World Biofuel Day 2026: ಜೈವಿಕ ಇಂಧನ ಬಳಕೆಯ ಪ್ರಯೋಜನಗಳೇನು? – Kannada News | World Biofuel Day 2026: Know the purpose of World Biofuel Day

ಬಹಳ ಹಿಂದಿನಿಂದಲೂ ಕಲ್ಲಿದ್ದಲು, ತೈಲದಂತಹ ಪಳೆಯುಳಿಕೆ ಇಂಧನಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದಾಗಿ ಇಂಧನ ಮೂಲಗಳು ಕ್ಷೀಣಿಸುತ್ತಿರುವುದಲ್ಲದೆ, ಈ ಇಂಧನಗಳ ಅತಿಯಾದ ಬಳಕೆ ಪರಿಸರಕ್ಕೂ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತಿವೆ. ಹೌದು ಇವುಗಳ ಅನಿಯಂತ್ರಿತ ಬಳಕೆ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ವಾಯು ಮಾಲಿನ್ಯ, ಹಸಿರು ಮನೆ ಅನಿಲದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಹಾಗಾಗಿ ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಿ, ಪರಿಸರಸ್ನೇಹಿಯಾದ ಜೈವಿಕ ಇಂಧನದ (biofuels) ಬಳಕೆಯನ್ನು ಉತ್ತೇಜಿಸಲು ಪ್ರತಿವರ್ಷ ಆಗಸ್ಟ್‌ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೈವಿಕ ಇಂಧನ ಬಳಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ವಿಶ್ವ ಜೈವಿಕ ಇಂಧನ ದಿನದ ಇತಿಹಾಸವೇನು?

ಜೈವಿಕ ಇಂಧನಗಳ ಮಹತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ಅವುಗಳ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ.   ಡೀಸೆಲ್ ಎಂಜಿನ್‌ನ ಸಂಶೋಧಕ ಸರ್ ರುಡಾಲ್ಫ್ ಡೀಸೆಲ್ ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಆಗಸ್ಟ್ 8, 1893 ರಂದು, ಸರ್ ಡೀಸೆಲ್ ಮೊದಲ ಬಾರಿಗೆ ಕಡಲೆಕಾಯಿ ಎಣ್ಣೆಯನ್ನು ಯಾಂತ್ರಿಕ ಎಂಜಿನ್‌ಗೆ ಶಕ್ತಿ ತುಂಬಲು ಯಶಸ್ವಿಯಾಗಿ ಬಳಸಿದರು. ಇದು ಭವಿಷ್ಯದಲ್ಲಿ ಸಸ್ಯಜನ್ಯ ಎಣ್ಣೆ ಪಳೆಯುಳಿಕೆ ಇಂಧನಗಳನ್ನು ಬದಲಾಯಿಸಬಹುದೆಂಬ ಕಲ್ಪನೆಯನ್ನು ಹುಟ್ಟುಹಾಕಿತು. ಈ ಸಾಧನೆಯನ್ನು ಆಚರಿಸಲು ಮತ್ತು ಜೈವಿಕ ಇಂಧನದ ಬಳಕೆಯ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು, ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. 2015 ರಿಂದ ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭಾರತದಲ್ಲೂ ಇದನ್ನು ಆಚರಿಸುತ್ತಿದೆ.

ವಿಶ್ವ ಜೈವಿಕ ಇಂಧನ ದಿನದ ಮಹತ್ವವೇನು?

  • ಕಚ್ಚಾ ತೈಲದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ವಚ್ಛ ಪರಿಸರವನ್ನು ಖಚಿತಪಡಿಸಿಕೊಳ್ಳಲು ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ.
  • ಪಳೆಯುಳಿಕೆ ಇಂಧನಗಳು ಗಾಳಿ ಮತ್ತು ಪರಿಸರಕ್ಕೆ ತುಂಬಾ ಹಾನಿಕಾರಕವಾದ ಇಂಗಾಲದ ಹೊರಸೂಸುವಿಕೆ ಉಂಟಾಗುತ್ತದೆ. ಅದೇ ಜೈವಿಕ ಇಂಧನಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
  • ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.

ಜೈವಿಕ ಇಂಧನ ಎಂದರೇನು?

ಸಸ್ಯಗಳು, ಬೆಳೆಗಳು ಮತ್ತು ಪ್ರಾಣಿಗಳ ತ್ಯಾಜ್ಯದಂತಹ ಜೈವಿಕ ಮೂಲಗಳಿಂದ ಪಡೆದ ಜೈವಿಕ ಇಂಧನವು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗೆ ಉತ್ತಮ ಪರ್ಯಾಯವಾಗಿದೆ. ಸಸ್ಯಗಳು, ಕೃಷಿ ತ್ಯಾಜ್ಯ, ಬೆಳೆಗಳು, ಪಾಚಿ ಇತ್ಯಾದಿಗಳಂತಹ ಜೀವರಾಶಿಯಿಂದ ಪಡೆದ ಯಾವುದೇ ಇಂಧನವನ್ನು ಜೈವಿಕ ಇಂಧನ ಎಂದು ಕರೆಯಲಾಗುತ್ತದೆ.

ಜೈವಿಕ ಇಂಧನ ಬಳಕೆಯ ಪ್ರಯೋಜನಗಳೇನು?

  • ಪಳೆಯುಳಿಕೆ ಇಂಧನಗಳಿಗೆ ಹೋಲಿಸಿದರೆ ಜೈವಿಕ ಇಂಧನಗಳು ಪರಿಸರಕ್ಕೆ ಅಷ್ಟೇನೂ ಹಾನಿಕಾರಕವಲ್ಲ.
  • ನವೀಕರಿಸಬಹುದಾದ ಈ ಜೈವಿಕ ಇಂಧನ ಶಕ್ತಿಯು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುತ್ತದೆ.
  • ಹೆಚ್ಚುವರಿಯಾಗಿ, ಜೈವಿಕ ಇಂಧನಗಳು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.
  • ಜೈವಿಕ ಇಂಧನದ ದೊಡ್ಡ ಪ್ರಯೋಜನವೆಂದರೆ ಅದು ಮಾಲಿನ್ಯವನ್ನು ನಿಯಂತ್ರಿಸುತ್ತದೆ.
  • ಇದರ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಕೊಯ್ಲು ಮಾಡಿದ ನಂತರ ಬೆಳೆಯಿಂದ ವ್ಯರ್ಥವಾಗುವ ಭಾಗವನ್ನು ಜೈವಿಕ ಇಂಧನ ತಯಾರಿಸಲು ಬಳಸಬಹುದು.
  • ಬೆಳೆಯ ತ್ಯಾಜ್ಯ ಭಾಗವನ್ನು ಬಳಸುವುದರಿಂದ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರೈತರ ಆದಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಜೈವಿಕ ಇಂಧನಗಳ ಬಳಕೆಯತ್ತ ಸಾಗುತ್ತಿದೆ ಜಗತ್ತು:

ಮಾಹಿತಿಯ ಪ್ರಕಾರ, ಅಮೆರಿಕ ವಿಶ್ವದ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜೈವಿಕ ಇಂಧನ ಉತ್ಪಾದನೆಯ ಅತಿದೊಡ್ಡ ಮೂಲವೆಂದರೆ ಜೋಳ. ಜೋಳದಿಂದ ಎಥೆನಾಲ್ ಉತ್ಪಾದಿಸಲಾಗುತ್ತದೆ. ಈ ಎಥೆನಾಲ್ ಅನ್ನು ಗ್ಯಾಸೋಲಿನ್‌ನೊಂದಿಗೆ ಬೆರೆಸಲಾಗುತ್ತದೆ, ಇದು ಗ್ಯಾಸೋಲಿನ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಯುನೈಟೆಡ್ ಸ್ಟೇಟ್ಸ್ ನಂತರ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಜೈವಿಕ ಇಂಧನ ಉತ್ಪಾದನೆಯಲ್ಲಿ ಇಂಡೋನೇಷ್ಯಾ ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೀನಾ ನಾಲ್ಕನೇ ಸ್ಥಾನದಲ್ಲಿದೆ.

ಭಾರತವು ವಿಶ್ವದ ಐದನೇ ಪ್ರಮುಖ ಜೈವಿಕ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ಭಾರತದ ಪ್ರಾಥಮಿಕ ಗಮನವು ಎಥೆನಾಲ್ ಮಿಶ್ರಣದಲ್ಲಿದೆ. ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಮೂಲಕ, ಭಾರತವು ಪೆಟ್ರೋಲಿಯಂ ಆಮದುಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ. ಕಬ್ಬಿನ ಜೊತೆಗೆ, ಜೋಳ, ಮುರಿದ ಅಕ್ಕಿ ಮತ್ತು ಇತರ ಅನುಮತಿಸಲಾದ ಕೃಷಿ ಮೂಲಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಭಾರತಕ್ಕೆ ಜೈವಿಕ ಇಂಧನಗಳ ಪ್ರಾಮುಖ್ಯತೆಯು ಕೇವಲ ಇಂಧನ ಶಕ್ತಿಯ ಸಂರಕ್ಷಣೆಗೆ ಸೀಮಿತವಾಗಿಲ್ಲ. ಇದು ರೈತರ ಆದಾಯ ಹೆಚ್ಚಿಸಲೂ ಸಹಾಯ ಮಾಡುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ganesh Chaturthi 2026: ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ಬಳಕೆಗೆ ಜಿಬಿಎ ನಿಷೇಧ – Kannada News | Ganesha Chaturthi 2026: GBA Bans PoP Idols in Bengaluru, Urges Eco Friendly Celebrations

ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ಬಳಕೆಗೆ ಜಿಬಿಎ ನಿಷೇಧ

ಬೆಂಗಳೂರು, ಆಗಸ್ಟ್ 10: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜಿಬಿಎ (GBA) ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯು ಸಾರ್ವಜನಿಕರಲ್ಲಿ ಪರಿಸರಸ್ನೇಹಿ ಹಬ್ಬದ ಆಚರಣೆಗೆ ಕರೆ ನೀಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಿದೆ.

ಪಿಓಪಿ ಮತ್ತು ರಾಸಾಯನಿಕ ಬಣ್ಣಗಳಿಗೆ ಸಂಪೂರ್ಣ ನಿರ್ಬಂಧ

ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP), ಭಾರ ಲೋಹಗಳನ್ನು (Heavy Metals) ಒಳಗೊಂಡ ರಾಸಾಯನಿಕ ಬಣ್ಣಗಳು ಮತ್ತು ಜೈವಿಕ ವಿಘಟನೆಯಾಗದ ಕೃತಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ಜಲಮೂಲಗಳಲ್ಲಿ ಅವುಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಜಲಮೂಲಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ

ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಇಂತಹ ವಿಷಕಾರಿ ರಾಸಾಯನಿಕಯುಕ್ತ ಮೂರ್ತಿಗಳನ್ನು ನಗರದ ಕೆರೆ, ಬಾವಿ ಸೇರಿದಂತೆ ಪ್ರಮುಖ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ತೀವ್ರ ಜಲಮಾಲಿನ್ಯ ಉಂಟಾಗುತ್ತಿದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, “ಹಬ್ಬದ ದಿನಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ನೀರಿಗೆ ಬಿಡುವುದರಿಂದ ನೀರು ಮತ್ತು ಭೂಮಿ ಎರಡೂ ಕಲುಷಿತಗೊಳ್ಳುತ್ತಿವೆ. ಇದು ಒಟ್ಟಾರೆ ಪರಿಸರ ವ್ಯವಸ್ಥೆ ಹಾಗೂ ಜಲಚರಗಳಿಗೆ ಭಾರಿ ಹಾನಿ ಉಂಟುಮಾಡುತ್ತಿದೆ,” ಎಂದು ತಿಳಿಸಿದ್ದಾರೆ.

ಪರಿಸರಸ್ನೇಹಿ ಗಣಪತಿ ಬಳಕೆಗೆ ಅಧಿಕಾರಿಗಳ ಮನವಿ

ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತು, ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳು ಕೇವಲ ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ಮಾಡಿದ ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸಬೇಕು ಎಂದು ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್​​ಗೆ ಶಿವಣ್ಣ ಬಗ್ಗೆ ಇರೋ ಕೇರ್​ ನೋಡಿ; ಕಣ್ಣಲ್ಲೆ ಸನ್ನೆ ಕೊಟ್ಟ ರಾಕಿ – Kannada News | Yash Wins Hearts With His Respect And Care For Shivarajkumar At Toxic Event

ರಾಕಿಂಗ್ ಸ್ಟಾರ್ ಯಶ್ ಅವರು ತುಂಬಾನೇ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅವರು ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ‘ಟಾಕ್ಸಿಕ್’ (Toxic Movie) ಹಾಗೂ ರಾಮಾಯಣದಂತಹ ಬಿಗ್ ಬಜೆಟ್ ಸಿನಿಮಾ ಅವರ ಕೈಯಲ್ಲಿ ಇದೆ. ಇಷ್ಟೆಲ್ಲ ಎತ್ತರಕ್ಕೆ ಬೆಳೆದರೂ ಅವರಿಗೆ ತಮಗಿಂತಲೂ ಹಿರಿಯ ನಟರ ಮೇಲೆ ಇರುವ ಗೌರವ ಹಾಗೂ ಪ್ರೀತಿ ಸ್ವಲ್ಪವೂ ಕಡಿಮೆ ಆಗಿಲ್ಲ. ಇದಕ್ಕೆ ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಈವೆಂಟ್​​​ನಲ್ಲಿ ನಡೆದ ಘಟನೆಯೇ ಉತ್ತಮ ಸಾಕ್ಷಿ.

‘ಟಾಕ್ಸಿಕ್’ ಸಿನಿಮಾದ ಈವೆಂಟ್ ಬೆಂಗಳೂರಿನ ಎಎಂಬಿ ಸಿನಿಮಾಸ್​​ನಲ್ಲಿ ನಡೆದಿದೆ. ಈ ಈವೆಂಟ್​​ಗೆ ಇಡೀ ಟಾಕ್ಸಿಕ್ ತಂಡ ಹಾಜರಿತ್ತು. ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು. ಶಿವರಾಜ್​ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಲಾಂಚ್​​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ವೇದಿಕೆ ಮೇಲೆ ಬಂದು ಇಡೀ ತಂಡಕ್ಕೆ ಹರಸಿದರು.

‘ಟಾಕ್ಸಿಕ್’ ಟ್ರೇಲರ್ ಲಾಂಚ್ ಮಾಡಿದ ಬಳಿಕ ಶಿವರಾಜ್​ಕುಮಾರ್ ಬೇರೆ ಅನಿವಾರ್ಯ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟು ನಿಂತರು. ಆಗ ಶಿವಣ್ಣ ಅವರು ತಮ್ಮ ಬಾಡಿಗಾರ್ಡ್​ಗೆ ಕಣ್ಣಲ್ಲೇ ಸನ್ನೆ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

‘ಶಿವಣ್ಣ ಹೊರಟಿದ್ದಾರೆ. ಅವರನ್ನು ಕಾರಿನವರೆಗೆ ಬಿಟ್ಟು ಬನ್ನಿ’ ಎಂದು ರಾಕಿ ಭಾಯ್ ತಮ್ಮ ಬಾಡಿಗಾರ್ಡ್​​ಗೆ ಹೇಳಿದರು. ತಕ್ಷಣ ಬಾಡಿಗಾರ್ಡ್ ಶಿವರಾಜ್‌ಕುಮಾರ್ ಅವರಿಗೆ ಬೆಂಗಾವಲಾಗಿ ಕಾರಿನವರೆಗೆ ಬಿಟ್ಟು ಬಂದಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಯಶ್ ಅವರ ಈ ಕಾಳಜಿಯನ್ನು ಎಲ್ಲರೂ ಕೊಂಡಾಡಿದ್ದಾರೆ.

ಇದನ್ನೂ ಓದಿ: ವೈರಲ್ ಆಗುತ್ತಿದೆ ಯಶ್ ಬೆತ್ತಲೇ ಸೀನ್​​, ರಣ್​​ಬೀರ್ ಕಪೂರ್ ಜೊತೆ ಹೋಲಿಕೆ ಏಕೆ?

ಶಿವಣ್ಣನಿಗೆ ಅವರದ್ದೇ ಆದ ಬಾಡಿಗಾರ್ಡ್ ಇರುತ್ತಾರೆ. ಅವರು ಕಾರ್ಯಕ್ರಮದಿಂದ ಹೊರಟು ನಿಂತಾಗ ಯಶ್ ಆ ಬಗ್ಗೆ ತಲೆಕೆಡಿಸಿಕೊಳ್ಳದೆಯೂ ಇರಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಶಿವರಾಜ್​​ಕುಮಾರ್ ಬಗ್ಗೆ ನಿಜವಾದ ಕಾಳಜಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:40 am, Mon, 10 August 26

Source link

ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ – Kannada News | Bengaluru Mumbai Vande Bharat Sleeper Train Ready for Launch, 16 Hour Journey Expected

ವಂದೇ ಭಾರತ್ ರೈಲು (ಸಾಂದರ್ಭಿಕ ಚಿತ್ರ)Image Credit source: PTI

ಬೆಂಗಳೂರು, ಆಗಸ್ಟ್ 10: ಬೆಂಗಳೂರು-ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು (Bengaluru-Mumbai Vande Bharat Sleeper) ಸಂಚಾರಕ್ಕೆ ಸಿದ್ಧತೆ ಅಂತಿಮ ಹಂತ ತಲುಪಿದೆ. ನೈಋತ್ಯ ರೈಲ್ವೆ (SWR) ಎರಡು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಸ್ವೀಕರಿಸಿ ಅಧಿಕೃತವಾಗಿ ನಿಯೋಜನೆ ಮಾಡಿದೆ. ಶೀಘ್ರದಲ್ಲೇ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ನಡೆಸಿ, ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲೇ ತಯಾರಾದ ರೈಲು

ಬೆಂಗಳೂರಿನಲ್ಲೇ ಬಿಇಎಂಎಲ್ (BEML) ತಯಾರಿಸಿದ ಈ ಎರಡು ರೈಲು ಸೆಟ್‌ಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದ ಯೋಜನೆಯಡಿ ನಿರ್ಮಿಸಲಾಗಿದೆ. ವಿವಿಧ ಹಂತದ ಪರೀಕ್ಷೆ ಹಾಗೂ ಪರಿಶೀಲನೆಗಳ ಬಳಿಕ ರೈಲುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಭಾಗದ ಡಿವಿಷನಲ್ ರೈಲ್ವೆ ಮ್ಯಾನೇಜರ್ ಆಶುತೋಷ್ ಕುಮಾರ್ ಸಿಂಗ್ ಅವರು ರೈಲು ಸೆಟ್‌ಗಳು ಕಮಿಷನ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ರೈಲು ಸೇವೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸುಮಾರು 16 ಗಂಟೆಯಲ್ಲಿ ಬೆಂಗಳೂರು-ಮುಂಬೈ ಪ್ರಯಾಣ

ವಂದೇ ಭಾರತ್ ಸ್ಲೀಪರ್ ರೈಲು ರಾತ್ರಿ ಬೆಂಗಳೂರಿನಿಂದ ಹಾಗೂ ಮುಂಬೈನಿಂದ ಹೊರಡಲಿದೆ. ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಸುಮಾರು 16 ಗಂಟೆ ಆಗಿರಲಿದೆ. ವಿಮಾನ ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

ರೈಲು ಸಂಚಾರವನ್ನು KSR ಬೆಂಗಳೂರು-ಮುಂಬೈ CSMT ಮಾರ್ಗದಲ್ಲಿ ಆರಂಭಿಸುವ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುತ್ತಿದೆ. ಇದೇ ವೇಳೆ, SMVT ಬೆಂಗಳೂರು ನಿಲ್ದಾಣದಿಂದ ಸೇವೆ ಆರಂಭಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎರಡೂ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

16 ಬೋಗಿಗಳ ರೈಲಿನಲ್ಲಿ ಏನೇನಿರಲಿದೆ ಸೌಲಭ್ಯ?

ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳಿರಲಿವೆ. ಇದರಲ್ಲಿ 11 ತ್ರೀ-ಟಯರ್ ಎಸಿ (3AC), ನಾಲ್ಕು 2-ಟಯರ್ ಎಸಿ (2AC) ಹಾಗೂ ಒಂದು ಫಸ್ಟ್ ಕ್ಲಾಸ್ ಎಸಿ (1AC) ಕೋಚ್ ಇರಲಿದೆ.

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ಟಿಕೆಟ್ ದರ ಎಷ್ಟು?

3AC ಟಿಕೆಟ್ ದರವು ಊಟ ಸೇರಿದಂತೆ ಸುಮಾರು 3,000 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ರೈಲಿನ ಪ್ರಾಯೋಗಿಕ ಸಂಚಾರದ ಬಳಿಕ ಪ್ರಯಾಣದ ಸಮಯ ಮತ್ತು ವೇಗಕ್ಕೆ ಸಂಬಂಧಿಸಿದ ಅಂತಿಮ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗಕ್ಕೂ ರೈಲು ಸಂಪರ್ಕ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕ ಮಾರ್ಗವಾಗಿ ಸಂಚರಿಸುವ ನಿರೀಕ್ಷೆಯಿದೆ. ಈ ಮಾರ್ಗವು ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಸುಮಾರು 1,137 ಕಿ.ಮೀ. ಉದ್ದದ ಈ ಮಾರ್ಗ ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು, ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಹಲವು ಭಾಗಗಳಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಿದೆ.

ಪ್ರಸ್ತುತ ಬೆಂಗಳೂರು-ಮುಂಬೈ ನಡುವೆ ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ SMVT ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಸಂಚರಿಸುತ್ತಿವೆ. ಇವುಗಳಿಗೆ ಸುಮಾರು 24 ಗಂಟೆಗಳ ಪ್ರಯಾಣದ ಅವಧಿ ಬೇಕಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾದರೆ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ.

ಇದನ್ನೂ ಓದಿ: ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್

ಹುಬ್ಬಳ್ಳಿ ಮಾರ್ಗವಾಗಿ ರೈಲು ಓಡಿಸಬೇಕು ಎಂಬ ಜನಪ್ರತಿನಿಧಿಗಳು ಹಾಗೂ ರೈಲ್ವೆ ಹೋರಾಟಗಾರರ ಬೇಡಿಕೆಯೂ ಇತ್ತು. ಆದರೆ ಆ ಮಾರ್ಗದ ಉದ್ದ, ಕೆಲವು ಭಾಗಗಳಲ್ಲಿನ ಸಿಂಗಲ್ ಟ್ರ್ಯಾಕ್ ಹಾಗೂ ವೇಗದ ನಿರ್ಬಂಧಗಳ ಹಿನ್ನೆಲೆಯಲ್ಲಿ ಆ ಆಯ್ಕೆಯನ್ನು ಪರಿಗಣಿಸಲಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಲೋಕಸಭೆಯಲ್ಲಿ 4 ಪ್ರಮುಖ ಮಸೂದೆ ಮಂಡನೆ: ಗೃಹ ಸಚಿವ ಅಮಿತ್ ಶಾ ಎರಡು ಪ್ರಮುಖ ವಿಧೇಯಕ ಮಂಡನೆ – Kannada News | India’s Parliament Debates Major Bills: Tribunal Reforms, Kerala Keralam, Mines, NCDC

ಲೋಕಸಭೆಯಲ್ಲಿ ಇಂದು ನಾಲ್ಕು ಮಸೂದೆ ಮಂಡನೆ

ದೆಹಲಿ, ಆ.10: ಲೋಕಸಭೆಯಲ್ಲಿ ಇಂದು (ಸೋಮವಾರ ಆ.10) ನಾಲ್ಕು ಅತ್ಯಂತ ಪ್ರಮುಖ ವಿಧೇಯಕಗಳನ್ನು (Bills) ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇವುಗಳಲ್ಲಿ ‘ಟ್ರಿಬ್ಯೂನಲ್ ರಿಫಾರ್ಮ್ಸ್ ಮಸೂದೆ’ ಹಾಗೂ ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವ ವಿಧೇಯಕವೂ ಸೇರಿದೆ.

ಲೋಕಸಭೆಯಲ್ಲಿ ಮಂಡನೆಯಾಗಲಿರುವ 4 ಪ್ರಮುಖ ಮಸೂದೆಗಳು:

ಟ್ರಿಬ್ಯೂನಲ್ ರಿಫಾರ್ಮ್ಸ್ ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ನ್ಯಾಯಮಂಡಳಿಗಳ (Tribunals) ಕಾರ್ಯವೈಖರಿಯನ್ನು ಸುಧಾರಿಸುವುದು, ಸದಸ್ಯರ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ಪಾರದರ್ಶಕತೆ ಹಾಗೂ ಏಕರೂಪತೆಯನ್ನು ತರುವುದು. ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (National Tribunals Commission) ಸ್ಥಾಪನೆಯ ಪ್ರಸ್ತಾಪವೂ ಇದರಲ್ಲಿದೆ.

ಎರಡನೇ ಮಸೂದೆ, ಕೇರಳ (ಹೆಸರು ಬದಲಾವಣೆ) ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. ಸಂವಿಧಾನದ ಮೊದಲ ಅನುಸೂಚಿಯನ್ನು ತಿದ್ದುಪಡಿ ಮಾಡುವ ಮೂಲಕ ‘ಕೇರಳ’ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವುದು ಇದರ ಉದ್ದೇಶವಾಗಿದೆ.

ಇನ್ನು ಮೂರನೇ ಮಸೂದೆ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಗಣಿ ಸಚಿವ ಜಿ. ಕಿಶನ್ ರೆಡ್ಡಿ ಮಂಡಿಸಲಿದ್ದಾರೆ. 1957ರ ಗಣಿ ಮತ್ತು ಖನಿಜ ಕಾಯ್ದೆಗೆ ತಿದ್ದುಪಡಿ ತಂದು ಖನಿಜ ವಲಯದ ಅಭಿವೃದ್ಧಿಗೆ ವೇಗ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇನ್ನು ನಾಲ್ಕುನೇ ಮಸೂದೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ, 2026, ಈ ಮಸೂದೆಯನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ. 1962ರ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC) ಕಾಯ್ದೆಗೆ ತಿದ್ದುಪಡಿ ತರುವುದು ಹಾಗೂ ಸಹಕಾರ ವಲಯದ ಸಾಲ ಸೌಲಭ್ಯಗಳನ್ನು ವಿಸ್ತರಿಸುವುದು ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: 40,000 ಕೋಟಿ ರೂ. ಬ್ಯಾಂಕ್ ವಂಚನೆ ಆರೋಪ! ಆರ್‌ಕಾಮ್ ಮತ್ತು ರಿಲಯನ್ಸ್ ಇನ್ಫ್ರಾ ವಿರುದ್ಧ ಇಡಿ ಚಾರ್ಜ್‌ಶೀಟ್

ಸಂಸದೀಯ ಸ್ಥಾಯಿ ಸಮಿತಿಗಳ ವರದಿ ಸಲ್ಲಿಕೆ:

ಇದೇ ವೇಳೆ ಹಣಕಾಸು, ರೈಲ್ವೆ, ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗಳು ತಮ್ಮ ಪ್ರಮುಖ ವರದಿಗಳನ್ನು ಸದನಕ್ಕೆ ಸಲ್ಲಿಸಲಿವೆ. ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಪಾತ್ರ, ರಾಷ್ಟ್ರೀಯ ಸಾಂಖ್ಯಿಕ ಆಯೋಗದ (NSC) ಕಾರ್ಯಕ್ಷಮತೆ ಹಾಗೂ 2026-27ನೇ ಸಾಲಿನ ಅನುದಾನ ಬೇಡಿಕೆಗಳ ಕುರಿತು ವರದಿ ನೀಡಲಿದೆ. ಸರಕು ಸಾಗಣೆ ಆದಾಯ, ಸರಕು ಸಾಗಣೆ ಕಾರಿಡಾರ್‌ಗಳ ಪ್ರಗತಿ ಹಾಗೂ ರೈಲ್ವೆ ಸುರಂಗಗಳು ಮತ್ತು ಸೇತುವೆಗಳ ನಿರ್ವಹಣೆಗೆ ಸಂಬಂಧಿಸಿದ ವರದಿಗಳನ್ನು ಮಂಡಿಸಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲು ಆಯ್ಕೆ ಮಾಡಲಿ, ನಾನಂತು ರೆಡಿ ಇದ್ದೇನೆ: ಭುವನೇಶ್ವರ್ ಕುಮಾರ್ – Kannada News | If I get a call, I’m absolutely ready: Bhuvneshwar Kumar on India comeback.

ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಯುಪಿ ಟಿ20 (UP T20) ಲೀಗ್‌ಗೂ ಮುನ್ನ ಲಕ್ನೋ ಫಾಲ್ಕನ್ಸ್ ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ 36 ವರ್ಷದ ಈ ಸ್ವಿಂಗ್ ಮಾಂತ್ರಿಕ, ರಾಷ್ಟ್ರೀಯ ತಂಡಕ್ಕೆ ಮರಳುವ ತಮ್ಮ ಇಂಗಿತವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಆಯ್ಕೆಗಾರರ ನಿರ್ಧಾರಕ್ಕೆ ಕಾಯುತ್ತಿರುವ ‘ಭುವಿ’:

ರಾಷ್ಟ್ರೀಯ ತಂಡಕ್ಕೆ ಮರಳಿ ಆಯ್ಕೆಯಾಗುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭುವನೇಶ್ವರ್, “ನನಗೆ ಮತ್ತೆ ಕರೆ ಬಂದರೆ ನಾನು ಬೇಡ ಎನ್ನಲು ಹೇಗೆ ಸಾಧ್ಯ? ನಾನು ಆಡಲು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ” ಎಂದು ಹೇಳಿದ್ದಾರೆ. ಆದರೆ, ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಇಲ್ಲವೇ ಎಂಬುದು ಸಂಪೂರ್ಣವಾಗಿ ಆಯ್ಕೆಗಾರರ ಕೈಯಲ್ಲಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

“ಆಯ್ಕೆ ಮಾಡುವುದಾದರೆ, ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ನಾನಂತು ರೆಡಿ ಇದ್ದೇನೆ. ಮೊದಲು ಆಯ್ಕೆ ಮಾಡಲಿ, ಆಯ್ಕೆ ಮಾಡಬೇಡಿ ಎಂದು ನಾನಂತು ಹೇಳಿಲ್ಲ. ಹಾಗೆ ಹೇಳಲು ಹೇಗೆ ಸಾಧ್ಯ. ಹೀಗಾಗಿ ನಾನು ಸಹ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದೇನೆ” ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಐಪಿಎಲ್ 2026ರ ಭರ್ಜರಿ ಪ್ರದರ್ಶನವೇ ಪ್ರೇರಣೆ:

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಿದ್ದ ಭುವನೇಶ್ವರ್ ಕುಮಾರ್, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಹೊಸ ಚೆಂಡಿನಲ್ಲಿ ಅವರು ತೋರಿದ ಸ್ವಿಂಗ್ ಜಾದೂ, ಅವರು ಇಂದಿಗೂ ವಿಶ್ವದರ್ಜೆಯ ಬೌಲರ್ ಎಂಬುದನ್ನು ಸಾಬೀತುಪಡಿಸಿದೆ. ಇದೇ ಕಾರಣಕ್ಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಕಂಬ್ಯಾಕ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಒತ್ತಡವಿಲ್ಲದ ಆಟ, ಮನಸ್ಸಿಗೆ ನೆಮ್ಮದಿ:

ಭಾರತ ತಂಡಕ್ಕೆ ಮರಳುವ ಆಸೆ ಇದ್ದರೂ, ಅದನ್ನೇ ಯೋಚಿಸುತ್ತಾ ತಮಗೆ ತಾವೇ ಒತ್ತಡ ಹೇರಿಕೊಳ್ಳುತ್ತಿಲ್ಲ ಎಂದು ಭುವಿ ಹೇಳಿದ್ದಾರೆ. “ನಾನು ಈಗಾಗಲೇ ಭಾರತದ ಪರ ಆಡುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈಗ ನಾನು ಕೇವಲ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಆಡುತ್ತಿದ್ದೇನೆ. ಸದ್ಯ ನನ್ನ ವೃತ್ತಿಜೀವನ ಇರುವ ಸ್ಥಿತಿಯ ಬಗ್ಗೆ ನನಗೆ ತೃಪ್ತಿ ಮತ್ತು ನೆಮ್ಮದಿಯಿದೆ” ಎಂದು ಅವರು ತಮ್ಮ ಬದಲಾದ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

ಅಶ್ವಿನ್ ಹಾಗೂ ಕೈಫ್ ಬೆಂಬಲ!

ಭುವನೇಶ್ವರ್ ಕುಮಾರ್ ಅವರ ಈ ಫಾರ್ಮ್ ನೋಡಿ ಮಾಜಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಕೈಫ್ ಕೂಡ ಭುವಿ ಪರ ಧ್ವನಿ ಎತ್ತಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್‌ ಯೋಜನೆಗೆ ಭುವನೇಶ್ವರ್ ಅವರಂತಹ ಅನುಭವಿ ಬೌಲರ್ ತಂಡಕ್ಕೆ ಅಗತ್ಯವಿದ್ದು, ವಿಶೇಷವಾಗಿ ಸೌತ್ ಆಫ್ರಿಕಾದಂತಹ ಪಿಚ್‌ಗಳಲ್ಲಿ ಅವರ ಸ್ವಿಂಗ್ ಭಾರತಕ್ಕೆ ನೆರವಾಗಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RCB ಮಾಸ್ಟರ್​ಮೈಂಡ್​ಗಳ ರಣತಂತ್ರ ಉಲ್ಟಾ ಪಲ್ಟಾ!

ಮುಂದಿನ ನಡೆ ಏನು?

ಸದ್ಯ ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳುವತ್ತ ಗಮನ ಹರಿಸಿರುವ ಭುವನೇಶ್ವರ್ ಕುಮಾರ್, ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದಾದ ನಂತರ ಉತ್ತರ ಪ್ರದೇಶ ತಂಡದ ಪರವಾಗಿ ದೇಶಿ ಕ್ರಿಕೆಟ್‌ನ ರೆಡ್-ಬಾಲ್ ಮತ್ತು ವೈಟ್-ಬಾಲ್ ಪಂದ್ಯಾವಳಿಗಳಲ್ಲೂ ಅವರು ಕಣಕ್ಕಿಳಿಯಲಿದ್ದಾರೆ. ಇದರ ನಡುವೆ ಆಯ್ಕೆಗಾರರು ಭುವಿಯನ್ನು ಮತ್ತೆ ಟೀಮ್ ಇಂಡಿಯಾಗೆ ಕರೆತರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Source link

ಮಹಿಳೆಗೆ ಸಚಿವ ಸ್ಥಾನ ಖಚಿತ ಎಂದ ಡಿಕೆಶಿ: ಅಧಿವೇಶನ ಆರಂಭಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಗೊತ್ತಾ! – Kannada News | Karnataka Cabinet Expansion: DK Shivakumar Says Woman Minister Appointment Confirmed, Portfolio Allocation Delayed

ನವದೆಹಲಿ, ಆಗಸ್ಟ್ 10: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತು ದೆಹಲಿಯಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ಒಂದೇ ಒಂದು ಸಚಿವ ಸ್ಥಾನ ಖಾಲಿಯಿದ್ದು, ಅದು ಮಹಿಳಾ ಕೋಟಾಗೆ ಮೀಸಲಾಗಿದೆ ಎಂದರು. ಮಹಿಳೆಗೆ ಸಚಿವ ಸ್ಥಾನ ನೀಡುವುದು ಖಚಿತ, ಆದರೆ ಅದನ್ನು ಭರ್ತಿ ಮಾಡಲು ಅಷ್ಟು ತರಾತುರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಖಾತೆ ಹಂಚಿಕೆ ವಿಳಂಬದ ಬಗ್ಗೆ ಕೇಳಿದಾಗ, ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ವಿಳಂಬವಾದ ಉದಾಹರಣೆ ನೀಡಿದರು. ಯಡಿಯೂರಪ್ಪ ದೆಹಲಿಯಲ್ಲಿ ಎಷ್ಟು ದಿನ ಕಳೆದಿದ್ದರು ಎಂಬುದನ್ನು ನೆನಪಿಸಿದ ಡಿಕೆ ಶಿವಕುಮಾರ್, ಸಚಿವರು ಈಗಾಗಲೇ ಜಿಲ್ಲೆಗಳಿಗೆ ಭೇಟಿ ನೀಡಿ ಬರಗಾಲ ಪರಿಸ್ಥಿತಿ ಕುರಿತು ವರದಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಖಾತೆ ಹಂಚಿಕೆ ಆಗದಿದ್ದರೆ ಅಧಿವೇಶನದಲ್ಲಿ ತಾನೊಬ್ಬನೇ ಎಲ್ಲ ಇಲಾಖೆಗಳ ಪರವಾಗಿ ಉತ್ತರ ನೀಡಲು ಸಿದ್ಧ ಎಂದು ಡಿಕೆ ಶಿವಕುಮಾರ್ ಹೇಳಿದರು. ಖಾತೆಗಳನ್ನು ನಾಳೆಗೇ ಹಂಚಿಕೆ ಮಾಡಬೇಕು ಎಂಬ ಅವಸರವಿಲ್ಲ ಎಂದು ಅವರು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ಮಾಸ್ಟರ್​ಮೈಂಡ್​ಗಳ ರಣತಂತ್ರ ಉಲ್ಟಾ ಪಲ್ಟಾ! – Kannada News | RCB’s IPL Midas Touch Fails: Flower Karthik Duo Flops at The Hundred

ಇಂಡಿಯನ್ ಪ್ರೀಮಿಯರ್ ಲೀಗ್‌ (IPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತವಾಗಿ ಯಶಸ್ಸಿನ ಉತ್ತುಂಗಕ್ಕೇರಿಸಿದ್ದ ಸ್ಟಾರ್ ಕೋಚಿಂಗ್ ಜೋಡಿಗಳಿಗೆ ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ (The Hundred) ಕ್ರಿಕೆಟ್ ಟೂರ್ನಿಯಲ್ಲಿ ಭಾರೀ ಮುಖಭಂಗವಾಗಿದೆ. ಆ್ಯಂಡಿ ಫ್ಲವರ್, ದಿನೇಶ್ ಕಾರ್ತಿಕ್ ಮತ್ತು ಮೋ ಬೊಬಾಟ್ ಅವರ ಮಾರ್ಗದರ್ಶನವಿರುವ ‘ಲಂಡನ್ ಸ್ಪಿರಿಟ್’ (London Spirit) ತಂಡವು ಪ್ರಸ್ತುತ ದಿ ಹಂಡ್ರೆಡ್​ ಲೀಗ್​ ಸೀಸನ್‌ನಲ್ಲಿ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.

ನಡೆಯದ ಆರ್‌ಸಿಬಿ ಜೋಡಿಯ ಮ್ಯಾಜಿಕ್!

ಆರ್‌ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್, ಮೆಂಟರ್ ದಿನೇಶ್ ಕಾರ್ತಿಕ್ ಹಾಗೂ ಟೀಮ್ ಡೈರೆಕ್ಟರ್ ಮೋ ಬೊಬಾಟ್ ಅವರ ತ್ರಿವಳಿ ಮೈತ್ರಿ ಲಂಡನ್ ಸ್ಪಿರಿಟ್ ತಂಡದಲ್ಲೂ ದೊಡ್ಡ ಕ್ರಾಂತಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಐಪಿಎಲ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಯಶಸ್ಸು ತಂದುಕೊಟ್ಟ ಈ ಮಾಸ್ಟರ್‌ಮೈಂಡ್‌ಗಳು, 100 ಎಸೆತಗಳ ಈ ಚುಟುಕು ಫಾರ್ಮ್ಯಾಟ್‌ನಲ್ಲಿ ಮಾತ್ರ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಲಂಡನ್ ಸ್ಪಿರಿಟ್ ತಂಡದ ಕಳಪೆ ಪ್ರದರ್ಶನ:

ಟೂರ್ನಿಯುದ್ದಕ್ಕೂ ಲಂಡನ್ ಸ್ಪಿರಿಟ್ ತಂಡವು ಸಾಂಘಿಕ ಪ್ರದರ್ಶನ ನೀಡಲು ತಡಕಾಡಿತು. ಆಡಿದ ಮೊದಲ 7 ಪಂದ್ಯಗಳಲ್ಲಿ ಕೇವಲ 2 ಗೆಲುವು ದಾಖಲಿಸಿದ ತಂಡ, ಬರೋಬ್ಬರಿ 5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿತು. ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೈರ್​ಸ್ಟೋವ್, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು ಡೇವಿಡ್ ವಿಲ್ಲಿ ಅವರಂತಹ ಟಿ20 ಆಟಗಾರರಿದ್ದರೂ, ತಂಡಕ್ಕೆ ಲಾರ್ಡ್ಸ್ ಮೈದಾನದ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ಸೋಲುಗಳೊಂದಿಗೆ ದಿ ಹಂಡ್ರೆಡ್ ಲೀಗ್​ ಟೂರ್ನಿಯಿಂದ ಲಂಡನ್ ಸ್ಪಿರಿಟ್ ತಂಡವು ಹೊರಬಿದ್ದಿದೆ.

  • ಲಂಡನ್ ಸ್ಪಿರಿಟ್ ತಂಡವು ಈವರೆಗೆ 7 ಪಂದ್ಯಗಳನ್ನಾಡಿದೆ.
  • 7 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ಮ್ಯಾಚ್​ಗಳನ್ನು ಮಾತ್ರ.
  • 5 ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.

ಐಪಿಎಲ್‌ನಲ್ಲಿ ಸತತ ಯಶಸ್ಸು ಕಂಡ ತಕ್ಷಣವೇ ಬೇರೆ ಮಾದರಿಯ ಕ್ರಿಕೆಟ್‌ನಲ್ಲೂ ಅದೇ ಮ್ಯಾಜಿಕ್ ಪುನರಾವರ್ತನೆಯಾಗುತ್ತದೆ ಎಂದೇನೂ ಇಲ್ಲ ಎಂಬುದಕ್ಕೆ ಲಂಡನ್ ಸ್ಪಿರಿಟ್ ತಂಡದ ಈ ವರ್ಷದ ಪ್ರದರ್ಶನವೇ ಸಾಕ್ಷಿ. ಆ್ಯಂಡಿ ಫ್ಲವರ್, ದಿನೇಶ್ ಕಾರ್ತಿಕ್ ಮತ್ತು ಮೋ ಬೊಬಾಟ್ ಅವರಂತಹ ದಿಗ್ಗಜ ತರಬೇತುದಾರರಿದ್ದರೂ ತಂಡವು ಮೊದಲನೆಯದಾಗಿ ಟೂರ್ನಿಯಿಂದ ಹೊರಬಿದ್ದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಆಶ್ಚರ್ಯ ಮೂಡಿಸಿದೆ.

ಆದರೆ, ಈ ಸೋಲು ಲಂಡನ್ ಸ್ಪಿರಿಟ್ ತಂಡಕ್ಕೆ ದೊಡ್ಡ ಪಾಠವಾಗಿದೆ. ‘ದಿ ಹಂಡ್ರೆಡ್’ ಟೂರ್ನಿಯ ಈ ವೈಫಲ್ಯವನ್ನು ಮರೆತು, ಮುಂದಿನ ಸೀಸನ್‌ನಲ್ಲಿ ಈ ತರಬೇತುದಾರರ ತ್ರಿವಳಿ ಪಡೆ ತಂಡವನ್ನು ಹೇಗೆ ಬಲಿಷ್ಠವಾಗಿ ಕಂಬ್ಯಾಕ್ ಮಾಡಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸ್ಟಾರ್ ಗುರುತಿಗೆ ಸ್ಪಷ್ಟನೆ ನೀಡಿದ ವಿವಿಎಸ್ ಲಕ್ಷ್ಮಣ್!

ಲಂಡನ್ ಸ್ಪಿರಿಟ್ ತಂಡ: ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ), ಡೆವಾಲ್ಡ್ ಬ್ರೆವಿಸ್, ಆ್ಯಡಂ ಝಂಪಾ, ಜೇಮೀ ಓವರ್ಟನ್, ಜಾನಿ ಬೈರ್‌ಸ್ಟೋವ್, ಲುವಾನ್-ಡ್ರೆ ಪ್ರಿಟೋರಿಯಸ್, ಜೇಮ್ಸ್ ಕೋಲ್ಸ್, ಮೇಸನ್ ಕ್ರೇನ್, ಆ್ಯಡಂ ಮಿಲ್ನ್, ಡೇವಿಡ್ ವಿಲ್ಲಿ, ಆ್ಯಡಂ ಹೋಸ್, ಟೈಮಲ್ ಮಿಲ್ಸ್, ಜೇಮ್ಸ್ ರೆವ್, ಮ್ಯಾಟ್ ಫಿಶರ್.

Published On – 9:51 am, Mon, 10 August 26

Source link

TV9 Kannada News Live: ಅನಿಲ್ ಅಂಬಾನಿಗೆ ಇಡಿ ಭಾರಿ ಬಿಗ್ ಶಾಕ್; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 10 August 2026 Monsoon, Bengaluru UB City Hotel Raids, Politics Cinema Latest Updates Online

Breaking News Today Live Updates in Kannada: ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದಲ್ಲಿ 295 ಪೊಲೀಸರ 23 ವಿಶೇಷ ತಂಡಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ, ಸೂಕ್ತ ದಾಖಲೆಗಳಿಲ್ಲದ 15 ಬಾಂಗ್ಲಾದೇಶಿ ಪ್ರಜೆಗಳನ್ನು ಬೇಗೂರು ಹಾಗೂ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಯುಬಿ ಸಿಟಿಯ 5 ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, ಸ್ಕೈ ಹೋಟೆಲ್‌ನಲ್ಲಿ 51 ಕೆಜಿ ಕೊಳೆತ ಮಾಂಸ ಪತ್ತೆಯಾದ ಹಿನ್ನೆಲೆ ಅಡುಗೆಮನೆ ಸೀಲ್ ಮಾಡಿದ್ದಾರೆ. ರಾಯಲ್ ಚೈನ್‌ನಲ್ಲೂ 55 ಕೆಜಿ ಮಾಂಸ ಜಪ್ತಿ ಮಾಡಲಾಗಿದೆ. 40,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅನಿಲ್ ಅಂಬಾನಿ ಒಡೆತನದ ಆರ್‌ಕಾಮ್ ಹಾಗೂ ರಿಲಯನ್ಸ್ ಇನ್‌ಫ್ರಾ ವಿರುದ್ಧ ಇಡಿ ದೆಹಲಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ಭಾರತದಲ್ಲೇ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸ್ಪೈಡರ್ ಮ್ಯಾನ್ – Kannada News | Spider Man Brand New Day Enters Rs 500 Crore Club In India Box Office

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ (Spider Man) ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಈ ಸಿನಿಮಾ 11 ದಿನ ಪೂರೈಸಿದೆ. ಇಂದಿನ ಗಳಿಕೆಯನ್ನು ಸೇರಿಸಿದರೆ, ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 500 ಕೋಟಿ ರೂಪಾಯಿ ಗಡಿಯನ್ನು ದಾಟಲಿದೆ. ಈ ಮೂಲಕ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಅಧಿಕೃತವಾಗಿ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸಾಧನೆ ಮಾಡಿದೆ.

ಚಿತ್ರದ ದಿನದ ಗಳಿಕೆಯನ್ನು ಗಮನಿಸಿದರೆ, ಮೊದಲ ದಿನವೇ 60.60 ಕೋಟಿ ರೂಪಾಯಿ ಗಳಿಸುವ ಮೂಲಕ ಅದ್ದೂರಿ ಚಾಲನೆ ಪಡೆದುಕೊಂಡಿತ್ತು. ಮೊದಲ ವಾರಾಂತ್ಯದಲ್ಲಿ ಅಂದರೆ ಶುಕ್ರವಾರ 49.35 ಕೋಟಿ ರೂಪಾಯಿ, ಶನಿವಾರ 70.25 ಕೋಟಿ ರೂಪಾಯಿ ಹಾಗೂ ಭಾನುವಾರ 77.75 ಕೋಟಿ ರೂಪಾಯಿ ಬಾಚಿಕೊಂಡಿತ್ತು. ವಾರದ ದಿನಗಳಲ್ಲೂ ತನ್ನ ಅಬ್ಬರ ಮುಂದುವರಿಸಿದ್ದ ಚಿತ್ರ ಸೋಮವಾರ 23.80 ಕೋಟಿ ರೂಪಾಯಿ, ಮಂಗಳವಾರ 21.75 ಕೋಟಿ ರೂಪಾಯಿ, ಬುಧವಾರ 17.00 ಕೋಟಿ ರೂಪಾಯಿ ಹಾಗೂ ಗುರುವಾರ 14.25 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಈ ಮೂಲಕ ಮೊದಲ ವಾರದಲ್ಲೇ ಒಟ್ಟು 334.75 ಕೋಟಿ ಗಳಿಸಿ ದಾಖಲೆ ಬರೆದಿತ್ತು.

ಎರಡನೇ ವಾರದಲ್ಲೂ ಸಿನಿಮಾದ ಗಳಿಕೆಯ ವೇಗ ಕಡಿಮೆಯಾಗಿಲ್ಲ. 9ನೇ ದಿನ ಅಂದರೆ ಎರಡನೇ ಶುಕ್ರವಾರ 15.00 ಕೋಟಿ ರೂಪಾಯಿ ಗಳಿಸಿದ್ದ ಚಿತ್ರ, ಶನಿವಾರ 31.00 ಕೋಟಿ ರೂಪಾಯಿ ಹಾಗೂ ಭಾನುವಾರ 34.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಲ್ಲಿಯವರೆಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರೋಸ್ ಕಲೆಕ್ಷನ್ 496.93 ಕೋಟಿ ರೂಪಾಯಿಯಾಗಿದ್ದು, ನೆಟ್ ಕಲೆಕ್ಷನ್ 415.51 ಕೋಟಿ ರೂಪಾಯಿ ಅಷ್ಟಾಗಿದೆ. ಇಂದಿನ ಗಳಿಕೆಯೊಂದಿಗೆ ಭಾರತದಲ್ಲಿ 500 ಕೋಟಿಯ ಬೃಹತ್ ಮೈಲಿಗಲ್ಲನ್ನು ದಾಟಿ ಹೊಸ ಇತಿಹಾಸ ಬರೆದಿದೆ.

ಇದನ್ನೂ ಓದಿ: ಎಲ್ಲ ದಾಖಲೆಗಳ ಮುರಿದು ಹಾಕಿದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

ಭಾತದ ಸಿನಿಮಾಗಳೇ 100 ಕೋಟಿ ರೂಪಾಯಿ ಕ್ಲಬ್ ಸೇರಲು ಒದ್ದಾಡುತ್ತಿವೆ. ಹೀಗಿರುವಾಗ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡುತ್ತಾ ಇರೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version