Pawan Hans Recruitment 2026: ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | Pawan Hans Recruitment 2026: 22 Govt Jobs for Technicians, Engineers and More

ಪವನ್ ಹನ್ಸ್ ಲಿಮಿಟೆಡ್‌ನಲ್ಲಿ ಬಂಪರ್ ನೇಮಕಾತಿ

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ಸಾರ್ವಜನಿಕ ವಲಯದ ಉದ್ಯಮ (PSU) ಹಾಗೂ ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಕಂಪನಿಯಾದ ಪವನ್ ಹನ್ಸ್ ಲಿಮಿಟೆಡ್ (Pawan Hans Limited) 2026ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡಲು ಇದೊಂದು ಸುವರ್ಣ ಅವಕಾಶವಾಗಿದೆ.

ಹುದ್ದೆಗಳ ವಿವರ ಮತ್ತು ಒಟ್ಟು ಸಂಖ್ಯೆ

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ರೆಗ್ಯುಲರ್ (ಖಾಯಂ) ಹಾಗೂ ಕಾಂಟ್ರಾಕ್ಟ್ (ಗುತ್ತಿಗೆ) ಆಧಾರದ ಮೇಲಿನ ಹುದ್ದೆಗಳು ಸೇರಿವೆ.

  • ಟ್ರೇನಿ ಟೆಕ್ನಿಷಿಯನ್ (Trainee Technician): 13 ಹುದ್ದೆಗಳು
  • ಜ್ಯೂನಿಯರ್ ಇಂಜಿನಿಯರ್ – ಸಿವಿಲ್ (Junior Engineer – Civil): 01 ಹುದ್ದೆ
  • ಕ್ವಾಲಿಟಿ ಅಸಿಸ್ಟೆಂಟ್ (Quality Assistant): 02 ಹುದ್ದೆಗಳು
  • ಅಸಿಸ್ಟೆಂಟ್ – CAMO (Assistant – CAMO): 02 ಹುದ್ದೆಗಳು
  • ಅಸಿಸ್ಟೆಂಟ್ – HR&A (Assistant – HR&A): 02 ಹುದ್ದೆಗಳು
  • ಸ್ಟೇಷನ್ ಇನ್‌ಚಾರ್ಜ್ (Station In-charge): 02 ಹುದ್ದೆಗಳು

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ಪದವಿ (Graduate), ಡಿಪ್ಲೋಮಾ (ಸಿವಿಲ್/ಮೆಕ್ಯಾನಿಕಲ್/ಏರೋನಾಟಿಕಲ್ ಇಂಜಿನಿಯರಿಂಗ್) ಅಥವಾ ಬಿ.ಎಸ್ಸಿ (ಏವಿಯೇಷನ್) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಟ್ರೇನಿ ಟೆಕ್ನಿಷಿಯನ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 25 ವರ್ಷ ಹಾಗೂ ಇನ್ನುಳಿದ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಪವನ್ ಹನ್ಸ್ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಆಭ್ಯರ್ಥಿಗಳು  ಜುಲೈ 10ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಪವನ್ ಹನ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ ಆದ www.pawanhans.co.in ಗೆ ಭೇಟಿ ನೀಡಿ, ‘Careers’ ವಿಭಾಗದ ಅಡಿಯಲ್ಲಿ ಆನ್‌ಲೈನ್ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಆಫ್‌ಲೈನ್ ಅಥವಾ ಅಂಚೆ ಮೂಲಕ ನೇರವಾಗಿ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಓದಲು ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral: ಹಳ್ಳಿಯಿಂದ ಬೆಂಗಳೂರಿಗೆ ಬಂದ ಯುವಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಆಟೋಚಾಲಕ – Kannada News | Bengaluru: Auto driver extorts extra money from youths who came to Bengaluru

ಬೆಂಗಳೂರು, ಜೂನ್ 24: ಬೆಂಗಳೂರಿಗೆ (Bengaluru) ಯಾರಾದ್ರೂ ಹೊಸಬರು ಬಂದರೆ ಕೆಲ ಆಟೋ ಚಾಲಕರು ಅದನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಹೌದು, ಪ್ರವಾಸಿಗರು ಹಾಗೂ ಹೊಸಬರಿಂದ ಹೆಚ್ಚು ಹಣ ವಸೂಲಿ ಮಾಡುವ ಹಾಗೂ ಸಂಜೆ ವೇಳೆ ದುಪ್ಪಟ್ಟು ದರ ಕೇಳುವ ದೂರುಗಳು ಕೇಳಿ ಬರುತ್ತಲೇ ಇರುತ್ತವೆ, ಇದೀಗ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಆಟೋ ಚಾಲಕನು ಹಳ್ಳಿಯಿಂದ ಬಂದ ಯುವಕರನ್ನು ಬಸ್ ನಿಲ್ದಾಣಕ್ಕೆ ಬಿಡಲು ತಲಾ 50 ರೂ. ಬಾಡಿಗೆ ಬದಲಿಗೆ 2,400 ರೂ. ಗಳನ್ನು ಪಡೆದಿದ್ದಾನೆ. ಈ ಬಗ್ಗೆ ಟೆಕ್ಕಿಯೊಬ್ಬರು ಆರೋಪ ಮಾಡಿದ್ದು, ಇದಕ್ಕೆ ಸಂಬಂಧ ಪಟ್ಟ ಪೋಸ್ಟ್  ವೈರಲ್‌ ಆಗಿದೆ..

ಸಾನು (Sanu) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಟೆಕ್ಕಿ ಈ ಘಟನೆಗೆ ಸಂಬಂಧಿಸಿದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದ ಬಳಿ ಸುಮಾರು 16-18 ವರ್ಷ ವಯಸ್ಸಿನ ಇಬ್ಬರು ಯುವಕರಿದ್ದರು. ಈ ಯುವಕರು ಹೊಸೂರಿಗೆ ತೆರಳುವ ಬಸ್ ನಿಲ್ದಾಣ ಅತ್ತಿಬೆಲೆಗೆ ಬಿಡಲು ಆಟೋ ಚಾಲಕನ ಬಳಿ ಕೇಳಿಕೊಂಡಿದ್ದಾನೆ. ಆದರೆ ಆಟೋ ಚಾಲಕ ಮೊದಲು ತಲಾ 50 ರೂ.ಗಳಿಗೆ ಅವರನ್ನು ಬಿಡಲು ಒಪ್ಪಿಕೊಂಡಿದ್ದಾನೆ. ಬಸ್ ನಿಲ್ದಾಣ ತಲುಪುತ್ತಿದ್ದಂತೆ ಈ ಆಟೋ ಚಾಲಕ ತನ್ನ ವರಸೆ ಬದಲಾಯಿಸಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಈ ಯುವಕರ ಬಳಿ 35 ಕಿ.ಮೀ ಪ್ರಯಾಣಕ್ಕೆ 3000 ರೂ. ಕೇಳಿದ್ದಾನೆ. ಆಟೋಚಾಲಕ ಹೀಗೆನ್ನುತ್ತಿದ್ದಂತೆ ಯುವಕರು ನನಗೆ ಕರೆ ಮಾಡಿದ್ದಾರೆ. ನನ್ನೊಂದಿಗೆ ಮಾತನಾಡುತ್ತಿದ್ದಾಗಲೇ ಈ ಆಟೋ ಚಾಲಕ ಯುವಕರಿಂದ ಮೊಬೈಲ್ ಕಸಿದುಕೊಂಡಿದ್ದಾನೆ. ಆ ಬಳಿಕ ಅವರು ನನ್ನ ಕರೆಗಳಿಗೆ ಉತ್ತರಿಸಲೇ ಇಲ್ಲ.ಕೊನೆಗೆ ಯುವಕರು ಮೊಬೈಲ್ ಕೊಡುವಂತೆ ಕೇಳಿಕೊಂಡಿದ್ದು, ಆ ಬಳಿಕ ವಾಪಸ್ಸು ನೀಡಿದ್ದಾನೆ. ಅಷ್ಟೇ ಅಲ್ಲದೇ ಯುವಕರು ಅತ್ತಿಬೆಲೆ ಬಸ್ ನಿಲ್ದಾಣಕ್ಕೆ ಬರಲು 2,000 ರೂ ಹೆಚ್ಚುವರಿ ಹಣ ಖರ್ಚು ಮಾಡಿದ್ದಾರೆ. ಈ ಪೋಸ್ಟ್‌ನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದೇನೆ. ನೀವು ಟ್ರ್ಯಾಕ್ ಮಾಡುತ್ತೀರಿ ಅಂತಾದ್ರೆ ಮೊಬೈಲ್ ನಂಬರ್ ಹಂಚಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮನೆ ಖಾಲಿ ಮಾಡ್ತೇನೆ ಎಂದ ಯುವತಿಗೆ ಮನ ಮುಟ್ಟುವಂತೆ ರಿಪ್ಲೈ ಕೊಟ್ಟ ಓನರ್

ಈ ಪೋಸ್ಟ್ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರ, ನಗರಕ್ಕೆ ಕೆಟ್ಟ ಹೆಸರು ತರುವ ಸಾಲಿನಲ್ಲಿ ಈ ಆಟೋಚಾಲಕರು ಇದ್ದಾರೆ ಎಂದಿದ್ದಾರೆ. ಇನ್ನೊಬ್ಬರು, ಕೆಲ ಆಟೋ ಚಾಲಕರ ವರ್ತನೆಗಳು ವಿಪರೀತವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ರೀತಿ ನಡವಳಿಕೆ ಒಪ್ಪುವಂತಹದ್ದಲ್ಲ. ಮಿತಿಮೀರಿ ಹಣ ಕೇಳುವುದು, ಫೋನ್ ಕಸಿದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:05 pm, Wed, 24 June 26

Source link

ವಾರಕ್ಕೊಂದು ಬೈಕ್ ಕದ್ದು ನಕಲಿ ಆರ್‌ಸಿ ಸೃಷ್ಟಿಸಿ ಮಾರುತ್ತಿದ್ದ ಸ್ಪ್ಲೆಂಡರ್ ಸಿದ್ದಾರೆಡ್ಡಿ ಅರೆಸ್ಟ್: 41 ಬೈಕ್​ಗಳು ಜಪ್ತಿ – Kannada News | Siruguppa Police Arrest Notorious Thief ‘Splendor Siddareddy’, Seize 41 Stolen Bikes Worth Rs 20 Lakhs

ಪೊಲೀಸರು ವಶಪಡಿಸಿಕೊಂಡ ಬೈಕ್​ಗಳು ಹಾಗೂ ಒಳಚಿತ್ರದಲ್ಲಿ ಸಿದ್ದಾರೆಡ್ಡಿ ಅಲಿಯಾಸ್ ‘ಸ್ಪ್ಲೆಂಡರ್’ ಸಿದ್ದಾರೆಡ್ಡಿImage Credit source: tv9

ಬಳ್ಳಾರಿ, ಜೂನ್ 24: ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆಯಲು ಬಳ್ಳಾರಿಯ (Ballari) ಸಿರಗುಪ್ಪ ತಾಲೂಕು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕುಖ್ಯಾತ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿಯ ಅಹಂಬಾವಿ ನಗರದ ನಿವಾಸಿ, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಿದ್ದಾರೆಡ್ಡಿ ಅಲಿಯಾಸ್ ‘ಸ್ಪ್ಲೆಂಡರ್’ ಸಿದ್ದಾರೆಡ್ಡಿ ಬಂಧಿತ ಆರೋಪಿ. ಈತನಿಂದ ಬರೋಬ್ಬರಿ 20.50 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 41 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಟೋ ಚಾಲಕ ಬೈಕ್ ಕಳ್ಳನಾಗಿದ್ದು ಹೇಗೆ ಗೊತ್ತೇ?

ಕಳೆದ ಜೂನ್ 2 ರಂದು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿ ಸಿದ್ದಾರೆಡ್ಡಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕಳೆದ ಒಂದೂವರೆ ವರ್ಷದಿಂದ ಬೈಕ್ ಕಳ್ಳತನದಲ್ಲಿ ತೊಡಗಿರುವ ವಿಷಯ ಬಾಯ್ಬಿಟ್ಟಿದ್ದಾನೆ. ಪ್ರತಿ ವಾರಕ್ಕೊಂದು ಬೈಕ್ ಕದಿಯುವುದನ್ನೇ ಈತ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ.

ನಕಲಿ ಆರ್‌ಸಿ ದಂಧೆ ಮತ್ತು ರೈತರೇ ಟಾರ್ಗೆಟ್

ಹಗಲು ಹೊತ್ತಿನಲ್ಲಿ ನಕಲಿ ಕೀ ಬಳಸಿ ಬೈಕ್‌ಗಳನ್ನು ಕದಿಯುತ್ತಿದ್ದ ಈತ, ಬಳಿಕ ಅವುಗಳ ಮೂಲ ನಂಬರ್ ಪ್ಲೇಟ್ ಕಿತ್ತು ಹಾಕುತ್ತಿದ್ದ. ಆನಂತರ ಬೇರೊಂದು ಬೈಕ್‌ನ ನಂಬರ್ ಪ್ಲೇಟ್ ಫೋಟೋ ತೆಗೆದುಕೊಂಡು, ‘ಕರ್ನಾಟಕ ಒನ್’ ಕೇಂದ್ರದ ಮೂಲಕ ನಕಲಿ ಆರ್‌ಸಿ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದ. ಹೀಗೆ ಸೃಷ್ಟಿಸಿದ ನಕಲಿ ದಾಖಲೆಗಳನ್ನು ತೋರಿಸಿ, ಕದ್ದ ಬೈಕ್‌ಗಳನ್ನು ಹಳ್ಳಿಗಳ ಅಮಾಯಕ ರೈತರಿಗೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.

ನಾಲ್ಕು ಜಿಲ್ಲೆಗಳಲ್ಲಿ ಕೈಚಳಕ

ಬಳ್ಳಾರಿ ಜಿಲ್ಲೆಯಲ್ಲಿ 15, ಚಿತ್ರದುರ್ಗದಲ್ಲಿ 21, ವಿಜಯನಗರದಲ್ಲಿ 4 ಹಾಗೂ ಆಂಧ್ರದ ಅನಂತಪುರದಲ್ಲಿ 1 ಬೈಕ್ ಸೇರಿದಂತೆ ಒಟ್ಟು 41 ಬೈಕ್‌ಗಳನ್ನು ಕದ್ದಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಸೋಲಾರ್ ಮನೆಗಳಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಕೆಇಆರ್‌ಸಿ?: ಸರ್ಕಾರದ ದ್ವಂದ್ವ ನೀತಿ ವಿರುದ್ಧ ಸಿಟಿ ಜನ ಫುಲ್ ಗರಂ!

ಈ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿರಗುಪ್ಪ ಪೊಲೀಸರ ಕಾರ್ಯವೈಖರಿಯನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರು ಶ್ಲಾಘಿಸಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್​​ನ ಹೊರಗಿಟ್ಟಿದ್ದೇಕೆ? – Kannada News | Lock Upp 2: Ekta Kapoor Reveals Why Kangana Ranaut Isn’t Hosting, Netflix Debut

ಖ್ಯಾತ ರಿಯಾಲಿಟಿ ಶೋ ‘ಲಾಕ್ ಅಪ್’ ಈಗ ಎರಡನೇ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಈ ಬಾರಿ ಶೋಗೆ ‘ಲಾಕ್ ಅಪ್: ಸಚ್ ಯಾ ಸಜಾ’ ಎಂದು ಹೆಸರಿಡಲಾಗಿದೆ. ಆದರೆ ಈ ಸೀಸನ್‌ನಲ್ಲಿ ಕೆಲವು ದೊಡ್ಡ ಬದಲಾವಣೆಗಳು ಆಗಿವೆ. ಮೊದಲ ಸೀಸನ್ ನಡೆಸಿಕೊಟ್ಟಿದ್ದ ನಟಿ ಕಂಗನಾ ರಣಾವತ್ ಈ ಬಾರಿ ಶೋನಲ್ಲಿ ಇರುವುದಿಲ್ಲ. ಅವರ ಬದಲಿಗೆ ನಿರ್ದೇಶಕಿ ಫರಾ ಖಾನ್ ಮತ್ತು ನಟ ರಿತೇಶ್ ದೇಶ್‌ಮುಖ್ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಕಂಗನಾ ರಣಾವತ್ ಶೋನಿಂದ ಹೊರಗುಳಿಯಲು ಅಸಲಿ ಕಾರಣ ಏನೆಂಬುದನ್ನು ನಿರ್ಮಾಪಕಿ ಏಕ್ತಾ ಕಪೂರ್ ಬಿಚ್ಚಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಶೋ ಲಾಂಚ್ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಏಕ್ತಾ ಕಪೂರ್ ನೀಡಿದ ಕಾರಣವೇನು?

‘ಈ ಬಾರಿ ಶೋನ ಸಂಪೂರ್ಣ ಫಾರ್ಮ್ಯಾಟ್ ಬದಲಾಗಿದೆ. ನಮ್ಮ ಆಲೋಚನೆ ಮತ್ತು ಜೈಲರ್-ಜಡ್ಜ್ ಕಾನ್ಸೆಪ್ಟ್ ಎಲ್ಲವೂ ಹೊಸದಾಗಿದೆ. ಹಳೆಯ ಶೋನ ಯಾವುದೇ ಅಂಶವನ್ನು ನಾವು ಉಳಿಸಿಕೊಂಡಿಲ್ಲ. ಜೈಲರ್ ಆಗಲಿ ಅಥವಾ ನಿರೂಪಕರಾಗಲಿ ಯಾರೂ ಹಳಬರಿಲ್ಲ. ಶೋಗೆ ಹೊಸ ರೂಪ ನೀಡಲು ಈ ಬದಲಾವಣೆ ಅಗತ್ಯವಾಗಿತ್ತು. ಇದನ್ನು ಕಂಗನಾ ಕೂಡ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಏಕ್ತಾ ಕಪೂರ್ ಹೇಳಿದ್ದಾರೆ. ಈಗ ಕಂಗನಾ ಅವರು ಸಂಸದೆ. ಈ ಕಾರಣದಿಂದಲೂ ಅವರು ಶೋ ಮಾಡಲು ಹಿಂದೇಟು ಹಾಕಿರಬಹುದು.

ಈ ಬಾರಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ:

‘ಲಾಕ್ ಅಪ್’ ರಿಯಾಲಿಟಿ ಶೋನ ಮೊದಲ ಸೀಸನ್ 2022 ರಲ್ಲಿ ALTBalaji ಮತ್ತು MX Player ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಕಂಡಿತ್ತು. ಈ ಬಾರಿ ‘ಲಾಕ್ ಅಪ್ 2’ ಓಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ‘ಲಾಕ್ ಅಪ್ ನನಗೆ ತುಂಬಾ ವಿಶೇಷವಾದ ಶೋ. ಇದು ಕೇವಲ ರಿಯಾಲಿಟಿ ಶೋ ಅಲ್ಲ. ಇದೊಂದು ಸಾಮಾಜಿಕ ಪ್ರಯೋಗ. ನೆಟ್‌ಫ್ಲಿಕ್ಸ್ ಮೂಲಕ ಈ ಶೋ ಅನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಏಕ್ತಾ ಕಪೂರ್ ಸಂತಸ ಹಂಚಿಕೊಂಡಿದ್ದಾರೆ.

ಸೀಸನ್ 2 ಹೇಗಿರಲಿದೆ?

ಈ ಹೊಸ ಸೀಸನ್‌ನಲ್ಲಿ ಒಟ್ಟು 14 ಜನ ಪ್ರಸಿದ್ಧ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಇವರನ್ನು ಆರು ವಾರಗಳ ಕಾಲ ಜೈಲಿನಂತಹ ವಾತಾವರಣದಲ್ಲಿ ಲಾಕ್ ಮಾಡಲಾಗುತ್ತದೆ. ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಅವರು ಕಠಿಣ ಟಾಸ್ಕ್ ಮತ್ತು ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಲಾಕ್​ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್​ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?

ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕೊಲೊಸಿಯಮ್ ಸಂಸ್ಥೆಗಳು ಜಂಟಿಯಾಗಿ ಈ ಶೋ ನಿರ್ಮಿಸುತ್ತಿವೆ. ಜೂನ್ 27 ರಿಂದ ಈ ಶೋ ಕೇವಲ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಸ್ಟ್ರೀಮ್ ಆಗಲಿದೆ. ಪ್ರತಿ ಶನಿವಾರದಿಂದ ಬುಧವಾರದವರೆಗೆ ರಾತ್ರಿ 8 ಗಂಟೆಗೆ ಶೋ ಪ್ರಸಾರವಾಗಲಿದೆ. ಹೊಸ ರೂಪದಲ್ಲಿ ಬರುತ್ತಿರುವ ಈ ಶೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೀಲ್ಸ್ ಮಾಡಲು ನವಿಲುಗರಿ ಬಳಕೆ: ಕ್ಷಮೆ ಕೇಳಿದ ನಿವೇದಿತಾ – Kannada News | Niveditha Gowda apologise for using peacock feature in dance video

ನಟಿ ನಿವೇದಿತಾ ಗೌಡ (Niveditha Gowda) ಮತ್ತು ಕಿಶನ್ ರೀಲ್ಸ್ ಮಾಡಲು ನವಿಲುಗರಿ ಬಳಿಸಿದ್ದು ವಿವಾದವಾಗಿದ್ದು, ಇವರ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ. ಇದೀಗ ನಟಿ ನಿವೇದಿತಾ ಗೌಡ ವಿಡಿಯೋ ಮೂಲಕ ಈ ಬಗ್ಗೆ ಮಾತನಾಡಿದ್ದು, ಕ್ಷಮೆ ಕೇಳಿದ್ದಾರೆ. ನಾವು ಕಿಶನ್, ಇನ್ನೂ ಮೂರು ನಾಲ್ಕು ಜನ ಒಟ್ಟಿಗೆ ಸೇರಿ ರೀಲ್ಸ್ ಮಾಡಿದ್ದೆವು. ಅದು ತುಂಬಾ ವೈರಲ್ ಆಗಿತ್ತು. ರೀಲ್ಸ್​​ನಲ್ಲಿ ನವಿಲು ಗರಿಗಳನ್ನು ಬಳಸಿದ್ದೆವು. ಆದರೆ ನಮಗೆ ಗೊತ್ತರಲಿಲ್ಲ ಗರಿ ಬಳಕೆ ಮಾಡಿದರೆ ಕಾನೂನು ಉಲ್ಲಂಘನೆ ಅಂತ. ಆದರೆ ಈಗ ಗೊತ್ತಾಗಿದೆ . ಅದಕ್ಕೆ ನಾವು ಕ್ಷಮೆ ಕೇಳ್ತಿವಿ ಹಾಗೇ ಯಾರು ವನ್ಯ ಜೀವಿ ವಸ್ತುಗಳನ್ನು ಮನೆಯಲ್ಲಿ ಇಟ್ಕೊಬೇಡಿ ಮನೇಲಿ ಅಥವಾ ಈ ರೀತಿಯ ಡಾನ್ಸ್ ಗೆ ಬಳಸಬೇಡಿ ಕಾನೂನು ಅಪರಾಧ ಇದು. ನಾವು ತನಿಖೆಗೆ ಸಹಕರಿಸುತ್ತಿದ್ದೀವಿ ಎಂದು ನಿವೇದಿತಾ ಗೌಡ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಂಕಿತ ಉಗ್ರ ಸುಹೇಲ್ ಬಗ್ಗೆ ಸ್ಫೋಟಕ ಮಾಹಿತಿ ಕೊಟ್ಟ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ – Kannada News | Pakistani Terror Links Exposed: Davanagere SP Reveals Shocking Details of Suspected Terrorist Suhail Arrested in Harihar

ದಾವಣಗೆರೆ, ಜೂನ್​​ 24: ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಜೂನ್​​ 23) ಉತ್ತರಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20) ಬಂಧನ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್​.ಟಿ.ಶೇಖರ್​ ಮಾಹಿತಿ ನೀಡಿದ್ದಾರೆ. 15 ದಿನಗಳ ಹಿಂದೆ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದ ಈತ,ಕಾರ್ಖಾನೆ ಬಳಿಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಅನುಮಾನದ ಮೇರೆಗೆ ಆರೋಪಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಆರೋಪಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದು, ಈತನ ಮೊಬೈಲ್​ನಲ್ಲಿ ಮತ್ತಷ್ಟು ವಿಷಯ ಪತ್ತೆಯಾಗಿದೆ. ಈತ ಪಾಕ್​ ಸಂಘಟನೆಗಳ ಜೊತೆ ನಂಟು ಹೊಂದಿರುವ ವಿಚಾರ ಬಹಿರಂಗವಾಗಿದ್ದು, ಆರೋಪಿ ವಿರುದ್ಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ಜಾಲತಾಣಗಳ ಮೂಲಕ ಹಲವು ಉಗ್ರ ಸಂಘಟನೆಗಳ ನಂಟಿದ್ದು, ಆ ಪೈಕಿ ವಿದ್ವಂಸಕ ಕೃತ್ಯಗಳ ಹಿನ್ನೆಲೆ ಇರುವ ಸಂಘಟನೆಗಳೂ ಇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡೆಲಿವರಿ ಬಾಯ್ ಆಗಿದ್ದವ ಇವತ್ತು ವಾಟ್ಸಾಪ್ ಬಾಸ್; ಕುಟುಂಬ ದಿವಾಳಿ ಎದ್ದರೂ ಜಗ್ಗದೆ ಗೆಲ್ಲಲು ಹೊರಟ ಸ್ಟ್ರೀಟ್​ಸ್ಮಾರ್ಟ್ ಹುಡುಗ ಕುನಾಲ್ ಶಾ – Kannada News | Delivery boy to WhatsApp boss, the inspiring journey of Kunal Shah

ಮೊನ್ನೆಯಿಂದ ಕುನಾಲ್ ಶಾ (Kunal Shah) ಟ್ರೆಂಡಿಂಗ್​ನಲ್ಲಿದ್ದಾರೆ. ಫ್ರೀಚಾರ್ಜ್, ಕ್ರೆಡ್ ಎನ್ನುವ ಕಂಪನಿಗಳನ್ನು ಹುಟ್ಟುಹಾಕಿ ಹೆಸರುವಾಸಿಯಾಗಿರುವ ಕುನಾಲ್ ಅವರ ಹಿಂದೆ, ಹೆಸರುವಾಸಿಯಾಗದ ಮತ್ತು ಎಲೆಮರೆಕಾಯಿಯಾಗಿರುವ ಅನೇಕ ಗಹನ ಸಂಗತಿಗಳಿವೆ. ಅವೆಲ್ಲವೂ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕುನಾಲ್ ಶಾ ಅವರು ತಮ್ಮ ಕ್ರೆಡ್ ಕಂಪನಿಗೆ ಮೆಟಾದಿಂದ ಬರೋಬ್ಬರಿ 8,500 ಕೋಟಿ ರೂ ಮೌಲ್ಯದಷ್ಟು ಬಂಡವಾಳ ಆಕರ್ಷಿಸಿದೆ. ಅಷ್ಟು ಮಾತ್ರವಲ್ಲ, ಮೆಟಾದ ವಾಟ್ಸಾಪ್ ಪ್ಲಾಟ್​ಫಾರ್ಮ್​ಗೆ ಕುನಾಲ್ ಮುಖ್ಯಸ್ಥರಾಗಿದ್ದಾರೆ. ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗೆ ಕುನಾಲ್ ಬಾಸ್ ಆಗಿದ್ದಾರೆ. ಕುನಾಲ್ ಈ ಹಂತಕ್ಕೆ ಬರುವ ಮುನ್ನ, ಬರುವ ಹಾದಿಯಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಧನೆಗೆ ತಡೆಯಾಗಿರುವುದು ಹಣವನ್ನ, ಬದಲಾಗಿ ಮನಸ್ಥಿತಿ ಎಂಬುದನ್ನು ಜಗತ್ತಿಗೆ ತೋರಿಸಿದವರು ಅವರು.

15ನೇ ವಯಸ್ಸಿನಲ್ಲಿ ಡೆಲಿವರಿ ಬಾಯ್ ಆಗಿದ್ದ ಕುನಾಲ್

ಮುಂಬೈನವರಾದ ಕುನಾಲ್ ಶಾ ಅವರು ಹುಟ್ಟು ಬಡವರಲ್ಲ. ಅವರ ತಂದೆ ಬ್ಯುಸಿನೆಸ್​ಮ್ಯಾನ್ ಆಗಿದ್ದರು. ಆದರೆ, ಕುನಾಲ್ ಶಾಲೆ ಮುಗಿಸುವ ಹಂತದಲ್ಲಿದ್ದಾಗ ಅವರ ತಂದೆ ಬ್ಯುಸಿನೆಸ್​ನಲ್ಲಿ ದಿವಾಳಿ ಎದ್ದಿದ್ದರು. ಪಾಪರ್ ಆಗಿ ಹೋಗಿತ್ತು ಅವರ ಕುಟುಂಬ. ಆಗ ಕುನಾಲ್​ಗೆ 15 ವರ್ಷ. ಜೀವನೋಪಾಯಕ್ಕೆ ಅವರು ಓದಿನ ಜೊತೆಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡತೊಡಗಿದರು.

ಡೆಲಿವರಿ ಬಾಯ್ ಕೆಲಸ, ಡಾಟಾ ಆಪರೇಟರ್ ಕೆಲಸ ಮಾಡುತ್ತಿದ್ದರು. ಹೋಗುತ್ತಾ ಹೋಗುತ್ತಾ ಅವರು ಇನ್ನೂ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಹೋದರು. ಮೆಹಂದಿ ಕೋನ್​ಗಳ ಮಾರಾಟ, ಸೈಬರ್ ಕೆಫೆ ಆಪರೇಟರ್, ಪೈರೇಟೆಡ್ ಸಿಡಿ ಮಾರಾಟ, ಕಂಪ್ಯೂಟರ್ ಟೂಟರ್, ಹೀಗೆ ಕೆಲಸ ಮಾಡುತ್ತಾ ಅವರು ಹಣ ಗಳಿಸುವ ಉಮೇದಿಗೆ ಬಿದ್ದರು.

ಇದನ್ನೂ ಓದಿ: ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್​ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ

ಹಣ ಸಂಪಾದನೆಯಲ್ಲಿದ್ದ ಕುನಾಲ್, ಫಿಲಾಸಫಿ ಸೇರಿದ ಕಥೆ

ಇವತ್ತಿನ ಕಾರ್ಪೊರೇಟ್ ಜಗತ್ತಿನಲ್ಲಿ ಬಹುತೇಕ ಎಲ್ಲಾ ಕಂಪನಿಗಳ ಸಿಇಒಗಳು ಐಐಟಿ ಅಥವಾ ಐಐಎಂಗಳಲ್ಲಿ ಓದಿದವರೇ ಆಗಿದ್ಧಾರೆ. ಆದರೆ, ಕುನಾಲ್ ಶಾ ಪೂರ್ಣ ಓದಿದ್ದು ಬಿಎ ಮಾತ್ರ. ಎಂಬಿಎ ಒಂದು ವರ್ಷಕ್ಕೇ ತಿಲಾಂಜಲಿ ಹಾಡಿ ಹೊರಬಂದಿದ್ದರು. ಬಿಎನಲ್ಲಿ ಅವರು ತೆಗೆದುಕೊಂಡಿದ್ದು ಫಿಲಾಸಫಿ. ಈ ಸಬ್ಜೆಕ್ಟ್ ತೆಗೆದುಕೊಳ್ಳುವುದರ ಹಿಂದೆ ಇವರ ವೈಯಕ್ತಿಕ ವ್ಯಾಮೋಹ ಇರಲಿಲ್ಲ. ಡೆಲಿವರಿ ಬಾಯ್, ಡಾಟಾ ಎಂಟ್ರಿ ಆಪರೇಟರ್ ಕೆಲಸಗಳಿಗೆ ಹೊಂದಿಕೆಯಾಗುವ ಸಮಯ ಇತ್ತು ಎನ್ನುವ ಕಾರಣಕ್ಕೆ ಬಿಎನಲ್ಲಿ ಫಿಲಾಸಫಿ ತೆಗೆದುಕೊಂಡರಂತೆ. ಬೆಳಗ್ಗೆ 8ರಿಂದ 10ರವರೆಗೆ ಕ್ಲಾಸ್​ಗಳಿದ್ದವು. ಅದನ್ನು ಮುಗಿಸಿ ಇವರು ತಮ್ಮ ಕಾಯಕ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು.

ಪದವಿಗೆ ಬೆಲೆ ಕೊಡದ ಕುನಾಲ್ ಶಾ

ಕುನಾಲ್ ಶಾ ಅವರು ಕಷ್ಟ ಮೆಟ್ಟಿಕೊಂಡು ಬೆಳೆದವರು. ಓದಿನಿಂದ ಮಾತ್ರವೇ ಯಶಸ್ಸು ಸಿಗುತ್ತದೆ ಎನ್ನುವ ಸಿದ್ಧಾಂತವನ್ನು ಮುರಿದವರು. ತಮ್ಮ ಕಂಪನಿಗೆ ನೇಮಕಾತಿ ಮಾಡಿಕೊಳ್ಳುವಾಗಲೂ ಅವರದ್ದು ಇದೇ ಧೋರಣೆ. ಅಭ್ಯರ್ಥಿಗಳ ಡಿಗ್ರಿಗಿಂತ ಹೆಚ್ಚಾಗಿ ಪ್ರತಿಭೆಯನ್ನು ಗುರುತಿಸಿ ಕೆಲಸ ಕೊಡುತ್ತಿದ್ದಂತೆ. ಕ್ರೆಡ್ ಕಂಪನಿಯಲ್ಲಿ ನಾಯಕತ್ವದ ಹುದ್ದೆಯಲ್ಲಿದ್ದ ಒಬ್ಬ ವ್ಯಕ್ತಿ ಓದಿದ್ದು 10ನೇ ಕ್ಲಾಸ್ ಮಾತ್ರ.

ಕಚೇರಿಯಲ್ಲಿ ಗಾಂಭೀರ್ಯತೆಯ ವಾತಾವರಣ ಬಯಸುವ ಜಾಯಮಾನದವರಾಗಿರಲಿಲ್ಲ ಕುನಾಲ್. ಕ್ರೆಡ್​ನಲ್ಲಿ ಉದ್ಯೋಗಿಗಳು ಪರಸ್ಪರ ಕಾಲೆಳೆಯಲು, ಮೀಮ್ಸ್ ಮಾಡಲು ಸ್ವಾತಂತ್ರ್ಯ ಹೊಂದಿದ್ದರು.

250-300 ಕಂಪನಿಗಳಿಗೆ ಏಂಜೆಲ್ ಇನ್ವೆಸ್ಟರ್

ಕುನಾಲ್ ಶಾ ಸಾಧನೆ ಫ್ರೀಚಾರ್ಜ್ ಮತ್ತು ಕ್ರೆಡ್ ಕಂಪನಿಗಳನ್ನು ಕಟ್ಟಿದ್ದಷ್ಟೇ ಅಲ್ಲ, ಅವರೊಬ್ಬ ಅದ್ಭುತ ಏಂಜೆಲ್ ಇನ್ವೆಸ್ಟರ್. ಬಹುತೇಕ 300 ಕಂಪನಿಗಳನ್ನು ಬಂಡವಾಳ ಮೂಲಕ ಪೋಷಿಸಿದ್ದಾರೆ. ಏಂಜೆಲ್ ಇನ್ವೆಸ್ಟರ್ ಎಂದರೆ ತಮ್ಮ ವೈಯಕ್ತಿಕ ಹಣವನ್ನು ಸ್ಟಾರ್ಟಪ್​ಗಳಿಗೆ ಸೀಡ್ ಕ್ಯಾಪಿಟಲ್ ಅಥವಾ ಆರಂಭಿಕ ಬಂಡವಾಳವಾಗಿ ನೀಡುವುದು. ಈ ಬಂಡವಾಳದ ಬದಲಾಗಿ, ಆ ಸ್ಟಾರ್ಟಪ್​ನಲ್ಲಿ ಷೇರುಪಾಲು ಪಡೆಯುತ್ತಾರೆ.

ಇದನ್ನೂ ಓದಿ: ಯುಎಇಯಲ್ಲಿ ಬರಲಿದೆ ಮೊದಲ ಪ್ಯಾಸೆಂಜರ್ ರೈಲು; ಮುಂದುವರಿದ ದೇಶಕ್ಕೆ ತಡವಾಗಿ ಬಂತಾ ರೈಲು? ಇಲ್ಲಿದೆ ವಾಸ್ತವ

ಇನ್ಫೋಸಿಸ್, ವಿಪ್ರೋದಂಥ ಕಂಪನಿಗಳಲ್ಲಿ ಫ್ರೆಶರ್ ಕೆಲಸವೂ ಕುನಾಲ್​ಗೆ ಸಿಗುತ್ತಿರಲಿಲ್ಲ

ಕಾರ್ಪೊರೇಟ್ ಜಗತ್ತಿನಲ್ಲಿ ಇವತ್ತೂ ಕೂಡ ನೇಮಕಾತಿ ವೇಳೆ ಪದವಿಗಳನ್ನು ನೋಡುವವರು ಹೆಚ್ಚಿದ್ದಾರೆ. ಸ್ಟಾರ್ಟಪ್​ವೊಂದರ ಸ್ಥಾಪಕಿ ರಿಯಾ ಉಪ್ರೇತಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ಕುನಾಲ್ ಅವರಿಗೆ ಹೋಲಿಕೆ ಮಾಡಿದ್ದಾರೆ.

‘ಕುನಾಲ್ ಶಾ ಅವರು ಐಐಟಿ ಅಥವಾ ಐಐಎಂ ಡಿಗ್ರಿ ಹೊಂದಿಲ್ಲ. ಅವರಲ್ಲಿ ಬಿಎ ಡಿಗ್ರಿ ಇದೆ. ಇವತ್ತು ಅವರು ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಗೆ, ಅಥವಾ ಫ್ರೆಶರ್ ಹುದ್ದೆಗೂ ಅರ್ಜಿ ಸಲ್ಲಿಸಿದರೆ, ಟಿಸಿಎಸ್, ಇನ್ಫೋಸಿಸ್​ನಂತಹ ಕಂಪನಿಗಳು ಅವರನ್ನು ಶಾರ್ಟ್​ಲಿಸ್ಟ್ ಕೂಡ ಮಾಡುವುದಿಲ್ಲ. ಇವತ್ತು ಕುನಾಲ್ ಅವರು ವಾಟ್ಸಾಪ್​ನ ಮುಖ್ಯಸ್ಥರಾಗಿದ್ದಾರೆ’ ಎಂದು ಉಪ್ರೇತಿ ಅವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಟ್ಟಿಗೆ ಭಟ್ಟಿಯಲ್ಲಿ 20 ವರ್ಷಗಳಿಂದ ಜೀತದಾಳುಗಳಾಗಿದ್ದ 18 ಕಾರ್ಮಿಕರ ರಕ್ಷಣೆ; ಮೂವರು ಮಾಲೀಕರ ಬಂಧನ! – Kannada News | 18 Bonded Labourers Rescued from Brick Kiln in Mysuru, Three Owners Arrested

ಇಟ್ಟಿಗೆ ಭಟ್ಟಿಯಲ್ಲಿ 20 ವರ್ಷಗಳಿಂದ ಜೀತದಾಳುಗಳಾಗಿದ್ದ 18 ಕಾರ್ಮಿಕರ ರಕ್ಷಣೆ

ಮೈಸೂರು, ಜೂನ್ 24: ಸಾಲದ ಸುಳಿಗೆ ಸಿಲುಕಿ ದಶಕಗಳಿಂದ ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು, ಕಂದಾಯ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಮೈಸೂರು (Mysuru) ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೇವನಹಳ್ಳಿ ಗ್ರಾಮದಲ್ಲಿ ಸೋಮವಾರ ಈ ಕಾರ್ಯಾಚರಣೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿಯ ಮೂವರು ಮಾಲೀಕರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು

  • ಮೈಸೂರಿನ ಇಟ್ಟಿಗೆ ಭಟ್ಟಿಯಲ್ಲಿ ಜೀತದಲ್ಲಿದ್ದ ಹದಿನೆಂಟು ಕಾರ್ಮಿಕರನ್ನು ರಕ್ಷಿಸಿದ ಅಧಿಕಾರಿಗಳು.
  • ದಶಕಗಳಿಂದ ಶೋಷಣೆ ಅನುಭವಿಸುತ್ತಿದ್ದ ಮೂವರು ಇಟ್ಟಿಗೆ ಭಟ್ಟಿ ಮಾಲೀಕರ ಬಂಧನ.
  • ತಲೆಮರೆಸಿಕೊಂಡಿದ್ದ ದಂಪತಿಯ ಸಾಹಸದಿಂದ ಬಯಲಾದ ಜೀತ ಪದ್ಧತಿಯ ಭೀಕರ ದೌರ್ಜನ್ಯ.

ಬಂಧಿತರನ್ನು ಯತಿರಾಜ್, ಗಿರೀಶ್ ಮತ್ತು ಮಹದೇವ್ ಎಂದು ಗುರುತಿಸಲಾಗಿದೆ. ಇವರು ಕಾರ್ಮಿಕರನ್ನುಸುಮಾರು 20 ವರ್ಷಗಳ ಕಾಲ ಜೀತ ಪದ್ಧತಿಯಲ್ಲಿ ಇಟ್ಟುಕೊಂಡಿದ್ದರು. ರಕ್ಷಿಸಲ್ಪಟ್ಟವರಲ್ಲಿ 16 ಮಂದಿ ಸ್ಥಳೀಯ ಗ್ರಾಮಗಳಿಗೆ ಸೇರಿದವರಾಗಿದ್ದರೆ, ಇನ್ನಿಬ್ಬರು ತಮಿಳುನಾಡಿನ ವೆಲ್ಲೂರು ಜಿಲ್ಲೆಯವರಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ದಂಪತಿಯ ಸಾಹಸದಿಂದ ಬಯಲಾದ ದೌರ್ಜನ್ಯ

ಕಳೆದ ಶುಕ್ರವಾರ ಇಟ್ಟಿಗೆ ಭಟ್ಟಿಯಿಂದ ಗಂಡ ಹೆಂಡತಿಯರು ತಮ್ಮ ಇಬ್ಬರು ಮಕ್ಕಳನ್ನು ಅಲ್ಲೇ ಬಿಟ್ಟು ಹೇಗೋ ತಪ್ಪಿಸಿಕೊಂಡು ಮೈಸೂರಿನ ಸಂಬಂಧಿಕರ ಮನೆಗೆ ಬಂದು ಆಶ್ರಯ ಪಡೆದಿದ್ದರು. ಮಾಲೀಕ ಶೋಷಣೆ ತಡೆಯಲಾರದೆ ದಂಪತಿ ಕಾಲ್ಕಿತ್ತಿದ್ದರು. ಆದರೆ ಭಾನುವಾರ ಇವರನ್ನು ಪತ್ತೆಹಚ್ಚಿದ ಮಾಲೀಕರು, ಬಲವಂತವಾಗಿ ಮತ್ತೆ ಭಟ್ಟಿಗೆ ಕರೆತಂದು, ತೀವ್ರವಾಗಿ ಥಳಿಸಿ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.

ಈ ದಂಪತಿ 8 ವರ್ಷಗಳ ಹಿಂದೆ ಮಾಲೀಕರಿಂದ 75,000 ರೂಪಾಯಿ ಮುಂಗಡ ಹಣ ಪಡೆದಿದ್ದರು. ಅಂದಿನಿಂದ ಇಡೀ ಕುಟುಂಬ ಜೀತಕ್ಕೆ ಸಿಲುಕಿದೆ ಎನ್ನಲಾಗಿದೆ. ದಂಪತಿಗೆ 9 ಮತ್ತು 13 ವರ್ಷದ ಇಬ್ಬರು ಮಕ್ಕಳಿದ್ದು, ಅವರನ್ನೂ ಬಲವಂತವಾಗಿ ಜೀತಕ್ಕೆ ತಳ್ಳಲಾಗಿತ್ತು. ಕಿರಿಯ ಮಗು ಶಾಲೆಗೆ ಹೋಗುತ್ತಿದ್ದರೂ, ಶಾಲೆಯ ಮುನ್ನ ಮತ್ತು ನಂತರದ ಅವಧಿಯಲ್ಲಿ ಕೆಲಸ ಮಾಡಬೇಕಿತ್ತು.

ಬೆಳಗ್ಗೆ 5 ರಿಂದ ಸಂಜೆ 6 ರವರೆಗೆ ನರಕಯಾತನೆ!

ಇಲ್ಲಿನ ಕಾರ್ಮಿಕರು ಪ್ರತಿದಿನ ಮುಂಜಾನೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸತತವಾಗಿ ದುಡಿಯಬೇಕಿತ್ತು. ಆದರೂ ಇಡೀ ಕುಟುಂಬಕ್ಕೆ ವಾರಕ್ಕೆ ಸಿಗುತ್ತಿದ್ದ ಕೂಲಿ ಕೇವಲ 500 ರಿಂದ 1,000 ರೂಪಾಯಿ ಮಾತ್ರ. ಮಾಲೀಕನೇ ಕೆಜಿಗೆ 30 ರೂಪಾಯಿಯಂತೆ ಅಕ್ಕಿ ನೀಡುತ್ತಿದ್ದು, ಆ ಹಣವನ್ನು ಇವರ ವಾರದ ಕೂಲಿಯಿಂದ ಕಡಿತಗೊಳಿಸುತ್ತಿದ್ದ ಎನ್ನಲಾಗಿದೆ. ದಿನಸಿ ತರಲು ಕುಟುಂಬದ ಒಬ್ಬ ಗಂಡಸಿಗೆ ಮಾತ್ರ ಅಪರೂಪಕ್ಕೆ ಹೊರಗಡೆ ಹೋಗಲು ಬಿಡಲಾಗುತ್ತಿತ್ತು. ಯಾವುದೇ ಕೌಟುಂಬಿಕ ಸಮಾರಂಭಗಳಿಗಾಗಲಿ ಅಥವಾ ಸ್ವಂತ ಮನೆಗಾಗಲಿ ಇಡೀ ಕುಟುಂಬ ಒಟ್ಟಿಗೆ ಹೋಗುವಂತಿರಲಿಲ್ಲ. ವರ್ಷಗಟ್ಟಲೆ ದುಡಿದರೂ, ಮುಂಗಡ ಹಣಕ್ಕೆ ವಿಪರೀತ ಬಡ್ಡಿ ವಿಧಿಸಿ ಮಾಲೀಕರು ಇವರನ್ನು ಬಿಡುಗಡೆ ಮಾಡಲು ನಿರಾಕರಿಸುತ್ತಿದ್ದರು. ಕೆಲಸ ಬಿಡಲು ಕೇಳಿದವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಜಂಟಿ ಕಾರ್ಯಾಚರಣೆ

‘ವಿಕಸನ’ ಮತ್ತು ‘ಮಡಿಲು’ ಸ್ವಯಂಸೇವಾ ಸಂಸ್ಥೆಗಳು (NGO) ಈ ಶೋಷಣೆಯನ್ನು ಅಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಹಶೀಲ್ದಾರ್, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ ಕಾರ್ಮಿಕರನ್ನು ಮುಕ್ತಗೊಳಿಸಿದ್ದಾರೆ.

ಬನ್ನೂರು ಪೊಲೀಸ್ ಠಾಣೆಯಲ್ಲಿ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಮಾನವ ಸಾಗಣೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ರಕ್ಷಿಸಲ್ಪಟ್ಟವರನ್ನು ಜಿಲ್ಲಾಡಳಿತದ ಆಶ್ರಯ ತಾಣದಲ್ಲಿ ಇರಿಸಲಾಗಿದ್ದು, ನಿಯಮಾವಳಿಗಳ ಪ್ರಕಾರ 48 ಗಂಟೆಗಳ ಒಳಗೆ ತಲಾ 30,000 ರೂಪಾಯಿ ಪ್ರಾಥಮಿಕ ಪರಿಹಾರ ಮತ್ತು ಬಿಡುಗಡೆ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣ್​​ಬೀರ್ ಕಪೂರ್ ಸಿನಿಮಾ ಸೆಟ್​​ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್​​ಐಆರ್​​ಗೆ ಆಗ್ರಹ – Kannada News | AICWA write letter Maharashtra CM demanding FIR against director Sanjay leela Bansali

ಎಷ್ಟೆ ಆಧುನಿಕ ತಂತ್ರಜ್ಞಾನ, ಭದ್ರತಾ ಸೌಕರ್ಯಗಳು, ಕಾನೂನು, ನಿಯಮಗಳು ಬಂದರೂ ಸಹ ಸಿನಿಮಾ (Cinema) ಸೆಟ್​​ಗಳಲ್ಲಿ ಕಾರ್ಮಿಕರ ಸಾವುಗಳು ನಿಂತಿಲ್ಲ. ವರ್ಷಕ್ಕೆ ಐದಾರು ಮಂದಿಯಾದರೂ ಸೆಟ್​​ಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಲೇ ಬರುತ್ತಿದ್ದಾರೆ. ಭಾರಿ ಬಜೆಟ್​​ನ ದೊಡ್ಡ ನಿರ್ಮಾಣ ಸಂಸ್ಥೆಯ ಸೆಟ್​​ಗಳಲ್ಲೂ ಸಹ ಕಾರ್ಮಿಕರ ಸಾವು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಬಾಲಿವುಡ್​​ನ ಸ್ಟಾರ್​​ ನಟರಾದ ರಣ್​​ಬೀರ್ ಕಪೂರ್, ವಿಕ್ಕಿ ಕೌಶಲ್, ಆಲಿಯಾ ಭಟ್ ನಟಿಸುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾದ ಸೆಟ್​​ನಲ್ಲಿ ಕಾರ್ಮಿಕರೊಬ್ಬರ ನಿಧನ ಹೊಂದಿದ್ದಾರೆ. ಇದೀಗ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್​ಐಆರ್ ದಾಖಲಿಸಬೇಕು ಎಂದು ಕಾರ್ಮಿಕ ಸಂಘಟನೆ ಆಗ್ರಹಿಸಿದೆ.

‘ಲವ್ ಅಂಡ್ ವಾರ್’ ಚಿತ್ರೀಕರಣವು ಮುಂಬೈನಲ್ಲಿ ನಡೆಯುತ್ತಿದ್ದಾಗ, ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದ ಚಂದ್ರಧಾರಿ ಸಿಂಗ್ ಯಾದವ್ ಎಂಬ ಸಿಬ್ಬಂದಿಯೊಬ್ಬರು ಮೃತಪಟ್ಟರು. ಈಗ, ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದು, ಬನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲಿಸಲು, ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಲು ಒತ್ತಾಯಿಸಿದೆ. ಜೊತೆಗೆ ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ.

ಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಶಾಮ್‌ಲಾಲ್ ಗುಪ್ತಾ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರವನ್ನು, ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಈ ಘಟನೆಯು ಚಿತ್ರೀಕರಣದ ಸೆಟ್‌ಗಳಲ್ಲಿ ಕೆಲಸದ ಸ್ಥಳದ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಂಭೀರ ಕಳವಳವನ್ನು ಉಂಟುಮಾಡಿದೆ. ರಣಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ಅವರಂತಹ ಪ್ರಮುಖ ನಟರನ್ನು ಒಳಗೊಂಡ ದೊಡ್ಡ ಮಟ್ಟದ ನಿರ್ಮಾಣವಾಗಿದ್ದರೂ, ಸೆಟ್‌ನಲ್ಲಿ ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿಲ್ಲ, ಇದು ಕಾರ್ಮಿಕನ ದುರದೃಷ್ಟಕರ ಸಾವಿಗೆ ಕಾರಣವಾಯಿತು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು’ ಎಂದಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾನಲ್ಲಿ ‘ಗನ್ ಎಕ್ಸ್​ಪರ್ಟ್’ ಟಿಟಿಯಾನಾ ಹಾಟ್ ಅವತಾರ

ಪತ್ರದಲ್ಲಿ ಸುರೇಶ್ ಅವರು ಮೃತರಿಗೆ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಕುಟುಂಬದ ಏಕೈಕ ಗಳಿಕೆಯ ಸದಸ್ಯರಾಗಿದ್ದರಿಂದ, ಅವರ ಸಾವು ಕುಟುಂಬಕ್ಕೆ ತೀವ್ರ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟವನ್ನು ಉಂಟುಮಾಡಿದೆ. ಹಾಗಾಗಿ ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒಕ್ಕೂಟವು ಆಗ್ರಹಿಸಿದೆ.

ಎಐಸಿಡಬ್ಲ್ಯೂಎ ಅಧ್ಯಕ್ಷರು ಬನ್ಸಾಲಿ ಅವರ ಚಿತ್ರಗಳ ಸೆಟ್‌ಗಳಲ್ಲಿ ಈ ಹಿಂದೆ ನಡೆದ ಅಪಘಾತಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ‘ಕಳೆದ ಹಲವು ವರ್ಷಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಗಳ ಸೆಟ್‌ಗಳಲ್ಲಿ ಹಲವು ಗಂಭೀರ ಘಟನೆಗಳು ವರದಿಯಾಗಿವೆ. ‘ದೇವದಾಸ್’ ನಿರ್ಮಾಣದ ಸಮಯದಲ್ಲಿ ಕಾರ್ಮಿಕ ದಿನ್ದಯಾಳ್ ಯಾದವ್ ಮೃತಪಟ್ಟರು, ಇನ್ನೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡರು, ಮತ್ತು 2001 ರಲ್ಲಿ ಅದೇ ನಿರ್ಮಾಣದ ಸಮಯದಲ್ಲಿ ಸುಭಾಷ್ ಮೋರ್ಕರ್ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ‘ಪದ್ಮಾವತ್’ ಸಿನಿಮಾ ನಿರ್ಮಾಣದ ಸಮಯದಲ್ಲಿ 34 ವರ್ಷದ ಕಾರ್ಮಿಕ ಮುಖೇಶ್ ಡಕಿಯಾ ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ, ‘ಲವ್ ಅಂಡ್ ವಾರ್’ ನಿರ್ಮಾಣದ ಸಮಯದಲ್ಲಿ ಜೂನ್ 17, 2026 ರಂದು ಚಂದ್ರಧಾರಿ ಸಿಂಗ್ ಯಾದವ್ ಅವರು ಮೃತಪಟ್ಟಿದ್ದಾರೆ. ಹಾಗಾಗಿ ಅವರ ವಿರುದ್ಧ ಕೂಡಲೇ ಎಫ್​​ಐಆರ್ ದಾಖಲಿಸಬೇಕು, ಹಾಗೂ ಅವರ ಸಿನಿಮಾಗಳ ಸೆಟ್​​ನ ಸೇಫ್ಟಿ ಆಡಿಟ್ ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆ ರಾಮಮಂದಿರ ದೇಣಿಗೆ ವಂಚನೆ: ಲಕ್ನೋ ಹೈಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ – Kannada News | Ayodhya Ram Temple Donation Scam: Lucknow High Court to Hear Plea for Independent Probe Today

ಲಕ್ನೋ, ಜೂನ್ 24:ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಕ್ಕೆ ಸಂಗ್ರಹವಾದ ದೇಣಿಗೆಯಲ್ಲಿ ಕೋಟಿ ಕೋಟಿ ರೂಪಾಯಿ ವಂಚನೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಕ್ನೋ ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ ವಿಚಾರಣೆ ನಡೆಯಲಿದೆ. ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಹಣ ಹಾಗೂ ಚಿನ್ನಾಭರಣಗಳ ಕಳ್ಳಾಟದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

ಸಲ್ಲಿಕೆಯಾಗಿರುವ ಅರ್ಜಿಯಲ್ಲಿ, ರಾಮಮಂದಿರ ದೇಣಿಗೆಯಲ್ಲಿ 1,250 ಕೆಜಿ ಚಿನ್ನ, 70 ಕೆಜಿ ಬೆಳ್ಳಿ ಮತ್ತು 200 ಕೋಟಿ ರೂಪಾಯಿ ನಗದು ಹಣ ದುರ್ಬಳಕೆಯಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಬೃಹತ್ ಹಗರಣದ ಸಮಗ್ರ ತನಿಖೆಗೆ ಸ್ವತಂತ್ರ ತನಿಖಾ ಸಂಸ್ಥೆಯನ್ನು (SIT) ನೇಮಿಸುವಂತೆ ಆಗ್ರಹಿಸಲಾಗಿದೆ. ರಾಮಮಂದಿರಕ್ಕಾಗಿ ಭಕ್ತರು ಭಕ್ತಿ ಭಾವದಿಂದ ನೀಡಿದ ದೇಣಿಗೆಯಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿಯಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ.

ಈ ವಿಚಾರವಾಗಿ ಈಗಾಗಲೇ ಗೃಹ ಸಚಿವಾಲಯಕ್ಕೆ ಎಸ್ಐಟಿ ಒಂದು ವರದಿಯನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ. ಇದರ ಮಧ್ಯೆ, ಈ ಪ್ರಕರಣದ ಬಗ್ಗೆ ಇನ್ನಷ್ಟು ಆಳವಾದ ಮತ್ತು ಪಕ್ಷಪಾತರಹಿತ ತನಿಖೆ ಅಗತ್ಯ ಎಂಬ ಕೂಗು ಕೇಳಿಬಂದಿದ್ದು, ನ್ಯಾಯಾಲಯದ ಮೊರೆ ಹೋಗಲಾಗಿದೆ. ದೇಣಿಗೆ ಹಣ ಮತ್ತು ಆಭರಣಗಳ ದುರ್ಬಳಕೆ ಕುರಿತು ನ್ಯಾಯಯುತ ತನಿಖೆಯಾಗಬೇಕು ಎಂಬುದು ಅರ್ಜಿದಾರರ ಪ್ರಮುಖ ಬೇಡಿಕೆಯಾಗಿದೆ. ಇಂದು ಲಕ್ನೋ ಹೈಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version