IPL 2026: ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪಬಹುದು..! ಹೇಗೆ ಗೊತ್ತಾ? – Kannada News | IPL 2026 Qualifier 1: RCB’s Direct Final Path! Rain Rule and Points Table Advantage Explained

ಐಪಿಎಲ್ 2026 (IPL 2026) ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ (RCB vs GT) ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ? ಇಲ್ಲಿದೆ ವಿವರ.

ಅಗ್ರಸ್ಥಾನದಲ್ಲಿ ಆರ್​ಸಿಬಿ

ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

IPL 2026: ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ- ಗುಜರಾತ್ ದಾಖಲೆ ಹೇಗಿದೆ? ಯಾರದ್ದು ಮೇಲುಗೈ?

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?

ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:20 pm, Tue, 26 May 26

Source link

ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಯುಎಸ್ ಕಾರ್ಯದರ್ಶಿ ರೂಬಿಯೋ – Kannada News | US Secretary Marco Rubio visits Taj Mahal With Wife During India Visit

ಆಗ್ರಾ, ಮೇ 26: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ತಮ್ಮ ಪತ್ನಿ ಜೀನೆಟ್ ರೂಬಿಯೋ ಅವರೊಂದಿಗೆ ಆಗ್ರಾದಲ್ಲಿರುವ ಐತಿಹಾಸಿಕ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ತಾಜ್ ಮಹಲ್ ಸೌಂದರ್ಯವನ್ನು ಹೊಗಳಿದ ರೂಬಿಯೋ ಈ ಸ್ಮಾರಕವನ್ನು ವಿಶ್ವದ ಅತ್ಯಮೂಲ್ಯ ನಿಧಿಗಳಲ್ಲಿ ಒಂದೆಂದು ಶ್ಲಾಘಿಸಿದ್ದಾರೆ. ತಾಜ್ ಮಹಲ್‌ನಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಕಳೆದ ದಂಪತಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ (Visitors Book) “ವಿಶ್ವದ ನಿಜವಾದ ನಿಧಿಗಳಲ್ಲಿ ಒಂದನ್ನು ವೀಕ್ಷಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.

ವಿಶ್ವದ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್, ಭಾರತಕ್ಕೆ ಭೇಟಿ ನೀಡುವ ಜಾಗತಿಕ ಮಟ್ಟದ ಉನ್ನತ ನಾಯಕರು ಮತ್ತು ಗಣ್ಯರನ್ನು ಸತತವಾಗಿ ಆಕರ್ಷಿಸುತ್ತಲೇ ಬಂದಿದೆ. ಕಳೆದ ವರ್ಷ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳಾದ ವಿವೇಕ್, ಮಿರಾಬೆಲ್ ಮತ್ತು ಇವಾನ್ ಅವರೊಂದಿಗೆ ಈ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ; ತಿಂಗಳಿಗೆ 9,000ರೂ. ಸ್ಟೈಫಂಡ್‌ನೊಂದಿಗೆ ಬಂಪರ್ ಉದ್ಯೋಗಾವಕಾಶ! – Kannada News | Government Internship 2026: Paid Opportunities and Skill Development for Youth

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆImage Credit source: Pinterest

ದೇಶದ ಯುವಜನತೆಗೆ ಉದ್ಯೋಗ ಕೌಶಲ್ಯ ಹಾಗೂ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ (PM Internship Scheme 2026) ಅನ್ನು ಮತ್ತಷ್ಟು ಆಕರ್ಷಕ ನಿಯಮಗಳೊಂದಿಗೆ ಜಾರಿಗೆ ತಂದಿದೆ. ಈ ಯೋಜನೆಯಡಿ ದೇಶದ ಪ್ರಮುಖ 500 ಕ್ಕೂ ಹೆಚ್ಚು ಕಂಪನಿಗಳಲ್ಲಿ ಯುವಕ-ಯುವತಿಯರಿಗೆ ಇಂಟರ್ನ್‌ಶಿಪ್ (ತರಬೇತಿ) ಅವಕಾಶ ಸಿಗಲಿದ್ದು, ಪ್ರತಿ ತಿಂಗಳು ಭಾರಿ ಸ್ಟೈಫಂಡ್ ಕೂಡ ಲಭ್ಯವಾಗಲಿದೆ. ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.

ತಿಂಗಳ ಭತ್ಯೆ (Stipend):

ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತಿ ತಿಂಗಳು 9,000 ಸ್ಟೈಫಂಡ್ ಸಿಗಲಿದೆ. ಇದರಲ್ಲಿ 8,100 ರೂ. ಹಣವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ (DBT) ಜಮಾ ಮಾಡಿದರೆ, ಉಳಿದ 900ರೂ. ಹಣವನ್ನು ಇಂಟರ್ನ್‌ಶಿಪ್ ನೀಡುವ ಕಂಪನಿ ಭರಿಸುತ್ತದೆ. ಇದಲ್ಲದೇ ಇಂಟರ್ನ್‌ಶಿಪ್‌ಗೆ ಸೇರಿದ ತಕ್ಷಣ ಆರಂಭಿಕ ವೆಚ್ಚಗಳಿಗಾಗಿ ಸರ್ಕಾರದಿಂದ 6,000ರೂ. ಒನ್-ಟೈಮ್ ಗ್ರಾಂಟ್ (ಒಂದು ಬಾರಿಯ ಧನಸಹಾಯ) ಸಿಗಲಿದೆ.

ಉಚಿತ ವಿಮೆ ಸೌಲಭ್ಯ:

ಇಂಟರ್ನ್‌ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಉಚಿತ ವಿಮಾ ಸೌಲಭ್ಯ ಸಿಗುತ್ತದೆ.

ಕರ್ನಾಟಕದ ಕಂಪನಿಗಳಲ್ಲೇ ಅವಕಾಶ:

ಈ ಯೋಜನೆಯಡಿ ಭಾರತದ ಪ್ರಮುಖ ಕಾರ್ಪೊರೇಟ್ ಕಂಪನಿಗಳು (ಉದಾಹರಣೆಗೆ ಮಾರುತಿ, ಐಸಿಐಸಿಐ, ಎಕ್ಸೈಡ್, ಮತ್ತು ಬೆಂಗಳೂರಿನ ಹಲವು ಪ್ರಮುಖ ಐಟಿ/ಕಾರ್ಪೊರೇಟ್ ಸಂಸ್ಥೆಗಳು) ಭಾಗವಹಿಸುತ್ತಿರುವುದರಿಂದ, ಕರ್ನಾಟಕದ ಯುವಕ-ಯುವತಿಯರು ತಮ್ಮದೇ ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ (ಬೆಂಗಳೂರು, ಮೈಸೂರು, ಮಂಗಳೂರು ಮುಂತಾದೆಡೆ) ತರಬೇತಿ ಪಡೆಯಬಹುದು.

ಅರ್ಹತೆಗಳೇನು?

ಈ ಬಾರಿ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಹೆಚ್ಚಿನ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. 18 ರಿಂದ 25 ವರ್ಷದೊಳಗಿನ ಭಾರತೀಯ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ, ಪಿಯುಸಿ (12th), ಐಟಿಐ (ITI), ಪಾಲಿಟೆಕ್ನಿಕ್ ಡಿಪ್ಲೊಮಾ, ಬಿಎ, ಬಿಕಾಂ, ಬಿಸ್ಸಿ, ಬಿಸಿಎ, ಬಿಬಿಎ, ಬಿಇ/ಬಿಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು. ಅಂತಿಮ ವರ್ಷದ ಪದವಿ (UG) ಮತ್ತು ಸ್ನಾತಕೋತ್ತರ ಪದವಿ (PG) ವಿದ್ಯಾರ್ಥಿಗಳಿಗೂ ಈಗ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಇಂಟರ್ನ್‌ಶಿಪ್ ಅವಧಿ ಮತ್ತು ಕೆಲಸದ ಕ್ಷೇತ್ರಗಳು:

ಈ ಇಂಟರ್ನ್‌ಶಿಪ್ ಅವಧಿಯು 6 ರಿಂದ 9 ತಿಂಗಳು ಇರಲಿದ್ದು, ಅಭ್ಯರ್ಥಿಗಳಿಗೆ ಕೇವಲ ತರಗತಿ ತರಬೇತಿ ನೀಡದೆ ನೇರವಾಗಿ ಕಂಪನಿಗಳ ನೈಜ ಕೆಲಸದ ವಾತಾವರಣದಲ್ಲಿ (Hands-on experience) ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಐಟಿ, ಸಾಫ್ಟ್‌ವೇರ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಟೆಲಿಕಾಂ, ರೀಟೇಲ್ ಸೇರಿದಂತೆ 21 ಕ್ಕೂ ಹೆಚ್ಚು ವಲಯಗಳಲ್ಲಿ ಈ ಅವಕಾಶಗಳಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಆದ PM Internship Portal ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಅತ್ಯಗತ್ಯ. ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿರುವ ಕರ್ನಾಟಕದ ಯುವಕ-ಯುವತಿಯರು ಈ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಿಜಯ್ ಅತ್ಯಂತ ಸಮರ್ಥ ಮುಖ್ಯಮಂತ್ರಿ’: ಮುಕ್ತಕಂಠದಿಂದ ಹೊಗಳಿದ ನಟ ವಿಶಾಲ್ – Kannada News | CM Vijay allows Five shows a day for new Tamil films in TN Actor Vishal reacts

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ತಮಿಳು ಚಿತ್ರರಂಗದ ನೆರವಿಗಾಗಿ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಚಿತ್ರರಂಗದಲ್ಲಿ ಎದುರಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಚಿತ್ರೋದ್ಯಮಿಗಳು ಇತ್ತೀಚೆಗಷ್ಟೇ ಸಿಎಂ ಅವರಿಗೆ ಕೆಲವು ಮನವಿಗಳನ್ನು ಸಲ್ಲಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಇನ್ಮುಂದೆ ರಾಜ್ಯದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮೊದಲ ವಾರದಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳಿಗೆ ಅನುಮತಿ ನೀಡಿದ್ದಾರೆ. ದಳಪತಿ ವಿಜಯ್ ಅವರ ಈ ಮಹತ್ವದ ನಿರ್ಧಾರವನ್ನು ಕಾಲಿವುಡ್ ನಟ ವಿಶಾಲ್ (Vishal) ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿಜಯ್ ಅವರನ್ನು ‘ಅತ್ಯಂತ ಸಮರ್ಥ ನಟ, ರಾಜಕಾರಣಿ’ ಎಂದು ಬಣ್ಣಿಸಿದ್ದಾರೆ.

ಮುಖ್ಯಮಂತ್ರಿಗಳ ನಿರ್ಧಾರದ ಬೆನ್ನಲ್ಲೇ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟ ವಿಶಾಲ್, ‘ನಮ್ಮ ಪ್ರೀತಿಯ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೇ, ಜನಸಾಮಾನ್ಯರ ನೆಚ್ಚಿನ ನಾಯಕ ಹಾಗೂ ರಾಜಕೀಯಕ್ಕೆ ಬಂದ ಅತ್ಯಂತ ಪ್ರಭಾವಶಾಲಿ ನಟರಾದ ನಿಮಗೆ ಧನ್ಯವಾದಗಳು. ಚಿತ್ರರಂಗದ ಸದ್ಯದ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಹೊಸ ಚಿತ್ರಗಳು ಬಿಡುಗಡೆಯಾದ ಮೊದಲ 7 ದಿನಗಳವರೆಗೆ ದಿನಕ್ಕೆ 5 ಪ್ರದರ್ಶನಗಳನ್ನು ಮಾಡಲು ಅನುಮತಿ ಜಾರಿಗೊಳಿಸಿದ್ದಕ್ಕಾಗಿ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.

ನಟ ವಿಶಾಲ್ ಪೋಸ್ಟ್:

ಅಲ್ಲದೆ, ‘ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ವಲಯಗಳಲ್ಲೂ ಇಂತಹ ಹಲವು ಸರ್ಕಾರಿ ಆದೇಶಗಳು ಹೊರಬೀಳಲಿ. ಆ ಮೂಲಕ ಪ್ರಗತಿಪರ ಬೆಳವಣಿಗೆಯಾಗಲಿ ಎಂದು ಎದುರು ನೋಡುತ್ತಿದ್ದೇನೆ. ನಮ್ಮ ಇಡೀ ಚಿತ್ರರಂಗದ ಪರವಾಗಿ ನಿಮಗೆ ದೊಡ್ಡ ಶಿಳ್ಳೆ’ ಎಂದು ವಿಶಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ವಿಜಯ್ ಅವರ ಅಧಿಕೃತ ‘ಎಕ್ಸ್’ ಖಾತೆಯಿಂದ ಈ ಕುರಿತು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಲಾಗಿದೆ. ‘ಚಲನಚಿತ್ರ ರಂಗದ ಗಣ್ಯರು ಏಪ್ರಿಲ್ 16ರಂದು ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಮಂಡಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ, ತಮಿಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಎಲ್ಲಾ ಸಿನಿಮಾಗಳಿಗೆ ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟ ನಟ ಕಮಲ್ ಹಾಸನ್; ಏನದು?

‘ಚಿತ್ರರಂಗದ ಈ ಮನವಿಯನ್ನು ಪರಿಗಣಿಸಿದ ತಮಿಳುನಾಡು ಮುಖ್ಯಮಂತ್ರಿಗಳು, ‘ತಮಿಳುನಾಡು ಸಿನಿಮಾ ಥಿಯೇಟರ್ಸ್ (ರೆಗ್ಯುಲೇಶನ್) ನಿಯಮಾವಳಿ’ಗೆ ತಿದ್ದುಪಡಿ ತಂದಿದ್ದಾರೆ. ಇದರ ಪ್ರಕಾರ, ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ಹೊಸದಾಗಿ ಬಿಡುಗಡೆಯಾಗುವ ತಮಿಳು ಸಿನಿಮಾಗಳಿಗೆ ಬಿಡುಗಡೆಯಾದ ದಿನದಿಂದ ಏಳು ದಿನಗಳವರೆಗೆ ಪ್ರತಿದಿನ ಐದು ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಸ್ಥಳೀಯ ಹಬ್ಬ ಹರಿದಿನಗಳು, ಸಾರ್ವಜನಿಕ ರಜಾದಿನಗಳು, ಶನಿವಾರ ಮತ್ತು ಭಾನುವಾರಗಳಲ್ಲೂ ದಿನಕ್ಕೆ 5 ಪ್ರದರ್ಶನಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:57 pm, Tue, 26 May 26

Source link

ಸಲ್ಮಾನ್ ಖಾನ್ ಖಾಸಗಿ ವಿಡಿಯೋ ವೈರಲ್; ‘ಇದಕ್ಕಿಂತ ಕೆಟ್ಟದ್ದು ಬೇರೇನೂ ಇಲ್ಲ’ ಎಂದ ಫ್ಯಾನ್ಸ್ – Kannada News | Salman Khan secret private video leak raises privacy and security concerns

ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ರಹಸ್ಯವಾಗಿ ಚಿತ್ರೀಕರಿಸಲಾದ ವಿಡಿಯೋವೊಂದು (Salman Khan Private Video) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದರಿಂದ ಸೆಲೆಬ್ರಿಟಿಗಳ ಖಾಸಗಿತನ ಮತ್ತು ಭದ್ರತೆಯ ಕುರಿತು ಮತ್ತೊಮ್ಮೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಈ ಸಣ್ಣ ವಿಡಿಯೋ ಕ್ಲಿಪ್‌ನಲ್ಲಿ, ಸಲ್ಮಾನ್ ಖಾನ್ (Salman Khan) ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಊಟದ ಮೇಜಿನ ಬಳಿ ಊಟ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋದ ಸ್ವರೂಪವನ್ನು ಗಮನಿಸಿದರೆ, ಇದು ಅವರಿಗೆ ತಿಳಿಯದಂತೆ ರಹಸ್ಯವಾಗಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಭಿಮಾನಿಗಳು ಸಲ್ಮಾನ್ ಅವರ ಸರಳತೆ ಮತ್ತು ಶಾಂತ ಸ್ವಭಾವವನ್ನು ಶ್ಲಾಘಿಸುತ್ತಿದ್ದಾರಾದರೂ, ಇನ್ನುಳಿದ ಬಹುತೇಕರು ಅವರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವಿಭಿನ್ನ ಕಾರಣಗಳಿಗಾಗಿ ಹಲವು ಭೂಗತ ಗ್ಯಾಂಗ್‌ಗಳ ಟಾರ್ಗೆಟ್ ಆಗಿರುವ ಸಲ್ಮಾನ್ ಖಾನ್ ಅವರ ಭದ್ರತೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಲ್ಮಾನ್ ಖಾನ್ ಖಾಸಗಿ ವಿಡಿಯೋ:

‘ಈ ವಿಡಿಯೋ ನಿಜವಾಗಿದ್ದು, ಯಾರಾದರೂ ಇದನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಲೀಕ್ ಮಾಡಿದ್ದರೆ, ಇದು ಗಂಭೀರವಾದ ಗೌಪ್ಯತೆ ಮತ್ತು ಭದ್ರತೆಯ ಉಲ್ಲಂಘನೆಯಾಗಿದೆ. ಇದಕ್ಕಿಂತ ಕೆಟ್ಟದ್ದು ಬೇರೇನೂ ಇಲ್ಲ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಲೀಕ್ ಮಾಡಿದವರು ಯಾರು ಮತ್ತು ಇದು ಹೇಗೆ ಹೊರಬಂತು ಎಂಬ ಪ್ರಶ್ನೆ ಉದ್ಭವ ಆಗಿದೆ.

ಈ ವಿಡಿಯೋ ಸೋರಿಕೆಯಿಂದ ಸಲ್ಮಾನ್ ಖಾನ್ ಅವರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆಶ್ಚರ್ಯದ ಸಂಗತಿಯೆಂದರೆ, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಸಲ್ಮಾನ್ ಖಾನ್ ಅವರ ಭದ್ರತೆಯಲ್ಲಿನ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ಹಲವು ಘಟನೆಗಳು ಸರಣಿಯಾಗಿ ನಡೆದಿವೆ. ಕೆಲವೇ ದಿನಗಳ ಹಿಂದೆ, ಪಾಪರಾಜಿಗಳು ಸಲ್ಮಾನ್ ಅವರ ಕಾರನ್ನು ಆಸ್ಪತ್ರೆಯವರೆಗೂ ಹಿಂಬಾಲಿಸಿ, ಅವರ ಗಮನ ಸೆಳೆಯಲು ಜೋರಾಗಿ ಕೂಗಿದಾಗ ಸಲ್ಮಾನ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮಾಯವಾಯ್ತು ಸಲ್ಮಾನ್ ಖಾನ್ ಇನ್​​ಸ್ಟಾಗ್ರಾಮ್ ಖಾತೆ; ಕಾರಣ ಏನು?

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಅವರಿಗೆ ನಿರಂತರವಾಗಿ ಜೀವ ಬೆದರಿಕೆಗಳು ಬರುತ್ತಿರುವ ಇಂತಹ ಕಠಿಣ ಸಮಯದಲ್ಲಿ, ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್ ಮತ್ತು ಲೈಕ್‌ಗಳಿಗಾಗಿ ಒಬ್ಬ ವ್ಯಕ್ತಿಯ ಗೌಪ್ಯತೆ ಮತ್ತು ಭದ್ರತೆಯ ಎಲ್ಲಾ ಗಡಿಗಳನ್ನು ದಾಟುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಮೀನು ವಿವಾದ: ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ

ಧಾರವಾಡ, ಮೇ 26: ಜಮೀನು ವ್ಯಾಜ್ಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದು, ಈ ವೇಳೆ ಹುಬ್ಬಳ್ಳಿಯ ಉದ್ಯಮಿ ಫೆಲೋಮಿನಾ ಅಂಗರಕ್ಷಕರಿಂದ ಯುವಕನ ಕಾಲಿಗೆ ಫೈರಿಂಗ್ ಮಾಡಿರುವಂತಹ ಘಟನೆ ಧಾರವಾಡ ಹೊರವಲಯದ ತ್ರಿಬಲ್ ಐಟಿ ಬಳಿ ನಡೆದಿದೆ. ಅಂಗರಕ್ಷಕರಿಂದ 8 ಸುತ್ತು ಫೈರಿಂಗ್​ ಮಾಡಲಾಗಿದ್ದು, 24 ವರ್ಷದ ವಿಠ್ಠಲ್ ವಾಲೀಕಾರ್ ಕಾಲಿಗೆ ಗುಂಡು ತಗುಲಿದೆ. ಸದ್ಯ ಗಾಯಾಳು ವಿಠ್ಠಲ್​ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಸತಿ ನಿವೇಶನ ಮಾಡಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಮ್ಮ ಪರ ತೀರ್ಪು ಬಂದಿದೆ ಅಂತಾ ಫಿಲೋಮಿನಾ ವಾದಿಸಿದ್ದಾರೆ. ಈ ವೇಳೆ 2 ಗುಂಪುಗಳ ನಡುವೆ ಗಲಾಟೆಯಾಗಿ ಗುಂಡಿನ ದಾಳಿ ನಡೆದಿದೆ. ಸದ್ಯ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಇದೇ ಕರ್ನಾಟಕ ಪೊಲೀಸ್ ತಾಕತ್ತು: ಇಡೀ ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಖದೀಮ ಬೆಂಗಳೂರಿನಲ್ಲಿ ಲಾಕ್ – Kannada News | Karnataka Police Arrest Notorious Thief Linked to Over 100 Thefts Across India in Bengaluru

ಸತ್ತಿಬಾಬು ಅಲಿಯಾಸ್​​ ಸ್ಪೈಡರ್ ಸತೀಶ್, ನರೇಂದರ್, ಸುನಿಲ್ ಕುಮಾರ್Image Credit source: tv9 kannada

ಬೆಂಗಳೂರು, ಮೇ 26: ನಗರದಲ್ಲಿ ಮನೆ ಮತ್ತು ಜ್ಯುವೆಲ್ಲರಿ ಶಾಪ್​​​ನಲ್ಲಿ ಕಳ್ಳತನ (theft) ಮಾಡಿದ್ದ ಮೂವರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು (Whitefield police) ಬಂಧಿಸಿದ್ದಾರೆ. ಸುನಿಲ್ ಕುಮಾರ್, ಸತ್ತಿಬಾಬು ಅಲಿಯಾಸ್​​ ಸ್ಪೈಡರ್ ಸತೀಶ್, ನರೇಂದರ್ ಬಂಧಿತರು. ಕಾರಿನಲ್ಲಿ ಬಂದು ಕಳ್ಳತನ ಮಾಡಿ ಗ್ಯಾಂಗ್​ ಎಸ್ಕೇಪ್ ಆಗಿತ್ತು. ಎರಡು ತಿಂಗಳ ಅಂತರದಲ್ಲಿ ಖದೀಮರು ಕೃತ್ಯವೆಸಗಿದ್ದರು. ಸದ್ಯ ಆರೋಪಿಗಳಿಂದ 1 ಕೋಟಿ ರೂ ಮೌಲ್ಯದ 584 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ವೈಟ್ ಫೀಲ್ಡ್‌ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಮುಖ್ಯಾಂಶಗಳು

  • ವೈಟ್‌ಫೀಲ್ಡ್ ಪೊಲೀಸರ ಬಿಗ್ ಆಪರೇಷನ್ ಕುಖ್ಯಾತ ಕಳ್ಳರ ಬಂಧನ
  • ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿ ಸಿಕ್ಕಬಿದ್ದ ಖತರ್ನಾಕ್ ಖದೀಮ
  • ಸ್ಕೋಡಾ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್​ ಆಗುತ್ತಿದ್ದ ಗ್ಯಾಂಗ್​

ಕಾಂಗ್ರೆಸ್​​ ಮಾಜಿ ಅಧ್ಯಕ್ಷನ ಮನೆಗೆ ಕನ್ನ ಹಾಕಿದ್ದ ಆಸಾಮಿ

ಇನ್ನು ಬಂಧಿತ ಮೂವರ ಪೈಕಿ ಸತ್ತಿ ಬಾಬು ಅಲಿಯಾಸ್​​ ಸ್ಪೈಡರ್ ಸತೀಶ್​​​ ಹಿನ್ನೆಲೆ ಭಯಾನಕವಾಗಿದೆ. ಇತನ ಮೇಲೆ ಇಡೀ ದೇಶದಲ್ಲಿ ನೂರಕ್ಕೂ ಹೆಚ್ಚು ಕೇಸ್​​ಗಳಿವೆ. ಒಡಿಶಾ, ಕೇರಳಂ, ತಮಿಳುನಾಡಿನಲ್ಲಿ ಕಳ್ಳತನ ಮಾಡುತ್ತಿದ್ದ. ಪ್ರತಿಷ್ಠಿತರ ಮನೆಗಳನ್ನೇ ಟಾರ್ಗೆಟ್ ಮಾಡಿ ಸತೀಶ್ ಕಳ್ಳತನ ಮಾಡುತ್ತಿದ್ದ. ಒಡಿಶಾ ಕಾಂಗ್ರೆಸ್​​ ಪ್ರದೇಶ ಸಮಿತಿ ಮಾಜಿ ಅಧ್ಯಕ್ಷ ನಿರಂಜನ್ ಪಟ್ನಾಯಕ್​​ ಮನೆಯಲ್ಲೂ ಸತೀಶ್​​ ಕಳ್ಳತನ‌ ಮಾಡಿದ್ದ. ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಬಂದು ಕೃತ್ಯವೆಸಗಿದ್ದ.

ಗೂಗಲ್​ನಲ್ಲಿ ಸರ್ಚ್ ಮಾಡಿ ಸ್ಕೆಚ್ ಹಾಕುತ್ತಿದ್ದ ಖದೀಮ

ಗೂಗಲ್​​ನಲ್ಲಿ ರಿಚೆಸ್ಟ್ ವಿಲ್ಲಾ ಎಂದು ಸರ್ಚ್ ಮಾಡಿ ಸ್ಕೆಚ್ ಹಾಕುತ್ತಿದ್ದ. ಬಳಿಕ ಸ್ಕೋಡಾ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಇನ್ನು ಈತ ಕಟ್ಟಡದಿಂದ ಕಟ್ಟಡಕ್ಕೆ ಸ್ಟೈಡರ್​ನಂತೆ ಜಂಪ್ ಮಾಡುವುದರಲ್ಲಿ ನಿಸ್ಸಿಮಾ. ಸಾಕ್ಷಿಗಳ ಕೊರತೆಯಿಂದಾಗಿ ಕೇಸ್​​ನಿಂದ ಬಚಾವಾಗುತ್ತಿದ್ದ ಸತೀಶ್​​, ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿ ಪೊಲೀಸರ ಅತಿಥಿ ಆಗಿದ್ದಾನೆ.

ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದವರ ಬಂಧನ

ಮತ್ತೊಂದು ಪ್ರಕರಣದಲ್ಲಿ ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್​​ 26 ರಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯ ಲಾಕರ್​ ಒಡೆಯಲು ಯತ್ನಿಸಿದ ಗ್ಯಾಂಗ್ ಬಳಿಕ ಹೊತ್ತೊಯ್ದಿದ್ದರು. ಬೆಂಗಳೂರಿನ ಬ್ಯಾಡರಹಳ್ಳಿ ಸಿಂಡಿಕೇಟ್​ ಲೇಔಟ್​ನಲ್ಲಿ ಘಟನೆ ನಡೆದಿದ್ದತ್ತು.

ಇದನ್ನೂ ಓದಿ: ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ

ಸದ್ಯ ಬಂಧಿತ ಆರೋಪಿ ಗಂದಾಧರ, ಬಸವ ಮತ್ತು ಕಿರಣ್​ರಿಂದ 500 ಗ್ರಾಂ ತೂಕದ 70 ಲಕ್ಷ ರೂ ಮೌಲ್ಯದ ಬಂಗಾರ, 1.43 ಲಕ್ಷ ನಗದು ಮತ್ತು 750 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿಕಾಸ್ ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ವಾಡ್ ಸಭೆ: ಇಂಡೋ-ಪೆಸಿಫಿಕ್ ಇಂಧನ ಭದ್ರತೆ, ಸಮುದ್ರ ಮಾರ್ಗ ಸಂರಕ್ಷಣೆಗೆ ನಿರ್ಧಾರ – Kannada News | Quad Summit: Indo Pacific Energy Security & Sea Route Protection Decisions

ನವದೆಹಲಿ, ಮೇ 26: ಇಂದು ಮಂಗಳವಾರ ಇಲ್ಲಿ ನಡೆದ ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ‘ಕ್ವಾಡ್’ (Quad) ಒಕ್ಕೂಟದ ವಿದೇಶಾಂಗ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ಹಿಂದೂ-ಮಹಾಸಾಗರ ಮತ್ತು ಪೆಸಿಫಿಕ್ (Indo-Pacific) ವಲಯದಲ್ಲಿ ಮುಕ್ತ ವ್ಯಾಪಾರ, ಇಂಧನ ಭದ್ರತೆ ಹಾಗೂ ಸಮುದ್ರ ಮಾರ್ಗಗಳ ರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮತ್ತು ಜಪಾನ್‌ನ ವಿದೇಶಾಂಗ ಸಚಿವ ತೋಷಿಮಿತ್ಸು ಮೊಟೆಗಿ ಭಾಗವಹಿಸಿದ್ದರು.

ಕ್ವಾಡ್ ಸಭೆಯ 10 ಪ್ರಮುಖ ನಿರ್ಧಾರಗಳು

  1. ಇಂಧನ ಮಾರುಕಟ್ಟೆಯ ಸ್ಥಿರತೆ: ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಏರುಪೇರುಗಳನ್ನು ತಡೆಯಲು ಹಾಗೂ ಮುಕ್ತ, ಪಾರದರ್ಶಕ ಮತ್ತು ಸುರಕ್ಷಿತ ಇಂಧನ ಮಾರುಕಟ್ಟೆಯನ್ನು ನಿರ್ಮಿಸಲು ನಾಲ್ಕೂ ದೇಶಗಳು ಬದ್ಧತೆ ಪ್ರದರ್ಶಿಸಿವೆ.
  2. ಸಪ್ಲೈ ಚೈನ್ (ಪೂರೈಕೆ ಸರಪಳಿ) ವಿಸ್ತರಣೆ: ಇಂಧನ ಉತ್ಪನ್ನಗಳು ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಒಂದು ದೇಶದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸಲು ನಿರ್ಧರಿಸಲಾಗಿದೆ.
  3. ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರ: ಜಾಗತಿಕ ವಾಣಿಜ್ಯದ ಪ್ರಮುಖ ಕೊಂಡಿಯಾಗಿರುವ ‘ಹೊರ್ಮುಜ್ ಜಲಸಂಧಿ’ (Strait of Hormuz) ಸೇರಿದಂತೆ ಎಲ್ಲಾ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಸರಕು ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇರಬಾರದು ಮತ್ತು ಮುಕ್ತ ನೌಕಾಯಾನ ಸ್ವಾತಂತ್ರ್ಯ ಇರಬೇಕು ಎಂದು ಕ್ವಾಡ್ ಒತ್ತಿಹೇಳಿದೆ.
  4. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೆಂಬಲ: ಜಾಗತಿಕ ಮಾರುಕಟ್ಟೆಯ ಏರುಪೇರುಗಳಿಂದಾಗಿ ಇಂಡೋ-ಪೆಸಿಫಿಕ್ ವಲಯದ ಸಣ್ಣ ಮತ್ತು ದ್ವೀಪ ರಾಷ್ಟ್ರಗಳು ಎದುರಿಸುತ್ತಿರುವ ಇಂಧನ ಬಿಕ್ಕಟ್ಟನ್ನು ನಿವಾರಿಸಲು ವಿಶೇಷ ನೆರವು ನೀಡಲು ಒಪ್ಪಿಗೆ ಸೂಚಿಸಲಾಗಿದೆ.
  5. ಪ್ರಾದೇಶಿಕ ಉಪಕ್ರಮಗಳ ಬಲವರ್ಧನೆ: ಜಪಾನ್‌ನ ‘ಪವರ್ ಏಷ್ಯಾ’ (POWERR Asia), ದಕ್ಷಿಣ ಏಷ್ಯಾದಲ್ಲಿ ಭಾರತದ ಇಂಧನ ಭದ್ರತಾ ಪ್ರಯತ್ನಗಳು ಮತ್ತು ಆಗ್ನೇಯ ಏಷ್ಯಾದಲ್ಲಿ ಆಸ್ಟ್ರೇಲಿಯಾದ ಹೂಡಿಕೆ ನಿಧಿಗಳಂತಹ ಪ್ರಾದೇಶಿಕ ಯೋಜನೆಗಳನ್ನು ಪರಸ್ಪರ ಬೆಂಬಲಿಸಲು ನಿರ್ಧರಿಸಲಾಗಿದೆ.
  6. ಇಂಧನ ಭದ್ರತಾ ಕಾರ್ಯಸೂಚಿ: ತಂತ್ರಜ್ಞಾನ, ನಿರ್ವಹಣೆ, ಅಂತರರಾಷ್ಟ್ರೀಯ ಮಾರುಕಟ್ಟೆ ವಿಶ್ಲೇಷಣೆ ಮತ್ತು ತುರ್ತು ಪರಿಸ್ಥಿತಿಯ ಸಿದ್ಧತೆಗಾಗಿ ‘ಕ್ವಾಡ್ ಇಂಡೋ-ಪೆಸಿಫಿಕ್ ಇಂಧನ ಭದ್ರತಾ ಉಪಕ್ರಮ’ವನ್ನು ಆರಂಭಿಸಲಾಗುವುದು.
  7. ಕ್ವಾಡ್ ಫ್ಯುಯೆಲ್ ಸೆಕ್ಯುರಿಟಿ ಫೋರಂ: ಇಂಧನ ಸುರಕ್ಷತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ವಿಶೇಷ ವೇದಿಕೆಯನ್ನು ಸ್ಥಾಪಿಸಲಾಗುವುದು.
  8. ವ್ಯಾಪಾರ ಮಾರ್ಗಗಳ ರಕ್ಷಣೆ: ಜಾಗತಿಕ ಆರ್ಥಿಕ ಸ್ಥಿರತೆಗೆ ಸಮುದ್ರದ ಮೂಲಸೌಕರ್ಯಗಳ ರಕ್ಷಣೆ ಅತ್ಯಗತ್ಯವಾಗಿದ್ದು, ವಾಣಿಜ್ಯ ಹಡಗುಗಳ ಮೇಲೆ ನಿರ್ಬಂಧ ಹೇರುವ ಯಾವುದೇ ಕ್ರಮಗಳನ್ನು ಜಂಟಿಯಾಗಿ ವಿರೋಧಿಸಲಾಗುವುದು.
  9. ಚೀನಾಕ್ಕೆ ಪರೋಕ್ಷ ಸಂದೇಶ: ಈ ಪ್ರದೇಶದಲ್ಲಿ ಚೀನಾದ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, “ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್” ಕಲ್ಪನೆಯನ್ನು ಈ ಒಕ್ಕೂಟ ಪುನರುಚ್ಚರಿಸಿದೆ.
  10. ವಿಶೇಷ ಒಪ್ಪಂದಗಳು: ಈ ಸಭೆಯ ಯಶಸ್ವಿ ಮುಕ್ತಾಯದ ಜೊತೆಗೆ ಭಾರತ ಮತ್ತು ಅಮೆರಿಕ ನಡುವೆ ವಿರಳ ಖನಿಜಗಳ (Rare Earths) ಕುರಿತಾದ ಮಹತ್ವದ ಒಪ್ಪಂದವೂ ಏರ್ಪಟ್ಟಿದೆ.

ಇದನ್ನೂ ಓದಿ: ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

ಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, “ಜಾಗತಿಕ ಮಟ್ಟದಲ್ಲಿ ಪೂರೈಕೆ ಸರಪಳಿ ಬಿಕ್ಕಟ್ಟು, ಉತ್ಪಾದನಾ ವಲಯದಲ್ಲಿನ ಏಕಸ್ವಾಮ್ಯ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸಲು ಕ್ವಾಡ್‌ನಂತಹ ಪಾರದರ್ಶಕ ಪಾಲುದಾರಿಕೆಗಳು ಅತ್ಯಗತ್ಯ. ಇಂಡೋ-ಪೆಸಿಫಿಕ್ ವಲಯದಲ್ಲಿ ನಂಬಿಕಸ್ಥ ಸಂಬಂಧಗಳನ್ನು ವೃದ್ಧಿಸುವುದು ನಮ್ಮ ಗುರಿ,” ಎಂದರು.

ಚೀನಾದ ಪ್ರತಿಕ್ರಿಯೆ: ಈ ಸಭೆಯ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, “ದೇಶಗಳ ನಡುವಿನ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಪೂರಕವಾಗಿರಬೇಕೇ ಹೊರತು, ಯಾವುದೇ ಮೂರನೇ ದೇಶವನ್ನು ಗುರಿಯಾಗಿಸಿಕೊಂಡು ಪ್ರತ್ಯೇಕ ಬಣಗಳನ್ನು (Cliques) ಸೃಷ್ಟಿಸುವಂತಿರಬಾರದು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಏನಿದು ಅಬ್ರಹಾಂ ಒಪ್ಪಂದ? ಇದಕ್ಕೆ ಸಹಿ ಹಾಕಿದರೆ ಪಾಕಿಸ್ತಾನದ ಪಾಸ್​ಪೋರ್ಟ್ ಏಕೆ ಬದಲಾಗುತ್ತದೆ? – Kannada News | Why Pakistan should Need New Passports If The Country Signs Abraham Accords after Donald Trumps pressure

ಇಸ್ಲಮಾಬಾದ್, ಮೇ 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಇಚ್ಛೆಯಂತೆ ಪಾಕಿಸ್ತಾನವು ಇಸ್ರೇಲ್ ಜೊತೆ ಸಂಬಂಧವನ್ನು ಸುಧಾರಿಸುವ ‘ಅಬ್ರಹಾಂ ಒಪ್ಪಂದಕ್ಕೆ’ (Abraham Accords) ಸಹಿ ಹಾಕಿದರೆ ಪಾಕಿಸ್ತಾನದ ಪ್ರಜೆಗಳಿಗೆ ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾಗುತ್ತದೆ ಎಂಬ ಚರ್ಚೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪಾಕಿಸ್ತಾನದ ಪಾಸ್‌ಪೋರ್ಟ್‌ನಲ್ಲಿರುವ ಇಸ್ರೇಲ್ ವಿರೋಧಿ ನಿಯಮ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿರುವ ಇತ್ತೀಚಿನ ಹೇಳಿಕೆಯೇ ಇದಕ್ಕೆ ಕಾರಣ.

ಪ್ರಮುಖ ಮುಖ್ಯಾಂಶಗಳು:

  • ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನಕ್ಕೆ ಟ್ರಂಪ್ ಒತ್ತಡ
  •  ಅಬ್ರಹಾಂ ಒಪ್ಪಂದದ ಮಹತ್ವವೇನು?
  • ಈ ಒಪ್ಪಂದದಿಂದ ಪಾಕ್ ಮೇಲಾಗುವ ಪರಿಣಾಮವೇನು?

ಇರಾನ್ ದೇಶದೊಂದಿಗೆ ನಡೆಯುತ್ತಿರುವ ಪ್ರಾದೇಶಿಕ ಶಾಂತಿ ಮಾತುಕತೆಗಳ ಭಾಗವಾಗಿ ಪಾಕಿಸ್ತಾನ, ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಸೇರಿದಂತೆ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ‘ಅಬ್ರಹಾಂ ಒಪ್ಪಂದ’ಕ್ಕೆ ತಕ್ಷಣವೇ ಸಹಿ ಹಾಕಬೇಕು ಎಂದು ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಕರೆ ನೀಡಿದ್ದರು. ಆದರೆ, ಟ್ರಂಪ್ ಅವರ ಈ ಆಫರ್ ಅನ್ನು ತಕ್ಷಣವೇ ತಿರಸ್ಕರಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, “ನಮ್ಮ ಮೂಲಭೂತ ಸಿದ್ಧಾಂತಗಳಿಗೆ ಧಕ್ಕೆ ತರುವ ಇಂತಹ ಯಾವುದೇ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ಪಾಕಿಸ್ತಾನಿಗಳಿಗೆ ಹೊಸ ಪಾಸ್‌ಪೋರ್ಟ್ ಏಕೆ ಬೇಕಾಗುತ್ತದೆ?:
ಇಷ್ಟಾದರೂ ಒಂದು ವೇಳೆ ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ತಾನವು ಇಸ್ರೇಲ್ ಅನ್ನು ಒಪ್ಪಿಕೊಂಡರೆ ಅಲ್ಲಿನ ಇಡೀ ದೇಶದ ಪಾಸ್‌ಪೋರ್ಟ್ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗುತ್ತದೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ…

ಸಾಂಪ್ರದಾಯಿಕವಾಗಿ ಪಾಕಿಸ್ತಾನದ ಪಾಸ್‌ಪೋರ್ಟ್‌ಗಳ ಮುಖಪುಟ ಅಥವಾ ಒಳಗಿನ ಪುಟದಲ್ಲಿ ಅತ್ಯಂತ ಸ್ಪಷ್ಟವಾಗಿ “ಈ ಪಾಸ್‌ಪೋರ್ಟ್ ಇಸ್ರೇಲ್ ಹೊರತುಪಡಿಸಿ ಪ್ರಪಂಚದ ಎಲ್ಲಾ ದೇಶಗಳಿಗೆ ಮಾನ್ಯವಾಗಿದೆ” (This passport is valid for all countries of the world except Israel) ಎಂದು ಮುದ್ರಿಸಲಾಗಿರುತ್ತದೆ. ಜಗತ್ತಿನಲ್ಲೇ ತನ್ನ ಪಾಸ್‌ಪೋರ್ಟ್‌ನಲ್ಲಿ ಇಸ್ರೇಲ್ ದೇಶದ ಹೆಸರನ್ನು ಈ ರೀತಿ ಬರೆದು, ಅದನ್ನು ಬಹಿಷ್ಕರಿಸಿರುವ ಏಕೈಕ ದೇಶ ಪಾಕಿಸ್ತಾನವಾಗಿದೆ.

ಒಂದು ವೇಳೆ ಅಬ್ರಹಾಂ ಒಪ್ಪಂದಕ್ಕೆ ಪಾಕಿಸ್ತಾನ ಸಹಿ ಹಾಕಿದರೆ, ಇಸ್ರೇಲ್‌ನ ಸಾರ್ವಭೌಮತ್ವವನ್ನು ಒಪ್ಪಿಕೊಂಡಂತಾಗುತ್ತದೆ ಮತ್ತು ಪಾಕಿಸ್ತಾನಿಗಳು ಇಸ್ರೇಲ್‌ಗೆ ಪ್ರಯಾಣಿಸಲು ಅವಕಾಶ ನೀಡಬೇಕಾಗುತ್ತದೆ. ಆಗ ಇಡೀ ದೇಶದ ಕೋಟ್ಯಂತರ ನಾಗರಿಕರ ಹಳೆಯ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿ, ಇಸ್ರೇಲ್ ಹೆಸರಿನ ನಿರ್ಬಂಧವನ್ನು ತೆಗೆದುಹಾಕಿರುವ ಹೊಸ ಮಾದರಿಯ ಪಾಸ್‌ಪೋರ್ಟ್‌ಗಳನ್ನು ವಿತರಿಸಬೇಕಾಗುತ್ತದೆ. ಪಾಕಿಸ್ತಾನಕ್ಕೆ ಇದು ಕೇವಲ ಪೇಪರ್ ಮೇಲಿನ ಬದಲಾವಣೆಯಲ್ಲ. ಇದು ದೇಶದ ಅಸ್ತಿತ್ವ ಮತ್ತು ಸಿದ್ಧಾಂತದ ವಿಷಯವಾಗಿದೆ.

“ಒಂದು ದಿನವೂ ನಂಬಲು ಸಾಧ್ಯವಿಲ್ಲದ ಇಸ್ರೇಲ್ ಜನರೊಂದಿಗೆ ನಾವು ಹೇಗೆ ಒಟ್ಟಿಗೆ ಇರಲು ಸಾಧ್ಯ? ನಮ್ಮ ಪಾಸ್‌ಪೋರ್ಟ್ ನೀತಿಯೇ ಇಸ್ರೇಲ್ ವಿರುದ್ಧದ ನಮ್ಮ ಸಾಂಸ್ಥಿಕ ನಿಲುವನ್ನು ಜಗತ್ತಿಗೆ ಸಾರುತ್ತದೆ” ಎಂದು ಪಾಕ್ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕದಲ್ಲಲ್ಲ, ಪ್ರಧಾನಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಆತಿಥ್ಯ ವಹಿಸಲಿದೆ ಈ ರಾಷ್ಟ್ರ

ಪಾಕಿಸ್ತಾನವು ಆರಂಭದಿಂದಲೂ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರ ರಚನೆಯಾಗುವವರೆಗೆ ಇಸ್ರೇಲ್ ಅನ್ನು ದೇಶ ಎಂದು ಒಪ್ಪಿಕೊಳ್ಳುವುದಿಲ್ಲ ಎಂಬ ಕಠಿಣ ನಿಲುವನ್ನು ಹೊಂದಿದೆ. ಪ್ರಸ್ತುತ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನಸಾಮಾನ್ಯರಲ್ಲಿ ಇಸ್ರೇಲ್ ವಿರುದ್ಧ ಭಾರಿ ಆಕ್ರೋಶವಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಜೊತೆ ಕೈಜೋಡಿಸಲು ಮುಂದಾದರೆ ಪಾಕಿಸ್ತಾನದಲ್ಲಿ ತೀವ್ರ ಸಾರ್ವಜನಿಕ ಪ್ರತಿಭಟನೆಗಳು ಮತ್ತು ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಭೀತಿಯಿದೆ.

ಏನಿದು ಅಬ್ರಹಾಂ ಒಪ್ಪಂದ?:

ಅಬ್ರಹಾಂ ಒಪ್ಪಂದ (Abraham Accords) ಎನ್ನುವುದು ಇಸ್ರೇಲ್ ಮತ್ತು ವಿವಿಧ ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸಲು ಮತ್ತು ಶಾಂತಿಯನ್ನು ಸ್ಥಾಪಿಸಲು ಸಹಿ ಮಾಡಲಾದ ಐತಿಹಾಸಿಕ ಶಾಂತಿ ಒಪ್ಪಂದಗಳಾಗಿವೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದಕ್ಕೆ 2020ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಶ್ವೇತಭವನದಲ್ಲಿ ಸಹಿ ಹಾಕಲಾಯಿತು. ಕಳೆದ ಹಲವು ದಶಕಗಳಿಂದ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವೆ ಇದ್ದ ದ್ವೇಷ ಮತ್ತು ರಾಜತಾಂತ್ರಿಕ ಬಹಿಷ್ಕಾರವನ್ನು ಕೊನೆಗೊಳಿಸುವಲ್ಲಿ ಇದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.

ಯಹೂದಿ ಧರ್ಮ (Judaism) ಮತ್ತು ಇಸ್ಲಾಂ ಧರ್ಮ (Islam) ಎರಡಕ್ಕೂ ಮೂಲ ಪುರುಷ ಅಥವಾ ಪಿತಾಮಹರಾಗಿರುವ ‘ಅಬ್ರಹಾಂ’ ಅವರ ಹೆಸರನ್ನು ಈ ಒಪ್ಪಂದಕ್ಕೆ ಇಡಲಾಗಿದೆ. ಉಭಯ ಧರ್ಮಗಳ ಮತ್ತು ಜನಾಂಗಗಳ ನಡುವಿನ ಸಾಮಾನ್ಯ ಆಧ್ಯಾತ್ಮಿಕ ಹಿನ್ನೆಲೆಯನ್ನು ನೆನಪಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮೊದಲು ಒಪ್ಪಂದಕ್ಕೆ ಸಹಿ ಹಾಕಿದ ಅರಬ್ ರಾಷ್ಟ್ರಗಳೆಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್, ಮೊರಾಕೊ ಮತ್ತು ಸುಡಾನ್.

ಅಬ್ರಹಾಂ ಒಪ್ಪಂದದ ಅಡಿಯಲ್ಲಿ ಅರಬ್ ದೇಶಗಳು ಇಸ್ರೇಲ್ ಅನ್ನು ಅಧಿಕೃತವಾಗಿ ಒಂದು ಸಾರ್ವಭೌಮ ದೇಶ ಎಂದು ಮಾನ್ಯ ಮಾಡಿದವು. ಉಭಯ ದೇಶಗಳಲ್ಲಿ ಪರಸ್ಪರ ರಾಯಭಾರ ಕಚೇರಿಗಳನ್ನು ತೆರೆಯಲಾಯಿತು. ಇಸ್ರೇಲ್ ಮತ್ತು ಯುಎಇ (UAE) ನಡುವೆ ನೇರ ವಿಮಾನಯಾನ ಸೇವೆಗಳು ಆರಂಭವಾದವು. ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಬಿಲಿಯನ್​ಗಟ್ಟಲೆ ಡಾಲರ್ ಹೂಡಿಕೆ ಹಾಗೂ ವ್ಯಾಪಾರ ಒಪ್ಪಂದಗಳು ನಡೆದವು. ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಹಿರಿಯ ಸಲಹೆಗಾರರಾಗಿದ್ದ ಜ್ಯಾರೆಡ್ ಕುಶ್ನರ್ ಈ ಒಪ್ಪಂದವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ರಾಜತಾಂತ್ರಿಕ ಪಾತ್ರ ವಹಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹಸಚಿವಾಲಯದಿಂದ ಬ್ರೇಕ್​​: ಕರ್ನಾಟಕ ಸರ್ಕಾರಕ್ಕೆ ಹಿನ್ನಡೆ – Kannada News | Setback for Karnataka Government: Home Ministry Halts Hate Speech Bill, Cites Existing BNS Provisions

ರಾಜ್ಯ ಸರ್ಕಾರಕ್ಕೆ ಹಿನ್ನಡೆImage Credit source: Tv9 Kannada

ನವದೆಹಲಿ/ಬೆಂಗಳೂರು, ಮೇ 26: ಕರ್ನಾಟಕದ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಮಿತ್​​ ಶಾ ನೇತೃತ್ವದ ಗೃಹ ಸಚಿವಾಲಯವು ಬ್ರೇಕ್​​ ಹಾಕಿದ್ದು, ಈಗಿರುವ ಕಾನೂನು ವ್ಯವಸ್ಥೆಯೇ ಸಾಕಷ್ಟು ಸಮರ್ಪಕವಾಗಿದೆ. ಆ ಕಾರಣಕ್ಕೆ ಹೊಸ ಕಾನೂನು ಅಗತ್ಯವಿಲ್ಲದಿರಬಹುದು ಎಂದು ಹೇಳಿದೆ. ಈ ಕುರಿತ ತನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಇದೇ ವರ್ಷ ಫೆಬ್ರವರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಸೂದೆಗೆ ಅನುಮೋದನೆ ನೀಡಲು ನಿರಾಕರಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಗಾಗಿ ಮಸೂದೆಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಕಠಿಣ ನಿಯಮಗಳನ್ನು ಒಳಗೊಂಡಿದ್ದ ಈ ಮಸೂದೆ ಪ್ರಕಾರ, ದ್ವೇಷ ಅಪರಾಧ ಅಥವಾ ದ್ವೇಷ ಭಾಷಣ ಮಾಡಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸುವ ಅವಕಾಶವಿತ್ತು. ಮರು ಅಪರಾಧಕ್ಕೆ ಏಳು ವರ್ಷಗಳವರೆಗೆ ಶಿಕ್ಷೆ ಮತ್ತು 1 ಲಕ್ಷದ ವರೆಗೆ ದಂಡ ವಿಧಿಸುವ ಬಗ್ಗೆಯೂ ಮಸೂದೆಯಲ್ಲಿ ಸೇರಿಸಲಾಗಿತ್ತು.

ಇದನ್ನೂ ಓದಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? ಇಲ್ಲಿದೆ ಮಾಹಿತಿ

ಗೃಹ ಸಚಿವಾಲಯ ಹೇಳಿದ್ದೇನು?

ಮೇ 12ರಂದು ಕಳುಹಿಸಿದ ಪತ್ರದಲ್ಲಿ ಗೃಹ ಸಚಿವಾಲಯ, ಮಸೂದೆಯಲ್ಲಿ ಪರಿಹರಿಸಲು ಯತ್ನಿಸಿರುವ ವಿಷಯಗಳು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಇತರ ಕಾನೂನುಗಳಲ್ಲೇ ಇವೆ. ಹೀಗಾಗಿ ಪ್ರತ್ಯೇಕವಾಗಿ ರಾಜ್ಯಗಳು ಕಾನೂನು ಜಾರಿ ಮಾಡುವುದರಿಂದ ಪುನರಾವರ್ತನೆ ಮತ್ತು ಏಕರೂಪತೆಯ ಕೊರತೆ ಉಂಟಾಗಬಹುದು ಎಂದು ತಿಳಿಸಿದೆ.

2025ರ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಈ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಲಾಗಿತ್ತು. ಈ ವೇಳೆ ಸ್ಪೀಕರ್ ಯು.ಟಿ. ಖಾದರ್​​ ಹೆಚ್ಚಿನ ಚರ್ಚೆಗೆ ಅಥವಾ ಸದನ ಸಮಿತಿಗೆ ಒಪ್ಪದ ಹಿನ್ನೆಲೆ ವಿರೋಧ ಪಕ್ಷ ಬಿಜೆಪಿ ವಾಕೌಟ್ ನಡೆಸಿತ್ತು. ಜನವರಿಯಲ್ಲಿ ರಾಜ್ಯಪಾಲ ಗೆಹ್ಲೋಟ್ ಕೂಡ ಮಸೂದೆಯನ್ನು ಹಿಂದಿರುಗಿಸಿ, ಇದು ಸಂವಿಧಾನಬದ್ಧ ಪ್ರಜಾಸತ್ತಾತ್ಮಕ ಚರ್ಚೆಗಳ ಮೇಲೆ ಗಂಭೀರ  ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:22 pm, Tue, 26 May 26

Source link

Exit mobile version