Rituals Guide: ಜ್ಯೋತಿರ್ಭೀಮೇಶ್ವರ ವ್ರತ; ಆಷಾಢ ಅಮಾವಾಸ್ಯೆಯ ಮಹತ್ವ ಮತ್ತು ಶ್ರಾವಣ ಸಂಕ್ರಮಣ – Kannada News | Ashadha Amavasya: Bhimana Amavasya, Shravana Masa Transition and Rituals Guide

ಆಧ್ಯಾತ್ಮಿಕವಾಗಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವೆಂದು ಪರಿಗಣಿಸಲಾಗುವ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ಇಂದಿನಿಂದ ಶುರುವಾಗಿದೆ. ನಾಳೆಯಿಂದ ಧಾರ್ಮಿಕ ಚಟುವಟಿಕೆಗಳ ತವರೂರಾದ ಪವಿತ್ರ ಶ್ರಾವಣ ಮಾಸವು ಆರಂಭವಾಗಲಿದ್ದು, ಈ ಸಂಕ್ರಮಣ ಕಾಲವು ಜಪ, ತಪ, ಧ್ಯಾನ ಹಾಗೂ ದಾನ-ಧರ್ಮಗಳಿಗೆ ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಇಂದಿನ ಅಮಾವಾಸ್ಯೆ ತಿಥಿಯು ರಾತ್ರಿ 11:06 ರವರೆಗೆ ಇರಲಿದ್ದು, ಈ ಸಮಯದಲ್ಲಿ ಕೈಗೊಳ್ಳುವ ಪ್ರತಿಯೊಂದು ಶುಭ ಕಾರ್ಯಗಳು ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುತ್ತವೆ.

ಭೀಮನ ಅಮಾವಾಸ್ಯೆ ಮತ್ತು ಜ್ಯೋತಿರ್ಭೀಮೇಶ್ವರ ವ್ರತಾಚರಣೆ:

ಇಂದಿನ ದಿನವನ್ನು ನಾಡಿನಾದ್ಯಂತ ‘ಭೀಮನ ಅಮಾವಾಸ್ಯೆ’ ಎಂದೂ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಸೌಭಾಗ್ಯವತಿಯರು ಮತ್ತು ಕನ್ಯೆಯರು ತಮ್ಮ ಪತಿ ಹಾಗೂ ಕುಟುಂಬದ ದೀರ್ಘಾಯುಷ್ಯ, ಆರೋಗ್ಯ ಮತ್ತು ಶ್ರೇಯಸ್ಸಿಗಾಗಿ ಜ್ಯೋತಿರ್ಭೀಮೇಶ್ವರ ವ್ರತ ಹಾಗೂ ಗೌರಿ ಪೂಜೆಯನ್ನು ನೆರವೇರಿಸುತ್ತಾರೆ. ಪತಿದೇವರ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಕೌಟುಂಬಿಕ ಸೌಹಾರ್ದತೆ ಮತ್ತು ಸೌಭಾಗ್ಯವನ್ನು ವೃದ್ಧಿಸಿಕೊಳ್ಳುವ ಸುಂದರ ಸಂಪ್ರದಾಯ ಈ ದಿನದ ವಿಶೇಷವಾಗಿದೆ.

ಸೂರ್ಯ ಗ್ರಹಣ ಮತ್ತು ಅದರ ಧಾರ್ಮಿಕ ನಿಯಮಗಳು:

ಖಗೋಳಶಾಸ್ತ್ರದ ಪ್ರಕಾರ ಇಂದು ಸೂರ್ಯ ಗ್ರಹಣವು ಸಂಭವಿಸುತ್ತಿದೆಯಾದರೂ, ಈ ಗ್ರಹಣವು ಭಾರತದಲ್ಲಿ ಎಲ್ಲೂ ಗೋಚರಿಸುವುದಿಲ್ಲ. ಗ್ರಹಣವು ಗೋಚರವಾಗದ ಕಾರಣ ಧಾರ್ಮಿಕವಾಗಿ ಯಾವುದೇ ಗ್ರಹಣ ಸೂತಕ, ಪೂಜಾ ನಿಷೇಧ ಅಥವಾ ವಿಶೇಷ ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿರುವುದಿಲ್ಲ ಎಂದು ಜ್ಯೋತಿಷ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಹಾಗೂ ಭಕ್ತಾದಿಗಳು ಯಾವುದೇ ಆತಂಕವಿಲ್ಲದೆ ತಮ್ಮ ನಿತ್ಯದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಬಹುದು.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ವಿಶೇಷ ದೇವತಾರಾಧನೆ ಮತ್ತು ಇಂದಿನ ಗ್ರಹಚಾರ ಫಲ:

ಇಂದು ಬುಧವಾರವಾಗಿರುವುದರಿಂದ ವಿಘ್ನನಿವಾರಕ ಶ್ರೀ ಗಣಪತಿ, ಜಗತ್ಪಾಲಕ ಶ್ರೀ ಮಹಾವಿಷ್ಣು ಹಾಗೂ ಕಾಲಭೈರವ ಸ್ವಾಮಿಯ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಸೂರ್ಯನು ಪ್ರಸ್ತುತ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಚಂದ್ರನು ಕರ್ಕಾಟಕ ರಾಶಿಯ ಶನಿಯ ನಕ್ಷತ್ರವಾದ ‘ಪುಷ್ಯ ನಕ್ಷತ್ರ’ದಲ್ಲಿ ಸಂಚಾರ ಮಾಡುತ್ತಿದ್ದಾನೆ. ಪರಾಭವ ನಾಮ ಸಂವತ್ಸರದ ಈ ಪವಿತ್ರ ದಿನದಂದು ದೇವರ ನಾಮಸ್ಮರಣೆ ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಕಲ ಮಂಗಲಗಳನ್ನು ತರಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:25 am, Wed, 12 August 26

Source link

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ಪ್ರಜ್ವಲ್​​ ರೇವಣ್ಣ ಬ್ಯಾರಕ್​​ ಸೇರಿ ವಿವಿಧೆಡೆ ಒಟ್ಟು 10ಕ್ಕೂ ಹೆಚ್ಚು ಮೊಬೈಲ್​​ಗಳು​​ ಪತ್ತೆ – Kannada News | CCB Raids Parappana Agrahara Jail: 10+ Mobile Phones Seized, Including from Prajwal Re

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಆಗಸ್ಟ್​​ 12: ಕೈದಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ಈ ಹಿಂದೆ ದೇಶಾದ್ಯಂತ ಸುದ್ದಿಯಾಗಿದ್ದ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಜೈಲಿನಲ್ಲಿ ಇನ್ನೂ ಆ ಪದ್ಧತಿ ಮುಂದುವರಿದಿದ್ಯಾ ಎಂಬ ಅನುಮಾನ ಹೆಚ್ಚಿದೆ. ಜೈಲಿನ ಮೇಲೆ ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸಿಸಿಬಿ ದಾಳಿ ನಡೆಸಿದ್ದು, ಈ ವೇಳೆ 10ಕ್ಕೂ ಹೆಚ್ಚು ಮೊಬೈಲ್​​​ಗಳು ಪತ್ತೆಯಾಗಿವೆ. 90ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ಪ್ರತಿ ಬ್ಯಾರಕ್​​​ನಲ್ಲಿ ನಿನ್ನೆ (ಆಗಸ್ಟ್​​​ 11) ರಾತ್ರಿ 8ರ ವರೆಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಆ್ಯಂಡ್ರಾಯ್ಡ್ ಮೊಬೈಲ್ ಬಳಸುತ್ತಿರುವ ಪ್ರಜ್ವಲ್ ?

ಪ್ರತಿ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆ ಹಿನ್ನೆಲೆ ಜೈಲಿನಲ್ಲಿರುವ ರೌಡಿಗಳು ಹೊರಗಿನ ರೌಡಿಗಳ ಜೊತೆ ಸಂಪರ್ಕದಲ್ಲಿರುವ ಮಾಹಿತಿ ಮತ್ತು ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಆರೋಪ ಹಿನ್ನೆಲೆ ಸಿಸಿಬಿ ದಾಳಿ ನಡೆಸಿತ್ತು. ಪರಿಶೀಲನೆವೇಳೆ ಜೈಲಿನಲ್ಲಿ ಪತ್ತೆಯಾದ 10ಕ್ಕೂ ಹೆಚ್ಚು ಮೊಬೈಲ್ ಫೋನ್​​ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನು ಅತ್ಯಾಚಾರ ಕೇಸ್​​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್​​ನಲ್ಲಿಯೂ ಮೊಬೈಲ್​​ ಸಿಕ್ಕಿದೆ. ಪ್ರಕ್ವಲ್​​ ಆ್ಯಂಡ್ರಾಯ್ಡ್ ಮೊಬೈಲ್ ಬಳಕೆ ಬಗ್ಗೆ ಅನುಮಾನ ಹಿನ್ನೆಲೆ, ಈ ಸಂಬಂಧ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

ಈ ಹಿಂದೆಯೂ ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ಫೈವ್ ಸ್ಟಾರ್ ಹೋಟೆಲ್ ಆಗಿ ಮಾರ್ಪಟ್ಟಿರುವ ಬಗ್ಗೆ ವರದಿಯಾಗಿತ್ತು. ಬೃಹತ್ ಕಾರ್ಯಾಚರಣೆ ವೇಳೆ ಕೈದಿಗಳ ಬಳಿ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾರ್ಜರ್‌ಗಳು, ಇಯರ್‌ಫೋನ್‌ಗಳು, ವಿವಿಧ ಬಗೆಯ ಶೂಗಳು, ದಿಂಬುಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು ಮತ್ತು ಚೇರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸುಮಾರು ಎರಡು ಟ್ರ್ಯಾಕ್ಟರ್ ಲೋಡ್‌ನಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಜೈಲಿನಲ್ಲಿರುವ ಕೆಲವು ಅಧಿಕಾರಿಗಳ ಸಹಕಾರದಿಂದಲೇ ಕೈದಿಗಳಿಗೆ ಬೇಕಾದ ವಸ್ತುಗಳು ಪೂರೈಕೆಯಾಗುತ್ತಿವೆ ಎಂಬ ಆರೋಪಗಳೂ ಕೇಳಿಬಂದಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:18 am, Wed, 12 August 26

Source link

ಟೀಮ್ ಇಂಡಿಯಾಗೆ ‘ಕಿಂಗ್ ಆಫ್ ಗಾಲೆ’ಯ ಬಗ್ಗೆ ಎಚ್ಚರಿಕೆ! – Kannada News | India Warned of ‘King of Galle’ Threat

ಭಾರತ ಹಾಗೂ ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಶ್ರೀಲಂಕಾದ ಮಾಜಿ ಆಲ್ ರೌಂಡರ್ ಫರ್ವೀಝ್ ಮಹರೂಫ್ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಸಹ ‘ಕಿಂಗ್ ಆಫ್ ಗಾಲೆ’ಯ ಎಚ್ಚರಿಕೆ!.

ಯಾರು ಈ ಕಿಂಗ್ ಆಫ್ ಗಾಲೆ?

34 ವರ್ಷದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪ್ರಸ್ತುತ ಶ್ರೀಲಂಕಾ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರನ್ನೇ ಕಿಂಗ್ ಆಫ್ ಗಾಲೆ ಎಂದು ಬಣ್ಣಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಲೆ ಮೈದಾನದಲ್ಲಿ ಪ್ರಭಾತ್ ಅವರ ಪ್ರದರ್ಶನ.

  •  ಪ್ರಭಾತ್ ಜಯಸೂರ್ಯ ಗಾಲೆ ಮೈದಾನದಲ್ಲಿ ಆಡಿರುವ ಕೇವಲ 11 ಟೆಸ್ಟ್ ಪಂದ್ಯಗಳಿಂದ ಪಡೆದಿರುವುದು ಬರೋಬ್ಬರಿ 81 ವಿಕೆಟ್‌ಗಳನ್ನು ಎಂದರೆ ನಂಬಲೇಬೇಕು.
  • ಅಲ್ಲದೆ ಪ್ರಭಾತ್ ಇದುವರೆಗೆ ಆಡಿರುವ 23 ಟೆಸ್ಟ್ ಪಂದ್ಯಗಳಿಂದ ಒಟ್ಟು 125 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಗಾಲೆ ಮೈದಾನದಲ್ಲೇ 81 ವಿಕೆಟ್ ಕಬಳಿಸಿರುವುದು ವಿಶೇಷ.

ಇದೇ ಕಾರಣದಿಂದಾಗಿ ಫರ್ವೀಝ್ ಮಹರೂಫ್ ‘ಕಿಂಗ್ ಆಫ್ ಗಾಲೆ’ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪಿಚ್ ತಂತ್ರ ಹಾಗೂ ಭಾರತದ ಸಿದ್ಧತೆ:

ಗಾಲೆ ಕ್ರೀಡಾಂಗಣದ ಪಿಚ್‌ಗಳು ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ಸ್ವರ್ಗ ಎನಿಸಿಕೊಂಡಿವೆ. ಇಲ್ಲಿನ ಒಣ ಹವೆ ಮತ್ತು ಒರಟಾದ ಮೇಲ್ಮೈಯಿಂದಾಗಿ ಚೆಂಡು ಬೇಗನೇ ಸವೆಯುತ್ತದೆ. ಇದು ಸ್ಪಿನ್ ಮಾತ್ರವಲ್ಲದೆ ರಿವರ್ಸ್ ಸ್ವಿಂಗ್‌ಗೂ ಹೆಚ್ಚಿನ ನೆರವು ನೀಡುತ್ತದೆ. ಈ ಭೀತಿಯನ್ನು ಎದುರಿಸಲು ಭಾರತದ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಈಗಾಗಲೇ ನೆಟ್ಸ್‌ನಲ್ಲಿ ಹಳೆಯ ಕೂಕಬುರ್ರಾ ಚೆಂಡುಗಳನ್ನು ಬಳಸಿ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಗಾಯದ ಸಮಸ್ಯೆಯಲ್ಲಿ ಟೀಮ್ ಇಂಡಿಯಾ:

ಈ ಮಹತ್ವದ ಸರಣಿಗೂ ಮುನ್ನ ಭಾರತ ತಂಡಕ್ಕೆ ಗಾಯದ ದೊಡ್ಡ ಆಘಾತ ಎದುರಾಗಿದೆ. ಪ್ರಮುಖ ಆಟಗಾರರಾದ ಸಾಯಿ ಸುದರ್ಶನ್ (ಕಾಲ್ಬೆರಳ ಗಾಯ), ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ (ಮೊಣಕಾಲು ಗಾಯ) ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ (ಹ್ಯಾಮ್‌ಸ್ಟ್ರಿಂಗ್ ಗಾಯ) ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಸ್ಪಿನ್ ಪಿಚ್‌ಗಳನ್ನು ಚೆನ್ನಾಗಿ ಆಡಬಲ್ಲ ಸರ್ಫರಾಝ್ ಖಾನ್, ಬೌಲರ್‌ಗಳಾದ ಸರಂಶ್ ಜೈನ್ ಮತ್ತು ಆಖಿಬ್ ನಬಿ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾ ಸರಣಿ ಡೌಟ್: ಡೇಟ್ ಫಿಕ್ಸ್ ಮಾಡಿದ ಅಫ್ಘಾನಿಸ್ತಾನ್!

ಒಟ್ಟಾರೆಯಾಗಿ, ಯಾವುದೇ ಉಪಖಂಡದ ಪ್ರವಾಸದಲ್ಲಿ ಸ್ಪಿನ್ ಸವಾಲನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಹೊಸದೇನಲ್ಲ. ಆದರೆ, ಗಾಲೆ ಮೈದಾನದಲ್ಲಿ ಪ್ರಭಾತ್ ಜಯಸೂರ್ಯ ಸೃಷ್ಟಿಸಿರುವ ದಾಖಲೆಗಳು ಮತ್ತು ಪ್ರಸ್ತುತ ಭಾರತ ತಂಡವನ್ನು ಕಾಡುತ್ತಿರುವ ಗಾಯದ ಸಮಸ್ಯೆಗಳು ಈ ಸರಣಿಯನ್ನು ಮತ್ತಷ್ಟು ರೋಚಕಗೊಳಿಸಿವೆ.

Source link

Vastu Tips: ಸಂಜೆಯಾಗುತ್ತಿದ್ದಂತೆ ಮನೆಯ ಮುಖ್ಯ ಬಾಗಿಲು ಮುಚ್ಚುತ್ತೀರಾ? ವಾಸ್ತು ನಿಯಮ ತಿಳಿಯಿರಿ – Kannada News | Vastu Tips: Don’t Close Main Door in Evening! Attract Wealth and Positivity

ಸಂಜೆಯಾಗುತ್ತಿದ್ದಂತೆ ಮನೆಯ ಮುಖ್ಯ ಬಾಗಿಲನ್ನು ಮುಚ್ಚುವ ಅಭ್ಯಾಸ ನಿಮಗಿದ್ದರೆ ಎಚ್ಚರ ವಹಿಸಿ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಈ ಒಂದು ಸಣ್ಣ ತಪ್ಪು ಮನೆಯಲ್ಲಿ ಆರ್ಥಿಕ ಸಂಕಷ್ಟ ಮತ್ತು ಅಶಾಂತಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ದ್ವಾರವನ್ನು ಕೇವಲ ಹೊರಗೆ-ಒಳಗೆ ಹೋಗುವ ಮಾರ್ಗವೆಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ಮನೆಗೆ ದೈವಿಕ ಮತ್ತು ಧನಾತ್ಮಕ ಶಕ್ತಿ ಪ್ರವೇಶಿಸುವ ಪ್ರಮುಖ ದ್ವಾರವೆಂದು ನಂಬಲಾಗುತ್ತದೆ. ಈ ಸ್ಥಳವನ್ನು ಸರಿಯಾದ ನಿಯಮಗಳ ಪ್ರಕಾರ ನಿರ್ವಹಿಸಿದರೆ, ಕುಟುಂಬದಲ್ಲಿ ಆರೋಗ್ಯ ಮತ್ತು ಮನಸ್ಸಿನ ಶಾಂತಿ ನೆಲೆಸುತ್ತದೆ.

ಲಕ್ಷ್ಮಿ ದೇವಿಯ ಆಗಮನ ಮತ್ತು ಶುಭ ಶಕ್ತಿಯ ಹರಿವು:

ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಜೆಯ ಸಮಯವು ಮನೆಗೆ ಸಂತೋಷ, ಸಮೃದ್ಧಿ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಯ ಆಗಮನದ ಪವಿತ್ರ ಸಮಯವಾಗಿದೆ. ಈ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಶುಭ ಶಕ್ತಿ ಹಾಗೂ ದೇವಿಯ ಆಶೀರ್ವಾದದ ಹರಿವಿಗೆ ಅಡ್ಡಿಯಾಗುತ್ತದೆ. ಆದ್ದರಿಂದ, ಸಂಜೆಯ ಸಮಯದಲ್ಲಿ ಕೆಲ ಸಮಯದವರೆಗೆ ಮುಖ್ಯ ಬಾಗಿಲನ್ನು ತೆರೆದಿಡುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಸೂರ್ಯಾಸ್ತದ ಸಮಯ ಮತ್ತು ವಾತಾವರಣದ ಬದಲಾವಣೆ:

ಸೂರ್ಯಾಸ್ತದ ವೇಳೆಯಲ್ಲಿ ಪ್ರಕೃತಿಯ ಶಕ್ತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಉಂಟಾಗುತ್ತವೆ. ಸಂಜೆ ಬಾಗಿಲನ್ನು ತೆರೆದಿಡುವುದರಿಂದ ಹೊರಗಿನಿಂದ ತಾಜಾ ಮತ್ತು ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಅನುಕೂಲವಾಗುತ್ತದೆ. ಇದರಿಂದ ಮನೆಯ ವಾತಾವರಣವು ಒತ್ತಡರಹಿತ ಹಾಗೂ ಸಂತೋಷದಾಯಕ ವಾಗುವುದಲ್ಲದೆ, ಕುಟುಂಬದ ಸದಸ್ಯರ ನಡುವಿನ ಪ್ರೀತಿ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ.

ಮುಖ್ಯ ದ್ವಾರದಲ್ಲಿ ದೀಪ ಹಚ್ಚುವ ಪವಿತ್ರ ಸಂಪ್ರದಾಯ:

ಸಂಜೆಯ ವೇಳೆ ಮನೆಯ ಮುಖ್ಯ ದ್ವಾರದಲ್ಲಿ ದೀಪ ಹಚ್ಚುವ ಸಂಪ್ರದಾಯವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ದೀಪದ ಬೆಳಕು ಮತ್ತು ಬೆಂಕಿಯ ಅಂಶವು ಮನೆಯಲ್ಲಿರುವ ನಕಾರಾತ್ಮಕತೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಬಾಗಿಲಿನ ಬಳಿ ದೀಪವನ್ನು ಬೆಳಗಿಸುವುದರಿಂದ ದೈವಿಕ ಆಶೀರ್ವಾದಗಳು ಲಭಿಸುವುದರ ಜೊತೆಗೆ ದುಷ್ಟಶಕ್ತಿಗಳು ಮನೆಯಿಂದ ದೂರವಿರುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಗಂಗಾಜಲದ ಪ್ರೋಕ್ಷಣೆ ಮತ್ತು ಸ್ಥಳದ ಶುದ್ಧೀಕರಣ:

ಸಂಜೆ ವೇಳೆ ಮುಖ್ಯ ದ್ವಾರದ ಹೊಸ್ತಿಲ ಮೇಲೆ ಗಂಗಾಜಲ ಅಥವಾ ಶುದ್ಧ ನೀರನ್ನು ಸಿಂಪಡಿಸುವುದು ಅತ್ಯಂತ ಶುಭಕರ. ಈ ಸರಳ ಪರಿಹಾರವು ಬಾಗಿಲ ಸುತ್ತಮುತ್ತಲಿನ ವಾತಾವರಣವನ್ನು ಪವಿತ್ರಗೊಳಿಸುತ್ತದೆ. ಪರಿಣಾಮವಾಗಿ, ಯಾವುದೇ ರೀತಿಯ ಕೆಟ್ಟ ಕಣ್ಣು (ದೃಷ್ಟಿ ದೋಷ) ಅಥವಾ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಬಳಿ ಕತ್ತಲೆ ಇರುವುದು, ಕೊಳಕು ಅಥವಾ ಹಳೆಯ ಬೂಟು-ಚಪ್ಪಲಿಗಳನ್ನು ಹರಡಿಡುವುದು ಸೂಕ್ತವಲ್ಲ. ಸ್ವಚ್ಛವಾದ ಮತ್ತು ಉತ್ತಮ ಬೆಳಕಿನಿಂದ ಕೂಡಿದ ಬಾಗಿಲು ಸಂಪತ್ತು ಹಾಗೂ ಸಮೃದ್ಧಿಯನ್ನು ಆಕರ್ಷಿಸುತ್ತದೆ. ಅದೇ ಬಾಗಿಲಿನ ಬಳಿ ಕೊಳಕಿದ್ದರೆ ಅದು ಮನೆಯಲ್ಲಿ ಅಶಾಂತಿ ಮತ್ತು ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:55 am, Wed, 12 August 26

Source link

ಭೀಮನ ಅಮಾವಾಸ್ಯೆ; ರಾಜ್​ಕುಮಾರ್ ಕಿಡ್ನ್ಯಾಪ್​​ಗೆ ಕಾರಣವಾಗಿತ್ತು ಆ ಒಂದು ಘಟನೆ – Kannada News | Unseen Warning: How Dr Rajkumar Unannounced Gajanur Visit Led to His 2000 Abduction

ರಾಜ್ಯದ ಹಿರಿಯ ರಾಜಕಾರಣಿ,  ಎಸ್.ಎಂ. ಕೃಷ್ಣ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮರು ವರ್ಷವೇ ಎದುರಾದ ಬೃಹತ್ ಸವಾಲೆಂದರೆ ಅದು ವರನಟ ಡಾ. ರಾಜ್‌ಕುಮಾರ್ ಅವರ ಅಪಹರಣ. ಭೀಮನ ಅಮಾವಾಸ್ಯೆ ದಿನದಂದು ನಡೆದ ಆ ಘಟನೆ ಅತ್ಯಂತ ಕರಾಳ ನೆನಪಾಗಿ ಉಳಿದುಕೊಂಡಿದೆ.

ಪೂಜೆಯ ಶುಭ ದಿನದಂದೇ ನಡೆದ ಕರಾಳ ಘಟನೆ

ಅಂದು ಪತಿಯ ಆಯುಷ್ಯ ಮತ್ತು ಕ್ಷೇಮಕ್ಕಾಗಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಪವಿತ್ರ ಭೀಮನ ಅಮಾವಾಸ್ಯೆಯ ದಿನ (ಜುಲೈ 30, 2000). ಇಡೀ ನಾಡು ಹಬ್ಬದ ಸಂಭ್ರಮದಲ್ಲಿದ್ದಾಗ, ವೀರಪ್ಪನ್ ಮತ್ತು ಆತನ ಗುಂಪು ಗಾಜನೂರಿನಲ್ಲಿದ್ದ ಡಾ. ರಾಜ್‌ಕುಮಾರ್ ಅವರ ಮನೆಗೆ ನುಗ್ಗಿ ಅವರನ್ನು ಅಪಹರಿಸಿತು. ಪಾರ್ವತಮ್ಮನವರು ಗಂಡನ ಆಯುಷ್ಯಕ್ಕಾಗಿ ಪೂಜೆ ಸಲ್ಲಿಸುವ ಪವಿತ್ರ ದಿನದಂದೇ ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಕಾಡಿಗೆ ಎಳೆದೊಯ್ದದ್ದು ಇಡೀ ನಾಡಿಗೆ ಆಘಾತ ತಂದಿತ್ತು.

ಸರ್ಕಾರಕ್ಕೆ ಸುಳಿವಿತ್ತು

ಈ ಅಪಹರಣದ ಹಿಂದೆ ಒಂದು ರೋಚಕ ಹಿನ್ನೆಲೆಯಿತ್ತು. ರಾಜ್‌ಕುಮಾರ್ ಅವರಿಗೆ ವೀರಪ್ಪನ್‌ನಿಂದ ಅಪಾಯವಿದೆ ಎಂಬ ಸುಳಿವು ರಾಜ್ಯ ಸರ್ಕಾರಕ್ಕೆ ಮೊದಲೇ ಇತ್ತು. ಈ ಕಾರಣದಿಂದಲೇ ಕೃಷ್ಣ ಅವರ ಸರ್ಕಾರವು ರಾಜ್‌ಕುಮಾರ್ ಅವರೊಂದಿಗೆ ಒಂದು ಪ್ರಮುಖ ಒಪ್ಪಂದ ಮಾಡಿಕೊಂಡಿತ್ತು.

ತಮಿಳುನಾಡು ಗಡಿಯಲ್ಲಿರುವ ಹುಟ್ಟೂರು ಗಾಜನೂರಿಗೆ ತೆರಳುವುದಿದ್ದರೆ, ಆ ಬಗ್ಗೆ ಮುಂಚಿತವಾಗಿಯೇ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬುದು ಆ ಒಪ್ಪಂದವಾಗಿತ್ತು. ಸರ್ಕಾರಕ್ಕೆ ತಿಳಿಸಿದರೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತಿತ್ತು. ರಾಜ್‌ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿದ್ದರು.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ 

ಪ್ರತಿ ಬಾರಿಯೂ ಗಾಜನೂರಿಗೆ ತೆರಳುವಾಗ ಅಣ್ಣಾವ್ರು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದರು. ಆದರೆ, ಅಂದು ಭೀಮನ ಅಮಾವಾಸ್ಯೆಯ ಸಂದರ್ಭದಲ್ಲಿ ಗೃಹಪ್ರವೇಶದ ಕೆಲಸಗಳಿದ್ದ ಕಾರಣ, ಅವರು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಗಾಜನೂರಿಗೆ ತೆರಳಿದ್ದರು. ಭದ್ರತೆಯೇ ಇಲ್ಲದ ಆ ಕ್ಷಣಕ್ಕಾಗಿ ಕಾಯುತ್ತಿದ್ದ ವೀರಪ್ಪನ್, ನೇರವಾಗಿ ಮನೆಗೆ ನುಗ್ಗಿ ಅಣ್ಣಾವ್ರನ್ನು ಎಳೆದೊಯ್ದನು. ಸುದೀರ್ಘ 108 ದಿನಗಳ ಬಳಿಕ ಡಾ. ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜಿರಳೆ’ ಹೇಳಿಕೆ ವಾಣಿಜ್ಯ ದುರುಪಯೋಗ ಸಂಬಂಧ ಪಿಐಎಲ್​​: ಕೇಂದ್ರ ಸರ್ಕಾರ, CBIಗೆ ಸುಪ್ರೀಂ ಕೋರ್ಟ್ ನೋಟಿಸ್ – Kannada News | Supreme Court Issues Notice to Centre and CBI Over Commercial Misuse and Doctoring of CJI’s ‘Cockroach’ Remark

ಕೇಂದ್ರ ಸರ್ಕಾರ, CBIಗೆ ಸುಪ್ರೀಂ ಕೋರ್ಟ್​​ನಿಂದ ನೋಟಿಸ್ ಜಾರಿImage Credit source: Getty Images

ನವದೆಹಲಿ, ಆಗಸ್ಟ್​​ 12: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ ‘ಜಿರಳೆ’ (Cockroach) ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿ, ಬಳಿಕ ‘ಕಾಕ್ರೋಚ್​​ ಜನತಾ ಪಾರ್ಟಿ’ ಹುಟ್ಟಿಕೊಂಡು NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜೆನ್​​ ಜಿ ಪ್ರತಿಭಟನೆಗೆ ಕಾರಣವಾದ ಘಟನೆಯ ಮೂರು ತಿಂಗಳ ಬಳಿಕ, ಈ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ವಾಣಿಜ್ಯವಾಗಿ ಬಳಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು CBIಯಿಂದ ಪ್ರತಿಕ್ರಿಯೆ ಕೇಳಿದೆ.

ಅರ್ಜಿದಾರರ ವಾದವೇನು?

ಅರ್ಜಿದಾರ ಹಾಗೂ ವಕೀಲ ರಾಜಾ ಚೌಧರಿ, ನ್ಯಾಯಾಲಯದ ಕಲಾಪದ ವೇಳೆ ಸಂಪೂರ್ಣ ವಿಭಿನ್ನ ಸಂದರ್ಭದಲ್ಲೇ ಬಳಸಲಾಗಿದ್ದ ‘ಜಿರಳೆ’ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿ, ವರ್ಚುವಲ್ ಕೋರ್ಟ್ ಕಲಾಪದ ವಿಡಿಯೋವನ್ನು ಎಡಿಟ್ ಮಾಡಿ, ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ. ಇದರಿಂದ ನ್ಯಾಯಾಂಗದ ಘನತೆಗೆ ಧಕ್ಕೆ ಉಂಟಾಗಿದ್ದು, ಸಂಸ್ಥೆಯ ಸಮಗ್ರತೆಗೆ ಹಾನಿಯಾಗಿದೆ ಎಂದು ಆರೋಪಿಸಿದ್ದರು. ನ್ಯಾಯಾಲಯದ ಮೌಖಿಕ ಹೇಳಿಕೆಗಳು ಅಥವಾ ರೂಪಕಗಳನ್ನು ವಾಣಿಜ್ಯವಾಗಿ ದುರುಪಯೋಗಪಡಿಸಿಕೊಳ್ಳುವ, ಟ್ರೇಡ್‌ಮಾರ್ಕ್ ಆಗಿ ಬಳಸುವ, ಹಣಗಳಿಕೆಯ ಉದ್ದೇಶದಿಂದ ಪ್ರಸಾರ ಮಾಡುವ ಅಥವಾ ಅನುಮತಿಯಿಲ್ಲದೆ ವಾಣಿಜ್ಯ ಬಳಕೆ ಮಾಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಯಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ದೇಶವ್ಯಾಪಿ ಅಭಿಯಾನ ಘೋಷಣೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸುಮಾರು ಅರ್ಧ ಗಂಟೆ ಅರ್ಜಿಯ ವಿಚಾರಣೆ ನಡೆಸಿತು.

ಯಾವ ಸಂದರ್ಭದಲ್ಲಿ ‘ಜಿರಳೆ’ ಹೇಳಿಕೆ ಪ್ರಸ್ತಾಪವಾಗಿತ್ತು?

ಮೇ 15ರಂದು ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸಂಬಂಧಿಸಿದ ‘ಸಂಜಯ್ ದುಬೆ ವರ್ಸಸ್ ರಿಜಿಸ್ಟ್ರಾರ್ ಜನರಲ್ ಆಫ್ ದೆಹಲಿ ಹೈಕೋರ್ಟ್’ ಪ್ರಕರಣದ ವಿಚಾರಣೆ ವೇಳೆ CJI ನೇತೃತ್ವದ ಪೀಠ ಈ ಹೇಳಿಕೆ ನೀಡಿತ್ತು. ಆ ಸಂದರ್ಭದಲ್ಲಿ ನಕಲಿ ವಕೀಲರ ವಿಚಾರವನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ CJI ಸೂರ್ಯಕಾಂತ್ ಅವರು ‘ಜಿರಳೆ’ ಎಂಬ ಪದವನ್ನು ಬಳಸಿದ್ದರು. ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ, ವೃತ್ತಿಪರ ಗುಣಮಟ್ಟದ ಕುಸಿತ ಮತ್ತು ಇದರಿಂದ ನ್ಯಾಯಾಂಗ ಸಂಸ್ಥೆಯ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು ಎಂದು ಚೌಧರಿ ವಿವರಿಸಿದ್ದಾರೆ.

ಮೇ 15ರ ವಿಚಾರಣೆಯ ಬಳಿಕ ನ್ಯಾಯಾಲಯದ ಕಲಾಪಗಳ ಆಯ್ದ ಭಾಗಗಳನ್ನು ಎಡಿಟ್ ಮಾಡಿ ಪ್ರಸಾರ ಮಾಡುವ ವಿಡಿಯೋ ಕ್ಲಿಪ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ನ್ಯಾಯಾಲಯದ ಕಲಾಪದ ವೇಳೆ ಮಾಡಿದ ಮೌಖಿಕ ಹೇಳಿಕೆಗಳನ್ನು ಸಂದರ್ಭದಿಂದ ಬೇರ್ಪಡಿಸಿ, ತಿರುಚಿದ ರೀತಿಯಲ್ಲಿ ವಿಡಿಯೋಗಳು ಹಾಗೂ ಮೀಮ್‌ಗಳಾಗಿ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದನ್ನು ಕೆಲವರು ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುವ ಉದ್ದೇಶದಿಂದ ಇಂತಹ ವಿಡಿಯೋಗಳನ್ನು ತಿರುಚಿ ಪ್ರಸಾರ ಮಾಡುವ ಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಸ್ತುತ ಯಾವುದೇ ಪರಿಣಾಮಕಾರಿ ವ್ಯವಸ್ಥೆ ಇಲ್ಲ ಎಂದು ಅರ್ಜಿದಾರರು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಂಗಳೂರು ಸೇರಿ ಮಡಿಕೇರಿಯಲ್ಲೂ ಉತ್ತಮ ವಾಯು ಗುಣಮಟ್ಟ – Kannada News | Karnataka Air Quality Index: Madikeri Tops Clean Air List, Bengaluru AQI at 29

ಬೆಂಗಳೂರು ಸೇರಿ ಮಡಿಕೇರಿಯಲ್ಲೂ ಉತ್ತಮ ವಾಯು ಗುಣಮಟ್ಟ

ಬೆಂಗಳೂರು, ಆಗಸ್ಟ್ 12: ಇಂದು ಕರ್ನಾಟಕದ ಬಹುತೇಕ ನಗರಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದು, ಬೆಂಗಳೂರಿನಲ್ಲೂ ವಾಯುಮಾಲಿನ್ಯದ ಪ್ರಮಾಣ ಕಡಿಮೆ ದಾಖಲಾಗಿದೆ. ಇಂದು ಬೆಳಗಿನ ಲಭ್ಯವಿರುವ ರಿಯಲ್‌ಟೈಮ್ ಮಾಹಿತಿ ಪ್ರಕಾರ ಬೆಂಗಳೂರಿನ AQI 29ರಷ್ಟಿದ್ದು, ‘ಉತ್ತಮ’ (Good) ಮಟ್ಟದಲ್ಲಿದೆ. ಕರ್ನಾಟಕದಾದ್ಯಂತ 44 ಮಾನಿಟರಿಂಗ್ ಕೇಂದ್ರಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಆಧರಿಸಿ ಈ ಅಂಕಿಅಂಶಗಳು ಲಭ್ಯವಾಗಿವೆ.

ರಾಜ್ಯದ ಪ್ರಮುಖ ನಗರಗಳ ಪೈಕಿ ಮಂಗಳೂರಿನಲ್ಲಿ AQI 57 ದಾಖಲಾಗಿದ್ದು, ‘ಮಧ್ಯಮ’ (Moderate) ಮಟ್ಟದಲ್ಲಿದೆ. ಕಾರವಾರದಲ್ಲಿ 44, ಯಾದಗಿರಿಯಲ್ಲಿ 32, ಚಾಮರಾಜನಗರದಲ್ಲಿ 31, ಬೆಂಗಳೂರಿನಲ್ಲಿ 29, ಬೀದರ್ ಮತ್ತು ಕೋಲಾರದಲ್ಲಿ ತಲಾ 27, ಮೈಸೂರಿನಲ್ಲಿ 27, ರಾಯಚೂರಿನಲ್ಲಿ 27 ಹಾಗೂ ಕಲಬುರಗಿಯಲ್ಲಿ 24 AQI ದಾಖಲಾಗಿದೆ.

ಯಾವ ನಗರದಲ್ಲಿ ಗಾಳಿ ಹೆಚ್ಚು ಸ್ವಚ್ಛ?

ಕರ್ನಾಟಕದ ಸ್ವಚ್ಛ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮಡಿಕೇರಿ ಅಗ್ರಸ್ಥಾನದಲ್ಲಿದ್ದು, AQI 16 ದಾಖಲಾಗಿದೆ. ಬೆಳಗಾವಿ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ತಲಾ 17, ತುಮಕೂರಿನಲ್ಲಿ 17, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ 18, ಚಿಕ್ಕಬಳ್ಳಾಪುರದಲ್ಲಿ 19, ಧಾರವಾಡ ಹಾಗೂ ಗದಗದಲ್ಲಿ 19 AQI ದಾಖಲಾಗಿದೆ.

ಇನ್ನು ಹಾವೇರಿಯಲ್ಲಿ 27, ಹುಬ್ಬಳ್ಳಿಯಲ್ಲಿ 28, ಶಿವಮೊಗ್ಗದಲ್ಲಿ 28, ವಿಜಯಪುರದಲ್ಲಿ 33, ಕೊಪ್ಪಳದಲ್ಲಿ 33, ಮಡಿಕೇರಿಯಲ್ಲಿ 16 ಹಾಗೂ ದಾವಣಗೆರೆಯಲ್ಲಿ 18 AQI ದಾಖಲಾಗಿದೆ. ಕರಾವಳಿ ಭಾಗದಲ್ಲೂ ಗಾಳಿಯ ಗುಣಮಟ್ಟ ಬಹುತೇಕ ಉತ್ತಮವಾಗಿದ್ದು, ಉಡುಪಿಯಲ್ಲಿ AQI 41, ಕಾರವಾರದಲ್ಲಿ 44 ಹಾಗೂ ಮಂಗಳೂರಿನಲ್ಲಿ 57 ದಾಖಲಾಗಿದೆ.

ಮಳೆಯ ವಾತಾವರಣ, ಗಾಳಿಯ ಚಲನೆ ಹಾಗೂ ಸ್ಥಳೀಯ ಹವಾಮಾನ ಪರಿಸ್ಥಿತಿಗಳು ವಾಯುಮಾಲಿನ್ಯದ ಮಟ್ಟದ ಮೇಲೆ ಪರಿಣಾಮ ಬೀರುವುದರಿಂದ ದಿನದ ಅವಧಿಯಲ್ಲಿ AQI ಅಂಕೆಗಳು ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಸೂಕ್ಷ್ಮ ಕಣಗಳ ಪ್ರಮಾಣ ಹೆಚ್ಚಾಗುವ ಪ್ರದೇಶಗಳಲ್ಲಿ ಜನರು ವಿಶೇಷವಾಗಿ ಸಂಚಾರ ದಟ್ಟಣೆ ಇರುವ ರಸ್ತೆಗಳ ಬಳಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ vs ಬಾಂಗ್ಲಾ ಸರಣಿ ಡೌಟ್: ಡೇಟ್ ಫಿಕ್ಸ್ ಮಾಡಿದ ಅಫ್ಘಾನಿಸ್ತಾನ್! – Kannada News | IND vs BAN Series Under Threat After Afghanistan T20I Confirmation

ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ರದ್ದಾಗುವ ಸಾಧ್ಯತೆಯಿದೆ. ಏಕೆಂದರೆ, ಇದೇ ಅವಧಿಯಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧ ಸರಣಿಯನ್ನು ಆಡಲಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ACB) ಭಾರತದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೀಗಾಗಿ, ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ನಡೆಯುವುದು ಅನುಮಾನ.

ವೇಳಾಪಟ್ಟಿ ಸಂಘರ್ಷ:

ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ (BCB) ಸೆಪ್ಟೆಂಬರ್ 1 ರಿಂದ 13 ರವರೆಗೆ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಯೋಜಿಸಲು ಉತ್ಸುಕವಾಗಿತ್ತು. ಆದರೆ, ಅಫ್ಘಾನಿಸ್ತಾನ್ ಮಂಡಳಿ ಈಗ ಸೆಪ್ಟೆಂಬರ್ 13 ರಿಂದ 17 ರವರೆಗೆ ಭಾರತದ ವಿರುದ್ಧ ಸರಣಿ ನಿಗದಿಪಡಿಸಿದೆ.

ಸೆಪ್ಟೆಂಬರ್ 13 ರಂದು ಎರಡೂ ಸರಣಿಗಳ ದಿನಾಂಕಗಳು ಒಟ್ಟಿಗೇ ಎದುರಾಗುವುದರಿಂದ, ಭಾರತ ತಂಡಕ್ಕೆ ಬಾಂಗ್ಲಾದೇಶದಿಂದ ವಾಪಸ್ ಬಂದು ತಕ್ಷಣವೇ ಅಫ್ಘಾನ್ ಎದುರಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಹೀಗಾಗಿ ಬಾಂಗ್ಲಾ ವಿರುದ್ಧ ಸರಣಿ ರದ್ದಾಗುವುದು ಬಹುತೇಕ ಖಚಿತವಾಗಿದೆ.

ಭಾರತ vs ಆಫ್ಘಾನಿಸ್ತಾನ್ ಸರಣಿ ಮುಖ್ಯಾಂಶಗಳು:

  • ಸ್ವರೂಪ: 3 ಪಂದ್ಯಗಳ ಟಿ20 ಸರಣಿ.
  • ದಿನಾಂಕಗಳು: 2026ರ ಸೆಪ್ಟೆಂಬರ್ 13, 15 ಮತ್ತು 17.
  • ಕ್ರೀಡಾಂಗಣ: ಎಲ್ಲಾ ಪಂದ್ಯಗಳು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ.
  • ಪ್ರಸಾರ ಹಕ್ಕು: ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಫ್ಯಾನ್‌ಕೋಡ್ (FanCode) ಪಡೆದುಕೊಂಡಿದ್ದು, ಟಿವಿ ಪ್ರಸಾರಕ್ಕಾಗಿ ಜಿಯೋಸ್ಟಾರ್, ಸೋನಿ ಸ್ಪೋರ್ಟ್ಸ್ ಹಾಗೂ ಝೀ ಸಂಸ್ಥೆಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ.

ರಾಜತಾಂತ್ರಿಕ ಅಡಚಣೆ:

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಉಂಟಾದ ರಾಜಕೀಯ ಅಸ್ಥಿರತೆ ಹಾಗೂ ಭದ್ರತಾ ಕಾರಣಗಳಿಂದಾಗಿ ಭಾರತ ಸರ್ಕಾರವು ಟೀಮ್ ಇಂಡಿಯಾವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಬಿಸಿಸಿಐಗೆ (BCCI) ಇನ್ನೂ ಹಸಿರು ನಿಶಾನೆ ನೀಡಿಲ್ಲ. ರಾಜತಾಂತ್ರಿಕ ಉದ್ವಿಗ್ನತೆಯೂ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಇನ್ನು 2026ರ ಐಪಿಎಲ್ (IPL) ಸಮಯದಲ್ಲಿ ಬಾಂಗ್ಲಾದೇಶದ ಸ್ಟಾರ್ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಬಾಂಗ್ಲಾ ಮಂಡಳಿ ಅರ್ಧದಲ್ಲೇ ವಾಪಸ್ ಕರೆಸಿಕೊಂಡಿತ್ತು. ಇದು ಉಭಯ ಮಂಡಳಿಗಳ ನಡುವೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಾಂಗ್ಲಾದೇಶ್ ತಂಡವು ಸುರಕ್ಷತೆಯ ಕಾರಣ ನೀಡಿ ಟಿ20 ವಿಶ್ವಕಪ್ ಬಹಿಷ್ಕರಿಸುವ ಆಲೋಚನೆ ನಡೆಸಿತ್ತು, ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಬಾಂಗ್ಲಾ ಪ್ರವಾಸದ ಬದಲು ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಹೆಚ್ಚಿನ ಆದ್ಯತೆ ನೀಡಿದೆ.

ಬಾಂಗ್ಲಾದೇಶದ ತೆರೆಮರೆಯ ಪ್ರಯತ್ನ:

ಬಿಸಿಸಿಐ  ಅಥವಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಈ ಸರಣಿಯನ್ನು ಅಧಿಕೃತವಾಗಿ ‘ರದ್ದು’ ಎಂದು ಘೋಷಿಸಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಸರಣಿ ನಡೆಯುವುದು ಅಸಾಧ್ಯ ಎನ್ನಲಾಗುತ್ತಿದೆ.

ಅತ್ತ ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್ ನೀಡಿರುವ ಹೇಳಿಕೆಯ ಪ್ರಕಾರ, ಈ ಸರಣಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಉಭಯ ದೇಶಗಳ ವಿದೇಶಾಂಗ ಸಚಿವರ ಮಟ್ಟದಲ್ಲಿ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿವೆ.

ಇದನ್ನೂ ಓದಿ: IND vs SL: ಸ್ವಿಂಗ್ ಮತ್ತು ಸ್ಪಿನ್ ತಂತ್ರಕ್ಕೆ ಟೀಮ್ ಇಂಡಿಯಾ ರಣತಂತ್ರ!

ಅಫ್ಘಾನಿಸ್ತಾನ್ ಸರಣಿ ಖಚಿತವಾಗಿರುವುದರಿಂದ, ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತ ತಂಡ ಬಾಂಗ್ಲಾದೇಶ್ ಪ್ರವಾಸ ಕೈಗೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಈ ಸರಣಿಗಾಗಿ ದಿನಾಂಕಗಳನ್ನು ಮರುಹೊಂದಿಸಲು ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿಯು ತೆರೆಮರೆಯ ಪ್ರಯತ್ನಗಳನ್ನು ಆರಂಭಿಸಿದೆ.

Source link

ಭೀಮನ ಅಮವಾಸ್ಯೆ ದಿನ ನಡೆದಿತ್ತು ಅಣ್ಣಾವ್ರ ಕಿಡ್ನ್ಯಾಪ್; 108 ದಿನಗಳ ಕಥನ – Kannada News | 108 Days in the Jungle: Remembering the Shocking Abduction of Dr. Rajkumar by Veerappan on bheemana amavasye

ಜುಲೈ 30, 2000 — ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಇತಿಹಾಸದಲ್ಲೇ ಅತ್ಯಂತ ಕಪ್ಪು ಮತ್ತು ಆತಂಕಕಾರಿ ದಿನ. ತಮಿಳುನಾಡಿನ ಪ್ರಸಿದ್ಧ ಕಾಡುಗಳ್ಳ, ಮರದ ಕಳ್ಳಸಾಗಣೆದಾರ ವೀರಪ್ಪನ್, ಕನ್ನಡದ ಸಾಂಸ್ಕೃತಿಕ ರಾಯಭಾರಿ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ ಸುದ್ದಿ ಇಡೀ ದಕ್ಷಿಣ ಭಾರತವನ್ನೇ ಬೆಚ್ಚಿಬೀಳಿಸಿತು. ಅದನ್ನು ಇಂದು ನೆನಪಿಸಿಕೊಳ್ಳಲೂ ಒಂದು ಕಾರಣವಿದೆ. ಇಂದು ಭೀಮನ ಅಮವಾಸ್ಯೆ. ಅದೇ ದಿನ ಅಣ್ಣಾವ್ರ ಕಿಡ್ನ್ಯಾಪ್ ಆಗಿತ್ತು.

ಜುಲೈ 30ರ ಆ ಕಪ್ಪು ರಾತ್ರಿ: ಏನಾಯಿತು?

ಗಾಜನೂರಿನಲ್ಲಿದ್ದ ತಮ್ಮ ಹುಟ್ಟೂರಿನ ಹೊಸ ಮನೆಯ ಗೃಹಪ್ರವೇಶಕ್ಕೆ ಡಾ. ರಾಜ್‌ಕುಮಾರ್ ತೆರಳಿದ್ದರು. ಜುಲೈ 30ರ ರಾತ್ರಿ ಸುಮಾರು 9:30ರ ವೇಳೆಗೆ ಸುರಿಯುತ್ತಿದ್ದ ಮಳೆಯ ನಡುವೆ, ಬಂದೂಕುಗಳು ಮತ್ತು ಮಾರಕಾಸ್ತ್ರಗಳನ್ನು ಹಿಡಿದು ಬಂದ ವೀರಪ್ಪನ್ ಹಾಗೂ ಆತನ ಸಹಚರರ ಗುಂಪು ಮನೆಗೆ ನುಗ್ಗಿತು.

ಅಲ್ಲಿಂದ ಡಾ. ರಾಜ್‌ಕುಮಾರ್, ಅವರ ಅಳಿಯ ಗೋವಿಂದರಾಜ್, ನಂಟ ನಾಗೇಶ್ ಮತ್ತು ಚಲನಚಿತ್ರ ನಿರ್ಮಾಪಕ ನಾಗಪ್ಪ ಅವರನ್ನು ಬಲವಂತವಾಗಿ ದಟ್ಟ ಅಡವಿಗೆ ಕರೆದೊಯ್ಯಲಾಯಿತು. ನಿರ್ಗಮಿಸುವ ಮುನ್ನ ವೀರಪ್ಪನ್, ರಾಜ್‌ಕುಮಾರ್ ಅವರ ಪತ್ನಿ ಪಾರ್ವತಮ್ಮ ಅವರಿಗೆ ಒಂದು ಆಡಿಯೋ ಕ್ಯಾಸೆಟ್ ನೀಡಿ, ಅದನ್ನು ಆಗಿನ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ತಲುಪಿಸುವಂತೆ ತಿಳಿಸಿದ್ದ.

ಎರಡೂ ರಾಜ್ಯಗಳಲ್ಲಿ ಉದ್ವಿಗ್ನತೆ ಮತ್ತು ಆತಂಕ

ಅಪಹರಣದ ಸುದ್ದಿ ಹಬ್ಬುತ್ತಿದ್ದಂತೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ಮತ್ತು ಉದ್ವಿಗ್ನತೆ ಸೃಷ್ಟಿಯಾಯಿತು. ಬೆಂಕಿ ಹತ್ತಿ ಉರಿದ ಶಾಲೆ-ಕಾಲೇಜುಗಳು, ಬಂದ್ ಆದ ಸಾರಿಗೆ ವ್ಯವಸ್ಥೆ ಮತ್ತು ಲಕ್ಷಾಂತರ ಅಭಿಮಾನಿಗಳ ಕಣ್ಣೀರು ರಾಜ್ಯದ ಆಡಳಿತ ಯಂತ್ರವನ್ನೇ ನಡುಗಿಸಿತು. ಅತ್ತ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹಾಗೂ ಇತ್ತ ಎಸ್.ಎಂ. ಕೃಷ್ಣ ಅವರಿಗೆ ಈ ಬಿಕ್ಕಟ್ಟು ಅತಿ ದೊಡ್ಡ ಸವಾಲಾಗಿ ಪರಿಣಮಿಸಿತು.

ವೀರಪ್ಪನ್ ಬೇಡಿಕೆಗಳು ಮತ್ತು ಸಂಧಾನಾಧಿಕಾರಿ ನಕ್ಕೀರನ್ ಗೋಪಾಲ್

ಅಡವಿಯಲ್ಲಿದ್ದ ವೀರಪ್ಪನ್ ತನ್ನ ಬೇಡಿಕೆಗಳ ಪಟ್ಟಿಯನ್ನು ಒಳಗೊಂಡ ಆಡಿಯೋ ಕ್ಯಾಸೆಟ್‌ಗಳನ್ನು ಕಳುಹಿಸಲು ಪ್ರಾರಂಭಿಸಿದ:

ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಬೇಡಿಕೆಗಳು.

ತಮಿಳುನಾಡು ಜೈಲಿನಲ್ಲಿದ್ದ ತನ್ನ ಸಹಚರರ ಬಿಡುಗಡೆ.

ತಮಿಳು ಭಾಷೆಗೆ ಸಂಬಂಧಿಸಿದ ಸಾರ್ವಜನಿಕ ಬೇಡಿಕೆಗಳು ಹಾಗೂ ಕೋಟ್ಯಂತರ ರೂಪಾಯಿ ಹಣ.

ಈ ಸಂಕೀರ್ಣ ಪರಿಸ್ಥಿತಿಯನ್ನು ತಿಳಿಗೊಳಿಸಲು ‘ನಕ್ಕೀರನ್’ ಪತ್ರಿಕೆಯ ಸಂಪಾದಕ ಆರ್‌ಆರ್ ಗೋಪಾಲ್ ಅವರನ್ನು ಅಧಿಕೃತ ಸಂಧಾನಾಧಿಕಾರಿಯಾಗಿ ದಟ್ಟ ಅರಣ್ಯಕ್ಕೆ ಕಳುಹಿಸಲಾಯಿತು. ಗೋಪಾಲ್ ಅವರು ಕಾಡಿಗೆ ಹಲವು ಬಾರಿ ತೆರಳಿ ವೀರಪ್ಪನ್ ಜೊತೆ ಮಾತುಕತೆ ನಡೆಸಿದರು ಮತ್ತು ರಾಜ್‌ಕುಮಾರ್ ಅವರ ಕ್ಷೇಮ ಸಮಾಚಾರದ ಆಡಿಯೋ/ವೀಡಿಯೋ ತುಣುಕುಗಳನ್ನು ಹೊರತಂದರು.

108 ದಿನಗಳ ಕಾಡಿನ ಜೀವನ: ರಾಜ್‌ಕುಮಾರ್ ಅವರ ಧೈರ್ಯ

ದಟ್ಟವಾದ ಕಾಡು, ಸುರಿಯುವ ಮಳೆ, ಜಿಗಣೆಗಳು ಮತ್ತು ಸೊಳ್ಳೆಗಳ ಕಾಟದ ನಡುವೆಯೂ ಡಾ. ರಾಜ್‌ಕುಮಾರ್ ಅತ್ಯಂತ ಶಾಂತ ಹಾಗೂ ಧೈರ್ಯಶಾಲಿಯಾಗಿ ಉಳಿದುಕೊಂಡರು. ಅವರು ಪ್ರತಿದಿನ ಬೆಳಗ್ಗೆ ಯೋಗ ಮತ್ತು ಪ್ರಾಣಾಯಾಮ ಮಾಡುವುದನ್ನು ಬಿಡಲಿಲ್ಲ. ತಮ್ಮ ಸೌಮ್ಯ ಸ್ವಭಾವ ಮತ್ತು ಮಾತಿನಿಂದ ವೀರಪ್ಪನ್ ಮತ್ತು ಆತನ ಗುಂಪಿನ ಮನ ಗೆದ್ದರು. ವೀರಪ್ಪನ್ ಸ್ವತಃ ರಾಜ್‌ಕುಮಾರ್ ಅವರ ಅಭಿಮಾನಿಯಂತೆ ನಡೆದುಕೊಳ್ಳಲು ಪ್ರಾರಂಭಿಸಿದನು ಎಂದು ನಂತರದ ದಿನಗಳಲ್ಲಿ ವರದಿಯಾಯಿತು.

ನವೆಂಬರ್ 15: ಐತಿಹಾಸಿಕ ಬಿಡುಗಡೆ

ಸುಮಾರು ಮೂರೂವರೆ ತಿಂಗಳುಗಳ (108 ದಿನಗಳು) ಸುದೀರ್ಘ ಕಾಯುವಿಕೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ರಹಸ್ಯ ಸಂಧಾನಗಳ ನಂತರ, ನವೆಂಬರ್ 15, 2000ರಂದು ವೀರಪ್ಪನ್, ಡಾ. ರಾಜ್‌ಕುಮಾರ್ ಅವರನ್ನು ಯಾವುದೇ ಷರತ್ತಿಲ್ಲದೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ.

ಅವರು ಬೆಂಗಳೂರಿಗೆ ಮರಳಿದಾಗ ಇಡೀ ಕರ್ನಾಟಕವೇ ಸಂಭ್ರಮಿಸಿತು. ರಾಜ್ಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅಪಹರಣದಂತಹ ಭೀಕರ ಸನ್ನಿವೇಶದಲ್ಲೂ ಸಮಾಧಾನ ಮತ್ತು ಶಾಂತಿ ಕಾಯ್ದುಕೊಂಡ ಡಾ. ರಾಜ್‌ಕುಮಾರ್ ಅವರ ನಡೆ ಪ್ರತಿಯೊಬ್ಬ ಕನ್ನಡಿಗನಿಗೆ ಸದಾ ಸ್ಫೂರ್ತಿಯಾಗಿ ಉಳಿಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಟಕಟೆಯಲ್ಲಿ ನಟ ಯಶ್, ಆರೋಪ ಮಾಡಿದವರೇ ಫಿದಾ – Kannada News | Yash participated in Aap Ki Adalat show

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ (Yash), ತಮ್ಮ ನಟನೆಯ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕೆ ಎರಡೆರಡು ಬಾರಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾದ ಪ್ರಚಾರವನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರಕ್ಕೆ ವೇಗ ನೀಡಬೇಕಾದ ಸಮಯದಲ್ಲಿ ಯಶ್ ಅವರು ಕಟಕಟೆಯಲ್ಲಿ ನಿಂತಿದ್ದಾರೆ. ಆದರೆ ಯಶ್ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವವರೇ ಯಶ್ ಅವರ ವ್ಯಕ್ತಿತ್ವಕ್ಕೆ ಫಿದಾ ಆಗಿದ್ದಾರೆ.

ಯಶ್, ಕಟಕಟೆಯಲ್ಲಿರುವುದು ನಿಜ, ಆದರೆ ಅದು ಅಸಲಿ ನ್ಯಾಯಾಲಯದ ಕಟಕಟೆ ಅಲ್ಲ ಬದಲಿಗೆ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ನಡೆಸಿಕೊಡುವ ‘ಆಪ್​ ಕಿ ಅದಾಲತ್’ ಕಟಕಟೆಯಲ್ಲಿ. ‘ಆಪ್​​ ಕಿ ಅದಾಲತ್’ ಭಾರತೀಯ ಟಿವಿ ಲೋಕದ ಬಹು ಹಳೆಯ ಶೋ. ರಜತ್ ಶರ್ಮಾ ಅವರು ದೇಶದ ಪ್ರಮುಖ ರಾಜಕಾರಣಿಗಳು, ಸಿನಿಮಾ ತಾರೆಯರು, ಟಿವಿ ತಾರೆಯರನ್ನು ಕರೆಸಿ, ಕಟಕೆಯಲ್ಲಿ ನಿಲ್ಲಿಸಿ ಪ್ರಶ್ನೆಗಳನ್ನು ಕೇಳುತ್ತಾರೆ. ಸೆಲೆಬ್ರಿಟಿಗಳು ಅದಕ್ಕೆ ಉತ್ತರ ನೀಡುತ್ತಾರೆ. ಮಾಜಿ ಪ್ರಧಾನಿಗಳು, ಹಾಲಿ ಪ್ರಧಾನಿಗಳು, ಬಾಲಿವುಡ್​​ನ ಖಾನ್​​ಗಳು ಇನ್ನೂ ಹಲವಾರು ಮಂದಿ ಈ ಕಾರ್ಯಕ್ರಮಕ್ಕೆ ಬಂದು ಕಟಕಟೆಯಲ್ಲಿ ಕೂತಿದ್ದಾರೆ.

ಇದೀಗ ನಟ ಯಶ್ ಸಹ ‘ಆಪ್​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಕಟಕಟೆಯಲ್ಲಿ ಕೂತು ರಜತ್ ಶರ್ಮಾ ಅವರ ಬೆಂಕಿಯುಂಡೆಯಂಥಹಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಯಶ್ ಅವರು ಭಾಗಿಯಾಗಿರುವ ಎಪಿಸೋಡ್ ನ ಚಿತ್ರೀಕರಣ ಆಗಿದ್ದು, ಶೀಘ್ರವೇ ಪ್ರಸಾರ ಆಗಲಿದೆ. ರಜತ್ ಶರ್ಮಾ ಅವರು ಯಶ್ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ದಿನಕ್ಕೆ ಎರಡು ಹೊತ್ತು ಊಟ ಕೂಡ ಪಡೆಯಲು ಸಹ ಕಷ್ಟ ಪಡುತ್ತಿದ್ದ ಈ ವ್ಯಕ್ತಿ ಈಗ ಕೋಟ್ಯಂತರ ಹಣ ಸಂಪಾದಿಸುತ್ತಾರೆ. ಇವರು ಪರದೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಬದಲಿಗೆ ಪರದೆಯನ್ನು ಹರಿದು ಹಾಕುತ್ತಾರೆ’ ಎಂದಿದ್ದಾರೆ ರಜತ್ ಶರ್ಮಾ.

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು?

ಯಶ್, ಟಿವಿ ಸಂದರ್ಶನಗಳಿಂದ ದೂರವೇ ಉಳಿದಿರುತ್ತಾರೆ. ಆದರೆ ಇದೀಗ ರಜತ್ ಶರ್ಮಾ ಅವರ ಶೋಗೆ ಹೋಗಿದ್ದಾರೆ. ರಜತ್ ಶರ್ಮಾ ತಮ್ಮ ನೇರಾ-ನೇರಾ ಆರೋಪಗಳು ಪ್ರಶ್ನೆಗಳಿಗೆ ಹೆಸರುವಾಸಿ. ಕಹಿ ಪ್ರಶ್ನೆಗಳನ್ನೇ ಕೇಳುವುದು ಹೆಚ್​ಚು. ಯಶ್ ಅವರಿಗೆ ರಜತ್ ಅವರು ಎಂಥಹಾ ಪ್ರಶ್ನೆಗಳನ್ನು ಹಾಕಿದ್ದಾರೆ, ಅವುಗಳಿಗೆ ಯಶ್ ಉತ್ತರ ಏನಾಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಗೀತೂ ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ನಯನತಾರಾ ಇನ್ನೂ ಕೆಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version