ಬೆಂಗಳೂರು, ಮಾರ್ಚ್ 24: ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್‌ಗಳಿಗಾಗಿ ಜನರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್‌ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30 ರಿಂದಲೇ ಕಾಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಸಪ್ಲೈ ಆಗಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು 10 ರಿಂದ 24 ದಿನಗಳವರೆಗೆ ಸಿಲಿಂಡರ್ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆಹಾರ ಸಚಿವ ಮುನಿಯಪ್ಪ , ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬೇಡಿ, ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುವುದು ಎಂದು ಹೇಳಿದರೂ, ವಾಸ್ತವದಲ್ಲಿ ಬೆಂಗಳೂರಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರವಂತೆ ಕಾಣುತ್ತಿದೆ.
ಸಿಲಿಂಡರ್ ವಿತರಣಾ ಏಜೆನ್ಸಿಯ ಹೇಳುವಂತೆ 5000 ಬುಕಿಂಗ್‌ಗಳಿಗೆ ಕೇವಲ 300-500 ಸಿಲಿಂಡರ್‌ಗಳು ಬರುತ್ತಿವೆ. ಇದಕ್ಕೆ “ಪ್ಯಾನಿಕ್ ಬುಕಿಂಗ್” ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರವು ದೇಶೀಯ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಬೆಂಗಳೂರಿನಲ್ಲಿ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ಸಿಲಿಂಡರ್‌ಗಳಿಗಾಗಿ ಕಾಯುತ್ತಿದ್ದಾರೆ. OTP ಬಂದಿದ್ದರೂ ಸಿಲಿಂಡರ್ ಸಿಗದಂತಹ ಪ್ರಕರಣಗಳು ವರದಿಯಾಗಿದೆ.
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಸೋಮವಾರವೂ ಸಹ ಶೋಗಳು ಹೌಸ್ಫುಲ್ ಆಗಿವೆ. ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಇಷ್ಟೆಲ್ಲದರ ನಡುವೆಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟವೇ ಆಗುತ್ತಿದೆ. ಅದಕ್ಕೆ ಕಾರಣ ಪೈರಸಿ.
ಪಾಕಿಸ್ತಾನದಲ್ಲಿ ಈಗಾಗಲೇ ಸಿನಿಮಾದ ಪೈರಸಿ ಆಗಿದ್ದು, ಗಲ್ಲಿ-ಗಲ್ಲಿಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಪೈರಸಿ ಸಿಡಿಗಳು ಸಿಗುತ್ತಿವೆ. ಸಾಮಾನ್ಯ ಜನರು ಮಾತ್ರವೇ ಅಲ್ಲದೆ ಪಾಕಿಸ್ತಾನದ ರಾಜಕಾರಣಿಗಳು ಸಹ ಪೈರಸಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿಯೂ ಸಹ ‘ಧುರಂಧರ್ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ. ಚಿತ್ರತಂಡ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಸಹ ‘ಧುರಂಧರ್ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ.
ಭಾರತದಲ್ಲಿ ಸಕ್ರಿಯವಾಗಿರುವ ಕ್ಯಾಸ್ಟಲ್, ಮೂವಿರೂಲ್ಜ್ ಇನ್ನೂ ಹಲವಾರು ಪೈರಸಿ ವೆಬ್ಸೈಟ್ ಮತ್ತು ಅಪ್ಲಿಕೇಶನ್ಗಳಲ್ಲಿ ‘ಧುರಂಧರ್ 2’ ಸಿನಿಮಾ ಅಕ್ರಮವಾಗಿ ಪ್ರದರ್ಶನವಾಗುತ್ತಿದೆ. ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ‘ಧುರಂಧರ್ 2’ ಸಿನಿಮಾದ ಪೈರಸಿ ಕಾಪಿಯ ವರ್ಗಾವಣೆ ಜೋರಾಗಿ ನಡೆಯುತ್ತಿದೆ. ಥಿಯೇಟರ್ ಪ್ರಿಂಟ್ ಅನ್ನೇ ಜನ ಮೊಬೈಲ್ಗಳಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಸಿನಿಮಾ ತಂಡಕ್ಕೆ ದೊಡ್ಡ ನಷ್ಟವೇ ಆಗುತ್ತಿದೆ. ಆದರೆ ಈಗಾಗಲೇ ಭಾರಿ ಲಾಭದಲ್ಲಿರುವ ಕಾರಣ ಸಿನಿಮಾ ತಂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ.
ಸಿನಿಮಾ ಬಿಡುಗಡೆಗೆ ಮುಂಚೆಯೇ ಚಿತ್ರತಂಡವು ಸುಮಾರು 12 ಸಾವಿರ ಲಿಂಕ್ಗಳನ್ನು ಡಿಲೀಟ್ ಮಾಡಿಸಿತ್ತು. ಅಲ್ಲದೆ ಮದ್ರಾಸ್ ಹೈಕೋರ್ಟ್ ಇಂಜೆಕ್ಷನ್ ಆರ್ಡಸ್ ಸಹ ನೀಡಿ, ಸಿನಿಮಾದ ಅಕ್ರಮ ಪ್ರದರ್ಶನಕ್ಕೆ ತಡೆ ಹಾಕಿತ್ತು. ಇದೆಲ್ಲದರ ನಡುವೆಯೂ ಸಹ ಸಿನಿಮಾದ ಪೈರಸಿ ಕಾಪಿಗಳು ಯೆಥೇಚ್ಛವಾಗಿ ಹರಿದಾಡುತ್ತಿವೆ.
ಬೆಂಗಳೂರು, ಮಾರ್ಚ್ 24: ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial LPG) ಕೊರತೆ ಹಿನ್ನೆಲೆ ಹೊಸೂರಿನಲ್ಲಿ ಒಂದು ಹೋಟೆಲ್ ವಿಭಿನ್ನ ಹಾಗೂ ಗಮನಸೆಳೆಯುವ ಆಫರ್ ಘೋಷಿಸಿದೆ. ‘Help Us Cook, We’ll Feed You’ ಎಂಬ ಅಭಿಯಾನವನ್ನು ಆರಂಭಿಸಿರುವ ಈ ಹೋಟೆಲ್, ಗ್ರಾಹಕರ ಸಹಕಾರ ಪಡೆಯಲು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ಈರೋಡ್ ಅಮ್ಮಾಯಿ ಮೆಸ್ ಹೋಟೆಲ್‌ನಲ್ಲಿ ಈ ವಿಶೇಷ ಆಫರ್ ಜಾರಿಗೆ ಬಂದಿದೆ. ಗ್ಯಾಸ್ ಕೊರತೆಯಿಂದ ಅಡುಗೆ ಕಾರ್ಯದಲ್ಲಿ ತೊಂದರೆ ಎದುರಿಸುತ್ತಿರುವ ಹೋಟೆಲ್, ಗ್ರಾಹಕರಿಂದಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಹೊಸೂರಿನ ಹೋಟೆಲ್ ಆಫರ್ ಏನು?
ಹೋಟೆಲ್ ನೀಡಿರುವ ಆಫರ್ ವಿವರ ಹೀಗಿದ;
1 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ
2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ
ಈ ಕುರಿತು ಹೋಟೆಲ್ ಮುಂದೆ ಬೋರ್ಡ್ ಹಾಕಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಆಫರ್ ವೈರಲ್ ಆಗುತ್ತಿದೆ.
ಹೋಟೆಲ್ ಆಫರ್ನ ಪೋಸ್ಟರ್
ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ
ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವು ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಅಡುಗೆ ಕಾರ್ಯ ನಿರ್ವಹಿಸಲು ಗ್ಯಾಸ್ ಅವಶ್ಯಕವಾಗಿದ್ದು, ಸರಬರಾಜು ಕಡಿಮೆಯಾಗಿರುವುದರಿಂದ ಹೋಟೆಲ್‌ಗಳು ಕಾರ್ಯಾಚರಣೆ ಮುಂದುವರಿಸುವುದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಂತೂ ಅನೇಕ ಹೋಟೆಲ್‌ಗಳು ಬಂದ್ ಆಗಿವೆ. ಇನ್ನೂ ಅನೇಕ ಹೋಟೆಲ್‌ಗಳು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ ಗ್ರಾಹಕರಿಗೆ ಹೆಚ್ಚುವರಿ ದರಕ್ಕೆ ತಿಂಡಿ-ತಿನಿಸು ನೀಡುತ್ತಿವೆ. ಹಲವು ಹೋಟೆಲ್ಗಳಲ್ಲಿ ಬಿಲ್ನಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಯಾಗಿವೆ.
ಒಟ್ಟಿನಲ್ಲಿ, ಗ್ಯಾಸ್ ಕೊರತೆಯಂತಹ ಸಮಸ್ಯೆಯನ್ನು ಸೃಜನಾತ್ಮಕವಾಗಿ ಎದುರಿಸಲು ಹೊಸೂರು ಹೋಟೆಲ್ ಕೈಗೊಂಡಿರುವ ಈ ಪ್ರಯತ್ನ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 24: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು ಮತ್ತು ಕ್ರಿಶ್ಚಿಯನ್ ಧರ್ಮದಂತಹ ಯಾವುದೇ ಇತರ ಧರ್ಮಕ್ಕೆ ಮತಾಂತರ(Conversion)ಗೊಂಡರೆ ಆ ವ್ಯಕ್ತಿ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹೀಗಾಗಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (ಎಸ್‌ಸಿ,ಎಸ್‌ಟಿ ಕಾಯ್ದೆ)ಯಡಿ ರಕ್ಷಣೆ ಕೇಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿಕೆ ಮಿಶ್ರಾ ಮತ್ತು ಮನಮೋಹನ್ ಅವರ ಪೀಠವು ತೀರ್ಪು ನೀಡಿದೆ.
ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿ ಪರಿಶಿಷ್ಟ ಜಾತಿಯ ಸದಸ್ಯರಾಗಿರುವುದಿಲ್ಲ. ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಆಂಧ್ರಪ್ರದೇಶ ಹೈಕೋರ್ಟ್‌ನ ಮೇ 2025 ರ ತೀರ್ಪಿನ ವಿರುದ್ಧ ಚಿಂತಾಡ ಆನಂದ್ ಎಂಬ ಪಾದ್ರಿ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಈ ತೀರ್ಪು ನೀಡಲಾಗಿದೆ. ಆನಂದ್ ಅವರು ಅಕ್ಕಲ ರಾಮಿರೆಡ್ಡಿ ಮತ್ತು ಇತರರಿಂದ ಜಾತಿ ತಾರತಮ್ಯ ಮತ್ತು ನಿಂದನೆಯನ್ನು ಎದುರಿಸಿದ್ದಾರೆ ಎಂದು ಆರೋಪಿಸಿದರು. ಅವರು ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದರು ಮತ್ತು ಪೊಲೀಸರು ಅದರ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು.
ನಂತರ ರಾಮಿರೆಡ್ಡಿ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದರು. ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮ ಎಸ್‌ಸಿ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ ಮತ್ತು ಆದ್ದರಿಂದ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್ ಹರಿನಾಥ್ ಅವರು ಎಫ್‌ಐಆರ್ ಅನ್ನು ರದ್ದುಗೊಳಿಸಿದರು. ನಂತರ ಆನಂದ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಚೀನಾ, ಮಾರ್ಚ್ 24: ಚೀನಾದಲ್ಲಿ ಏಳು ನಾಯಿಗಳು ತಮ್ಮ ಮಾಲೀಕರನ್ನು ಅರಸಿ 17 ಕಿ.ಮೀ ನಡೆದಿರುವ ವಿಡಿಯೋ ವೈರಲ್ ಆಗಿದೆ. ಕೆಲವು ದುಷ್ಟರು ಮಾಲೀಕರಿಂದ ನಾಯಿಗಳನ್ನು ಕದ್ದು, ಅಕ್ರಮವಾಗಿ ಟ್ರಕ್ನಲ್ಲಿ ಸಾಗಿಸುತ್ತಿದ್ದರು, ಆದರೆ ಅದೃಷ್ಟವಶಾತ್ ಆ ನಾಯಿಗಳು ಟ್ರಕ್ನಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿವೆ. ಈ ನಾಯಿಗಳನ್ನು ಅವುಗಳ ಮನೆಗಳಿಂದ ಕದ್ದಿದ್ದು, ನಾಯಿ ಮಾಂಸದ ಅಂಗಡಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಹೇಳಲಾಗಿದೆ.
ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೈವರ್ ಮತ್ತು ಕಾರ್ಗಿ ಸೇರಿದಂತೆ ಈ ಗುಂಪಿನ ನಾಯಿಗಳು ಚಾಂಗ್‌ಶುವಾಂಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ನಾಯಿಗಳು ಎರಡು ದಿನಗಳ ಕಾಲ 17 ಕಿ.ಮೀ.ಗೂ ಹೆಚ್ಚು ನಡೆದಿವೆ. ಮಾರ್ಚ್ 19 ರಂದು ಅವರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಿವೆ.
ಬೆಂಗಳೂರು, ಮಾರ್ಚ್ 24: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ರೈಲ್ವೇ ಮಂಡಳಿ (Railway Board) ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಿದೆ. ಇದರಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ನಿರ್ಧಾರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.
ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದ್ದವು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಲೀಪರ್ ಕೋಚ್ಗಳಲ್ಲಿ ಸುಮಾರು ಶೇ30 ರವರೆಗೆ ಮತ್ತು ಸಾಮಾನ್ಯ ಟಿಕೆಟ್‌ಗಳಲ್ಲಿ ಶೇ 10-15ರವರೆಗೆ ದರ ಕಡಿಮೆಯಾಗಲಿದೆ.
ಈ 6 ವಿಶೇಷ ರೈಲುಗಳು ಖಾಯಂ
ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್ ( ರೈ.ಸಂ 16281/16282) ವಾರಕ್ಕೊಮ್ಮೆ ಸಂಚರಿಸಲಿದೆ
ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್ (ರೈ.ಸಂ 16563/16564) ವಾರಕ್ಕೊಮ್ಮೆ ಸಂಚರಿಸಲಿದೆ
SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ (ರೈ.ಸಂ 16559/16560) ವಾರಕ್ಕೊಮ್ಮೆ ಸಂಚರಿಸಲಿದೆ
ಬಳ್ಳಾರಿ – ದಾವಣಗೆರೆ ಡೆಮು (ರೈ.ಸಂ76509/10)ವಾರಕ್ಕೆ 6 ದಿನ ಸಂಚರಿಸಲಿದೆ
ಬೆಂಗಳೂರು – ಹಾಸನ ಡೆಮು (ರೈ.ಸಂ66525/26)ವಾರಕ್ಕೆ 6 ದಿನ ಸಂಚರಿಸಲಿದೆ
ಬಳ್ಳಾರಿ – ಹೊಸಪೇಟೆ ಡೆಮು (ರೈ.ಸಂ07397/98) ವಾರಕ್ಕೆ 6 ದಿನ ಸಂಚರಿಸಲಿದೆ
ಇದರ ಜೊತೆಗೆ ಬೆಂಗಳೂರು-ಚನ್ನಪಟ್ಟಣ, ಮೈಸೂರು-ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ-ಹಿಂದೂಪುರ ಹಾಗೂ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲುಗಳು ಕೂಡ ಖಾಯಂಗೊಂಡಿವೆ. ಈ ಕ್ರಮದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ತೀರ್ಮಾನ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.
ಬೆಂಗಳೂರು, ಮಾರ್ಚ್ 24: ಚಿನ್ನದ ಬೆಲೆಯ (Gold Rates) ಸತತ ಇಳಿಕೆ ಮುಂದುವರಿಯುತ್ತಿದೆ. ಆಭರಣ ಪ್ರಿಯ ಮಹಿಳೆಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಚಿನ್ನದ ಬೆಲೆ ಗಗನಕ್ಕೇರಿದ್ದಾಗ ಆತಂಕದಲ್ಲಿ ಚಿನ್ನ ಖರೀದಿ ಬಿಟ್ಟಿರದ ಮಹಿಳೆಯರು ಈಗ ಬಂಗಾರದ ಬೆಲೆ ಸತತವಾಗಿ ಇಳಿಯುತ್ತಿರುವುದರಿಂದ ಚಿನ್ನದಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಮಂಗಳವಾರ ಚಿನ್ನದ ಬೆಲೆ ಒಂದೇ ದಿನ 270 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 12,865 ರೂ ಮುಟ್ಟಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,28,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,40,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,28,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 24ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,526 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇಸ್ಲಾಮಾಬಾದ್, ಮಾರ್ಚ್ 24: ಬಾಲಿವುಡ್ ಸಿನಿಮಾ ಧುರಂಧರ್ 2 ಯುಗಾದಿಯಂದು ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ಪಾತ್ರಧಾರಿ ಭಾರತದ ಸೀಕ್ರೆಟ್ ಏಜೆಂಟ್ ಆಗಿದ್ದು, ತನ್ನ ಹೆಸರನ್ನು ಹಮ್ಜಾ ಅಲಿ ಮಜಾರಿ ಎಂದು ಬದಲಿಸಿಕೊಂಡು ಪಾಕಿಸ್ತಾನದಲ್ಲಿ ನೆಲೆಸಿ, ಅಲ್ಲಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಸಿನಿಮಾವನ್ನು ನೋಡಿದ ಪಾಕಿಸ್ತಾನಿ ಪೊಲೀಸರು ಹಾಗೂ ಸ್ಥಳೀಯರು ಕರಾಚಿಯ ಲಿಯಾರಿಯ ಪ್ರತಿ ಬೀದಿಯಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್ಗಳ ಹುಡುಕಾಟದಲ್ಲಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಪ್ರಮುಖವಾಗಿ ಹಮ್ಜಾ ಅಲಿ ಮಜಾರಿ ಎಂದ ಒಂದೇ ಹೆಸರಿನ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. ಅನುಮಾನಾಸ್ಪದ ವ್ಯಕ್ತಿಗಳು ಅಷ್ಟೇ ಅಲ್ಲ, ಭಿಕ್ಷುಕರನ್ನೂ ಬಿಡದೆ ವಿಚಾರಣೆ ನಡೆಸುತ್ತಿದ್ದಾರೆ. ಧುರಂಧರ್ 2 ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ.
ಬೆಂಗಳೂರು, ಮಾರ್ಚ್ 24: ಬೆಂಗಳೂರು (Bangalore) ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಹೋಗುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗಲಿದೆ. 2022ರಲ್ಲಿ ನಿಲ್ಲಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಇದೀಗ ಮತ್ತೆ ಆರಂಭಿಸಲು ಬೆಂಗಳೂರು ಟ್ರಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಮಾರ್ಚ್ 25 ರಿಂದಲೇ ಬೆಂಗಳೂರಿನಲ್ಲಿ ಟೋಯಿಂಗ್ ಪ್ರಕ್ರಿಯೆ ಪುನರಾರಂಭವಾಗುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಪ್ರತಿ ಪಾಲಿಕೆ ವ್ಯಾಪ್ತಿಗೆ 2 ಟೋಯಿಂಗ್ ವಾಹನಗಳಂತೆ ಒಟ್ಟು 10 ವಾಹನಗಳನ್ನು ಒದಗಿಸಲಾಗಿದೆ.
ಜಿಬಿಎ ಸಹಯೋಗದಲ್ಲಿ ಟೋಯಿಂಗ್ ಕಾರ್ಯಾಚರಣೆ
ಈ ಟೋಯಿಂಗ್ ಕಾರ್ಯಾಚರಣೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸಹಯೋಗದಲ್ಲಿ ನಡೆಯಲಿದ್ದು, ಟೋಯಿಂಗ್ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ಜಿಬಿಎ ವತಿಯಿಂದ ನಿಯೋಜಿಸಲಾಗುತ್ತದೆ. ಸಂಚಾರಿ ಪೊಲೀಸರು ದಂಡ ವಿಧಿಸುವ ಕೆಲಸ ಮಾಡಲಿದ್ದು, ಟೋಯಿಂಗ್ ಕಾರ್ಯವನ್ನು ಜಿಬಿಎ ಸಿಬ್ಬಂದಿ ನಿರ್ವಹಿಸಲಿದ್ದಾರೆ.
ದಂಡ ಮತ್ತು ಟೋಯಿಂಗ್ ಚಾರ್ಜ್ ಎಷ್ಟು?
ನೋ ಪಾರ್ಕಿಂಗ್ ಉಲ್ಲಂಘನೆಗೆ ಈಗಾಗಲೇ 500 ರೂ. ದಂಡ ನಿಗದಿ ಮಾಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ವಾಹನಗಳ ಆಧಾರದಲ್ಲಿ ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 650 ರೂ. ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದ್ದು, ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ಟೋಯಿಂಗ್ ಚಾರ್ಜ್ ನಿಗದಿ ಮಾಡಲಾಗಿದೆ.
ಸಿಸಿಟಿವಿ ಮತ್ತು ಬಾಡಿ ವಾರ್ನ್ ಕ್ಯಾಮರಾ ಕಡ್ಡಾಯ
ಹಿಂದಿನಂತೆ ಟೋಯಿಂಗ್ ವೇಳೆ ಸಾರ್ವಜನಿಕರು ಮತ್ತು ಸಿಬ್ಬಂದಿ ನಡುವೆ ಗಲಾಟೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಟೋಯಿಂಗ್ ವಾಹನಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಜೊತೆಗೆ ಟೋಯಿಂಗ್ ಸಿಬ್ಬಂದಿಗೆ ಬಾಡಿ ವಾರ್ನ್ ಕ್ಯಾಮರಾ ಕಡ್ಡಾಯಗೊಳಿಸಲಾಗಿದೆ.
ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ರಾಜಕೀಯದ ನಡುವೆಯೂ ಮೂರು ಸಿನಿಮಾಗಳನ್ನು ಅವರು ಮುಗಿಸಿದ್ದಾರೆ. ಪವನ್ ಅವರು ಡಿಸಿಎಂ ಆದ ಬಳಿಕ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ಇತ್ತೀಚೆಗಷ್ಟೆ ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಬಿಡುಗಡೆ ಆಗಿವೆ. ಅಸಲಿಗೆ ಈ ಮೂರೂ ಸಿನಿಮಾಗಳನ್ನು ಅವರು ಚುನಾವಣೆಗೆ ಧುಮುಕುವ ಮೊದಲೇ ಒಪ್ಪಿಕೊಂಡಿದ್ದರು. ಇದೀಗ ಪವನ್ ಕಲ್ಯಾಣ್ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪವನ್ ಕಲ್ಯಾಣ್ ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿ ಆ ನಂತರ ಯಾವುದೂ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಆರಂಭಿಸಿವೆ. ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಪವನ್ ಕಲ್ಯಾಣ್ ತಂಡದವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪವನ್ ಕಲ್ಯಾಣ್ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಎಂದಿದ್ದಾರೆ. ಪವನ್ ಕಲ್ಯಾಣ್ ಅವರು ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದಾರೆ ಮತ್ತು ಕೆಲವು ದೊಡ್ಡ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಆದರೆ, ಸದ್ಯಕ್ಕೆ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎಂದು ಅವರ ತಂಡ ಸ್ಪಷ್ಟಪಡಿಸಿದೆ.
ಪವನ್ ಕಲ್ಯಾಣ್ ಅವರು ಈ ಮೊದಲೇ ಒಪ್ಪಿಕೊಂಡಿದ್ದ ಕಾರಣಕ್ಕಾಗಿ ಮಾತ್ರವೇ ‘ಹರಿ ಹರ ವೀರ ಮಲ್ಲು’ ‘OG’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ತಮ್ಮ ರಾಜಕೀಯದ ಜವಾಬ್ದಾರಿಗಳ ನಡುವೆಯೂ ಮುಗಿಸಿಕೊಟ್ಟಿದ್ದಾರೆ. ಆದರೆ ಇನ್ನು ಮುಂದೆ ಪವನ್ ಕಲ್ಯಾಣ್ ಅವರು ಸಂಪೂರ್ಣವಾಗಿ ಆಡಳಿತದಲ್ಲಿಯೇ ತೊಡಗಿಕೊಳ್ಳಲಿದ್ದಾರೆ ಎಂದು ಅವರ ಆಪ್ತವಲಯ ಸ್ಪಷ್ಟಪಡಿಸಿದೆ.
ಉಪಮುಖ್ಯಮಂತ್ರಿಯಾಗಿ ರಾಜ್ಯದ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದರಿಂದ, ಸಿನಿಮಾಗಳಿಗೆ ಸಮಯ ಮೀಸಲಿಡುವುದು ಅವರಿಗೆ ಸವಾಲಾಗಿದೆ. ಯಾವುದೇ ಅಧಿಕೃತ ಘೋಷಣೆ ಹೊರಬರುವವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬಬೇಡಿ ಎಂದು ಪವನ್ ಅವರ ತಂಡ ಅಭಿಮಾನಿಗಳಲ್ಲಿ ವಿನಂತಿಸಿದೆ. ಪವನ್ ನಟಿಸಿದ್ದ ‘ಓಜಿ’ ಸಿನಿಮಾದ ಸೀಕ್ವೆಲ್ನಲ್ಲಿ ನಟಿಸುವ ಆಸೆ ಅವರಿಗೆ ಇದ್ದು, ಒಂದೊಮ್ಮೆ ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ನಟಿಸಿದರೆ ‘ಓಜಿ’ ಸಿನಿಮಾದ ಸೀಕ್ವೆಲ್ ಮಾತ್ರವೇ ಆಗಿರಲಿದೆ ಎನ್ನಲಾಗುತ್ತಿದೆ. ಆದರೆ ಪ್ರಸ್ತುತ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.