ರಷ್ಯಾ, ಒಮನ್ ಬೆನ್ನಲ್ಲೇ ಇರಾನ್‌ನ ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿಯನ್ನು ಸ್ವಾಗತಿಸಿದ ಪಾಕಿಸ್ತಾನ

ರಷ್ಯಾ, ಒಮನ್ ಬೆನ್ನಲ್ಲೇ ಇರಾನ್‌ನ ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿಯನ್ನು ಸ್ವಾಗತಿಸಿದ ಪಾಕಿಸ್ತಾನ

ಇಸ್ಲಮಾಬಾದ್, ಮಾರ್ಚ್ 10: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಫೆಬ್ರವರಿ 28ರಂದು ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ (Ayatollah Ali Khamenei) ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯಾಗಿರುವ ಇರಾನ್‌ನ ಹೊಸ ಸರ್ವೋಚ್ಚ ನಾಯಕರಾದ ಮೊಜ್ತಬಾ ಖಮೇನಿ ಅವರನ್ನು ಪಾಕಿಸ್ತಾನ ಅಭಿನಂದಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮೊಜ್ತಬಾ ಖಮೇನಿ ಅವರನ್ನು ಅಭಿನಂದಿಸಿದ್ದು, ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇರಾನಿನ ಹೊಸ ನಾಯಕ ದೇಶವನ್ನು ಶಾಂತಿ ಮತ್ತು ಸ್ಥಿರತೆಯತ್ತ ಕೊಂಡೊಯ್ಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕನ ಜವಾಬ್ದಾರಿಗಳನ್ನು ವಹಿಸಿಕೊಂಡ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಕುಟುಂಬ ಸದಸ್ಯರ ಸಾವಿಗೆ ಪಾಕಿಸ್ತಾನದ ಜನರ ಪರವಾಗಿ ನಾನು ಸಂತಾಪ ಮತ್ತು ಪ್ರಾರ್ಥನೆಗಳನ್ನು ತಿಳಿಸುತ್ತೇನೆ. “ಹೊಸ ಸುಪ್ರೀಂ ನಾಯಕ ಮುಂದಿನ ವರ್ಷಗಳಲ್ಲಿ ಇರಾನ್ ಅನ್ನು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಶೆಹಬಾಜ್ ಷರೀಫ್ ಎಕ್ಸ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಇರಾನ್‌ನ ಪಾದ್ರಿಗಳ ತಂಡ ಮೊಜ್ತಬಾ ಖಮೇನಿ ಅವರನ್ನು ಮುಂದಿನ ಇರಾನಿನ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಆಯ್ಕೆಯನ್ನು ನೇರವಾಗಿ ವಿರೋಧಿಸಿದ್ದರು. ಹಲವಾರು ದೇಶಗಳು ಮೊಜ್ತಬಾ ಅವರ ಉತ್ತರಾಧಿಕಾರವನ್ನು ಸ್ವಾಗತಿಸಿದ್ದವು. ರಷ್ಯಾ, ಒಮನ್ ಬೆನ್ನಲ್ಲೇ ಇದೀಗ ಪಾಕಿಸ್ತಾನವೂ ಈ ಆಯ್ಕೆಯನ್ನು ಸ್ವಾಗತಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: 1 ಟಿಕೆಟ್ ಬೆಲೆ 3100 ರೂಪಾಯಿ

ಬಾಲಿವುಡ್‌ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ‘ಧುರಂಧರ್: ದಿ ರಿವೇಂಜ್’ (Dhurandhar 2) ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವಾಗ ದೇಶಾದ್ಯಂತ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಮಾರ್ಚ್ 18ರಂದು ಆಯ್ದ ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರಿವ್ಯೂ (Dhurandhar 2 Paid Previews) ಆರಂಭವಾಗಲಿದ್ದು, ಟಿಕೆಟ್ ಬೆಲೆಗಳು ಗಗನಕ್ಕೇರಿದೆ. ಹಾಗಿದ್ದರೂ ಕೂಡ ಪ್ರೇಕ್ಷಕರು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಈ ಸಿನಿಮಾದ ಟಿಕೆಟ್​ಗಳು ಬರೋಬ್ಬರಿ 3100 ರೂಪಾಯಿಗೆ ಮಾರಾಟ ಆಗಿವೆ. ರಣವೀರ್ ಸಿಂಗ್ ನಟನೆಯ ಈ ಚಿತ್ರದ ಮೇಲೆ ಜನರಿಗೆ ಈ ಪರಿ ಕ್ರೇಜ್ ಇದೆ.

ಮುಂಬೈನ ಬೊರಿವಲಿಯ ಐನಾಕ್ಸ್ ಮೆಗಾಪ್ಲೆಕ್ಸ್‌ನಲ್ಲಿ ರಿಕ್ಲೈನರ್ ಸೀಟುಗಳ ಬೆಲೆ ಬರೋಬ್ಬರಿ 3100 ರೂಪಾಯಿ ತಲುಪಿದೆ. ದೆಹಲಿಯ ಪಿವಿಆರ್ ಸೆಲೆಕ್ಟ್ ಸಿಟಿ ವಾಕ್‌ನಲ್ಲಿ 2400 ರೂಪಾಯಿವರೆಗೆ ದರವಿದೆ. ಇನ್ನು, ಮೆಟ್ರೋ ನಗರಗಳಲ್ಲಿ ಸಾಮಾನ್ಯ ಸೀಟುಗಳ ಬೆಲೆಯೇ 600ರಿಂದ 900 ರೂಪಾಯಿ ಆಸುಪಾಸಿನಲ್ಲಿದೆ. ಐಮ್ಯಾಕ್ಸ್ ಶೋಗಳಿಗೆ 1000 ರೂಪಾಯಿಗೂ ಅಧಿಕ ದರವಿದ್ದರೂ ಬಹುತೇಕ ಶೋಗಳು ಈಗಾಗಲೇ ಹೌಸ್‌ಫುಲ್ ಆಗಿವೆ.

ಕೇವಲ ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಇದೆ. ಕನ್ನಡ ಮತ್ತು ತೆಲುಗಿನಲ್ಲಿ ಕೂಡ ‘ಧುರಂಧರ್ 2’ ಸಿನಿಮಾದ ಟಿಕೆಟ್​ಗಳು 400 ರೂಪಾಯಿ ಆಸುಪಾಸಿನಲ್ಲಿ ಮಾರಾಟ ಆಗುತ್ತಿವೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಈ ಚಿತ್ರದ ಹಿಂದಿ ವರ್ಷನ್ ಟಿಕೆಟ್​ಗಳು ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟ ಆಗಿವೆ. ತಮಿಳುನಾಡಿನಲ್ಲಿ ಬೆಲೆ ಮಿತಿ ಇರುವ ಕಾರಣ 166 ರೂಪಾಯಿ ನಿಗದಿ ಆಗಿದೆ.

ಅಡ್ವಾನ್ಸ್ ಬುಕಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾದ ಸುಮಾರು 3 ಲಕ್ಷ ಟಿಕೆಟ್‌ಗಳನ್ನು ಮಾರಾಟ ಆಗಿವೆ. ಈ ಮೂಲಕ ಬಿಡುಗಡೆಗೂ ಮುನ್ನವೇ ಭಾರತದಲ್ಲಿ 15 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಇದು ಬಾಲಿವುಡ್ ಚಿತ್ರವೊಂದರ ಪ್ರೀಮಿಯರ್ ಶೋಗೆ ಸಿಕ್ಕಿರುವ ಅತಿ ದೊಡ್ಡ ಮೊತ್ತದ ಕಲೆಕ್ಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಕನ್ನಡ ಟ್ರೇಲರ್: ಕರ್ನಾಟಕದಲ್ಲಿ ಮೋಡಿ ಮಾಡುತ್ತಾ ರಣವೀರ್ ಸಿಂಗ್ ಸಿನಿಮಾ?

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನದಲ್ಲಿರುವ ಭಾರತೀಯ ಗೂಢಚಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಆರ್‌ ಮಾಧವನ್, ಅರ್ಜುನ್ ರಾಮ್​ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಈಗ ಎರಡನೇ ಭಾಗವೂ ಅದೇ ಹಾದಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂಧಾನ ಯಶಸ್ವಿ: ಮುಷ್ಕರ ಹಿಂಪಡೆದ ವೈದ್ಯರು, ನಿಟ್ಟುಸಿರುಬಿಟ್ಟ ರೋಗಿಗಳು

ಬೆಂಗಳೂರುಮ (ಮಾರ್ಚ್ 11): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯಾಧಿಕಾರಿಗಳ ಸಂಘ (Karnataka Doctors association)  ನಾಳಿನ (ಮಾರ್ಚ್ 11)  ಮುಷ್ಕರವನ್ನು (Strike) ಹಿಂಪಡೆದುಕೊಂಡಿದೆ. ಖಾಲಿ ಹುದ್ದೆಗಳ ಭರ್ತಿ ಸೇರಿ 14 ಬೇಡಿಕೆಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಓಪಿಡಿ ಬಂದ್ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಉಂಟಾಗಬಹುದು ಎಂದು ಎಚ್ಚೆತ್ತ ರಾಜ್ಯ ಸರ್ಕಾರ, ವೈದ್ಯಾಧಿಕಾರಿಗಳ ಸಂಘದ ಜತೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ.  14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನಿಡಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 11ರ ಮುಷ್ಕರವನ್ನು ವೈದ್ಯಾಧಿಕಾರಿಗಳ ಸಂಘ ವಾಪಸ್ ಪಡೆದುಕೊಂಡಿದೆ.

ಇಂದು ನಡೆದ ಸಂಧಾನ ಸಭೆಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಇಟ್ಟಿರುವ 14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಮುಂದಿನ 3 ತಿಂಗಳಲ್ಲಿ ಎಲ್ಲ ಬೇಡಿಕೆ ಈಡೇರಿಸುವುದಾಗಿ ತಿಳಿಸಿದೆ. ಸರ್ಕಾರದ ಈ ಭರವಸೆಗೆ ವೈದ್ಯಾಧಿಕಾರಿಗಳ ಸಂಘ ಸಹ ಒಪ್ಪಿಕೊಂಡಿದ್ದು, ನಾಳೆಯ(ಮಾರ್ಚ್ 11) ಮುಷ್ಕರ ಹಿಂಪಡೆದುಕೊಂಡಿದೆ. ಇದರಿಂದ ರೋಗಿಗಳು ನಿಟ್ಟುಸಿರುಬಿಡುವಂತಾಗಿದೆ.

Source link

ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್; ವಿಡಿಯೋ ವೈರಲ್

2026 ರ ಟಿ20 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದ ತಕ್ಷಣವೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಳಿಯ ಹನುಮಾನ್ ತೇಕ್ರಿ ದೇವಸ್ಥಾನಕ್ಕೆ ಟ್ರೋಫಿಯೊಂದಿಗೆ ಭೇಟಿ ನೀಡಿದ್ದರು. ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್, ಬಿಸಿಸಿಐನ ಈ ನಡೆಯನ್ನು ಪ್ರಶ್ನಿಸಿದ್ದರು. ಇದೀಗ ಆ ಬಗ್ಗೆ ಇಶಾನ್ ಕಿಶನ್ ಬಳಿ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಕೇಳುತ್ತಿದ್ದಂತೆ ಕೆರಳಿರುವ ಇಶಾನ್ ಕಿಶನ್ ಪತ್ರಕರ್ತರ ಮೇಲೆ ಹರಿಹಾಯ್ದಿದ್ದಾರೆ.

ಟೀಂ ಇಂಡಿಯಾದ ನಡೆಗೆ ಅಸಮಾಧಾನ ಹೊರಹಾಕಿದ್ದ ಕೀರ್ತಿ ಆಜಾದ್, ಆಟ ಮತ್ತು ಟ್ರೋಫಿ ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ, ಬದಲಾಗಿ ಇಡೀ ರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿದ್ದರು. ಇದೀಗ ಈ ವಿವಾದದ ಬಗ್ಗೆ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಬಳಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅಸಮಾಧಾನದಿಂದಲೇ ಉತ್ತರಿಸಿರುವ ಕಿಶನ್, ‘ನಾವು ಅದ್ಭುತವಾದ ವಿಶ್ವಕಪ್ ಗೆದ್ದಿದ್ದೇವೆ. ನೀವು ಕೆಲವು ಒಳ್ಳೆಯ ಪ್ರಶ್ನೆಗಳನ್ನು ಕೇಳಬೇಕು. ಕೀರ್ತಿ ಆಜಾದ್ ಹೇಳಿರುವುದರ ಬಗ್ಗೆ ನಾನು ಈಗ ಏನು ಹೇಳಬೇಕು?’ ಎಂದು ಪತ್ರಕರ್ತರ ಮೇಲೆಯೇ ಗರಂ ಆದರು.

2026 ರ ಟಿ20 ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್, ಒಂಬತ್ತು ಪಂದ್ಯಗಳಲ್ಲಿ 35.22 ರ ಸರಾಸರಿಯಲ್ಲಿ 317 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಆಟಗಾರ ಎನಿಸಿಕೊಂಡರು. ಇದರಲ್ಲಿ ಮೂರು ಅರ್ಧಶತಕಗಳು ಸೇರಿದ್ದವು. ಇನ್ನು ಫೈನಲ್ ಪಂದ್ಯದಲ್ಲಿ ಕಿಶನ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಡೇರಲಿಲ್ಲ ಚಂಗಡಿ ಗ್ರಾಮಸ್ಥರ ಕನಸು: ಕಲ್ಲು-ಮುಳ್ಳಿನ ಹಾದಿ, 23 ಕಿಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ

ಚಾಮರಾಜನಗರ, ಮಾರ್ಚ್​ 10: ಆ ಕಾಡಿನ ಗ್ರಾಮಸ್ಥರಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ನಡೆದ ಸಚಿವ ಸಂಪುಟ ಸಭೆ ಹಲವು ಭರವಸೆ ಹುಟ್ಟು ಹಾಕಿತ್ತು. ಸಮಾಜದ ಮುಖ್ಯವಾಹಿನಿಗೆ ಸೇರಬೇಕೆಂಬ ಕನಸು ಇನ್ನೇನು ನನಸಾಗಿಯೇ ಬಿಡುತ್ತದೆ ಎಂಬ ನಿರೀಕ್ಷೆ ಹೊತ್ತಿದ್ದರು. ಆದರೆ ಸಚಿವ ಸಂಪುಟ ಸಭೆ ಆ ಕಾಡಿನ ಗ್ರಾಮಸ್ಥರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ.

23 ಕಿ.ಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ

ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮ ಮೂಲ ಸೌಕರ್ಯಗಳ ಕೊರತೆ, ವನ್ಯಜೀವಿಗಳ ಹಾವಳಿಯಿಂದ ತತ್ತರಿಸಿ ಹೋಗಿದೆ. ಮುಖ್ಯರಸ್ತೆಯಿಂದ 23 ಕಿ.ಮೀಟರ್ ದೂರ ದಟ್ಟಕಾಡಿನೊಳಗೆ ಇರುವ ಈ ಕುಗ್ರಾಮ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಗ್ರಾಮದಲ್ಲಿ ಯಾವುದೇ ನೆಟ್​ವರ್ಕ್ ಇಲ್ಲ. ರಸ್ತೆ ಇಲ್ಲದ ಕಾರಣ ಆ್ಯಂಬುಲೆನ್ಸ್ ಕೂಡ ಬರಲ್ಲ. ಆರೋಗ್ಯ ಹದಗೆಟ್ಟರೆ, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ದೇವರೇ ಗತಿ.

ಇದನ್ನೂ ಓದಿ: ಚಾಮರಾಜನಗರ ಅಣ್ಣೂರುಕೇರಿಯಲ್ಲಿ ಮಾರಿ ಹಬ್ಬದ ವೇಳೆ 100ಕ್ಕೂ ಹೆಚ್ಚು ಕುರಿಗಳ ಬಲಿ: ರಕ್ತ ಹೀರಿದ ಅರ್ಚಕ, ಭಯಾನಕ ವಿಡಿಯೋ ವೈರಲ್

ಡೋಲಿ ಕಟ್ಟಿ 23 ಕಿ.ಮೀ ದೂರ ಕಲ್ಲು, ಮುಳ್ಳುಗಳ ಹಾದಿಯಲ್ಲಿ ಮುಖ್ಯರಸ್ತೆಗೆ ಹೊತ್ತು ತರಬೇಕು. ಇನ್ನು ಕಾಡು ಪ್ರಾಣಿಗಳ ಹಾವಳಿಗೆ ಬೆಳೆಯೂ ಕೈಸೇರುತ್ತಿಲ್ಲ. ಈ ಕುಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ. ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

ಗ್ರಾಮಸ್ಥರ ನಿರೀಕ್ಷೆ ಹುಸಿ

ಸ್ವಯಂಪ್ರೇರಿತರಾಗಿ ನಾಡಿಗೆ ಸ್ಥಳಾಂತರಗೊಳ್ಳಲು 2016ರಲ್ಲಿಯೇ ಚಂಗಡಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಇವರ ಪುನರ್ವಸತಿಗಾಗಿ 2021ರಲ್ಲಿ ಅರಣ್ಯ ಇಲಾಖೆ ಹನೂರು ತಾಲೂಕಿನ ವೈಶಂಪಾಳ್ಯ ಡಿಎಂ ಸಮುದ್ರದ ಬಳಿ 435 ಎಕರೆ ಭೂಮಿ ಗುರುತಿಸಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಗ್ರಾಮದ 256 ಕುಟುಂಬಗಳ ಪುನರ್ವಸತಿ ಯೋಜನೆಗಾಗಿ ಸುಮಾರು 40 ಕೋಟಿ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಂಗಡಿ ಗ್ರಾಮಸ್ಥರ ಪುನರ್ವಸತಿಗೆ ಅನುಮೋದನೆ ದೊರೆಯುತ್ತದೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿತ್ತು. ಆದರೆ ಈ ಬಗ್ಗೆ ಸಭೆಯಲ್ಲಿ ಈ ವಿಷಯವೇ ‌ಪ್ರಸ್ತಾಪವಾಗದೆ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ: ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ!

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಈ ಭಾಗದ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತದೆ. ಒಂದಷ್ಟು ಪರಿಹಾರೋಪಾಯಗಳು ಸಿಗುತ್ತವೆ ಎಂಬ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಈ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಅದರಲ್ಲೂ ಚಂಗಡಿ ಗ್ರಾಮಸ್ಥರಲ್ಲಿ ಭ್ರಮನಿರಸನ ಮೂಡಿಸಿದೆ. ಪುನರ್ವಸತಿ ಪ್ರಸ್ತಾವನೆಯನ್ನು ಸಂಪುಟ ಸಭೆಯ ಮುಂದಿಡುವಲ್ಲಿ ಸ್ಥಳೀಯ ಶಾಸಕರ ವೈಫಲ್ಯ ಹಾಗೂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಲ್ಲಾ ಕಡೆ ಕಾಡಿನಲ್ಲಿರುವ ಜನರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಲೇ ಇದೆ. ಆದರೆ ಇಲ್ಲಿ ಗ್ರಾಮಸ್ಥರೇ ಸ್ಥಳಾಂತರಗೊಳ್ಳಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದರೂ ಸರ್ಕಾರ ಸ್ಪಂದಿಸದೇ ಇರುವುದು ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೂದಲಿಗೆ ಹೇರ್ ಡೈ ಹಚ್ಚುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುವ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಬದಲಾಗುತ್ತಿರುವ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ, ಆಹಾರ ಪದ್ಧತಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಮತ್ತು ಮಾಲಿನ್ಯ (Pollution) ಈ ಸಮಸ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. ಈ ರೀತಿ ಕಂಡುಬರುವ ಬಿಳಿ ಕೂದಲನ್ನು ಮರೆಮಾಡಲು ಹೇರ್ ಡೈ ಬಳಸುತ್ತಾರೆ. ಹಿಂದೆ ವಯಸ್ಸಾದವರು ಮಾತ್ರ ಹೇರ್ ಡೈ (Hair Dye) ಬಳಸುತ್ತಿದ್ದರು. ಆದರೆ ಈಗ ಹಾಗಲ್ಲ. ಯುವಕ, ಯುವತಿಯರೂ ಕೂಡ ನಿಯಮಿತವಾಗಿ ಬಳಸಲು ಆರಂಭಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೆಮಿಕಲ್ ಆಧಾರಿತ ಡೈ, ಹರ್ಬಲ್ ಡೈ ಹಾಗೂ ಇನ್‌ಸ್ಟಂಟ್ ಕಲರ್ ಸೇರಿದಂತೆ ಹಲವು ರೀತಿಯ ಹೇರ್ ಡೈಗಳು ಲಭ್ಯವಿದ್ದು, ಜನ ಇದರ ಬಳಕೆ ಮಾಡುವಾಗ ಸಾಮಾನ್ಯವಾಗಿ ಕೂದಲಿನ ಬಣ್ಣದ ಬಗ್ಗೆ ಮಾತ್ರ ಗಮನ ಕೊಡುತ್ತಾರೆ. ಆದರೆ ಇದರಿಂದ ಚರ್ಮಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕೂದಲಿಗೆ ಡೈ ಹಾಕುವಾಗ ಕೆಲವೊಮ್ಮೆ ನೆತ್ತಿ, ಕಿವಿಗಳ ಸುತ್ತ ಮತ್ತು ಕುತ್ತಿಗೆಯ ಚರ್ಮದ ಸಂಪರ್ಕಕ್ಕೆ ಬರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಬರುತ್ತದೆ, ಚರ್ಮವನ್ನು ರಕ್ಷಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಹೇರ್ ಡೈ ಚರ್ಮಕ್ಕೆ ಮಾಡುವ ಹಾನಿಗಳು:

ಪಿಎಸ್‌ಆರ್‌ಐ ಆಸ್ಪತ್ರೆಯ ಡರ್ಮಟಾಲಜಿ ವಿಭಾಗದ ಡಾ. ಭಾವುಕ್ ಧೀರ್ ಅವರ ಪ್ರಕಾರ, ಹೇರ್ ಡೈಯಲ್ಲಿ ಇರುವ ಹಲವು ರಾಸಾಯನಿಕ ಪದಾರ್ಥಗಳು ಚರ್ಮಕ್ಕೆ ಹಾನಿಕಾರಕವಾಗಬಹುದು. ಕೆಲವರಿಗೆ ಇದರಿಂದ ಅಲರ್ಜಿ, ತುರಿಕೆ ಮತ್ತು ಉರಿ ಕಾಣಿಸಬಹುದು. ಡೈ ಚರ್ಮದ ಸಂಪರ್ಕಕ್ಕೆ ಬಂದಾಗ ಚರ್ಮ ಹೆಚ್ಚು ಸಂವೇದನಶೀಲವಾಗಬಹುದು. ಕೆಲ ಸಂದರ್ಭಗಳಲ್ಲಿ ಚರ್ಮದಲ್ಲಿ ಕೆಂಪು ದದ್ದುಗಳು ಅಥವಾ ಊತ ಕೂಡ ಕಾಣಿಸಬಹುದು. ಹೆಚ್ಚು ಸಮಯ ಅಥವಾ ಪದೇ ಪದೇ ಹೇರ್ ಡೈ ಬಳಸುವುದರಿಂದ ಚರ್ಮದ ಸಹಜ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಕೆಲವರಿಗೆ ಡೈ ಬಳಸಿದ ಬಳಿಕ ತಲೆಯ ಚರ್ಮದಲ್ಲಿ ಉರಿ ಅಥವಾ ಚುಚ್ಚುವಿಕೆ ಅನುಭವವಾಗಬಹುದು. ಸಂವೇದನಶೀಲ ಚರ್ಮ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳಬಹುದು. ಆದ್ದರಿಂದ ಹೇರ್ ಡೈ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ: ಬೋಳುತಲೆ ಮಹಿಳೆಯರಿಗಿಂತ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರಲು ಇದೆ ಕಾರಣ

ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳಬೇಕು?

ಹೇರ್ ಡೈ ಬಳಸುವ ಮೊದಲು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಚರ್ಮದ ಹಾನಿಯನ್ನು ತಪ್ಪಿಸಬಹುದು. ಡೈ ಹಾಕುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ. ಇದರಿಂದ ಚರ್ಮಕ್ಕೆ ಅಲರ್ಜಿ ಆಗುತ್ತದೆಯೇ ಎಂಬುದು ತಿಳಿದುಬರುತ್ತದೆ. ಕೂದಲಿಗೆ ಡೈ ಹಾಕುವಾಗ ನೆತ್ತಿ, ಕಿವಿ ಮತ್ತು ಕುತ್ತಿಗೆಯ ಸುತ್ತ ವಾಸಲಿನ್ ಅಥವಾ ಕ್ರೀಮ್ ಹಚ್ಚಬಹುದು. ಇದರಿಂದ ಡೈ ನೇರವಾಗಿ ಚರ್ಮಕ್ಕೆ ತಗುಲುವುದನ್ನು ತಪ್ಪಿಸಬಹುದು. ಜೊತೆಗೆ ಉತ್ತಮ ಬ್ರ್ಯಾಂಡ್ ಮತ್ತು ಕಡಿಮೆ ರಾಸಾಯನಿಕಗಳಿರುವ ಉತ್ಪನ್ನಗಳನ್ನು ಬಳಸುವುದು ಉತ್ತಮ. ಡೈ ಬಳಸಿ ಮುಗಿದ ನಂತರ ಕೂದಲು ಮತ್ತು ಚರ್ಮವನ್ನು ಚೆನ್ನಾಗಿ ತೊಳೆಯುವುದು ಕೂಡ ಅಗತ್ಯ.

ಸಮಸ್ಯೆ ಕಂಡುಬಂದರೆ ಏನು ಮಾಡಬೇಕು?

ಹೇರ್ ಡೈ ಬಳಸಿದ ನಂತರ ಚರ್ಮದಲ್ಲಿ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಕೂದಲನ್ನು ಸ್ವಚ್ಛವಾದ ನೀರಿನಿಂದ ತೊಳೆಯುವುದು ಉತ್ತಮ. ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಾಧ್ಯವಾದಷ್ಟು ಕೂದಲಿನ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಕೂದಲು ಮತ್ತು ಚರ್ಮ ಎರಡೂ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಪುರದಲ್ಲಿ ಮೈ ಮೇಲೆ ಟ್ರಕ್ ಹರಿದು 22 ವರ್ಷದ ಮಹಿಳೆ ಸಾವು

ಜೈಪುರ, ಮಾರ್ಚ್ 10: ಜೈಪುರದಲ್ಲಿ ಟ್ರಕ್ (Truck Accident) ಹರಿದು 22 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ನಾಗಾಲ್ಯಾಂಡ್ ಮೂಲದ ಲಿಗಾ ಜಿಮೋ ಎಂದು ಗುರುತಿಸಲಾಗಿದೆ. ಅವರು ಕಳೆದ ಎರಡು ವರ್ಷಗಳಿಂದ ಮಾಲ್ವಿಯಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಸೋಮವಾರ ರಾತ್ರಿ ಅವರು ಬೈಕ್ ಟ್ಯಾಕ್ಸಿಯಲ್ಲಿ ಮಾಲ್ವಿಯಾ ನಗರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗೋಪಾಲಪುರ ಪುಲಿಯಾ ಬಳಿ ಬೈಕ್​ ನಿಯಂತ್ರಣ ಕಳೆದುಕೊಂಡಿದ್ದರಿಂದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Video: ಡಬ್ರಾ-ಗ್ವಾಲಿಯರ್ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು 1.5 ಕಿ.ಮೀ ಎಳೆದೊಯ್ದ ಟ್ರಕ್

ಇದೇ ವೇಳೆ ಹಿಂದೆ ಬಂದ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಅವರ ಮೇಲೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಡಿರಾಷ್ಟ್ರಗಳಿಗೆ ಇದ್ದ ಎಫ್​ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ

ನವದೆಹಲಿ, ಮಾರ್ಚ್ 10: ದೇಶದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳಿಗೆ (border countries) ಇದ್ದ ಎಫ್​ಡಿಐ ನಿರ್ಬಂಧವನ್ನು ಭಾರತ ತೆರವುಗೊಳಿಸುತ್ತಿದೆ. ಎಫ್​ಡಿಐ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2020ರಲ್ಲಿ ಗಾಲ್ವನ್​ನಲ್ಲಿ ಚೀನಾ ಜೊತೆ ಜಟಾಪಟಿ ನಡೆದ ಬಳಿಕ ಭಾರತವು ಗಡಿ ದೇಶಗಳ ಹೂಡಿಕೆಗಳ ಮೇಲೆ ನಿರ್ಬಂಧ ಹಾಕಿತ್ತು.

2020ರ ಪ್ರೆಸ್ ನೋಟ್-3 ನಿಯಮಗಳ ಪ್ರಕಾರ ಗಡಿ ದೇಶಗಳ ಸಂಸ್ಥೆಗಳಿಂದ ಭಾರತದಲ್ಲಿ ಹೂಡಿಕೆ ಮಾಡಲು ಸರ್ಕಾರದ ಅನುಮತಿ ಅಗತ್ಯ ಇದೆ. ಚೀನಾ ವಿರುದ್ಧ ಪ್ರತಿಕ್ರಮದ ಭಾಗವಾಗಿ ಭಾರತ ಈ ನಿಯಮ ರೂಪಿಸಿತ್ತು. ಈಗ ಆರು ವರ್ಷದ ಬಳಿಕ ಆ ನಿರ್ಬಂಧವನ್ನು ಭಾರತ ಸಡಿಲಗೊಳಿಸಿದೆ. ಪ್ರೆಸ್ ನೋಟ್-3 ನಿಯಮಗಳನ್ನು ತಿದ್ದುಪಡಿ ಮಾಡಿದೆ.

ಇದನ್ನೂ ಓದಿ: ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ

ಹೊಸ ನಿಯಮಗಳ ಪ್ರಕಾರ ನೆರೆಯ ಗಡಿ ದೇಶಗಳ ಕಂಪನಿಗಳು ಭಾರತದಲ್ಲಿ ಶೇ. 10ರವರೆಗೆ ಹೂಡಿಕೆ ಮಾಡಲು ಸರ್ಕಾರದಿಂದ ಕಡ್ಡಾಯ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ನಿರ್ದಿಷ್ಟ ಪ್ರಸ್ತಾವಗಳನ್ನು 60 ದಿನದೊಳಗಾಗಿ ನಿರ್ಧರಿಸಲಾಗುತ್ತದೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಅಫ್ಗಾನಿಸ್ತಾನ, ಭೂತಾನ್ ಮತ್ತು ಮಯನ್ಮಾರ್ ದೇಶಗಳು ಭಾರತದ ಜೊತೆ ಗಡಿ ಹಂಚಿಕೊಂಡಿವೆ. ಈ ಹೊಸ ನಿಯಮ ಸಡಿಲಿಕೆಯು ಚೀನಾದಿಂದ ಹೂಡಿಕೆ ಹರಿದುಬರಲು ಎಡೆ ಮಾಡಿಕೊಡುವ ನಿರೀಕ್ಷೆ ಇದೆ.

ಭಾರತದಲ್ಲಿ ಕಳೆದ ಐದು ವರ್ಷದಲ್ಲಿ ಕಡಿಮೆಗೊಂಡ ಚೀನಾದ ಎಫ್​ಡಿಐ

2000ರ ಏಪ್ರಿಲ್​ನಿಂದ 2025ರ ಡಿಸೆಂಬರ್​ವರೆಗೆ ಭಾರತದ ಈಕ್ವಿಟಿಗಳಿಗೆ ಚೀನಾದಿಂದ ಬಂದ ಎಫ್​ಡಿಐ 2.51 ಬಿಲಿಯನ್ ಡಾಲರ್ ಮಾತ್ರವೇ. ಈ ಅವಧಿಯಲ್ಲಿ ಬಂದ ಒಟ್ಟು ವಿದೇಶೀ ನೇರ ಹೂಡಿಕೆಯಲ್ಲಿ ಚೀನಾದ ಪಾಲು ಶೇ. 0.32 ಮಾತ್ರ. ಅತಿಹೆಚ್ಚು ಹೂಡಿಕೆ ಮಾಡಿದ ದೇಶಗಳ ಪಟ್ಟಿಯಲ್ಲಿ ಚೀನಾ 23ನೇ ಸ್ಥಾನ ಪಡೆಯುತ್ತದೆ.

ಇದನ್ನೂ ಓದಿ: ನಾವ್ಯಾಕೆ ತೈಲ ನೀಡಬೇಕು? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ

ಭಾರತದಲ್ಲಿ ಚೀನಾದ ಎಫ್​ಡಿಐ ಬಹಳ ಕಡಿಮೆಗೊಂಡಿದೆಯಾದರೂ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಬಹಳ ಹೆಚ್ಚಿದೆ. ಭಾರತಕ್ಕೆ ಚೀನಾದ ರಫ್ತುಗಳು ಕೂಡ ಗಣನೀಯವಾಗಿ ಹೆಚ್ಚಿದೆ. 2024-25ರಲ್ಲಿ ಒಂದೇ ವರ್ಷದಲ್ಲಿ ಚೀನಾದ 113.45 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಭಾರತ ಆಮದು ಮಾಡಿಕೊಂಡಿತು. ಆದರೆ, ಭಾರತದಿಂದ ಚೀನಾಗೆ ರಫ್ತಾಗುತ್ತಿರುವುದು ಮಾತ್ರ ನಗಣ್ಯ. ಹೀಗಾಗಿ, ಎರಡು ದೇಶಗಳ ಮಧ್ಯೆ ಟ್ರೇಡ್ ಡೆಫಿಸಿಟ್ ಬರೋಬ್ಬರಿ 99.2 ಬಿಲಿಯನ್ ಡಾಲರ್​ನಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಳಮೀಸಲಾತಿ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತಕ್ಕೆ: ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು, (ಮಾರ್ಚ್ 10): ದಲಿತ ಒಳಮೀಸಲಾತಿ (Internal reservation )ನೀಡಿಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಒಳ ಮೀಸಲಾತಿ ನೀಡದೇ ಸರ್ಕಾರಿ ನೌಕರರ ನೇಮಕಾತಿಗೆ ಮುಂದಾಗಿದೆ. ಇದಕ್ಕೆ ದಲಿತ ಎಡಗೈ ನಾಯಕರು ವಿರೋಧಿಸುತ್ತಿದ್ದಾರೆ. ಇದರಿಂದ ಸ್ವಪಕ್ಷದಲ್ಲೇ ಹೊತ್ತಿಕೊಂಡ ಈ ಭಿನ್ನಾಭಿಪ್ರಾಯದ ಕಿಡಿ, ಪರಿಸ್ಥಿತಿ ಕೈಮೀರಿಸುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಚೇರಿಯಲ್ಲಿ ದಲಿತ ಸಚಿವರು ಮಹತ್ವದ ಸಭೆ ನಡೆಸಿದ್ದು, ಗೊಂದಲ ಪರಿಹಾರ ಕುರಿತು ಸಿದ್ದರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಮುನಿಯಪ್ಪ, ಒಳಮೀಸಲಾತಿ ಆಧರಿಸಿ ನೇಮಕಾತಿ ಮಾಡಿಕೊಳ್ಳುವುದಾಗಿ ಸಿಎಂ ಕೂಡ ಭರವಸೆ ನೀಡಿದ್ದಾರೆ. ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನವಾಗುತ್ತೆ. ಬಲ ಸಮುದಾಯ ‌ನಾಯಕರು ಒಳಮೀಸಲಾತಿಗೆ ಒಪ್ಪಿಕೊಂಡಿದ್ದಾರೆ. ಎಡ, ಬಲ ಸಮುದಾಯಗಳಿಗೆ ಸರಿಸಮವಾಗಿ ಒಳಮೀಸಲಾತಿ ಹಂಚಿಕೆ ಮಾಡಲಾಗುತ್ತೆ. ಮಾ.27ರವರೆಗೆ ಯಾವುದೇ ನೇಮಕಾತಿ ಅಧಿಸೂಚನೆ ಪ್ರಕಟಣೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಒಂದು ಕಿಡಿಗೆ ಸತತ 22 ಗಂಟೆ ಕಾಲ ಹೊತ್ತಿ ಉರಿದ ಕೇಬಲ್​​​ ಫ್ಯಾಕ್ಟರಿ

ದೇವನಹಳ್ಳಿ, ಮಾರ್ಚ್​ 10: ಸಣ್ಣ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ಕೇಬಲ್​​​ ಫ್ಯಾಕ್ಟರಿಯನ್ನೇ ಸಂಪೂರ್ಣವಾಗಿ ಸುಟ್ಟು (cable factory fire) ಬೂದಿ ಮಾಡಿದ್ದು, ಕೋಟ್ಯಂತರ ರೂ ಮೌಲ್ಯದ ಕೇಬಲ್ ವೈರ್​​ಗಳು ಬೆಂಕಿಗಾಹುತಿಯಾಗಿದೆ. ಸತತ 22 ಗಂಟೆಗಳ‌‌ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದ್ದು,  ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ‌ ಪ್ರದೇಶದ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿಸ್ ಫ್ಯಾಕ್ಟರಿಯಲ್ಲಿ ನಿನ್ನೆ ಘಟನೆ ನಡೆದಿದೆ.

ನಿನ್ನೆ ಸಂಜೆ ಐದು ಗಂಟೆ ಸಮಯಕ್ಕೆ ಕಾರ್ಮಿಕರೆಲ್ಲಾ ಕೆಲಸ ಮುಗಿಸಿ ಮನೆಗೆ ತೆರಳುವ ತವಕದಲ್ಲಿರುವಾಗಲೇ ಮೂಲೆಯೊಂದರಲ್ಲಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಸಂಪೂರ್ಣ ಫ್ಯಾಕ್ಟರಿಯನ್ನೇ ಆವರಿಸಿತ್ತು. ಹೆದ್ದಾರಿ‌ಯ ಫ್ಲೈಓವರ್ ಮೇಲೆ ನಿಂತ್ತು ನೋಡಿದ ಜನರಿಗೆ ಅಕ್ಷರಶಃ ಯಾವುದೋ ಬಾಂಬ್ ಬಿದ್ದಂತೆ ಬಾನೆತ್ತರಕ್ಕೆ ದಟ್ಟ ಹೊಗೆ ಆವರಿಸಿರುವ ದೃಶ್ಯ ಕಂಡುಬಂದಿದ್ದು ಎಲ್ಲರೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಿರು. ಇನ್ನು ಅಗ್ನಿ ಅವಘಡಕ್ಕೆ ಸಂಪೂರ್ಣ ಕೈಗಾರಿಕಾ ಫ್ಯಾಕ್ಟರಿ ಸುಟ್ಟು ಭಸ್ಮವಾಗಿದ್ದು, 22 ಗಂಟೆಗೂ ಅಧಿಕ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ಕೋಟ್ಯಂತರ ರೂ ನಷ್ಟ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ‌ ಪ್ರದೇಶದ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿಸ್ ಫ್ಯಾಕ್ಟರಿಯಲ್ಲಿ ನಿನ್ನೆ ಸಂಜೆ 05:30ರ‌ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸುತ್ತಿದ್ದಂತೆ ಎಚ್ಚೆತ್ತ ಕಾರ್ಮಿಕರು ಆಡಳಿತ ಮಂಡಳಿ ಮೊದಲಿಗೆ ಬೆಂಕಿ ನಂದಿಸುವ ಯತ್ನ ಮಾಡಿದರು ರಬ್ಬರ್ ಮತ್ತು ಪ್ಲಾಸ್ಟಿಕ್​ಗೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿ ನಂದಿಸಲು ವಿಫಲವಾಗಿ ಫ್ಯಾಕ್ಟರಿಯಿಂದ ಹೊರಗಡೆ ಬಂದಿದ್ದಾರೆ.

ಇದನ್ನೂ ಓದಿ: ಸ್ಕೂಟರ್ ನೀಡಲು ನಿರಾಕರಿಸಿದ್ದಕ್ಕೆ ಗೆಳತಿ ಮತ್ತು ಆಕೆಯ ಪೋಷಕರ ಮೇಲೆ ಬೆಂಕಿ ಹಚ್ಚಿದ ಬೆಂಗಳೂರಿನ ವ್ಯಕ್ತಿ

ಇನ್ನು ಕಾರ್ಮಿಕರು ಹೊರಗಡೆ ಬರುತ್ತಿದ್ದಂತೆ ಬೆಂಕಿ ತನ್ನ‌ ರುದ್ರ ನರ್ತನವನ್ನೆ ತೋರಿದ್ದು, ಕ್ಷಣ ಮಾತ್ರದಲ್ಲೇ ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಸಂಪೂರ್ಣ ಫ್ಯಾಕ್ಟರಿಗೆ ಬೆಂಕಿ ಆವರಿಸಿದೆ. ಬೆಂಕಿಯ ಕೆನ್ನಾಲೆಗೆ ಫ್ಯಾಕ್ಟರಿ ಧಗಧಗನೆ ಹೊತ್ತಿ ಉರಿದು ಕೆಲ‌ ಸಿಲಿಂಡರ್​​ ಸಹ ಸ್ಪೋಟಗೊಂಡಿವೆ ಎನ್ನಲಾಗ್ತಿದ್ದು, ಬೆಂಕಿಯ ರುದ್ರ ನರ್ತನಕ್ಕೆ ಫ್ಯಾಕ್ಟರಿ ಸುಟ್ಟು ಕರಕಲಾಗಿದೆ.

ಫ್ಯಾಕ್ಟರಿಗೆ ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಮೊದಲಿಗೆ ಬೆಂಕಿ ನಂದಿಸುವ ಕೆಲಸ‌ ಮಾಡಿದ್ದಾರೆ. ಆದರೆ ಎಷ್ಟೇ ನೀರು ಹೊಡೆದರು ಬೆಂಕಿ ಹತೋಟಿಗೆ ಬಾರದ ಕಾರಣ ಚಿಕ್ಕಬಳ್ಳಾಪುರ, ಕೋಲಾರ, ಗೌರಿಬಿದನೂರು, ಯಲಹಂಕ, ವೈಟ್ ಫೀಲ್ಡ್, ನೆಲಮಂಗಲ, ದೇವನಹಳ್ಳಿ ಸೇರಿದಂತೆ ಹಲವು ಭಾಗಗಳಿಂದ 15ಕ್ಕೂ ಅಧಿಕ ಅಗ್ನಿಶಾಮಕ ವಾಹನ ಹಾಗೂ ನೂರಕ್ಕೂ ಅಧಿಕ ಸಿಬ್ಬಂದಿಯನ್ನ ಕರೆಸಿಕೊಂಡಿದ್ದಾರೆ. ಜೊತೆಗೆ ಫ್ಯಾಕ್ಟರಿ ಪಕ್ಕದಲ್ಲೇ ಇದ್ದ ರೈತನ ಕೃಷಿ ಹೊಂಡದಿಂದ ನೀರನ್ನ ತುಂಬಿಕೊಂಡು ಬಂದು ರಾತ್ರಿ ಪೂರ್ತಿ ನೀರು ಹೊಡೆದರ ಬೆಂಕಿ ಹಾರಿಲ್ಲ. ಕೊನೆಗೆ ಸತತ 22 ಗಂಟೆಗಳ‌‌ ಕಾಲ‌ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ನಂದಿಸಿದ್ದರು ಸಹ ಅಲ್ಲಲ್ಲಿ ಹೊಗೆ ಹಾಡುತ್ತಲ್ಲಿದ್ದು, ಅದನ್ನ ಸಹ ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಫ್ಯಾಕ್ಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಸೂಕ್ತ ತುರ್ತು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದಿರುವುದು ಕಾರಣ ಎನ್ನಲಾಗುತ್ತಿದೆ. ಆಕಸ್ಮಿಕ ಅಗ್ನಿ ಅವಘಡಕ್ಕೆ ಕೋಟಿ ಕೋಟಿ ಮೌಲ್ಯದ ಕೇಬಲ್ ಹಾಗೂ ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಬೆಂಕಿ ಅವಘಡಕ್ಕೆ ಕಾರಣ ಏನು ಅನ್ನೋದು ಬೆಳಕಿಗೆ ಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version