ಬೆಂಗಳೂರು, ಮಾರ್ಚ್ 20: ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಈಗಾಗಲೇ ಅಖಾಡ ರಂಗೇರಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿರೋದು ಕಾಂಗ್ರೆಸ್ಗೆ ತಲೆನೋವಾಗಿದೆ. ಬಿಕ್ಕಟ್ಟು ಬಗೆಹರಿಸಲು ರಾಜ್ಯ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇವಾಲ ಅಖಾಡಕ್ಕಿಳಿದಿದ್ದು, ಸಿಎಂ, ಡಿಸಿಎಂ ಜೊತೆ ಸಭೆ ಮಾಡಿದ್ದಾರೆ. ಸದ್ಯ ಸಭೆ ಬಳಿಕ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ನಾನು, ಸಿಎಂ, ರಾಜ್ಯ ಉಸ್ತುವಾರಿ ಸಭೆ ಮಾಡಿದ್ದೇವೆ. ಸಭೆಯಲ್ಲಿ ಎಲ್ಲ ಮುಖಂಡರ ಅಭಿಪ್ರಾಯ ಹೇಳಿದ್ದೇವೆ. ಒಮ್ಮತದ ನಿರ್ಧಾರ ಆಗಿದೆ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ಗೆ ಕಳಿಸುತ್ತೇವೆ. S.S.ಮಲ್ಲಿಕಾರ್ಜುನ್ ಜೊತೆಗೆ ಕೂಡ ಮಾತನಾಡಿದೆ. ಒಳ್ಳೇ ದಿನ ಅನ್ನೋ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದಾನೆ ಎಂದಿದ್ದಾರೆ. ಅಗತ್ಯಬಿದ್ರೆ ಹಿಂಪಡೆಯುತ್ತೇನೆ ಅಂತಾನೂ ಹೇಳಿದ್ದಾರೆ. ಅಲ್ಪಸಂಖ್ಯಾತರು ಪಕ್ಷ ಹೇಳಿದ್ದು ಮಾಡುತ್ತೇವೆ ಅಂದಿದ್ದಾರೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಅಂತ ಎಲ್ಲಾ ಹೇಳಿದ್ದಾರೆ. ಶೀಘ್ರವೇ ಅಭ್ಯರ್ಥಿ ಆಯ್ಕೆ ಮಾಡಿ ಘೋಷಿಸುತ್ತೇವೆ ಎಂದು ಹೇಳಿದ್ದಾರೆ.
ನವದೆಹಲಿ, ಮಾರ್ಚ್ 20: ಬಸ್ನಲ್ಲಿಯೋ, ರೈಲಿನಲ್ಲಿಯೋ ಹೋಗುವಾಗ ಸ್ಟಾಪ್ ಬಂದಾಗ ಪಕ್ಕದ ಅಂಗಡಿಯಲ್ಲಿ ಅಥವಾ ಬುಟ್ಟಿ ಹೊತ್ತು ಬರುವ ವ್ಯಾಪಾರಿಗಳಲ್ಲಿ ಏನಾದರೂ ಕೊಂಡು ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ಕೆಲವರು ಹಸಿವು ನೀಗಿಸಿಕೊಳ್ಳಲು ತಿಂಡಿಗಳನ್ನು ತಿಂದರೆ ಇನ್ನು ಕೆಲವರು ಟೈಂಪಾಸ್ಗಾಗಿ ತಿನ್ನುತ್ತಾರೆ. ಅದೇರೀತಿ ಬಸ್ನೊಳಗೆ ಕುಳಿತಿದ್ದ ಯುವಕನೊಬ್ಬನಿಗೆ ಹಸಿವಾಗಿತ್ತು. ಚಲಿಸುವ ಬಸ್ಸಿನಲ್ಲಿ ಕುಳಿತಿದ್ದ ಆ ಯುವಕ ತಿಂಡಿಗಾಗಿ ಪಕ್ಕದಲ್ಲೇ ನಿಂತಿದ್ದ ಮಾರಾಟಗಾರನಿಗೆ ಕಿಟಕಿಯಿಂದ ಹಣ ಕೊಟ್ಟನು. ಆದರೆ ಮಾರಾಟಗಾರ ಅವನಿಗೆ ಏನನ್ನೂ ಕೊಡಲಿಲ್ಲ. ದುಡ್ಡನ್ನೂ ತಾನೇ ಇಟ್ಟುಕೊಂಡು, ತಿಂಡಿಯನ್ನೂ ಕೊಡದೆ ಆತ ಯಾಮಾರಿಸಿದ. ಬಸ್ ಚಲಿಸುವಾಗ ಆ ಹುಡುಗ ಕೂಗುತ್ತಾ ಇದ್ದ. ಆದರೆ, ವ್ಯಾಪಾರಿ ಮಾತ್ರ ಮೋಸ ಮಾಡಿದ್ದೇ ಸಾಧನೆಯೆಂದು ನಗುತ್ತಿದ್ದ. ಇದೆಲ್ಲವನ್ನೂ ಪಕ್ಕದಲ್ಲಿ ನಿಂತಿದ್ದವನು ವಿಡಿಯೋ ಮಾಡುತ್ತಿದ್ದನೇ ವಿನಃ ಆ ಹುಡುಗನಿಗಾದ ಅನ್ಯಾಯವನ್ನು ತಡೆಯಲಿಲ್ಲ ಎಂಬುದು ಇನ್ನೊಂದು ವಿಪರ್ಯಾಸ!
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 20: ರಾಜ್ಯ ಸರ್ಕಾರಿ ಅಧಿಕಾರಿಗಳು 2023ರಿಂದೀಚೆ ಮಾಡಿರುವ ವಿದೇಶೀ ಪ್ರವಾಸಗಳ (Foreign Trips) ಸಂಖ್ಯೆ 95 ಎನ್ನಲಾಗಿದೆ. ವಿಧಾನಸಭಾ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ವರದಿಯಲ್ಲಿ ಈ ಮಾಹಿತಿ ಇದೆ. ಸರ್ಕಾರಿ ಅಧಿಕಾರಿಗಳ ಈ ವಿದೇಶ ಪ್ರವಾಸಗಳಲ್ಲಿ ಹೆಚ್ಚಿನವಕ್ಕೆ ಸರ್ಕಾರದಿಂದಲೇ ವೆಚ್ಚ ಭರಿಸಲಾಗಿದೆ. ತೆರಿಗೆ ಪಾವತಿದಾರರ ಹಣವನ್ನು ಈ ಪ್ರವಾಸಗಳಿಗೆ ಬಳಕೆ ಮಾಡಲಾಗಿದೆ.
ದತ್ತಾಂಶ ಪ್ರಕಾರ 95 ವಿದೇಶ ಪ್ರವಾಸಗಳ ಪೈಕಿ 58 ಪ್ರವಾಸಗಳಿಗೆ ಸರ್ಕಾರದಿಂದ 20.28 ಕೋಟಿ ರೂ ವೆಚ್ಚವಾಗಿದೆ. ಪ್ರತೀ ಪ್ರವಾಸಕ್ಕೆ ಸರಾಸರಿಯಾಗಿ ಆಗಿರುವ ವೆಚ್ಚ 21.35 ಲಕ್ಷ ರೂ. ಉಳಿದ 37 ಪ್ರವಾಸಗಳನ್ನು ಅಧಿಕಾರಿಗಳು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಪೂರೈಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಅಂತಾರಾಷ್ಟ್ರೀಯ ಸಮ್ಮೇಳನ, ಸಭೆ, ಅಧ್ಯಯನ ಇತ್ಯಾದಿ ಕಾರ್ಯಕ್ರಮಗಳಿಗೆ ಭಾಗವಹಿಸಲು ವಿದೇಶ ಪ್ರವಾಸಗಳಿಗೆ ಹೋಗಿದ್ದಾರೆ. ಆದರೆ, ಇಂಥ ಪ್ರವಾಸಗಳನ್ನು ಮಾಡಿ ಬರುವ ಹೆಚ್ಚಿನ ಅಧಿಕಾರಿಗಳು ಅಧ್ಯಯನ ವರದಿಯನ್ನು ಸಲ್ಲಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಹೊರಡಿಸಿದ ಸುತ್ತೋಲೆಯು, 2024ರ ಆಗಸಟ್ನಿಂದ 2025ರ ಜುಲೈವರೆಗೆ ಫಾರೀನ್ ಟ್ರಿಪ್ಗೆ ಹೋದ ಅಧಿಕಾರಿಗಳು ಸ್ಟಡಿ ರಿಪೋರ್ಟ್ ಸಲ್ಲಿಸಿಲ್ಲ ಎಂಬುದನ್ನು ಎತ್ತಿ ತೋರಿಸಿತು. ಹೀಗಾಗಿ, 2025ರ ಸೆಪ್ಟೆಂಬರ್ನಲ್ಲಿ ಅಧಿಕಾರಿಗಳ ವಿದೇಶ ಪ್ರವಾಸಗಳನ್ನು ನಿಷೇಧಿಸಲಾಯಿತು.
ಸರ್ಕಾರದಿಂದ ಪ್ರಾಯೋಜಿತವಾದ ವಿದೇಶ ಪ್ರವಾಸಗಳ ಪೈಕಿ ಅತಿ ದುಬಾರಿ ಪ್ರವಾಸವೆಂದರೆ 2024ರಲ್ಲಿ ಸ್ವಿಟ್ಜರ್ಲ್ಯಾಂಡ್ನ ಡಾವೋಸ್ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂ ಸಭೆಗೆ ಅಧಿಕೃತ ನಿಯೋಗ ಹೋಗಿದ್ದು. ಆ ಪ್ರವಾಸಕ್ಕೆ 4.7 ಕೋಟಿ ರೂ ಹಣ ವ್ಯಯವಾಗಿತ್ತೆನ್ನಲಾಗಿದೆ.
ಹೂಡಿಕೆಗಳನ್ನು ಆಕರ್ಷಿಸಲು 2023ರಲ್ಲಿ ಮೂವರು ಉನ್ನತ ಅಧಿಕಾರಿಗಳ ತಂಡವು 11 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿತ್ತು. ಅದಕ್ಕೆ 2.2 ಕೋಟಿ ರೂ ವೆಚ್ಚವಾಗಿತ್ತು. ರಷ್ಯಾ, ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ಇತ್ಯಾದಿ 27ಕ್ಕೂ ಹೆಚ್ಚು ದೇಶಗಳಿಗೆ ರಾಜ್ಯ ಅಧಿಕಾರಿಗಳು ಈ ಅವಧಿಯಲ್ಲಿ ಪ್ರವಾಸ ಹೋಗಿ ಬಂದಿದ್ದಾರೆ. ಇವೆಲ್ಲವೂ ಅಧಿಕೃತ ಪ್ರವಾಸಗಳೇ ಆಗಿವೆ.
ಹಂಸಲೇಖ (Hamsalekha) ಮತ್ತು ರವಿಚಂದ್ರನ್ ಅವರದ್ದು ಎವರ್ಗ್ರೀನ್ ಕಾಂಬಿನೇಷನ್. ಅವರಿಬ್ಬರು ಜೋಡಿಯಾಗಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಅವರ ನಡುವೆ ಮುನಿಸು ಉಂಟಾಗಿತ್ತು. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ‘ಸೋನೆ ಸೋನೆ’ ಹಾಡು ರಚಿಸುವಾಗ ಹಂಸಲೇಖ ಮತ್ತು ರವಿಚಂದ್ರನ್ ನಡುವೆ ವೈಮನಸ್ಸು ಉಂಟಾಗಿತ್ತು. ಆ ಸಂದರ್ಭವನ್ನು ರವಿಚಂದ್ರನ್ (Ravichandran) ಅವರು ಈಗ ವಿವರಿಸಿದ್ದಾರೆ. ‘ಆಗಲೇ ನನ್ನ ಮತ್ತು ಇವರ ನಡುವೆ ಚಿಕ್ಕ ಬೆಂಕಿ ಶುರುವಾಗಿತ್ತು. ಹಾಡಿಗೆ ಹಂಸಲೇಖ ಅವರು 40 ಪಲ್ಲವಿ ಬರೆದರು. ನಾನು ಎಲ್ಲವನ್ನೂ ತಿರಸ್ಕರಿಸಿದೆ. ಕೊನೆಗೆ ಮೊದಲು ಬರೆದಿದ್ದನ್ನೆ ಒಪ್ಪಿಕೊಂಡೆ. ನಮ್ಮ ಸ್ನೇಹ ನಮ್ಮ ಕೆಲಸದಲ್ಲಿ ಕಾಣಿಸುತ್ತದೆ’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.
ಟೀಂ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇದೀಗ ಐಪಿಎಲ್ನಲ್ಲಿ ತಮ್ಮ ಕೈಚಳಕ ತೋರಲು ಸಿದ್ಧರಾಗಿದ್ದಾರೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಧಿಕ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಬುಮ್ರಾ, ಈ ಲೀಗ್ನಲ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ವಾಸ್ತವವಾಗಿ ಐಪಿಎಲ್ನಲ್ಲಿ ಅತಿ ಹೆಚ್ಚು ನೋ ಬಾಲ್ಗಳನ್ನು ಬೌಲ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ಮಾತ್ರವಲ್ಲದೆ ಈ ವಿಚಾರದಲ್ಲಿ ಬುಮ್ರಾ ಅವರ ಹತ್ತಿರದಲ್ಲಿ ಯಾವುದೇ ಬೌಲರ್ಗಳಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಐಪಿಎಲ್ನಲ್ಲಿ ಬಹುಬೇಡಿಕೆಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಬುಮ್ರಾ ಈ ರೀತಿಯ ಬೇಡದ ದಾಖಲೆ ಬರೆದಿರುವುದು ನಂಬಲಾಸಾಧ್ಯವಾಗಿದೆ.
ಇದುವರೆಗೆ ಐಪಿಎಲ್ನಲ್ಲಿ 145 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಜಸ್ಪ್ರೀತ್ ಬುಮ್ರಾ 32 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ. ಬುಮ್ರಾ ನಂತರದ ಸ್ಥಾನದಲ್ಲಿರುವ ಅನುಭವಿ ವೇಗಿ ಉಮೇಶ್ ಯಾದವ್ 24 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಮತ್ತೊಬ್ಬ ಅನುಭವಿ ವೇಗಿ ಇಶಾಂತ್ ಶರ್ಮಾ 23 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ.
ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿ ಬೌಲರ್ಗಳಲ್ಲಿ ಒಬ್ಬರು. ಆದ್ದರಿಂದ, ಅವರ ಹೆಸರಿನಲ್ಲಿರುವ ಈ ಅನಗತ್ಯ ದಾಖಲೆ ಆಶ್ಚರ್ಯಕರವಾಗಿದೆ. ಇದರ ಹೊರತಾಗಿಯೂ, ಬುಮ್ರಾ ಮುಂಬೈ ತಂಡವು ನಾಲ್ಕು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 145 ಇನ್ನಿಂಗ್ಸ್ಗಳನ್ನಾಡಿರುವ ಬುಮ್ರಾ 183 ವಿಕೆಟ್ಗಳನ್ನು ಕಬಳಿಸಿದ್ದು ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಪ್ರಸ್ತುತ ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು ಅದ್ಭುತ ಫಾರ್ಮ್ನಲ್ಲಿರುವ ಬುಮ್ರಾ, ಐಪಿಎಲ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ವಾಷಿಂಗ್ಟನ್, ಮಾರ್ಚ್ 20: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಹಿಡಿತವನ್ನು ಕಡಿಮೆ ಮಾಡಲು ಸೈನ್ಯವನ್ನು ಕಳುಹಿಸಬೇಕೆಂಬ ತನ್ನ ಮನವಿಗೆ ಬೆಂಬಲ ನೀಡದ NATO ಮಿತ್ರರಾಷ್ಟ್ರಗಳ ವಿರುದ್ಧ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನ್ಯಾಟೋ ರಾಷ್ಟ್ರಗಳನ್ನು “ಹೇಡಿಗಳು, ಪೇಪರ್ ಟೈಗರ್ಗಳು” ಎಂದು ಟೀಕಿಸಿದ್ದಾರೆ.
ಟ್ರೂತ್ ಸೋಷಿಯಲ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಟ್ರಂಪ್, ಅಮೆರಿಕ ಇಲ್ಲದೆ NATO “ಕಾಗದದ ಹುಲಿ” ಎಂದು ಹೇಳಿದರು. ಈ ಸಂಘರ್ಷವನ್ನು ಈಗಾಗಲೇ ಮಿಲಿಟರಿ ದಾಳಿಯ ಮೂಲಕ ನಾವು ಗೆದ್ದಿದ್ದೇವೆ. ನಮಗೆ ಯಾವುದೇ ಅಪಾಯವಿಲ್ಲ. ಪರಮಾಣು ಚಾಲಿತ ಇರಾನ್ ಅನ್ನು ನಿಲ್ಲಿಸುವ ಹೋರಾಟಕ್ಕೆ ನ್ಯಾಟೋ ರಾಷ್ಟ್ರಗಳು ಸೇರಲು ಬಯಸಲಿಲ್ಲ. ಈಗ ಹೋರಾಟವು ಮಿಲಿಟರಿಯ ದಾಳಿಯಾಗಿ ಗೆದ್ದಿದೆ. ಈಗ ಅವರು ಹೆಚ್ಚಿನ ತೈಲ ಬೆಲೆಗಳ ಬಗ್ಗೆ ದೂರು ನೀಡುತ್ತಿದ್ದಾರೆ. ಅವರಿಂದಲೇ ತೈಲ ಬೆಲೆ ಹೆಚ್ಚಳವಾಗಿದ್ದು. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಹಾಯ ಮಾಡಲು ಅವರು ಬಯಸಲಿಲ್ಲ. ಅವರ ಈ ವರ್ತನೆಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳುತ್ತೇನೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಮುಖ ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿದ್ದರು. ಆದರೆ, ನ್ಯಾಟೋ ರಾಷ್ಟ್ರಗಳು ಇದಕ್ಕೆ ಬೆಂಬಲ ನೀಡಿರಲಿಲ್ಲ. ಫೆಬ್ರವರಿ 28ರಂದು ಯುಎಸ್-ಇಸ್ರೇಲ್ ದಾಳಿಯೊಂದಿಗೆ ಪ್ರಾರಂಭವಾದ ಯುದ್ಧವು ಜಾಗತಿಕ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ದೊಡ್ಡ ಪ್ರಮಾಣದ ಸಾವುನೋವುಗಳಿಗೆ ಕಾರಣವಾಯಿತು ಮತ್ತು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 20: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತೆ. ಟಿಕೆಟ್ ಬೇಕೆಂದು ಎಲ್ಲರಿಗೂ ಆಸೆ, ಆಸಕ್ತಿ ಇದ್ದೇ ಇರುತ್ತೆ. ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತದೆ. ಕರ್ನಾಟಕ ಜನ ನಮ್ಮ ಪರ ಇದ್ದಾರೆ. ಹಿಂದೆಯೂ ಚುನಾವಣೆ ಗೆದ್ದಿದ್ದೇವೆ, ಈಗಲೂ ಗೆಲ್ಲುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದ್ದಾರೆ.
ಐಪಿಎಲ್ನ (IPL) ಮೊದಲ ಸೀಸನ್‌ನಿಂದ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುವುದನ್ನು ಕಾಣಬಹುದು. ಆದಾಗ್ಯೂ ಧೋನಿ ಈ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಾರಾ? ಅಥವಾ ಇಡೀ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಖಚಿತವಾಗಿಲ್ಲ. ಇದೆಲ್ಲದರ ಹೊರತಾಗಿ ಧೋನಿ ಸಿಎಸ್‌ಕೆ ತಂಡದಲ್ಲಿ ಆಡುವುದು ಖಚಿತ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ 11 ಪ್ರಕಟಿಸಿದ್ದು, ಅಚ್ಚರಿಯ ಸಂಗತಿಯೆಂದರೆ ಪಠಾಣ್ ಅವರ ಆಡುವ ಹನ್ನೊಂದರ ಬಳಗದಲ್ಲಿ ಧೋನಿಗೆ ಸ್ಥಾನ ನೀಡಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಪಠಾಣ್, ಧೋನಿ ಹೆಸರನ್ನು ತೆಗೆದುಕೊಂಡಿಲ್ಲ.
ಪಠಾಣ್ ಆಯ್ಕೆ ಮಾಡಿರುವ ತಂಡ
ಈ ಬಾರಿಯ ಐಪಿಎಲ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯುತ್ತಮ 12 ಆಟಗಾರರ ಬಳಗವನ್ನು ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಇರ್ಫಾನ್ ಪಠಾಣ್ ಸಂಜು ಸ್ಯಾಮ್ಸನ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಮೂರನೇ ಸ್ಥಾನಕ್ಕೆ ಕಳುಹಿಸಲು ಅವರು ನಿರ್ಧರಿಸಿದ್ದಾರೆ. ಶಿವಂ ದುಬೆ ಅವರನ್ನು ನಾಲ್ಕನೇ ಸ್ಥಾನಕ್ಕೆ ಮತ್ತು ಡೆವೋಲ್ಡ್ ಬ್ರೆವಿಸ್ ಅವರನ್ನು ಐದನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಇರ್ಫಾನ್ ಪಠಾಣ್ ಆರನೇ ಸ್ಥಾನಕ್ಕೆ ಸರ್ಫರಾಜ್ ಖಾನ್ ಅವರಿಗೆ ಆದ್ಯತೆ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬದಲಿಗೆ ಸರ್ಫರಾಜ್ ಖಾನ್ ಈ ಸ್ಥಾನಕ್ಕೆ ಸೂಕ್ತ ಎಂದು ಅವರು ಹೇಳಿದ್ದಾರೆ. ಏಕೆಂದರೆ ಕಳೆದ ಎರಡು ಸೀಸನ್‌ಗಳಲ್ಲಿ ಧೋನಿ ಕೊನೆಯ ಎರಡು ಓವರ್‌ಗಳಿಗೆ ಮಾತ್ರ ಬ್ಯಾಟಿಂಗ್ ಮಾಡಲು ಬಂದಿದ್ದರು. ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಇದು ಒಳ್ಳೆಯದು. ಆದರೆ ಫ್ರಾಂಚೈಸಿಯ ದೃಷ್ಟಿಕೋನದಿಂದ ಇದು ಸರಿಯಲ್ಲ.
ಧೋನಿ ಬಗ್ಗೆ ಪಠಾಣ್ ಅಭಿಪ್ರಾಯ
ಇರ್ಫಾನ್ ಪಠಾಣ್ ಅವರ ಪ್ರಕಾರ, ಧೋನಿ ಕನಿಷ್ಠ ನಾಲ್ಕು ಓವರ್‌ಗಳಾದರೂ ಬ್ಯಾಟಿಂಗ್ ಮಾಡಬೇಕು. ಧೋನಿ ತಂಡದಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಆಡಿದರೆ ಅದು ಫ್ರಾಂಚೈಸಿಯಗೆ ಉತ್ತಮ. ಆದರೆ ಅದು ಸಂಭವಿಸದಿದ್ದರೆ, ಒಂದು ಪ್ರಶ್ನಾರ್ಥಕ ಚಿಹ್ನೆ ಉದ್ಭವಿಸುತ್ತದೆ. ಪ್ರತಿಯೊಬ್ಬ ಶ್ರೇಷ್ಠ ಆಟಗಾರನಿಗೂ, ಅವನು ಆಟವನ್ನು ಬಿಡಬೇಕಾದ ಸಮಯ ಬರುತ್ತದೆ. ಧೋನಿ ಈಗ ಸಿಎಸ್‌ಕೆ ತಂಡವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಇದರಿಂದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುತ್ತದೆ. ಆದರೆ ಧೋನಿ ಆಡಲು ನಿರ್ಧರಿಸಿದರೆ, ಸರ್ಫರಾಜ್ ಖಾನ್ ಸಿಎಸ್‌ಕೆ ಪರ ತಮ್ಮ ಚೊಚ್ಚಲ ಐಪಿಎಲ್ ಪಂದ್ಯಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದಿದ್ದಾರೆ.
ಕೆಳಕ್ರಮಾಂಕದಲ್ಲಿ ಯಾರು?
ಉಳಿದಂತೆ ಇರ್ಫಾನ್ ಪಠಾಣ್ ತಂಡದಲ್ಲಿ, ಕಾರ್ತಿಕ್ ಶರ್ಮಾ ಏಳನೇ ಕ್ರಮಾಂದಲ್ಲಿ, ಪ್ರಶಾಂತ್ ವೀರ್ ಎಂಟನೇ ಕ್ರಮಾಂದಲ್ಲಿ ಆಡಲಿದ್ದಾರೆ. ಸ್ಪಿನ್ ಬೌಲಿಂಗ್ ಜವಾಬ್ದಾರಿಯನ್ನು ಅಕೀಲ್ ಹುಸೇನ್ ಮತ್ತು ನೂರ್ ಅಹ್ಮದ್ ಅವರ ಹೆಗಲ ಮೇಲೆ ಹಾಕಿರುವ ಪಠಾಣ್, ವೇಗದ ಬೌಲರ್ಗಳಾಗಿ ಮ್ಯಾಟ್ ಹೆನ್ರಿ ಮತ್ತು ಖಲೀಲ್ ಅಹ್ಮದ್ (ಇಂಪ್ಯಾಕ್ಟ್ ಪ್ಲೇಯರ್) ಅವರಿಗೆ ಅವಕಾಶ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ದಂಪತಿಯು ತಮ್ಮ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದಾರೆ. ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಬಾಲಕಿಯನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ. ಈ ವಿಡಿಯೋವನ್ನು ಬಾಲಕಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫೆಬ್ರವರಿ 28ರಂದು ರಶ್ಮಿಕಾ ಮತ್ತು ವಿಜಯ್ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಳು. ‘ನಾನೂ ನಿಮ್ಮ ಅಭಿಮಾನಿ ಅಲ್ವಾ? ನನ್ನನ್ನೇಕೆ ಮದುವೆಗೆ ಕರೆದಿಲ್ಲ? ಎಲ್ಲರಿಗೂ ಲಡ್ಡು ಕೊಡುತ್ತಿದ್ದೀರಿ, ಅನ್ನದಾನ ಮಾಡುತ್ತಿದ್ದೀರಿ, ನನಗೆ ಮಾತ್ರ ಇಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಈ ವಿಡಿಯೋ ಕಂಡು ಮನಸೋತಿದ್ದ ವಿಜಯ್ ದೇವರಕೊಂಡ, ‘ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ’ ಎಂದು ಭರವಸೆ ನೀಡಿದ್ದರು.
ತಮ್ಮ ಮಾತಿನಂತೆ ಈ ದಂಪತಿ ಇತ್ತೀಚೆಗೆ ಆ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಿಜಯ್ ಆ ಪುಟ್ಟ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರೆ, ರಶ್ಮಿಕಾ ಮಂದಣ್ಣ ಆಕೆಯ ತಟ್ಟೆಗೆ ಲಡ್ಡುಗಳನ್ನು ಬಡಿಸಿ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ವಿಜಯ್ ಕೂಡ ಆಕೆಗೆ ಪ್ರೀತಿಯಿಂದ ಊಟ ಬಡಿಸಿದ್ದಾರೆ. ‘ನಾವಿಬ್ಬರು ಫ್ರೆಂಡ್ಸ್ ಅಲ್ವಾ’ ಎಂದು ಬಾಲಕಿ ಕೇಳಿದಾಗ ವಿಜಯ್ ಮತ್ತು ರಶ್ಮಿಕಾ ನಗುತ್ತಾ ‘ಹೌದು’ ಎಂದಿದ್ದಾರೆ.
ವೈರಲ್ ವಿಡಿಯೋ:
ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ಬಾಲಕಿಯ ಕುಟುಂಬ, ‘ರೀಲ್ ಟು ರಿಯಲ್… ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದು ಅದ್ಭುತ ಅನುಭವ. ಅವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರೂ ತುಂಬಾ ಸರಳ ವ್ಯಕ್ತಿತ್ವದವರು’ ಎಂದು ಸಂತಸ ಹಂಚಿಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಸರಳತೆಗೆ ಮತ್ತು ಅಭಿಮಾನಿಯ ಮೇಲಿರುವ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಶ್ಮಿಕಾ ಮತ್ತು ವಿಜಯ್ ಶೀಘ್ರದಲ್ಲೇ ‘ರಣಬಾಲಿ’ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ಅವರು ಒಂದಾಗಿ ನಟಿಸಲಿರುವ ಸಿನಿಮಾ ಇದು.
ನವದೆಹಲಿ, ಮಾರ್ಚ್ 20: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ (WITT) ಮಾರ್ಚ್ 23-24 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆಗೂ ಮುನ್ನ ಮಾತನಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, “ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ಹೊರತಾಗಿಯೂ ಭಾರತವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ” ಎಂದು ಹೇಳಿದ್ದಾರೆ.
“ಕಳೆದ ವರ್ಷ ಜಾಗತೀಕರಣವು ತೀವ್ರ ಹೊಡೆತ ನೀಡಿದೆ. ಸುಂಕಗಳನ್ನು ಆಯುಧಗಳಾಗಿ ಬಳಸುವುದು ಮತ್ತು ಈಗ ನಡೆಯುತ್ತಿರುವ ವಿವಿಧ ಯುದ್ಧಗಳ ಭಯವು ಜಗತ್ತನ್ನು ಆರ್ಥಿಕ ಅಸ್ಥಿರತೆಯ ಸ್ಥಿತಿಗೆ ತಳ್ಳಿದೆ ಎಂದು ಹೇಳಿದರು. ಈ ಯುದ್ಧವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ, ಅದರ ಪರಿಣಾಮವನ್ನು ಪ್ರಪಂಚದಾದ್ಯಂತ ಜನರು ಅನುಭವಿಸುತ್ತಿದ್ದಾರೆ” ಎಂದು ಬರುಣ್ ದಾಸ್ ಹೇಳಿದ್ದಾರೆ.
“ಈ ಸಂಘರ್ಷವು ನೇರವಾಗಿ ಭಾರತದ ಮನೆ ಬಾಗಿಲಿಗೆ ಬರದಿದ್ದರೂ ಅದರ ಆರ್ಥಿಕ ಪರಿಣಾಮ ಜಾಗತಿಕವಾಗಿ ಕಂಡುಬರುತ್ತಿದೆ. ನವದೆಹಲಿಯಿಂದ ನ್ಯೂಜೆರ್ಸಿಯವರೆಗೆ ಇದು ಪರಿಣಾಮ ಬೀರುತ್ತಿದೆ” ಎಂದು ಟಿವಿ9 ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಹೇಳಿದ್ದಾರೆ. ಇದೇ ವೇಳೆ ಇಂಧನ ಸುರಕ್ಷತೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂಧನದ ಬಿಕ್ಕಟ್ಟು ಜಾಗತಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.
“ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ. ಯುದ್ಧ, ಅಸಮಾನತೆ ಮತ್ತು ಹಿಂಸಾಚಾರದ ಸುಳಿಯಿಂದ ಹೊರಬರಲು ಜಗತ್ತು ಹೆಣಗಾಡುತ್ತಿರುವಾಗ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತವು ತಂತ್ರಜ್ಞಾನ, ಸಂಸ್ಕೃತಿ ಮತ್ತು ಸಮಾಜದ ಪರಾಕ್ರಮವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಶೃಂಗಸಭೆಯ ವಿಷಯವೆಂದರೆ “ಭಾರತ ಮತ್ತು ವಿಶ್ವ”. ಇದರಲ್ಲಿ ಪ್ರಮುಖ ಚಿಂತಕರು, ವ್ಯಾಪಾರ ಮುಖಂಡರು ಮತ್ತು ನಾಗರಿಕ ಸಮಾಜದ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿಯವರ ಮುಖ್ಯ ಭಾಷಣದ ಜೊತೆಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ