ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್: ಕಾಂಗ್ರೆಸ್​​ನಲ್ಲಿ ಸಂಚಲನ – Kannada News | Congress High command calls and invite Siddaramaiah And DK Shivakumar On May 26

ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್​​​​ಗೆ (DK Shivakumar) ಹೈಕಮಾಂಡ್​ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ
ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್​​​ನಲ್ಲಿ ಸಂಚಲನ ಮೂಡಿಸಿದೆ.

Source link

ಸಂಘಟನೆಯಲ್ಲಿ ಹಿಂದೆ ಇದ್ದೀರಿ: ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸಲಹೆ-ಸೂಚನೆ ನೀಡಿದ ನಿತಿನ್ ನಬಿನ್ – Kannada News | Bjp national president nitin nabin Gives Some suggestion And tips to Karnataka Leaders, here Is Details

ಬೆಂಗಳೂರು, (ಮೇ 24): ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿರುವ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (nitin nabin )ಇಡೀ ದಿನ ವಿವಿಧ ಸಂಘಟನಾ ಸಭೆ ನಡೆಸಿದ್ದಾರೆ. ಸಂಘಟನೆಯ ಕುರಿತು ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಮಾಡಿರುವ ನಬಿನ್, ಸಂಘಟನೆ ಇಲ್ಲದೇ ಮನೆಯಲ್ಲಿ ಕುಳಿತರೆ ಸರ್ಕಾರ ತರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಹೌದು…ಇಂದು (ಮೇ 24)ಭಾನುವಾರ ನಗರದ ಪಕ್ಷದ ಕಚೇರಿಯಲ್ಲಿ ರಾಜ್ಯ ನಾಯಕರ ಜೊತೆ ಸಂಘಟನಾ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಪಶ್ಚಿಮ ಬಂಗಾಳ ಮಾದರಿಯಲ್ಲಿ ಸಂಘಟನೆ, ಹೋರಾಟ ನಡೆಸುವಂತೆ ಸೂಚನೆ ನೀಡಿದ್ದಾರೆ. ನೀವು ಪಕ್ಷ ಸಂಘಟನೆಯಲ್ಲಿ ಬಹಳ ಹಿಂದೆ ಇದ್ದೀರಿ. ಚುನಾವಣೆ ಬಂತು ಅಂತಾ ಬರೀ ಹೇಳಿದರೆ ಸಾಲದು. ಅದಕ್ಕೆ ತಕ್ಕಂತೆ ಸಂಘಟನಾ ಕೆಲಸ ಆಗಬೇಕು. ಈಗಿನ ಪಕ್ಷ ಸಂಘಟನೆ ಇಟ್ಟುಕೊಂಡು ಚುನಾವಣೆ ಗೆಲ್ಲವುದು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗಿ. ಅದಕ್ಕೆ ಬೇಕಾದ ಸಹಕಾರ ಏನಿದೆಯೋ ಅದನ್ನು ನಾವು ಮಾಡುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.

ನಿತಿನ್ ನಬಿನ್ ನೇತೃತ್ವದಲ್ಲಿ ನಡೆದ ಸಂಘಟನಾ ಸಭೆಯಲ್ಲಿ ರಾಜ್ಯದ ನಾಯಕರಿಗೆ ಹತ್ತು ಹಲವು ಸಂದೇಶಗಳನ್ನು ರವಾನಿಸುವ ಸೂಚನೆಗಳನ್ನು ನೀಡಿದ್ದಾರೆ.ರಾಜ್ಯ ಬಿಜೆಪಿ ಸಂಘಟನೆ ಸಂಬಂಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಗ್ರೌಂಡ್ ಮಟ್ಟದಲ್ಲಿ ಹೋರಾಟ ನಡೆಸುವಂತೆ ತಾಕೀತು ಮಾಡಿದ್ದಾರೆ. ಸದ್ಯದ ರಾಜ್ಯ ನಾಯಕರ ಹೋರಾಟ, ಸಂಘಟನೆ ಬಗ್ಗೆ ಪರೋಕ್ಷವಾಗಿ ಅತೃಪ್ತಿ ಹೊರಹಾಕಿದ ನಬಿನ್, ಇನ್ಮುಂದೆ ಶಾಸಕರು, ನಾಯಕರು ತಳಮಟ್ಟಕ್ಕೆ ಹೋಗಿ ಸರ್ಕಾರದ ವೈಫಲ್ಯಗಳ ಬಗ್ಗೆ ಆಂದೋಲನ ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ನೋಡಿ: ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು

ಸಂಘಟನೆಯಲ್ಲಿ ಹಿಂದೆ ಇದ್ದೀರಿ ಎಂದ ನಿತಿನ್ ನಬಿನ್

ಒಂದೂವರೆ ಗಂಟೆ ಕಾಲ ನಡೆದ ಭಾಷಣ ಮತ್ತು ಸಂವಾದ ರೂಪದ ಸಭೆಯಲ್ಲಿ ಶಾಸಕರು, ರಾಜ್ಯ ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರಲ್ಲಿ ಒಬ್ಬೊಬ್ಬರಿಂದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನಿತಿನ್ ನಬಿನ್ ಪಡೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ರಾಜ್ಯ ಪದಾಧಿಕಾರಿಗಳಿಗೆ ಒಂದೊಂದು ಜಿಲ್ಲೆಯ ಉಸ್ತುವಾರಿ ಕೊಟ್ಟಿಲ್ಲ ಎಂಬ ಮಾಹಿತಿ ತಿಳಿದು ಅಚ್ಚರಿಗೊಂಡು ಸಭೆಯಲ್ಲಿ ಅಚ್ಚರಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಕಡೆ ತಿರುಗಿ ನೋಡಿದ್ದಾರೆ. ಬಳಿಕ ಎಲ್ಲಾ ರಾಜ್ಯ ಪದಾಧಿಕಾರಿಗಳೂ ತಲಾ ಒಂದು ಜಿಲ್ಲೆ ಉಸ್ತುವಾರಿ ನೋಡಬೇಕು ಎಂದು ಸೂಚಿಸಿದ್ದಾರೆ. ಶಾಸಕರು ತಮ್ಮ ಗೆಲುವನ್ನು ಖಾತ್ರಿಪಡಿಸಿಕೊಳ್ಳಲು ಜನರನ್ನು ಸಂಪರ್ಕಿಸುತ್ತಿದ್ದರೆ ಸಾಲದು. ಪಕ್ಷಕ್ಕೆ ನೀವು ಏನು ಮಾಡಿದ್ದೀರಿ? ಸಂಘಟನೆ ಬಲಗೊಳಿಸಲು ಏನು ಮಾಡಿದ್ದೀರಿ ಎನ್ನುವುದು ಮುಖ್ಯ ಎಂದಿದ್ದಾರೆ. ಸಂಘಟನಾ ಸಭೆಯ ಬಳಿಕ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿದ ನಿತಿನ್ ನಬಿನ್ ಸಂಘಟನಾ ವಿಚಾರದಲ್ಲಿ ರಾಜ್ಯ ಬಿಜೆಪಿ ಹಿಂದೆ ಇದೆ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಸಭೆಯಲ್ಲಿ ನಿತಿನ್ ನಬಿನ್ ಒತ್ತು ನೀಡಿದ ಅಂಶಗಳು

ಜಿಲ್ಲಾಧ್ಯಕ್ಷರ ಕರ್ತವ್ಯಗಳು, ಶಾಸಕರು ಕೆಲಸ ಮಾಡಬೇಕಾದ ರೀತಿ, ರಾಜ್ಯ ಪದಾಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿ, ಬೂತ್ ಮಟ್ಟದವರೆಗೆ ಪಕ್ಷ ಸಂಘಟಿತವಾಗಿ ಕೆಲಸ ಮಾಡಬೇಕಾದ ರೀತಿ. ಪ್ರಧಾನಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕಾದ ರೀತಿ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಸಂಘಟನೆ ಗೆಲುವಿಗಾಗಿ ದೀರ್ಘ ಕಾಲ ನಡೆಸಿದ ಸಿದ್ಧತೆ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಸರ್ಕಾರದ ಸಾಧನೆ ಮತ್ತು ಸಂಘಟನೆಯ ಜಂಟಿ ಪರಿಣಾಮ.ಪಶ್ಚಿಮ ಬಂಗಾಳದಲ್ಲಿ ಐದು ವರ್ಷಗಳಿಂದ ಸವಾಲುಗಳನ್ನು ಎದುರಿಸಿ ಮಾಡಿದ ಸಂಘಟನೆ. ತಮಿಳುನಾಡು ಮತ್ತು ಕೇರಳದಲ್ಲಿ ಎದುರಿಸಿದ ಸವಾಲುಗಳು. ಕರ್ನಾಟಕದಲ್ಲಿ ಮುಂದಿನ ಕಾರ್ಯ ಯೋಜನೆ. ಇದಿಷ್ಟೇ ಅಲ್ಲದೇ ಎಸ್ ಐಆರ್, ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಟ್ರೆಂಡ್ ಸೇರಿದಂತೆ ಕೆಲವು ಮಹತ್ವದ ಅಂಶಗಳನ್ನು ಕೂಡಾ ಸಭೆಯಲ್ಲಿ ನಿತಿನ್ ನಬಿನ್ ಎಚ್ಚರಿಕೆಯ ರೀತಿಯಲ್ಲೇ ಉಲ್ಲೇಖಿಸಿದ್ದಾರೆ.

ಎಸ್​​​​ಐಆರ್ ಅನ್ನು ಚುನಾವಣೆ ರೀತಿ ಪರಿಗಣಿಸಿ

ಇನ್ನು ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಪ್ರಶಿಕ್ಷಣ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ನಿತಿನ್ ನಬಿನ್, ರಾಜ್ಯ ಬಿಜೆಪಿ ಎಸ್ ಐಆರ್ ನಿರ್ವಹಣಾ ತಂಡದ ಸಭೆಯನ್ನೂ ನಡೆಸಿ ನಿರ್ದೇಶನಗಳನ್ನೂ ನೀಡಿದ್ದಾರೆ.

ಎಸ್​​ಐಆರ್​​ನ್ನು ಚುನಾವಣೆ ರೀತಿಯಲ್ಲಿ ಪರಿಗಣಿಸಿ ಕೆಲಸ ಮಾಡಿ. ಅರ್ಹ ಮತದಾರರು ಡಿಲೀಟ್ ಆಗದಂತೆ, ಅನರ್ಹರು ಮತದಾರರ ಪಟ್ಟಿಯಲ್ಲಿ ಇರದಂತೆ ನಿಗಾವಹಿಸಿ. ಎಸ್​​ಐಆರ್​​ನ್ನು ಚುನಾವಣೆ ರೀತಿಯಾಗಿ ತೆಗೆದುಕೊಂಡು ಕೆಲಸ ಮಾಡಿದರೆ, ಜಿಬಿಎ ಚುನಾವಣೆಯನ್ನು ಗೆಲ್ಲಬಹುದು. ಜಿಬಿಎ ಚುನಾವಣೆ ಗೆದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸುಲಭವಾಗಲಿದೆ. ಈ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು 2028ರ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.

Source link

ಸುಪ್ರೀಂ ಕೋರ್ಟ್ ಹೆಸರಲ್ಲೇ ವಂಚನೆ: ಜೈಲಿನಿಂದ ಎಸ್ಕೇಪ್ ಆಗಿದ್ದ ಕೈದಿಯ ಕಳ್ಳಾಟ 8 ವರ್ಷದ ಬಳಿಕ ಬಯಲು – Kannada News | Parappana Agrahara Jail Escape: Prisoner Used Fake Supreme Court Order, Exposed After 8 Years

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹImage Credit source: thehindu

ಆನೇಕಲ್, ಮೇ 24: ಬೆಂಗಳೂರಿನಲ್ಲಿ (bangaluru) ಹೈ ಸೆಕ್ಯೂರಿಟಿ ಜೈಲು ಎಂದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ (parappana agrahara jail) ಹೆಸರಾಗಿದೆ. ಹೀಗಿರುವಾಗ ಚಾಲಾಕಿ ಕೈದಿಯೊಬ್ಬ (prisoner) ಜೈಲಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಹೊರಗೆ ಬಂದಿದ್ದ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್​ನ ನಕಲಿ ಆದೇಶ ಸೃಷ್ಟಿ ಮಾಡಿ ಜೈಲಿನಿಂದ ರಿಲೀಸ್ ಆಗಿ ಇದೀಗ ಎಂಟು ವರ್ಷಗಳ ಬಳಿಕ ಆತನ ಕಳ್ಳಾಟ ಬಯಲಾಗಿದೆ. ಸದ್ಯ ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ನಕಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಸೃಷ್ಟಿ
  • 8 ವರ್ಷಗಳ ಬಳಿಕ ಕೈದಿಯ ಮಹಾ ವಂಚನೆ ಬಯಲು
  • ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ನಡೆದಿದ್ದೇನು?

ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್ 2001ರಲ್ಲಿ ಭಾರೀ ಮೊತ್ತದ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಶಂಕರ್‌ನನ್ನು ಅಪರಾಧಿ ಎಂದು ಘೋಷಿಸಿ ಐಪಿಸಿ ಸೆಕ್ಷನ್ 364A (ಹಣಕ್ಕಾಗಿ ಅಪಹರಣ) ಮತ್ತು 120B (ಸಂಚು ರೂಪಿಸುವಿಕೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೋರ್ಟ್ ಆದೇಶದಂತೆ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ.

ಸಿನಿಮೀಯ ಸ್ಕೆಚ್

ಜೈಲಿನಲ್ಲಿದ್ದ ಶಂಕರ್ ಆರ್ಮುಗಮ್ ಹೊರಬರಲು ಮಾಸ್ಟರ್​​ ಪ್ಯಾನ್​​ ಹಾಕಿದ್ದ. ತನಗೆ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ಬಿಂಬಿಸುವ ನಕಲಿ ಆದೇಶ ಪತ್ರವನ್ನು ತಾನೇ ಖುದ್ದು ಸೃಷ್ಟಿಸಿದ್ದ. ಈ ನಕಲಿ ದಾಖಲೆಯನ್ನು ಜೈಲು ಅಧಿಕಾರಿಗಳ ಕೈಗಿಟ್ಟು, ಕೇವಲ 10 ಸಾವಿರ ರೂ ದಂಡ ಪಾವತಿಸಿ, 2018 ನವೆಂಬರ್ 13ರಂದು ರಾಜಾರೋಷವಾಗಿ ಜೈಲಿನಿಂದ ಹೊರಬಂದಿದ್ದ.

ಅನಾಮಧೇಯ ಪತ್ರದಿಂದ ಬಯಲಾದ ಸತ್ಯ

ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಒಂದು ರಹಸ್ಯ ಅನಾಮಧೇಯ ಪತ್ರ ಬಂದಿದೆ. ಆ ಪತ್ರದ ಆಧಾರದ ಮೇಲೆ ಜೈಲು ಇಲಾಖೆ ಆಂತರಿಕ ತನಿಖೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ತನಿಖೆಯಲ್ಲಿ ಶಂಕರ್ ಸಲ್ಲಿಕೆ ಮಾಡಿದ್ದ ಸುಪ್ರೀಂ ಕೋರ್ಟ್ ಆದೇಶ ಸಂಪೂರ್ಣ ನಕಲಿ ಅನ್ನೋದು ಸಾಬೀತಾಗಿದೆ. ಕೇವಲ ಕೈದಿಯೊಬ್ಬನೇ ಇಷ್ಟು ದೊಡ್ಡ ಸಾಹಸ ಮಾಡಲು ಸಾಧ್ಯವಿಲ್ಲ. ಜೈಲಿನ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಅವರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಎಲ್ಲಾ ಆಯಾಮದಲ್ಲೂ ತನಿಖೆ ನಡೆದಿದೆ.

ಇದನ್ನೂ ಓದಿ: ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್

ಸದ್ಯ ಫೋರ್ಜರಿ ಮತ್ತು ವಂಚನೆ ಅಡಿಯಲ್ಲಿ ಶಂಕರ್ ಆರ್ಮುಗಮ್ ವಿರುದ್ಧ ಹೊಸದಾಗಿ ಪ್ರಕರಣ ದಾಖಲಾಗಿದ್ದು, ದೇಶದ ಕಾನೂನು ವ್ಯವಸ್ಥೆಗೆ ಸವಾಲು ಹಾಕಿದ ಈ ಖತರ್ನಾಕ್ ಕೈದಿ ಹಾಗೂ ಆತನಿಗೆ ಸಾಥ್ ನೀಡಿದವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ? – Kannada News | Manoj Night Shyamalan is Indian origin Hollywood famous director

ಭಾರತೀಯರು (India) ಎಲ್ಲಿಲ್ಲ? ಎಲ್ಲೆಡೆ ಇದ್ದಾರೆ, ಎಲ್ಲ ಕ್ಷೇತ್ರಗಳಲ್ಲಿ, ಎಲ್ಲ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಶೇಷವಾಗಿ ಐಟಿ, ಉದ್ಯಮದ ಕ್ಷೇತ್ರಗಳಲ್ಲಿ ಭಾರತೀಯರು ಹಲವು ದೇಶಗಳಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಆದರೆ ಸಿನಿಮಾ ವಿಷಯವಾಗಿ ವಿಶೇಷವಾಗಿ ಆಸ್ಕರ್​​​ನಲ್ಲಿ ಭಾರತೀಯ ಸಾಧನೆ ತುಸು ಕಡಿಮೆ ಎನ್ನಬಹುದು. ಆದರೆ ಭಾರತೀಯರೊಬ್ಬರು ಹಾಲಿವುಡ್​ನ ಸ್ಟಾರ್ ನಿರ್ದೇಶಕರಾಗಿ ಮಿಂಚುತ್ತಿರುವ ವಿಷಯ ನಿಮಗೆ ಗೊತ್ತೆ? ಈ ಸಿನಿಮಾ ನಿರ್ದೇಶಕನ ಹೆಸರು ನಿಮಗೆ ತಿಳಿಯದೇ ಇರಬಹುದು ಆದರೆ ನೀವು ಸಿನಿಮಾ ಪ್ರೇಮಿ ಆಗಿದ್ದರೆ ಖಂಡಿತ ಈ ವ್ಯಕ್ತಿ ನಿರ್ದೇಶನ ಮಾಡಿರುವ ಕೆಲ ಸಿನಿಮಾಗಳನ್ನಾದರೂ ನೋಡಿಯೇ ಇರುತ್ತೀರಿ.

ಎಂ ನೈಟ್ ಶ್ಯಾಮಲನ್ ಎಂದರೆ ಹೆಚ್ಚು ಜನರಿಗೆ ಗೊತ್ತಾಗದೇ ಇರಬಹುದು ಆದರೆ ‘ದಿ ಸಿಕ್ಸ್ತ್ ಸೆನ್ಸ್’ ಸಿನಿಮಾ ಹೆಸರು ಕೇಳದೇ ಇರುವ ಸಿನಿಮಾ ಪ್ರೇಮಿಗಳು ಕಡಿಮೆ. ಅದ್ಭುತ ಸಸ್ಪೆನ್ಸ್ ಜೊತೆಗೆ ಜೀವನದ ಕುರಿತು ಮಹತ್ವದ ವಿಷಯಗಳನ್ನು ಹೇಳುವ ಆ ಸಿನಿಮಾ ಹಾಲಿವುಡ್​ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ನಿರ್ದೇಶಕನ ಹೆಸರು ಎಂ ನೈಟ್ ಶ್ಯಾಮಲ್, ಈ ವ್ಯಕ್ತಿಯ ಪೂರ್ತಿ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಮೂಲತಃ ಮಲಯಾಳಿ ಆದ ಇವರು ಹಾಲಿವುಡ್​ನ ಸ್ಟಾರ್ ನಿರ್ದೇಶಕರುಗಳಲ್ಲಿ ಒಬ್ಬರು.

1970ರಲ್ಲಿ ಭಾರತದ ಪುದುಚೇರಿಯಲ್ಲಿ ಜನಿಸಿದ ಮನೋಜ್ ಶ್ಯಾಮಲನ್, ನಂತರ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದರು. ಅವರ ತಂದೆ-ತಾಯಿ ಇಬ್ಬರೂ ವೈದ್ಯರು. ಮೂಲತಃ ಕೇರಳದ ಮಲಯಾಳಿ ಕುಟುಂಬಕ್ಕೆ ಸೇರಿದ ಮನೋಜ್, ಅಮೆರಿಕದಲ್ಲಿ ಬೆಳೆದರೂ, ತಮ್ಮ ಹೆಸರಿನಲ್ಲೇ ಭಾರತೀಯ ಗುರುತನ್ನು ಉಳಿಸಿಕೊಂಡಿದ್ದು ಅವರ ವಿಶೇಷತೆ. ಹಾಲಿವುಡ್‌ನಲ್ಲಿ ಅನೇಕರು ತಮ್ಮ ಮೂಲ ಹೆಸರನ್ನು ಬದಲಾಯಿಸುವಾಗ, ಅವರು ‘ಶ್ಯಾಮಲನ್’ ಎಂಬ ಭಾರತೀಯ ಹೆಸರಿನೊಂದಿಗೆ ಜಾಗತಿಕ ಖ್ಯಾತಿ ಗಳಿಸಿದರು.

ಇದನ್ನೂ ಓದಿ:ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಮನುಜ್ ಶ್ಯಾಮಲನ್ ಹಾಲಿವುಡ್‌ನಲ್ಲಿ ವಿಭಿನ್ನ ಕಥೆ ಹೇಳುವ ಶೈಲಿಯಿಂದ ಪ್ರಸಿದ್ಧರಾದರು. ರಹಸ್ಯ, ಮನೋವೈಜ್ಞಾನಿಕ ಥ್ರಿಲ್ಲರ್ ಮತ್ತು ಕೊನೆಯಲ್ಲಿ ಅಚ್ಚರಿಯ ತಿರುವು ನೀಡುವ ಚಿತ್ರಗಳು ಅವರ ವಿಶೇಷ ಗುರುತು. ಅವರ ನಿರ್ದೇಶನದ ‘ದಿ ಸಿಕ್ಸ್ತ್ ಸೆನ್ಸ್’ (The Sixth Sense) ಸಿನಿಮಾ ವಿಶ್ವಾದ್ಯಂತ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು ಹಾಗೂ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆಯುವ ಮಟ್ಟಕ್ಕೆ ಏರಿಸಿತು. ನಂತರ ಅವರು ನಿರ್ದೇಶಿಸಿದ ‘ಸೈನ್ಸ್’ (Signs), ‘ಅನ್​​ಬ್ರೇಕೆಬಲ್’, ‘ಸ್ಪಿಲಿಟ್’ ಮತ್ತು ‘ಗ್ಲಾಸ್’ ಚಿತ್ರಗಳು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯವಾದವು. ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿ, ಜಾಗತಿಕ ಮಟ್ಟದಲ್ಲಿ ದೊಡ್ಡ ಆದಾಯ ಗಳಿಸುವ ನಿರ್ದೇಶಕರಲ್ಲಿ ಅವರು ಒಬ್ಬರು.

ಭಾರತೀಯರು ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ನಟರಾಗಿ ಕಾಣಿಸಿಕೊಂಡಿದ್ದು ಮಾತ್ರ, ಒಂದು ಭಾರತೀಯ ಮೂಲದ ವ್ಯಕ್ತಿ ಸ್ವತಃ ದೊಡ್ಡ ಸ್ಟುಡಿಯೋ ಮಟ್ಟದ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕರಾಗಿ ಬೆಳೆದಿರುವುದು ಅಪರೂಪದ ಸಾಧನೆ. ಶ್ಯಾಮಲನ್ ಆ ಅಡೆತಡೆಯನ್ನು ಮುರಿದವರು. ದಕ್ಷಿಣ ಭಾರತೀಯ ಹಿನ್ನೆಲೆಯ ವ್ಯಕ್ತಿಯಾಗಿ ಹಾಲಿವುಡ್‌ನಂತಹ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವುದು ಅನೇಕ ಯುವ ಭಾರತೀಯರಿಗೆ ಪ್ರೇರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಕಪ್ಪೆ ಚಿಪ್ಪುಗಾಗಿ 10 ಜನ ಸಾವು, ರಾಜ್ಯದಲ್ಲಿ ಮಳೆ, ಪೈಲಟ್‌ಗೆ ಹೃದಯಾಘಾತ: ಈ ಹೊತ್ತಿನ ಸುದ್ದಿಗಳು – Kannada News | TV9 Kannada News Live: 10 Dead, Heavy Rain Batters Karnataka; Pilot Suffers Heart Attack

ಬೆಂಗಳೂರು, ಮೇ 24: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಜಲಸಮಾಧಿಯಾದ (death) ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮೃತರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಪಡುಶಿರಾಲಿ ಶಾರದಹೊಳೆಯ 14 ಜನ ನದಿಗೆ ಇಳಿದಿದ್ದರು. 12 ಮಂದಿ ಮಹಿಳೆಯರು, ಇಬ್ಬರು ಪುರುಷರು ಕಪ್ಪೆಚಿಪ್ಪುಗಳನ್ನ ತೆಗೆಯುತ್ತಿದ್ದರು. ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಒಂದಷ್ಟು ಕಪ್ಪೆ ಚಿಪ್ಪುಗಳನ್ನ ಹಾಯ್ದು ನದಿ ತಟದಲ್ಲಿ ಇರಿಸಿದ್ದರು. ಆದರೆ ತಣ್ಣಗೆ ಹರಿಯುತ್ತಿದ್ದ ನದಿ ಒಡಲಿನಲ್ಲಿ, ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದ್ರಿಂದಾಗಿ 10 ಮಂದಿ ಜಲಸಮಾಧಿ ಆಗಿದ್ದಾರೆ. ಒಬ್ಬರ ಶವಕ್ಕೆ ಶೋಧ ನಡೆಯುತ್ತಿದೆ. ಮೂವರು ಪವಾಡದ ರೀತಿ ಬಚಾವ್​ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ).

ಏಳು ದಿನ ರಾಜ್ಯಾದ್ಯಂತ ಮಳೆ ಅಬ್ಬರ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಮತ್ತು ಕೆಎಸ್ಎನ್‌ಡಿಎಂಸಿ ಮುನ್ಸೂಚನೆ ನೀಡಿವೆ. ಕರಾವಳಿ ಭಾಗಕ್ಕೆ ಹಸಿರು ಅಲರ್ಟ್ ಘೋಷಿಸಲಾಗಿದ್ದು, ಮೇ 25 ರಂದು ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಮುನ್ನೆಚ್ಚರಿಕೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: Karnataka Weather Forecast: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಿಡಿಲು ಹಾಗೂ ಆಲಿಕಲ್ಲು ಮಳೆಯ ಮುನ್ಸೂಚನೆ ಇರುವುದರಿಂದ ರೈತರು ಮತ್ತು ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಜಾಗರೂಕತೆ ವಹಿಸಲು ಸೂಚಿಸಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಗ್ಯಾರಂಟಿ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಕಿ ವಿತರಿಸುವಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿಯಮದ ಪ್ರಕಾರ ಪ್ರತಿ ಸದಸ್ಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 5 ಕೆಜಿಯಂತೆ ಒಟ್ಟು 10 ಕೆಜಿ ಅಕ್ಕಿ ನೀಡಬೇಕಿತ್ತು. ಆದರೆ, ಈ ಬಾರಿ ಕೇಂದ್ರ ಸರ್ಕಾರವು ಮೇ ಮತ್ತು ಜೂನ್ ತಿಂಗಳ ತನ್ನ ಪಾಲಿನ ಅಕ್ಕಿಯನ್ನು ಒಟ್ಟಿಗೆ ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಿದೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರವು ಮೇ ತಿಂಗಳ ತನ್ನ ಪಾಲಿನ ಅಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಸದ್ಯ ಕೇಂದ್ರದ ಎರಡು ತಿಂಗಳ ಅಕ್ಕಿ ಮಾತ್ರ ಸಿಗುತ್ತಿದ್ದು, ರಾಜ್ಯದ ಪಾಲು ಸಿಗದೆ ಜನರಲ್ಲಿ ಆತಂಕ ಮೂಡಿದೆ. ಈ ಬಗ್ಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

ವಿಮಾನ ಪೈಲಟ್‌ಗೆ ಹೃದಯಾಘಾತ: ಆಮೇಲೇನಾಯ್ತು?

ಬ್ರಿಟನ್‌ಗೆ ಹೊರಟಿದ್ದ ಜೆಟ್2 ವಿಮಾನದ ಪೈಲಟ್‌ಗೆ ಹಾರಾಟದ ಮಧ್ಯೆಯೇ (30,000 ಅಡಿ ಎತ್ತರದಲ್ಲಿ) ದಿಢೀರ್ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹ-ಪೈಲಟ್ ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿ, ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

ಅಮೆರಿಕ ವೀಸಾ ಗೊಂದಲಕ್ಕೆ ಜೈಶಂಕರ್ ಕಳವಳ

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಅವರೊಂದಿಗೆ ಜಂಟಿ ಜಾಗತಿಕ ಸುದ್ದಿಗೋಷ್ಠಿಯಲ್ಲಿ ವೀಸಾ ವಿಳಂಬ ಮತ್ತು ಭಾರತೀಯ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಕೋ ರೂಬಿಯೊ, ಈ ಕಠಿಣ ನಿಯಮಗಳು ಕೇವಲ ಭಾರತವನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ, ಅಕ್ರಮ ವಲಸೆ ತಡೆಯಲು ಕೈಗೊಂಡ ಕ್ರಮವಾಗಿದ್ದು, ಕಾನೂನುಬದ್ಧ ಭಾರತೀಯ ಪ್ರವಾಸಿಗರಿಗೆ ತೊಂದರೆಯಾಗದಂತೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

‘ದೃಶ್ಯಂ 3’ ಶತಕೋಟಿ ಕ್ಲಬ್‌ಗೆ

ಜೀತು ಜೋಸೆಫ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಲಯಾಳಂ ನಟ ಮೋಹನ್‌ಲಾಲ್ ಅವರ ಬಹುನಿರೀಕ್ಷಿತ ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಚಿತ್ರವು ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಜಾಗತಿಕವಾಗಿ 100 ಕೋಟಿ ರೂ ಗಳಿಕೆಯ ಗಡಿಯನ್ನು ದಾಟುವ ಮೂಲಕ ದಾಖಲೆ ಬರೆದಿದೆ. ಪ್ರಸ್ತುತ ಚಿತ್ರದ ಒಟ್ಟು ಜಾಗತಿಕ ಕಲೆಕ್ಷನ್ ಸುಮಾರು 117.17 ಕೋಟಿ ರೂ. ತಲುಪಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. (ಈ ಸುದ್ದಿಯ ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ). 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ರಿಕೆಟ್ ಚಾಣಾಕ್ಷ್ಯ ಆರ್ ಅಶ್ವಿನ್ ಬ್ಯುಸಿನೆಸ್​ನಲ್ಲೂ ಸೈ; 132 ಕೋಟಿ ರೂ ಆಸ್ತಿವಂತ; ಏನಿವೆ ಅವರ ವ್ಯವಹಾರಗಳು? – Kannada News | R Ashwin’s Net Worth: Unveiling His Multi Crore Business Empire & Smart Investments

ಎಂಜಿನಿಯರ್​ನ ಪರ್ಫೆಕ್ಷನ್​ನಲ್ಲಿ ಕ್ರಿಕೆಟ್ ಆಡುವ ಅಥವಾ ಆಡಿದ ಆಟಗಾರರು ಯಾರೆಂದರೆ ಮೊದಲು ಬರುವ ಹೆಸರು ಅನಿಲ್ ಕುಂಬ್ಳೆ ಮತ್ತು ಆರ್ ಅಶ್ವಿನ್. ಒಬ್ಬರು ಬೆಂಗಳೂರು ಹುಡುಗ, ಮತ್ತೊಬ್ಬರು ಚೆನ್ನೈ ಹುಡುಗ. ಆರ್ ಅಶ್ವಿನ್ (Ravichandran Ashwin) ಟೆಸ್ಟ್ ಕ್ರಿಕೆಟ್​ನಲ್ಲಿ 500ಕ್ಕೂ ಅಧಿಕ ವಿಕೆಟ್​​ಗಳನ್ನು ಕಿತ್ತು, ಭಾರತದ ಅತ್ಯಂತ ಯಶಸ್ವಿ ಬೌಲರ್​ಗಳಲ್ಲಿ ಒಬ್ಬರೆನಿಸಿದ್ದಾರೆ. ಅವರ ಕೆಲ ದೈಹಿಕ ಊನವನ್ನು ಬಲವಾಗಿ ಮಾಡಿಕೊಂಡು ಸಾಧನೆ ತೋರಿದ್ದಾರೆ. ರವಿಚಂದ್ರನ್ ಅಶ್ವಿನ್, ಮೈದಾನದಲ್ಲಿ ಮಾತ್ರವಲ್ಲದೆ ಆರ್ಥಿಕ ಲೋಕದಲ್ಲೂ ತಮ್ಮ ಚಾಣಾಕ್ಷತನ ಮೆರೆದಿದ್ದಾರೆ. ಹಲವಾರು ಬ್ಯುಸಿನೆಸ್​ಗಳು, ಹೂಡಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2024ರಲ್ಲಿ ಕ್ರಿಕೆಟ್​ನಿಂದ ನಿವೃತ್ತರಾಗುವ ಮೊದಲಿಂದಲೂ ಆಟ ಮತ್ತು ವ್ಯವಹಾರ ಎರಡನ್ನೂ ಸಂಭಾಳಿಸುತ್ತಾ ಬಂದವರು. ಈಗ ಅವರ ಆಸ್ತಿಮೌಲ್ಯ ನೂರು ಕೋಟಿ ರೂಗೂ ಅಧಿಕ ಇದೆ.

ಅಶ್ವಿನ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ

ವರದಿಗಳ ಪ್ರಕಾರ, ರವಿಚಂದ್ರನ್ ಅಶ್ವಿನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 16 ಮಿಲಿಯನ್ ಡಾಲರ್ (ಅಂದಾಜು ₹132 ಕೋಟಿಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ಪ್ರಶಸ್ತಿಗಳು, ಬಿಸಿಸಿಐ (BCCI) ಒಪ್ಪಂದ, ಐಪಿಎಲ್ (IPL) ಸಂಭಾವನೆ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳು ಮತ್ತು ಅವರ ಸ್ವಂತ ವ್ಯವಹಾರಗಳು ಈ ಆದಾಯದ ಮುಖ್ಯ ಮೂಲಗಳಾಗಿವೆ.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಆರ್ ಅಶ್ವಿನ್ ಅವರ ಬಿಸಿನೆಸ್ ಮತ್ತು ಸ್ಟಾರ್ಟ್‌ಅಪ್ ಹೂಡಿಕೆಗಳು

ಅಶ್ವಿನ್ ಕೇವಲ ಸಾಂಪ್ರದಾಯಿಕ ಹೂಡಿಕೆಗಳಿಗೆ ಸೀಮಿತವಾಗದೆ, ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಹಣ ಹೂಡಿದ್ದಾರೆ. ವಿವಿಧ ಬ್ಯುಸಿನೆಸ್​ಗಳಲ್ಲಿ ತೊಡಗಿಸಿಕೊಂಡಿದ್ದಾರೆ:

  1. ವಿಒಸಿ ಆಟೊಮೋಟಿವ್: ಇದು ದ್ವಿಚಕ್ರ ವಾಹನಗಳನ್ನು ಸರ್ವಿಸಿಂಗ್ ಮಾಡುವ ಕಂಪನಿ. ದೇಶಾದ್ಯಂತ 150 ಔಟ್​ಲೆಟ್​ಗಳನ್ನು ಹೊಂದಿದೆ. ರಸ್ತೆಬದಿ ಮೆಕ್ಯಾನಿಕ್​ಗಳೇ ಅತಿಹೆಚ್ಚು ಇರುವ ಕ್ಷೇತ್ರದಲ್ಲಿ ವಿಒಸಿ ಆಟೊಮೋಟಿವ್ ಒಂದು ಅಧಿಕೃತತೆ ನೀಡುತ್ತದೆ. 2025ರ ಏಪ್ರಿಲ್​ನಲ್ಲಿ ಅಶ್ವಿನ್ ಅವರು ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ.
  2. ಕ್ವಿಲಿ: ಇದು (Qwili) ಸೌತ್ ಆಫ್ರಿಕಾದ ಫಿನ್​ಟೆಕ್ ಕಂಪನಿ. ಡಿಜಿಟಲ್ ಸರ್ವಿಸ್​ಗಳನ್ನು ಕೊಡುತ್ತದೆ. 2022ರ ಜುಲೈನಲ್ಲಿ ಇದಕ್ಕೆ ಸೀಡಿಂಗ್ ಫಂಡ್ ನೀಡಿದರು ಅಶ್ವಿನ್. ಸೀಡಿಂಗ್ ಫಂಡ್ ಎಂದರೆ ಕಂಪನಿಗೆ ಆರಂಭಿಕ ಬಂಡವಾಳ.
  3. ಟರ್ಫ್ ಟೌನ್: ಚೆನ್ನೈ ಮೂಲದ ಈ ಕಂಪನಿಯನ್ನು 2018ರಲ್ಲಿ ಆರ್ ಅಶ್ವಿನ್ ಅವರು ಸಹ-ಸಂಸ್ಥಾಪನೆ ಮಾಡಿದ್ದಾರೆ. ವಿವಿಧ ಕ್ರೀಡಾಪಟುಗಳಿಗೆ ಸಹ-ಆಟಗಾರರು, ಕ್ರೀಡಾಂಗಣಗಳನ್ನು ಬುಕ್ ಮಾಡಲು ಅನುವು ಮಾಡಿಕೊಡುವ ಒಂದು ಸ್ಪೋರ್ಟ್ಸ್ ಮ್ಯಾಚ್​ಮೇಕಿಂಗ್ ಆ್ಯಪ್.
  4. ಮಸ್ಕೆಟೀರ್ಸ್ ಸ್ಪೋರ್ಟ್ಸ್ ಅರೇನಾಸ್: ಪಿಕಲ್ ಬಾಲ್​ಗಳ ಕೋರ್ಟ್​ಗಳನ್ನು ಹೊಂದಿರುವ ಕಂಪನಿ. ಫಿಟ್ನೆಸ್ ಮತ್ತು ಮನೋಲ್ಲಾಸಕ್ಕಾಗಿ ಜನರು ಈ ಆಟ ಆಡುತ್ತಾರೆ. 2024ರ ಜೂನ್​ನಲ್ಲಿ ಅಶ್ವಿನ್ ಅವರು ಈ ಕಂಪನಿಯಲ್ಲಿ ಹೂಡಿಕೆ ಮಾಡಿದರು.
  5. ಜೆನ್ ನೆಕ್ಸ್ಟ್ ಕ್ರಿಕೆಟ್ ಇನ್ಸ್​ಟಿಟ್ಯೂಟ್: 2012ರಲ್ಲಿ ಅಶ್ವಿನ್ ಅವರ ತಂದೆ ಶುರು ಮಾಡಿದ ಸಂಸ್ಥೆ. ಕ್ರಿಕಟ್ ತರಬೇತಿ ನೀಡುತ್ತದೆ. ಚೆನ್ನೈ, ಶಾರ್ಜಾ, ಯುಕೆಯಲ್ಲಿ ಇದರ ಸೆಂಟರ್​ಗಳಿವೆ. ಅಶ್ವಿನ್ ಅವರು ಈ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಾರೆ.
  6. ಸೂಪರ್​ಕಿಂಗ್ ವೆಂಚರ್ಸ್: ಸಿಎಸ್​ಕೆ ತಂಡದ ಹೈಪರ್ಫಾರ್ಮೆನ್ಸ್ ಸೆಂಟರ್ ಇದು. 2024ರ ಜೂನ್​ನಲ್ಲಿ ಅಶ್ವಿನ್ ಇದರಲ್ಲಿ ತೊಡಗಿಸಿಕೊಂಡರು. ಸಣ್ಣ ಹುಡುಗರನ್ನು ಮೊಳಕೆಯಲ್ಲೇ ಗುರುತಿಸಿ ಅವರಿಗೆ ಮೆಂಟರಿಂಗ್ ಮಾಡುವ ಕೆಲಸದಲ್ಲಿದ್ದಾರೆ.
  7. ಡುಬ್ಲಿನ್ ಗಾರ್ಡಿಯನ್ಸ್: ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನಲ್ಲಿ ರಾಹುಲ್ ದ್ರಾವಿಡ್ ಖರೀದಿಸಿದ ಡುಬ್ಲಿನ್ ಗಾರ್ಡಿಯನ್ಸ್ ಫ್ರಾಂಚೈಸಿಯಲ್ಲಿ ಆರ್ ಅಶ್ವಿನ್ ಅವರು ಕ್ಯಾಪ್ಟನ್ ಮತ್ತು ಮೆಂಟರ್ ಆಗಿದ್ದಾರೆ.
  8. ಕೇರಂ ಬಾಲ್ ಇವೆಂಟ್ಸ್ ಅಂಡ್ ಮಾರ್ಕೆಟಿಂಗ್: ಇದು ಆರ್ ಅಶ್ವಿನ್ ಅವರೇ ಆರಂಭಿಸಿದ ಮೀಡಿಯಾ ಕಂಪನಿ. 2018ರಲ್ಲೇ ಆರಂಭವಾಗಿದೆ. ಇದರ ಯೂಟ್ಯೂಬ್ ಚಾನಲ್​ಗೆ 18 ಲಕ್ಷಕ್ಕೂ ಅಧಿಕ ಸಬ್​ಸಕ್ರೈಬರ್ಸ್ ಹೊಂದಿದ್ದಾರೆ. ಇವರೇ ಇಂಟರ್​ವ್ಯೂ ಮಾಡುತ್ತಾರೆ. ಬಹಳ ಎಕ್ಸ್​ಕ್ಲೂಸಿವ್ ಕಂಟೆಂಟ್​ಗಳು, ಕ್ರೀಡೆಯ ಇನ್​ಸೈಟ್ಸ್ ಎಲ್ಲವೂ ಇರುತ್ತದೆ. ವಿವಿಧ ಬ್ರ್ಯಾಂಡಿಂಗ್​ಗಳ ಮೂಲಕ ಇವರು ಕೋಟಿಗಟ್ಟಲೆ ಗಳಿಸುತ್ತಾರೆ.

ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ

ರಿಯಲ್ ಎಸ್ಟೇಟ್ ಮತ್ತು ಐಷಾರಾಮಿ ಕಾರುಗಳು

ಚೆನ್ನೈನಲ್ಲಿ ಆರ್ ಅಶ್ವಿನ್ ಅವರು ಅತ್ಯಂತ ಸುಸಜ್ಜಿತವಾದ ಮತ್ತು ಐಷಾರಾಮಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದರ ಜೊತೆಗೆ ದೇಶದ ಹಲವು ಕಡೆ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದಾರೆ. ಅವರ ಕಾರುಗಳ ಸಂಗ್ರಹದಲ್ಲಿ ಆಡಿ (Audi), ಬಿಎಂಡಬ್ಲ್ಯೂ (BMW) ನಂತಹ ಪ್ರಮುಖ ಐಷಾರಾಮಿ ಬ್ರ್ಯಾಂಡ್‌ಗಳು ಸೇರಿವೆ.

ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳ ಮುಂದಿನ ಮೂವ್ ಅನ್ನು ಮೊದಲೇ ಊಹಿಸುವ ಅಶ್ವಿನ್, ಮಾರುಕಟ್ಟೆಯ ಟ್ರೆಂಡ್ ಅರಿತು ಭವಿಷ್ಯದ ತಂತ್ರಜ್ಞಾನ ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಮೈದಾನದ ಹೊರಗೂ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಪ್ಲೇಆಫ್​ನಲ್ಲಿ 4 ತಂಡಗಳ ಸ್ಥಾನ ಖಚಿತ; ಹೇಗಿರಲಿದೆ ಪ್ಲೇಆಫ್‌ ಸುತ್ತು? – Kannada News | IPL 2026 Playoff Fixtures: RCB vs GT, SRH vs RR; Complete Match Schedule and Dates

ಐಪಿಎಲ್ 2026 (IPL 2026) 69 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (RR vs MI) ತಂಡವನ್ನು 30 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್, ಮುಂಬೈಗೆ 206 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ತಂಡವಾಗಿ ಪ್ಲೇಆಫ್ ಟಿಕೆಟ್ ಪಡೆದುಕೊಂಡಿದೆ.

ಈ ಮೂಲಕ ಪ್ಲೇಆಫ್ ಸುತ್ತಿನ ಚಿತ್ರಣ ಸ್ಪಷ್ಟವಾಗಿದೆ. ಅದರಂತೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವಿದ್ದರೆ, ಇದೀಗ ನಾಲ್ಕನೇ ಸ್ಥಾನಕ್ಕೆ ರಾಜಸ್ಥಾನ್ ಎಂಟ್ರಿಕೊಟ್ಟಿದೆ. ಪ್ಲೇಆಫ್ ಸುತ್ತಿನಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಮೊದಲಿಗೆ ಕ್ವಾಲಿಫೈಯರ್ 1 ನಡೆದರೆ, ಆ ನಂತರ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಈ ಎರಡು ಪಂದ್ಯಗಳ ಬಳಿಕ ಕ್ವಾಲಿಫೈಯರ್ 2 ನಡೆಯಲಿದೆ. ಇದಾದ ಬಳಿಕ ಫೈನಲ್ ಪಂದ್ಯ ನಡೆಯಲಿದೆ.

ಯಾವ ತಂಡಗಳ ನಡುವೆ ಕ್ವಾಲಿಫೈಯರ್ 1?

ಕ್ವಾಲಿಫೈಯರ್ 1 ಪಂದ್ಯವನ್ನು ಆಡುವ ಎರಡು ತಂಡಗಳು ಯಾವುವು ಎಂಬುದು ಈಗಾಗಲೇ ನಿರ್ಧಾರವಾಗಿತ್ತು. ಅದರಂತೆ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಏಕೆಂದರೆ ಉಭಯ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಹೀಗಾಗಿ ಇವೆರಡು ತಂಡಗಳ ಕ್ವಾಲಿಫೈಯರ್ 1 ಆಡಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೇರಲಿದೆ. ಸೋತ ತಂಡಕ್ಕೆ ಇನ್ನೊಂದು ಅವಕಾಶವೆಂಬಂತೆ ಕ್ವಾಲಿಫೈಯರ್ 2 ಆಡಲಿದೆ. ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 1 ಪಂದ್ಯ ಮೇ 26 ರಂದು ನಡೆಯಲಿದೆ.

ಎಲಿಮಿನೇಟರ್​ನಲ್ಲಿ ಯಾವ ತಂಡಗಳ ಮುಖಾಮುಖಿ?

ಕ್ವಾಲಿಫೈಯರ್ 1 ಬಳಿಕ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿರುವ ತಂಡಗಳು ಮುಖಾಮುಖಿಯಾಗಲಿವೆ. ಅದರಂತೆ ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್ 2 ಆಡಲು ಅರ್ಹತೆ ಪಡೆಯಲಿದೆ. ಇತ್ತ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಈ ಪಂದ್ಯ ಮೇ 27 ರಂದು ನಡೆಯಲಿದೆ.

MI vs RR IPL 2026 Highlights: ಕೊನೆಯ ಲೀಗ್ ಪಂದ್ಯದಲ್ಲೂ ಸೋತ ಮುಂಬೈ

ಯಾವ ತಂಡಗಳ ನಡುವೆ ಕ್ವಾಲಿಫೈಯರ್ 2?

ಈ ಎರಡು ಪಂದ್ಯಗಳ ಬಳಿಕ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಮೇಲೆ ಹೇಳಿದಂತೆ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಕ್ವಾಲಿಫೈಯರ್ 2 ರಲ್ಲಿ ಎಲಿಮಿನೇಟರ್‌ ಪಂದ್ಯವನ್ನು ಗೆದ್ದ ತಂಡವನ್ನು ಎದುರಿಸಲಿದೆ. ಉದಾಹರಣೆಗೆ ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿ ಗೆದ್ದರೆ ನೇರವಾಗಿ ಫೈನಲ್​ಗೇರಲಿದೆ. ಇತ್ತ ಸೋತ ಗುಜರಾತ್ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ. ಇತ್ತ ಎಲಿಮಿನೇಟರ್​ನಲ್ಲಿ ಸನ್‌ರೈಸರ್ಸ್ ತಂಡವನ್ನು ರಾಜಸ್ಥಾನ್ ಮಣಿಸಿದರೆ, ಆಗ ರಾಜಸ್ಥಾನ್ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಕ್ವಾಲಿಫೈಯರ್ 2 ರಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:23 pm, Sun, 24 May 26

Source link

ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ – Kannada News | Death toll rises to 10 In Bhatkal Hakkalu River Tragedy

ಕಾರವಾರ, (ಮೇ 24): ಕಪ್ಪೆ ಚಿಪ್ಪು ಹೆಕ್ಕಲು ನದಿಗೆ ಹೋದವರು ವಾಪಸ್ ಬಾರಲೇ ಇಲ್ಲ. ನೀರಿನ ಹರಿವು ತಿಳಿಯದೇ ಆಳಕ್ಕಿಳಿದವರು ಮೇಲೇಳಲೇ ಇಲ್ಲ. ಒಬ್ಬರಲ್ಲ ಇಬ್ಬರಲ್ಲ ಇಡೀ ಕುಟುಂಬವೇ ಜಲಸಮಾಧಿಯಾಗಿದೆ. ಉತ್ತರ ಕನ್ನಡದ ಭಟ್ಕಳ (Bhatkal) ತಟ್ಟೆ ಹಕ್ಕಲು ನದಿಯಲ್ಲಿ ಘನಘೋರ ದುರಂತ (Hakkalu River Tragedy) ನಡೆದುಹೋಗಿದ್ದು, ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರು ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೌದು..ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿಯ ತಟ್ಟೆಹಕಲ್ಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಪಡುಶಿರಾಲಿ ಶಾರದಹೊಳೆಯ 14 ಜನ ನದಿಗೆ ಇಳಿದಿದ್ರು. 12 ಮಂದಿ ಮಹಿಳೆಯರು, ಇಬ್ಬರು ಪುರುಷರು ಕಪ್ಪೆಚಿಪ್ಪುಗಳನ್ನ ತೆಗೆಯುತ್ತಿದ್ರು. ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಒಂದಷ್ಟು ಕಪ್ಪೆ ಚಿಪ್ಪುಗಳನ್ನ ಹಾಯ್ದು ನದಿ ತಟದಲ್ಲಿ ಇರಿಸಿದ್ರು. ಆದ್ರೆ, ತಣ್ಣಗೆ ಹರಿಯುತ್ತಿದ್ದ ನದಿ ಒಡಲಿನಲ್ಲಿ, ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು ನದಿಗೆ ಇಳಿದವರು ಪ್ರಾಣ ಬಿಟ್ಟಿದ್ದಾರೆ. ಒಟ್ಟು 14 ಜನರ ಪೈಕಿ 10 ಮಂದಿ ಮೃತಪಟ್ಟಿದ್ದಾರೆ. ಓರ್ವ ಪುರುಷ ಸೇರಿ 9 ಮಹಿಳೆಯರು ಸಾವಿಗೀಡಾಗಿದ್ದು, ಮೂವರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಒಬ್ಬರಿಗಾಗಿ ತೀವ್ರ ಶೋಧ ಮುಂದುವರೆದಿದೆ.

ಇದನ್ನೂ ಓದಿ: ತಟ್ಟೆಹಕ್ಕಲು ನದಿಯಲ್ಲಿ 8 ಜಲಸಮಾಧಿ: ಓರ್ವ ಪುರುಷ, ಏಳು ಮಹಿಳೆಯರ ಸಾವು: ಅಸಲಿಗೆ ಆಗಿದ್ದೇನು?

Source link

ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ – Kannada News | Delicious coffee can also be made from jackfruit seeds

ಬೇಸಿಗೆಯಲ್ಲಿ ಹೇರಳವಾಗಿ ಹಲಸಿನ ಹಣ್ಣು ಲಭ್ಯವಿರುತ್ತವೆ. ಸಾಮಾನ್ಯವಾಗಿ ಈ ಹಣ್ಣನ್ನು ತಿಂದ ಬಳಿಕ ಅದರ ಬೀಜವನ್ನು ಎಸೆದು ಬಿಡುತ್ತಾರೆ. ಇವುಗಳಲ್ಲಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೌದು  ಹಲಸಿನ ಬೀಜಗಳು (jackfruit seeds) ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಲು, ಚರ್ಮ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಈ ಬೀಜದಿಂದ ಸಾರು, ಪಲ್ಯ, ವಡೆ ಇತ್ಯಾದಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಇದರಿಂದ ರುಚಿಕರವಾಗಿರುವ ಕಾಫಿಯನ್ನು ಕೂಡ ತಯಾರಿಸಬಹುದು. ಈ ಹಲಸಿನ ಬೀಜದ ಕಾಫಿ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

ಹಲಸಿನ ಬೀಜದಿಂದಲೂ ತಯಾರಿಸಬಹುದು ಕಾಫಿ:

ಖರ್ಜೂರದ ಬೀಜದಿಂದ ಕಾಫಿಯನ್ನು ತಯಾರಿಸುವಂತೆ ಹಲಸಿನ ಬೀಜದಿಂದಲೂ ರುಚಿಕರ ಕಾಫಿಯನ್ನು ತಯಾರಿಸಬಹುದು. ಈ ಒಂದು ಸ್ಪೆಷಲ್‌ ಕಾಫಿ ರೆಸಿಪಿಯನ್ನು tindipoti_meghana ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ವೈರಲ್‌ ಮೆಲೋಡಿ ಚಾಕೊಲೇಟ್‌; ಇಲ್ಲಿದೆ ರೆಸಿಪಿ

ಹಲಸಿನ ಬೀಜದ ಕಾಫಿ ತಯಾರಿಸೋದು ಹೇಗೆ?

ಮೊದಲಿಗೆ ಹಲಸಿನ ಬೀಜದ ಸಿಪ್ಪೆ ತೆಗೆದು ನಂತರ ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ನಂತರ ಒಂದು ತಳದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಮೊದಲೇ ಕತ್ತರಿಸಿಟ್ಟ ಹಲಸಿನ ಬೀಜವನ್ನು 8 ರಿಂದ 10 ನಿಮಿಷ ಡ್ರೈ ರೋಸ್ಟ್‌ ಮಾಡಿ. ನಂತರ ಇದು ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಯನ್ನು ಇನ್ನೊಮ್ಮೆ ಡ್ರೈ ರೋಸ್ಟ್‌ ಮಾಡಿಕೊಳ್ಳಿ. ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದನ್ನು ಇನ್ನೊಂದು ಬಾರಿ ನುಣ್ಣಗೆ ರುಬ್ಬಿಕೊಂಡರೆ ಹಲಸಿನ ಬೀಜದ ಕಾಫಿ ಪೌಡರ್‌ ಸಿದ್ಧ.

ಈ ಹಲಸಿನ ಬೀಜದ ಕಾಫಿಯನ್ನು ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಲು ಇಟ್ಟುಕೊಳ್ಳಿ. ಅದಕ್ಕೆ ಹಲಸಿನ ಬೀಜದ ಪೌಡರ್‌ ಸ್ವಲ್ಪ ಪೌಡರ್‌ ಹಾಕಿ ಗಂಟು ಕಟ್ಟಿಕೊಳ್ಳದ ಹಾಗೆ ಚೆನ್ನಾಗಿ ಕಲಸಿಕೊಳ್ಳಬೇಕು. ಒಂದು ಕುದಿ ಬಂದರೆ ಸಾಕು, ಇದನ್ನು ಜಾಸ್ತಿ ಬಿಸಿ ಮಾಡಿದರೆ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಈಗ ಒಂದ ಗ್ಲಾಸ್‌ಗೆ ಸಿಹಿಗೆ ತಕ್ಕಷ್ಟು ಬೆಲ್ಲದ ಪುಡಿ ಹಾಕಿ, ಅದಕ್ಕೆ ಮೊದಲೇ ತಯಾರಿಸಿಟ್ಟ ಕಾಫಿ ಸೇರಿಸಿದರೆ ರುಚಿಕರ ಹಲಸಿನ ಬೀಜದ ಕಾಫಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪರೂಪದ ಮೇಕೆಯನ್ನು ಸಲ್ಮಾನ್ ಖಾನ್​ಗೆ ಮಾರುವಾಸೆ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Farmer Dhanaji wants to sell his goat to Salman Khan for 15 lakh rs

ಸಿನಿಮಾ (Cinema) ನಟರನ್ನು ಭೇಟಿಯಾಗುವುದು, ಅವರಿಂದ ಉಡುಗೊರೆ ಪಡೆಯುವುದು, ಉಡುಗೊರೆ ನೀಡುವುದು, ಸೆಲ್ಫಿ ತೆಗೆಸಿಕೊಳ್ಳುವುದು ಅಭಿಮಾನಿಗಳ ಆಸೆ. ಆದರೆ ಇಲ್ಲೊಬ್ಬ ರೈತನಿಗೆ ತಾನು ಸಾಕಿರುವ ಅಪರೂಪದ ಆಡನ್ನು ಸಲ್ಮಾನ್ ಖಾನ್​​ಗೆ ಮಾರಾಟ ಮಾಡಬೇಕು ಎಂಬ ಆಸೆಯಂತೆ. ಅದೂ ಕಡಿಮೆ ಮೊತ್ತಕ್ಕಲ್ಲ ಬರೋಬ್ಬರಿ 15 ಲಕ್ಷ ರೂಪಾಯಿಗಳಿಗೆ. ಮಹಾರಾಷ್ಟ್ರದ ರೈತ ಧನಾಜಿ ವಿರ್ಕರ್ ಈ ರೀತಿಯ ವಿಚಿತ್ರ ಆಸೆಯನ್ನು ಹೊಂದಿರುವ ರೈತ. ಅಷ್ಟಕ್ಕೂ ಆತ ಸಾಕಿರುವ ಆಡಿನ ವಿಶೇಷತೆಯೇನು?

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ರೈತ ಧನಾಜಿ ವಿರ್ಕರ್ ಅಪರೂಪದ ಮೇಕೆ ಸಾಕಿದ್ದು, ಆ ಮೇಕೆಯನ್ನು ಸಲ್ಮಾನ್ ಖಾನ್ ಅವರಿಗೆ ಮಾರಾಟ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ಅದೂ ಬರೋಬ್ಬರಿ 15 ಲಕ್ಷ ರೂಪಾಯಿಗೆ. ತಮ್ಮ ಮೇಕೆಗೆ 15 ಲಕ್ಷ ರೂಪಾಯಿ ಕೇಳುತ್ತಿರಲು ಕಾರಣ, ಆ ಮೇಕೆಯ ವಿಶೇಷತೆ. ಧನಾಜಿ ವೀರ್ಕರ್ ಅವರು ಸಾಕಿರುವ ಮೇಕೆಯ ಹಣೆಯ ಮೇಲೆ ಚಂದ್ರನ ಆಕಾರದ ಮಚ್ಚೆಯಿದೆ. ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡಲು ಸೂಕ್ತವಾದ ಮೇಲೆ ಅದಾಗಿದೆ. ಹಾಗಾಗಿ ತನ್ನ ಮೇಕೆಯನ್ನು 15 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ರೈತ ಧನಾಜಿ ವೀರ್ಕರ್.

ವಿರ್ಕರ್ ಅವರು ಈ ಮೇಕೆಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮಾರಾಟ ಮಾಡುವ ಮನಸ್ಸು ಹೊಂದಿದ್ದಾರೆ. ತಮ್ಮ ವಿಶೇಷ ಆಡನ್ನು ಬಾಲಿವುಡ್ ಸೂಪರ್ ಸ್ಟಾರ್ ಖರೀದಿಸಬೇಕು ಎಂಬುದು ಅವರ ಆಸೆ. ಆದರೆ ಸಲ್ಮಾನ್ ಖಾನ್ ಅವರನ್ನು ಹೇಗೆ ಸಂಪರ್ಕಿಸಬೇಕು ಎಂಬುದು ಅವರಿಗೆ ತಿಳಿದಿಲ್ಲವಂತೆ. ಆ ಬಗ್ಗೆ ಪ್ರಯತ್ನ ಮಾಡುತ್ತಿರುವುದಾಗಿಯೂ ಧನಾಜಿ ಹೇಳಿದ್ದಾರೆ.

ಪ್ರತಿ ವರ್ಷ ಬಕ್ರೀದ್ ಅಥವಾ ಈದ್ ಸಂದರ್ಭದಲ್ಲಿ ವಿಶೇಷ ಗುರುತುಗಳಿರುವ ಮೇಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕೆಲವರು ‘ಅಲ್ಹಾ’ ಅಥವಾ ‘ಮೊಹಮ್ಮದ್’ ಎಂಬ ಆಕಾರದ ಗುರುತುಗಳಿವೆ ಎಂದು ನಂಬುತ್ತಾರೆ. ಇಂತಹ ಮೇಕೆಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆಯಂತೆ. ಈಗ ಧನಾಜಿ ಬಳಿ ಇರುವ ಮೇಕೆಯನ್ನು ಅವರು ಮಾರುಕಟ್ಟೆಯಿಂದ ಖರೀದಿಸಿದ್ದಲ್ಲವಂತೆ. ಸುಮಾರು ಎರಡು ವರ್ಷಗಳ ಹಿಂದೆ ವಿರ್ಕರ್ ಅವರ ಮನೆಯಲ್ಲೇ ಹುಟ್ಟಿದ ಮೇಕೆ ಅದಾಗಿದ್ದು. ಆರಂಭದಲ್ಲಿ ಸಾಮಾನ್ಯ ಮೇಕೆಯಂತೆಯೇ ಕಂಡರೂ, ಬೆಳೆದಂತೆ ಅದರ ನೆತ್ತಿಯ ಮೇಲಿನ ಬಿಳಿ ಗುರುತು ಸ್ಪಷ್ಟವಾಗಿ ಚಂದ್ರಾಕಾರ ಪಡೆಯಿತಂತೆ.

ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ?

ಗ್ರಾಮದಲ್ಲಿ ಈ ಮೇಕೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ನೆರೆ ಹೊರೆಯ ಊರುಗಳಿಂದ ಜನ ಮೇಕೆಯನ್ನು ನೋಡಲು ಬರುತ್ತಿದ್ದಾರಂತೆ. ಗ್ರಾಮೀಣ ಪ್ರದೇಶದಲ್ಲಿ ಈ ಮೇಕೆಗೆ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ವಿರ್ಕರ್, ಇದನ್ನು ದೊಡ್ಡ ನಗರಗಳಿಗೆ ಕೊಂಡೊಯ್ಯುವ ಬಗ್ಗೆ ಯೋಚಿಸಿದರು. ಆದರೆ ಪ್ರಯಾಣ ವೆಚ್ಚ ಮತ್ತು ಇತರ ತೊಂದರೆಗಳಿಂದ ಅದು ಸಾಧ್ಯವಾಗಿರಲಿಲ್ಲ. ನಂತರ ಅವರು ಮೇಕೆಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡರು. ಆ ವಿಡಿಯೋ ವೈರಲ್ ಆಗಿ ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ಹಲವೆಡೆಗಳಿಂದ ಖರೀದಿದಾರರು ಸಂಪರ್ಕಿಸಲು ಆರಂಭಿಸಿದ್ದಾರಂತೆ.

ಕೆಲವು ಮುಸ್ಲಿಮರು ತಮ್ಮ ಮನಸಿನ ಆಶೆಗಳು ಈಡೇರಿದರೆ ಬಕ್ರೀದ್ ಸಮಯದಲ್ಲಿ ಚಂದ್ರಾಕಾರದ ಗುರುತು ಇರುವ ಮೇಕೆಯನ್ನು ಬಲಿ ನೀಡುವ ಪ್ರತಿಜ್ಞೆ ಮಾಡುತ್ತಾರೆ. ಅದರಿಂದ ಇಂತಹ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುವ ಧನಾಜಿ, ಈಗಾಗಲೇ ತಮ್ಮ ಮೇಕೆಗೆ 10 ಲಕ್ಷದಿಂದ 12 ಲಕ್ಷದವರೆಗೆ ಆಫರ್‌ಗಳು ಬಂದಿವೆ. ಆದರೆ ವಿರ್ಕರ್ ಅವರಿಗೆ ಸುಮಾರು ರೂ 15 ಲಕ್ಷಕ್ಕೆ ತಮ್ಮ ಮೇಕೆಯನ್ನು ಮಾರಬೇಕು ಎಂದುಕೊಂಡಿದ್ದಾರೆ. ‘ನಮ್ಮ ಮೇಕೆ ಸಲ್ಮಾನ್ ಭಾಯ್‌ ಅವರ ಬಳಿ ಹೋಗಬೇಕು ಎಂಬುದೇ ನಮ್ಮ ಆಸೆ. ಅವರು ಸಂಪರ್ಕಿಸಿದರೆ ಬೆಲೆಯನ್ನು ಕಡಿಮೆ ಮಾಡಲು ಸಿದ್ಧ’ ಎಂದು ರೈತ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version