ದಶಕಗಳ ಕನಸು ನನಸಾಗುವ ಕಾಲ: ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಡಿಪಿಆರ್ ಸಲ್ಲಿಕೆ; ಎಲ್ಲೆಲ್ಲಿ ಸ್ಟಾಪ್? – Kannada News | Bengaluru Tumakuru Namma Metro DPR Submitted to Government; Project Moves Closer to Reality

ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಡಿಪಿಆರ್ ಸಲ್ಲಿಕೆImage Credit source: x.com/DrParameshwara

ಬೆಂಗಳೂರು, ಮೇ 25: ನಮ್ಮ ಮೆಟ್ರೋ ಪ್ರಯಾಣಿಕರಿಗೆ, ಅದರಲ್ಲೂ ಪ್ರಮುಖವಾಗಿ ತುಮಕೂರು ಭಾಗದ ಜನತೆಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ. ಹಲವು ದಶಕಗಳ ಕನಸಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗ ನಿರ್ಮಾಣದ ಪ್ರಕ್ರಿಯೆಗೆ ಬಿಎಂಆರ್​​ಸಿಎಲ್​​ (BMRCL) ಈ ಯೋಜನೆಯ ವಿವರವಾದ ಯೋಜನಾ ವರದಿ ಅಂದರೆ ಡಿಪಿಆರ್ (DPR) ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಬೆಂಗಳೂರು ಟು ತುಮಕೂರು ಮೆಟ್ರೋ ಮಾರ್ಗದ ಡಿಪಿಆರ್ ಸಲ್ಲಿಕೆ
  • ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಜಾರಿಯಾಗಲಿರುವ ಯೋಜನೆ
  • ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂತಸ

ಕನಸು ನನಸಾಗುವ ಕಾಲ ಸನ್ನಿಹಿತ

ಬೆಂಗಳೂರು ಹಾಗೂ ತುಮಕೂರು ನಡುವೆ ನಮ್ಮ ಮೆಟ್ರೋ ರೈಲು ಓಡಾಡಬೇಕು ಎಂಬ ಸಾರ್ವಜನಿಕರ ದಶಕಗಳ ಕನಸು ನನಸಾಗುವ ದಿನಗಳು ಹತ್ತಿರ ಬಂದಿವೆ. ಮಾದವರ ನಿಲ್ದಾಣದಿಂದ ತುಮಕೂರಿನವರೆಗೆ ಹಸಿರು ಮಾರ್ಗದ ಬರೋಬ್ಬರಿ 59.60 ಕಿ.ಮೀ ವಿಸ್ತರಣೆಗಾಗಿ ಬಿಎಂಆರ್​ಸಿಎಲ್ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಹಸ್ತಾಂತರಿಸಿದೆ. ಹೊಸ ಕಾರಿಡಾರ್ ಪ್ರಮುಖವಾಗಿ ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದ್ದು, ಈ ಭಾಗದ ನಿತ್ಯ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ.

ಮೆಟ್ರೋ ಪ್ರಯಾಣಿಕರು ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರಾದ ನಾಗರಾಜ್​, ಈ ಮಾರ್ಗದಿಂದ ತುಂಬಾ ಸಹಾಯ ಆಗಲಿದೆ. ಈ ಮಾರ್ಗದಲ್ಲಿ ತುಂಬಾ ಟ್ರಾಫಿಕ್ ಇರುತ್ತದೆ. ನೆಲಮಂಗಲ ದಾಟಿ ಬರಲು ಆಗುವುದಿಲ್ಲ. ತುಮಕೂರಿಗೆ ಮೆಟ್ರೋ ಸಂಚಾರ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದ್ದಾರೆ.

ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗದ ಸಂಭಾವ್ಯ ನಿಲ್ದಾಣಗಳು ಹೀಗಿವೆ

ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ಸ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಮತ್ತು ಶಿರಾ ಗೇಟ್‌.

ಬರೋಬ್ಬರಿ 20,649 ಕೋಟಿ ರೂ ವೆಚ್ಚ

ಇನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತಕ್ಕೆ ಬರೋಬ್ಬರಿ 20,649 ಕೋಟಿ ರೂ ವೆಚ್ಚವಾಗುವ ನಿರೀಕ್ಷೆಯಿದೆ. 2024-25ರ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಯೋಜನೆ ಪೂರ್ಣಗೊಂಡರೆ ಈ ಮಾರ್ಗದಲ್ಲಿ ಪ್ರತಿ ಗಂಟೆಗೆ, ಒಂದು ದಿಕ್ಕಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯೋಜನೆ ಜಾರಿಯಾಗುತ್ತಿರುವುದಕ್ಕೆ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉತ್ತರ ಜಿಲ್ಲೆಯಾಗುವುದೇ ತುಮಕೂರು? ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?

ಒಟ್ಟಾರೆಯಾಗಿ ಬೆಂಗಳೂರು ಟು ತುಮಕೂರು ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿದ್ದ ತೀವ್ರ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್‌ಗೆ ಶಾಶ್ವತ ಪರಿಹಾರ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:09 pm, Mon, 25 May 26

Source link

ನಾಯಕತ್ವ ಬದಲಾವಣೆಯ ಬಹುಚರ್ಚಿತ ಸಂಗತಿ ಮಧ್ಯೆ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ – Kannada News | Karnataka Power Tussle: CM Siddaramaiah And K Venkatest gets Extra portfolio Amide cabinet reshuffle

ಬೆಂಗಳೂರು, ಮೇ 25): ರಾಜ್ಯದಿಂದ ಹಿಡಿದು ಹೈಕಮಾಂಡ್​ವರೆಗೂ ಕ್ಷಿಪ್ರ ಬೆಳವಣಿಗೆಗಳು ಆಗುತ್ತಿದೆ. ಇಷ್ಟು ದಿನ ನಡೆದ ಅಧಿಕಾರ ಹಂಚಿಕೆ ಪಗಡೆಯಾಟಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಸಿಎಂ ಕುರ್ಚಿ ಫೈಟ್ ಕಂಪ್ಲೀಟ್ ಹೈಕಮಾಂಡ್​ ಅಂಗಳಕ್ಕೆ ಶಿಫ್ಟ್ ಆಗಿದ್ದು, ಸಿಎಂ ಸಿದ್ದರಾಮಯ್ಯ,  (Siddaramaiah) ಡಿಕೆ ಶಿವಕುಮಾರ್  (DK Shivakumar)ಸೇರಿದಂತೆ ಸಚಿವರ ಹಾಗೂ ಕಾಂಗ್ರೆಸ್ (Congress) ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಬ್ರೇಕ್ ಹಾಕುತ್ತಾ ಅಥವಾ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡುತ್ತಾ ಎನ್ನುವ ಕುತೂಹಲ ಇದ್ದೇ ಇದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೌದು…ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ ಹಾಗೂ ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಖಾತೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬಗ್ಗೆ ರಾಜಭವನದಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕ ಕಾಂಗ್ರೆಸ್​​​ನಲ್ಲಿ ಗರಿಗೆದರಿ ರಾಜಕೀಯ ಬೆಳವಣಿಗೆಗಳು
  • ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಯತ್ತ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
  • ಈ ಮಧ್ಯೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ
  • ಹೆಚ್ಚುವರಿ ಖಾತೆ ಉಳಿಸಿಕೊಂಡ ಸಿಎಂ ಸಿದ್ದರಾಮಯ್ಯ
  • ದಿವಂಗತ ಸುಧಾರಕ್ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವೆಂಕಟೇಶ್ ಹೆಗಲಿಗೆ

ಸುಧಾಕರ್ ಖಾತೆ ವೆಂಕಟೇಶ್ ಹೆಗಲಿಗೆ

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಅವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಹೀಗಾಗಿ ಈ ಇಲಾಖೆಯ ಹೊಣೆಯನ್ನು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‌ (K Venkatesh) ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಇದನ್ನೂ ನೋಡಿ: ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿಂದಿದೆ ರೋಚಕ ಸ್ಟೋರಿ

ಇನ್ನು ಕೆ.ಎನ್‌.ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಹಕಾರ ಇಲಾಖೆ ಮತ್ತು ಬಿ.ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಯುವ ಜನ ಕ್ರೀಡೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಖಾತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಯಾರಿಗೂ ಹಂಚಿಕೆ ಮಾಡದೆ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಸಿಎಂ ಬಳಿ ಇರುವ ಖಾತೆಗಳು ಯಾವುವು?

ಸಿಎಂ ಸಿದ್ದರಾಮಯ್ಯ ಅವರು ಪ್ರಸ್ತುತ ಹಣಕಾಸು, ಸಂಸದೀಯ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಗುಪ್ತಚರ ಇಲಾಖೆ, ವಾರ್ತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಸಹಕಾರ ಖಾತೆ (ಕೃಷಿ ಮಾರುಕಟ್ಟೆ ಹೊರತುಪಡಿಸಿ) ಅನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಇಲಾಖೆ ಹಂಚಿಕೆಯಾಗದ ಉಳಿದೆಲ್ಲಾ ಖಾತೆಗಳ ಜವಾಬ್ದಾರಿಯೂ ಸಿಎಂ ಅವರ ಬಳಿಯೇ ಮುಂದುವರಿಯಲಿದೆ.

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂಬ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ದೆಹಲಿಗೆ ಪ್ರವಾಸ ಮಾಡಲಿದ್ದಾರೆ. ಸಂಪುಟ ಪುನಾರಚನೆ ಆದಲ್ಲಿ ಕೆಲವು ಸಚಿವರನ್ನು ಕೈ ಬಿಡಲಾಗುವುದು ಎಂಬ ಚರ್ಚೆಗಳು ನಡೆಯುತ್ತಿದ್ದವು. ಈ ಸಂಭಾವ್ಯ ಪಟ್ಟಿಯಲ್ಲಿ ಕೆ ವೆಂಕಟೇಶ್ ಅವರ ಹೆಸರೂ ಇತ್ತು. ಆದರೆ ಇದೀಗ ವೆಂಕಟೇಶ್ ಅವರಿಗೆ ಹೆಚ್ಚುವರಿ ಖಾತೆ ನೀಡಲಾಗಿದೆ. ಈ ಮೂಲಕ ಸಚಿವ ಸಂಪುಟ ಪುನಾರಚನೆ ಆಗುತ್ತೋ ಇಲ್ವಾ ಎನ್ನುವ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಸಂಪುಟ ಪುನಾರಚನೆ ಆಗಬೇಕೆಂದು ಶಾಸಕರು ಒತ್ತಾಯಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಾತ್ರವಲ್ಲದೇ ಹಲವು ಶಾಸಕರು ದೆಹಲಿಯತ್ತ ಹೊರಟ್ಟಿದ್ದಾರೆ. ಒಂದು ವೇಳೆ ಸಂಪುಟ ಪುನಾರಚನೆ ಆಗದಿದ್ದರೇ ಸಚಿವಾಕಾಂಕ್ಷಿಗಳ ಮುಂದಿನ ನಡೆ ಏನು ಎಂಬುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Mon, 25 May 26

Source link

ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ – Kannada News | Dharmendra awarded Padma Vibhushan posthumously Wife Hema Malini receives award on behalf oh him

‘ಪದ್ಮ ಪ್ರಶಸ್ತಿ 2026’ ಪ್ರದಾನ ಸಮಾರಂಭವು ಇಂದು (ಮೇ 25) ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಚಿತ್ರರಂಗ, ಸಂಗೀತ, ರಂಗಭೂಮಿ ಮುಂತಾದ ಕ್ಷೇತ್ರದ ಅನೇಕ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ವರ್ಷ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಇದರಲ್ಲಿ 5 ಪದ್ಮ ವಿಭೂಷಣ (Padma Vibhushan) , 13 ಪದ್ಮ ಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಮನರಂಜನಾ ಕ್ಷೇತ್ರದಿಂದ ದಿವಂಗತ ನಟ ಧರ್ಮೇಂದ್ರ (Dharmendra) ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಧರ್ಮೇಂದ್ರ ಪರವಾಗಿ ಅವರ ಪತ್ನಿ ಹೇಮಾ ಮಾಲಿನಿ (Hema Malini) ಅವರು ಇಂದು (ಮೇ 25) ಪ್ರಶಸ್ತಿ ಸ್ವೀಕರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ – Kannada News | Beyond Fuel: Crude Oil Demand to Soar Despite EVs & Green Shift – Petrochemicals Drive It

ಜಗತ್ತಿನಲ್ಲಿ ಯುದ್ಧ ಆಗೋದು ಒಂದು ಹೆಣ್ಣಿಗಾಗಿ, ಮತ್ತೊಂದು ಮಣ್ಣಿಗಾಗಿ. ಇಲ್ಲಿ ಮಣ್ಣು ಎಂದರೆ ಸಂಪನ್ಮೂಲ. ಕಳೆದ ಕೆಲ ಶತಮಾನಗಳಿಂದ ಜಗತ್ತಿನ ಹೆಚ್ಚಿನ ಯುದ್ಧಗಳು ಸಂಪನ್ಮೂಲಗಳಿಗಾಗಿ ನಡೆದಿವೆ. ಎಂಜಿನ್​ಗಳ ಕಾಲ ಬಂದ ಬಳಿಕ ಕಚ್ಚಾ ತೈಲ ಬಹಳ ಪ್ರಮುಖ ಸಂಪನ್ಮೂಲವೆನಿಸಿದೆ. ತೈಲಕ್ಕಾಗಿ (Oil) ಸಾಲು ಸಾಲು ಯುದ್ಧಗಳೇ ಸಂಭವಿಸಿವೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಆಕ್ರಮಣಕಾರಿ ವರ್ತನೆ, 40ರ ದಶಕದಲ್ಲಿ ಬೊಲಿವಿಯಾ, ಪರಗ್ವೆ ನಡುವಿನ ಯುದ್ಧ, 90ರ ದಶಕದ ಇರಾಕ್ ಕುವೇತ್ ಯುದ್ಧ; ನಂತರ ಇರಾಕ್ ಮೇಲೆ ಅಮೆರಿಕದ ಆಕ್ರಮಣ, ನೈಜೀರಿಯಾ ಹಿಂಸಾಚಾರ, ಇರಾನ್ ಇರಾಕ್ ಯುದ್ಧ, ಇರಾನ್ ಅಮೆರಿಕ ಯುದ್ಧ, ರಷ್ಯಾ ಉಕ್ರೇನ್ ಯುದ್ಧ ಇವೆಲ್ಲವೂ ತೈಲದ ಮೇಲೆ ನಿಯಂತ್ರಣ ಸಾಧಿಸಲು ಆಗಿರುವಂಥವು.

ಇದೇ ವೇಳೆ, ಜಗತ್ತು ಸದ್ಯ ಹಸಿರು ಇಂಧನ (Green Energy), ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ವೇಗವಾಗಿ ಹೆಜ್ಜೆ ಇಡುತ್ತಿದೆ. ಜಾಗತಿಕ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂಧನಕ್ಕಾಗಿ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡುವ ಪಣವನ್ನು ಹಲವು ದೇಶಗಳು ತೊಟ್ಟಿವೆ. ಅನೇಕ ಜಾಗತಿಕ ಸಂಘರ್ಷಗಳು ಮತ್ತು ರಾಜಕೀಯ ತಂತ್ರಗಳು ತೈಲದ (Oil) ಮೇಲಿನ ಹಿಡಿತಕ್ಕಾಗಿಯೇ ನಡೆದಿದ್ದವು ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ. ಆದರೆ, ವಾಹನಗಳು ಬ್ಯಾಟರಿ ಚಾಲಿತವಾದರೆ, ತೈಲದ ಬೇಡಿಕೆ ಸಂಪೂರ್ಣವಾಗಿ ಶೂನ್ಯವಾಗುತ್ತದೆಯೇ? ಎಂಬುದು ದೊಡ್ಡ ಪ್ರಶ್ನೆ. ಜಾಗತಿಕ ಇಂಧನ ತಜ್ಞರ ವರದಿಯ ಪ್ರಕಾರ, ಉತ್ತರ ಖಂಡಿತ ಇಲ್ಲ.

ಕಚ್ಚಾ ತೈಲ ಎನ್ನುವುದು ಕೇವಲ ವಾಹನ ಓಡಿಸುವ ಇಂಧನವಲ್ಲ; ಅದು ಆಧುನಿಕ ಜಗತ್ತಿನ ಭೌತಿಕ ಅಗತ್ಯಗಳನ್ನು ಪೂರೈಸುವ ಕಣ್ಣಿಗೆ ಕಾಣದ ಶಕ್ತಿ. ಜಗತ್ತು ಸೌರಶಕ್ತಿ (Solar) ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ಮುಖ ಮಾಡುತ್ತಿದ್ದರೂ ಕಚ್ಚಾ ತೈಲದ (Crude Oil) ಬೇಡಿಕೆ ಕಡಿಮೆಯಾಗುತ್ತಿಲ್ಲ. ಏಕೆಂದರೆ ನಮ್ಮ ಬೆಳಗಿನ ಟೂತ್‌ಬ್ರಷ್‌ನಿಂದ ಹಿಡಿದು ರಾತ್ರಿಯ ಹೊದಿಕೆಯವರೆಗೆ ಎಲ್ಲದರಲ್ಲೂ ತೈಲದ ಅಂಶ ಅಡಗಿದೆ.

ಪೆಟ್ರೋಕೆಮಿಕಲ್ಸ್: ತೈಲ ಉದ್ಯಮದ ಹೊಸ ಅಸ್ತ್ರ

ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜಾಗತಿಕವಾಗಿ ಕಚ್ಚಾ ತೈಲದ ಒಟ್ಟು ಬೇಡಿಕೆಯಲ್ಲಿ ಶೇ. 12 ಕ್ಕಿಂತ ಹೆಚ್ಚು ಭಾಗ ಪೆಟ್ರೋಕೆಮಿಕಲ್ಸ್ (Petrochemicals) ಉದ್ಯಮಕ್ಕೆ ಬಳಕೆಯಾಗುತ್ತಿದೆ. ವಾಹನಗಳಿಗೆ ಇಂಧನದ ಬೇಡಿಕೆ ಕಡಿಮೆಯಾದರೂ, ಪ್ಲಾಸ್ಟಿಕ್, ರಬ್ಬರ್ ಮತ್ತು ರಾಸಾಯನಿಕಗಳ ತಯಾರಿಕೆಯಲ್ಲಿ ತೈಲದ ಬೇಡಿಕೆ ಮುಂದಿನ ದಶಕಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

ಕಚ್ಚಾ ತೈಲವನ್ನು ಇಂಧನ ಹೊರತುಪಡಿಸಿ ಇನ್ಯಾವುದಕ್ಕೆ ಬಳಸುತ್ತಾರೆ?

ಕಚ್ಚಾ ತೈಲವನ್ನು ಶುದ್ಧೀಕರಿಸಿದಾಗ (Refining) ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ, ಎಲ್​ಪಿಜಿ ಇತ್ಯಾದಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತವೆ. ಹಾಗೆಯೇ, ಕಚ್ಚಾ ತೈಲದ ರೀಫೈನಿಂಗ್​ನಿಂದ ಹಲವು ಉಪ ಉತ್ಪನ್ನಗಳನ್ನು (Petrochemicals) ಸಿಗುತ್ತವೆ. ಇವುಗಳನ್ನು ಸಾವಿರಾರು ದೈನಂದಿನ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

  • ಪ್ಲಾಸ್ಟಿಕ್ ಮತ್ತು ಪಾಲಿಮರ್‌ಗಳು (Plastics): ಇಂದು ಜಗತ್ತಿನಲ್ಲಿ ಬಳಕೆಯಾಗುವ ಶೇ. 99 ರಷ್ಟು ಪ್ಲಾಸ್ಟಿಕ್ ಕಚ್ಚಾ ತೈಲದಿಂದಲೇ ಬರುತ್ತದೆ. ಮೊಬೈಲ್ ಫೋನ್, ಕಂಪ್ಯೂಟರ್ ಕೇಸಿಂಗ್, ಬಾಟಲಿಗಳು, ಪೈಪ್‌ಗಳು ಎಲ್ಲವೂ ಇದರ ಕೊಡುಗೆ.
  • ಕೃತಕ ಬಟ್ಟೆಗಳು (Synthetic Fibers): ನಾವು ಧರಿಸುವ ಪಾಲಿಯೆಸ್ಟರ್ (Polyester), ನೈಲಾನ್ (Nylon), ಮತ್ತು ಆಕ್ರಿಲಿಕ್ ಬಟ್ಟೆಗಳು ಪೆಟ್ರೋಲಿಯಂನಿಂದ ತಯಾರಾಗುತ್ತವೆ.
  • ರಸ್ತೆ ಡಾಂಬರು (Asphalt/Bitumen): ರಸ್ತೆಗಳನ್ನು ನಿರ್ಮಿಸಲು ಬಳಸುವ ಕಪ್ಪು ಡಾಂಬರು ತೈಲ ಶುದ್ಧೀಕರಣದ ಕೊನೆಯ ಹಂತದಲ್ಲಿ ಸಿಗುವ ಒಂದು ಗಟ್ಟಿ ಉಪ ಉತ್ಪನ್ನವಾಗಿದೆ.
  • ಔಷಧಗಳು (Pharmaceuticals): ಆಸ್ಪಿರಿನ್‌ನಂತಹ ನೋವು ನಿವಾರಕಗಳು, ಜೀವಸತ್ವಗಳು (Vitamins), ಮತ್ತು ಅನೇಕ ವೈದ್ಯಕೀಯ ಕ್ಯಾಪ್ಸುಲ್‌ಗಳ ಕವಚಗಳನ್ನು ತಯಾರಿಸಲು ಪೆಟ್ರೋಕೆಮಿಕಲ್ಸ್ ಬಳಸಲಾಗುತ್ತದೆ.
  • ಕೃಷಿ ಗೊಬ್ಬರ ಮತ್ತು ಕೀಟನಾಶಕಗಳು (Fertilizers & Pesticides): ಜಗತ್ತಿನಾದ್ಯಂತ ಆಹಾರ ಉತ್ಪಾದನೆಗೆ ಬಳಸುವ ರಾಸಾಯನಿಕ ಗೊಬ್ಬರಗಳು (ಮುಖ್ಯವಾಗಿ ಅಮೋನಿಯಾ ಮೂಲದ ಸಾರಜನಕ ಗೊಬ್ಬರಗಳು) ಮತ್ತು ಕೀಟನಾಶಕಗಳಿಗೆ ತೈಲವೇ ಮೂಲ.
  • ಸೌಂದರ್ಯವರ್ಧಕಗಳು (Cosmetics): ವ್ಯಾಸಲಿನ್ (Petroleum Jelly), ಲಿಪ್‌ಸ್ಟಿಕ್, ಪರ್ಫ್ಯೂಮ್, ಶಾಂಪೂ, ಮತ್ತು ಮುಖಕ್ಕೆ ಹಚ್ಚುವ ಕ್ರೀಮ್‌ಗಳಲ್ಲಿ ತೈಲದ ಅಂಶ ಇರುತ್ತದೆ.
  • ರಬ್ಬರ್ (Synthetic Rubber): ವಾಹನಗಳ ಟೈರ್‌ಗಳು, ಶೂಗಳ ಸೋಲ್ (Sole), ಮತ್ತು ಸೀಲಿಂಗ್ ಗ್ಯಾಸ್ಕೆಟ್‌ಗಳನ್ನು ಮಾಡಲು ಬಳಸುವ ಕೃತಕ ರಬ್ಬರ್ ತೈಲದಿಂದ ಬರುತ್ತದೆ.
  • ಗೃಹಬಳಕೆ ವಸ್ತುಗಳು: ಪೇಂಟ್‌ಗಳು (Paints), ಡಿಟರ್ಜೆಂಟ್ ಸೋಪುಗಳು, ಮೇಣದಬತ್ತಿಗಳು (Paraffin Wax), ಮತ್ತು ನಯಗೊಳಿಸುವ ಎಣ್ಣೆಗಳು (Lubricants).

ಇದನ್ನೂ ಓದಿ: ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್

ಇವಿ ಕಾರಿನ ಮುಂಭಾಗದ ಡ್ಯಾಶ್‌ಬೋರ್ಡ್, ಒಳಗಿನ ಸೀಟ್‌ಗಳ ಮೇಲಿರುವ ಕೃತಕ ಚರ್ಮ (Synthetic Leather), ಕಾರಿನ ಸ್ಟೀರಿಂಗ್, ಸೋಲಾರ್ ಪ್ಯಾನಲ್‌ಗಳನ್ನು ಜೋಡಿಸಲು ಬಳಸುವ ಪ್ಲಾಸ್ಟಿಕ್ ಕೋಟಿಂಗ್ ಇತ್ಯಾದಿ ಅಸಂಖ್ಯೆಯಷ್ಟು ಕೆಲಸಗಳಿಗೆ ಮತ್ತು ವಸ್ತುಗಳ ತಯರಿಕೆಗೆ ಪೆಟ್ರೋಕೆಮಿಕಲ್ಸ್ ಅನ್ನು ಬಳಸಲಾಗುತ್ತದೆ.

ಹೀಗಾಗಿ, ಕಾರುಗಳು ಬ್ಯಾಟರಿಯಿಂದ ಓಡಿದರೂ, ವಿಮಾನಗಳು ಮತ್ತು ಕೈಗಾರಿಕೆಗಳು ಹಾಗೂ ದೈನಂದಿನ ವಸ್ತುಗಳ ಉತ್ಪಾದನೆಗೆ ತೈಲವು ಇನ್ನೂ ದಶಕಗಳ ಕಾಲ ಅನಿವಾರ್ಯವಾಗಿ ಉಳಿಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳು ವ್ಯಕ್ತಿಯ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Chanakya says that these qualities completely destroy a person’s respect

ಶ್ರೀಮಂತಿಕೆ ಮಾತ್ರವಲ್ಲ ಸಮಾಜದಲ್ಲಿ ಗೌರವವೂ (reputation) ಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ಗೌರವವನ್ನು ಗಳಿಸುವಲ್ಲಿ ವ್ಯಕ್ತಿಯ ನಡವಳಿಕೆ ಮತ್ತು ಅಭ್ಯಾಸಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೌದು ಒಳ್ಳೆಯ ನಡವಳಿಕೆ, ಅಭ್ಯಾಸಗಳು ಸಮಾಜದಲ್ಲಿ ವ್ಯಕ್ತಿಯ ಗೌರವವನ್ನು ಹೆಚ್ಚಿಸುವಂತೆ ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು, ಕೆಲವೊಂದು ದೈನಂದಿನ ಕೆಟ್ಟ ಅಭ್ಯಾಸಗಳು ಕುಟುಂಬ, ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ವ್ಯಕ್ತಿಯ ಗೌರವನ್ನು ಹಾಳು ಮಾಡುತ್ತದೆ ಮತ್ತು ಆ ವ್ಯಕ್ತಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ನಿಮಗೂ ಈ ಅಭ್ಯಾಸಗಳಿದ್ದರೆ ತಕ್ಷಣ ಅದನ್ನು ಬದಲಿಸಿ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ದೈನಂದಿನ ಜೀವನದ ಯಾವ ಅಭ್ಯಾಸಗಳು ನಮ್ಮ ಗೌರವಕ್ಕೆ ಧಕ್ಕೆಯನ್ನು ಉಂಟು ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

ಈ ದೈನಂದಿನ ಅಭ್ಯಾಸಗಳು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು:

ಅತಿಯಾಗಿ ಮಾತನಾಡುವುದು: ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಂದು ವಿಷಯದ ಬಗ್ಗೆಯೂ  ಅನಗತ್ಯ ಮಾತನಾಡಲು ಪ್ರಯತ್ನಿಸುವ ವ್ಯಕ್ತಿಯು ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾನೆ. ಅನಗತ್ಯ ಮಾತು ತಪ್ಪು ತಿಳುವಳಿಕೆಯನ್ನು ಸೃಷ್ಟಿಸುವುದಲ್ಲದೆ, ವ್ಯಕ್ತಿಯ ಇಮೇಜ್‌ಗೆ ಹಾನಿ ಮಾಡುತ್ತದೆ. ಹಾಗಾಗಿ ಹಿತಮಿತವಾಗಿ ಮಾತನಾಡಬೇಕು. ಮುಖ್ಯವಾಗಿ ಎಲ್ಲಿ ಹೇಗೆ ಮಾತನಾಡಬೇಕು ಎಂಬುದು ತಿಳಿದಿರಬೇಕು.

ಕೋಪ ನಿಯಂತ್ರಣದ ಕೊರತೆ: ಅತಿಯಾದ ಕೋಪವು ವಿನಾಶಕ್ಕೆ ಕಾರಣವಾಗುತ್ತದೆ, ಅಲ್ಲದೆ ಅತಿಯಾದ ಕೋಪ ಮನುಷ್ಯನ ದೊಡ್ಡ ಶತ್ರು ಎಂದು ಆಚಾರ್ಯ ಚಾಣಕ್ಯರು ಬಣ್ಣಿಸಿದ್ದಾರೆ. ಪದೇ ಪದೇ ಕೋಪಗೊಳ್ಳುವ ವ್ಯಕ್ತಿಯು ತನ್ನ ಮಾತು ಮತ್ತು ನಡವಳಿಕೆಯ ಮೂಲಕ ಗೌರವವನ್ನು ಕಳೆದುಕೊಳ್ಳುತ್ತಾನೆ. ಕಚೇರಿಯಲ್ಲಿರಲಿ ಅಥವಾ ಮನೆಯಲ್ಲಿರಲಿ, ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ವಿಷಾದಕ್ಕೆ ಕಾರಣವಾಗುತ್ತವೆ. ಅಲ್ಲದೆ ಸಣ್ಣಪುಟ್ಟ ವಿಷಯಕ್ಕೆ ಕೋಪ ಮಾಡಿಕೊಳ್ಳುವುದರಿಂದ ವ್ಯಕ್ತಿಯ ಗೌರವವೂ ಹಾಳಾಗುತ್ತದೆ.

ದುರಾಸೆ ಮತ್ತು ಸ್ವಾರ್ಥ: ಅತಿಯಾದ ದುರಾಸೆಯು ವ್ಯಕ್ತಿಯನ್ನು ನೈತಿಕತೆಯಿಂದ ದೂರ ಮಾಡುತ್ತದೆ. ಪ್ರತಿಯೊಂದು ಕೆಲಸವನ್ನು ಸ್ವಾರ್ಥ ಉದ್ದೇಶವನ್ನು ಇಟ್ಟುಕೊಂಡು ಮಾಡಿದಾಗ, ಜನ ನಿಮ್ಮ ಮೇಲೆ ನಂಬಿಕೆಯನ್ನು ಇಡುವುದಿಲ್ಲ ಮುಖ್ಯವಾಗಿ ನಿಮಗಮ ಮೇಲಿನ ಗೌರವವನ್ನೂ ಕಳೆದುಕೊಳ್ಳುತ್ತಾರೆ.

ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳದಿರುವುದು: ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯನ್ನು ಇತರರು ಬೇಜವಾಬ್ದಾರಿ ಎಂದು ಪರಿಗಣಿಸುತ್ತಾರೆ. ಚಾಣಕ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದರಿಂದ ಗೌರವ ಸಿಗುತ್ತದೆ, ಅದೇ ಕೆಲಸದಲ್ಲಿ ವಿಳಂಬ ಮಾಡುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಭಾವನಾತ್ಮಕವಾಗಿ ಗಟ್ಟಿಗೊಳ್ಳಲು ಚಾಣಕ್ಯರು ಹೇಳಿರುವ ಗುಣಗಳನ್ನು ಬೆಳೆಸಿಕೊಳ್ಳಿ

ದುರಹಂಕಾರ: ದುರಹಂಕಾರವನ್ನು ಅವನತಿಗೆ ಕಾರಣವೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅತಿಯಾದ ಹೆಮ್ಮೆ ಮತ್ತು ದುರಹಂಕಾರ ಕಾಲ ಕ್ರಮೇಣ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ, ಅಂತಹ ವ್ಯಕ್ತಿಗೆ ಯಾವ ಕಿಮ್ಮತ್ತು ಸಹ ಇರೋದಿಲ್ಲ.

ನಕಾರಾತ್ಮಕ ಚಿಂತನೆ ಮತ್ತು ದೂರು ನೀಡುವ ಅಭ್ಯಾಸಗಳು: ಎಲ್ಲದರ ಬಗ್ಗೆಯೂ ದೂರು ನೀಡುವುದು ಮತ್ತು ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು ಸಹ ಒಬ್ಬ ವ್ಯಕ್ತಿಯ ಖ್ಯಾತಿಗೆ ಹಾನಿ ಮಾಡುತ್ತದೆ. ನಕಾರಾತ್ಮಕ ಯೋಚನೆಗಳನ್ನು ಇಟ್ಟುಕೊಂಡಿರುವ ಜನರಿಗೆ ಯಾವ ಗೌರವವೂ ಸಹ ಇರೋದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈರಾಯ್ಡ್ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ನಂಬಬೇಡಿ! ಹಾಗಿದ್ರೆ ಯಾವುದು ನಿಜ? ತಜ್ಞರಿಂದ ತಿಳಿದುಕೊಳ್ಳಿ – Kannada News | Don’t Fall For These Thyroid Myths: World Thyroid Day 2026 Awareness Guide

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ (Thyroid) ಸಮಸ್ಯೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗುತ್ತಿದೆ. ಆದರೆ ಈ ಕಾಯಿಲೆಯ ಬಗ್ಗೆ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳು ಇನ್ನೂ ಹರಿದಾಡುತ್ತಿವೆ. ಕೆಲವರು ಥೈರಾಯ್ಡ್ ಬಂದರೆ ಜೀವಪೂರ್ತಿ ಔಷಧಿ ತಿನ್ನಲೇಬೇಕು ಎಂದು ಹೇಳುತ್ತಾರೆ ಮತ್ತೊಂದಿಷ್ಟು ಜನ ಇದು ಮಹಿಳೆಯರಿಗೆ ಮಾತ್ರ ಬರುವ ಕಾಯಿಲೆ ಎಂದು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅನಿವಾರ್ಯ. ಅದಕ್ಕಾಗಿಯೇ ಜನರಿಗೆ ಈ ಬಗ್ಗೆ ಸರಿಯಾಗಿ ಅರ್ಥಮಾಡಿಸಲು ಪ್ರತಿ ವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಜನರಲ್ಲಿ ಥೈರಾಯ್ಡ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದರ ಲಕ್ಷಣಗಳನ್ನು ಸಮಯಕ್ಕೆ ಗುರುತಿಸುವ ಮಹತ್ವವನ್ನು ತಿಳಿಸುವುದಾಗಿದೆ.

ಥೈರಾಯ್ಡ್ ಎಂದರೇನು?

ನಮ್ಮ ಗಂಟಲಿನಲ್ಲಿ ಚಿಟ್ಟೆಯಾಕಾರದ ಥೈರಾಯ್ಡ್ ಗ್ರಂಥಿ ಇರುತ್ತದೆ. ಇದು ದೇಹದ ಮೆಟಾಬಾಲಿಸಂ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಾವು ತಿನ್ನುವ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸವನ್ನು ಈ ಗ್ರಂಥಿ ಮಾಡುತ್ತದೆ. ಈ ಗ್ರಂಥಿಯಿಂದ ಹಾರ್ಮೋನ್‌ಗಳು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಥೈರಾಯ್ಡ್ ಸಮಸ್ಯೆ ಉಂಟಾಗಬಹುದು.

ಥೈರಾಯ್ಡ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆಗಳು:

ಥೈರಾಯ್ಡ್ ಬಂದರೆ ಜೀವಪೂರ್ತಿ ಔಷಧಿ ತಿನ್ನಬೇಕು: ವೈದ್ಯರ ಪ್ರಕಾರ, ಎಲ್ಲಾ ರೋಗಿಗಳಿಗೂ ಜೀವಪೂರ್ತಿ ಔಷಧಿ ಅಗತ್ಯವಿಲ್ಲ. ಕೆಲವರಿಗೆ ಮಾತ್ರ ದೀರ್ಘಕಾಲ ಚಿಕಿತ್ಸೆ ಬೇಕಾಗಬಹುದು. ಸರಿಯಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ವೈದ್ಯಕೀಯ ಚಿಕಿತ್ಸೆಯಿಂದ ಔಷಧಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಥೈರಾಯ್ಡ್ ಮಹಿಳೆಯರಿಗೆ ಮಾತ್ರ ಬರುತ್ತದೆ: ಮಹಿಳೆಯರಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವುದಾದರೂ, ಪುರುಷರು ಮತ್ತು ಮಕ್ಕಳಿಗೂ ಥೈರಾಯ್ಡ್ ಸಮಸ್ಯೆ ಕಾಣಿಸಬಹುದು. ಪುರುಷರಲ್ಲಿ ಲಕ್ಷಣಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸಮಸ್ಯೆ ತಡವಾಗಿ ಪತ್ತೆಯಾಗುತ್ತದೆ.

ಇದು ಕೇವಲ ಗಂಟಲಿನ ಸಮಸ್ಯೆ: ಥೈರಾಯ್ಡ್ ಗ್ರಂಥಿ ಗಂಟಲಿನಲ್ಲಿ ಇದ್ದರೂ ಇದರ ಪರಿಣಾಮ ಸಂಪೂರ್ಣ ದೇಹದ ಮೇಲೆ ಬೀರುತ್ತದೆ. ಹೃದಯದ ಬಡಿತ, ನಿದ್ರೆ, ಶಕ್ತಿ ಮಟ್ಟ, ತೂಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಕಾಣಿಸಬಹುದು.

ಇದನ್ನೂ ಓದಿ: ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ

ಥೈರಾಯ್ಡ್ ಸಮಸ್ಯೆಗೆ ಕಾರಣಗಳೇನು?

  • ಜನ್ಯ ಕಾರಣಗಳು (Genetic)
  • ಹೆಚ್ಚು ಐಯೋಡಿನ್ ಇರುವ ಔಷಧಿಗಳು
  • ಐಯೋಡಿನ್ ಕೊರತೆಯ ಉಪ್ಪು ಬಳಕೆ
  • ಸ್ವಪ್ರತಿರೋಧಕ ಕಾಯಿಲೆಗಳು (Autoimmune diseases)
  • ರಕ್ತಹೀನತೆ
  • ಟೈಪ್-1 ಸಿಲಿಯಾಕ್ ರೋಗ
  • ಲ್ಯುಪಸ್
  • ಸಂಧಿವಾತ
  • ಸ್ಜೋಗ್ರೆನ್ ಸಿಂಡ್ರೋಮ್

ಥೈರಾಯ್ಡ್‌ನ ಪ್ರಮುಖ ಪ್ರಕಾರಗಳು:

ಹೈಪೋಥೈರಾಯ್ಡಿಸಮ್ (Hypothyroidism): ಈ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿ ಕಡಿಮೆ ಪ್ರಮಾಣದಲ್ಲಿ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ.
ಲಕ್ಷಣಗಳು: ತೂಕ ಹೆಚ್ಚಾಗುವುದು, ಜೀರ್ಣಕ್ರಿಯೆ ಸಮಸ್ಯೆ, ನಿಧಾನ ಹೃದಯ ಬಡಿತ, ಚರ್ಮ ಒಣಗುವುದು, ಮಲಬದ್ಧತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುವುದು

ಹೈಪರ್‌ಥೈರಾಯ್ಡಿಸಮ್ (Hyperthyroidism): ಈ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪತ್ತಿಯಾಗುತ್ತದೆ.
ಲಕ್ಷಣಗಳು: ತೂಕ ವೇಗವಾಗಿ ಇಳಿಯುವುದು, ಹೃದಯ ಬಡಿತ ಅಸ್ಥಿರವಾಗುವುದು, ಹೆಚ್ಚು ಆಯಾಸ, ಚಿಂತೆ ಮತ್ತು ಅಶಾಂತಿ, ಸ್ನಾಯು ದುರ್ಬಲತೆ, ನಿದ್ರೆ ಸಮಸ್ಯೆ, ಸಂಧಿ ನೋವು

ತಜ್ಞರ ಪ್ರಕಾರ, ಥೈರಾಯ್ಡ್ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಸರಿಯಾದ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಕೋಲಾರ ನಗರಸಭೆ ಕಚೇರಿ ಮೇಲೆ ಲೋಕಾ ದಾಳಿ – Kannada News | Lokayukta Raids Kolar City Municipal Council Over Dual Birth Certificate registration

ಕೋಲಾರ, ಮೇ 25: ನಗರಸಭೆ ಆರೋಗ್ಯ ವಿಭಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜನನ, ಮರಣ ಪ್ರಮಾಣಪತ್ರ ವಿತರಣೆ ಆರೋಪ ಬೆನ್ನಲ್ಲೇ ಕೋಲಾರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ. ಜೀವಂತವಾಗಿರುವ ವ್ಯಕ್ತಿಗಳಿಗೆ ಮರಣ ಪ್ರಮಾಣಪತ್ರ ನೀಡಿರುವುದು ಮತ್ತು ಒಂದೇ ನೋಂದಣಿಯಲ್ಲಿ ಇಬ್ಬರು ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಿಸಿರುವುದು ಹಾಗೂ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಜನನ ಪ್ರಮಾಣಪತ್ರ ನೀಡಿರುವುದು ಸೇರಿದಂತೆ ಹಲವು ದೂರುಗಳು ಸಾರ್ವಜನಿಕರಿಂದ ಲೋಕಾಯುಕ್ತ ಕಚೇರಿಗೆ ನಿರಂತರವಾಗಿ ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕೋಲಾರ ಲೋಕಾಯುಕ್ತ ಎಸ್‌ಪಿ ಆಂಥೋನಿ ಜಾನ್ ಅವರ ಮಾರ್ಗದರ್ಶನದಲ್ಲಿ, ಪಿಐ ಆಂಜಿನಪ್ಪ ನೇತೃತ್ವದ ತಂಡ ನಗರಸಭೆ ಆರೋಗ್ಯ ಶಾಖೆಯ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ರಿಕೆಟ್ ಆಡುತ್ತಿದ್ದಾಗಲೇ ಹೃದಯಾಘಾತ: ಶಿವಮೊಗ್ಗ KSCA ಮೈದಾನದಲ್ಲಿ ಅಕ್ಷಯ್ ಅಂತಿಮ ದರ್ಶನ – Kannada News | Karnataka former ranji Cricket Player akshay dead Body Comes Shivamogga Who Dies due to heart attack In Bengaluru

ಶಿವಮೊಗ್ಗ, (ಮೇ 25): ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ (39) ಭಾನುವಾರ ನಡೆದ ಕೆಎಸ್‌ಸಿಎ ಡಿವಿಷನ್ 3 ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಬಳಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗ ಮೂಲದ ಅಕ್ಷಯ್, ವಿನಯ್ ಕುಮಾರ್ ಅವರಂತಹ ದಿಗ್ಗಜರಿದ್ದ ಕಾಲದಲ್ಲೂ ಕರ್ನಾಟಕ ಪರ 6 ಪ್ರಥಮ ದರ್ಜೆ, 3 ಲಿಸ್ಟ್ ‘ಎ’ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದರು. ನಿವೃತ್ತಿಯ ನಂತರ ರಾಜ್ಯ ಅಂಡರ್-19 ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಇಂದು (ಮೇ 25) ಅಕ್ಷಯ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಿದ್ದು, ಶಿವಮೊಗ್ಗ KSCAಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮೂಲತಃ ಶಿವಮೊಗ್ಗದವರಾದ ಅಕ್ಷಯ್ ಅವರು 2010 ರಲ್ಲಿ ಚೆನ್ನೈನಲ್ಲಿ ಹೈದರಾಬಾದ್ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಲಿಸ್ಟ್ ‘ಎ’ ಪಂದ್ಯದ ಮೂಲಕ ಕರ್ನಾಟಕ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 2013 ರಲ್ಲಿ ನಡೆದ ತಮ್ಮ ಕೊನೆಯ ಲಿಸ್ಟ್ ‘ಎ’ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 50 ರನ್‌ಗಳಿಗೆ 4 ವಿಕೆಟ್ ಪಡೆಯುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ: ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ!

Source link

SIR ಸಭೆಗೆ ಗೈರಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ಕೊಕ್: ‘ಕೈ’ಯಲ್ಲಿ ಭಾರಿ ಸಂಚಲನ

ಬೆಂಗಳೂರು, ಮೇ 25: ಎಸ್ಐಆರ್ ಕುರಿತು ಕರೆದಿದ್ದ ಪ್ರಮುಖ ಸಭೆಗೆ ನೂರಕ್ಕೂ ಹೆಚ್ಚು ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಗೈರಾಗಿದ್ದ ಕಾರಣ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಈ ಸಭೆಯನ್ನು ಆಯೋಜಿಸಲಾಗಿತ್ತು. ದೇವನಹಳ್ಳಿ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಕೆಪಿಸಿಸಿ ಈ ಸಭೆ ನಡೆಸಿತ್ತು. ಪಕ್ಷದ ನಾಯಕರು ಎಸ್ಐಆರ್ ಪ್ರಕ್ರಿಯೆಯ ಪ್ರಾಮುಖ್ಯತೆಯನ್ನು ತಿಳಿಸಲು ಈ ಸಭೆ ಆಯೋಜಿಸಿದ್ದರು. ಆದರೆ, ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಗೈರಾಗಿದ್ದರಿಂದ ಸುರ್ಜೇವಾಲ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಎಸ್ಐಆರ್ ಸಭೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದವರು ಪಕ್ಷಕ್ಕೆ ಏನು ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದ ಸುರ್ಜೇವಾಲ, ಗೈರಾದವರನ್ನು ಪಕ್ಷದ ಹುದ್ದೆಗಳಿಂದ ತೆಗೆದುಹಾಕಲು ಆದೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗದಿಂದ ರಣವೀರ್ ಸಿಂಗ್‌ ಬ್ಯಾನ್; ಸಿನಿಮಾ ನೌಕರರ ಒಕ್ಕೂಟದಿಂದ ಕಠಿಣ ನಿರ್ಧಾರ – Kannada News | Dhurandhar actor Ranveer Singh banned by FWICE due to Don 3 dispute with Farhan Akhtar

ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್‌ (Ranveer Singh) ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ರಣವೀರ್ ಸಿಂಗ್ ದಿಢೀರನೆ ಹೊರನಡೆದಿರುವ ಹಿನ್ನೆಲೆಯಲ್ಲಿ, ಸಿನಿಮಾ ನೌಕರರ ಒಕ್ಕೂಟವು (FWICE) ನಟನ ವಿರುದ್ಧ ಅಸಹಕಾರ ತೋರಲು ನಿರ್ಧರಿಸಿದೆ. ಈ ಮೂಲಕ ಚಿತ್ರರಂಗದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಯಾರೂ ಸಹಕರಿಸದಂತೆ ಮತ್ತು ಕೆಲಸ ಮಾಡದಂತೆ ಸೂಚಿಸಿ, ಪರೋಕ್ಷವಾಗಿ ಬ್ಯಾನ್ ಮಾಡಲಾಗಿದೆ. ಕಳೆದ ವಾರ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಿದ್ದ ಫೆಡರೇಶನ್, ಸೋಮವಾರ (ಮೇ 25) ತನ್ನ ಅಧಿಕೃತ ನಿರ್ಧಾರವನ್ನು ಪ್ರಕಟಿಸಿದೆ.

ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಒಡೆತನದ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ‘ಡಾನ್ 3’ ಸಿನಿಮಾ ಸಿದ್ಧವಾಗುತ್ತಿತ್ತು. ಶೂಟಿಂಗ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಣವೀರ್ ಸಿಂಗ್ ಈ ಚಿತ್ರದಿಂದ ಹೊರನಡೆದರು. ಈ ದಿಢೀರ್ ನಿರ್ಧಾರದಿಂದ ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಮತ್ತು ಪ್ರಮುಖ ಯೋಜನೆಗಳಿಗಾಗಿ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿತ್ತು.

FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ‘ಚಿತ್ರೀಕರಣಕ್ಕೆ ಕೆಲವೇ ದಿನಗಳಿರುವಾಗ ನಟರು ಈ ರೀತಿ ಸಿನಿಮಾದಿಂದ ಹೊರನಡೆಯುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ’ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. FWICE ಅಧ್ಯಕ್ಷ ಬಿ.ಎನ್ ತಿವಾರಿ, ಮುಖ್ಯ ಸಲಹೆಗಾರ ಅಶೋಕ್ ಪಂಡಿತ್, ಪ್ರಧಾನ ಕಾರ್ಯದರ್ಶಿ ಅಶೋಕ್ ದುಬೆ ಮತ್ತು ಖಜಾಂಚಿ ಗಂಗೇಶ್ವರಲಾಲ್ ಶ್ರೀವಾಸ್ತವ್ ಅವರನ್ನೊಳಗೊಂಡ ಉನ್ನತ ಮಟ್ಟದ ಆಂತರಿಕ ಸಭೆಯ ನಂತರ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದಕ್ಕೂ ಮುನ್ನ ಈ ವಿವಾದವು ನಿರ್ಮಾಪಕರ ಸಂಘದ ಮೆಟ್ಟಿಲೇರಿತ್ತು. ಅಲ್ಲಿ ಹಿರಿಯ ನಿರ್ಮಾಪಕರು ರಣವೀರ್ ಸಿಂಗ್ ಹಾಗೂ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಡುವೆ ರಾಜಿ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ, ನಷ್ಟ ಪರಿಹಾರ ಹಾಗೂ ಸೆಟಲ್ಮೆಂಟ್ ಕುರಿತ ಮಾತುಕತೆಗಳು ಸಫಲವಾಗದ ಕಾರಣ ಈಗ ಫೆಡರೇಶನ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು?

ಈ ಬ್ಯಾನ್ ಆದೇಶವು ರಣವೀರ್ ಸಿಂಗ್ ಅವರ ಮುಂಬರುವ ಇತರ ಸಿನಿಮಾಗಳ ಮೇಲೂ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ‘ಧುರಂಧರ್’ ಯಶಸ್ಸಿನ ನಂತರ ರಣವೀರ್ ಸಿಂಗ್ ಅವರಿಗೆ ಬೇಡಿಕೆ ಹೆಚ್ಚಿದೆ. ಅದರ ನಡುವೆಯೂ ಅವರು ಬ್ಯಾನ್ ಆಗಿರುವುದರಿಂದ ವೃತ್ತಿಜೀವನಕ್ಕೆ ಸವಾಲಾಗಿದೆ. ಈ ಬಗ್ಗೆ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version