ರಾಜಸ್ಥಾನ ಸರ್ಕಾರದಲ್ಲಿ ವಿದೇಶಿ ಪ್ರಯಾಣಕ್ಕೆ ಅವಕಾಶವಿಲ್ಲ, ಇವಿ ಅಳವಡಿಕೆಗೆ ಆದೇಶ – Kannada News | No foreign travel in the Rajasthan government, orders issued for EV adoption

ನವದೆಹಲಿ, ಮೇ 24: ರಾಜಸ್ಥಾನ (Rajasthan) ಸರ್ಕಾರವು ತನ್ನ ಆಡಳಿತಾತ್ಮಕ ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಲು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಉತ್ತೇಜಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಹಣದಲ್ಲಿ ವಿದೇಶದ ಪ್ರವಾಸದ ಮೇಲೆ ನಿರ್ಬಂಧ, ಕಾರ್‌ಪೂಲಿಂಗ್ ಕಡ್ಡಾಯ ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ಅಳವಡಿಕೆ ಮುಂತಾದ ಪ್ರಮುಖ ನಿರ್ಧಾರಗಳನ್ನು ಒಳಗೊಂಡ ಅಧಿಕೃತ ಆದೇಶವನ್ನು ರಾಜ್ಯ ಹಣಕಾಸು ಇಲಾಖೆ ಹೊರಡಿಸಿದೆ.

ರಾಜಸ್ಥಾನ ಸರ್ಕಾರದ ಪ್ರಮುಖ ನಿರ್ಧಾರಗಳು ಹೀಗಿವೆ:

ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರವಾಸಕ್ಕೆ ಬ್ರೇಕ್:

ರಾಜಸ್ಥಾನ ಸರ್ಕಾರದ ಯಾವುದೇ ಸಚಿವರು, ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಅಥವಾ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವಂತಿಲ್ಲ. ಅತ್ಯಂತ ತುರ್ತು ಅಥವಾ ಅನಿವಾರ್ಯ ಪರಿಸ್ಥಿತಿಗಳಿದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳ ನೇರ ಅನುಮತಿಯನ್ನು ಪಡೆದು ವಿದೇಶಕ್ಕೆ ತೆರಳಬೇಕಾಗುತ್ತದೆ. ದೇಶದ ಒಳಗಿನ ಪ್ರಯಾಣಗಳಿಗೂ ಸಹ ಕಟ್ಟುನಿಟ್ಟಿನ ಮಿತಿಗಳನ್ನು ಹೇರಲಾಗಿದ್ದು, ಅನಗತ್ಯ ವಿಮಾನ ಪ್ರಯಾಣಗಳಿಗೆ ಕಡಿವಾಣ ಹಾಕಲಾಗಿದೆ.

ಇದನ್ನೂ ಓದಿ: 51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ

ಕಾರ್‌ಪೂಲಿಂಗ್ ಕಡ್ಡಾಯ:

ಸರ್ಕಾರಿ ಅಧಿಕಾರಿಗಳು ಕಚೇರಿ ಕೆಲಸಗಳಿಗಾಗಿ ಅಥವಾ ಸಭೆ ಸಮಾರಂಭಗಳಿಗೆ ಹೋಗುವಾಗ ಪ್ರತ್ಯೇಕ ವಾಹನಗಳನ್ನು ಬಳಸುವ ಬದಲಿಗೆ ‘ಕಾರ್‌ಪೂಲಿಂಗ್’ (ವಾಹನ ಹಂಚಿಕೆ) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದೇ ಇಲಾಖೆಯ ಅಥವಾ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುವ ಅಧಿಕಾರಿಗಳು ಒಂದೇ ವಾಹನವನ್ನು ಬಳಸಬೇಕಾಗುತ್ತದೆ. ಇದರಿಂದ ಇಂಧನ ವೆಚ್ಚ ಮತ್ತು ಸಾರಿಗೆ ಭತ್ಯೆಗಳು ಗಣನೀಯವಾಗಿ ಉಳಿತಾಯವಾಗಲಿವೆ.

ಎಲೆಕ್ಟ್ರಿಕ್ ವಾಹನಗಳ (EV) ಅಳವಡಿಕೆ:

ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ತೈಲ ವೆಚ್ಚವನ್ನು ಕಡಿಮೆ ಮಾಡುವ ದ್ವಿಮುಖ ಉದ್ದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ಇನ್ಮುಂದೆ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡಲು ಆದೇಶಿಸಲಾಗಿದೆ. ಹೊಸ ವಾಹನಗಳನ್ನು ಖರೀದಿಸುವಾಗ ಅಥವಾ ಬಾಡಿಗೆಗೆ ಪಡೆಯುವಾಗ ಎಲೆಕ್ಟ್ರಿಕ್ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಐಷಾರಾಮಿ ಹೋಟೆಲ್‌ಗಳಲ್ಲಿ ಸಭೆ ನಿಷೇಧ:

ಸರ್ಕಾರಿ ಸಭೆಗಳು, ಸೆಮಿನಾರ್‌ಗಳು ಅಥವಾ ಕಾರ್ಯಾಗಾರಗಳನ್ನು ಅನಗತ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ಆಯೋಜಿಸುವಂತಿಲ್ಲ. ಇಲಾಖೆಯ ಸ್ವಂತ ಸಭಾಂಗಣಗಳು ಅಥವಾ ಸರ್ಕಾರಿ ಕಟ್ಟಡಗಳಲ್ಲೇ ಇವುಗಳನ್ನು ನಡೆಸಬೇಕು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

ಹೊಸ ಹುದ್ದೆಗಳ ಸೃಷ್ಟಿಗೆ ನಿರ್ಬಂಧ:

ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ, ಇಲಾಖೆಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸುವುದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.

ಅಲಂಕಾರಿಕ ವೆಚ್ಚಗಳಿಗೆ ಬ್ರೇಕ್:

ಕಚೇರಿಗಳ ನವೀಕರಣ, ಐಷಾರಾಮಿ ಪೀಠೋಪಕರಣಗಳ ಖರೀದಿ ಮತ್ತು ಅಲಂಕಾರಿಕ ವಸ್ತುಗಳಿಗಾಗಿ ಸಾರ್ವಜನಿಕ ಹಣವನ್ನು ವ್ಯಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ – Kannada News | Chetan Ahimsa says Karnataka people approved his statement on Dr Rajkumar Samadhi

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ್ದ ಹೇಳಿಕೆಯಿಂದ ಸಾಕಷ್ಟು ವಿವಾದ ಆಗಿತ್ತು. ರಾಜ್​ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಚೇತನ್ ಪ್ರಶ್ನಿಸಿದ್ದರು. ಅವರ ಹೇಳಿಕೆಯನ್ನು ರಾಜ್​ಕುಮಾರ್ (Dr Rajkumar) ಅಭಿಮಾನಿಗಳು ವಿರೋಧಿಸಿದರು. ಹಾಗಿದ್ದರೂ ಕೂಡ ಚೇತನ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರದ ಪಾಲಿಸಿಗೆ ಸಂಬಂಧಪಟ್ಟಂತೆ ನಾನು ಪ್ರಸ್ತಾಪ ಮಾಡಿದ್ದು. ನಾವೆಲ್ಲರೂ ಕೂಡ ರಾಜ್​ಕುಮಾರ್ ಅವರ ಅಭಿಮಾನಿಗಳು. ಅವರ ಕಲಾಸೇವೆ ಅಪಾರ. ಆದರೆ ಸರ್ಕಾರ ಪಕ್ಷಪಾತ ಮಾಡಿದ ತಕ್ಷಣ ಏನು ಸಮಸ್ಯೆ ಆಗುತ್ತದೆ ಎಂಬುದನ್ನು ನಾನು ಸಣ್ಣದಾಗಿ ಮೂರು ಸಾಲಿನ ಪೋಸ್ಟ್ ಮಾಡಿದ್ದೆ. ಕೆಲವರಿಂದ ಅದು ದೊಡ್ಡದಾಗಿದೆ. ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಕರ್ನಾಟಕದ ಜನರು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ಜಾಗೃತಿಗೆ ಕಾರಣ ಆಯಿತು ಅಂತ ಜನ ಹೇಳಿದ್ದಾರೆ. ನಮಗೆ ಸಮಾನತೆಯ, ನ್ಯಾಯದ, ವೈಜ್ಞಾನಿಕತೆಯ ಸಮಾಜಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡೋಣ’ ಎಂದು ಚೇತನ್ ಅಹಿಂಸಾ (Chetan Ahimsa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ – Kannada News | Mantralaya Mutt Arranges Shelter for Devotees After Heavy Downpour

ರಾಯಚೂರು, ಮೇ 22: ಮಂತ್ರಾಲಯದಲ್ಲಿ ಭಾರಿ ಮಳೆಯ ಅಬ್ಬರದಿಂದ ಭಕ್ತರು ತೀವ್ರ ತೊಂದರೆಗೊಳಗಾದ ಘಟನೆ ನಡೆದಿದೆ. ರಾತ್ರಿ ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ತಡರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನೆನೆದು ಪರದಾಡಿದರು. ಈ ಪರಿಸ್ಥಿತಿಯಲ್ಲಿ, ರಾಯರ ಭಕ್ತರ ನೆರವಿಗೆ ಮಂತ್ರಾಲಯ ಮಠ ಧಾವಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶ್ರೀಗಳು ತಕ್ಷಣವೇ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾದರು. ಮಳೆಯಿಂದ ತೊಂದರೆಗೊಳಗಾದ ಭಕ್ತರನ್ನು ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ತೆರಳುವಂತೆ ಸೂಚಿಸಲಾಯಿತು. ಖುದ್ದು ಸುಭುದೇಂದ್ರ ತೀರ್ಥ ಸ್ವಾಮೀಜಿಯೇ ಬಂದು ವ್ಯವಸ್ಥೆ ಮಾಡಿದ್ದು ಗಮನಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Minimum Wage: ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ! – Kannada News | Karnataka Hikes Minimum Wages by 60 percent in 81 Sectors: Check Details

ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇ 60 ರಷ್ಟು ಹೆಚ್ಚಳ

ಬೆಂಗಳೂರು, ಮೇ 24: ರಾಜ್ಯದ ಲಕ್ಷಾಂತರ ಕಾರ್ಮಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿರುವ ಕರ್ನಾಟಕ ಸರ್ಕಾರ, ವಿವಿಧ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು (Minimum Wage) ಶೇಕಡಾ 60 ರಷ್ಟು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿ ಹೆಚ್ಚಳ ಮಾಡಿದೆ. ಈ ಐತಿಹಾಸಿಕ ನಿರ್ಧಾರವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಕಟಿಸಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನ ಶೇಕಡಾ 60 ಹೆಚ್ಚಳವಾಗಿದೆ.
  • ಬೆಂಗಳೂರಿನ ಉನ್ನತ ಕುಶಲ ಕಾರ್ಮಿಕರ ಮಾಸಿಕ ಸಂಬಳ 31,114ರೂ.ಗೆ ಏರಿಕೆಯಾಗಿದೆ.
  • ಇ-ಕಾಮರ್ಸ್ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಹೊಸ ವೇತನ ಅನ್ವಯ.

ಕಾರ್ಮಿಕ ಇಲಾಖೆಯು ಶುಕ್ರವಾರವೇ (ಮೇ 22) ಈ ಪರಿಷ್ಕೃತ ಅಧಿಕೃತ ಆದೇಶ ಹೊರಡಿಸಿದ್ದು, ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ, ಈ ಹಿಂದೆ ಇದ್ದ 4 ಪ್ರತ್ಯೇಕ ವಲಯಗಳ ವರ್ಗೀಕರಣ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಪರಿಶಿಷ್ಟ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ.

ರಾಜ್ಯದ 3 ವಲಯಗಳು ಮತ್ತು 4 ವರ್ಗಗಳು

ಹೊಸ ನಿಯಮದ ಪ್ರಕಾರ ಇಡೀ ರಾಜ್ಯವನ್ನು ಮೂರು ವೇತನ ವಲಯಗಳಾಗಿ (Zones) ವಿಂಗಡಿಸಲಾಗಿದೆ

  • ವಲಯ-1: ಬೃಹತ್ ಬೆಂಗಳೂರು ಪ್ರದೇಶ (Greater Bengaluru Area)
  • ವಲಯ-2: ಇತರ ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಗಳು.
  • ವಲಯ-3: ಉಳಿದ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳು.

ಅಲ್ಲದೆ, ಕಾರ್ಮಿಕರನ್ನು ಅವರ ಕೌಶಲ್ಯದ ಆಧಾರದ ಮೇಲೆ ಅಕುಶಲ (Unskilled), ಅರೆ-ಕುಶಲ (Semi-skilled), ಕುಶಲ (Skilled) ಮತ್ತು ಉನ್ನತ ಕುಶಲ (Highly skilled) ಎಂದು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.

ಯಾರಿಗೆ ಎಷ್ಟು ಸಂಬಳ ಸಿಗಲಿದೆ?

ಬೆಂಗಳೂರು (ವಲಯ-1) ವ್ಯಾಪ್ತಿಯಲ್ಲಿ ಉನ್ನತ ಕುಶಲ ಕಾರ್ಮಿಕರಿಗೆ 31,114 ರೂ., ಕುಶಲ ಕಾರ್ಮಿಕರಿಗೆ 28,285 ರೂ., ಅರೆ-ಕುಶಲ ಕಾರ್ಮಿಕರಿಗೆ 25,714 ರೂ. ಮತ್ತು ಅಕುಶಲ ಕಾರ್ಮಿಕರಿಗೆ 23,376 ರೂ. ಮಾಸಿಕ ಕನಿಷ್ಠ ವೇತನ ಸಿಗಲಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಅಕುಶಲ ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನವನ್ನು 19,319 ರೂ. ಹಾಗೂ ಉನ್ನತ ಕುಶಲ ಕಾರ್ಮಿಕರಿಗೆ 25,714 ರೂ. ನಿಗದಿಪಡಿಸಲಾಗಿದೆ.

ಲಿಂಗ ತಾರತಮ್ಯಕ್ಕೆ ಬ್ರೇಕ್

ಈ ಅಧಿಸೂಚನೆಯಲ್ಲಿ ಲಿಂಗ ತಾರತಮ್ಯವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಸಮಾನ ಕೆಲಸಕ್ಕೆ ಪುರುಷರು, ಮಹಿಳೆಯರು, ತೃತೀಯ ಲಿಂಗಿಗಳು (Transgenders) ಹಾಗೂ ವಿಕಲಚೇತನರಿಗೆ ಸಮಾನ ವೇತನವನ್ನು ಕಡ್ಡಾಯಗೊಳಿಸಲಾಗಿದೆ. ಹೆಚ್ಚುವರಿ ಸಮಯ (Overtime) ಅಥವಾ ವಾರದ ರಜಾದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದುಪ್ಪಟ್ಟು ವೇತನ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು ಹಾಗೂ ಉಷ್ಣ, ಜಲ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳ ಕಾರ್ಮಿಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಬೆಂಗಳೂರಿನಲ್ಲಿ ಯಾಂತ್ರೀಕೃತ ನೈರ್ಮಲ್ಯ ಕೆಲಸ ಮಾಡುವ ಕಾರ್ಮಿಕರ ವೇತನ 25,700 ರೂ. ದಾಟಲಿದೆ.

ಹೊಸದಾಗಿ ಸೇರ್ಪಡೆಯಾದ ವಲಯಗಳು

ಖಾಸಗಿ ಶಾಲೆ ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಇ-ಕಾಮರ್ಸ್ ಮತ್ತು ಕೊರಿಯರ್ ಸೇವೆಗಳು, ಧಾರ್ಮಿಕ ಸಂಸ್ಥೆಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಮೊಬೈಲ್ ಟವರ್ ನಿರ್ವಹಣೆ, ಎಲ್‌ಪಿಜಿ ವಿತರಣಾ ಘಟಕಗಳು, ಎಂ-ಸ್ಯಾಂಡ್ (M-sand) ಘಟಕಗಳು ಹಾಗೂ ಕಂಪ್ಯೂಟರ್ ಮತ್ತು ಸೈಬರ್ ಸೆಂಟರ್‌ಗಳನ್ನು ಸಹ ಹೊಸದಾಗಿ ಈ ಕನಿಷ್ಠ ವೇತನ ವ್ಯಾಪ್ತಿಗೆ ತರಲಾಗಿದೆ.

ಬ್ಯಾಂಕ್ ಖಾತೆಗೆ ನೇರ ಜಮೆ

ಬದಲಾಗುವ ತುಟ್ಟಿಭತ್ಯೆಯನ್ನು (VDA) ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಮಾಲೀಕರು ಕಾರ್ಮಿಕರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಅಥವಾ ಅಧಿಕೃತ ಪಾವತಿ ವ್ಯವಸ್ಥೆಗಳ ಮೂಲಕವೇ ಪಾವತಿಸಬೇಕು. ತಿಂಗಳ ದಿನಗೂಲಿಯನ್ನು 26 ಕೆಲಸದ ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುವುದು ಮತ್ತು ವಾರದ ರಜೆ ದಿನಗಳಿಗೂ ವೇತನ ಸಹಿತ ರಜೆ ಸೌಲಭ್ಯವಿರಲಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ: ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ – Kannada News | Shivanand Neelannavar Scam: 35,000 Investors Await Justice as CID Probe Deepens

ಬೆಳಗಾವಿ, ಮೇ 24: 4,500 ಕೋಟಿ ವಂಚನೆ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕುಗೊಂಡಿದೆ. ಶಿವಾನಂದ ನೀಲಣ್ಣವರ್ ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಸುಮಾರು 35,000 ಜನರು ಹೂಡಿಕೆ ಮಾಡಿದ್ದರು. ಇದೀಗ ಹಣ ಸಂದಾಯದ ಪರಿಶೀಲನೆ ನಡೆಯುತ್ತಿದ್ದು, ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಆತಂಕ ಶುರುವಾಗಿದೆ. ಆರಂಭಿಕ ಹಂತದಲ್ಲಿ, ಹೂಡಿಕೆ ಮಾಡಿದ ಹಲವರು ತಮ್ಮ ಮೂಲ ಹೂಡಿಕೆಗಿಂತ ದುಪ್ಪಟ್ಟು ಲಾಭ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದಾಹರಣೆಗೆ, 50 ಲಕ್ಷ ಹೂಡಿಕೆ ಮಾಡಿದವರು 1 ಕೋಟಿವರೆಗೂ ಲಾಭಾಂಶ ಪಡೆದಿದ್ದಾರೆ. ಸಿಐಡಿ ಡಿಐಜಿ ಭೀಮಶಂಕರ್ ಗುಳೆದ್ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ತಂಡ, ಈ ಹೆಚ್ಚಿನ ಲಾಭ ಪಡೆದ ಹೂಡಿಕೆದಾರರನ್ನು ಪತ್ತೆಹಚ್ಚಿ ಅವರಿಂದ ಹೆಚ್ಚುವರಿ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಇದರಿಂದ ವಂಚನೆಗೊಳಗಾದ ಉಳಿದ ಹೂಡಿಕೆದಾರರಿಗೆ ನ್ಯಾಯ ಒದಗಿಸುವುದು ಸಿಐಡಿ ಉದ್ದೇಶವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ? – Kannada News | Gautam Gambhir’s Veto: Will It Block Shreyas Iyer’s T20I Captaincy?

ಭಾರತ ಟಿ20 ತಂಡದ ಮುಂದಿನ ನಾಯಕ ಯಾರು? ಈ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಆದರೆ ನೂತನ ನಾಯಕನ ಆಯ್ಕೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರವೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೈಕೊಟ್ಟಿರುವ ಕಾರಣ ಸೆಲೆಕ್ಟರ್‌ಗಳು ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಆದರೆ, ರೇಸ್‌ನಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಶ್ರೇಯಸ್ ಅಯ್ಯರ್ ಅವರ ಹಾದಿಗೆ ಗಂಭೀರ್ ಅಡ್ಡಿಯಾಗಬಹುದು ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಕ್ರೆಡಿಟ್ ವಾರ್ ಮತ್ತು ಮುನಿಸು!

ವರದಿಗಳ ಪ್ರಕಾರ, ಕೋಚ್ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಎಲ್ಲವೂ ಸರಿಯಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ಐಪಿಎಲ್ ಚಾಂಪಿಯನ್ ಆದಾಗ, ತಂಡದ ನಾಯಕನಾಗಿದ್ದ ಅಯ್ಯರ್ ಅವರಿಗಿಂತ ಮೆಂಟರ್ ಆಗಿದ್ದ ಗಂಭೀರ್ ಅವರಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಕ್ರೆಡಿಟ್ ಸಿಕ್ಕಿತ್ತು. ಇದು ಅಯ್ಯರ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಇದೇ ಮುನಿಸಿನಿಂದಾಗಿ ಕೆಕೆಆರ್ ತಂಡದಿಂದ ಹೊರ ನಡೆದಿದ್ದ ಶ್ರೇಯಸ್ ಅಯ್ಯರ್, ಬಳಿಕ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದರು. ಇತ್ತ ಗಂಭೀರ್ ಭಾರತ ತಂಡದ ಕೋಚ್ ಆದಾಗಿನಿಂದ ಅಯ್ಯರ್ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗಿ ಕಾಣಿಸಿಕೊಂಡಿಲ್ಲ. ಅದರಲ್ಲೂ ದೇಶಿ ಕ್ರಿಕೆಟ್‌ನಲ್ಲಿ ಅಯ್ಯರ್ ರನ್ ಮಳೆ ಹರಿಸಿದರೂ ಅವರನ್ನು ಟೆಸ್ಟ್ ಹಾಗೂ ಏಷ್ಯಾ ಕಪ್ ತಂಡದಿಂದ ಕೈಬಿಡಲಾಗಿತ್ತು.

ಅಯ್ಯರ್ ಭರ್ಜರಿ ಫಾರ್ಮ್!

ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. 55.33 ರ ಸರಾಸರಿಯಲ್ಲಿ, 198.03 ರ ಸ್ಟ್ರೈಕ್ ರೇಟ್‌ನೊಂದಿಗೆ 498 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಕೇವಲ 210 ರನ್ ಗಳಿಸಿ ಫಾರ್ಮ್​ಗಾಗಿ ತಡಕಾಡುತ್ತಿದ್ದಾರೆ. ಹೀಗಾಗಿ ನಾಯಕತ್ವ ಬದಲಾಗುವುದು ಖಚಿತ. ಆದರೆ ಸೆಲೆಕ್ಟರ್‌ಗಳ ನಾಯಕತ್ವ ಬದಲಾವಣೆ ತೀರ್ಮಾನಕ್ಕೆ ಗಂಭೀರ್ ತಮ್ಮ ‘ವೀಟೋ ಪವರ್’ ಬಳಸಿ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂದರೆ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲು ಆಸಕ್ತರಾಗಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ತೀರ್ಮಾನವೇ ಅಂತಿಮ.

ಏಕೆಂದರೆ ಕಳೆದ ಬಾರಿ ಟಿ20 ತಂಡದ ನಾಯಕನ ರೇಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಗಂಭೀರ್, ಸೂರ್ಯಕುಮಾರ್ ಯಾದವ್ ಅವರನ್ನು ಕ್ಯಾಪ್ಟನ್ ಮಾಡುವಂತೆ ಪಟ್ಟು ಹಿಡಿದಿದ್ದರು.

ಗೌತಮ್ ಗಂಭೀರ್ ಅವರ ಈ ನಿರ್ಧಾರವು ಫಲ ನೀಡಿತು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇದೀಗ ಇದೇ ಯಶಸ್ಸನ್ನು ಮುಂದಿಟ್ಟುಕೊಂಡು ಗೌತಮ್ ಗಂಭೀರ್ ನಾಯಕನ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ವರದಿಯಾಗಿದೆ.

ಅಂದರೆ ಇಲ್ಲಿ ಗೌತಮ್ ಗಂಭೀರ್ ತಮಗೆ ಬೇಕಾದವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರಿಗೆ ಟಿ20 ತಂಡದ ನಾಯಕತ್ವ ಒಲಿಯುವುದು ಅನುಮಾನ ಎನ್ನಲಾಗುತ್ತಿದೆ.

ಅತ್ತ ಗೌತಮ್ ಗಂಭೀರ್ ಅವರ ಸಲಹೆಯಂತೆ ಈಗಾಗಲೇ ಶುಭ್​​ಮನ್ ಗಿಲ್ ಅವರನ್ನು ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇತ್ತ ಈ ಬಾರಿಯ ಐಪಿಎಲ್​ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್​ನೊಂದಿಗೆ ಭರ್ಜರಿ ಪ್ರದರ್ಶನ ನೀಡಿರುವ ಶುಭ್​ಮನ್ ಗಿಲ್ ನಾಯಕನಾಗಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಪ್ಲೇಆಫ್​ನತ್ತ ಮುನ್ನಡೆಸಿದ್ದಾರೆ.

ಇದನ್ನೂ ಓದಿ:  ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ!

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಗೌತಮ್ ಗಂಭೀರ್ ಶುಭ್​ಮನ್ ಗಿಲ್ ಅವರನ್ನು ಟಿ20 ತಂಡದ ಕ್ಯಾಪ್ಟನ್ ಮಾಡಬೇಕೆಂಬ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ. ಈ ಬೇಡಿಕೆಯನ್ನು ಆಯ್ಕೆ ಸಮಿತಿ ಒಪ್ಪಿಕೊಂಡರೆ ಭಾರತ ತಂಡದ ಏಕೈಕ ಕ್ಯಾಪ್ಟನ್ ಆಗಿ ಶುಭ್​ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ.

Source link

ರಾಜ್ಯಸಭಾ ಚುನಾವಣೆಗೆ ‘ಕೈ’ನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು – Kannada News | Intense Race in Congress for Karnataka Rajya Sabha Seats: Supriya Shrinate, Pawan Khera, and BK Hariprasad in Frontrunners List

ಬೆಂಗಳೂರು, ಮೇ 24: ಜೂನ್ 18ರಂದು ನಡೆಯಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದ್ದು, ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸುಪ್ರಿಯಾ ಶ್ರಿನೇಟ್ ಮತ್ತು ಪವನ್​​ ಖೇರಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿರುವ ಹಿನ್ನೆಲೆ ಪೈಪೋಟಿ ಜೋರಾಗಿದೆ.

ಮುಖ್ಯಾಂಶಗಳು

  • ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಭಾರಿ ಪೈಪೋಟಿ
  • ಕರ್ನಾಟಕದಿಂದ ಸುಪ್ರಿಯಾ, ಖೇರಾ ಹೆಸರು ಮುಂಚೂಣಿಯಲ್ಲಿ
  • ಬಿ.ಕೆ. ಹರಿಪ್ರಸಾದ್​​ ಸೇರಿ ಪೈಪೋಟಿಯಲ್ಲಿವೆ ಹಲವರ ಹೆಸರು

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್ ಘಟಕದೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದ ಹಿನ್ನೆಲೆ ಅವರನ್ನು ರಾಜ್ಯಸಭೆ ಚುನಾವಣೆಗೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೊತೆಗೆ ಜೂನ್ 30ರಂದು ವಿಧಾನ ಪರಿಷತ್ ಸದಸ್ಯತ್ವ ಅವಧಿ ಮುಗಿಯಲಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್​​ ಹೆಸರೂ ರಾಜ್ಯಸಭಾ ಚುನಾವಣೆ ಸಂಬಂಧ ಕೇಳಿಬರುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಶಾಶ್ವತ ಸದಸ್ಯರಾಗಿರುವ ಹರಿಪ್ರಸಾದ್, ಹರಿಯಾಣದ ಎಐಸಿಸಿ ಉಸ್ತುವಾರಿಯೂ ಆಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ

ಆದರೆ ಪಕ್ಷದ ಕೆಲ ನಾಯಕರು, ಸುಪ್ರಿಯಾ ಶ್ರೀನೇಟ್ ಮತ್ತು ಪವನ್ ಖೇರಾ ಅವರನ್ನು ಅವರವರ ರಾಜ್ಯಗಳಿಂದಲೇ ರಾಜ್ಯಸಭೆಗೆ ಕಳುಹಿಸಬೇಕು. ಕರ್ನಾಟಕದ ನಾಯಕರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನಿತರ ಆಕಾಂಕ್ಷಿಗಳ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಟಾರ್ಕಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್​​, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್​​ ಗೌಡ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್ ಹಾಗೂ ಮಾಜಿ ಕೇಂದ್ರ ಸಚಿವ ಕೆ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರ ಹೆಸರುಗಳೂ ಚರ್ಚೆಯಲ್ಲಿವೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:11 am, Sun, 24 May 26

Source link

ಜಸ್ಪ್ರೀತ್ ಬುಮ್ರಾ ಓರ್ವ ಫುಟ್‌ಬಾಲ್ ಆಟಗಾರ ಎಂದ ರಾಮ್ ಚರಣ್; ತಪ್ಪಿಗೆ ಕ್ಷಮೆ ಕೇಳಿದ ನಟ – Kannada News | Peddi actor Ram Charan calls Jasprit Bumrah a Footballer in Viral Video and apologizes

ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು ಬಹುನಿರೀಕ್ಷಿತ ‘ಪೆದ್ದಿ’ (Peddi) ಸಿನಿಮಾದ ಗ್ರ್ಯಾಂಡ್ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನಟಿ ಜಾನ್ವಿ ಕಪೂರ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಲಘು ಸಂವಾದದಲ್ಲಿ ರಾಮ್ ಚರಣ್ ಅವರು ಭಾರತೀಯ ಕ್ರಿಕೆಟರ್​ಗಳ ಬಗ್ಗೆ ಮಾತನಾಡುವಾಗ ಒಂದು ತಪ್ಪು ಆಗಿದೆ. ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಓರ್ವ ಫುಟ್​ಬಾಲ್ ಆಟಗಾರ ಎಂದು ರಾಮ್ ಚರಣ್ ಕರೆದಿದ್ದಾರೆ!

ವೇದಿಕೆಯಲ್ಲಿ ಭಾರತೀಯ ಕ್ರಿಕೆಟಿಗರನ್ನು ಕೆಲವು ಪದಗಳಲ್ಲಿ ಬಣ್ಣಿಸಲು ರಾಮ್ ಚರಣ್ ಅವರಿಗೆ ಹೇಳಲಾಯಿತು. ಈ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನವನ್ನು ‘ದೀರ್ಘಾವಧಿಯ ಲೆಂಜೆಂಡರಿ ಪಯಣ’ ಎಂದು ಕರೆದ ರಾಮ್ ಚರಣ್ ಅವರು, ಎಂ.ಎಸ್. ಧೋನಿ ಅವರನ್ನು ‘ಶಾಂತ ಮತ್ತು ಕೂಲ್’ ಎಂದು ಬಣ್ಣಿಸಿದರು. ಇನ್ನು, ರೋಹಿತ್ ಶರ್ಮಾ ಅವರನ್ನು ‘ಎಲ್ಲರ ನೆಚ್ಚಿನ ವ್ಯಕ್ತಿ’ ಎಂದ ಹೇಳಿದರು. ವಿರಾಟ್ ಕೊಹ್ಲಿ ಹೆಸರು ಬರುತ್ತಿದ್ದಂತೆ ‘ಬೆಂಕಿ’ ಎಂದು ಹೊಗಳಿಸಿದರು. ಆದರೆ ಬುಮ್ರಾ ಹೆಸರು ಬಂದಾಗ ತಪ್ಪು ಮಾಡಿದರು.

ಭಾರತದ ಖ್ಯಾತ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಸರು ಬಂದಾಗ, ರಾಮ್ ಚರಣ್ ಅವರು ತಾವು ಬುಮ್ರಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು. ಆದರೆ ತೀವ್ರ ಉತ್ಸಾಹದಲ್ಲಿ ಕ್ರಿಕೆಟ್ ಮತ್ತು ಫುಟ್‌ಬಾಲ್ ಕ್ರೀಡೆಯ ನಡುವೆ ಅವರು ಗೊಂದಲ ಮಾಡಿಕೊಂಡರು. ಬುಮ್ರಾ ಅವರನ್ನು ಫುಟ್‌ಬಾಲರ್ ಎಂದು ಕರೆದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ತಪ್ಪಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ‘ಉಫ್… ನನಗೆ ಕೆಲವೊಮ್ಮೆ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ, ಮರೆತುಹೋಗುತ್ತದೆ. ಜಸ್ಪ್ರೀತ್ ಬುಮ್ರಾ ಅವರಲ್ಲಿ ಈ ಗೊಂದಲಕ್ಕಾಗಿ ಕ್ಷಮೆ ಕೇಳುತ್ತೇನೆ. ಅಷ್ಟು ದೊಡ್ಡ ಜನಸಂದಣಿ ಮತ್ತು ಕಾರ್ಯಕ್ರಮದ ಉತ್ಸಾಹದ ನಡುವೆ ನಡೆದ ಸಹಜ ತಪ್ಪು ಇದು’ ಎಂದು ರಾಮ್ ಚರಣ್ ಬರೆದುಕೊಂಡಿದ್ದಾರೆ. ಅಲ್ಲದೆ ಬುಮ್ರಾ ಅವರ ಸಾಧನೆಗಳ ಬಗ್ಗೆ ತಮಗೆ ಅಪಾರ ಗೌರವವಿದ್ದು, ಅವರು ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡುತ್ತಿರುವುದನ್ನು ತಾವು ಸದಾ ಪ್ರಶಂಸಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಅವಧಿ 3 ಗಂಟೆ 9 ನಿಮಿಷ? ಹಲವು ಪದಗಳು ಮ್ಯೂಟ್

‘ಪೆದ್ದಿ’ ಸಿನಿಮಾದಲ್ಲಿ ಕ್ರೀಡೆಯ ಕುರಿತ ಕಥೆ ಇದೆ. ಕುಸ್ತಿ ಮತ್ತು ಕ್ರಿಕೆಟ್ ಆಟಗಾರನಾಗಿ ರಾಮ್ ಚರಣ್ ಅವರು ನಟಿಸಿದ್ದಾರೆ. ಆ ಕಾರಣದಿಂದಲೇ ‘ಪೆದ್ದಿ’ ಆಡಿಯೋ ರಿಲೀಸ್ ವೇದಿಕೆಯಲ್ಲಿ ಕ್ರಿಕೆಟ್ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ಸಿನಿಮಾ ಜೂನ್ 4ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Rishabh Pant: ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ! – Kannada News | Rishabh pant post match interview after lsg vs Pbks match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 196 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಕೇವಲ 18 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಪಂಜಾಬ್ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, “ಖಂಡಿತವಾಗಿಯೂ ನಾವು ಇನ್ನು 5-10 ರನ್ ಹೆಚ್ಚು ಗಳಿಸಬಹುದಿತ್ತು. ಆದರೆ ಈ ಮೊತ್ತ ಗೆಲ್ಲಲು ಸಾಕಾಗಿತ್ತು. ಆದರೆ ಏಕನಾ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭವಾಗುತ್ತದೆ. ಅದೇ ಕಾರಣಕ್ಕೆ ಇಲ್ಲಿ ಎಲ್ಲರೂ ಮೊದಲು ಫೀಲ್ಡಿಂಗ್ ಮಾಡಲು ಬಯಸುತ್ತಾರೆ. ಅಂದರೆ ಇಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಅತ್ತ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದ್ದಾರೆ” ಎಂದು ರಿಷಭ್ ಪಂತ್ ಹೇಳಿದ್ದಾರೆ.

ಇದೇ ವೇಳೆ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಇದು ಅತ್ಯಂತ ಕಠಿಣ ಸೀಸನ್ ಆಗಿದ್ದರೂ, ಕೆಲವು ಆಟಗಾರರ ಪ್ರದರ್ಶನವನ್ನು ರಿಷಭ್ ಪಂತ್ ಮುಕ್ತಕಂಠದಿಂದ ಶ್ಲಾಘಿಸಿದರು:

  • ಜೋಶ್ ಇಂಗ್ಲಿಸ್: ಕೊನೆಯ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ನೆರವಾಗಿದ್ದರು. ಅವರು ತಂಡದಲ್ಲಿ ಕಾಣಿಸಿಕೊಂಡಿರುವುದು ಪ್ಲಸ್ ಪಾಯಿಂಟ್.
  • ಪ್ರಿನ್ಸ್ ಯಾದವ್: ಈ ಸೀಸನ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ, ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
  •  ಮೊಹ್ಸಿನ್ ಖಾನ್ ಮತ್ತು ಮೊಹಮ್ಮದ್ ಶಮಿ: ಗಾಯದಿಂದ ಚೇತರಿಸಿಕೊಂಡು ಬಂದ ಮೊಹ್ಸಿನ್ ಪ್ರಯತ್ನ ಹಾಗೂ ಇಡೀ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರ ನಾಯಕತ್ವದ ಗುಣವನ್ನು ಪಂತ್ ಕೊಂಡಾಡಿದರು.
  • ಮಿಚೆಲ್ ಮಾರ್ಷ್: ಕೊನೆಯ ಪಂದ್ಯದಲ್ಲಿ ಆಡದಿದ್ದರೂ, ಸೀಸನ್‌ನಾದ್ಯಂತ ಮಾರ್ಷ್ ನೀಡಿದ ಕೊಡುಗೆಯನ್ನು ರಿಷಭ್ ಪಂತ್ ನೆನಪಿಸಿಕೊಂಡರು.

ಈ ಅನುಭವಿ ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ಕೆಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಂಡ ರಿಷಭ್ ಪಂತ್,  “ಕೆಲವೊಮ್ಮೆ ಜವಾಬ್ದಾರಿ ಇಲ್ಲದ ಆಲೋಚನೆಗಳು ಅಥವಾ ಯೋಜನೆಗಳು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸುತ್ತವೆ” ಎಂದಿದ್ದಾರೆ.

ರಿಷಭ್ ಪಂತ್ ಅವರ ಈ ಹೇಳಿಕೆಯು ತಂಡದ ಮ್ಯಾನೇಜ್‌ಮೆಂಟ್ ಅಥವಾ ತಂತ್ರಗಾರಿಕೆಯಲ್ಲಿನ ಲೋಪದೋಷಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದಂತಿದೆ. ಏಕೆಂದರೆ ಈ ಸೀಸನ್‌ನಾದ್ಯಂತ ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಆದ ಬದಲಾವಣೆಗಳು ಲಕ್ನೋ ಸೂಪರ್ ಜೈಂಟ್ಸ್​​ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.

ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೀನಾಯ ಪ್ರದರ್ಶನಕ್ಕೆ ನಾನೊಬ್ಬನೇ ಕಾರಣನಲ್ಲ, ಬದಲಾಗಿ ಟೀಮ್ ಮ್ಯಾನೇಜ್ಮೆಂಟ್ ತೆಗೆದುಕೊಂಡ ಜವಾಬ್ದಾರಿ ಇಲ್ಲದ ಕೆಲ ನಿರ್ಧಾರಗಳು ಹಾಗೂ ಯೋಜನೆಗಳು ಕೂಡ ಸಹ ಕಾರಣ ಎಂದು ರಿಷಭ್ ಪಂತ್ ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ನು ಈ ಸೋಲು-ಗೆಲುವುಗಳ ನಡುವೆ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ರಿಷಭ್ ಪಂತ್, “ಇದು ನಮಗೆ ತುಂಬಾ ಸುದೀರ್ಘ ಮತ್ತು ಕಠಿಣ ಸೀಸನ್ ಆಗಿತ್ತು. ಏನೇ ಆದರೂ ನಾವು ತಲೆ ಎತ್ತಿ ಮುನ್ನಡೆಯುತ್ತೇವೆ. ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇವೆ. ಮುಂದಿನ ವರ್ಷ (IPL 2027) ಇನ್ನಷ್ಟು ಬಲಿಷ್ಠವಾಗಿ ಮರಳುತ್ತೇವೆ ಎಂದು ಭರವಸೆ ನೀಡುತ್ತೇನೆ,” ಎಂದು ಭಾವುಕರಾಗಿ ನುಡಿದರು.

ಇದನ್ನೂ ಓದಿ: Shreyas Iyer: ಅಯ್ಯರ್ ಫೈಯರ್… ಭರ್ಜರಿ ದಾಖಲೆ!

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2026ರ ಸೀಸನ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ನಿರಂತರ ತಂತ್ರಗಾರಿಕೆಯ ಏರಿಳಿತಗಳು ಮತ್ತು ಕಠಿಣ ಸವಾಲುಗಳ ನಡುವೆಯೂ, ನಾಯಕ ರಿಷಭ್ ಪಂತ್ ತಂಡದ ಧನಾತ್ಮಕ ಅಂಶಗಳನ್ನು ಎತ್ತಿಹಿಡಿದಿದ್ದಾರೆ.

ಯುವ ಆಟಗಾರರ ಉದಯ ಮತ್ತು ಹಿರಿಯ ಆಟಗಾರರ ಮಾರ್ಗದರ್ಶನ ಮುಂದಿನ ಸೀಸನ್‌ಗೆ ತಂಡಕ್ಕೆ ದೊಡ್ಡ ಬಲ ನೀಡಲಿದೆ ಎಂಬುದರಲ್ಲಿ ಸಂಶಯವಿಲ್ಲ. ಸೋಲಿನ ಕಹಿಯನ್ನು ಮರೆತು, ತಪ್ಪುಗಳಿಂದ ಪಾಠ ಕಲಿತು, ಕಠಿಣ ಪರಿಶ್ರಮದೊಂದಿಗೆ ಐಪಿಎಲ್ 2027ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಹೊಸ ಅಧ್ಯಾಯ ಬರೆಯಲು ಸಜ್ಜಾಗಬೇಕಿದೆ.

Source link

Daily Devotional: ಕುಲದೈವ, ಇಷ್ಟದೈವ ಅಥವಾ ಆರಾಧ್ಯದೈವ; ಯಾವ ದೈವ ಆರಾಧನೆಯಿಂದ ಏನು ಫಲ? – Kannada News | The Significance of Kuladaiva, Ishtadaiva, Aradhyadaiva, and Manedeva

“ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬುದು ಹಿಂದೂ ಧರ್ಮದ ಸಾರ. ಯಾವುದೇ ದೇವರನ್ನು ನಮಸ್ಕರಿಸಿದರೂ, ಅದು ಅಂತಿಮವಾಗಿ ಒಂದೇ ಪರಮಾತ್ಮನನ್ನು ತಲುಪುತ್ತದೆ. ಉದಾಹರಣೆಗೆ, ಅನ್ನ, ಚಿತ್ರಾನ್ನ, ಪುಳಿಯೋಗರೆ, ಪಲಾವ್ ಹೀಗೆ ಯಾವುದೇ ರೂಪದಲ್ಲಿ ಸೇವಿಸಿದರೂ, ಅದರ ಮೂಲ ಅಕ್ಕಿಯೇ ಆಗಿರುವಂತೆ, ವಿಭಿನ್ನ ದೈವಗಳ ಆರಾಧನೆಯು ಒಂದೇ ಭಗವಂತನನ್ನು ತಲುಪುತ್ತದೆ. ಆದಾಗ್ಯೂ, ಕೆಲವು ದೈವಗಳಿಗೆ ನಮ್ಮ ಜೀವನದಲ್ಲಿ ವಿಶೇಷ ಮಹತ್ವವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಕುಲದೈವದ ಮಹತ್ವ:

ಕುಲದೈವಕ್ಕೆ ನಮ್ಮ ಆರಾಧನಾ ಪದ್ಧತಿಯಲ್ಲಿ ಅತ್ಯಂತ ಹೆಚ್ಚು ಪ್ರಾಶಸ್ತ್ಯವಿದೆ. ಇದು ಏಳು ತಲೆಮಾರುಗಳಿಂದ ವಂಶವನ್ನು ರಕ್ಷಿಸಿಕೊಂಡು ಬಂದಿರುವ ದೈವ. ಕುಲದೈವದ ಆಯ್ಕೆಯನ್ನು ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ. ಕೆಲವರಿಗೆ ತಮ್ಮ ಕುಲದೈವದ ಬಗ್ಗೆ ಮಾಹಿತಿ ಇಲ್ಲದಿದ್ದರೂ, ಹೊಸದಾಗಿ ಒಂದು ದೈವವನ್ನು ಆಯ್ಕೆ ಮಾಡಿಕೊಂಡು ಆರಾಧಿಸಬಹುದು. ಕುಲದೈವವು ವಂಶವನ್ನು ಅಪಘಾತಗಳು, ಅನಾರೋಗ್ಯ, ಅಕಾಲಿಕ ಮರಣ ಮತ್ತು ಇತರ ಅಕಾಲಿಕ ಘಟನೆಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕುಲದೈವಕ್ಕೆ ನಮಸ್ಕರಿಸುವುದು ಉತ್ತಮ. ಹೆಸರು ತಿಳಿದಿದ್ದರೆ, ಆ ಹೆಸರು ಹೇಳಿ ನಮಸ್ಕರಿಸಬೇಕು; ಇಲ್ಲದಿದ್ದರೆ, “ಕುಲದೇವತಾಭ್ಯೋ ನಮಃ” ಎಂದು ಹೇಳಬಹುದು. ಕನಿಷ್ಠ ವಾರಕ್ಕೊಮ್ಮೆ ಅಥವಾ ವರ್ಷಕ್ಕೊಮ್ಮೆಯಾದರೂ ಕುಟುಂಬ ಸಮೇತ ಕುಲದೈವದ ದರ್ಶನ ಮಾಡುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ.

ಇಷ್ಟದೈವದ ಪ್ರಭಾವ:

ಇಷ್ಟದೈವವು ಒಬ್ಬ ವ್ಯಕ್ತಿ ಮನಪೂರ್ವಕವಾಗಿ ಇಷ್ಟಪಟ್ಟು ನಂಬಿ ಆರಾಧಿಸುವ ದೈವ. ಇದು ಕೇವಲ ಆ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ, ಕುಟುಂಬದ ಎಲ್ಲರಿಗೂ ಅಲ್ಲ. ಮನಸ್ಸಿನಲ್ಲಿ ಸಂಪೂರ್ಣ ಶ್ರದ್ಧೆಯಿಂದ ಇಷ್ಟದೈವವನ್ನು ಪೂಜಿಸಿದರೆ, ಆ ದೈವವು ಶೀಘ್ರವಾಗಿ ಇಷ್ಟಾರ್ಥಗಳನ್ನು ಈಡೇರಿಸಿ, ಫಲಗಳನ್ನು ನೀಡುತ್ತದೆ. ಲಕ್ಷ್ಮಿ, ಶಿವ, ವಿಷ್ಣು, ತಿರುಪತಿ ವೆಂಕಟೇಶ ಹೀಗೆ ಒಬ್ಬೊಬ್ಬರಿಗೆ ಒಂದೊಂದು ದೈವ ಇಷ್ಟವಾಗಬಹುದು.

ಆರಾಧ್ಯದೈವದ ಮಹತ್ವ:

ಆರಾಧ್ಯದೈವವು ಜನ್ಮಜನ್ಮಾಂತರಗಳಿಂದ ಆರಾಧಿಸಿಕೊಂಡು ಬಂದಿರುವ ದೈವ. ಇದನ್ನು ಪೂರ್ಣ ಸಮರ್ಪಣಾ ಭಾವದಿಂದ ಪೂಜಿಸಿದರೆ, ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೋಗಲಾಡಿಸಿ, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಮನೆದೇವರು:

ಮನೆದೇವರು ಒಂದು ಕುಟುಂಬಕ್ಕೆ ಸೀಮಿತವಾದ ದೈವ. ಇದು ಸಾಮಾನ್ಯವಾಗಿ ಮೂರು ತಲೆಮಾರುಗಳವರೆಗೆ ಪೂಜಿಸಲ್ಪಡುತ್ತದೆ ಮತ್ತು ಕಾಲಾನಂತರದಲ್ಲಿ ಇದನ್ನು ಬದಲಾಯಿಸಬಹುದು.

ಜಾತಕ ಮತ್ತು ದೈವ ಆರಾಧನೆ:

ಜ್ಯೋತಿಷ್ಯದ ಪ್ರಕಾರ, ಜಾತಕದ ಲಗ್ನದಲ್ಲಿ ಪಂಚಮ ಸ್ಥಾನ (ಪೂರ್ವ ಪುಣ್ಯ ಸ್ಥಾನ) ಮತ್ತು ನವಮ ಸ್ಥಾನ (ಭಾಗ್ಯ ಸ್ಥಾನ) ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಸ್ಥಾನಗಳಲ್ಲಿರುವ ರಾಶಿಗೆ ಅನುಸಾರವಾಗಿ ದೈವಗಳನ್ನು ಪೂಜಿಸುವುದು ಉತ್ತಮ. ಹಾಗೆಯೇ, ತೃತೀಯ, ಅಷ್ಟಮ, ದ್ವಾದಶ ಸ್ಥಾನಗಳ ದೇವತೆಗಳನ್ನು ನೋಡಿದಾಗ, ಹಿಂದಿನ ಜನ್ಮದಲ್ಲಿ ಯಾವ ದೇವತೆಯನ್ನು ಆರಾಧಿಸಲಾಗಿದೆ ಎಂಬುದನ್ನು ಗುರುತಿಸಬಹುದು. ಈ ವಿಶ್ಲೇಷಣೆಯು ನಮ್ಮ ಸಂಚಿತ ಕರ್ಮ ಮತ್ತು ಪ್ರಾರಬ್ಧ ಕರ್ಮಗಳ ಕುರಿತು ಮಾಹಿತಿ ನೀಡುತ್ತದೆ.

ಒಟ್ಟಾರೆಯಾಗಿ, ಕುಲದೈವ, ಇಷ್ಟದೈವ, ಮನೆದೇವರು ಮತ್ತು ಆರಾಧ್ಯದೈವಗಳ ಆರಾಧನೆಯು ನಮ್ಮ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:35 am, Sun, 24 May 26

Source link

Exit mobile version