Guru Sanchara 2026: ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Leo Horoscope 2026: Dr. Basavaraj Gurujis Insights on Guru Transit

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಸಿಂಹ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ಸಿಂಹ ರಾಶಿಯವರಿಗೆ ನಿರ್ದಿಷ್ಟ ಫಲಗಳನ್ನು ತರಲಿದೆ. ರಾಶ್ಯಾಧಿಪತಿ ರವಿಯಾಗಿರುವ ಈ ರಾಶಿಯವರಿಗೆ ಗುರುವು 12ನೇ ಮನೆಗೆ ಪ್ರವೇಶಿಸುತ್ತಾನೆ. ಇದು ಹೆಚ್ಚಿದ ಖರ್ಚುಗಳನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಒಲವು ಮತ್ತು ವಿದೇಶ ಪ್ರಯಾಣದ ಯೋಗ ಇರುತ್ತದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳ ಸಾಧ್ಯತೆಯಿದ್ದು, ವ್ಯಾಪಾರಸ್ಥರು ಅತಿಯಾದ ಹೂಡಿಕೆಯಿಂದ ದೂರವಿರಬೇಕು.

ರಾಜಕೀಯ ವ್ಯಕ್ತಿಗಳು ಮತ್ತು ಉನ್ನತ ಸ್ಥಾನದಲ್ಲಿರುವವರು ತಮ್ಮ ಸ್ಥಾನಕ್ಕೆ ಕಂಟಕ ಎದುರಿಸುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ವಹಿಸಬೇಕು. ಆಸ್ತಿ ವಿಭಜನೆ ವಿಚಾರದಲ್ಲಿ ಜಾಗ್ರತೆ ಅಗತ್ಯ. ವೈವಾಹಿಕ ಜೀವನದಲ್ಲಿ ಸಾಮರಸ್ಯಕ್ಕಾಗಿ ಹೊಂದಾಣಿಕೆ ಮುಖ್ಯ. ಸರ್ಕಾರಿ ನೌಕರರು ಮಾತನಾಡುವಾಗ ಎಚ್ಚರದಿಂದ ಇರಬೇಕು. ಮೌನಂ ಕಲಹಂ ನಾಸ್ತಿ ಎಂಬ ತತ್ವವನ್ನು ಅನುಸರಿಸುವುದು ಉತ್ತಮ. ಬಾಕಿ ಇರುವ ವ್ಯವಹಾರಗಳನ್ನು ಪೂರ್ಣಗೊಳಿಸುವುದು ಸೂಕ್ತ. ಮಕ್ಕಳೊಂದಿಗೆ ವಿರೋಧಗಳುಂಟಾಗುವ ಸಾಧ್ಯತೆಗಳಿದ್ದರೂ, ವಿವಾಹ ವಿಷಯಗಳಲ್ಲಿ ಶುಭಫಲವಿರುತ್ತದೆ. ಗುರು ಬಲವಿಲ್ಲದಿದ್ದರೂ, ಇತರ ಗ್ರಹಗಳ ಬಲದಿಂದ ಕಾರ್ಯಗಳು ಸಾಗುತ್ತವೆ. ದತ್ತಾತ್ರೇಯ ಜಪ, ನಿಂಬೆಹಣ್ಣು ಅರ್ಪಣೆ ಮತ್ತು ಹಿರಿಯರಿಗೆ ಗೌರವ ನೀಡುವುದು ಶುಭ ಫಲಗಳನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು – Kannada News | Deadly Coal Mine Explosion in China Leaves Dozens Dead, Rescue Efforts Ongoing

ಬೀಜಿಂಗ್, ಮೇ 23: ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ ಎಂದು ಶನಿವಾರ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದ ಸಮಯದಲ್ಲಿ ಸುಮಾರು 247 ಕಾರ್ಮಿಕರು ನೆಲದಡಿಯಲ್ಲಿದ್ದು, ಶನಿವಾರ ಮುಂಜಾನೆಯ ಹೊತ್ತಿಗೆ 201 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಗಣಿಯ ಆಳದಲ್ಲಿ ಸಿಲುಕಿರುವ ಉಳಿದವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಘಟನೆ ಬೆನ್ನಲ್ಲೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಗಾಯಾಳುಗಳ ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಯತ್ನವನ್ನು ಬಿಡಬೇಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಜೊತೆಗೆ, ಅಪಘಾತದ ಸಮಗ್ರ ತನಿಖೆ ನಡೆಸಿ ಜವಾಬ್ದಾರಿಯುತರನ್ನು ಹೊಣೆಗಾರರನ್ನಾಗಿ ಮಾಡಲು ಸೂಚಿಸಿದ್ದು, ಗಣಿ ಕಂಪನಿಯ ಪ್ರಮುಖ ಕಾರ್ಯನಿರ್ವಾಹಕರನ್ನು ಈಗಾಗಲೇ ಬಂಧಿಸಲಾಗಿದೆ.

ಚೀನಾದ ಒಟ್ಟು ರಾಷ್ಟ್ರೀಯ ಉತ್ಪಾದನೆಯ ಮೂರನೇ ಒಂದು ಭಾಗದಷ್ಟು (1.3 ಬಿಲಿಯನ್ ಟನ್) ಕಲ್ಲಿದ್ದಲನ್ನು ಉತ್ಪಾದಿಸುವ ಅತ್ಯಂತ ಪ್ರಮುಖ ಶಾಂಕ್ಸಿ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರುಕ್ಮಿಣಿ ವಸಂತ್ ಬಿಕಿನಿ ವಿಡಿಯೋಗೆ ಸಿಕ್ತು ಸ್ಪಷ್ಟನೆ; ಗರಂ ಆದ ನಟಿ – Kannada News | Rukmini Vasanth Deepfake: Actress Clarifies Fake Videos, Warns Legal Action

‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಂತಾರ’ ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಇತ್ತೀಚೆಗೆ ಸುದ್ದಿ ಆಗಿದ್ದರು. ಅವರ ಬಿಕಿನಿ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಇದರ ಹಿಂದಿನ ಸತ್ಯಾಂಶ ಕೊನೆಗೂ ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಈ ವೈರಲ್ ದೃಶ್ಯಗಳ ಬಗ್ಗೆ ಸ್ವತಃ ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಕಟಣೆಯಲ್ಲಿ ಅವರು, ‘ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳು ಸಂಪೂರ್ಣವಾಗಿ ನಕಲಿ ಮತ್ತು ಸೃಷ್ಟಿಸಲ್ಪಟ್ಟವುಗಳಾಗಿವೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. ‘ಇದು ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಫೇಕ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನನ್ನ ಮುಖವನ್ನು ಬೇರೊಬ್ಬರ ದೇಹಕ್ಕೆ ಜೋಡಿಸಿ ಸೃಷ್ಟಿಸಿರುವ ಪಿತೂರಿಯಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ:

ಇಂತಹ ಕೃತ್ಯಗಳು ಒಬ್ಬ ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತವೆ ಎಂದು ಬೇಸರ ವ್ಯಕ್ತಪಡಿಸಿರುವ ರುಕ್ಮಿಣಿ, ಸುಳ್ಳು ಫೋಟೋಗಳನ್ನು ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ ಅಭಿಮಾನಿಗಳು ಮತ್ತು ಸಾರ್ವಜನಿಕರು ಇಂತಹ ಯಾವುದೇ ನಕಲಿ ವಿಡಿಯೋಗಳನ್ನು ನಂಬಬಾರದು ಮತ್ತು ಅದನ್ನು ಶೇರ್ ಮಾಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಕಿನಿಯಲ್ಲಿ ರುಕ್ಮಿಣಿ ವಸಂತ್? ವೈರಲ್ ಫೋಟೋ, ವಿಡಿಯೋದಿಂದ ಫ್ಯಾನ್ಸ್ ಮನದಲ್ಲಿ ನೂರು ಪ್ರಶ್ನೆ

ಆರಂಭದಿಂದಲೂ ಗ್ಲಾಮರ್ ಶೋಗಿಂತ ಅಭಿನಯಕ್ಕೆ ಹೆಚ್ಚು ಆದ್ಯತೆ ನೀಡಿ, ಸಾಂಪ್ರದಾಯಿಕ ಉಡುಗೆ ಮೂಲಕವೇ ಗುರುತಿಸಿಕೊಂಡಿದ್ದ ರುಕ್ಮಿಣಿ ಅವರ ಈ ಬೋಲ್ಡ್ ಅವತಾರ ಕಂಡು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಅನುಮಾನ ಮೂಡಿತ್ತು. ಈಗ ನಟಿಯ ಅಧಿಕೃತ ಸ್ಪಷ್ಟನೆಯಿಂದಾಗಿ ಇಂಟರ್ನೆಟ್‌ನಲ್ಲಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ – Kannada News | Modi Gives 51K Job Letters, Defends Foreign Trips: Global Deals Boost Youth Employment

ನವದೆಹಲಿ, ಮೇ 23: ಪ್ರಧಾನಿ ನರೇಂದ್ರ ಮೋದಿ(Narendra Modi)ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

5 ದೇಶಗಳ ಪ್ರವಾಸದ ಅಸಲಿ ಉದ್ದೇಶವೇನು?
ನಾನು ಕೇವಲ ಐದು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಬಂದಿಲ್ಲ, ಬದಲಿಗೆ ಈ ಅವಧಿಯಲ್ಲಿ ಡಜನ್‌ಗಟ್ಟಲೆ ದೇಶಗಳ ಪ್ರಮುಖ ಜಾಗತಿಕ ಕಂಪನಿಗಳ ನಾಯಕರನ್ನು ಭೇಟಿ ಮಾಡಿ ವಿವರವಾದ ಚರ್ಚೆ ನಡೆಸಿದ್ದೇನೆ ಎಂದು ಪ್ರಧಾನಿ ಹೇಳಿದರು. ಇಂದು ಇಡೀ ಜಗತ್ತು ಭಾರತದ ತಾಂತ್ರಿಕ ಪ್ರಗತಿ ಮತ್ತು ಇಲ್ಲಿನ ಯುವಶಕ್ತಿಯ ಬಗ್ಗೆ ಅಪಾರ ಉತ್ಸಾಹ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಯುವಕರಿಗೆ ದೊಡ್ಡ ಮನ್ನಣೆ ಮತ್ತು ಅವಕಾಶಗಳು ಸಿಗಬೇಕೆಂಬುದೇ ನನ್ನ ವಿದೇಶಿ ಪ್ರವಾಸಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯಾವ ದೇಶದೊಂದಿಗೆ ಎಂತಹ ಒಪ್ಪಂದಗಳು?
ಭಾರತವು ವಿಶ್ವದಲ್ಲೇ ಅತ್ಯಂತ ನಂಬಿಕಸ್ಥ ‘ಸಪ್ಲೈ ಚೈನ್’ ದೇಶವಾಗಿ ಹೊರಹೊಮ್ಮುತ್ತಿದೆ ಎಂದ ಮೋದಿ, ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಪ್ರಮುಖ ಒಪ್ಪಂದಗಳನ್ನು ಪಟ್ಟಿ ಮಾಡಿದರು.

ನೆದರ್‌ಲ್ಯಾಂಡ್ಸ್: ಜಗತ್ತಿನ ಹೆಸರಾಂತ ಸೆಮಿಕಂಡಕ್ಟರ್ ಕಂಪನಿ ‘ASML’ ಭಾರತದ ‘TATA’ ಕಂಪನಿಯೊಂದಿಗೆ ಅತ್ಯಂತ ಅಪರೂಪದ ಒಪ್ಪಂದ ಮಾಡಿಕೊಂಡಿದೆ. ಇದು ದೇಶದಲ್ಲಿ ಲೆಕ್ಕವಿಲ್ಲದಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ.

ಸ್ವೀಡನ್ ಮತ್ತು ಇಟಲಿ: ಹಸಿರು ಇಂಧನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ನಾವೀನ್ಯತೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.

ಯುಎಇ ಮತ್ತು ನಾರ್ವೆ: ಹಡಗು ನಿರ್ಮಾಣ, ಸೂಪರ್‌ಕಂಪ್ಯೂಟಿಂಗ್ ಮತ್ತು ಹಸಿರು ತಂತ್ರಜ್ಞಾನದಲ್ಲಿ ಜಂಟಿಯಾಗಿ ಕೆಲಸ ಮಾಡಲು ಒಪ್ಪಂದಗಳಾಗಿವೆ.

ಮತ್ತಷ್ಟು ಓದಿ: ನರೇಂದ್ರ ಮೋದಿಗೆ ನಾರ್ವೆಯ ಅತ್ಯುನ್ನತ ಪ್ರಶಸ್ತಿ ಪ್ರದಾನ; ಭಾರತದ ಪ್ರಧಾನಿಗೆ 32ನೇ ಜಾಗತಿಕ ಗೌರವ

ಅಭಿವೃದ್ಧಿ ಹೊಂದಿದ ಭಾರತಕ್ಕೆ ಯುವಕರೇ ಪಾಲುದಾರರು
ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಇಂದು ನೀವೆಲ್ಲರೂ ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಅತ್ಯಂತ ಜವಾಬ್ದಾರಿಯುತ ಪಾಲುದಾರರಾಗುತ್ತಿದ್ದೀರಿ. ಮುಂಬರುವ ವರ್ಷಗಳಲ್ಲಿ ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿದೆ ಎಂದು ಕರೆ ನೀಡಿದರು. ಶುದ್ಧ ಇಂಧನ, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ಉತ್ಪಾದನಾ ವಲಯಗಳು ವೇಗವಾಗಿ ಬೆಳೆಯುತ್ತಿದ್ದು, ಯುವಕರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ಮಹಾಪೂರವೇ ಹರಿದುಬರಲಿದೆ ಎಂದು ಅವರು ಭರವಸೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ! – Kannada News | Pushpa Style Spirit Smuggling Busted in Belagavi: Spirit Worth 35 Lakh Seized

ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ

ಬೆಳಗಾವಿ, ಮೇ 23: ಸೂಪರ್ ಹಿಟ್ ‘ಪುಷ್ಪ’ ಸಿನಿಮಾದಲ್ಲಿ ಟ್ಯಾಂಕರ್ ಒಳಗೆ ಹಾಲಿನ ಕೆಳಗೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟು ಸಾಗಿಸುವ ದೃಶ್ಯವನ್ನು ನೀವೆಲ್ಲರೂ ನೋಡಿರುತ್ತೀರಿ. ಅದೇ ಮಾದರಿಯ ಖತರ್ನಾಕ್ ಐಡಿಯಾ ಬಳಸಿ, ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಳಗಾವಿ (Belagavi) ಜಿಲ್ಲೆಯ ಅಬಕಾರಿ ಅಧಿಕಾರಿಗಳು ಭೇದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯ ಜಾಂಬೋಟಿಯಲ್ಲಿ 35 ಲಕ್ಷ ಮೌಲ್ಯದ ಸ್ಪಿರಿಟ್ ಜಪ್ತಿ ಮಾಡಲಾಗಿದೆ.
  • ಆಯಿಲ್ ಟ್ಯಾಂಕರ್ ಬಳಸಿ ಪುಷ್ಪ ಸಿನಿಮಾ ಶೈಲಿಯಲ್ಲಿ ಸ್ಪಿರಿಟ್ ಸಾಗಿಸಲಾಗುತ್ತಿತ್ತು.
  • ನೆಲಮಂಗಲದಿಂದ ಗೋವಾಕ್ಕೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ‘ಪುಷ್ಪ’ ಪ್ಲಾನ್!

ಬಂಧಿತ ಗ್ಯಾಂಗ್ ಅಧಿಕಾರಿಗಳನ್ನು ಡೈವರ್ಟ್ ಮಾಡಲು ಅತ್ಯಂತ ಚಾಣಾಕ್ಷ ತಂತ್ರ ರೂಪಿಸಿತ್ತು. ಟ್ಯಾಂಕರ್‌ನ ಮೂರು ಭಾಗಗಳಲ್ಲಿ ಸಣ್ಣ ಸಣ್ಣ ಪೈಪ್‌ಗಳನ್ನು ಅಳವಡಿಸಿ, ಅದರಲ್ಲಿ ಮಾತ್ರ ಆಯಿಲ್ (ತೈಲ) ತುಂಬಿಸಲಾಗಿತ್ತು. ಅಧಿಕಾರಿಗಳು ತಪಾಸಣೆ ನಡೆಸುವಾಗ ಕೇವಲ ಆ ಪೈಪ್‌ಗಳಲ್ಲಿದ್ದ ಆಯಿಲ್ ತೋರಿಸಿ ಇದು ಆಯಿಲ್ ಟ್ಯಾಂಕರ್ ಎಂದು ನಂಬಿಸಿ ನುಣುಚಿಕೊಳ್ಳುತ್ತಿದ್ದರು. ಆದರೆ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಖಾನಾಪುರ ಅಬಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ತೀವ್ರ ಸಂಶಯ ಮೂಡಿದೆ. ತಕ್ಷಣವೇ ಟ್ಯಾಂಕರ್‌ನಲ್ಲಿದ್ದ ಆಯಿಲ್ ಪೈಪ್‌ಗಳನ್ನು ಹೊರತೆಗೆದು ಆಳವಾಗಿ ಪರಿಶೀಲಿಸಿದಾಗ, ಅದರ ಸುತ್ತಲೂ ಸಾವಿರಾರು ಲೀಟರ್ ಸ್ಪಿರಿಟ್ ತುಂಬಿಟ್ಟಿರುವುದು ಪತ್ತೆಯಾಗಿದ್ದು, ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದನ್ನೂ ಓದಿ Kalaburgi Accident: ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಮೃತನ ತಂದೆ ಗೋಳು!

ನೆಲಮಂಗಲದಿಂದ ಗೋವಾಕ್ಕೆ ಸಾಗಾಟ

ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸರಬರಾಜಾಗುವ ಪ್ರಕರಣಗಳು ಹೆಚ್ಚಿರುತ್ತವೆ. ಆದರೆ, ಈ ಕತರ್ನಾಕ್ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಈ ಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎನ್ನಲಾಗಿದೆ. ಸದ್ಯಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಡೀ ಜಾಲವನ್ನು ಪತ್ತೆ ಹಚ್ಚಿದ್ದು, ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅಕ್ರಮ ದಂಧೆಯ ಹಿಂದೆ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಇದರ ಅಸಲಿ ಕಿಂಗ್‌ಪಿನ್ ಯಾರು ಎಂಬ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

1 ಗೆಲುವು, 2 ತಂಡಗಳ ಜಯ: ಹೀಗಿದೆ ಪಂಜಾಬ್ ಕಿಂಗ್ಸ್​ ಪ್ಲೇಆಫ್ ಲೆಕ್ಕಾಚಾರ

Source link

Jiang Chenglan: ಒಂದೇ ದಿನದಲ್ಲಿ 1 ಕೋಟಿ ಫಾಲೋವರ್ಸ್;ಸೋಷಿಯಲ್ ಮೀಡಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಚೀನಾ ಸುಂದರಿ! – Kannada News | Chinese Influencer Jiang Chenglan’s Epic Comeback: 10M Followers in 24 Hrs

ಒಂದೇ ದಿನದಲ್ಲಿ 1 ಕೋಟಿ ಫಾಲೋವರ್ಸ್Image Credit source: Ai generated

ಬೀಜಿಂಗ್, ಮೇ 23: ಇಂಟರ್ನೆಟ್ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಅಸಾಧ್ಯವಾದ ಪವಾಡಗಳು ನಡೆದುಬಿಡುತ್ತವೆ. ಸದ್ಯ ಚೀನಾದ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ಒಬ್ಬರು ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾಳೆ. ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ಇಂಟರ್ನೆಟ್‌ಗೆ ಮರಳಿದ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 1 ಕೋಟಿ (10 Million) ಹೊಸ ಫಾಲೋವರ್ಸ್ ಪಡೆಯುವ ಮೂಲಕ ಈಕೆ ಹೊಸ ಇತಿಹಾಸ ಬರೆದಿದ್ದಾರೆ. ಚೀನಾದಲ್ಲಿ ಅತ್ಯಂತ ಜನಪ್ರಿಯ ಬ್ಯೂಟಿ ಇನ್ಫ್ಲುಯೆನ್ಸರ್ ಆಗಿರುವ ಜಿಯಾಂಗ್ ಚೆಂಗ್ಲಾನ್ (Jiang Chenglan) ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿ.

3 ವರ್ಷಗಳ ಬಳಿಕ ಕಂಬ್ಯಾಕ್:

ಚೀನಾದ ಟಿಕ್‌ಟಾಕ್ ಆವೃತ್ತಿಯಾದ ‘ಡೋಯಿನ್’ (Douyin) ಪ್ಲಾಟ್‌ಫಾರ್ಮ್‌ನಲ್ಲಿ ಜಿಯಾಂಗ್ ಚೆಂಗ್ಲಾನ್ 2023 ರವರೆಗೆ 3 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ಆದರೆ ಇದ್ದಕ್ಕಿದ್ದಂತೆ ಆಕೆ ಯಾವುದೇ ಅಪ್‌ಡೇಟ್ ನೀಡದೆ ಸೋಷಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ನಾಪತ್ತೆಯಾಗಿದ್ದಳು. ಇದು ಆಕೆಯ ಅಭಿಮಾನಿಗಳಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಮೂಡಿಸಿತ್ತು.ಇತ್ತೀಚೆಗೆ ಮೇ 13 ರಂದು ಜಿಯಾಂಗ್ ತಮ್ಮ ನಿಜವಾದ ಹೆಸರಿನಲ್ಲಿ ಹೊಸ ಖಾತೆ ತೆರೆಯುವ ಮೂಲಕ ಭರ್ಜರಿ ಕಂಬ್ಯಾಕ್ (Comeback) ಮಾಡಿದ್ದಾಳೆ. ತಾನು ನಾಪತ್ತೆಯಾಗಲು ತಮ್ಮ ಹಳೆಯ ಪ್ರೊಡಕ್ಷನ್ ಏಜೆನ್ಸಿಯೊಂದಿಗೆ ನಡೆದ ಕಾನೂನು ಹೋರಾಟ ಮತ್ತು ವಿವಾದವೇ ಕಾರಣ ಎಂದು ಆಕೆ ಭಾವುಕರಾಗಿ ವೀಡಿಯೋದಲ್ಲಿ ಬಹಿರಂಗಪಡಿಸಿದ್ದಾಳೆ.
“ನನ್ನ ಹಳೆಯ ಸೋಷಿಯಲ್ ಮೀಡಿಯಾ ಖಾತೆ ಮತ್ತು ಆನ್‌ಲೈನ್ ಶಾಪ್‌ಗಳನ್ನು ಏಜೆನ್ಸಿಯೇ ತನ್ನ ಹೆಸರಿಗೆ ಟ್ರೇಡ್‌ಮಾರ್ಕ್ ಮಾಡಿಕೊಂಡಿದೆ. ದಯವಿಟ್ಟು ನನ್ನ ಹಳೆಯ ಹೆಸರನ್ನು ನಂಬಿ ಯಾರೂ ಆ ಶಾಪ್‌ಗಳಲ್ಲಿ ವಸ್ತುಗಳನ್ನು ಖರೀದಿಸಬೇಡಿ” ಎಂದು ಜಿಯಾಂಗ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾಳೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಹೊಸ ವೀಡಿಯೋಗೆ ಹರಿದುಬಂದ ಲೈಕ್ಸ್ ಮಹಾಪೂರ:

ಜಿಯಾಂಗ್ ಮರಳಿ ಬರುತ್ತಿದ್ದಂತೆ ಆಕೆಯ ಮೊದಲ ಮೇಕಪ್ ಟ್ಯುಟೋರಿಯಲ್ ವೀಡಿಯೋ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದೆ. ಕೇವಲ ಒಂದೇ ದಿನದಲ್ಲಿ 10 ಮಿಲಿಯನ್ ಜನರು ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದು, ಆಕೆಯ ವೀಡಿಯೋಗೆ ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದುಬಂದಿವೆ. ಚೀನಾದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಕಾಸ್ಮೆಟಿಕ್ ಬ್ರ್ಯಾಂಡ್‌ಗಳು ಕೂಡ ಆಕೆಯ ಕಂಬ್ಯಾಕ್ ಅನ್ನು ಸಂಭ್ರಮಿಸಿದ್ದು, ಆಕೆಯ ಜೊತೆ ಕೆಲಸ ಮಾಡಲು ಸಾಲುಗಟ್ಟಿ ನಿಂತಿವೆ ಎಂದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kalaburgi Accident: ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಮೃತನ ತಂದೆ ಗೋಳು! – Kannada News | Kalaburagi Road Accident: 5 of a Family Killed in Cruiser Truck Collision at Chittapur

ಕಲಬುರಗಿ, ಮೇ 23: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟಿದ್ದಾರೆ. ಮಧ್ಯರಾತ್ರಿ ಸಂಭವಿಸಿದ ಈ ದುರ್ಘಟನೆಯಲ್ಲಿ ಕ್ರೂಸರ್ ವಾಹನ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕ್ರೂಸರ್‌ನಲ್ಲಿದ್ದ ಹುಸೇನ್, ಮಹಬೂಬ್, ತೋಲುಸಾಬ್, ರಸೂಲ್ ಬೀ, ಫಾತೀಮಾ ಅಲಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ಚಿತ್ತಾಪುರದ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.

ಮೃತರಲ್ಲೊಬ್ಬರ ತಂದೆಯು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಪುತ್ರ ಸುಮಾರು ಆರು-ಏಳು ವರ್ಷಗಳಿಂದ ವಾಹನ ಚಲಾಯಿಸುತ್ತಿದ್ದನೆಂದು ತಿಳಿಸಿದ್ದಾರೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫೋನ್ ಮೂಲಕ ತಿಳಿಸಲಾಗಿತ್ತು. ನಂತರ ಮುಂಜಾನೆ ಎರಡು ಗಂಟೆ ಸುಮಾರಿಗೆ ಅಪಘಾತದ ಸುದ್ದಿ ತಿಳಿದಿದೆ ಎಂದು ಹೇಳಿದ್ದಾರೆ. ಸೊಸೆ ಗರ್ಭಿಣಿ, ಈ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡ ಕುಟುಂಬದ ಸ್ಥಿತಿ ಕರುಣಾಜನಕವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲೇಹ್​ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಅಪಘಾತದ ಜಾಗದಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೈನಿಕರು – Kannada News | Military Helicopter Crash in Leh Ends in Narrow Escape for Army Officers

ಲೇಹ್, ಮೇ 23: ಲಡಾಖ್‌ನ ಲೇಹ್ ಬಳಿಯ ಪರ್ವತ ಪ್ರದೇಶವಾದ ಟ್ಯಾಂಗ್ಸ್ಟೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್(Helicopter) ಒಂದು ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇ 20 ರಂದು ನಡೆದ ಈ ಘಟನೆಯ ವಿವರಗಳನ್ನು ಸೇನಾ ಅಧಿಕಾರಿಗಳು ಇಂದು ಬೆಳಿಗ್ಗೆ ಅಧಿಕೃತವಾಗಿ ದೃಢಪಡಿಸಿದ್ದಾರೆ.

ಸೇನೆಯ ‘ಚೀತಾ’ ಹೆಸರಿನ ಸಿಂಗಲ್-ಎಂಜಿನ್ ಹೆಲಿಕಾಪ್ಟರ್‌ನಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬರು ಮೇಜರ್ ಚಲಾಯಿಸುತ್ತಿದ್ದರು. ಇವರೊಂದಿಗೆ 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಪ್ರಯಾಣಿಕರಾಗಿ ಅದೇ ವಿಮಾನದಲ್ಲಿದ್ದರು.

ಅಧಿಕಾರಿಗಳು ಸುರಕ್ಷಿತ, ಸೆಲ್ಫಿ ವೈರಲ್
ಹೆಲಿಕಾಪ್ಟರ್ ಪತನಗೊಂಡ ತಕ್ಷಣವೇ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ಅದೃಷ್ಟವಶಾತ್ ಮೂವರಿಗೂ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಭೀಕರತೆಯಿಂದ ಪ್ರಾಣಾಪಾಯದಿಂದ ಪಾರಾದ ನಂತರ, ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಕ್ಲಿಕ್ಕಿಸಿಕೊಂಡ ಆಶ್ಚರ್ಯಕರ ಸೆಲ್ಫಿ  ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ಪ್ರಸ್ತುತ ಹೆಲಿಕಾಪ್ಟರ್ ಪತನಕ್ಕೆ ನಿಖರವಾದ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನೆಗೆ ಕಾರಣವಾದ ತಾಂತ್ರಿಕ ದೋಷ ಅಥವಾ ಹವಾಮಾನದ ಸಂದರ್ಭಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸೇನೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನನ್ನ ಮಗನಲ್ಲದಿದ್ದರೆ, ಅವನಿಗೆ ಇಷ್ಟೊಂದು ಖ್ಯಾತಿ ಸಿಗುತ್ತಿರಲಿಲ್ಲ’; ಮಾಧವನ್ ನೇರ ಮಾತು – Kannada News | Vedaant Madhavan’s Swimming Journey: R Madhavan on Parenting and Avoiding Star Kid Labels

ನಟ ಆರ್. ಮಾಧವನ್ ಅವರ ಮಗ ವೇದಾಂತ್ ತಮ್ಮ ತಂದೆಯ ಹಾದಿಯಲ್ಲಿ ಸಾಗುವ ಬದಲು ತಮ್ಮ ವೃತ್ತಿಜೀವನಕ್ಕಾಗಿ ತುಂಬಾ ವಿಭಿನ್ನವಾದ ಮಾರ್ಗವನ್ನು ಆರಿಸಿಕೊಂಡರು. ವೇದಾಂತ್ ಸ್ವತಃ ಆರಿಸಿಕೊಂಡ ಹಾದಿಗೂ ಚಿತ್ರರಂಗಕ್ಕೂ ಯಾವುದೇ ಸಂಬಂಧವಿಲ್ಲ. ಆರ್. ಮಾಧವನ್ ಮತ್ತು ಅವರ ಪತ್ನಿ ತಮ್ಮ ಮಗನ ವೃತ್ತಿಜೀವನಕ್ಕಾಗಿ ಕೆಲವು ವರ್ಷಗಳ ಹಿಂದೆ ಮುಂಬೈನಿಂದ ದುಬೈಗೆ ತೆರಳಿದರು. ಈಗ, ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಮಗನ ಪಾಲನೆ ಮತ್ತು ಅವರ ವೃತ್ತಿಜೀವನದ ಆಯ್ಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದರು.

20 ವರ್ಷದ ವೇದಾಂತ್ ಒಬ್ಬ ಅತ್ಯುತ್ತಮ ಈಜುಗಾರ. ಅವರು ಅನೇಕ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ವೇದಾಂತ್‌ಗೆ ಹೆಚ್ಚಿನ ತರಬೇತಿ ನೀಡಲು ಮಾಧವನ್ ಮತ್ತು ಅವರ ಪತ್ನಿ ಸರಿತಾ ದುಬೈಗೆ ತೆರಳಿದರು. ಇಬ್ಬರೂ ತಮ್ಮ ಮಗನನ್ನು ಚಿತ್ರರಂಗಕ್ಕೆ ಪ್ರವೇಶಿಸಲು ಎಂದಿಗೂ ಒತ್ತಡ ಹೇರಲಿಲ್ಲ ಮತ್ತು ಅದಕ್ಕಾಗಿಯೇ ಅಭಿಮಾನಿಗಳು ಅವರನ್ನು ತುಂಬಾ ಮೆಚ್ಚುತ್ತಾರೆ.

ವೇದಾಂತ್ ಅವರನ್ನು ಹೆಚ್ಚಾಗಿ ಇತರ ಸ್ಟಾರ್ ಮಕ್ಕಳೊಂದಿಗೆ ಹೋಲಿಸಲಾಗುತ್ತದೆ. ಆದಾಗ್ಯೂ, ಮಾಧವನ್ ಈ ಬಗ್ಗೆ ತಮ್ಮ ಸ್ಪಷ್ಟ ಅಸಮಾಧಾನವನ್ನು ವ್ಯಕ್ತಪಡಿಸಿದರು. ‘ನಾನು ಮತ್ತು ಸರಿತಾ ಇದರ ಬಗ್ಗೆ ಸಂತೋಷವಾಗಿಲ್ಲ. ನಮಗೆ ಇದರ ಬಗ್ಗೆ ಕೆಟ್ಟ ಭಾವನೆ ಇದೆ. ಏಕೆಂದರೆ ಒಂದು ಮಗುವನ್ನು ಇನ್ನೊಂದು ಮಗುವಿಗೆ ಹೋಲಿಸುವ ಮೀಮ್‌ಗಳ ಉದ್ದೇಶ ಜನರ ಗಮನ ಸೆಳೆಯುವುದಾಗಿದೆ. ಆದ್ದರಿಂದ, ಅಂತಹ ಮೀಮ್‌ಗಳನ್ನು ವೈರಲ್ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅವರು ಇತರರಿಗೆ ಎಷ್ಟು ನೋವುಂಟು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿರುವುದಿಲ್ಲ. ವೇದಾಂತ್ ಅವರನ್ನು ಉದ್ಯಮದ ಇತರ ಸ್ಟಾರ್ ಮಕ್ಕಳೊಂದಿಗೆ ಹೋಲಿಸಿದಾಗ, ನಾನು ಮತ್ತು ಸರಿತಾ ಅದನ್ನು ಇಷ್ಟಪಡುವುದಿಲ್ಲ. ನಾವು ಅದನ್ನು ಬೆಂಬಲಿಸುವುದಿಲ್ಲ’ ಎಂದು ಮಾಧವನ್ ಹೇಳಿದರು.

ಮಾಧವನ್ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ತಮ್ಮ ಮಗನಲ್ಲಿಯೂ ಅದೇ ಮಧ್ಯಮ ವರ್ಗದ ಮೌಲ್ಯಗಳನ್ನು ತುಂಬಲು ಬಯಸುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಯಶಸ್ಸನ್ನು ಸಾಧಿಸಿರುವ ವೇದಾಂತ್ ಬಗ್ಗೆ ಮಾತನಾಡುತ್ತಾ, ಮಾಧವನ್, ‘ನನ್ನ ಮಗ ಗೆದ್ದ ಎಲ್ಲಾ ಪದಕಗಳಿಗೂ ಶ್ರಮಿಸಿದ್ದಾನೆ. ಸ್ಟಾರ್ ಕಿಡ್ ಆಗುವುದು ಸುಲಭವಲ್ಲ. ವೇದಾಂತ್ ವಯಸ್ಸಿನ ಸ್ನೇಹಿತರು ಹೆಚ್ಚಿನದನ್ನು ಸಾಧಿಸಿರಬಹುದು. ಆದರೆ ಅವನು ಅವರಿಗಿಂತ ಹೆಚ್ಚಿನ ಖ್ಯಾತಿಯನ್ನು ಪಡೆಯುತ್ತಾನೆ. ಆದ್ದರಿಂದ ನಾವು ಇತರರನ್ನು ಸಹ ಪ್ರೋತ್ಸಾಹಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಅವರು ದೇಶದ ಅತ್ಯುತ್ತಮ ಈಜುಗಾರ ಅಲ್ಲದಿರಬಹುದು, ಆದರೆ ಅವರು ಖಂಡಿತವಾಗಿಯೂ ರಾಷ್ಟ್ರೀಯ ದಾಖಲೆ ನಿರ್ಮಿಸಿದ ನಟನ ಮಗ’ ಎಂದಿದ್ದಾರೆ.

ಇದನ್ನೂ ಓದಿ: ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್‌ಗೆ ಬಂದು ‘ಧುರಂಧರ್ 2’ ನೋಡಿದ ಆರ್. ಮಾಧವನ್

ವೇದಾಂತ್ ಪಡೆಯುತ್ತಿರುವ ಖ್ಯಾತಿ ಎರಡು ಅಲಗಿನ ಕತ್ತಿ ಎಂದು ಮಾಧವನ್ ಹೇಳಿದ್ದಾರೆ. ‘ಅವನು ಇಷ್ಟೆಲ್ಲಾ ಖ್ಯಾತಿಗೆ ಅರ್ಹನೆಂದು ಭಾವಿಸಿದರೆ, ಅವನು ಮೂರ್ಖ. ಅವನು ನನ್ನ ಮಗನಲ್ಲದಿದ್ದರೆ, ಅವನಿಗೆ ಇಷ್ಟೊಂದು ಖ್ಯಾತಿ ಸಿಗುತ್ತಿರಲಿಲ್ಲ. ಅದೃಷ್ಟವಶಾತ್, ನನ್ನ ಮಗ ಇದನ್ನೆಲ್ಲ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತ’ ಎಂದು ಮಾಧವನ್ ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:32 am, Sat, 23 May 26

Source link

Exit mobile version