ಎತ್ತಿನಹೊಳೆ ಯೋಜನೆಗೆ 4,708 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಈಶ್ವರ ಖಂಡ್ರೆ ಮನವಿ – Kannada News | Karnataka Seeks Central Funds for Ettinahole Drinking Water Project via JJM

ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಸಚಿವ ಈಶ್ವರ ಖಂಡ್ರೆImage Credit source: Tv9 kannada

ದೆಹಲಿ, ಜೂನ್ 30: ಕರ್ನಾಟಕದ ಅತ್ಯಂತ ಮಹತ್ವಾಕಾಂಕ್ಷೆಯ ಹಾಗೂ ಬರಪೀಡಿತ ಜಿಲ್ಲೆಗಳ ಜೀವನಾಡಿಯಾಗಿರುವ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ಯನ್ನು ವೇಗವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರವು ಕೇಂದ್ರದ ನೆರವು ಕೋರಿದೆ. ದೆಹಲಿ ಪ್ರವಾಸದಲ್ಲಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಯೋಜನೆಯ ಒಟ್ಟು ವೆಚ್ಚದ ಪೈಕಿ 4,708.14 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದ ‘ಜಲ ಜೀವನ್ ಮಿಷನ್’ (JJM) ಯೋಜನೆಯಡಿ ಭರಿಸುವಂತೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಯೋಜನೆಯ ಅಗತ್ಯತೆಯನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಸಚಿವ ಈಶ್ವರ ಖಂಡ್ರೆ, “ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ವ್ಯಾಪ್ತಿಗೆ ಈ ಯೋಜನೆ ಒಳಪಡುತ್ತದೆ. ಸುಮಾರು 6,657 ಹಳ್ಳಿಗಳು ಹಾಗೂ 38 ಪಟ್ಟಣಗಳ ಒಟ್ಟು 75.59 ಲಕ್ಷ ಜನಸಂಖ್ಯೆಗೆ ಸುಸ್ಥಿರ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಅತ್ಯಂತ ಅನಿವಾರ್ಯವಾಗಿದೆ. ಹೀಗಾಗಿ ಇದನ್ನು ಜೆಜೆಎಂ (JJM) ಯೋಜನೆಯಡಿಯಲ್ಲಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಪ್ರಸ್ತುತ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ‘ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ’ (VJNL) ಮೂಲಕ ಈ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವೇ ತನ್ನ ಸ್ವಂತ ಹಣದಿಂದ ಯೋಜನೆಯ ಬಹುತೇಕ ಪ್ರಮುಖ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?; ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳ ಸಾಧ್ಯತೆ

ಆದರೆ, ಯೋಜನೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 9,416.28 ಕೋಟಿ ರೂಪಾಯಿಗಳ ಉಳಿಕೆ ಕಾಮಗಾರಿಗಳು ಬಾಕಿ ಇವೆ. ಈ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ತನ್ನ ಪಾಲಿನ ಶೇಕಡಾ 50 ರಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕೃಷ್ಣಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಕಾಮಗಾರಿಗಳ ತ್ವರಿತ ಪ್ರಗತಿಗಾಗಿ ರಾಜ್ಯ ಸರ್ಕಾರ ವಿಶೇಷ ಒತ್ತಡ ಹೇರಿದೆ. ಕೇಂದ್ರ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:39 pm, Tue, 30 June 26

Source link

ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್, ಸ್ವಪಕ್ಷದ ನಾಯಕರಿಗೆ ರಾಜಣ್ಣ ಖಡಕ್ ಎಚ್ಚರಿಕೆ – Kannada News | KN Rajanna Warns His Congress Leaders if Once Sidelined to Siddaramaiah

ಬೆಂಗಳೂರು, (ಜೂನ್ 30): ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂದ ಮಾಜಿ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯಿಸಿದ್ದು, ಸರ್ಕಾರದ ಕಾರ್ಯಕ್ರಮಗಳಿಗೆ ಒಂದು ಪ್ರೋಟೋಕಾಲ್ ಇರುತ್ತದೆ. ಆ ಪ್ರೋಟೋಕಾಲ್ ಅನ್ವಯ ಮಾಡಿದ್ದಾರೆ. ಲೋಪ ಆಗಿದ್ರೆ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ತಾರೆ. ಬೇರೆಯವರ ಪ್ರಶ್ನೆ ನನಗೆ ಗೊತ್ತಿಲ್ಲ, ನನ್ನ ಪ್ರಶ್ನೆ ನಾನೇ ಹೇಳ್ತೀನಿ. ನಾನು ಯಾರ ನೆರಳಲ್ಲೂ ಕೂಡ ಹೊರಗಡೆ ಬರುವಂಥದ್ದು ಆಗಲಿ. ಇನ್ನೊಬ್ಬರ ನೆರಳಿಗೆ ಸೇರಿಕೊಳ್ಳುವಂಥದ್ದು ಆಗಲಿ, ಆ ಪ್ರಯತ್ನ ಇಲ್ಲ. ಸಿದ್ದರಾಮಯ್ಯನ ಸೈಡ್ ಲೈನ್ ಗೆ ಸರಿಸೋಕೆ ಆಗಲ್ಲ. ಅವರು ಮಾಸ್ ಲೀಡರ್. ಯಾರೆಲ್ಲ ಜನರಿಂದ ಮಾಸ್ ಲೀಡರ್ ಆಗಿದ್ದಾರೆ ಅವರನ್ನು ಏನೂ ಮಾಡಲು ಆಗಲ್ಲ . ಅವರನ್ನ ಯಾವತ್ತೂ ಕೂಡ ಹಿಂದೆ ಹಾಕಲು ಆಗಲ್ಲ ಎಂದು ಖಡಕ್ ಆಗಿ ಹೇಳಿದರು.

ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡುವಂತದ್ದು ಅಥವಾ ಅವರನ್ನ ದೂರ ಇಟ್ಟು ಪಕ್ಷ ಸಂಘಟನೆ ಮಾಡ್ತೀವಿ ಅಂತ ಯಾರಾದರೂ ಹೋದ್ರೆ ದೊಡ್ಡ ಬ್ಲಂಡರ್ ಆಗುತ್ತೆ. ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತಗೊಂಡು ಹೋದ್ರೆನೇ ನಾವು 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇದ್ದಾವೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ವಿರೋಧ – Kannada News | Bengaluru Footpath Eviction Drive Begins Tomorrow; Street Vendors Raise Objections

ಬೆಂಗಳೂರು, ಜೂನ್​​ 30: ನಾಳೆಯಿಂದ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದ್ದು, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸಮಗ್ರ ಯೋಜನೆ ರೂಪಿಸಿ ಒತ್ತುವರಿ ತೆರವಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದ್ದು, ಮೊದಲು ಜಾಗೃತಿ, ಬಳಿಕ ನೋಟಿಸ್, ಆನಂತರ ತೆರವು ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಬೀದಿ ವ್ಯಾಪಾರಿಗಳ ಕಾಯ್ದೆ ಪಾಲನೆ ಕಡ್ಡಾಯ ಹಿನ್ನೆಲೆ ಒತ್ತುವರಿ ತೆರವಿನ ಜೊತೆಗೆ ಫುಟ್‌ಪಾತ್ ದುರಸ್ತಿಗೂ ಆದ್ಯತೆ ನೀಡಲು ತೀಮಾರ್ನಿಸಲಾಗಿದೆ. ಪೊಲೀಸ್–ಪಾಲಿಕೆ ಇಲಾಖೆ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಯಲಿದೆ.

ಸಚಿವರಿಂದ ಖಡಕ್​​ ವಾರ್ನಿಂಗ್​​

ಬೆಂಗಳೂರಿನಲ್ಲಿ ಫುಟ್​ಪಾತ್​ನಲ್ಲಿರುವ ಮಳಿಗೆಗಳನ್ನು ನೀವಾಗಿಯೇ ಸ್ವಯಂ ಪ್ರೇರಿತರಾಗಿ ತೆರವು ಮಾಡುವ ಮೂಲಕ ಜಾಗ ಬಿಟ್ಟುಕೊಡಿ. ಇಲ್ಲದಿದ್ದಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತೆ ಎಂದು ಸಚಿವ ಕೃಷ್ಣಭೈರೇಗೌಡ ಎಚ್ಚರಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನ ತುಂಬಾ ಸ್ಪಷ್ಟವಾಗಿದ್ದು, ನಾವು ಕಠಿಣ ಕ್ರಮಕ್ಕೆ ಮುಂದಾಗಲು ಅವಕಾಶ ಕೊಡಬೇಡಿ. ಸದ್ಯ ಶೇ. 20ರಷ್ಟು ಫುಟ್ ಪಾತ್ ಮಾತ್ರ ಕಾರ್ಯಾಚರಣೆ ಮಾಡ್ತಿರೋದು. ನೀವು ಎಲ್ಲರೂ ಸಹಕಾರ ಕೊಡಬೇಕು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?; ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ

ಕಾರ್ಯಾಚರಣೆ ತೀವ್ರ ವಿರೋಧ

ಫುಟ್‌ಪಾತ್ ಅತಿಕ್ರಮಣ ತಾವಾಗಿಯೇ ತೆರವು ಮಾಡಲು ನಾಳೆಯೇ ಡೆಡ್ ಲೈನ್ ನಡುವೆಯೂ ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪರ್ಯಾಯ ಜಾಗ ತೋರಿಸದೆ ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ. GBA ವತಿಯಿಂದಲೇ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ನೀಡಲಾಗಿದೆ. ಈ ಸಂಬಂಧ ಟೌನ್ ವೆಂಡಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಕಾರ್ಯಾಚರಣೆ ಮಾಡಬೇಕು ಎಂದು ಆಗ್ರಯಿಸಿರುವ ಅವರು, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಅಡ್ಡಿ ಮಾಡದಂತೆ ಕಾನೂನು ಇದೆ ಎಂದೂ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆಗೂ ಮುನ್ನ ಲಿವ್-ಇನ್ ರಿಲೇಶನ್‌ಶಿಪ್ ಅಗತ್ಯ: 74ನೇ ವಯಸ್ಸಿನ ನಟಿಯ ಬೋಲ್ಡ್ ಹೇಳಿಕೆ – Kannada News | Actress Zeenat Aman supports Live In Relationships before Marriage

ಮದುವೆಯಂತಹ ಲೈಫ್ ಟೈಮ್ ಬದ್ಧತೆಗೆ ಒಳಗಾಗುವ ಮುನ್ನ ಹುಡುಗ-ಹುಡುಗಿ ಒಟ್ಟಿಗೆ ವಾಸಿಸಬೇಕು (ಲಿವ್-ಇನ್ ರಿಲೇಶನ್‌ಶಿಪ್) ಎಂದು ಬಾಲಿವುಡ್‌ನ ಹಿರಿಯ ನಟಿ ಜೀನತ್ ಅಮಾನ್ (Zeenat Aman) ಅವರು ಹೇಳಿದ್ದಾರೆ. ಜೀನತ್ ಅಮಾನ್ ಅವರಿಗೆ 74 ವರ್ಷ ವಯಸ್ಸು. ಸಾಯಿರಾ ಬಾನು ಮತ್ತು ಮುಮ್ತಾಜ್ ಅವರಂತಹ ಸಮಕಾಲೀನ ನಟಿಯರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದರೂ, ಜೀನತ್ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ಶುಭ್ರಾ ಅಯ್ಯಪ್ಪ ಅವರೊಂದಿಗಿನ ಸಂದರ್ಶನದಲ್ಲಿ, ಇಂದಿನ ಜಗತ್ತಿಗೆ ಲಿವ್-ಇನ್ ಸಂಬಂಧಗಳು (Live In Relationships) ಏಕೆ ಹೆಚ್ಚು ಪ್ರಸ್ತುತ ಎಂದು ಅವರು ವಿವರಿಸಿದ್ದಾರೆ.

‘ಇಂದಿನ ಕಾಲದಲ್ಲಿ ಯಾವುದೂ ಶಾಶ್ವತವಲ್ಲ. ಕಾನೂನುಬದ್ಧವಾಗಿ ಒಂದಾಗುವ ಮುನ್ನ ಪರಸ್ಪರ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೀವು ಹೊಂದಿಕೊಳ್ಳುತ್ತೀರಾ ಎಂಬುದನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಕ್ಕಳನ್ನು ಹೇಗೆ ಬೆಳೆಸಬೇಕು? ಹಣಕಾಸಿನ ವಿಷಯದಲ್ಲಿ ನಿಮ್ಮ ಅಭಿಪ್ರಾಯಗಳೇನು ಎಂಬುದನ್ನು ಮೊದಲೇ ಚರ್ಚಿಸಬೇಕು. ಹೊಂದಾಣಿಕೆಯೇ ಇಲ್ಲದಿದ್ದಾಗ 15 ವರ್ಷಗಳ ಕಾಲ ದುಃಖದ ಜೀವನ ನಡೆಸುವ ಬದಲು, 5 ವರ್ಷಗಳ ಕಾಲ ಸಂತೋಷದಿಂದ ಇರುವುದು ಉತ್ತಮ ಅಲ್ಲವೇ’ ಎಂದು ಜೀನತ್ ಪ್ರಶ್ನಿಸಿದ್ದಾರೆ.

‘ರೊಮ್ಯಾನ್ಸ್ ಯಾವಾಗಲೂ ಇರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಯಾವುದೂ ಶಾಶ್ವತವಲ್ಲ. ಸಂಬಂಧಗಳು ಯಾವಾಗಲೂ ಹೊಂದಾಣಿಕೆ ಮತ್ತು ರಾಜಿಗಳ ಮೇಲೆ ಮುನ್ನಡೆಯುತ್ತವೆ. ಹನಿಮೂನ್ ಹಂತವೇ ಸದಾ ಇರುವುದಿಲ್ಲ’ ಎಂದು ಜೀನತ್ ಅಮಾನ್ ಅವರು ಹೇಳಿದ್ದಾರೆ. ಜೀನತ್ ಅಮಾನ್ ಅವರು ತಮ್ಮ ಇಬ್ಬರು ಪುತ್ರರಿಗೂ ಮದುವೆಗೂ ಮುನ್ನ ತಮ್ಮ ಸಂಗಾತಿಗಳ ಜೊತೆ ಲಿವ್-ಇನ್‌ನಲ್ಲಿರಲು ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗ್ತೀನೆಂದು ನಂಬಿಸಿ 4 ವರ್ಷ ಲಿವ್​-ಇನ್​ ಸಂಬಂಧದಲ್ಲಿದ್ದು ಕೈಕೊಟ್ಟ ಪೊಲೀಸ್, ಮಹಿಳೆ ಆತ್ಮಹತ್ಯೆ

ಜೀನತ್ ಅವರ ವೈಯಕ್ತಿಕ ಜೀವನವು ಸಾಕಷ್ಟು ಏರುಪೇರುಗಳಿಂದ ಕೂಡಿದ್ದಾಗಿತ್ತು. ಸಂಜಯ್ ಖಾನ್ ಅವರೊಂದಿಗಿನ ಅವರ ಅಲ್ಪಾವಧಿಯ ವಿವಾಹವು ದೈಹಿಕ ದೌರ್ಜನ್ಯದ ಆರೋಪದೊಂದಿಗೆ ಕೊನೆಗೊಂಡಿತು. ನಂತರ 1985ರಲ್ಲಿ ನಟ ಮಜರ್ ಖಾನ್ ಅವರನ್ನು ವಿವಾಹವಾದರು. ಆದರೆ ತಾವು ಗರ್ಭಿಣಿಯಾಗಿದ್ದಾಗ ಮಜರ್ ತಮಗೆ ದ್ರೋಹ ಮಾಡಿದ್ದರು ಎಂದು ಜೀನತ್ ಆರೋಪಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ಲಿಕ್ಕರ್ ಲೈಸೆನ್ಸ್, ಹೆಲ್ತ್ ಟ್ರೇಡ್ ಲೈಸೆನ್ಸ್ ಸಾಕು; ಈಟಿಂಗ್ ಹೌಸ್ ಲೈಸೆನ್ಸ್ ಬೇಡ: ನೀತಿ ಆಯೋಗ್ ಸಲಹೆಗಳು – Kannada News | NITI Aayog proposes single liquor licence, removal of Eating House Licence for hospitality sector

ನವದೆಹಲಿ, ಜೂನ್ 30: ಭಾರತದಲ್ಲಿ ಹೋಟೆಲ್, ರೆಸ್ಟೋರೆಂಟ್ ಮತ್ತು ಹೋಮ್ ಸ್ಟೇ ಉದ್ಯಮವನ್ನು ಆರಂಭಿಸಲು ಎದುರಾಗುತ್ತಿರುವ ಅತಿ ದೊಡ್ಡ ಕಾನೂನು ಮತ್ತು ನಿಯಮಾವಳಿಗಳ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಪ್ರಮುಖ ಚಿಂತಕರ ಚಾವಡಿಯಾದ ‘ನೀತಿ ಆಯೋಗ’ (NITI Aayog) ಅತ್ಯಂತ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಪ್ರವಾಸೋದ್ಯಮ ಸುಧಾರಣೆಗಳ ಕುರಿತು ನೀತಿ ಆಯೋಗ ಬಿಡುಗಡೆ ಮಾಡಿರುವ ‘ಅನ್‌ಲಾಕಿಂಗ್ ಗ್ರೋತ್ ಇನ್ ಟೂರಿಸಂ ಆಂಡ್ ಹಾಸ್ಪಿಟಾಲಿಟಿ ಸೆಕ್ಟರ್’ (Unlocking Growth in Tourism and Hospitality Sector) ವರದಿಯಲ್ಲಿ, ಈ ವಲಯದಲ್ಲಿ ಹೂಡಿಕೆಯನ್ನು ಸರಳಗೊಳಿಸಲು ಹಲವು ಅನುಮೋದನೆ ಕ್ರಮಗಳನ್ನು ರದ್ದುಗೊಳಿಸಲು ಮತ್ತು ನಿಯಮಗಳನ್ನು ಸಡಿಲಗೊಳಿಸಲು ಪ್ರಸ್ತಾಪಿಸಲಾಗಿದೆ.

ಒಂದೇ ಆವರಣಕ್ಕೆ ಒಂದೇ ಲಿಕ್ಕರ್ ಲೈಸೆನ್ಸ್

ಪ್ರಸ್ತುತ ನಿಯಮಗಳ ಪ್ರಕಾರ, ಒಂದು ದೊಡ್ಡ ಹೋಟೆಲ್ ಅಥವಾ ರೆಸಾರ್ಟ್ ಆವರಣದೊಳಗೆ ಬೇರೆ ಬೇರೆ ರೆಸ್ಟೋರೆಂಟ್‌ಗಳು, ಬಾರ್‌ಗಳು ಅಥವಾ ಸ್ಪಾ ಪ್ರದೇಶಗಳಿದ್ದರೆ, ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಮದ್ಯದ ಪರವಾನಗಿ (Liquor Licence) ಪಡೆಯಬೇಕಾಗುತ್ತದೆ. ಆದರೆ ಇನ್ಮುಂದೆ, ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮದ್ಯ ಪೂರೈಕೆ ಸ್ಥಳಗಳಿಗೆ ಒಂದೇ ಒಂದು ಜಂಟಿ ಲಿಕ್ಕರ್ ಲೈಸೆನ್ಸ್ ನೀಡುವಂತೆ ನೀತಿ ಆಯೋಗ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಬ್ಯಾಂಕುಗಳ ಮಿಸ್-ಸೆಲ್ಲಿಂಗ್​ನಿಂದ ಹಿಡಿದು ಇಪಿಎಫ್​ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು

‘ಈಟಿಂಗ್ ಹೌಸ್ ಲೈಸೆನ್ಸ್’ ರದ್ದು

ಹೋಟೆಲ್ ಮತ್ತು ಆಹಾರ ಮಳಿಗೆಗಳನ್ನು ನಡೆಸಲು ಪೊಲೀಸ್ ಇಲಾಖೆಯಿಂದ ಪಡೆಯಬೇಕಾದ ‘ಈಟಿಂಗ್ ಹೌಸ್ ಲೈಸೆನ್ಸ್’ (Eating House Licence) ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದು ಉದ್ಯಮಿಗಳಿಗೆ ಅನಗತ್ಯ ಕಾಗದಪತ್ರಗಳ ಕಿರಿಕಿರಿಯನ್ನು ತಪ್ಪಿಸಲಿದೆ.

ಏಕೀಕೃತ ಹೆಲ್ತ್ ಟ್ರೇಡ್ ಲೈಸೆನ್ಸ್

ಹೋಟೆಲ್‌ನ ಒಳಗೆ ಇರುವ ರೆಸ್ಟೋರೆಂಟ್, ಈಜುಕೊಳ (Swimming Pool), ಸ್ಪಾ (Spa) ಮುಂತಾದ ವಿವಿಧ ಸೌಲಭ್ಯಗಳಿಗೆ ಮುನ್ಸಿಪಲ್ ಕಾರ್ಪೊರೇಷನ್‌ಗಳಿಂದ ಪ್ರತ್ಯೇಕ ಪರವಾನಗಿ ಪಡೆಯುವ ಬದಲಿಗೆ, ಇವೆಲ್ಲವನ್ನೂ ಒಳಗೊಂಡ ಒಂದೇ ಒಂದು ‘ಹೆಲ್ತ್ ಟ್ರೇಡ್ ಲೈಸೆನ್ಸ್’ (Single Health Trade Licence) ನೀಡಲು ಪ್ರಸ್ತಾಪಿಸಲಾಗಿದೆ.

ಲೈಸೆನ್ಸ್ ಅವಧಿ ವಿಸ್ತರಣೆ

ಮದ್ಯದ ಪರವಾನಗಿಗಳು ಮತ್ತು ಎಫ್‌ಎಸ್‌ಎಸ್‌ಎಐ (FSSAI – ಆಹಾರ ಸುರಕ್ಷತೆ) ನೋಂದಣಿಗಳ ಮಾನ್ಯತೆಯ ಅವಧಿಯನ್ನು (Validity) ವಿಸ್ತರಿಸಲು ಮತ್ತು ಇಡೀ ಪ್ರಕ್ರಿಯೆಯನ್ನು ಡಿಜಿಟಲ್ ಏಕಗವಾಕ್ಷಿ (Single Window) ವ್ಯವಸ್ಥೆಯಡಿ ತರಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ವಿಶ್ವದ ನಂ. 1 ಶಿಪ್ಪಿಂಗ್ ಕಂಪನಿಯಿಂದ ಭಾರತದ ವಿಳಿಂಜಮ್ ಪೋರ್ಟ್​ನಲ್ಲಿ ಭಾರೀ ಹೂಡಿಕೆ; ಅದಾನಿ ಸಂಸ್ಥೆಯಿಂದ ಶೇ. 49 ಪಾಲು ಮಾರಾಟ 

ಈ ಸುಧಾರಣೆಗಳ ಅಗತ್ಯವೇಕೆ?

ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ ಒಂದು ಹೋಟೆಲ್ ಪ್ರಾಜೆಕ್ಟ್ ಅನುಮೋದನೆ ಪಡೆದು ಆರಂಭವಾಗಲು ಸಾಮಾನ್ಯವಾಗಿ 36 ರಿಂದ 48 ತಿಂಗಳುಗಳು (3 ರಿಂದ 4 ವರ್ಷ) ಬೇಕಾಗುತ್ತವೆ. ಆದರೆ, ಅಸಿಯಾನ್ (ASEAN) ಒಕ್ಕೂಟದ ಇತರ ದೇಶಗಳಲ್ಲಿ ಇದೇ ಪ್ರಕ್ರಿಯೆ ಕೇವಲ 12 ರಿಂದ 18 ತಿಂಗಳುಗಳಲ್ಲಿ ಮುಗಿಯುತ್ತದೆ. ಭಾರತದಲ್ಲಿನ ಕಠಿಣ ನಿಯಮಗಳು ಮತ್ತು ವಿಳಂಬ ನೀತಿಯು ಪ್ರವಾಸೋದ್ಯಮದ ಹೂಡಿಕೆಗೆ ದೊಡ್ಡ ತಡೆಯಾಗಿದ್ದು, ಹೊಸ ಶಿಫಾರಸುಗಳು ಜಾರಿಯಾದರೆ ಹೋಟೆಲ್ ಉದ್ಯಮದಲ್ಲಿ ಭಾರಿ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ನೀರಿನಲ್ಲಿ ನೆನೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – Kannada News | Know the amazing benefits of rain bath

ಮಳೆಗಾಲದಲ್ಲಿ (Monsoon) ವಾತಾವರಣ ತುಂಬಾನೇ ತಂಪಾಗಿರುತ್ತದೆ. ಚಿಟಪಟ ಮಳೆಹನಿಗಳು, ತಂಪಾದ ಗಾಳಿ ಮನಸ್ಸಿಗೆ ಏನೋ ಸಂತೋಷವನ್ನು ನೀಡುತ್ತದೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮಳೆಯಲ್ಲಿ ನೆನೆಯುತ್ತಾ ಕುಣಿದಾಡಬೇಕೆಂದು ಹಲವರಿಗೆ ಆಸೆಯಾಗುತ್ತದೆ. ಆದರೆ ಮನೆಯಲ್ಲಿ ಅಮ್ಮನ ಕೈಯಲ್ಲಿ ಚೆನ್ನಾಗಿ ಬೈಸಿಕೊಳ್ಳಬೇಕಾಗುತ್ತದೆ, ಜ್ವರ ಬಂದ್ರೆ ಏನು ಮಾಡೋದಪ್ಪಾ ಎಂಬ ಭಯದಿಂದ ಮಳೆಯಲ್ಲಿ ನೆನೆಯಲು ಹಿಂದೇಟು ಹಾಕುತ್ತಾರೆ. ಏನು ಗೊತ್ತಾ, ಸ್ವಲ್ಪ ಹೊತ್ತು ಮಳೆಯಲ್ಲಿ ನೆನೆಯುತ್ತಾ ಮನಬಿಚ್ಚಿ ಖುಷಿಪಟ್ಟರೆ ಯಾವ ತೊಂದರೆಯೂ ಇರೋದಿಲ್ಲವಂತೆ, ಹೀಗೆ ಸ್ವಲ್ಪ ಹೊತ್ತು ಮಳೆ ನೀರಿನಲ್ಲಿ ನೆನೆದರೆ ಹಲವಾರು ಪ್ರಯೋಜನಗಳು ಲಭಿಸುತ್ತವೆಯಂತೆ. ಅಷ್ಟಕ್ಕೂ ಮಳೆನೀರಿನಲ್ಲಿ ನೆನೆದರೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ನೋಡೋಣ ಬನ್ನಿ.

ಮಳೆ ನೀರಿನಲ್ಲಿ ನೆನೆಯುವುದರಿಂದ ಲಭಿಸುವ ಪ್ರಯೋಜನಗಳೇನು?

ಮಳೆನೀರಿನಲ್ಲಿ ವಿಟಮಿನ್ ಬಿ12 ಮತ್ತು ಇತರ ಹಲವು ಖನಿಜಗಳು ಇದ್ದು, ಅವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಇದು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿದ್ದು, ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಕೂದಲನ್ನು ಬಲಪಡಿಸುತ್ತದೆ: ಮಳೆಯು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಆಮ್ಲೀಯ ಸ್ವಭಾವವನ್ನು ಹೊಂದಿರುವ ಇದು ನಿಮ್ಮ ನೆತ್ತಿಯಿಂದ ಕೊಳಕು ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು  ಇದು ಕೂದಲನ್ನು ಬಲಪಡಿಸುತ್ತದೆ, ಮಂದತೆಯನ್ನು ತೆಗೆದುಹಾಕುತ್ತದೆ. ಅಲ್ಲದೆ ಮಳೆ ನೀರಿನಲ್ಲಿ ವಿಟಮಿನ್‌ ಬಿ12 ಇದ್ದು, ಇದು ನಮ್ಮ ಕೂದಲನ್ನು ಮೃದುಗೊಳಿಸಲು ಸಹಕಾರಿ.

ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ: ಮಳೆಯಲ್ಲಿ ನೆನೆಯುವುದು ಹಾರ್ಮೋನುಗಳ ಸಮತೋಲನಕ್ಕೆ ಪ್ರಯೋಜನಕಾರಿ. ಮಳೆನೀರಿನಲ್ಲಿ ನೆನೆಯುವುದರಿಂದ ಎಂಡಾರ್ಫಿನ್ ಮತ್ತು ಸಿರೊಟೋನಿನ್ ನಂತಹ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ, ಉತ್ತಮ ನಿದ್ರೆ ಪಡೆಯಲು ಸಹ ಸಹಕಾರಿಯಾಗಿದೆ.

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ: ಮಳೆಯಲ್ಲಿ ನೆನೆಯುವುದು ತುಂಬಾ ಒಳ್ಳೆಯದು. ಇದು ಉದ್ವೇಗ, ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಮಳೆಹನಿಗಳು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚಿಂತೆಗಳಿಂದ ಮುಕ್ತರಾಗಲು ಬಯಸಿದರೆ, ಋತುಮಾನದ ಮಳೆಯಲ್ಲಿ ನೆನೆಯಿರಿ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳಿಗೆ ಬೆವರು ಪ್ರಮುಖ ಕಾರಣವಾಗಿದೆ. ತಂಪಾದ ಮಳೆನೀರಿನಲ್ಲಿ ಸ್ನಾನ ಮಾಡುವುದರಿಂದ ಈ ದದ್ದುಗಳಿಂದ ಪರಿಹಾರ ಸಿಗುತ್ತದೆ. ಮಳೆನೀರಿನ ಸ್ನಾನವು ನಿಮ್ಮ ದೇಹವನ್ನು ತಂಪಾಗಿಸುವುದಲ್ಲದೆ, ದದ್ದುಗಳನ್ನು ಸಹ ನಿವಾರಿಸುತ್ತದೆ. ಮಳೆನೀರು ನಿಮ್ಮ ಚರ್ಮದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಬೇಸಿಗೆಯ ದದ್ದುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಳೆನೀರಿನ ಕ್ಷಾರೀಯ ಗುಣಗಳು ತೀವ್ರವಾದ ಮೊಡವೆಗಳಿಂದ ಉಂಟಾಗುವ ಮುಖದ ಊತವನ್ನು ಕಡಿಮೆ ಮಾಡಲು ಮತ್ತು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?

ದೇಹಕ್ಕೆ ವಿಟಮಿನ್ ಬಿ 12 ಒದಗಿಸುತ್ತದೆ: ಮಳೆನೀರು ತುಂಬಾ ಹಗುರವಾಗಿದ್ದು, ಕ್ಷಾರೀಯ pH ಅನ್ನು ಹೊಂದಿರುತ್ತದೆ. ಇದು  ಮನಸ್ಸನ್ನು ತಕ್ಷಣವೇ ರಿಫ್ರೆಶ್ ಮಾಡುವ ಶಕ್ತಿಯನ್ನು ಹೊಂದಿದೆ. ಮಳೆನೀರು ವಿಟಮಿನ್ ಬಿ 12 ಅನ್ನು ಉತ್ಪಾದಿಸುವ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ನೀವು ವಿಟಮಿನ್ ಪಡೆಯಲು ಬಯಸಿದರೆ, ನೀವು 10-15 ನಿಮಿಷಗಳ ಕಾಲ ಮಳೆಯಲ್ಲಿ ನೆನೆಯಬಹುದು.

ಮಳೆಯಲ್ಲಿ ನೆನೆಯುವಾಗ ತೆಗೆದುಕೊಳ್ಳಬೇಕಾದ ಈ ಮುನ್ನೆಚ್ಚರಿಕೆಗಳು:

  • ಹೆಚ್ಚು ಹೊತ್ತು ಮಳೆಯಲ್ಲಿ ನೆನೆಯಬಾರದು ಏಕೆಂದರೆ ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. 15 ರಿಂದ 20 ನಿಮಿಷಗಳ ಕಾಲ ಮಳೆಯಲ್ಲಿ ಒದ್ದೆಯಾಗುವುದು ಒಳ್ಳೆಯದು.
  • 15-20 ನಿಮಿಷಗಳ ಕಾಲ ಮಳೆಯಲ್ಲಿ ನೆನೆದ ನಂತರ, ತಕ್ಷಣ ಸ್ನಾನ ಮಾಡಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು.
  • ದೇಹವನ್ನು ಒಳಗಿನಿಂದ ಬೆಚ್ಚಗಾಗಿಸಲು, ಮಳೆಯಲ್ಲಿ ನೆನೆದ ನಂತರ ಬಿಸಿ ಸೂಪ್ ಅಥವಾ ಚಹಾ ಕುಡಿಯಿರಿ. ಇದಲ್ಲದೆ, ಮೊದಲ ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸಬೇಕು. ಈ ನೀರಿನಲ್ಲಿ ಬ್ಯಾಕ್ಟೀರಿಯಾ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಸಿಂಧೂರ್ ಹುತಾತ್ಮರ ವಿವಾದ; ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್​ಗೆ ಕಾಂಗ್ರೆಸ್ ಪತ್ರ – Kannada News | KC Venugopal writes to Om Birla seeks privilege motion against Rajnath Singh for misleading Parliament over Operation Sindoor statement

ನವದೆಹಲಿ, ಜೂನ್ 30: ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಕುರಿತು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅನುಮತಿ ಕೋರಿದೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಇಂದು ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Speaker Om Birla) ಅವರಿಗೆ ಪತ್ರ ಬರೆದಿದ್ದಾರೆ. ಆಪರೇಷನ್ ಸಿಂಧೂರ್ (Operation Sindoor) ವೇಳೆ ಯಾವುದೇ ಭಾರತೀಯ ಸೈನಿಕರು ಮೃತಪಟ್ಟಿಲ್ಲ ಎಂದು ರಾಜನಾಥ್ ಸಿಂಗ್ (Rajnath Singh) ಈ ಹಿಂದೆ ಪಾರ್ಲಿಮೆಂಟ್​​ಗೆ ಮಾಹಿತಿ ನೀಡಿದ್ದರು. ಆದರೆ, ಇದೀಗ ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕೇಂದ್ರ ರಕ್ಷಣಾ ಸಚಿವರು ಸಂಸತ್​ನ ದಾರಿತಪ್ಪಿಸಿದ್ದಾರೆ ಎಂದು ಕೆ.ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ ಪತ್ರದಲ್ಲಿ ಈ ಕುರಿತು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ವೇಣುಗೋಪಾಲ್, “ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಜನತೆಗೆ ಸುಳ್ಳು ಹೇಳಿದ್ದಾರೆ. ಸದನವನ್ನು ದಾರಿ ತಪ್ಪಿಸಲು ಅವರು ಜುಲೈ 2025ರಲ್ಲಿ ಯಾವುದೇ ಭಾರತೀಯ ಸೈನಿಕ ಹುತಾತ್ಮರಾಗಿಲ್ಲ ಎಂದು ಹೇಳಿದ್ದರು. ಅದಾದ ಒಂದು ವರ್ಷದ ನಂತರ ಸಶಸ್ತ್ರ ಪಡೆಗಳು ತಾವು 6 ಜನ ಸೈನಿಕರನ್ನು ಕಳೆದುಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿವೆ. ರಕ್ಷಣಾ ಸಚಿವರು ನಮ್ಮ ಸೈನಿಕರ ಬಲಿದಾನವನ್ನು ಈ ರೀತಿ ಹೇಗೆ ಮುಚ್ಚಿಡಲು ಸಾಧ್ಯ?” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Operation Sindoor 2.0: ಭಾರತ ಆಪರೇಷನ್ ಸಿಂಧೂರ್ 2.0ಗೆ ತಯಾರಿ ನಡೆಸುತ್ತಿದೆ:ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

“ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಈ 6 ವೀರ ಯೋಧರ ಶೌರ್ಯ ಮತ್ತು ಬಲಿದಾನದ ಬಗ್ಗೆ ಭಾರತದ ಜನತೆಗೆ ಮಾಹಿತಿ ನೀಡದಿರುವುದು ಆ ಹುತಾತ್ಮರ ಕುಟುಂಬಗಳಿಗೆ ಮತ್ತು ಇಡೀ ಸಶಸ್ತ್ರ ಪಡೆಗಳಿಗೆ ಮಾಡಿದ ಘೋರ ಅವಮಾನವಾಗಿದೆ” ಎಂದು ವೇಣುಗೋಪಾಲ್ ಟೀಕಿಸಿದ್ದಾರೆ. “ನಮ್ಮ ಶತ್ರುಗಳ ವಿರುದ್ಧ ಹೋರಾಡಿ ದೇಶವನ್ನು ರಕ್ಷಿಸುವಾಗ ಅವರು ವೀರಮರಣ ಅಪ್ಪಿದ್ದಾರೆ. ಆದರೆ, ಈ ಸ್ವಯಂ ಘೋಷಿತ ರಾಷ್ಟ್ರೀಯತಾವಾದಿ ಸರ್ಕಾರವು ಅವರ ಬಲಿದಾನದ ಬಗ್ಗೆ ಬಹಳ ಸುಲಭವಾಗಿ ಸುಳ್ಳು ಹೇಳಿದೆ” ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರು ಸದನವನ್ನು ದಾರಿ ತಪ್ಪಿಸುವುದು ಹಕ್ಕುಚ್ಯುತಿ:

“ಯಾವುದೇ ಸಚಿವರು ಸದನವನ್ನು ದಾರಿ ತಪ್ಪಿಸಿದರೆ ಅಥವಾ ಮಾಹಿತಿಯನ್ನು ಮುಚ್ಚಿಟ್ಟರೆ, ಅದು ಹಕ್ಕುಚ್ಯುತಿಯಾಗುತ್ತದೆ ಮತ್ತು ಸದನದ ನಿಂದನೆಗೆ ಸಮಾನವಾಗಿರುತ್ತದೆ ಎಂಬುದು ಸ್ಥಾಪಿತ ನಿಯಮವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಕೋರಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ‘ಆಪರೇಷನ್ ಸಿಂಧೂರ್’ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ 6 ಸೈನಿಕರ ಬಲಿದಾನವನ್ನು 1 ವರ್ಷದವರೆಗೆ ಗುರುತಿಸದ ಕೇಂದ್ರ ಸರ್ಕಾರದ ನಿಲುವನ್ನು ಕಳೆದ ವಾರವಷ್ಟೇ ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು.

‘ಆಪರೇಷನ್ ಸಿಂಧೂರ್’ನಲ್ಲಿ 6 ಯೋಧರ ವೀರಮರಣ:

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಕರ್ತವ್ಯದ ಅವಧಿಯಲ್ಲಿ ವೀರಮರಣ ಅಪ್ಪಿದ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ (IAF) ಒಬ್ಬರು ಸೇರಿದಂತೆ ಒಟ್ಟು 6 ಜನ ಮಿಲಿಟರಿ ಸಿಬ್ಬಂದಿಗಳ ಹೆಸರನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ (National War Memorial) ಗೋಡೆಯ ಮೇಲೆ ಕೆತ್ತಲಾಗಿದ್ದು, ಆ ಮೂಲಕ ಹುತಾತ್ಮ ವೀರರಿಗೆ ಗೌರವ ಸಲ್ಲಿಸಲಾಗಿದೆ. ಈ ಕಾರ್ಯಾಚರಣೆಯ ನಂತರ ಸರ್ಕಾರವು ಅಧಿಕೃತವಾಗಿ ಈ 6 ಯೋಧರ ಹೆಸರುಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲ ಬಾರಿಯಾಗಿದೆ. ಏಪ್ರಿಲ್ 22, 2025ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರ ಯೋಧರ ಹೆಸರು ಪ್ರಕಟ

ರಾಷ್ಟ್ರೀಯ ಯುದ್ಧ ಸ್ಮಾರಕದ ತ್ಯಾಗ್ ಚಕ್ರದ ಗೋಡೆ ಸಂಖ್ಯೆ 3D ಯಲ್ಲಿ ಕೆತ್ತಲಾದ ಹೆಸರುಗಳು ಹೀಗಿವೆ:

ಸುಬೇದಾರ್ ಮೇಜರ್ ಪವನ್ ಕುಮಾರ್ (ಭೂಸೇನೆ)

ರೈಫಲ್‌ಮ್ಯಾನ್ ಸುನಿಲ್ ಕುಮಾರ್ (ಭೂಸೇನೆ)

ಲ್ಯಾನ್ಸ್ ನಾಯ್ಕ್ ದಿನೇಶ್ ಕುಮಾರ್ (ಭೂಸೇನೆ)

ಅಗ್ನಿವೀರ್ ಮುರಳಿನಾಯ್ಕ್ (ಭೂಸೇನೆ)

ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್ (ಭೂಸೇನೆ)

ಸಾರ್ಜೆಂಟ್ ಸುರೇಂದ್ರ ಕುಮಾರ್ (ಭಾರತೀಯ ವಾಯುಸೇನೆ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?; ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಭಾರಿ ಹೆಚ್ಚಳ ಸಾಧ್ಯತೆ – Kannada News | Proposed Bus Ticket Price Increase in Karnataka: Reasons, Public Reaction, and Government Decision

ಬೆಂಗಳೂರು, ಜೂ.30: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಮತ್ತು ಶಕ್ತಿ ಯೋಜನೆಯ ಅನುಷ್ಠಾನದಿಂದ ನಾಲ್ಕು ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಎಲ್ಲ ನಿಗಮಗಳು ಬಸ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಪ್ರತಿ ತಿಂಗಳು 40 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ನಿಗಮಗಳು ತಿಳಿಸಿವೆ. ಅಲ್ಲದೆ, ಜುಲೈ ತಿಂಗಳಿನಿಂದ ನೌಕರರಿಗೆ ಶೇಕಡಾ 12.5 ರಷ್ಟು ವೇತನ ಹೆಚ್ಚಳ ಮಾಡಬೇಕಿದೆ ಮತ್ತು 1,271 ಕೋಟಿ ರೂಪಾಯಿ ವೇತನ ಹಿಂಬಾಕಿಯನ್ನೂ ಪಾವತಿಸಬೇಕಾಗಿದೆ. ಶಕ್ತಿ ಯೋಜನೆಯ ಬಾಕಿ ಹಣ 5,000 ಕೋಟಿ ರೂಪಾಯಿ ಬಿಡುಗಡೆಯಾಗಬೇಕಿದೆ. ಈ ಎಲ್ಲ ಕಾರಣಗಳಿಂದಾಗಿ ದರ ಏರಿಕೆ ಅನಿವಾರ್ಯ ಎಂದು ನಿಗಮಗಳು ವಾದಿಸಿವೆ. ಕೆಎಸ್‌ಆರ್‌ಟಿಸಿ ಶೇಕಡಾ 33 ರಷ್ಟು ಮತ್ತು ಬಿಎಂಟಿಸಿ ಶೇಕಡಾ 44 ರಷ್ಟು ದರ ಏರಿಕೆಗೆ ಅನುಮತಿ ಕೋರಿವೆ. ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಪ್ರಯಾಣಿಕರಿಗೆ ಹೊರೆಯಾಗದಂತೆ ಮತ್ತು ನಿಗಮಗಳ ಸಂಕಷ್ಟ ನಿವಾರಣೆಯಾಗುವ ರೀತಿಯಲ್ಲಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಸ್ತಾಪವು ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿದ ಯಶ್ ಸಿನಿಮಾಗಳು – Kannada News | Most anticipated movies of 2026, Yash’s movie beats Shah Rukh Khan’s movie

ಯಶ್ (Yash), ಭಾರತದ ಬಲು ಜನಪ್ರಿಯ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರು. ಅವರ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಯಶ್ ಅವರಿಗೆ ಬಲು ದೊಡ್ಡ ಜನಪ್ರಿಯತೆ ತಂದುಕೊಟ್ಟಿವೆ. ಯಶ್ ಅವರ ಕ್ರೇಜ್ ಅದ್ಯಾವ ಮಟ್ಟಕ್ಕೆ ಇದೆಯೆಂದರೆ ಶಾರುಖ್ ಖಾನ್ ಅವರ ಸಿನಿಮಾ ಅನ್ನು ಸಹ ಯಶ್ ಸಿನಿಮಾಗಳು ಹಿಂದಿಕ್ಕಿವೆ. ಇದೀಗ ಯಶ್ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾಗಳು ಇದೇ ವರ್ಷ, ಕೆಲವೇ ತಿಂಗಳುಗಳ ಅಂತರದಲ್ಲಿ ಬಿಡುಗಡೆ ಆಗಿವೆ. ಯಶ್ ಅವರ ಸಿನಿಮಾಗಳು ಬಲು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ಸಿನಿಮಾವನ್ನೇ ಹಿಂದಿಕ್ಕಿವೆ.

ಐಎಮ್‌ಡಿಬಿ (IMDb) ಇತ್ತೀಚೆಗೆ ಭಾರತದ ಅತಿ ಹೆಚ್ಚು ನಿರೀಕ್ಷಿತ ಚಲನಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಯಶ್ ಅವರ ಎರಡು ಸಿನಿಮಾಗಳು ಮೂರರಲ್ಲಿದೆ. ಶಾರುಖ್ ಖಾನ್ ಅವರ ಹೊಸ ಸಿನಿಮಾ ‘ಕಿಂಗ್’ ಗಿಂತಲೂ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಎನಿಸಿಕೊಂಡಿವೆ. ಈಗ ಬಿಡುಗಡೆ ಆಗಿರುವ ಪಟ್ಟಿಯ ಮೊದಲ ಸ್ಥಾನದಲ್ಲಿ ಯಶ್, ರಣ್​​ಬೀರ್ ಕಪೂರ್ ಒಟ್ಟಿಗೆ ನಟಿಸಿರುವ ‘ರಾಮಾಯಣ’ ಸಿನಿಮಾ ಇದೆ. ಸಿನಿಮಾನಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ.

ಪಟ್ಟಿಯ ಎರಡನೇ ಸ್ಥಾನದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ ‘ಆಲ್ಫಾ’ ಸಿನಿಮಾ ಇದೆ. ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಸಹ ಆಗಲಿದೆ. ಈ ಸ್ಪೈ ಆಕ್ಷನ್ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಕುತೂಹಲ ಮೂಡಿಸಿದೆ. ಇನ್ನು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಇದೆ. ಅಲ್ಲಿಗೆ ಪಟ್ಟಿಯ ಮೊದಲ ಮೂರು ಸಿನಿಮಾಗಳಲ್ಲಿ ಎರಡು ಯಶ್ ಸಿನಿಮಾಗಳೇ ಇವೆ.

ಇದನ್ನೂ ಓದಿ:ಚಿತ್ರಮಂದಿರದಲ್ಲಿ ಫ್ಲಾಪ್, ಆದರೆ ಯೂಟ್ಯೂಬ್​​​ನಲ್ಲಿ ದಾಖಲೆ ಬರೆದ ಸಿನಿಮಾ

ಇದೇ ಪಟ್ಟಿಯಲ್ಲಿ ‘ಟಾಕ್ಸಿಕ್’ ನಂತರ ನಾಲ್ಕನೇ ಸ್ಥಾನದಲ್ಲಿ ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಇದೆ. ಈ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾ ಸಹ ಸಿನಿಮಾನಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಅಜಯ್ ದೇವಗನ್ ಅವರ ‘ಧಮಾಲ್ 4’ ಮತ್ತು ಆರನೇ ಸ್ಥಾನದಲ್ಲಿ ಅವರದ್ದೇ ‘ದೃಶ್ಯಂ 3’ ಸಿನಿಮಾ ಇದೆ. ಪಟ್ಟಿಯಲ್ಲಿ ಬಹುತೇಕ ಹಿಂದಿ ಸಿನಿಮಾಗಳೇ ಹೆಚ್ಚಾಗಿವೆ. ಸೂರ್ಯ ನಟನೆಯ ‘ವಿಶ್ವನಾಥ್ ಆಂಡ್ ಸನ್ಸ್’ ವಿಜಯ್ ದೇವರಕೊಂಡ ಅವರ ‘ರಣಬಲಿ’, ತಮಿಳುನಾಡು ಸಿಎಂ ವಿಜಯ್ ಅವರ ಪುತ್ರ ನಿರ್ದೇಶಿಸಿರುವ ‘ಸಿಗ್ಮಾ’ ಸಹ ಪಟ್ಟಿಯಲ್ಲಿದೆ. ಈ ವರ್ಷ ಬಿಡುಗಡೆ ಆಗಲಿರುವ ಸಿನಿಮಾಗಳು ಮಾತ್ರ ಈ ಪಟ್ಟಿಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: 5 ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ವರುಣಾರ್ಭಟ – Kannada News | Karnataka Weather Forecast: Orange Alert Issued for 5 Districts; Heavy Rain to Lash Coastal and Malnad Regions

ಬೆಂಗಳೂರು, ಜೂನ್​​ 30: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಜುಲೈ 6ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ ವ್ಯಾಪಕವಾಗಿ ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಐಎಂಡಿ ಮುನ್ಸೂಚನೆ ಹಿನ್ನೆಲೆಯಲ್ಲಿ ಮಿಂಚು ಮತ್ತು ಭಾರೀ ಮಳೆಯ ಸಂದರ್ಭ ರೈತರು ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಪ್ರವಾಸಿಗರು, ಮೀನುಗಾರರು ಹಾಗೂ ಸಾರ್ವಜನಿಕರು ನದಿಗಳು ಮತ್ತು ಇತರೆ ಜಲಾಶಯಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

5 ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ನಾಳೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ವರ್ಷಧಾರೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!

ಬೆಂಗಳೂರಲ್ಲಿಯೂ ಮಳೆ ಸಾಧ್ಯತೆ

ಬೆಂಗಳೂರು ನಗರದಾದ್ಯಂತ ನಾಳೆ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ. ಅದಾಗಿಯೂ ತೀವ್ರ ಗಾಳಿಯ ಜೊತೆಗೆ ಕೆಲ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:35 pm, Tue, 30 June 26

Source link

Exit mobile version