ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದು ಲೀಗ್ ಹಂತದಲ್ಲಿ ಎರಡು ತಂಡಗಳ ಕೊನೆಯ ಪಂದ್ಯವಾಗಿತ್ತು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ರಾಜಸ್ಥಾನ್ಗೆ ಬಹಳ ಮುಖ್ಯವಾಗಿದೆ. ಇಂದಿನ ಪಂದ್ಯದಲ್ಲಿ ಗೆದ್ದರಷ್ಟೇ ರಾಜಸ್ಥಾನ್ ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಈ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ರಾಜಸ್ಥಾನ್ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ.
ರಾಜಸ್ಥಾನ್ ಈ ಪಂದ್ಯವನ್ನು ಗೆಲ್ಲಬೇಕಾದರೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅವರಿಂದ ಒಂದೊಳ್ಳೆ ಜೊತೆಯಾಟದ ಅವಶ್ಯಕತೆ ಇತ್ತು. ಆದರೆ ಇವರಿಬ್ಬರು ತಂಡಕ್ಕೆ ಅದನ್ನು ನೀಡುವಲ್ಲಿ ವಿಫಲರಾದರು. ಯಶಸ್ವಿ ಜೈಸ್ವಾಲ್ 17 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 27 ರನ್ ಬಾರಿಸಿ ಔಟಾದರೆ, ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ 6 ಎಸೆತಗಳಲ್ಲಿ ಕೇವಲ 4 ರನ್ ಬಾರಿಸಿ ಔಟಾದರು. ಹೀಗಾಗಿ ರಾಜಸ್ಥಾನ್ 33 ರನ್ಗಳಿಗೆ ತನ್ನ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.
ಮೋಹನ್ಲಾಲ್ (Mohanlal) ನಟಿಸಿ, ಜೀತು ಜೋಸೆಫ್ ನಿರ್ದೇಶನ ಮಾಡಿರುವ ‘ದೃಶ್ಯಂ’ ಸರಣಿಯ ಮೂರನೇ ಸಿನಿಮಾ ಕೆಲವು ದಿನಗಳ ಹಿಂದೆಯಷ್ಟೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ದೃಶ್ಯಂ’ ಸರಣಿ ಭಾರತೀಯ ಚಿತ್ರರಂಗದ ಬಹು ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳು ಭಾರಿ ದೊಡ್ಡ ಯಶಸ್ಸು ಗಳಿಸಿದ್ದು, ಇದೀಗ ‘ದೃಶ್ಯಂ 3’ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸಿನಿಮಾದ ಬಗ್ಗೆ ಅಷ್ಟೇನೂ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿರಲಿಲ್ಲ. ಹಾಗಿದ್ದರೂ ಸಹ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿ ಆಗಿದೆ.
‘ದೃಶ್ಯಂ 3’ ಸಿನಿಮಾ ಬಿಡುಗಡೆ ಆಗಿ ಕೇವಲ ಮೂರು ದಿನಗಳಷ್ಟೆ ಆಗಿದ್ದು ಕೇವಲ ಈ ಮೂರು ದಿನಗಳಲ್ಲಿಯೇ ಸಿನಿಮಾ 100 ಕೋಟಿ ಗಳಿಕೆ ಮಾಡಿದೆ. ಸಿನಿಮಾವು ಮಲಯಾಳಂ ಮಾತ್ರವಲ್ಲದೆ ಇನ್ನೂ ಕೆಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿದ್ದು, ಇದೇ ಕಾರಣಕ್ಕೆ ಕೇರಳ ಮಾತ್ರವಲ್ಲದೆ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿಯೂ ಸಿನಿಮಾಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಮಾತ್ರವೇ ಅಲ್ಲದೆ, ದುಬೈ, ಗಲ್ಫ್ ರಾಷ್ಟ್ರಗಳು, ಅಮೆರಿಕ ಇನ್ನೂ ಕೆಲವು ದೇಶಗಳಲ್ಲಿಯೂ ಸಹ ‘ದೃಶ್ಯಂ 3’ ಸಿನಿಮಾಕ್ಕೆ ಭಾರಿ ಗಳಿಕೆ ದೊರೆತಿದೆ.
‘ದೃಶ್ಯಂ 3’ ಸಿನಿಮಾ ಕೇವಲ ಮೂರು ದಿನಗಳಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮಲಯಾಳಂ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆಯಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ 100 ಕೋಟಿ ಗಳಿಕೆ ಮಾಡಿದ ಮಲಯಾಳಂ ಸಿನಿಮಾ ಎನಿಸಿಕೊಂಡಿದೆ ‘ದೃಶ್ಯಂ 3’. ಕರ್ನಾಟಕದಲ್ಲಿ ‘ದೃಶ್ಯಂ 3’ ಸಿನಿಮಾದ ಕನ್ನಡ ಆವೃತ್ತಿ ಬಿಡುಗಡೆ ಆಗಿದೆಯಾದರೂ ಹೆಚ್ಚಿನ ಜನ ಮಲಯಾಳಂ ಸಿನಿಮಾವನ್ನೇ ನೋಡಿ ಖುಷಿ ಪಟ್ಟಿದ್ದಾರೆ.
ಕರ್ನಾಟಕದಲ್ಲಿ ಮೂರು ದಿನಕ್ಕೆ ‘ದೃಶ್ಯಂ 3’ ಸಿನಿಮಾ 6 ಕೋಟಿಗೂ ಹೆಚ್ಚು ಮೊತ್ತದ ಗಳಿಕೆ ಮಾಡಿದೆ. ವೀಕೆಂಡ್ನಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಿದ್ದು, ಮೂರನೇ ದಿನ 2.50 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಆ ಮೂಲಕ ಸಿನಿಮಾದ ಮೂರು ದಿನದ ಒಟ್ಟು ಗಳಿಕೆ 6 ಕೋಟಿ ದಾಟಿದೆ ಎನ್ನಲಾಗುತ್ತಿದೆ.
‘ದೃಶ್ಯಂ 3’ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆ ಆಗಿಲ್ಲ. ವಿಶೇಷವಾಗಿ ‘ದೃಶ್ಯಂ 3’ ಸಿನಿಮಾ ಉತ್ತರ ಭಾರತದಲ್ಲಿ ಬಿಡುಗಡೆ ಆಗಿಲ್ಲ. ಹಾಗಾಗಿ ಸಿನಿಮಾದ ಗಳಿಕೆಗೆ ತುಸು ಪೆಟ್ಟು ಬಿದ್ದಿದೆ. ‘ದೃಶ್ಯಂ 3’ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದ್ದು, ಇದೇ ಕಾರಣಕ್ಕೆ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಹಾಗಿದ್ದರೂ ಸಹ ಸಿನಿಮಾ ಮೊದಲ ಮೂರು ದಿನಗಳಲ್ಲಿ ಉತ್ತಮ ಗಳಿಕೆಯನ್ನೇ ಮಾಡಿದೆ.
ಭಾರತಕ್ಕೆ ಬರುವ ವಿದೇಶಿಗರ ಸಂಖ್ಯೆ ಹೆಚ್ಚಾಗಿದೆ. ಈ ವಿದೇಶಿಗರು (Foreigners) ಇಲ್ಲಿನ ಪ್ರವಾಸಿ ತಾಣಗಳು ಕಣ್ತುಂಬಿಸಿಕೊಳ್ಳುತ್ತಾರೆ. ಅದಲ್ಲದೇ ಇಲ್ಲಿನ ವಿವಿಧ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಭಾರತೀಯರ ಆಚಾರ ವಿಚಾರ ಇಷ್ಟ ಪಟ್ಟು ಇಲ್ಲೇ ಸೆಟಲ್ ಆಗುವುದಿದೆ. ಇದೀಗ ವಿದೇಶಿ ಮಹಿಳೆ ಯುರೋಪಿಯನ್ನರು ಭಾರತೀಯರಿಂದ (Indians) ಈ ಐದು ವಿಷಯಗಳನ್ನು ಕಲಿಯಲೇಬೇಕು ಎಂದಿದ್ದಾರೆ. ಇದೇ ವೇಳೆ ಭಾರತೀಯ ಆತಿಥ್ಯ, ಸಮುದಾಯ ಜೀವನವನ್ನು ಈ ಮಹಿಳೆ ಶ್ಲಾಘಿಸಿದ್ದಾರೆ. ವಿದೇಶಿ ಮಹಿಳೆಯ ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಮೋನಿಕಾ ಕುಂಜೇಶ್ವರಿ ದಾಸಿ (monika_kunjeswari) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದಲ್ಲಿದ್ದಾಗ ಗಮನಿಸಿದ ವಿಷಯಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಕ್ಲಿಪ್‌ನ ಶೀರ್ಷಿಕೆಯಲ್ಲಿ, ಯುರೋಪಿಯನ್ನರು ಭಾರತೀಯರಿಂದ ಕಲಿಯಬೇಕಾದ ವಿಷಯಗಳು. ಇದು ವಿವಾದಾತ್ಮಕವಾಗಿರಬಹುದು ಎಂದು ನನಗೆ ತಿಳಿದಿದೆ. ಆದರೆ ಭಾರತದಲ್ಲಿ ವರ್ಷಗಳ ಕಾಲ ನೆಲೆಸಿದ ಬಳಿಕ ಈ ಪಾಶ್ಚಿಮಾತ್ಯ ದೇಶಗಳು ಭಾರತೀಯ ಸಂಸ್ಕೃತಿಯಿಂದ ಕಲಿಯಬಹುದಾದ ಕೆಲವು ವಿಷಯಗಳಿವೆ ಎಂದು ನಾನು ಗಮನಿಸಿದೆ. ಯುರೋಪಿನ ಅನೇಕ ಜನರು ಭಾರತದ ಹಳ್ಳಿಗಳಿಗೆ ಅಥವಾ ಸಣ್ಣ ಪಟ್ಟಣಗಳಿಗೆ ಭೇಟಿ ನೀಡುತ್ತಾರೆ. ಹಾಗೂ ಇಲ್ಲಿನ ಜನರು ‘ಸರಳ’ ಎಂದು ಭಾವಿಸುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇಲ್ಲಿ ಕಂಡುಕೊಂಡ ಕೆಲವು ಮೌಲ್ಯಗಳು ನಾವು ವಿದೇಶದಲ್ಲಿ ನಿಧಾನವಾಗಿ ಕಳೆದುಕೊಳ್ಳುತ್ತಿರುವ ವಿಷಯಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಭಾರತದಲ್ಲಿ ಅತಿಥಿಗಳನ್ನು ನಡೆಸಿಕೊಳ್ಳುವ ರೀತಿ ಅದ್ಭುತವಾಗಿದೆ. ಯಾರಾದರೂ ನಿಮ್ಮ ಮನೆಗೆ ಬಂದರೆ, ನೀವು ಅವರಿಗೆ ಆಹಾರ, ಚಹಾ ನೀಡುತ್ತೀರಿ. ಹಾಗೂ ಅವರಿಗೆ ಆರಾಮದಾಯಕವಾಗಿಸುತ್ತೀರಿ. ಇದನ್ನು ಮೂಲಭೂತ ನಡವಳಿಕೆ ಎಂದು ಪರಿಗಣಿಸಲಾಗುತ್ತದೆ. ಲಿಥುವೇನಿಯಾದಲ್ಲಿಯೂ ನಮಗೆ ಇದೇ ರೀತಿಯದ್ದೇನೋ ಇದೆ, ಆದರೆ ಭಾರತದಲ್ಲಿ ಅದು ನಿಜವಾಗಿಯೂ ಬೇರೆಯದೇ ಮಟ್ಟದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.
ಸ್ನೇಹಿತರು ಸ್ನೇಹಿತರಿಗೆ ಸಹಾಯ ಮಾಡುತ್ತಾರೆ. ನೆರೆಹೊರೆಯವರು ಪರಸ್ಪರ ಈ ಬಗ್ಗೆ ತಿಳಿದಿದ್ದಾರೆ. ಯಾರಿಗಾದರೂ ಏನಾದರೂ ಅಗತ್ಯವಿದ್ದರೆ, ಸಹಾಯ ಮಾಡಲು ಸಿದ್ಧರಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ಈ ಸಮುದಾಯದ ಪ್ರಜ್ಞೆಯನ್ನು ಕಳೆದುಕೊಳ್ಳುವುದು ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತೀಯ ಮನೆಗಳಲ್ಲಿ ಆಹಾರವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯವನ್ನು ಉಳಿಸಿಕೊಂಡಿದೆ. ಮನೆಯಲ್ಲಿ ಅಡುಗೆ ಮಾಡುವುದು. ಒಟ್ಟಿಗೆ ಕುಳಿತು ತಿನ್ನುವುದು ಸಾಮಾನ್ಯ. ಇದು ಎಲ್ಲವೂ ಅನುಕೂಲಕ್ಕಾಗಿ ಅಲ್ಲ. ಆಹಾರವನ್ನು ವೇಗವಾಗಿ ಸೇವಿಸುವುದನ್ನು ಒಳಗೊಂಡಿಲ್ಲ ಎಂದಿದ್ದಾರೆ.
ಭಾರತೀಯರು ಸ್ವಚ್ಛತೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ಗಮನಿಸಿದ್ದೇನೆ. ಸ್ನಾನ ಮಾಡುವುದು, ಬಟ್ಟೆ ಬದಲಾಯಿಸುವುದು, ನಿಮ್ಮನ್ನು ತಾಜಾವಾಗಿರಿಸಿಕೊಳ್ಳುವುದು. ಈ ಅಭ್ಯಾಸವನ್ನು ತುಂಬಾ ಹತ್ತಿರದಿಂದ ನಾನು ನೋಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ತುಂಬಾ ಒಳ್ಳೆಯ ಅಭ್ಯಾಸ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವುದನ್ನು ನೀವು ನೋಡಬಹುದು.
ಇನ್ನು ಹಬ್ಬಗಳು, ನೃತ್ಯ, ಹಾಡುಗಾರಿಕೆ, ಒಟ್ಟಿಗೆ ಆಚರಿಸುತ್ತಾರೆ. ಜೀವನವನ್ನು ಆನಂದಿಸಲು ಜನರಿಗೆ ವಿಶೇಷ ಕಾರಣ ಬೇಕಾಗಿಲ್ಲ. ಕೆಲವೊಮ್ಮೆ ಯುರೋಪಿನಲ್ಲಿ ನಾವು ತುಂಬಾ ಗಂಭೀರವಾಗಿರುತ್ತೇವೆ, ವಿಷಯಗಳನ್ನು ಸರಳವಾಗಿ ಆನಂದಿಸುವುದು ಹೇಗೆ ಎಂಬುದನ್ನು ನಾವು ಮರೆತುಬಿಡುತ್ತೇವೆ ಎಂದು ನನಗೆ ಅನಿಸುತ್ತದೆ. ಖಂಡಿತವಾಗಿ ಪ್ರತಿಯೊಂದು ದೇಶವೂ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಹೊಂದಿರುತ್ತದೆ. ಆದರೆ ಇವು ನಾನು ಭಾರತದಿಂದ ವೈಯಕ್ತಿಕವಾಗಿ ಕಲಿತ ಕೆಲವು ವಿಷಯಗಳು ಎಂದಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದು ಭಾರತದ ಬಗ್ಗೆ ತುಂಬಾ ಸುಂದರವಾದ ಅವಲೋಕನ ಎಂದಿದ್ದಾರೆ. ಇನ್ನೊಬ್ಬರು, ಒಳ್ಳೆಯದದ್ದನ್ನು ಹುಡುಕುವ ಹಾಗೂ ಅಳವಡಿಸಿಕೊಳ್ಳುವ ನಿಮ್ಮ ಗುಣ ದೊಡ್ಡದು ಎಂದು ಹೊಗಳಿದ್ದಾರೆ. ಮತ್ತೊಬ್ಬರು, ಅತಿಥಿ ದೇವೋ ಭವ ನಿಜವಾಗಿಯೂ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಭಾಗಗಳಲ್ಲಿ ಒಂದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಅತ್ಯುನ್ನತ ನೇಮಕಾತಿ ಸಂಸ್ಥೆಯಾದ ಕೇಂದ್ರ ಲೋಕಸೇವಾ ಆಯೋಗವು (UPSC) ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 194 ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಜವಾಬ್ದಾರಿಯುತ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಅದ್ಭುತ ಅವಕಾಶವಾಗಿದೆ. ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 12 ರ ಸಂಜೆ 6 ಗಂಟೆಯ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ವಿವಿಧ ಕ್ಷೇತ್ರಗಳ ತಜ್ಞರಿಗೆ ಮುಕ್ತ ಅವಕಾಶ:
ಈ ವಿಶೇಷ ನೇಮಕಾತಿ ಅಭಿಯಾನದ ಮೂಲಕ ತಾಂತ್ರಿಕ, ಎಂಜಿನಿಯರಿಂಗ್, ವೈಜ್ಞಾನಿಕ, ಬೋಧನೆ, ವಾಯುಯಾನ (Aviation), ಪುರಾತತ್ತ್ವ ಶಾಸ್ತ್ರ, ಹವಾಮಾನಶಾಸ್ತ್ರ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಎಂಜಿನಿಯರಿಂಗ್, ವಿಜ್ಞಾನ, ವಾತಾವರಣ ಅಧ್ಯಯನ, ವಿವಿಧ ಭಾಷೆಗಳು, ಮೆಕ್ಯಾನಿಕಲ್, ಸಿವಿಲ್, ತೈಲ ತಂತ್ರಜ್ಞಾನ, ರಾಸಾಯನಿಕ ಎಂಜಿನಿಯರಿಂಗ್ ಮತ್ತು ವಾಯುಯಾನ ನಿರ್ವಹಣೆಯಲ್ಲಿ (Aviation Management) ಹಿನ್ನೆಲೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸ್ಪರ್ಧಿಸಬಹುದಾಗಿದೆ.
ಹುದ್ದೆಗಳಿಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ:
ವಿವಿಧ ಇಲಾಖೆಗಳ ಹುದ್ದೆಗಳಾಗಿರುವುದರಿಂದ, ಎಂಜಿನಿಯರಿಂಗ್ ಪದವಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಅಥವಾ ಪಿಎಚ್‌ಡಿ (PhD) ವರೆಗಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲಿ ಅವಕಾಶವಿದೆ. ಬಿಎಸ್ಸಿ, ಬಿಟೆಕ್/ಬಿಇ, ಎಂಎ, ಎಂಎಸ್ಸಿ, ಎಂಇ/ಎಂಟೆಕ್ ಮತ್ತು ಪಿಜಿ ಡಿಪ್ಲೊಮಾ ಸೇರಿದಂತೆ ಪ್ರತಿಯೊಂದು ಹುದ್ದೆಗೂ ಇರಬೇಕಾದ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳ ವಿವರವನ್ನು ಅಧಿಕೃತ ವೆಬ್‌ಸೈಟ್‌ನ ವಿವರವಾದ ಅಧಿಸೂಚನೆಯಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ. ಹಾಗಾಗಿ, ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಒಮ್ಮೆ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.
ಲಿಖಿತ ಪರೀಕ್ಷೆ ಇಲ್ಲ, ಕೇವಲ ಸಂದರ್ಶನದ ಮೂಲಕ ಆಯ್ಕೆ:
ಈ ನೇಮಕಾತಿಯ ಅತ್ಯಂತ ಆಕರ್ಷಕ ಅಂಶವೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಬಂದಿರುವ ಅರ್ಜಿಗಳಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಪ್ರೊಫೈಲ್‌ನ ಬಲವನ್ನು ಆಧರಿಸಿ ಮೊದಲು ಶಾರ್ಟ್‌ಲಿಸ್ಟ್ (ಕಿರುಪಟ್ಟಿ) ಮಾಡಲಾಗುತ್ತದೆ. ತದನಂತರ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಕೇವಲ ಪರೀಕ್ಷೆಯ ಅಂಕಗಳಿಗಿಂತ ಹೆಚ್ಚಾಗಿ ಅಭ್ಯರ್ಥಿಯ ವಿಷಯದ ಪರಿಣತಿ (Subject Expertise) ಮತ್ತು ಸಂವಹನ ಕೌಶಲ್ಯಕ್ಕೆ (Communication Skills) ಹೆಚ್ಚಿನ ಆದ್ಯತೆ ನೀಡುತ್ತದೆ.
ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ನಿಯಮಾವಳಿಗಳ ಪ್ರಕಾರ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ. ಆರಂಭಿಕವಾಗಿ ‘ಪೇ ಲೆವೆಲ್-10’ (Level 10) ರಂತೆ ಮೂಲ ವೇತನ ದೊರೆಯಲಿದ್ದು, ಇದರೊಂದಿಗೆ ನಿಯಮಾನುಸಾರ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆಗಳನ್ನು ಒಳಗೊಂಡಂತೆ ಇತರೆ ಸೌಲಭ್ಯಗಳೂ ಸಿಗಲಿವೆ. ಇನ್ನು ಗ್ರೂಪ್ ‘ಎ’ ಹಿರಿಯ ಹುದ್ದೆಗಳಿಗೆ, ಅವರ ನಿರ್ದಿಷ್ಟ ದರ್ಜೆ ಮತ್ತು ಇಲಾಖೆಯನ್ನು ಅವಲಂಬಿಸಿ ವೇತನದ ಮಟ್ಟ ಇನ್ನೂ ಹೆಚ್ಚಿರಲಿದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಶುಲ್ಕದ ವಿವರ:
ಈ ನೇಮಕಾತಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಯುಪಿಎಸ್‌ಸಿಯ ಆನ್‌ಲೈನ್ ನೇಮಕಾತಿ ಅರ್ಜಿ (ORA) ಪೋರ್ಟಲ್ ಆದ upsconline.nic.in/ora ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕೇವಲ 25ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (PwBD) ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಇವರಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಬಾಲಿವುಡ್ ನಟ ವರುಣ್ ಧವನ್ ಅಭಿನಯದ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ (Hai Jawani Toh Ishq Hona Hai) ಟ್ರೇಲರ್ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ಡೇವಿಡ್ ಧವನ್ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರಿಗೆ ನಗುವಿನ ಔತಣ ಉಣಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಸಾಬೀತುಪಡಿಸಿದೆ. ವರುಣ್ ಧವನ್ (Varun Dhawan) ಜೊತೆ ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
3 ನಿಮಿಷ 15 ಸೆಕೆಂಡ್ ಅವಧಿ ಇರುವ ಈ ಟ್ರೇಲರ್‌ನಲ್ಲಿ ವರುಣ್ ಧವನ್ ಪಾತ್ರವು ಇಬ್ಬರು ನಾಯಕಿಯರ ನಡುವೆ ಸಿಲುಕಿ ಹೇಗೆ ತೊಂದರೆ ಅನುಭವಿಸುತ್ತದೆ ಎಂಬುದನ್ನು ಮಜವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ವರುಣ್ ಧವನ್ ಮುಗ್ಧ ಮತ್ತು ರೊಮ್ಯಾಂಟಿಕ್ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವರಿಗೆ ಜೋಡಿಯಾಗಿ ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ನಟಿಸಿದ್ದಾರೆ. ಇಬ್ಬರು ಸುಂದರಿಯರಿಂದ ಗ್ಲಾಮರ್ ಹೆಚ್ಚಿದೆ.
‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಟ್ರೇಲರ್:
ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ನೆಟ್ಟಿಗರು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಟ್ರೇಲರ್ ನೋಡಿದರೆ ಹಳೇ ಐಕಾನಿಕ್ ಕಾಮಿಡಿ ಸಿನಿಮಾಗಳು ನೆನಪಾಗುತ್ತದೆ. ಆದರೂ ನನ್ನ ನಿರೀಕ್ಷೆಗಿಂತ ತುಂಬಾ ಚೆನ್ನಾಗಿದೆ. ಮೇ ತೇರಾ ಹೀರೋ ಚಿತ್ರದ ನಂತರ ಡೇವಿಡ್ ಮತ್ತು ವರುಣ್ ಧವನ್ ಕಾಂಬಿನೇಷನ್‌ನ ಬೆಸ್ಟ್ ಸಿನಿಮಾ ಇದಾಗಲಿದೆ’ ಎಂದು ಸಿನಿಪ್ರೇಮಿಯೊಬ್ಬರು ಬರೆದುಕೊಂಡಿದ್ದಾರೆ.
‘ವರುಣ್ ಧವನ್ ಮತ್ತೆ ತಮ್ಮ ಹಳೆಯ ಕಾಮಿಡಿ ಅವತಾರಕ್ಕೆ ಮರಳಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿಗುವುದು ಗ್ಯಾರಂಟಿ’ ಎಂಬ ಕಮೆಂಟ್ ಕೂಡ ಬಂದಿದೆ. ‘ಕಾಮಿಡಿ ಮತ್ತು ರೊಮ್ಯಾನ್ಸ್ ಸಿನಿಮಾದ ಕಿಂಗ್ ಡೇವಿಡ್ ಧವನ್ ಈಗ ಕಮ್ಬ್ಯಾಕ್ ಮಾಡಿದ್ದಾರೆ. ವರುಣ್, ಮೃಣಾಲ್ ಮತ್ತು ಪೂಜಾ ಹೆಗ್ಡೆ ಮಸ್ತ್ ಮನರಂಜನೆ ನೀಡುವುದು ಗ್ಯಾರಂಟಿ’ ಎಂಬ ಹೊಗಳಿಕೆ ಕೂಡ ಸಿಕ್ಕಿದೆ.
ಈ ಕಾಮಿಡಿ ಚಿತ್ರದ ಮೂಲಕ ಡೇವಿಡ್ ಧವನ್ ಮತ್ತು ವರುಣ್ ಧವನ್ ಅವರ ಕಾಂಬಿನೇಷನ್ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿತ್ರದಲ್ಲಿ ಮನೀಶ್ ಪೌಲ್, ಚಂಕಿ ಪಾಂಡೆ, ಜಿಮ್ಮಿ ಶೇರ್ಗಿಲ್, ಮೌನಿ ರಾಯ್, ಅಲಿ ಅಸ್ಗರ್ ಮತ್ತು ರಾಕೇಶ್ ಬೇಡಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರವು ಜೂನ್ 5ರಂದು ರಿಲೀಸ್ ಆಗಲಿದೆ.
ಒಂದು ಹಿಟ್ ಸಿನಿಮಾ (Hit Cinema) ಸಿಕ್ಕರೆ ಹತ್ತು ವರ್ಷ ಚಿತ್ರರಂಗದಲ್ಲಿ ಸಮಯ ತಳ್ಳಬಹುದು ಎಂದು ಹಿಂದೊಮ್ಮೆ ಜನಪ್ರಿಯ ನಟರೊಬ್ಬರು ಹೇಳಿದ್ದರು. ಅದು ಬಹುತೇಕ ನಿಜವೂ ಆಗಿದೆ. ಒಂದು ಹಿಟ್ ಸಿನಿಮಾ ಕೊಟ್ಟು ಬಿಟ್ಟರೆ ಮುಂದಿನ ಹತ್ತು ವರ್ಷ ಅದರ ಬಲದಲ್ಲೇ ನಟರ ಜೀವನ ನಡೆದು ಹೋಗುತ್ತಿತ್ತು. ಇದೇ ಕಾರಣಕ್ಕ ನಟರುಗಳು ಯಾವುದೇ ದೊಡ್ಡ ಬಜೆಟ್ನ, ಭಿನ್ನ ಕತೆಯುಳ್ಳ ಸಿನಿಮಾಗಳನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ. ಆದರೆ ಇಲ್ಲೊಬ್ಬ ಸ್ಟಾರ್ ನಟ, ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂದು ಗೊತ್ತಿದ್ದರೂ ಸಿನಿಮಾದಲ್ಲಿ ತಮಗೆ ಆಫರ್ ಮಾಡಲಾಗಿದ್ದ ಪ್ರಮುಖ ಪಾತ್ರದಲ್ಲಿ ನಟಿಸಲು ಒಲ್ಲೆ ಎಂದರಂತೆ.
ಬಾಲಿವುಡ್‌ನ ಬಹುಮುಖ ಪ್ರತಿಭೆಯ ನಟ ರಣದೀಪ್ ಹೂಡಾ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ವಿಶೇಷ ಗುರುತು ಮೂಡಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ರಣ್ದೀಪ್ ನಟಿಸಿದ್ದಾರೆ. ನಾಯಕನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲೂ ರಣ್ದೀಪ್ ನಟಿಸಿದ್ದಾರೆ. ರಣ್ದೀಪ್, ಬಾಲಿವುಡ್‌ನ ಕೆಲವೇ ಕೆಲವು ಅತ್ಯುತ್ತಮ ನಟರುಗಳಲ್ಲಿ ಒಬ್ಬರು ಸಹ. ಇದೇ ಕಾರಣಕ್ಕೆ ಅವರಿಗೆ ಬಹಳ ಸವಾಲಾದ ಪಾತ್ರಗಳು ಅರಸಿ ಬರುತ್ತವೆ.
2025 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆದ ‘ಛಾವಾ’ ಸಿನಿಮಾನಲ್ಲಿ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸುವ ಆಫರ್ ರಣ್ದೀಪ್ ಹೂಡ ಅವರಿಗೆ ನೀಡಲಾಗಿತ್ತು. ಆದರೆ ಅವರು ಒಲ್ಲೆ ಎಂದರು. ‘ಛಾವಾ’ ಸಿನಿಮಾದ ವಿಲನ್, ಕ್ರೂರ ಮೊಘಲ್ ದೊರೆ ಔರಂಗಜೇಬ್ ಪಾತ್ರಕ್ಕಾಗಿ ಮೊದಲು ರಣದೀಪ್ ಹೂಡಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಈ ಬ್ಲಾಕ್‌ಬಸ್ಟರ್ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.
‘ಛಾವಾ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರೆ, ಅಕ್ಷಯ್ ಖನ್ನಾ ಔರಂಗಜೇಬ್ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಪ್ರಶಂಸೆ ಗಳಿಸಿದ್ದಾರೆ. ಆದಾಗ್ಯೂ, ಅಕ್ಷಯ್ ಖನ್ನಾ ಅವರಿಗಿಂತ ಮುಂಚಿತವಾಗಿ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ಪವರ್‌ಫುಲ್ ವಿಲನ್ ಪಾತ್ರಕ್ಕಾಗಿ ರಣದೀಪ್ ಹೂಡಾ ಅವರನ್ನು ಸಂಪರ್ಕ ಮಾಡಿದ್ದರು. ಆದರೆ ರಣ್ದೀಪ್ ಹೂಡ, ಔರಂಗಾಜೇಬ್ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಳ್ಳಲಿಲ್ಲ.
ಈ ಬಗ್ಗೆ ಮಾತನಾಡಿದ ರಣದೀಪ್ ಹೂಡಾ, ‘ನನಗೆ ‘ಛಾವಾ’ ಚಿತ್ರದಲ್ಲಿ ಔರಂಗಜೇಬ್ ಪಾತ್ರದ ಆಫರ್ ಬಂದಿದ್ದು ನಿಜ. ಚಿತ್ರದ ಕಥೆ ಮತ್ತು ಆ ಪಾತ್ರ ಎರಡೂ ತುಂಬಾ ಬಲವಾಗಿದ್ದವು. ಆದರೆ ಆ ಸಮಯದಲ್ಲಿ ನಾನು ನನ್ನದೇ ಆದ ಸ್ವಂತ ಸಿನಿಮಾ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ನಿರ್ದೇಶನ ಮತ್ತು ನಟನೆಯಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದೆ, ಸಾವರ್ಕರ್ ಚಿತ್ರಕ್ಕಾಗಿ ನಾನು ತುಂಬಾ ತೂಕ ಇಳಿಸಿಕೊಂಡಿದ್ದೆ ಮತ್ತು ದೈಹಿಕವಾಗಿ ಸಾಕಷ್ಟು ಬದಲಾಗಿದ್ದೆ. ಆ ಒಂದು ಯೋಜನೆಯ ಮೇಲೆ ನಾನು ಎಷ್ಟು ಗಮನ ಹರಿಸಿದ್ದೆ ಎಂದರೆ, ಅದೇ ಸಮಯದಲ್ಲಿ ಮತ್ತೊಂದು ದೊಡ್ಡ ಸಿನಿಮಾಗೆ ಹಾಗೂ ಅಷ್ಟೇ ತೂಕದ ಪಾತ್ರಕ್ಕೆ ನ್ಯಾಯ ಒದಗಿಸುವುದು ನನಗೆ ಸಾಧ್ಯವಿರಲಿಲ್ಲ. ಆ ಕಾರಣದಿಂದಾಗಿಯೇ ನಾನು ‘ಛಾವಾ’ ಚಿತ್ರದ ಆಫರ್ ಅನ್ನು ಅತ್ಯಂತ ಗೌರವಪೂರ್ವಕವಾಗಿ ನಿರಾಕರಿಸಬೇಕಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದಲ್ಲಿ ಔರಂಗಜೇಬ್ ಪಾತ್ರವನ್ನು ನಿರ್ವಹಿಸಿದ ಅಕ್ಷಯ್ ಖನ್ನಾ ಅವರ ನಟನೆಯನ್ನು ರಣದೀಪ್ ಮುಕ್ತಕಂಠದಿಂದ ಶ್ಲಾಘಿಸಿದ್ದು, ‘ಅಕ್ಷಯ್ ಖನ್ನಾ ಅವರು ಆ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಅವರು ಪರದೆಯ ಮೇಲೆ ಕಾಣಿಸಿಕೊಂಡ ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಕೆಲವೊಮ್ಮೆ ಕೆಲವು ಪಾತ್ರಗಳು ನಿರ್ದಿಷ್ಟ ನಟರಿಗಾಗಿಯೇ ಬರೆಯಲ್ಪಟ್ಟಿರುತ್ತವೆ ಅನಿಸುತ್ತದೆ’ ಎಂದಿದ್ದಾರೆ. ‘ಛಾವಾ’ ಸಿನಿಮಾವು 1000 ಕೋಟಿಗೂ ಹೆಚ್ಚು ಮೊತ್ತದ ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ.
ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಯುವ ವಿಜ್ಞಾನಿಗಳು ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯುತ್ತಮ ಅವಕಾಶವೊಂದನ್ನು ತಂದಿದೆ. DRDO ಅಡಿಯಲ್ಲಿ ಕಾರ್ಯನಿರ್ವಹಿಸುವ ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿರುವ ಪ್ರತಿಷ್ಠಿತ ‘ನೇವಲ್ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ’ (NMRL) ಪ್ರಸ್ತುತ ಸಾಲಿನ ಪಾವತಿಸಿದ (Paid) ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಕಟಿಸಿದೆ. ರಕ್ಷಣಾ ಸಂಶೋಧನೆಯಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ತರಬೇತಿಯು ಒಂದು ವಿಶಿಷ್ಟ ವೇದಿಕೆಯಾಗಲಿದ್ದು, ಇಂಟರ್ನ್‌ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 5,000ರೂ. ಸ್ಟೈಫಂಡ್ ಕೂಡ ಸಿಗಲಿದೆ.
ಒಟ್ಟು 20 ಸೀಟುಗಳಿಗೆ ಆರು ತಿಂಗಳ ತರಬೇತಿ:
NMRL ಸಂಸ್ಥೆಯು ಈ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಒಟ್ಟು 20 ಸೀಟುಗಳನ್ನು ಘೋಷಿಸಿದೆ. ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ಆರು ತಿಂಗಳ ಕಾಲ ರಕ್ಷಣಾ ಸಂಶೋಧನೆಗೆ ಸಂಬಂಧಿಸಿದ ಅತ್ಯಾಧುನಿಕ ಯೋಜನೆಗಳಲ್ಲಿ ನೇರವಾಗಿ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಸುವರ್ಣಾವಕಾಶ ದೊರೆಯಲಿದೆ. ಈ ವಿಶೇಷ ತರಬೇತಿ ಕಾರ್ಯಕ್ರಮವು ಮುಂಬರುವ ಜುಲೈ 1, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಇದು ಸಹಕಾರಿಯಾಗಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು?
ಈ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು ಮತ್ತು ಅವರ ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು. ಜೊತೆಗೆ, ಅಭ್ಯರ್ಥಿಗಳು AICTE ಅಥವಾ UGC ಯಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿಯಮಿತ (Regular) ಕೋರ್ಸ್ ವ್ಯಾಸಂಗ ಮಾಡುತ್ತಿರಬೇಕು. ಪ್ರಸ್ತುತ ಅಂತಿಮ ವರ್ಷದಲ್ಲಿರುವ ಬಿಇ ಅಥವಾ ಬಿಟೆಕ್ (BE/B.Tech) ವಿದ್ಯಾರ್ಥಿಗಳು ಮತ್ತು ದ್ವಿತೀಯ ವರ್ಷದಲ್ಲಿ ಓದುತ್ತಿರುವ ಎಂಎಸ್ಸಿ (M.Sc) ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕನಿಷ್ಠ ಅಂಕಗಳ ಶೈಕ್ಷಣಿಕ ಮಾನದಂಡ:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸಿದೆ. ಇಂಜಿನಿಯರಿಂಗ್ (BE/B.Tech) ವಿದ್ಯಾರ್ಥಿಗಳು ತಮ್ಮ ಹಿಂದಿನ ಸೆಮಿಸ್ಟರ್‌ಗಳಲ್ಲಿ ಕನಿಷ್ಠ 7.0 ಸಿಜಿಪಿಎ (CGPA) ಸ್ಕೋರ್ ಹೊಂದಿರಬೇಕಾಗುತ್ತದೆ. ಇನ್ನು ವಿಜ್ಞಾನ ವಿಭಾಗದ ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡಾ 65 ರಷ್ಟು ಅಂಕಗಳನ್ನು ಪಡೆದಿರುವುದು ಅತ್ಯಗತ್ಯವಾಗಿದೆ. ಈ ಕನಿಷ್ಠ ಅರ್ಹತೆ ಹೊಂದಿರುವ ಪ್ರೊಫೈಲ್‌ಗಳನ್ನು ಮಾತ್ರ ಮುಂದಿನ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಪ್ರಮುಖ ವಿಷಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಈ ಇಂಟರ್ನ್‌ಶಿಪ್‌ನಲ್ಲಿ ಅವಕಾಶ ನೀಡಲಾಗಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಜೈವಿಕ ತಂತ್ರಜ್ಞಾನ (Biotechnology), ರಾಸಾಯನಿಕ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಹಾಗೂ ಕಂಪ್ಯೂಟರ್ ವಿಜ್ಞಾನ ಅಥವಾ ಐಟಿ (CS/IT) ವಿಷಯಗಳನ್ನು ಒಳಗೊಂಡಿರುವ ಸ್ಟ್ರೀಮ್‌ಗಳ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆ (Academic Merit) ಮತ್ತು ಆನ್‌ಲೈನ್ ಸಂವಹನ ಅಥವಾ ಇಂಟರ್ವ್ಯೂ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಯಾವುದೇ ಅರ್ಜಿ ಶುಲ್ಕವಿಲ್ಲದೆ ಸರಳವಾಗಿ ಇಮೇಲ್ ಮೂಲಕ ತಮ್ಮ ವಿವರಗಳನ್ನು ಕಳುಹಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು mmg.nmrl@gov.in ಇಮೇಲ್ ಐಡಿಗೆ ಕಳುಹಿಸಬೇಕಾಗಿದ್ದು, ಇಮೇಲ್ ಕಳುಹಿಸಲು ಜೂನ್ 10 ಕೊನೆಯ ದಿನಾಂಕವಾಗಿದೆ. ಕೊನೆಯ ದಿನದ ಗಡಿಬಿಡಿಯನ್ನು ತಪ್ಪಿಸಲು ವಿದ್ಯಾರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಸೂಕ್ತ.
ನವದೆಹಲಿ, ಮೇ 24: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋ ಹಳ್ಳಿಗಳ ಮೂಲಸೌಕರ್ಯಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಮಹಿಳೆಯೊಬ್ಬರು ತಮ್ಮ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಕಾಡಿನ ಹಾದಿಯಲ್ಲಿ 9 ಕಿ.ಮೀ ದೂರ ಕಾಡಿನಲ್ಲಿ ನಡೆದಿದ್ದಾರೆ. ಇದು ಹಳೆಯ ವಿಕ್ರಮ-ಬೇತಾಳದ ಕತೆಗಳನ್ನು ಹೋಲುತ್ತದೆ.
ಸುರ್ಗುಜಾ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಸುಖ್ಮಾನಿಯಾ ಬಾಯಿ ಎಂಬ ಮಹಿಳೆ ಬ್ಯಾಂಕಿನಿಂದ ಪಿಂಚಣಿ ಹಣ ಪಡೆಯಲು ತನ್ನ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸುಮಾರು 9 ಕಿಲೋಮೀಟರ್ ನಡೆದಿದ್ದಾರೆ. ಆಕೆ ಇದೇ ರೀತಿ ಕೆಲವು ತಿಂಗಳಿನಿಂದ ತನ್ನ ಅತ್ತೆಯನ್ನು ಎತ್ತಿಕೊಂಡು ಬ್ಯಾಂಕ್ಗೆ ನಡೆಯುತ್ತಿದ್ದಾರೆ. ಪಿಂಚಣಿ ನಿಯಮಗಳ ಪ್ರಕಾರ ಬ್ಯಾಂಕ್ ಫಲಾನುಭವಿಗೆ ಪಿಂಚಣಿ ಪಾವತಿಸುವ ಮೊದಲು ಫಲಾನುಭವಿಗಳು ಗುರುತಿನ ಪರಿಶೀಲನೆಗಾಗಿ ಬ್ಯಾಂಕಿನಲ್ಲಿ ದೈಹಿಕವಾಗಿ ಹಾಜರಿರಬೇಕು. ಆದರೆ, ಸುಖ್ಮಾನಿಯಾ ಅವರ ಅತ್ತೆಗೆ ಬೆಟ್ಟ-ಗುಡ್ಡಗಳನ್ನು ಹತ್ತಿ ನಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಆಕೆಯನ್ನು ಎತ್ತಿಕೊಂಡು ಕಾಡಿನಲ್ಲಿ ನಡೆದು ಹೋಗುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿ, ಮೇ 24: ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವರನ್ನೂ ಬಿಡದ ಕಳ್ಳರು, ಮೃತ ಮಹಿಳೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಲಪಟಾಯಿಸಿರುವ (gold theft) ಅಮಾನವೀಯ ಘಟನೆ ಉಡುಪಿ (udupi) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಖ್ಯಾಂಶಗಳು
ಮೃತ ಮಹಿಳೆ ಮೈಮೇಲಿದ್ದ ಒಡವೆಗೆ ಕನ್ನ ಹಾಕಿದ ಖದೀಮರು
ಅಪಘಾತದಲ್ಲಿ ಮೃತಪಟ್ಟವರನ್ನೂ ಬಿಡದ ಕಳ್ಳರು
ಕೊಲ್ಲೂರು ಠಾಣೆಯಲ್ಲಿ ದೂರು ದಾಖಲು
ನಡೆದಿದ್ದೇನು?
ಮೇ 17ರಂದು ಕೊಲ್ಲೂರಿನ ದಳಿ ಎಂಬಲ್ಲಿ ಕೇರಳಂ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟ ಇನ್ಸುಲೇಟರ್ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಜ್ಯೋತಿ ಹಾಗೂ ಅರಿಯಾ ಅನೂಫ್ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಅಪಘಾತದ ಕರುಣಾಜನಕ ಪರಿಸ್ಥಿತಿಯಲ್ಲೂ ಕಳ್ಳರು ತಮ್ಮ ವಿಕೃತ ಬುದ್ಧಿ ತೋರಿಸಿದ್ದು, ಮೃತ ಮಹಿಳೆ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದು ಒಂದು ವಾರದ ಬಳಿಕ ಜ್ಯೋತಿ ಅವರ ಕುಟುಂಬಸ್ಥರಿಗೆ ಚಿನ್ನ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಇದೀಗ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರೊಬ್ಬರ ಒಡವೆಗಳನ್ನು ಕದ್ದ ಕಳ್ಳರ ಈ ನೀಚ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿ ಬಂದು ಸರ ಕದಿದ್ದ ಹೈಟೆಕ್ ಕಳ್ಳನ ಬಂಧನ
ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದ ಬಳಿ ಮೇ 23ರಂದು ನಡೆದ ಸರಗಳ್ಳತನ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದು ಯುವತಿಯ ಕೊರಳಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಹೈಟೆಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ.
ಆರೋಪಿ ಮಂಜುನಾಥ್ ಮೇ 13ರಂದಷ್ಟೇ ವಿವಾಹವಾಗಿದ್ದ. ಶೋಕಿಗಾಗಿ ಸರಗಳ್ಳತನ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ನವೀನ್ ಮಠಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಮಂಜುನಾಥ್‌ನನ್ನು ಬಂಧಿಸಿದ್ದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 10 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರ, (ಮೇ 24): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋದವರು ನೀರು ಪಾಲಾಗಿದ್ದಾರೆ. ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 14 ಜನರು ನೀರಿನ ಸುಳಿಗೆ ಸಿಲುಕಿದ್ದು, ಈ ಪೈಕಿ ಮೂವರ ಮೃತದೇಗಳು ಪತ್ತೆಯಾಗಿದೆ. ಇನ್ನುಳಿದ 11 ಮಂದಿ ನೀರು ಪಾಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ.
ಮುಖ್ಯಾಂಶಗಳು
ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಜಲಸಮಾಧಿ
ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿಯ ತಟ್ಟೆಹಕ್ಕಲು ನದಿಯಲ್ಲಿ ಘಟನೆ
ತಟ್ಟೆಹಕ್ಕಲು ನದಿಯಲ್ಲಿ 11 ಜನರು ನೀರುಪಾಲಾಗಿರುವ ಶಂಕೆ
ಮೂವರ ಮೃತದೇಹ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್
ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದ ಒಂದೇ ಕುಟುಂಬದ 14 ಜನ
ತಟ್ಟೆಹಕ್ಕಲು ನದಿಯಲ್ಲಿ ನೀರುಪಾಲಾಗಿರುವ 11 ಜನರಿಗಾಗಿ ಶೋಧ
ಘಟನಾ ಸ್ಥಳಕ್ಕೆ ಭಟ್ಕಳ ಠಾಣೆ ಪೊಲೀಸರ ಭೇಟಿ, ಪರಿಶೀಲನೆ
ಕಪ್ಪೆಚಿಪ್ಪು ತೆಗೆಯಲು ಹೋಗದ 14 ಜನರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹಗಳನ್ನ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ, ಇನ್ನುಳಿದ 11 ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಪ್ಪೆಚಿಪ್ಪು ತೆಗೆಯಲು ಹೋದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ. ಎಲ್ಲರೂ ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.