ಕೋಲ್ಕತ್ತಾ, ಮೇ 23: ಬಿಜೆಪಿ ಅಧಿಕಾರದ ಗದ್ದುಗೆ ಏರಿರುವ ರಾಜ್ಯಗಳಲ್ಲಿ ಮೊದಲಿಗೆ ಸರ್ಕಾರ ಮಾಡುವ ಕೆಲಸವೇ ಗೋ ಹತ್ಯೆ(Cattle Slaughter) ನಿಷೇಧ. ಯಾರ ಒಪ್ಪಿಗೆ ಇರಲಿ ಬಿಡಲಿ ಜಾನುವಾರು ವಧೆಯನ್ನು ತಡೆಯುವುದೇ ಅವರ ಪ್ರಮುಖ ಗುರಿಯಾಗಿದೆ. ಹಾಗೆಯೇ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಜಾನುವಾರು ವಧೆ ನಿಷೇಧವನ್ನು ಜಾರಿಗೆ ತಂದಿದ್ದಾರೆ. ಬೇರೆ ರಾಜ್ಯಗಳಲ್ಲಿ ಮುಸ್ಲಿಮರು ಇದಕ್ಕೆ ಆಕ್ಷೇಪ ಎತ್ತಿದ್ದರೂ ಕೂಡ, ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಮುಸ್ಲಿಂ ಸಂಘಟನೆಗಳು ಸೇರಿದಂತೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ತಮ್ಮ ಹಬ್ಬಗಳಲ್ಲಿ ಗೋ ಹತ್ಯೆ ಮಾಡುವುದಿಲ್ಲ ಎಂದು ಹೇಳಿವೆ. ಆದರೆ ಅಚ್ಚರಿ ಎಂಬಂತೆ ಹಿಂದೂಗಳು ಗೋ ಹತ್ಯೆ ನಿಷೇಧದ ವಿರುದ್ಧ ಬೀದಿಗಿಳಿದಿದ್ದಾರೆ ಇದಕ್ಕೆ ಕಾರಣ ಇಲ್ಲಿದೆ.
ಪಶ್ಚಿಮ ಬಂಗಾಳದ ಹೊಸ ಸರ್ಕಾರವು ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳ ವಧೆಯನ್ನು ನಿಷೇಧಿಸಿ, 1950ರ ಕಾನೂನು ಮತ್ತು ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಮುಂಬರುವ ಬಕ್ರೀದ್ ಹಬ್ಬದ ಮುನ್ನವೇ ಜಾರಿಯಾಗಿರುವ ಈ ಕಠಿಣ ನಿಯಮಗಳಿಗೆ ತಡೆ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿದೆ.
ಮೇ 13ರಂದು ಹೊರಡಿಸಲಾದ ಹೊಸ ಸರ್ಕಾರಿ ಆದೇಶದ ಪ್ರಕಾರ, ಯಾವುದೇ ಎತ್ತು, ಹಸು ಅಥವಾ ಎಮ್ಮೆಯನ್ನು ವಧೆ ಮಾಡಬೇಕಾದರೆ, ಅದು ವಧೆಗೆ ಸೂಕ್ತವಾಗಿದೆ ಎಂದು ಪಶುವೈದ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ. ಹಬ್ಬದ ಸಂದರ್ಭದಲ್ಲಿ ಈ ನಿಯಮ ಸಡಿಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದ್ದು, ಸರ್ಕಾರದ ನಿರ್ಧಾರ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.
ಮತ್ತಷ್ಟು ಓದಿ: ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ತೀರ್ಮಾನ ತೆಗೆದುಕೊಂಡಿಲ್ಲ, ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದೇವೆ: ಸಿದ್ದರಾಮಯ್ಯ
ವ್ಯಾಪಾರಿಗಳು ಮತ್ತು ರೈತರ ಆಕ್ಷೇಪಕ್ಕೆ ಅಸಲಿ ಕಾರಣವೇನು?
ಈ ಕಾಯ್ದೆಯು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಜನರ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಬಂಗಾಳದಾದ್ಯಂತ ಇರುವ ಜಾನುವಾರು ಮಾರುಕಟ್ಟೆಗಳು ಈಗ ಸಂಪೂರ್ಣವಾಗಿ ಕಳೆಗುಂದಿವೆ. ಹಬ್ಬದ ಸಮಯದಲ್ಲಿ ಹಸು ಹಾಗೂ ಎಮ್ಮೆಗಳನ್ನು ಮಾರಾಟ ಮಾಡಿ ವರ್ಷದ ಬಹುದೊಡ್ಡ ಆದಾಯ ಗಳಿಸುತ್ತಿದ್ದ ಹೈನುಗಾರರು ಮತ್ತು ವ್ಯಾಪಾರಿಗಳಿಗೆ ಈ ಹೊಸ ನಿಯಮ ತೀವ್ರ ನಿರಾಶೆ ಮೂಡಿಸಿದೆ.
ಪ್ರತಿದಿನ ಸುಮಾರು 2,000 ಹಸುಗಳನ್ನು ಮಾರಾಟ ಮಾಡುತ್ತಿದ್ದ ಪ್ರಸಿದ್ಧ ‘ಪೋಲೆರ್ಹತ್ ಗೋರು ಹಾತ್’ ಮಾರುಕಟ್ಟೆಯಲ್ಲಿ ಈಗ ಹಬ್ಬದ ಸನಿಹದಲ್ಲೂ ಕೇವಲ ಒಂದೆರಡು ಡಜನ್ ಜಾನುವಾರುಗಳು ಮಾತ್ರ ಕಾಣ ಸಿಗುತ್ತಿವೆ. ಜಾನುವಾರು ವ್ಯಾಪಾರ ಹಾಗೂ ಮಾಂಸದ ಉದ್ಯಮವನ್ನು ನಂಬಿಕೊಂಡಿರುವ ಸಾಗಣೆದಾರರು, ಚರ್ಮದ ವ್ಯಾಪಾರಿಗಳು ಮತ್ತು ಕಸಾಯಿಖಾನೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಹೀಗಾಗಿ, ಗ್ರಾಮೀಣ ಭಾಗದಲ್ಲಿ ವಯಸ್ಸಾದ ಜಾನುವಾರುಗಳನ್ನು ಸಾಕುವುದು ಹೊರೆಯಾಗುವುದರಿಂದ ಮತ್ತು ಹಬ್ಬದ ವ್ಯಾಪಾರಕ್ಕೆ ಕುತ್ತು ಬಂದಿರುವುದರಿಂದ ಸ್ಥಳೀಯ ರೈತರು ಮತ್ತು ವ್ಯಾಪಾರಿ ವಲಯದಿಂದ ಈ ನಿಯಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜಾನುವಾರುಗಳ ವಧೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1950 ರ ಕಾನೂನು ಮತ್ತು 2018 ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
ಹೊಸ ನಿಯಮದಲ್ಲೇನಿದೆ?
ಮೇ 13 ರಂದು ಹೊರಡಿಸಲಾದ ಹೊಸ ಸಾರ್ವಜನಿಕ ಪ್ರಕಟಣೆಯ ಪ್ರಕಾರ, ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ. ಅಷ್ಟೇ ಅಲ್ಲದೆ, ಎತ್ತು, ಹೋರಿ, ಹಸು, ಕರು ಮತ್ತು ಎಮ್ಮೆಗಳನ್ನು ವಧೆ ಮಾಡಬೇಕಾದರೆ ಅವು ವಧೆಗೆ ಯೋಗ್ಯವಾಗಿವೆ ಎಂದು ಪಶುವೈದ್ಯರು ಹಾಗೂ ಪುರಸಭೆಯ ಅಧ್ಯಕ್ಷರು ಅಥವಾ ಪಂಚಾಯತ್ ಮುಖ್ಯಸ್ಥರು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯಗೊಳಿಸಲಾಗಿದೆ. ಈ ರೀತಿ ಪ್ರಮಾಣೀಕರಿಸಿದ ಪ್ರಾಣಿಗಳನ್ನು ಸಹ ಕೇವಲ ಸರ್ಕಾರ ಅನುಮೋದಿಸಿದ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶ ನೀಡಲಾಗಿದೆ.
ಈದ್ ಅಲ್-ಅಧಾ (ಬಕ್ರೀದ್) ಹಬ್ಬದ ಸಂದರ್ಭದಲ್ಲಿ ಜಾನುವಾರು ವಧೆಯನ್ನು ನಿರ್ಬಂಧಿಸುವ ಸರ್ಕಾರದ ಈ ಅಧಿಸೂಚನೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಗಳನ್ನು ವಜಾಗೊಳಿಸಿದೆ.
ಸರ್ಕಾರದ ಮೇ 13 ರ ಅಧಿಸೂಚನೆಯು 2018 ರಲ್ಲಿ ನ್ಯಾಯಾಲಯವೇ ನೀಡಿದ್ದ ನಿರ್ದೇಶನಗಳ ಅನ್ವಯ ಇರುವುದರಿಂದ, ಇದರಲ್ಲಿ ಹಸ್ತಕ್ಷೇಪ ಮಾಡಲು ಅಥವಾ ತಡೆ ನೀಡಲು ಯಾವುದೇ ಆಧಾರಗಳಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ