ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಆರಾಧ್ಯ ಬಚ್ಚನ್ ಎಂಟ್ರಿ; ಮಗಳ ಜೊತೆ ಮಿಂಚಿದ ಐಶ್ವರ್ಯಾ ರೈ – Kannada News | Aishwarya Rai, Aaradhya Bachchan at Cannes 2026 Red Carpet: A Historic Debut

ಪ್ರತಿಷ್ಠಿತ ‘ಕಾನ್ ಫಿಲ್ಮ್ ಫೆಸ್ಟಿವಲ್ 2026’ರಲ್ಲಿ ಬಾಲಿವುಡ್‌ನ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ (Aaradhya Bachchan) ರೆಡ್ ಕಾರ್ಪೆಟ್ ಮೇಲೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪ್ರತಿ ವರ್ಷ ತಾಯಿಯ ಜೊತೆ ಕಾನ್​ಗೆ ಭೇಟಿ ನೀಡುತ್ತಿದ್ದ ಆರಾಧ್ಯ, ಈ ಬಾರಿ ಅಧಿಕೃತವಾಗಿ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಲೊರಿಯಲ್ ಪ್ಯಾರಿಸ್‌ನ ವಾರ್ಷಿಕ ‘ಲೈಟ್ಸ್ ಆನ್ ವುಮೆನ್ಸ್ ವರ್ತ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ತಾಯಿ-ಮಗಳ ಜೋಡಿ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಆರಾಧ್ಯ ಬಚ್ಚನ್ ಕೆಂಪು ಬಣ್ಣದ ಗೌನ್ ಧರಿಸಿ ಕಂಗೊಳಿಸಿದರು. ಐಶ್ವರ್ಯಾ ರೈ ಗುಲಾಬಿ ಬಣ್ಣದ ಆಕರ್ಷಕ ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಐಶ್ವರ್ಯಾ ಅವರ ಡ್ರೆಸ್ ಹೂವಿನ ಅಲಂಕಾರದಿಂದ ಕೂಡಿದ್ದು, ಎಂದಿನ ತಮ್ಮ ಸಿಗ್ನೇಚರ್ ರೆಡ್ ಲಿಪ್ಸ್ಟಿಕ್ ಬದಲಿಗೆ ಈ ಬಾರಿ ಲೈಟ್ ಮೇಕ್ಅಪ್ ಲುಕ್‌ನಲ್ಲಿ ಎಲ್ಲರ ಮನ ಗೆದ್ದರು. ಸದ್ಯ ಇವರಿಬ್ಬರ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಈ ಮೊದಲು ಐಶ್ವರ್ಯಾ ರೈ ಪ್ರಸಿದ್ಧ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ‘ಅಬಿಸ್ ಬ್ಲೂ’ ಬಣ್ಣದ ಕೌತುಕದ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಬೆಳಕಿಗೆ ತಕ್ಕಂತೆ ಬಣ್ಣ ಬದಲಾಯಿಸುವ ಈ ವಿಶಿಷ್ಟ ಕಾಸ್ಮಿಕ್ ಡ್ರೆಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸೌಂಡ್ ಮಾಡಿತ್ತು.

ಇದನ್ನೂ ಓದಿ: ಮಗಳು ಆರಾಧ್ಯಾ ಜೊತೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ

ಈ ವರ್ಷ ಕಾನ್ ಸಿನಿಮೋತ್ಸವದಲ್ಲಿ ಐಶ್ವರ್ಯಾ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಳ್ಳದಿದ್ದಾಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ, ವರದಿಗಳ ಪ್ರಕಾರ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದ್ದು, ಈಗ ಮಗಳ ಜೊತೆ ಗ್ರಾಂಡ್ ಎಂಟ್ರಿ ಕೊಡುವ ಮೂಲಕ ತಮ್ಮ ಗ್ಲೋಬಲ್ ಕ್ರೇಜ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ಲಾಸೆನ್ ಕ್ಲಾಸ್​ಗೆ ಹಳೆಯ ದಾಖಲೆ ಧೂಳೀಪಟ

Source link

World Turtle Day 2026: ಮನುಷ್ಯದ ಸ್ವಾರ್ಥದಿಂದ ಅಳಿವಿನಂಚಿಗೆ ತಲುಪಿವೆ ಆಮೆಗಳ ಸಂತತಿ – Kannada News | World Turtle Day 2026: Why is it important to celebrate World Turtle Day? Here is the information

ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವ ವೈವಿಧ್ಯವೂ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿವೆ. ಅದೇ ರೀತಿ ಸರೀಸೃಪ ಗುಂಪಿಗೆ ಸೇರಿದ ಸಾದು ಜೀವಿಯಾದ ಆಮೆಗಳು (Turtle) ಸಹ ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹೌದು ಆಲಿವ್‌ ರಿಡ್ಲಿ, ಲೆದರ್‌ ಬ್ಯಾಕ್‌ ಮುಂತಾದ ಸಮುದ್ರ ಆಮೆಗಳು ಕರಾವಳಿ ಪ್ರದೇಶಗಳನ್ನು ಸ್ವಚ್ಛಗೊಳಿಸವಲ್ಲಿ ಮತ್ತು ಸತ್ತ ಮೀನುಗಳನ್ನು ಕೊಳೆತ ಸಸ್ಯರಾಶಿಗಳನ್ನು ತಿನ್ನುವ ಮೂಲಕ ಸಮುದ್ರವನ್ನು ಸ್ವಚ್ಛವಾಗಿಡುವಲ್ಲಿ  ಮತ್ತು ಭೂಮಿಯ ಮೇಲೆ ವಾಸಿಸುವ ಆಮೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇಂದು ಅಕ್ರಮ ಬೇಟೆ, ಆವಸಸ್ಥಾನದ ನಷ್ಟ, ಹವಾಮಾನ ಬದಲಾವಣೆ ಇವೆಲ್ಲದರ ಕಾರಣದಿಂದಾಗಿ ಅವೆಷ್ಟೋ ಜಾತಿಯ ಆಮೆಗಳು ಅಳಿವಿನಂಚಿಗೆ ತಲುಪಿವೆ, ಅವುಗಳ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ. ಹಾಗಾಗಿ ಆಮೆಗಳನ್ನು ಸಂರಕ್ಷಿಸಲು, ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆಮೆ ದಿನದ ಇತಿಹಾಸವೇನು?

ವಿಶ್ವ ಆಮೆ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಅಮೆರಿಕನ್‌ ಟಾರ್ಟಾಯಿಸ್‌ ರೆಸ್ಕ್ಯೂ ಎಂಬ ಲಾಭರಹಿತ ಸಂಸ್ಥೆ ಪ್ರಾರಂಭಿಸಿತು.  ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಆಮೆಗಳನ್ನು ರಕ್ಷಿಸುವ ಅವುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಿ ಕೊಡುವ ಉದ್ದೇಶವನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು.

ವಿಜ್ಞಾನಿಗಳು ಹೇಳುವ ಪ್ರಕಾರ ಅಮೆಗಳು ಈ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪ್ರಾಣಿಗಳಾಗಿವೆ. ಆಮೆಗಳು ಭೂಮಿಯ ಮೇಲೆ ಸುಮಾರು 220 ಮಿಲಿಯನ್‌ ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಂದರೆ ಡೈನೋಸಾರ್‌ ಭೂಮಿಯ ಮೇಲೆ ಬರುವುದಕ್ಕೂ ಮುಂಚೆಯೇ ಇವುಗಳ ಅಸ್ತಿತ್ವವಿತ್ತು. ಆದರೆ ಇಂದು ಇವುಗಳ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗಿದೆ. ಹಾಗಾಗಿ ಇವುಗಳ ರಕ್ಷಣೆಯ ಉದ್ದೇಶದಿಂದ ಈ ಲಾಭರಹಿತ ಸಂಸ್ಥೆ ಈ ವಿಶೇಷ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಆಮೆ ದಿನದ ಮಹತ್ವವೇನು?

  • ಜಗತ್ತಿನಲ್ಲಿ 300 ಜಾತಿಯ ಆಮೆಗಳಿದ್ದು, ಅವುಗಳಲ್ಲಿ 129 ಜಾತಿಯ ಆಮೆಗಳು ಅಳಿವಿನಂಚಿನಲ್ಲಿವೆ. ಹಾಗಾಗಿ ಇವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.
  • ಆಮೆಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು, ಅಕ್ರಮ ವ್ಯಾಪಾರ, ಬೇಟೆಯಾಡುವಿಕೆಯನ್ನು ತಡೆಗಟ್ಟುವುದು ಈ ದಿನದ ಉದ್ದೇಶವಾಗಿದೆ.
  • ಈ ವಿಶೇಷ ದಿನವು ಆಮೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ.
  • ಈ ದಿನ ಜನರಿಗೆ ಶಿಕ್ಷಣ ನೀಡುವ, ಆಮೆಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಡಲ ತೀರಗಳನ್ನು ಸ್ವಚ್ಛಗೊಳಿಸುವುದು, ಆಮೆಗಳ ಆವಾಸಸ್ಥಾನಗಳನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಕಾರ್ಯಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

ಆಮೆಗಳ ಕುರಿತ ಅದ್ಭುತ ಸಂಗತಿಗಳು:

  • ಆಮೆಗಳು ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಿಗಳಲ್ಲಿ ಒಂದಾಗಿದ್ದು, ಸುಮಾರು 220 ದಶಲಕ್ಷ ವರ್ಷಗಳಿಂದ ಅಸ್ತಿತ್ವದಲ್ಲಿವೆ.
  • ಆಮೆಗಳು  ಭೂಮಿಯ ಮೇಲಿನ ಅತಿ ಹೆಚ್ಚು ಕಾಲ ಬದುಕುವ ಜೀವಿಗಳಲ್ಲಿ ಒಂದಾಗಿದೆ. ಈ ಸರೀಸೃಪವು 150 ವರ್ಷಗಳಿಗೂ ಹೆಚ್ಚು ಕಾಲ ಬದುಕುತ್ತದೆ ಎಂದು ನಂಬಲಾಗಿದೆ.
  • ಕೆಲವು ಜಾತಿಯ ಆಮೆಗಳು ನೀರಿನ ಅಡಿಯಲ್ಲಿ 6 ಗಂಟೆಗಳವರೆಗೆ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲವು.
  • ಸಮುದ್ರ ಆಮೆಗಳು ವಿಶೇಷವಾಗಿ ಸಂತಾನೋತ್ಪತ್ತಿ ಅವಧಿಯಲ್ಲಿ 10,000 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು.
  • ಆಮೆಗಳಿಗೆ ಹಲ್ಲುಗಳಿಲ್ಲ,ಅವು ಆಹಾರವನ್ನು ಜಗಿಯಲು ತಮ್ಮ ಕೊಕ್ಕಿನಂತಹ ಬಾಯಿಗಳನ್ನು ಬಳಸುತ್ತವೆ.
  • ಪ್ರಪಂಚದಾದ್ಯಂತ 300 ಕ್ಕೂ ಹೆಚ್ಚು ಜಾತಿಯ ಆಮೆಗಳಿವೆ. ಆದಾಗ್ಯೂ, ಇವುಗಳಲ್ಲಿ 129 ಜಾತಿಗಳು ಅಳಿವಿನಂಚಿನಲ್ಲಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶ: ವೈರಲ್ ಆಗಿರುವ ‘ಡೊನಾಲ್ಡ್​ ಟ್ರಂಪ್’ ಎಮ್ಮೆಯನ್ನು ಬಲಿಕೊಡಲು ಮುಂದಾದ ಮಾಲೀಕ – Kannada News | Viral Donald Trump Albino Buffalo in Bangladesh Sacrificed for Eid al Adha

ಢಾಕಾ, ಮೇ 23: ಬಾಂಗ್ಲಾದೇಶ(Bangladesh)ದ ರಾಜಧಾನಿ ಢಾಕಾ ಬಳಿಯ ನಾರಾಯಣಗಂಜ್‌ನ ಜಮೀನೊಂದರಲ್ಲಿ ಸಾಕಲಾಗಿರುವ,  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿರುವ ಅಪರೂಪದ ಡೊನಾಲ್ಡ್ ಟ್ರಂಪ್(Donald Trump) ಕೇಶ ವಿನ್ಯಾಸವನ್ನು ಹೋಲುವ ಎಮ್ಮೆಯನ್ನು ಮುಂಬರುವ ಈದ್ ಅಲ್-ಅಧಾ ಹಬ್ಬದಂದು ಬಲಿಕೊಡಲಾಗುತ್ತದೆ. ಈಗಾಗಲೇ ಅದನ್ನು ಮಾರಾಟ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

‘ಡೊನಾಲ್ಡ್ ಟ್ರಂಪ್’ ಎಂಬ ಹೆಸರು ಬಂದಿದ್ದು ಹೇಗೆ?
ಸುಮಾರು 700 ಕೆಜಿ ತೂಕದ, ನಾಲ್ಕು ವರ್ಷದ ಈ ಎಮ್ಮೆ ಮೆಲನಿನ್ ಕೊರತೆಯಿಂದಾಗಿ ಬಿಳಿ ಚರ್ಮವನ್ನು ಹೊಂದಿರುವ ಅತ್ಯಂತ ಅಪರೂಪದ ‘ಆಲ್ಬಿನೋ’ ತಳಿಗೆ ಸೇರಿದ್ದಾಗಿದೆ. ಇದರ ಹಣೆಯ ಮೇಲೆ ಬೀಳುವ ಹೊಂಬಣ್ಣದ ಕೂದಲಿನ ಗೊಂಚಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಕೇಶವಿನ್ಯಾಸವನ್ನು ಹೋಲುತ್ತದೆ. ಈ ವಿಶಿಷ್ಟ ಕೂದಲನ್ನು ಗಮನಿಸಿದ ಮಾಲೀಕ ಜಿಯಾವುದ್ದೀನ್ ಮೃಧಾ ಅವರ ಕಿರಿಯ ಸಹೋದರ, ಇದಕ್ಕೆ ಡೊನಾಲ್ಡ್ ಟ್ರಂಪ್ ಎಂಬ ಅಡ್ಡಹೆಸರನ್ನು ಇಟ್ಟಿದ್ದರು.

ಸೆಲ್ಫಿಗಾಗಿ ಮುಗಿಬಿದ್ದ ಜನಸಮೂಹ
ಕಳೆದ ಕೆಲವು ವಾರಗಳಿಂದ ಈ ಅಪರೂಪದ ಎಮ್ಮೆಯೊಂದಿಗೆ ಸೆಲ್ಫಿ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ದೂರದ ಜಿಲ್ಲೆಗಳಿಂದ ಪ್ರತಿದಿನ ನೂರಾರು ಜನರು ಜಮೀನಿಗೆ ಭೇಟಿ ನೀಡುತ್ತಿದ್ದರು. ಅದರಲ್ಲೂ ಈ ವಿಶಿಷ್ಟ ಪ್ರಾಣಿಯನ್ನು ನೋಡಲು ಮಕ್ಕಳು ಜಮೀನಿಗೆ ಹೋಗುವ ದಾರಿಯಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದರು. ಅತ್ಯಂತ ಸೌಮ್ಯ ಮತ್ತು ಶಾಂತ ಸ್ವಭಾವದ ಈ ಎಮ್ಮೆಯ ಆರೋಗ್ಯಕ್ಕಾಗಿ ದಿನಕ್ಕೆ ನಾಲ್ಕು ಬಾರಿ ಸ್ನಾನ ಹಾಗೂ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರಂತರ ಜನಸಂದಣಿಯ ಒತ್ತಡದಿಂದಾಗಿ ಅದು ತೂಕ ಇಳಿಸಿಕೊಂಡಿದ್ದರಿಂದ, ಕೊನೆಯ ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ

ಜೂನ್ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಈದ್ ಅಲ್-ಅಧಾ ಹಬ್ಬ ನಡೆಯಲಿದ್ದು, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಲಕ್ಷಾಂತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ನಾನು ನನ್ನ ಪ್ರೀತಿಯ ಡೊನಾಲ್ಡ್ ಟ್ರಂಪ್ ಎಮ್ಮೆಯನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ, ಆದರೆ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದೇ ಈದ್ ಹಬ್ಬದ ಮೂಲ ಆಶಯವಾಗಿದೆ ಎಂದು ಮಾಲೀಕ ಜಿಯಾವುದ್ದೀನ್ ಮೃಧಾ ಭಾವುಕರಾಗಿ ನುಡಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಇಂತಹ ವಿಶಿಷ್ಟ ಮತ್ತು ದೈತ್ಯ ಪ್ರಾಣಿಗಳು ಹಬ್ಬದ ಸಮಯದಲ್ಲಿ ವೈರಲ್ ಆಗುವುದು ಹಾಗೂ ಸೆಲೆಬ್ರಿಟಿಗಳ ಹೆಸರು ಪಡೆಯುವುದು ದೊಡ್ಡ ಟ್ರೆಂಡ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹಿಂದಿ ಯಶಸ್ವಿ ಸಿನಿಮಾಗೆ ಲಿಂಕ್

‘ಸು ಫ್ರಮ್ ಸೋ’ ಸಿನಿಮಾ 2025ರ ಯಶಸ್ವಿ ಸಿನಿಮಾಗಳಲ್ಲಿ ಒಂದು. ಕೇವಲ 5 ಕೋಟಿ ರೂಪಾಯಿ ಬಜೆಟ್​​ನಲ್ಲಿ ತಯಾರಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿತು. ಈ ಚಿತ್ರ ಸದ್ದಿಲ್ಲದೆ ಮರಾಠಿಗೆ ರಿಮೇಕ್ ಆಗಿದೆ. ಮರಾಠಿಯಲ್ಲಿ ಈ ಚಿತ್ರಕ್ಕೆ ದೊಡ್ಡ ಹಿಂದಿ ಸಿನಿಮಾದ ಕನೆಕ್ಷನ್ ಕೊಡಲಾಗಿದೆ. ಈ ಟ್ರೇಲರ್​​ಗೆ ಮರಾಠಿ ಭಾಷೆಯಲ್ಲಿ ಮೆಚ್ಚುಗೆ ಸಿಗುತ್ತಿದೆ.

ಕನ್ನಡದಲ್ಲಿ ‘ಸುಲೋಚನ ಫ್ರಮ್ ಸೋಮೇಶ್ವರ’ ಎಂಬ ಟೈಟಲ್​​ನೊಂದಿಗೆ ಸಿನಿಮಾ ರಿಲೀಸ್ ಆಗಿತ್ತು. ಟೈಟಲ್ ಉದ್ದ ಆಗುತ್ತದೆ ಎಂಬ ಕಾರಣಕ್ಕೆ, ‘ಸು ಫ್ರಮ್ ಸೋ’ ಎಂದು ಇಡಲಾಗಿತ್ತು. ಇದನ್ನು ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಎಂದು ಇಡಲಾಗಿದೆ. ಅಂದರೆ ತುಂಬಾಡ್​ನ ಮಂಜುಳ ಎಂದರ್ಥ. ಈ ಟೈಟಲ್ ಇಡೋದಕ್ಕೂ ಒಂದು ಕಾರಣ ಇದೆ ಎನ್ನಲಾಗಿದೆ.

‘ತುಂಬಾಡ್’ ಹೆಸರಿನ ಸಿನಿಮಾ ಬಾಲಿವುಡ್​​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ತುಂಬಾಡ್ ಊರಿಗೆ ಕಾಲ್ಪನಿಕ ಕಥೆಯ ಹಿನ್ನೆಲೆ ಸೇರಿಸಲಾಗಿತ್ತು . ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಕಾರಣದಿಂದಲೇ ತುಂಬಾಡ್ ಹೆಸರನ್ನು ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಾ ಇದೆ.

ಇನ್ನು, ‘ತುಂಬಾಡ್ಚಿ ಮಂಜುಳಾ’ ಚಿತ್ರ ಬಹುತೇಕ ‘ಸು ಫ್ರಮ್ ಸೋ’ ಮಾದರಿಯಲ್ಲೇ ಇದೆ. ಹಳ್ಳಿ ಕಥೆ, ಕಾಮಿಡಿ ಮೊದಲಾದ ವಿಷಯಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಸು ಫ್ರಮ್ ಸೋ’ ಟ್ರೇಲರ್​​ನಲ್ಲಿ ಗುರೂಜಿಯ ದರ್ಶನ ಆಗಿರಲಿಲ್ಲ, ಆದರೆ, ಮರಾಠಿ ಟ್ರೇಲರ್​​ನಲ್ಲಿ ಇದನ್ನು ತೋರಿಸಲಾಗಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಸುಮೇಧ್ ಬತ್ತಳಿಕೆಯಿಂದ ಬಂತು ‘ತುಳಸಿ’; ಹಾಡು ಕಿವಿಗೆ ಇಂಪು

ಮರಾಠಿಯಲ್ಲಿ ಜಿತೇಂದ್ರ ಜೋಶಿ, ಓಂ ಭುಟ್ಕರ್,ಮಾರ್ಕಂಡ್ ಅನಸ್ಪುರೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ವಿವಿಧ್ ಕೊರಗಾಂವ್ಕರ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Source link

Chitradurga: ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ, ಗೊತ್ತಿದ್ರೂ ಈಜಾಟ

ಚಿತ್ರದುರ್ಗ, ಮೇ 23: ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಸಮೀಪದ ಹೊಂಡ ಯುವಕರ ನೆಚ್ಚಿನ ಈಜುವ ತಾಣವಾಗಿದೆ. ಆದರೆ, ಕಳೆದ ಒಂದು ವರ್ಷದಿಂದ ಈ ಹೊಂಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಆತಂಕ ಸೃಷ್ಟಿಸಿದೆ. ಮೊಸಳೆ ಅಪಾಯದ ಬಗ್ಗೆ ಎಚ್ಚರಿಕೆ ಫಲಕಗಳಿದ್ದರೂ ಯುವಕರು ಜೀವದ ಹಂಗು ತೊರೆದು ಈಜಾಡುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮೊಸಳೆ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.

ಈ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದಾರೆ. ಹೊಂಡದಲ್ಲಿ ಮೊಸಳೆ ಇರುವುದು ತಿಳಿದಿದ್ದರೂ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಾಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಕೂಡಲೇ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ನಾಗರಿಕರು ಮತ್ತು ಹಿತರಕ್ಷಣಾ ವೇದಿಕೆಗಳು ಆಗ್ರಹಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ – Kannada News | Koppal Road Accident: TT Vehicle Flips After Tyre Burst, 12 Injured Including Child

ಕೊಪ್ಪಳ, ಮೇ 23: ಜಿಲ್ಲೆಯ ಹೊರವಲಯದ ಚುಕ್ಕನಕಲ್ ಬಳಿ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಟಿಟಿ (ಟೆಂಪೋ ಟ್ರಾವೆಲರ್) ವಾಹನದ ಟೈರ್ ದಿಢೀರ್ ಬ್ಲಾಸ್ಟ್ ಆದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಈ ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ 12 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಇವರಲ್ಲಿ 2 ವರ್ಷದ ಮಗುವಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.  ಗಾಯಾಳುಗಳನ್ನು ತಕ್ಷಣವೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೊಳಗಾದ ವಾಹನವು ಹೈದರಾಬಾದ್‌ನಿಂದ ಗೋವಾ ಕಡೆಗೆ ಪ್ರವಾಸ ಹೊರಟಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Weather Update: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ: ತಂಪಾದ ಉದ್ಯಾನ ನಗರಿ! – Kannada News | Bengaluru Weather Update: May 23 Rain Cools City, Commuters Face Challenges

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆImage Credit source: Pinterest

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು (ಮೇ 23) ಬೆಳ್ಳಂಬೆಳಗ್ಗೆಯೇ ಜಿಟಿ ಜಿಟಿ ಮಳೆಯಾಗಿದೆ. ನಗರದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ವೀಕೆಂಡ್ ಮೂಡ್‌ನಲ್ಲಿದ್ದ ಬೆಂಗಳೂರಿಗರಿಗೆ ತಂಪಾದ ವಾತಾವರಣದ ಅನುಭವ ನೀಡಿದೆ.

ಕಳೆದ ಕೆಲವು ದಿನಗಳಿಂದ ಸಾಧಾರಣ ಬಿಸಿಲಿನಿಂದ ಕೂಡಿದ್ದ ರಾಜಧಾನಿಯಲ್ಲಿ, ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸದ್ಯ ನಗರದ ಪ್ರಮುಖ ಪ್ರದೇಶಗಳಾದ ಶಾಂತಿನಗರ, ರಿಚ್ಮಂಡ್ ಟೌನ್, ಮೆಜೆಸ್ಟಿಕ್, ಕಾರ್ಪೊರೇಷನ್ ಮತ್ತು ಸುತ್ತಮುತ್ತಲಿನ ಹತ್ತಿರದ ಜಾಗಗಳಲ್ಲಿ ಮಳೆಯ ಸಿಂಚನವಾಗುತ್ತಿದೆ.

ವಾಹನ ಸವಾರರ ಪರದಾಟ, ಹಿತಕರ ಹವಾಮಾನ:

ವೀಕೆಂಡ್ ಆರಂಭದ ದಿನವಾದ ಶನಿವಾರ ಮುಂಜಾನೆಯೇ ಮಳೆ ಶುರುವಾಗಿರುವುದರಿಂದ ಕಚೇರಿಗೆ ಹೋಗುವವರು ಮತ್ತು ಅಗತ್ಯ ಕೆಲಸಗಳಿಗಾಗಿ ಹೊರಟಿದ್ದ ವಾಹನ ಸವಾರರು ಕೊಂಚ ಪರದಾಡುವಂತಾಯಿತು. ಆದರೆ, ಸುಡುವ ಬಿಸಿಲಿಗೆ ಬಸವಳಿದಿದ್ದ ಜನರಿಗೆ ಈ ಜಿಟಿ ಜಿಟಿ ಮಳೆ ಸದ್ಯ ನೆಮ್ಮದಿ ತಂದಿದ್ದು, ನಗರದಾದ್ಯಂತ ಹಿತಕರ ಹಾಗೂ ತಂಪಾದ ಹವಾಮಾನ ನಿರ್ಮಾಣವಾಗಿದೆ.

ಮತ್ತಷ್ಟು ಓದಿ: Karnataka Weather Forecast: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ, ಎಲ್ಲೆಲ್ಲಿ?

ಮುಂದಿನ ಕೆಲವು ಗಂಟೆಗಳ ಕಾಲ ನಗರದ ಹಲವೆಡೆ ಇದೇ ರೀತಿಯ ಸಾಧಾರಣ ಅಥವಾ ಜಿಟಿ ಜಿಟಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:12 am, Sat, 23 May 26

Source link

Rajat Patidar: ಗೆಲ್ಲಬೇಕಿತ್ತು, ಆದರೆ ನಮ್ಮ ಸೋಲಿಗೆ ಇದುವೇ ಕಾರಣ! – Kannada News | Rajat patidar post match interview After RCB vs SRH Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್​ಆರ್​​ಹೆಚ್​ 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 200 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್​ಸಿಬಿ ತಂಡ 55 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಎದುರಾಳಿ ತಂಡದ ಬ್ಯಾಟಿಂಗ್ ಅಬ್ಬರ ಮತ್ತು ಶಿಸ್ತುಬದ್ಧ ಬೌಲಿಂಗ್ ದಾಳಿಯೇ ನಮ್ಮ ಸೋಲಿಗೆ ಮುಖ್ಯ ಕಾರಣ ಎಂದು  ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಪಂದ್ಯದ ಗತಿಯನ್ನು ಬದಲಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಬೃಹತ್ ಮೊತ್ತ: ಸ್ಲೋ ಬಾಲ್!

ಎದುರಾಳಿ ತಂಡದ ಮೊದಲ ಐದು ಜನ ಬ್ಯಾಟರ್‌ಗಳು ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಕಲೆಹಾಕಿದ 255 ರನ್‌ಗಳ ಬೃಹತ್ ಮೊತ್ತವೇ ಪಂದ್ಯದ ಫಲಿತಾಂಶವನ್ನು ಬಹುಪಾಲು ನಿರ್ಧರಿಸಿತು ಎಂದು ಪಾಟೀದಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ

ಹೈದರಾಬಾದ್ ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೂ, ಎದುರಾಳಿ ಬೌಲರ್‌ಗಳು ತಮ್ಮ ಯೋಜನೆಗಳನ್ನು ಅಚ್ಚುಕಟ್ಟಾಗಿ ಜಾರಿಗೆ ತಂದರು. ಪಿಚ್‌ನಲ್ಲಿ ಸ್ಲೋ ಬೌನ್ಸರ್‌ಗಳು ಕೊಂಚ ಗ್ರಿಪ್ ಆಗುತ್ತಿದ್ದವು. ಇದನ್ನು ಸರಿಯಾಗಿ ಬಳಸಿಕೊಂಡ ಎದುರಾಳಿ ಪಡೆಯ ಐದೂ ಜನ ಬೌಲರ್‌ಗಳು ನಿರಂತರವಾಗಿ ಸ್ಲೋ ಬೌನ್ಸರ್ ಮತ್ತು ಯಾರ್ಕರ್‌ಗಳನ್ನು ಎಸೆಯುವ ಮೂಲಕ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇಂತಹ ಎಸೆತಗಳು ಎಸ್​ಆರ್​ಹೆಚ್ ಪಾಲಿಗೆ ಪ್ಲಸ್ ಪಾಯಿಂಟ್ ಆಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಗೆಲ್ಲಲು ಸಾಧ್ಯವಾಗಿಲ್ಲ!

ಸಾಮಾನ್ಯವಾಗಿ ಪಿಚ್ ಸಂಪೂರ್ಣವಾಗಿ ನಿಧಾನಗತಿಯಾಗಿ ಬದಲಾಗದಿದ್ದರೂ, ಬೌಲರ್‌ಗಳು ಪಿಚ್‌ನ ಮೇಲ್ಮೈಯನ್ನು ಬಳಸಿಕೊಂಡು ಸ್ಲೋ ಎಸೆತಗಳನ್ನು ಹಾಕಿದಾಗ ರನ್ ಗಳಿಸುವುದು ಬ್ಯಾಟರ್‌ಗಳಿಗೆ ತೀವ್ರ ಕಷ್ಟಕರವಾಗಿ ಪರಿಣಮಿಸಿತು.

ನಮ್ಮ ಮೊದಲ ಆದ್ಯತೆ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನದಲ್ಲೇ ಉಳಿಯುವುದಾಗಿತ್ತು. ಆದರೆ ಎದುರಾಳಿಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ನಮಗೆ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ರಜತ್ ಪಾಟೀದಾರ್ ಎಂದು ಹೇಳಿದ್ದಾರೆ.


ಈ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

Source link

Adhika Masa Vastu: ಮನೆಯಲ್ಲಿ ಈ ವಸ್ತುಗಳಿದ್ದರೆ ತಕ್ಷಣವೇ ತೆಗೆದುಹಾಕಿ, ಇಲ್ಲದಿದ್ದರೆ ದಾರಿದ್ರ್ಯ ಬೆನ್ನತ್ತಬಹುದು! – Kannada News | Adhika Masa Vastu: Remove These 4 Items for Positive Energy and Prosperity in Your Home

ಸನಾತನ ಧರ್ಮದಲ್ಲಿ ಅಧಿಕ ಮಾಸಕ್ಕೆ (ಪುರುಷೋತ್ತಮ ಮಾಸ) ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಈ ಪವಿತ್ರ ಮಾಸದ ಅಧಿಪತಿ ಶ್ರೀಮಹಾವಿಷ್ಣು. ಹಾಗಾಗಿಯೇ ಇದನ್ನು “ಪುರುಷೋತ್ತಮ ಮಾಸ” ಎಂದೂ ಕರೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ಅಧಿಕ ಮಾಸದಲ್ಲಿ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು, ಸಕಾರಾತ್ಮಕ ಶಕ್ತಿಯನ್ನು (Positive Energy) ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ.

ಈ ಅವಧಿಯಲ್ಲಿ ಮನೆಯಲ್ಲಿರುವ ಕೆಲವು ವಸ್ತುಗಳು ನಕಾರಾತ್ಮಕ ಪ್ರಭಾವವನ್ನು ಬೀರುತ್ತವೆ ಮತ್ತು ದುರಾದೃಷ್ಟವನ್ನು ತರುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಅಧಿಕ ಮಾಸ ಮುಗಿಯುವ ಮುನ್ನವೇ ಈ ಕೆಳಗಿನ ನಾಲ್ಕು ವಸ್ತುಗಳನ್ನು ಮನೆಯಿಂದ ಹೊರಹಾಕಲು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಆ ವಸ್ತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಮುರಿದ ದೇವರ ವಿಗ್ರಹಗಳು:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮುರಿದ ದೇವತಾ ವಿಗ್ರಹಗಳು ಮತ್ತು ಹರಿದುಹೋಗಿರುವ ದೇವರ ಫೋಟೋ ಇಡುವುದು ಅಶುಭ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ಅಧಿಕ ಮಾಸದ ಈ ಪವಿತ್ರ ಸಮಯದಲ್ಲಿ ಅಂತಹ ವಿಗ್ರಹಗಳನ್ನು ಗೌರವಪೂರ್ವಕವಾಗಿ ಯಾವುದೇ ನದಿ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡುವುದು ಉತ್ತಮ.

ಒಣಗಿಹೋದ ಗಿಡ-ಮರಗಳು:

ಮನೆಯ ಸುತ್ತಮುತ್ತ ಒಣಗಿದ ಗಿಡಗಳು ಇರುವುದು ನಿರಾಶೆ ಮತ್ತು ನಕಾರಾತ್ಮಕತೆಯ ಸಂಕೇತವಾಗಿದೆ. ಇವು ಕುಟುಂಬದ ಸದಸ್ಯರ ಮಾನಸಿಕ ಶಾಂತಿ ಮತ್ತು ಪ್ರಗತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದ್ದರಿಂದ ತಕ್ಷಣವೇ ಒಣಗಿದ ಗಿಡಗಳನ್ನು ತೆಗೆದುಹಾಕಿ, ಅವುಗಳ ಜಾಗದಲ್ಲಿ ಹಸಿರಾದ ಹೊಸ ಗಿಡಗಳನ್ನು ನೆಡಿ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಒಡೆದ ಗಾಜಿನ ವಸ್ತುಗಳು:

ಮನೆಯಲ್ಲಿ ಒಡೆದ ಗಾಜು, ಬಿರುಕು ಬಿಟ್ಟ ಕನ್ನಡಿಗಳು ಅಥವಾ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ದೊಡ್ಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇವು ಕುಟುಂಬದಲ್ಲಿ ವಿನಾಕಾರಣ ಉದ್ವೇಗ, ಜಗಳ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಇಂತಹ ವಸ್ತುಗಳನ್ನು ತಕ್ಷಣವೇ ಮನೆಯಿಂದ ಹೊರಹಾಕುವುದು ಶ್ರೇಯಸ್ಕರ.

ನಿಂತುಹೋದ ಅಥವಾ ಹಾಳಾದ ಗಡಿಯಾರಗಳು:

ಗಡಿಯಾರವನ್ನು ಸಮಯ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಂತುಹೋದ ಗಡಿಯಾರಗಳು ಮನೆಯಲ್ಲಿ ನಿಷ್ಕ್ರಿಯ ಶಕ್ತಿಯನ್ನು (Stagnant Energy) ಸೂಚಿಸುತ್ತವೆ. ಇವು ಕುಟುಂಬದ ಸದಸ್ಯರ ಉದ್ಯೋಗ, ವ್ಯಾಪಾರ ಮತ್ತು ಜೀವನದ ಬೆಳವಣಿಗೆಗೆ ಅಡ್ಡಿಪಡಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಕೆಟ್ಟುಹೋದ ಗಡಿಯಾರಗಳನ್ನು ತಕ್ಷಣವೇ ದುರಸ್ತಿ ಮಾಡಿ ಅಥವಾ ಮನೆಯಿಂದ ತೆಗೆದುಹಾಕಿ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ವಾಸ್ತು, ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version