ಪಾಕಿಸ್ತಾನದಲ್ಲಿ ‘ಧುರಂಧರ್ 2’ ಅಬ್ಬರ: ಮುಗಿಬಿದ್ದ ಜನ ಸರ್ವರ್ ಕ್ರ್ಯಾಶ್ – Kannada News | Dhurandhar 2 movie trending number 1 in Pakistan

ಧುರಂಧರ್ 2’ (Dhurandhar 2) ಸಿನಿಮಾ ಭಾರತ ಮಾತ್ರವಲ್ಲದೆ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. 1800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆದರೆ ಈ ಸಿನಿಮಾ ಸೌದಿ ರಾಷ್ಟ್ರಗಳು, ಪಾಕಿಸ್ತಾನ ಇನ್ನೂ ಕೆಲವೆಡೆ ನಿಷೇಧಕ್ಕೆ ಒಳಗಾಗಿತ್ತು. ಅದರಲ್ಲೂ ಸಿನಿಮಾ ಕತೆಯೇ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಇರುವಂಥಹದ್ದು. ಆದರೂ ಸಹ ಇದೀಗ ಪಾಕಿಸ್ತಾನದ ಜನ ಮುಗಿಬಿದ್ದು ‘ಧುರಂಧರ್ 2’ ಸಿನಿಮಾ ನೋಡಿದ್ದಾರೆ. ಈಗ ಮಾತ್ರವಲ್ಲ ಈ ಹಿಂದೆ ‘ಧುರಂಧರ್’ ಮೊದಲ ಭಾಗ ಬಿಡುಗಡೆ ಆದಾಗಲೂ ಸಹ ಪಾಕ್​​ನ ಜನ ಹುಚ್ಚೆದ್ದು ಆ ಸಿನಿಮಾ ವೀಕ್ಷಿಸಿದ್ದರು. ಈಗ ಮತ್ತೆ ಅದೇ ಕ್ರೇಜ್ ಪುನರಾವರ್ತನೆಗೊಂಡಿದೆ.

‘ಧುರಂಧರ್ 2’ ಸಿನಿಮಾ ಮೇ 14 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಪಾಕಿಸ್ತಾನದಲ್ಲಿ ಸಹ ನೆಟ್​​ಫ್ಲಿಕ್ಸ್​ನಲ್ಲಿ ಈ ಸಿನಿಮಾ ವೀಕ್ಷಿಸಬಹುದಾಗಿದೆ. ಸಿನಿಮಾದ ಬಿಡುಗಡೆಗಾಗಿ ನಿರೀಕ್ಷೆಯಿಂದ ಕಾಯುತ್ತಿದ್ದ ಪಾಕಿಸ್ತಾನದ ಸಿನಿಮಾ ಪ್ರೇಮಿಗಳು ಮೇ 13 ರ ಮಧ್ಯರಾತ್ರಿಯವರೆಗೆ ಎದ್ದಿದ್ದು, ಸಿನಿಮಾ ಸ್ಟ್ರೀಮಿಂಗ್ ಆರಂಭಿಸುತ್ತಿದ್ದಂತೆ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ‘ಧುರಂಧರ್ 2’ ಸಿನಿಮಾ ಪಾಕಿಸ್ತಾನದ ನೆಟ್​​ಫ್ಲಿಕ್ಸ್​​ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ. ಅಷ್ಟೇ ಅಲ್ಲದೆ, ಮಾವಿಯಾ ಉಮರ್ ಫಾರೂಕಿ ಎಂಬ ಹೆಸರಿನ ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಹೇಳಿರುವ ಪ್ರಕಾರ, ‘ಧುರಂಧರ್ 2’ ಕ್ರೇಜ್ ಎಷ್ಟಿತ್ತೆಂದರೆ, ಒಟ್ಟಿಗೆ ಜನ ‘ಧುರಂಧರ್ 2’ ನೋಡಿದ್ದರಿಂದ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಸ್ವಲ್ಪ ಸಮಯದವರೆಗೆ ಕ್ರ್ಯಾಶ್ ಆಗಿದ್ದವಂತೆ!

ಕಂಟೆಂಟ್ ಕ್ರಿಯೇಟರ್ ಹೇಳಿರುವಂತೆ ‘ಪಾಕಿಸ್ತಾನದಲ್ಲಿ ‘ಧುರಂಧರ್ 2’ ಬಿಡುಗಡೆಯಾದ್ದರಿಂದ ಸರ್ವರ್ ಕ್ರ್ಯಾಶ್ ಆಗಿದೆ. ‘ಧುರಂಧರ್ 2’ ಯಾವಾಗ ಅಪ್​​ಲೋಡ್ ಆಗುತ್ತದೆ ಎಂದು ಜನ ಮೊಬೈಲ್ ಹಿಡಿದು ಕಾಯುತ್ತಿದ್ದರು. ರಾತ್ರಿ 12ಕ್ಕೆ ಸಿನಿಮಾ ಅಪ್​​ಲೋಡ್ ಆಗುತ್ತಿದ್ದಂತೆ ಒಟ್ಟಿಗೆ ಕ್ಲಿಕ್ ಮಾಡಿ ಸಿನಿಮಾ ನೋಡಲು ಆರಂಭಿಸಿದರು. ಇದರಿಂದ ಪಾಕ್​​ನಲ್ಲಿ ನೆಟ್​ಫ್ಲಿಕ್ಸ್ ಸರ್ವರ್ ಕೆಲ ಹೊತ್ತು ಕ್ರ್ಯಾಶ್ ಆಯ್ತು’ ಎಂದಿದ್ದಾರೆ.

ಇದನ್ನೂ ಓದಿ:ಒಟಿಟಿಯಲ್ಲಿ ಬಿಡುಗಡೆ ಆಯ್ತು ‘ಧುರಂಧರ್ 2’ ಆದರೆ ಭಾರತೀಯರಿಗಲ್ಲ

2025ರಲ್ಲಿ ‘ಧುರಂಧರ್’ ಸಿನಿಮಾ ಬಿಡುಗಡೆ ಆದಾಗ ಆ ಸಿನಿಮಾ ಸಹ ಪಾಕ್​​ನಲ್ಲಿ ಕ್ರೇಜ್ ಹುಟ್ಟಿಸಿತ್ತು. ಸಿನಿಮಾದ ಪೈರಸಿ ಸಿಡಿಗಳು ಬಿಸಿ ಬಿರಿಯಾನಿಯಂತೆ ಬಿಕರಿ ಆಗಿದ್ದವು. ನೆಟ್​​ಫ್ಲಿಕ್ಸ್​ನಲ್ಲಿ ಸಿನಿಮಾ ಬಿಡುಗಡೆ ಆದಾಗಲೂ ಸಹ ಜನ ಮುಗಿಬಿದ್ದು ಸಿನಿಮಾ ನೋಡಿದ್ದರು. ಪಾಕ್​​ಸ ಸಂಸತ್​​ನಲ್ಲಿ ಸಹ ಸಿನಿಮಾದ ಬಗ್ಗೆ ಚರ್ಚೆ ಆಗಿತ್ತು. ಈಗ ಮತ್ತೆ ‘ಧುರಂಧರ್ 2’ ಮೂಲಕ ಅದೇ ಕ್ರೇಜ್ ಪುನರಾವರ್ತನೆ ಆಗಿದೆ.

ಪ್ರಸ್ತುತ ‘ಧುರಂಧರ್ 2’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಆದರೆ ವಿದೇಶದಲ್ಲಿ ಮಾತ್ರವೇ ಬಿಡುಗಡೆ ಆಗಿದ್ದು, ಭಾರತದಲ್ಲಿ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಜೂನ್ 4 ರಂದು ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಧುರಂಧರ್ 2’ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಮನೆಯಲ್ಲಿ ಆಮೆ ಪ್ರತಿಮೆ ಇಟ್ಟರೆ ಅದೃಷ್ಟ ಖುಲಾಯಿಸುತ್ತಾ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Vastu turtle placement attract wealth health and good luck to your home

ಆಮೆ ಪ್ರತಿಮೆ ಇಟ್ಟರೆ ಅದೃಷ್ಟImage Credit source: Ai generated

ಹಿಂದೂ ಸಂಸ್ಕೃತಿ, ಪುರಾಣ ಮತ್ತು ವಾಸ್ತುಶಾಸ್ತ್ರದಲ್ಲಿ ಆಮೆಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದಾದ ಕೂರ್ಮಾವತಾರವೇ ಇದಕ್ಕೆ ಮುಖ್ಯ ಕಾರಣವಾಗಿದೆ. ದೇವತೆಗಳು ಮತ್ತು ರಾಕ್ಷಸರು ಸೇರಿ ಕ್ಷೀರಸಾಗರವನ್ನು ಮಂಥನ ಮಾಡುವಾಗ, ಮುಳುಗುತ್ತಿದ್ದ ಮಂದಾರ ಪರ್ವತವನ್ನು ವಿಷ್ಣುವು ಆಮೆಯ ರೂಪದಲ್ಲಿ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ದೇವತೆಗಳಿಗೆ ರಕ್ಷಣೆ ನೀಡಿದನು. ಆ ಸಮುದ್ರ ಮಂಥನದಿಂದಲೇ ಲೋಕಕಲ್ಯಾಣದ ಅಮೃತ ಉದ್ಭವಿಸಿದ್ದರಿಂದ, ಆಮೆಯನ್ನು ಸ್ಥಿರತೆ, ದೀರ್ಘಾಯುಷ್ಯ, ಜ್ಞಾನ ಮತ್ತು ಸಂಪತ್ತಿನ ಸಂಕೇತವೆಂದು ಪೂಜಿಸಲಾಗುತ್ತದೆ.

ವಾಸ್ತು ಪ್ರಕಾರ ಆಮೆಯನ್ನು ಇಡಬೇಕಾದ ದಿಕ್ಕುಗಳು:

ಮನೆಯಲ್ಲಿ ಆಮೆಯ ಪ್ರತಿಮೆ, ಸ್ಫಟಿಕ ಅಥವಾ ಲೋಹದ ಆಕೃತಿಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆರೋಗ್ಯ ಮತ್ತು ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ವಾಸ್ತುಶಾಸ್ತ್ರದ ಪ್ರಕಾರ, ಆಮೆಯನ್ನು ಮುಖ್ಯವಾಗಿ ಉತ್ತರ, ಈಶಾನ್ಯ ಅಥವಾ ನೈಋತ್ಯ ದಿಕ್ಕುಗಳಲ್ಲಿ ಇಡುವುದು ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದಾಗಿದ್ದು, ಇಲ್ಲಿ ಆಮೆ ಇಡುವುದರಿಂದ ಸಂಪತ್ತು, ವೃತ್ತಿಜೀವನ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿ ಸಿಗುತ್ತದೆ. ದೇವ ಮೂಲೆಯಾದ ಈಶಾನ್ಯದಲ್ಲಿ ಆಮೆಯನ್ನು ಇರಿಸಿದರೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೆಚ್ಚಾಗುತ್ತದೆ. ಹಾಗೆಯೇ, ನೈಋತ್ಯ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಸ್ಥಿರತೆ ಬರುವುದರ ಜೊತೆಗೆ ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಬಲಗೊಳ್ಳುತ್ತವೆ ಎಂದು ನಂಬಲಾಗಿದೆ.

ಆಮೆಯ ವಸ್ತುವಿಗೆ ತಕ್ಕಂತೆ ದಿಕ್ಕಿನ ಆಯ್ಕೆ:

ಆಮೆಯನ್ನು ಯಾವ ವಸ್ತುವಿನಿಂದ ತಯಾರಿಸಲಾಗಿದೆ ಎಂಬುದರ ಆಧಾರದ ಮೇಲೆ ಅದನ್ನು ಇಡುವ ದಿಕ್ಕು ಮತ್ತು ಸಿಗುವ ಫಲಗಳು ಬದಲಾಗುತ್ತವೆ. ಲೋಹದ ಆಮೆಯಾಗಿದ್ದರೆ ಅದನ್ನು ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸುವುದರಿಂದ ವೃತ್ತಿ ಬೆಳವಣಿಗೆಯಾಗುತ್ತದೆ. ಸ್ಫಟಿಕ ಅಥವಾ ಗಾಜಿನ ಆಮೆಯನ್ನು ಉತ್ತರ ಅಥವಾ ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ. ಆರೋಗ್ಯ ವೃದ್ಧಿಗಾಗಿ ಮತ್ತು ಧನಾತ್ಮಕ ಶಕ್ತಿಗಾಗಿ ಮರದ ಆಮೆಯನ್ನು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಕಲ್ಲಿನ ಆಮೆಗೆ ನೈಋತ್ಯ ದಿಕ್ಕು ಉತ್ತಮವಾಗಿದ್ದು ಇದು ಆರ್ಥಿಕ ಸ್ಥಿರತೆ ನೀಡುತ್ತದೆ. ಇನ್ನು ಸಂಪತ್ತು ಹೆಚ್ಚಾಗಲು ಆಗ್ನೇಯದಲ್ಲಿ ಸೆರಾಮಿಕ್ ಆಮೆಯನ್ನು ಹಾಗೂ ಅದೃಷ್ಟಕ್ಕಾಗಿ ಈಶಾನ್ಯದಲ್ಲಿ ಮಣ್ಣಿನ ಆಮೆಯನ್ನು ಇರಿಸಬೇಕು.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಆಮೆ ಇಡುವಾಗ ಪಾಲಿಸಬೇಕಾದ ಮುಖ್ಯ ನಿಯಮಗಳು:

ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸುವಾಗ ಕೆಲವು ಸರಳ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ಆಮೆಯ ಮುಖವು ಯಾವಾಗಲೂ ಪೂರ್ವ ದಿಕ್ಕಿಗೆ (ಕೆಲವೊಮ್ಮೆ ಉತ್ತರಕ್ಕೂ ಇಡಬಹುದು) ಮುಖ ಮಾಡಿರುವಂತೆ ನೋಡಿಕೊಳ್ಳಿ. ಆಮೆಯನ್ನು ಎಂದಿಗೂ ಬರಿ ನೆಲದ ಮೇಲೆ ನೇರವಾಗಿ ಇಡಬಾರದು; ಬದಲಿಗೆ ಒಂದು ಗಾಜಿನ ಅಥವಾ ಲೋಹದ ತಟ್ಟೆಯಲ್ಲಿ ನೀರು ಮತ್ತು ವರ್ಣರಂಜಿತ ಕಲ್ಲುಗಳನ್ನು ಹಾಕಿ ಅದರ ಮಧ್ಯದಲ್ಲಿ ಆಮೆಯನ್ನು ಇರಿಸಬೇಕು, ಇದು ಸಕಾರಾತ್ಮಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಮನೆಯ ಮುಖ್ಯ ಪ್ರವೇಶದ್ವಾರದ ಬಳಿ ಆಮೆಯನ್ನು ಇಡುವುದರಿಂದ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿದಂತೆ ತಡೆಯುತ್ತದೆ. ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಆಮೆಯನ್ನು ಮನೆಗೆ ತರಲು ಶುಭ ದಿನಗಳಾಗಿದ್ದು, ಜ್ಯೋತಿಷ್ಯದ ಪ್ರಕಾರ ಆಮೆ ಉಂಗುರ ಧರಿಸುವುದರಿಂದಲೂ ಅದೃಷ್ಟ ಒಲಿಯುತ್ತದೆ ಎಂದು ನಂಬಲಾಗಿದೆ.

ಜೀವಂತ ಆಮೆಯನ್ನು ಸಾಕುವ ಮುನ್ನ ಗಮನಿಸಿ:

ಒಂದು ವೇಳೆ ನೀವು ಕೃತಕ ಪ್ರತಿಮೆಗಳ ಬದಲಿಗೆ ನಿಜವಾದ ಜೀವಂತ ಆಮೆಯನ್ನು ಮನೆಯಲ್ಲಿ ಸಾಕಲು ಬಯಸಿದರೆ, ಅದಕ್ಕೆ ಹೆಚ್ಚಿನ ಜವಾಬ್ದಾರಿ ಬೇಕಾಗುತ್ತದೆ. ಜೀವಂತ ಆಮೆಯನ್ನು ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ, ಅದಕ್ಕೆ ಸೂಕ್ತವಾದ ಆವಾಸಸ್ಥಾನ ಮತ್ತು ಸರಿಯಾದ ಆರೈಕೆಯನ್ನು ಒದಗಿಸಬೇಕಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಒಂದು ವೇಳೆ ನಿಮಗೆ ಆಮೆಯ ಸರಿಯಾದ ಆರೈಕೆ ಮತ್ತು ಪೋಷಣೆ ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಆಟಿಕೆ ಅಥವಾ ಲೋಹದ ಆಮೆಯನ್ನೇ ಇಟ್ಟುಕೊಳ್ಳುವುದು ಅತ್ಯಂತ ಸೂಕ್ತ ಮತ್ತು ಶ್ರೇಯಸ್ಕರ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL ಫೈನಲ್​ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ! – Kannada News | IPL 2026 Final: PCB Chief Mohsin Naqvi Invited!

ಭಾರತ ಮತ್ತು ಪಾಕಿಸ್ತಾನ್ ನಡುವೆ ಕ್ರೀಡಾ ಸಂಬಂಧಗಳಲ್ಲಿ ದೀರ್ಘಕಾಲದ ಉದ್ವಿಗ್ನತೆ ಮುಂದುವರಿದಿದ್ದರೂ, ಒಂದು ಅಚ್ಚರಿಯ ಮತ್ತು ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಭಾರತದಲ್ಲಿ ನಡೆಯಲಿರುವ ಐಪಿಎಲ್ 2026ರ ಫೈನಲ್ ಪಂದ್ಯ ಹಾಗೂ ಐಸಿಸಿ (ICC) ಬೋರ್ಡ್ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ಲಭಿಸಿದೆ ಎಂದು ವರದಿಯಾಗಿವೆ.

ಐಸಿಸಿ ಸಭೆ ಮತ್ತು ಐಪಿಎಲ್ ಫೈನಲ್:

ಮೇ 30 ಮತ್ತು 31 ರಂದು ಭಾರತದ ಅಹಮದಾಬಾದ್‌ನಲ್ಲಿ ಅಂತರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ತ್ರೈಮಾಸಿಕ ಸಭೆ ನಡೆಯಲಿದೆ. ಇದೇ ವೇಳೆ ಮೇ 31 ರಂದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯವೂ ಜರುಗಲಿದೆ. ಈ ಎರಡೂ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಮೊಹ್ಸಿನ್ ನಖ್ವಿ ಅವರಿಗೆ ಆಮಂತ್ರಣ ನೀಡಲಾಗಿದೆ ಎಂದು ಪಾಕ್ ಚಾನೆಲ್ ಜಿಯೋ ನ್ಯೂಸ್ ವರದಿ ಮಾಡಿದೆ.

ಗ್ರೀನ್ ಸಿಗ್ನಲ್‌ಗಾಗಿ ಕಾಯುವಿಕೆ:

ಮೊಹ್ಸಿನ್ ನಖ್ವಿ ಅವರು ಕೇವಲ ಪಿಸಿಬಿ ಅಧ್ಯಕ್ಷರಷ್ಟೇ ಅಲ್ಲದೆ, ಪಾಕಿಸ್ತಾನದ ಹಾಲಿ ಗೃಹ ಸಚಿವರೂ ಆಗಿರುವುದರಿಂದ ಅವರ ಭಾರತ ಪ್ರವಾಸ ರಾಜತಾಂತ್ರಿಕವಾಗಿ ಅತ್ಯಂತ ಸೂಕ್ಷ್ಮವಾಗಿದೆ. ಮೂಲಗಳ ಪ್ರಕಾರ, ಅವರು ಭಾರತಕ್ಕೆ ಪ್ರಯಾಣ ಬೆಳೆಸಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ತೆಗೆದುಕೊಳ್ಳಲಿದ್ದಾರೆ. ಸರ್ಕಾರದ ಅನುಮತಿ ಸಿಕ್ಕರೆ ಮಾತ್ರ ನಖ್ವಿ ಭಾರತಕ್ಕೆ ಆಗಮಿಸಲಿದ್ದಾರೆ.

ರಾಜತಾಂತ್ರಿಕವಾಗಿ ಈ ಆಹ್ವಾನ ಏಕೆ ಮುಖ್ಯ?

  • ದ್ವಿಪಕ್ಷೀಯ ಸರಣಿಗಳಿಲ್ಲ: ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ್ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆಯುತ್ತಿಲ್ಲ. ಐಪಿಎಲ್‌ನಲ್ಲೂ ಪಾಕ್ ಆಟಗಾರರಿಗೆ ಅವಕಾಶವಿಲ್ಲ.
  •  ನಖ್ವಿ ಅವರ ಹೆಚ್ಚುವರಿ ಜವಾಬ್ದಾರಿ: ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಐಸಿಸಿ ಸಭೆಯಲ್ಲಿ ಅವರ ಉಪಸ್ಥಿತಿ ಮುಖ್ಯ ಎನ್ನಲಾಗಿದೆ.
  • ಕ್ರಿಕೆಟ್ ರಾಜತಾಂತ್ರಿಕತೆ: ಈ ಆಹ್ವಾನವು ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ದೃಷ್ಟಿಯಿಂದ ಸಣ್ಣ ಆಶಾಕಿರಣವಾಗಬಹುದು ಎಂದು ವಿಶ್ಲೇಷಕರು ಭಾವಿಸಿದ್ದಾರೆ.

ನಖ್ವಿ ಮತ್ತು ವಿವಾದ!

ಮೊಹ್ಸಿನ್ ನಖ್ವಿ ಮತ್ತು ಏಷ್ಯಾಕಪ್ ವಿವಾದವು ಭಾರತ ಹಾಗೂ ಪಾಕಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅತಿರೇಕದ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಸೆಪ್ಟೆಂಬರ್ 2025 ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ವೇಳೆ ಈ ಹೈ-ಡ್ರಾಮಾ ನಡೆದಿತ್ತು.

ಟೂರ್ನಿಯ ಆರಂಭದಲ್ಲೇ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು (ಹಸ್ತಲಾಘವ) ನಿರಾಕರಿಸಿದ್ದರು. ಭಾರತದಲ್ಲಿ ನಡೆದ ಉಗ್ರಗಾಮಿ ದಾಳಿಯ ಸಂತ್ರಸ್ತರ ಪರವಾಗಿ ಮತ್ತು ಭಾರತ ಸರ್ಕಾರದ ನೀತಿಯನ್ನು ಬೆಂಬಲಿಸಿ ಭಾರತ ಈ ನಿರ್ಧಾರ ಕೈಗೊಂಡಿತ್ತು.

ಇದರಿಂದ ಕೆರಳಿದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆದ ಮೊಹ್ಸಿನ್ ನಖ್ವಿ, “ಭಾರತವು ಕ್ರೀಡೆಯಲ್ಲಿ ರಾಜಕೀಯ ತರುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಕಿಡಿಕಾರಿದ್ದರು ಮತ್ತು ಮ್ಯಾಚ್ ರೆಫರಿಯನ್ನು ಬದಲಾಯಿಸುವಂತೆ ಹಠ ಹಿಡಿದಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 28, 2025 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದರೆ, ಬಹುಮಾನ ವಿತರಣಾ ಸಮಾರಂಭದ ವೇಳೆ ಭಾರತ ತಂಡವು ಎಸಿಸಿ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಂದ ವಿಜೇತರ ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ಸಂಪೂರ್ಣವಾಗಿ ನಿರಾಕರಿಸಿದ್ದರು. ಅಲ್ಲದೆ ಭಾರತ ತಂಡವು ಬೇರೆ ಯಾವುದೇ ತಟಸ್ಥ ಅಧಿಕಾರಿಯಿಂದ ಟ್ರೋಫಿ ಪಡೆಯಲು ಸಿದ್ಧವಿರುವುದಾಗಿ ತಿಳಿಸಿತ್ತು.

ಆದರೆ, ಪ್ರತಿಷ್ಠೆಗೆ ಬಿದ್ದ ಮೊಹ್ಸಿನ್ ನಖ್ವಿ, ತಾವೇ ಟ್ರೋಫಿ ನೀಡುವುದಾಗಿ ಪಟ್ಟು ಹಿಡಿದರು. ಗಂಟೆಗಳ ಕಾಲ ಗೊಂದಲ ಮುಂದುವರಿದು, ಅಂತಿಮವಾಗಿ ಟ್ರೋಫಿ ವಿತರಿಸದೆಯೇ ಸಮಾರಂಭ ಮುಕ್ತಾಯವಾಯಿತು. ಅಷ್ಟಕ್ಕೇ ನಿಲ್ಲದ ನಖ್ವಿ, ವಿಜೇತ ತಂಡವಾದ ಭಾರತಕ್ಕೆ ಸಿಗಬೇಕಿದ್ದ ಏಷ್ಯಾಕಪ್ ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್ ರೂಮ್​ಗೆ ಕೊಂಡೊಯ್ದಿದ್ದರು. ಇದರಿಂದ ಭಾರತ ತಂಡ ಟ್ರೋಫಿ ಇಲ್ಲದೆಯೇ ಸಂಭ್ರಮಿಸಬೇಕಾಗಿ ಬಂತು.

ಇದನ್ನೂ ಓದಿ: RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

ಬಳಿಕ ಬಿಸಿಸಿಐ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಧಿಕೃತ ಪತ್ರ ಬರೆದಾಗ, ನಖ್ವಿ ಹೊಸ ವಿವಾದ ಸೃಷ್ಟಿಸಿದರು. “ಭಾರತಕ್ಕೆ ಟ್ರೋಫಿ ಬೇಕಿದ್ದರೆ ಅವರ ನಾಯಕ ಸೂರ್ಯಕುಮಾರ್ ಯಾದವ್ ದುಬೈನಲ್ಲಿರುವ ನಮ್ಮ ಎಸಿಸಿ ಕಚೇರಿಗೆ ಖುದ್ದಾಗಿ ಬಂದು ನನ್ನ ಕೈಯಿಂದಲೇ ಪಡೆದುಕೊಂಡು ಹೋಗಲಿ, ನಾವು ಕೊರಿಯರ್ ಮಾಡುವುದಿಲ್ಲ” ಎಂದು ಷರತ್ತು ವಿಧಿಸಿದರು. ಇದನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿತು. ಇದಾಗ್ಯೂ ಮೊಹ್ಸಿನ್ ನಖ್ವಿ ಟೀಮ್ ಇಂಡಿಯಾಗೆ ಏಷ್ಯಾಕಪ್ ಹಸ್ತಾಂತರಿಸಿರಲಿಲ್ಲ.

ಈ ಎಲ್ಲಾ ಕಹಿ ಘಟನೆಗಳ ನಡುವೆ ಇದೀಗ ಮೊಹ್ಸಿನ್ ನಖ್ವಿ ಅವರಿಗೆ ಐಪಿಎಲ್​ ಫೈನಲ್ ವೀಕ್ಷಿಸಲು ಆಹ್ವಾನ ನೀಡಲಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇದು ಕೇವಲ ಐಸಿಸಿ ಸಭೆಯ ಶಿಷ್ಟಾಚಾರದ ಭಾಗವೋ ಅಥವಾ ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧದ ಉತ್ತಮಗೊಳಿಸಲಿರುವ ತಂತ್ರವೋ ಎಂಬುದನ್ನು ಕಾಲವೇ ಉತ್ತರಿಸಲಿದೆ.

Source link

2 ಸಾವಿರ ಕೋಟಿ ರೂ. ನಕಲಿ ಐಟಿಸಿ ಹಗರಣ ; ಸಚಿವ ಜಮೀರ್‌ ಖಾನ್‌ಗೆ ಸೇರಿದ ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್! – Kannada News | Fake ITC Bill Case: Commercial Tax Department Issues Notice to National Travels owned by Zameer Khan in Rs 2,000 Crore Scam

2 ಸಾವಿರ ಕೋಟಿ ರೂ. ನಕಲಿ ಐಟಿಸಿ ಹಗರಣ ; ಸಚಿವ ಜಮೀರ್‌ ಖಾನ್‌ಗೆ ಸೇರಿದ ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್!

ಬೆಂಗಳೂರು, ಮೇ 16: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಹಗರಣದ ತನಿಖೆಯ ಭಾಗವಾಗಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Khan) ಅವರಿಗೆ ಸೇರಿದ್ದು ಎನ್ನಲಾದ ಪ್ರಸಿದ್ಧ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಕಲಿ ಬಿಲ್‌ಗಳ ಸಾಗಾಟಕ್ಕೆ ನ್ಯಾಷನಲ್ ಟ್ರಾವೆಲ್ಸ್‌ನ ಲಾರಿಗಳನ್ನು ಬಳಸಿಕೊಳ್ಳಲಾದ ಆರೋಪದ ಮೇಲೆ ಈ ನೋಟಿಸ್ ನೀಡಲಾಗಿದೆ.

ಮುಖ್ಯಾಂಶಗಳು

  • ವಾಣಿಜ್ಯ ತೆರಿಗೆ ಇಲಾಖೆಯಿಂದ ಎರಡು ಸಾವಿರ ಕೋಟಿಯ ನಕಲಿ ಐಟಿಸಿ ಹಗರಣ ಪತ್ತೆ.
  • ನಕಲಿ ಬಿಲ್ ಸಾಗಾಟದ ತನಿಖೆಗಾಗಿ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಗೆ ನೋಟಿಸ್ ಜಾರಿ.
  • ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಜನ ವಂಚಕರನ್ನು ಬಂಧಿಸಿದ ಅಧಿಕಾರಿಗಳು.

ಏನಿದು ನಕಲಿ ಐಟಿಸಿ ಬಿಲ್ ದಂಧೆ?

ಮಹಾರಾಷ್ಟ್ರದ ಸ್ಕ್ರಾಪ್ (ಗುಜರಿ ವಸ್ತುಗಳು) ದಲ್ಲಾಳಿಗಳು ತೆರಿಗೆ ವಂಚಿಸುವ ಸಲುವಾಗಿ ಕರ್ನಾಟಕದಿಂದ ಸ್ಕ್ರ್ಯಾಪ್ ಆಮದು ಮಾಡಿಕೊಳ್ಳುತ್ತಿರುವಂತೆ ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸುತ್ತಿದ್ದರು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹೆಚ್ಚು ಬೇಡಿಕೆಯಿರುವ ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನಗಳನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ನ್ಯಾಷನಲ್ ಟ್ರಾವೆಲ್ಸ್ ಗುತ್ತಿಗೆ ಪಡೆದಿದ್ದ ಲಾರಿಗಳೂ ಸೇರಿದಂತೆ ತಿಂಗಳಿಗೆ ಸುಮಾರು 20-25 ಭಾರಿ ಸರಕು ಸಾಗಣೆ (HGV) ವಾಹನಗಳಲ್ಲಿ ಸ್ಕ್ರ್ಯಾಪ್ ರವಾನೆಯಾಗುತ್ತಿದೆ ಎಂದು ಸುಳ್ಳು ‘ಇ-ವೇ ಬಿಲ್’ ಸೃಷ್ಟಿಸಲಾಗುತ್ತಿತ್ತು. ಆದರೆ ಭೌತಿಕವಾಗಿ ಈ ವಾಹನಗಳಲ್ಲಿ ಯಾವುದೇ ಸ್ಕ್ರ್ಯಾಪ್ ಇರುತ್ತಿರಲಿಲ್ಲ. ಕೇವಲ ನಕಲಿ ಬಿಲ್‌ಗಳು ಮಾತ್ರ ಹಂತ ಹಂತವಾಗಿ ಹಸ್ತಾಂತರಗೊಂಡು ಮಹಾರಾಷ್ಟ್ರ ತಲುಪುತ್ತಿದ್ದವು.

ಹಗರಣ ಬೆಳಕಿಗೆ ಬಂದಿದ್ದು ಹೇಗೆ?

ಬೆಂಗಳೂರಿನಲ್ಲಿ ಟಂಗ್‌ಸ್ಟನ್ ಸ್ಕ್ರ್ಯಾಪ್ ಅಷ್ಟಾಗಿ ಸಿಗದೇ ಇದ್ದರೂ, ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ರಫ್ತಾಗಿರುವ ದಾಖಲೆಗಳು ಸೃಷ್ಟಿಯಾಗಿದ್ದವು. ಸುಮಾರು 217 ಕೋಟಿ ರೂ. ವಹಿವಾಟು ನಡೆಸಿ, 39 ಕೋಟಿ ರೂ. ತೆರಿಗೆ ಬಿಲ್ ಸೃಷ್ಟಿಸಿದ್ದನ್ನು ಗಮನಿಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಇದರ ಬೆನ್ನುಬಿದ್ದಾಗ ಇಡೀ ನೆಟ್‌ವರ್ಕ್ ಬಯಲಾಗಿದೆ.

127 ನಕಲಿ ಸಂಸ್ಥೆಗಳ ಜಾಲ: ಇಬ್ಬರ ಬಂಧನ

ಈ ಜಾಲಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಐವರನ್ನು ಬಂಧಿಸಲಾಗಿತ್ತು. ಸದ್ಯ ತನಿಖೆ ಮುಂದುವರಿಸಿರುವ ಅಧಿಕಾರಿಗಳು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ‘ಎಸ್‌ಕೆಎಸ್ ಟ್ರೇಡರ್ಸ್’ನ ಸಲೀಮುಲ್ಲಾ ಹಾಗೂ ‘ಕೆಎಚ್ ಇ-ವೇಸ್ಟ್ ಸೈಕ್ಲರ್’ನ ಹಸನ್ ಬೇಗ್ ಬಂಧಿತರು. ಈ ಎರಡು ಸಂಸ್ಥೆಗಳು ಬರೋಬ್ಬರಿ 2,384 ಕೋಟಿ ರೂ. ವಹಿವಾಟು ನಡೆಸಿ, 594 ಕೋಟಿ ರೂ. ಐಟಿಸಿ ಬಿಲ್ ಪಡೆದಿರುವುದು ದೃಢಪಟ್ಟಿದೆ. ಅದರಲ್ಲಿಯೂ ಎಸ್‌ಕೆಎಸ್ ಟ್ರೇಡರ್ಸ್‌ನ ವಹಿವಾಟು ಕೇವಲ ಮೂರು ವರ್ಷಗಳಲ್ಲಿ 50 ಕೋಟಿಯಿಂದ 945 ಕೋಟಿ ರೂ.ಗೆ ಏರಿಕೆಯಾಗಿತ್ತು.

ಆದರೆ ಈ ಸಂಸ್ಥೆಗಳಲ್ಲಿ ಯಾವುದೇ ಸರಕು ಸಾಗಾಟವಾಗಲಿ ಅಥವಾ ವ್ಯಕ್ತಿಗಳಾಗಲಿ ಇರಲಿಲ್ಲ. ಒಟ್ಟಾರೆ ತನಿಖೆಯಲ್ಲಿ ಇಂತಹ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಪತ್ತೆಯಾಗಿದ್ದು, ಸದ್ಯ ಕೋರ್ಟ್‌ ಆದೇಶದ ಮೇರೆಗೆ 7 ಜನರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ! – Kannada News | “Decide if You Want to Be on Map”: Army Chief Gen Upendra Dwivedi’s Stern Warning to Terror State Pakistan

ನವದೆಹಲಿ, ಮೇ 16: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತೀಯ ಸೇನಾ ಮುಖ್ಯಸ್ಥ (Army Chief) ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ನೆರೆರಾಷ್ಟ್ರಕ್ಕೆ ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. ದೆಹಲಿಯಲ್ಲಿ ನಡೆದ ‘ಸೇನಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಮತ್ತು ಭಾರತದ ವಿರುದ್ಧ ಸಂಚು ರೂಪಿಸುವುದನ್ನು ಮುಂದುವರಿಸುವ ಮುನ್ನ ಜಗತ್ತಿನ ಭೂಪಟ (Geography) ಮತ್ತು ಇತಿಹಾಸದ ಭಾಗವಾಗಿ ಉಳಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿಕೊಳ್ಳಲಿ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಸದಾ ಸೈನಿಕರನ್ನು ಪ್ರಚೋದಿಸುವ ಹಾಗೂ ಗಡಿಯಲ್ಲಿ ಉಗ್ರರನ್ನು ನುಸುಳಿಸುವ ಪಾಕಿಸ್ತಾನದ ಕುತಂತ್ರಕ್ಕೆ ಭಾರತ ಇನ್ನು ಮುಂದೆ ಮೌನವಾಗಿ ಕೂರುವುದಿಲ್ಲ, ಬದಲಿಗೆ ಅತ್ಯಂತ ಪ್ರಖರ ಪ್ರತ್ಯುತ್ತರ ನೀಡಲಿದೆ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

(ವಿಡಿಯೋ ಕೃಪೆ: ಪಿಟಿಐ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆತನಿಂದ ಇನ್ನು ಯಾರಿಗೂ ಭಯವಿಲ್ಲ; ಐಸಿಸ್ ನಾಯಕ ಅಬು ಬಿಲಾಲ್ ಹತ್ಯೆಯಾಗಿದೆ ಎಂದ ಟ್ರಂಪ್ – Kannada News | He will not terrorise us anymore Donald Trump says Top ISIS leader Abu Bilal killed

ವಾಷಿಂಗ್ಟನ್, ಮೇ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಮೆರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಸೇರಿ ಐಸಿಸ್‌ನ ಎರಡನೇ ಕಮಾಂಡ್ ಆಗಿರುವ ಅಬು-ಬಿಲಾಲ್ ಅಲ್-ಮಿನುಕಿಯನ್ನು ಹತ್ಯೆ ಮಾಡಿವೆ ಎಂದು ಘೋಷಿಸಿದ್ದಾರೆ. ಅಬು ಬಿಲಾಲ್ ಆಫ್ರಿಕಾದಲ್ಲಿ ಅಡಗಿಕೊಳ್ಳಬಹುದೆಂದು ನಾನು ಭಾವಿಸಿದ್ದೆ. ಆದರೆ ಆತ ಏನು ಮಾಡುತ್ತಿದ್ದಾರೆಂದು ಪೂರ್ತಿ ಮಾಹಿತಿ ನೀಡುವ ಮೂಲಗಳು ನಮ್ಮಲ್ಲಿವೆ ಎಂದು ಅವರಿಗೆ ತಿಳಿದಿರಲಿಲ್ಲ. ಇನ್ನು ಯಾರನ್ನೂ ಆ ಉಗ್ರ ಭಯಪಡಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ನಿನ್ನೆ ರಾತ್ರಿ (ಅಮೆರಿಕದ ಕಾಲಮಾನ ಪ್ರಕಾರ) ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, “ಇಂದು ರಾತ್ರಿ ನನ್ನ ಸೂಚನೆಯ ಮೇರೆಗೆ ಧೈರ್ಯಶಾಲಿಯಾದ ಅಮೇರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಯುದ್ಧಭೂಮಿಯಿಂದ ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ಹತ್ಯೆ ಮಾಡಲು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದವು” ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: 10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್; ವಿಮಾನ ನಿಲ್ದಾಣದಲ್ಲಿ ಯುಎಸ್ ಅಧ್ಯಕ್ಷರಿಗೆ ಭರ್ಜರಿ ಸ್ವಾಗತ

ಪಶ್ಚಿಮ ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರಮುಖ ಜಾಲವನ್ನು ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗಿನ ಸಂಬಂಧಕ್ಕಾಗಿ ಅಲ್-ಮಿನುಕಿಯನ್ನು 2023ರಲ್ಲಿ ಯುಎಸ್ ನಿರ್ಬಂಧಗಳ ಅಡಿಯಲ್ಲಿ ಇರಿಸಲಾಗಿತ್ತು. “ಅವರು ಇನ್ನು ಮುಂದೆ ಆಫ್ರಿಕಾದ ಜನರನ್ನು ಭಯಭೀತಗೊಳಿಸುವುದಿಲ್ಲ ಅಥವಾ ಅಮೆರಿಕನ್ನರನ್ನು ಗುರಿಯಾಗಿಸಲು ಕಾರ್ಯಾಚರಣೆಗಳನ್ನು ಪ್ಲಾನ್ ಮಾಡಲು ಸಹಾಯ ಮಾಡುವುದಿಲ್ಲ. ಆತನ ಹತ್ಯೆಯಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.

2023ರಲ್ಲಿ ಅಮೆರಿಕವು ಅಬು-ಬಿಲಾಲ್ ಅಲ್-ಮಿನುಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಿತು. ಜೂನ್ 2023ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವಧಿಯಲ್ಲಿ ಅಮೆರಿಕ ಅಬು-ಬಿಲಾಲ್ ಅಲ್-ಮಿನುಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಅಬು ಬಕರ್ ಮುಹಮ್ಮದ್ ಅಲ್-ಮೈನುಕಿ ಎಂದೂ ಕರೆಯಲ್ಪಡುವ ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ನೆಲೆಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆದರ್‌ಲ್ಯಾಂಡ್ಸ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ – Kannada News | PM Narendra Modi visits Netherlands to meet Dutch PM and King Willem Alexander in Amsterdam

ನವದೆಹಲಿ, ಮೇ 16: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಭಾಗವಾಗಿ ಪ್ರಧಾನಿ ಮೋದಿ ಆಮ್ಸ್ಟರ್‌ಡ್ಯಾಮ್‌ಗೆ ತೆರಳಿದ್ದಾರೆ. ಆಮ್ಸ್ಟರ್‌ಡ್ಯಾಮ್‌ಗೆ ತೆರಳಿದ ನಂತರ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, “ಆಮ್ಸ್ಟರ್‌ಡ್ಯಾಮ್‌ನಲ್ಲಿ ಬಂದಿಳಿದಿದ್ದೇನೆ. ಭಾರತ ಮತ್ತು ಇಯು ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಉತ್ತೇಜನವನ್ನು ನೀಡಿರುವ ಸಮಯದಲ್ಲಿ ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ್ದೇನೆ. ಇದು ಸೆಮಿಕಂಡಕ್ಟರ್, ನೀರು, ಶುದ್ಧ ಇಂಧನ ಮತ್ತು ಇತರ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಂಬಂಧಗಳನ್ನು ಬಲಪಡಿಸಲು ಅವಕಾಶವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿನಿಮಾ ಕತೆಯನ್ನೂ ಮೀರಿಸುವಂತಿದೆ ಈ ರಿಯಲ್ ಸ್ಟೋರಿ: ಇನ್ನೊಬ್ಬನ ಹೆಸರಲ್ಲಿ 40 ವರ್ಷ ಬೆಸ್ಕಾಂ ಕೆಲಸ ಮಾಡಿದ ಕಿಲಾಡಿ! – Kannada News | Filmy Twist in Bengaluru: Man Uses Stranger’s Identity to Work 40 Years in BESCOM; Busted Post Retirement

ಸಾಂದರ್ಭಿಕ ಚಿತ್ರ (ಎಐ)Image Credit source: MediaForge AI

ಬೆಂಗಳೂರು, ಮೇ 16: ಒಬ್ಬನ ಐಡೆಂಟಿಟಿಯನ್ನು ಮತ್ತೊಬ್ಬ ಬಳಸಿಕೊಂಡ ಕೆಲವು ಕತೆಗಳು ಸಿನಿಮಾ ಆಗಿವೆ. ತೆಲುಗಿನ ‘ಅತಡು’ ಸಿನಿಮಾದಲ್ಲಿ ನಾಯಕ ಮಹೇಶ್ ಬಾಬು ಪೊಲೀಸರಿಂದ ಪಾರಾಗಲು, ವರ್ಷಗಳ ಬಳಿಕ ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬನ ಐಡೆಂಟಿಟಿಯನ್ನು ಬಳಸಿಕೊಂಡು ಕುಟುಂಬ ಒಂದನ್ನು ಸೇರಿಕೊಳ್ಳುತ್ತಾನೆ. ಅದೇ ‘ತ್ರಿ ಇಡಿಯಟ್ಸ್’ನಲ್ಲಿ ಆಮಿರ್ ಖಾನ್ ತನ್ನ ಮಾಲೀಕನ ಮಗನ ಹೆಸರು, ಗುರುತು ಬಳಸಿಕೊಂಡು ಎಂಜಿನಿಯರಿಂಗ್ ಕಾಲೇಜು ಸೇರುತ್ತಾರೆ. ಇದೀಗ ಇಂಥದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ (Bengaluru) ರಿಯಲ್ ಆಗಿ ನಡೆದಿದ್ದು, ಸುಮಾರು 40 ವರ್ಷಗಳ ನಂತರ ಬೆಳಕಿಗೆ ಬಂದಿದೆ. ಈ ಅಪ್ಪಟ ಸಿನಿಮಾ ಶೈಲಿಯ ಮಹಾ ವಂಚನೆಯ ಪ್ರಕರಣ ಸದ್ಯ ರಾಜಾಜಿನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ತನಿಖೆ ನಡೆಯುತ್ತಿದೆ.

ಫ್ಲ್ಯಾಶ್‌ಬ್ಯಾಕ್: ಬಿದ್ದ ಪ್ರಮಾಣಪತ್ರ, ಬದಲಾದ ವಿಧಿಬರಹ!

ಈ ಅಸಲಿ ಕಥೆ ಶುರುವಾಗುವುದು 1982 ರಲ್ಲಿ. ಮಂಡ್ಯ ಜಿಲ್ಲೆ ಮಳವಳ್ಳಿಯ ಎಂ. ರಾಚಯ್ಯ ಎಂಬ ಯುವಕ ಶಿವಮೊಗ್ಗದ ಕರ್ನಾಟಕ ವಿದ್ಯುತ್ ಮಂಡಳಿಯ ಗ್ಯಾಂಗ್‌ಮನ್ ಹುದ್ದೆಯ ಇಂಟರ್‌ವ್ಯೂಗೆ ಹೋಗಿರುತ್ತಾರೆ. ಆದರೆ ಕಾರಣಾಂತರಗಳಿಂದ ಅಂದು ಸಂದರ್ಶನ ರದ್ದಾಗುತ್ತದೆ. ನಿರಾಸೆಯಿಂದ ವಾಪಸ್ ಹೋಗುವಾಗ ರಾಚಯ್ಯ ತಮ್ಮ ಮಾರ್ಕ್ಸ್‌ಕಾರ್ಡ್, ಪ್ರಮಾಣಪತ್ರವನ್ನು ಅಲ್ಲೇ ಬೀಳಿಸಿಕೊಂಡು ಹೋಗಿರುತ್ತಾರೆ. ಸಿನಿಮಾ ಟ್ವಿಸ್ಟ್ ಅಂದರೆ, ಅದೇ ಸಂದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಬೊಮ್ಮೇಗೌಡನ ಕೈಗೆ ಈ ದಾಖಲೆ ಸಿಗುತ್ತದೆ. ಅಷ್ಟೇ, ಬೊಮ್ಮೇಗೌಡ ತಾನೇ ‘ರಾಚಯ್ಯ’ ಎಂದು ಸೋಗು ಹಾಕಿ, ಆ ನಕಲಿ ಐಡೆಂಟಿಟಿ ಮೂಲಕವೇ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ!

ಸಂಬಳ ಎಣಿಸಿ, ಕೋರ್ಟ್‌ನಲ್ಲೇ ಟ್ವಿಸ್ಟ್ ಕೊಟ್ಟ ಅಸಾಮಿ!

ಅಸಲಿ ರಾಚಯ್ಯ ಎಲ್ಲೋ ಕೂಲಿ ನಾಲಿ ಮಾಡುತ್ತಿದ್ದರೆ, ಇತ್ತ ಬೊಮ್ಮೇಗೌಡ ಮಾತ್ರ ‘ರಾಚಯ್ಯ’ನ ಹೆಸರಲ್ಲೇ ಬೆಸ್ಕಾಂನಲ್ಲಿ ಹಂತ ಹಂತವಾಗಿ ಪ್ರಮೋಷನ್ ಪಡೆಯುತ್ತಾ ಸರ್ಕಾರಿ ಸಂಬಳ ಎಣಿಸುತ್ತಾನೆ. ಕತೆಗೆ ಮತ್ತೊಂದು ರೋಚಕ ತಿರುವು ಸಿಗುವುದು 2003 ರಲ್ಲಿ. ಇಷ್ಟು ವರ್ಷ ರಾಚಯ್ಯನಾಗಿ ಬದುಕಿದ ಬೊಮ್ಮೇಗೌಡ, ಕೋರ್ಟ್‌ನಿಂದ ಅಫಿಡವಿಟ್ ತಂದು ಅಧಿಕೃತವಾಗಿ ತನ್ನ ಹೆಸರನ್ನು ಬೊಮ್ಮೇಗೌಡ ಎಂದೇ ಬದಲಿಸಿಕೊಳ್ಳುತ್ತಾನೆ! ಇಲಾಖೆಯ ಕಣ್ಣಿಗೆ ಮಣ್ಣೆರಚಿ ಹತ್ತಾರು ವರ್ಷಗಳ ಕಾಲ ರಹಸ್ಯವನ್ನು ಕಾಪಾಡಿಕೊಳ್ಳುತ್ತಾನೆ.

ಬ್ಲ್ಯಾಕ್‌ಮೇಲ್, ರಾಜಿ ಸಂಧಾನ ಮತ್ತು ಕ್ಲೈಮ್ಯಾಕ್ಸ್ ಪ್ಲಾಪ್

ಸುಮಾರು 37 ವರ್ಷಗಳ ಬಳಿಕ, ಅಂದರೆ 2019 ರಲ್ಲಿ ಅಸಲಿ ರಾಚಯ್ಯನಿಗೆ ತನ್ನ ಹೆಸರಲ್ಲಿ ಬೊಮ್ಮೇಗೌಡ ಬೆಸ್ಕಾಂನಲ್ಲಿ ಹಿರಿಯ ಶ್ರೇಣಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಕಹಿ ಸತ್ಯ ಅದ್ಹೇಗೋ ಗೊತ್ತಾಗುತ್ತದೆ. ಜೈಲಿಗೆ ಕಳುಹಿಸುವುದಾಗಿ ಹೆದರಿಸಿದಾಗ ಕಂಗಾಲಾದ ಬೊಮ್ಮೇಗೌಡ, ವರ್ಷಕ್ಕೆ 2 ರಿಂದ 3 ಲಕ್ಷ ರೂ. ಕೊಡುವುದಾಗಿ ರಾಜಿ ಮಾಡಿಕೊಳ್ಳುತ್ತಾನೆ. 2022 ರಲ್ಲಿ ನಿವೃತ್ತಿಯಾದಾಗ ಬಂದ ಸೆಟಲ್‌ಮೆಂಟ್ ಹಣದಲ್ಲಿ ಭರ್ಜರಿ 10 ಲಕ್ಷ ರೂಪಾಯಿಯನ್ನು ನಿವೃತ್ತ ಎಂಜಿನಿಯರ್ ಸುಭಾಷ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಅಸಲಿ ರಾಚಯ್ಯನಿಗೆ ತಲುಪಿಸುತ್ತಾನೆ.

ಆದರೆ, ದುರಾಶೆಯೇ ಈ ಇಡೀ ಅಸಲಿ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಉಲ್ಟಾ ಮಾಡಿದೆ. ಹತ್ತು ಲಕ್ಷ ರೂಪಾಯಿ ಜೇಬಿಗೆ ಇಳಿಸಿದ ಮೇಲೂ ಅಸಲಿ ರಾಚಯ್ಯ, ಬೊಮ್ಮೇಗೌಡನ ಪೆನ್ಷನ್‌ನಲ್ಲೂ ಅರ್ಧ ಪಾಲು ಬೇಕು ಎಂದು ಪಟ್ಟು ಹಿಡಿಯುತ್ತಾನೆ. ಇದಕ್ಕೆ ಬೊಮ್ಮೇಗೌಡ ಒಪ್ಪದಿದ್ದಾಗ, ಸಿಟ್ಟಿಗೆದ್ದ ರಾಚಯ್ಯ ಬೆಸ್ಕಾಂ ವಿಚಕ್ಷಣಾ ದಳಕ್ಕೆ ದೂರು ನೀಡುತ್ತಾನೆ. ಸದ್ಯ ತನಿಖೆಯಲ್ಲಿ ವಂಚನೆ ಸಾಬೀತಾಗಿದ್ದು, ರಾಜಾಜಿನಗರ ಪೊಲೀಸರು ಬೊಮ್ಮೇಗೌಡ, ರಾಚಯ್ಯ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಸುಭಾಷ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ದಾಖಲೆಗಳ ಕ್ರೋಢೀಕರಣ ನಡೆಸುತ್ತಿದ್ದಾರೆ. 40 ವರ್ಷಗಳ ಕಾಲ ನಡೆದ ಈ ಹೈಟೆಕ್ ವಂಚನೆಯ ಆಟ ಕೊನೆಗೂ ಜೈಲಿನ ಕಂಬಿ ಹಿಂದೆ ಮುಕ್ತಾಯವಾಗುವ ಹಂತ ತಲುಪಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಅವರೊಂದಿಗಿನ ಹೋಲಿಕೆಗೆ ಪವನ್ ಕಲ್ಯಾಣ್ ಪ್ರತಿಕ್ರಿಯೆ – Kannada News | Pawan Kalyan talks about Vijay become CM of Tamil Nadu

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ವಿಜಯ್ ಅವರಿಗಿದ್ದ ಭಾರಿ ಜನಪ್ರಿಯತೆ ಮತಗಳಾಗಿ ಪರಿವರ್ತನೆ ಆಗಿದೆ. ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಇರುವಂತೆಯೇ ನಟ ಪವನ್ ಕಲ್ಯಾಣ್ ಅವರಿಗೂ ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ವಿಜಯ್ ಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರೂ ಸಿಎಂ ಆಗಬೇಕು, ಆಗಬಹುದು ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಇದೀಗ ಖುದ್ದು ಪವನ್ ಕಲ್ಯಾಣ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.

ಮಂಗಳಗಿರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ವಿಜಯ್, ತಮಿಳುನಾಡಿನ ಸಿಎಂ ಆದ ಬಗ್ಗೆ ಹಾಗೂ ಅದಾದ ಬಳಿಕ ತಮ್ಮ ಮೇಲೆ ಬರುತ್ತಿರುವ ಒತ್ತಡದ ಬಗ್ಗೆಯೂ ಮಾತನಾಡಿದ್ದಾರೆ. ಪವನ್ ಕಲ್ಯಾಣ್ ಅವರ ಸಹೋದರ ಚಿರಂಜೀವಿ ಅವರು ದಳಪತಿ ವಿಜಯ್ ಅವರೊಟ್ಟಿಗೆ ಇತ್ತೀಚೆಗಷ್ಟೆ ದೂರವಾಣಿ ಮೂಲಕ ಮಾತನಾಡಿದ್ದರು. ಅದರ ಬೆನ್ನಲ್ಲೆ ಇದೀಗ ಪವನ್ ಕಲ್ಯಾಣ್ ಅವರು ವಿಜಯ್ ಬಗ್ಗೆ ಮಾತನಾಡಿದ್ದಾರೆ.

ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್, ವಿಜಯ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, “ತಮಿಳುನಾಡು ಚುನಾವಣೆ ನಡೆದು ಅವರು (ವಿಜಯ್) ಮುಖ್ಯಮಂತ್ರಿಯಾದಾಗಿನಿಂದ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದರು. ಮುಂದುವರಿದು, ‘ನಮ್ಮ ನೆರೆಯ ರಾಜ್ಯದಲ್ಲಿ ನಟರೊಬ್ಬರು ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಯಾಗಿದ್ದಾರೆ. ನಾನು ಕೂಡ ಆಂಧ್ರಪ್ರದೇಶದಲ್ಲಿ ಇದೇ ರೀತಿ ಮಾಡಬೇಕಿತ್ತು ಎಂದು ಅನೇಕರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ’ ಎಂದು ಹೇಳಿದರು.

ಇದನ್ನೂ ಓದಿ:ಪವನ್​ ಕಲ್ಯಾಣ್​ ಜನಸೇನಾ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಪ್ರಾದೇಶಿಕ ಪಕ್ಷದ ಮಾನ್ಯತೆ

ತೆಲುಗಿನ ಗಾದೆಯೊಂದನ್ನು ಹೇಳಿದ ಪವನ್ ಕಲ್ಯಾಣ್ ‘ಊರವರ ಮದುವೆಗೆ, ಇನ್ನಿಲ್ಲದ ಸಡಗರ’ ಎನ್ನುತ್ತಾರಲ್ಲ ಹಾಗೆ. ಇದು ಸಣ್ಣ ಮಕ್ಕಳು ತಮ್ಮ ಕುಟುಂಬದ ಮದುವೆ ಅಲ್ಲದಿದ್ದರೂ ಸುತ್ತಲೂ ಓಡಾಡುವ ಸಡಗರದಂತಿದೆ. ಆಂಧ್ರಪ್ರದೇಶದ ಪರಿಸ್ಥಿತಿಯೇ ಬೇರೆ. ಅವರು ಹೇಳಿದಂತೆ ನಾನು 2019 ರ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆಗ ಅವರೇನು ಮಾಡಿದರು? ಮಂತ್ರಿಗಳು ಕೂಡ ನನ್ನ ಜೊತೆ ನಿಲ್ಲಲಿಲ್ಲ. ಆದ್ದರಿಂದ ದಯವಿಟ್ಟು ಹೋಲಿಕೆ ಮಾಡಬೇಡಿ’ ಎಂದು ವಿನಂತಿಸಿದರು.

ಪವನ್ ಕಲ್ಯಾಣ್ ಅವರು 2014 ರಲ್ಲಿ ‘ಜನಸೇನಾ’ ಪಕ್ಷವನ್ನು ಸ್ಥಾಪಿಸಿದರು. ಬಳಿಕ 2019 ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಸ್ವತಃ ಪವನ್ ಕಲ್ಯಾಣ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆ ಸೋತರು. ಅವರ ಪಕ್ಷಕ್ಕೆ ತೀವ್ರ ನಿರಾಸೆ ಆಗಿತ್ತು. ಆದರೆ 6% ಮತಗಳನ್ನು ಅವರ ಪಕ್ಷ ತೆಗೆದುಕೊಂಡಿತು. ಆದರೆ 2024 ರಲ್ಲಿ ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಖುದ್ದು ಪೀಠಾಪುರಂ ಕ್ಷೇತ್ರದಿಂದ ಗೆದ್ದಿದ್ದು ಮಾತ್ರವಲ್ಲದೆ ಅವರ ಪಕ್ಷದ ಇನ್ನೂ ಹಲವು ಅಭ್ಯರ್ಥಿಗಳು ಗೆದ್ದು ಶಾಸಕರಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್​ಗೆ ಇಳಿದ ಟೆಕ್ಕಿಗಳು: ಟಿವಿ9 ಕಾರ್ಪೊರೇಟ್ ಕಪ್‌ಗೆ ಭರ್ಜರಿ ಚಾಲನೆ! – Kannada News | TV9 Corporate Badminton: Tech Giants Clash at Gopichand Academy!

ಟಿವಿ9 ನೆಟ್‌ವರ್ಕ್ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಎರಡನೇ ಸೀಸನ್ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅತ್ಯಂತ ವೈಭವದಿಂದ ಆರಂಭವಾಗಿದೆ. ಕಾರ್ಪೊರೇಟ್ ವಲಯದ ಉದ್ಯೋಗಿಗಳಲ್ಲಿ ಕ್ರೀಡಾ ಮನೋಭಾವ ಮತ್ತು ದೈಹಿಕ ಫಿಟ್‌ನೆಸ್ ಅನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಪ್ರಮುಖ ಐಟಿ ಕಂಪನಿಗಳ ನೂರಾರು ಉದ್ಯೋಗಿಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ತಮ್ಮ ಬ್ಯಾಡ್ಮಿಂಟನ್ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ಕ್ರೀಡಾಕೂಟದ ಪ್ರಮುಖ ಮುಖ್ಯಾಂಶಗಳು:

ನಿರಂತರ ಕೆಲಸದ ಒತ್ತಡದಲ್ಲಿರುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಈ ಚಾಂಪಿಯನ್‌ಶಿಪ್ ಅತ್ಯುತ್ತಮ ದೈಹಿಕ ಕಸರತ್ತು ಮತ್ತು ಮನರಂಜನೆಯ ವೇದಿಕೆಯನ್ನು ಒದಗಿಸಿದೆ. ಈ ಟೂರ್ನಿಯ ಮೂಲಕ ಕಾರ್ಪೊರೇಟ್ ಉದ್ಯೋಗಿಗಳಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಪ್ರಮುಖವಾಗಿ ಎರಡು ಪ್ರಮುಖ ವಿಭಾಗಗಳನ್ನು ಆಯೋಜಿಸಲಾಗಿದೆ:

  • ಪುರುಷರ ಚಾಂಪಿಯನ್‌ಶಿಪ್ (ತಂಡ): ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಗಳು ನಡೆಯಲಿವೆ.
  • ಮುಕ್ತ ವಿಭಾಗ (ವೈಯಕ್ತಿಕ): ಇದರಲ್ಲಿ ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್ ಹಾಗೂ ಮಿಕ್ಸೆಡ್ ಡಬಲ್ಸ್ (ಮಿಶ್ರ ಜೋಡಿ) ಪಂದ್ಯಗಳು ಒಳಗೊಂಡಿವೆ.
  • ಸ್ಥಳ: ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ, ಗಚಿಬೌಲಿ, ಹೈದರಾಬಾದ್.
  •  ದಿನಾಂಕ: ಮೇ 15 ರಿಂದ ಮೇ 17, 2026.
  • ಬಹುಮಾನದ ಮೊತ್ತ: ಒಟ್ಟು ₹5 ಲಕ್ಷ ರೂಪಾಯಿಗಳ ನಗದು ಬಹುಮಾನ.

ಗೋಪಿಚಂದ್ ಪ್ರಶಂಸೆ:

ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪುಲ್ಲೇಲ ಗೋಪಿಚಂದ್ ಅವರು ಟಿವಿ9 ನೆಟ್‌ವರ್ಕ್‌ನ ಈ ವಿಶಿಷ್ಟ ಉಪಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಂಪ್ಯೂಟರ್ ಸ್ಕ್ರೀನ್ ಮುಂದೆ ಗಂಟೆಗಟ್ಟಲೆ ಕಳೆಯುವ ಐಟಿ ವೃತ್ತಿಪರರ ಆರೋಗ್ಯ ಸುಧಾರಣೆಗೆ ಮತ್ತು ಅವರಲ್ಲಿ ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳಲು ಇಂತಹ ಕ್ರೀಡಾಕೂಟಗಳು ತುಂಬಾ ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗಿಗಳಲ್ಲಿ ಕ್ರೀಡಾ ಉತ್ಸಾಹ:

ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಜಾಗತಿಕ ಸಂಸ್ಥೆಗಳ ಉದ್ಯೋಗಿಗಳು ಕಚೇರಿಯ ಫೈಲ್‌ಗಳನ್ನು ಬದಿಗಿಟ್ಟು, ಕ್ರೀಡಾಂಗಣದಲ್ಲಿ ರಾಕೆಟ್ ಹಿಡಿದು ಅಬ್ಬರಿಸುತ್ತಿದ್ದಾರೆ. ಈ ಪಂದ್ಯಾವಳಿಯು ಉದ್ಯೋಗಿಗಳಲ್ಲಿ ಕೇವಲ ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೆ, ವಿವಿಧ ಕಂಪನಿಗಳ ನಡುವೆ ಉತ್ತಮ ಬಾಂಧವ್ಯ ಮತ್ತು ನೆಟ್‌ವರ್ಕಿಂಗ್ ಬೆಳೆಸಲು ನೆರವಾಗಿದೆ.
ಈ ಟೂರ್ನಮೆಂಟ್‌ನ ಮುಂದಿನ ಅಪ್‌ಡೇಟ್‌ಗಳು ಮತ್ತು ನೋಂದಣಿ ಪ್ರಕ್ರಿಯೆಗಳಿಗಾಗಿ ನೀವು News9 Corporate Cup ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಸ್ವಾಭಿಮಾನವೇ ಮುಖ್ಯ… ಟೆಸ್ಟ್ ನಿವೃತ್ತಿಗೆ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಹಾಗೆಯೇ ಟೂರ್ನಿ ಕುರಿತಾದ ಮಾಹಿತಿ ಅಥವಾ ಇತರೆ ಪ್ರಶ್ನೆಗಳಿಗಾಗಿ 7032 003 222 ಸಂಖ್ಯೆಯನ್ನು ಅಥವಾ corporatecup@tv9.com ಇಮೇಲ್ ಅನ್ನು ಸಂಪರ್ಕಿಸಬಹುದು.

Source link

Exit mobile version