ಐಪಿಎಲ್ 2026 ರ 59 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಈ ಆವೃತ್ತಿಯ 4ನೇ ಗೆಲುವು ದಾಖಲಿಸಿತು. ಇತ್ತ ಲಕ್ನೋ ವಿರುದ್ಧ ಸೋತ ಸಿಎಸ್ಕೆಗೆ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಿದ್ದು, ಉಳಿದೆರಡು ಪಂದ್ಯಗಳನ್ನು ಗೆದ್ದರೂ ಅದು ಪ್ಲೇಆಫ್ ತಲುಪುವುದು ಕಷ್ಟಕರವಾಗಿದೆ. ಈ ಪಂದ್ಯದಲ್ಲಿ ಮೊಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಕಾರ್ತಿಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 187 ರನ್ ಗಳಿಸಿ ಲಕ್ನೋಗೆ ಗೆಲ್ಲಲು 188 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಲಕ್ನೋ16.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 20 ರನ್ ಗಳಿಸಿ ಔಟಾದರೆ, ನಾಯಕ ರುತುರಾಜ್ ಗಾಯಕ್ವಾಡ್ ಕೂಡ 13 ರನ್ಗಳಿಗೆ ಸುಸ್ತಾದರು. ಕಳೆದ ಪಂದ್ಯದಲ್ಲಿ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಉರ್ವಿಲ್ ಪಟೇಲ್ ಕೇವಲ 6 ರನ್ಗಳಿಗೆ ಸುಸ್ತಾದರು.
ತಂಡದ ಪರ ಏಕಾಂಗಿ ಹೋರಾಟ ನೀಡಿದ ಕಾರ್ತಿಕ್ ಶರ್ಮಾ 35 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಬಾರಿಸಿ, 71 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಡೆವಾಲ್ಡ್ ಬ್ರೆವಿಸ್ 25 ರನ್ ಗಳಿಸಿ ಔಟಾದರೆ, ಶಿವಂ ದುಬೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 32 ರನ್ ಮತ್ತು ಪ್ರಶಾಂತವೀರ್ 13 ರನ್ ಬಾರಿಸಿ ಅಜೇಯರಾಗಿ ಉಳಿದರು. ಲಕ್ನೋ ಪರ ಆಕಾಶ್ ಸಿಂಗ್ ಗರಿಷ್ಠ 3 ವಿಕೆಟ್ ಪಡೆದರೆ, ಶಮಿ ಮತ್ತು ಶಹಬಾಜ್ ಅಹ್ಮದ್ ತಲಾ ಒಂದು ಯಶಸ್ಸು ಕಂಡರು.
ಬೆಳಗಾವಿ, (ಮೇ 15): ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಶಿವಂ ಅಸೋಸಿಯೇಟ್ (shivam associates) ಸಂಸ್ಥೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದ್ದು, ಬೆಳಗಾವಿಯಲ್ಲಿ 4500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ (Shivanand Neelannavar) ನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ(ಮೇ 15) ಅಷ್ಟೇ ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗಿತ್ತು. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಬಳಿಕ ಇಂದು (ಮೇ 15) ಶಿವಾನಂದ ನೀಲಣ್ಣನವರ್ ವಿರುದ್ಧ ಐಎಫ್ಐಆರ್ ದಾಖಲಿಸಿದ್ದು, ಇದೀಗ ಮಾಳಮಾರುತಿ ಠಾಣೆ ಪೊಲೀಸರು ಶಿವಾನಂದ ನೀಲಣ್ಣನವರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಹೈದರಾಬಾದ್, ಮೇ 15: ತೆಲಂಗಾಣದ ನಾಂಪಲ್ಲಿ ನಿಲ್ದಾಣದಿಂದ ರೈಲು ಹೊರಡುವುದಕ್ಕೂ ಸ್ವಲ್ಪ ಮೊದಲು ಇಂದು ಸಂಜೆ ಹೈದರಾಬಾದ್-ಜೈಪುರ ಎಕ್ಸ್‌ಪ್ರೆಸ್‌ನ ಎರಡು ಎಸಿ ಬೋಗಿಗಳಲ್ಲಿ ಬೆಂಕಿ (Fire Accident) ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆದರೆ ಆ ಹೊತ್ತಿಗೆ ಆ 2 ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ಆ ಬೋಗಿಗಳು ಖಾಲಿಯಾಗಿದ್ದರಿಂದ ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಉಂಟಾಗಿಲ್ಲ. ಈ ಘಟನೆಯ ಸಮಯದಲ್ಲಿ ಬೋಗಿಗಳ ಒಳಗೆ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ, ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ (Hardik Pandya) ವೃತ್ತಿಜೀವನದಲ್ಲಿ ಯಾವುದು ಅಂದುಕೊಂಡಂತೆ ಆಗುತ್ತಿಲ್ಲ. ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಪಾಂಡ್ಯ ನಾಯಕನಾಗಿ ಮತ್ತು ಆಟಗಾರನಾಗಿ ಎರಡರಲ್ಲೂ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ. ಗಾಯದಿಂದಾಗಿ ತಂಡದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅದೆನೆಂದರೆ ಪಾಂಡ್ಯ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದು, ಇದೇ ಮೇ 22 ರಂದು ತಮ್ಮ ಬಹುದಿನಗಳ ಗೆಳತಿ ಮಹಿಕಾ ಶರ್ಮಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೇಲೆ ಹೇಳಿದಂತೆ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದಾಗಿ ಕಳೆದ ಕೆಲವು ಪಂದ್ಯಗಳಿಂದ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ. ಏತನ್ಮಧ್ಯೆ, ಹಾರ್ದಿಕ್ ಪಾಂಡ್ಯ ತನ್ನ ಗೆಳತಿ ಮಹಿಕಾ ಶರ್ಮಾ ಅವರನ್ನು ಮದುವೆಯಾಗಲಿದ್ದಾರೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜುಲೈ 8, 2024 ರಂದು ತಮ್ಮ ಮೊದಲ ಮಡದಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದಿದ್ದ ಹಾರ್ದಿಕ್ ಅಂದಿನಿಂದ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.
ಎರಡನೇ ಬಾರಿಗೆ ಮದುವೆ?
ವೈರಲ್ ಪೋಸ್ಟ್ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಮೇ 22 ರಂದು ವಿವಾಹವಾಗಲಿದ್ದಾರೆ. ಆದಾಗ್ಯೂ, ಹಾರ್ದಿಕ್ ಪಾಂಡ್ಯ ಅಥವಾ ಅವರ ಕುಟುಂಬದವರಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ಪಂದ್ಯಗಳ ಸಮಯದಲ್ಲಿ ಮಹಿಕಾ ಶರ್ಮಾ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಾಗೆಯೇ ಇವರಿಬ್ಬರು ಜೊತೆಯಾಗಿ ಸುತ್ತಾಟ ನಡೆಸುತ್ತಿರುವ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಇವರಿಬ್ಬರ ಮದುವೆ ಮೇ 22 ರಂದೇ ನಡೆಯಲಿದೆಯಾ ಎಂಬುದು ಅಂದೇ ತಿಳಿಯಲಿದೆ.
ಹಾರ್ದಿಕ್ ವೃತ್ತಿಜೀವನ
ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಹಾರ್ದಿಕ್ ನಾಯಕತ್ವದಲ್ಲಿ ತಂಡ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿತು. ಹೀಗಾಗಿ ಪ್ಲೇಆಫ್ ರೇಸ್ನಿಂದಲೂ ಹೊರಗಬಿದ್ದಿತು. ಇತ್ತ ಆಟಗಾರನಾಗಿಯೂ ಹಾರ್ದಿಕ್ ಆಡಿದ ಎಂಟು ಪಂದ್ಯಗಳಲ್ಲಿ 107 ರನ್ ಗಳಿಸಲಷ್ಟೇ ಶಕ್ತರಾಗಿದ್ದು ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅವರ ಫಾರ್ಮ್ ಮತ್ತು ತಂಡದ ಪ್ರದರ್ಶನ ಎರಡೂ ನಿರಾಶಾದಾಯಕವಾಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ (Darshan) ಅವರು ಜಾಮೀನು ಪಡೆಯಲು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ದರ್ಶನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ದರ್ಶನ್ ಅವರು ಜೈಲು ವಾಸ ಮುಂದುವರಿಸುವುದು ಅನಿವಾರ್ಯ ಆಗಿದೆ. ಬೇರೆ ಪ್ರಕರಣದಲ್ಲಿ ಇರುವ ಅನೇಕರಿಗೆ ಜಾಮೀನು (Bail) ಸಿಕ್ಕಿದೆ. ಆದರೆ ದರ್ಶನ್ ಅವರಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಹಿರಿಯ ವಕೀಲ ಬಾಲನ್ ಅವರು ಉತ್ತರ ನೀಡಿದ್ದಾರೆ. ‘ಕೊಲೆ ಪ್ರಕರಣ ಆಗಿದ್ದರೂ ಪ್ರತಿ ಕೇಸ್ ಕೂಡ ಭಿನ್ನವಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿ ಇರುವುದಿಲ್ಲ. ಪೊಲೀಸರಿಗೆ ಕಾನೂನಿನ ಅರಿವು ಇದೆ. 90 ದಿನದ ಒಳಗೆ ಯಾಕೆ ಚಾರ್ಜ್ಶೀಟ್ ಹಾಕಿಲ್ಲ ಎಂದರೆ ಏನೋ ಆಗಿರಬಹುದು. ಕೆಲವು ಕಡೆ ಕೊಲೆ ಆದರೂ ಬಂಧನ ಆಗುವುದಿಲ್ಲ. ಇದು ಪ್ರಜಾಪ್ರಭುತ್ವ’ ಎಂದು ಬಾಲನ್ (Lawyer Balan) ಅವರು ಹೇಳಿದ್ದಾರೆ.
ಬೆಂಗಳೂರು, ಮೇ 15: ಆಧ್ಯಾತ್ಮಿಕ ಗುರು, ಆರ್ಟ್ ಆಫ್ ಲಿವಿಂಗ್ನ ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravi Shankar) ಅವರು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಆರ್ಟ್ ಆಫ್ ಲಿವಿಂಗ್ 45 ವರ್ಷಗಳ ಜಾಗತಿಕ ಸೇವೆ, ಮಾನವೀಯ ಸಂಪರ್ಕ ಮತ್ತು ಆಧ್ಯಾತ್ಮಿಕ ಪಯಣವನ್ನು ಕೂಡ ಮುಗಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಆಧ್ಯಾತ್ಮಿಕ ನಾಯಕರು, ನೀತಿ ನಿರೂಪಕರು, ಕಲಾವಿದರು, ಕೈಗಾರಿಕೋದ್ಯಮಿಗಳು, ಶಿಕ್ಷಣತಜ್ಞರು, ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದ ವಿಶೇಷವಾಗಿತ್ತು.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ 1 ತಿಂಗಳ ಕಾಲ ನಡೆದ ಆಚರಣೆಗಳು ಆಡಳಿತ, ಸಂಸ್ಕೃತಿ, ಆಧ್ಯಾತ್ಮಿಕತೆ, ವ್ಯವಹಾರ ಮತ್ತು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಟ್ಟುಗೂಡಿಸಿದವು. ಒತ್ತಡರಹಿತ, ಹಿಂಸಾಚಾರ ಮುಕ್ತ ಸಮಾಜವನ್ನು ಸೃಷ್ಟಿಸುವ ದೃಷ್ಟಿಕೋನದಿಂದ 1981ರಲ್ಲಿ ಗುರುದೇವ ರವಿಶಂಕರ್ ಅವರು ಸ್ಥಾಪಿಸಿದ ಆರ್ಟ್ ಆಫ್ ಲಿವಿಂಗ್ ಇದೀಗ ಜಗತ್ತನ್ನೇ ಆಧ್ಯಾತ್ಮದತ್ತ ಸೆಳೆಯುವಂತೆ ಮಾಡಿದೆ.
ಈ ಆಶ್ರಮಕ್ಕೆ ಭೇಟಿ ನೀಡಿದವರಲ್ಲಿ ಮಹಾರಾಷ್ಟ್ರದ ಗೌರವಾನ್ವಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹರಿಯಾಣದ ಗೌರವಾನ್ವಿತ ರಾಜ್ಯಪಾಲ ಪ್ರೊಫೆಸರ್ ಆಶಿಮ್ ಕುಮಾರ್ ಘೋಷ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, 5 ಬಾರಿ ರಾಷ್ಟ್ರೀಯ ಮಹಿಳಾ ಹೆವಿವೇಯ್ಟ್ ಚಾಂಪಿಯನ್ ನೂಪುರ್ ಶಿಯೋರೆನ್; ಗೌರವಾನ್ವಿತ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಸಂಸದರು, ಸಚಿವರು, ಕಲಾವಿದರು, ಉದ್ಯಮಿಗಳು ಮತ್ತು ಸಾಮಾಜಿಕ ಮುಖಂಡರು ಸೇರಿದ್ದಾರೆ.
ಆರ್ಟ್ ಆಫ್ ಲಿವಿಂಗ್ನಲ್ಲಿ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್, ಗುರುದೇವ ರವಿಶಂಕರ್ ಅವರು ಇಡೀ ಜಗತ್ತಿಗೆ ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ ಎಂದು ಬಣ್ಣಿಸಿದರು. “ವಿಶ್ವಗುರುವಾಗಿ ನಾವು ಭಾರತವನ್ನು ನೋಡುವ ದೃಷ್ಟಿಕೋನ ಕೇವಲ ಆರ್ಥಿಕ ಅಥವಾ ಮಿಲಿಟರಿ ಶಕ್ತಿಯಲ್ಲಿ ಬೇರೂರಿಲ್ಲ. ಅದು ಆಧ್ಯಾತ್ಮಿಕ ಶಕ್ತಿಯಲ್ಲಿಯೂ ಇದೆ. ಭಾರತ ಆಧ್ಯಾತ್ಮಿಕ ಮಹಾಶಕ್ತಿಯಾಗುವ ಮಾರ್ಗಕ್ಕೆ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಮಾರ್ಗದರ್ಶನ ಮಾಡುತ್ತಾರೆ” ಎಂದು ಫಡ್ನವೀಸ್ ಹೇಳಿದ್ದಾರೆ.
Dattatreya Hosabale With Ravi Shankar Guruji
ಇದೇ ವೇಳೆ ಮಾತನಾಡಿದ ಹರಿಯಾಣದ ರಾಜ್ಯಪಾಲ ಪ್ರೊಫೆಸರ್ ಆಶಿಮ್ ಕುಮಾರ್ ಘೋಷ್, ಗುರುದೇವ ರವಿಶಂಕರ್ ಅವರ ಜಾಗತಿಕ ಆಧ್ಯಾತ್ಮಿಕ ಪ್ರಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 45 ವರ್ಷಗಳ ಹಿಂದೆ, ಗುರುದೇವ ರವಿಶಂಕರ್ ಕರ್ನಾಟಕದ ಈ ಜಾಗದಲ್ಲಿ ಜಾಗೃತಿ ಮತ್ತು ಕರುಣೆಯ ದೀಪವನ್ನು ಬೆಳಗಿಸಿದರು. ಇಂದು ಆ ದೀಪವು 182ಕ್ಕೂ ಹೆಚ್ಚು ದೇಶಗಳನ್ನು ಬೆಳಗಿಸುತ್ತಿದೆ. ಆ ದೀಪ 1 ಬಿಲಿಯನ್‌ಗಿಂತಲೂ ಹೆಚ್ಚು ಮನಸುಗಳನ್ನು ಮುಟ್ಟಿದೆ. ಗುರುದೇವ ರವಿಶಂಕರ್ ಅವರು ಜಗತ್ತಿಗೆ ಕೇವಲ ಜ್ಞಾನವನ್ನು ನೀಡಿಲ್ಲ ಒಂದು ಮಾರ್ಗವನ್ನು ಕೂಡ ನೀಡಿದ್ದಾರೆ ಎಂದರು.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೃಹತ್ ಧ್ಯಾನ ಮಂದಿರದಲ್ಲಿ ವಿಶೇಷ ಸತ್ಸಂಗ ಮತ್ತು ಧ್ಯಾನವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಲವು ಗಣ್ಯರು ಗುರುದೇವ ರವಿಶಂಕರ್ ಅವರೊಂದಿಗೆ ಸೇರಿಕೊಂಡರು. ಈ ವಾರದ ಆರಂಭದಲ್ಲಿ, 182 ದೇಶಗಳಾದ್ಯಂತ ಕೋಟ್ಯಂತರ ಜನರು ಜಾಗತಿಕ ಶಾಂತಿಗಾಗಿ ಗುರುದೇವರೊಂದಿಗೆ ಧ್ಯಾನ ಕಾರ್ಯಕ್ರಮದಲ್ಲಿ ಆನ್‌ಲೈನ್‌ನಲ್ಲಿ ಮತ್ತು ವೈಯಕ್ತಿಕವಾಗಿ ಸೇರಿಕೊಂಡರು. ಇದು ವಿಶ್ವದ ಅತಿದೊಡ್ಡ ಸಾಮೂಹಿಕ ಧ್ಯಾನ ಸಭೆಗಳಲ್ಲಿ ಒಂದಾಗಿದೆ.
ಸತ್ಸಂಗದ ಸಮಯದಲ್ಲಿ ಮಾತನಾಡಿದ ಗುರುದೇವ ರವಿಶಂಕರ್ ಅವರು ಧ್ಯಾನ, ಸಂತೋಷ, ಆಂತರಿಕ ಶಾಂತಿ ಮತ್ತು ಜೀವನದ ಆಳವಾದ ಅರ್ಥದ ಬಗ್ಗೆ ಮಾತನಾಡಿದರು. ನಮ್ಮ ಜೀವನವೇ ಒಂದು ಆಚರಣೆ. ಈ ಜೀವನದಲ್ಲಿ ನಾವು ಏನನ್ನು ಪಡೆದುಕೊಂಡಿದ್ದೇವೆಯೋ ಅದು ದೇವರ ಅನುಗ್ರಹವಾಗಿದೆ. ಮನಸ್ಸು ಶಾಂತಿಯುತವಾಗಿದ್ದಾಗ ಬುದ್ಧಿಶಕ್ತಿ ತೀಕ್ಷ್ಣವಾಗುತ್ತದೆ, ಮನಸ್ಸು ಅರಳುತ್ತದೆ, ದೇಹವು ಶಕ್ತಿಯನ್ನು ಪಡೆಯುತ್ತದೆ. ಇದರಿಂದ ನಮ್ಮ ಮೂಲಕ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.
ನಮ್ಮ ಮನಸ್ಸನ್ನು ಯಾವಾಗಲೂ ಸಂತೋಷವಾಗಿಡುವ ಮಾರ್ಗವೆಂದರೆ ನಂಬಿಕೆ. ದೇವರು ನಮ್ಮೊಂದಿಗಿದ್ದಾನೆ ಮತ್ತು ನಮಗೆ ಯಾವುದು ಉತ್ತಮವೋ ಅದನ್ನು ಅವನು ಖಂಡಿತವಾಗಿಯೂ ನಮಗೆ ನೀಡುತ್ತಾನೆ ಎಂಬ ನಂಬಿಕೆಯನ್ನು ನಾವು ಇಟ್ಟುಕೊಳ್ಳಬೇಕು ಎಂದು ರವಿಶಂಕರ್ ಗುರೂಜಿ ಹೇಳಿದರು.
ಕಳೆದ 45 ವರ್ಷಗಳಲ್ಲಿ ಆರ್ಟ್ ಆಫ್ ಲಿವಿಂಗ್ ಧ್ಯಾನ, ಶಿಕ್ಷಣ, ಆಘಾತ ಪರಿಹಾರ, ಪರಿಸರ ಕ್ರಿಯೆ, ಮಹಿಳಾ ಸಬಲೀಕರಣ, ಯುವ ನಾಯಕತ್ವ ಮತ್ತು ವಿಪತ್ತು ನಿರ್ವಹಣೆ ಉಪಕ್ರಮಗಳ ಮೂಲಕ 182 ದೇಶಗಳಲ್ಲಿ 1 ಶತಕೋಟಿಗೂ ಹೆಚ್ಚು ಜನರನ್ನು ಮುಟ್ಟಿದೆ. ಈ ಕಾಯಕ ಮುಂದೆಯೂ ಮುಂದುವರಿಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ, ಮೇ 15: ಅಗತ್ಯ ವಸ್ತುಗಳ ಮಿತವ್ಯಯ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ್ದ ಕರೆಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಆದರೆ, ಈ ಮಧ್ಯೆ ಬಾಗಲಕೋಟೆಯ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ (Narayansa Bhandage) ಕುಟುಂಬ ಪ್ರಧಾನಿಯವರ ಕರೆಯನ್ನು ಅಕ್ಷರಶಃ ಪಾಲಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಿದೆ. ಇಂಧನ, ಗ್ಯಾಸ್ ಹಾಗೂ ಆರ್ಥಿಕ ಮಿತವ್ಯಯಕ್ಕಾಗಿ ಈ ಕುಟುಂಬ ಕೈಗೊಂಡಿರುವ ನಿರ್ಧಾರಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.
ಮುಖ್ಯಾಂಶಗಳು
ಇಂಧನ ಉಳಿತಾಯ: ಗ್ಯಾಸ್‌ನಿಂದ ಎಲೆಕ್ಟ್ರಿಕ್ ಸ್ಟೋವ್‌ಗೆ ಬದಲಾವಣೆ
ಆರ್ಥಿಕ ಮಿತವ್ಯಯ: ಚಿನ್ನಾಭರಣ ಖರೀದಿಗೆ ತಾತ್ಕಾಲಿಕ ಬ್ರೇಕ್
ಸೈಕಲ್ ಸವಾರಿ: ಪರಿಸರ ಸ್ನೇಹಿ ಪ್ರಯಾಣದ ಮೂಲಕ ಇಂಧನ ಉಳಿತಾಯ
ಇಂಧನ, ಅಡುಗೆ ಅನಿಲ ಉಳಿತಾಯ ಸೇರಿದಂತೆ ಆರ್ಥಿಕ ಸಂಪತ್ತಿನ ಮಿತವ್ಯಯ ಬಳಕೆಗೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರ ಕುಟುಂಬ ಅದರ ಪಾಲನೆಗೆ ಮುಂದಾಗಿದೆ. ನಾರಾಯಣಸಾ ಬಾಂಡಗೆಯವರ ಮನೆಯಲ್ಲಿ ಸದ್ಯ ಗ್ಯಾಸ್ ಬಳಕೆ ನಿಲ್ಲಿಸಲಾಗಿದ್ದು, ಸಂಪೂರ್ಣವಾಗಿ ಎಲೆಕ್ಟ್ರಿಕ್ ಸ್ಟೋವ್‌ನಲ್ಲಿ ಅಡುಗೆ ಮಾಡಲಾಗುತ್ತಿದೆ. ಅತಿ ಅವಶ್ಯಕತೆ ಇದ್ದರೆ ಮಾತ್ರ ಸಿಲಿಂಡರ್ ಬಳಸಲು ನಿರ್ಧರಿಸಲಾಗಿದೆ.
ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಕುಟುಂಬ
ಇಷ್ಟೇ ಅಲ್ಲದೆ, ಪ್ರಧಾನಿ ಕರೆಯಂತೆ ದೇಶದ ಆರ್ಥಿಕ ಹಿತದೃಷ್ಟಿಯಿಂದ ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಚಿನ್ನಾಭರಣಗಳನ್ನು ಖರೀದಿಸದಿರಲು ಮನೆಯ ಮಹಿಳೆಯರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.
ಇಷ್ಟಕ್ಕೆ ಈ ಕುಟುಂಬದ ಮಿತವ್ಯಯದ ನಿರ್ಧಾರ ಮುಗಿಯುವುದಿಲ್ಲ. ಇಂಧನ ಉಳಿತಾಯದ ಹಿನ್ನೆಲೆಯಲ್ಲಿ ಕಾರು ಸಂಚಾರಕ್ಕೂ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಹೌದು, ಮೋದಿ ಕರೆಗೆ ಗೌರವ ಕೊಟ್ಟು ಈ ಕುಟುಂಬ ಈಗ ಸೈಕಲ್ ಸವಾರಿಗೆ ಮೊರೆ ಹೋಗಿದೆ. ಅತಿ ಜರೂರಿ ಕೆಲಸಗಳಿದ್ದರೆ ಮಾತ್ರ ಕಾರು ಮುಟ್ಟುವ ಕುಟುಂಬಸ್ಥರು, ನಿತ್ಯದ ಮನೆಗೆಲಸ ಹಾಗೂ ವ್ಯವಹಾರಗಳಿಗಾಗಿ ಸೈಕಲ್ ಮೂಲಕವೇ ಸಂಚರಿಸುತ್ತಿದ್ದಾರೆ.
ಯಾರು ಏನಾದರೂ ಹೇಳಲಿ ನಾವು ಮೋದಿ ಕರೆ ಪಾಲಿಸುತ್ತೇವೆ: ಗಿರೀಶ್ ಬಾಂಡಗೆ
ನಾರಾಯಣಸಾ ಬಾಂಡಗೆ ಅವರ ಪುತ್ರ ಗಿರೀಶ್ ಬಾಂಡಗೆ ನಿತ್ಯ ಸೈಕಲ್ ಮೇಲೆಯೇ ತಮ್ಮ ಅಂಗಡಿ ಮತ್ತು ವ್ಯವಹಾರಗಳಿಗೆ ತೆರಳುತ್ತಿದ್ದಾರೆ. ನಗರದಾದ್ಯಂತ ಸೈಕಲ್‌ನಲ್ಲೇ ಸಂಚರಿಸಲು ನಿರ್ಧರಿಸಿರುವ ಇವರು, ದೂರದ ಊರುಗಳಿಗೆ ಹೋಗಲು ಮಾತ್ರ ಕಾರು ಬಳಸುತ್ತಿದ್ದಾರೆ. ವಿಶೇಷವೆಂದರೆ, ಸ್ವತಃ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರು ಕೂಡ ಕುಟುಂಬ ಸಮೇತ ದೇಶಾದ್ಯಂತ ಪ್ರವಾಸಕ್ಕೆ ತೆರಳಿದ್ದು, ಎಲ್ಲೂ ಕಾರು ಬಳಸದೆ ರೈಲಿನಲ್ಲೇ ಪ್ರಯಾಣಿಸುತ್ತಿದ್ದಾರೆ. ಇದು ದೇಶದ ಹಿತ ಹಾಗೂ ದೇಹದ ಆರೋಗ್ಯಕ್ಕೂ ಒಳ್ಳೆಯದು. ಯಾರು ಏನಾದರೂ ಹೇಳಲಿ ನಾವು ಮೋದಿ ಕರೆ ಪಾಲಿಸುತ್ತೇವೆ ಎಂದು ಗಿರೀಶ್ ಬಾಂಡಗೆ ಹೇಳಿದ್ದಾರೆ.
ಒಟ್ಟಿನಲ್ಲಿ, ಪ್ರಧಾನಿ ಮೋದಿಯವರ ಮಿತವ್ಯಯದ ಕರೆಗೆ ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ಪರ-ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಆದರೆ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಕುಟುಂಬ ಮಾತ್ರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಪ್ರಧಾನಿ ಕರೆಯನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ.
ಬೆಂಗಳೂರು, ಮೇ 15): ಬೆಂಗಳೂರಿನ (Bengaluru) ಮಾರತ್ ಹಳ್ಳಿಯ ಮನೆಯೊಂದರಲ್ಲಿ ಗೆಳೆಯನ ಮೊಬೈಲ್ (Mobile Phone) ಬಚ್ಚಿಟ್ಟು ತಮಾಷೆ (Joke) ಮಾಡಲಾಗಿದ್ದು, ಕೊನೆಗೆ ಈ ಮಜಾಕ್ ಸ್ನೇಹಿತನ ಜೀವ ಬಲಿಪಡೆದುಕೊಂಡಿದೆ. ಹೌದು….ಮೊಬೈಲ್ ಬಚ್ಚಿಟ್ಟ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ತಮಾಷೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮುಚ್ಚಿಟ್ಟ ವಿಚಾರಕ್ಕೆ ಕೊಲೆ ಮಾಡಿದ್ದ ಕೇಸ್ ನಲ್ಲಿ ಆರೋಪಿ ರಾಮು ಎಂಬಾತನನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ತಾನು ಕೊಲೆ ಮಾಡಿದ್ದೇನೆ ಎಂಬೂದು ಸಹ ಗೊತ್ತಿಲ್ಲದೇ ಅಲೆಯುತಿದ್ದ ರಾಮು ಎನ್ನುವಾತನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಗೊತ್ತಾಗಿದೆ.
ಕೊಲೆ ನಡದ ದಿನ ಆರೋಪಿ ರಾಮು ಮೊಬೈಲ್ ಅನ್ನು ಕೊಲೆಯಾದ ಪರುಶುರಾಮ್ ಮುಚ್ಚಿಟ್ಟು ಆಟವಾಡಿಸಿದ್ದ. ಎಷ್ಟು ಬೇಡಿಕೊಂಡರೂ ಕೊಟ್ಟಿರಲಿಲ್ಲ.ಕೊನೆಗೆ ಈ ತಮಾಷೆ ಹೋಗಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನ್ನ ಮೊಬೈಲ್ ಕೊಡು ಎಂದು ಪರುಶುರಾಮ್ ಸಿರಿಯಸ್ ಆಗಿ ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡ ರಾಮು, ಅಡುಗೆ ಮನೆಯಲ್ಲಿದ್ದ ಚಾಕು ತಂದು ಪರುಶುರಾಮ್ ಪರಶುರಾಮ್ ಗೆ ಚುಚ್ಚಿ ಏನಾಗಲ್ಲ ಬಿಡು ಎಂದು ಎಸ್ಕೇಪ್ ಆಗಿದ್ದಾನೆ. ಆದರೆ, ತೀವ್ರ ರಕ್ತಸ್ರವಾಗಿ ಪರಶುರಾಮ್ ಸಾವನ್ನಪ್ಪಿದ್ದಾನೆ.
ಕೊಲೆಯಾದ ಪರುಶುರಾಮ್, ಕೆಲಸ ಮುಗಿಸಿಕೊಂಡು ರಾಮು ಮನೆಗೆ ಹೋಗಿದ್ದ.ಬಳಿಕ ಫೋನ್ ಇಟ್ಟು ಬಾತ್ ರೂಮ್ಗೆ ಹೋಗಿದ್ದ. ಆದ್ರೆ, ವಾಶ್ ರೂಮಿಗೆ ಹೋಗಿ ಬರುವಷ್ಟರಲ್ಲೇ ಸ್ಥಳದಲ್ಲಿ ಮೊಬೈಲ್ ನಾಪತ್ತೆಯಾಗಿತ್ತು. ಬಳಿಕ ಪರಶುರಾಮ್, ತನ್ನ ಸ್ನೇಹಿತ ರಾಮು ಬಳಿ ಮೊಬೈಲ್ ಕೇಳಿದ್ದಾನೆ. ಆದ್ರೆ, ರಾಮು ತಮಾಷೆ ಮಾಡಲಿಕ್ಕೆ ಎಂದು ಮೊಬೈಲ್ ತೆಗೆದು ಇಟ್ಟುಕೊಂಡಿದ್ದರೂ ಸಹ ತನಗೆ ಗೊತ್ತಿಲ್ಲ ಎಂದು ಕಾಮಿಡಿ ಮಾಡಿದ್ದಾನೆ. ಆದರೂ ಬಿಡದ ಪರಶುರಾಮ್ ಫೋನ್ ಕೊಡು ಎಂದು ಬೆನ್ನುಬಿದ್ದಿದ್ದ. ಬಳಿಕ ತಮಾಷೆಯಾಗಿ ತೆಗೆದುಕೊಳ್ಳದ ಆರೋಪಿ ರಾಮು, ಕೋಪಗೊಂಡು ಗಲಾಟೆ ಮಾಡಿದ್ದಾನೆ. ಈ ವೇಳೆ ಪರುಶುರಾಮ್ ರಾಮುಗೆ ಹೊಡೆದಿದ್ದನಂತೆ .ನನಗೆ ಹೊಡೆಯುತ್ತಿಯಾ ಎಂದು ನೇರವಾಗಿ ಅಡುಗೆ ಮನೆಗೆ ಹೋಗಿ ಚಾಕು ತಂದು ಒಂದೇ ಬಾರಿ ಚುಚ್ಚಿ ಪರಶುರಾಮ್ ಫೋನ್ ಸಮೇತ ಮನೆಯಿಂದ ಹೋಗಿದ್ದ.
ತಮಾಷೆಯಲ್ಲೇ ಹೋಯ್ತು ಗೆಳೆಯನ ಜೀವ
ಮತ್ತೊಂದು ವಿಚಾರ ಅಂದ್ರೆ ಮಾರತ್ ಹಳ್ಳಿ ಪೊಲೀಸರು ಆರೋಪಿ ರಾಮುನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ರಾಮು, ಸಾರ್ ಸುಮ್ಮನೇ ಸುಳ್ಳು ಹೇಳಬೇಡಿ. ನಾನು ಸಣ್ಣ ಗಾಯ ಮಾಡಿದ್ದೆ ಅಷ್ಟೇ. ಅದಕ್ಕೆ ಅವನು ಸತ್ತಿಲ್ಲ. ಅವನು ಹುಡುಕಿಕೊಂಡು ಬರಲಿ ಎಂದು ನಾನು ಮೊಬೈಲ್ ತಗೊಂಡು ಹೋಗಿದ್ದೆ. ಆದ್ರೆ, ಜಗಳ ನಡೆದ ಎರಡು ದಿನವಾದರೂ ಅವನು ಬಂದಿಲ್ಲ. ಹೀಗಾಗಿ ರೂಮ್ ಹತ್ರ ಬಂದು ನೋಡಿದೆ ಆದ್ರೆ ಬೀಗ ಹಾಕಿತ್ತು ಎಂದು ಹೇಳಿದ್ದಾನೆ. ಅಂದರೆ ಇದುವರೆಗೂ ಕೊಲೆ ಮಾಡಿದ ರಾಮು ಇದೊಂದು ತಮಾಷೆ ಜಗಳ ಎಂದುಕೊಂಡಿದ್ದನಂತೆ.ಆದ್ರೆ ಹೊಟ್ಟೆಗೆ ಆಗಿದ್ದ ತೀವ್ರ ಸ್ವರೂಪದ ಗಾಯ ಹಾಗೂ ರಕ್ತ ಸ್ರಾವದಿಂದ ಪರುಶುರಾಮ್ ಸಾವನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಣ್ಣ ಪುಟ್ಟ ತಮಾಷೆ ವಿಚಾರ ಆಗಿದ್ರೂ ಪರವಾಗಿಲ್ಲ, ಅದು ಜಸ್ಟ್ ಮಾತಿನಲ್ಲೆ ಇರಲಿ, ಅದರ ಬದಲು ಜಗಳದಲ್ಲಿ ಸಣ್ಣ ಆಯುಧಗಳ ಬಳಕೆ ಆದ್ರೆ ಹೀಗೆ ಆಗೋದು.
ನವದೆಹಲಿ, ಮೇ 15: ನೀಟ್ ಯುಜಿ (NEET UG 2026) ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ಹಿಂದಿನ ಕಿಂಗ್‌ಪಿನ್ ಯಾರೆಂದು ಕೊನೆಗೂ ಕೇಂದ್ರ ತನಿಖಾ ದಳ (ಸಿಬಿಐ) ಪತ್ತೆಹಚ್ಚಿದೆ. ಪುಣೆಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಕೆಮಿಸ್ಟ್ರಿ ಪ್ರೊಫೆಸರ್ ಪಿ.ವಿ ಕುಲಕರ್ಣಿ ಎಂಬುವವರೇ ಈ ಹಗರಣದ ರೂವಾರಿ ಎಂಬುದು ಬಯಲಾಗಿದೆ. ಅವರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪ್ರಶ್ನೆ ಪತ್ರಿಕೆ ತಯಾರಿಕೆ ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಭಾಗಿಯಾಗಿದ್ದರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಸುವ ತಂಡದಲ್ಲಿಯೂ ಅವರಿದ್ದರು. ಅವರು ತಮ್ಮದೇ ಖಾಸಗಿ ಕೋಚಿಂಗ್ ಕ್ಲಾಸ್ ಕೂಡ ನಡೆಸುತ್ತಿದ್ದರು. ಅಲ್ಲಿಯೇ ಅವರು ನೀಟ್ ಪ್ರಶ್ನೆ ಪತ್ರಿಕೆಗಳನ್ನು ಹಂಚಿದ್ದಾರೆ ಎನ್ನಲಾಗಿದೆ.
ಹಾಗೇ, ಏಜೆಂಟ್ಗಳಿಬ್ಬರಿಗೆ ಅವರು ಭಾರೀ ಮೊತ್ತಕ್ಕೆ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿದ್ದರು. ಅವರು ಮಹಾರಾಷ್ಟ್ರದಾದ್ಯಂತ ಅದನ್ನು ಹಂಚಿದ್ದರು. ಸಿಬಿಐ ಪೊಲೀಸರು ಒಬ್ಬೊಬ್ಬರೇ ಆರೋಪಿಗಳನ್ನು ಹಿಡಿಯುತ್ತಾ ಹೋದಾಗ ಕೊನೆಗೂ ಪ್ರಮುಖ ಆರೋಪಿಯ ಹೆಸರು ಬಯಲಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಪಿ.ವಿ ಕುಲಕರ್ಣಿ ಮತ್ತೊಬ್ಬ ಆರೋಪಿ ಮನೀಶಾ ವಾಘ್ಮಾರೆ ಸಹಾಯದಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು. ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ತನ್ನ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿಗಳನ್ನು ನಡೆಸಿದ್ದರು ಎನ್ನಲಾಗಿದೆ. ಅದಕ್ಕೆ ಸಾಕಷ್ಟು ಹೆಚ್ಚಿನ ಹಣವನ್ನೂ ಪಡೆದಿದ್ದರು.
ಕುಲಕರ್ಣಿ ಮೂಲತಃ ಲಾತೂರ್ ಜಿಲ್ಲೆಯವರು. ಮೇ 3 ರಂದು ನಡೆಸಲಾಗಿದ್ದ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಪತ್ರಿಕೆ ಸೋರಿಕೆ ಆರೋಪದ ನಂತರ ಮೇ 12 ರಂದು ರದ್ದುಗೊಳಿಸಲಾಗಿತ್ತು. ಇದಾದ ನಂತರ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು. ಈ ನೀಟ್ ಯುಜಿ ಪ್ರಶ್ನೆ ಪತ್ರಿಕೆಯನ್ನು ತಾವು ಕೋಚಿಂಗ್ ನೀಡುವ ವಿದ್ಯಾರ್ಥಿಗಳಿಗೆ ಕುಲಕರ್ಣಿ ನೀಡಿದ್ದರು.
ಈ ತರಗತಿಗಳ ಸಮಯದಲ್ಲಿ, ಕುಲಕರ್ಣಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಉತ್ತರದ ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ಡಿಕ್ಟೇಟ್ ಮಾಡುತ್ತಿದ್ದರು. ಅವರು ಅದನ್ನು ತಮ್ಮ ನೋಟ್‌ಬುಕ್‌ಗಳಲ್ಲಿ ಬರೆದುಕೊಂಡಿದ್ದರು. ಸಿಬಿಐ ಪ್ರಕಾರ, ಆ ಕೈಬರಹದ ಪ್ರಶ್ನೆಗಳು ಮತ್ತು ಉತ್ತರಗಳು ಮೇ 3ರಂದು ನಡೆಸಲಾದ ನಿಜವಾದ ನೀಟ್ ಯುಜಿ 2026 ಪ್ರಶ್ನೆ ಪತ್ರಿಕೆಗೆ ನಿಖರವಾಗಿ ಹೊಂದಿಕೆಯಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರದಿಂದ ಇದುವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಪಿ.ವಿ. ಕುಲಕರ್ಣಿ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿಸಲಾದ ಒಟ್ಟು ಆರೋಪಿಗಳ ಸಂಖ್ಯೆ 8ಕ್ಕೆ ತಲುಪಿದೆ.
ಈ ಹಿಂದೆ ಬಂಧಿಸಲಾದ 7 ಜನರಲ್ಲಿ, 5 ಆರೋಪಿಗಳನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅವರನ್ನು ವಿವರವಾದ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುರುವಾರ ಬಂಧಿಸಲಾದ ಉಳಿದ ಇಬ್ಬರು ಆರೋಪಿಗಳನ್ನು ಪುಣೆಯ ನ್ಯಾಯಾಲಯಕ್ಕೆ ಟ್ರಾನ್ಸಿಟ್ ರಿಮಾಂಡ್‌ಗಾಗಿ ಹಾಜರುಪಡಿಸಲಾಗುತ್ತಿದೆ. ಇದಾದ ನಂತರ ಮುಂದಿನ ವಿಚಾರಣೆಗಾಗಿ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada
ಬೆಂಗಳೂರು, ಮೇ 15: ಬೆಂಗಳೂರಿನ (Bangaluru) ಹೊರವರ್ತುಲ ರಸ್ತೆಯಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಬಸ್ ಪಥವನ್ನ ಹೊಸ ರೂಪದಲ್ಲಿ ಅಂದರೆ ಆದ್ಯತಾ ಪಥವನ್ನಾಗಿ ಮತ್ತೆ ಅನುಷ್ಠಾನ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಮೂಲಕ ಐಟಿಬಿಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಟ್ರಾಫಿಕ್ (traffic) ದಟ್ಟಣೆ ನಿಯಂತ್ರಣ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಸಿದ್ಥತೆ ನಡೆಸಿದ್ದಾರೆ.
ಮುಖ್ಯಾಂಶಗಳು
ಹೊರವರ್ತುಲ ರಸ್ತೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ
ಬಿಎಂಟಿಸಿ ಆದ್ಯತಾ ಪಥ ಮರು ಅನುಷ್ಠಾನಕ್ಕೆ ಸಿದ್ಧತೆ
ಐಟಿ ಕಾರಿಡಾರ್‌ಗಳಲ್ಲಿ ಸುಗಮ ಸಂಚಾರಕ್ಕೆ ಮಾಸ್ಟರ್ ಪ್ಲಾನ್
ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್ಗಳ ಸಂಚಾರಕ್ಕಾಗಿಯೇ ಬಸ್ ಲೇನ್ಗಳನ್ನ ಪರಿಚಯಿಸಲಾಗಿತ್ತು. ಈ ವೇಳೆ ಬಿಎಂಟಿಸಿ ಬಳಸುವವರ ಸಂಖ್ಯೆ ಕೂಡ ಈ ಭಾಗದಲ್ಲಿ ಹೆಚ್ಚಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತವಾಗಿತ್ತು. ಈಗ ಮತ್ತೆ ಬಸ್ ಪಥವನ್ನ ಆದ್ಯತಾ ಪಥವನ್ನಾಗಿ ಹೊಸ ರೂಪದಲ್ಲಿ ಪರಿಚಯಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮತ್ತು ಜಿಬಿಎ ಅಧಿಕಾರಿಗಳು ಮುಂದಾಗಿದ್ದಾರೆ.
ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಳ
ಇಬ್ಬಲೂರು, ಬೆಳ್ಳಂದೂರು, ಮಾರತಹಳ್ಳಿ ಭಾಗದ ಔಟರ್ ರಿಂಗ್ ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಾಗಿದೆ. ಹೀಗಾಗಿ ಬಿಎಂಟಿಸಿ ಬಸ್ ಸೇರಿ ಸಮೂಹ ಸಾರಿಗೆ ವ್ಯವಸ್ಥೆಯ ವಾಹನಗಳಿಗೆ ಆದ್ಯತಾ ಪಥವನ್ನ ನಿರ್ಮಿಸುವ ಆಲೋಚನೆ ಇದೆ. ಈ ಕುರಿತಾಗಿ ಬಿಎಂಟಿಸಿ, ಜಿಬಿಎ ಅಧಿಕಾರಿಗಳ ಜೊತೆ ಟ್ರಾಫಿಕ್ ಪೊಲೀಸರು ಈಗಾಗಲೇ ಸಭೆ ಕೂಡ ಮಾಡಿದ್ದಾರೆ. ಇನ್ನು ಆದ್ಯತಾ ಪಥ ಮಾಡುವುದರ ಬಗ್ಗೆ ಪ್ರಯಾಣಿಕರು ಸಹಮತ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಈ ಆದ್ಯತಾ ಪಥವು ಆದಷ್ಟು ಬೇಗ ನಿರ್ಮಾಣಗೊಂಡು, ಜನರು ಖಾಸಗಿ ವಾಹನಗಳ ವ್ಯಾಮೋಹ ಬಿಟ್ಟು ಬಿಎಂಟಿಸಿ ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತಾಗಲಿ ಮತ್ತು ಹೊರವರ್ತುಲ ರಸ್ತೆಯ ಸಂಚಾರ ಸುಗಮವಾಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.