ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ

ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ

ಪಾಕಿಸ್ತಾನ ಸೂಪರ್ ಲೀಗ್ (PSL) ಆರಂಭ ಆಗಿದೆ. ಮಾರ್ಚ್ 26ರಂದು ಓಪನಿಂಗ್ ಮ್ಯಾಚ್ ನಡೆದಿದೆ. ಆದರೆ, ಈ ಪಂದ್ಯವನ್ನು ನೋಡಲು ಒಬ್ಬೇ ಒಬ್ಬರೂ ಬಂದಿರಲಿಲ್ಲ. ಹಾಗಂತ ಇದರ ಮೇಲೆ ಯಾರೊಬ್ಬರಿಗೂ ಆಸಕ್ತಿ ಇಲ್ಲ ಎಂದಲ್ಲ. ಇದಕ್ಕೆ ಕಾರಣ ಆಗಿದ್ದು ಇಸ್ರೇಲ್​-ಅಮೆರಿಕ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ. ಈ ಯುದ್ಧ ಪಿಎಸ್​​​ಎಲ್​ ಮೇಲೆ ನೇರ ಪರಿಣಾಮ ಬೀರಿದೆ.

ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಒಟ್ಟೂ 8 ತಂಡಗಳು ಆಡುತ್ತಿವೆ. ಮಾರ್ಚ್ 26ರಿಂದ ಆರಂಭ ಆಗಿ ಮೇ 3ರಂದು ಫೈನಲ್ ನಡೆಯಲಿದೆ. ಯುದ್ಧದ ಪರಿಸ್ಥಿತಿಯಿಂದ ಇರಾನ್ ಹಾರ್ಮೂಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಹೀಗಾಗಿ, ತೈಲ ಹಾಗೂ ಗ್ಯಾಸ್ ಹಡಗು ಇಲ್ಲಿಂದ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪಾಕಿಸ್ತಾನದಲ್ಲಿ ತೈಲದ ಕೊರತೆ ಉಂಟಾಗಿದೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಪಿಎಸ್​​​ಎಲ್​​ಗೆ ಅಭಿಮಾನಿಗಳು ಬರದಂತೆ ತಡೆ ಹಾಕಲಾಗಿದೆ. ಅಲ್ಲದೆ, ಎಲ್ಲಾ ಪಂದ್ಯಗಳು ಕೇವಲ ಕರಾಚಿ ಹಾಗೂ ಲಾಹೋರ್​​ನಲ್ಲಿ ಮಾತ್ರ ನಡೆಯಲಿವೆ. ಈ ಬಗ್ಗೆ ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿತ್ತು.

ಇದನ್ನೂ ಓದಿ: ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಒಂದೊಮ್ಮೆ ಮೇ 3ರ ಒಳಗೆ ಸದ್ಯದ ಯುದ್ಧದ ಪರಿಸ್ಥಿತಿ ಕೊನೆಯಾಗಿ ತೈಲ ಹಾಗೂ ಗ್ಯಾಸ್ ಮತ್ತೆ ಪೂರೈಕೆ ಆದರೆ, ಫ್ಯಾನ್ಸ್​​ನ ಮತ್ತೆ ಕರೆಸಿಕೊಳ್ಳಲಾಗುವುದು ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಸದ್ಯ ಖಾಲಿ ಸ್ಟೇಡಿಯಂ ಹಾಗೂ ಫೋಟೋ ಹಾಗೂ ವಿಡಿಯೋಗಳನ್ನು ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ‘ಪಾಕಿಸ್ತಾನಕ್ಕೆ ಅವಮಾನ. ಪಿಎಸ್​​​ಎಲ್​ ಪಂದ್ಯ ನೋಡಲು ಯಾರೊಬ್ಬರೂ ಬಂದಿಲ್ಲ’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ ಎಂಬುದು ಕೆಲವರಿಗೆ ಗೊತ್ತಾಗಿದೆ.

ಮೊದಲ ಪಂದ್ಯದ ಫಲಿತಾಂಶ

ಲಾಹೋರ್ ಹಾಗೂ ಹೈದರಾಬಾದ್ ಮಧ್ಯೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಲಾಹೋರ್ 69 ರನ್​​​ಗಳ ಗೆಲುವು ಕಂಡಿದೆ.

ಇನ್ನಷ್ಟು ಕ್ರಿಕೆಟ್​​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದ ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ; 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ಬೆಂಗಳೂರು, ಮಾರ್ಚ್​ 27: ರಾಜ್ಯದ ಹಲವೆಡೆ ಕಳೆದ ಮೂರು-ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗಿದೆ. ಇಂದೂ ಸಹ ಹಲವೆಡೆ ಮಳೆಯಾಗುವ (Weather Forecast) ಸೂಚನೆಯಿದ್ದು, ಹವಾಮಾನ ಇಲಾಖೆ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ಗುಡುಗು, ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಈ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು-ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್​ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ?

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಒಣ ಹವೆಯಿರಲಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರಿನಲ್ಲೂ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮನೆಯಲ್ಲಿದ್ದ ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ಮನೆಮಂದಿ ಶಾಕ್; ವಿಡಿಯೋ ನೋಡಿ

ಚಾಮರಾಜನಗರ, ಮಾರ್ಚ್ 27: ಉಪಯೋಗಿಸದೇ ಇದ್ದ ಟಿವಿಯೊಳಗೆ ಭಾರೀ ಹಾವು ಅಡಗಿದ್ದ ಘಟನೆ ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ದೊಡ್ಡಮಾದಪ್ಪ ಎಂಬವರ ಮನೆಯಲ್ಲಿ ನಡೆದಿದೆ. ಈ ದೃಶ್ಯ ಕಂಡು ಮನೆಮಂದಿ ಬೆಚ್ಚಿಬಿದ್ದಿದ್ದು, ಬಳಿಕ ಉರಗ ತಜ್ಞರ ಸಹಾಯದಿಂದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಹಳೆಯ ಟಿವಿಯೊಳಗೆ ಸುಮಾರು 8 ಅಡಿ ಉದ್ದದ ಕೇರೆಹಾವು ಸೇರಿಕೊಂಡಿತ್ತು. ಟಿವಿಯೊಳಗೆ ಹಾವು ಇರುವುದನ್ನು ಗಮನಿಸಿದ ಮನೆಮಂದಿ ಭಯಗೊಂಡು ತಕ್ಷಣವೇ ಉರಗ ತಜ್ಞರಾದ ಸ್ನೇಕ್ ಚಾಂಪ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಚಾಂಪ್, ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಹೊರತೆಗೆದರು. ಬಳಿಕ ಹಾವನ್ನು ಯಾವುದೇ ಹಾನಿಯಾಗದಂತೆ ಸಮೀಪದ ಕಾಡಿಗೆ ಬಿಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲು ಐದು, ಈಗ ಹತ್ತು ದಿನ, ಹಾರ್ಮುಜ್ ಜಲಸಂಧಿ ತೆರೆಯಲು ಏಪ್ರಿಲ್ 6ರವರೆಗೆ ಗಡುವು ವಿಸ್ತರಿಸಿದ ಟ್ರಂಪ್

ವಾಷಿಂಗ್ಟನ್, ಮಾರ್ಚ್​ 27: ಹಾರ್ಮುಜ್ ಜಲಸಂಧಿ(Hormuz Strait) ತೆರೆಯಲು ಇರಾನ್​ಗೆ ಏಪ್ರಿಲ್ 6ರವರೆಗೆ ಅಮೆರಿಕವು ಗಡುವು ವಿಸ್ತರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಏಪ್ರಿಲ್ 27 ರಂದು ಇರಾನ್‌ಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಗಡುವು ವಿಧಿಸಿದ್ದರು. ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದಾಗ ಅಥವಾ ಅದಕ್ಕೆ ಮಣಿಯದಿದ್ದಾಗ, ಅಮೆರಿಕವು ಹೊಸ ದಿನಾಂಕವನ್ನು ನಿಗದಿಪಡಿಸಿತು.

ಅಮೆರಿಕ ಈಗ ಮತ್ತೊಮ್ಮೆ ಈ ಗಡುವನ್ನು ವಿಸ್ತರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ತಮ್ಮ ಗಡುವನ್ನು ಏಪ್ರಿಲ್ 6 ರವರೆಗೆ ವಿಸ್ತರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಗುರುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಏಪ್ರಿಲ್ 6 ರವರೆಗೆ ಇರಾನ್‌ನ ಇಂಧನ ಸ್ಥಾವರದ ಮೇಲೆ ಬಾಂಬ್ ಹಾಕುವುದಿಲ್ಲ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಉತ್ತಮವಾಗಿ ಮುಂದುವರೆದಿವೆ ಎಂದು ಟ್ರಂಪ್ ಹೇಳಿದ್ದಾರೆ.

ಅವರ ಸರ್ಕಾರವು ಇರಾನ್‌ನ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಇನ್ನೂ 10 ದಿನಗಳವರೆಗೆ ನಿಲ್ಲಿಸುತ್ತದೆ. ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷರು ಇರಾನ್‌ಗೆ ಐದು ದಿನಗಳ ವಿಸ್ತರಣೆಯನ್ನು ನೀಡಿದ್ದರು. ಹಾರ್ಮುಜ್ ಜಲಸಂಧಿ ಐದು ದಿನಗಳಲ್ಲಿ ತೆರೆಯದಿದ್ದರೆ ಮತ್ತು ಇರಾನ್ ಮಾತುಕತೆಗೆ ಬಾರದಿದ್ದರೆ ಅದು ಇದುವರೆಗಿನ ಅತಿದೊಡ್ಡ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು.

ಮತ್ತಷ್ಟು ಓದಿ: ನಾವು ಫ್ರೆಂಡ್ಸ್; ಭಾರತ ಸೇರಿದಂತೆ 5 ದೇಶಗಳಿಗೆ ಹಾರ್ಮುಜ್ ಪ್ರವೇಶಕ್ಕೆ ಇರಾನ್ ಅನುಮತಿ

ಎರಡೂ ದೇಶಗಳ ನಡುವಿನ ಕದನ ವಿರಾಮ ಮಾತುಕತೆಗಳ ಕುರಿತು ಭಿನ್ನಾಭಿಪ್ರಾಯಗಳಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ಮತ್ತು ಇಸ್ರೇಲಿ ನೆಲೆಗಳ ಮೇಲೆ ದಾಳಿ ಮಾಡಿದೆ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ರಫ್ತುಗಳನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿದೆ.

ಯುದ್ಧವನ್ನು ಕೊನೆಗೊಳಿಸಲು 15 ಅಂಶಗಳ ಕಾರ್ಯಸೂಚಿಯನ್ನು ಇರಾನ್‌ಗೆ ಕಳುಹಿಸಲಾಗಿದೆ ಎಂದು ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ದೃಢಪಡಿಸಿದರು, ಆದರೆ ಇರಾನ್ ಅದನ್ನು ಏಕಪಕ್ಷೀಯವೆಂದು ತಿರಸ್ಕರಿಸಿದೆ.

ಎರಡೂ ಕಡೆಯವರು ಕದನ ವಿರಾಮ ಅಥವಾ ರಾಜಿ ಕುರಿತು ಮಾತುಕತೆ ನಡೆಸುವ ವದಂತಿಗಳಿದ್ದರೂ, ಎರಡೂ ಕಡೆಯವರು ಕಟ್ಟುನಿಟ್ಟಿನ ನಿಲುವುಗಳನ್ನು ಹೊಂದಿದ್ದಾರೆ. ಯಾವುದೇ ಔಪಚಾರಿಕ ಮಾತುಕತೆಗಳು ನಡೆಯುತ್ತಿಲ್ಲ ಎಂದು ಹೇಳುವ ಮೂಲಕ ಇರಾನ್ ಈ ಮಾತುಕತೆಗಳನ್ನು ಪದೇ ಪದೇ ನಿರಾಕರಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಾಳಿ ಆಂಜನೇಯ ಸ್ವಾಮಿ ರಥೋತ್ಸವ: ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಬೆಂಗಳೂರು, ಮಾರ್ಚ್ 27: ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ (Gali Anjaneya Swamy Temple) ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವವು ಮಾರ್ಚ್ 27 ರಿಂದ ಮಾರ್ಚ್ 29 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಮೈಸೂರು ರಸ್ತೆಯಲ್ಲಿ (Mysore Road) ಸಂಚಾರ ದಟ್ಟಣೆ ತಪ್ಪಿಸಲು ಬೆಂಗಳೂರು ಸಂಚಾರಿ ಪೊಲೀಸರು ಮಹತ್ವದ ಸಂಚಾರ ಮಾರ್ಪಾಡುಗಳನ್ನು ಮಾಡಿದ್ದಾರೆ.

ಸಂಚಾರ ನಿರ್ಬಂಧ ಎಲ್ಲೆಲ್ಲಿ?

  • ಮಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ: ಮೈಸೂರು ರಸ್ತೆ ಮುಖಾಂತರ ಕೆಂಗೇರಿ ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಕಿಂಕೋ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
  • ಭಾರೀ ವಾಹನಗಳಿಗೆ ಸೂಚನೆ: ಕೆಂಗೇರಿ ಕಡೆಯಿಂದ ನಗರಕ್ಕೆ ಪ್ರವೇಶಿಸುವ ಭಾರೀ ವಾಹನಗಳನ್ನು ಹೊರತುಪಡಿಸಿ, ಉಳಿದ ವಾಹನಗಳಿಗೆ ಎಂದಿನಂತೆ ಸಂಚರಿಸಲು ಅವಕಾಶ ನೀಡಲಾಗಿದೆ.

ಮಾರ್ಚ್ 27ರ ಬೆಳಿಗ್ಗೆ 07 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಈ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುತ್ತವೆ.

ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು

  1. ಮಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್‌ನಿಂದ ಮೈಸೂರು ರಸ್ತೆ ಕಡೆಗೆ ಹೋಗುವವರು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಅವಲಹಳ್ಳಿ ಮುಖ್ಯ ರಸ್ತೆ ಮೂಲಕ ಬೆಂಗಳೂರು ಒನ್ ಜಂಕ್ಷನ್ ತಲುಪಬೇಕು. ಅಲ್ಲಿಂದ ಎಡ ತಿರುವು ಪಡೆದು ಕೆ.ಇ.ಬಿ. ಜಂಕ್ಷನ್ ಬಳಿ ಬಲ ತಿರುವು ಪಡೆದು ಪಿ.ಇ.ಎಸ್.ಐ.ಟಿ. ಕಾಲೇಜು (ದೇವೇಗೌಡ ಸರ್ಕಲ್) ಮುಖಾಂತರ ನಾಯಂಡಹಳ್ಳಿ ಹತ್ತಿರ ಮೈಸೂರು ರಸ್ತೆಯನ್ನು ಸೇರಬಹುದು.
  2. ಮೈಸೂರು ರಸ್ತೆ ಮೇಲ್ಸೇತುವೆ ಬಳಸುವ ಸರಕು ವಾಹನಗಳು ಮೈಸೂರು ರಸ್ತೆ ವೆಟನರಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಗುಡ್ ಶೆಡ್ ರಸ್ತೆ ಮೂಲಕ ಶಾಂತಲಾ ಜಂಕ್ಷನ್ – ಕೋಡೆ ಸರ್ಕಲ್ – ಲುಲು ಮಾಲ್ – ಹುಣಸೇಮರ ಜಂಕ್ಷನ್ ಮೂಲಕ ಮಾಗಡಿ ರಸ್ತೆಯತ್ತ ಸಂಚರಿಸಬಹುದು.
  3. ಕೆಂಗೇರಿ ಕಡೆಯಿಂದ ನಗರಕ್ಕೆ ಪ್ರವೇಶಿಸುವವರು (ಮಾರ್ಚ್ 28-29ರ ವಿಶೇಷ ಸೂಚನೆ) ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ನಾಗರಭಾವಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆಯಬೇಕು. ಚಂದ್ರಾ ಲೇಔಟ್ 80 ಅಡಿ ರಸ್ತೆಯಲ್ಲಿ ಚಲಿಸಿ ವೆಸ್ಟ್ ಆಫ್ ಕಾರ್ಡ್ ರಸ್ತೆ ಮುಖಾಂತರ ಎಂ.ಸಿ. ಸರ್ಕಲ್ ತಲುಪಿ ಮಾಗಡಿ ರಸ್ತೆ ಸೇರಬಹುದು.

ಬೆಂಗಳೂರು ಸಂಚಾರಿ ಪೊಲೀಸ್ ಎಕ್ಸ್ ಸಂದೇಶ

ಸಾರ್ವಜನಿಕರಿಗೆ ಸಂಚಾರಿ ಪೊಲೀಸರ ಮನವಿ

ರಥೋತ್ಸವದ ಸಮಯದಲ್ಲಿ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಹಾಗೂ ಅನಿವಾರ್ಯವಿದ್ದಲ್ಲಿ ಮಾತ್ರ ಈ ರಸ್ತೆಯನ್ನು ಬಳಸುವಂತೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಮೈಸೂರು ರಸ್ತೆಯಲ್ಲಿ ಸಂಚರಿಸುವ ಮುನ್ನ ಗೂಗಲ್ ಮ್ಯಾಪ್ ಅಥವಾ ಸಂಚಾರಿ ಪೊಲೀಸರ ಅಧಿಕೃತ ಸೂಚನೆಗಳನ್ನು ಗಮನಿಸುವುದು ಉತ್ತಮ.

ಮಾರತ್ತಹಳ್ಳಿ ಬ್ರಿಡ್ಜ್​ನಲ್ಲೂ ಸಂಚಾರ ಬದಲಾವಣೆ

ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ ಮೆಟ್ರೋ ಕಾಮಗಾರಿ ಹಿನ್ನೆಲೆ ಮಾರ್ಚ್​ 27 ರಿಂದ ಇಂದಿನಿಂದ 3 ದಿನಗಳ ಕಾಲ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ರಾತ್ರಿ 12ರಿಂದ ಮುಂಜಾನೆ 3 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದ್ದು, HAL ಕಡೆಯಿಂದ ವರ್ತೂರು ಮುಖ್ಯರಸ್ತೆ, ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ ವರ್ತೂರು, ವೈಟ್‌ ಫೀಲ್ಡ್ ಕಡೆ ಹೋಗುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಯಿಂದ ವರ್ತೂರು ಮುಖ್ಯರಸ್ತೆ, ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ HAL ಕಡೆಗೂ ಸಂಚಾರ ನಿರ್ಬಂಧ ಮಾಡಲಾಗಿದೆ. ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್

ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇರುವುದರಿಂದ ಅವರ ಸಿನಿಮಾ ಅಭಿಮಾನಿಗಳಿಗೆ ಅಷ್ಟು ಸಂತೋಷ ಸಿಗುತ್ತಿಲ್ಲ. ಅವರು ಒಪ್ಪಿಕೊಂಡ ಮೂರು ಸಿನಿಮಾಗಳನ್ನು ಹೇಗೋ ಮುಗಿಸಿಕೊಟ್ಟರು. ಆದರೆ, ಯಾವ ಸಿನಿಮಾದಲ್ಲೂ ಬದ್ಧತೆ ಕಾಣಿಸಿಲ್ಲ. ಕಾಟಾಚಾರಕ್ಕೆ ಅವರು ಸಿನಿಮಾ ಶೂಟ್ ಮುಗಿಸಿಕೊಟ್ಟರು. ‘ಓಜಿ’, ‘ಹರಿ ಹರ ವೀರ ಮಲ್ಲು’ ಸಿನಿಮಾ ಸಾಧಾರಣ ಪ್ರದರ್ಶನ ನೀಡಿದ ಬಳಿಕ ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವು ‘ಧುರಂಧರ್ 2’ (Dhurandhar 2) ಅಬ್ಬರದಿಂದ ತತ್ತರಿಸಿದೆ.

‘ಧುರಂಧರ್ 2’ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ಗುರುವಾರ (ಮಾರ್ಚ್ 26) 49 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಾರದ ದಿನವೂ ಇಷ್ಟು ಅಬ್ಬರದ ಗಳಿಕೆ ಆಗುತ್ತಿರುವುದು ನಿಜಕ್ಕೂ ಶಾಕಿಂಗ್ ಎನಿಸಿದೆ. ಈ ಸಿನಿಮಾಗೆ ಗುರುವಾರ ಬರೋಬ್ಬರಿ 19,493 ಶೋಗಳನ್ನು ನೀಡಲಾಗಿತ್ತು. ಈ ಚಿತ್ರದ ಭಾರತದ ನೆಟ್ ಕಲೆಕ್ಷನ್ 674 ಕೋಟಿ ರೂಪಾಯಿ ಆಗಿದೆ. ಭಾರತದ ಗ್ರಾಸ್ ಕಲೆಕ್ಷನ್ 805 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾಗೆ ವಿಶ್ವ ಮಟ್ಟದಲ್ಲಿ 1067 ಕೋಟಿ ರೂಪಾಯಿ ಗಳಿಕೆ ಆಗಿದೆ.

ಗುರುವಾರ ‘ಧುರಂಧರ್ 2’ ಸಿನಿಮಾದ ತೆಲುಗು ವರ್ಷನ್​ಗೆ 2.50 ಕೋಟಿ ರೂಪಾಯಿ ಗಳಿಕೆ ಆಗಿದೆ. ಆದರೆ, ಇದೇ ದಿನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಗಳಿಕೆ ಮಾಡಿದ್ದು ಕೇವಲ 1 ಕೋಟಿ ರೂಪಾಯಿ ಮಾತ್ರ. ಇದು ಚಿತ್ರಕ್ಕೆ ಭಾರೀ ಹಿನ್ನಡೆ ತಂದಿದೆ.

ಪವನ್ ಕಲ್ಯಾಣ್ ಸಿನಿಮಾ ಭಾರತದಲ್ಲಿ 66 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಅರ್ಧದಷ್ಟು ಗಳಿಕೆ ಮೊದಲ ದಿನವೇ ಬಂದಿತ್ತು. ಆ ಬಳಿಕ ಸಿನಿಮಾದ ಗಳಿಕ ಸಂಪೂರ್ಣವಾಗಿ ತಗ್ಗಿ ಹೋಗಿದೆ. ಮುಂದಿನ ದಿನಗಳಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಬಹುದು.

ಇದನ್ನೂ ಓದಿ: ಕೇವಲ ಒಂದು ಕೋಟಿ ಗಳಿಸಿದ ಪವನ್ ಕಲ್ಯಾಣ್ ಸಿನಿಮಾ; ‘ಧುರಂಧರ್ 2’ ಎದುರು ಮಂಕಾದ ಉಸ್ತಾದ್

ಪವನ್ ಕಲ್ಯಾಣ್ ಅವರು ಸದ್ಯಕ್ಕಂತೂ ಸಿನಿಮಾ ಮಾಡುತ್ತಿಲ್ಲ. ಅವರು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆಗಿದ್ದು, ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಅವರು ಸಿನಿಮಾ ರಂಗದಿಂದಲೇ ದೂರ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಶ್ರೀರಾಮನವಮಿಯನ್ನು ಆಚರಿಸುವುದು ಹೇಗೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುವ ಶ್ರೀರಾಮ ನವಮಿಯು ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ತ್ರೇತಾಯುಗದಲ್ಲಿ ಶ್ರೀ ಮಹಾವಿಷ್ಣುವು ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ಜನಿಸಿದ ಶುಭ ದಿನವಿದು. ಸೂರ್ಯೋದಯದಲ್ಲಿ ನವಮಿ ತಿಥಿ ಇರುವುದರಿಂದ ಇಡೀ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ಪುನರ್ವಸು ನಕ್ಷತ್ರವೂ ಇರುತ್ತದೆ.

ಈ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಂಜನೇಯ ಮತ್ತು ಶ್ರೀರಾಮ ದೇವಸ್ಥಾನಗಳಲ್ಲಿ ಅಭಿಷೇಕ, ಕಲ್ಯಾಣೋತ್ಸವಗಳನ್ನು ನಡೆಸಲಾಗುತ್ತದೆ. ಪಾನಕ ಮತ್ತು ಹೆಸರುಬೇಳೆ ವಿತರಿಸುವುದು ಈ ಆಚರಣೆಯ ಪ್ರಮುಖ ಭಾಗ. ಇವು ದೇಹಕ್ಕೆ ತಂಪನ್ನು ನೀಡುತ್ತವೆ. ರಾಮಾಯಣ ಪಾರಾಯಣ, ಭಜನೆಗಳನ್ನು ಮಾಡಲಾಗುತ್ತದೆ. “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂಬ ಮಹಾಮಂತ್ರವನ್ನು ಪಠಿಸುವುದರಿಂದ ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ, ಶತ್ರು ಕಾಟ ಮತ್ತು ಗ್ರಹ ದೋಷಗಳಿಂದ ಮುಕ್ತಿ ದೊರೆಯುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

Horoscope Today: ಇಂದು ಈ ರಾಶಿಯವರು ತಮ್ಮ ಖರ್ಚುಗಳ ಬಗ್ಗೆ ಎಚ್ಚರ ವಹಿಸಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 27​, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ನವಮಿ ತಿಥಿಯಾಗಿದ್ದು, ಶ್ರೀರಾಮನವಮಿಯ ಶುಭದಿನವಾಗಿದೆ. ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿಯ ರಥೋತ್ಸವವೂ ಇಂದು ನಡೆಯಲಿದೆ. ಸೂರ್ಯನು ಮೀನ ರಾಶಿಯಲ್ಲಿ ಮತ್ತು ಚಂದ್ರನು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಶ್ರೀರಾಮ ನವಮಿಯಂದು ಪಾನಕ, ಹೆಸರುಬೇಳೆ ಮತ್ತು ಮಜ್ಜಿಗೆಯನ್ನು ನೀಡುವುದರಿಂದ ರಾಮನ ಕೃಪೆಗೆ ಪಾತ್ರರಾಗಬಹುದು ಎಂದು ಗುರೂಜಿ ತಿಳಿಸಿದ್ದಾರೆ.

 

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 27ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 27ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಕಾರಾತ್ಮಕವಾದ ಸನ್ನಿವೇಶ ಇರಲಿದ್ದು, ನಿಮಗೆ ಒಳ್ಳೆಯದೇನೋ ಸಂಭವಿಸಲಿದೆ ಎಂಬ ಸೂಚನೆ ಈ ದಿನ ದೊರೆಯಲಿದೆ. ಒಂದು ವೇಳೆ ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ಅದೇ ರೀತಿ ಈಗಾಗಲೇ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದೀರಿ ಅಂತಾದಲ್ಲಿ ಅಲ್ಲಿ ವೇತನ ಹೆಚ್ಚಳ ಅಥವಾ ಈಗ ಮಾಡುತ್ತಿರುವಂಥ ಉತ್ತಮ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಹುಡುಕಿಕೊಂಡು ಬರಬಹುದು. ಮನೆ ಖರೀದಿಗೆ ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಗೃಹಾಲಂಕಾರ ವಸ್ತುಗಳು, ಟೀವಿ, ಕರ್ಟನ್ ಇಂಥವುಗಳಿಗೆ ಹೆಚ್ಚು ಖರ್ಚು ಮಾಡಲಿದ್ದೀರಿ. ಬಜೆಟ್ ಹಾಕಿಕೊಂಡಂತೆ ಯಾವುದೂ ಸಾಗುವುದಿಲ್ಲ. ಆರಂಭದಲ್ಲಿಯೇ ಹೇಳಿದಂತೆ ನಿಮಗೆ ಬೇಕಾದವರು ಸಹ ನಡೆದುಕೊಳ್ಳುವುದಿಲ್ಲ. ಆ ಕಾರಣಕ್ಕೆ ಹೆಚ್ಚುತ್ತಿರುವ ಖರ್ಚು ಹಾಗೂ ವೆಚ್ಚ ನಿಮ್ಮನ್ನು ಆತಂಕಕ್ಕೆ ಗುರಿ ಮಾಡಲಿದೆ. ನಿಮಗೆ ಅರಿವಿಲ್ಲದಂತೆಯೂ ಅಥವಾ ಯಾವುದೋ ಉತ್ಸಾಹದಲ್ಲಿ ಒಪ್ಪಿಕೊಂಡ ಕೆಲಸವು ಬಹಳ ಕಷ್ಟ ಎಂಬುದು ಆ ನಂತರ ಅರಿವಿಗೆ ಬರಲಿದೆ. ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಮಾಡುತ್ತಿರುವಂತಹವರಿಗೆ ಆದಾಯದಲ್ಲಿನ ಇಳಿಕೆ ಆತಂಕಕ್ಕೆ ಕಾರಣ ಆಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂಭ್ರಮದ ವಾತಾವರಣ ಇರುತ್ತದೆ. ಮಕ್ಕಳು ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಅವಕಾಶ ನಿಮಗಿದೆ. ಈ ದಿನ ನೀವು ರುಚಿಕಟ್ಟಾದ ಊಟ ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ಮನೆ ಜಮೀನು ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಕೆಲವು ಕೆಲಸಗಳು ನೀವು ಅಂದುಕೊಂಡಿದ್ದಕ್ಕಿಂತ ಬಹಳ ವೇಗವಾಗಿ ನಡೆದು ಹೋಗಲಿವೆ. ನಿಮಗೆ ಬಹಳ ಮುಖ್ಯ ಎನಿಸಿದ ಕೆಲಸಗಳನ್ನು ಸಾಧ್ಯವಾದಷ್ಟೂ ನೀವೇ ಮಾಡುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಏಕಕಾಲಕ್ಕೆ ಹಲವು ಕೆಲಸ- ಜವಾಬ್ದಾರಿ ನಿರ್ವಹಿಸಬೇಕಾಗಲಿದೆ. ಆತ್ಮವಿಶ್ವಾಸ ಇರುವುದು ಒಳ್ಳೆಯದೇ. ಆದರೆ ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ, ಈ ದಿನ ಯಾವುದೇ ಕೆಲಸವನ್ನು ಸರಳವಾಗಿ ತೆಗೆದುಕೊಳ್ಳಬಾರದು. ನಿಮ್ಮಲ್ಲಿ ಯಾರು ಪಿತ್ರಾರ್ಜಿತ ಆಸ್ತಿಯ ನಿರೀಕ್ಷೆಯಲ್ಲಿ ಇರುವಿರೋ ಅಂತಹವರಿಗೆ ಅಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಬಹಳ ಮುಖ್ಯವಾದ ಕಾಗದಪತ್ರಗಳು ಅಥವಾ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯ ದಿನಗಳಿಗಿಂತ ಇರಬೇಕಾದ ಎಚ್ಚರಿಕೆಗಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮಗಾಗುವ ಖರ್ಚಿನಿಂದ ಸಂತೋಷ, ತೃಪ್ತಿ ನಿಮಗೆ ದೊರೆಯಲಿದೆ. ಕುಟುಂಬದ ಜತೆಗೆ ಕೂಡಿ ಪ್ರವಾಸಕ್ಕೆ ತೆರಳುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ಯಾರು ನಿಮ್ಮನ್ನು ಬೇಕೆಂತಲೇ ನಂಬಿಸಿ, ಅವಮಾನಕ್ಕೆ ಗುರಿ ಮಾಡಿದರೋ ಅವರಿಗೆ ಸರಿಯಾದ ರೀತಿಯಲ್ಲಿ ಪ್ರತೀಕಾರ ಹೇಳುವುದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಗೆ ಸೋಲಾರ್ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಅಥವಾ ಎಲೆಕ್ಟ್ರಿಕಲ್ ವಾಹನವನ್ನು ಖರೀದಿ ಮಾಡುವುದಕ್ಕಾದರೂ ಅಡ್ವಾನ್ಸ್ ಪಾವತಿಸಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಾನಾ ಕಾರಣಗಳಿಗೆ ಸಾಮಾನ್ಯ ದಿನಗಳಂತೆ ಈ ದಿನ ಇರುವುದಿಲ್ಲ. ತಾಳ್ಮೆ, ಸಮಾಧಾನ, ನಿಧಾನ, ಆಲೋಚಿಸಿ ನಿರ್ಧಾರ ಮಾಡುವುದು ಇಂಥ ಯಾವುದನ್ನೂ ಈ ದಿನ ನಿಮ್ಮಿಂದ ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಮುಖ್ಯ ಸಂಗತಿಗಳು ಎಂದಾಗ ತಕ್ಷಣವೇ ಅಥವಾ ಆವೇಶದಲ್ಲಿ ಏನನ್ನೂ ಹೇಳದಿರುವುದು ಉತ್ತಮ. ನಿಮಗೆ ತಾತ್ಕಾಲಿಕವಾಗಿ ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ದೀರ್ಘಾವಧಿ ವಿಚಾರಗಳನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಕುಟುಂಬದ ವ್ಯವಹಾರವನ್ನು ಮಾಡುತ್ತಾ ಬರುತ್ತಿರುವವರಿಗೆ ಈಗ ಮಾಡುತ್ತಿರುವುದರ ಜತೆಗೆ ಇನ್ನಷ್ಟು ವ್ಯವಹಾರವನ್ನು ಸೇರಿಸಿಕೊಳ್ಳಬೇಕು ಎಂಬ ಆಲೋಚನೆ ಮೂಡಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ವಿರಾಮವಾದ ಮನಸ್ಥಿತಿಯಲ್ಲಿ ಇರಲಿದ್ದೀರಿ. ಪಾರ್ಟಿ, ಗೆಟ್ ಟು ಗೆದರ್ ಗಳಲ್ಲಿ ಭಾಗವಹಿಸುವ ಸಾಧ್ಯತೆ ಈ ದಿನ ಇದೆ. ಸಂಬಂಧಿಗಳು, ಸ್ನೇಹಿತರು ಹಾಗೂ ಪರಿಚಯಸ್ಥರು ಹಲವರನ್ನು ಭೇಟಿ ಆಗಲಿದ್ದೀರಿ. ನಿಮ್ಮ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಹಣಕಾಸಿನ ವಿಚಾರಕ್ಕೆ ಸ್ನೇಹಿತರು ಅಥವಾ ಆಪ್ತರ ಜತೆಗೆ ಚರ್ಚೆಯನ್ನು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವ ಮನೆಯನ್ನು ಬದಲಾಯಿಸಿ, ಬೇರೆ ಸ್ಥಳಕ್ಕೆ ತೆರಳಬೇಕು ಎಂದೇನಾದರೂ ಆಲೋಚನೆ ಮಾಡುತ್ತಿದ್ದಲ್ಲಿ ಅಗತ್ಯ ಇರುವಂಥ ಮಾಹಿತಿ ದೊರೆಯಲಿದೆ. ಇನ್ನು ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಉದ್ಯೋಗ ಬದಲಾವಣೆ ಅವಕಾಶಗಳು ತೆರೆದುಕೊಳ್ಳುವಂತೆ ಕಾಣುತ್ತವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ತೀರಾ ಅಗತ್ಯ ಎಂದು ನೀವಾಗಿಯೇ ಕೇಳಿದ್ದಲ್ಲಿ ನಿಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಪೋಷಕರು ಹಣಕಾಸಿನ ನೆರವು ನೀಡುವ ಬಗ್ಗೆ ಖಚಿತವಾಗಿ ಹೇಳುವ ಸಾಧ್ಯತೆ ಇದೆ. ಈ ಹಿಂದೆ ನೀವು ಹೇಳಿದ್ದ ಪ್ರಾಜೆಕ್ಟ್ ಗಾಗಿಯೋ ಅಥವಾ ವ್ಯವಹಾರದ ಮೇಲಿನ ನಂಬಿಕೆಯಿಂದಲೋ ಹಣ ಹಾಕುವುದಕ್ಕೆ ಒಪ್ಪಿಗೆ ಸೂಚಿಸುವ ಅವಕಾಶಗಳು ಹೆಚ್ಚಿಗೆ ಇವೆ. ಇನ್ನು ಈ ದಿನ ರೆಸ್ಟೋರೆಂಟ್, ಸಿನಿಮಾ ಅಥವಾ ಮನರಂಜನೆಗಾಗಿ ಅಂತಲೇ ಕೆಲವು ಸ್ಥಳಗಳಿಗೆ ಕುಟುಂಬ ಸಮೇತ ತೆರಳುವಂಥ ಯೋಗ ಕಂಡುಬರುತ್ತಿದೆ. ವಾಹನವನ್ನು ಪಾರ್ಕಿಂಗ್ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯಿಂದ ಇರುವುದು ಮುಖ್ಯ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ಸಾಧ್ಯವಾದಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದು ಒಳ್ಳೆಯದು. ಕೆಲವು ಸಂಗತಿಗಳನ್ನು ಯಾಕಾದರೂ ಹೇಳಿದೆನೋ ಎಂಬ ಪರಿಸ್ಥಿತಿ ನಿಮ್ಮದಾಗುತ್ತದೆ. ಒಂದೇ ವಿಚಾರಕ್ಕೆ ಒಬ್ಬ ವ್ಯಕ್ತಿ ಅಥವಾ ಹಲವರು ನಿಮ್ಮ ಬಳಿ ವಿಚಾರಿಸುವುದಕ್ಕೆ ಆರಂಭಿಸಬಹುದು ಅಥವಾ ತಮ್ಮ ಪರವಾಗಿ ಶಿಫಾರಸು ಮಾಡುವಂತೆ ಕೇಳಿಕೊಳ್ಳಬಹುದು. ಮಾನಸಿಕ ಹಿಂಸೆ ಆಯಿತೋ ಅಂತಲೋ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಕೋಪವನ್ನು ಹೊರ ಹಾಕುವುದಕ್ಕೆ ಹೋಗಬೇಡಿ. ಸಂಗಾತಿ ಕಡೆಯ ಸಂಬಂಧಿಕರು ಮನೆಗೆ ಬರುವಂಥ ಯೋಗ ಇದೆ.

ಲೇಖನ- ಎನ್‌.ಕೆ.ಸ್ವಾತಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಮಕ್ಕಳಿಂದ ದೂರ ಹೋಗಬೇಕಾದೀತು

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಶುಕ್ರವಾರದಂದು ಹಿರಿಯರ ಸೇವೆ, ಮಾತಿಗೆ ಮಾತು, ಸಂಗಾತಿಗೆ ಸಂತೋಷ, ವ್ಯಾಪಾರದಲ್ಲಿ ಸಹನೆ, ಮಕ್ಕಳಿಗೆ ಪ್ರೀತಿ, ಹೊಸ ವ್ಯವಹಾರಕ್ಕೆ ಪ್ರಯತ್ನ ಇದೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಶೋಭನ, ಕರಣ : ಬವ, ಸೂರ್ಯೋದಯ – 06 – 24 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:59 – 12:30 ಯಮಗಂಡ ಕಾಲ 15:32 – 17:04, ಗುಳಿಕ ಕಾಲ 07:57 – 09:27

ಮೇಷ ರಾಶಿ :

ಸಂಗಾತಿಯ ಕಡೆಯಿಂದ ನಿಮಗೆ ಹೊಗಳಿಕೆ ಸಿಗುವುದು. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ಅತಿಯಾದ ಆಯಾಸವನ್ನು ಮಾಡಿಕೊಳ್ಳದೇ ಕಾರ್ಯವನ್ನು ಮಾಡುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಇಂದು ನಿಮಗೆ ಸಹಾನುಭೂತಿಯು ಸಿಗುವುದು. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ.

ವೃಷಭ ರಾಶಿ :

ಇಂದು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಅಪಹಾಸ್ಯಕ್ಕೆ ಯಾವುದೇ ಕಾರಣಕ್ಕೂ ಸಿಕ್ಕಿಬೀಳಬೇಡಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ನೂತನ ವಸ್ತುಗಳನ್ನು ಖರೀದಿಸುವಿರಿ. ಕಾಲಹರಣದ ಬದಲು ಉಪಯೋಗಕ್ಕೆ ಬರುವಂತೆ ಈ ದಿನವನ್ನು ರೂಪಿಸಿಕೊಳ್ಳಿ. ಈ ದಿನ ಹಸಿವು ಬಾಯಾರಿಕೆ ಅಧಿಕವಾಗಿರುವುದು.

ಮಿಥುನ ರಾಶಿ :

ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ. ಸರಿಯಾದ ಸಮಯಕ್ಕೆ ಸ್ನೇಹಿತರೊಬ್ಬರು ಬಂದು ನಿಮ್ಮ ಸಮಸ್ಯೆ ಬಗೆಹರಿಸಲಿದ್ದಾರೆ. ನಿಮ್ಮ ಆಲೋಚನೆಗಳು ಅಸ್ಥಿರ ಮತ್ತು ದ್ವಂದ್ವಗಳಿಂದ ಕೂಡಿರುತ್ತದೆ. ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ಅಪರಿಚಿತರ ಜೊತೆ ಸಲುಗೆ ಅನವಶ್ಯಕ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಹೊಂದಾಣಿಕೆಯ ಮನೋಭಾವವು ಇರಬೇಕಾದೀತು.

ಕರ್ಕಾಟಕ ರಾಶಿ :

ಇಂದು ಮಾತು ಮತ್ತು ನಡವಳಿಕೆಯನ್ನು ಮಿತದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಪ್ರಯೋಜನ ಸಿಗಲಿದೆ. ಅತಿ ಸೂಕ್ಷ್ಮವಾಗುವುದೂ ಮನಸ್ಸಿಗೆ ತೊಂದರೆಯಾಗುತ್ತದೆ. ಅನ್ಯ ಆಲೋಚನೆಯಿಂದ ನೀವು ಹಣವನ್ನು ಹೆಚ್ಚು ಖರ್ಚುಮಾಡಬೇಕಾಗುವುದು. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಕಳೆದುಕೊಂಡದ ವಸ್ತುವಿನ ಬಗ್ಗೆ ಮೋಹವಿರುವುದು. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ.

ಸಿಂಹ ರಾಶಿ :

ಯಾರದ್ದೋ ಮಾತು ಕೇಳಿ ನಿಮ್ಮ ಒಳ್ಳೆಯ ನಿರ್ಧಾರವನ್ನು ಬದಲಿಸದಿರಿ. ಸಂತಾನದ ವಿಚಾರದಲ್ಲಿ ಮನೆಯವರ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು. ಕೆಲವನ್ನು ನೀವು ನಿರ್ಲಕ್ಷಿಸುವುದೇ ಸೂಕ್ತ. ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಖರ್ಚು ಮಾಡುವ ಅನಿವಾರ್ಯತೆಯು ಬರಬಹುದು.

ಕನ್ಯಾ ರಾಶಿ :

ನಿಮ್ಮ ಬಗ್ಗೆ ಪ್ರಚಾರದ ಗೀಳನ್ನು ಕಡಿಮೆ ಮಾಡಿಕೊಳ್ಳಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ತಾಯಿಗೆ ನಿಮ್ಮಂದ‌ ಯಾವುದಾದರೊಂದು ಲಾಭವಾಗಬಹುದು. ಯಾರದೋ ಮೂಲಕ ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇವಲ ಓಡಾಟವಾಗುವುದು. ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ವಹಿಸಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ.

ತುಲಾ ರಾಶಿ :

ಇಂದು ನೀವು ಅತ್ಯಂತ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಇನ್ನೊಬ್ಬರ ಬಳಿ ಇರುವ ನಿಮ್ಮ ದಾಖಲೆಯನ್ನು ಜಾಣ್ಮೆಯಿಂದ ಪಡೆದುಕೊಳ್ಳುವಿರಿ. ಸಮಯವನ್ನು ಹಾಳುಮಾಡದೇ ಕೆಲಸದಲ್ಲೇ ಗಮನವಿರಲಿ. ಮನೆಯವರ ಜೊತೆ ಸಮಯವನ್ನು ನೀವು ಕಳೆಯಬೇಕು ಎನ್ನಿಸಬಹುದು.

ವೃಶ್ಚಿಕ ರಾಶಿ :

ದೂರದ ಬಂಧುಗಳ ಆಗಮನದಿಂದ ಜಟಿಲ ಸಮಸ್ಯೆಯ ನಿವಾರಣೆ ಮಾಡುವರು. ಕಾನೂನಿನ ವಿಷಯದಲ್ಲಿ ಸಲಹೆ ಪಡೆಯಿರಿ ಮತ್ತು ಸ್ವಂತವಾಗಿ ಯೋಚಿಸದೇ ಎಚ್ಚರಿಕೆ ವಹಿಸಬೇಕು. ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಯಾವುದೇ ಒತ್ತಡವಿಲ್ಲದ ಕೆಲಸವು ನಿಧಾನವಾಗುವುದು. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು.

ಧನು ರಾಶಿ :

ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಆದರೆ ಆರೋಗ್ಯದ ಬಗ್ಗೆಯೂ ಕಾಳಜಿ ಅವಶ್ಯಕ. ಯಾರಾದರೂ ನಿಮ್ಮನ್ನು ಉದ್ವೇಗಗೊಳಿಸಬಹುದು. ಅದಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ದಿನಗೂಲಿ ಕಾರ್ಮಿಕರಿಗೆ ಕೆಲಸವು ಸಿಗದೇ ಕಷ್ಟವಾದೀತು.

ಮಕರ ರಾಶಿ :

ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಜೊತೆ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ತುತ್ತಾಗಬೇಕಾದೀತು.

ಕುಂಭ ರಾಶಿ :

ನಿಮ್ಮ ಮನಸ್ಸು ಸೂಕ್ಷ್ಮವಾದ ಸಂಗತಿಗಳನ್ನೂ ಇಂದು ಸ್ವೀಕರಿಸಬಹುದು. ನೀವು ಕಾಲ್ಪನಿಕ ಪ್ರಪಂಚದಿಂದ ವಾಸ್ತವಕ್ಕೆ ಬರಬೇಕಾಗುವುದು. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ಪ್ರೀತಿಯನ್ನು ಕೊಡುವವರ ಮೇಲೆ ಸುಮ್ಮನೆ ಅನುಮಾನ ಬೇಡ. ಸ್ಥಿರಾಸ್ತಿಯ ವಿಚಾರಕ್ಕೆ ಬಿಸಿ ಮಾತುಗಳು ಕುಟುಂಬದಲ್ಲಿ ಬರಬಹುದು. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ.

ಮೀನ ರಾಶಿ :

ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಸಲ್ಲದ ಚರ್ಚೆ ಮಾಡುವುದನ್ನು ತಪ್ಪಿಸಿ. ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವುದರಿಂದ, ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ನೀರಿಗೆ ಸಂಬಂಧಿಸಿದ ಉದ್ಯಮದಲ್ಲಿ ಆದಾಯ ಹೆಚ್ಚು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ನಿಮ್ಮನ್ನು ಅವಲೋಕನ ಮಾಡಿಕೊಳ್ಳುವ ಬಗ್ಗೆ ಆಸಕ್ತಿ ವಹಿಸಿ.

-ಲೋಹಿತ ಹೆಬ್ಬಾರ್-8762924271 (what’s app only)

Source link

Exit mobile version