ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಮೇ 28: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಭಾರಿ ಮಹತ್ವದ ಹಾಗೂ ನಾಟಕೀಯ ಬೆಳವಣಿಗೆಗಳು ಜರುಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಮೇ 28) ಬೆಳಗ್ಗೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವ ಬೆನ್ನಲ್ಲೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಮಧ್ಯರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ರಾತ್ರಿ 11.45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ರಾತ್ರಿ ಮುಂಬೈನಲ್ಲಿ ತಂಗಿರುವ ಅವರು, ಬೆಳಗ್ಗೆ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ಸಲ್ಲಿಕೆಯ ಸಮಯದಲ್ಲೇ ರಾಜ್ಯಪಾಲರ ಈ ದಿಢೀರ್ ಪ್ರವಾಸ ಹೊಸ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದರೂ ಬೆಂಗಳೂರು ತೊರೆದ ರಾಜ್ಯಪಾಲರು.
  • ಮಧ್ಯರಾತ್ರಿ 11.45ಕ್ಕೆ ಮುಂಬೈಗೆ ತೆರಳಿದ ಗವರ್ನರ್ ಥಾವರ್ ಚಂದ್ ಗೆಹ್ಲೋಟ್.
  • ವಿಧಾನಸೌಧದಲ್ಲಿ ಭಾವನಾತ್ಮಕ ವಿದಾಯ ಪಡೆದ ಮುಖ್ಯಮಂತ್ರಿ.

ವಿಧಾನಸೌಧದಲ್ಲಿ ಭಾವುಕ ವಿದಾಯ – ಕಣ್ಣೀರಿಟ್ಟ ಸಿಬ್ಬಂದಿ

ಮತ್ತೊಂದೆಡೆ, ಸಿದ್ದರಾಮಯ್ಯ ಅವರ ಅಧಿಕಾರದ ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323ರ ಸಿಎಂ ಕಚೇರಿಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಯಾಯಿತು. ಮೂರು ವರ್ಷಗಳ ಹಿಂದೆ (ಮೇ 20, 2023) ಪೂಜೆ ನೆರವೇರಿಸಿ ಸಂಭ್ರಮದಿಂದ ಸಿದ್ದರಾಮಯ್ಯ ಅವರ ನಾಮಫಲಕ ಹೊತ್ತು ಸಜ್ಜಾಗಿದ್ದ ಸಿಎಂ ಕಚೇರಿ ಈಗ ಬಹುತೇಕ ಖಾಲಿಯಾಗಿದೆ. ನಿನ್ನೆ ಸಿಎಂ ಕಚೇರಿಯಿಂದ ಸಿದ್ದರಾಮಯ್ಯ ಹೊರನಡೆಯುತ್ತಿದ್ದಾಗ ಸಚಿವಾಲಯದ ನೂರಾರು ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಸಿಬ್ಬಂದಿಗೆ ಸಮಾಧಾನಪಡಿಸುತ್ತಾ ಸಿದ್ದರಾಮಯ್ಯ ಅವರು ಕೈಮುಗಿದು ಹೆಜ್ಜೆ ಹಾಕುತ್ತಿದ್ದಾಗ, ‘ಸಿದ್ದರಾಮಯ್ಯ ಸಾಹೇಬ್ರಿಗೆ ಜೈ, ಹುಲಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.

ಈ ಭಾವುಕ ಕ್ಷಣಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರಿಂದ ಬಹುನಿರೀಕ್ಷಿತ ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ)’ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ ಕೊನೆಯ ಅವಧಿಯಲ್ಲೂ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ರಾಜ್ಯಾದ್ಯಂತ ಭುಗಿಲೆದ್ದ ಅಹಿಂದ ಆಕ್ರೋಶ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಹಾಗೂ ಅಹಿಂದ ಸಂಘಟನೆಗಳ ಆಕ್ರೋಶದ ಜ್ವಾಲಾಮುಖಿ ಸ್ಫೋಟಿಸಿದೆ. ಬೆಂಗಳೂರಿನ ಕಾವೇರಿ ನಿವಾಸದ ಮುಂದೆ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ‘ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಅಲ್ಲಗಳೆದ ಸುರ್ಜೇವಾಲ: ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ

ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಅಹಿಂದ ಮುಖಂಡ ಸಿದ್ದಣ್ಣ ತೇಜಿ ಅವರು ರಾಜ್ಯಾದ್ಯಂತ ಭಾರಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಇತ್ತ ಮಂಡ್ಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಂಜಿನ ಮೆರವಣಿಗೆ ನಡೆಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರೆ, ಕಲಬುರಗಿಯಲ್ಲಿ ಎಸ್​ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ, ಸಿಎಂ ಸ್ಥಾನದಿಂದ ‘ಟಗರು’ ಕೆಳಗಿಳಿಯುತ್ತಿದ್ದಾರೆ ಎನ್ನುವುದು ಅಹಿಂದ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇದರ ಮಧ್ಯೆ, ರಾಜ್ಯಪಾಲರು ಬೆಂಗಳೂರು ತೊರೆದಿರುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 28, ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ದ್ವಾದಶಿ, ಚಿತ್ತಾ ನಕ್ಷತ್ರ, ವರಿಯನ್ ಯೋಗ, ಬಾಲವಕರಣ ಇರುತ್ತದೆ.

ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಈ ದಿನದ ರಾಹುಕಾಲ ಮಧ್ಯಾಹ್ನ 1:51 ರಿಂದ 3:27 ರವರೆಗೆ ಇರುತ್ತದೆ. ಸರ್ವಸಿದ್ಧಿ ಸಂಕಲ್ಪ ಶುಭಕಾಲವು ಮಧ್ಯಾಹ್ನ 12:16 ರಿಂದ 1:51 ರವರೆಗೆ ಇರುತ್ತದೆ. ಇಂದು ಗುರುಗಳಿಗೆ ದರ್ಶನ ಅಥವಾ ಸ್ಮರಣೆ ಮಾಡುವುದರಿಂದ ಧನಾತ್ಮಕ ಶಕ್ತಿಗಳು ದೊರೆಯುತ್ತವೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

‘ಮದುವೆಯಾಗಿ ನೀವೇನು ಸಾಧಿಸಿದ್ದೀರಾ?’: ಮದುವೆ ವಿಷಯದಲ್ಲಿ ಟ್ರೋಲ್ ಮಾಡಿದವರಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

ಬಾಲಿವುಡ್ ನಟಿ ಶಮಿತಾ ಶೆಟ್ಟಿ ಅವರಿಗೆ ಈಗ 47 ವಯಸ್ಸು. ಅವರ ಅಕ್ಕ, ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗಾಗಲೇ 14 ವರ್ಷದ ಮಗನಿದ್ದರೂ, ಶಮಿತಾ ಮಾತ್ರ ಮದುವೆಯಾಗಲು ಯಾವುದೇ ಗಡಿಬಿಡಿ ಮಾಡಿಕೊಂಡಿಲ್ಲ. ಸಮಾಜ ಹೇಳುತ್ತದೆ ಎಂಬ ಕಾರಣಕ್ಕೆ ತಮಗೆ ಮದುವೆ ಆಗಲು ಇಷ್ಟವಿಲ್ಲ ಎಂಬುದನ್ನು ಅವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ. ಟ್ರೋಲರ್‌ಗಳಿಗೆ ಶಮಿತಾ ಈಗ ತಕ್ಕ ಶಾಸ್ತಿ ಮಾಡಿದ್ದಾರೆ.

ಟ್ರೋಲರ್‌ಗಳ ಬಾಯಿ ಮುಚ್ಚಿಸಿದ ನಟಿ

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಮೆಂಟ್ ಒಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಶಮಿತಾ, ಟ್ರೋಲ್ ಮಾಡಿದ ವ್ಯಕ್ತಿಗೆ ಸುದೀರ್ಘವಾದ ಮತ್ತು ಖಡಕ್ ಆದ ಸಂದೇಶವೊಂದನ್ನು ಬರೆದಿದ್ದಾರೆ. ‘ನಿಮ್ಮ ಅದ್ಭುತವಾದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಲು ನಾನು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಿಮಗೆ ವಯಸ್ಸಾಗಿದೆ, ಹಳೇ ಕಳೆ ಈಗ ಉಳಿದಿಲ್ಲ ಎಂದು ನೀವು ಬರೆದಿದ್ದೀರಿ. ಹೌದು, ವಯಸ್ಸಾದಂತೆ ನಾನು ವಿಭಿನ್ನವಾಗಿ ಕಾಣುತ್ತಿರುವುದು ನಿಜ. ಸಮಯದೊಂದಿಗೆ ಎಲ್ಲವೂ ಬದಲಾಗುತ್ತದೆ. ಇದು ಪ್ರಕೃತಿಯ ನಿಯಮ. ದೈಹಿಕ ರೂಪ ಸೇರಿದಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ಫಿಟ್ ಆಗಿದ್ದೇನೆ ಮತ್ತು ಭಗವಂತ ನನಗೆ ನೀಡಿರುವ ಎಲ್ಲದಕ್ಕೂ ಕೃತಜ್ಞತೆಯಿಂದ ಸಂತೋಷವಾಗಿದ್ದೇನೆ. ನನಗೆ ಅಷ್ಟೇ ಸಾಕು,’ ಎಂದು ಶಮಿತಾ ಬರೆದಿದ್ದಾರೆ.

‘ಮದುವೆಯಾಗಿ ನೀವೇನು ಕಿತ್ತಾಕಿದ್ದೀರಾ?’

‘ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದರೆ ನಿಮ್ಮ ಮಕ್ಕಳು ಇಷ್ಟೊತ್ತಿಗೆ ದೊಡ್ಡವರಾಗುತ್ತಿದ್ದರು’ ಎಂಬ ಕಾಮೆಂಟ್‌ಗೆ ಉತ್ತರಿಸಿದ ಅವರು, ‘ಅದಕ್ಕೀಗೇನು? ನೀವು ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಹೇಳಿದ್ದೀರಿ. ಆದರೆ ಮದುವೆಯಾಗಿ ನೀವೇನು ಸಾಧಿಸಿದ್ದೀರಾ? ಎಲ್ಲದಕ್ಕಿಂತ ಮುಖ್ಯವಾಗಿ, ಒಂಟಿ ಮಹಿಳೆಯರನ್ನು ಈ ರೀತಿ ವಯಸ್ಸಿನ ಹೆಸರಿನಲ್ಲಿ ಅವಮಾನಿಸಲು ಮತ್ತು ನಿಮ್ಮ ಪಿತೃಪ್ರಧಾನ, ಹಳಸಲು ಆಲೋಚನೆಗಳನ್ನು ನಮ್ಮ ಮೇಲೆ ಹೇರಲು ನೀವು ನಮ್ಮನ್ನು ಏಕೆ ಫಾಲೋ ಮಾಡುತ್ತೀರಿ? ದಯವಿಟ್ಟು ನನಗೊಂದು ಉಪಕಾರ ಮಾಡಿ, ತಕ್ಷಣ ನನ್ನನ್ನು ಅನ್‌ಫಾಲೋ ಮಾಡಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರರಂಗದಿಂದ ರಿಯಾಲಿಟಿ ಶೋಗಳವರೆಗೆ…

2000ನೇ ಇಸವಿಯಲ್ಲಿ ಆದಿತ್ಯ ಚೋಪ್ರಾ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೊಹಬ್ಬತೇನ್’ ಮೂಲಕ ಶಮಿತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ತದನಂತರ ‘ಜೆಹರ್’, ‘ಫರೇಬ್’ ಮತ್ತು ‘ಕ್ಯಾಶ್’ ನಂತಹ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದು ಇಂಟೀರಿಯರ್ ಡಿಸೈನಿಂಗ್ ಕಡೆ ಗಮನ ಹರಿಸಿದ್ದ ಶಮಿತಾ, ನಂತರದ ದಿನಗಳಲ್ಲಿ ರಿಯಾಲಿಟಿ ಶೋಗಳ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್​; ರಾಕೇಶ್​ ಬಾಪಟ್​ ಜತೆಗಿನ ಸಂಬಂಧ ಅಂತ್ಯ

‘ಝಲಕ್ ದಿಖ್ಲಾ ಜಾ 8’, ‘ಖತ್ರೋನ್ ಕೆ ಕಿಲಾಡಿ 9’, ‘ಬಿಗ್ ಬಾಸ್ ಒಟಿಟಿ’ ಮತ್ತು ‘ಬಿಗ್ ಬಾಸ್ 15’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಭಾರಿ ಜನಪ್ರಿಯತೆ ಗಳಿಸಿದರು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಸಹ-ಸ್ಪರ್ಧಿ ರಾಕೇಶ್ ಬಾಪಟ್ ಜೊತೆಗಿನ ಇವರ ಪ್ರೇಮಕಥೆ ಭಾರಿ ಸದ್ದು ಮಾಡಿತ್ತಾದರೂ, 2022ರಲ್ಲಿ ತಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರಾಗಿರುವುದಾಗಿ ಶಮಿತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಹಳೇ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸುವವರೇ ಹುಷಾರ್!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ನಾವು ಬಳಸಿದ ಹಳೆಯ ಬಟ್ಟೆಗಳನ್ನು ಯಾಕೆ ಮನೆ ಒರೆಸಲು ಬಳಸಬಾರದು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.ಮನೆ ಶುಚಿತ್ವವು ಶ್ರೇಯಸ್ಸು, ಸಮೃದ್ಧಿ ಮತ್ತು ನೆಮ್ಮದಿಗೆ ಕಾರಣವಾಗುತ್ತದೆ. ಆದಾಗ್ಯೂ, ಮನೆಯನ್ನು ಶುಚಿಗೊಳಿಸುವಾಗ, ವಿಶೇಷವಾಗಿ ಒರೆಸುವಾಗ ಬಳಸುವ ಸಾಧನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಇಂದಿನ ಕಾಲದಲ್ಲಿ ಮನೆಯನ್ನು ಒರೆಸಲು ವಿವಿಧ ಮಾಫ್‌ಗಳನ್ನು ಬಳಸಲಾಗುತ್ತದೆ. ಆದರೆ, ಅನೇಕರು ಹಳೆಯ, ಬಳಸಿದ ಮತ್ತು ಹರಿದ ಬಟ್ಟೆಗಳನ್ನು ಮನೆ ಸ್ವಚ್ಛತೆಗೆ ಉಪಯೋಗಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ, ಹಳೆಯ ಬಟ್ಟೆಗಳನ್ನು ಮನೆ ಒರೆಸಲು ಬಳಸುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸಬಹುದು. ಚಂದ್ರ, ಶುಕ್ರ ಮತ್ತು ರವಿ ಗ್ರಹಗಳು ಮನೆಯ ಶುಚಿಗೆ ಕಾರಕತ್ವವಾಗಿವೆ. ಹಳೆಯ ಬಟ್ಟೆಗಳ ಬಳಕೆಯು ಈ ಗ್ರಹಗಳ ಪ್ರಭಾವವನ್ನು ದುರ್ಬಲಗೊಳಿಸಿ, ಭಾವನೆಗಳಿಗೆ ಧಕ್ಕೆ, ಕುಟುಂಬದಲ್ಲಿ ಕಲಹಗಳು, ಆರೋಗ್ಯ ಸಮಸ್ಯೆಗಳು ಮತ್ತು ವ್ಯಕ್ತಿಗಳ ಮುಖದ ತೇಜಸ್ಸು ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಜೀವನ ಸಾಕೆನಿಸುವಂತಹ ಸ್ಥಿತಿ ಬರಲಿದೆ

ಮೇಷ ರಾಶಿ:

ಹಳೆಯ ಪ್ರೇಮಿ ವಿವಾಹಸಮಾರಂಭದಲ್ಲಿ ಅನಿರೀಕ್ಷಿತವಾಗಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ವ್ಯವಸ್ಥಿತ ಕೆಲಸದಿಂದ ಬೆಲೆ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ. ಹೊಸ ಒಡನಾಡಿಗಳ ಪರಿಚಯ. ಭವಿಷ್ಯದ ಯೋಜನೆಗಳಿಗೆ ಸ್ಪಷ್ಟತೆ. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ಯಾವ ಕೆಲಸ ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ.

ವೃಷಭ ರಾಶಿ:

ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಸಮಸ್ಯೆಗಳು ಬಗೆಹರಿಯುತ್ತವೆ. ಲೌಕಿಕ ಸಂತೋಷವನ್ನು ಅನುಭವಿಸುವಿರಿ. ಶತ್ರುಗಳು ಸೋಲುತ್ತಾರೆ, ಇದರಿಂದ ಯೋಜನೆಗಳು ಯಶಸ್ವಿಯಾಗುತ್ತವೆ. ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಿರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಸಣ್ಣ ಅಂತರದಲ್ಲಿ ಅಪಾಯದಿಂದ ಹೊರಬರುವಿರಿ. ನೀವು ಹನಿಮ್ಮ ಆವಿಷ್ಕಾರಕ್ಕೆ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳಬಹುದು.

ಮಿಥುನ ರಾಶಿ:

ಯಾರ ಮಾತ್ಸರ್ಯಕೋ ನೀವು ಗುರಿಯಾಗಬೇಕಾದೀತು. ಆತ್ಮವಿಶ್ವಾಸದಿಂದ ಕಾರ್ಯ ಯಶಸ್ವಿಯಾಗುವುದು. ವೈಯಕ್ತಿಕ ಬದುಕಿನಲ್ಲಿ ನೆಮ್ಮದಿ ಕಾಣಬಹುದು. ಸ್ನೇಹಿತರಿಂದ ಬೆಂಬಲ ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗುತ್ತದೆ. ಕಛೇರಿಯಲ್ಲಿ ನಿಮ್ಮ ಯೋಜನೆಗಳನ್ನು ಮೆಚ್ಚಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲಿದ್ದಾರೆ.‌ ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ.

ಕರ್ಕಾಟಕ ರಾಶಿ:

ಹಿರಿಯರ ಜೊತೆ ಮಾತನಾಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಶ್ರಮಕ್ಕೆ ಫಲ ಬೇಕಾದರೆ, ಸಹೋದ್ಯೋಗಿಗಳಿಂದ ಸಹಕಾರವೂ ಅಗತ್ಯ. ಮಾತಿನಲ್ಲಿ ಧೈರ್ಯ ಹಾಗೂ ಮಿತವ್ಯಯ ಇರಲಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮಗೆ ತಪ್ಪಿತಸ್ಥ ಭಾವವು ಮೂಡುವುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ.

ಸಿಂಹ ರಾಶಿ:

ಇನ್ನೊಬ್ಬರಿಂದ ನಿಮ್ಮ ವಾಹನಕ್ಕೆ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ತಮ್ಮ ನಿರ್ಧಾರವನ್ನು ಗಟ್ಟಿ ಮಾಡಳ್ಳಬೇಕಿದೆ. ಅರೆಬೆಂದವರ ಜೊತೆ ಅಪಕ್ವವಾದ ಮಾತುಗಳನ್ನೇ ಆಡಬೇಕು. ಬೇಡದ ವಿಚಾರಕ್ಕೆ ತಲೆ ಹಾಕುವುದು ಬೇಡ. ಈ ದಿನ ನೀವು ಆಲಸ್ಯದಿಂದ ಇರುವಿರಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ.

ಕನ್ಯಾ ರಾಶಿ:

ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವಾಗಬಹುದು. ನಿಮ್ಮ ದಾಂಪತ್ಯದ‌ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು ಅದಕ್ಕಾಗಿ ನಿಮ್ಮ ಹಣವನ್ನು ಖರ್ಚು ಮಾಡಬೇಕಾಗಿ ಬರಬಹುದು. ಮಾನಸಿಕ ಒತ್ತಡದ ಕಾರಣ ವಾಹನದಿಂದ ತೊಂದರೆ ಉಂಟಾಗಬಹುದು. ಮೋಸ ಹೋಗುವ ಸಾಧ್ಯತೆಯು ಇರಲಿದೆ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಇನ್ನೊಬ್ಬರ ಬಗ್ಗೆ ತೋರುವ ಸಹಾನುಭೂತಿಯು ಬೇರೆಯವರಿಗೆ ಇಷ್ಟವಾಗುವುದು.

ತುಲಾ ರಾಶಿ:

ನಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇರಲಾಗದು. ನಿಮಗೆ ಇಂದು ಆದರ್ಶವ್ಯಕ್ತಿತ್ವವು ಸಿಗಲಿದ್ದು ಅವರನ್ನು ಅನುಸರಿಸುವ ಸಾಧ್ಯತೆ ಇದೆ. ನಿಮ್ಮ ಅವಕಾಶವನ್ನು ಬೇರೆಯವರು ಉಪಯೋಗಸಿಕೊಳ್ಳುವರು. ಪ್ರೀತಿಯಲ್ಲಿ ನೀವು ಮೋಸಹೋಗುವ ಸಾಧ್ಯತೆ ಇದೆ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ.

ವೃಶ್ಚಿಕ ರಾಶಿ:

ಇಂದು ಅಪರಿಚಿತ ಕರೆಗಳು ನಿಮ್ಮನ್ನು ಕೆಲಸಕ್ಕೆ ತೊಂದರೆಕೊಡಬಹುದು. ಯಾರದೋ ಕಾರಣಕ್ಕೆ ನಿಮಗೆ ಅಪಮಾನ. ಸಂಪೂರ್ಣ ಮಾಹಿತಿಯ ಜೊತೆ ಅನ್ವೇಷಣೆಗೆ ಮುಂದುವರಿಯಿರಿ. ವ್ಯಕ್ತಿಗಳ ನಿಂದನೆಯನ್ನು ಮಾಡುವ ಕೆಲಸಕ್ಕೆ ವಿರಾಮವನ್ನು ಹೇಳಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ತೃಪ್ತಿ ಕಾಣುವಿರಿ. ನಿಮ್ಮ ಬಂಧುಗಳಿಗೆ ನಿಮ್ಮ ಬಗ್ಗೆ ಕೆಲವು ವಿಚಾರಗಳು ತಿಳಿಯಲಿವೆ. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ.

ಧನು ರಾಶಿ:

ಸೋಲುಂಡು ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಅವಸರದ ನಿರ್ಧಾರದಿಂದ ಅನಂತರ ನಿಮಗೆ ಕಷ್ಟವಾಗಲಿದೆ. ನಿಮ್ಮ ಶ್ರಮದ ಫಲ ಇಂದು ಸಿಗಬಹುದು. ಪೋಷಕರ ಆರೋಗ್ಯದ ಬಗ್ಗೆ ಚಿಂತೆಯಿರಬಹುದು. ಹೊಸ ಕೆಲಸಕ್ಕೆ ಅವಕಾಶಗಳು ಲಭ್ಯವಾಗುತ್ತವೆ. ಕುಟುಂಬದೊಂದಿಗೆ ಪ್ರಯಾಣಿಸಲು ನಿಮಗೆ ಅವಕಾಶ ಸಿಗುತ್ತದೆ. ಭವಿಷ್ಯದ ಕುರಿತು ಯೋಚನೆಯನ್ನು ಮಾಡಲಿದ್ದೀರಿ. ಯಾರನ್ನೋ ನೋಡಿ ನೀವು ಅಸೂಯೆ ಪಡೆಯುವುದು ಬೇಡ.‌ ಯಾವ ಸಂದರ್ಭದಲ್ಲೊಯೂ ಉದ್ವೇಗಕ್ಕೆ ಒಳಗಾಗುವುದು ಬೇಡ.

ಮಕರ ರಾಶಿ:

ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ‌. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ನಿಮ್ಮ ಹಳೆಯ ಸಮಸ್ಯೆಗೆ ಸಹಚರರಿಂದ ಪರಿಹಾರ ಸಿಗುತ್ತದೆ. ಪ್ರಸ್ತುತ ಕೆಲಸಗಳ ಮೇಲೆ ಮಾತ್ರ ಗಮನಹರಿಸಿ. ಶಿಸ್ತನ್ನು ಕಾಪಾಡಿಕೊಳ್ಳಲು ಬಯಸುವಿರಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು.

ಕುಂಭ ರಾಶಿ:

ಇಂದು ಸಹೋದ್ಯೋಗಿಗಳು ನಿಮಗೆ ಸಿಗುವ ಜವಾಬ್ದಾರಿಯನ್ನು ಸಿಗದಂತೆ ಮಾಡುವರು. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಬಹಳ ದಿನಗಳಿಂದ ಬಾರದೇ ಇರುವ ಹಣಕ್ಕೆ ಚಿಂತೆ ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಪ್ರಶಂಸೆಯು ನಿಮಗೆ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುವುದು. ನ್ಯಾಯ ಸಮ್ಮತವಾಗಿ ಇರಿ.

ಮೀನ ರಾಶಿ:

ಸಂತೋಷದಲ್ಲಿ ಇರುವಾಗಲೇ ನಿಮಗೆ ಒತ್ತಡವನ್ನು ಸೃಷ್ಟಿಮಾಡಬಹುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಮಾತಿಗೆ ಮಹತ್ತ್ವ ಸಿಗಲಿದೆ. ಹಳೆಯ ಸ್ನೇಹಿತರಿಂದ ಪರಿಹಾರ ಬರುವ ಸಾಧ್ಯತೆ ಇದೆ. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಸಿದ್ಧಿ, ಕರಣ : ಕೌಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:58 – 15:34, ಯಮಗಂಡ ಕಾಲ 05:56 – 07:33, ಗುಳಿಕ ಕಾಲ 09:09 – 10:45

-ಲೋಹಿತ ಹೆಬ್ಬಾರ್-8762924271 (what’s app only)

Source link

SRH vs RR: ರಾಜಸ್ಥಾನ್ ವಿರುದ್ಧ ಸೋತು ಐಪಿಎಲ್​ನಿಂದ ಹೊರಬಿದ್ದ ಸನ್‌ರೈಸರ್ಸ್

ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್​ನಿಂದ ಹೊರಬೀಳುವುದರಿಂದ ಉಭಯ ತಂಡಗಳು ಗೆಲುವಿಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದವು. ಆದಾಗ್ಯೂ 15 ವರ್ಷದ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್‌ ಪ್ರವಾಹಕ್ಕೆ ಕೊಚ್ಚಿ ಹೋದ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 47 ರನ್​ಗಳಿಂದ ಸೋತು ಫೈನಲ್​ ರೇಸ್​ನಿಂದ ಹೊರಬಿದ್ದಿತು. ಇತ್ತ ಸನ್‌ರೈಸರ್ಸ್ ವಿರುದ್ಧ ಗೆದ್ದ ರಾಜಸ್ಥಾನ್, ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 245 ರನ್​ಗಳ ಬೃಹತ್ ಗುರಿ ದಾಖಲಿಸಿತು. ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡ ಬ್ಯಾಟಿಂಗ್‌ ವಿಭಾಗದ ವೈಫಲ್ಯದಿಂದ ಹೀನಾಯವಾಗಿ ಸೋಲನುಭವಿಸಿತು.

Source link

ಕಾಜಿರಂಗದಲ್ಲಿ ಕಂಡಿತು ಹಾಲಿನ ಬಣ್ಣದ ಜಿಂಕೆ; ವಿಡಿಯೋ ವೈರಲ್

ಕಾಜಿರಂಗ, ಮೇ 27: ಸಾಮಾನ್ಯವಾಗಿ ಕಂದು ಬಣ್ಣದಲ್ಲಿ ಕಂಡುಬರುವ ‘ಹಾಗ್ ಜಿಂಕೆ’ ಅಸ್ಸಾಂನ ವಿಶ್ವಪ್ರಸಿದ್ಧ ಕಾಜಿರಂಗ (kaziranga) ರಾಷ್ಟ್ರೀಯ ಉದ್ಯಾನವನದಲ್ಲಿ ಹಾಲಿನ ಬಿಳಿ ಬಣ್ಣದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಅತ್ಯಂತ ಅಪರೂಪದ ದೃಶ್ಯದ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೇ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. “ಇಂತಹ ಅಪರೂಪದ ಜಿಂಕೆಯನ್ನು ನೋಡುವುದು ಸಂತಸದ ಸಂಗತಿ. ಕಾಜಿರಂಗದಲ್ಲಿ ಈ ‘ಅಲ್ಬಿನೋ ಹಾಗ್ ಜಿಂಕೆ’ಯನ್ನು ನೋಡುವುದು ನಮ್ಮ ವನ್ಯಜೀವಿಗಳ ಶ್ರೀಮಂತಿಕೆಯ ಸಂಕೇತವಾಗಿದೆ. ಅಸ್ಸಾಂನ ಕಾಡುಗಳು ಅಪರೂಪದ ಪ್ರಭೇದಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ” ಎಂದು ಅವರು ಬರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ಲೆದರ್ ಶೂ, ಬೆಲ್ಟ್-ಬ್ಯಾಗ್ ದರ ಹೆಚ್ಚಳ

ಬೆಂಗಳೂರು, ಮೇ 27: ಇಂಧನ ದರ ಏರಿಕೆಯ ಬಿಸಿ ಇದೀಗ ಲೆದರ್ (Leather) ವಸ್ತುಗಳಿಗೂ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ನಿರಂತರ ಏರಿಕೆ ಬೆನ್ನಲ್ಲೇ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಲೆದರ್ ಶೂ, ಬೆಲ್ಟ್ ಹಾಗೂ ಶಾಲಾ ಬ್ಯಾಗ್ ಬೆಲೆ ಕೂಡ ಏರಿಕೆ ಆಗಿದೆ. ಶಾಲೆ ಆರಂಭದ ಹೊತ್ತಲ್ಲೇ ಹೀಗೆ ಏರಿಕೆ ಆಗುತ್ತಿರುವುದು ಸದ್ಯ ಪೋಷಕರಿಗೆ ಶಾಕ್ ಎದುರಾಗಿದ್ದು, ಮಧ್ಯಮ ವರ್ಗದ ಜನರಿಗೆ ಇದು ಮತ್ತೆ ಹೊರೆಯಾಗುವ ಸಾಧ್ಯತೆ ಇದೆ.

ಮುಖ್ಯಾಂಶಗಳು

  • ಇನ್ನು ಮುಂದೆ ಲೆದರ್ ವಸ್ತುಗಳೂ ದುಬಾರಿ
  • ಸಾರಿಗೆ ವೆಚ್ಚ ಹೆಚ್ಚಳ ಬೆನ್ನಲ್ಲೇ ಲೆದರ್ ಶೂ, ಬೆಲ್ಟ್, ಶಾಲಾ ಬ್ಯಾಗ್ ದರ ಶೇ. 15ರಷ್ಟು ಏರಿಕೆ
  • ಶಾಲೆ ಆರಂಭದ ಹೊತ್ತಲ್ಲೇ ಪೋಷಕರಿಗೆ ಶಾಕ್​​

ಇದನ್ನೂ ಓದಿ: Petrol Diesel Prices Hike: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ

ಈಗಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಕಾರ್ಮಿಕರ ವೆಚ್ಚ ಹೆಚ್ಚಳದಿಂದ ತತ್ತರಿಸಿರುವ ವ್ಯಾಪಾರಿಗಳಿಗೆ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳ ಕಾರ್ಖಾನೆಗಳಲ್ಲಿ ತಯಾರಾಗುವ ಲೆದರ್ ವಸ್ತುಗಳು ಬೆಂಗಳೂರಿನಂತಹ ನಗರಗಳಿಗೆ ರವಾನಿಸಲು ಲಾರಿಗಳು ಹಾಗೂ ಸರಕು ಸಾಗಣೆ ವಾಹನಗಳನ್ನೇ ಬಳಸುವುದು ಅನಿವಾರ್ಯವಾಗಿದೆ. ಆದರೆ ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚಾಗಿದ್ದು, ಉತ್ಪನ್ನಗಳ ಅಂತಿಮ ಬೆಲೆ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಲೆದರ್ ಶೂ, ಬೆಲ್ಟ್, ಶಾಲಾ ಬ್ಯಾಗ್ ದರ ಶೇ. 15ರಷ್ಟು ಏರಿಕೆ

ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದಲೇ ಸಾರಿಗೆ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಹಳೆಯ ದರದಲ್ಲೇ ಬ್ಯಾಗ್ ಮತ್ತು ಶೂಗಳನ್ನು ಮಾರಾಟ ಮಾಡುವುದು ಕಷ್ಟ. ಹೊಸ ಸ್ಟಾಕ್‌ಗಳಿಗೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದಿದ್ದಾರೆ.

ಶಾಲೆ ಆರಂಭದ ಹೊತ್ತಲ್ಲೇ ಪೋಷಕರಿಗೆ ಶಾಕ್!

ಕೆಲವು ಮಾದರಿಯ ಲೆದರ್ ಐಟಮ್ಸ್​ಗಳಿಗೆ 5 ರಿಂದ 15 ಶೇಕಡ ಹಾಗೂ ಶೂಗಳಿಗೆ 10 ರಿಂದ 15 ಶೇಕಡ ತನಕ ಬೆಲೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇಂಧನ ದರ ಸ್ಥಿರವಾಗದಿದ್ದರೆ ಇನ್ನಷ್ಟು ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಶೀಘ್ರ ಮತ್ತೊಂದು ದರ ಏರಿಕೆ ಬರೆ: ಸರಕು ಸಾಗಾಟ ವಾಹನಗಳ ಬಾಡಿಗೆ ದರ ಶೇ.10ರಷ್ಟು ಹೆಚ್ಚಳ ಸಾಧ್ಯತೆ

ಶಾಲೆಗಳು ಆರಂಭವಾಗುವ ಹೊತ್ತಿನಲ್ಲಿ ಪೋಷಕರು ಈಗಾಗಲೇ ಪುಸ್ತಕ, ಯೂನಿಫಾರ್ಮ್, ಶುಲ್ಕ ಸೇರಿದಂತೆ ಹಲವು ಖರ್ಚುಗಳು ಮಾಡಿದ್ದಾರೆ. ಈ ನಡುವೆ ಬ್ಯಾಗ್ ಮತ್ತು ಶೂಗಳ ಬೆಲೆ ಏರಿಕೆ ಆದರೆ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಂದೊಡ್ಡಿದೆ.

ವರದಿ: ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೈಲರ್ 2: ರಜನಿಕಾಂತ್ ಸಿನಿಮಾದಲ್ಲಿ ಶಾರುಖ್ ಖಾನ್ ಬದಲು ಹೃತಿಕ್ ರೋಷನ್ ನಟನೆ?

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಜೈಲರ್’ ಚಿತ್ರದ ಸೀಕ್ವೆಲ್ ‘ಜೈಲರ್ 2’ (Jailer 2) ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ. ಸಿನಿಮಾ ಬಿಡುಗಡೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಚಿತ್ರದ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬೀಳುತ್ತಿವೆ. ಸದ್ಯ ಕಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯೆಂದರೆ, ಈ ಬಿಗ್ ಬಜೆಟ್ ಚಿತ್ರದ ಒಂದು ಅತಿಥಿ ಪಾತ್ರಕ್ಕಾಗಿ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ (Hrithik Roshan) ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ‘ಜೈಲರ್ 2’ ಚಿತ್ರತಂಡವು ಹೃತಿಕ್ ರೋಷನ್ ಅವರನ್ನು ವಿಶೇಷ ಪಾತ್ರವೊಂದಕ್ಕಾಗಿ ಸಂಪರ್ಕಿಸಿದೆ. ಆದರೆ ಚಿತ್ರತಂಡವು ಮೊದಲಿಗೆ ಈ ಪಾತ್ರಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಸಂಪರ್ಕಿಸಿತ್ತು ಎಂಬ ಮಾಹಿತಿ ಇದೆ. ಆದರೆ, ಶಾರುಖ್ ಖಾನ್ ಅವರು ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವುದರಿಂದ ‘ಜೈಲರ್ 2’ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

ಶಾರುಖ್ ಖಾನ್ ಅವರ ಅಲಭ್ಯತೆಯಿಂದಾಗಿ, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈಗ ಈ ಪವರ್‌ಫುಲ್ ಪಾತ್ರಕ್ಕೆ ಹೃತಿಕ್ ರೋಷನ್ ಅವರನ್ನು ಕರೆತರಲು ಮಾತುಕತೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಒಂದು ವೇಳೆ ಹೃತಿಕ್ ರೋಷನ್ ಅವರು ಒಪ್ಪಿಕೊಂಡರೆ ‘ಜೈಲರ್ 2’ ಸಿನಿಮಾದ ಸ್ಟಾರ್ ಮೆರುಗು ಹೆಚ್ಚಲಿದೆ.

ರಜನಿಕಾಂತ್ ಅವರು ‘ಜೈಲರ್ 2’ ಚಿತ್ರದಲ್ಲಿ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಆಗಿ ಅಬ್ಬರಿಸಲಿದ್ದಾರೆ. ಮೊದಲ ಭಾಗದಲ್ಲಿದ್ದಂತೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಈ ಸೀಕ್ವೆಲ್‌ನಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಇದರೊಂದಿಗೆ ಈ ಬಾರಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಮತ್ತು ಸೂರಜ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನನ್ನನ್ನು ಯಾರೂ ಕಣ್ಣೆತ್ತಿ ನೋಡಲಿಲ್ಲ: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಅನುಭವ ಬಿಚ್ಚಿಟ್ಟ ರಜನಿಕಾಂತ್

‘ಜೈಲರ್ 2’ ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ಚಿತ್ರವು ಇದೇ ವರ್ಷ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಹೃತಿಕ ರೋಷನ್ ಈ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದರೆ, ಚಿತ್ರದ ಹೈಪ್ ಮತ್ತೊಂದು ಹಂತಕ್ಕೆ ತಲುಪುವುದು ಖಚಿತ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ವಿಜಯ್; ವಂದೇ ಮಾತರಂ ವಿವಾದದ ಬಗ್ಗೆ ಚರ್ಚೆ

ನವದೆಹಲಿ, ಮೇ 27: ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ತಮಿಳುನಾಡಿನಲ್ಲಿ ಭಾರಿ ವಿವಾದ ಸೃಷ್ಟಿಸಿರುವ ‘ವಂದೇ ಮಾತರಂ’ ವಿವಾದದ ಕುರಿತು ಪ್ರಧಾನಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ವಿಜಯ್ ಮತ್ತು ಪ್ರಧಾನಿ ಮೋದಿ (PM Modi) ನಡುವಿನ ಮೊದಲ ಭೇಟಿ ಇದಾಗಿದೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ವಿಜಯ್ ಅವರಿಗೆ ಪ್ರಧಾನಿ ಮೋದಿ ಅವರು ಕೂಡ ಅಭಿನಂದನೆ ಸಲ್ಲಿಸಿ, ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯ ವೇಳೆ ತಮಿಳುನಾಡು ಸಿಎಂ ವಿಜಯ್ ಅವರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ‘ವಂದೇ ಮಾತರಂ’ ಗೀತೆ ಉಲ್ಲೇಖಕ್ಕೆ ಸಂಬಂಧಿಸಿದ ವಿವಾದವನ್ನು ಪ್ರಧಾನಿ ಗಮನಕ್ಕೆ ತಂದಿದ್ದಾರೆ. ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅಥವಾ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯಗೊಳಿಸುವ ಅಥವಾ ಅದಕ್ಕೆ ಗೌರವ ನೀಡುವ ವಿಷಯದಲ್ಲಿ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಸಂಘಟನೆಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಭಾಷಾ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳ ನಡುವೆ ಈ ವಿಷಯವು ರಾಜ್ಯದಲ್ಲಿ ದೊಡ್ಡ ರಾಜಕೀಯ ವಿವಾದವಾಗಿ ರೂಪಾಂತರಗೊಂಡಿತ್ತು.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ಕ್ಯಾತೆ: ಪ್ರಧಾನಿ ಮೋದಿಗೆ ಪತ್ರ ಬರೆದ ವಿಜಯ್​​

ಹಾಗೇ, ಈ ಭೇಟಿ ವೇಳೆ ತಮಿಳುನಾಡಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ವಿವಿಧ ಯೋಜನೆಗಳ ಅನುದಾನ ಹಾಗೂ ಜಿಎಸ್‌ಟಿ (GST) ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ವಿಜಯ್ ಪ್ರಧಾನಿಗಳಿಗೆ ಮನವಿ ಮಾಡಿದರು ಎನ್ನಲಾಗಿದೆ. ಹಾಗೇ, ತಮಿಳುನಾಡಿನಲ್ಲಿ ಪ್ರಗತಿಯಲ್ಲಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಮೆಟ್ರೋ ರೈಲು ಯೋಜನೆಗಳ ವಿಸ್ತರಣೆ ಮತ್ತು ಬಂದರುಗಳ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡುವಂತೆಯೂ ಕೋರಿದ್ದಾರೆ.

ಶ್ರೀಲಂಕಾ ನೌಕಾಪಡೆಯಿಂದ ಪದೇ ಪದೇ ಬಂಧನಕ್ಕೊಳಗಾಗುತ್ತಿರುವ ತಮಿಳುನಾಡು ಮೀನುಗಾರರ ರಕ್ಷಣೆ ಮತ್ತು ಅವರ ಹಿತಾಸಕ್ತಿ ಕಾಯುವಂತೆ ಕೇಂದ್ರ ಸರ್ಕಾರಕ್ಕೆ ವಿನಂತಿಸಿಕೊಂಡರು. ತಮಿಳುನಾಡಿನ ಹಿಂದಿನ ಸರ್ಕಾರಗಳು ಕೇಂದ್ರದೊಂದಿಗೆ ಸಂಘರ್ಷದ ಹಾದಿ ತುಳಿದಿದ್ದವು. ಆದರೆ, ವಿಜಯ್ ಅವರು ಆರಂಭದಲ್ಲೇ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಚಿತ್ರರಂಗದ ಕಷ್ಟಕ್ಕೆ ಸ್ಪಂದಿಸಿದ ದಳಪತಿ ವಿಜಯ್; ದೊಡ್ಡ ನಿರ್ಧಾರ ತೆಗೆದುಕೊಂಡ ಸಿಎಂ

ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ವಿಜಯ್ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದು, “ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೊಂದಿಗೆ ಉತ್ತಮ ಭೇಟಿ ನಡೆಸಲಾಯಿತು. ರಾಜ್ಯದ ಪ್ರಗತಿಗಾಗಿ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version