ಫೇಸ್‌-3 ಮೆಟ್ರೋ ಮಾರ್ಗದಲ್ಲಿ 37ರ ಬದಲು 11 ಕಿ.ಮೀ. ಮಾತ್ರ ಡಬಲ್‌ ಡೆಕ್ಕರ್‌ ಫ್ಲೈಓವರ್‌? – Kannada News | Namma Metro Phase 3: BMRCL May Truncate 37 km Double Decker Flyover to 11 km

ಡಬಲ್‌ ಡೆಕ್ಕರ್‌ ಫ್ಲೈಓವರ್‌ ಯೋಜನೆ Image Credit source: Deccam Herald

ಬೆಂಗಳೂರು, ಆಗಸ್ಟ್​​ 11: ನಮ್ಮ ಮೆಟ್ರೋದ ಆರೆಂಜ್‌ ಲೈನ್‌ನ (ಜೆ.ಪಿ.ನಗರ-ಕೆಂಪಾಪುರ ಹಾಗೂ ಹೊಸಹಳ್ಳಿ-ಕಡಬಗೆರೆ) ಫೇಸ್‌-3 ಮಾರ್ಗದಲ್ಲಿ 37 ಕಿ.ಮೀ ಉದ್ದದ ಎಂಡ್‌-ಟು-ಎಂಡ್‌ ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಿಸುವ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕೈಬಿಡುವ ಸಾಧ್ಯತೆಯಿದೆ. ಇದರ ಬದಲಾಗಿ, ಸಂಚಾರ ದಟ್ಟಣೆಯಿಂದ ಪದೇಪದೆ ಸಮಸ್ಯೆ ಎದುರಾಗುವ ಪ್ರಮುಖ ಜಂಕ್ಷನ್‌ಗಳಲ್ಲಿ ಮಾತ್ರ ಕಡಿಮೆ ಉದ್ದದ ಡಬಲ್‌ ಡೆಕ್ಕರ್‌ ಮಾರ್ಗಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.

ಡಬಲ್‌ ಡೆಕ್ಕರ್‌ ಫ್ಲೈಓವರ್‌ ಉದ್ದ 11 ಕಿ.ಮೀಗೆ ಇಳಿಕೆ?

ಈ ಹಿಂದೆ ಬಿಎಂಆರ್‌ಸಿಎಲ್‌ 37 ಕಿ.ಮೀ ಉದ್ದದ ಡಬಲ್‌ ಡೆಕ್ಕರ್‌ ರಚನೆ ನಿರ್ಮಿಸಲು ಯೋಜಿಸಿತ್ತು. ಮೊದಲ ಹಂತದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಅದರ ಮೇಲ್ಭಾಗದಲ್ಲಿ ಮೆಟ್ರೋ ವಯಾಡಕ್ಟ್‌ ನಿರ್ಮಿಸುವ ಉದ್ದೇಶವಿತ್ತು. ಆದರೆ ಎಂಜಿನಿಯರಿಂಗ್‌ ಸಲಹಾ ಸಂಸ್ಥೆ ರೈಟ್ಸ್‌ (RITES) ನೀಡಿದ ಸಲಹೆಗಳ ಹಿನ್ನೆಲೆಯಲ್ಲಿ ಡಬಲ್‌ ಡೆಕ್ಕರ್‌ ರಚನೆಯ ಉದ್ದವನ್ನು 11 ಕಿ.ಮೀಗೆ ಇಳಿಸುವ ಕುರಿತು ಬಿಎಂಆರ್‌ಸಿಎಲ್‌ ಚಿಂತನೆ ನಡೆಸುತ್ತಿದೆ. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಂಕ್ ಹಾಗೂ ಬ್ಲೂ ಲೈನ್‌ನ ಸಿಬಿಟಿಸಿ ವ್ಯವಸ್ಥೆಗೆ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್!

ಎಂಜಿನಿಯರಿಂಗ್‌ ಸಲಹಾ ಸಂಸ್ಥೆಯಿಂದ ಆತಂಕ

ಇತ್ತೀಚೆಗೆ ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಸಿರುವ ರೈಟ್ಸ್‌, ನಿರಂತರವಾಗಿ ಹೆಚ್ಚುವರಿ ರಸ್ತೆ ಸಾಮರ್ಥ್ಯ ಕಲ್ಪಿಸುವುದರಿಂದ ಖಾಸಗಿ ವಾಹನಗಳ ಬಳಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಖಾಸಗಿ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಗೆ ಪ್ರಯಾಣಿಕರನ್ನು ವರ್ಗಾಯಿಸುವ ಮೆಟ್ರೋ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಸಲಹಾ ಸಂಸ್ಥೆಯು ಎಂಜಿನಿಯರಿಂಗ್‌ ಸವಾಲುಗಳ ಬಗ್ಗೆಯೂ ಗಮನ ಸೆಳೆದಿದೆ. ಹಲವು ಜಂಕ್ಷನ್‌ಗಳಲ್ಲಿ ಅಸ್ತಿತ್ವದಲ್ಲಿರುವ ಫ್ಲೈಓವರ್‌ಗಳು ಮತ್ತು ಮೆಟ್ರೋ ಮಾರ್ಗಗಳನ್ನು ದಾಟಲು ಸಂಯೋಜಿತ ಡಬಲ್‌ ಡೆಕ್ಕರ್‌ ರಚನೆಯ ಎತ್ತರ 35 ಮೀಟರ್‌ವರೆಗೆ ತಲುಪಬಹುದು. ಇದರಿಂದ ನಿರ್ಮಾಣ ಹಾಗೂ ಕಾರ್ಯಾಚರಣೆ ಮತ್ತಷ್ಟು ಸಂಕೀರ್ಣವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೆಟ್ರೋ ಮಾತ್ರ ಒಳಗೊಂಡಿರುವ ಯೋಜನೆಯ ಆರ್ಥಿಕ ಆಂತರಿಕ ಪ್ರತಿಫಲ ದರ (EIRR) ಸುಮಾರು ಶೇ.17ರಷ್ಟಿದೆ. ಆದರೆ ಡಬಲ್‌ ಡೆಕ್ಕರ್‌ ಅಂಶವನ್ನು ಸೇರಿಸಿದಾಗ ಇದು ಶೇ.14ರ ಮಾನದಂಡಕ್ಕಿಂತ ಕೆಳಗೆ ಇಳಿಯುತ್ತದೆ ಎಂದು ವರದಿ ತಿಳಿಸಿದೆ.

ಪಶ್ಚಿಮ ಹೊರ ವರ್ತುಲ ರಸ್ತೆ (ORR)ಯಲ್ಲಿ ಹೆಬ್ಬಾಳ, ಬಿಇಎಲ್‌ ಸರ್ಕಲ್‌, ಗೊರಗುಂಟೆಪಾಳ್ಯ, ಸುಮನಹಳ್ಳಿ ಕ್ರಾಸ್‌, ನಾಗರಭಾವಿ ಭಾಗ, ನಾಯಂಡಹಳ್ಳಿ, ಕಾಮಾಕ್ಯ ಜಂಕ್ಷನ್‌, ಸರಕ್ಕಿ ಜಂಕ್ಷನ್‌, ಡೆಲ್ಮಿಯಾ ಫ್ಲೈಓವರ್‌ ಹಾಗೂ ವೇಗಾ ಸಿಟಿ ಮಾಲ್‌ ಸೇರಿದಂತೆ ಹಲವು ಕಡೆ ಸಂಚಾರ ದಟ್ಟಣೆಯ ಪ್ರಮುಖ ತಾಣಗಳಿವೆ. ಹೀಗಾಗಿ ಅಂತಿಮವಾಗಿ ಯಾವ ಭಾಗಗಳಲ್ಲಿ ಡಬಲ್‌ ಡೆಕ್ಕರ್‌ ರಚನೆ ನಿರ್ಮಿಸಲಾಗುತ್ತದೆ ಎಂಬುದು ಮಹತ್ವದ್ದಾಗಿದೆ. 2025ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌-3 ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರೂ, ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Temple Pradakshine: ದೇವಾಲಯದಲ್ಲಿ ಎಷ್ಟು ಪ್ರದಕ್ಷಿಣೆ ಹಾಕಿದರೆ ಏನು ಫಲ? ಪುರಾಣಗಳಲ್ಲಿ ಉಲ್ಲೇಖಿಸಿರುವ ನಿಯಮ ಇಲ್ಲಿವೆ – Kannada News | Temple Pradakshine: Spiritual Significance and Benefits for Moksha

ದೇವಾಲಯಕ್ಕೆ ತೆರಳಿದಾಗ ಭಕ್ತರು ಸಾಮಾನ್ಯವಾಗಿ ಮೊದಲು ದೇವಾಲಯವನ್ನು ಪ್ರದಕ್ಷಿಣೆ ಮಾಡಿ, ನಂತರ ಭಗವಂತನ ದರ್ಶನ ಪಡೆಯುವುದು ಅನಾದಿ ಕಾಲದಿಂದಲೂ ಬೆಳೆದುಬಂದಿರುವ ಸಾಂಪ್ರದಾಯಿಕ ಪದ್ಧತಿ. ಭಕ್ತರು ತಮ್ಮ ನಂಬಿಕೆ, ಹರಕೆ ಅಥವಾ ಪ್ರತಿಜ್ಞೆಯ ಆಧಾರದ ಮೇಲೆ 3, 5, 7, 9, 11, 21 ಅಥವಾ 108 ಪ್ರದಕ್ಷಿಣೆಗಳನ್ನು ಮಾಡುತ್ತಾರೆ. ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ವಿದ್ವಾಂಸರ ಪ್ರಕಾರ, ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುವುದರ ಹಿಂದೆ ಆಳವಾದ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವ ಅಡಗಿದೆ. ಅಷ್ಟಾದಶ ಪುರಾಣಗಳಲ್ಲಿ ಒಂದಾದ ಪದ್ಮ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಪ್ರದಕ್ಷಿಣೆಯ ಮಹಿಮೆ, ನಿಯಮಗಳು ಹಾಗೂ ಅದರಿಂದ ದೊರೆಯುವ ಪುಣ್ಯಫಲಗಳನ್ನು ಶ್ಲೋಕಗಳ ಮೂಲಕ ವಿಸ್ತಾರವಾಗಿ ವಿವರಿಸಲಾಗಿದೆ.

ಪ್ರದಕ್ಷಿಣೆ ಎಂದರೇನು? ಅದರ ಆಧ್ಯಾತ್ಮಿಕ ಮಹತ್ವ:

‘ಪ್ರದಕ್ಷಿಣೆ’ ಎಂದರೆ ಮೂಲತಃ ಭಗವಂತನನ್ನು ಕೇಂದ್ರವಾಗಿಟ್ಟುಕೊಂಡು ಸುತ್ತುವುದು ಎಂದರ್ಥ. ದೇವಾಲಯದ ಗರ್ಭಗುಡಿಯಲ್ಲಿರುವ ದೇವರನ್ನು ಜೀವನದ ಮೂಲ ಕೇಂದ್ರವೆಂದು ಭಾವಿಸಿ, ಬಲಭಾಗದಿಂದ ಸುತ್ತುವುದನ್ನು ಶಾಸ್ತ್ರೋಕ್ತ ಪ್ರದಕ್ಷಿಣೆ ಎಂದು ಕರೆಯಲಾಗುತ್ತದೆ. ಭಕ್ತರು ತಮ್ಮ ಮನಸ್ಸು, ಮಾತು ಮತ್ತು ದೇಹವನ್ನು ಭಗವಂತನ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿ ದೇವಾಲಯವನ್ನು ಸುತ್ತುವುದರಿಂದ ಅವರಲ್ಲಿ ಭಕ್ತಿಭಾವ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ವಿವರಣೆಗಳಲ್ಲಿ ಇದನ್ನು ‘ಭ್ರಮರ ಕೇತಕ ನ್ಯಾಯ’ ಮತ್ತು ‘ಕಾಂತ ನ್ಯಾಯ’ದಂತಹ ಸಾಂಪ್ರದಾಯಿಕ ಉದಾಹರಣೆಗಳೊಂದಿಗೆ ವಿವರಿಸಲಾಗಿದ್ದು, ಶ್ರದ್ಧೆಯಿಂದ ದೇವರನ್ನು ನಿರಂತರವಾಗಿ ಸ್ಮರಿಸುವುದರಿಂದ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಬಲಗೊಳ್ಳುತ್ತದೆ ಎಂಬುದು ಪೌರಾಣಿಕ ನಂಬಿಕೆ.

ಪ್ರದಕ್ಷಿಣೆ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತವೆಯೇ?

ಪದ್ಮ ಪುರಾಣದ ಶ್ಲೋಕಗಳ ವ್ಯಾಖ್ಯಾನದ ಪ್ರಕಾರ, ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಮನೋವಾಕ್ಕಾಯಗಳಿಂದ ಸಂಭವಿಸಿದ ತ್ರಿವಿಧ ಪಾಪಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅಂದರೆ, ಮಾನವನು ತನ್ನ ದೇಹದಿಂದ ಮಾಡಿದ ಕಾಯಿಕ ತಪ್ಪುಗಳು, ಮಾತಿನಿಂದ ಆಡಿದ ಅಸತ್ಯ ಅಥವಾ ಕಟು ನುಡಿಗಳು ಹಾಗೂ ಮನಸ್ಸಿನಲ್ಲಿ ತಳೆದ ಕೆಟ್ಟ ಆಲೋಚನೆಗಳಿಂದ ಉಂಟಾಗುವ ಎಲ್ಲಾ ರೀತಿಯ ಪಾಪದ ಪ್ರಭಾವಗಳು ಭಗವಂತನ ಸುತ್ತ ಮಾಡುವ ಪ್ರದಕ್ಷಿಣೆಯಿಂದ ನಿವಾರಣೆಯಾಗುತ್ತವೆ ಎಂಬುದು ಪ್ರಮುಖ ಪೌರಾಣಿಕ ಸಿದ್ಧಾಂತವಾಗಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಎಷ್ಟು ಪ್ರದಕ್ಷಿಣೆ ಮಾಡಿದರೆ ಯಾವ ರೀತಿಯ ಫಲ ದೊರೆಯುತ್ತದೆ?

ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾದ ಶ್ಲೋಕಗಳ ಆಧಾರದ ಮೇಲೆ, ಭಕ್ತರು ಮಾಡುವ ಪ್ರದಕ್ಷಿಣೆಗಳ ಸಂಖ್ಯೆಗೆ ಅನುಗುಣವಾಗಿ ದೊರೆಯುವ ಫಲಿತಾಂಶಗಳನ್ನು ಜ್ಯೋತಿಷ್ಯ ಮತ್ತು ಧಾರ್ಮಿಕ ವಿದ್ವಾಂಸರು ಈ ಕೆಳಗಿನಂತೆ ವರ್ಗೀಕರಿಸಿದ್ದಾರೆ:

  • 1 ಪ್ರದಕ್ಷಿಣೆ: ಈ ಪ್ರಸ್ತುತ ಜನ್ಮದಲ್ಲಿ ತಿಳಿದು ಅಥವಾ ತಿಳಿಯದೆ ಮಾಡಿದ ಪಾಪಗಳು ನಿವಾರಣೆಯಾಗುತ್ತವೆ.
  • 2 ಪ್ರದಕ್ಷಿಣೆಗಳು: ಈ ಜನ್ಮದ ಪಾಪಗಳ ಜೊತೆಗೆ, ಪೂರ್ವ ಜನ್ಮಗಳಲ್ಲಿ ಮಾಡಿದ ಪಾಪಗಳ ಪ್ರಭಾವವೂ ದೂರವಾಗುತ್ತದೆ.
  • 3 ಪ್ರದಕ್ಷಿಣೆಗಳು: ಸಮಸ್ತ ಪಾಪಗಳಿಂದ ಸಂಪೂರ್ಣ ಮುಕ್ತಿ ದೊರೆತು ಮನಃಶಾಂತಿ ಲಭಿಸುತ್ತದೆ.
  • 5 ಪ್ರದಕ್ಷಿಣೆಗಳು: ಶತ್ರು ಬಾಧೆಗಳು, ಅಡೆತಡೆಗಳು ಹಾಗೂ ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿರುವವರಿಗೆ ಸಕಲ ಶತ್ರು ನಾಶ ಮತ್ತು ನಿವಾರಣೆ ಲಭಿಸುತ್ತದೆ.
  • 7 ಪ್ರದಕ್ಷಿಣೆಗಳು: ಜೀವನದಲ್ಲಿ ಸುಖ, ಶಾಂತಿ ಮತ್ತು ಸಕಲ ಐಶ್ವರ್ಯ-ಸಂಪತ್ತುಗಳು ವೃದ್ಧಿಯಾಗುತ್ತವೆ.
  • 9 ಪ್ರದಕ್ಷಿಣೆಗಳು: ಮನಸ್ಸಿನಲ್ಲಿರುವ ಆಸೆಗಳು, ಸತ್ಸಂಕಲ್ಪಗಳು ಹಾಗೂ ಇಷ್ಟಾರ್ಥಗಳು ಈಡೇರುತ್ತವೆ.
  • 11 ಪ್ರದಕ್ಷಿಣೆಗಳು: ಜೀವನದಲ್ಲಿ ನಿರಂತರ ಸಂತೋಷ, ಕೌಟುಂಬಿಕ ಸಮೃದ್ಧಿ ಹಾಗೂ ಅಭ್ಯುದಯ ಉಂಟಾಗುತ್ತದೆ.
  • ಕೋಟಿ ಪ್ರದಕ್ಷಿಣೆಗಳು: ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಒಟ್ಟು ಪ್ರದಕ್ಷಿಣೆಗಳ ಸಂಖ್ಯೆ ‘ಒಂದು ಕೋಟಿ’ ತಲುಪಿದರೆ, ಆತನಿಗೆ ಪುನರ್ಜನ್ಮವಿಲ್ಲದ ‘ಮೋಕ್ಷ’ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.

ಪ್ರದಕ್ಷಿಣೆ ಮಾಡುವಾಗ ನೆನಪಿನಲ್ಲಿಡಬೇಕಾದ ಮುಖ್ಯ ವಿಷಯಗಳು:

ಪ್ರದಕ್ಷಿಣೆ ಮಾಡುವಾಗ ಬರಿ ಸಂಖ್ಯೆಯನ್ನು ಪೂರ್ಣಗೊಳಿಸುವ ಆತುರಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ನಿಷ್ಠೆ ಅತ್ಯಂತ ಮುಖ್ಯ ಎಂದು ಆಧ್ಯಾತ್ಮಿಕ ಗುರುಗಳು ಪ್ರತಿಪಾದಿಸುತ್ತಾರೆ. ವೇಗವಾಗಿ ಓಡುವಂತೆ ಪ್ರದಕ್ಷಿಣೆ ಮಾಡುವ ಬದಲು, ಭಗವಂತನ ನಾಮಸ್ಮರಣೆ ಮಾಡುತ್ತಾ, ಪ್ರಶಾಂತ ಮನಸ್ಸಿನಿಂದ ಪ್ರದಕ್ಷಿಣೆ ಮಾಡುವುದು ನಿಜವಾದ ಆಧ್ಯಾತ್ಮಿಕ ಲಾಭವನ್ನು ನೀಡುತ್ತದೆ. ಇದರ ಜೊತೆಗೆ, ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಆಚಾರ-ವಿಚಾರಗಳಿರುತ್ತವೆ (ಉದಾಹರಣೆಗೆ ಶಿವನ ದೇವಾಲಯದಲ್ಲಿ ಅರ್ಧ ಪ್ರದಕ್ಷಿಣೆ). ಹೀಗಾಗಿ ಆಯಾ ತೀರ್ಥಕ್ಷೇತ್ರಗಳ ಸಾಂಪ್ರದಾಯಿಕ ನಿಯಮಗಳನ್ನು ಗೌರವಿಸಿ ಅನುಸರಿಸುವುದು ಅತ್ಯಂತ ಶ್ರೇಷ್ಠ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:35 am, Tue, 11 August 26

Source link

ಕನ್ನಡ, ತೆಲುಗು, ತಮಿಳು ಬಳಿಕ ಮಲಯಾಳಂಗೆ ಹೊರಟ ರುಕ್ಮಿಣಿ, ಸಿನಿಮಾ ಯಾವುದು? – Kannada News | Rukmini Vasanth acting in Malayalam movie with Nivin Pauly

ರುಕ್ಮಿಣಿ ವಸಂತ್ (Rukmini Vasanth) ಕನ್ನಡದ ಹಾಲಿ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಲ್ಲಿನ ಅವರ ನಟನೆ, ಅವರನ್ನು ಹೊಸ ಎತ್ತರಗಳಿಗೆ ಏರಿಸುತ್ತಿದೆ. ಅದಾದ ಬಳಿಕ ‘ಕಾಂತಾರ’ ಈಗ ‘ಟಾಕ್ಸಿಕ್’ ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ, ತೆಲುಗು ಹಾಗೂ ತಮಿಳಿನ ಸಿನಿಮಾಗಳಲ್ಲಿಯೂ ಸಹ ರುಕ್ಮಿಣಿ ವಸಂತ್ ಈಗಾಗಲೇ ನಟಿಸಿದ್ದಾರೆ. ಇದೀಗ ಮೊದಲ ಬಾರಿಗೆ ಮಲಯಾಳಂ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ ನಟಿ.

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ನಿವಿನ್ ಪೋಲಿ ಅವರ ಎದುರು ಹೊಸ ಸಿನಿಮಾ ಒಂದರಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ‘ಪ್ರೇಮಂ’ ಸೇರಿದಂತೆ ಮಲಯಾಳಂನಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಿವಿನ್ ಪೋಲಿ, ರೊಮ್ಯಾಂಟಿಕ್ ಆಕ್ಷನ್ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾಕ್ಕೆ ಹೆಸರಿಟ್ಟಿಲ್ಲ ಆದರೆ ಎನ್ವಿ51 ಎಂದು ಕರೆಯಲಾಗುತ್ತಿದೆ. ಸಿನಿಮಾವನ್ನು ನಶೀದ್ ಮೊಹಮ್ಮದ್ ಫೇಮಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಿದೆ.

ಇದನ್ನೂ ಓದಿ:ಯಶ್ ಆಡಿದ ಮಾತಿಗೆ ರುಕ್ಮಿಣಿ ವಸಂತ್​ ಫುಲ್ ಖುಷ್

ಈ ಸಿನಿಮಾನಲ್ಲಿ ಮಲಯಾಳಂನ ಮತ್ತೊಬ್ಬ ಜನಪ್ರಿಯ ನಟ ಅಜು ವರ್ಗೀಸ್ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಮಾರ್ಟಿನ್ ಪ್ರಕತ್ ಫಿಲಮ್ಸ್ ಮತ್ತು ಪೌಲ್ ಜೆಆರ್ ಫಿಲಮ್ಸ್​​ನವರು ಬಂಡವಾಳ ಹೂಡಿದ್ದಾರೆ. ಆಗಸ್ಟ್ 09ರಂದು ಸಿನಿಮಾದ ಮುಹೂರ್ತ ನೆರವೇರಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಕಡಿಮೆ ಅವಧಿಯಲ್ಲಿ ಚಿತ್ರೀಕರಣ ಮುಗಿಸಿ ಇದೇ ವರ್ಷ ಸಿನಿಮಾ ಬಿಡುಗಡೆ ಸಹ ಆಗಲಿದೆ ಎನ್ನಲಾಗುತ್ತಿದೆ.

ರುಕ್ಮಿಣಿ ವಸಂತ್ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ. ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕಿಯಾಗಿ ರುಕ್ಮಿಣಿ ನಟಿಸಿದ್ದಾರೆ, ಆ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ತಮಿಳಿನ ಸ್ಟಾರ್ ನಟ ಎಸ್​​ಟಿಆರ್ (ಸಿಂಭು) ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ರಜನೀಕಾಂತ್ ನಟನೆಯ ‘ಧರ್ಮನ್’ ಸಿನಿಮಾನಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದು ಖಾತ್ರಿಯಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:44 am, Tue, 11 August 26

Source link

ಕೊಹ್ಲಿ ಎಫೆಕ್ಟ್​: ‘ಇಂಜೆಕ್ಷನ್’ ಮೊರೆಹೋದರೇ ಟೀಮ್ ಇಂಡಿಯಾ ಆಟಗಾರರು! – Kannada News | Indian Cricketers Under Scanner for Using Weight Loss Drugs

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಅದೊಂದು ಧರ್ಮ. ಇಲ್ಲಿನ ಕ್ರಿಕೆಟಿಗರು ಕೇವಲ ಕ್ರೀಡಾಪಟುಗಳಾಗಿ ಉಳಿದಿಲ್ಲ, ಬದಲಿಗೆ ಕೋಟ್ಯಂತರ ಅಭಿಮಾನಿಗಳ ಪಾಲಿನ ರೋಲ್ ಮಾಡೆಲ್‌ಗಳು ಮತ್ತು ಸೆಲೆಬ್ರಿಟಿಗಳಾಗಿದ್ದಾರೆ. ಮೈದಾನದಲ್ಲಿ ಅವರ ಆಟದ ಪ್ರದರ್ಶನ ಎಷ್ಟು ಮುಖ್ಯವೋ, ಮೈದಾನದ ಹೊರಗೆ ಅವರ ಫಿಟ್‌ನೆಸ್ ಹಾಗೂ ಬಾಹ್ಯ ಸೌಂದರ್ಯ ಕೂಡ ಸದಾ ಸಾರ್ವಜನಿಕವಾಗಿ ಚರ್ಚೆಯಾಗುವ ವಿಷಯವಾಗಿದೆ. ಆದರೆ, ಇತ್ತೀಚೆಗೆ ಹೊರಬಂದಿರುವ ಕೆಲವು ಆಘಾತಕಾರಿ ವರದಿಗಳ ಪ್ರಕಾರ, ಭಾರತದ ಕೆಲವು ಆಟಗಾರರು “ಅಲ್ಟ್ರಾ-ಲೀನ್” (ಅತ್ಯಂತ ತೆಳ್ಳಗಿನ ಹಾಗೂ ಆಕರ್ಷಕ ದೇಹ) ಲುಕ್ ಪಡೆಯಲು, ತೂಕ ಇಳಿಸುವ ವಿಶೇಷ ಇಂಜೆಕ್ಷನ್‌ಗಳ ಮೊರೆ ಹೋಗುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಏನಿದು ಹೊಸ ವಿವಾದ?

ಮಾಧ್ಯಮ ವರದಿಗಳ ಪ್ರಕಾರ, ಪ್ರಮುಖವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಾಗೂ ರಾಷ್ಟ್ರೀಯ ತಂಡದ ಕೆಲವು ಆಟಗಾರರು ಒಝೆಂಪಿಕ್ (Ozempic) ಮತ್ತು ಮೌಂಜಾರೊ (Mounjaro) ನಂತಹ ಮಧುಮೇಹ ನಿಯಂತ್ರಣ ಹಾಗೂ ತೂಕ ಇಳಿಕೆಯ ಇಂಜೆಕ್ಷನ್‌ಗಳನ್ನು (GLP-1 receptor agonists) ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಇಲ್ಲದಿದ್ದರೂ, ಕೇವಲ ಶೀಘ್ರವಾಗಿ ದೇಹದ ಕೊಬ್ಬನ್ನು ಕರಗಿಸಿ, ಕ್ಯಾಮೆರಾ ಮುಂದೆ ಸ್ಲಿಮ್ ಆಗಿ ಕಾಣಲು ಈ ಶಾರ್ಟ್‌ಕಟ್ ಮಾರ್ಗವನ್ನು ಆಯ್ದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

‘ಕೊಹ್ಲಿ ಎಫೆಕ್ಟ್’ ಮತ್ತು ಆಟಗಾರರ ಮೇಲಿನ ಒತ್ತಡ:

ಭಾರತೀಯ ಕ್ರಿಕೆಟ್‌ನಲ್ಲಿ ಸಿಕ್ಸ್‌ಪ್ಯಾಕ್ ಮತ್ತು ಕಟ್ಟುಮಸ್ತಾದ ದೇಹದ ಟ್ರೆಂಡ್ ಶುರುವಾಗಿದ್ದೇ ವಿರಾಟ್ ಕೊಹ್ಲಿ ಅವರ ಆಗಮನದ ನಂತರ. ಕೊಹ್ಲಿ ತಂದ ಫಿಟ್‌ನೆಸ್ ಕ್ರಾಂತಿ ಭಾರತೀಯ ಕ್ರಿಕೆಟ್‌ನ ಗುಣಮಟ್ಟವನ್ನು ಹೆಚ್ಚಿಸಿದ್ದು ನಿಜ. ಆದರೆ, ಅದೇ ಫಿಟ್‌ನೆಸ್ ಮಾನದಂಡ ಈಗ ಯುವ ಆಟಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೇವಲ ಫಂಕ್ಷನಲ್ ಫಿಟ್‌ನೆಸ್ (ಆಟಕ್ಕೆ ಬೇಕಾದ ದೈಹಿಕ ಸಾಮರ್ಥ್ಯ) ಇದ್ದರೆ ಸಾಲದು, ಜಾಹೀರಾತುಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಮಾಡೆಲ್‌ಗಳಂತೆ ಕಾಣಿಸಲೇಬೇಕು ಎಂಬ ವಾಣಿಜ್ಯೋದ್ದೇಶದ ಒತ್ತಡವೇ ಆಟಗಾರರು ಇಂತಹ ವೈದ್ಯಕೀಯ ಶಾರ್ಟ್‌ಕಟ್‌ಗಳ ಮೊರೆ ಹೋಗಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

ಕ್ರೀಡಾಪಟುಗಳಿಗೆ ಎಚ್ಚರಿಕೆ:

ಈ ಇಂಜೆಕ್ಷನ್‌ಗಳು ಹಸಿವನ್ನು ಕಡಿಮೆ ಮಾಡಿ ತೂಕವನ್ನು ವೇಗವಾಗಿ ಇಳಿಸುತ್ತವೆಯಾದರೂ, ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯದ ಮೇಲೆ ಇವು ಅತ್ಯಂತ ದುಷ್ಪರಿಣಾಮ ಬೀರುತ್ತವೆ ಎಂದು ಕ್ರೀಡಾ ತಜ್ಞರು ಎಚ್ಚರಿಸಿದ್ದಾರೆ. ತೂಕ ಇಳಿಸುವ ಭರದಲ್ಲಿ ಆಟಗಾರರು ತಮ್ಮ ಸ್ನಾಯುಗಳ ಬಲವನ್ನು ಕಳೆದುಕೊಳ್ಳಬಹುದು.

ಇದು ಮೈದಾನದಲ್ಲಿ ವೇಗವಾಗಿ ಓಡಲು, ರನ್ ಕದಿಯಲು ಮತ್ತು ಬೌಲಿಂಗ್ ಮಾಡುವಾಗ ಬೇಕಾಗುವ ಸ್ಪೋಟಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ, ಇದರಿಂದ ಗಾಯದ ಸಮಸ್ಯೆಗಳು  ಹೆಚ್ಚಾಗುವ ಸಾಧ್ಯತೆ ಅಧಿಕವಿರುತ್ತದೆ.

ವಾಡಾ ಮತ್ತು ಬಿಸಿಸಿಐ ನಿಲುವು ಏನು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಈ ವರದಿಗಳ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇತಿಹಾಸವನ್ನು ಗಮನಿಸಿದರೆ, ತೂಕ ಇಳಿಸುವ ಸಲುವಾಗಿ ನಿಷೇಧಿತ ಮದ್ದು ಒಳಗೊಂಡ ಫ್ಯಾಟ್ ಬರ್ನರ್ ಮಾತ್ರೆ ಸೇವಿಸಿದ್ದಕ್ಕೆ ಭಾರತದ ವೇಗಿ ಪ್ರದೀಪ್ ಸಾಂಗ್ವಾನ್ 18 ತಿಂಗಳ ನಿಷೇಧ ಎದುರಿಸಬೇಕಾಗಿತ್ತು.

ಪ್ರಸ್ತುತ ಚರ್ಚೆಯಲ್ಲಿರುವ ಗ್ಲುಕಗನ್ ತರಹದ ಪೆಪ್ಟೈಡ್-1 (GLP-1) ಇಂಜೆಕ್ಷನ್‌ಗಳು ಸದ್ಯಕ್ಕೆ ವಾಡಾದ ಕಟ್ಟುನಿಟ್ಟಿನ ನಿಷೇಧಿತ ಪಟ್ಟಿಯಲ್ಲಿ ಇಲ್ಲದಿದ್ದರೂ, ವೈದ್ಯಕೀಯ ಶಿಫಾರಸಿಲ್ಲದೆ ಇವುಗಳನ್ನು ಕ್ರೀಡಾಪಟುಗಳು ಬಳಸುವುದು ನೈತಿಕವಾಗಿ ತಪ್ಪು ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಎಂದರೆ ಅದು ಮೈದಾನದಲ್ಲಿ ರನ್ ಗಳಿಸಲು, ವಿಕೆಟ್ ಪಡೆಯಲು ಹಾಗೂ ಗಂಟೆಗಟ್ಟಲೆ ಶ್ರಮಪಡಲು ಇರಬೇಕಾದ ನೈಸರ್ಗಿಕ ದೈಹಿಕ ಸಾಮರ್ಥ್ಯವೇ ಹೊರತು, ಕೇವಲ ಕ್ಯಾಮೆರಾ ಕಣ್ಣುಗಳಿಗೆ ಅಥವಾ ಸಾಮಾಜಿಕ ಜಾಲತಾಣದ ಫೋಟೋಶೂಟ್‌ಗಳಿಗೆ ಒಪ್ಪುವ ‘ಝೀರೊ ಸೈಜ್’ ದೇಹವಲ್ಲ. ಗ್ಲಾಮರ್ ಮತ್ತು ವಾಣಿಜ್ಯ ಜಗತ್ತಿನ ಒತ್ತಡಕ್ಕೆ ಬಲಿಯಾಗಿ ಇಂತಹ ವೈದ್ಯಕೀಯ ಶಾರ್ಟ್‌ಕಟ್‌ಗಳ ಬೆನ್ನತ್ತಿ ಹೋಗುವುದು ಆಟಗಾರರ ದೀರ್ಘಾವಧಿ ವೃತ್ತಿಜೀವನಕ್ಕೆ ಮಾತ್ರವಲ್ಲದೆ ಅವರ ಆರೋಗ್ಯಕ್ಕೂ ಮಾರಕ.

ಇದನ್ನೂ ಓದಿ: ವಿಶ್ವಕಪ್​ನ​ ನೇರ ಆಯ್ಕೆಯಿಂದ ಔಟ್: ವಿಂಡೀಸ್ ಮುಂದಿದೆ 2 ಹಾದಿಗಳು!

ಭಾರತೀಯ ಕ್ರಿಕೆಟ್‌ನ ಯುವ ತಾರೆಗಳು ಇಂತಹ ಕೃತಕ ಹಾದಿಗಳನ್ನು ಬಿಟ್ಟು, ಕಠಿಣ ಪರಿಶ್ರಮ ಮತ್ತು ನೈಸರ್ಗಿಕ ತರಬೇತಿಯ ಮೂಲಕವೇ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಲಿ ಎಂಬುದೇ ಕ್ರೀಡಾಭಿಮಾನಿಗಳ ಆಶಯ. ಬಿಸಿಸಿಐ ಕೂಡ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸೂಕ್ತ ನಿಯಮಾವಳಿಗಳನ್ನು ತಂದು ಆಟಗಾರರ ಹಿತರಕ್ಷಣೆ ಮಾಡಬೇಕಿದೆ.

Source link

ಸ್ವಾತಂತ್ರ್ಯೋತ್ಸವ: ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಭವ್ಯ ತಿರಂಗಾ ಯಾತ್ರೆ, ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ – Kannada News | BJP Organises Grand 500 Metre Tiranga Yatra in Bagalkot Ahead of Independence Day

ಬಾಗಲಕೋಟೆ, ಆಗಸ್ಟ್ 11: ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿಜೆಪಿ ವತಿಯಿಂದ ಭವ್ಯ ತಿರಂಗಾ ಯಾತ್ರೆ ನಡೆಯಿತು. ಸುಮಾರು 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜವನ್ನು ಹಿಡಿದು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬೀಳೂರು ಅಜ್ಜನ ದೇವಸ್ಥಾನದಿಂದ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಬಸವೇಶ್ವರ ವೃತ್ತ, ಎಂಜಿ ರಸ್ತೆ, ವಲ್ಲಭಭಾಯಿ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಯಾತ್ರೆ ಸಾಗಿತು. ಮೆರವಣಿಗೆಯಲ್ಲಿ ‘ಭಾರತ್ ಮಾತಾ ಕೀ ಜೈ’ ಸೇರಿದಂತೆ ದೇಶಭಕ್ತಿಯ ಘೋಷಣೆಗಳು ಮೊಳಗಿದವು. ಬೃಹತ್ ತಿರಂಗಾ ಹಿಡಿದು ಸಾಗಿದ ಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leopard Spotted In Bengaluru: ಬನಶಂಕರಿಯಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷ ಇಂದು ಕಾರ್ಯಾಚರಣೆ – Kannada News | Leopard Sighting Sparks Fear in Bengaluru Banashankari, Operation Underway

ಬೆಂಗಳೂರು, ಆಗಸ್ಟ್ 11: ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನಲ್ಲಿ ನಿನ್ನೆ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಒಂದು ತಿಂಗಳ ಅವಧಿಯಲ್ಲೇ ಇದು ಎರಡನೇ ಬಾರಿಗೆ ಇದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಚಿರತೆ ಪ್ರತ್ಯಕ್ಷವಾದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಸಾಗಿದ್ದರು. ಇಂದು ಕಗ್ಗಲೀಪುರ ಅರಣ್ಯ ಅಧಿಕಾರಿಗಳು ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೂ, ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರ ಮನಸ್ಸಿನಲ್ಲಿ ಭಯ ಮೂಡಿಸಿದೆ. ಚಿಕ್ಕ ಮಕ್ಕಳು ಮತ್ತು ವೃದ್ಧರ ಬಗ್ಗೆ ವಿಶೇಷವಾಗಿ ಕಳವಳ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಗಂಗೆಯಲ್ಲಿ ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್​: ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ – Kannada News | Shivagange Trekker Advaith Upadhyaya Missing: Police Uncover Explosive Details of Hackers Life

ನೆಲಮಂಗಲ, ಆಗಸ್ಟ್​​ 11: ಶಿವಗಂಗೆಯಲ್ಲಿ ನಾಪತ್ತೆಯಾಗಿದ್ದ ಟ್ರೆಕ್ಕರ್ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಪೋಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅದ್ವೈತ್ ಹೈಲಿ ಟ್ಯಾಲೆಂಟೆಡ್ ಹ್ಯಾಕರ್ ಆಗಿದ್ದ ಎನ್ನಲಾಗಿದೆ. ಪ್ರಾಪ್ತಿ ಚೌಹಾಣ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಬೇರೊಂದು ಹುಡುಗಿಯೊಂದಿಗೆ ಚಾಟ್ ಮಾಡುತ್ತಿದ್ದ ವಿಚಾರ ಪೋಲೀಸರ ತನಿಖೆಯಲ್ಲಿ ಬಯಲಾಗಿದೆ. ಶಿವಗಂಗೆಗೆ ಬರುವ ಮುನ್ನವೇ ಅದ್ವೈತ್, ಚಾಟ್ ಜಿಪಿಟಿಯಲ್ಲಿ ಶಾಂತಲಾ ಡ್ರಾಪ್ ಬಗ್ಗೆ ಮತ್ತು ಅಲ್ಲಿಂದ ಇಳಿಯುವ ಮಾರ್ಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಟ್ರೆಕ್ಕಿಂಗ್ ನೆಪದಲ್ಲಿ ಪ್ರಾಪ್ತಿಗೆ ಫೋಟೋ ಕಳುಹಿಸಿದ್ದ ಅದ್ವೈತ್, ಶಾಂತಲಾ ಡ್ರಾಪ್ ಬಳಿ ಮೊಬೈಲ್ ಮತ್ತು ಡ್ರೋಣ್ ಕ್ಯಾಮರಾವನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಕುದೂರು ಬಳಿ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೋಲೀಸರಿಗೆ ಮಾಹಿತಿ ಸಿಕ್ಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಸರ್ಕಾರಿ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸಕರು – Kannada News | Karnataka Guest Lecturers Face Salary Crisis as Government Shifts Financial Burden

ಮಂಡ್ಯ: ಕರ್ನಾಟಕದ ಅತಿಥಿ ಉಪನ್ಯಾಸಕರು ಸರ್ಕಾರದ ಹೊಸ ಆದೇಶದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯಿಂದ ನೇಮಕಾತಿಗೊಂಡು ವೇತನ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರಿಗೆ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಂಡ್ಯ, ದೃಪತುಂಗ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳೇ ವೇತನ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ನಂತರ ಬಂದಿರುವುದು ಉಪನ್ಯಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಡ್ಯ ವಿಶ್ವವಿದ್ಯಾಲಯ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, 160ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ವೇತನದ ಹೊರೆ ಹೊರಲು ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಭವಿಷ್ಯದ ಆತಂಕ ಎದುರಾಗಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬಂದರೆ ಪ್ರಸ್ತುತ ಸಿಗುತ್ತಿರುವ ಸೇವಾ ಹಿರಿತನ, ಸರ್ಕಾರಿ ವೇತನ, ನಿವೃತ್ತಿ ಸೌಲಭ್ಯಗಳು ಸೇರಿದಂತೆ ಮಹಿಳಾ ಉಪನ್ಯಾಸಕರಿಗೆ ಲಭ್ಯವಿರುವ ರಜೆ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಉಪನ್ಯಾಸಕರು ದೂರಿದ್ದಾರೆ. ಅಂದಾಜು 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಈ ಆದೇಶದಿಂದ ಬಾಧಿತರಾಗಿದ್ದು, ಕೂಡಲೇ ಉನ್ನತ ಶಿಕ್ಷಣ ಇಲಾಖೆಯೇ ತಮ್ಮ ವೇತನದ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಿಟ್ಟನ್ನು ಮರೆಯಲು ಸಾಧ್ಯವೇ ಇಲ್ಲ; ರಣವೀರ್​ಗೆ ಫರ್ಹಾನ್ ಟಾಂಗ್

‘ಡಾನ್ 3’ ಸಿನಿಮಾದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದ ವಿಚಾರವು ಬಾಲಿವುಡ್‌ನಲ್ಲಿ ಭಾರಿ ದೊಡ್ಡ ಸದ್ದು ಮಾಡಿತ್ತು. ಈ ಕುರಿತು ನಿರ್ದೇಶಕ ಫರ್ಹಾನ್ ಅಖ್ತರ್ ಈಗ ಪರೋಕ್ಷವಾಗಿ ಹಾಗೂ ಸ್ಟ್ರಾಂಗ್ ಆಗಿ ಟಾಂಗ್ ನೀಡಿದ್ದಾರೆ. ಸಿನಿಮಾ ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ನಟರು ಪ್ರಾಜೆಕ್ಟ್ ತೊರೆಯುವುದು ಇತ್ತೀಚೆಗೆ ಒಂದು ಹೊಸ ಅಭ್ಯಾಸವಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಫರ್ಹಾನ್ ಅವರ ಈ ಹೊಸ ಹೇಳಿಕೆಯು ಈಗ ಭಾರತೀಯ ಚಿತ್ರರಂಗದಲ್ಲಿ ಮತ್ತು ಸಿನಿರಸಿಕರ ವಲಯದಲ್ಲಿ ಭಾರಿ ದೊಡ್ಡ ಸಂಚಲನವನ್ನು ಮೂಡಿಸಿದೆ.

ಫರ್ಹಾನ್ ಅಖ್ತರ್ ಪರೋಕ್ಷ ವಾಗ್ದಾಳಿ

ಫರ್ಹಾನ್ ಅಖ್ತರ್ ತಮ್ಮ ಅತ್ಯಂತ ಜನಪ್ರಿಯ ‘ದಿಲ್ ಚಾಹ್ತಾ ಹೈ’ ಚಿತ್ರದ ಹಳೆಯ ನೆನಪುಗಳನ್ನು ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆಗ ನಟ ಸೈಫ್ ಅಲಿ ಖಾನ್ ಶೂಟಿಂಗ್ ಆರಂಭಕ್ಕೂ ಮುನ್ನ ದಿನಾಂಕದ ಸಮಸ್ಯೆಯಿಂದಾಗಿ ಹೊರನಡೆಯಲು ನಿರ್ಧರಿಸಿದ್ದರು. ಈ ಹಳೆಯ ಘಟನೆಯನ್ನು ನೆನಪಿಸಿಕೊಂಡ ಫರ್ಹಾನ್, ರಣವೀರ್ ಸಿಂಗ್ ಅವರ ಹೆಸರು ನೇರವಾಗಿ ಉಲ್ಲೇಖಿಸದೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಶೂಟಿಂಗ್‌ಗೆ ಕೇವಲ ಒಂದು ತಿಂಗಳು ಬಾಕಿ ಇದ್ದಾಗ ನಟರು ಸಿನಿಮಾ ಬಿಟ್ಟು ಹೋಗುವುದು ಇತ್ತೀಚೆಗೆ ಸಾಮಾನ್ಯ ಅಭ್ಯಾಸವಾಗಿದೆ ಎಂದು ನಗುತ್ತಲೇ ಮಾರ್ಮಿಕವಾಗಿ ಹೇಳಿದ್ದಾರೆ.

ರಣವೀರ್ ಸಿಂಗ್ ಹೊರನಡೆದ ಕಾರಣ

‘ಡಾನ್ 3’ ಚಿತ್ರದ ಪ್ರಮುಖ ಚಿತ್ರೀಕರಣ ಆರಂಭಕ್ಕೆ ಕೆಲವೇ ವಾರಗಳಿದ್ದಾಗ ನಟ ರಣವೀರ್ ಸಿಂಗ್ ಈ ಬೃಹತ್ ಯೋಜನೆಯಿಂದ ಹೊರಬಂದಿದ್ದರು. ಚಿತ್ರದ ಸ್ಕ್ರಿಪ್ಟ್ ತಮಗೆ ಪೂರ್ತಿ ಸರಿ ಇರಲಿಲ್ಲ ಎಂಬುದು ರಣವೀರ್ ಅವರ ಪ್ರಮುಖ ಆರೋಪವಾಗಿತ್ತು. ಅದರ ಜೊತೆಗೆ ಸಿನಿಮಾದ ಬಜೆಟ್ ಅನ್ನು 350 ಕೋಟಿಯಿಂದ 150 ಕೋಟಿಗೆ ಕಡಿತಗೊಳಿಸಲಾಗಿತ್ತು ಎಂದೂ ಅವರು ಬಹಿರಂಗವಾಗಿ ಹೇಳಿದ್ದರು. ಅಲ್ಲದೆ ತಮಗೆ ಸರಿಯಾಗಿ ನೀಡಬೇಕಿದ್ದ ಮುಂಗಡ ಹಣ ಸಿಕ್ಕಿರಲಿಲ್ಲ ಎಂದು ರಣವೀರ್ ದೂರಿದ್ದರು. ಆದರೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ.

ಫರ್ಹಾನ್ ಅನುಭವಿಸಿದ ಸವಾಲುಗಳು

ಚಿತ್ರರಂಗದ ಪ್ರಯಾಣದಲ್ಲಿ ಯಾವುದನ್ನೂ ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಮೆರಾ ಮುಂದೆ ದೃಶ್ಯ ಸಂಪೂರ್ಣವಾಗಿ ಸೆರೆಯಾಗುವವರೆಗೆ ಯಾವುದೂ ಖಚಿತವಲ್ಲ ಎಂದಿದ್ದಾರೆ. ಹಿಂದೆ ‘ಲಕ್ಷ್ಯ’ ಸಿನಿಮಾ ಸೋತಾಗ ತಮಗೆ ತೀವ್ರ ನಿರಾಸೆಯಾಗಿತ್ತು. ಆದರೆ ಈಗ ಅನುಭವದ ಆಧಾರದ ಮೇಲೆ ಇಂತಹ ಕಠಿಣ ಸವಾಲುಗಳನ್ನು ನಿಭಾಯಿಸುವುದನ್ನು ಕಲಿತಿದ್ದೇನೆ ಎಂದು ಫರ್ಹಾನ್ ಹಂಚಿಕೊಂಡಿದ್ದಾರೆ. ಈ ಎರಡು ಪ್ರಮುಖ ಕಲಾಕಾರರ ನಡುವಿನ ಶೀತಲ ಸಮರವು ಬಾಲಿವುಡ್ ಅಂಗಳದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ನಿರ್ಮಾಪಕರು ಹಾಗೂ ನಟರ ನಡುವಿನ ವೃತ್ತಿಪರ ಸಂಬಂಧದ ಮೇಲೂ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ರಣವೀರ್ ಸಿಂಗ್ ಅವರ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದ್ದು, ಈ ಪ್ರಕರಣವು ಚಿತ್ರರಂಗದ ವಿವಿಧ ಒಕ್ಕೂಟಗಳ ಮೆಟ್ಟಿಲೇರಿತ್ತು. ಈ ವಿವಾದದ ನಡುವೆಯೂ ‘ಡಾನ್ 3’ ಸಿನಿಮಾವನ್ನು ಹೊಸ ನಾಯಕನೊಂದಿಗೆ ಮುಂದುವರಿಸಲು ಫರ್ಹಾನ್ ಅಖ್ತರ್ ಯೋಜನೆ ರೂಪಿಸುತ್ತಿದ್ದು, ಶೀಘ್ರದಲ್ಲೇ ಹೊಸ ಅಪ್‌ಡೇಟ್ ಹೊರಬೀಳುವ ಸಾಧ್ಯತೆಯಿದೆ. ಅಭಿಮಾನಿಗಳು ಕೂಡ ಹೊಸ ನಾಯಕನ ಆಯ್ಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದ ಪತಿ: ಪ್ರಭಾವಿ ಸಚಿವರ ಆಪ್ತರಿಂದಲೇ ನಡೆಯಿತಾ ದೋಖಾ? – Kannada News | Groom Rejects Bride on Day 1 Saying ‘I Don’t Like You’: Bengaluru Woman Files Complaint Against Husband and In Laws

ಬೆಂಗಳೂರು, ಆಗಸ್ಟ್​​ 11: ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದು ಪತ್ನಿಗೆ ಪತಿ ತಿಳಿಸಿದ್ದು, ತಲಾಕ್ ಬ್ಯಾನ್ ಆಗಿದ್ರು ತಲಾಕ್ ನೀಡಿ ದೂರ ನಡೆದಿದ್ದಾನೆ. ಸಾಲದ್ದಕ್ಕೆ ಪತಿ ಮತ್ತು ಕುಟುಂಬಸ್ಥರು ಹಿಂಸೆ ನೀಡುತ್ತಿದ್ದಾರೆ ಎಂದು ನವ ವಿವಾಹಿತೆ ದೂರು ನೀಡಿ 8 ತಿಂಗಳಾದರೂ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ದೂರು ನೀಡಿದ್ದಕ್ಕೆ, ಪರಿಹಾರ ಕೇಳಿದ್ದಕ್ಕೆ ಪತಿ ಕಡೆಯಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.

 2025ರ ಜೂನ್​​ನಲ್ಲಿ ನಡೆದಿದ್ದ ವಿವಾಹ

ಶೇಕ್ ಅಫ್ರಾನ್ ಎಂಬಾತನ ವಿರುದ್ಧ ಯುವತಿ ದೂರಿದ್ದು, 2025ರ ಜೂನ್​​ನಲ್ಲಿ ಇವರಿಬ್ಬರ ಮದುವೆ ಆಗಿತ್ತು. ವಿವಾಹದ ವೇಳೆ ಕಾರು ಸೇರಿದಂತೆ ಸಾಕಷ್ಟು ವರದಕ್ಷಿಣೆಯನ್ನು ಯುವತಿ ಕಡೆಯವರು ಶೇಕ್ ಅಫ್ರಾನ್​​ಗೆ ನೀಡಿದ್ದರು. ಹೀಗಿದ್ದರೂ ಬೇರೆ ಯುವತಿ ಜೊತೆಗೆ ಆತ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಯುವತಿಗೆ ಹಿಂಸೆ ನೀಡುತ್ತಿದ್ದ. ಅಲ್ಲದೆ ಆತನ ಜೊತೆಗೆ ಕುಟುಂಬಸ್ಥರೂ ಮಸಾಜ್ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಕೈ ಮೇಲೆ ಬಿಸಿನೀರು ಸುರಿದು ಚಿತ್ರಹಿಂಸೆ ಕೊಟ್ಟಿದ್ದರು. ನಿನ್ನನ್ನು ಮದುವೆ ಮಾಡಿಸಿ ಮನೆಗೆ ಕರೆತಂದಿದ್ದು, ಮನೆ ಕೆಲಸ ಮಾಡಲು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಬೆದರಿಸಿರೋದಾಗಿ ಆರೋಪಿಸಿ ನವೆಂಬರ್​​ನಲ್ಲಿ ಯುವತಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ನೇಪಾಳಿ ಕುಟುಂಬ ನಂಬಿ ಕೆಟ್ಟ ಮಾಲೀಕ: ಉಂಡ ಮನೆಗೇ ಕನ್ನ ಹಾಕಿದ ಕೆಲಸಗಾರರು

ಕೇಸ್​​ ದಾಖಲಿಸಲು ಲಂಚ ಪಡೆದಿದ್ದ ಪೊಲೀಸ್​​?

ಇನ್ನು ಪತಿ ಮನೆಯವರ ಕಿರುಕುಳ ಸಂಬಂಧ ಪ್ರಕರಣ ದಾಖಲಿಸಲು ಸಂತ್ರಸ್ತ ಯುವತಿ ಬಳಿ ಅಂದಿನ ಆಗ್ನೇಯ ಮಹಿಳಾ ಠಾಣಾ ಇನ್ಸ್ಪೆಕ್ಟರ್ 1.2 ಲಕ್ಷ ರೂ. ಲಂಚ ಪಡೆದಿದ್ದರು ಎಂದೂ ದೂರಲಾಗಿದೆ. ಜೊತೆಗೆ ಆರೋಪಿಗಳು ಪ್ರಭಾವಿ ಸಚಿವರೊಬ್ಬರ ಕಡೆಯವರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಸಚಿವರ ಆಪ್ತ ಸಹಾಯಕನೇ ತಮ್ಮ ಅಣ್ಣನ ಮಗ ಎಂದು ಹೇಳಿಸಿ ಈ ಮದುವೆ ಮಾಡಿಸಿದ್ದರು. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಕೇಳಲು ಹೋದರೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಯುವತಿ ಕುಟುಂಬ ದೂರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:45 am, Tue, 11 August 26

Source link

Exit mobile version