ಕೇರಳ ಯುಡಿಎಫ್ ಸರ್ಕಾರದ ಮೊದಲ ಸಂಪುಟ; ಕಾಂಗ್ರೆಸ್​ಗೆ 12, ಮುಸ್ಲಿಂ ಲೀಗ್​ಗೆ 5 ಸ್ಥಾನಗಳಾ? – Kannada News | UDF Ministry Formation Kerala: Satheesan CM Swearing in, Alliance Partners Seek Cabinet Berths

ವಿ.ಡಿ. ಸತೀಶನ್Image Credit source: PTI

ತಿರುವನಂತಪುರಂ, ಮೇ 17: ಕೇರಳ ವಿಧಾನಸಭಾ ಚುನಾವಣೆಯಲ್ಲಿ (Kerala Assembly Elections) ಭರ್ಜರಿ ವಿಜಯ ಸಾಧಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಮುಖ್ಯಮಂತ್ರಿಯನ್ನು ಮಾತ್ರವನ್ನು ಸಂಪುಟ ಸದಸ್ಯರ ಆಯ್ಕೆಯನ್ನೂ ಅಂತಿಮಗೊಳಿಸುವ ಹಾದಿಯಲ್ಲಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (V.D. Satheesan) ಅವರು ನಾಳೆ ಮೇ 18 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಮುನ್ನ, 21 ಸದಸ್ಯರ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ (Cabinet Berths) ಮತ್ತು ಖಾತೆಗಳ ಹಂಚಿಕೆಗಾಗಿ ಯುಡಿಎಫ್ ಮೈತ್ರಿಕೂಟದ ಪಕ್ಷಗಳ ನಡುವೆ ತೀವ್ರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​ಗೆ ಸಂಪುಟದಲ್ಲಿ ಸಿಂಹಪಾಲು ಸಿಗಬಹುದು. 12 ಸ್ಥಾನಗಳು ಕಾಂಗ್ರೆಸ್​ಗೆ ಹೋಗಬಹುದು, ಮುಸ್ಲಿಂ ಲೀಗ್​ಗೆ (ಐಯುಎಂಎಲ್) 5 ಸ್ಥಾನಗಳು ಸಿಗಬಹುದು ಎನ್ನಲಾಗಿದೆ.

ರಮೇಶ್ ಚೆನ್ನಿತ್ತಲ ಸಚಿವ ಸಂಪುಟಕ್ಕೆ ಸೇರ್ಪಡೆ: ಅಸಮಾಧಾನ ಶಮನ?

ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಆರಂಭದಲ್ಲಿ ಸಚಿವ ಸ್ಥಾನ ಸ್ವೀಕರಿಸಲು ಹಿಂಜರಿದಿದ್ದರು. ಆದರೆ, ಸಿಎಂ ಆಗಲಿರುವ ವಿ.ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಚೆನ್ನಿತ್ತಲ ಅವರಿಗೆ ಅತ್ಯಂತ ಪ್ರಮುಖವಾದ ಗೃಹ ಇಲಾಖೆ (Home Portfolio) ನೀಡಲು ಸತೀಶನ್ ಸಮ್ಮತಿಸಿದ್ದು, ಚೆನ್ನಿತ್ತಲ ಅವರು ಸಂಪುಟ ಸೇರಲು ಒಪ್ಪಿದ್ದಾರೆ.

ಮೈತ್ರಿಪಕ್ಷಗಳ ಬೇಡಿಕೆ ಮತ್ತು ಸಚಿವ ಸ್ಥಾನಗಳ ಹಂಚಿಕೆ ಕಸರತ್ತು

ಯುಡಿಎಫ್ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಂತರದ ದೊಡ್ಡ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ಇತರ ಪ್ರಾದೇಶಿಕ ಪಕ್ಷಗಳು ತಮಗಾಗಿ ಹೆಚ್ಚಿನ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿವೆ.

ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ

  • ಐಯುಎಂಎಲ್ (IUML): ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಐಯುಎಂಎಲ್ ಒಟ್ಟು 5 ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಇದರೊಂದಿಗೆ ಕೈಗಾರಿಕೆ, ಶಿಕ್ಷಣ, ಲೋಕೋಪಯೋಗಿ (PWD) ಮತ್ತು ಸ್ಥಳೀಯ ಸಂಸ್ಥೆಗಳ ಇಲಾಖೆಗಳಂತಹ ಪ್ರಮುಖ ಖಾತೆಗಳನ್ನು ಕೇಳಿದೆ. ಐಯುಎಂಎಲ್‌ನಿಂದ ಪಿ.ಕೆ. ಕುನ್ಹಾಲಿ ಕುಟ್ಟಿ, ಎನ್. ಸಂಸುದ್ದೀನ್, ಪರಕ್ಕಲ್ ಅಬ್ದುಲ್ಲಾ, ಕೆ.ಎಂ. ಶಾಜಿ ಮತ್ತು ವಿ.ಇ. ಅಬ್ದುಲ್ ಗಫೂರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
  • ಕೇರಳ ಕಾಂಗ್ರೆಸ್ (ಜೋಸೆಫ್ ಬಣ): 7 ಶಾಸಕರನ್ನು ಹೊಂದಿರುವ ಈ ಪಕ್ಷವು 2 ಸಚಿವ ಸ್ಥಾನಗಳಿಗಾಗಿ ಭಾರಿ ಒತ್ತಡ ಹೇರುತ್ತಿದೆ. ಐಯುಎಂಎಲ್‌ಗೆ 5 ಸ್ಥಾನ ನೀಡುವುದಾದರೆ ನಮಗೆ 2 ಸ್ಥಾನ ನೀಡಬೇಕು ಎಂಬುದು ಇವರ ವಾದ. ಈ ಬಣದಿಂದ ಮೊನ್ಸ್ ಜೋಸೆಫ್ ಸಚಿವರಾಗುವುದು ಖಚಿತವಾಗಿದ್ದು, ಕಂದಾಯ (Revenue) ಖಾತೆಗೆ ಬೇಡಿಕೆ ಇಟ್ಟಿದ್ದಾರೆ.
  • ಆರ್‌ಎಸ್‌ಪಿ (RSP): ಶಿಬು ಬೇಬಿ ಜಾನ್ ಅವರು ಸಚಿವರಾಗುವುದು ಖಚಿತವಾಗಿದ್ದು, ಇಂಧನ (Power) ಇಲಾಖೆಯಂತಹ ಪ್ರಮುಖ ಖಾತೆಯನ್ನು ನಿರೀಕ್ಷಿಸುತ್ತಿದ್ದಾರೆ.
  • ರೊಟೇಶನ್ ಸೂತ್ರದ ಪ್ರಸ್ತಾಪ: ಕೇರಳ ಕಾಂಗ್ರೆಸ್ (ಜೇಕಬ್ ಬಣ) ಪಕ್ಷದ ಅನೂಪ್ ಜಾಕೋಬ್ ಮತ್ತು ಕೇರಳ ಡೆಮಾಕ್ರಟಿಕ್ ಪಾರ್ಟಿಯ ಮಣಿ ಸಿ. ಕಪ್ಪನ್ ಅವರಿಗೆ ತಲಾ ಎರಡುವರೆ ವರ್ಷಗಳ ಕಾಲ ಸರದಿಯ ಆಧಾರದ ಮೇಲೆ (Rotational Basis) ಒಂದೇ ಸಚಿವ ಸ್ಥಾನವನ್ನು ಹಂಚಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಪ್ರಸ್ತಾಪಿಸಿದೆ. ಆದರೆ ಈ ಇಬ್ಬರೂ ನಾಯಕರು ಈ ಪ್ರಸ್ತಾಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಾತುಕತೆ ಮುಂದುವರಿದಿದೆ. ಈ ಎರಡೂ ಪಕ್ಷಗಳು ತಮಗೆ ತಲಾ ಒಂದು ಸಚಿವ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದಿವೆ.

ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

ಕಾಂಗ್ರೆಸ್ ಪಾಳೆಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು

ಮೈತ್ರಿ ಪಕ್ಷಗಳ ಖಾತೆ ಹಂಚಿಕೆ ಮುಗಿದ ಬಳಿಕವಷ್ಟೇ ಕಾಂಗ್ರೆಸ್ ತನ್ನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಜಾತಿ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದ ಒಳಗಿನ ಪ್ರಮುಖ ನಾಯಕರ (ಸತೀಶನ್, ಚೆನ್ನಿತ್ತಲ ಮತ್ತು ವೇಣುಗೋಪಾಲ್) ಬಣಗಳನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಸಚಿವರ ಆಯ್ಕೆ ನಡೆಯಲಿದೆ. ಕಾಂಗ್ರೆಸ್‌ನಿಂದ ಸಚಿವ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರೆಂದರೆ, ಕೆ. ಮುರಳೀಧರನ್, ತಿರುವಂಚೂರ್ ರಾಧಾಕೃಷ್ಣನ್, ಎ.ಪಿ. ಅನಿಲ್ ಕುಮಾರ್, ಸನ್ನಿ ಜೋಸೆಫ್, ಪಿ.ಸಿ. ವಿಷ್ಣುನಾಥ್ ಮತ್ತಿತರರು.

ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸಲಾಗುತ್ತಿದ್ದು, ಮೇ 18 ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನೂತನ ಸರ್ಕಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಸಂಪುಟ ಸದಸ್ಯರ ಹೆಸರು ಅಂತಿಮಗೊಂಡರೆ, ನಾಳೆಯೇ ಸಿಎಂ ಜೊತೆಗೆ ಈ ಎಲ್ಲಾ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PBKS vs RCB Playing XI: ಆರ್​​ಸಿಬಿಗೆ ಆಘಾತ; ಪಂಜಾಬ್ ವಿರುದ್ಧ ಆಡಲ್ಲ ರಜತ್ ಪಾಟಿದರ್ – Kannada News | PBKS vs RCB Playing XI Punjab Kings vs Royal Challengers Bengaluru Today IPL 2026 match Confirmed playing 11 details with name in Kannada

ಐಪಿಎಲ್ 2026 ರ ನಿರ್ಣಾಯಕ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲುವು ಪಂಜಾಬ್ ಕಿಂಗ್ಸ್‌ನ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸುತ್ತದೆ. ಇತ್ತ ಆರ್​ಸಿಬಿಗೆ ಈ ಪಂದ್ಯದ ಗೆಲುವು ಪ್ಲೇಆಫ್ ಸ್ಥಾನವನ್ನು ಖಚಿತಪಡಿಸುತ್ತದೆ. ಪ್ರಸ್ತುತ ಆರ್​​ಸಿಬಿ ಐಪಿಎಲ್ 2026 ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ 16 ಅಂಕಗಳನ್ನು ಹೊಂದಿದ್ದು, ಅದರ ನೆಟ್ ರನ್​ರೇಟ್ 1.053 ಆಗಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡವು ಕಳೆದ ಐದು ಪಂದ್ಯಗಳಲ್ಲಿ ಸೋತಿದ್ದು, 12 ಪಂದ್ಯಗಳ ನಂತರ ಕೇವಲ 13 ಅಂಕಗಳನ್ನು ಹೊಂದಿದೆ. ಅದಕ್ಕಾಗಿಯೇ ಈ ಪಂದ್ಯವನ್ನು ಗೆಲ್ಲುವುದು ಆರ್‌ಸಿಬಿಗಿಂತ ಪಂಜಾಬ್ ಕಿಂಗ್ಸ್‌ಗೆ ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಯಾವುದೇ ಬೆಲೆ ತೆತ್ತಾದರೂ ಪಂಜಾಬ್ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು.

ಈ ಮಧ್ಯಾಹ್ನದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಇನ್ನು ಈ ಪಂದ್ಯದಲ್ಲಿ ಜಿತೇಶ್ ಶರ್ಮಾ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಏಕೆಂದರೆ ತಂಡದ ಖಾಯಂ ನಾಯಕ ರಜತ್ ಪಾಟಿದಾರ್ ಈ ಪಂದ್ಯವನ್ನು ಆಡುತ್ತಿಲ್ಲ. ಟಾಸ್ ಬಳಿಕ ಮಾತನಾಡಿದ ಜಿತೇಶ್, ರಜತ್ ಪಾಟಿದರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI – ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕಾನೊಲಿ, ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜೈ, ಹರ್ಪ್ರೀತ್ ಬ್ರಾರ್ (ಮಾರ್ಕೊ ಯಾನ್ಸೆನ್ ಬದಲಿಗೆ), ಲಾಕಿ ಫರ್ಗುಸನ್ (ಕ್ಸೇವಿಯರ್ ಬಾರ್ಟ್ಲೆಟ್ ಬದಲಿಗೆ), ಅರ್ಶ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಮಾರ್ಕಸ್ ಸ್ಟೊಯಿನಿಸ್, ಕ್ಸೇವಿಯರ್ ಬಾರ್ಟ್ಲೆಟ್, ವಿಷ್ಣು ವಿನೋದ್, ಮುಶೀರ್ ಖಾನ್ ಮತ್ತು ಪ್ರವೀಣ್ ದುಬೆ.

ಆರ್​​ಸಿಬಿ ಪ್ಲೇಯಿಂಗ್ XI – ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ (ಜಾಕೋಬ್ ಡಫಿ ಬದಲಿಗೆ), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ (ರಜತ್ ಪಾಟಿದಾರ್ ಬದಲಿಗೆ) ಮತ್ತು ಜೋಶ್ ಹ್ಯಾಜಲ್‌ವುಡ್.

ಇಂಪ್ಯಾಕ್ಟ್ ಪ್ಲೇಯರ್ಸ್​: ರಾಸಿಖ್ ಸಲಾಂ, ಜೋರ್ಡಾನ್ ಕಾಕ್ಸ್, ಅಭಿನಂದನ್ ಸಿಂಗ್, ಸ್ವಪ್ನಿಲ್ ಸಿಂಗ್ ಮತ್ತು ಕನಿಷ್ಕ್ ಚೌಹಾಣ್.

Published On – 3:21 pm, Sun, 17 May 26

Source link

ಕೋಟ್ಯಂತರ ವಂಚನೆ ಕೇಸ್​: ಖಾತೆಯಲ್ಲಿ ನೂರಾರು ಕೋಟಿ ಪತ್ತೆಯಾದ್ರೂ ಬ್ಯಾಂಕ್ ಗಪ್‌ಚುಪ್; ಶಿವಾನಂದನೊಂದಿಗೆ ಅಧಿಕಾರಿಗಳು ಶಾಮೀಲು? – Kannada News | Multi Crore Fraud Case: Bank Silent Despite Hundreds of Crores Found in Account; Are Officials Linked to Shivanand

ಶಿವಾನಂದ ನೀಲಣ್ಣವರ್Image Credit source: tv9 kannada

ಬೆಳಗಾವಿ, ಮೇ 17: ಸಾವಿರಾರು ಕೋಟಿ ಒಡೆಯ ಅಂತೆಲ್ಲಾ ಬಿಲ್ಡಪ್ ಕೊಡುತ್ತಿದ್ದ ಶಿವಾನಂದ ನೀಲಣ್ಣವರ್ (Shivanand Neelannavar)​​ ಅರೆಸ್ಟ್ ಆಗಿದ್ದಾನೆ. 4,500 ಕೋಟಿ ರೂ ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಶಿವಾನಂದನನ್ನ ಲಾಕ್ ಮಾಡಿದ್ದಾರೆ. ಸದ್ಯ ಪೊಲೀಸರು 5 ದಿನ ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದಾರೆ. ಇನ್ನು ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಬ್ಯಾಂಕ್​​ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಒಂದೊಂದು ಅಕೌಂಟ್​ನಲ್ಲಿ ನೂರಾರು ಕೋಟಿ ರೂ ಪತ್ತೆಯಾಗಿದೆ. ನೂರಾರು ಕೋಟಿ ರೂ ಅಕೌಂಟ್​ನಲ್ಲಿ ಇದ್ದರೂ ಇ.ಡಿ ಮತ್ತು ಐಟಿ ಗಮನಕ್ಕೆ ತರಬೇಕಿದ್ದ ಬ್ಯಾಂಕ್ ಅಧಿಕಾರಿಗಳು ಮಾತ್ರ ಸೈಲೆಂಟ್​​ ಆಗಿದ್ದು, ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಾಂಶಗಳು

  • ಆನ್​​ಲೈನ್​ನಲ್ಲೇ ಎರಡೂವರೆ ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ
  • ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಆಗಿದ್ದರೂ ಬ್ಯಾಂಕ್​ ಅಧಿಕಾರಿಗಳು ಗಪ್​ಚುಪ್​​
  • ಶಿವಾನಂದ ನೀಲಣ್ಣವರ್​ ಜೊತೆಗೆ ಶಾಮೀಲಾದ್ರಾ ಬ್ಯಾಂಕ್​​ ಅಧಿಕಾರಿಗಳು?

ಬ್ಯಾಂಕ್‌ಗಳ ಅಧಿಕಾರಿಗಳು ಶಾಮೀಲು?

ಈ ಖಾತೆಗಳಿಗೆ ನಿತ್ಯ ಲಕ್ಷಾಂತರ ರೂಪಾಯಿ ಜಮೆಯಾಗುತ್ತಿದ್ದು, ಇದೇ ಖಾತೆಗಳಿಂದ ತಿಂಗಳಿಗೆ 75 ಕೋಟಿಗೂ ಅಧಿಕ ಹಣವನ್ನು 35 ಸಾವಿರ ಜನರಿಗೆ ಬಡ್ಡಿ ರೂಪದಲ್ಲಿ ಜಮಾ ಮಾಡಲಾಗುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ಇಡಿ ಮತ್ತು ಐಟಿ ಇಲಾಖೆ ಗಮನಕ್ಕೆ ತರದೆ ಸೈಲೆಂಟ್ ಆಗಿದ್ದರು. ಹೀಗಾಗಿ ನೀಲಣ್ಣವರ್ ಜೊತೆಗೆ ಬ್ಯಾಂಕ್‌ಗಳ ಅಧಿಕಾರಿಗಳು ಶಾಮೀಲಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಸಿಐಡಿ ತನಿಖೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಕಳ್ಳಾಟ ಬಯಲಾಗಲಿದೆಯೇ ಕಾದು ನೋಡಬೇಕಿದೆ.

ಇದನ್ನೂ ಓದಿ: ಇಡೀ ಕರ್ನಾಟಕವನ್ನೇ ನಡುಗಿಸಿದ 4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್

ಇನ್ನು ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಬೆಳಗಾವಿ ಕಮಿಷನರ್ ಕಚೇರಿಯಲ್ಲಿ ಇಂದು ಸಿಐಡಿ ಡಿಐಜಿಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ 2 ಗಂಟೆ ಕಾಲ ಸಭೆ ಮಾಡಿದರು. ನೀಲಣ್ಣವರ್ ಕೇಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರಿಸಿದರು. ನಿನ್ನೆವರೆಗೆ ನಡೆಸಿದ ತನಿಖಾ ವರದಿ ಸೇರಿದಂತೆ ಎಲ್ಲಾ ಮಹತ್ವದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಪ್ರಕರಣದ ಬಗ್ಗೆ ಸುದೀರ್ಘವಾಗಿ ಮಾಹಿತಿ ಪಡೆದ ಸಿಐಡಿ ತಂಡ ಬಳಿಕ ಬೆಂಗಳೂರಿಗೆ ತೆರಳಿತು.

ಕಮಿಷನರ್ ಭೂಷಣ್ ಬೊರಸೆ ಹೇಳಿದ್ದಿಷ್ಟು 

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಮಿಷನರ್ ಭೂಷಣ್ ಬೊರಸೆ, ಶಿವಂ ಅಸೋಸಿಯೇಟ್ ಮಾಲೀಕ ಶಿವಾನಂದ ನೀಲಣ್ಣವರ್ ಬಂಧನವಾಗಿದೆ. ಈ ಪ್ರಕರಣದ ವ್ಯಾಪ್ತಿ ಅಂತಾರಾಜ್ಯಕ್ಕೂ ವ್ಯಾಪಿಸಿದೆ. 50 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ಆಗಿದೆ. ಈ ಕಾರಣಕ್ಕೆ ಡಿಜಿ-ಐಜಿಪಿ ಕೇಸ್ ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಡಿಐಜಿ ಬಂದು ನಮ್ಮ ಬಳಿ ಮಾಹಿತಿ ಪಡೆದಿದ್ದಾರೆ. ನಾವು ಮಾಡಿರುವ ತನಿಖೆ ಅವರಿಗೆ ನೀಡಿದ್ದೇವೆ. ಅದರ ಆಧಾರದ ಮೇಲೆ ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಸಿಐಡಿ ಡಿಐಜಿ ಅವರು ಫಾರ್ಮಾಲಿಟಿ ಮುಗಿಸಿಕೊಂಡು ಹೋಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿಯನ್ನ ಸಂಗ್ರಹಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

PBKS vs RCB IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Punjab Kings vs Royal Challengers Bengaluru IPL 2026 Live Cricket Score PBKS vs RCB Match on 17th May latest news in Kannada

ಐಪಿಎಲ್ 2026 ರ 61 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಕಳೆದ ಐಪಿಎಲ್ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ಈ ಎರಡೂ ತಂಡಗಳು ಆ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಎದುರು ಬದುರಾಗಿವೆ. ಒಂದೆಡೆ ಆರ್​ಸಿಬಿ ಫೈನಲ್​ನಲ್ಲಿ ಸೋಲಿಸಿದಂತೆ ಈ ಪಂದ್ಯದಲ್ಲೂ ಸೋಲಿಸಿ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುವ ಇರಾದೆಯಲ್ಲಿದ್ದರೆ, ಇತ್ತ ಪಂಜಾಬ್ ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲು ಯತ್ನಿಸಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

Source link

ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ! – Kannada News | Foreign Illegal Immigrants Escape In Bengaluru

ಬೆಂಗಳೂರು, ಮೇ 17: ಬೆಂಗಳೂರಿನ ಕೊತ್ತನೂರಿನಲ್ಲಿರುವ ನಿರಾಶ್ರಿತರ ಕೇಂದ್ರವೊಂದರಿಂದ ನಾಲ್ವರು ವಿದೇಶಿ ಅಕ್ರಮ ವಲಸಿಗ ಮಹಿಳೆಯರು ಪರಾರಿಯಾಗಿದ್ದಾರೆ. ಮೇ 11ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೈಜೀರಿಯಾ ಮತ್ತು ಉಗಾಂಡ ಮೂಲದ ಈ ಮಹಿಳೆಯರು ಕಟ್ಟಡದ ಎರಡನೇ ಅಂತಸ್ತಿನ ಕಿಟಕಿಯ ಗ್ರಿಲ್ ಮುರಿದು ತಪ್ಪಿಸಿಕೊಂಡಿದ್ದಾರೆ.

ತೋಪಿಷ್ಟ ನಗವ, ಸಫೀನ ಮತ್ತು ಪಿತಿನಾ ಎಂಬ ಮೂವರು ಸೇರಿದಂತೆ ಈ ನಾಲ್ವರು ಮಹಿಳೆಯರು ‘ಹೋಂ ಫಾರ್ ಹೋಪ್’ ನಿರಾಶ್ರಿತರ ಕೇಂದ್ರದಲ್ಲಿದ್ದರು. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಇವರು ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈಗಾಗಲೇ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಿಗಿ ಭದ್ರತೆಯ ನಡುವೆಯೂ ಇವರು ಪರಾರಿಯಾಗಿದ್ದು, ಬೆಂಗಳೂರು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳು ಇಟ್ಟ ಹೆಸರೇ ಅಂತಿಮವಾಯ್ತೆ ಎನ್​​ಟಿಆರ್-ನೀಲ್ ಸಿನಿಮಾಕ್ಕೆ? – Kannada News | Jr NTR and Prashanth Neel movie officially named as Dragon

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಕೆಲಸಗಳು ಬಲು ನಿಧಾನಗತಿಯಲ್ಲಿ ಸಾಗುತ್ತಿವೆ. ಭಾರಿ ಬಜೆಟ್​ನ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ ಈಗಾಗಲೇ ಒಂದು ವರ್ಷವಾಗಿದ್ದು, ಸಿನಿಮಾದ ಚಿತ್ರೀಕರಣಕ್ಕೆ ಇನ್ನೂ ಒಂದು ವರ್ಷ ಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಹೆಸರನ್ನು ಸಹ ಚಿತ್ರತಂಡ ಘೋಷಣೆ ಮಾಡಿಲ್ಲ, ಆದರೆ ಅಭಿಮಾನಿಗಳು ಈ ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಅಭಿಮಾನಿಗಳು ಇಟ್ಟ ಈ ಹೆಸರನ್ನೇ ಸಿನಿಮಾಕ್ಕೆ ಅಂತಿಮಗೊಳಿಸಲು ಚಿತ್ರತಂಡ ಯೋಜಿಸಿದಂತಿದೆ. ಇದರ ಸುಳಿವು ಸಹ ಅಭಿಮಾನಿಗಳಿಗೆ ಸಿಕ್ಕಿದೆ.

ಜೂ ಎನ್​​ಟಿಆರ್-ನೀಲ್ ಸಿನಿಮಾದ ಅಪ್​​ಡೇಟ್ ಒಂದು ನಟನ ಹುಟ್ಟುಹಬ್ಬದ ದಿನ ಬಿಡುಗಡೆ ಆಗಲಿದೆ. ಮೇ 20ರಂದು ಜೂ ಎನ್​​​ಟಿಆರ್ ಹುಟ್ಟುಹಬ್ಬವಿದ್ದು ಆ ದಿನದಂದು ಸಿನಿಮಾದ ಗ್ಲಿಂಪ್ಸ್ ಒಂದನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ. ಇದಕ್ಕಾಗಿ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಅರ್ಜಿಯಲ್ಲಿ ಸಿನಿಮಾದ ಹೆಸರು ‘ಡ್ರ್ಯಾಗನ್’ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ:ವಾರ್ 2 ಟ್ವಿಟ್ಟರ್ ವಿಮರ್ಶೆ: ಹೇಗಿದೆ ಜೂ ಎನ್​ಟಿಆರ್-ಹೃತಿಕ್ ರೋಷನ್ ಜುಗಲ್​ಬಂಧಿ

ಸಿನಿಮಾದ ಟೀಸರ್ ಒಂದನ್ನು ಮೇ 20ರಂದು ಚಿತ್ರತಂಡ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಸಿನಿಮಾದ ಹೆಸರನ್ನು ‘ಡ್ರ್ಯಾಗನ್’ ಎಂದೇ ನಮೂದಿಸಿದ್ದು, ಇದು ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ಮೂಡಿಸಿದೆ. ಏಕೆಂದರೆ ಅಭಿಮಾನಿಗಳು ಇಟ್ಟ ಹೆಸರನ್ನೇ ಚಿತ್ರತಂಡ ತಮ್ಮ ಸಿನಿಮಾಕ್ಕೆ ಇರಿಸಿ, ಅಭಿಮಾನಿಗಳ ಮಾತಿಗೆ ಗೌರವ ನೀಡಿದೆ. ಇದರ ಜೊತೆಗೆ ಟೀಸರ್​​ನ ಅವಧಿ ಸಹ ಗಮನ ಸೆಳೆದಿದ್ದು, 4:35 ನಿಮಿಷದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲು ಮುಂದಾಗಿದೆ.

ಜೂ ಎನ್​​ಟಿಆರ್ ಮತ್ತು ನೀಲ್ ಅವರ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣ ಆಗುತ್ತಿದ್ದು, ಎರಡೂ ಭಾಗಗಳ ಚಿತ್ರೀಕರಣವನ್ನು ಏಕಕಾಲದಲ್ಲಿ ಮುಗಿಸುತ್ತಿದ್ದಾರೆ ನೀಲ್. ಅಂದಹಾಗೆ ಸಿನಿಮಾನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೇ 20 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಎಸ್​ಎಸ್ ಸಿನಿಮಾ: ವಿವಾದದ ನಡುವೆಯೂ ರಾಷ್ಟ್ರಪತಿ ಭವನದಲ್ಲಿ ‘ಆಖ್ರಿ ಸವಾಲ್’ ಪ್ರದರ್ಶನ? – Kannada News | Sanjay Dutt starrer Aakhri Sawal Special Screening at Rashtrapati Bhavan amid controversy

ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್ ಅಭಿನಯದ ‘ಆಖ್ರಿ ಸವಾಲ್’ (Aakhri Sawal) ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದರ ನಡುವೆ ಈ ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಬೆಳವಣಿಗೆಯೊಂದು ಮುನ್ನಲೆಗೆ ಬಂದಿದೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿರುವ ಈ ಚಿತ್ರಕ್ಕೆ ಇಂದು (ಮೇ 17) ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಕಳೆದ ಕೆಲವು ದಿನಗಳಿಂದ ‘ಆಖ್ರಿ ಸವಾಲ್’ ಸಿನಿಮಾ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಷೇಧ ಹೇರಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ, ಭಾರತದಲ್ಲೂ ಚಿತ್ರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಹೀಗೆ ಚಿತ್ರದ ಸುತ್ತ ಸಾಲು ಸಾಲು ಕಾನೂನು ಸಂಕಷ್ಟ ಮತ್ತು ಸೆನ್ಸಾರ್‌ಶಿಪ್ ವಿವಾದಗಳು ಎದ್ದಿದ್ದರೂ, ಚಿತ್ರತಂಡ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.

ಮೂಲಗಳ ಪ್ರಕಾರ, ರಾಷ್ಟ್ರಪತಿ ಭವನದಲ್ಲಿ ಈ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲು ಕಳೆದ ಕೆಲವು ದಿನಗಳಿಂದ ರಹಸ್ಯವಾಗಿ ಸಿದ್ಧತೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಈ ಪ್ರದರ್ಶನದಲ್ಲಿ ಭಾಗವಹಿಸಲಿರುವ ಗಣ್ಯರ ಪಟ್ಟಿ ಮತ್ತು ಅತಿಥಿಗಳ ವಿವರಗಳನ್ನು ಸದ್ಯಕ್ಕೆ ಅತ್ಯಂತ ಗೌಪ್ಯವಾಗಿ ಇಡಲಾಗಿದೆ. ಆದಾಗ್ಯೂ, ರಾಷ್ಟ್ರಪತಿ ಭವನದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಒಂದು ಗಂಭೀರ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಸಂಜಯ್ ದತ್ ಜೊತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸಿನಿಮಾದ ವಿವಾದಾತ್ಮಕ ಕಥಾವಸ್ತು ಹಾಗೂ ರಾಜಕೀಯ ಪ್ರೇರಿತ ಸಂಭಾಷಣೆಗಳೇ ಚಿತ್ರದ ಮೇಲಿನ ಕುತೂಹಲಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಚಿತ್ರರಂಗದ ವಿಶ್ಲೇಷಕರ ಪ್ರಕಾರ, ರಾಷ್ಟ್ರಪತಿ ಭವನದ ಪ್ರದರ್ಶನವು ಚಿತ್ರದ ಭವಿಷ್ಯಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಸಿನಿಮಾ ಟೀಸರ್; ಈ ಚಿತ್ರದಲ್ಲಿದೆ ವಿವಾದಿತ ಕಥೆ

ಒಂದೆಡೆ ಚಿತ್ರಕ್ಕೆ ವಿದೇಶದಲ್ಲಿ ನಿಷೇಧ ಹಾಗೂ ಸ್ವದೇಶದಲ್ಲಿ ಕಾನೂನು ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ದೇಶದ ಪ್ರಮುಖ ವೇದಿಕೆಯಲ್ಲಿ ಹೈ-ಪ್ರೊಫೈಲ್ ಪ್ರದರ್ಶನ ಕಾಣುತ್ತಿರುವುದು ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದ್ಯಕ್ಕೆ ಚಿತ್ರದ ನಿರ್ಮಾಪಕರು ಯುಎಇ ಬ್ಯಾನ್ ಮತ್ತು ಪಿಐಎಲ್ ವಿವಾದಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ‘ಆಖ್ರಿ ಸವಾಲ್’ ಕುರಿತ ಚರ್ಚೆಗಳು ಜೋರಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ – Kannada News | India’s big export markets, Singapore replaces UAE for second position

ನವದೆಹಲಿ, ಮೇ 17: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ (west asia conflict) ಭಾರತದ ವಿದೇಶಿ ವ್ಯಾಪಾರ ವಲಯದಲ್ಲಿ ಮಹತ್ವದ ಬದಲಾವಣೆಯಾಗಿದೆ. ಮಾಧ್ಯಮ ವರದಿಯ ಪ್ರಕಾರ, ಯುಎಇ (UAE) ದೇಶವನ್ನು ಹಿಂದಿಕ್ಕಿ ಸಿಂಗಾಪುರವು ಈಗ ಭಾರತದ ಎರಡನೇ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಯುದ್ಧದ ಪರಿಸ್ಥಿತಿ ಮತ್ತು ಮಾರ್ಚ್ ತಿಂಗಳಿನಿಂದ ಹಾರ್ಮುಜ್ ಜಲಸಂಧಿ (Strait of Hormuz) ಬಹುತೇಕ ಮುಚ್ಚಿರುವುದು ಜಾಗತಿಕ ಇಂಧನ ಮತ್ತು ಸರಕು ಸಾಗಣೆಗೆ ಭಾರಿ ಹೊಡೆತ ನೀಡಿದೆ. ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಸಮುದ್ರ ಮಾರ್ಗವು ಜಾಗತಿಕ ತೈಲ ಸಾಗಣೆಯ ಐದನೇ ಒಂದು ಭಾಗವನ್ನು ನಿಯಂತ್ರಿಸುತ್ತದೆ. ಆದರೆ ಯುದ್ಧದ ಕಾರಣದಿಂದಾಗಿ ಈ ಮಾರ್ಗದ ಮೂಲಕ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಬಿಕ್ಕಟ್ಟಿನಿಂದಾಗಿ ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ನಡೆಸಲು ತೊಂದರೆಯಾಗುತ್ತಿರುವುದರಿಂದ, ಭಾರತೀಯ ರಫ್ತುದಾರರು ಪರ್ಯಾಯ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಇದರ ನೇರ ಪರಿಣಾಮವಾಗಿ ಭಾರತವು ಮುಕ್ತ ವ್ಯಾಪಾರ ಒಪ್ಪಂದ (FTA) ಹೊಂದಿರುವ ಎರಡು ಪ್ರಮುಖ ಸಾರಿಗೆ ಹಬ್‌ಗಳಾದ ಯುಎಇ ಮತ್ತು ಸಿಂಗಾಪುರ ನಡುವಿನ ವ್ಯಾಪಾರದ ಹರಿವಿನಲ್ಲಿ ಭಾರಿ ಪಲ್ಲಟವಾಗಿದೆ.

ಸಿಂಗಾಪುರಕ್ಕೆ ರಫ್ತು ಭಾರಿ ಏರಿಕೆ; ಯುಎಇಗೆ ರಫ್ತು ಕುಸಿತ

ಏಪ್ರಿಲ್ ತಿಂಗಳಿನಲ್ಲಿ ಭಾರತದಿಂದ ಸಿಂಗಾಪುರಕ್ಕೆ ನಡೆದ ರಫ್ತು ಪ್ರಮಾಣವು ಶೇಕಡಾ 180 ರಷ್ಟು ಭಾರಿ ಜಿಗಿತ ಕಂಡಿದ್ದು, 3.20 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಕೇವಲ 1.14 ಬಿಲಿಯನ್ ಡಾಲರ್ ಆಗಿತ್ತು. ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಸಿಂಗಾಪುರದ ರಫ್ತು ಮಾರುಕಟ್ಟೆಯಲ್ಲಿ ಬರೋಬ್ಬರಿ ಐದು ಪಟ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

ಮತ್ತೊಂದೆಡೆ, ಯುಎಇ ದೇಶಕ್ಕೆ ಆಗುತ್ತಿದ್ದ ಭಾರತದ ರಫ್ತು ಪ್ರಮಾಣವು ಶೇಕಡಾ 36 ರಷ್ಟು ಕುಸಿದಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 3.43 ಬಿಲಿಯನ್ ಡಾಲರ್ ಇದ್ದ ರಫ್ತು, ಈ ಬಾರಿ 2.18 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ.

ಇದೇ ವೇಳೆ, ಭಾರತದ ಅತಿ ದೊಡ್ಡ ರಫ್ತು ದೇಶವಾಗಿ ಅಮೆರಿಕ (USA) ಎಂದಿನಂತೆ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಆಮದು ಕ್ಷೇತ್ರದಲ್ಲೂ ಬದಲಾವಣೆ

ಸಾಂಪ್ರದಾಯಿಕ ಇಂಧನ ಪೂರೈಕೆ ಮಾರ್ಗಗಳು ಮುಚ್ಚಿ ಹೋಗಿರುವುದರಿಂದ ಭಾರತವು ಆಮದಿಗಾಗಿ ಬೇರೆ ಬೇರೆ ಮಾರುಕಟ್ಟೆಗಳನ್ನು ಶೋಧಿಸುತ್ತಿದೆ.

ಇಂಧನ ರಫ್ತು ಮಾಡುವ ದೇಶಗಳಾದ ಒಮಾನ್, ಪೆರು ಮತ್ತು ನೈಜೀರಿಯಾ ದೇಶಗಳು ಭಾರತದ ಟಾಪ್ 20 ಆಮದು ಮೂಲಗಳ ಪಟ್ಟಿಗೆ ಲಗ್ಗೆ ಇಟ್ಟಿವೆ. ಒಮಾನ್‌ನಿಂದ ಭಾರತಕ್ಕೆ ಆಗುವ ಆಮದು ಏಪ್ರಿಲ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, 1.48 ಬಿಲಿಯನ್ ಡಾಲರ್‌ಗೆ ತಲುಪಿದೆ.

ಕತಾರ್‌ನಿಂದ ಆಗುತ್ತಿದ್ದ ಆಮದು ಶೇಕಡಾ 47 ರಷ್ಟು ಕುಸಿದಿದ್ದರೆ, ಸೌದಿ ಅರೇಬಿಯಾದಿಂದ ಆಗುವ ಆಮದು ಏಪ್ರಿಲ್‌ನಲ್ಲಿ ಚೇತರಿಕೆ ಕಂಡು 3.85 ಬಿಲಿಯನ್ ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು

ಭಾರತದ ಆರ್ಥಿಕತೆಯ ಮೇಲಿನ ಪ್ರಭಾವ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿವೆ. ಇದು ಭಾರತದ ಆಮದು ವೆಚ್ಚವನ್ನು ಹೆಚ್ಚಿಸಿದೆ ಮತ್ತು ರಫ್ತು ವಲಯದಲ್ಲಿ ಅನಿಶ್ಚಿತತೆ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಫೆಬ್ರವರಿ ಕೊನೆಯಿಂದ ರೂಪಾಯಿ ಮೌಲ್ಯವು ಶೇಕಡಾ 5.2 ರಷ್ಟು ಕುಸಿದಿದೆ.

ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಇಂಧನ ಬಳಕೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಚಿನ್ನ ಸೇರಿದಂತೆ ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ ಮತ್ತು ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ‘ಕುತ್ತು’ – Kannada News | Suryakumar Yadav’s T20I Captaincy Under Threat

ಭಾರತ ತಂಡಕ್ಕೆ ಟಿ20 ವಿಶ್ವಕಪ್ 2026ರ ಟ್ರೋಫಿ ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರ ಟಿ20 ಭವಿಷ್ಯ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ಅವರ ಇತ್ತೀಚಿನ ಕಳಪೆ ಬ್ಯಾಟಿಂಗ್ ಫಾರ್ಮ್, ಹೆಚ್ಚುತ್ತಿರುವ ವಯಸ್ಸು ಮತ್ತು ಪದೇ ಪದೇ ಕಾಡುತ್ತಿರುವ ಫಿಟ್‌ನೆಸ್ ಸಮಸ್ಯೆಗಳು ಬಿಸಿಸಿಐ ಆಯ್ಕೆ ಸಮಿತಿಯನ್ನು ತೀವ್ರ ಚಿಂತೆಗೆ ದೂಡಿವೆ. ಮುಂದಿನ 2028ರ ವಿಶ್ವಕಪ್ ದೃಷ್ಟಿಯಿಂದ ಟಿ20 ತಂಡಕ್ಕೆ ಹೊಸ ನಾಯಕನನ್ನು ಹುಡುಕಲು ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಮೇ 19ರ ಗುವಾಹಟಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿದ್ದು, ಸೂರ್ಯಕುಮಾರ್ ಅವರ ಸ್ಥಾನಕ್ಕೆ ಕತ್ತರಿ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಅಂದರೆ ಮೇ 19 ರಂದು ನಡೆಯಲಿರುವ ಸಭೆಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್​ ಹಾಗೂ ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕನ ಕುರಿತಾದ ಚರ್ಚೆಗಳು ನಡೆಯಲಿದೆ. ಹೀಗಾಗಿ ಮುಂಬರುವ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಅಲ್ಲದೆ ಮುಂಬರುವ ಟಿ20 ಸರಣಿಯೊಂದಿಗೆ ಬಿಸಿಸಿಐ ಹೊಸ ನಾಯಕನನ್ನು ಪರಿಚಯಿಸಲಿದ್ದಾರೆ ಎಂದು ವರದಿಯಾಗಿದೆ.

ಸೂರ್ಯಕುಮಾರ್ ಬದಲಾವಣೆ ಯಾಕೆ?

  • ಕಳಪೆ ಬ್ಯಾಟಿಂಗ್ ಫಾರ್ಮ್: 2025 ರ 19 ಟಿ20 ಪಂದ್ಯಗಳಲ್ಲಿ ಕೇವಲ 13.62 ಸರಾಸರಿಯಲ್ಲಿ ರನ್ ಗಳಿಸಿದ್ದ ಸೂರ್ಯಕುಮಾರ್, ಪ್ರಸ್ತುತ ಐಪಿಎಲ್ 2026 ರಲ್ಲೂ ಮುಂಬೈ ಇಂಡಿಯನ್ಸ್ ಪರ 11 ಪಂದ್ಯಗಳಿಂದ ಕೇವಲ 195 ರನ್ (ಸರಾಸರಿ 17.00) ಗಳಿಸಿ ತೀವ್ರ ನಿರಾಶೆ ಮೂಡಿಸಿದ್ದಾರೆ.
  • ವಿಶ್ವಕಪ್‌ನಲ್ಲಿ ಸಾಧಾರಣ ಪ್ರದರ್ಶನ: ಭಾರತ ಅವರ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದರೂ, ಬ್ಯಾಟರ್ ಆಗಿ ಸೂರ್ಯಕುಮಾರ್ ವೈಫಲ್ಯ ಕಂಡಿದ್ದರು. 9 ಇನಿಂಗ್ಸ್‌ಗಳಿಂದ 136.72 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 242 ರನ್ ಗಳಿಸಿದ್ದರು. (ಇದರಲ್ಲಿ ಅಮೆರಿಕ ವಿರುದ್ಧದ ಒಂದೇ ಪಂದ್ಯದಲ್ಲಿ 84 ರನ್ ಸೇರಿತ್ತು).
  • ವಯಸ್ಸು ಮತ್ತು ಫಿಟ್‌ನೆಸ್ ಸಮಸ್ಯೆ: ಸೆಪ್ಟೆಂಬರ್ 2026 ಕ್ಕೆ ಅವರಿಗೆ 36 ವರ್ಷ ತುಂಬಲಿದ್ದು, 2028ರ ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಯುವ ಆಟಗಾರರಿಗೆ ಮಣೆ ಹಾಕಲು ಬಯಸಿದೆ. ಜೊತೆಗೆ, ಅವರ ಬಲಗೈ ಮಣಿಕಟ್ಟಿನ ಗಾಯದ ಸಮಸ್ಯೆ ಪದೇ ಪದೇ ಮರುಕಳಿಸುತ್ತಿದೆ.

ಇದನ್ನೂ ಓದಿ: RCB ಪಂದ್ಯಕ್ಕೆ 80,000 ರೂ: ಐಪಿಎಲ್ ಟಿಕೆಟ್ ದಂಧೆ ಬಯಲು!

ಯಾರಾಗಲಿದ್ದಾರೆ ಹೊಸ ನಾಯಕ?

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಈ ಕೆಳಗಿನ ಆಟಗಾರರನ್ನು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿಟ್ಟಿದೆ. ಅವರೆಂದರೆ…

  •  ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಹೆಸರು ನಾಯಕತ್ವದ ರೇಸ್​ನಲ್ಲಿ ಮುಂಚೂಣಿಯಲ್ಲಿದೆ.
  • ಸಂಜು ಸ್ಯಾಮ್ಸನ್: ಟಿ20 ವಿಶ್ವಕಪ್ 2026 ರಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದು ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಹೆಸರು ಕೂಡ ನಾಯಕತ್ವದ ರೇಸ್​ನಲ್ಲಿದೆ.
  • ಹಾರ್ದಿಕ್ ಪಾಂಡ್ಯ: ಹಿರಿಯ ಆಟಗಾರನಾಗಿ ನಾಯಕತ್ವ ವಹಿಸಿಕೊಳ್ಳಲು ಸದಾ ಸಿದ್ಧವಿರುವ ಅನುಭವಿ ಆಯ್ಕೆಯಾಗಿ ಹಾರ್ದಿಕ್ ಪಾಂಡ್ಯ ಹೆಸರು ಕೂಡ ಕೇಳಿ ಬರುತ್ತಿದೆ.
  • ಶುಭ್​ಮನ್ ಗಿಲ್: ಮೂರು ಸ್ವರೂಪಕ್ಕೂ ಏಕೈಕ ನಾಯಕನನ್ನು ಆಯ್ಕೆ ಮಾಡಲು ಮುಂದಾದರೆ ಕ್ಯಾಪ್ಟನ್ ಪಟ್ಟ ಶುಭ್​ಮನ್ ಗಿಲ್​ಗೆ ಒಲಿಯಲಿದೆ. ಏಕೆಂದರೆ ಅವರು ಈಗಾಗಲೇ ಭಾರತ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Source link

Kashi Yatra: ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? ಇದರ ಹಿಂದಿರುವ ಆಚರಣೆಗಳೇನು? – Kannada News | Kashi Yatra for Moksha: Spiritual Significance of 9 Nights in Varanasi

ಕಾಶಿಯಲ್ಲಿ 9 ರಾತ್ರಿಗಳು ಕಳೆದರೆ ಮೋಕ್ಷ ಸಿಗುತ್ತಾ? Image Credit source: Pinterest

ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ಭಕ್ತನ ಜೀವಿತಾವಧಿಯ ಅಂತಿಮ ಆಧ್ಯಾತ್ಮಿಕ ಗುರಿ ಎಂದರೆ ಅದು ‘ಕಾಶಿ ವಿಶ್ವನಾಥನ’ ದರ್ಶನ ಪಡೆಯುವುದು. ಪವಿತ್ರ ನಗರಿ ಕಾಶಿಗೆ ಭೇಟಿ ನೀಡಿ ಭಗವಂತನ ಪಾದಕ್ಕೆ ಶರಣಾದರೆ ಜನ್ಮ ಜನ್ಮಾಂತರಗಳ ಪಾಪಗಳು ಕರಗಿ, ಮೋಕ್ಷ ಸಿಗುತ್ತದೆ ಎಂಬುದು ಶತಶತಮಾನಗಳ ನಂಬಿಕೆ. ಅದಕ್ಕಾಗಿಯೇ ಕಾಶಿಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅತ್ಯಂತ ಪವಿತ್ರ. ಅದರಲ್ಲೂ ವಿಶೇಷವಾಗಿ, ಶಾಸ್ತ್ರ ಸಂಪ್ರದಾಯಗಳ ಪ್ರಕಾರ “ಕಾಶಿಯಲ್ಲಿ 9 ರಾತ್ರಿಗಳ ಕಾಲ ತಂಗುವುದು” ಮನುಷ್ಯನನ್ನು ನೇರವಾಗಿ ಮೋಕ್ಷಕ್ಕೆ ಹತ್ತಿರ ಮಾಡುತ್ತದೆ ಎಂದು ಹೇಳಲಾಗುತ್ತದೆ. ಏನಿದು 9 ರಾತ್ರಿಗಳ ನಂಬಿಕೆ? ಇದರ ಹಿಂದಿರುವ ಆಚರಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಶಿಯಲ್ಲಿ 9 ರಾತ್ರಿಗಳ ನಂಬಿಕೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯ:

ಮನುಷ್ಯನು ಈ ಭೂಮಿಯ ಮೇಲೆ ಜನ್ಮ ತಳೆಯುವ ಮುನ್ನ ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳುಗಳ ಕಾಲ ಕಳೆಯುತ್ತಾನೆ. ಅದೇ ರೀತಿ, ಕಾಶಿಯು ಜನ್ಮ-ಮರಣಗಳ ಚಕ್ರದಿಂದ ಮುಕ್ತಿ ನೀಡಿ, ಆತ್ಮವನ್ನು ಪರಮಾತ್ಮನಲ್ಲಿ ಲೀನವಾಗಿಸುವ ಜನ್ಮರಹಿತ ಸ್ಥಿತಿಯ ಪವಿತ್ರ ಮಾರ್ಗವಾಗಿದೆ. ಪುರಾಣಗಳ ಪ್ರಕಾರ, ವ್ಯಾಸ ಮಹರ್ಷಿಗಳು ಹಿಂದೆ ಕಾಶಿಯಲ್ಲಿ ಒಂಬತ್ತು ತಿಂಗಳುಗಳ ಕಾಲ ಕಠಿಣ ಸಾಧನೆ ಮಾಡಲು ಸೂಚಿಸಿದ್ದರು. ಆದರೆ, ಕಲಿಯುಗದ ಮಾನವನಿಗೆ ಅಷ್ಟು ದೀರ್ಘಾವಧಿ ಸಾಧ್ಯವಾಗದ ಕಾರಣ, ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳು ಅದನ್ನು ‘ಒಂಬತ್ತು ರಾತ್ರಿಗಳಿಗೆ’ ಸೀಮಿತಗೊಳಿಸಿದವು. ಈ 9 ರಾತ್ರಿಗಳ ಸಾಧನೆಯು ತಾಯಿಯ ಒಂಬತ್ತು ತಿಂಗಳ ಗರ್ಭವಾಸದಷ್ಟೇ ಪವಿತ್ರವಾದದ್ದು ಎಂದು ನಂಬಲಾಗಿದೆ.

ಕಾಶಿ ವಾಸದ ಪ್ರಮುಖ ನಿಯಮಗಳು:

ಕಾಶಿಯಲ್ಲಿ ತಂಗುವ 9 ದಿನಗಳ ಅವಧಿಯಲ್ಲಿ ಭಕ್ತರು ಕಟ್ಟುನಿಟ್ಟಾದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ:

  • ನಿರಂತರ ಶಿವಸ್ಮರಣೆ: ಸದಾ ಕಾಲ ಕಾಶಿ ವಿಶ್ವನಾಥನ ಧ್ಯಾನದಲ್ಲಿ ತೊಡಗಿರಬೇಕು.
  • ದಿನಕ್ಕೆ ಒಂದೇ ಊಟ: ಇಂದ್ರಿಯ ನಿಗ್ರಹಕ್ಕಾಗಿ ದಿನದಲ್ಲಿ ಕೇವಲ ಒಂದು ಬಾರಿ ಮಾತ್ರ ಸಾತ್ವಿಕ ಆಹಾರ ಸೇವಿಸಬೇಕು.
  • ತ್ರಿಕಾಲ ಸ್ನಾನ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು.
  • ದಾನ ಧರ್ಮ: ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು ಮತ್ತು ಬಡವರಿಗೆ, ಸಾಧುಗಳಿಗೆ ದಾನ ಮಾಡುವುದು ಕಡ್ಡಾಯ.
  • ದುರ್ಗುಣಗಳ ತ್ಯಾಗ: ಕೋಪ, ಅಹಂಕಾರ ಮತ್ತು ಸುಳ್ಳು ಹೇಳುವಂತಹ ನಕಾರಾತ್ಮಕ ಗುಣಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.

9 ದಿನಗಳ ಕಾಶಿ ಮಹಾಯಾತ್ರೆಯ ದೈನಂದಿನ ವಿಧಿವಿಧಾನಗಳು:

ಮೊದಲ ದಿನ: ಸಂಕಲ್ಪ ಮತ್ತು ಶುದ್ಧೀಕರಣ

ಯಾತ್ರೆಯು ಪವಿತ್ರ ‘ಮಣಿಕರ್ಣಿಕಾ ಘಾಟ್‌’ನಲ್ಲಿ ಗಂಗಾ ಸ್ನಾನದೊಂದಿಗೆ ಆರಂಭವಾಗುತ್ತದೆ. ಇಲ್ಲಿ ಪೂರ್ವಜರಿಗೆ ತರ್ಪಣ ಮತ್ತು ನೈವೇದ್ಯಗಳನ್ನು ಅರ್ಪಿಸಿ ಆತ್ಮಶುದ್ಧಿ ಮಾಡಿಕೊಳ್ಳಲಾಗುತ್ತದೆ. ಬಳಿಕ ದುಂಡಿ ವಿನಾಯಕ, ವಿಶಾಲಾಕ್ಷಿ ದೇವಿ ಮತ್ತು ಸಾಕ್ಷಿ ಗಣಪತಿಯ ದರ್ಶನ ಪಡೆದು, ರಾತ್ರಿ ಉಪವಾಸದೊಂದಿಗೆ ಶಿವನಾಮ ಸ್ಮರಣೆ ಮಾಡಲಾಗುತ್ತದೆ.

ಎರಡನೇ ದಿನ: ಅನ್ನಪೂರ್ಣೇಶ್ವರಿ ದರ್ಶನ

ಗಂಗಾ ಸ್ನಾನದ ನಂತರ ವಿಶ್ವನಾಥ ಹಾಗೂ ಕಾಶಿಯ ಅನ್ನದಾತೆಯಾದ ಅನ್ನಪೂರ್ಣ ದೇವಿಯ ದರ್ಶನ ಪಡೆಯಲಾಗುತ್ತದೆ. ಈ ದಿನ ಗಾಯತ್ರಿ ಮಂತ್ರ ಹಾಗೂ ಶಿವ ಪಂಚಾಕ್ಷರಿ ಮಂತ್ರಗಳ ಜಪಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ಮೂರನೇ ದಿನ: ಘಾಟ್‌ಗಳ ಪ್ರದಕ್ಷಿಣೆ

ಕಾಶಿಯ ಪ್ರಸಿದ್ಧ ಘಾಟ್‌ಗಳಾದ ಅಸಿ ಘಾಟ್, ದಶಾಶ್ವಮೇಧ ಘಾಟ್ ಮತ್ತು ವರುಣಾ ನದಿಯ ದಂಡೆಯ ದೇವಾಲಯಗಳಿಗೆ ಭೇಟಿ ನೀಡಿ ಶಿವಲಿಂಗಗಳ ಪೂಜೆ ಮಾಡಲಾಗುತ್ತದೆ. ಇದು ಕಾಶಿಯ ಪವಿತ್ರ ಕ್ಷೇತ್ರವನ್ನು ಪ್ರದಕ್ಷಿಣೆ ಮಾಡಿದ ಪುಣ್ಯವನ್ನು ನೀಡುತ್ತದೆ.

ನಾಲ್ಕನೇ ದಿನ: ಕಾಲಭೈರವನ ರಕ್ಷಣೆ

ವಿಶ್ವನಾಥ ಮತ್ತು ದುಂಡಿ ವಿನಾಯಕನ ಜೊತೆಗೆ ಕಾಶಿಯ ಕೋತ್ವಾಲ (ರಕ್ಷಕ) ಎಂದೇ ಕರೆಯಲ್ಪಡುವ ಕಾಲಭೈರವನ ದರ್ಶನ ಪಡೆಯುವುದು ಈ ದಿನದ ವಿಶೇಷ. ಕಾಲಭೈರವನ ದರ್ಶನದಿಂದ ತೀರ್ಥಯಾತ್ರೆಗೆ ಯಾವುದೇ ವಿಘ್ನ ಬರದಂತೆ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ.

ಐದನೇ ದಿನ: ಕಠಿಣ ‘ಪಂಚಕ್ರೋಶ ಯಾತ್ರೆ’ಯ ಆರಂಭ

ಇಂದಿನಿಂದ ಕಾಶಿಯ ಅತ್ಯಂತ ಪವಿತ್ರವಾದ ಸುಮಾರು 80 ಕಿಲೋಮೀಟರ್‌ಗಳ ‘ಪಂಚಕ್ರೋಶ ಯಾತ್ರೆ’ ಆರಂಭವಾಗುತ್ತದೆ. ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು, ದಾರಿಯುದ್ದಕ್ಕೂ ಸಿಗುವ ಶಿವಲಿಂಗಗಳನ್ನು ದರ್ಶಿಸುತ್ತಾ, ನಿಗದಿಪಡಿಸಿದ ಗ್ರಾಮಗಳಲ್ಲಿ ರಾತ್ರಿ ತಂಗುತ್ತಾರೆ.

ಆರನೇ ದಿನ: ಮೌನ ವ್ರತ

ಪಂಚಕ್ರೋಶ ಯಾತ್ರೆ ಮುಂದುವರಿಯಲಿದ್ದು, ಭಕ್ತರು ದಾರಿಯ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಮನಸ್ಸನ್ನು ಭಗವಂತನ ಕಡೆಗೆ ಕೇಂದ್ರೀಕರಿಸಲು ಈ ದಿನದ ಪ್ರಯಾಣವನ್ನು ಸಂಪೂರ್ಣ ‘ಮೌನ’ವಾಗಿ ಕಳೆಯಲಾಗುತ್ತದೆ.

ಏಳನೇ ದಿನ: ತಪಸ್ಸು ಮತ್ತು ಧ್ಯಾನ

ಧ್ಯಾನ ಮತ್ತು ಭಕ್ತಿಗೆ ಈ ದಿನ ಮೀಸಲು. ಪವಿತ್ರ ವೃಕ್ಷಗಳ ನೆರಳಿನಲ್ಲಿ ಕುಳಿತು ಶಿವನನ್ನು ಧ್ಯಾನಿಸುವುದು ಮತ್ತು ದಾರಿಯಲ್ಲಿ ಸಿಗುವ ಜನರಿಗೆ ದಾನ ಧರ್ಮಗಳನ್ನು ಮಾಡುವುದು ವಿಶೇಷ ಫಲ ನೀಡುತ್ತದೆ.

ಎಂಟನೇ ದಿನ: ಮಹಾಯಾತ್ರೆಯ ಮುಕ್ತಾಯ

ಪಂಚಕ್ರೋಶ ಯಾತ್ರೆಯನ್ನು ಮುಗಿಸಿ ಭಕ್ತರು ಪುನಃ ಮಣಿಕರ್ಣಿಕಾ ಘಾಟ್‌ಗೆ ಹಿಂತಿರುಗುತ್ತಾರೆ. ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿ ಅಂತಿಮ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಒಂಬತ್ತನೇ ದಿನ: ವಿದಾಯ ಮತ್ತು ಆಶೀರ್ವಾದ

ಇದು ಯಾತ್ರೆಯ ಕೊನೆಯ ದಿನ. ವಿಶ್ವನಾಥನಿಗೆ ಮಹಾ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಿ, ಅನ್ನಪೂರ್ಣ ದೇವಿಯ ಸನ್ನಿಧಿಯಲ್ಲಿ ದಾನವನ್ನು ಸ್ವೀಕರಿಸಿ ಹಾಗೂ ಅರ್ಪಿಸಿ ಕೃತಾರ್ಥರಾಗುತ್ತಾರೆ. ಕೊನೆಯದಾಗಿ ಕಾಲಭೈರವನ ಬಳಿ ಕಾಶಿಯಿಂದ ಹೊರಡಲು ಅನುಮತಿ (ಆಜ್ಞೆ) ಪಡೆದು ಯಾತ್ರೆಯನ್ನು ಮುಕ್ತಾಯಗೊಳಿಸುತ್ತಾರೆ.

ಜೀವಂತವಾಗಿರುವಾಗಲೇ ಮುಕ್ತಿ!

“ಕಾಶ್ಯಾಂ ಮರಣಾತ್ ಮುಕ್ತಿಃ” ಅಂದರೆ ಕಾಶಿಯಲ್ಲಿ ಪ್ರಾಣ ಬಿಟ್ಟರೆ ಮುಕ್ತಿ ಸಿಗುತ್ತದೆ ಎಂಬುದು ಶಾಸ್ತ್ರೋಕ್ತ ಮಾತು. ಆದರೆ, ಬದುಕಿರುವಾಗಲೇ ಮೋಕ್ಷದ ಆನಂದವನ್ನು ಅನುಭವಿಸಬೇಕಾದರೆ ಈ 9 ದಿನಗಳ ಕಠಿಣ ನಿಯಮಬದ್ಧ ಕಾಶೀವಾಸವನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಇದು ಮನುಷ್ಯನ ಅಹಂಕಾರವನ್ನು ಅಳಿಸಿ ಆಧ್ಯಾತ್ಮಿಕ ಜಾಗೃತಿ ಉಂಟುಮಾಡುತ್ತದೆ.

ಮನೆಗೆ ಮರಳಿದ ನಂತರ ಮಾಡಬೇಕಾದ ಅಂತಿಮ ಪೂಜೆ:

ಕಾಶಿ ಯಾತ್ರೆ ಮುಗಿಸಿ ಮನೆಗೆ ಮರಳಿದ ನಂತರ, ಒಂದು ಶುಭ ಮುಹೂರ್ತದಲ್ಲಿ ಕಾಶಿಯಿಂದ ತಂದ ಪವಿತ್ರ ಗಂಗಾಜಲ, ವಿಭೂತಿ ಮತ್ತು ಪ್ರಸಾದದ ಅಕ್ಕಿಯನ್ನು (ಅಕ್ಷತೆ) ಇಟ್ಟು ವಿಶೇಷ ಪೂಜೆ ನೆರವೇರಿಸಬೇಕು. ಹೀಗೆ ಮಾಡಿದಾಗ ಮಾತ್ರ ಕಾಶಿ ಮಹಾಯಾತ್ರೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:36 pm, Sun, 17 May 26

Source link

Exit mobile version