ಡಿಸಿಎಂ ಮಹತ್ವದ ಸಭೆ: ಕಂದಾಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿ, ಬಡ್ತಿ ಪ್ರಕ್ರಿಯೆ ಚುರುಕು – Kannada News | DCM Parameshwara Directs Revenue Department to Expedite Public Grievances, Vacancies and Promotions

ಡಿಸಿಎಂ ಜಿ ಪರಮೇಶ್ವರ್Image Credit source: tv9 kannada

ಬೆಂಗಳೂರು, ಜೂನ್​ 22: ಡಿಸಿಎಂ ಜಿ. ಪರಮೇಶ್ವರ್ (G Parameshwara)​​​ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ವೈರಲ್ ಸೋಂಕಿನಿಂದ ಬಳಲಿದ್ದ ಅವರು, ವೈದ್ಯರ ಸಲಹೆಯಂತೆ ವಿಶ್ರಾಂತಿಯಲ್ಲಿದ್ದರು. ಅನಾರೋಗ್ಯದ ಮಧ್ಯೆ ವಿಧಾನಪರಿಷತ್​​ ಚುನಾವಣೆಯಲ್ಲಿ ಮತ ಕೂಡ ಚಲಾಯಿಸಿದ್ದರು. ಇದೀಗ ಒಂದು ವಾರದ ನಂತರ ಕಾಣಿಸಿಕೊಂಡರು. ಇಲಾಖೆಯ ಕೆಲಸ ನಿಮಿತ್ತ ವಿಧಾನಸೌಧಕ್ಕೆ ಬಂದಿದ್ದ ಪರಮೇಶ್ವರ್​​, ಇದೇ ವೇಳೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಗಳೊಂದಿಗೆ ಸಭೆ ಮಾಡಿ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಮುಖ್ಯಾಂಶಗಳು

  • ಒಂದು ವಾರದ ನಂತರ ಕಾಣಿಸಿಕೊಂಡ ಡಿಸಿಎಂ ಡಾ.ಪರಮೇಶ್ವರ್​
  • ಕಂದಾಯ ಇಲಾಖೆಯ ಹಿರಿಯ ಅಧಿಕಾರಗಳೊಂದಿಗೆ ಸಭೆ
  • ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ

ಅಧಿಕಾರಿಗಳಿಗೆ ಪರಮೇಶ್ವರ್ ನೀಡಿದ ಸೂಚನೆ ಏನು?

ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಡಿಸಿಎಂ ಜಿ. ಪರಮೇಶ್ವರ್​​​, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಚುರಕುಗೊಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬ ಉಂಟಾಗಬಾರದು. ಜೇಷ್ಠತಾ ಪಟ್ಟಿಯನ್ನು ಶೀಘ್ರ ಪ್ರಕಟಿಸಿ, ನಿಯಮಾನುಸಾರ ಪಾರದರ್ಶಕವಾಗಿ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​: ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿಗರಿಗೆ ಹೆಚ್​​.ಡಿ. ಕುಮಾರಸ್ವಾಮಿ ಕಿವಿಮಾತು

ಕಂದಾಯ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯಕ ಆಯುಕ್ತರಿಗೆ (AC) ಹೆಚ್ಚಿನ ಜವಾಬ್ದಾರಿ ನೀಡಬೇಕು. ಬಾಕಿ ಉಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿದೆ. ಪರವಾನಗಿ ಭೂಮಾಪಕರ ಸಮಸ್ಯೆಗಳ ಕುರಿತು ಗಮನ ಹರಿಸಬೇಕು. ಭೂಮಾಪಕರ ಸಭೆಯನ್ನು ಕರೆದು ಅವರ ಅಹವಾಲುಗಳು ಹಾಗೂ ಬೇಡಿಕೆಗಳನ್ನು ಆಲಿಸಬೇಕು. ಭೂಮಾಪಕರ ಸೇವಾ ಹಾಗೂ ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡು, ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದರು.

ದಕ್ಷತೆ ಮತ್ತು ಪಾರದರ್ಶಕತೆ 

ಇ-ಪೌತಿ ಖಾತೆ ಸೇರಿದಂತೆ ಇಲಾಖೆಯ ಎಲ್ಲಾ ಆನ್‌ಲೈನ್ ಮತ್ತು ಸಾರ್ವಜನಿಕ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ನಾಗರಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸೇವೆಗಳ ವಿತರಣೆಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಕಾಪಾಡಬೇಕು. ಭೂ ದಾಖಲೆ, ಖಾತೆ ಬದಲಾವಣೆ, ಸರ್ವೇ ಕಾರ್ಯ, ಮ್ಯುಟೇಷನ್ ಹಾಗೂ ಇತರೆ ಕಂದಾಯ ಸೇವೆಗಳ ವಿಲೇವಾರಿಯಲ್ಲಿ ವಿಳಂಬ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶಿಸಿದರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಿಂದ ನೀಟ್​​ ಪರಿಕ್ಷಾರ್ಥಿಗಳಿಗೆ ಸಮಸ್ಯೆ: ತೇಜಸ್ವಿ ಆರೋಪಕ್ಕೆ ಪ್ರಿಯಾಂಕ್​​ ಕೌಂಟರ್​​

ಇಲಾಖೆಯ ಎಲ್ಲಾ ಕಾರ್ಯಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಗುರಿ ಸಾಧನೆಯತ್ತ ಗಮನ ಹರಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವಂತೆ ಅಧಿಕಾರಿಗಳಿಗೆ ಡಿಸಿಎಂ ಜಿ. ಪರಮೇಶ್ವರ್​​​ ಸೂಚನೆ ನೀಡಿದರು.

ವರದಿ: ಈರಣ್ಣ ಬಸವ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Nursing Officer Recruitment 2026: ಸರ್ಕಾರಿ ಉದ್ಯೋಗವಕಾಶ; 5989 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | OSSSC Nursing Officer Recruitment 2026: 5989 Posts in Odisha Health Dept

ನರ್ಸಿಂಗ್ ಆಫೀಸರ್ ಹುದ್ದೆImage Credit source: Getty Images

ಒಡಿಶಾ ಅಧೀನ ಸಿಬ್ಬಂದಿ ಆಯ್ಕೆ ಆಯೋಗವು (OSSSC) ರಾಜ್ಯಾದ್ಯಂತ ಖಾಲಿ ಇರುವ ಗ್ರೂಪ್ ಸಿ ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆಯನ್ನು ಹೊರಡಿಸಿದೆ. ಒಡಿಶಾ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲಾ ಕೇಡರ್‌ನಲ್ಲಿ ಒಟ್ಟು 5,989 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ ಆದ osssc.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ:

ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜೂನ್ 13 ರಿಂದ ಪ್ರಾರಂಭವಾಗಿದ್ದು, ಜುಲೈ 13, ಕೊನೆಯ ದಿನಾಂಕವಾಗಿದೆ. ಸದ್ಯಕ್ಕೆ ಪರೀಕ್ಷಾ ದಿನಾಂಕ ಮತ್ತು ಪ್ರವೇಶ ಪತ್ರ (Admit Card) ಬಿಡುಗಡೆಯಾಗುವ ದಿನವನ್ನು ಆಯೋಗ ಪ್ರಕಟಿಸಿಲ್ಲವಾದರೂ, ಶೀಘ್ರದಲ್ಲೇ ಅದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ.

ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ನರ್ಸಿಂಗ್ ಕೌನ್ಸಿಲ್‌ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (GNM) ಡಿಪ್ಲೊಮಾ ಅಥವಾ ಬಿಎಸ್ಸಿ ನರ್ಸಿಂಗ್ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ ಒಡಿಶಾ ಅಥವಾ ಯಾವುದೇ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಿಂದ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಇನ್ನುಳಿದಂತೆ ಅರ್ಜಿದಾರರು ಒಡಿಯಾ ಭಾಷೆಯನ್ನು ಒಂದು ವಿಷಯವಾಗಿ ಕೊಂಡು ಕನಿಷ್ಠ 7 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಈ ಹುದ್ದೆಗಳಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 38 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಆಯ್ಕೆ ಪ್ರಕ್ರಿಯೆ ಮತ್ತು ಲಿಖಿತ ಪರೀಕ್ಷೆಯ ವಿಧಾನ:

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ (OMR Mode) ನಡೆಸಲಾಗುವುದು ಮತ್ತು ಇದು ಒಟ್ಟು 100 ಅಂಕಗಳ 100 ಬಹು-ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ನರ್ಸಿಂಗ್ ವಿಷಯಗಳಿಂದ 60 ಪ್ರಶ್ನೆಗಳು, ಪ್ರಾಯೋಗಿಕ ನರ್ಸಿಂಗ್ ಕೌಶಲ್ಯಗಳ ಕುರಿತು 25 ಪ್ರಶ್ನೆಗಳು, ಅಂಕಗಣಿತದಿಂದ 10 ಪ್ರಶ್ನೆಗಳು ಮತ್ತು ಇಂಗ್ಲಿಷ್‌ನಿಂದ 5 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯ ಅವಧಿ ಎರಡು ಗಂಟೆಗಳಾಗಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರಲಿದೆ.

ವೇತನ ಶ್ರೇಣಿ ಮತ್ತು ಭತ್ಯೆಗಳು:

ನರ್ಸಿಂಗ್ ಆಫೀಸರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಇವರನ್ನು 8 ನೇ ಹಂತದ ವೇತನ ಶ್ರೇಣಿಯ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮಾಸಿಕ ವೇತನವು 29,200 ರಿಂದ 92,300 ರೂ. ರವರೆಗೆ ಇರಲಿದೆ. ಇದರೊಂದಿಗೆ ಒಡಿಶಾ ಸರ್ಕಾರದ ನಿಯಮಾವಳಿಗಳ ಪ್ರಕಾರ ಸಿಗುವ ಇತರೆ ಹೆಚ್ಚುವರಿ ಭತ್ಯೆಗಳೂ ಕೂಡ ಇವರಿಗೆ ಲಭ್ಯವಿರಲಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಾಕ್ ಸೇರಿದಂತೆ 3 ತಂಡಗಳು ಔಟ್; ಉಳಿದ 9 ತಂಡಗಳ ಸೆಮೀಸ್ ಲೆಕ್ಕಾಚಾರ ಇಲ್ಲಿದೆ – Kannada News | Women’s T20 World Cup 2026 Semifinal Race Heats Up! Key Matches, Teams and India’s Fate

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಈಗಾಗಲೇ ಹದಿನೆಂಟು ಪಂದ್ಯಗಳು ಮುಗಿದಿವೆ. ಇದರರ್ಥ ಎರಡು ಗುಂಪಿನಲ್ಲಿರುವ ಎಲ್ಲಾ 12 ತಂಡಗಳು ತಲಾ 3 ಪಂದ್ಯಗಳನ್ನು ಆಡಿ ಮುಗಿಸಿವೆ. ಅಂದರೆ ಗುಂಪು ಹಂತದಲ್ಲಿ ಎಲ್ಲಾ ತಂಡಗಳಿಗೆ ಇನ್ನು ಕೇವಲ 2 ಪಂದ್ಯಗಳು ಮಾತ್ರ ಉಳಿದಿವೆ. ಈ ಎರಡು ಪಂದ್ಯಗಳು ಎಲ್ಲಾ ತಂಡಗಳಿಗೂ ನಿರ್ಣಾಯಕವಾಗಿವೆ. ಅದರಲ್ಲೂ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನ ಪಡೆದಿರುವ ತಂಡಗಳು ಸೆಮಿಫೈನಲ್‌ ರೇಸ್​ನಲ್ಲಿ ಜೀವಂತವಾಗಿರಬೇಕೆಂದರೆ ಉಳಿದಿರುವ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಉಳಿದಂತೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳನ್ನು ಪಡೆದಿರುವ ತಂಡಗಳ ಪ್ರಯಾಣ ಗುಂಪು ಹಂತದಲ್ಲೇ ಮುಗಿಯುವುದು ಭಾಗಶಃ ಖಚಿತವಾಗಿದೆ.

ಪ್ರಸ್ತುತ ಮೂರು ತಂಡಗಳು ಸೆಮಿಫೈನಲ್‌ ರೇಸ್​​ನಿಂದ ಅಧಿಕೃತವಾಗಿ ಹೊರಬಿದ್ದಿವೆ. ಅದರಲ್ಲಿ ಎ ಗುಂಪಿನಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಸೆಮಿಫೈನಲ್‌ ರೇಸ್​​ನಿಂದ ಹೊರಬಿದ್ದಿದ್ದರೆ, ಬಿ ಗುಂಪಿನಿಂದ ಐರ್ಲೆಂಡ್ ತಂಡ ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಗುಳಿದಿದೆ. ಹೀಗಾಗಿ, ಉಳಿದ ಒಂಬತ್ತು ತಂಡಗಳಿಗೆ ಪ್ರತಿ ಪಂದ್ಯ, ಪ್ರತಿ ರನ್ ಮತ್ತು ಪ್ರತಿ ಪಾಯಿಂಟ್ ನಿರ್ಣಾಯಕವಾಗಿದೆ. ಸೆಮಿಫೈನಲ್ ತಲುಪಲು ಭಾರತ ತನ್ನ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಉಳಿದ ತಂಡಗಳು ಕೂಡ ಸೆಮಿಫೈನಲ್​ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.

IND W vs SA W: ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಸೋಲು

  • ಮೊದಲಿಗೆ ಟೀಂ ಇಂಡಿಯಾದ ವಿಚಾರಕ್ಕೆ ಬರುವುದಾದರೆ.. ಹರ್ಮನ್‌ಪ್ರೀತ್ ಪಡೆ ಲೀಗ್ ಹಂತದಲ್ಲಿ ತನ್ನ ಕೊನೆಯ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಭಾರತ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದರೆ ನೇರವಾಗಿ ಸೆಮಿಫೈನಲ್​ಗೇರಲಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ತಂಡದ ಭವಿಷ್ಯ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಲಿದೆ.
  • ಆಸ್ಟ್ರೇಲಿಯಾ ಆಡಿರುವ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಆಸ್ಟ್ರೇಲಿಯಾ ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸೆಮಿಫೈನಲ್​ಗೇರಲಿದೆ. ಇದಕ್ಕೆ ಪೂರಕವಾಗಿ ಆಸ್ಟ್ರೇಲಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನವನ್ನು ಎದುರಿಸಲಿದೆ.
  • ದಕ್ಷಿಣ ಆಫ್ರಿಕಾ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಎರಡರಲ್ಲಿ ಗೆಲುವು ಸಾಧಿಸಿದೆ. ಆದರೆ ನೆಟ್ ರನ್​ ರೇಟ್​ನಲ್ಲಿ ಭಾರತ ಮುಂದಿರುವ ಕಾರಣ ಅದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ, ಉಳಿದಿರುವ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡಗಳನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದರೆ ಅದಕ್ಕೂ ಸೆಮಿಫೈನಲ್‌ ಬಾಗಿಲು ತೆರೆದಿರಲಿದೆ. ಆದರೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಪ್ರದರ್ಶನ ಆಫ್ರಿಕಾ ತಂಡದ ಸೆಮಿಫೈನಲ್‌ ಹಾದಿಯನ್ನು ನಿರ್ಧರಿಸಲಿವೆ.
  • ಬಾಂಗ್ಲಾದೇಶ ಕೂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆದ್ದು ಸೆಮಿಫೈನಲ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿದೆ. ಆದಾಗ್ಯೂ, ಅದರೆ ಮುಂದಿನ ಹಾದಿ ಸವಾಲಿನದ್ದಾಗಿದೆ. ಏಕೆಂದರೆ ಬಾಂಗ್ಲಾದೇಶ ತನ್ನ ಮುಂದಿನ ಎರಡು ಪಂದ್ಯಗಳನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾಗಿದೆ.
  • ಇನ್ನು ಬಿ ಗುಂಪಿನ ವಿಚಾರಕ್ಕೆ ಬರುವುದಾದರೆ.. ಈ ಗುಂಪಿನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ಆಡಿರುವ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಇಂಗ್ಲೆಂಡ್‌ ಉಳಿದ ಎರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಮತ್ತು ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್‌ ಒಂದು ಪಂದ್ಯ ಗೆದ್ದರೂ ಅದರ ಸೆಮಿಫೈನಲ್ ಹಾದಿ ಸುಗಮವಾಗಲಿದೆ.
  • ವೆಸ್ಟ್ ಇಂಡೀಸ್ ಕೂಡ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್​ ರೇಟ್​ನಲ್ಲಿ ಇಂಗ್ಲೆಂಡ್‌ ಮುಂದಿರುವ ಕಾರಣ ಅದು ಅಗ್ರಸ್ಥಾನದಲ್ಲಿದೆ. ವಿಂಡೀಸ್ ಪಡೆ ಉಳಿದಿರುವ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆದ್ದರೂ ವಿಂಡೀಸ್ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುವುದು ಖಚಿತವಾಗಲಿದೆ.
  • ಹಾಲಿ ಚಾಂಪಿಯನ್‌ ನ್ಯೂಜಿಲೆಂಡ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದ್ದು, ಸೆಮಿಫೈನಲ್‌ ಹಾದಿ ಕಠಿಣವಾಗಿದೆ. ತಂಡ ಇನ್ನೂ ಸೆಮಿಫೈನಲ್ ರೇಸ್​ನಲ್ಲಿ ಇದೆಯಾದರೂ ಹಾದಿ ಕಷ್ಟಕರವಾಗಿದೆ. ನ್ಯೂಜಿಲೆಂಡ್‌ನ ಉಳಿದ ಎರಡು ಪಂದ್ಯಗಳು ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವಿದ್ದು, ತಂಡ ಇನ್ನೊಂದು ಪಂದ್ಯ ಸೋತರೂ ಅದು ಸೆಮಿಫೈನಲ್​ನಿಂದ ಹೊರಬೀಳಲಿದೆ.
  • ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತ ಶ್ರೀಲಂಕಾಗೂ ಸೆಮಿಫೈನಲ್ ಹಾದಿ ಸುಲಭವಲ್ಲ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ 8 ಅಂಕಗಳನ್ನು ಗಳಿಸಿದರೆ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೂ ಸೆಮಿಫೈನಲ್ ತಲುಪಲು ಸಾಧ್ಯವಾಗುವುದಿಲ್ಲ. ಇನ್ನು ಶ್ರೀಲಂಕಾ ಉಳಿದಿರುವ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಎದುರಿಸಲಿದೆ.
  • ಸ್ಕಾಟ್ಲೆಂಡ್ ಕೂಡ ಸೆಮಿಫೈನಲ್ ರೇಸ್‌ನಲ್ಲಿದೆಯಾದರೂ ಅದರ ಹಾದಿ ಕೂಡ ಸುಲಭವಲ್ಲ. ಉಳಿದ ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ. ತಂಡವು ಒಂದು ಪಂದ್ಯವನ್ನು ಸೋತರೂ, ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:17 pm, Mon, 22 June 26

Source link

ಸೋಲಾರ್ ಮನೆಗಳಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಕೆಇಆರ್‌ಸಿ?: ಸರ್ಕಾರದ ದ್ವಂದ್ವ ನೀತಿ ವಿರುದ್ಧ ಸಿಟಿ ಜನ ಫುಲ್ ಗರಂ! – Kannada News | Karnataka Rooftop Solar Tariff Cut: KERC Decision Sparks Debate, Threatens Green Energy

ಬೆಂಗಳೂರು, ಜೂ.22: ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ಮುಕ್ತ ಹಸಿರು ಇಂಧನಕ್ಕೆ ಆದ್ಯತೆ ನೀಡಲು ಮನೆಗಳ ಮೇಲೆ ಸೌರ ವಿದ್ಯುತ್ (Rooftop Solar) ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಗ್ರಾಹಕರು ಗ್ರಿಡ್‌ಗೆ ರಫ್ತು ಮಾಡುವ ಹೆಚ್ಚುವರಿ ಸೌರ ವಿದ್ಯುತ್‌ನ ದರವನ್ನು (Tariff) ಕಡಿತಗೊಳಿಸಲು ಮುಂದಾಗಿದೆ. ನಿಯಂತ್ರಕರ ಈ ನೀತಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ವಾಸ್ತವದಿಂದ ದೂರವಿದ್ದಾರೆಯೇ? ಎಂಬ ಪ್ರಶ್ನೆ ಮೂಡಿಸಿದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​  ಒಂದು ವರದಿಯನ್ನು ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸ್ವಾವಲಂಬಿ ಇಂಧನ ಇಕೋಸಿಸ್ಟಮ್ ನಿರ್ಮಿಸಲು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಜನರು ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಇಆರ್‌ಸಿ, ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ಗೆ ನೀಡಲಾಗುವ ಪ್ರೋತ್ಸಾಹಕ ದರವನ್ನು ಕಡಿಮೆ ಮಾಡಲು ಪ್ರಸ್ತಾಪಿಸಿದೆ. ಈ ನಿರ್ಧಾರವು ಸೌರ ಇಂಧನ ಅಳವಡಿಸಿಕೊಳ್ಳಲು ಮುಂದಾಗುವ ಹೊಸ ಗ್ರಾಹಕರನ್ನು ನಿರುತ್ಸಾಹಗೊಳಿಸುತ್ತದೆ ಮತ್ತು ಪರಿಸರ ಸ್ನೇಹಿ ಇಂಧನ ಪರಿವರ್ತನೆಗೆ ಭಾರಿ ಹಿನ್ನಡೆ ಉಂಟುಮಾಡುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

“ಸಾರ್ವಜನಿಕರನ್ನು ಆಸಕ್ತಿಯನ್ನು ಕುಗ್ಗಿಸುವ ಬದಲು, ಹೆಚ್ಚುತ್ತಿರುವ ಸೌರ ವಿದ್ಯುತ್ ಲೋಡ್ ಅನ್ನು ತಡೆದುಕೊಳ್ಳಲು ಮತ್ತು ವ್ಯವಸ್ಥೆಯನ್ನು ಬೆಂಬಲಿಸಲು ಸರ್ಕಾರಗಳು ನಮ್ಮ ಇಂಧನ ಗ್ರಿಡ್ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಅದರಲ್ಲಿ ಹೂಡಿಕೆ ಮಾಡುವ ಕಡೆಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ಗ್ರಾಹಕರಿಗೆ ಸಿಗುವ ಲಾಭಾಂಶಕ್ಕೆ ಕತ್ತರಿ ಹಾಕುವುದು ಎಷ್ಟು ಸರಿ?” ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಇದು ಅಡವಿಯಲ್ಲ, ಸಿಲಿಕಾನ್ ಸಿಟಿ ಒಳಗಿನ ‘ಅರ್ಬನ್ ಫಾರೆಸ್ಟ್’: ಐಐಎಸ್‌ಸಿ ಕ್ಯಾಂಪಸ್‌ನ ಮನಮೋಹಕ ಹಸಿರು ಸೌಂದರ್ಯ ಹೇಗಿದೆ ನೋಡಿ?

ಸದ್ಯ ಈ ವಿವಾದಾತ್ಮಕ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೆಇಆರ್‌ಸಿ ಸಾರ್ವಜನಿಕರಿಂದ ಲಿಖಿತ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. “ನೀತಿ ನಿರೂಪಕರು ಕೇವಲ ಕಚೇರಿಗಳಲ್ಲಿ ಕುಳಿತು ನಿರ್ಧಾರ ಕೈಗೊಳ್ಳದೆ, ಸಾರ್ವಜನಿಕರ ಸಲಹೆಗಳು ಮತ್ತು ನೀತಿ ಸಲಹೆಗಳನ್ನು ಗಂಭೀರವಾಗಿ ಓದಬೇಕು. ಕೆಇಆರ್‌ಸಿ ಅಧ್ಯಕ್ಷರು ಈ ಬಾರಿ ಸಾರ್ವಜನಿಕರ ನೈಜ ಸಂದೇಶ ಮತ್ತು ಆಕ್ರೋಶವನ್ನು ಅರ್ಥಮಾಡಿಕೊಳ್ಳಲಿದ್ದಾರೆ” ಎಂದು ಆಶಿಸಿ ಗ್ರಾಹಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಸಜ್ಜಾಗುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಸೋತ ಭಾರತಕ್ಕೆ ಚಾಂಪಿಯನ್ ಪಟ್ಟ..! – Kannada News | Harmanpreet Kaur’s India Women’s Team Eyes T20 World Cup Title Post South Africa Loss

ಇದಾದ ನಂತರ ಅಂದರೆ 2026 ರ ಪುರುಷರ ಟಿ20 ವಿಶ್ವಕಪ್​ನಲ್ಲಿಯೂ ಇದೇ ಘಟನೆ ಪುನಾರವರ್ತಿಸಿತು. ಈ ಐಸಿಸಿ ಟೂರ್ನಮೆಂಟ್‌ನಲ್ಲಿ ಭಾರತ ತಂಡದ ಮೊದಲ ಸೋಲು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧವೇ ಆಗಿತ್ತು. ಆದಾಗ್ಯೂ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ, ಭಾರತ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.

Source link

ಕಿರುಕುಳ ಆರೋಪ: ನಾಡಿದ್ದು ಹಸೆಮಣೆ ಏರಬೇಕಿದ್ದ ಯುವತಿ ಸೇರಿ ಹೆತ್ತವರ ದಾರುಣ ಅಂತ್ಯ – Kannada News | Mysuru Tragedy: Bride to Be and Parents Die Days Before Wedding, Harassment and Blackmail Alleged

ಮೈಸೂರು, ಜೂನ್​​ 22: ದಾಂಪತ್ಯ ಜೀವನದ ಕನಸು ಕಂಡಿದ್ದ ಯುವತಿ ಸೇರಿ ಆಕೆಯ ಹೆತ್ತವರು ದಾರುಣ ಅಂತ್ಯ ಕಂಡಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನಿಂದ ಯುವತಿಗೆ ಕಿರುಕುಳ ಹಿನ್ನೆಲೆ ವಿಷ ಸೇವಿಸಿ ಮೂವರು ಒಟ್ಟಿಗೆ ಪ್ರಾಣಬಿಟ್ಟಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ರಕ್ಷಿತಾ ಮೃತರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​​ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ರಕ್ಷಿತಾಗೆ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈತನಿಗೆ ರಕ್ಷಿತಾ ಕಳುಹಿಸಿದ್ದ ಮೆಸೇಜ್ ಹಾಗೂ ಕೆಲವು ಫೋಟೋಗಳನ್ನು ಇಟ್ಟುಕೊಂಡು ಮಾನಸಿಕ ಹಿಂಸೆ ನೀಡಿದ್ದ ಎನ್ನಲಾಗಿದೆ. ರಕ್ಷಿತಾ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನಿಗೂ ಈತ ಫೋಟೋಗಳನ್ನು ಕಳುಹಿಸಿದ್ದ. ಹೀಗಾಗಿ ಮಾನಕ್ಕೆ ಅಂಜಿದ ಕುಟುಂಬಸ್ಥರು ಮನೆಯಲ್ಲೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೂವರ ಸಾವಿಗೂ ಉಲ್ಲಾಸ್ ಗೌಡ‌ನೇ ಕಾರಣನೆಂದು ರಕ್ಷಿತಾ ಡೆತ್​ನೋಟ್ ಬರೆದಿರೋದು ಕೂಡ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಜಿಮ್ ಟ್ರೈನರ್ ವಿಜಯ್ ಕೊಲೆಗೆ ಬಿಗ್​ ಟ್ವಿಸ್ಟ್​​; ಪ್ರಭಾವಿ ಉದ್ಯಮಿಯ ಕೈವಾಡ, ಯಾರದು?

ಸಂಬಂಧಿಕರ ಆಕ್ರಂದನ

ಹಸೆಮಣೆ ಏರಬೇಕಿದ್ದ ಮೊಮ್ಮಗಳ ಜೊತೆ ಅಳಿಯ-ಮಗಳು ಕೂಡ ಮಸಣಕ್ಕೆ ಸೇರಿದ್ದಾರೆ. ರಕ್ಷಿತಾ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿತ್ತು. ಆದರೆ ಉಲ್ಲಾಸ್​​ ಗೌಡ ಎಂಬಾತ ಮದುವೆ ನಿಲ್ಲಿಸಬೇಕೆಂದು ನನ್ನ ಮೊಮ್ಮಗಳ ಮಾನ ತೆಗೆದಿದ್ದಾನೆ. ಈತ ನನ್ನ ಅಳಿಯನಿಗೆ ಪರಿಚಯಸ್ಥನಾಗಿದ್ದು, ಟ್ರ್ಯಾಕ್ಟರ್ ಓಡಿಸುತ್ತಿದ್ದ ಈತನಿಗೆ ಅಳಿಯನ ಜೊತೆ ಒಡನಾಟ ಇತ್ತು. ಆಗಾಗ ಮನೆಗೆ ಕೂಡ ಆತ ಬಂದು ಹೋಗುತ್ತಿದ್ದ. ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳ ಸಾವಿಗೆ ಕಾರಣವಾದ ಉಲ್ಲಾಸ್ ಗೌಡನಿಗೆ ಶಿಕ್ಷೆ ಆಗಬೇಕು ಎಂದು ರಕ್ಷಿತಾಳ ಅಜ್ಜಿ ಚಿನ್ನಮ್ಮ ಆಗ್ರಹಿಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿದೆ.

ಆ್ಯಂಬುಲೆನ್ಸ್​​ಗೆ ಗ್ರಾಮಸ್ಥರ ಮುತ್ತಿಗೆ

ಆರೋಪಿ ಉಲ್ಲಾಸ್ ಗೌಡ ಬಂಧನಕ್ಕೆ ಗ್ರಾಮಸ್ಥರು ಪಟ್ಟುಹಿಡಿದಿದ್ದು, ಬಂಧನವರೆಗೂ ಮೃತದೇಹಗಳನ್ನು ತೆಗೆದುಕೊಂಡು ಹೋಗದಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಪೊಲೀಸರ ಜೊತೆ ಸಂಬಂಧಿಕರು ಹಾಗೂ ಗ್ರಾಮಸ್ಥರ ಮಾತಿನ ಚಕಮಕಿ ಕೂಡ ನಡೆದಿದೆ. ವಿರೋಧದ ನಡುವೆಯೂ ಮೃತದೇಹಗಳು ಆ್ಯಂಬುಲೆನ್ಸ್​ಗೆ ಶಿಫ್ಟ್ ಮಾಡಿ ಶವಗಳನ್ನು ಕೊಂಡೊಯ್ಯುತ್ತಿದ್ದ ಕಾರಣ ಆ್ಯಂಬುಲೆನ್ಸ್​ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಪ್ರಸಂಗ ಕೂಡ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿ. ಟಿ.ಕುಮಾರ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ಮಾತ್ರ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.09 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ – Kannada News | Bengaluru Airport Drug Bust: Customs Seize Hydroponic Weed Worth Rs 2.09 Crore From Bangkok Passenger At KIAB

ಬೆಂಗಳೂರು ವಿಮಾನ ನಿಲ್ದಾಣ (ಸಾಂದರ್ಭಿಕ ಚಿತ್ರ)Image Credit source: PTI

ದೇವನಹಳ್ಳಿ, ಜೂನ್ 22: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಕಸ್ಟಮ್ಸ್ ಅಧಿಕಾರಿಗಳು ಭಾರಿ ಪ್ರಮಾಣದ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿದ್ದಾರೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕನೊಬ್ಬನ ಮೇಲೆ ಅನುಮಾನಗೊಂಡು ಆತನ ಬ್ಯಾಗ್‌ಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಮುಖ್ಯಾಂಶಗಳು

  • ಬ್ಯಾಂಕಾಕ್‌ನಿಂದ ಬಂದಿದ್ದ ಪ್ರಯಾಣಿಕನಿಂದ ಹೈಡ್ರೋಪೋನಿಕ್ ಗಾಂಜಾ ಸ್ಮಗ್ಲಿಂಗ್.
  • ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಪತ್ತೆ.
  • ಬರೋಬ್ಬರಿ 5 ಕೆಜಿ ಗಾಂಜಾ ವಶ.

ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 5 ಕೆಜಿಗೂ ಹೆಚ್ಚು ಗಾಂಜಾ ವಶ

ಅಧಿಕಾರಿಗಳು ಆರೋಪಿಯ ಬ್ಯಾಗ್ ಪರಿಶೀಲಿಸಿದಾಗ ಒಟ್ಟು 5 ಕೆಜಿ 980 ಗ್ರಾಂ ತೂಕದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 2.09 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದು, ಬ್ಯಾಂಕಾಕ್‌ನಿಂದ ಬಂದಿದ್ದ ಆರೋಪಿಯ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಕಳೆದ ಕೆಲವು ದಿನಗಳಿಂದ ಡ್ರಗ್ಸ್ ಮಾಫಿಯಾ ಚಟುವಟಿಕೆ ಹೆಚ್ಚಾಗಿರುವುದು ಕಂಡುಬಂದಿದೆ. ಕೆಲವೇ ದಿನಗಳ ಹಿಂದೆ, ಅಂದರೆ ಜೂನ್ 15 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಆಗ, ಬ್ಯಾಂಕಾಕ್‌ನಿಂದ ಸಾಗಿಸುತ್ತಿದ್ದ 13.14 ಕೋಟಿ ರೂ. ಮೌಲ್ಯದ 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡು 6 ಜನರನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ

ಅದರ ಮರುದಿನವೇ, ಜೂನ್ 16 ರಂದು ಬೆಂಗಳೂರು ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5.67 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಕೊಕೇನ್ ಜಪ್ತಿ ಮಾಡಿದ್ದರು. ಡ್ರಗ್ಸ್ ಡೀಲಿಂಗ್‌ನಲ್ಲಿ ತೊಡಗಿದ್ದ ಉಗಾಂಡಾ ಮೂಲದ ಮಹಿಳಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆಶಿ ಸೂಚನೆಗೆ ಡೋಂಟ್ ಕೇರ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಖಾಲಿ ಖಾಲಿ – Kannada News | No Officers In Dakshina Kannada DC office, here Is TV9 Reality Check

ಮಂಗಳೂರು, (ಜೂನ್ 22): ಸಿಎಂ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂದು ಆದೇಶ ಹೊರಡಿಸಲಾಗಿದೆ. ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರುವ ಉದ್ದೇಶದೊಂದಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಬದಲಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಜಿಪಿಎಸ್‌ ಆಧರಿತ ಹಾಜರಾತಿಯನ್ನ ಕಡ್ಡಾಯಗೊಳಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ (Shalini Rajneesh) ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಆದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಕಚೇರಿಗಳಿಗೆ ಅದು ಅನ್ವಯವಾಗಿಲ್ಲ ಎನ್ನುವಂತಾಗಿದೆ. ಹೌದು…. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ವಾರದ ಮೊದಲ ದಿನ ಸೋಮವಾರ ಅಧಿಕಾರಿಗಳ ಫುಲ್ ಹಾಜರಿ ಇಲ್ಲ. ಬೆಳಗ್ಗೆ 11 ಗಂಟೆ ಆಗಿದ್ದರೂ ಬಹಳಷ್ಟು ಅಧಿಕಾರಿಗಳು ಕರ್ತವ್ಯಕ್ಕೆ ಬಂದಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ಪೃಥ್ವಿರಾಜ್ ನೆಡೆಸಿರೋ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಿಎಂಕೆ ಅವಧಿಯ 245.85 ಕೋಟಿ ರೂ. ಯೋಜನೆಗಳಿಗೆ ಸಿಎಂ ವಿಜಯ್ ಬ್ರೇಕ್; ಕಾರಣ ಇಲ್ಲಿದೆ – Kannada News | TVK government cancels DMK era projects in Tamil Nadu Rs 245.85 crore temple funds redirected to devotees

ಚೆನ್ನೈ, ಜೂನ್ 22: ತಮಿಳುನಾಡಿನ ವಿಜಯ್ (CM Vijay) ನೇತೃತ್ವದ ನೂತನ ಟಿವಿಕೆ ಸರ್ಕಾರವು ಹಿಂದಿನ ಡಿಎಂಕೆ (DMK) ಸರ್ಕಾರದ ಅವಧಿಯ ಯೋಜನೆಗಳಿಗೆ ಬ್ರೇಕ್ ಹಾಕಿದೆ. ತಮಿಳುನಾಡು ಸರ್ಕಾರವು ದೇವಸ್ಥಾನದ ಹಣವನ್ನು ಕಲ್ಯಾಣ ಮಂಟಪಗಳು ಮತ್ತು ವಾಣಿಜ್ಯ ಸಂಕೀರ್ಣಗಳಂತಹ ಇತರೆ ಉದ್ದೇಶಗಳಿಗೆ ಬಳಸುವುದಕ್ಕೆ ನಿಷೇಧ ಹೇರಿದೆ. ಸ್ಟಾಲಿನ್ ಸರ್ಕಾರದ ಅವಧಿಯಲ್ಲಿ ದೇವಸ್ಥಾನದ ನಿಧಿಯಿಂದ ಘೋಷಿಸಲಾಗಿದ್ದ 246 ಕೋಟಿ ರೂ. ಮೌಲ್ಯದ 46 ಯೋಜನೆಗಳನ್ನು ಸರ್ಕಾರ ರದ್ದುಗೊಳಿಸಿದೆ. ತಮಿಳುನಾಡಿನ ದೇವಸ್ಥಾನದ ಹಣವನ್ನು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಭಕ್ತರ ಕಲ್ಯಾಣಕ್ಕೆ ಮಾತ್ರ ಬಳಸಲು ಟಿವಿಕೆ ಸರ್ಕಾರ ತೀರ್ಮಾನಿಸಿದೆ.

ದೇವಾಲಯಗಳ ಆಸ್ತಿ ಮತ್ತು ಆದಾಯವನ್ನು ಕೇವಲ ಧಾರ್ಮಿಕ ಉದ್ದೇಶಗಳು ಮತ್ತು ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಬಳಸಬೇಕೆಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಆದೇಶಿಸಿದೆ. ಹಿಂದಿನ ಡಿಎಂಕೆ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ 29 ಮದುವೆ ಮಂಟಪಗಳು ಮತ್ತು 17 ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಯೋಜನೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ದೇವಾಲಯಗಳ ಆಸ್ತಿಪಾಸ್ತಿಗಳ ಸಮಗ್ರ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕಾಣಿಕೆಯ ಚಿನ್ನವನ್ನು ಕರಗಿಸಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗುತ್ತಿದ್ದು, ಅದರಿಂದ ಬರುವ ಬಡ್ಡಿಯನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ಅಧಿಕೃತ ವಿವರಗಳ ಪ್ರಕಾರ, 115.77 ಕೋಟಿ ರೂ. ಬಜೆಟ್‌ನ 29 ಕಲ್ಯಾಣ ಮಂಟಪ ಯೋಜನೆಗಳ ಅನುಮೋದನೆಯನ್ನು ಅಧಿಕೃತವಾಗಿ ಹಿಂಪಡೆಯಲಾಗಿದೆ. ಇದರೊಂದಿಗೆ, 130.08 ಕೋಟಿ ರೂ. ವೆಚ್ಚದ 17 ಯೋಜಿತ ವಾಣಿಜ್ಯ ಸಂಕೀರ್ಣಗಳ ನಿರ್ಮಾಣವನ್ನು ಸಹ ಕೈಬಿಡಲಾಗಿದೆ. ಈ ರದ್ದತಿ ಆದೇಶ ಹೊರಬೀಳುವ ಮುನ್ನ ಈ 46 ಯೋಜನೆಗಳ ಪೈಕಿ ಯಾವುದೇ ಯೋಜನೆಯ ಕಾಮಗಾರಿ ಅಥವಾ ನಿರ್ಮಾಣ ಕಾರ್ಯಗಳು ಪ್ರಾಯೋಗಿಕವಾಗಿ ಆರಂಭವಾಗಿರಲಿಲ್ಲ ಎಂಬುದನ್ನು ಸರ್ಕಾರಿ ವರದಿಗಳು ಖಚಿತಪಡಿಸಿವೆ.

ತಮಿಳುನಾಡಿನಲ್ಲಿ ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಮೂಲಕ ದೇವಸ್ಥಾನಗಳ ಹೆಚ್ಚುವರಿ ಹಣವನ್ನು ವಿವಿಧ ಸಾರ್ವಜನಿಕ ಯೋಜನೆಗಳು ಮತ್ತು ಕಾಲೇಜುಗಳ ಸ್ಥಾಪನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ದೇವಸ್ಥಾನದ ಹಣವನ್ನು ಕೇವಲ ಧಾರ್ಮಿಕ ಮತ್ತು ಭಕ್ತರ ಸೌಕರ್ಯಗಳಿಗೆ ಮಾತ್ರ ಬಳಸಬೇಕು ಎಂದು ಹಿಂದೂ ಸಂಘಟನೆಗಳು ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮೇಕೆದಾಟು ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ವಿಜಯ್ ನೇತೃತ್ವದ ತಮಿಳುನಾಡಿನ ನೂತನ ಸರ್ಕಾರವು ಭಕ್ತರ ಭಾವನೆಗಳಿಗೆ ಮನ್ನಣೆ ನೀಡಿದ್ದು, ಡಿಎಂಕೆ ಅವಧಿಯ ಆ ಯೋಜನೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಸ್ಥಗಿತಗೊಂಡ ಯೋಜನೆಗಳಿಗಾಗಿ ಕಾಯ್ದಿರಿಸಲಾಗಿದ್ದ 245.85 ಕೋಟಿ ರೂ.ಗಳನ್ನು ದೇವಸ್ಥಾನಗಳ ಖಾತೆಗೆ ಮರುಜಮೆ ಮಾಡಲಾಗಿದೆ.

ಈ ಬೃಹತ್ ಮೊತ್ತವನ್ನು ದೇವಸ್ಥಾನಗಳಿಗೆ ಬರುವ ಭಕ್ತರ ಮೂಲಸೌಕರ್ಯ ಅಭಿವೃದ್ಧಿ, ಉಚಿತ ಅನ್ನದಾಸೋಹ, ಧರ್ಮಶಾಲೆಗಳ ನವೀಕರಣ ಮತ್ತು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬಳಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಟಿವಿಕೆ ಸರ್ಕಾರದ ಈ ನಡೆಗೆ ಹಿಂದೂ ಧಾರ್ಮಿಕ ಮುಖಂಡರು ಮತ್ತು ಭಕ್ತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದರೆ, ಇತ್ತ ವಿರೋಧ ಪಕ್ಷವಾಗಿರುವ ಡಿಎಂಕೆ ಈ ನಿರ್ಧಾರವನ್ನು ಟೀಕಿಸಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ತರಲಾಗಿದ್ದ ಯೋಜನೆಗಳನ್ನು ರಾಜಕೀಯ ದ್ವೇಷಕ್ಕಾಗಿ ರದ್ದುಗೊಳಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದೆ.

“ದೇವಸ್ಥಾನದ ಹಣವನ್ನು ದೇವಸ್ಥಾನದ ಕಾರ್ಯಾಚರಣೆ ಮತ್ತು ಭಕ್ತರ ಸೇವೆಗಾಗಿಯೇ ಬಳಸಬೇಕು” ಎಂಬ ಸುಪ್ರೀಂ ಕೋರ್ಟ್‌ನ ಆಶಯಕ್ಕೆ ನೂತನ ಸರ್ಕಾರ ಗೌರವ ನೀಡಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕರ್ಬೂಜ ತಿಂದು ಅದರ ಬೀಜ ಎಸೆಯುತ್ತಿದ್ದೀರಾ? ಇವುಗಳ ಆರೋಗ್ಯ ಪ್ರಯೋಜನ ತಿಳಿದರೆ ಶಾಕ್ ಆಗ್ತೀರಾ! – Kannada News | How Muskmelon Seeds Can Improve Your Overall Health

ಕರ್ಬೂಜ ಹಣ್ಣು (Muskmelon) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವುದಿಲ್ಲ ಆದರೆ ದೇಹಕ್ಕೆ ತಂಪು ನೀಡುವುದರಿಂದ ಇದರ ಜ್ಯೂಸ್ ಮಾಡಿ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದಾದ್ದರಿಂದ ಇದನ್ನು ಸೇವನೆ ಮಾಡಲು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಹೆಚ್ಚಿನವರು ಅದರ ಬೀಜಗಳು ಉಪಯೋಗವಿಲ್ಲವೆಂದು ಭಾವಿಸಿ ಅದನ್ನು ಎಸೆಯುತ್ತಾರೆ. ವಾಸ್ತವದಲ್ಲಿ ಕರ್ಬೂಜ ಬೀಜಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಅಡಕವಾಗಿದ್ದು ಪೋಷಕಾಂಶದ ಖಜಾನೆಯಾಗಿದೆ, ಹಾಗಾದರೆ ಇದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡುವುದು ಬಹಳ ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯದ ಆರೋಗ್ಯಕ್ಕೆ ಉತ್ತಮ: ಕರ್ಬೂಜ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

ಪ್ರೋಟೀನ್‌ನ ಉತ್ತಮ ಮೂಲ: ಸಸ್ಯಹಾರಿಗಳಿಗೆ ಕರ್ಬೂಜದ ಬೀಜಗಳು ಉತ್ತಮ ಪ್ರೋಟೀನ್ ಮೂಲವಾಗಿದ್ದು ದೇಹದ ಸ್ನಾಯುಗಳ ಬೆಳವಣಿಗೆ, ಶಕ್ತಿಯ ಉತ್ಪಾದನೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಈ ಬೀಜಗಳಲ್ಲಿ ಜಿಂಕ್, ಮೆಗ್ನೀಷಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಸೋಂಕುಗಳು ಹಾಗೂ ವೈರಲ್ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತವೆ.

ಇದನ್ನೂ ಓದಿ: ದಿನಕ್ಕೆ ಒಂದು ಮುಷ್ಟಿ ಕಡಲೆಕಾಯಿ ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯೇ?

ಜೀರ್ಣಕ್ರಿಯೆ ಮತ್ತು ಚರ್ಮದ ಆರೈಕೆಗೆ ಒಳ್ಳೆಯದು: ಕರ್ಬೂಜ ಬೀಜಗಳಲ್ಲಿ ಫೈಬರ್ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ವಿಟಮಿನ್ ಎ, ಇ ಮತ್ತು ಇತರ ಪೋಷಕಾಂಶಗಳು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಆಹಾರದಲ್ಲಿ ಹೇಗೆ ಸೇರಿಸಬೇಕು?

ಕರ್ಬೂಜ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿದ ಬಳಿಕ ಸ್ವಲ್ಪ ಹುರಿದು ಸೇವಿಸಬಹುದು. ಇವುಗಳನ್ನು ಸ್ಮೂಥಿ, ಮೊಸರು, ಸಲಾಡ್ ಅಥವಾ ಸೂಪ್‌ಗಳಿಗೆ ಸೇರಿಸಬಹುದು. ಆರೋಗ್ಯಕರ ಸ್ನ್ಯಾಕ್ ಆಗಿಯೂ ಬಳಸಬಹುದು. ಕರ್ಬೂಜ ಹಣ್ಣಿನಷ್ಟೇ ಅದರ ಬೀಜಗಳೂ ಆರೋಗ್ಯಕರವಾಗಿವೆ. ಆದ್ದರಿಂದ ಮುಂದಿನ ಬಾರಿ ಕರ್ಬೂಜ ತಿನ್ನುವಾಗ ಬೀಜಗಳನ್ನು ಎಸೆಯದೇ ಆಹಾರದಲ್ಲಿ ಸೇರಿಸಿ ಆರೋಗ್ಯದ ಲಾಭ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version