ಸಿದ್ದರಾಮಯ್ಯ ಬಿಟ್ಟರೆ ಸಿಎಂ ಆಗುವ ಅರ್ಹತೆ ಇರುವುದು ಮಲ್ಲಿಕಾರ್ಜುನ ಖರ್ಗೆಗೆ ಮಾತ್ರ: ಬಸವರಾಜ ರಾಯರೆಡ್ಡಿ – Kannada News | Siddaramaiah to Continue as CM; Mallikarjun Kharge the Only Suitable Alternative; Basavaraj Rayareddi

ಕೊಪ್ಪಳ, ಮೇ 16: ನನಗೆ ಗೊತ್ತಿರುವ ಮಟ್ಟಿಗೆ ಇನ್ನೂ ಎರಡು ವರ್ಷಗಳ ಕಾಲ‌‌ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ. ಇದು ನನ್ನ ನಂಬಿಕೆ. ಒಂದು ವೇಳೆ ಸಿಎಂ ಬದಲಾವಣೆ ಮಾಡುವ ಅನಿವಾರ್ಯತೆ ಎದುರಾದರೆ, ಸಿದ್ದರಾಮಯ್ಯ ಬಿಟ್ಟರೆ ಸಿಎಂ ಆಗುವ ಅರ್ಹತೆ ಇರುವುದು ಮಲ್ಲಿಕಾರ್ಜುನ ಖರ್ಗೆಗೆ ಮಾತ್ರ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರಿಷ್ಠರು ಬದಲಾವಣೆ ಮಾಡಬೇಕು ಅಂದರೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು, ಆದರೆ ಆ ಪರಿಸ್ಥಿತಿ ಉದ್ಭವಿಸಿಲ್ಲ. ಮೇ 30ರೊಳಗೆ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡಬಹುದು. ಮೂರು ವರ್ಷ ಆಯ್ತು, ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು. ಜನಪರ ಆಡಳಿತ ಕೊಟ್ರೆ 2028ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಸಹಾಯ ಆಗುತ್ತೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

TV9 Kannada News Live: ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥನ ಖಡಕ್ ಎಚ್ಚರಿಕೆ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Rs 2000 Cr ITC Scam in Bengaluru, PM Modi Visits Netherlands and Army Chief Warns Pakistan

ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥನ ಖಡಕ್ ಎಚ್ಚರಿಕೆ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಬೆಂಗಳೂರು, ಮೇ 16: ಬೆಂಗಳೂರಿನಲ್ಲಿ ಬರೋಬ್ಬರಿ 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ ತೆರಿಗೆ ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಭೇದಿಸಿದ್ದು, ಸಚಿವ ಜಮೀರ್ ಖಾನ್  (Zameer Khan) ಅವರ ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್ ನೀಡಲಾಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಇಯು ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ನೆದರ್‌ಲ್ಯಾಂಡ್ಸ್‌ನ ಆಮ್ಸ್ಟರ್‌ಡ್ಯಾಮ್‌ಗೆ ಭೇಟಿ ನೀಡಿದ್ದಾರೆ. ಮತ್ತೊಂದೆಡೆ, ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಜಾಗತಿಕ ಭೂಪಟದ ಇತಿಹಾಸ ನೆನಪಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಭೂಪಟದಲ್ಲಿ ಉಳಿಯಬೇಕೇ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ.
  • ಬೆಂಗಳೂರಿನಲ್ಲಿ ಎರಡು ಸಾವಿರ ಕೋಟಿಯ ನಕಲಿ ಐಟಿಸಿ ತೆರಿಗೆ ವಂಚನೆ ಜಾಲ ಪತ್ತೆ.
  • ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ನೆದರ್‌ಲ್ಯಾಂಡ್ಸ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ.

ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಕಠಿಣ ಸಂದೇಶ

ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ನೆರೆರಾಷ್ಟ್ರಕ್ಕೆ ಅತ್ಯಂತ ಕಠಿಣ ಹಾಗೂ ನೇರ ಸಂದೇಶ ರವಾನಿಸಿದ್ದಾರೆ. ದೆಹಲಿಯಲ್ಲಿ ನಡೆದ ‘ಸೇನಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುವುದನ್ನು ಮತ್ತು ಭಾರತದ ವಿರುದ್ಧ ಸಂಚು ರೂಪಿಸುವುದನ್ನು ಮುಂದುವರಿಸುವ ಮುನ್ನ, ತಾನು ಜಗತ್ತಿನ ಭೂಪಟ ಮತ್ತು ಇತಿಹಾಸದ ಭಾಗವಾಗಿ ಉಳಿಯಬೇಕೇ ಅಥವಾ ಬೇಡವೇ ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಲಿ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ. ಸದಾ ಸೈನಿಕರನ್ನು ಪ್ರಚೋದಿಸುವ ಹಾಗೂ ಗಡಿಯಲ್ಲಿ ಉಗ್ರರನ್ನು ನುಸುಳಿಸುವ ಪಾಕಿಸ್ತಾನದ ಕುತಂತ್ರಕ್ಕೆ ಭಾರತ ಇನ್ನು ಮುಂದೆ ಮೌನವಾಗಿ ಕೂರುವುದಿಲ್ಲ, ಬದಲಿಗೆ ಅತ್ಯಂತ ಪ್ರಖರ ಮತ್ತು ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಬೆಂಗಳೂರಿನಲ್ಲಿ 2,000 ಕೋಟಿ ರೂ. ನಕಲಿ ಐಟಿಸಿ ಹಗರಣ

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಬೃಹತ್ ನಕಲಿ ಐಟಿಸಿ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ವಂಚನೆ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಈ ಹಗರಣದ ತನಿಖೆಯ ಭಾಗವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ್ದೆನ್ನಲಾದ ‘ನ್ಯಾಷನಲ್ ಟ್ರಾವೆಲ್ಸ್’ ಸಂಸ್ಥೆಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಮಹಾರಾಷ್ಟ್ರದ ಸ್ಕ್ರಾಪ್ ದಲ್ಲಾಳಿಗಳು ತೆರಿಗೆ ವಂಚಿಸಲು ಕರ್ನಾಟಕದಿಂದ ‘ಟಂಗ್‌ಸ್ಟನ್ ಕಾರ್ಬೈಡ್ ಸ್ಕ್ರ್ಯಾಪ್’ ಆಮದು ಮಾಡಿಕೊಳ್ಳುತ್ತಿರುವಂತೆ ನಕಲಿ ಇ-ವೇ ಬಿಲ್‌ಗಳನ್ನು ಸೃಷ್ಟಿಸುತ್ತಿದ್ದರು. ಈ ನಕಲಿ ಬಿಲ್‌ಗಳ ಸಾಗಾಟಕ್ಕೆ ನ್ಯಾಷನಲ್ ಟ್ರಾವೆಲ್ಸ್‌ನ ಲಾರಿಗಳನ್ನು ಬಳಸಿಕೊಳ್ಳಲಾದ ಆರೋಪದ ಮೇಲೆ ಈ ನೋಟಿಸ್ ನೀಡಲಾಗಿದೆ. ಭೌತಿಕವಾಗಿ ಯಾವುದೇ ಸರಕು ಇರದೇ ಕೇವಲ ಬಿಲ್‌ಗಳು ಮಾತ್ರ ಹಸ್ತಾಂತರಗೊಳ್ಳುತ್ತಿದ್ದವು. ತನಿಖೆಯಲ್ಲಿ ಇಂತಹ 127 ನಕಲಿ ಸಂಸ್ಥೆಗಳ ಬೃಹತ್ ಜಾಲ ಪತ್ತೆಯಾಗಿದ್ದು, ಸದ್ಯ ಕೋರ್ಟ್‌ ಆದೇಶದ ಮೇರೆಗೆ 7 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ 2 ಸಾವಿರ ಕೋಟಿ ರೂ. ನಕಲಿ ಐಟಿಸಿ ಹಗರಣದಲ್ಲಿ ಸಚಿವ ಜಮೀರ್‌ ಖಾನ್‌ ಸಂಸ್ಥೆಗೂ ಲಿಂಕ್: ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್!

ನೆದರ್‌ಲ್ಯಾಂಡ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ನೆದರ್‌ಲ್ಯಾಂಡ್ಸ್‌ ದೇಶಕ್ಕೆ ಅಧಿಕೃತ ಭೇಟಿ ನೀಡಿದ್ದು, ಇದರ ಭಾಗವಾಗಿ ಆಮ್ಸ್ಟರ್‌ಡ್ಯಾಮ್‌ ನಗರಕ್ಕೆ ಬಂದಿಳಿದಿದ್ದಾರೆ. ಈ ಕುರಿತು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಉಭಯ ದೇಶಗಳ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಹೊಸ ಉತ್ತೇಜನವನ್ನು ನೀಡಿರುವ ಮಹತ್ವದ ಸಮಯದಲ್ಲಿ ತಾವು ಈ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಈ ಪ್ರವಾಸವು ಭಾರತ ಹಾಗೂ ನೆದರ್‌ಲ್ಯಾಂಡ್ಸ್ ನಡುವೆ ಸೆಮಿಕಂಡಕ್ಟರ್, ಜಲ ಸಂಪನ್ಮೂಲ ನಿರ್ವಹಣೆ, ಶುದ್ಧ ಇಂಧನ ಮತ್ತು ಇತರ ಪ್ರಮುಖ ತಾಂತ್ರಿಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತು ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ನೆದರ್‌ಲ್ಯಾಂಡ್ಸ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶದಲ್ಲೇ ಮೊದಲ ಬಾರಿ 182 ಕೋಟಿ ಮೌಲ್ಯದ ಕ್ಯಾಪ್ಟಗನ್ ವಶಕ್ಕೆ; ಏನಿದು ಜಿಹಾದಿ ಡ್ರಗ್? – Kannada News | Ncb seizes jihadi drugs captagon worth rs 182 crore under operation ragepill says amit shah

ನವದೆಹಲಿ, ಮೇ 16: ಭಾರತದಲ್ಲಿ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) 182 ಕೋಟಿ ಮೌಲ್ಯದ ಕ್ಯಾಪ್ಟಗನ್ ಟ್ಯಾಬ್ಲೆಟ್​​ಗಳನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಈ ಡ್ರಗ್ಸ್ ಅನ್ನು ಪಶ್ಚಿಮ ಏಷ್ಯಾಕ್ಕೆ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆಪರೇಷನ್ ರೇಜ್​ಪಿಲ್ (Operation Ragepill) ಅಡಿಯಲ್ಲಿ ಈ ಡ್ರಗ್ಸ್​ ಸಾಗಾಟವನ್ನು ತಡೆಹಿಡಿಯಲಾಗಿದೆ ಎಂದು ಅಮಿತ್ ಶಾ ಎಕ್ಸ್​​ನಲ್ಲಿ ಮಾಹಿತಿ ನೀಡಿದ್ದಾರೆ. ಮುಂದ್ರಾ ಬಂದರು ಮತ್ತು ದೆಹಲಿಯ ನೆಬ್ ಸರಾಯ್‌ನಿಂದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಿರಿಯನ್ ಪ್ರಜೆ ಆ ಡ್ರಗ್ಸ್ ಅನ್ನು ಚಹಾ ಎಲೆಗಳ ಪೆಟ್ಟಿಗೆಯಲ್ಲಿ ಮರೆಮಾಡಿದ್ದರು.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ಮೋದಿ ಸರ್ಕಾರ ‘ಮಾದಕವಸ್ತು ಮುಕ್ತ ಭಾರತ’ಕ್ಕೆ ಸಂಕಲ್ಪ ಮಾಡಿದೆ. ‘ಆಪರೇಷನ್ ರೇಜ್‌ಪಿಲ್’ ಮೂಲಕ ನಮ್ಮ ಏಜೆನ್ಸಿಗಳು 182 ಕೋಟಿ ರೂ. ಮೌಲ್ಯದ “ಜಿಹಾದಿ ಡ್ರಗ್” ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಅನ್ನು ಮೊದಲ ಬಾರಿಗೆ ವಶಪಡಿಸಿಕೊಂಡಿವೆ ಎಂಬ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಮಧ್ಯಪ್ರಾಚ್ಯಕ್ಕೆ ಸಾಗಿಸುತ್ತಿದ್ದ ಈ ಡ್ರಗ್ಸ್​ ಜಾಲವನ್ನು ಭೇದಿಸುವುದು ಮತ್ತು ವಿದೇಶಿ ಪ್ರಜೆಯ ಬಂಧನವು ಮಾದಕವಸ್ತುಗಳ ವಿರುದ್ಧದ ಭಾರತದ ಶೂನ್ಯ ಸಹಿಷ್ಣುತೆಗೆ ನಮ್ಮ ಬದ್ಧತೆಗೆ ಉದಾಹರಣೆಗಳಾಗಿವೆ. ಭಾರತಕ್ಕೆ ಪ್ರವೇಶಿಸುವ ಅಥವಾ ನಮ್ಮ ಪ್ರದೇಶವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಂಡು ಸಾಗಾಟವಾಗುವ ಪ್ರತಿ ಗ್ರಾಂ ಮಾದಕವಸ್ತುಗಳನ್ನು ನಾವು ತಡೆಯುತ್ತೇವೆ. ಎನ್‌ಸಿಬಿಯ ಧೈರ್ಯಕ್ಕೆ ನಮ್ಮ ಧನ್ಯವಾದಗಳು.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್!

ಕ್ಯಾಪ್ಟಗನ್ ಹೆಚ್ಚು ವ್ಯಸನಕಾರಿಯಾದ ಸಿಂಥೆಟಿಕ್ ಆಂಫೆಟಮೈನ್-ಮಾದರಿಯ ಉತ್ತೇಜಕವಾಗಿದೆ. ಇದಕ್ಕೆ “ಜಿಹಾದಿ ಡ್ರಗ್” ಎಂಬ ಅಡ್ಡಹೆಸರನ್ನು ಇಡಲಾಗಿದೆ. ಏಕೆಂದರೆ ಐಸಿಸ್​​ನಂತಹ ಉಗ್ರಗಾಮಿ ಗುಂಪುಗಳು ದಾಳಿಯ ವೇಳೆ ಭಯವನ್ನು ಕಡಿಮೆ ಮಾಡಿಕೊಳ್ಳಲು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಡ್ರಗ್ಸ್ ಬಳಸುತ್ತಾರೆ ಎಂದು ವರದಿಯಾಗಿದೆ. ಇದನ್ನು “ಬಡವರ ಕೊಕೇನ್” ಎಂದೂ ಕರೆಯಲಾಗುತ್ತದೆ. ಇದು ಬಹಳ ಸ್ಟ್ರಾಂಗ್ ಆದ ಡ್ರಗ್ಸ್​ಗಳಲ್ಲೊಂದು.

ಇದನ್ನೂ ಓದಿ: ಬೆಂಗಳೂರಿನ ಡ್ರಗ್ಸ್ ಮಾಫಿಯಾಗೆ ಪೊಲೀಸರ ಬಿಗ್ ಶಾಕ್: 13 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಸೀಜ್!

ಭಾರತವು ಕನಿಷ್ಠ 200 ಪ್ರಮುಖ ಮತ್ತು ಸಣ್ಣ ಬಂದರುಗಳನ್ನು ಹೊಂದಿದೆ. ಆದರೆ, ಅವುಗಳಲ್ಲಿ ಸುಮಾರು 65 ಮಾತ್ರ ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಪ್ರಸ್ತುತ, 13 ಪ್ರಮುಖ ಬಂದರುಗಳು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವ್ಯಾಪ್ತಿಗೆ ಒಳಪಟ್ಟಿವೆ. ಈ ಪಡೆ ಶೀಘ್ರದಲ್ಲೇ 67 ಹೆಚ್ಚುವರಿ ಬಂದರುಗಳಲ್ಲಿ ಭದ್ರತೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ಬಂದರುಗಳ ಭದ್ರತೆಯನ್ನು ಬಲಪಡಿಸಲು ಮತ್ತು ಕಳ್ಳಸಾಗಣೆ ಚಟುವಟಿಕೆಗಳನ್ನು ನಿಗ್ರಹಿಸಲು, ಕೇಂದ್ರ ಸರ್ಕಾರವು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಮಾದರಿಯಲ್ಲಿ ಹೊಸ ಫೆಡರಲ್ ಸಂಸ್ಥೆಯಾದ ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (BoPS) ಅನ್ನು ರಚಿಸುವ ಪ್ರಕ್ರಿಯೆ ನಡೆಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6+4+2: ಹೀಗಿರಲಿದೆ RCB ಪ್ಲೇಯಿಂಗ್ ಇಲೆವೆನ್ – Kannada News | IPL 2026: RCB Playing XI for PBKS Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅಂದರೆ ಕಳೆದ ಬಾರಿಯಂತೆ ಈ ಸಲ ಕೂಡ 6+2+4 ಸಂಯೋಜನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಏಕೆಂದರೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಸ್ಟೇಡಿಯಂ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗುವ, ಹಾಗೂ ವೇಗದ ಬೌಲರ್‌ಗಳಿಗೆ ಉತ್ತಮ ಬೌನ್ಸ್ ಮತ್ತು ಸ್ವಿಂಗ್ ನೀಡುವ ಪಿಚ್ ಅನ್ನು ಹೊಂದಿದೆ.

  • ವೇಗ ಮತ್ತು ಬೌನ್ಸ್: ಕಪ್ಪು ಮಣ್ಣಿನಿಂದ ಮಾಡಲ್ಪಟ್ಟ ಈ ಪಿಚ್ ಉತ್ತಮ ಬೌನ್ಸ್ ಹೊಂದಿದೆ. ಇಲ್ಲಿ ವೇಗದ ಬೌಲರ್​ಗಳು ಉತ್ತಮ ದಾಳಿ ಸಂಘಟಿಸಬಲ್ಲರು. ಅದೇ ವೇಳೆ ಬ್ಯಾಟರ್​ ಉತ್ತಮ ಟೈಮಿಂಗ್ ಕಾಯ್ದುಕೊಂಡರೆ ಚೆಂಡನ್ನು ಸುಲಭವಾಗಿ ಬೌಂಡರಿಗೂ ಅಟ್ಟಬಹುದು.
  • ಎತ್ತರದ ಪ್ರದೇಶದ ಪ್ರಭಾವ: ಸಮುದ್ರ ಮಟ್ಟದಿಂದ 1,317 ಮೀಟರ್ ಎತ್ತರದಲ್ಲಿರುವ ಕಾರಣ, ಇಲ್ಲಿನ ತೆಳುವಾದ ಗಾಳಿಯು ಚೆಂಡು ವೇಗವಾಗಿ ಹಾರಲು ಸಹಾಯ ಮಾಡುತ್ತದೆ. ಹೀಗಾಗಿ ಇಲ್ಲಿ ಸಿಕ್ಸರ್‌ಗಳು ಹೆಚ್ಚಾಗಿ ಮೂಡಿಬರುತ್ತವೆ.
  • ಸ್ವಿಂಗ್ ಮತ್ತು ಸೀಮ್: ಮೈದಾನದ ಸುತ್ತಲೂ ಬೀಸುವ ತಂಪಾದ ಗಾಳಿಯಿಂದಾಗಿ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಭಾರಿ ಸ್ವಿಂಗ್ ಮತ್ತು ಸೀಮ್ ಮೂವ್‌ಮೆಂಟ್ ಸಿಗುತ್ತದೆ. ಆದರೆ, ಸ್ಪಿನ್ನರ್‌ಗಳಿಗೆ ಇಲ್ಲಿ ಹೆಚ್ಚಿನ ನೆರವು ಸಿಗುವುದಿಲ್ಲ.
  • ಹೈಬ್ರಿಡ್ ತಂತ್ರಜ್ಞಾನ: ಇದು ಭಾರತದಲ್ಲೇ ಮೊದಲ ಬಾರಿಗೆ ‘ಹೈಬ್ರಿಡ್ ಪಿಚ್’ (SISGrass) ಹೊಂದಿದ ಮೈದಾನವಾಗಿದೆ. ಇದು ಪಿಚ್‌ನ ಬೌನ್ಸ್ ಮತ್ತು ಗುಣಮಟ್ಟವನ್ನು ದೀರ್ಘಕಾಲದವರೆಗೆ ಒಂದೇ ರೀತಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಈ ಮೇಲೆ ತಿಳಿಸಿದಂತೆ ಈ ಪಿಚ್​ ಸ್ಪಿನ್ನರ್​ಗಿಂತ ವೇಗದ ಬೌಲರ್​ಗಳಿಗೆ ಸಹಕಾರಿ. ಹೀಗಾಗಿ ಆರ್​ಸಿಬಿ ತಂಡವು ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಜೋಶ್ ಹೇಝಲ್​ವುಡ್, ಜೇಕಬ್ ಡಫಿ, ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ಸಲಾಂ ದಾರ್ ಕಣಕ್ಕಿಳಿಯಬಹುದು.

ಇನ್ನು ಬ್ಯಾಟರ್​ಗಳಾಗಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್ ಹಾಗೂ ಜಿತೇಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ ಹಾಗೂ ವೆಂಕಟೇಶ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

ಅಂದರೆ 6 ಬ್ಯಾಟರ್​ಗಳು + 2 ಆಲ್​ರೌಂಡರ್ + 4 ವೇಗದ ಬೌಲರ್​ಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಅಧಿಕೃತವಾಗಿ ಪ್ಲೇಆಫ್​ಗೇರಲು ಆರ್​ಸಿಬಿ ತಂಡ ಪ್ಲ್ಯಾನ್ ಹಾಕಿಕೊಂಡಿದೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

    1. ವಿರಾಟ್ ಕೊಹ್ಕಿ
    2. ಜೇಕಬ್ ಬೆಥೆಲ್
    3. ದೇವದತ್ ಪಡಿಕ್ಕಲ್ (ಇಂಪ್ಯಾಕ್ಟ್ ಪ್ಲೇಯರ್)
    4. ರಜತ್ ಪಾಟಿದಾರ್ (ನಾಯಕ)
    5. ಟಿಮ್ ಡೇವಿಡ್
    6. ಕೃನಾಲ್ ಪಾಂಡ್ಯ
    7. ಜಿತೇಶ್ ಶರ್ಮಾ (ವಿಕೆಟ್ ಕೀಪರ್)
    8. ವೆಂಕಟೇಶ್ ಅಯ್ಯರ್
    9. ಜೋಶ್ ಹೇಝಲ್​ವುಡ್
    10. ಭುವನೇಶ್ವರ್ ಕುಮಾರ್
    11. ರಾಸಿಖ್ ದಾರ್
    12. ಜೇಕಬ್ ಡಫಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್,  ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್, ಯಶ್ ದಯಾಲ್ (ಅಲಭ್ಯ).

Source link

Video: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ! – Kannada News | Viral CCTV: Lift Slap Sparks Brutal Fight; Who’s At Fault? Social Media Debate

ಲಿಫ್ಟ್ ಬಳಿ ಆಕಸ್ಮಿಕವಾಗಿ ಯುವತಿಯೊಬ್ಬಳಿಗೆ ಯುವಕ ಡಿಕ್ಕಿ ಹೊಡೆದಿದ್ದು, ಆತ ತಕ್ಷಣವೇ ಕ್ಷಮೆ ಕೇಳಿದರೂ ಕೇಳದ ಯುವತಿ ಆತನ ಕೆನ್ನೆಗೆ ಬಾರಿಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಯ ಈ ಹಠಾತ್ ವರ್ತನೆಯಿಂದ ತೀವ್ರ ಕೋಪಗೊಂಡ ಯುವಕ, ನಿಯಂತ್ರಣ ಕಳೆದುಕೊಂಡು ಆಕೆಗೆ ಮನಬಂದಂತೆ ಥಳಿಸಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಗಳು ಲಿಫ್ಟ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯುವತಿಯ ಆತುರದ ನಿರ್ಧಾರ ಮತ್ತು ಯುವಕನ ಅತಿರೇಕದ ವರ್ತನೆ—ಇವೆರಡರಲ್ಲಿ ಯಾರದ್ದು ತಪ್ಪು ಎಂಬ ಬಗ್ಗೆ ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದು, ಅಂತರ್ಜಾಲದಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​ಗಳಲ್ಲಿ ಡೀಸೆಲ್ ಇಂಜಿನ್ ಏಕೆ ಇರುವುದಿಲ್ಲ? ಪೆಟ್ರೋಲ್ ಮಾತ್ರ ಬಳಸುವುದರ ರಹಸ್ಯವೇನು? – Kannada News | Why companies not producing Diesel Bike real reason behind Petrol Bikes

ನವದೆಹಲಿ, ಮೇ 16: ನೀವು ಯಾವತ್ತಾದರೂ ಬೈಕ್, ಸ್ಕೂಟಿಗಳಲ್ಲಿ ಏಕೆ ಡೀಸೆಲ್ ಇಂಜಿನ್ ಇರುವುದಿಲ್ಲ? ಏಕೆ ಪೆಟ್ರೋಲ್ ಇಂಜಿನ್ ಮಾತ್ರ ಇರುತ್ತದೆ ಎಂಬುದನ್ನು ಯೋಚಿಸಿದ್ದೀರಾ? ಬೈಕ್‌ಗಳಲ್ಲಿ ಡೀಸೆಲ್ ಬದಲಿಗೆ ಪೆಟ್ರೋಲ್ ಎಂಜಿನ್‌ಗಳನ್ನು ಬಳಸಿದರೆ ಏನಾಗುತ್ತದೆ? ಎಂಬುದರ ವಿವರ ಇಲ್ಲಿದೆ. ಸಾಮಾನ್ಯವಾಗಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಒಂದೇ ರೀತಿ ಕಾರ್ಯನಿರ್ವಹಿಸುವುದಿಲ್ಲ, ಅವು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪೆಟ್ರೋಲ್ (Petrol) ಎಂಜಿನ್‌ನಲ್ಲಿ ಇಂಧನವನ್ನು ಹೊತ್ತಿಸಲು ಸ್ಪಾರ್ಕ್ ಪ್ಲಗ್ ಅನ್ನು ಬಳಸಲಾಗುತ್ತದೆ. ಆದರೆ ಡೀಸೆಲ್ ಎಂಜಿನ್‌ನಲ್ಲಿ ಇದು ಕೆಲಸ ಮಾಡುವುದಿಲ್ಲ. ಡೀಸೆಲ್ ಎಂಜಿನ್‌ನಲ್ಲಿ, ಗಾಳಿಯು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಅದರಿಂದ ಉತ್ಪತ್ತಿಯಾಗುವ ಶಾಖದೊಂದಿಗೆ ಇಂಧನವನ್ನು ಬರ್ನ್ ಮಾಡಲಾಗುತ್ತದೆ. ಈ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳಲು, ಎಂಜಿನ್ ಬ್ಲಾಕ್‌ನಲ್ಲಿ ಬಲವಾದ ಲೋಹವನ್ನು ಬಳಸಲಾಗುತ್ತದೆ. ಅದಕ್ಕಾಗಿಯೇ ಎಂಜಿನ್ ಗಾತ್ರವು ತುಂಬಾ ದೊಡ್ಡದಾಗಿರುತ್ತದೆ. ಆದ್ದರಿಂದ, ಬೈಕ್‌ಗಳಂತಹ ಸಣ್ಣ ವಾಹನಗಳಿಗೆ ಇಷ್ಟು ದೊಡ್ಡ ಮತ್ತು ಭಾರವಾದ ಎಂಜಿನ್ ಅನ್ನು ಹಾಕುವುದು ಕಷ್ಟ. ಅಲ್ಲದೆ, ಸವಾರರು ಈ ಎಂಜಿನ್‌ನ ತೂಕವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಬೈಕ್​ಗಳಲ್ಲಿ ಕೇವಲ ಪೆಟ್ರೋಲ್ ಇಂಜಿನ್ ಹಾಕಲು ಇದು ಮುಖ್ಯ ಕಾರಣ.

ಡೀಸೆಲ್ ಎಂಜಿನ್‌ನಲ್ಲಿ ಇಂಧನವು ಹೆಚ್ಚಿನ ಒತ್ತಡದಲ್ಲಿ ಉರಿಯುತ್ತದೆ. ಈ ಎಂಜಿನ್ ಒಳಗೆ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದು ಬಹಳಷ್ಟು ಶಬ್ದ ಮತ್ತು ಕಂಪನಗಳನ್ನು ಉಂಟುಮಾಡುತ್ತದೆ. ಇವುಗಳನ್ನು ನಿಭಾಯಿಸಲು, ಕಾರುಗಳು ಅಥವಾ ಲಾರಿಗಳು ದೊಡ್ಡ ಚಾಸಿಸ್ ಮತ್ತು ಕಂಪನ ಅಬ್ಸಾರ್ಬರ್‌ಗಳನ್ನು ಹೊಂದಿರುತ್ತವೆ. ಆದರೆ ಬೈಕ್‌ಗಳಲ್ಲಿ ಬಹಳ ಕಡಿಮೆ ಸ್ಥಳಾವಕಾಶವಿರುವುದರಿಂದ ಆ ಕಂಪನಗಳು ನೇರವಾಗಿ ಸವಾರನಿಗೆ ತಗುಲುವ ಸಾಧ್ಯತೆ ಇರುತ್ತದೆ. ಈ ಪ್ರಕ್ರಿಯೆಯಲ್ಲಿ, ಸವಾರರಿಗೆ ಬೈಕು ಚಲಾಯಿಸುವುದು ಕಷ್ಟಕರವಾಗುತ್ತದೆ.

ಇದನ್ನೂ ಓದಿ: ಗ್ಯಾಸ್ ಟ್ರಬಲ್ ಆಯ್ತು, ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!

ಬೈಕ್‌ಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಅಳವಡಿಸದಿರಲು ಹಣದ ಹೆಚ್ಚಳವೂ ಒಂದು ಕಾರಣ. ಏಕೆಂದರೆ ಡೀಸೆಲ್ ಎಂಜಿನ್‌ಗೆ ಗಾಳಿಯನ್ನು ಪಂಪ್ ಮಾಡಲು ದುಬಾರಿ ಇಂಧನ ಇಂಜೆಕ್ಟರ್‌ಗಳು ಮತ್ತು ಟರ್ಬೋಚಾರ್ಜರ್‌ಗಳಂತಹ ಸುಧಾರಿತ ತಂತ್ರಜ್ಞಾನದ ಅಗತ್ಯವಿರುತ್ತದೆ. ಇವು ಲಭ್ಯವಿಲ್ಲದಿದ್ದರೆ, ಬೈಕ್ ತಯಾರಿಸುವ ವೆಚ್ಚ ತೀವ್ರವಾಗಿ ಹೆಚ್ಚಾಗುತ್ತದೆ. ಅಲ್ಲದೆ, ಡೀಸೆಲ್ ಎಂಜಿನ್‌ಗಳು ಕಡಿಮೆ ಆರ್‌ಪಿಎಂನಲ್ಲಿ ಕಾರ್ಯನಿರ್ವಹಿಸುತ್ತವೆ. ಇದರರ್ಥ ಅವು ಹೆಚ್ಚಿನ ತೂಕವನ್ನು ಹೊತ್ತುಕೊಳ್ಳದೆ ತ್ವರಿತ ವೇಗವನ್ನು ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಬೈಕ್ ಸವಾರರಿಗೆ ತ್ವರಿತ ಪಿಕಪ್ ಮತ್ತು ವೇಗದ ಅಗತ್ಯ ಇರುವುದರಿಂದ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರ ಬಳಸಲಾಗುತ್ತದೆ.

ಇದೆಲ್ಲದರ ನಡುವೆಯೂ ಬೈಕ್‌ಗಳಿಗೂ ಡೀಸೆಲ್ ಎಂಜಿನ್‌ಗಳನ್ನು ಅಳವಡಿಸುವ ಪ್ರಯತ್ನಗಳು ನಡೆದಿವೆ. ಪ್ರಸಿದ್ಧ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಈ ಪ್ರಯೋಗವನ್ನು ಮಾಡಿದೆ. ಈ ಹಿಂದೆ, ಈ ಕಂಪನಿಯು ರಾಯಲ್ ಎನ್‌ಫೀಲ್ಡ್ ಟಾರಸ್ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಬೈಕನ್ನು ತಂದಿತ್ತು. ಆದರೆ ಅದರ ಹೆಚ್ಚಿನ ಕಂಪನಗಳು ಮತ್ತು ವಿಪರೀತ ಭಾರದಿಂದಾಗಿ ಜನರು ಅದನ್ನು ಖರೀದಿಸಲಿಲ್ಲ. ಈ ಕಾರಣದಿಂದಾಗಿ, ಕಂಪನಿಯು ಈ ಮಾದರಿಯ ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಇದನ್ನೂ ಓದಿ: ಇಂಧನ ಉಳಿಸಲು ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

ಸರಳವಾಗಿ ಹೇಳುವುದಾದರೆ, ಗ್ರಾಹಕರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ಬೈಕ್‌ಗಳಲ್ಲಿ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರ ಬಳಸಲಾಗುತ್ತದೆ. ಹಗುರವಾಗಿರುವ ಮತ್ತು ತ್ವರಿತ ಪಿಕಪ್ ಒದಗಿಸುವ ಪೆಟ್ರೋಲ್ ಎಂಜಿನ್‌ಗಳು ಭಾರವಾದ ಎಂಜಿನ್, ಅತಿಯಾದ ಕಂಪನಗಳು ಮತ್ತು ದುಬಾರಿ ನಿರ್ವಹಣೆಯನ್ನು ಹೊಂದಿರುವ ಡೀಸೆಲ್ ಎಂಜಿನ್​ಗಳಿಗಿಂತ ಬೈಕ್‌ಗಳಿಗೆ ಹೆಚ್ಚು ಸೂಕ್ತವಾದುದು. ಹೀಗಾಗಿಯೇ, ಬೈಕ್​ಗಳಲ್ಲಿ ಪೆಟ್ರೋಲ್ ಇಂಜಿನ್ ಮಾತ್ರ ಅಳವಡಿಕೆ ಮಾಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ

ನವದೆಹಲಿ, ಮೇ 16: ವಿವಾದಿತ ಭೋಜಶಾಲೆ (Bhojshala) ಪ್ರದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ದೇವಸ್ಥಾನವೆಂದು ಘೋಷಿಸಿದೆ. ದೇವಸ್ಥಾನ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಿಗೆ ಅರ್ಪಿತವಾದ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ ನಿನ್ನೆ ಘೋಷಿಸಿತ್ತು. ಇಂದು ಧಾರ್‌ನ ಭೋಜಶಾಲೆ ಸಂಕೀರ್ಣದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಿ, ಆರತಿ ಸಲ್ಲಿಸಿದರು. ಇಂದು ಭೋಜ ಉತ್ಸವ ಸಮಿತಿಯ ಪದಾಧಿಕಾರಿಗಳೊಂದಿಗೆ ಭಕ್ತರು ಭೋಜಶಾಲೆ ಆವರಣದಲ್ಲಿ ಜಮಾಯಿಸಿದರು. ಅಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಸಿಇಟಿ ಪರೀಕ್ಷೆಯಲ್ಲೂ ‘ನೀಟ್’ ಮಾದರಿ ಹಗರಣ? ಒಂದೇ ಸೆಂಟರ್‌ನ 74 ವಿದ್ಯಾರ್ಥಿಗಳಿಗೆ 200ಕ್ಕೆ 200 ಅಂಕ! – Kannada News | KCET Agricultural Practical Exam Scam: Outrage Over 74 Students Scoring 200 on 200 At Single Center

ಕೆಸಿಇಟಿ ಪರೀಕ್ಷೆಯಲ್ಲೂ ‘ನೀಟ್’ ಮಾದರಿ ಹಗರಣ?

ಹುಬ್ಬಳ್ಳಿ, ಮೇ 16: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಕೃಷಿ ವಿಜ್ಞಾನ ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಮಟ್ಟದ ‘ನೀಟ್’ (NEET) ಪರೀಕ್ಷೆಯ ಹಗರಣದ ಮಾದರಿಯಲ್ಲೇ ರಾಜ್ಯದ ಕೆಸಿಇಟಿ (KCET) ಪ್ರಾಯೋಗಿಕ ಪರೀಕ್ಷೆಯಲ್ಲೂ ಬೃಹತ್ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಲಾಗಿದ್ದು, ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ.

ಮುಖ್ಯಾಂಶಗಳು

  • ಕೆಸಿಇಟಿ ಕೃಷಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ.
  • ಹಿರಿಯೂರು ಕೇಂದ್ರದ ಎಪ್ಪತ್ತನಾಲ್ಕು ವಿದ್ಯಾರ್ಥಿಗಳಿಗೆ ಇನ್ನೂರಕ್ಕೆ ಇನ್ನೂರು ಪೂರ್ಣ ಅಂಕಗಳು ಲಭ್ಯ.
  • ನೀಟ್ ಮಾದರಿ ಹಗರಣ ಶಂಕೆ; ಮರುಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳಿಂದ ತೀವ್ರ ಆಗ್ರಹ.

ಏನಿದು ಅಕ್ರಮ?

ಕೃಷಿ ವಿಜ್ಞಾನ ಕೋರ್ಸ್‌ಗಳ ಆಯ್ಕೆಗಾಗಿ ಮೇ 10ರಂದು ರಾಜ್ಯಾದ್ಯಂತ ಒಟ್ಟು 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪರೀಕ್ಷಾ ಕೇಂದ್ರವೊಂದರಲ್ಲೇ ಬರೋಬ್ಬರಿ 74 ವಿದ್ಯಾರ್ಥಿಗಳು 200ಕ್ಕೆ 200 ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದ ಇನ್ನುಳಿದ 16 ಪರೀಕ್ಷಾ ಕೇಂದ್ರಗಳನ್ನು ಒಟ್ಟಾಗಿ ಸೇರಿಸಿದರೂ ಕೇವಲ 24 ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಲು ಸಾಧ್ಯವಾಗಿದೆ. ಒಂದೇ ಕೇಂದ್ರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ ಬಂದಿರುವುದು ಪರೀಕ್ಷಾ ಅಕ್ರಮ ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಪೋಷಕರು ದೂರಿದ್ದಾರೆ.

ಪರೀಕ್ಷಾ ವಿಧಾನ ಮತ್ತು ಮೀಸಲಾತಿ

ರಾಜ್ಯದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ವಿಜ್ಞಾನ ಕೋರ್ಸ್‌ಗಳಲ್ಲಿ ಶೇಕಡಾ 50 ರಷ್ಟು ಸೀಟುಗಳನ್ನು ಮೀಸಲಾಗಿಡಲಾಗಿದೆ. ಈ ವಿಶೇಷ ಸೀಟುಗಳ ಹಂಚಿಕೆಗಾಗಿಯೇ ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. 17 ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಪರೀಕ್ಷೆಯಲ್ಲಿ ತೋಟಗಾರಿಕೆ, ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ವಿವಿಧ ಬೀಜಗಳು, ಗಿಡಗಳು ಹಾಗೂ ಕೃಷಿ ಯಂತ್ರೋಪಕರಣಗಳನ್ನು ಇಡಲಾಗಿರುತ್ತದೆ. ಅಭ್ಯರ್ಥಿಗಳು ಅವುಗಳನ್ನು ಭೌತಿಕವಾಗಿ ನೋಡಿ ಗುರುತಿಸಿ ಉತ್ತರ ಬರೆಯಬೇಕು. ಪ್ರತಿಯೊಂದು ಕೇಂದ್ರಕ್ಕೂ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಹಿರಿಯೂರು ಕೇಂದ್ರದಲ್ಲಿ ಮಾತ್ರ ಇಷ್ಟೊಂದು ಗರಿಷ್ಠ ಅಂಕಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ 2 ಸಾವಿರ ಕೋಟಿ ರೂ. ನಕಲಿ ಐಟಿಸಿ ಹಗರಣದಲ್ಲಿ ಸಚಿವ ಜಮೀರ್‌ ಖಾನ್‌ ಸಂಸ್ಥೆಗೂ ಲಿಂಕ್: ‘ನ್ಯಾಷನಲ್ ಟ್ರಾವೆಲ್ಸ್’ಗೆ ನೋಟಿಸ್!

ಮರುಪರೀಕ್ಷೆಗೆ ಹೆಚ್ಚಿದ ಒತ್ತಾಯ

ಒಂದೆಡೆ ಅಂಕಗಳ ಹಗರಣ ನಡೆದಿದ್ದರೆ, ಮತ್ತೊಂದೆಡೆ ಪರೀಕ್ಷೆ ಬರೆಯಲು ಅರ್ಹರಿದ್ದ ಹಲವು ವಿದ್ಯಾರ್ಥಿಗಳಿಗೆ ಕೆಸಿಇಟಿ ಹಾಲ್ ಟಿಕೆಟ್ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಕೆಸಿಇಟಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದಾಗಿ ಹಗಲಿರುಳು ಕಷ್ಟಪಟ್ಟು ಓದಿದ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ನಡೆದಿರುವ ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಕೂಡಲೇ ಮರುಪರೀಕ್ಷೆ (Re-exam) ನಡೆಸಬೇಕೆಂದು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ಸಮೂಹ ತೀವ್ರ ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಯಮ ಗೊತ್ತಿಲ್ಲದೇ 8 ಅಂಕ ಕಳೆದುಕೊಂಡ ಪಾಕಿಸ್ತಾನ್..! – Kannada News | Slow Over Rate Costs Pakistan 8 WTC Points

ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದ (ಸ್ಲೋ ಓವರ್-ರೇಟ್) ಕಾರಣಕ್ಕಾಗಿ ಪಾಕಿಸ್ತಾನ್ ಕ್ರಿಕೆಟ್ ತಂಡಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರಿ ದಂಡ ವಿಧಿಸಿದೆ. ಪಂದ್ಯದಲ್ಲಿ 8 ಓವರ್‌ಗಳನ್ನು ಕಡಿಮೆ ಬೌಲ್ ಮಾಡಿದ ಪರಿಣಾಮವಾಗಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಪಾಕಿಸ್ತಾನದ 8 ಅಂಕಗಳನ್ನು ಕಡಿತಗೊಳಿಸಲಾಗಿದೆ.

ಅಂದರೆ ಪಾಕಿಸ್ತಾನ್ ತಂಡವು ಬರೋಬ್ಬರಿ 8 ಅಂಕಗಳನ್ನು ಕಳೆದುಕೊಂಡಿದೆ. ಹೀಗೆ ಅಂಕ ಕಳೆದುಕೊಂಡಿರುವುದು ನಿಯಮ ಗೊತ್ತಿಲ್ಲದೇ ಎಂಬುದು ವಿಶೇಷ. ಏಕೆಂದರೆ 5 ದಿನಗಳ ಪಂದ್ಯದಲ್ಲಿ ಪಾಕ್ ತಂಡವು ಒಮ್ಮೆಯೂ ಸ್ಲೋ ಓವರ್ ತಪ್ಪನ್ನು ಸರಿಪಡಿಸಲು ಮುಂದಾಗಲಿಲ್ಲ. ಇದರಿಂದಾಗಿಯೇ 8 ಅಂಕಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಟೆಸ್ಟ್ ಪಂದ್ಯಗಳಲ್ಲಿ ನಿಗದಿತ ಸಮಯದೊಳಗೆ ಓವರ್‌ಗಳನ್ನು ಮುಗಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಓವರ್​ ಮುಗಿಸದಿದ್ದರೆ…

  • ಪ್ರತಿ ಕೊರತೆಯ ಓವರ್‌ಗೆ ಆಟಗಾರರ ಪಂದ್ಯದ ಶುಲ್ಕದ  ಶೇಕಡಾ 5 ರಷ್ಟು ದಂಡ ವಿಧಿಸಲಾಗುತ್ತದೆ.
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮಗಳ ಪ್ರಕಾರ, ಪ್ರತಿ ಒಂದು ಕಡಿಮೆ ಓವರ್‌ಗೆ 1 WTC ಅಂಕವನ್ನು ಕಡಿತಗೊಳಿಸಲಾಗುತ್ತದೆ.

ಪಾಕಿಸ್ತಾನ್ ಎಡವಟ್ಟು:

ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್​ ಪಂದ್ಯವು ಐದು ದಿನಗಳ ಕಾಲ ನಡೆದಿತ್ತು. ಈ ವೇಳೆ ಎರಡು ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಪಾಕಿಸ್ತಾನ್  ತಂಡವು ನಿಗದಿತ ಸಮಯಕ್ಕಿಂತ 8 ಓವರ್‌ಗಳಷ್ಟು ಹಿಂದೆ ಇತ್ತು. ಅಂದರೆ ಮೊದಲ ಇನಿಂಗ್ಸ್​ನಲ್ಲಿ ಮಾಡಲಾದ ಸ್ಲೋ ಓವರ್​ ರೇಟ್ ತಪ್ಪನ್ನು ದ್ವಿತೀಯ ಇನಿಂಗ್ಸ್​ ವೇಳೆ ಸರಿಪಡಿಸಿಕೊಳ್ಳಬೇಕೆಂಬುದೇ ಪಾಕ್ ತಂಡಕ್ಕೆ ಗೊತ್ತಿರಲಿಲ್ಲ.

ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಯಮಗಳ ಪ್ರಕಾರ, ಪ್ರತಿ ಸ್ಲೋ ಓವರ್​ ರೇಟ್​ಗೆ, ಅಂದರೆ ಪ್ರತಿ ಓವರ್​ಗೆ ಒಂದೊಂದು ಅಂಕಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಪರಿಣಾಮ ಒಂದೇ ಪಂದ್ಯದ ಮೂಲಕ ಒಟ್ಟು 8 ಅಂಕಗಳನ್ನು ಕಳೆದುಕೊಂಡಿದ್ದಾರೆ.

ಒಂದು ವೇಳೆ ಮೊದಲ ಇನಿಂಗ್ಸ್​ನಲ್ಲಿನ ಸ್ಲೋ ಓವರ್ ರೇಟ್ ತಪ್ಪನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಸರಿಪಡಿಸಿದ್ದರೆ, ಅಂದರೆ ಬೇಗನೆ ಓವರ್ ಮಾಡಿ ಮುಗಿಸಿದ್ದರೆ ಅಂಕ ಕಡಿತದಿಂದ ಪಾರಾಗಬಹುದಿತ್ತು. ಇಲ್ಲ ಕಡಿಮೆ ಅಂಕಗಳ ಕಡಿತವನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು.

ಆದರೆ ಬಾಂಗ್ಲಾದೇಶ್ ವಿರುದ್ಧ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ್ ತಂಡದ ಆಟಗಾರರು ಬೌಲಿಂಗ್ ವೇಳೆ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಇದರಿಂದ ನಿಗದಿತ ಸಮಯದೊಳಗೆ ಓವರ್​ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಇದೀಗ ಅಂಕಗಳ ಕಡಿತದೊಂದಿಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದಾರೆ.

  • ಅಂಕಗಳ ನಷ್ಟ: ನಿಯಮದ ಪ್ರಕಾರ ಪಾಕಿಸ್ತಾನದ ಖಾತೆಯಿಂದ ಒಟ್ಟು 8 ಪ್ರಮುಖ WTC ಅಂಕಗಳನ್ನು ಕಡಿತಗೊಳಿಸಲಾಗಿದೆ.
  • ದಂಡದ ಶಿಕ್ಷೆ: ತಂಡದ ಎಲ್ಲಾ ಆಟಗಾರರಿಗೆ ಅವರ ಪಂದ್ಯದ ಶುಲ್ಕದಲ್ಲಿ ಶೇಕಡಾ 40 ರಷ್ಟು (8 ಓವರ್ x 5%) ದಂಡ ವಿಧಿಸಲಾಗಿದೆ.
  • ತಪ್ಪೊಪ್ಪಿಗೆ: ಪಾಕಿಸ್ತಾನ್ ತಂಡದ ನಾಯಕ ಶಾನ್ ಮಸೂದ್ ಅವರು ಪಂದ್ಯದ ರೆಫರಿ ವೆಂಡಿ ಜಾನ್ಸನ್ ವಿಧಿಸಿದ ಈ ದಂಡ ಮತ್ತು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯ ಬರಲಿಲ್ಲ.

ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ:

ಈ ಅಂಕಗಳ ಕಡಿತದೊಂದಿಗೆ ಪಾಕಿಸ್ತಾನ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಅಂಕಪಟ್ಟಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕೇವಲ 4 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ತಂಡದ ಜೊತೆಗೆ ಅಂಕಪಟ್ಟಿಯ ಕೊನೆಯ ಸ್ಥಾನಗಳಿಗೆ ಕುಸಿದಿದ್ದು, ಮುಂಬರುವ WTC ಫೈನಲ್ ರೇಸ್‌ನಿಂದ ಹೊರಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: IPL ಫೈನಲ್​ಗೆ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥನಿಗೆ ಆಹ್ವಾನ!

ಒಟ್ಟಾರೆಯಾಗಿ ಹೇಳುವುದಾದರೆ, ಆಧುನಿಕ ಕ್ರಿಕೆಟ್‌ನಲ್ಲಿ ಕೇವಲ ಬ್ಯಾಟಿಂಗ್-ಬೌಲಿಂಗ್ ಅಷ್ಟೇ ಅಲ್ಲ, ಸಮಯದ ನಿರ್ವಹಣೆಯೂ ಪಂದ್ಯದ ಫಲಿತಾಂಶವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ನಿಯಮಗಳ ಅರಿವಿಲ್ಲದೆ ಅಥವಾ ನಿರ್ಲಕ್ಷ್ಯದಿಂದಾಗಿ ಪಾಕಿಸ್ತಾನ 8 ಪ್ರಮುಖ ಅಂಕಗಳನ್ನು ಕಳೆದುಕೊಂಡಿರುವುದು ಅದರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕನಸಿಗೆ ಭಾರಿ ಪೆಟ್ಟು ನೀಡಿದೆ. ಮುಂದಿನ ಪಂದ್ಯಗಳಲ್ಲಾದರೂ ಪಾಕಿಸ್ತಾನ ತಂಡ ಈ ತಪ್ಪುಗಳಿಂದ ಪಾಠ ಕಲಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

ಹಾಸನ: ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ? ನಿರ್ವಾಹಕ ಹೇಳಿದ್ದೇನು ನೋಡಿ – Kannada News | Hassan Bus Fire: Know How 36 Sleeper Bus Passengers Miraculously Escaped After Midnight Tyre Burst

ಹಾಸನ, ಮೇ 16: ಉಡುಪಿಯ ಮಣಿಪಾಲದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಎಸಿ ಬಸ್‌ಗೆ ಹಾಸನದ ಶಾಂತಿಗ್ರಾಮ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆದಾಗ್ಯೂ, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆ ಬಗ್ಗೆ ನಿರ್ವಾಹಕ ‘ಟಿವಿ9’ ಜತೆ ಮಾತನಾಡಿದ್ದು, ಆ ಕ್ಷಣದಲ್ಲಿ ಜನರನ್ನು ಹೇಗೆ ಬಚಾವ್ ಮಾಡಿದ್ದು ಎಂಬುದನ್ನು ವಿವರಿಸಿದ್ದಾರೆ.

ತಡರಾತ್ರಿ 2:30ರ ಸುಮಾರಿಗೆ ಬಸ್‌ನ ಹಿಂಬದಿ ಟೈರ್ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಚಾಲಕ ಬಸ್‌ ನಿಲ್ಲಿಸಿ, ನಿದ್ರೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಿಸಿ ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 18 ಮಹಿಳೆಯರು ಮತ್ತು ಮೂವರು ಮಕ್ಕಳೂ ಸೇರಿದಂತೆ ಒಟ್ಟು 36 ಪ್ರಯಾಣಿಕರು ಈ ಬಸ್‌ನಲ್ಲಿ ಇದ್ದರು. ಬೆಂಕಿ ಅನಾಹುತದಿಂದ ಪ್ರಯಾಣಿಕರ ಮೊಬೈಲ್ ಮತ್ತು ಲಗೇಜ್‌ಗಳು ಸುಟ್ಟುಹೋಗಿವೆ ಎಂದು ಅವರು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version