ಜೂ.ಎನ್​​ಟಿಆರ್​​ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ? – Kannada News | Jr. NTR Birthday Wish by Hombale Fuels Big Movie Deal Speculation

ಯಾವುದಾದರೂ ಹೀರೋ ಜೊತೆ ಈಗಾಗಲೇ ಕೆಲಸ ಮಾಡಿದ್ದರೆ ಅಥವಾ ಮುಂದೆ ಕೆಲಸ ಮಾಡುವ ಒಪ್ಪಂದ ಆಗಿದ್ದರೆ ಮಾತ್ರ ನಿರ್ಮಾಣ ಸಂಸ್ಥೆಗಳು ಆ ಹೀರೋಗಳಿಗೆ ಬರ್ತ್​​ಡೇ ವಿಶ್ ಮಾಡುತ್ತಾರೆ. ಜೂ.ಎನ್​​ಟಿಆರ್​ ಜೊತೆ ಸಿನಿಮಾ ಮಾಡೋದಾಗಿ ಮೈತ್ರಿ ಮೂವೀ ಮೇಕರ್ಸ್ ಈ ಮೊದಲೇ ಘೋಷಣೆ ಮಾಡಿತ್ತು. ಅಂದಿನಿಂದಲೂ ಜೂ.ಎನ್​​ಟಿಆರ್ ಜನ್ಮದಿನಕ್ಕೆ ಈ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಾ ಬರುತ್ತಿದೆ. ಈಗ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಜೂ.ಎನ್​ಟಿಆರ್​​ಗೆ ಜನ್ಮದಿನದ ವಿಶ್ ಬಂದಿದ್ದು ಸಾಕಷ್ಟು ಕುತೂಹಲ ಮೂಡಿದೆ.

ಜೂನಿಯರ್ ಎನ್​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದನ್ನು ಹೊಂಬಾಳೆ ಸಂಭ್ರಮಿಸಿದೆ. ಜೂನಿಯರ್ ಎನ್​​​​ಟಿಆರ್​​ಗೆ ವಿಶ್ ಮಾಡುವಾಗ ‘ಡ್ರ್ಯಾಗನ್’ ಸಿನಿಮಾ ಬಗ್ಗೆಯೂ ಮೆಚ್ಚುಗೆ ಸೂಚಿಸಿದೆ. ಇದರ ಹಿಂದೆ ದೊಡ್ಡದೊಂದು ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪ್ರಭಾಸ್ ಅವರ ‘ಸಲಾರ್’ ಚಿತ್ರಕ್ಕೆ ಬಂಡವಾಳ ಹೂಡಿದೆ. ಹಿಂದಿ, ತಮಿಳಿನಲ್ಲೂ ಈ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಜೂ.ಎನ್​​ಟಿಆರ್ ಜೊತೆ ಹೊಂಬಾಳೆ ಸಿನಿಮಾ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ. ತೆರೆಮರೆಯಲ್ಲಿ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಚಿತ್ರವನ್ನು ನಿರ್ದೇಶನ ಮಾಡುವವರು ಯಾರು ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂಬುದು ಅನೇಕರ ಆಸೆ.

ಇದನ್ನೂ ಓದಿ: ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ

ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರ ವಿದೇಶಿ ಹಾಗೂ ಕರ್ನಾಟಕದ ಹಂಚಿಕೆ ಹಕ್ಕನ್ನು ಪಡೆದಿದೆ. ‘ಡ್ರ್ಯಾಗನ್’ ಚಿತ್ರದ ಥಿಯೇಟ್ರಿಕಲ್ ರಿಲೀಸ್ ಮತ್ತು ವಿತರಣೆಯ ಜವಾಬ್ದಾರಿಯನ್ನು ಹೊಂಬಾಳೆ ವಹಿಸಿಕೊಳ್ಳುವ ಸಾಧ್ಯತೆಗಳೂ ದಟ್ಟವಾಗಿವೆ. ಈ ಕಾರಣಕ್ಕೆ ಅದು ತಮ್ಮದೇ ಸಿನಿಮಾ ಎಂಬ ರೀತಿಯಲ್ಲಿ ಸಂಭ್ರಮಿಸಿದೆ ಎಂದು ವಿಶ್ಲೇಷಿಸಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಊಟದ ತಟ್ಟೆಯಿಂದ ಅನ್ನವೇ ಔಟ್, ಹೈ-ಪ್ರೋಟೀನ್ ಡಯಟ್ ಮೊರೆಹೋದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು – Kannada News | N Chandrababu Naidu Adopts High Protein Diet, Cuts Rice From Meals

ಅಮರಾವತಿ, ಮೇ 20: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಅತ್ಯುತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ದಿನಚರಿಯನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೆಲ್ಲೂರು ಜಿಲ್ಲೆಯಲ್ಲಿ ನಡೆದ ‘ಮತ್ಸ್ಯಕರ ಸೇವಾಲೋ’ (ಮೀನುಗಾರರ ಸೇವಾ ಕಾರ್ಯಕ್ರಮ) ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ಬಹಿರಂಗಪಡಿಸುವ ಮೂಲಕ ಜನರಲ್ಲಿ  ಆರೋಗ್ಯದ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಊಟದ ತಟ್ಟೆಯಿಂದ ಅನ್ನವೇ ಔಟ್, ಮೀನಿಗೆ ಮೊದಲ ಆದ್ಯತೆ
ಚಂದ್ರಬಾಬು ನಾಯ್ಡು ಅವರು ಕಾರ್ಬೋಹೈಡ್ರೇಟ್‌ಗಳನ್ನು, ವಿಶೇಷವಾಗಿ ದಕ್ಷಿಣ ಭಾರತದ ಪ್ರಧಾನ ಆಹಾರವಾದ ಬಿಳಿ ಅಕ್ಕಿಯ (ಅನ್ನ) ಸೇವನೆಯನ್ನು ತಮ್ಮ ಆಹಾರ ಕ್ರಮದಿಂದ ಸಂಪೂರ್ಣವಾಗಿ ಹೊರಗಿಡುವ ದೊಡ್ಡ ನಿರ್ಧಾರವನ್ನು ತಗೆದುಕೊಂಡಿದ್ದಾರೆ. ಅವರ ದೈನಂದಿನ ಆಹಾರವು ಈಗ ಮುಖ್ಯವಾಗಿ ಪ್ರೋಟೀನ್ ಆಧಾರಿತವಾಗಿದೆ.

ಪ್ರೋಟೀನ್ ಭರಿತ ಆಹಾರವು ಮಧುಮೇಹವನ್ನು (Diabetes) ನಿಯಂತ್ರಣದಲ್ಲಿಡಲು ಮತ್ತು ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಅತ್ಯಂತ ಸಹಕಾರಿ ಎಂದು ನಂಬಿರುವ ಅವರು ಜತೆಗೆ ಆಹಾರದಲ್ಲಿ ಎಣ್ಣೆ ಮತ್ತು ಉಪ್ಪಿನ ಬಳಕೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿಡಲು ಅವರು ಸದಾ ಸೂಚಿಸುತ್ತಾರೆ.

ತಂತ್ರಜ್ಞಾನದ ಮೂಲಕ ನಡೆಯುತ್ತೆ ಡಯಟ್ ಲೆಕ್ಕಾಚಾರ
ಚಂದ್ರಬಾಬು ನಾಯ್ಡು ಅವರ ಆರೋಗ್ಯ ನಿರ್ವಹಣೆಯು ಕೇವಲ ಸಾಮಾನ್ಯ ಆಹಾರ ಪದ್ಧತಿಯನ್ನು ಅವಲಂಬಿಸಿಲ್ಲ, ಬದಲಿಗೆ ಅದು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನದ ಲೆಕ್ಕಾಚಾರದ ಮೇಲೆ ನಡೆಯುವ ವ್ಯವಸ್ಥೆಯಾಗಿದೆ!

ಸಿಎಂ ಚಂದ್ರಬಾಬು ಅವರು ತಮ್ಮ ಬೆರಳಿಗೆ ವಿಶೇಷವಾದ ‘ಆರೋಗ್ಯ ಟ್ರ್ಯಾಕಿಂಗ್ ರಿಂಗ್’ (Health Tracking Ring) ಒಂದನ್ನು ಧರಿಸುತ್ತಾರೆ. ಈ ಸ್ಮಾರ್ಟ್ ರಿಂಗ್ ಅವರ ದೇಹದ ನಿದ್ರೆಯ ಪ್ರಮಾಣ, ಪ್ರೋಟೀನ್ ಮಟ್ಟಗಳು ಮತ್ತು ದೈಹಿಕ ಚಟುವಟಿಕೆಗಳನ್ನು ಸೆಕೆಂಡ್ ಸೆಕೆಂಡಿಗೆ ಟ್ರ್ಯಾಕ್ ಮಾಡುತ್ತದೆ. ಅವರು ದಿನದಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ಅವರ ದೇಹದಲ್ಲಿ ಪ್ರೋಟೀನ್ ಮಟ್ಟ ಕಡಿಮೆಯಾದರೆ, ಈ ಹೈಟೆಕ್ ರಿಂಗ್ ತಕ್ಷಣವೇ ಅವರಿಗೆ ಎಚ್ಚರಿಕೆಯ ಸಂದೇಶವನ್ನು (Alert) ರವಾನಿಸುತ್ತದೆ. ಆ ಅಲರ್ಟ್ ಬಂದ ತಕ್ಷಣವೇ ಅವರು ತಮ್ಮ ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಮತ್ತಷ್ಟು ಓದಿ: ದೇಶದ ಶ್ರೀಮಂತ ಸಿಎಂಗಳು: ನಾಯ್ಡು ನಂ.1, ಸಿದ್ದರಾಮಯ್ಯ 3ನೇ ಸ್ಥಾನ, ಆಸ್ತಿ ಎಷ್ಟಿದೆ ಗೊತ್ತಾ?

ಆರೋಗ್ಯಕರ ಜೀವನಶೈಲಿಯ ಹೊಸ ಸಂದೇಶ
ಸಂಕ್ಷಿಪ್ತವಾಗಿ ಹೇಳುವುದಾದರೆ, ಚಂದ್ರಬಾಬು ನಾಯ್ಡು ಅವರು ಆಂಧ್ರದ ಜನತೆಗೆ ಹೊಸ ಮಾದರಿಯ ಜೀವನಶೈಲಿಯ ಸಂದೇಶವನ್ನು ನೀಡುತ್ತಿದ್ದಾರೆ. ಅನ್ನದ ಪ್ರಮಾಣವನ್ನು ಕಡಿಮೆ ಮಾಡಿ, ಪ್ರೋಟೀನ್ ಭರಿತ ಆಹಾರವನ್ನು ಅಳವಡಿಸಿಕೊಳ್ಳುವ ಮೂಲಕ ಹೇಗೆ ಆರೋಗ್ಯವಾಗಿರಬಹುದು ಎಂಬುದನ್ನು ಸ್ವತಃ ತಾವೇ ಪಾಲಿಸಿ ತೋರಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್ – Kannada News | Meta Layoffs: 8,000 Employees Sacked by Email as AI Reshapes Workforce

ನವದೆಹಲಿ, ಮೇ 20: ಫೇಸ್​ಬುಕ್, ವಾಟ್ಸಾಪ್, ಇನ್ಸ್​ಟಾಗ್ರಾಮ್ ಆ್ಯಪ್​ಗಳ ಮಾತೃಸಂಸ್ಥೆಯಾದ ಮೆಟಾದ (Meta) ಶೇ. 10ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ವರದಿ ಪ್ರಕಾರ ಸುಮಾರು 8,000 ಉದ್ಯೋಗಿಗಳನ್ನು ಮೆಟಾ ಲೇ ಆಫ್ ಮಾಡಿದೆ. ಎಚ್​ಆರ್ ಚೇಂಬರ್​ಗೆ ಕರೆದು ಒಬ್ಬೊಬ್ಬರಿಗೂ ಪಿಂಕ್ ಸ್ಲಿಪ್ ಕೊಡುವ ಬದಲು ಮೆಟಾ ಬೇರೆಯದೇ ತಂತ್ರ ಅನುಸರಿಸಿದೆ. ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಕೊಟ್ಟು, ನಂತರ 8,000 ಮಂದಿಗೆ ಇಮೇಲ್ ಮೂಲಕವೇ ಲೇ ಆಫ್ ಮಾಡಿದೆ. ಬೆಳಗ್ಗೆ 4 ಗಂಟೆಗೆ ಲೇ ಆಫ್ ಇಮೇಲ್ ಕಂಡು ಉದ್ಯೋಗಿಗಳಿಗೆ ಆಗಿತ್ತು ಶಾಕ್.

ಈ ಸುದ್ದಿಯ ಮುಖ್ಯಾಂಶಗಳು

  • ಮೆಟಾ ಸಂಸ್ಥೆ ತನ್ನಲ್ಲಿ ಕೆಲಸ ಮಾಡುತ್ತಿರುವ 78,000 ಉದ್ಯೋಗಿಗಳ ಪೈಕಿ 8,000 ಮಂದಿಯನ್ನು ಲೇ ಆಫ್ ಮಾಡುತ್ತಿದೆ.
  • ಕಚೇರಿಯಲ್ಲಿ ಭಾವನಾತ್ಮಕ ವಾತಾವರಣ ತಪ್ಪಿಸಲು ಮೆಟಾ ಸಂಸ್ಥೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಟ್ಟು ನಂತರ ಇಮೇಲ್ ಮೂಲಕ ಲೇ ಆಫ್ ಮಾಡಿದೆ.
  • ಮೆಟಾ ಸಂಸ್ಥೆ ಎಐಗೆ ಭಾರೀ ಹೂಡಿಕೆ ಮಾಡುತ್ತಿದ್ದು, ಸಣ್ಣ ತಂಡಗಳನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಲು ಆದ್ಯತೆ ಕೊಡುತ್ತಿದೆ.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

ಮೆಟಾ ಸಂಸ್ಥೆಯಲ್ಲಿ ಒಟ್ಟು 78,000 ಉದ್ಯೋಗಿಗಳ ಬಳಗ ಹೊಂದಿತ್ತು. ಈ ಪೈಕಿ 8,000 ಮಂದಿಗೆ ಕೆಲಸ ಹೋಗಿದೆ. ಮ್ಯಾನೇಜರ್ ಮಟ್ಟದ ಹುದ್ದೆಗಳಲ್ಲಿ ಹೆಚ್ಚಿನವನ್ನು ತೆಗೆದುಹಾಕಲಾಗಿದೆ. 6,000 ಓಪನ್ ರೋಲ್​ಗಳನ್ನು ಮುಚ್ಚಲಾಗಿದೆ. 7,000 ಉದ್ಯೋಗಿಗಳನ್ನು ಹೊಸ ಎಐ ಟೀಮ್​ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ.

ಮೆಟಾದಲ್ಲಿ ಲೇ ಆಫ್ ಆಗಿರುವ ಉದ್ಯೋಗಿಗಳಲ್ಲಿ ಎಂಜಿನಿಯರಿಂಗ್ ಮತ್ತು ಪ್ರಾಡಕ್ಟ್ ತಂಡಗಳಲ್ಲಿ ಕೆಲಸ ಮಾಡುತ್ತಿರುವವರೇ ಹೆಚ್ಚು. ಲೇ ಆಫ್ ಪ್ರಕ್ರಿಯೆ ಈಗ ಆರಂಭಗೊಂಡಿದೆ. ಎಲ್ಲಾ 8,000 ಮಂದಿಗೆ ಒಮ್ಮೆಲೇ ಇಮೇಲ್ ಬಂದಿಲ್ಲ. ಹಂತ ಹಂತವಾಗಿ ಈ ಕೆಲಸ ಮಾಡಲಾಗುತ್ತದೆ. ಆತಂಕದ ಸಂಗತಿ ಎಂದರೆ ಲೇ ಆಫ್ ಭೀತಿ 8,000 ಮಂದಿಗೆ ಸೀಮಿತವಾಗಿರುವುದಿಲ್ಲ. ಈ ವರ್ಷ ಇನ್ನಷ್ಟು ಜಾಬ್ ಕಟ್ ಮಾಡಲು ಮೆಟಾ ಸಿದ್ಧ ಇದೆ.

ಮೆಟಾ ಸಂಸ್ಥೆಯು ಎಐ ಅಳವಡಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೃತಕ ಬುದ್ಧಿಮತ್ತೆಗಾಗಿ ಮೆಟಾ ಈ ವರ್ಷ 125ರಿಂದ 145 ಬಿಲಿಯನ್ ಡಾಲರ್​ನಷ್ಟು ವ್ಯಯಿಸಲು ಸಿದ್ಧ ಇದೆ. ಈ ಹಿನ್ನೆಲೆಯಲ್ಲಿ ಬಹಳ ಸಣ್ಣ ತಂಡಗಳನ್ನು ಇಟ್ಟುಕೊಂಡು ಎಐ ಪ್ರಾಧಾನ್ಯದ ಸಂಸ್ಥೆಯಾಗಿ ಮೆಟಾವನ್ನು ಪರಿವರ್ತಿಸಲು ಮಾರ್ಕ್ ಜುಕರ್ಬರ್ಗ್ ಅಣಿಗೊಂಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

ವರ್ಕ್ ಫ್ರಂ ಕೊಟ್ಟು ಬಲಿಹಾಕುವ ಟ್ರೆಂಡ್

8,000 ಮಂದಿಯನ್ನು ಲೇ ಆಫ್ ಮಾಡಲಿರುವ ಸುದ್ದಿ ತಿಂಗಳುಗಳ ಹಿಂದೆಯೇ ಚಾಲ್ತಿಯಲ್ಲಿತ್ತು. ಕಳೆದ ತಿಂಗಳು ಮೆಟಾ ಸಂಸ್ಥೆಯೇ ಇದನ್ನು ಖಚಿತಪಡಿಸಿತ್ತು. ಅದಾದ ಬಳಿಕ ಕಚೇರಿಯೊಳಗೆ ಉದ್ಯೋಗಿಗಳಲ್ಲಿ ಆತಂಕದ ವಾತಾವರಣ ಮಡುಗಟ್ಟಿತ್ತು. ನಿರುತ್ಸಾಹ ಎದ್ದುಕಾಣುತ್ತಿತ್ತು. ನಂತರ ಎಲ್ಲರಿಗೂ ವರ್ಕ್ ಫ್ರಂ ಹೋಮ್ ಆದೇಶ ಕೊಡಲಾಯಿತು. ಆಗಲೇ ಹಲವು ಉದ್ಯೋಗಿಗಳಿಗೆ ಲೇ ಆಫ್ ಪ್ಲಾನ್ ಇರಬಹುದು ಎನ್ನುವ ಸುಳಿವು ಸಿಕ್ಕಿತ್ತು.

ವರ್ಕ್ ಫ್ರಂ ಹೋಂ ಇದ್ದಾಗ ಲೇ ಆಫ್ ಮಾಡಿದರೆ ಕಚೇರಿಯೊಳಗೆ ಎಮೋಶನಲ್ ಪ್ರಸಂಗಗಳನ್ನು ತಪ್ಪಿಸಬಹುದು ಎಂಬುದು ಮೆಟಾ ಎಣಿಕೆ. ಮೆಟಾ ಮಾತ್ರವಲ್ಲ ವಿವಿಧ ಟೆಕ್ ಕಂಪನಿಗಳು ಕೂಡ ಒಂದು ಇಮೇಲ್ ಮೂಲಕ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿವೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಭವಿಷ್ಯದಲ್ಲಿ ಉದ್ಯೋಗಗಳ ಕಥೆ?

ಪರಿಣಿತರ ಪ್ರಕಾರ ಕಾರ್ಪೊರೇಟ್ ಸೆಕ್ಟರ್​ನಲ್ಲಿ ಈಗ ಕೆಲಸದ ಪರಿಮಾಣ ಮತ್ತು ಗುಣ ಬದಲಾಗುತ್ತಿದೆ. ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುವ ಸ್ಕಿಲ್ ಸಾಕಾಗುವುದಿಲ್ಲ. ಕೋಡ್ ಬ್ಲಾಕ್ ಬರೆಯುವ ಸಾಮರ್ಥ್ಯ ಸಾಕಾಗಲ್ಲ. ಬಹಳ ಸಂಕೀರ್ಣವಾದ ಮತ್ತು ಪ್ರಾಬಬಿಲಿಸ್ಟಿಕ್ ಸಿಸ್ಟಂಗಳನ್ನು ನಿರ್ವಹಿಸುವ ಸಾಮರ್ಥ್ಯ ಇರಬೇಕಾಗುತ್ತದೆ.

ಎಐ ಸಿಸ್ಟಂಗಳನ್ನು ಆಪರೇಟ್ ಮಾಡುವುದಷ್ಟೇ ಅಲ್ಲ, ಅದನ್ನು ಡಿಸೈನ್ ಮಾಡುವ ತಂತ್ರಜ್ಞರಿಗೆ ಭವಿಷ್ಯ ಇರುತ್ತದೆ ಎಂದೆನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

20 ದಿನಕ್ಕೆ‘ಕೆಡಿ’ಸಿನಿಮಾ ಗಳಿಸಿದ್ದೆಷ್ಟು? ನಿರ್ಮಾಪಕರಿಗೆ ಲಾಭವೋ, ನಷ್ಟವೋ? – Kannada News | KD Movie Box Office: 20 Day Collection, Profit or Loss for Producers

‘ಕೆಡಿ’ ಸಿನಿಮಾ (KD Movie) ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಜೋಗಿ ಪ್ರೇಮ್ ನಿರ್ದೇಶನ, ಧ್ರುವ ಸರ್ಜಾ ನಟನೆ ಸಿನಿಮಾದ ಹೈಲೈಟ್ ಆಗಿತ್ತು. ಈಗ ಸಿನಿಮಾ ರಿಲೀಸ್ ಆಗಿ 20 ದಿನಗಳು ಕಳೆದಿವೆ. ಕೆಲವರು ಚಿತ್ರವನ್ನು ಇಷ್ಟಪಟ್ಟರೆ, ಇನ್ನೂ ಕೆಲವರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆಯಾಗಿ ‘ಕೆಡಿ’ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ? ನಿರ್ಮಾಪಕರಿಗೆ ಲಾಭವೋ ಅಥವಾ ನಷ್ಟವೋ? ಆ ಬಗ್ಗೆ ಇಲ್ಲಿದೆ ವಿವರ.

‘ಕೆಡಿ’ ಸಿನಿಮಾ ರಿಲೀಸ್ ಆಗಿದ್ದು ಮೇ 1ರಂದು. ಅಂದರೆ ಸಿನಿಮಾ ತೆರೆಗೆ ಬಂದು ಇಂದಿಗೆ (ಮೇ 20) ಮೂರು ವಾರಗಳು ಪೂರ್ಣಗೊಳ್ಳಲಿವೆ. ಇಂದಿನ ಗಳಿಕೆಯ ಸಂಪೂರ್ಣ ಲೆಕ್ಕಾಚಾರ ಈಗಲೇ ಸಿಗೋದಿಲ್ಲ. ಹೀಗಾಗಿ, 20 ದಿನಗಳ ಗಳಿಕೆಯ ವಿವರವನ್ನು ನಾವು ನೀಡುತ್ತಿದ್ದೇವೆ.

‘ಕೆಡಿ’ ಸಿನಿಮಾ ಮೊದಲ ನಾಲ್ಕು ದಿನ ಅಬ್ಬರದ ಕಲೆಕ್ಷನ್ ಮಾಡಿತ್ತು. ಮೊದಲ ನಾಲ್ಕು ದಿನಕ್ಕೆ ಸಿನಿಮಾ 13.3 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆ ಬಳಿಕ ಸಿನಿಮಾದ ಕಲೆಕ್ಷನ್ ಕುಗ್ಗುತ್ತಾ ಸಾಗಿತು. ಮಂಗಳವಾರ (ಮೇ 19) ಸಿನಿಮಾ ಕೇವಲ 19 ಲಕ್ಷ ಗಳಿಕೆ ಮಾಡಿದೆ. ರಾಜ್ಯಾದ್ಯಂತ ಚಿತ್ರಕ್ಕೆ 300 ಶೋಗಳನ್ನು ನೀಡಲಾಗಿದೆ.

‘ಕೆಡಿ’ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 23 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಒಟಿಟಿ ಹಕ್ಕು, ಟಿವಿ ಹಕ್ಕು ಹಾಗೂ ಮ್ಯೂಸಿಕ್ ಹಕ್ಕುಗಳು ಒಳ್ಳೆಯ ಮೊತ್ತಕ್ಕೆ ಮಾರಾಟ ಆಗಿವೆ ಎನ್ನಲಾಗಿದೆ. ಕೆಲವು ವರದಿ ಪ್ರಕಾರ ಚಿತ್ರದ ಬಜೆಟ್ 100-120 ಕೋಟಿ ರೂಪಾಯಿ ಎನ್ನಲಾಗಿದೆ. ಇದನ್ನು ಲೆಕ್ಕಾಚಾರ ಹಾಕಿದರೆ ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟ ಆಗಿರಬಹುದು ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ.

ಇದನ್ನೂ ಓದಿ: ಮೂರನೇ ಭಾನುವಾರ ‘ಕೆಡಿ’ ಗಳಿಸಿದ್ದೆಷ್ಟು? ಒಟ್ಟೂ ಕಲೆಕ್ಷನ್ ವಿವರ ಇಲ್ಲಿದೆ

ಜೋಗಿ ಪ್ರೇಮ್ ನಿರ್ದೇಶನದ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಕೆಡಿ’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಬಾಲಿವುಡ್ ನಟ ಸಂಜಯ್ ದತ್ ಮುಖ್ಯ ವಿಲನ್ ಆಗಿ ಕಾಣಿಸಿಕೊಂಡರೆ, ಶಿಲ್ಪಾ ಶೆಟ್ಟಿ ‘ಸತ್ಯವತಿ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಪ್ರೇರಣಾ ಕಂಬಂ ಚಿತ್ರದ ಇತರ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ – Kannada News | Bengaluru Mega Drug Bust: Hebbal Police Seize MDMA Worth Rupees 34 Crore, Arrest 8 Accused

ವಶಕ್ಕೆ ಪಡೆಯಲಾದ ಡ್ರಗ್ಸ್​​Image Credit source: Tv9 Kannada

ಬೆಂಗಳೂರು, ಮೇ 20: ಹೆಬ್ಬಾಳ ಪೊಲೀಸರು ಬೃಹತ್​​ ಡ್ರಗ್​​ ಜಾಲವೊಂದನ್ನು ಭೇದಿಸಿದ್ದು, ದೆಹಲಿಯಿಂದ ಬೆಂಗಳೂರಿಗೆ (Bengaluru) ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡ್ತಿದ್ದ ಗ್ಯಾಂಗ್​​ನ ಹೆಡೆಮುರಿ ಕಟ್ಟಿದ್ದಾರೆ. ಎಂಟು ಜನ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು, ಈ ಒಂದೇ ತಂಡದಿಂದ ಸುಮಾರು 34 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಈ ಜಾಲ ಮೂರು ಲೇಯರ್​​ಗಳಲ್ಲಿ ಕೆಲಸ ಮಾಡುತ್ತಿತ್ತು. ಮಾದಕ ವಸ್ತುಗಳ ಸಾಗಾಟಕ್ಕೆ ಆರೋಪಿಗಳು ನಾನಾ ದಾರಿಗಳನ್ನು ಕಂಡುಕೊಂಡಿದ್ದರು ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.

ಮುಖ್ಯಾಂಶಗಳು

  • ಬೃಹತ್​​ ಡ್ರಗ್​​ ಜಾಲ ಭೇದಿಸಿದ ಬೆಂಗಳೂರಿನ ಹೆಬ್ಬಾಳ ಪೊಲೀಸರು
  • ಸುಮಾರು 34 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು​​ ವಶಕ್ಕೆ
  • ಪ್ರಕರಣ ಸಂಬಂಧ  8 ಮಂದಿ ಆರೋಪಿಗಳನ್ನು ಬಂಧಿಸಿದ ಖಾಕಿ

ದೆಹಲಿಯಿಂದ ರೈಲಿನಲ್ಲಿ ಡ್ರಗ್ಸ್ ಸಾಗಿಸಿದ್ದ ಆರೋಪಿಗಳು ಅವನ್ನು ಸೀರೆ , ಐರನ್ ಮಾಡಲು ಬಳಸುವ ಟೇಬಲ್ ಮತ್ತು ಚೇರ್​​ಗಳಲ್ಲಿ ಅಡಗಿಸಿಟ್ಟು ತಂದಿದ್ದರು. ಗಿಫ್ಟ್ ರೀತಿಯಲ್ಲಿ ಪ್ಯಾಕ್ ಮಾಡಿ ಅವುಗಳಣ್ನ ಸಾಗಾಟ ಮಾಡಿದ್ದರು. ರೈಲಲ್ಲಿ ಸಾಗಿಸಿ ತಂದಿದ್ದ ಈ ಮಾದಕ ವಸ್ತುಗಳನ್ನು ಕಾರಿಗೆ ಶಿಫ್ಟ್​​ ಮಾಡುವ ವೇಳೆ ದಾಳಿ ನಡೆಸಿರುವ ಪೊಲೀಸರು 4 ಕೆಜಿ 300 ಗ್ರಾಂ ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸರ್ಜಾಪುರದ ಮನೆಯೊಂದರಲ್ಲಿ ಬಾಕಿ ಡ್ರಗ್ಸ್ ಇಟ್ಟಿರುವ ಮಾಹಿತಿ ಸಿಕ್ಕ ಹಿನ್ನೆಲೆ ಬೆಂಗಳೂರಿನ ಪೆಡ್ಲರ್ ಮನ್ಸೂರ್ ನಿವಾಸದಲ್ಲಿ ದಾಳಿ ನಡೆಸಲಾಗಿತ್ತು. ರೇಡ್​​ ವೇಳೆ ಮನೆಯಲ್ಲಿ 10 ಕೆಜಿ ಎಂಡಿಎಂಎ ಪತ್ತೆಯಾಗಿದೆ. ಬಳಿಕ ಅಬ್ದುಲ್ ಸಮಾದ್ ನಿವಾಸದಲ್ಲಿಯೂ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಆಧಾರದಲ್ಲಿ ಆತನ ಹೆಣ್ಣೂರು ನಿವಾಸದಲ್ಲಿ ತಪಾಸಣೆ ನಡೆಸಿದಾಗ 3.5 ಕೆಜಿ ಎಂಡಿಎಂಎ ಸಿಕ್ಕಿದೆ. ಆ ಮೂಲಕ ಒಟ್ಟು 34 ಕೋಟಿ ಮೌಲ್ಯದ 17 ಕೆಜಿಗೂ ಹೆಚ್ಚಿನ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಲಾಡ್ಜ್​ನಲ್ಲಿ ಸಿಕ್ತು ಜೀವಂತ ಗುಂಡುಗಳಿದ್ದ ಮ್ಯಾಗಜೀನ್! ಅಮೇರಿಕ ನಿರ್ಮಿತ ಬುಲೆಟ್ಸ್ ತಂದಿದ್ದ ಯುವಕ ಅಂದರ್

ಇನ್ನು ಉತ್ತರ ಭಾರತ ಅಥವಾ ವಿದೇಶದಿಂದ ಡ್ರಗ್ಸ್ ದೆಹಲಿಗೆ ಬರುತ್ತಿದ್ದ ಡ್ರಗ್ಸ್​​ನ ಅಲ್ಲಿಂದ ದೇಶದ ವಿವಿಧ ಭಾಗಕ್ಕೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. ಸೆನೆಗಲ್​ನ ಡನ್ಫಾ ಗೆರಾಲ್ಡ್, ತಾಂಜೇನಿಯಾದ ಮೆಗ್ರಾತ್ ಮತ್ತು ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ ದೆಹಲಿಯ ಡೀಲರ್​​ಗಳಾಗಿದ್ದರೆ, ದೆಹಲಿ ಮೂಲದ ರೀನಾ ಯಾದವ್ , ದೆಬಶಿಶ್ ಬ್ಯಾನರ್ಜಿ ಮತ್ತು ಧೀರಜ್ ಬೆಂಗಳೂರಿನ ಟ್ರಾನ್ಸ್‌ಪೋರ್ಟರ್​​ಗಳಾಗಿ ಕೆಲಸ ಮಾಡುತ್ತಿದ್ದರು. ಮಂಗಳೂರು ಮೂಲದ ಬೆಂಗಳೂರು ನಿವಾಸಿಗಳಾಗಿರುವ ಮಹಮ್ಮದ್ ಮನ್ಸೂರ್ ಮತ್ತು ಅಬ್ದುಲ್ ಸಮಾದ್ ಬೆಂಗಳೂರಲ್ಲಿ ಪೆಡ್ಲರ್ಸ್​ಗಳಾಗಿದ್ದರು ಎಂಬುದು ತಿಳಿದುಬಂದಿದೆ.

ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಐದು ಕೇಸ್ ದಾಖಲಾಗಿತ್ತು. ಈ ಸಂಬಂಧ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗ ವಿಚಾರಣೆ ವೇಳೆ ಡ್ರಗ್ಸ್ ಜಾಲದ ಮುಂದಿನ ಲೇಯರ್ ಪತ್ತೆಯಾಗಿತ್ತು. ಆ ಮಾಹಿತಿ ಅಧಾರದಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದೆಹಲಿ ಮತ್ತು ದೆಹಲಿ ಎನ್​​ಸಿಆರ್​​ನಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದಕ್ಕಾಗಿ ಹೆಬ್ಬಾಳ ಮತ್ತು ಉತ್ತರ ವಿಭಾಗದ ಸುಮಾರು ನಲವತ್ತು ಪೊಲೀಸರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ತಂಡ ಕಳೆದ ಒಂದು ತಿಂಗಳಿಂದ ಈ ಕುರಿತು ಕೆಲಸ ಮಾಡಿದ್ದು, ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಮತ್ತು ಪೆಡ್ಲರ್ಸ್​​ಗಳನ್ನು ಹಂತ ಹಂತವಾಗಿ ಅರೆಸ್ಟ್​​ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಲಿವುಡ್ ಸ್ಟಾರ್ ನಟನಿಗೆ ‘ಧುರಂಧರ್’ ನೋಡುವಾಸೆ – Kannada News | Jack Ryan star John Krasinski says he wants to watch Dhurandhar movie

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ದೊಡ್ಡ ಹಿಟ್ ಆಗಿದೆ. ಎರಡೂ ಸಿನಿಮಾಗಳ ಒಟ್ಟು ಗಳಿಕೆ 4000 ಕೋಟಿಗಳ ಹತ್ತಿರಕ್ಕಿದೆ. ‘ಧುರಂಧರ್’ ಸರಣಿ ಭಾರತೀಯ ಪ್ರೇಕ್ಷಕರನ್ನು ಮಾತ್ರವಲ್ಲ, ವಿದೇಶಿ ಸಿನಿಮಾ ಪ್ರೇಮಿಗಳನ್ನೂ ಸೆಳೆದಿದೆ. ಇದೀಗ ಹಾಲಿವುಡ್​ನ ಸ್ಟಾರ್ ನಟರೊಬ್ಬರು ‘ಧುರಂಧರ್’ ಸಿನಿಮಾ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಲಿವುಡ್​ನ ಸೂಪರ್ ಹಿಟ್ ಸಿನಿಮಾಗಳಾದ ‘13 ಹವರ್ಸ್’, ‘ಡಾಕ್ಟರ್ ಸ್ಟ್ರೇಂಜ್’, ‘ಕ್ವೈಟ್ ಪ್ಲೇಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಮತ್ತು ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವೆಬ್ ಸರಣಿ ‘ಜಾಕ್ ರಯಾನ್’ನ ನಾಯಕ ಜಾನ್ ಕ್ರಾಸಿನ್​ಸ್ಕಿ ತಮ್ಮ ಹೊಸ ಸಿನಿಮಾ ‘ಜಾಕ್ ರಯಾನ್’ ಪ್ರಚಾರದಲ್ಲಿದ್ದು, ಇತ್ತೀಚೆಗಷ್ಟೆ ಅವರು ಭಾರತದ ಟಿವಿ ವಾಹಿನಿಯೊಟ್ಟಿಗೆ ಮಾತನಾಡುತ್ತಾ, ‘ಧುರಂಧರ್’ ಸಿನಿಮಾ ನೋಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಿಮಗೆ ‘ಧುರಂಧರ್’ ಚಿತ್ರದ ಬಗ್ಗೆ ತಿಳಿದಿದೆಯೇ ಮತ್ತು ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಜಾನ್, ‘ನಾನು ಇನ್ನೂ ಆ (ಧುರಂಧರ್) ಚಿತ್ರವನ್ನು ನೋಡಿಲ್ಲ. ಆದರೆ ಭಾರತೀಯ ಚಿತ್ರರಂಗದ ಬಗ್ಗೆ ಹೇಳುವುದಾದರೆ, ಅಲ್ಲಿ ಅತ್ಯಂತ ಅತ್ಯಾಧುನಿಕ ಮತ್ತು ತಾಂತ್ರಿಕವಾಗಿ ಗುಣಮಟ್ಟದ ಸಿನಿಮಾಗಳು ತಯಾರಾಗುತ್ತಿವೆ. ಸಿನಿಮಾ ನಿರ್ದೇಶಿಸಲು ಪ್ರಯತ್ನಿಸುತ್ತಿರುವ ನನ್ನ ಅನೇಕ ನಿರ್ದೇಶಕ ಸ್ನೇಹಿತರು, ಅಲ್ಲಿಂದ ಬರುತ್ತಿರುವ ಚಿತ್ರಗಳನ್ನು ನೋಡಿ ನಿರಂತರವಾಗಿ ಆಶ್ಚರ್ಯ ಚಕಿತರಾಗುತ್ತಿರುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ‘ಧುರಂಧರ್ 2’ ಅಬ್ಬರ: ಮುಗಿಬಿದ್ದು ನೋಡಿದ ಜನ, ಸರ್ವರ್ ಕ್ರ್ಯಾಶ್

‘ಅವಕಾಶ ಸಿಕ್ಕರೆ ಖಂಡಿತವಾಗಿಯೂ ‘ಧುರಂಧರ್’ ಸಿನಿಮಾವನ್ನು ನೋಡಬಯಸುತ್ತೇನೆ ಎಂದು ಹೇಳಿದ ಅವರು, ‘ಖಂಡಿತವಾಗಿ, ನನಗೆ ಯಾವುದೇ ಸಿನಿಮಾ ನೋಡಲು ಇಷ್ಟ. ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ. ‘ಧುರಂಧರ್’ ಸಿನಿಮಾ ಸಹ ನನಗೆ ಸ್ಪೂರ್ತಿ ನೀಡುವ ವಿಶ್ವಾಸವಿದೆ’ ಎಂದಿದ್ದಾರೆ ಜಾನ್.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಭಾರಿ ಯಶಸ್ಸು ಗಳಿಸಿದ್ದು, ಇತ್ತೀಚೆಗಷ್ಟೆ ‘ಧುರಂಧರ್ 2’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಆದರೆ ಭಾರತದ ಹೊರಗೆ ಮಾತ್ರ. ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆದ ಕೂಡಲೇ ಪಾಕಿಸ್ತಾನ ಸೇರಿದಂತೆ ಇನ್ನೂ ಕೆಲ ದೇಶಗಳಲ್ಲಿ ಟಾಪ್ ಟ್ರೆಂಡಿಂಗ್​​ನಲ್ಲಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ದ್ರಾವಿಡ್​ಗೆ ನಾನು ಸದಾ ಚಿರಋಣಿ: ವಿರಾಟ್ ಕೊಹ್ಲಿ ಮನದಾಳದ ಮಾತು – Kannada News | Virat Kohli Opens Up On ‘Impostor Syndrome’ and Dravid’s Healing Touch

ವಿಶ್ವ ಕ್ರಿಕೆಟ್‌ನ ರನ್‌ ಮಷೀನ್, ಶತಕಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಸದಾ ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣುವ ಆಟಗಾರ. ಆದರೆ, ಸದಾ ಆತ್ಮವಿಶ್ವಾಸದಿಂದ ಬೀಗುವ ಕೊಹ್ಲಿ ಅವರನ್ನೂ ಕೂಡ ತೀವ್ರವಾದ ಮಾನಸಿಕ ಆತಂಕ ಕಾಡಿತ್ತು ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಸ್ಪೋರ್ಟ್ಸ್ ಸಮ್ಮಿಟ್‌ನಲ್ಲಿ ಸ್ವತಃ ಮನದಾಳ ಬಿಚ್ಚಿಟ್ಟಿರುವ ಕಿಂಗ್ ಕೊಹ್ಲಿ, ತಾವು ಸುದೀರ್ಘ ಕಾಲ ‘ಇಂಪೋಸ್ಟರ್ ಸಿಂಡ್ರೋಮ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕಠಿಣ ದಿನಗಳಲ್ಲಿ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ತಮಗೆ ಮಾನಸಿಕ ರಕ್ಷಾಕವಚವಾಗಿ ನಿಂತು ವೃತ್ತಿಬದುಕನ್ನು ಕಾಪಾಡಿದ್ದನ್ನು ಕೊಹ್ಲಿ ಸ್ಮರಿಸಿದ್ದಾರೆ.

ಏನಿದು ಇಂಪೋಸ್ಟರ್ ಸಿಂಡ್ರೋಮ್?

ಇಂಪೋಸ್ಟರ್ ಸಿಂಡ್ರೋಮ್ (Impostor Syndrome) ಎಂದರೆ ಒಬ್ಬ ವ್ಯಕ್ತಿ ತಾನು ಸಾಧಿಸಿದ ಯಶಸ್ಸು ಮತ್ತು ಕೌಶಲ್ಯಗಳನ್ನು ನಂಬದೆ, ತನ್ನ ಸಾಮರ್ಥ್ಯದ ಬಗ್ಗೆ ತಾನೇ ಅಪನಂಬಿಕೆ ಹೊಂದುವ ಒಂದು ಮಾನಸಿಕ ಸ್ಥಿತಿ.

ಸರಳವಾಗಿ ಹೇಳುವುದಾದರೆ, ಎಷ್ಟೇ ಸಾಧನೆ ಮಾಡಿದ ಮೇಲೂ “ನಾನು ಇದಕ್ಕೆ ಅರ್ಹನಲ್ಲ, ನಾನೊಬ್ಬ ವಂಚಕ , ನನ್ನ ಅಸಲಿಯತ್ತು ಅಥವಾ ತಪ್ಪುಗಳು ಸದ್ಯದಲ್ಲೇ ಎಲ್ಲರಿಗೂ ಗೊತ್ತಾಗಿಬಿಡುತ್ತದೆ” ಎಂದು ಒಳಗೊಳಗೇ ಭಯಪಡುವುದೇ ಈ ಸಿಂಡ್ರೋಮ್. ಇದರ ಲಕ್ಷಣಗಳೆಂದರೆ…

  • ತಮ್ಮ ಯಶಸ್ಸು ಸ್ವಂತ ಕಷ್ಟದಿಂದ ಬಂದಿದ್ದಲ್ಲ, ಕೇವಲ ‘ಅದೃಷ್ಟ’ದಿಂದ ಸಿಕ್ಕಿದ್ದು ಎಂದು ಭಾವಿಸುವುದು.
  • ನೂರಾರು ಯಶಸ್ಸಿನ ನಡುವೆಯೂ, ಯಾವುದೋ ಒಂದು ಸಣ್ಣ ತಪ್ಪನ್ನು ಹಿಡಿದುಕೊಂಡು ಕೊರಗುವುದು.
  • ಬೇರೆಯವರು ತನ್ನನ್ನು ಜಡ್ಜ್ ಮಾಡುತ್ತಿದ್ದಾರೆ, ತನ್ನ ಮುಖವಾಡ ಕಳಚಿಬೀಳುತ್ತದೆ ಎಂದು ಸದಾ ಆತಂಕದಲ್ಲಿರುವುದು.

ಇಂತಹದೊಂದು ಮಾನಸಿಕ ಸಮಸ್ಯೆಯನ್ನು ವಿರಾಟ್ ಕೊಹ್ಲಿ ಕೂಡ ಅನುಭವಿಸಿದ್ದರು. ಈ ವೇಳೆ ಅವರ ನೆರವಿಗೆ ನಿಂತದ್ದು ಟೀಮ್ ಇಂಡಿಯಾ ದಿಗ್ಗಜ ರಾಹುಲ್ ದ್ರಾವಿಡ್.

ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ನಾನು ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೂ, ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಯುವ ಆಟಗಾರರು ತನ್ನನ್ನು ಹೇಗೆ ಅಳೆಯಬಹುದು ಎಂಬ ಆತಂಕ ಇಂದಿಗೂ ಕಾಡುತ್ತದೆ ಎಂದು ಕೊಹ್ಲಿ ಒಪ್ಪಿಕೊಂಡಿದ್ದಾರೆ.

“ನಾಯಕತ್ವದ ಜವಾಬ್ದಾರಿಯಲ್ಲಿ ನಾನು ಎಷ್ಟು ಮುಳುಗಿಹೋಗಿದ್ದೆ ಎಂದರೆ, ನನ್ನ ಸ್ವಂತ ಭಾವನೆಗಳ ಕಡೆಗೆ ಗಮನ ಹರಿಸುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ನಾನು ಎಲ್ಲವನ್ನೂ ನಿಭಾಯಿಸುತ್ತಿದ್ದೇನೆ ಅಂದುಕೊಂಡಿದ್ದೆ, ಆದರೆ ಆ 9 ವರ್ಷಗಳಲ್ಲಿ ಯಾರೊಬ್ಬರೂ ನನ್ನ ಬಳಿ ಬಂದು ‘ನೀನು ಹೇಗಿದ್ದೀಯಾ?’ ಎಂಬ ಕನಿಷ್ಠ ಪ್ರಶ್ನೆಯನ್ನೂ ಕೇಳಲಿಲ್ಲ ಎಂಬುದನ್ನು ಆಮೇಲೆ ಅರಿತುಕೊಂಡೆ.”

“ನಾಯಕತ್ವದಿಂದ ಕೆಳಗಿಳಿದ ನಂತರ ಕೂಡ ಕೊಹ್ಲಿ ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದೆ. ಆ ಸಮಯದಲ್ಲಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ನನಗೆ ಬೆಂಬಲವಾಗಿ ನಿಂತರು” ಎಂದು ಕೊಹ್ಲಿ ಸ್ಮರಿಸಿದ್ದಾರೆ.

“ರಾಹುಲ್ (ದ್ರಾವಿಡ್) ಭಾಯ್ ಸ್ವತಃ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರಿಂದ ನಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡ ಅವರಿಗೆ ಚೆನ್ನಾಗಿ ಅರ್ಥವಾಗಿತ್ತು. ಅವರಿಬ್ಬರೂ ನನ್ನನ್ನು ಮಾನಸಿಕವಾಗಿ ತುಂಬಾ ಚೆನ್ನಾಗಿ ನೋಡಿಕೊಂಡರು. ನಾನು ಅವರಿಗಾಗಿ ಆಡಬೇಕು, ಮೈದಾನದಲ್ಲಿ ಕಷ್ಟಪಟ್ಟು ರನ್ ಗಳಿಸಬೇಕು ಎಂಬ ಹಸಿವನ್ನು ಅವರು ನನ್ನಲ್ಲಿ ಮತ್ತೆ ಮೂಡಿಸಿದರು. ನಾನು ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದನ್ನು ಅವರು ನನಗೆ ನೆನಪಿಸಿಕೊಟ್ಟರು, ಇದರಿಂದಾಗಿ ನಾನು ಮತ್ತೆ ಕ್ರಿಕೆಟ್ ಅನ್ನು ಆನಂದಿಸಲು ಸಾಧ್ಯವಾಯಿತು.” ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

“ನನ್ನ ಕೆರಿಯರ್​ನ ಈ ಕಠಿಣ ದಿನಗಳಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ನೀಡಿದ ಬೆಂಬಲಕ್ಕೆ ನಿಜವಾಗಲೂ ನಾನು ಚಿರಋಣಿ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಅವರ ಈ ಮಾತುಗಳು ಕ್ರೀಡಾಲೋಕದ ತೆರೆಯ ಮರೆಯ ಕಹಿಸತ್ಯವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತಂದಿಟ್ಟಿವೆ. ಮೈದಾನದಲ್ಲಿ ಸದಾ ಬಲಿಷ್ಠವಾಗಿ ಕಾಣುವ ಸೂಪರ್ ಸ್ಟಾರ್‌ಗಳೂ ಕೂಡ ಒಳಗೊಳಗೇ ತೀವ್ರ ಮಾನಸಿಕ ಹೋರಾಟ ನಡೆಸುತ್ತಿರುತ್ತಾರೆ ಎಂಬುದಕ್ಕೆ ಕೊಹ್ಲಿ ಅವರ ಈ ‘ಇಂಪೋಸ್ಟರ್ ಸಿಂಡ್ರೋಮ್’ ಒಪ್ಪಿಗೆಯೇ ಸಾಕ್ಷಿ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ನಾಲ್ವರು ಹೊಸ ಆಟಗಾರರು ಎಂಟ್ರಿ..!

ಕೇವಲ ತಾಂತ್ರಿಕ ಕೌಶಲ್ಯಗಳಷ್ಟೇ ಅಲ್ಲದೆ, ರಾಹುಲ್ ದ್ರಾವಿಡ್ ಅವರಂತೆ ಆಟಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮಾರ್ಗದರ್ಶಕರು ತಂಡದಲ್ಲಿದ್ದಾಗ ಮಾತ್ರ ಒಬ್ಬ ದಿಗ್ಗಜ ಆಟಗಾರ ತನ್ನ ವೃತ್ತಿಬದುಕನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ಕಿಂಗ್ ಕೊಹ್ಲಿ ಬಿಚ್ಚಿಟ್ಟಿರುವ ಈ ಘಟನೆಯೇ ಸಾಕ್ಷಿ.

Published On – 2:09 pm, Wed, 20 May 26

Source link

ಬೀದರ್​ನಲ್ಲಿ ಬಿರುಗಾಳಿ ಸಹಿತ ಮಳೆ ಆರ್ಭಟ: ಬರೋಬ್ಬರಿ ಒಂದು ಎಕರೆಯಲ್ಲಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ನಾಶ – Kannada News | Bidar Rain Havoc: One Acre of Papaya Crop Destroyed as Hailstorm Lashes Kollar B Village; Farmer In Deep Distress

ಬೀದರ್, ಮೇ 20: ಬೀದರ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯು ರೈತರ ಬದುಕಿಗೆ ಭಾರಿ ಹೊಡೆತ ನೀಡಿದೆ. ಬೀದರ್ ತಾಲೂಕಿನ ಕೊಳ್ಳಾರ ಬಿ ಗ್ರಾಮದ ಬಾಬ್ ಶೆಟ್ಟಿ ಅವರ ಒಂದು ಎಕರೆಯ ಪಪ್ಪಾಯಿ ತೋಟ ಸಂಪೂರ್ಣವಾಗಿ ನಾಶವಾಗಿದೆ. ಐದು ತಿಂಗಳ ಹಿಂದೆ ನಾಟಿ ಮಾಡಿದ್ದ ಪಪ್ಪಾಯಿ ಬೆಳೆ ಇನ್ನೆರಡು ತಿಂಗಳಲ್ಲಿ ಕಟಾವಿಗೆ ಬರಬೇಕಿತ್ತು. ರೈತರು ಈ ಬೆಳೆಯ ಮೇಲೆ ಸುಮಾರು ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಭಾರಿ ಮಳೆಯಿಂದಾಗಿ ಪ್ರತಿಯೊಂದು ಗಿಡದ ಎಲೆಗಳು ಉದುರಿ, ಕಾಯಿಗಳೂ ಹಾನಿಗೊಂಡಿವೆ.

ಸಾಲ ಸೋಲ ಮಾಡಿ ಪಪ್ಪಾಯಿ ಬೆಳೆದಿದ್ದ ಬಾಬ್ ಶೆಟ್ಟಿ, ನಾಲ್ಕೈದು ಲಕ್ಷ ರೂಪಾಯಿ ಆದಾಯ ಗಳಿಕೆಯ ನಿರೀಕ್ಷೆಯಲ್ಲಿದ್ದರು. ಆದರೆ, ಅನಿರೀಕ್ಷಿತ ಮಳೆಯಿಂದ ಬೆಳೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಳಿ ಮತ್ತು ಆಲಿಕಲ್ಲು ಮಳೆ ರೈತರ ಬದುಕನ್ನು ಬರಬಾದ್ ಮಾಡಿದೆ ಎಂದು ಅವರು ಅಳಲನ್ನು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Melody: ಉಭಯ ದೇಶಗಳ ಸಂಬಂಧ ಇಷ್ಟೇ ಸಿಹಿಯಾಗಿರಲಿ, ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ – Kannada News | Narendra Modi Gifts Melody Toffees to Giorgia Meloni in Lighthearted Moment

ರೋಮ್, ಮೇ 20: ಮೆಲೋಡಿ ಚಾಕೊಲೇಟ್ ಭಾರತದಲ್ಲಿ ಫೇಮಸ್, ಅದರ ರುಚಿ ತಿಳಿಯದವರಿಲ್ಲ, ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರವಾಸದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಪ್ಯಾಕ್ ಉಡುಗೊರೆಯಾಗಿ ಕೊಟ್ಟಿದ್ದು, ಎರಡೂ ದೇಶಗಳ ಸಂಬಂಧ ಇಷ್ಟೇ ಸಿಹಿಯಾಗಿರಲಿ ಎಂದು ಹಾರೈಸಿದ್ದಾರೆ. ಮೋದಿಯಿಂದ ಗಿಫ್ಟ್​ ಪಡೆದಿರುವ ಮೆಲೋನಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಮೋದಿ ತಮ್ಮ ಐದು ರಾಷ್ಟ್ರಗಳ ಪ್ರವಾಸದ ಐದನೇ ಮತ್ತು ಕೊನೆಯ ಹಂತಕ್ಕಾಗಿ ಮಂಗಳವಾರ ರೋಮ್‌ಗೆ ಬಂದಿಳಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಶುದ್ಧ ಇಂಧನ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವಿನಿಮಯಗಳಲ್ಲಿ ಸಹಕಾರದ ಮೇಲೆ ಕೇಂದ್ರೀಕರಿಸುವ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029 ರ ಅಡಿಯಲ್ಲಿ ಭಾರತ ಮತ್ತು ಇಟಲಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಿಬಿಎ ಚುನಾವಣೆಗೆ ಸುಪ್ರೀಂಕೋರ್ಟ್​​ನಿಂದ ಹೊಸ ಡೆಡ್​​ಲೈನ್​​: ಈ ಹಿಂದೆ ನೀಡಿದ್ದ ಅವಧಿ ವಿಸ್ತರಣೆ – Kannada News | Supreme Court Extends Deadline For Greater Bengaluru Authority Elections Till August 31

ನವದೆಹಲಿ/ಬೆಂಗಳೂರು, ಮೇ 20: ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ನಿರ್ಣಯ ಕೈಗೊಂಡಿದೆ. ಜೂನ್​​ 30ರ ವರೆಗೆ ಈ ಮುಂಚೆ ನೀಡಿದ್ದ ಗಡುವನ್ನು ಆಗಸ್ಟ್ 31, 2026ರವರೆಗೆ ವಿಸ್ತರಿಸಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮನವಿ ಮೇರೆಗೆ ಸಮಯಾವಕಾಶ ನೀಡಿರುವ ಕೋರ್ಟ್​​, ಇದೇ ಅಂತಿಮ ಅವಕಾಶ. ಮತ್ತಷ್ಟು ವಿಸ್ತರಣೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಖ್ಯಾಂಶಗಳು

  • ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಗಡುವು ವಿಸ್ತರಣೆ
  • ಈ ಹಿಂದೆ ಜೂನ್​​ 30ರ ವರೆಗೆ ಸಮಯ ನೀಡಿದ್ದ ಸುಪ್ರೀಂಕೋರ್ಟ್​​
  • ಸರ್ಕಾರ, ಚುನಾವಣಾ ಆಯೋಗದ ಮನವಿ ಹಿನ್ನೆಲೆ ಸಮಯಾವಕಾಶ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠ ಈ ಬಗ್ಗೆ ಆದೇಶ ನೀಡಿದ್ದು, ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಗಡುವು ವಿಸ್ತರಣೆ ಕೋರಿ ಮನವಿ ಸಲ್ಲಿಸಿದ್ದರು. ರಾಜ್ಯದಲ್ಲಿ ನಡೆಯಲಿರುವ ವಿಶೇಷ ಮತದಾರರ ಪರಿಶೀಲನೆ (SIR) ಕಾರ್ಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗುತ್ತಿದೆ ಎಂದು ಅವರು ವಾದಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್, ಹಿಂದಿನ ಗಡುವು ವಿಸ್ತರಣೆ ವೇಳೆ ಜೂನ್ 30ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಭರವಸೆ ನೀಡಿತ್ತು ಎಂದು ತಿಳಿಸಿದ್ದರು.

ಇದನ್ನೂ ಓದಿ: ಜಿಬಿಎ ಲ್ಯಾಬ್‌ಗೆ ಅಂಟಿದ ಗ್ರಹಣ; ಬೆಂಕಿ ಅವಘಡದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!

ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ, ಚುನಾವಣೆಗೆ ಅಗತ್ಯ ಸಿದ್ಧತೆಗಳೆಲ್ಲ ಪೂರ್ಣಗೊಂಡಿದ್ದರೂ SIR ಕಾರ್ಯದಿಂದ ಸಿಬ್ಬಂದಿ ಸಮಸ್ಯೆ ಉಂಟಾಗಿದೆ. ಕನಿಷ್ಠ ಎರಡರಿಂದ ಮೂರು ತಿಂಗಳ ಅವಧಿ ವಿಸ್ತರಣೆ ಅಗತ್ಯವಾಗಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇತ್ತ ರಾಜ್ಯ ಚುನಾವಣಾ ಆಯೋಗವೂ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವಂತೆ ಕೋರ್ಟ್​​ ಈ ಹಿಂದೆ ನೀಡಿದ್ದ ಗಡುವು ವಿಸ್ತರಣೆಗೆ ಕೋರಿ ಮನವಿ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version