಾಟಕ್ಕೆ ಕಠಿಣ ನಿಷೇಧವಿದೆ.
  •  ಇಂತಹ ವರ್ತನೆಗಳು ಕೇವಲ ವೈಯಕ್ತಿಕ ರೇಟಿಂಗ್ ಮಾತ್ರವಲ್ಲದೆ, ಇಡೀ ತಂಡಕ್ಕೆ ಪೆನಾಲ್ಟಿ ಅಥವಾ ಮ್ಯಾಚ್ ಬ್ಯಾನ್ ರೂಪದಲ್ಲಿ ಹೊಡೆತ ನೀಡಬಹುದು.
  • ವೈಭವ್ ಸೂರ್ಯವಂಶಿಗೆ ಇಂತಹ ಕಠಿಣ ನಿಯಮಗಳ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಬೇಕು.

ಇದನ್ನೂ ಓದಿ: ಕಣ್ಣಿಗೆ ಸನ್​ಗ್ಲಾಸ್… ಆರ್ಚರ್ ಎದುರು ಫಿಲಿಪ್ಸ್ ಮಾಸ್!

ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತ ಬ್ಯಾಟಿಂಗ್ ಪ್ರತಿಭೆಯಿದೆ ಎಂಬುದು ನಿಜ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಯಲು ಕೇವಲ ರನ್ ಗಳಿಸಿದರೆ ಸಾಲದು, ಎದುರಾಳಿಗಳ ಮಾನಸಿಕ ದಾಳಿಯನ್ನು ನಗುಮೊಗದಿಂದಲೇ ಎದುರಿಸಿ ಬ್ಯಾಟ್ ಮೂಲಕವೇ ಉತ್ತರಿಸುವ ‘ಚಾಣಾಕ್ಷತೆ’ ಬೇಕು. ಬಿಸಿಸಿಐ ಈಗಿನಿಂದಲೇ ಇವರನ್ನು ಸರಿಯಾದ ಹಾದಿಗೆ ತಂದರೆ, ಭಾರತಕ್ಕೆ ಮತ್ತೊಬ್ಬ ಶ್ರೇಷ್ಠ ಆಟಗಾರ ಸಿಗುವುದರಲ್ಲಿ ಸಂಶಯವಿಲ್ಲ.

Source link

ಅನುಮತಿ ಇಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ಎಫ್‌ಐಆರ್ ಆಗುತ್ತೆ ಹುಷಾರ್!: ಕರ್ನಾಟಕ ಪೊಲೀಸ್ ಮುಖ್ಯಸ್ಥರ ಕಡಕ್ ಆದೇಶ – Kannada News | Sharing Intimate Images Without Consent Mandates FIR: Karnataka Police Chief

ಬೆಂಗಳೂರು, ಜೂನ್ 18: ವ್ಯಕ್ತಿಯೊಬ್ಬರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಸಾಮಾಜಿಕ ಜಾಲತಾಣ ಅಥವಾ ಇತರೆಡೆ ಹಂಚಿಕೊಂಡರೆ, ಆನ್‌ಲೈನ್ ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಮತ್ತು ಸೆಕ್ಸ್ಟಾರ್ಷನ್ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ (DG & IGP) ಎಂ.ಎ. ಸಲೀಮ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಅನುಮತಿಯಿಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ತಕ್ಷಣ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಾಗಿದೆ.
  • ಚಿತ್ರೀಕರಣದ ಒಪ್ಪಿಗೆ ಹಾಗೂ ಹಂಚಿಕೆಯ ಒಪ್ಪಿಗೆ ಸಂಪೂರ್ಣ ವಿಭಿನ್ನ ಎಂದು ಸ್ಪಷ್ಟಪಡಿಸಲಾಗಿದೆ.
  • ನಿಯಮ ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.

ಸೆಕ್ಸ್ಟಾರ್ಷನ್, ಬ್ಲ್ಯಾಕ್‌ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಅಥವಾ ತಿರಸ್ಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 16 ರಂದು ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ಸಂತ್ರಸ್ತರು ಈ ಹಿಂದೆ ಚಿತ್ರ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ಒಡ್ಡಿ ದೂರುಗಳನ್ನು ಸ್ವೀಕರಿಸಲು ನಿರಾಕರಿಸಲಾಗಿತ್ತು. ಈ ಗೊಂದಲಕ್ಕೆ ಪೊಲೀಸ್ ಮುಖ್ಯಸ್ಥರು ತಮ್ಮ ಆದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಆದೇಶದಲ್ಲಿರುವ ಅಂಶಗಳೇನು?

ಚಿತ್ರ ಅಥವಾ ವೀಡಿಯೊ ರೆಕಾರ್ಡ್ ಮಾಡಲು ಒಪ್ಪಿಗೆ ನೀಡುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡುವುದು ಸಂಪೂರ್ಣವಾಗಿ ಎರಡು ವಿಭಿನ್ನ ಕಾನೂನು ಪರಿಕಲ್ಪನೆಗಳಾಗಿವೆ. ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವೀಡಿಯೊ ತೆಗೆಯಲು ಒಪ್ಪಿದ್ದರೂ ಸಹ, ಅವರ ಅನುಮತಿಯಿಲ್ಲದೆ ಅದನ್ನು ಮೂರನೇ ವ್ಯಕ್ತಿಗೆ ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ. ಎಂದು ಎಂ.ಎ. ಸಲೀಮ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂತ್ರಸ್ತರ ಒಪ್ಪಿಗೆ ಇತ್ತು ಎಂಬ ಕಾರಣ ನೀಡಿ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವುದನ್ನು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಪುನರುಚ್ಚರಿಸಲಾಗಿದೆ. 2017ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದ ತೀರ್ಪನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶಾರೀರಿಕ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಯ ಹಂಚಿಕೆಯನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ ಎಂದು ನೆನಪಿಸಲಾಗಿದೆ.

ಇದನ್ನೂ ಓದಿ ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್: ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

ನಿಯಮವನ್ನು ಉಲ್ಲಂಘಿಸಿ ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುವುದು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 77 ರ ಅಡಿಯಲ್ಲಿ ವೊಯರಿಸಂ (ಖಾಸಗಿತನಕ್ಕೆ ಧಕ್ಕೆ) ಅಪರಾಧವಾಗುತ್ತದೆ. ಇಂತಹ ಸೈಬರ್ ಅಪರಾಧಗಳ ದೂರು ಬಂದಾಗ ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ ಮತ್ತು ಐಜಿಪಿ ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Thu, 18 June 26

Source link

Exit mobile version