ಅಯೋಧ್ಯೆಯಲ್ಲಿ ರಣಬೀರ್ ಕಪೂರ್ ಹೂಡಿಕೆ: 3.31 ಕೋಟಿ ರೂಪಾಯಿಗೆ ಜಮೀನು ಖರೀದಿಸಿದ ನಟ – Kannada News | Ramayana actor Ranbir Kapoor buys property in Ayodhya Sarayu project for Rs 3 Cr

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಬೆನ್ನಲ್ಲೇ ಈಗ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ. ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯ ಮೇಲೆ ನಿರ್ಮಾಣವಾಗುತ್ತಿರುವ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಅವರ ‘ದಿ ಸರಯೂ’ ಎಂಬ ಅತ್ಯಾಧುನಿಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ನಲ್ಲಿ ರಣಬೀರ್ ಕಪೂರ್ (Ranbir Kapoor) ಅವರು 3.31 ಕೋಟಿ ರೂಪಾಯಿ ಮೌಲ್ಯದ ಜಾಗ ಖರೀದಿಸಿದ್ದಾರೆ ಎಂದು ಸಂಸ್ಥೆ ಗುರುವಾರ (ಮೇ 14) ಪ್ರಕಟಿಸಿದೆ.

ರಣಬೀರ್ ಖರೀದಿಸಿರುವ ಈ ಭೂಮಿಯು 2,134 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದು ದೇಗುಲ ನಗರಿ ಅಯೋಧ್ಯೆಯಲ್ಲಿ ಐಷಾರಾಮಿ ನಿವೇಶನಗಳಿಗೆ ಇರುವ ಬೇಡಿಕೆಯನ್ನು ಪ್ರತಿಫಲಿಸುತ್ತದೆ. 75 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯು ಸರಯೂ ನದಿಯ ದಡದಲ್ಲಿದೆ. ಇಲ್ಲಿ ಬೃಹತ್ ಕ್ಲಬ್‌ಹೌಸ್, 35ಕ್ಕೂ ಹೆಚ್ಚು ಆಧುನಿಕ ಸೌಲಭ್ಯಗಳು ಮತ್ತು ಐದು ಎಕರೆ ವಿಸ್ತೀರ್ಣದ ಸಂಪೂರ್ಣ ಸಸ್ಯಾಹಾರಿ ‘ದಿ ಲೀಲಾ’ ಐಷಾರಾಮಿ ಹೋಟೆಲ್ ಕೂಡ ತಲೆ ಎತ್ತಲಿದೆ.

ಈ ಹೂಡಿಕೆಯ ಬಗ್ಗೆ ಮಾತನಾಡಿರುವ ರಣಬೀರ್ ಕಪೂರ್, ‘ಅಯೋಧ್ಯೆ ನನ್ನನ್ನು ಆಯ್ಕೆ ಮಾಡಿದೆ ಎಂದು ನಾನು ನಂಬುತ್ತೇನೆ. ಇದು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನನ್ನ ಕುಟುಂಬದ ಪರಂಪರೆಯಲ್ಲಿ ಈ ಜಾಗವೂ ಒಂದಾಗಲಿ ಎಂಬುದು ನನ್ನ ಆಶಯ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ರಣಬೀರ್ ಕಪೂರ್ ಸದ್ಯ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಯಶ್ ಅವರು ರಾವಣನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

ಅಮಿತಾಭ್ ಬಚ್ಚನ್ ಈಗಾಗಲೇ ಅಯೋಧ್ಯೆಯಲ್ಲಿ ಹಲವಾರು ಬಾರಿ ಭೂಮಿ ಖರೀದಿಸಿದ್ದಾರೆ. 2026ರ ಮಾರ್ಚ್‌ನಲ್ಲಿ ಅವರು 35 ಕೋಟಿ ರೂ. ವೆಚ್ಚದಲ್ಲಿ 2.67 ಎಕರೆ ಜಮೀನು ಖರೀದಿಸಿದ್ದರು. ಅದಕ್ಕೂ ಮುನ್ನ 2025ರಲ್ಲಿ 40 ಕೋಟಿ ರೂ. ಮತ್ತು 2024ರಲ್ಲಿ 14.5 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಅಯೋಧ್ಯೆಯಲ್ಲಿ ಖರೀದಿಸಿ ಸುದ್ದಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೋದಿ ಅವರ ಯುಎಇ-ಯೂರೋಪ್ ಪ್ರವಾಸ; 70 ಬಿಲಿಯನ್ ಡಾಲರ್ ವ್ಯಾಪಾರ ಪುಷ್ಟಿ ನಿರೀಕ್ಷೆ – Kannada News | India’s Global Push: Modi’s UAE & Europe Tour for Trade, Tech & Investment Growth

ನವದೆಹಲಿ, ಮೇ 14: ಭಾರತದ ರಫ್ತು ಮತ್ತು ಹೂಡಿಕೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಉತ್ತೇಜನ ನೀಡುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 15 ರಿಂದ 20 ರವರೆಗೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಮತ್ತು ಪ್ರಮುಖ ಯುರೋಪಿಯನ್ ದೇಶಗಳ ಬಹು-ರಾಷ್ಟ್ರ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಈ ಮಹತ್ವದ ಐದು ರಾಷ್ಟ್ರಗಳ ವಿದೇಶಿ ಪ್ರವಾಸವನ್ನು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (FIEO) ಬಲವಾಗಿ ಸ್ವಾಗತಿಸಿದೆ. ಪ್ರಧಾನಿ ಮೋದಿ ಅವರು ಈ ಪ್ರವಾಸದಲ್ಲಿ ಯುಎಇ, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡಲಿದ್ದು, ಆಯಾ ದೇಶಗಳ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

70 ಬಿಲಿಯನ್ ಡಾಲರ್‌ಗೂ ಅಧಿಕ ವ್ಯಾಪಾರ ಪಾಲುದಾರಿಕೆ

ಎಫ್‌ಐಇಒ (FIEO) ಅಧ್ಯಕ್ಷ ಎಸ್. ಸಿ. ರಾಲ್ಹನ್ ಅವರ ಪ್ರಕಾರ, ಪ್ರಧಾನಿ ಭೇಟಿ ನೀಡುತ್ತಿರುವ ಈ ಎಲ್ಲಾ ದೇಶಗಳೊಂದಿಗೆ ಭಾರತವು ಈಗಾಗಲೇ ಜಂಟಿಯಾಗಿ 70 ಬಿಲಿಯನ್ ಡಾಲರ್​ಗಿಂತಲೂ (ಸುಮಾರು 6.6 ಲಕ್ಷ ಕೋಟಿ ರೂ.) ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿದೆ. ಪ್ರಧಾನಿಯವರ ಈ ಹೈ-ಲೆವೆಲ್ ಭೇಟಿಯು ಕ್ರಾಸ್-ಬಾರ್ಡರ್ ಹೂಡಿಕೆ, ತಂತ್ರಜ್ಞಾನ ವಿನಿಮಯ ಮತ್ತು ಮುಕ್ತ ವ್ಯಾಪಾರಕ್ಕೆ ಹೊಸ ವೇಗವನ್ನು ನೀಡಲಿದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು

ಪ್ರವಾಸದ ಪ್ರಮುಖ ಸ್ಟ್ರಾಟಿಜಿಗಳು

ಯುಎಇ ಜೊತೆ ಇಂಧನ ಮತ್ತು ಆರ್ಥಿಕ ಭದ್ರತೆ: ಮಧ್ಯಪ್ರಾಚ್ಯದಲ್ಲಿ ಇರಾನ್-ಅಮೆರಿಕ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರುಪೇರಾಗುತ್ತಿರುವ ಬೆನ್ನಲ್ಲೇ ಮೋದಿ ಅವರ ಯುಎಇ ಭೇಟಿ ಗಮರ್ನಾಹವಾಗಿದೆ. ಭಾರತದ ಇಂಧನ ಸ್ಥಿರತೆ, ದೀರ್ಘಾವಧಿಯ ತೈಲ ಪೂರೈಕೆ ಮತ್ತು ಮೂಲಸೌಕರ್ಯಗಳಲ್ಲಿ ಯುಎಇ ಹೂಡಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಭೇಟಿ ನೆರವಾಗಲಿದೆ.

ಯುರೋಪ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದ (FTA) ಮತ್ತು ಭಾರತ-ಇಎಫ್‌ಟಿಎ (EFTA) ವ್ಯಾಪಾರ ಒಪ್ಪಂದಗಳ ಹಿನ್ನೆಲೆಯಲ್ಲಿ ಈ ಪ್ರವಾಸ ಆಯೋಜನೆಗೊಂಡಿದೆ.

ಭವಿಷ್ಯದ ತಂತ್ರಜ್ಞಾನಗಳು: ಗ್ರೀನ್ ಹೈಡ್ರೋಜನ್ (ಹಸಿರು ಇಂಧನ), ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ (AI), ರಕ್ಷಣಾ ವಲಯದ ಉತ್ಪಾದನೆ ಮತ್ತು ಕ್ಲೀನ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಯುರೋಪ್ ನಾಯಕರೊಂದಿಗೆ ಮೋದಿ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ

ಭಾರತೀಯ ರಫ್ತುದಾರರಿಗೆ ಬಂಪರ್ ಅವಕಾಶ

ಪ್ರಧಾನಿ ಅವರ ಈ ಭೇಟಿಯಿಂದಾಗಿ ಭಾರತದ ಇಂಜಿನಿಯರಿಂಗ್, ಫಾರ್ಮಾಸ್ಯುಟಿಕಲ್ಸ್ (ಔಷಧ), ಶುದ್ಧ ಇಂಧನ, ಜವಳಿ, ಆಹಾರ ಸಂಸ್ಕರಣೆ ಮತ್ತು ಡಿಜಿಟಲ್ ವ್ಯಾಪಾರ ವಲಯದ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳು ಮುಕ್ತವಾಗಲಿವೆ. ಅಷ್ಟೇ ಅಲ್ಲದೆ, ಪ್ರಧಾನಿಯವರು ‘ಯುರೋಪಿಯನ್ ರೌಂಡ್ ಟೇಬಲ್ ಫಾರ್ ಇಂಡಸ್ಟ್ರಿ’ ಮತ್ತು ‘ಭಾರತ-ನಾರ್ವೆ ಬಿಸಿನೆಸ್ ಮತ್ತು ರಿಸರ್ಚ್ ಶೃಂಗಸಭೆ’ಯಲ್ಲೂ ಭಾಗವಹಿಸಲಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತವನ್ನು ವಿಶ್ವಾಸಾರ್ಹ ಆರ್ಥಿಕ ಪಾಲುದಾರ ಹಾಗೂ ಜಾಗತಿಕ ಪ್ರಗತಿಯ ಪ್ರಮುಖ ಚಾಲನಾ ಶಕ್ತಿಯಾಗಿ ಬಿಂಬಿಸಲು ಈ 6 ದಿನಗಳ ವಿದೇಶಿ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಕೀಲರ ಕೋಟ್ ಧರಿಸಿ ಹೈಕೋರ್ಟ್​ಗೆ ಬಂದ ಮಮತಾ ಬ್ಯಾನರ್ಜಿಗೆ ಶಾಕ್ ನೀಡಿದ ಬಾರ್ ಕೌನ್ಸಿಲ್ – Kannada News | BCI seeks details of Mamata Banerjees practice records after she appears in the Calcutta High Court wearing advocate attire

ನವದೆಹಲಿ, ಮೇ 14: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಇಂದು ಕೊಲ್ಕತ್ತಾ ಹೈಕೋರ್ಟ್‌ಗೆ ವಕೀಲರ ಕೋಟ್ ಧರಿಸಿ ಹಾಜರಾಗಿದ್ದರು. ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಅವರು ವಾದಿಸಿದ್ದರು. ಟಿಎಂಸಿಯ ಹಿರಿಯ ನಾಯಕರಾದ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ಮಮತಾ ಬ್ಯಾನರ್ಜಿ ತಾವೇ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ವಕೀಲ ವೃತ್ತಿಯಲ್ಲಿ ನಿಜಕ್ಕೂ ಅನುಭವ ಹೊಂದಿದ್ದಾರಾ? ಎಂಬ ಪ್ರಶ್ನೆಗಳು ಮೂಡಿವೆ.

2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹಲವಾರು ಟಿಎಂಸಿ ಕಾರ್ಯಕರ್ತರು ಹಿಂಸಾಚಾರವನ್ನು ಎದುರಿಸಿದ್ದರು ಎಂದು ಅರ್ಜಿಯಲ್ಲಿ ಹೈಕೋರ್ಟ್​ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ. ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಕರಿಕೋಟ್ ಧರಿಸಿ ಕಣ್ ಕುಕ್ಕಿದ ಮಮತಾ; ಬಂಗಾಳ ಹಿಂಸಾಚಾರ ಪ್ರಕರಣದಲ್ಲಿ ಕೋರ್ಟ್​ನಲ್ಲಿ ದೀದಿ ವಕೀಲಿಕೆ

ಮೇ 12ರಂದು ಕೊಲ್ಕತ್ತಾ ಹೈಕೋರ್ಟ್‌ಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ಇಂದು ನಡೆಯಿತು.

ಈ ಪ್ರಕರಣದ ವಿಚಾರಣೆ ಮುಗಿದ ಬಳಿಕ ನ್ಯಾಯಾಲಯದ ಆವರಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ಹೈಕೋರ್ಟ್‌ನಿಂದ ಹೊರಬರುತ್ತಿದ್ದಂತೆ, ವಕೀಲರ ಒಂದು ವಿಭಾಗವು ಅವರನ್ನು “ಕಳ್ಳಿ” ಎಂದು ಕರೆದಿದೆ ಎಂದು ಆರೋಪಿಸಲಾಗಿದೆ. ಟಿಎಂಸಿ ಮುಖಂಡರು ಮತ್ತು ವಕೀಲರು ಆಕೆಯನ್ನು ಸುರಕ್ಷಿತವಾಗಿ ಕೋರ್ಟ್ ಆವರಣದಿಂದ ಹೊರತರಲು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್‌ಗೆ ಪತ್ರ ಬರೆದಿದ್ದು, ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರ ಗೌನ್​​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿವರ ಕೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾನೂನು ಅಭ್ಯಾಸದ ದಾಖಲಾತಿ ಮತ್ತು ಪ್ರಾಕ್ಟಿಸ್​​ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಬಿಸಿಐ ಕೋರಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಮಮತಾ ಬ್ಯಾನರ್ಜಿ ಅವರು ವಕೀಲರಾಗಿ ದಾಖಲಾತಿಯಾಗಿದ್ದು, ಯಾವುದೇ ಅಮಾನತು ಅಥವಾ ಅಭ್ಯಾಸದ ಪುನರಾರಂಭ, ಅವರ ಕಾನೂನು ಅಭ್ಯಾಸದ ಪ್ರಮಾಣಪತ್ರದ ಬಗ್ಗೆ ಮಾಹಿತಿಯನ್ನು ಕೇಳಿದೆ. ಎರಡು ದಿನದೊಳಗೆ ದಾಖಲೆ ನೀಡುವಂತೆ ರಾಜ್ಯ ವಕೀಲರ ಪರಿಷತ್‌ಗೆ ಸೂಚಿಸಲಾಗಿದೆ. ಮಮತಾ ಬ್ಯಾನರ್ಜಿ ಅವರು ವಕೀಲರ ಉಡುಪಿನಲ್ಲಿ ಟಿಎಂಸಿ ಪರ ವಕೀಲರಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್‌ನಲ್ಲಿ ಹೈಕೋರ್ಟ್ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆಯೇ ಎಂದು ತಿಳಿಯಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ದಾಖಲೆ ಕೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:57 pm, Thu, 14 May 26

Source link

Video: ಎಳನೀರು ವ್ಯಾಪಾರಿಯೊಂದಿಗೆ ಚೌಕಾಸಿ ಮಾಡಿದ ವಿದೇಶಿ ಮಹಿಳೆ – Kannada News | A foreign woman haggling with a coconut water vendor

ಹೆಣ್ಣು ಮಕ್ಕಳು ಚೌಕಾಸಿ ಮಾಡೋದ್ರಲ್ಲಿ ಎತ್ತಿದ ಕೈ. ಯಾವುದೇ ಅಂಗಡಿಗೆ ಹೋದ್ರು ಚೌಕಾಸಿ ಮಾಡದೇ ಏನನ್ನೂ ಖರೀದಿಸಲ್ಲ. ಆದರೆ ಇದೀಗ ಈ ವಿದೇಶಿ ಮಹಿಳೆ (foreign woman) ಚೌಕಾಸಿ ಮಾಡೋದ್ರಲ್ಲಿ ಭಾರತೀಯ ನಾರಿಯರನ್ನೇ ಮೀರಿಸುವಂತಿದ್ದಾಳೆ. ರಸ್ತೆ ಬದಿಯಲ್ಲಿದ್ದ ಎಳನೀರು ವ್ಯಾಪಾರಿ ಬಳಿ ವಿದೇಶಿ ಚೌಕಾಸಿ ಮಾಡಿ ಎಳನೀರು ಖರೀದಿ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

Jennifer ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವಿದೇಶಿ ಮಹಿಳೆ ಕನ್ನಡದಲ್ಲಿ ಮಾತನಾಡುತ್ತಾ ಬೀದಿ ಬದಿಯಲ್ಲಿ ಎಳನೀರು ಮಾರುತ್ತಿದ್ದ ಮಹಿಳೆಯ ಬಳಿ ಬರುತ್ತಿರುವುದನ್ನು ಕಾಣಬಹುದು. ಎಳನೀರಿಗೆ ಎಷ್ಟು ಹಣ ಎಂದು ವಿದೇಶಿ ಮಹಿಳೆ ಕೇಳಿದ್ದಾಳೆ. ಆ ತಕ್ಷಣವೇ ಐವತ್ತು ರೂಪಾಯಿ ಎಂದು ವ್ಯಾಪಾರಿ ಹೇಳುತ್ತಿದ್ದಂತೆ ಚೌಕಾಸಿ ಮಾಡಿ ಮೂವತ್ತು ರೂಪಾಯಿಗೆ ಕೊಡುವಂತೆ ಕೇಳಿದ್ದಾಳೆ. ಕೊನೆಗೆ 40 ರೂಗೆ ಎರಡು ಎಳನೀರು ಖರೀದಿ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಯುರೋಪಿನಲ್ಲಿ ಎರಡು ತಿಂಗಳ ವಾಸ, ವಿದೇಶದಲ್ಲಿ ಕಲಿತ ಜೀವನ ಪಾಠ ಹಂಚಿಕೊಂಡ ಭಾರತೀಯ ಮಹಿಳೆ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಕನ್ನಡ ಚೆನ್ನಾಗಿ ಮಾತಾಡ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 60 ರೂ ಇದೆ ಈಗ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೀರಾ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ವರುಣನ ಅಬ್ಬರ: ವಿಮಾನಗಳನ್ನ ಇಳಿಯಲು ಬಿಡದೇ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ

ಮಂಗಳೂರು, (ಮೇ 14): ಕರ್ನಾಟಕದ (karnataka) ಹಲವೆಡೆ ಮಳೆಯಾಗುತ್ತಿದ್ದು, ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಕೂಲ್ ಮಾಡಿದ್ದಾನೆ. ಅದರಲ್ಲೂ ಬೇಸಿಗೆ ಧಗೆಯಿಂದ ಹೆರಾಣಾಗಿರುವ ಮಂಗಳೂರಿಗರಿಗೆ ಇಂದು (ಮೇ 14) ಮಳೆರಾಯ ತಂಪೆರೆದಿದ್ದಾನೆ. ಇನ್ನೊಂದೆಡೆ ಧಾರಾಕಾರ ಮಳೆಯಿಂದಾಗಿ ಮಂಗಳೂರು ಏರ್​​ಪೋರ್ಟ್​​ನಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಹೌದು…ಹವಾಮಾನ ವೈಪರೀತ್ಯದಿಂದ ವಿಮಾನಗಳು ಲ್ಯಾಂಡಿಗ್ ಸಮಸ್ಯೆಯಾಗಿದ್ದು, ಇಳಿಯಲಾಗದೇ ವಿಟ್ಲ ಬಳಿ ಎರಡು ವಿಮಾನಗಳು ಆಕಾಶದಲ್ಲೇ ಸುತ್ತಾಡುತ್ತಿವೆ. ಇದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ : ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ

Source link

ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆ ವಿರೋಧಿಸಬೇಕಲ್ವಾ? ಹಿಜಾಬ್ ವಿರೋಧಿಸಿದ ಬಿಜೆಪಿಗರಿಗೆ ಸಿಎಂ ತಿರುಗೇಟು – Kannada News | Hijab Row In Karnataka: CM Siddaramaiah Hits back at BJP Leaders

ಬೆಂಗಳೂರು, (ಮೇ 14): ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ (School And Colleges) ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಇದು ಯಾರನ್ನಾದರೂ ಓಲೈಸುವ ಇಲ್ಲವೇ ನೋಯಿಸುವ ಉದ್ದೇಶದ ವಸ್ತ್ರಸಂಹಿತೆ ಅಲ್ಲ. ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳನ್ನು ಗೌರವಿಸುವ ವಸ್ತ್ರಸಂಹಿತೆಯಾಗಿದೆ.ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿರುವವರಿಗೆ ಇದರಿಂದ ನೋವಾಗಿರುವುದು ಸಹಜವೇ ಆಗಿದೆ. ಅವರು ಮೊದಲು ತಮ್ಮೊಳಗೆ ಇಣುಕಿ ಆತ್ಮವಿಮರ್ಶೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹಿಜಾಬ್​​ ಗೆ (Hijab) ಅನುಮತಿ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

  • ಹಿಜಾಬ್‌ಗೆ ಅನುಮತಿ ನೀಡಿದ್ದಕ್ಕೆ ವಿಪಕ್ಷಗಳ ಟೀಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ.
  • ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿ.
  • ಸಿಎಂ ಸಿದ್ದರಾಮಯ್ಯರಿಂದ ಮಾಧ್ಯಮ ಪ್ರಕಟಣೆ ಮೂಲಕ ಸಿದ್ದರಾಮಯ್ಯ ತಿರುಗೇಟು.

ರಾಜ್ಯ ಸರ್ಕಾರದಿಂದ ಹಿಜಾಬ್ ಗೆ ಅನುಮತಿ ನೀಡಿರುವುದಕ್ಕೆ ವಿಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಇಂದು ದೇಶಾದ್ಯಂತ ಚರ್ಚೆಯಾಗುತ್ತಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿರುವ ನೀಟ್ ಪರೀಕ್ಷೆಗಳ ಬಗ್ಗೆ
ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನೇ ಮುರುಟಿ ಹಾಕಿರುವ ಇಂತದ್ದೊಂದು ಗಂಭೀರ ಅಪರಾಧದ ಬಗ್ಗೆ ಪರೀಕ್ಷಾ ಪೇ ಚರ್ಚಾ ಮಾಡಿ. ಮಕ್ಕಳನ್ನು ಮುದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ರಾಜ್ಯದ ಬಿಜೆಪಿ ನಾಯಕರಾಗಲಿ ಚಕಾರ ಎತ್ತುತ್ತಿಲ್ಲ. ಈ ಅಪರಾಧದಲ್ಲಿ ಬಿಜೆಪಿಯ ನಾಯಕರೇ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪಗಳಿದ್ದರೂ ಎಲ್ಲ ಬಿಜೆಪಿ ನಾಯಕರು ತಮ್ಮ ಪ್ರಧಾನಿ ಮತ್ತು ಶಿಕ್ಷಣ ಸಚಿವರನ್ನು ಸಮರ್ಥಿಸಲು ಹೊರಟಿದ್ದಾರೆ. ಇದು ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಬಲಿಯಾಗಿರುವ ದೇಶದ 22 ಲಕ್ಷ ವಿದ್ಯಾರ್ಥಿಗಳಿಗೆ ಬಗೆಯುವ ದ್ರೋಹ ಅಲ್ಲವೇ? ಎಂದು ಹಿಜಾಬ್ ವಿರೋಧಿಗಳಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ?

ನಮ್ಮ ಸರ್ಕಾರ ನಡೆಸಿದ್ದ ಸಿಇಟಿ ಪರೀಕ್ಷೆಯಲ್ಲಿ ಒಂದೆರಡು ಕೇಂದ್ರಗಳಲ್ಲಿ ಲೋಪಗಳು ಕಂಡುಬಂದಾಗ ಹಾರಾಟ-ಹೋರಾಟ ನಡೆಸಿದ್ದ ರಾಜ್ಯದ ಬಿಜೆಪಿ ನಾಯಕರು, ಕರ್ನಾಟಕದ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ಕನಿಷ್ಠ ರಾಜ್ಯದ ವಿದ್ಯಾರ್ಥಿಗಳ ಬಗ್ಗೆಯಾದರೂ ಇವರಿಗೆ ಕಾಳಜಿ ಬೇಡವೇ? ಒಂದೆರಡು ಕಡೆಗಳಲ್ಲಿ ಜನಿವಾರ ತೆಗೆಸಿದಾಗ, ಉಡುಪಿಯ ಒಂದೆರಡು ಶಾಲೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಾಗ ಇಡೀ ಕರ್ನಾಟಕಕ್ಕೆ ಕೋಮುದ್ವೇಷದ ಬೆಂಕಿ ಹಚ್ಚಲು ಹೊರಟ ಈ ಬಿಜೆಪಿ ನಾಯಕರಿಗೆ ನೀಟ್ ಪರೀಕ್ಷೆಯ ರದ್ದತಿಯಿಂದ ರೋದಿಸುತ್ತಿರುವ ವಿದ್ಯಾರ್ಥಿಗಳ ಕಣ್ಣೀರು ಕಾಣಿಸುತ್ತಿಲ್ಲವೇ? ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಿರುವ ವಸ್ತ್ರಸಂಹಿತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರಿಯ ವಿದ್ಯಾಲಯಗಳ ವಸ್ತ್ರಸಂಹಿತೆಗೆ ಅನುಗುಣವಾಗಿಯೇ ಇದೆ. ರಾಜ್ಯ ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆಯನ್ನು ವಿರೋಧಿಸುವವರು ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ? ಎಂದು ತಿರುಗೇಟು ನೀಡಿದ್ದಾರೆ.

ಯಾಕೆ ಈ ಹಿಪಾಕ್ರಸಿ?

ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಮುಸ್ಲಿಮರ ಓಲೈಕೆಯಾದರೆ ಜನಿವಾರ, ಪೇಟ/ಟರ್ಬನ್ ಧರಿಸಲು ಅವಕಾಶ ನೀಡಿರುವುದು ಆಯಾಧರ್ಮಗಳ ಓಲೈಕೆಯಾಗುವುದೇ? ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಸಿಇಟಿ ಪರೀಕ್ಷೆಗಳು ಕ್ರಾಂತಿಕಾರಿ ಕ್ರಮವಾಗಿತ್ತು. ಅದರಿಂದಾಗಿ ಸಾವಿರಾರು ಬಡವಿದ್ಯಾರ್ಥಿಗಳು ಕೂಡಾ ಎಂಜನಿಯರ್, ಡಾಕ್ಟರ್ ಗಳಾಗಿದ್ದರು. ಬಿಜೆಪಿ ಸರ್ಕಾರ ಅದನ್ನು ವ್ಯವಸ್ಥಿತವಾಗಿ ನಾಶಮಾಡಿದೆ. 2024ರಲ್ಲಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತಂದಾಗ ನಮ್ಮ ಸರ್ಕಾರ ಅದನ್ನು ವಿರೋಧಿಸಿತ್ತು. ನೀಟ್ ನಿಂದಾಗಿ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಶಿಕ್ಷಣದ ಹಕ್ಕನ್ನು ಕಳೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ದಶಕಗಳಿಂದ ಸಿಇಟಿ ಪರೀಕ್ಷೆಗಳನ್ನು ನಮ್ಮ ಸರ್ಕಾರಗಳು ಸುರಕ್ಷಿತವಾಗಿ ನಡೆಸಿಕೊಂಡು ಬಂದಿವೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಯೋಗ್ಯತೆ ಇಲ್ಲದಂತಾಗಿದೆ. ಇದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಲೋಪಕ್ಕೆ ನಾನು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಣೆ ಮಾಡುತ್ತೇನೆ.ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಮತ್ತು ಅಸಮರ್ಥ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣದಿಂದ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ, ಭ್ರಾತೃತ್ವ, ಘನತೆ, ಪರಸ್ಪರ ಗೌರವ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಉತ್ತೇಜಿಸಬೇಕು. ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳಿಗೆ ವಿರುದ್ಧವಲ್ಲ ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವಿಕೆ, ಸಾಂಸ್ಥಿಕ ನಿಷ್ಪಕ್ಷಪಾತತೆ ಮತ್ತು ತಾರತಮ್ಯ ರಹಿತ ವರ್ತನೆಯಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತಟಸ್ಥ ಮತ್ತು ಸಮಾನ ನಿಲುವು ಹೊಂದಿರಬೇಕಿದೆ.

ಅದೇ ರೀತಿ ಯಾರಿಗೂ ತೊಂದರೆಯಾಗದಂತಹ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಗುರುತುಗಳನ್ನು ಧರಿಸಲು ಅವಕಾಶ ಕಲ್ಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಸುವ್ಯವಸ್ಥೆ, ಸುರಕ್ಷತೆ, ತರಗತಿಯ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಸಮಾನತೆ ಮತ್ತು ಘನತೆಯನ್ನು ಮರುಸ್ಥಾಪಿಸಲು ನಾವು ಬದ್ಧರಿದ್ದೇವೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:58 pm, Thu, 14 May 26

Source link

ತಂದೆಯ ಈ ಅಭ್ಯಾಸಗಳು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ – Kannada News | These habits of fathers play an important role in shaping children into good individuals

ಮಕ್ಕಳ (children’s) ಬೆಳವಣಿಗೆಯಲ್ಲಿ ತಾಯಿಯಷ್ಟೆ ತಂದೆಗೂ ಜವಾಬ್ದಾರಿಗಳಿವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವಲ್ಲಿ ತಂದೆ-ತಾಯಿ ಇಬ್ಬರ ಪಾತ್ರ ಕೂಡ ಮುಖ್ಯವಾಗಿರುತ್ತದೆ. ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಣ ಮಾತ್ರವಲ್ಲ ಪೋಷಕರು ಸಹ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅದರಲ್ಲೂ ಮಕ್ಕಳನ್ನು ಗೌರವಾನ್ವಿತ ವ್ಯಕ್ತಿಗಳನ್ನಾಗಿ, ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ತಂದೆ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ತಂದೆಯಂದಿರು  ಈ ಕೆಲವು ಅಭ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅವರ ಮಕ್ಕಳನ್ನು ಸಹ ಸುಸಂಸ್ಕೃತರನ್ನಾಗಿ, ಆದರ್ಶ ನಾಗರಿಕನನ್ನು ರೂಪಿಸಬಹುದು. ಹಾಗಿದ್ದರೆ ತಂದೆಯ ಯಾವ ಅಭ್ಯಾಸಗಳು ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ತಂದೆಯ ಯಾವ ಅಭ್ಯಾಸಗಳು ಮಕ್ಕಳನ್ನು ಸುಸಂಸ್ಕೃತರನ್ನಾಗಿಸುತ್ತವೆ?

ಪ್ರಾಮಾಣಿಕತೆ ಮತ್ತು ಸತ್ಯದ ಹಾದಿ: ಮಕ್ಕಳು ನಾವು ಹೇಳುವುದನ್ನು ಕೆಲವೊಂದು ಬಾರಿ ಕೇಳುವುದಿಲ್ಲ ಆದರೆ ನಾವು  ಏನು ಮಾಡುತ್ತೆವೆಯೋ ಅದನ್ನೇ ನೋಡಿ ಅವರು ಕಲಿಯುತ್ತಾರೆ. ಹಾಗಿರುವಾಗ ಒಬ್ಬ ತಂದೆ ತನ್ನ ಕೆಲಸ, ಸಂಬಂಧ ಮತ್ತು ಸಮಾಜದಲ್ಲಿ ಪ್ರಾಮಾಣಿಕರಾಗಿದ್ದರೆ, ಮಕ್ಕಳು ಸ್ವಾಭಾವಿಕವಾಗಿ ಪ್ರಾಮಾಣಿಕತೆಯ ಮಹತ್ವವನ್ನು ಕಲಿಯುತ್ತಾರೆ.  ತಂದೆಯ ಈ ಅಭ್ಯಾಸವು ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಗುಣವನ್ನು ಬೆಳೆಸುತ್ತದೆ. ಭವಿಷ್ಯದಲ್ಲಿ ಅವರನ್ನು ವಿಶ್ವಾಸಾರ್ಹ ವ್ಯಕ್ತಿಗಳನ್ನಾಗಿ ಮಾಡುತ್ತದೆ.

ಶಿಸ್ತು ಮತ್ತು ಸಮಯಪಾಲನೆ: ಬೆಳಗ್ಗೆ ಬೇಗನೆ ಏಳುವುದು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ವ್ಯಾಯಾಮ ಮಾಡುವುದು ಇವೆಲ್ಲವನ್ನು ಶಿಸ್ತು ಬದ್ಧವಾಗಿ ಪಾಲಿಸಿದರೆ, ಸಮಯವನ್ನು ಸರಿಯಾಗಿ ಪಾಲಿಸಿದರೆ ಮಕ್ಕಳು ಸಹ ಇದನ್ನೇ ಕಲಿಯುತ್ತಾರೆ. ಮಕ್ಕಳು ಸಹ ಈ ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.

ಮಹಿಳೆಯರಿಗೆ ಗೌರವ ನೀಡುವುದು: ಮಕ್ಕಳು ತಮ್ಮ ತಂದೆ ತಮ್ಮ ತಾಯಿ ಮತ್ತು ಇತರ ಮಹಿಳೆಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಗಮನಿಸುವ ಮೂಲಕ ಸಂಬಂಧಗಳಿಗೆ ಗೌರವವನ್ನು ನೀಡುವುದನ್ನು, ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯುತ್ತಾರೆ. ತಂದೆ ಮನೆಯಲ್ಲಿ ಗೌರವಯುತ ಭಾಷೆ ಮತ್ತು ನಡವಳಿಕೆಯನ್ನು ಬಳಸಿದರೆ, ಮಕ್ಕಳು ಸಹ ಸಭ್ಯ ರೀತಿಯಲ್ಲಿ ಇರುತ್ತಾರೆ.

ಇದನ್ನೂ ಓದಿ: ಪೋಷಕರು ತಮ್ಮ ಮಕ್ಕಳ ಮುಂದೆ ವಿಷಯಗಳನ್ನು ಎಂದಿಗೂ ಚರ್ಚಿಸಬಾರದು

ತಾಳ್ಮೆ ಮತ್ತು ಸಂಯಮ: ಜೀವನದಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಕಷ್ಟದ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ಸಂಯಮದಿಂದ ತಂದೆ ವರ್ತಿಸಿದರೆ, ತಂದೆಯ ಈ ತಾಳ್ಮೆ ಮಕ್ಕಳನ್ನು ಮಾನಸಿಕವಾಗಿ ಬಲಪಡಿಸುತ್ತದೆ. ಈ ಗುಣವು ಅವರನ್ನು ಸುಸಂಸ್ಕೃತರು ಮತ್ತು ಉತ್ತಮ ನಾಯಕರನ್ನಾಗಿ ರೂಪಿಸುತ್ತವೆ ಮತ್ತು ಮುಖ್ಯವಾಗಿ ಕಷ್ಟಗಳನ್ನು ಸಂಯಮದಿಂದ ಹೇಗೆ ಎದುರಿಸಿ ನಿಲ್ಲಬೇಕು ಎಂಬುದನ್ನು ಕಲಿಯುತ್ತಾರೆ.

ಇತರರಿಗೆ ಸಹಾಯ ಮಾಡುವ ಪ್ರವೃತ್ತಿ: ಮಕ್ಕಳು ತಮ್ಮ ತಂದೆ ಇತರರಿಗೆ ಸಹಾಯ ಮಾಡುವುದನ್ನು ನೋಡಿದಾಗ ಅವರು ಸಹ ಪರಹಿತಚಿಂತನೆ ಮತ್ತು ದಯೆಯ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಅಗತ್ಯವಿರುವವರಿಗೆ ಆರ್ಥಿಕ ಸಹಾಯ ಮಾಡುವುದಾಗಲಿ ಅಥವಾ ಸಾಮಾಜಿಕ ಸೇವೆ ಮಾಡುವುದಾಗಲಿ ಈ ಎಲ್ಲಾ ಸದ್ಗುಣಗಳು ಮಕ್ಕಳಲ್ಲಿ ಸಹಾನುಭೂತಿಯನ್ನು ತುಂಬುತ್ತವೆ, ಮಕ್ಕಳನ್ನು ದಯಾಳು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:05 pm, Thu, 14 May 26

Source link

PBKS vs MI: ಜಸ್ಪ್ರೀತ್ ಬುಮ್ರಾಗೆ ನಾಯಕತ್ವ; ಮುಂಬೈ ಫ್ರಾಂಚೈಸಿಯಿಂದ ಕ್ರಾಂತಿಕಾರಿ ನಿರ್ಧಾರ – Kannada News | IPL 2026: Jasprit Bumrah Takes Mumbai Indians Captaincy vs PBKS in Historic Match 58

ಐಪಿಎಲ್ 2026 (IPL 2026) ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (PBKS vs MI) ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಚ್ಚರಿಯ ಬದಲಾವಣೆ ಮಾಡಲಾಗಿದೆ. ಸತತ ಸೋಲುಗಳಿಂದಾಗಿ ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಬದಲಾಗಿದ್ದಾನೆ. ಈ ಸೀಸನ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ನಾಯಕತ್ವವಹಿಸಿದರೂ ಮುಂಬೈ ತಂಡದ ಅದೃಷ್ಟ ಬದಲಾಗಲಿಲ್ಲ. ಇದೀಗ ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಮುಂಬೈ ಫ್ರಾಂಚೈಸಿ ತನ್ನ ತಂಡದ ನಾಯಕತ್ವವನ್ನು ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ (Jasprit Bumrah) ವಹಿಸಿದೆ.

2013 ರಿಂದ ಮುಂಬೈ ತಂಡದ ಭಾಗವಾಗಿರುವ ಜಸ್ಪ್ರೀತ್ ಬುಮ್ರಾ ಇದೇ ಮೊದಲ ಬಾರಿಗೆ ಹಂಗಾಮಿ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಅನುಪಸ್ಥಿತಿಯಲ್ಲಿ ಬುಮ್ರಾಗೆ ಈ ಅವಕಾಶ ಸಿಕ್ಕಿದೆ. ಇನ್ನು ಚೊಚ್ಚಲ ನಾಯಕತ್ವದಲ್ಲೇ ಟಾಸ್ ಗೆದ್ದಿರುವ ಬುಮ್ರಾ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಬುಮ್ರಾಗೆ ಮುಂಬೈ ನಾಯಕತ್ವ

ಹಾರ್ದಿಕ್ ಪಾಂಡ್ಯ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಇದರಿಂದಾಗಿ ಅವರು ಕಳೆದ ಕೆಲವು ಪಂದ್ಯಗಳಿಂದ ತಂಡದ ಭಾಗವಾಗಿಲ್ಲ. ಇತ್ತ ಕಳೆದ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಕೂಡ ವೈಯಕ್ತಿಕ ಕಾರಣಗಳಿಂದ ತಂಡದಲ್ಲಿಲ್ಲ. ಇದರಿಂದಾಗಿ ತಂಡದ ಆಡಳಿತ ಮಂಡಳಿಯು ಅನುಭವಿ ಬುಮ್ರಾಗೆ ಹೊಸ ಜವಾಬ್ದಾರಿ ನೀಡಿದೆ.

ಜಸ್ಪ್ರೀತ್ ಬುಮ್ರಾ ಈ ಹಿಂದೆ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆದಾಗ್ಯೂ, ಅವರಿಗೆ ಐಪಿಎಲ್‌ನಲ್ಲಿ ನಾಯಕತ್ವದ ಅನುಭವವಿಲ್ಲ. ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ವಹಿಸಿದ 10 ನೇ ಆಟಗಾರ ಜಸ್ಪ್ರೀತ್ ಬುಮ್ರಾ. ಈ ಪಟ್ಟಿಯಲ್ಲಿ ಹರ್ಭಜನ್ ಸಿಂಗ್, ಶಾನ್ ಪೊಲಾಕ್, ಡ್ವೇನ್ ಬ್ರಾವೋ, ರಿಕಿ ಪಾಂಟಿಂಗ್, ಕೀರನ್ ಪೊಲಾರ್ಡ್, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿದ್ದಾರೆ.

PBKS vs MI IPL 2026 Live Score: ನಾಯಕನಾಗಿ ಟಾಸ್ ಗೆದ್ದ ಬುಮ್ರಾ ಬೌಲಿಂಗ್ ಆಯ್ಕೆ

ಎರಡೂ ತಂಡಗಳ ಆಡುವ XI

ಪಂಜಾಬ್ ಕಿಂಗ್ಸ್‌ ಪ್ಲೇಯಿಂಗ್ XI: ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲ್ಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಉಮರ್ಜೈ, ಮಾರ್ಕೊ ಯಾನ್ಸನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ತಿಲಕ್ ವರ್ಮಾ, ಶೆರ್ಫೇನ್ ರುದರ್‌ಫೋರ್ಡ್, ವಿಲ್ ಜಾಕ್ಸ್, ರಾಜ್ ಬಾವಾ, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ (ನಾಯಕ), ರಘು ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:27 pm, Thu, 14 May 26

Source link

ನಾವು ದೂರಾಗುತ್ತಿದ್ದೇವೆ: ಡಿವೋರ್ಸ್ ವಿಷಯ ಒಪ್ಪಿಕೊಂಡ ಮೌನಿ ರಾಯ್, ಸೂರಜ್ ನಂಬಿಯಾರ್ – Kannada News | Mouni Roy and Suraj Nambiar confirm Divorce after four years of marriage

ಬಾಲಿವುಡ್‌ನ ಜನಪ್ರಿಯ ನಟಿ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಹಾಗಾಗಿ ತಮ್ಮ ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ವಿಚ್ಛೇದನದ (Divorce) ಬಗ್ಗೆ ಗುರುವಾರ (ಮೇ 14) ಅಧಿಕೃತವಾಗಿ ಘೋಷಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ನೀಡಿರುವ ದಂಪತಿ, ‘ನಾವು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗುತ್ತಿದ್ದೇವೆ’ ಎಂದು ಖಚಿತಪಡಿಸಿದ್ದಾರೆ. ಕೆಲವು ದಿನಗಳಿಂದ ಜನರಿಗೆ ಮೂಡಿದ್ದ ಅನುಮಾನ ಕಡೆಗೂ ನಿಜವಾಗಿದೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಬ್ಬಿರುವ ವದಂತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳ ಕೆಲವು ವಲಯಗಳಲ್ಲಿ ಅನಗತ್ಯ ಹಸ್ತಕ್ಷೇಪ ನಡೆಯುತ್ತಿರುವುದು ವಿಷಾದನೀಯ. ನಾವು ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ ಮತ್ತು ಈ ವಿಷಯವನ್ನು ಖಾಸಗಿಯಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳು ವಾಸ್ತವಕ್ಕೆ ದೂರವಾಗಿವೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದುವರಿದು, ‘ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ ನಾವು ಪರಸ್ಪರ ಗೌರವದಿಂದಲೇ ಪ್ರತ್ಯೇಕ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸ್ನೇಹವನ್ನು ನಾವು ಗೌರವಿಸುತ್ತೇವೆ. ನಮ್ಮ ಈ ನಿರ್ಧಾರ ಮತ್ತು ಗೌಪ್ಯತೆಯನ್ನು ಸಾರ್ವಜನಿಕರು ಗೌರವಿಸುತ್ತಾರೆ ಎಂದು ನಂಬಿದ್ದೇವೆ’ ಎಂದು ಮನವಿ ಮಾಡಿದ್ದಾರೆ.

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಮೊದಲ ಬಾರಿಗೆ 2018ರಲ್ಲಿ ದುಬೈನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಭೇಟಿಯಾಗಿದ್ದರು. ವಿಶೇಷವೆಂದರೆ, ಸೂರಜ್ ಅವರಿಗೆ ಮೌನಿ ರಾಯ್ ಭಾರತದ ಖ್ಯಾತ ನಟಿ ಎಂಬ ವಿಷಯ ಮೊದಲ ಭೇಟಿಯಲ್ಲಿ ತಿಳಿದಿರಲಿಲ್ಲವಂತೆ. ಸ್ನೇಹವಾಗಿ ಆರಂಭವಾದ ಇವರ ಸಂಬಂಧ ಬಳಿಕ ಪ್ರೇಮಕ್ಕೆ ತಿರುಗಿತ್ತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಇವರ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು.

ಇದನ್ನೂ ಓದಿ: ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ

2022ರ ಜನವರಿ 27ರಂದು ಗೋವಾದಲ್ಲಿ ಈ ಜೋಡಿ ಅದ್ದೂರಿಯಾಗಿ ವಿವಾಹವಾಗಿದ್ದರು. ಬೆಂಗಾಲಿ ಮತ್ತು ಮಲಯಾಳಿ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಆಪ್ತರು ಭಾಗವಹಿಸಿದ್ದರು. ಆದರೆ, ಮದುವೆಯಾದ ಕೇವಲ ನಾಲ್ಕು ವರ್ಷಕ್ಕೆ ಈ ಸುಂದರ ಜೋಡಿ ಬೇರೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

2 ದಿನ ವರ್ಕ್ ಫ್ರಂ ಹೋಂ, ಆನ್​ಲೈನ್ ಮೀಟಿಂಗ್, ವಾಹನ ರಹಿತ ದಿನ; ದೆಹಲಿ ಸರ್ಕಾರ ಮಹತ್ವದ ನಿರ್ಧಾರ – Kannada News | 2 day Work From Home Online Meeting no car day Delhi government takes measures after PM Modis appeal

ನವದೆಹಲಿ, ಮೇ 14: ಮೇ 15ರಿಂದ ಪ್ರಾರಂಭವಾಗಲಿರುವ “ನನ್ನ ಭಾರತ, ನನ್ನ ಕೊಡುಗೆ” ಅಭಿಯಾನದಡಿಯಲ್ಲಿ ದೆಹಲಿ ಸರ್ಕಾರ ಇಂದು ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ. ಸರ್ಕಾರಿ ನೌಕರರು ಇನ್ನು ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ (Work from Home) ಮಾಡಬೇಕು. ಖಾಸಗಿ ಸಂಸ್ಥೆಗಳು ಸಹ ಇದೇ ರೀತಿ ಕೆಲಸ ಮಾಡಲು ಸೂಚಿಸಲಾಗಿದೆ. ಹಾಗೇ ಪ್ರತಿ ಸೋಮವಾರ ಖಾಸಗಿ ವಾಹನದ ಬದಲು ಮೆಟ್ರೋ ಬಳಸಲು ಕರೆನೀಡಲಾಗಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸಂರಕ್ಷಿಸಲು ರಾಷ್ಟ್ರಕ್ಕೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ, ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ದೆಹಲಿ ಸರ್ಕಾರದ ಮೊದಲ ಮತ್ತು ಪ್ರಮುಖ ನಿರ್ಧಾರವೆಂದರೆ ಮನೆಯಿಂದ ಕೆಲಸ ಮಾಡುವ ಬಗ್ಗೆ. ಇನ್ನು ಸರ್ಕಾರಿ ನೌಕರರು ಕೂಡ ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡುತ್ತಾರೆ. ಅಗತ್ಯ ಸೇವೆಗಳಲ್ಲಿ ತೊಡಗಿರುವ ಇಲಾಖೆಗಳಿಗೆ ಮನೆಯಿಂದಲೇ ಕೆಲಸ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಉಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಕೂಡ 2 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸಲಹೆ ಬೆನ್ನಲ್ಲೇ ಬೆಂಗಳೂರಿನ ಕೆಲ ಕಂಪನಿಗಳಿಂದ ವರ್ಕ್ ಫ್ರಂ ಹೋಂ ನೀಡಲು ಪ್ಲ್ಯಾನ್!

ನಾವು ದೆಹಲಿಗಾಗಿ ಕೆಲವು ಯೋಜನೆಗಳನ್ನು ರೂಪಿಸಿದ್ದೇವೆ. ದೆಹಲಿ ಸರ್ಕಾರ “ಮೇರಾ ಭಾರತ್, ಮೇರಾ ಯುಗತ್” (ನನ್ನ ಭಾರತ, ನನ್ನ ಕೊಡುಗೆ) ಅಭಿಯಾನವನ್ನು ಜಾರಿಗೆ ತರಲಿದೆ ಎಂದು ದೆಹಲಿ ಸಿಎಂ ರೇಖಾ ಗುಪ್ತಾ ತಿಳಿಸಿದ್ದಾರೆ. ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಈ ನಿಟ್ಟಿನಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಕೂಡ ಮನವಿ ಮಾಡಿದ್ದಾರೆ. ನ್ಯಾಯಾಲಯವು ಆನ್‌ಲೈನ್‌ನಲ್ಲಿ ವಿಚಾರಣೆಗಳನ್ನು ನಡೆಸುವಂತೆಯೂ ಕೋರಲಾಗಿದೆ. ಸಾರ್ವಜನಿಕರು ಒಂದು ವರ್ಷದವರೆಗೆ ವಿದೇಶ ಪ್ರವಾಸದಿಂದ ದೂರವಿರಲು ಮನವಿ ಮಾಡಲಾಗಿದೆ. ದೆಹಲಿ ಸರ್ಕಾರದ ಯಾವುದೇ ಸಚಿವರು ಅಥವಾ ಅಧಿಕಾರಿಗಳು ವಿದೇಶ ಪ್ರವಾಸ ಮಾಡುವಂತಿಲ್ಲ. ಅವರ ವಿದೇಶದ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಪ್ರಧಾನ ಮಂತ್ರಿಯವರ ಪ್ರವಾಸೋದ್ಯಮ ಮನವಿಗೆ ಸ್ಪಂದಿಸಿ, ದೆಹಲಿಯ ಮಾಲ್‌ಗಳಲ್ಲಿ ಈಗ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಒಂದು ಸ್ಥಳವನ್ನು ಮೀಸಲಿಡಲಾಗುವುದು ಎಂದು ರೇಖಾ ಗುಪ್ತಾ ಹೇಳಿದ್ದಾರೆ. ದೆಹಲಿ ಸರ್ಕಾರವು 100% ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡುತ್ತದೆ. ದೆಹಲಿ ಸರ್ಕಾರವು ಮುಂದಿನ 90 ದಿನಗಳವರೆಗೆ ಈ ಅಭಿಯಾನವನ್ನು ನಡೆಸಲಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

“ಎಲ್ಲಾ ವ್ಯಾಪಾರಿಗಳು ಸರಕು ಸಾಗಣೆಗೆ ಟ್ರಕ್‌ಗಳ ಬದಲಿಗೆ ರೈಲು ಬಳಸುವಂತೆ ಒತ್ತಾಯಿಸಲಾಗಿದೆ. 29 ವಸಾಹತುಗಳಲ್ಲಿ 58 ಫೀಡರ್ ಬಸ್‌ಗಳನ್ನು ಓಡಿಸಲಾಗುವುದು. ಇದರಿಂದಾಗಿ ಅವರು ಮೆಟ್ರೋ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ. ದೆಹಲಿ ಸರ್ಕಾರಿ ಸಭೆಗಳಲ್ಲಿ 50% ಆನ್‌ಲೈನ್‌ನಲ್ಲಿ ನಡೆಯಲಿವೆ. ದೆಹಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸುತ್ತವೆ. ದೆಹಲಿ ಮಹಾನಗರ ಪಾಲಿಕೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುತ್ತದೆ” ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version