ದಿನಭವಿಷ್ಯ: ಇಂದು ಈ ರಾಶಿಯವರು ಪ್ರಾಯೋಗಿಕ ವಿಚಾರದಲ್ಲಿ ಮುಗ್ಗರಿಸುವರು… – Kannada News | Daily Horoscope for August 12, 2026: Dakshinayana Greeshma season, Ashada Masa Krishna Paksha Wednesday astrology

ಮೇಷ ರಾಶಿ:

ನಿಮ್ಮ ಮನೆಯವರು ಊಹಿಸಿದ್ದಕ್ಕಿಂತ ಹೆಚ್ಚನ್ನು ನೀವು ಸಾಧಿಸುವಿರಿ. ನೀವು ಲೆಕ್ಕಾಚಾರದ ವ್ಯಕ್ತಿಯಾದರೂ ರಿಸ್ಕ್ ತೆಗೆದುಕೊಳ್ಳಲು ತಯಾರಾಗುವಿರಿ. ಅಧ್ಯಯನಕ್ಕೆ ಹೆಚ್ಚು ಮಹತ್ತ್ವಕೊಡುವಿರಿ. ಚಂಚಲವಾದ ಮನಸ್ಸಿನಿಂದ ನೀವು ಗುರಿಯನ್ನು ಸಾಧಿಸಲು ಕಷ್ಟಪಡುವಿರಿ. ನಿಮ್ಮಂತಹ ಮಾನಸಿಕವಾಗಿ ಬಲವುಳ್ಳವರು ಹೃದಯಶೂನ್ಯ ಆಗಬಾರದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ.

ವೃಷಭ ರಾಶಿ:

ನಿಮ್ಮ ಸೃಜನಶೀಲ ಪ್ರತಿಕ್ರಿಯೆಯು ಇಷ್ಟವಾಗುವುದು. ನಿಮ್ಮ ಪ್ರೀತಿಪಾತ್ರರು ಸುತ್ತುವರಿದಿದ್ದು, ನಿಮ್ಮ ದಿನವೂ ಉತ್ಸಾಹದಿಂದ ಮುಗಿಯುತ್ತದೆ. ಕಾರ್ಯದ ಒತ್ತಡವಿರುವ ಕಾರಣ ಮನೆಗೆ ವಿಳಂಬವಾಗಿ ಬರುವಿರಿ. ಮನಸ್ಸನಲ್ಲಿ ಯಾವುದನ್ನೂ ಇಟ್ಟುಕೊಳ್ಳದೇ ಹಳೆಯ ಮನಸ್ತಾಪಗಳನ್ನು ಬಿಟ್ಟು ಸಂಬಂಧವನ್ನು ಮಧುರವಾಗಿಸಿ. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.

ಮಿಥುನ ರಾಶಿ:

ನಿಮ್ಮ ಈ ದಿನ ಚೆನ್ನಾಗಿ ಪ್ರಾರಂಭವಾಗಿರಲಿದ್ದು, ನಿಮ್ಮ ಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸುವಿರಿ. ಉತ್ಪಾದನೆ ಹೆಚ್ಚಿಸಲು ನಿಮ್ಮ ಕೆಲಸದ ವಿಧಾನವನ್ನು ಬದಲಾಯಿಸುವುದು ಸೂಕ್ತ. ಹೆಚ್ಚಾದ ವಿಶ್ವಾಸದಿಂದ ಮತ್ತು ಅನುಕೂಲಕರ ಫಲಿತಾಂಶಗಳಿಂದ ಭರವಸೆ ಹೆಚ್ಚಾಗುವುದು. ಪ್ರಮುಖ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಕೆಟ್ಟ ಮತ್ತು ಎದುರು ಹೊಗಳುವ ಸ್ವಭಾವದ ಜನರ ಸಹವಾಸದಿಂದ ನಿಮಗೆ ತೊಂದರೆ ಆಗಲಿದೆ.

ಕರ್ಕಾಟಕ ರಾಶಿ:

ಕೆಲವು ನಿಮಗೆ ಅನ್ವಯವಾಗುವಂತಹವು ನಡೆಯಲಿದೆ. ಪ್ರಶ್ನೆ ಮತ್ತು ತರ್ಕ ಎಂದು ನೀವು ಆಲೋಚಿಸುತ್ತೀರಿ ಮತ್ತು ಎಲ್ಲ ಅಂಶಗಳನ್ನು ಪರಿಗಣಿಸಿಯೇ ಸೂಕ್ತ ಆಯ್ಕೆ ಮಾಡಿ. ಅಂತಿಮ ತೀರ್ಮಾನ ನಿಮ್ಮದೇ ಆಗಿರಲಿ. ಹಳೆಯ ಘಟನೆಗಳ ನೆನಪಿನಿಂದ ಮನಸ್ಸು ಭಾರವಾಗಬಹುದು. ಆಕಸ್ಮಿಕವಾದ ಕೆಲವು ಸಂತೋಷಕರ ಸುದ್ದಿಗಳಿಂದ ಮನಸ್ಸು ಅರಳುವುದು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು.

ಸಿಂಹ ರಾಶಿ:

ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರುವಿರಿ. ನೀವು ಯಾರದ್ದಾದರೂ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ನೀವು ತಾಳ್ಮೆ ತಂದುಕೊಳ್ಳಬೇಕು. ಅನ್ಯರಿಂದ ಸಣ್ಣ ತಪ್ಪು ಭಾವನೆಯೂ ನಿಮ್ಮ ಮೇಲೆ ಆಗಬಾರದು. ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು. ನೀವು ಚಾತುರ್ಯದಿಂದ ಸಂಬಂಧದ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು.

ಕನ್ಯಾ ರಾಶಿ:

ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶವನ್ನು ಕಂಡುಕೊಳ್ಳುವಿರಿ. ನೀವು ಹಣಕಾಸಿನ ವಿಷಯದಲ್ಲಿ ಸ್ವಾವಲಂಬಿಯಾಗಿ ಗುರಿಯನ್ನು ಸಾಧಿಸುವಿರಿ. ಹುಡುಕಾಡಕ್ಕೆ ಒಂದು ಅಂತ್ಯವನ್ನು ತಂದುಕೊಳ್ಳುವುದು ಉತ್ತಮ. ಯೋಜಿತ ಕೆಲಸಗಳು ಫಲಪ್ರದವಾಗಲಿವೆ. ನೈತಿಕ ಮತ್ತು ಅನೈತಿಕತೆಯ ಬಗ್ಗೆ ಯೋಚಿಸುವ ಮನಸ್ಸು ಭೌತಿಕ ಪರಿಸರದೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗುವುದಿಲ್ಲ. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು.

ತುಲಾ ರಾಶಿ:

ಇಂದು ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪಾರ ಸಾಮರ್ಥ್ಯಗಳನ್ನು ಕೂಡಾ ಪರೀಕ್ಷಿಸಲಾಗುತ್ತದೆ. ಪರಿಹಾರವಾಗದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಲು ನೀವು ಆವಿಷ್ಕಾರಕ ವಿಧಾನಗಳನ್ನು ಆಲೋಚಿಸುವ ಸಾಧ್ಯತೆ ಇದೆ. ಅಗತ್ಯವಿರುವ ಮಾತುಗಳನ್ನಾಡಿ ಸುಮ್ಮನಾಗುವಿರಿ. ಇಂದು ಆಧ್ಯಾತ್ಮಿಕ ಭಾವನೆಗಳು ನಿಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ.

ವೃಶ್ಚಿಕ ರಾಶಿ:

ನಿಮ್ಮ ಗುರಿಗಳಿಗೆ ನೀವು ಬದ್ಧರಾಗಿರುವ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ಅವರ ಕರ್ತವ್ಯಗಳಲ್ಲಿ ಕೊರತೆಯಾಗಲು ಅವಕಾಶ ನೀಡಬೇಡಿ. ಪ್ರಯಾಣದಲ್ಲಿ ವ್ಯತ್ಯಾಸ ಹಾಗೂ ಹೋಗಬೇಕಾದ ಸ್ಥಳಕ್ಕೆ ವಿಳಂಬವಾಗಿ ಹೋಗುವಿರಿ. ನಿಮ್ಮ ಮೇಲಧಿಕಾರಿಗಳ ನಿಮಗೆ ನೆರವು ಸಿಗುತ್ತದೆ. ನಿಮ್ಮ ಕಡಿಮೆಯಾಗುವ ಭಯವು ಕಾಡಬಹುದು. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳುವಿರಿ. ತಂದೆಯ ಮಾತು ನಿಮಗೆ ಸರಿ ಕಾಣಿಸದೇ ಇರುವುದು.

ಧನು ರಾಶಿ:

ಇಂದು ನಿಮ್ಮ ಸೃಜನಶೀಲ ವ್ಯಕ್ತಿತ್ವವು ಗೊತ್ತಾಗಲಿದೆ. ವಿವಾಹದ ಚಿಂತೆಯು ನಿಮ್ಮನ್ನು ಕಾಡಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವಿರಿ. ಆಸ್ತಿಯನ್ನು ಭಾಗ ಮಾಡಿಕೊಳ್ಳಲು ನೀವು ಇಂದು ಮುಂದಾಗುವಿರಿ. ಆರ್ಥಿಕತೆ ಉತ್ತಮವಾಗಿ ಉದ್ವೇಗದಲ್ಲಿ ಸಿಕ್ಕಿಬೀಳುವಿರಿ. ಮನೆಯರ ಸಣ್ಣ ಮಾತಿಗೆ ಬೇಸರಿಸಬೇಡಿ. ಧಾರ್ಮಿಕ ಕಾರ್ಯಗಳನ್ನು ಮಾಡಲು ಒಲವು ಬರಲಿದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು.

ಮಕರ ರಾಶಿ:

ನಿಮ್ಮ ಕೋಪ ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಇತರರಿಗೆ ನೋವುಂಟು ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ನೀವು ಇಡೀ ದಿನ ನಿಮ್ಮನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ. ಖಾಸಗಿ ಉದ್ಯೋಗಿಗಳನ್ನು ಕೈ ಬಿಡಲು ಸಂಸ್ಥೆ ನಿರ್ಧರಿಸಬಹುದು. ಕಳೆದ ದಿನಗಳನ್ನು ನೀವು ಮೆಲುಕು ಹಾಕಿ ಸಂತೋಷಗೊಳ್ಳುವಿರಿ.

ಕುಂಭ ರಾಶಿ:

ನಿಮ್ಮ ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನಿಮ್ಮ ಮಾತಿನ ದಾಟಿ ಎದುರಿನವರಿಗೆ ಹಿಂಸೆ ಕೊಡುವಂತೆ ಇರುವುದು. ಕೆಲಸದ ಸ್ಥಳದಲ್ಲಿ ನಿಷ್ಠೆಯಿಂದ ಕೆಲಸ ಮಾಡುವಿರಿ. ಕುಟುಂಬದ ಜವಾಬ್ದಾರಿಗಳನ್ನು ಸಮಯಕ್ಕೆ ಪೂರೈಸಲು ಗಮನ ಕೊಡಿ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ.

ಮೀನ ರಾಶಿ:

ಮನಸ್ಸಿಗೆ ವಿಶ್ರಾಂತಿಗೆ ತೆಗೆದುಕೊಳ್ಳಿ. ಏಕೆಂದರೆ ನೀವು ಏನೇ ಮಾಡಿದರೂ ತೊಂದರೆಯನ್ನು ತಪ್ಪಿಸಲಾಗದು. ಇಂದಿನ ಕಠಿಣತೆಯು ನಾಳೆಗೆ ಸುಲಭದ ದಾರಿಯನ್ನು ಮಾಡಿಕೊಡಲಿದೆ. ಸರ್ಕಾರಿ ನೌಕರರಿಗೆ ಅನೇಕ ಕಡೆಗಳಿಂದ‌ ಒತ್ತಡ ಬರಲಿದೆ. ಕೆಲವು ಕೆಲಸಕ್ಕೆ ಕಠಿಣಶ್ರಮದ ಅವಶ್ಯಕತೆ ಇರುತ್ತದೆ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ವ್ಯತಿಪಾತ್ , ಕರಣ : ಬಾಲವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 41 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:25 – 13:59, ಯಮಗಂಡ ಕಾಲ 07:42 – 09:16, ಗುಳಿಕ ಕಾಲ 10:50 – 12:25

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಿಎಂ ಹೇಮಂತ್ ಸೊರೇನ್ ಹತ್ಯೆಗೆ ಯತ್ನ’; ಬಿಜೆಪಿ ವಿರುದ್ಧ ಜಾರ್ಖಂಡ್ ಸಚಿವ ಇರ್ಫಾನ್ ಅನ್ಸಾರಿ ಗಂಭೀರ ಆರೋಪ – Kannada News | Attempted to kill CM Hemant Soren Jharkhand Minister Irfan Ansari charge against BJP MLAs

ರಾಂಚಿ, ಆಗಸ್ಟ್ 11: ಜಾರ್ಖಂಡ್‌ನಲ್ಲಿ ಉದ್ಯೋಗ ನೇಮಕಾತಿ ಪರೀಕ್ಷೆಗಳ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸುದೀರ್ಘ ಹೋರಾಟದ ಬೆನ್ನಲ್ಲೇ, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದೆ. ಜಾರ್ಖಂಡ್ (Jharkhand) ಆರೋಗ್ಯ ಸಚಿವ ಹಾಗೂ ಕಾಂಗ್ರೆಸ್ ನಾಯಕ ಇರ್ಫಾನ್ ಅನ್ಸಾರಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರ ವಿರುದ್ಧ ‘ಹತ್ಯೆ ಯತ್ನ’ದ ಗಂಭೀರ ಆರೋಪ ಮಾಡಿದ್ದಾರೆ.

ಆಗಸ್ಟ್ 10ರಂದು ಮುಖ್ಯಮಂತ್ರಿಯ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರು ಮತ್ತು ನಾಯಕರನ್ನು ಬಂಧಿಸಿ ವಿಧಾನಸಭೆ ಪ್ರವೇಶಿಸದಂತೆ ತಡೆದ ಬಗ್ಗೆ ಮಾತನಾಡಿದ ಸಚಿವ ಇರ್ಫಾನ್ ಅನ್ಸಾರಿ, ಬಿಜೆಪಿಯವರು ಮುಖ್ಯಮಂತ್ರಿ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು. ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಯ ನಿವಾಸದ ಮೇಲೆ ದಾಳಿ ಮಾಡಲು ಯತ್ನಿಸಿ, ಪ್ರತಿಭಟನೆಯ ನೆಪದಲ್ಲಿ ಬಿಜೆಪಿ ಶಾಸಕರು ಸದನದಿಂದ ಹೊರಬಂದಿದ್ದರು. ಮುಖ್ಯಮಂತ್ರಿ ನಿವಾಸವು ಮುಖ್ಯ ರಸ್ತೆಯಲ್ಲಿದೆ ಮತ್ತು ಅವರು ತಮ್ಮ ಇಡೀ ಕುಟುಂಬದೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ನಾವು ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್​​ನಲ್ಲಿ ಪರೀಕ್ಷಾ ಅಕ್ರಮ; ಸಿಐಡಿಯಿಂದ ಜೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಲ್. ಖಿಯಾಂಗ್ತೆ ಬಂಧನ

ಸಿಎಂ ನಿವಾಸದ ಮುಂದೆ ಧರಣಿ:

ಜಾರ್ಖಂಡ್ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕರು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸದ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿ ಧರಣಿ ಕುಳಿತಿದ್ದರು. ಈ ಕುರಿತು ರಾಂಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಇರ್ಫಾನ್ ಅನ್ಸಾರಿ, “ಸೋಮವಾರ ನಮ್ಮ ಮುಖ್ಯಮಂತ್ರಿಯವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಬಿಜೆಪಿ ಶಾಸಕರು ನಡೆಸಿದ್ದು ಕೇವಲ ಸಾಂಕೇತಿಕ ಪ್ರತಿಭಟನೆಯಲ್ಲ, ಬದಲಿಗೆ ಅದು ಮುಖ್ಯಮಂತ್ರಿಯವರನ್ನು ಹತ್ಯೆ ಮಾಡಲು ನಡೆಸಿದ ಆಯೋಜಿತ ಸಂಚು” ಎಂದು ಆರೋಪಿಸಿದ್ದಾರೆ.

ಭದ್ರತೆಯ ಆತಂಕ:

“ರಾಜ್ಯದ ಒಬ್ಬ ಆದಿವಾಸಿ ಮುಖ್ಯಮಂತ್ರಿ ರಸ್ತೆಬದಿಯ ನಿವಾಸದಲ್ಲಿ ಸೂಕ್ತ ಭದ್ರತೆಯಿಲ್ಲದೆ ವಾಸಿಸುತ್ತಿದ್ದಾರೆ. ಅವರು ಮನೆ ಒಳಗೆ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದಾಗ ಈ ರೀತಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ? ಯಾರಾದರೂ ಗೋಡೆ ಜಿಗಿದು ಒಳಗೆ ನುಗ್ಗಿ ಅನಾಹುತ ಎಸಗಿದ್ದರೆ ಅದಕ್ಕೆ ಯಾರು ಹೊಣೆ?” ಎಂದು ಅನ್ಸಾರಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್​ನಲ್ಲಿ 17ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ; ಜಲಫಿರಂಗಿಗೂ ಬೆದರದ ಯುವಜನರು

ವಿದ್ಯಾರ್ಥಿಗಳ ನೇಮಕಾತಿ ಪರೀಕ್ಷೆಯ ಗೊಂದಲದ ನಡುವೆ ಸಚಿವರ ಈ ಹೇಳಿಕೆಯು ಜಾರ್ಖಂಡ್ ಅಸೆಂಬ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ಜಾರ್ಖಂಡ್‌ನಲ್ಲಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ, ರಾಜ್ಯ ಆರೋಗ್ಯ ಸಚಿವ ಹಾಗೂ ಕಾಂಗ್ರೆಸ್ ನಾಯಕ ಇರ್ಫಾನ್ ಅನ್ಸಾರಿ ಅವರು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ (ಆಗಸ್ಟ್ 10) ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು ಕೇವಲ ಧರಣಿ ನಡೆಸಲಿಲ್ಲ, ಬದಲಿಗೆ ಮುಖ್ಯಮಂತ್ರಿಯವರ ಪ್ರಾಣಕ್ಕೇ ಅಪಾಯವನ್ನುಂಟುಮಾಡಿದರು ಎಂದು ಅನ್ಸಾರಿ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈದರಾಬಾದ್‌ನಲ್ಲಿ ಜೂ. ಎನ್‌ಟಿಆರ್‌ ಭುಜದ ಶಸ್ತ್ರಚಿಕಿತ್ಸೆ: ಕಿಮ್ಸ್ ಆಸ್ಪತ್ರೆಗೆ ದಾಖಲು – Kannada News | Telugu actor Jr NTR to undergo shoulder surgery Hyderabad KIMS hospital 12 August

ಟಾಲಿವುಡ್‌ ಮ್ಯಾನ್‌ ಆಫ್‌ ಮಾಸಸ್‌, ನಟ ಜೂನಿಯರ್ ಎನ್‌ಟಿಆರ್ (Jr NTR) ಅವರಿಗೆ ಬುಧವಾರ (ಆಗಸ್ಟ್ 12) ಹೈದರಾಬಾದ್‌ನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆ (Shoulder Surgery) ನಡೆಯಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯಕೀಯ ತಪಾಸಣೆಯ ನಂತರ ಈ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಲಾಗಿದೆ ಎಂದು ಅವರ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ವೈದ್ಯರ ತಂಡದಿಂದ ಚಿಕಿತ್ಸೆ ಮತ್ತು ನಿಗಾ

ಎನ್‌ಟಿಆರ್ ಅವರ ಭುಜದ ಗಾಯದ ಕುರಿತು ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರ ಸಲಹೆಯಂತೆ ಈ ಚಿಕಿತ್ಸೆ ನಡೆಯುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ವಿಶೇಷ ತಂಡವು ಅವರ ಚೇತರಿಕೆಯ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದು, ಕಾಲಕಾಲಕ್ಕೆ ಆರೋಗ್ಯದ ಕುರಿತು ಅಪ್‌ಡೇಟ್ ನೀಡಲಿದೆ. ಈ ಬಗ್ಗೆ ಎನ್‌ಟಿಆರ್ ತಂಡ ಅಧಿಕೃತ ಹೇಳಿಕೆ ನೀಡಿದೆ.

‘ಎನ್‌ಟಿಆರ್ ಅವರು ಆಗಸ್ಟ್ 12ರಂದು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಈ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಲಾಗಿದೆ. ಎನ್‌ಟಿಆರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ವೈದ್ಯರ ತಂಡ ಶ್ರಮಿಸುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದ ಸ್ಥಿತಿಗತಿಯನ್ನು ನಿಮಗೆ ತಿಳಿಸುತ್ತೇವೆ. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಖಾಸಗಿತನಕ್ಕೆ ಗೌರವ ನೀಡಲು ಮನವಿ:

ಎನ್‌ಟಿಆರ್ ಅವರ ತಂಡವು ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. ಈ ನಡುವೆ, ಅವರ ತಂಡದವರು ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸಿದ್ದು, ನಟ ಚೇತರಿಸಿಕೊಳ್ಳುವ ಸಮಯದಲ್ಲಿ ಅವರ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ಅಂದು ಬಾಡಿ ಶೇಮಿಂಗ್ ಎದುರಿಸಿದ್ದ ಜೂ. ಎನ್‌ಟಿಆರ್; ಈಗ ಕಟ್ಟುಮಸ್ತಾದ ಫೋಟೋ ವೈರಲ್

ಚಿತ್ರೀಕರಣಕ್ಕೆ ಸಣ್ಣ ವಿರಾಮ:

ಪ್ರಸ್ತುತ ಜೂನಿಯರ್ ಎನ್‌ಟಿಆರ್‌ ಅವರು ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಹಾಗೂ 2024ರ ಬ್ಲಾಕ್‌ಬಸ್ಟರ್ ‘ದೇವರ: ಪಾರ್ಟ್ 1’ ಚಿತ್ರದ ಮುಂದುವರಿದ ಭಾಗವಾದ ‘ದೇವರ: ಪಾರ್ಟ್ 2’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಆದರೆ ಈಗ ಶಸ್ತ್ರಚಿಕಿತ್ಸೆಯ ಕಾರಣದಿಂದ ಚಿತ್ರೀಕರಣಕ್ಕೆ ಸಣ್ಣ ವಿರಾಮ ಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ; 3,000ಕ್ಕೂ ಹೆಚ್ಚು ಜನ ನಾಪತ್ತೆ – Kannada News | Colombia Earthquake Death Toll rises to 224 Over 3,000 people Missing

ಕೊಲಂಬಿಯಾ, ಆಗಸ್ಟ್ 11: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ (Colombia Earthquake) ಸಂಭವಿಸಿದ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 224ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭೂಕಂಪವು ದೇಶಾದ್ಯಂತ ಅಪಾರ ಪ್ರಮಾಣದ ನಾಶನಷ್ಟವನ್ನುಂಟುಮಾಡಿದ್ದು, 3,000ಕ್ಕೂ ಹೆಚ್ಚು ಜನರು ಇನ್ನೂ ಪತ್ತೆಯಾಗಿಲ್ಲ. ಸೋಮವಾರ ಸಂಭವಿಸಿದ 7.4 ರೇಕ್ಟರ್ ಪ್ರಮಾಣದ ಈ ಭೂಕಂಪದಿಂದಾಗಿ 1,500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಅಥವಾ ನೆಲಸಮವಾಗಿವೆ.

ದಶಕಗಳಲ್ಲೇ ಅತ್ಯಂತ ಭೀಕರ ಭೂಕಂಪಕ್ಕೆ ತತ್ತರಿಸಿರುವ ಪಶ್ಚಿಮ ಕೊಲಂಬಿಯಾದಲ್ಲಿ ತುರ್ತು ರಕ್ಷಣಾ ತಂಡಗಳು ಕುಸಿದುಬಿದ್ದ ಕಟ್ಟಡಗಳ ಅಡಿಯಿಂದ ಬದುಕುಳಿದವರನ್ನು ಹುಡುಕುವ ಕಾರ್ಯಾಚರಣೆಯನ್ನು ಇಂದು ಕೂಡ ಮುಂದುವರಿಸಿವೆ. ಭೂಮಿಯ ಆಳದಲ್ಲಿ ಸುಮಾರು 96 ಕಿ.ಮೀ (60 ಮೈಲಿ) ಆಳದಲ್ಲಿ ಸಂಭವಿಸಿದ ಈ ಭೂಕಂಪವು ಪ್ರಮುಖ ಪ್ರದೇಶಗಳಲ್ಲಿ ಅಪಾರ ವಿನಾಶವನ್ನು ಉಂಟುಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು – Kannada News | Pakistan Army Headquarter Under Attack 1 Pak Soldier Killed

ರಾವಲ್ಪಿಂಡಿ, ಆಗಸ್ಟ್ 11: ಪಾಕಿಸ್ತಾನದ (Pakistan) ರಾವಲ್ಪಿಂಡಿಯಲ್ಲಿರುವ ಸೇನೆಯ ಮುಖ್ಯ ಪ್ರಧಾನ ಕಚೇರಿಯ ಮುಖ್ಯ ದ್ವಾರದ ಬಳಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರ ಪ್ರವೇಶ ತಪಾಸಣಾ ಕೇಂದ್ರದ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಮಿಲಿಟರಿ ಕಮಾಂಡ್ ಸೆಂಟರ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ಆದರೂ ಈ ಘಟನೆಯಲ್ಲಿ ಪಾಕಿಸ್ತಾನದ ಓರ್ವ ಸೈನಿಕ ಮೃತಪಟ್ಟಿದ್ದಾರೆ.

ಎರಡೂ ಕಡೆಗಳಿಂದ ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ ಓರ್ವ ಯೋಧ ಕರ್ತವ್ಯ ನಿರತರಾಗಿದ್ದಾಗಲೇ ಮೃತರಾಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಚೇರಿಯ ಒಳಭಾಗದ ಭದ್ರತಾ ವಲಯಕ್ಕೆ ನುಗ್ಗಲು ಯತ್ನಿಸುತ್ತಿದ್ದ ದಾಳಿಕೋರನನ್ನು ಭದ್ರತಾ ಪಡೆಗಳು ಸ್ಥಳದಲ್ಲೇ ಹೊಡೆದುರುಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ – Kannada News | Direct tax collections this year rise drastically, with non corporate taxes see big increase

ನವದೆಹಲಿ, ಆಗಸ್ಟ್ 11: ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು (Net Direct Tax Collections) ಶೇ. 23.09 ರಷ್ಟು ಭಾರಿ ಏರಿಕೆ ಕಂಡಿದೆ. ನಿನ್ನೆಯವರೆಗಿನ (ಆ. 10) ಅಂಕಿಅಂಶಗಳ ಪ್ರಕಾರ, ಒಟ್ಟು ನಿವ್ವಳ ನೇರ ತೆರಿಗೆ ₹8.11 ಲಕ್ಷ ಕೋಟಿ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಮೊತ್ತವು ₹6.59 ಲಕ್ಷ ಕೋಟಿಯಾಗಿತ್ತು. ಈ ವರ್ಷದಲ್ಲಿ ಭರ್ಜರಿ ಟ್ಯಾಕ್ಸ್ ಕಲೆಕ್ಷನ್ ಆಗಿದೆ. ಇಲ್ಲಿ ನೇರ ತೆರಿಗೆ ಎಂದರೆ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ಆದಾಯ ತೆರಿಗೆ ಇತ್ಯಾದಿ ಆದಾಯಗಳಿಗೆ ವಿಧಿಸಲಾಗುವ ಟ್ಯಾಕ್ಸ್ ಆಗಿದೆ.

ಕಾರ್ಪೊರೇಟೇತರ ತೆರಿಗೆದಾರರ ಕೊಡುಗೆ

ಈ ಬಾರಿ ತೆರಿಗೆ ಸಂಗ್ರಹದ ಏರಿಕೆಯಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರು, ಎಚ್‌ಯುಎಫ್ (HUF) ಮತ್ತು ಸಂಸ್ಥೆಗಳನ್ನೊಳಗೊಂಡ ‘ಕಾರ್ಪೊರೇಟೇತರ’ (Non-Corporate Taxes) ವಿಭಾಗದ ಪಾತ್ರ ದೊಡ್ಡದಾಗಿದೆ. ಈ ವಿಭಾಗದಿಂದ ಹರಿದುಬಂದ ನಿವ್ವಳ ತೆರಿಗೆ ಮೊತ್ತವು ₹5.07 ಲಕ್ಷ ಕೋಟಿ ತಲುಪಿದ್ದು, ಕಳೆದ ವರ್ಷಕ್ಕೆ (₹4.11 ಲಕ್ಷ ಕೋಟಿ) ಹೋಲಿಸಿದರೆ ಸುಮಾರು 23.4% ಪ್ರಗತಿ ದಾಖಲಿಸಿದೆ.

ಇದನ್ನೂ ಓದಿ: ನಿಮ್ಮ ಬಳಿ ಆಧಾರ್ ಇದ್ರೆ ಸಾಕು ಇ-ಪ್ಯಾನ್ ಕಾರ್ಡ್ ಪಡೆಯೋದು ಸುಲಭ

ಕಾರ್ಪೊರೇಟ್ ತೆರಿಗೆ ಏರಿಕೆ

ಕಂಪನಿಗಳು ಮತ್ತು ಉದ್ಯಮ ವಲಯದಿಂದ ಪಾವತಿಯಾದ ನಿವ್ವಳ ಕಾರ್ಪೊರೇಟ್ ತೆರಿಗೆ (Corporate Tax) ಸಂಗ್ರಹವು ₹2.26 ಲಕ್ಷ ಕೋಟಿಯಿಂದ ₹2.70 ಲಕ್ಷ ಕೋಟಿಗೆ (19.8% ಏರಿಕೆ) ಹೆಚ್ಚಳವಾಗಿದೆ.

ಒಟ್ಟು ತೆರಿಗೆ ಸಂಗ್ರಹ ಹಾಗೂ ರಿಫಂಡ್

ಯಾವುದೇ ರಿಫಂಡ್ ನೀಡುವ ಮೊದಲು ಸಂಗ್ರಹವಾದ ಒಟ್ಟು ನೇರ ತೆರಿಗೆ (Gross Collection) ಮೊತ್ತವು ₹9.55 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗ್ರಾಸ್ ಟ್ಯಾಕ್ಸ್ ಕಲೆಕ್ಷನ್ ₹7.97 ಲಕ್ಷ ಕೋಟಿ ಇತ್ತು. ಈ ವರ್ಷ 19.75% ಏರಿದೆ.

ಇಲಾಖೆಯು ಈ ಅವಧಿಯಲ್ಲಿ ₹1.43 ಲಕ್ಷ ಕೋಟಿ ಮೊತ್ತದ ರಿಫಂಡ್ (Refunds) ಅನ್ನು ತೆರಿಗೆದಾರರಿಗೆ ಹಿಂತಿರುಗಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 3.79 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಜಿಗಿತ

ಷೇರು ಮಾರುಕಟ್ಟೆ ವಹಿವಾಟಿನ ಮೇಲೆ ವಿಧಿಸುವ ‘ಎಸ್‌ಟಿಟಿ’ (STT) ಸಂಗ್ರಹದಲ್ಲಿ ಬೃಹತ್ ಜಿಗಿತ ಕಂಡುಬಂದಿದ್ದು, ಕಳೆದ ವರ್ಷದ ₹22,354 ಕೋಟಿಯಿಂದ ₹33,824 ಕೋಟಿಗೆ (ಸುಮಾರು 51% ಏರಿಕೆ) ಏರಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯನಿಂದ ಬ್ರಿಟಿಷ್ ಸರ್ಕಾರಕ್ಕೆ 35,000 ರೂ. ಸಾಲ; 109 ವರ್ಷಗಳ ಬಳಿಕ ಇಂಗ್ಲೆಂಡ್​​ನಿಂದ ಬಂತು ಇಮೇಲ್! – Kannada News | Rs 35,000 loan to British Government in 1917 Madhya Pradesh family gets response from UK debt office after 109 years

ನವದೆಹಲಿ, ಆಗಸ್ಟ್ 11: ಮೊದಲ ಮಹಾಯುದ್ಧದ ಸಮಯದಲ್ಲಿ (1917ರಲ್ಲಿ) ಬ್ರಿಟಿಷ್ ಸರ್ಕಾರಕ್ಕೆ ಸಾಲ ನೀಡಿದ್ದ ಮಧ್ಯಪ್ರದೇಶದ ಸೆಹೋರ್ ಮೂಲದ ಕುಟುಂಬವೊಂದಕ್ಕೆ 109 ವರ್ಷಗಳ ಬಳಿಕ ಯುನೈಟೆಡ್ ಕಿಂಗ್‌ಡಮ್‌ನ (UK) ಸಾಲ ನಿರ್ವಹಣಾ ಕಚೇರಿಯಿಂದ (DMO) ಇಮೇಲ್ ಮೂಲಕ ಉತ್ತರ ಬಂದಿದೆ. ಅದರಲ್ಲಿ, ಮೂಲ ಯುದ್ಧ ಸಾಲ ಪ್ರಮಾಣಪತ್ರ ಮತ್ತು ಸಂಬಂಧಿತ ಪತ್ರವ್ಯವಹಾರದ ಪ್ರತಿಗಳನ್ನು ಕೋರಲಾಗಿದೆ. ಆ ಕುಟುಂಬವು ಪ್ರಸ್ತುತ ಬ್ರಿಟಿಷ್ ಅಧಿಕಾರಿಗಳಿಗೆ ಕಳುಹಿಸಲು ಅಗತ್ಯ ದಾಖಲೆಗಳು ಮತ್ತು ಇತರ ಬ್ಯಾಕಪ್ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.

ಏನಿದು ಘಟನೆ?:

ಸೆಹೋರ್‌ನ ಪ್ರಸಿದ್ಧ ಉದ್ಯಮಿ ಹಾಗೂ ನಗರ ಸೇಠ್ ಆಗಿದ್ದ ಜುಮ್ಮಾ ಲಾಲ್ ರುಥಿಯಾ ಎಂಬುವವರು 1917ರ ಜೂನ್ 4ರಂದು ಪ್ರಥಮ ಮಹಾಯುದ್ಧದ ನಿಧಿ ಸಂಗ್ರಹಕ್ಕಾಗಿ ಬ್ರಿಟಿಷ್ ಸರ್ಕಾರ ಬಿಡುಗಡೆ ಮಾಡಿದ್ದ ‘ಇಂಡಿಯನ್ ವಾರ್ ಲೋನ್’ಗೆ 35,000 ರೂ. ಸಾಲ ನೀಡಿದ್ದರು. ಆಗಿನ ಭೋಪಾಲ್‌ನ ಪೊಲಿಟಿಕಲ್ ಏಜೆಂಟ್ ಡಬ್ಲ್ಯೂ.ಎಸ್. ಡೇವಿಸ್ ಈ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದರು. 1937ರಲ್ಲಿ ಸೇಠ್ ಜುಮ್ಮಾ ಲಾಲ್ ನಿಧನರಾದರು. ನಂತರ ಸ್ವಾತಂತ್ರ್ಯ ಚಳವಳಿ ನಡೆದು ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾಯಿತು. ಹೀಗಾಗಿ, ಆ ಸಾಲವನ್ನು ಅವರ ಕುಟುಂಬಕ್ಕೆ ಮರುಪಾವತಿ ಮಾಡಿರಲಿಲ್ಲ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಕಾನೂನು ನೋಟಿಸ್:

ಜುಮ್ಮಾ ಲಾಲ್ ಅವರ ಮೊಮ್ಮಕ್ಕಳಾದ ವಿವೇಕ್ ರುಥಿಯಾ (63) ಮತ್ತು ವಿನಯ್ ರುಥಿಯಾ ಅವರು ತಮ್ಮ ವಕೀಲರ ಮೂಲಕ 2026ರ ಫೆಬ್ರವರಿಯಲ್ಲಿ ಬ್ರಿಟನ್‌ನ ಸಾಲ ನಿರ್ವಹಣಾ ಕಚೇರಿಗೆ (DMO) ಹಳೆಯ ಪ್ರಮಾಣಪತ್ರ ಮತ್ತು ದಾಖಲೆಗಳ ಆಧಾರದ ಮೇಲೆ ನೋಟಿಸ್ ಕಳುಹಿಸಿದ್ದರು.

ಬ್ರಿಟನ್ ಸರ್ಕಾರದ ಉತ್ತರವೇನು?:

ಆ ನೋಟಿಸ್​​ಗೆ ಯುಕೆಯ ಸಾಲ ನಿರ್ವಹಣಾ ಕಚೇರಿಯು ರುಥಿಯಾ ಕುಟುಂಬದ ವಕೀಲರಿಗೆ ಇಮೇಲ್ ಕಳುಹಿಸಿದ್ದು, 1917ರ ಸಾಲದ ಮೂಲ ಪ್ರಮಾಣಪತ್ರ ಮತ್ತು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳ ಪ್ರತಿಗಳನ್ನು ಸಲ್ಲಿಸುವಂತೆ ಕೋರಿದೆ. ಆ ದಾಖಲೆಗಳನ್ನು ಪರಿಶೀಲಿಸಿ, ಈ ಸಾಲವನ್ನು ಈ ಹಿಂದೆ ಮರುಪಾವತಿ ಮಾಡಲಾಗಿದೆಯೇ ಅಥವಾ ಬಾಕಿ ಉಳಿದಿದೆಯೇ ಎಂಬುದನ್ನು ಆರ್ಕೈವ್ಸ್ ಮುಖಾಂತರ ತನಿಖೆ ನಡೆಸುವುದಾಗಿ ಯುಕೆ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ತಿಂಡಿ ತಿಂದು ವಿಮಾನ ಹತ್ತಿದ್ದ ಬ್ರಿಟಿಷ್ ಏರ್​ವೇಸ್​ನ ಮೂವರು ಪೈಲಟ್​ಗಳು ಅಸ್ವಸ್ಥ

ಇಂದಿನ ಮೌಲ್ಯ ಎಷ್ಟು ಕೋಟಿ?:

109 ವರ್ಷಗಳ ಹಿಂದೆ ನೀಡಲಾಗಿದ್ದ 35,000 ರೂ.ಗೆ ಶೇ. 5.5ರ ವಾರ್ಷಿಕ ಬಡ್ಡಿ ದರದಲ್ಲಿ ಲೆಕ್ಕ ಹಾಕಿದರೆ, ಈಗ ಇದರ ಮೌಲ್ಯ ಹಲವು ಕೋಟಿ ರೂ. ಆಗಲಿದೆ. ಒಂದು ವೇಳೆ ಅಂದಿನ ಚಿನ್ನದ ಬೆಲೆಗೆ ಹೋಲಿಸಿ ಲೆಕ್ಕ ಹಾಕಿದರೆ (1917ರಿಂದ ಚಿನ್ನದ ಬೆಲೆ 3,000 ಪಟ್ಟು ಹೆಚ್ಚಾಗಿದೆ) ಈ ಮೊತ್ತವು 10 ಕೋಟಿ ರೂ.ಗಿಂತಲೂ ಹೆಚ್ಚು ಆಗಲಿದೆ ಎಂದು ಕುಟುಂಬಸ್ಥರು ಅಂದಾಜಿಸಿದ್ದಾರೆ. ತಮ್ಮ ತಾತನ ಸಾಲದ ಬಾಕಿ ಹಣ ಪಡೆಯುವುದು ಈಗ ಕೇವಲ ಹಣದ ವಿಚಾರವಾಗಿ ಉಳಿದಿಲ್ಲ, ಇದು ಕುಟುಂಬದ ಗೌರವದ ವಿಷಯವಾಗಿದೆ ಎಂದು ವಿವೇಕ್ ರುಥಿಯಾ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಾನಂದ ನೀಲಣ್ಣನವರ್​​ ಕಳ್ಳಾಟ ಬಯಲು: ಶಿವಂ ಅಸೋಸಿಯೇಟ್ಸ್​ನಿಂದ 2,110 ಕೋಟಿ ವಂಚನೆ, ಇಡಿ ತನಿಖೆಯಲ್ಲಿ ಬಹಿರಂಗ – Kannada News | Belagavi shivam associates cheat investors of rs 2110 crore: found In ed investigation

ಬೆಂಗಳೂರು/ಬೆಳಗಾವಿ, (ಆಗಸ್ಟ್ 11): ಬೆಳಗಾವಿ (Belagavi) ಶಿವಾನಂದ ಸಿದ್ದಪ್ಪ ನೀಲನ್ನವರ್ ಎನ್ನುವರಿಗೆ ಸೇರಿದ ಶಿವಂ ಅಸೋಸಿಯೇಟ್ಸ್ ನಿಂದ (Shivam Associates) ಜನರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಇಡಿ (Enforcement Directorate) ಪ್ರವೇಶ ಮಾಡಿದ್ದು,  ಶಿವಂ ಅಸೋಸಿಯೇಟ್ಸ್ ನಡೆಸಿದ ಕಳ್ಳಾಟವನ್ನು ಪತ್ತೆ ಮಾಡಿದೆ. ಹೌದು…. ಮಂಗಳೂರು ವಲಯ ಇಡಿ ಅಧಿಕಾರಿಗಳು ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇಕಡಾ 3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಠೇವಣಿ ಸಂಗ್ರಹಿಸಿದ್ದರು ಎಂಬುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೇ ಹೂಡಿಕೆದಾರರಿಗೆ ಬರೋಬ್ಬರಿಗೆ 2,110 ಕೋಟಿ ರೂ. ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕಟಣೆ ಮೂಲಕ ತಿಳಿಸಿದ ಇಡಿ

ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು, ಶಿವಾನಂದ ಸಿದ್ದಪ್ಪ ನೀಲನ್ನವರ್ ಗೆ ಸೇರಿದ ಹಾಗೂ ಇತರ ಸಂಬಂಧಿತ ವ್ಯಕ್ತಿಗಳು, ಸಂಸ್ಥೆಗಳ ಮೇಲೆ ದಾಳಿ ಮಾಡಿ ತನಿಖೆ ಮಾಡಿದ್ದು, ಆರೋಪಿಗಳು ಹೆಚ್ಚಿನ ಸಂಖ್ಯೆಯ ಹೂಡಿಕೆದಾರರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿದ್ದಾರೆ. ವ್ಯವಹಾರಿಕ, ವೈಯಕ್ತಿಕ ಮತ್ತು ಮಧ್ಯವರ್ತಿ ಖಾತೆಗಳ ಮೂಲಕ ಹಣದ ವ್ಯವಹಾರ ನಡೆದಿದೆ. ಷೇರು ದಲ್ಲಾಳಿಗಳು, FD ಖಾತೆಗಳು, ಸಂಬಂಧಿತ ವ್ಯಕ್ತಿಗಳು ಮತ್ತು ಇತರ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಸ್ವತಃ ಇಡಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಇದನ್ನೂ ಓದಿ: ಶಿವಾನಂದ ನೀಲಣ್ಣನವರ್​​ಗೆ ಇಡಿ ಶಾಕ್! ಬೆಳಗಾವಿಯಲ್ಲಿ ಮೂರು ಕಡೆಗಳಲ್ಲಿ ದಾಳಿ

ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇ.3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಒಟ್ಟು 2,110.97 ಕೋಟಿ ಠೇವಣಿ ಸಂಗ್ರಹಿಸಿದ್ದರು. ಆದರೆ, ಸಂಗ್ರಹಿಸಿದ ಮೊತ್ತದಲ್ಲಿ ಹೂಡಿಕೆದಾರರಿಗೆ ಕೇವಲ 333.89 ಕೋಟಿ ರೂಪಾಯಿ ಮಾತ್ರವೇ ಹಿಂದುರಿಗಿಸಿದ್ದಾರೆ. ಇನ್ನುಳಿದ 1,777.08 ಕೋಟಿ ಅಕ್ರಮ ಹಣದ ಸುಳಿವು ಪತ್ತೆಯಾಗಬೇಕಿದೆ. ಆರೋಪಿಗಳು ಸಾರ್ವಜನಿಕರನ್ನು ಸೆಳೆಯಲು ಮಧ್ಯವರ್ತಿಗಳಿಗೆ ಶೇ.0.5ರಷ್ಟು ಕಮಿಷನ್ ನೀಡುತ್ತಿದ್ದರು ಎಂಬ ಅಂಶವನ್ನೂ ಸಹ ಇಡಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

​ಹೂಡಿಕೆದಾರರಿಂದ ಸಂಗ್ರಹಿಸಿದ ಸಾರ್ವಜನಿಕರ ಹಣವನ್ನು ಷೇರು ಮಾರುಕಟ್ಟೆ, ಬ್ಯಾಂಕ್ ನಿಶ್ಚಿತ ಠೇವಣಿಗಳು, ರಿಯಲ್ ಎಸ್ಟೇಟ್ ಹಾಗೂ ನಿಕಟವರ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಈ ಜಾಲದಲ್ಲಿ ಶಿವಂ ಅಸೋಸಿಯೇಟ್ಸ್, ಶಿವಾನಂದ ಸಿದ್ಧಪ್ಪ ನೀಲಣ್ಣವರ, ಸುಭಾಷ್ ರಾಮಗೌಡ ನಂದರಗಿ, ಮಹೇಶ್ ಎಸ್.ನೀಲಣ್ಣವರ, ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ನೇರವಾಗಿ ಭಾಗಿಯಾಗಿರುವುದು ಕಂಡುಬಂದಿದೆ.​ ದಾಳಿಯ ಸಂದರ್ಭದಲ್ಲಿ ಅಕ್ರಮ ಹಣಕಾಸು ವಹಿವಾಟು, ಬೇನಾಮಿ ಆಸ್ತಿ ಹೂಡಿಕೆ ಹಾಗೂ ಡಿಜಿಟಲ್ ಸಾಕ್ಷ್ಯಗಳೂ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಕೃಷ್ಣಾ ನದಿಗೆ ಬಿದ್ದ ಕಾರು; ಟೋಲ್ ಗೇಟ್ ಬಳಿ ತಪ್ಪಿದ ಭಾರಿ ದುರಂತ – Kannada News | Bilagi: PWD Negligence Causes Car Plunge into Krishna River; Locals Demand Action

ಬಾಗಲಕೋಟೆ, ಆ.11: ಬೀಳಗಿ ತಾಲೂಕಿನ ಗಲಗಲಿ-ರಬಕವಿ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಕಾರೊಂದು ಬಿದ್ದ ಭೀಕರ ಘಟನೆ ನಡೆದಿದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಸುನೀಲ್ ಅಂಬಿಗೇರ ತಮ್ಮ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ಸರಿಯಾಗಿ ಜಲ್ಲಿಯನ್ನು ಸಮತಟ್ಟು ಮಾಡದೆ ಬೇಕಾಬಿಟ್ಟಿ ಬಿಟ್ಟಿದ್ದರಿಂದ ನಿಯಂತ್ರಣ ತಪ್ಪಿ ಕಾರು ಕೃಷ್ಣಾ ನದಿಗೆ ಬಿದ್ದಿದೆ.

ಕಾರು ನದಿಗೆ ಬೀಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಮಾಲೀಕ ಸುನೀಲ್, ಕಾರಿನ ಡೋರ್ ಒದ್ದು ಹೊರಬಂದಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವ ಯುವಕನನ್ನು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ತಕ್ಷಣವೇ ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಯಂತ್ರವನ್ನು ಬಳಸಿ ನದಿಯಲ್ಲಿದ್ದ ಕಾರನ್ನು ಹೊರತೆಗೆಯಲಾಗಿದೆ. ಕಳೆದ ಒಂದು ವಾರದಲ್ಲೇ ಇದೇ ಜಾಗದಲ್ಲಿ 3 ಕಾರುಗಳು ಕೃಷ್ಣಾ ನದಿಗೆ ಬಿದ್ದಿದ್ದು, ಓರ್ವ ಬೈಕ್ ಸವಾರ ಕೂಡ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.

ಕಾರು ಮಾಲೀಕ ಸುನೀಲ್ ಅಂಬಿಗೇರ ಅವರು ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ದೂರು ನೀಡಲು ಹೋದಾಗ, ಬೀಳಗಿ ಠಾಣೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಲಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜಹೀರಾಬಾದ್ ಬಳಿ ಸಂಭವಿಸಿದ ಭೀಕರ ಅಪಘಾತ: ಆಟೋಗೆ ಟ್ಯಾಂಕರ್ ಡಿಕ್ಕಿ ಸೇರಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ 9 ಬಲಿ

ದಾವಣಗೆರೆ: ಟೋಲ್ ಗೇಟ್ ಬಳಿ ಕಾರಿಗೆ ಲಾರಿ ಡಿಕ್ಕಿ; ಜಸ್ಟ್ ಮಿಸ್

ದಾವಣಗೆರೆ ತಾಲೂಕಿನ ಹೆಬ್ಬಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ (NH 48) ಟೋಲ್ ಪ್ಲಾಜಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಟೋಲ್ ದಾಟಿ ಮುಂಭಾಗಕ್ಕೆ ತೆರಳುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ವೇಗದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಜ್ಜುಬಿದ್ದಿದೆಯಾದರೂ, ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಟೋಲ್ ಬಳಿ ನಿಂತಿದ್ದ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:57 pm, Tue, 11 August 26

Source link

ರಿಷಬ್ ಶೆಟ್ಟಿ ಅಭಿನಯದ ‘ಜೈ ಹನುಮಾನ್’ ಚಿತ್ರಕ್ಕೆ ವಮಿಕಾ ಗಬ್ಬಿ ಎಂಟ್ರಿ? – Kannada News | Dc movie actress wamiqa gabbi joins rishab shetty in jai hanuman

ನಟಿ ವಮಿಕಾ ಗಬ್ಬಿ (Wamiqa Gabbi) ಅವರಿಗೆ 2026ರ ವರ್ಷ ಸಾಲು ಸಾಲು ಯಶಸ್ಸು ತಂದುಕೊಡುತ್ತಿದೆ. ವರ್ಷದ ಆರಂಭದಲ್ಲೇ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ಅವರು, ನಂತರ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರಸ್ತುತ ತಮಿಳಿನ ‘ಡಿಸಿ’ ಚಿತ್ರದಲ್ಲಿ ಚಂದ್ರ ಎಂಬ ಪಾತ್ರದಲ್ಲಿ ನಟಿಸಿ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಅಪಾರ ಪ್ರಶಂಸೆ ಪಡೆಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಅವರು ಪ್ರಮುಖ ಪಾತ್ರದಲ್ಲಿದ್ದರೂ, ವಮಿಕಾ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇದೀಗ ವಮಿಕಾ ಅವರ ವೃತ್ತಿಜೀವನಕ್ಕೆ ಮತ್ತೊಂದು ಬಹುದೊಡ್ಡ ಅವಕಾಶ ಸಿಕ್ಕಿದೆ. ಪ್ರಶಾಂತ್ ವರ್ಮಾ ನಿರ್ದೇಶನದ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪಾನ್-ಇಂಡಿಯಾ ಪೌರಾಣಿಕ ಚಿತ್ರ ‘ಜೈ ಹನುಮಾನ್’ನಲ್ಲಿ ವಮಿಕಾ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಶಾಂತ್ ವರ್ಮಾ ಅವರ ‘ಸಿನಿಮ್ಯಾಟಿಕ್ ಯೂನಿವರ್ಸ್’ ಭಾಗವಾಗಿರುವ ಈ ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲೇ ಪ್ರಾರಂಭವಾಗಿದ್ದು, ವಮಿಕಾ ಗಬ್ಬಿ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2024ರ ಬ್ಲಾಕ್‌ಬಸ್ಟರ್ ‘ಹನು-ಮಾನ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ.

‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣದ ಈ ಪಾನ್-ಇಂಡಿಯಾ ಪೌರಾಣಿಕ ಸಿನಿಮಾಕ್ಕೆ ಮಾರ್ಚ್‌ನಿಂದಲೇ ಚಿತ್ರೀಕರಣ ಆರಂಭಗೊಂಡಿದ್ದು, 2027ರ ದ್ವಿತೀಯಾರ್ಧದಲ್ಲಿ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ವಮಿಕಾ ಗಬ್ಬಿ ಅವರ ಆಯ್ಕೆ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಮುಹೂರ್ತ: ಚಿತ್ರಗಳು ಇಲ್ಲಿವೆ ನೋಡಿ

ಇದಲ್ಲದೆ, ವಮಿಕಾ ಅವರ ಕೈಯಲ್ಲಿ ರಾಜ್‌ಕುಮಾರ್ ರಾವ್ ಜೊತೆಗಿನ ‘ಪ್ರಹಾರ್’, ಅಡಿವಿ ಶೇಷ್ ಜೊತೆಗಿನ ‘ಗೂಢಚಾರಿ 2’, ‘ದಿಲ್ ಕಾ ದರ್ವಾಜಾ ಖೋಲ್ ನಾ ಡಾರ್ಲಿಂಗ್’, ‘ಜೀನಿ’ ಮತ್ತು ‘ಕುಕು ಕಿ ಕುಂಡಲಿ’ ಸೇರಿದಂತೆ ಸಾಲು ಸಾಲು ದೊಡ್ಡ ಪ್ರಾಜೆಕ್ಟ್‌ಗಳಿವೆ. ಭಾರಿ ನಿರೀಕ್ಷೆ ಮೂಡಿಸಿರುವ ‘ಜೈ ಹನುಮಾನ್’ ಚಿತ್ರಕ್ಕೆ ಅವರು ಸೇರ್ಪಡೆಯಾದರೆ ಅವರ ಸಿನಿಪಯಣಕ್ಕೆ ದೊಡ್ಡ ಮೈಲೇಜ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version